ಕಡಲನ್ನು ಕವಿಗಳು ರತ್ನಗರ್ಭ ಎಂದು ಹೆಸರಿಸಿದ್ದಾರೆ. ಅನೂಹ್ಯವಾದಷ್ಟು ಸಂಪತ್ತು ಸಾಗರದಲ್ಲಿದೆಯಂತೆ. ಅದಕ್ಕಾಗಿಯೇ ದೇವ, ದಾನವರು ಒಟ್ಟಾಗಿ ಕಡಲನ್ನು ಕಡೆದರೆಂದು ಪ್ರತೀತಿ ಇದೆ. ದೇವ-ದಾನವರ ಪ್ರಯತ್ನದಿಂದಾಗಿ ಅಮೃತ, ಹಾಲಾಹಲವೆರಡೂ ಕಡಲಿನೊಳಗಿಂದ ಬಂದುವಂತೆ. ಪುರಾಣ ಕಥೆ ಏನೇ ಇರಲಿ. ವಿಜ್ಞಾನಿಗಳೂ ಈಗ ಕಡಲನ್ನು ಕಡೆಯುತ್ತಿದ್ದಾರೆ. ವಿಜ್ಞಾನಿಗಳ ಪ್ರಯತ್ನದಿಂದಾಗಿ ಊಹೆಗೂ ನಿಲುಕದಂತಹ ಸಂಗತಿಗಳು ಕಡಲ ಒಡಲಿನಿಂದ ಹೊಮ್ಮುತ್ತಿವೆ. ಹೊಸ, ಹೊಸ ಅದ್ಭುತ ಜೀವಿಗಳ ಪರಿಚಯವಾಗುತ್ತಿದೆ. ಸೂರ್ಯನ ಬೆಳಕೂ ತಲುಪದ ಸಾಗರದಾಳದಲ್ಲಿ ವರ್ಣಮಯ ಬದುಕಿದೆ ಎನ್ನುವುದನ್ನು ನ್ಯಾಶನಲ್ ಜಿಯಾಗ್ರಫಿಕ್ ಚಾನೆಲ್ ಪ್ರದರ್ಶಿಸುತ್ತಲೇ ಇರುತ್ತದೆ. ಬಣ್ಣ, ಬಣ್ಣದ ಈ ಕತ್ತಲ ಲೋಕದಲ್ಲಿ ನಮಗರಿವಿಲ್ಲದ ಇನ್ನೂ ಎಷ್ಟೋ ರಹಸ್ಯಗಳು ಬಯಲಾಗದೇ ಉಳಿದಿವೆ ಎನ್ನುವುದಕ್ಕೆ ಬಿಎಂಸಿ ಬಯಾಲಜಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನಾ ಪ್ರಬಂಧವೊಂದು ಉದಾಹರಣೆ. ಅಮೆರಿಕೆಯ ಕ್ಯಾಲಿಫೋರ್ನಿಯಾದಲ್ಲಿರುವ ಮಾಂಟೆರಿ ಬೇ ಅಕ್ವೇರಿಯಂ ಸಂಶೋಧನಾಲಯದ ರಾಬರ್ಟ್ ವ್ರಿಜೆನ್ಹ್ಯೂಕ್ ಮತ್ತು ಸಂಗಡಿಗರು ಕಡಲ ತಳದಲ್ಲಿ ತಿಮಿಂಗಲಗಳ ಮೂಳೆಗಳನ್ನೇ ತಿಂದು ಬದುಕುವ ಒಸೆಡಾಕ್ಸ್ ಎನ್ನುವ ವಿಶಿಷ್ಟ ಹುಳುಗಳಲ್ಲಿ ಸಾಕಷ್ಟು ತಳಿ ವೈವಿಧ್ಯವನ್ನು ಗುರುತಿಸಿದ್ದಾರೆಂದು ಬಿಎಂಸಿ ಬಯಾಲಜಿ ವರದಿ ಮಾಡಿದೆ.  ಈ ಹುಳುಗಳು ವಿಕಾಸವಾದ ಕಾಲ ಹಾಗೂ ರೀತಿಯ ಬಗ್ಗೆ ಇದುವರೆಗಿದ್ದ ನಂಬಿಕೆಯನ್ನು ಇದು ಬುಡಮೇಲು ಮಾಡುವಂತಿದೆ.

