ಸಾನಿಯಾ ಮಿರ್ಜಾ (ಜನನ: ನವೆಂಬರ್ ೧೫, ೧೯೮೬) ಭಾರತದ ಅತ್ಯಂತ ಯಶಸ್ವಿ ಟೆನಿಸ್ ಆಟಗಾರ್ತಿ. ಡಬ್ಲ್ಯುಟಿ‌ಎ ಟೂರ್ನಿ ಹಾಗೂ ಗ್ರಾಂಡ್‌ಸ್ಲಾಂ ಗೆದ್ದ ಭಾರತದ ಪ್ರಪ್ರಥಮ ಹಾಗೂ ಏಕೈಕ ಮಹಿಳೆ. ೨೦೦೩ರಲ್ಲಿ ವೃತ್ತಿಪರ ಟೆನಿಸ್‌ಗೆ ಪದಾರ್ಪಣೆ ಮಾಡಿದ ಸಾನಿಯಾ, ಶಕ್ತಿಶಾಲಿ ಮುಂಗೈ ಹೊಡೆತಗಳಿಗೆ ಹೆಸರುವಾಸಿ.

ಬಾಲ್ಯ ಮತ್ತು ಆರಂಭದ ದಿನಗಳು:
ಸಾನಿಯಾ, ಕ್ರೀಡಾ ಪತ್ರಕರ್ತ ಇಮ್ರಾನ್ ಮಿರ್ಜಾ ಮತ್ತು ನಸೀಮಾ ದಂಪತಿಗೆ ಮುಂಬೈನಲ್ಲಿ ಜನಿಸಿದರು. ಆದರೆ, ಅವರು ಬೆಳೆದಿದ್ದೆಲ್ಲಾ ಹೈದರಾಬಾದ್‌ನಲ್ಲಿ. ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದಲ್ಲಿ ಬೆಳೆದ ಸಾನಿಯಾ ೬ನೇ ವರ್ಷದಲ್ಲೇ ಟೆನಿಸ್ ಕಲಿಕೆ ಆರಂಭಿಸಿದರು. ಆರಂಭದಲ್ಲಿ ಅವರಿಗೆ ತಂದೆಯೇ ಗುರು. ಹೈದರಾಬಾದ್‌ನ ನಾಸರ್ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅವರು ಸೇಂಟ್ ಮೇರಿಸ್ ಕಾಲೇಜಿನ ಪದವೀಧರೆ.

೨೦೦೩ ಏಪ್ರಿಲ್‌ನಲ್ಲಿ ಭಾರತದ ಪರ ಫೆಡ್ ಕಪ್‌ಗೆ ಪದಾರ್ಪಣೆ ಮಾಡಿದ ಸಾನಿಯಾ, ಎಲ್ಲಾ ಮೂರು ಸಿಂಗಲ್ಸ್ ಪಂದ್ಯ ಗೆದ್ದರು. ಆದರೆ, ಸಾನಿಯಾ ಪ್ರತಿಭೆ ಜಗಜ್ಜಾಹೀರಾಗಿದ್ದು ಅವರು ಅದೇ ವರ್ಷ ಜೂನ್‌ನಲ್ಲಿ ರಷ್ಯಾದ ಅಲೀಸಾ ಕ್ಲೇಬಾನೋವ ಜೊತೆ ವಿಂಬಲ್ಡನ್‌ನಲ್ಲಿ ಬಾಲಕಿಯರ ಡಬಲ್ಸ್ ಪ್ರಶಸ್ತಿ ಗೆದ್ದಾಗ.

ಸಾನಿಯಾ ಮಹಿಳಾ ಟೆನಿಸ್ ಸಂಸ್ಥೆಯ (ಡಬ್ಲ್ಯುಟಿ‌ಎ) ಶ್ರೇಯಾಂಕದಲ್ಲಿ ಅತ್ಯುನ್ನತ ಸ್ಥಾನ ಪಡೆದ ಭಾರತೀಯ ಆಟಗಾರ್ತಿ. ಮಹಿಳೆಯರ ಸಿಂಗಲ್ಸ್‌ನಲ್ಲಿ ೨೭ ಹಾಗೂ ಡಬಲ್ಸ್‌ನಲ್ಲಿ ೧೮ನೇ ಸ್ಥಾನಕ್ಕೇರಿದ್ದು ಅವರ ವೃತ್ತಿಜೀವನದ ಶ್ರೇಷ್ಠ ಸಾಧನೆ. ಗ್ರಾಂಡ್‌ಸ್ಲಾಂ ಟೂರ್ನಿಯನ್ನು ಶ್ರೇಯಾಂಕ ಆಟಗಾರ್ತಿಯಾಗಿ ಪ್ರವೇಶಿಸಿದ ಮೊದಲ ಭಾರತೀಯ ಮಹಿಳೆ ಎಂಬ ಶ್ರೇಯವೂ ಅವರ ಪಾಲಿಗಿದೆ. ೨೦೦೫ರ ಯು‌ಎಸ್ ಓಪನ್‌ನಲ್ಲಿ ಪ್ರೀಕ್ವಾರ್ಟರ್‌ಫೈನಲ್ ತಲುಪುವ ಮೂಲಕ ಗ್ರಾಂಡ್‌ಸ್ಲಾಂ ೪ನೇ ಸುತ್ತು ತಲುಪಿದ ಮೊದಲ ಭಾರತೀಯ ಮಹಿಳೆ ಎನಿಸಿದ್ದರು. ಆಗ ಅವರು ಮೊದಲ ಮೂರು ಸುತ್ತುಗಳಲ್ಲಿ ಮಶೋನ ವಾಷಿಂಗ್ಟನ್, ಮರಿಯ ಎಲೆನ ಕ್ಯಾಮೆರಿನ್ ಮತ್ತು ಮರಿಯನ್ ಬಾರ್ಟೋಲಿಯನ್ನು ಸೋಲಿಸಿದ್ದರು.

ಏಷ್ಯಾ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ಸಾಧನೆ ಮಾಡಿರುವ ಸಾನಿಯಾ, ೨೦೦೯ರ ಆರಂಭದಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮಹೇಶ್ ಭೂಪತಿ ಜೊತೆ ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದರು. ಅವರು ಯಾವುದೇ ಗ್ರಾಂಡ್‌ಸ್ಲಾಂ ಗೆದ್ದ ಭಾರತದ ಮೊದಲ ಮಹಿಳೆ.

ಆಸ್ಟ್ರೇಲಿಯನ್ ಓಪನ್‌ನಲ್ಲಿ ಗರಿಷ್ಠ (೨೦೦೫) ೩ನೇ ಸುತ್ತು ತಲುಪಿರುವ ಸಾನಿಯಾ, ವಿಂಬಲ್ಡನ್ ಮತ್ತು ಫ್ರೆಂಚ್ ಓಪನ್‌ನಲ್ಲಿ ೨ನೇ ಸುತ್ತಿಗಿಂತ ಮುಂದೆ ಹೋಗಿಲ್ಲ.

೨೦೦೬ರ ದೋಹಾ ಏಷ್ಯಾ ಕ್ರೀಡಾಕೂಟದಲ್ಲಿ ಮಹಿಳಾ ಸಿಂಗಲ್ಸ್‌ನಲ್ಲಿ ಬೆಳ್ಳಿ ಗೆದ್ದ ಸಾನಿಯಾ, ಮಿಶ್ರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಜೊತೆ ಸ್ವರ್ಣಕ್ಕೆ ಕೊರಳೊಡ್ಡಿದರು. ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಭಾರತ ತಂಡದ ಭಾಗವಾಗಿದ್ದರು. ೨೦೦೮ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅವರು ಮೊದಲ ಸುತ್ತಿನಲ್ಲೇ ಗಾಯದಿಂದಾಗಿ ಕಣ್ಣೀರು ಹಾಕುತ್ತ ಪಂದ್ಯ ತೊರೆದರು.

