ಕಿಟೆಲ್ ನಿಘಂಟಿನಲ್ಲಿ ‘ರತ್ನಾಕರ’ ಎಂಬುದಕ್ಕೆ ‘ಎ ಜ್ಯೂಯೆಲ್ ಮೈನ್’ (a jewel mine) ಎಂದರೆ, ಕನ್ನಡದಲ್ಲಿ, ‘ಸಾಗರ’ ಎಂದು ಕೊಡಲಾಗಿದೆ. ನಿಜಕ್ಕೂ ಸಾಗರವು ರತ್ನಾಕರ. ಈಗಾಗಲೇ ಬಿಲಿಯನ್ ಡಾಲರ್ ಗಟ್ಟಲೆ ಲೆಕ್ಕದಲ್ಲಿ ತೈಲ ಹಾಗೂ ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ನಾವು ಸಾಗರಗಳಿಂದ ಪಡೆಯುತ್ತಿದ್ದೇವೆ. ತೀರದಾಚೆಗಿನ ಬಂಡೆ ನಿಕ್ಷೇಪಗಳು, ಸಾಗರದಾಳದ ಖನಿಜ ನಿಕ್ಷೇಪಗಳು, ಆಳ ಕಡಿಮೆಯಿರುವ ಸಾಗರ ನಿಕ್ಷೇಪಗಳು – ಎಂಬ ಮೂರು ವಿಧದ ಸಾಗರ ನಿಕ್ಷೇಪಗಳಿವೆ.

ತೀರದಾಚೆಗಿನ(offshore) ಬಂಡೆಗಳಲ್ಲಿ ತೈಲ, ನೈಸರ್ಗಿಕ ಅನಿಲ, ಲೋಹಯುಕ್ತ ನಿಕ್ಷೇಪಗಳು, ಸಲ್ಫರ್ ಮತ್ತಿತರ ನಿಕ್ಷೇಪಗಳಿರುತ್ತವೆ. ತೀರದಿಂದ ಸಾಗರ ಮಧ್ಯದೆಡೆಗೆ ನೂರಾರು ಕಿ.ಮೀ. ದೂರದವರೆಗೆ ಮತ್ತು ಸಾವಿರಾರು ಮೀಟರ್‌ಗಳ ಆಳದವರೆಗೆ ಇವು ಕಂಡುಬರುತ್ತವೆ. ನೆಲದ ಮೇಲೆ ಭೂ ನಿಕ್ಷೇಪಗಳನ್ನು ತೆಗೆಯುವ ತಾಂತ್ರಿಕ ವಿಧಾನವನ್ನೇ ಈ ನಿಕ್ಷೇಪಗಳನ್ನು ತೆಗೆಯಲು ಬಳಸುತ್ತಾರೆ. ಎಂದರೆ ಕೊರಕಗಳಿಂದ (ಡ್ರಿಲ್) ಕೊರೆದು ಕಲ್ಲಿದ್ದಲು, ಹೈಡ್ರೊಕಾರ್ಬನ್‌ಗಳು (ತೈಲ ಇತ್ಯಾದಿ), ಲೋಹ ನಿಕ್ಷೇಪಗಳನ್ನು ಹೀಗೆ ಪಡೆಯಬಹುದು.

ಆಳಸಾಗರದ ಖನಿಜ ನಿಕ್ಷೇಪಗಳನ್ನು ಪಡೆಯುವುದು ಸುಲಭವಲ್ಲ. ತೀರದಾಚೆಗಿನ ಗಣಿಗಾರಿಕೆ ವಿಧಾನ ಇಲ್ಲಿ ಸಾಧ್ಯವಿಲ್ಲ. ಅದು ಅತೀವ ದುಬಾರಿ ವಿಧಾನವಾಗುತ್ತದೆ. ಆದ್ದರಿಂದ ಪರ್ಯಾಯ ಮಾರ್ಗಗಳು ಅಗತ್ಯ. ಇಲ್ಲಿ ಮ್ಯಾಂಗನೀಸ್ (Mn) ಗಂಟುಗಳು ಅಪಾರವಾಗಿ ದೊರೆಯುತ್ತವೆ. ಇವುಗಳಿಗೆ ಪಾಲಿಮೆಟಲಿಕ್ ಗಂಟು (nodule) ಗಳೆನ್ನುತ್ತಾರೆ. ಇವುಗಳಲ್ಲಿ ಮ್ಯಾಂಗನೀಸ್ ಅಲ್ಲದೆ, ನಿಕಲ್ (Ni), ತಾಮ್ರ (Cu) ಮತ್ತು ಕೋಬಾಲ್ಟ್ (Co) ಗಳು ಇರುತ್ತವೆ. ಆದರೆ ಸೇಕಡಾವಾರು ಪ್ರಮಾಣದಲ್ಲಿ ಮ್ಯಾಂಗನೀಸ್ ಅಂಶ ಹೆಚ್ಚಾಗಿರುತ್ತದೆ. ಭಾರತದ ಮಟ್ಟಿಗೆ ಹೇಳಬಹುದಾದರೆ, ಹಿಂದೂ ಮಹಾಸಾಗರದಲ್ಲಿ ಮ್ಯಾಂಗನೀಸ್ ಗಂಟುಗಳು ಹಲವಾರು ಕಡೆ ಕಂಡುಬಂದಿವೆ. ಹಿಂದೂ ಮಹಾಸಾಗರ ಮಧ್ಯದ ಏಣು (ridge) ಇರುವೆಡೆ ಸಲ್ಫೈಡ್‌ಗಳು ಇವೆ. ಕಬ್ಬಿಣ-ಮ್ಯಾಂಗನೀಸ್ ಹಾಗೂ ಕೋಬಾಲ್ಟ್ ಯುಕ್ತ ಖನಿಜ ನಿಕ್ಷೇಪವು ಅಂಡಮಾನ್ ದ್ವೀಪ ಸಮೂಹದ ಸುತ್ತಲೂ ಇದೆಯೆಂದು ವರದಿಯಾಗಿದೆ. ಹೀಗೆ ನಿಲುಕುವ ಆಳದಲ್ಲಿರುವ ಲೋಹ ನಿಕ್ಷೇಪಗಳ ಗಣಿಗಾರಿಕೆ ಮಾಡುವುದು ಹೆಚ್ಚು ಲಾಭದಾಯಕ.

ಇನ್ನು ತೀರದೆಡೆಗೆ, ಅಷ್ಟು ಆಳವಿಲ್ಲದ ಸಾಗರ ವಲಯದಲ್ಲಿ ತೈಲ, ನೈಸರ್ಗಿಕ ಅನಿಲಗಳಲ್ಲದೆ ಟೈಟೇನಿಯಮ್, ಜಿರ್‌ಕಾನ್, ಮಾಗ್ನೆಟೈಟ್, ಮೊನಜೈಟ್ ಮುಂತಾದ ಖನಿಜಗಳು ಇರುತ್ತವೆ.

