ಜೋಗ

ತಾಲ್ಲೂಕು : ಸಾಗರ
ತಾಲ್ಲೂಕು ಕೇಂದ್ರದಿಂದ: ೩೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೧೦೦ ಕಿ.ಮೀ

ಸಾಗರದಿಂದ ೩೦ ಕಿ.ಮೀ ದೂರದಲ್ಲಿದೆ. ಸಾಗರ ತಾಲ್ಲೂಕು ಕರೂರು ಬಾರಂಗಿ ಹೋಬಳಿ ವ್ಯಾಪ್ತಿಯಲ್ಲಿದೆ. ವಿಶ್ವವಿಖ್ಯಾತ ಜೋಗ ಜಲಪಾತ ನಾಲ್ಕು ಧಾರೆಗಳಾಗಿ ಧುಮುಕುವ ಆಕರ್ಷಣಾ ಕೇಂದ್ರ. ಸುಮಾರು ೨೭೪ ಮೀ. ಎತ್ತರದಿಂದ ಧುಮುಕುವ ರಾಜ, ರೋರರ್, ರಾಕೆಟ್, ಲೇಡಿ ಜಲಧಾರೆಗಳು ಎಷ್ಟು ನೋಡಿದರೂ ನೋಡಬೇಕೆನಿಸುತ್ತದೆ. ನೈಸರ್ಗಿಕ ಸಂಪತ್ತು ಆಕರ್ಷಣೀಯ. ವಿದ್ಯುತ್ ಉತ್ಪಾದನೆಗೆ ಅಣೆಕಟ್ಟು ಕಟ್ಟಿದ್ದರಿಂದ ಈ ಜಲಪಾತ ವರ್ಷದಲ್ಲಿ ಜೂನ್ ನಿಂದ ನವೆಂಬರ್ ವರೆಗೆ ಕಾಣುತ್ತದೆ. ಶರಾವತಿ ನದಿಯಿಂದ ಲಿಂಗನಮಕ್ಕಿಯಲ್ಲಿ ಅಣೆಕಟ್ಟು ಕಟ್ಟಿದ್ದಲ್ಲದೆ ಮಹಾತ್ಮಗಾಂಧಿ ವಿದ್ಯುದಾಗಾರದಲ್ಲಿ ಎಂಟು ವಿದ್ಯುತ್ ಘಟಕಗಳಿವೆ. ಶರಾವತಿ ವಿದ್ಯುದಾಗಾರದಿಂದ ೧೦ ಘಟಕಗಳು ಇವೆ. ಲಿಂಗನಮಕ್ಕಿಯಿಂದ ಎರಡು ವಿದ್ಯುತ್ ಘಟಕಗಳು ಅಲ್ಲದೆ ಲಿಂಗನಮಕ್ಕಿ ಅಣೆಕಟ್ಟಿನಿಂದ ೭೬೯ ಚದರ ಮೈಲಿ ವಿಸ್ತೀರ್ಣ ಜಲಾಮಯ ಪ್ರದೇಶ. ತಳಗಳಲೆ ಆಣೆಕಟ್ಟೆಯಿಂದ ೧೪ ಚದರ ಮೈಲಿ ವಿಸ್ತೀರ್ಣ ಜಲಾಮಯ ಪ್ರದೇಶವಾಗಿದೆ.

 

ವರದಹಳ್ಳಿ

ತಾಲ್ಲೂಕು: ಸಾಗರ
ತಾಲ್ಲೂಕು ಕೇಂದ್ರದಿಂದ: ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೮೦ ಕಿ.ಮೀ