ಗಾಯಗಳು:
ಸಾನಿಯಾ ಮಿರ್ಜಾ ಫಾರ್ಮ್‌ನ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಅವರ ಸಾಧನೆಗೆ ಅಡ್ಡಿಯಾಗಿದ್ದು ಗಾಯಗಳು. ವಿವಿಧ ಸಂದರ್ಭದಲ್ಲಿ ಹಿಮ್ಮಡಿ, ಮಂಡಿ, ಮೊಣಕೈ, ಪಕ್ಕೆಲುಬು ಗಾಯದಿಂದ ಬಳಲಿದ ಸಾನಿಯಾ, ದೀರ್ಘ ಕಾಲ ಬಾಧಿಸಿದ ಮಣಿಕಟ್ಟಿನ ನೋವಿನಿಂದಾಗಿ ೨೦೦೮ನೇ ಋತುವಿನ ಬಹುಭಾಗ ಕಳೆದುಕೊಂಡರು.

ವಿವಾದಗಳು:
ಸಾನಿಯಾ ವೃತ್ತಿಜೀವನದ ಹಾದಿಯಲ್ಲಿ ಖ್ಯಾತಿಯ ಜೊತೆಗೆ ವಿವಾದಗಳಿಗೂ ಸಿಲುಕಿದರು. ಟೆನಿಸ್ ಕೋರ್ಟ್‌ನಲ್ಲಿ ಅವರು ತೊಡುವ ಪುಟ್ಟ ಉಡುಗೆಗಳ ಕುರಿತು ದೇಶವ್ಯಾಪಿ ಚರ್ಚೆಯೇ ನಡೆಯಿತು. ಸಾನಿಯಾ ತುಂಡು ಬಟ್ಟೆ ತೊಡದಂತೆ ಫತ್ವಾ ಸಹ ಹೊರಡಿಸಲಾಗಿತ್ತು.

ವಿಚಾರಗೋಷ್ಠಿಯೊಂದರಲ್ಲಿ ಸಾನಿಯಾ ವಿವಾಹಪೂರ್ವ ಸುರಕ್ಷಿತ ಲೈಂಗಿಕತೆ ಬಗ್ಗೆ ಮಾತನಾಡಿದ್ದು ವಿವಾದಕ್ಕೆ ಕಾರಣವಾಯಿತು. ನಂತರ, ತಾವು ವಿವಾಹಪೂರ್ವ ಲೈಂಗಿಕತೆಯ ವಿರೋಧಿ ಎಂದು ಸಾನಿಯಾ ಸ್ಪಷ್ಟಣೆ ನೀಡಬೇಕಾಯಿತು. ಸಾನಿಯಾ ಡಬಲ್ಸ್‌ನಲ್ಲಿ ಇಸ್ರೇಲ್‌ನ ಶಹಾರ್ ಪೀರ್ ಜೊತೆ ಆಡುವುದನ್ನೂ ಸಂಪ್ರದಾಯಸ್ಥ ಮುಸ್ಲಿಮರು ವಿರೋಧಿಸಿದರು.

೨೦೦೮ರ ಹಾಪ್‌ಮನ್ ಕಪ್ ಸಂದರ್ಭದಲ್ಲಿ ಸಾನಿಯಾ ಮಿರ್ಜಾ ಭಾರತದ ರಾಷ್ಟ್ರಧ್ವಜದ ಸಮೀಪ ಕಾಲು ಇಟ್ಟು ಕುಳಿತಂತೆ ತೋರುತ್ತಿದ್ದ ಚಿತ್ರವೊಂದು ಪ್ರಕಟವಾಯಿತು. ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ ಎಂದು ಸಾನಿಯಾ ವಿರುದ್ಧ ಪ್ರತಿಭಟನೆ ನಡೆಯಿತು. ಕೆಲವರು ಕೋರ್ಟ್ ಮೆಟ್ಟಿಲೂ ಹತ್ತಿದರು.

