ಬೆಳಗಾವಿ ಕಾಂಗ್ರೆಸ್‌ ಅಧಿವೇಶನದಲ್ಲಿ ಆನಂದಕಂದರ ಒಂದು ಪದ್ಯ ನಾಡಗೀತೆಯಾಗಿ ಆಯ್ಕೆಗೊಂಡು ಒಂದು ಬಗೆಯ ಸಾಧನೆಗೈದು ತರುಣದಲ್ಲಿಯೇ ೧೯೨೫ ರಲ್ಲಿ ಬೆನೆಗಲ್‌ ರಾಮರಾವ್‌ ಅವರು ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿಯೇ ೧೧ ನೆಯ ಕನ್ನಡ ಸಾಹಿತ್ಯ ಸಮ್ಮೇಲನ ಜರುಗಿತು . ನಮ್ಮ ಭಾಗದ ಕನ್ನಡ ಧುರೀಣರೂ, ಬೆಳಗಾವಿ ಸಾಹಿತ್ಯ ಸಮ್ಮೇಲನದ ಸ್ವಾಗತಾಧ್ಯಕ್ಷರ ಆಗಿದ್ದ ಚಿಕ್ಕೋಡಿ ತಮ್ಮಣ್ಣಪ್ಪನವರ ಸಂಪರ್ಕ ತರುಣ ಆನಂದಕಂದರಿಗೆ ಬಂದಿದ್ದು, ಬೆಳಗಾವಿ ಸಮ್ಮೇಲನದ ಯಶಸ್ವಿಗಾಗಿ ತುಂಬ ಉತ್ಸಾಹದಿಂದ ದುಡಿದಿದ್ದರು. ೧೯೨೯ ರಲ್ಲಿ ಬೆಳಗಾವಿಯಲ್ಲಿ ಸೇರಿದ ೧೫ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಮಾಸ್ತಿ ಅವರು ವಹಿಸಿದ್ದು, ಆನಂದಕಂದರ ಕವಿಸಮ್ಮೇಳನ ಸ್ವಾಗತಾಧ್ಯಕ್ಷರಾಗಿದ್ದರು. ಅದೇ ಮುಂದೆ ೧೯೩೮ ರಲ್ಲಿ ಜಮಖಂಡಿಯಲ್ಲಿ ಬೆಳ್ಳಾವೆ ವೆಂಕಟನಾರಾಯಣಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿದ ೨೨ನೆಯ ಕನ್ನಡ ಸಾಹಿತ್ಯ ಸಮ್ಮೇಲನದಲ್ಲಿ ಗದ್ಯ-ಪದ್ಯ ಗೋಷ್ಠಿಗೆ ಆನಂದಕಂದರು ಅಧ್ಯಕ್ಷತೆ ವಹಿಸಿದ್ದು ಹೆಮ್ಮೆಯ ಸಂಗತಿ. ೧೯೨೬ರಲ್ಲಿ ಪ್ರಕಟವಾದ “ಮುದ್ದನ ಮಾತು’ಮಕ್ಕಳ-ಕವನ ಸಂಕಲನಕ್ಕೆ ಮೈಸೂರಿನ ದೇವರಾಜ ಬಹಾದ್ದೂರ್ ಪಾರಿತೋಷಕ ದೊರೆಯಿತು. ೧೯೩೯ ರಲ್ಲಿ ಪ್ರಕಟವಾದ ‘ಕರ್ನಾಟಕ ಜನ ಜೀವನ’ಕ್ಕೆ ಮುಂಬಯಿ ಸರಕಾರದ ಸಂಶೋಧನೆ ಬಹುಮಾನ ದೊರೆಯಿತು.

ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಬಂಧ ಬಂದಿದ್ದು, ಆನಂದಕಂದರು ಸಂಘದ ಕಾರ್ಯಕಾರಿ ಮಂಡಲದ ಸದಸ್ಯರೂ, ಕಾರ್ಯದರ್ಶಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. ಧಾರವಾಡದಲ್ಲಿ ವೈ. ಚಂದ್ರಶೇಖರ ಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ೧೯೪೦ ರಲ್ಲಿ ಜರುಗಿದ ೨೫ನೆಯ ಕನ್ನಡ ಸಾಹಿತ್ಯ ಸಮ್ಮೇಲನದ ಕಾರ್ಯಕರ್ತರಾಗಿದ್ದುದು ಸಹಜ. ೧೯೪೧ ರಲ್ಲಿ ಹೈದ್ರಾಬಾದನಲ್ಲಿ ಜರುಗಿದ ೨೬ನೆಯ ಸಾಹಿತ್ಯ ಸಮ್ಮೇಲನದಲ್ಲಿ ಬಹುಮಾನ ಪಡೆದಿದ್ದರು. ೧೯೪೮ ರಲ್ಲಿ ಬೆಂಗಳೂರಿನಲ್ಲಿ ಜರುಗಿದ ೪ನೆಯ ಕನ್ನಡ ಸಣ್ಣ ಕಥೆಗಾರರ ಸಮ್ಮೇಲನದ ಸ್ವಾಗತಾಧ್ಯಕ್ಷರಾಗಿ ಸಮ್ಮೇಲನವನ್ನು ಯಶಸ್ವಿಯಾಗಿ ನಡೆಯಿಸಿಕೊಂಡು ಬಂದರು. ಇದಕ್ಕೂ ಮೊದಲು ಲ೧೯೪೭ ರಲ್ಲಿ ಹರಪನಹಳ್ಳಿಯಲ್ಲಿ ಜರುಗಿದ ೩೦ನೆಯ ಕನ್ನಡ ಸಾಹಿತ್ಯ ಸಮ್ಮೇಲನದ ಪ್ರಥಮ ಜನಪದಗೋಷ್ಠಿಯ ಅಧ್ಯಕ್ಷರಾಗಿದ್ದರು. ಜನಪದ ಸಾಹಿತ್ಯದ ಬಗೆಗಿನ ಅಧ್ಯಕ್ಷೀಯ ಭಾಷಣ ಪಾಂಡಿತ್ಯಪೂರ್ಣವಾಗಿತ್ತು.

೧೯೫೧ ರಲ್ಲಿ ಪ್ರಕಟವಾದ ಆನಂದಕಂದರ ‘ಮಗಳ ಮದುವೆ’ ಕಾದಂಬರಿಗೆ ಮುಂಬಯಿ ಸರಕಾರದ ೨ ಸಾವಿರ ರೂಪಾಯಿ ಬಹುಮಾನ ಬಂದಿತು. ೧೯೭೧ ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ದೊರೆತುದಲ್ಲದೆ, ನಾಗಮಂಗಲದಲ್ಲಿ ಜರುಗಿದ ಮೂರನೆಯ ಅಖಿಲ ಕರ್ನಾಟಕದ ಜಾನಪದ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಈ ಸಮ್ಮೇಲನದ ಅಧ್ಯಕ್ಷೀಯ ಭಾಷಣದ ಪುಸ್ತಿಕೆ ಒಂದು ಆಕರ ಗ್ರಂಥದಲ್ಲಿದೆ. ೧೯೭೩ ರಲ್ಲಿ ಬೆಳಗಾವಿಯಲ್ಲಿ ಜರುಗಿದ ಅ.ಕ. ವೈದ್ಯಕೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದಂತೆ ಧರ್ಮಸ್ಥಳದಲ್ಲಿ ಜರುಗಿದ ಸಾಹಿತ್ಯ ಸಮ್ಮೇಲನದ ಅಧ್ಯಕ್ಷರಾಗಿ ಸನ್ಮಾನಿತರಾದರು. ಕರ್ನಾಟಕ ವಿಶ್ವವಿದ್ಯಾಲಯವು ೧೯೭೪ ರಲ್ಲಿ ಆನಂದಕಂದರ ಸಮಗ್ರ ಸಾಹಿತ್ಯ ಸಾಧನೆಗಾಗಿ ಗೌರವ ಡಾಕ್ಟರೇಟ್‌ಪದವಿಯನ್ನಿತ್ತು ಗೌರವಿಸಿತು. ಕನ್ನಡ ಸಾಹಿತ್ಯ ಪರಿಷತ್ತು ೧೯೮೦ ರಲ್ಲಿ ಮನೆಬಾಗಿಲಿಗೆ ಬಂದು ಸನ್ಮಾನ ನೀಡಿತು.

ಆನಂದಕಂದರಿಗೆ ೬೦ ತುಂಬಿದಾಗ ಧಾರವಾಡದ ಮಿಂಚಿನ ಬಳ್ಳಿ ಪ್ರಕಾಶನದವರು ‘ಆನಂದಕಂದ’ ಎಂಬ ಗೌರವ ಗ್ರಂಥವನ್ನು ಪ್ರಕಟಿಸಿದ್ದು. ೧೯೮೨ ರಲ್ಲಿ ಆನಂದಕಂದರ ಅಭಿಮಾನಿಗಳಾದ ಪ್ರಿ. ಜ್ಯೋತಿ ಹೊಸೂರ, ಡಾ. ಬಸವರಾಜ ಮಲಶೆಟ್ಟಿ ಹಾಗೂ ಡಾ. ನಿಂಗಣ್ಣ ಸಣ್ಣಕಿ ಅವರು ‘ಬೆಳುವಲ’ ಅಭಿನಂದನಾ ಗ್ರಂತವನ್ನು ಸಂಪಾದಿಸಿ ಹೊರತಂದರು, ಮತ್ತು ಮನೆಯಲ್ಲಿಯೇ ಸನ್ಮಾನ ಸಮಾರಂಭವನ್ನು ಏರ್ಪಡಿಸಿದ್ದರು. ಇದೇ ಸಮಯ ‘ಕವಿಭೂಷಣ’ ಎಂಬ ಸ್ಮರಣ ಸಂಚಿಕೆಯನ್ನು ಹೊರತಂದಿದ್ದರು.