ಇದೇ ವಲಯದ ಹೂಳಿನಲ್ಲಿ ಫಾಸ್ಫೇಟ್ ನಿಕ್ಷೇಪ ದೊರೆಯುತ್ತದೆ. ರಾಸಾಯನಿಕ ಗೊಬ್ಬರಕ್ಕೆ ಬೇಕಾದ ಫಾಸ್ಫೇಟ್ ಮುಖ್ಯ ಆಕರ ಇದು ಎನ್ನಬಹುದು. ಪ್ರಪಂಚದಲ್ಲಿನ ಆಹಾರೋತ್ಪಾದನೆಯ ಬೇಡಿಕೆ ಹೆಚ್ಚುತ್ತಿರುವಂತೆ, ಸಾಗರ ಮೂಲದ ಫಾಸ್ಫೇಟ್ ಯುಕ್ತ ರಾಸಾಯನಿಕ ಗೊಬ್ಬರದ ಅಗತ್ಯತೆಯ ಅರಿವಾಗುತ್ತದೆ. ಪ್ರಪಂಚದಲ್ಲಿ 210 ಮಿಲಿಯ ಟನ್‌ಗಳಿಗಿಂತಲೂ ಹೆಚ್ಚಿನ ಫಾಸ್ಫೇಟ್ ಉತ್ಪಾದನೆಯಿದೆ. ಭಾರತದಲ್ಲಿ ತಯಾರಾಗುತ್ತಿರುವ ಶಿಲಾಮೂಲಗಳಿಂದ ದೊರೆಯುವ ಫಾಸ್ಫೇಟ್ ಕಡಿಮೆಯಿರುವುದರಿಂದ ಹೊರಗಿನಿಂದ ಅದನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸಾಗರಮೂಲ ಫಾಸ್ಫೇಟ್‌ನಿಂದ ನಮ್ಮ ಅಗತ್ಯವನ್ನು ಪೂರೈಸಿಕೊಳ್ಳಬಹುದು.

‘ಕಪ್ಪು ಚಿನ್ನ’ ವೆಂದು ಕರೆಯುವ ಪೆಟ್ರೋಲಿಯಮ್ ಒಂದು ಪ್ರಧಾನ ಇಂಧನ ಆಕರ.  ಇಂದಿನ ಕೈಗಾರಿಕಾ ಬೆಳವಣಿಗೆ ಹಾಗೂ  ದಿನನಿತ್ಯದ ಜೀವನದಲ್ಲಿ ಇದರ ಮಹತ್ವವನ್ನು ಬಿಡಿಸಿ ಹೇಳಬೇಕಿಲ್ಲ. ಪೆಟ್ರೋಲಿಯಮ್, ಸಾಗರದಲ್ಲಿ ದೊರೆಯುವ ಹೈಡ್ರೊಕಾರ್ಬನ್ ಎಂಬ ಸಂಕೀರ್ಣ ಪದಾರ್ಥದ ಒಂದು ಉಪ ಉತ್ಪನ್ನ. ಈ ಹೈಡ್ರೊಕಾರ್ಬನ್ ಎಂಬುದು ಸಸ್ಯಗಳು, ಪ್ರಾಣಿಗಳ ಅವಶೇಷಗಳು ವಿಭಜನೆಗೊಂಡು ಉಂಟಾದ ಪದಾರ್ಥ. ಇದರಲ್ಲಿ ಕಲ್ಲಿದ್ದಲು, ಖನಿಜ ತೈಲ, ಪ್ಯಾರಫಿನ್, ರಾಳಗಳು ಮತ್ತು ಬಿಟುಮಿನ್‌ನಂತಹ ಘನವೂ ಸೇರಿರುತ್ತವೆ.  ಜೀವಿ ಅವಶೇಷಗಳು ಹೂಳುಸ್ತರದಲ್ಲಿ ಬೆರೆತು, ಶಿಲಾಪದರದಡಿ ಸಿಲುಕಿಕೊಂಡಾಗ ಮತ್ತು ಈ ಸ್ಥಿತಿಯಲ್ಲಿ ಅಲ್ಲಿನ ತಾಪ ಹೆಚ್ಚಿದಾಗ, ಮನುಷ್ಯ ಇಂದು ಬಳಸುವ ಹೈಡ್ರೊಕಾರ್ಬನ್ ಪದಾರ್ಥಗಳು ಉಂಟಾಗುತ್ತವೆ. ಇದರ ಜೊತೆಗೆ ನೈಸರ್ಗಿಕ ಅನಿಲವೂ ಸಾಗರದಲ್ಲಿ ಇರುತ್ತದೆ. ಭಾರತದಲ್ಲಿ ಈ ಹೈಡ್ರೊಕಾರ್ಬನ್‌ಗಳ ನಿಕ್ಷೇಪ ಪಡೆಯುವ ಕೆಲಸ ನಾಲ್ಕು ದಶಕಗಳಿಗಿಂತಲೂ ಹೆಚ್ಚುಕಾಲದಿಂದ ನಡೆಯುತ್ತಿದೆಯಾದರೂ, ದೇಶದಲ್ಲಿ ಇಂಧನ ಬೇಡಿಕೆಯನ್ನು ಪೂರ್ತಿಯಾಗಿ ಇದು ಪೂರೈಸುತ್ತಿಲ್ಲ.

ಸಾಗರ ತಳದಲ್ಲಿ ಗಂಟುಗಳಂತಿರುವ ಖನಿಜ ನಿಕ್ಷೇಪಗಳು ಹೇರಳವಾಗಿವೆ. ಇದರಲ್ಲಿ ಮ್ಯಾಂಗನೀಸ್ ಅಂಶ ಹೆಚ್ಚಿಗೆ ಇರುವುದರಿಂದ ಇವುಗಳನ್ನು ‘ಮ್ಯಾಂಗನೀಸ್ ಗಂಟು (manganese nodules)’ಗಳು ಎಂದು ಕರೆಯುತ್ತಾರೆ. ಪೆಸಿಫಿಕ್ ಸಾಗರ ಹಾಗೂ ಹಿಂದೂ ಮಹಾಸಾಗರಗಳಲ್ಲಿ ಇವುಗಳನ್ನು ಗುರುತಿಸಲಾಗಿದೆ. ಈಗಾಗಲೇ ಪೆಸಿಫಿಕ್ ಸಾಗರದಲ್ಲಿ ಇದರ ಗಣಿಗಾರಿಕೆ ನಡೆದಿದೆ. ಈ ಗಂಟುಗಳಲ್ಲಿ ‘ಮ್ಯಾಂಗನೀಸ್’ ಅಲ್ಲದೆ ಕಬ್ಬಿಣ, ತಾಮ್ರ ಮತ್ತು ನಿಕಲ್ ಅಂಶಗಳೂ ಇವೆ.  ಈ ಗಂಟುಗಳು ರೂಪುಗೊಳ್ಳುವ ರೀತಿಯನ್ನು ಅಧ್ಯಯಿಸಿ ಅವುಗಳ ಕಾಲವನ್ನು ನಿರ್ಧರಿಸುತ್ತಾರೆ. ಹೀಗೆ ಅದರ ಕಾಲ ನಿರ್ಧಾರಕ್ಕೆ ಮುಖ್ಯವಾದ ವಿಷಯವೆಂದರೆ ಇದರಲ್ಲಿನ ಮ್ಯಾಂಗನೀಸ್ ಹಾಗೂ ಕಬ್ಬಿಣದ ಆಕ್ಸೈಡ್ ಸ್ತರಗಳು. ಮೊತ್ತಮೊದಲ ಆಕ್ಸೈಡ್ ರೂಪುಗೊಂಡ ಮೇಲೆ, ಅದರ ಸುತ್ತಲೂ ಮತ್ತೆ ಮತ್ತೆ ಪದಾರ್ಥವು ಸಂಚಯಗೊಳ್ಳುತ್ತ ಹೋಗುತ್ತದೆ. ಕೇಂದ್ರದ ಆಕ್ಸೈಡಿನ ಸುತ್ತ ಹೀಗೆ ಸಂಚಯಗೊಂಡು ಗಂಟುಗಳಾಗುತ್ತವೆ.  ಪೂರ್ಣಗೊಂಡಾಗ ಇವು ಹೆಚ್ಚು ಕಡಿಮೆ ಬೇರೆ ಬೇರೆ ಗಾತ್ರದ ಆಲೂಗಡ್ಡೆಗಳಂತೆ ಕಾಣುತ್ತವೆ.  ಚಿಕ್ಕ ಪುಟ್ಟಗಂಟುಗಳಿಂದ ಹಿಡಿದು 800 ಕಿ.ಗ್ರಾಂ. ತೂಕದ ಗಂಟು ಕೂಡ ದೊರೆತಿದೆ. ಒಂದು ಮರದ ಕಾಂಡವನ್ನು ಛೇದಿಸಿ ಅದರ ವಯಸ್ಸನ್ನು ನಿರ್ಣಯಿಸುವಂತೆ, ಈ ಗಂಟುಗಳನ್ನು ಛೇದಿಸಿ, ಅವುಗಳ ಬೆಳವಣಿಗೆಯ ವರ್ತುಲಗಳಿಂದ ಗಂಟಿನ ವಯಸ್ಸನ್ನು ನಿರ್ಧರಿಸಬಹುದು.

ಇಂತಹ ಲೋಹಭರಿತ ಗಂಟುಗಳು ಸಾಗರದ 300 ದಿಂದ 5000 ಮೀಟರ್ ಆಳಗಳಲ್ಲಿ, ಎಂದರೆ ತೀರಗಳಿಂದ ಸಾಕಷ್ಟು ದೂರದಲ್ಲಿ ದೊರೆಯುತ್ತವೆ. ವಿಕಿರಣ ಪಟು ಐಸೊಟೋಪುಗಳಿಂದ ಮ್ಯಾಂಗನೀಸ್ ಗಂಟುಗಳ ಬೆಳವಣಿಗೆಯ ದರವನ್ನೂ ಕಂಡುಹಿಡಿಯಲಾಗಿದೆ. ಈ ದರ ಬಹಳ ನಿಧಾನಗತಿಯದು. ಒಂದು ಸರಳ ಲೆಕ್ಕಾಚಾರದಲ್ಲಿ ಹೇಳಬೇಕೆಂದರೆ, ಈ ಗಂಟುಗಳಲ್ಲಿ ಒಂದು ದಿನಕ್ಕೆ ಒಂದು ಅಣುವಿನ ಸಂಚಯವಾಗುತ್ತದೆ ಎಂದು ಹೇಳಬಹುದು! ಹಿಂದೂ ಮಹಾಸಾಗರದಲ್ಲಿ ಈ ಗಂಟುಗಳನ್ನು ಲಾಭದಾಯಕವಾಗಿ ಪಡೆಯಬಹುದಾದ ವಲಯಗಳನ್ನೂ ಗುರುತಿಸಲಾಗಿದೆ.

ಸಾಗರದಲ್ಲಿ ಹೆಪ್ಪುಗಟ್ಟಿದ ತೊಗಟೆ, ಹೆಕ್ಕಳಿಕೆಗಳಂತೆ ಇರುವ ಪದಾರ್ಥಗಳಲ್ಲಿ ನಿಕಲ್, ತಾಮ್ರ, ಪ್ಲಾಟಿನಮ್, ರೋಡಿಯಮ್ ಸೀರಿಯಮ್, ಟೈಟೇನಿಯಮ್, ಕೋಬಾಲ್ಟ್, ಕ್ಸಾಡ್ಮಿಯಮ್ ಮುಂತಾದ ಲೋಹ ಸಂಯುಕ್ತಗಳ ಹೆಕ್ಕಳಿಕೆಗಳು, ಸಾಗರದೊಳಗೆ ಶಾಂತಗೊಂಡ ಅಗ್ನಿಪರ್ವತಗಳ ಮೇಲೆ ಉಂಟಾಗುತ್ತವೆ. ಆಮೇಲೆ ಇವು ಸಾಗರದೊಳಗಿನ ಪರ್ವತಗಳು, ಏಣುಗಳ ಮೇಲೆ ಬೆಳೆಯುತ್ತವೆ.

