Categories
ರಂಗಭೂಮಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ

ಅತ್ಯಂತ ಕಡಿಮೆ ಅವಧಿಯಲ್ಲಿ ಅದ್ಭುತ ರಂಗಸಂಘಟನೆಯಾಗಿ ಬೆಳೆದ ಸಾಣೇಹಳ್ಳಿಯ ‘ಶಿವಸಂಚಾರ’ದ ಹಿಂದಿರುವ ಕ್ರಿಯಾಶೀಲ ಪ್ರತಿಭೆಯೇ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು.
ತರಳಬಾಳು ಜಗದ್ಗುರು ಶಾಖಾಮಠದ (ಸಾಣೇಹಳ್ಳಿ) ಸ್ವಾಮಿಗಳಾದ ಶ್ರೀಯುತರು ಮಠ, ಸ್ವಾಮೀಜಿಗಳ ಧಾರ್ಮಿಕ ವಲಯದಿಂದಾಚೆಗೂ ಬಯಲು ರಂಗಮಂದಿರ ನಿರ್ಮಾಣ, ಶಿವಕುಮಾರ ಪ್ರಶಸ್ತಿ ಸ್ಥಾಪನೆ, ಸಮಾಜಸೇವೆ, ನಾಟಕೋತ್ಸವ, ಸಾಹಿತ್ಯ ರಚನೆ, ಹೀಗೆ ತಮ್ಮ ಪ್ರತಿಭಾ ಕ್ಷೇತ್ರವನ್ನು ಸಮಾಜದ ಸೇವಾ ಕ್ಷೇತ್ರಗಳಿಗೆ ವಿಸ್ತರಿಸಿದ ಅಪೂರ್ವ ಶಕ್ತಿ ಇವರು. ಈ ದಿಸೆಯಲ್ಲಿ ೧೯೯೭ರಲ್ಲಿ ಸಿ.ಜಿ.ಕೆ. ಅವರ ಪ್ರೇರಣೆಯಿಂದ ಅವರು ಸ್ಥಾಪಿಸಿದ ಶಿವಸಂಚಾರ ಈವರೆಗೆ ೨೧ ನಾಟಕಗಳನ್ನು ಪ್ರಯೋಗಕ್ಕೆ ಅಳವಡಿಸಿ ನಾಡಿನಾದ್ಯಂತ ಸಂಚರಿಸಿ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ ದಾಖಲೆ ಸೃಷ್ಟಿಸಿದೆ. ಕನ್ನಡ ರಂಗಭೂಮಿಯಲ್ಲಿಂದು ಅಪಾರ ಬೇಡಿಕೆ ಇರುವ ಶಿವಸಂಚಾರ ತಂಡ ಕರ್ನಾಟಕದ ಮನೆ ಮಾತಾಗಿದೆ. ಪ್ರತಿ ವರ್ಷ ಇಪ್ಪತ್ತೈದು ಕಲಾವಿದರಿಗೆ ತರಬೇತಿ ನೀಡಿ ಅವರಿಗೆ ಎಲ್ಲ ಸೌಲಭ್ಯಗಳನ್ನು ಗೌರವಧನದೊಂದಿಗೆ ನೀಡಿ ಸಾಮಾಜಿಕ ಪರಿವರ್ತನೆಗೆ, ಸಮಾನತೆಗೆ ಒತ್ತುಕೊಡುವ ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶಿಸುವ ಶಿವಸಂಚಾರ ತಂಡ ಕನ್ನಡ ರಂಗಭೂಮಿಗೆ ಭವಿಷ್ಯದ ಭರವಸೆಯೂ ಹೌದು.
ಕನ್ನಡ ರಂಗಭೂಮಿಯಲ್ಲಿ ಮೌನ ಕ್ರಾಂತಿಯೊಂದಕ್ಕೆ ನಾಂದಿ ಹಾಡಿ ಅದರ ಭವಿತವ್ಯಕ್ಕೆ ಬೆಳ್ಳಿ ರೇಖೆಗಳನ್ನು ಮೂಡಿಸಿದ ಅಪೂರ್ವ ಶಕ್ತಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು.