ಕೃಷಿಯೆಂದರೆಗೊಬ್ಬರ, ಇಳುವರಿ, ಕಾರು, ಸೈಟು….ಲೆಕ್ಕ ಹಾಕುವವರಿಗೆ ಪುಂಡಲೀಕ ಭಟ್ಟರ ಮತ್ತು ಚೇರ್ಕಾಡಿಯವರ ಬದುಕಿನಲ್ಲಿ ಏನೂ ಕಾಣದು! ಇವರ ಕೃಷಿ ಎಂದೂ ಸದ್ದು ಮಾಡುವುದಿಲ್ಲ. ಸದ್ದಿಲ್ಲದೆ ದುಡಿವ ಇವರಲ್ಲಿರುವ ಬಂಡವಾಳ ದುಡಿಮೆಮಾತ್ರ. ಕೃಷಿಮನಸ್ಸು, ಒಳತೋಟಿ, ಸಿದ್ದಾಂತ, ಆಧ್ಯಾತ್ಮ, ಸಂದೇಶ ಎಲ್ಲವೂ ಇಲ್ಲಿದೆ! ನೋಡುವ ಕಣ್ಣಿದ್ದರೆ!

ಕೃಷಿಯಲ್ಲಿ ಸರಳಪಾಠವನ್ನು ಹೇಳಿದ ಚೇರ್ಕಾಡಿ ರಾಮಚಂದ್ರರಾಯರ ಬದುಕನ್ನು ನೋಡಿ. ಶೂನ್ಯದಿಂದ ಮೇಲೆದ್ದು, ಕೃಷಿಯಲ್ಲೂ ಅಸಾಮಾನ್ಯನಾಗಿ ಕಾಣಿಸಿಕೊಂಡು, ತಾನೆಂದೂ ಅದಾಗದೆ, ಹಿಡಿದ ಗುರಿಯನ್ನು ತಲುಪಿದ ತಪಸ್ಸು ಇದೆಯಲ್ಲಾ – ಇದು ಕೃಷಿ ಬದುಕು. ಮಣ್ಣಿನ ಬದುಕು.

ಪುಂಡಲೀಕ ನಾಗಪ್ಪ ಭಟ್ಟರು ‘ಮತ್ತೊಬ್ಬ ಚೇರ್ಕಾಡಿ’! ಇದು ಹೋಲಿಕೆಯಲ್ಲ. ಇಬ್ಬರಲ್ಲೂ ಒಳತೋಟಿ ಕೃಷಿ ಮನಸ್ಸಿದೆ. ಮಾನವೀಯ ಮುಖವಿದೆ. ಸರಳ ಜೀವನ ವಿಧಾನವಿದೆ. ಸೊನ್ನೆಯಿಂದ ಬದುಕನ್ನು ಕಟ್ಟಿದ ಚೇರ್ಕಾಡಿಯವರ ಬದುಕಿನಲ್ಲಿ ಗಾಂಧೀ ವಿಚಾರಗಳಿವೆ. ಎರಡು ದಶಕದ ಕೃಷಿ ಬದುಕಿನ ಪುಂಡಲೀಕರಿಗೆ ಗಾಂಧಿ ಸರಳತೆ, ಅಹಿಂಸಾ ವಿಚಾರಗಳು ಸ್ವಭಾವ.

ಭಟ್ಟರು ಉ.ಕ.ದವರು. ಹುಬ್ಬಳ್ಳಿಗೆ ಬಂದು ಆರ್ಧ ಶತಮಾನ ಕಳೆಯಿತು. ಅಣ್ಣನೊಂದಿಗೆ ಕೂಡು ವಾಸ. ೭೬ರಿಂದ ಹೈನುಗಾರಿಕೆ. ಹತ್ತು ಆಕಳುಗಳು. ನೀರು ಸೇರಿಸದೆ ಹಾಲು ಮಾರಾಟ! ಸಿಕ್ಕಿದ ರೊಕ್ಕ ಹನಿಗೂಡಿ ಹಳ್ಳ. ಪರಿಣಾಮ, ಧಾರವಾಡದ ಸುತ್ತೂರಿನಲ್ಲಿ ೧೯೮೬ರಲ್ಲಿ ಹತ್ತೆಕ್ರೆ ಜಾಗ ಖರೀದಿ.

ಬೋಳು ಭೂಮಿ. ಲೋಡುಗಟ್ಟಲೆ ಕಲ್ಲು-ಕಳೆ ರಾಶಿಗಳು. ಭಯಹುಟ್ಟಿಸುವ ವಾತಾವರಣ. ನಾವೇನು ಮಾಡುತ್ತಿದ್ದೆವು-ಮಣ್ಣುಮಾಂದಿ (ಜೆ.ಸಿ.ಬಿ.) ಬರುತ್ತಿತ್ತು. ನೂರಿನ್ನೂರು ಆಳು-ಕಾಳುಗಳ ಅಹೋರಾತ್ರಿ ದುಡಿತದಿಂದ ನೆಲ ಸಮತಟ್ಟಾಗುತ್ತಿತ್ತು.

ಚೇರ್ಕಾಡಿಯವರು ತೋಟದಲ್ಲಿ ಸ್ವತಃ ದುಡಿದರು. ಬೆವರಿಳಿಸಿದರು. ಪುಂಡಲೀಕರು ತಾನೇ ಅಲ್ಲಿದ್ದ ಕಲ್ಲುಗಳನ್ನೆಲ್ಲಾ ತಲೆಯಲ್ಲೇ ಹೊತ್ತೇ ಬದಿಗೆ ಸರಿಸಿದರು. ಕಲ್ಲುಗಳನ್ನು ಕಟ್ಟಿ ಆವರಣ ನಿರ್ಮಿಸಿದರು. ಎತ್ತರ-ತಗ್ಗು ಪ್ರದೇಶವನ್ನು ಸಮತಟ್ಟು ಮಾಡದೆ, ಇದ್ದಂತೆ ಉಳಿಸಿಕೊಂಡರು.

ಮೊದಲಿಗೆ ಗೇರು ಕೃಷಿ. ಉತ್ತಮ ಇಳುವರಿ. ‘ಕಿಸೆ ಭರ್ತಿಯಾಗದಿದ್ದರೂ ತೋಟದ ಹಣ ಎಣಿಸಲು ಹತ್ತು ವರುಷ ಹಿಡಿಯಿತು.’ ಗೇರು ಹೇಳುವಷ್ಟು ಕೈಹಿಡಿಯಲಿಲ್ಲ. ಎಲ್ಲವನ್ನೂ ಕಡಿದು – ಹಣ್ಣಿನ ಗಿಡಗಳನ್ನು ಹಚ್ಚಿದರು. ಚಿಕ್ಕು, ಮಾವು, ತೆಂಗು, ಕರಿಬೇವು, ಗಂಧ….ಎಲ್ಲವೂ ಸೇರಿತು. ಇಳುವರಿ ಗುತ್ತಿಗೆಗೆ. ಅದೂ ಸಾಮಾನ್ಯ ದರಕ್ಕೆ. ‘ಹೆಚ್ಚು ದರ ಹೇಳಬಹುದು. ಹಣವೂ ಸಿಗ್ತದೆ. ಆ ಹಣವನ್ನೇನು ಮಾಡಲಿ! ನನಗೆ ಹಣದ ಹುಂಡಿ ತುಂಬುವುದು ಬೇಡ. ಹೊಟ್ಟೆಯ ಹುಂಡಿ ತುಂಬಿದೆ ಸಾಕು’ ೭೦ರ ಪುಂಡಲೀಕ ಭಟ್ಟರ ಮಾತು ಒಗಟಿನಂತೆ ಕಾಣುತ್ತದೆ. ಅವರಿಗೆ ಬೇರೆ ಉತ್ಪತ್ತಿ ಇದೆ, ಜೀವನಕ್ಕೆ ತೊಂದರೆಯಿಲ್ಲ ಎಂದರ್ಥವಲ್ಲ. ಹಣವನ್ನು ಸ್ವೀಕರಿಸುವ ಬಗೆ. ‘ಯಾಕೆ ಕೃಷಿಯಲ್ಲಿ ಗುದ್ದಾಟ, ನನಗಿಷ್ಟೇ ಸಾಕು’ ಎಂದ ಚೇರ್ಕಾಡಿ ನೆನಪಾಗುತ್ತಾರೆ.  ಇವರೂ ಹಣದ ಹಿಂದೆ ಹೋದವರಲ್ಲ.

ಗಿಡಗಳಿಗೆ ಗೊಬ್ಬರ ಇಲ್ಲ. ಅಲ್ಲಲ್ಲಿನ ಕಳೆ ಅಲ್ಲಲ್ಲಿಗೆ. ಸಿಂಚನ ಹಾರು ನೀರು. ವಿಷದಿಂದ ಮುಕ್ತ. ‘ಸಾವಯವವೊ ಇನ್ನೊಂದೋ-ಮತ್ತೊಂದೋ ನನಗೆ ಗೊತ್ತಿಲ್ಲ. ನಾನೇನೂ ಹಾಕುವುದಿಲ್ಲ’ ಎನ್ನುವಾಗ, ನಮ್ಮ ಕೃಷಿ ಪದ್ಧತಿಗಳ ಹೊದಾಟ ಕಣ್ಣೆದುರು ಹಾಯುತ್ತದೆ. ಈ ವಿಚಾರದಲ್ಲಿ ಭಟ್ ಮುಗ್ಧ. ಬಹುಶಃ ಫುಕುವೋಕ ಕೂಡಾ ಅವರ ಕೃಷಿ ಬುತ್ತಿಯಲ್ಲಿಲ್ಲ. ಯಾರದ್ದೇ ಮಾದರಿಯಲ್ಲ. ಅನುಭವದಲ್ಲಿ ತಾನು ಕಂಡುಕೊಂಡ ಕ್ರಮಗಳೇ ಕೃಷಿವಿಧಾನ. ಚೇರ್ಕಾಡಿ ಅಷ್ಟೇ. ನೆಲದ ದನಿಗೆ ತಕ್ಕುದಾದ ಲಯಬದ್ಧ ಕೃಷಿ ಮಾಡಿದರು. ಎಲ್ಲವನ್ನೂ ಬೆಳೆಸುವ ಮೋಹದಿಂದ ಹೊರಗಿನ ಸಂಪನ್ಮೂಲಗಳನ್ನು ತಂದು ಸುರಿಯಲಿಲ್ಲ!

ನಾವು ಎಷ್ಟೊಂದು ಕೃಷಿಕರನ್ನು ನೋಡುತ್ತೇವೆ. ತಮ್ಮ ಕೃಷಿ ವಿಧಾನಗಳನ್ನು ಇನ್ನೊಬ್ಬರು ಅನುಸರಿಸಬೇಕು, ನೋಡಬೇಕೆಂಬ ಹಪಹಪಿಕೆ. ಅದಕ್ಕಾಗಿ ಎಂತೆಂತಹ ಸರ್ಕಸ್! ನಾಗಪ್ಪ ಭಟ್ಟರಿಗೆ ತನ್ನ ಕೃಷಿಯನ್ನು ಬೇರೊಬ್ಬರು ನೋಡಬೇಕು, ಬೆನ್ನು ತಟ್ಟಿಸಿಕೊಳ್ಳಬೇಕು ಎಂಬ ಯಾವ ಪ್ರಚಾರಪ್ರಿಯತೆಯೂ ಇಲ್ಲ. ‘ತಾನಾಯಿತು, ತನ್ನ ಪಾಡಾಯಿತು’ ಎಂಬ ಜಾಯಮಾನ.  ಸಿಕ್ಕಸಿಕ್ಕವರಲ್ಲಿ ‘ತೋಟದ ಬಗ್ಗೆ’ ಹೇಳುವ ಗೀಳೂ ಇಲ್ಲ!

ಆವರಣದ ಹೊರಗಿಂದ ಮಳೆನೀರು ತೋಟಕ್ಕೆ ನುಗ್ಗುತ್ತಿತ್ತು. ಅಡ್ಡಲಾಗಿ ಒಡ್ಡು ಕಟ್ಟಿದರು. ಆವರಣ ಭಧ್ರವಾಯಿತು. ಅಲ್ಲೇ ದೊಡ್ಡ ಕೆರೆ ರಚನೆ. ಅದೀಗ ‘ಭಟ್ರ ಕೆರೆ’. ಇಲ್ಲಿ ನೀರಿಂಗಿ  ಕೊಳವೆಬಾವಿಯಲ್ಲಿ ಸಮೃದ್ಧ ನೀರು. ‘ಸ್ವತಃ ದುಡಿದು, ಬೆವರು ಅಲ್ಲಿ ಬಿದ್ದಾಗಲೇ ನೆಲದ ಬಗ್ಗೆ ಪ್ರೀತಿ ಹುಟ್ಟೋದು. ಆಗಲೇ ಮಣ್ಣಿನ ಸಂಬಂಧ.’ ಎಂಬ ಸಂದೇಶ ಅಲ್ಲಿದೆ.