ಸಾಗರದಿಂದ ಸುಮಾರು ೧೦ ಕಿ.ಮೀ ದೂರದಲ್ಲಿ ಸಾಗರ ಯಡಜಿಗಳೆಮನೆ ಮಾರ್ಗದಲ್ಲಿದೆ. ಇನ್ನೊಂದು ಚಿಕ್ಕ ಗ್ರಾಮ ನಿಸರ್ಗ ರಮಣೀಯ. ದೇವಿಯು ಮೂಕಾಸುರನನ್ನು ಒದ್ದಿದ್ದರಿಂದ ವದ್ದಳ್ಳಿ ಎಂದೂ, ಭಕ್ತರಿಗೆ ಆಕೆ ವರ ನೀಡಿದ್ದರಿಂದ ವರದಪೂರ ಎಂದು ಹೆಸರು ಬಂದಿರುವುದಾಗಿ ಐತಿಹ್ಯವಿದೆ. ಮಹಿಷಾಸುರ ಮರ್ದಿನಿಯನ್ನು ಆರಧ್ಯ ದೈವವಾಗಿಟ್ಟುಕೊಂಡಿರುವ ವರದಹಳ್ಳಿ ನಿಸರ್ಗದ ಮಡಿಲಲ್ಲಿ ಅಡಗಿರುವ ಈ ಸ್ಥಳ. ೧೯೫೧ ರಲ್ಲಿ ಶ್ರೀ ಭಗವಾನ್ ಶ್ರೀಧರರು ತಮ್ಮ ದಿವ್ಯ ದೃಷ್ಟಿಯಿಂದ ಪರಿಸರವನ್ನು ವೀಕ್ಷಿಸಿ, ತಪಸ್ಸಿಗೆ ಪ್ರಶಾಂತ ಸ್ಥಳವೆಂದು ನಿರ್ಧರಿಸಿ ಆಶ್ರಮವನ್ನು ನಿರ್ಮಾಣ ಮಾಡಿದರು. ಅವರಿಂದ ಸ್ಥಾಪಿತವಾದ ಆಶ್ರಮ ಪ್ರಸಿದ್ಧವಾಗಿದೆ. ಇದು ಶ್ರೀಧರರು ಮುಕ್ತರಾಗುವವರೆಗೆ ಅಂದರೆ ೧೯೭೩ ರವರೆಗೆ ಅವರು ತಪೋವನವಾಗಿ ಪ್ರಖ್ಯಾತವಾಗಿತ್ತು. ಶ್ರೀಧರ ತೀರ್ಥಗಳು, ಅವರು ತಪಸ್ಸು ಮಾಡಿದ ಗುಹೆ, ಧರ್ಮ, ಧ್ವಜ, ಬೃಂದಾವನಗಳಿವೆ. ಮೊದಲು ಈಗಿನ ಶ್ರೀ ಜಗದಾಂಬಾ ದೇವಾಲಯದ ಹಿಂಭಾಗದಲ್ಲಿ, ನಂತರ ಮಧ್ಯಕುಟಿಯಲ್ಲಿ ಅನಂತರ ಶಿಖರ ಕುಟಿಯಲ್ಲಿ ಶ್ರೀ ಶ್ರೀಧರರು ತಪಸ್ಸನ್ನು ಆಚರಿಸಿದರು. ಆಶ್ರಮ ನಿರ್ಮಾಣವಾಯಿತು. ಏಳು ವರ್ಷ ಮೌನವೃತದ ಮೂಲಕ ವಿಶ್ವಧರ್ಮ ಪ್ರತೀಕವಾದ ಪಂಚಲೋಹ ನಿರ್ಮಿತ ಧ್ವಜಸ್ಥಂಭವು ಎತ್ತರದ ಸ್ಥಳದಲ್ಲಿ ಸ್ಥಾಪಿಸಲ್ಪಟ್ಟಿತು.

 

ಶ್ರೀ ಸಿಗಂಧೂರು

ತಾಲ್ಲೂಕು: ಸಾಗರ
ತಾಲ್ಲೂಕು ಕೇಂದ್ರದಿಂದ: ೫೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೧೩ ಕಿ.ಮೀ

ಸಿಗಂಧೂರು ಸಾಗರದಿಂದ ೫೦ ಕಿ.ಮೀ ದೂರದಲ್ಲಿ ತುಮರಿ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಸಾಗರದಿಂದ ಹೊಳೆಬಾಗಿಲು ಮಾರ್ಗದಲ್ಲಿ ಹೋಗುವ ಬಸ್ಸಿನಲ್ಲಿ ೧೦-೧೫ ನಿಮಿಷ ಶರಾವತಿ ಹಿನ್ನಿರಿನಲ್ಲಿ ಲಾಂಚ್ ಪ್ರಯಾಣ ಮತ್ತೆ ನಾಲ್ಕೈದು ಕಿ.ಮೀ. ಬಸ್ ನಲ್ಲಿ ಸಾಗಿದರೆ ಸಿಗಂಧೂರು ಸಿಗುತ್ತದೆ. ಧಾರ್ಮಿಕ ಪಾವಿತ್ರತ್ಯೆಯ ಜೊತೆಗೆ ಪ್ರವಾಸಿಗರ ಕಣ್ಮನ ಸೆಳೆಯುವ ಕ್ಷೇತ್ರವಾಗಿ ಈಚೆಗೆ ಬೆಳೆಯುತ್ತಿದೆ. ಇದಕ್ಕೆ ಸುಮಾರು ಎರಡೂವರೆ ಶತಮಾನಗಳ ಇತಿಹಾಸ ಇದೆ ಎಂದು ಸ್ಥಳೀಕರ ಅಭಿಪ್ರಾಯ. ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಎರಡು ದಿನ ಇಲ್ಲಿ ಜಾತ್ರೆ ನಡೆಯುತ್ತದೆ. ಪ್ರತಿ ಮಂಗಳವಾರ, ಶುಕ್ರವಾರಗಳಲ್ಲಿ ವಿಶೇಷ ಪೂಜೆ ಇದೆ. ಶರಾವತಿ ಹಿನ್ನೀರಿನಲ್ಲಿ ಲಾಂಚ್ ಯಾನ ಒಂದು ರೋಮಾಂಚಕ ಅನುಭವ ನೀಡುತ್ತದೆ.

 

ಹೆಗ್ಗೋಡು

ತಾಲ್ಲೂಕು: ಸಾಗರ
ತಾಲ್ಲೂಕು ಕೇಂದ್ರದಿಂದ: ೧೫ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೮೫ ಕಿ.ಮೀ

ಸಾಗರ, ಹೊಸನಗರ ಮಾರ್ಗದಲ್ಲಿ ಸಾಗರದಿಂದ ಸುಮಾರು ೧೫ ಕಿ.ಮೀ ದೂರದಲ್ಲಿರುವ ಹೆಗ್ಗೋಡು ಮೊದಲು ಕುಗ್ರಾಮ. ದಿ|| ಕೆ.ವಿ. ಸುಬ್ಬಣ್ಣನವರ ಅವಿರತ ಶ್ರಮದ ಫಲವಾಗಿ ಹುಟ್ಟಿದ ನೀನಾಸಂ ತನ್ನದೇ ಆದ ವೈಶಿಷ್ಟ್ಯವನ್ನು ಪಡೆಯುವುದರ ಮೂಲಕ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ತನ್ನದೇ ರಂಗಮಂದಿರ, ರಂಗಶಾಲೆ ಮೊದಲಾದವನ್ನು ಹೊಂದಿದೆ. ರಾಷ್ಟ್ರ ಹೊರ ರಾಷ್ಟ್ರಗಳಿಂದ ವಿದ್ವಾಂಸರನ್ನು ಕರೆಸಿ ಶ್ರೇಷ್ಠ ಮಟ್ಟದ ಉಪನ್ಯಾಸನಗಳ ಮೂಲಕ ರಂಗ ಶಿಕ್ಷಣ ನೀಡುತ್ತದೆ.

’ನೀನಾಸಂ’ ಎಂಬ ಸಂಸ್ಥೆಯು ೧೯೮೦ ರಿಂದ ರಂಗ ತರಬೇತಿಗಳನ್ನು ನೀಡುತ್ತಿದೆ. ’ತಿರುಗಾಟ’ ಎಂಬ ಸಾಂಸ್ಕೃತಿಕ ತಂಡವು ನಾಟಕಗಳನ್ನು ಕರ್ನಾಟಕದಾದ್ಯಂತ ಜನರ ವೀಕ್ಷಣೆಗಾಗಿ ಪ್ರದರ್ಶನ ಮಾಡುತ್ತಿದೆ. ದಿ|| ಕೆ.ವಿ.ಸುಬ್ಬಣ್ಣನವರಿಗೆ ಇದಕ್ಕಾಗಿ ಪ್ರತಿಷ್ಟಿತ ’ಮ್ಯಾಗ್ಸೆಸ್ಸೆ’ ಪ್ರಶಸ್ತಿಯನ್ನು ನೀಡಲಾಗಿದೆ.

 

ಕಾನೂರು ಕೋಟೆ

ತಾಲ್ಲೂಕು: ಸಾಗರ
ತಾಲ್ಲೂಕು ಕೇಂದ್ರದಿಂದ: ೬೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೧೩೦ ಕಿ.ಮೀ

ಸಾಗರ, ಭಟ್ಕಳ ರಸ್ತೆಯ ಬಿಳಿಗಾರಿನಿಂದ ೧೨ ಕಿ.ಮೀ ದೂರದಲ್ಲಿ ಇದು ಯರಾಂಜವಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಪ್ರವಾಸಿಗರಿಗೆ, ಚಾರಣಪ್ರಿಯರಿಗೆ ಅಪರೂಪದ ಸ್ಥಳ. ಕಾನೂರು ಕೋಟೆ ಮೆಣಸಿನ ರಾಣಿಯ ಆಳ್ವಿಕೆಗೆ ಒಳಪಟ್ಟ ಸ್ಥಳ.

ಕೋಟೆಗಳು, ಪುರಾತನ ದೇವಸ್ಥಾನಗಳು, ಪ್ರಕೃತಿ ದತ್ತವಾದ ಕೆರೆಗಳು ಅಪರೂಪದ ಅರಣ್ಯ ಸಂಪತ್ತು ಪ್ರವಾಸಿಗರಿಗೆ ಕಾಣಸಿಗುತ್ತದೆ.

 

ಲಿಂಗಮಕ್ಕಿ ಅಣೆಕಟ್ಟು

ತಾಲ್ಲೂಕು: ಸಾಗರ
ತಾಲ್ಲೂಕು ಕೇಂದ್ರದಿಂದ: ೩೫ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೧೦೫ ಕಿ.ಮೀ

ಜೋಗಕ್ಕೆ ೬ ಕಿ.ಮೀ ದೂರದಲ್ಲಿರುವ ಲಿಂಗನಮಕ್ಕಿ ಇದೆ. ಇದು ಶರಾವತಿಗೆ ಅಡ್ಡಲಾಗಿ ಆಣೆಕಟ್ಟನ್ನು ಕಟ್ಟಲಾಗಿರುವ ಸ್ಥಳ. ಇದರಲ್ಲಿ ಸುಮಾರು ೧೮೧೯ ಅಡಿ ನೀರು ಶೇಖರಣೆ ಮಾಡಲು ಅವಕಾಶವಿದೆ. ಸಾಗರದಂತೆ ಕಾಣುವ ನೀರಿನ ಆಗರ ಆಕರ್ಷಣೀಯ. ಶರಾವತಿ ಮುಳುಗಡೆ ಪ್ರದೇಶದಲ್ಲಿದ್ದ ಪುರಾತನವಾದ ಗಣಪತಿ ವಿಗ್ರಹ, ಚೌಡೇಶ್ವರಿ ವಿಗ್ರಹ, ಮಾಸ್ತಿಕಲ್ಲು, ಜೈನ ಬಸದಿಯಲ್ಲಿನ ಅನೇಕ ಮೂರ್ತಿಗಳನ್ನು ಸಂಗ್ರಹಿಸಿ ಇಲ್ಲಿನ ವಸ್ತು ಸಂಗ್ರಹಾಲಯದಲ್ಲಿ ಪ್ರವಾಸಿಗರಿಗೆ ಪ್ರದರ್ಶನಕ್ಕಿಡಲಾಗಿದೆ.

 

ವರದಾ ಮೂಲ

ತಾಲ್ಲೂಕು: ಸಾಗರ
ತಾಲ್ಲೂಕು ಕೇಂದ್ರದಿಂದ: ೧೭ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೮೭ ಕಿ.ಮೀ