ಸಾಗರತಳದ ಕೆಸರು ಹೂಳಿನಲ್ಲಿ ಬದುಕುವ ಜೀವಿಗಳಲ್ಲೆಷ್ಟೋ ವೈವಿಧ್ಯವಿದೆ. ಅದರಲ್ಲೂ ಎರಡು, ಮೂರು ಕಿಲೋಮೀಟರು ಆಳದಲ್ಲಿರುವ ನೀರಿನಲ್ಲಿ, ಆ ನೀರಿನ ಭಾರವನ್ನೂ ತಾಳಿಕೊಂಡು ಹಲವು ಜೀವಿಗಳು ಬದುಕಿವೆ. ಹೂಳಿನಲ್ಲಿರುವ ಗಂಧಕ, ರಂಜಕದ ರಾಸಾಯನಿಕಗಳನ್ನು ಒಡೆದು ಅದರಿಂದಲೇ ಜೀವ ಸವೆಸುವ ಬೂಸ್ಟುಗಳು ಹಾಗೂ ಬ್ಯಾಕ್ಟೀರಿಯಾಗಳು ಇಲ್ಲಿವೆ. ಬಿಸಿ ಶಿಲಾರಸ ಹೊಮ್ಮುವ ಸಾಗರತಳದಲ್ಲಿನ ಸೀಳುಗಳ ಸಂದಿಯಲ್ಲಿ ಬದುಕುವ ಬ್ಯಾಕ್ಟೀರಿಯಾಗಳು ಕುದಿಯುವ ನೀರಿನಲ್ಲಿಯೂ ಸಾಯವು! ಇಲ್ಲಿನ ಪರಿಸರ ಸಾಮಾನ್ಯ ಜೀವಿಗಳಿಗೆ ಒಗ್ಗುವಂಥದ್ದಲ್ಲ. ನೀರಿನ ಭಾರವೂ ಹೆಚ್ಚು. ಸೂರ್ಯನ ಬೆಳಕು ಕಾಣುವುದೇ ಇಲ್ಲವಾದ್ದರಿಂದ ಆಹಾರ ತಯಾರಿಸುವ ಸಸ್ಯಗಳು ಇಲ್ಲವೇ ಇಲ್ಲ. ಆಳವೂ ಹೆಚ್ಚಾದ್ದರಿಂದ ಸಣ್ಣ ಪ್ರಾಣಿಗಳ ಶವಗಳು ತಳ ಮುಟ್ಟುವ ಮೊದಲೇ ಇತರೇ ಪ್ರಾಣಿಗಳಿಗೆ ಆಹಾರವಾಗಿಬಿಡುತ್ತವೆ. ಹೀಗಾಗಿ ಈ ಪರಿಸರದಲ್ಲಿ ಬ್ಯಾಕ್ಟೀರಿಯಾ ಹಾಗೂ ಬೂಸಿನಂತ ಜೀವಿಗಳಷ್ಟೆ ಇರಬಹುದೆನ್ನುವ ನಂಬಿಕೆ ಇತ್ತು. ಈ ನಂಬಿಕೆಯೂ ಈಗ ಸುಳ್ಳಾಗಿದೆ.

ಎರೆಹುಳ ಹಾಗೂ ಜಿಗಣೆಗಳ ಸಂಬಂಧಿಯಾದ ಕೊಳವೆಹುಳುಗಳೂ ಇಲ್ಲಿ ಜೀವಿಸುತ್ತಿವೆ.  2002ನೇ ಇಸವಿಯಲ್ಲಿ ಮೊತ್ತಮೊದಲಿಗೆ ಬಯಲಾದ ಈ ಪ್ರಾಣಿಗಳ 17 ಪ್ರಬೇಧಗಳನ್ನು ಈಗ ಗುರುತಿಸಲಾಗಿದೆ. ಒಸೆಡಾಕ್ಸ್ ಎಂದು ಹೆಸರಿಸಿರುವ ಈ ಪ್ರಾಣಿಗಳಿಗೆ, ಪ್ರಾಣಿಗಳ ಪ್ರಮುಖ ಅಂಗವಾದ ಬಾಯಿ ಇಲ್ಲವೇ ಇಲ್ಲ. ಬಾಯಿ ಇರಲಿ, ಉದರಂಭರಣಕ್ಕೆ ಹೊಟ್ಟೆ ಅಂದರೆ ಜೀರ್ಣಾಂಗವೇ ಇಲ್ಲ. ಇದು ಅಚ್ಚರಿಯ ವಿಚಾರ. ಏಕೆಂದರೆ ಪ್ರಾಣಿಗಳಲ್ಲಿ ಅತ್ಯಂತ ಕನಿಷ್ಟ ವಿಕಾಸವಾಗಿದೆ ಎನ್ನಲಾದ ಸ್ಪಂಜುಜೀವಿಗೂ ಕೂಡ ಬಾಯಿಯಂತಹ ಅಂಗವಿದೆ. ಅದಕ್ಕೆ ಹೊಟ್ಟೆ ಇಲ್ಲದಿರಬಹುದು, ಆದರೆ ಆಹಾರ ಸೇವಿಸುವ ಬಾಯಿಯಂತಹ ರಂಧ್ರವಿದೆ! ಒಸೆಡಾಕ್ಸ್ಗೆ ಅದುವೂ ಇಲ್ಲ. ಅದಕ್ಕಿಂತಲೂ ವಿಚಿತ್ರವೆಂದರೆ, ಇದು ಜೀವಿಸುವ ಪರಿಸರ. ಸಾಗರತಳದಲ್ಲಿ ಜೀವಿಸುವ ಇತರೆ ಕೊಳವೆ ಹುಳಗಳು ಹೂಳಿನಲ್ಲಿ ಕೊಳವೆಯಂತಹ ರಂಧ್ರ ಕೊರೆದು ಅದರಲ್ಲಿಯೇ ಜೀವಿಸುತ್ತವೆ. ಆದರೆ ಒಸೆಡಾಕ್ಸ್ನ ಮನೆ ಹೂಳಿನಲ್ಲಿಲ್ಲ. ಹೂಳಿಗೆ ಬಂದು ಬಿದ್ದ ಬೃಹತ್ ಗಾತ್ರದ ತಿಮಿಂಗಲಗಳ ಮೂಳೆಯಲ್ಲಿ ರಂಧ್ರ ಕೊರೆದು ಅದನ್ನೇ ಮನೆಯಾಗಿಸಿಕೊಂಡು ಈ ಪ್ರಾಣಿಗಳು ಬದುಕುತ್ತವೆ.

ಹಾಗಿದ್ದರೆ ಇವು ಆಹಾರ ಸೇವಿಸುವುದಾದರೂ ಹೇಗೆ ಎಂದಿರಾ? ನಿಜ. ಇದುವೂ ಪ್ರಾಣಿಪ್ರಪಂಚದ ವಿಚಿತ್ರಗಳಲ್ಲಿ ಒಂದು. ಈ ಪ್ರಾಣಿ ತಾನೊಂದೇ ಬದುಕುವುದಿಲ್ಲ. ತನ್ನೊಟ್ಟಿಗೆ ಒಂದು ಬ್ಯಾಕ್ಟೀರಿಯಾವನ್ನೂ ಕೂಡಿಸಿಕೊಂಡು ಬದುಕುತ್ತದೆ. ನೋಡಲು ಪುಟ್ಟ ಗಿಡದಂತೆ ಕಾಣುವ ಇದು, ಮೂಳೆಯೊಳಗೆ ಬೇರು ಬಿಡುತ್ತದೆ. ಈ ಬೇರಿನಂಥ ಅಂಗದೊಳಗೆ ಒಂದು ಬಗೆಯ ಬ್ಯಾಕ್ಟೀರಿಯಾವನ್ನು ಸಾಕುತ್ತದೆ. ಬ್ಯಾಕ್ಟೀರಿಯಾ ಮೂಳೆಯನ್ನು ಕರಗಿಸಿದಾಗ, ಅದರ ಸಾರವನ್ನು ನೇರವಾಗಿ ಹೀರಿಕೊಳ್ಳುತ್ತದೆ. ಆಹಾರ ಸಂಪಾದನೆಯಷ್ಟೆ ಅಲ್ಲ. ಇದರ ಇತರೆ ಜೀವನಕ್ರಿಯೆಗಳೂ ಸಾಮಾನ್ಯವಲ್ಲ. ಹತ್ತಾರು ಆನೆಗಳಷ್ಟು ದೊಡ್ಡ ತಿಮಿಂಗಲದ ಮೂಳೆಯನ್ನು ಕರಗಿಸುವ ಈ ಪ್ರಾಣಿ ಎಷ್ಟು ದೊಡ್ಡದಿರಬಹುದೆಂದಿರಿ? ಕೆಲವೇ ಮಿಲಿಮೀಟರುಗಳಷ್ಟು ಅಂದರೆ ಕೆಂಜುಗ ಇರುವೆಗಿಂತಲೂ ಪುಟ್ಟದು.  ಇಷ್ಟು ಪುಟ್ಟ ಪ್ರಾಣಿಯಲ್ಲಿ ಇನ್ನೂ ಒಂದು ವಿಚಿತ್ರವಿದೆಯಂತೆ. ಇದರಲ್ಲಿ ಹೆಣ್ಣೇ ದೊಡ್ಡದು, ಗಂಡು ಪುಟ್ಟದು. ಒಂದೊಂದು ಹೆಣ್ಣಿಗೂ ಹತ್ತಾರು ಗಂಡುಗಳ ಕಅಂತಃಪುರಕಿವಿರುತ್ತದೆಯಂತೆ. ಈ ಅಂತಃಪುರ ಹೆಣ್ಣಿನ ದೇಹದೊಳಗೇ ಇದೆ ಎನ್ನುವುದು ಮತ್ತೊಂದು ವಿಶೇಷ.