ಫಕ್ಕನೆ ನೋಡಿದಾಗ ಅವರೊಬ್ಬ ಸಂತ. ಚೇರ್ಕಾಡಿಯೂ ಅಷ್ಟೇ ತಾನೆ. ಸೊಂಟಕ್ಕೊಂಡು ತುಂಡು. ಹೆಗಲಲ್ಲೊಂದು ಶಲ್ಯ. ನಾಗಪ್ಪ ಭಟ್ಟರು ಇವರಿಗಿಂತ ಭಿನ್ನವಲ್ಲ. ದೊಗಳೆಚಡ್ಡಿ, ಅಂಗಿ, ಹೆಗಲಲ್ಲಿ ಶಲ್ಯ, ಕೈಯಲ್ಲಿ ಕತ್ತಿ …. ಏಕಾಂತ ಪ್ರಿಯ. ವಿಷರಹಿತ ತೋಟವಾದ್ದರಿಂದ ಹಕ್ಕಿ-ಪಿಕ್ಕೆಗಳ ಉಲಿತ. ಸನಿಹದ ಕೃಷಿಕ ಮಲ್ಲಣ್ಣ ಹಿರೇಮಠ್ ಪರಮಾಪ್ತ. ಭಟ್ಟರ ಮನಸ್ಸನ್ನು ಓದಿದವರು. ಮೌನಕ್ಕೆ ಮಾತನ್ನು ಕೊಟ್ಟವರು. ಪುತ್ತೂರಿನಲ್ಲಿ ‘ಪುತ್ತೂರಜ್ಜ’ ಇದ್ದರು. ಬದುಕಿನ ಒಂದು ಹಂತದವರೆಗೆ ಅವರ ಜತೆಗೆ…….ಇದ್ದರು. ಮಲ್ಲಣ್ಣನಂತೆ. ಅಜ್ಜನ ಮನಸ್ಸನ್ನು ಓದಿದವರು. ಬಹುಶಃ ವಿಚಾರದ ಆಳಕ್ಕೆ ಹೋದಂತೆ ಹೀಗಾಗುತ್ತದೋ ಏನೋ?

ಹುಬ್ಬಳಿಯಿಂದ ತೋಟಕ್ಕೆ ಪುಂಡಲೀಕರ ಆಗಮನವಾದಾಗ ವಾಚ್ ನೋಡದೆ ಗಂಟೆ ಹೇಳಬಹುದು. ಸ್ವಾರಸ್ಯವಿರುವುದು ಮತ್ತೆ. ಬಸ್ಸಿಳಿದಾಗ ಚಾಕಲೇಟಿಗಾಗಿ ಮುತ್ತುವ ಮಕ್ಕಳೊಂದಿಗೆ ಮಕ್ಕಳಾಗುತ್ತಾರೆ. ಮುಂದೆ ಒಂದಷ್ಟು ಶ್ವಾನಗಳು ಭಟ್ಟರನ್ನು ಕಾಯುತ್ತಿರುತ್ತವೆ! ಬಿಸ್ಕೇಟ್‌ಗಾಗಿ. ತೋಟಕ್ಕೆ ಬಂದರೆ ಸಾಕು, ಹಕ್ಕಿಗಳ ಲೊಚಗುಟ್ಟುವಿಕೆ! ಅವುಗಳಿಗೆಲ್ಲಾ ಸಮಾಧಾನ ಹೇಳಿ, ತೋಟಕ್ಕೆ ಒಂದು ರೌಂಡ್ ಬರುತ್ತಿದ್ದಂತ್ತೆ, ಕೈಗೆ ಸಿಕ್ಕಿದ ಹಸಿರ ಕುಡಿಯನ್ನು ಮೆಲ್ಲುತ್ತಾ, ಪ್ರವೇಶದ್ವಾರದಲ್ಲಿದ್ದ ಗಂಟೆಯನ್ನು ಭಾರಿಸಿದಾಗ ಬೆಳಿಗ್ಗೆ ಎಂಟೂವರೆ ಗಂಟೆ. ಇದು ನಿತ್ಯಕಾಯಕ. ‘ತ್ರಾಸವಲ್ಲ ಬಿಡಿ, ಮಕ್ಕಳು ಶಾಲೆಗೆ ಹೋಗೋದಿಲ್ವಾ. ನಾನು ತೋಟಕ್ಕೆ ಬರ‍್ತೇನಷ್ಟೇ’ ಎನ್ನುವಾಗ ಮುಖ ಅರಳುತ್ತದೆ. ಇದೊಂದು ಬದುಕು.

