ದೇಶಾದ್ಯಂತ ಅಣೆಕಟ್ಟುಗಳ ಕಟ್ಟಿ ನಾವು
ಬೆಳೆದದ್ದೇನು ಬರೀ ಹಸಿವೆ ?
ಹೊಲ ಗದ್ದೆಗಳ ತುಂಬ ತೆನೆಯೆತ್ತಿ ತೂಗುವುದೇನು ?
ಹಸಿರೆ ಅಥವಾ ನಿಟ್ಟುಸಿರೆ ?

ಯೋಜನೆಯಿಂದ ಯೋಚನೆಗಿಳಿದು
ತಳದ ಕೆಸರಲ್ಲಿ ಹೂತುಹೋಗಿದೆ ಬುದ್ಧಿ.
ಇದ್ದಂಥ ಕಾಳು ಕಡಿಯೆಲ್ಲ
ಕಗ್ಗತ್ತಲಲ್ಲಿ ತಪಸ್ಸು
ಸಿದ್ಧಿ-ಚಿನ್ನದ ಕನಸು.

ತೆರೆದ ಅಂಗಡಿಯೆದುರು ಬೆಳಗಿಂದ ಸಂಜೆಯ ತನಕ
ಒಂಟಿ ಕಾಲಿನ ಧ್ಯಾನ.
ಹದ್ದುಗಣ್ಣಿನ ಕೆಳಗೆ ಏರಿಳಿವ ತಕ್ಕಡಿಯ ನೆರಳಿನ ಕೆಳಗೆ
ಹಸಿದ ಮೌನ.

ಬಂತೆ ದೀಪಾವಳಿ ? ಇಷ್ಟೊಂದು ಹಣತೆಗಳಲ್ಲಿ
ಎಣ್ಣೆಯಿಲ್ಲ.
ಬರೀ ಮಾತುಗಳ ಕಡ್ಡಿಗೀಚುವೆಯಲ್ಲ
ನಿನಗೆ ನಾಚಿಕೆಯಿಲ್ಲ ?