ವಿವಿಧ ವಿವಾದಗಳಿಂದ ಬೇಸತ್ತ ಸಾನಿಯಾ ಮಿರ್ಜಾ ೨೦೦೮ರ ಬೆಂಗಳೂರು ಓಪನ್ ಡಬ್ಲ್ಯುಟಿ‌ಎ ಟೂರ್ನಿ ಬಹಿಷ್ಕರಿಸಿದರು. ಮಾತ್ರವಲ್ಲ, ಭವಿಷ್ಯದಲ್ಲಿ ಭಾರತದಲ್ಲಿ ನಡೆಯುವ ಯಾವುದೇ ಟೂರ್ನಿಗಳಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದರು.

ದೊಡ್ಡ ಗೆಲುವುಗಳು:
ಸಾನಿಯಾ ವಿವಿಧ ಟೂರ್ನಿಗಳ ಸಂದರ್ಭದಲ್ಲಿ ವಿಶ್ವ ಅಗ್ರ ೧೦ ಶ್ರೇಯಾಂಕದೊಳಗಿನ ಆಟಗಾರ್ತಿಯರಾದ ಸ್ವೇಟ್ಲಾನ ಕುಜ್ನೆತ್ಸೋವ, ನಾಡಿಯಾ ಪೆಟ್ರೋವ, ಮಾರ್ಟಿನಾ ಹಿಂಗಿಸ್‌ರನ್ನು ಸೋಲಿಸಿದ್ದಾರೆ.

ವೈಯಕ್ತಿಕ ಜೀವನ:
ಸಾನಿಯಾ ಗಾಸಿಪ್ ಸುದ್ದಿಗಳಿಗೂ ಆಹಾರವಾಗಿದ್ದಾರೆ. ಬಾಲಿವುಡ್ ನಟ ಶಾಹೀದ್ ಕಪೂರ್ ಜೊತೆ ಅವರ ಹೆಸರು ಥಳುಕು ಹಾಕಿಕೊಂಡಿತ್ತು.

ಸಾನಿಯಾ ವಿವಾಹ ನಿಶ್ಚಿತಾರ್ಥ ೨೦೦೯ರಲ್ಲಿ ಹೈದರಾಬಾದ್ ಮೂಲದ ವಾಣಿಜ್ಯೋದ್ಯಮಿ ಸೊಹ್ರಾಬ್ ಮಿರ್ಜಾ ಜೊತೆ ನಡೆಯಿತು. ಸೊಹ್ರಾಬ್ ವಿದೇಶದಲ್ಲಿ ಉನ್ನತ ವ್ಯಾಸಂಗ ನಡೆಸುತ್ತಿದ್ದು, ಸಾನಿಯಾ ಸಹ ಕೆಲವು ಕಾಲ ಟೆನಿಸ್‌ನಲ್ಲಿ ಮುಂದುವರಿಯುವ ಇಚ್ಛೆ ಹೊಂದಿರುವುದರಿಂದ ಸದ್ಯಕ್ಕೆ ಅವರ ವಿವಾಹ ನಡೆಯುವ ನಿರೀಕ್ಷೆ ಇಲ್ಲ.

ಪ್ರಶಸ್ತಿಗಳು:
ಸಾನಿಯಾ ೨೦೦೪ರಲ್ಲಿ ಭಾರತ ಸರ್ಕಾರದ ಅರ್ಜುನ ೨೦೦೬ರಲ್ಲಿ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ. ಚೆನ್ನೈನ ಎಂಜಿ‌ಆರ್ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟೋರೇಟ್ ನೀಡಿದೆ.

ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಸರ್ಕಾರ ಸಾನಿಯಾಗೆ ೫ ಲಕ್ಷ ರೂ. ನಗದು ಬಹುಮಾನ ನೀಡಿ ಸನ್ಮಾನಿಸಿತ್ತು.