ಅವರು ತೋಟ ಸುತ್ತುವಾಗ ಅವರ ಹಿಂದೆ ಮೌನವಾಗಿ ಸಾಗಬೇಕು. ಪಕ್ಷಿಯೊಂದು ಲೊಚಲೊಚ ಅಂದಾಗ, ‘ಎನೋ. ಎಲ್ಲಿದ್ದಿಯಾ’ ಅನ್ನುತ್ತಾರೆ, ಮುಂದೆ ಗಿಡದ ಗೆಲ್ಲೊಂದು ಮುರಿದಿತ್ತೆನ್ನಿ, ‘ಅಯ್ಯೋ, ಪಾಪ…ಇದ್ಯಾರಪ್ಪ ನಿನ್ನನ್ನು ಮುರಿದದ್ದು ಅನ್ತಾರೆ, ಗಿಡದಲ್ಲಿ ಅವಿತಿದ್ದ ಅಳಿಲನ್ನು ನೋಡಿ, ‘ಯಾಕೋ, ನಿನ್ನೆಲ್ಲಿಗೆ ಹೋಗಿದ್ದಿ’ …..ಹೀಗೆ ಮಾತನಾಡುತ್ತಲೇ ಇರುತ್ತಾರೆ. ನಾವಾದರೋ ‘ಅವರಿಗೆ ಹುಚ್ಚು’ ಬಹುಬೇಗ ನಿರ್ಣಯಕ್ಕೆ ಬರುತ್ತೇವೆ. ಹುಚ್ಚು ಅವರಿಗಲ್ಲ, ಅವಸರದ ನಿರ್ಣಯಕ್ಕೆ ಬಂದ ನಮಗೆ! ಇದನ್ನೇ ಅನ್ನೋದು ‘ಅಸಾಮಾನ್ಯ’ ಬದುಕು. ಪ್ರಾಣಿ-ಪಕ್ಷಿಗಳೊಂದಿಗಿನ ಸ್ಪಂದನ. ಇದು ಒಂದೆರಡು ದಿನದ್ದಲ್ಲ. ದಶಕಗಳಿಗಿಂತಲೂ ಬೆಳೆದು ಬಂದ ಪರಿ.

ತೋಟ ಪೂರ್ತಿ ತುಳಸಿ ಗಿಡಗಳು. ತೋಟದ ಹೆಸರು ‘ತುಳಸೀವನ.’ ದೇವಾಲಯಗಳಿಗೆ ನಿತ್ಯ ವಿತರಣೆ. ತುಳಸಿ ಬೆಳೆದಾಗ ಒಣದಂಟುಗಳು ಅವರಿಗೆ ತ್ಯಾಜ್ಯವಲ್ಲ. ‘ಇದೇ ನನ್ನ ಸಂಪಾದನೆ.’ – ಎಂದು ಮಲ್ಲಣ್ಣನ ಮುಖ ನೋಡುತ್ತಾರೆ. ಮುಂದಿನ ವಿಚಾರ ಅವರೇ ಹೇಳಬೇಕು ಎಂಬ ಸೂಚನೆ. ‘ತನ್ನ ಅಂತ್ಯಸಂಸ್ಕಾರವು ತುಳಸಿಯ ದಂಟಿನಿಂದಲೇ ಆಗಬೇಕು. ಸ್ಥಳವನ್ನು ಕೂಡಾ ಇಲ್ಲೇ ಗೊತ್ತುಮಾಡಿದ್ದಾರೆ’ ಮಲ್ಲಣ್ಣ ಹೇಳುವಾಗ, ಭಟ್ಟರು ಅಲ್ಲಿರಲಿಲ್ಲ. ದೂರದಲ್ಲಿ ‘ಪಕ್ಷಿ ಸಂಭಾಷಣೆ’ಯಲ್ಲಿ ತೊಡಗಿದ್ದರು!