ಇಂದು ಜಾಗತಿಕವಾಗಿ ಎರಡು ಬಗೆಯ ಲೋಹಯುಕ್ತ ನಿಕ್ಷೇಪಗಳ ಬಗೆಗೆ ಹೆಚ್ಚಿನ ಆಸಕ್ತಿಯಿದೆ. ಮೊದಲನೆಯದು ಮ್ಯಾಂಗನೀಸ್ ಗಂಟುಗಳು, ಬೇರೆ ಖನಿಜ ಹೆಕ್ಕಳಿಕೆ (crust) ಗಳು. ಇವು ದೊಡ್ಡ ಸಾಗರಗಳ ತಳಗಳಲ್ಲಿ ಸಾಕಷ್ಟು ವ್ಯಾಪಕವಾಗಿ ಕಂಡುಬರುತ್ತವೆ.  ಇನ್ನೊಂದು ಬಗೆಯ ನಿಕ್ಷೇಪ ಹೆಚ್ಚು ಕುತೂಹಲಕಾರಿಯಾದುದು. ಏಕೆಂದರೆ ಅದು ರೂಪುಗೊಳ್ಳುವ ರೀತಿಯನ್ನು ನಾವು ಕಾಣಬಹುದು. ಸಾಗರ ತಳದಲ್ಲಿನ ಬಿರುಕುಗಳು, ಸ್ತರಭಂಗಗಳ ಜಾಡಿನಲ್ಲಿ ಜಲೋಷ್ಣ ಅಥವಾ ಜಲತಾಪೀಯ (hydrothermal) ಊಟೆಗಳು ಕಬ್ಬಿಣ, ಮ್ಯಾಂಗನೀಸ್, ತಾಮ್ರ, ಸತು, ಕೊಬಾಲ್ಟ್, ಬೆಳ್ಳಿ, ಸೀಸ, ಚಿನ್ನ ಮುಂತಾದ ಅಂಶಗಳಿರುವ ದ್ರವವನ್ನು ಹೊರತರುತ್ತಲೇ ಇರುತ್ತವೆ. ಇವು ಕಾರ್ಬೊನೇಟ್‌ಗಳಂತೆ, ಆಕ್ಸೈಡ್‌ಗಳಂತೆ, ಸಲ್ಫೈಡ್‌ಗಳಂತೆ, ಸಲ್ಫೇಟ್‌ಗಳಂತೆ, ಸಿಲಿಕೇಟ್‌ಗಳಂತೆ ಖನಿಜ ಚಿಪ್ಪುಗಳಾಗಿ ಅಥವಾ ಯಾವುದಾದರೂ ರಚನೆಯ ಸುತ್ತ ಸಂಚಯಗೊಳ್ಳುತ್ತವೆ.

ಒಟ್ಟಿನಲ್ಲಿ ಸಾಗರತಳದ ಇಂತಹ ನಿಕ್ಷೇಪಗಳನ್ನು ತಿಳಿಯಲು 2000-5000 ಮೀಟರ್‌ಗಳ ಆಳದಲ್ಲಿ ಹಡಗುಗಳಿಂದ ಸಾಗರತಳದ ಪದಾರ್ಥದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ, ವಿಶ್ಲೇಷಿಸಲಾಗುವುದು. ಇಕೋಸೌಂಡರ್ ಅಥವಾ ಭೂಕಂಪ ವ್ಯವಸ್ಥೆಗಳ ನೆರವಿನಿಂದ ಸಾಗರ ನೆಲದ ಮೇಲ್ಮೈ ರೂಪವನ್ನು ನಿರ್ಧರಿಸಿ, ಆಮೇಲೆ ಸ್ಯಾಂಪಲ್ ಸಂಗ್ರಹಕಾರ್ಯವನ್ನು ನಡೆಸಲಾಗುವುದು.

ಭೂಮಿಯ ಮುಖ್ಯ ಲಕ್ಷಣಗಳೇನು ಮತ್ತು ಅವು ರೂಪುಗೊಳ್ಳಲು ಕಾರಣಗಳು ಎಂದರೆ, ಭೂರಚನಾ ಪ್ರಕ್ರಿಯೆಯನ್ನು ಟೆಕ್ಟಾನಿಕ್ಸ್ (Tectonics) ಎನ್ನುವರು. ಇದು, ಭೂಮಿಯಲ್ಲಿನ ಅಗ್ನಿಪರ್ವತ ಚಟುವಟಿಕೆಗಳು, ಸ್ತರಭಂಗಗಳು, ಮಡಿಕೆಗಳು, ಭೂಪದಾರ್ಥ ಮೇಲಕ್ಕೇರುವುದು ಅಥವಾ ಕುಸಿಯುವುದು ಇಂತಹ ಭೂರಚನಾ ಕ್ರಿಯೆಗಳು ಮತ್ತು ಅವುಗಳಿಂದಾಗುವ ಭೂಫಲಕಗಳ ಪ್ರತ್ಯೇಕನ, ಸಂಘಟ್ಟನೆ ಮುಂತಾದವುಗಳ ಪರಿಣಾಮಗಳು. ಈ ಪ್ರಕ್ರಿಯೆಗಳು ತೈಲ ಹಾಗೂ ನೈಸರ್ಗಿಕ ಅನಿಲ ನಿಕ್ಷೇಪಗಳು ಮತ್ತು ಖನಿಜ ನಿಕ್ಷೇಪಗಳು ರೂಪುಗೊಳ್ಳಲು ಬಹಳ ಮುಖ್ಯವಾದ ಘಟ್ಟಗಳು. ಭೂರಚನಾ ಕ್ರಿಯೆಗಳು ಸಾಗರ ಸಂಪನ್ಮೂಲ ರಚನೆಯಷ್ಟೇ ಅಲ್ಲದೆ ಸಮುದ್ರ ಮಟ್ಟದಲ್ಲಿ ಬದಲಾವಣೆ, ಸಾಗರ ಪರಿಸರ ಹಾಗೂ ವಾಯುಗುಣಗಳ ಮೇಲೂ ಪ್ರಭಾವ ಬೀರಬಲ್ಲವು. ಈ ಟೆಕ್ಟಾನಿಕ್ ಕ್ರಿಯೆಗಳು ಕೆಲವು ವರ್ಷಗಳ ಅಥವಾ ಅನೇಕ ಮಿಲಿಯ ವರ್ಷಗಳ ಅವಧಿಯದಾಗಿರಬಹುದು. ಸಾಗರ ಮಟ್ಟದ ಬದಲಾವಣೆಗಳು ಧ್ರುವಪ್ರದೇಶದ ಹಿಮಟೊಪ್ಪಿಗೆಗಳು ಹಾಗೂ ಭೂಕವಚದ ಭಾಗಗಳು ಕುಸಿಯುವುದಕ್ಕೂ ಕಾರಣವಾಗುತ್ತವೆ.

ಇತ್ತೀಚೆಗೆ ಭೂಮಿಯ ಬಗೆಗಿನ ವೈಜ್ಞಾನಿಕ ಮಾಹಿತಿ ಸಾಕಷ್ಟು ಬೆಳೆದಿದೆ.  ಇವುಗಳ ನೆರವಿನಿಂದ ಭಾರತವು ತೈಲ, ನೈಸರ್ಗಿಕ ಅನಿಲಗಳ ಜೊತೆಗೆ ಅನೇಕ ಲೋಹೀಯ/ಅಲೋಹೀಯ ನಿಕ್ಷೇಪಗಳ ಬಗೆಗೆ ಸಾಕಷ್ಟು ಅಧ್ಯಯನ ನಡೆಸಿ, ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸ, ಕೇರಳ, ಮಹಾರಾಷ್ಟ್ರಗಳ ಸಾಗರ/ಸಮುದ್ರಗಳಲ್ಲಿನ ಸಂಪನ್ಮೂಲಗಳನ್ನು ಪಡೆಯುವ ಪ್ರಯತ್ನಗಳು ನಡೆದಿವೆ.