ಈ ಕ್ಷೇತ್ರಕ್ಕೆ ’ವರದಾ ಮೂಲ’ ಎಂಬ ಹೆಸರು ಬರಲು ಪುರಾಣದಲ್ಲಿ ಹಲವು ಕಥೆಗಳು ಪ್ರಚಲಿತವಿದೆ. ಬ್ರಹ್ಮನ ಶಿರಶ್ಚೇದನ ಮಾಡಿದುದರಿದ ಈಶ್ವರನಿಗೆ ಬ್ರಹ್ಮಹತ್ಯದೋಷ ಬಂದೊದಗಿತ್ತು. ಆ ದೋಷ ನಿವಾರಣೆಗಾಗಿ ಪರಮೇಶ್ವರನು ಗಾಢವಾದ ಯೋಚನೆಯಲ್ಲಿ ಮಗ್ರನಾಗಿ ಕೊನೆಗೆ ಈ ತಪ್ಪಲಿನಲ್ಲಿ ತಪಸ್ಸನ್ನು ಆಚರಿಸತೊಡಗಿದನು. ಇವನ ತಪಸ್ಸಿನಿಂದ ಶ್ರೀ ವಿಷ್ಣುವು ಹರನ ದೋಷ ನಿವಾರಣಾರ್ಥವಾಗಿ ತನ್ನ ಶಂಖದಲ್ಲಿದ್ದ ಭಾಗೀರಥಿಯನ್ನು ಅಭಿಷೇಕ ಮಾಡಿದನು. ಈಶ್ವರನ ಮೇಲಿದ್ದ ಬ್ರಹ್ಮಹತ್ಯಾ ದೋಷವನ್ನು ನಿವಾರಿಸಿ ಆತನಿಗೆ ನಿರ್ದೋಷಿಯನ್ನಾಗಿ ಮಾಡಿದ ಭಾಗೀರಥಿಯನ್ನು ದೇವತೆಗಳು ’ವರದಾ’ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿತ್ತು. ಇದು ಸಾಗರದಿಂದ ಆಗ್ನೇಯಕ್ಕೆ ೫ ಕಿ.ಮೀ ದೂರದಲ್ಲಿದೆ. ಇಲ್ಲಿ ಈಶ್ವರ ಸದಾ ಶಿವ ದೇವಾಲಯವು ಚಾಲುಕ್ಯ ಶೈಲಿಯಲ್ಲಿದೆ. ಇದು ಕೆಳದಿ ಅರಸರ ಕಾಲದಲ್ಲಿ ನಿರ್ಮಾಣವಾಗಿದೆ. ಲಕ್ಷ್ಮೀ ದೇವಾಲಯದಲ್ಲಿರುವ ಲಕ್ಷ್ಮೀ ವಿಗ್ರಹವು ಸುಂದರವಾಗಿದೆ. ಶ್ರೀ ವರದಾಂಬೆಯು ಊರಿನ ಆರಾಧ್ಯ ದೈವ, ಮಲೆನಾಡಿನ ಗೋಕರ್ಣ ಎಂದು ಕರೆಯಲ್ಪಡುತ್ತದೆ.

 

ಇಕ್ಕೇರಿ

ತಾಲ್ಲೂಕು: ಸಾಗರ
ತಾಲ್ಲೂಕು ಕೇಂದ್ರದಿಂದ: ೩ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೭೭ ಕಿ.ಮೀ

ಕೆಳದಿ ಸಂಸ್ಥಾನದ ಎರಡನೇ ರಾಜಧಾನಿ ಇಕ್ಕೇರಿ. ಸಾಗರದಿಂದ ಸುಮಾರು ೩ ಕಿ,ಮೀ. ದೂರದಲ್ಲಿದೆ. ಅಂದಿನ ವೈಭವವನ್ನು ಪ್ರತಿನಿಧಿಸುವ ಅಘೋರೇಶ್ವರ ದೇವಾಲಯ, ಟಂಕಸಾಲೆ ಗಣಪತಿ, ಕೆರೆ, ಕೋಟೆ ಆಂಜನೇಯ ದೇವಾಲಯ, ಕೋಟೆ ಕೊತ್ತಲಗಳು ಇಲ್ಲಿವೆ. ಅಘೋರೇಶ್ವರ ದೇವಾಲಯವು ೧೬ನೇ ಶತಮಾನದಲ್ಲಿ ನಿರ್ಮಿತಗೊಂಡಿದ್ದು ಹೊಯ್ಸಳ, ಚಾಲುಕ್ಯ ಶೈಲಿಯಲ್ಲಿದೆ. ಪ್ರಕಾರದಲ್ಲಿನ  ಬಸವನ ಮಂಟಪದಲ್ಲಿನ ಬಸವ ಆಕರ್ಷಣೀಯವಾಗಿದೆ. ಈ ದೇವಾಲಯದ ಕೆಲಸವು ಹುಂಚದ ಆಚಾರಿ ವೆಂಕಟಯ್ಯನಿಂದ ನಿರ್ಮಿತವಾಗಿರುವುದಾಗಿ ದೇವಾಲಯ ಎದುರಿನಲ್ಲಿನ ಬರಹ ಹೇಳುತ್ತದೆ.

 

ಕೆಳದಿ

ತಾಲ್ಲೂಕು: ಸಾಗರ
ತಾಲ್ಲೂಕು ಕೇಂದ್ರದಿಂದ: ೬ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೭೬ ಕಿ.ಮೀ

ಕ್ರಿ.ಶ. ೧೪೯೯ ರಿಂದ ೧೭೬೩ ರವರೆಗೆ ಆಡಳಿತ ನಡೆಸಿದ ಕೆಳದಿ ಅರಸರ ಮೊದಲ ರಾಜಧಾನಿ ಕೆಳದಿ. ಸಾಗರದಿಂದ ಉತ್ತರಕ್ಕೆ ಸುಮಾರು ೬ ಕಿ.ಮೀ. ದೂರದಲ್ಲಿದೆ. ಅಂದಿನ ನೆನಪಾಗಿ ಶ್ರೀ ರಾಮೇಶ್ವರ ವೀರಭದ್ರ ಪಾರ್ವತಿ ದೇವಾಲಯಗಳಿವೆ. ದೇವಾಲಯವು ಕ್ರಿ.ಶ. ೧೫೧೪ರಲ್ಲಿ ನಿರ್ಮಾಣಗೊಂಡಿರುವುದಾಗಿ ತಿಳಿಯುತ್ತದೆ. ಹೊಯ್ಸಳ ದ್ರಾವಿಡ ಶೈಲಿಯನ್ನು ಇಲ್ಲಿನ ಗಂಡಭೇರುಂಡ,ಧ್ವಜಸ್ತಂಭವು ಮೊದಲಾದವು ಜೈನ ಪಾರ್ಶ್ವನಾಥ ಬಸದಿ, ಮುಸ್ಲಿಂ ಮಸೀದಿಗಳಿವೆ. ಅಲ್ಲದೆ ಜಿಲ್ಲೆಯ ಅತಿ ದೊಡ್ಡ ಕೆರೆಯಾದ ಹಿರೇಕೆರೆ ಆಕರ್ಷಕವಾಗಿದೆ. ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಸೇರಿರುವ ವಸ್ತು ಸಂಗ್ರಹಾಲಯವೊಂದಿದ್ದು ಕೆಳದಿ ಇತಿಹಾಸ ಕುರಿತಂತೆ ಸಂಶೋಧನೆ ನಡೆಸುತ್ತಿದೆ.

 

ಹೊನ್ನೆಮರಡು

ತಾಲ್ಲೂಕು: ಸಾಗರ
ತಾಲ್ಲೂಕು ಕೇಂದ್ರದಿಂದ: ೨೫ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೯೯ ಕಿ.ಮೀ

ಸಾಗರದಿಂದ ಸುಮಾರು ೨೦ ಕಿ.ಮೀ. ದೂರದಲ್ಲಿದೆ. ಈಜು ಪ್ರಿಯರಿಗೆ ಮೋಜಿನ ಸ್ಥಳ. ಸಾಗರದ ಸಮೀಪ ತಾಳಗುಪ್ಪಕ್ಕೆ ಹತ್ತಿರದಲ್ಲಿದೆ. ಇಲ್ಲಿ ಹಲವು ದ್ವೀಪಗಳಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಜಲ ಕ್ರೀಡೆ (water Sport) ಗಳಿಗೆ ಅವಕಾಶವಿದೆ. ಶರಾವತಿ ಹಿನ್ನೀರಿನಲ್ಲಿ ಮುಳುಗಡೆಯಾದ ಪ್ರದೇಶವು ಅನೇಕ ದ್ವೀಪಗಳಿಂದ ಕೂಡಿದೆ.