ಮೂವರು ಮಕ್ಕಳು. ಇಬ್ಬರು ಗಂಡು, ಒಬ್ಬಳು ಹೆಣ್ಣು. ಒಬ್ಬರಿಗೆ ಕಿರಾಣಿ ಅಂಗಡಿ. ಮತ್ತೊಬ್ಬರು ಬ್ಯಾಂಕಿನಲ್ಲಿ ಉದ್ಯೋಗಿ. ಹೆಣ್ಣುಮಗಳು ವಿವಾಹಿತಳು. ಮಡದಿ ಪಾಕಪ್ರವೀಣೆ. ತೋಟದ ಉತ್ಪತ್ತಿಯಲ್ಲಿ ಮೂರು ಪಾಲು. ಒಂದು ಪಾಲು ತನಗೆ, ಮತ್ತೊಂದು ಮಗಳಿಗೆ, ಉಳಿದೊಂದು ಪಾಲು ಗಂಡು ಮಕ್ಕಳಿಗೆ. ‘ಈ ತೋಟದ ಉಸಾಬರಿ ನಿಮಗೆ ಬೇಡ. ಬಿಟ್ಟುಬಿಡಿ ಎನ್ನುತ್ತಾರೆ. ನನಗೆ ಬಿಡಲಾಗುತ್ತದೆಯೇ?’ ಭಟ್ಟರ ಮುಖ ಬಾಡುತ್ತದೆ!

ಅವರ ಕೃಷಿ ಭೂಮಿಗೆ ಕೋಟಿ ಆಮಿಷ ಬಂದಿತ್ತು. ‘ಕೋಟಿಗಿಂತ ತೋಟ ಲೇಸು’ ಎನ್ನುತ್ತಾ ಯಾವ ಆಮಿಷಕ್ಕೆ ಜಪ್ಪೆನ್ನಲಿಲ್ಲ. ಇದರಲ್ಲಿ ಅಪ್ಪಟ ‘ಕೃಷಿ-ಭೂಮಿ ಪ್ರೀತಿ’ ಕಾಣುವುದಿಲ್ವಾ. ಮನೆಯಲ್ಲಿ ಮುದಡಬೇಕಾz ೭೦ರ ಭಟ್ಟರ ಜೀವನೋತ್ಸಾಹ, ಎಂಭತ್ತು ದಾಟಿದ ಚೇರ್ಕಾಡಿಯವರಲ್ಲೂ ಇತ್ತು!

ಪುಂಡಲೀಕ ಭಟ್ಟರ ತೋಟಕ್ಕಿಂತ ಉತ್ತಮವಾದ ಸಾವಯವ ತೋಟಗಳು ಎಷ್ಟೋ ಇದೆ. ಆದರೆ ಕೃಷಿಯ ಕುರಿತಾದ ಒಳತುಡಿತ, ಶ್ರಮ, ತಾನು ನಂಬಿದ ಸಿದ್ದಾಂತ, ಒಂದು ಹಂತದಲ್ಲಿ ಆಧ್ಯಾತ್ಮ…ದಂತಹ ಸಂದೇಶ ಇದೆ. ಇದೇ ರೀತಿಯಲ್ಲಿ ಕೃಷಿಯ ಪ್ರೀತಿಸುವವರಿಗೆ ಇವರಿಬ್ಬರೂ ಸ್ಪೂರ್ತಿ.

ಕೃಷಿಯೆಂದರೆ – ಗೊಬ್ಬರ, ಇಳುವರಿ, ಕಾರು, ಸೈಟು….ಲೆಕ್ಕ ಹಾಕುವವರಿಗೆ ಪುಂಡಲೀಕ ಭಟ್ಟರ ಮತ್ತು ಚೇರ್ಕಾಡಿಯವರ ಬದುಕಿನಲ್ಲಿ ಏನೂ ಕಾಣದು! ಇಲ್ಲಿ ಶಬ್ದಾರ್ಥಕ್ಕಿಂತಲೂ ಭಾವನೆಗಳಿಗೆ ಸ್ಥಾನ. ಹಸಿರನ್ನು ಹಾರ್ದಿಕವಾಗಿ ಪ್ರೀತಿಸುವ, ನಿಸರ್ಗದೊಂದಿಗೆ ಸಂವಾದಿಸುವ ‘ಸಂವಹನ’ವನ್ನು ಅರಿಯಲು ಬಹಳ ಸುಲಭ – ಒಂದು ಕ್ಷಣ ನಿಂತು, ‘ನಾವಾಗಿ’ ನೋಡುವುದು. ಅದೇ ನಿಜಾರ್ಥದ ‘ಮಣ್ಣಿನ ಭಾಷೆ.’