ಇಷ್ಟು ಪುಟ್ಟ ಜೀವಿಯಲ್ಲಿ ಎಷ್ಟು ವೈವಿಧ್ಯ ಇರಬಹುದು? ಬಣ್ಣ, ಆಕಾರ, ಗಾತ್ರ ಎಲ್ಲದರಲ್ಲಿಯೂ ಸಾಕಷ್ಟು ವಿಭಿನ್ನವಾಗಿರುವ ಪ್ರಾಣಿಗಳನ್ನು ವಿಜ್ಞಾನಿಗಳು ಬೆದಕಿದ್ದಾರೆ. ಐದು ವರ್ಷಗಳ ಹಿಂದೆ ಎರಡೇ ಎರಡು ಬಗೆಯ ಜೀವಿಗಳಷ್ಟೆ ಕಾಣಸಿಕ್ಕಿದ್ದುವು. ಇಂದು ಹದಿನೇಳು ಪ್ರಬೇಧಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಈ ವೈವಿಧ್ಯ ಕೇವಲ ತೋರಿಕೆಯಲ್ಲ. ಅವು ಒಂದೊಂದರ ತಳಿಗುಣವೂ ವಿಭಿನ್ನ ಎಂದು ನಿರೂಪಿಸಿದ್ದಾರೆ. ಅದರೊಟ್ಟಿಗೇ ಕೆಲವು ಸಂದೇಹಗಳೂ ಹುಟ್ಟಿಕೊಂಡಿವೆ. ಸಾಮಾನ್ಯವಾಗಿ ತಳಿಗುಣವೆಷ್ಟು ವಿಭಿನ್ನ ಎಂದು ಪತ್ತೆ ಮಾಡಲು ಜೀವಿಗಳ ಕೋಶಗಳಲ್ಲಿರುವ ಮೈಟೊಕಾಂಡ್ರಿಯ ಎನ್ನುವ ಕೋಶಾಂಗದಲ್ಲಿರುವ ಡಿಎನ್ಎಯನ್ನು ಹೋಲಿಸಿ ನೋಡುತ್ತಾರೆ. ಎಷ್ಟೇ ಸಂತತಿಗಳು ಕಳೆದರೂ, ಮೈಟೊಕಾಂಡ್ರಿಯದಲ್ಲಿರುವ ಡಿಎನ್ಎಯಲ್ಲಿ ಏರುಪೇರಾಗುವುದಿಲ್ಲ. ಏನಾದರೂ ಏರುಪೇರಾದರೆ ಅದು ಕಾಲಾಂತರದಲ್ಲಿ ಕೂಡಿಕೊಂಡ ದೋಷಗಳೇ ಹೊರತು, ಕೋಶಗಳು ಒಂದರೊಡನೊಂದು ಸಂಗಮವಾಗಿ ಆದ ವ್ಯತ್ಯಾಸವಲ್ಲ ಎನ್ನುವುದು ನಂಬಿಕೆ. ಹೀಗಾಗಿ ಒಂದೇ ಮೂಲದಿಂದ ವಿಕಾಸವಾಗಿರಬಹುದಾದ (ಉದಾಹರಣೆಗೆ ಚಿಂಪಾಂಜಿ ಮತ್ತು ಮನುಷ್ಯ) ಎರಡು ಜೀವಿಗಳ ಮೈಟೊಕಾಂಡ್ರಿಯದ ಡಿಎನ್ಎಯಲ್ಲಿರುವ ವ್ಯತ್ಯಾಸವನ್ನು ಅಳೆದರೆ, ಇವೆರಡೂ ಎಷ್ಟು ಕಾಲದ ಹಿಂದೆ ಪ್ರತ್ಯೇಕವಾದುವು ಎಂದು ಲೆಕ್ಕ ಹಾಕಬಹುದು.

ಐದು ವರ್ಷಗಳ ಹಿಂದೆ ಸಿಕ್ಕಿದ್ದ ಎರಡು ಒಸೆಡಾಕ್ಸ್ ಪ್ರಭೇದಗಳ ಮೈಟೊಕಾಂಡ್ರಿಯ ಡಿಎನ್ಎಯನ್ನೂ ಹೀಗೆ ಹೋಲಿಸಿ ನೋಡಿದ್ದರು. ಆಗ ಅವೆರಡೂ ಸುಮಾರು 4 ಕೋಟಿ ವರ್ಷಗಳ ಹಿಂದೆ ಬೇರೆಯಾಗಿದ್ದುವು ಎಂದು ಲೆಕ್ಕ ಹಾಕಲಾಗಿತ್ತು. ತಿಮಿಂಗಲಗಳ ಪೂರ್ವಜರೂ ಅದೇ ಕಾಲದಲ್ಲಿ ವಿಕಾಸವಾದುವಾದ್ದರಿಂದ, ಅವುಗಳ ಮೂಳೆಗಳನ್ನು ಕೊರೆದು ಬದುಕಿದ್ದ ಜೀವಿಯಿಂದ ಈ ಎರಡೂ ಪ್ರಬೇಧಗಳು ಉದ್ಭವವಾಗಿರಬೇಕು ಎಂದು ಊಹಿಸಲಾಗಿತ್ತು. ಈಗ ದೊರೆತಿರುವ ಇನ್ನೂ ಹದಿನೈದು ಜೀವಿಗಳ ಮೈಟೊಕಾಂಡ್ರಿಯದ ಡಿಎನ್ಎಗಳನ್ನು ಒಂದಿನ್ನೊಂದರ ಜೊತೆಗೆ ರಾಬರ್ಟ್ ವ್ರಿಜೆನ್ಹ್ಯೂಕ್ ತಂಡ ಹೋಲಿಸಿ ನೋಡಿದೆ. ಇದು ಒಸೆಡಾಕ್ಸ್ಗಳ ಉದ್ಭವಕಾಲವನ್ನು ಇನ್ನಷ್ಟು ಹಿಂದಕ್ಕೆ ದೂಡಿದೆ. ಅಂದರೆ ತಿಮಿಂಗಲಗಳ ಕಾಣಿಸಿಕೊಳ್ಳುವುದಕ್ಕೂ ಮೊದಲೇ ಇವು ಉಗಮವಾಗಿರಬೇಕು ಎಂದು ವ್ರಿಜೆನ್ಹ್ಯೂಕ್ರ ಸಂಶೋಧನೆ ಸೂಚಿಸುತ್ತಿದೆ.  ಈ ಲೆಕ್ಕಾಚಾರವೇ ತಪ್ಪಿರಬಹುದೇ? ಅಥವಾ ಈ ಹುಳುಗಳು ತಿಮಿಂಗಲಗಳಲ್ಲದೆ ಇತರೆ ಜೀವಿಗಳ ಮೂಳೆಗಳನ್ನೂ ಅರಗಿಸಿಕೊಳ್ಳುತ್ತಿದ್ದುವೇ? ಇತ್ಯಾದಿ ಸಂದೇಹಗಳು ಹುಟ್ಟಿಕೊಂಡಿವೆ. ಉಳಿದ ಜೀವಿಗಳಂತೆ ಇವು ಎಲ್ಲಿಯೂ ತಮ್ಮ ಇತಿಹಾಸದ ಪಳೆಯುಳಿಕೆಗಳನ್ನು ಉಳಿಸಿಲ್ಲವಾಗಿ, ಈ ಸಂದೇಹಗಳ ಪರಿಹಾರಕ್ಕೆ ಹೊಸ ಉಪಾಯಗಳನ್ನು ಹುಡುಕಬೇಕಾಗಿದೆ.

1. Robert C. Vrijenhoek et al., A remarkable diversity of bone-eating worms, BMC-Biology, 7: 74, 2009 (doi:10.1186/1741-7007-7-74).

2. G. W. Rouse et al., Osedax: Bone-Eating Marine Worms with Dwarf Males, Science, Vol 305 Pp 668-671, 2004