ಭಾರತವೇ ತನ್ನ ಮನೆ, ಭಾರತೀಯರೆಲ್ಲರೂ ತನ್ನ ಬಂಧುಬಳಗ ಎಂದು ಬಲವಾಗಿ ನಂಬಿ ಆ ನಂಬಿಕೆಯೊಂದಿಗೆ ತಮ್ಮ ಜೀವನವನ್ನು ಸವೆಸಿದ ವ್ಯಕ್ತಿ ಸಾನೆ ಗುರೂಜಿ. ಅವರಿಗೆ ಭಾರತೀಯ ಸಂಸ್ಕೃತಿಯಲ್ಲಿ ಅಚಲ ಶ್ರದ್ಧೆ. ಧರ್ಮವನ್ನು ಅರ್ಥಮಾಡಿಕೊಂಡು ಧರ್ಮದರ್ಶಿ ಎನಿಸಿಕೊಂಡರು ಸಾನೆ ಗುರೂಜಿ. ಧರ್ಮದಲ್ಲಿ ಅಪಾರ ನಂಬಿಕೆ ಇದ್ದರೂ ಅವರೆಂದೂ ಇತರ ಧರ್ಮಗಳಿಗೆ ಅಗೌರವ ತೋರಿಸಲಿಲ್ಲ. ಕೋಮಲವಾದ ಮನಸ್ಸು, ಎಂಟೆರ್ದೆಯ ಎದೆಗಾರಿಕೆ, ನಿರ್ಭಯ ಪ್ರವೃತ್ತಿ ಸಂಕೋಚದ ಸ್ವಭಾವ ಅವರದು. ಅವರು ಶಿಕ್ಷಕರಾಗಿದ್ದರು. ಮಹಾತ್ಮ ಗಾಂಧೀಜಿಯವರು ದಂಡಿ ಎಂಬ ಸ್ಥಳದಲ್ಲಿ ಸತ್ಯಾಗ್ರಹ ಮಾಡಲು ನಡೆದು ಹೊರಟರು. ಆಗ ಸಾನೆ ಗುರೂಜಿ ತಮ್ಮ ಶಿಕ್ಷಕ ವೃತ್ತಿಗೆ ಶರಣು ಹೊಡೆದು, “ನಾವು ಸ್ವಾತಂತ್ಯ್ರದ ಸೈನಿಕರು. ನಾವು ನಿರ್ಭಯರು, ನಿರಂಕುಶರು. ಈ ರಾಕ್ಷಸೀ ಸರ್ಕಾರವನ್ನು ನಾವು ಎಂದೂ ಜೀವಂತ ಉಳಿಸಿಕೊಡುವುದಿಲ್ಲ” ಎಂದು ಘಂಟಾಘೋಷವಾಗಿ ಸಾರಿ ರಾಷ್ಟ್ರೀಯ ಆದೋಲನದಲ್ಲಿ ಧುಮುಕಿದರು. ಈ ರೀತಿಯಾಗಿ ತಮ್ಮ ಜೀವನ ವಿಕಾಸಗೊಳ್ಳುವುದಕ್ಕೆ ತಮ್ಮ ತಾಯಿಯೇ ದಾರಿ ತೋರಿಸಿದರು ಎಂದು ಸಾನೆ ಗುರೂಜಿ ಭಕ್ತಿಯಿಂದ ಒಪ್ಪಿಕೊಂಡಿದ್ದಾರೆ. ಅಲ್ಲದೆ ಆ ತಾಯಿಯು ದಿವ್ಯ ದರ್ಶನಕ್ಕಾಗಿ ಒಂದು ಕಾದಂಬರಿಯನ್ನೇ ಬರೆದಿದ್ದಾರೆ. ಅದೇ “ಶ್ಯಾಮನ ತಾಯಿ” (ಶ್ಯಾಮಚಿ ಆಯಿ).

ಈ ಶ್ಯಾಮ ಯಾರು?

ಬಡತನದ ಬಾಲ್ಯ

ಈ ಶ್ಯಾಮ ಮತ್ತಾರೂ ಅಲ್ಲ. ಸಾನೆ ಗುರೂಜಿಯೇ ಶ್ಯಾಮ. ಸಾನೆ ಗುರೂಜಿಯ ಪೂರ್ತಿ ಹೆಸರು ಪಾಂಡುರಂಗ ಸದಾಶಿವ ಸಾನೆ. ಪಾಂಡುರಂಗ ಅವರ ಹೆಸರು ಸದಾಶಿವ ಅವರ ತಂದೆಯ ಹೆಸರು. ಸಾನೆ ಅವರ ಮನೆತನದ ಹೆಸರು.

ಸಾನೆ ಮನೆತನ ಒಂದು ಕಾಲಕ್ಕೆ ಸಿರಿವಂತೆ ಮನೆತವಾಗಿದ್ದಿತು. ಮಹಾರಾಷ್ಟ್ರದಲ್ಲಿನ ವಡವಲಿ ಊರಿನ ಜಹಗೀರುದಾರರು. ಆ ಊರಿನ ಶಾನುಭೋಗರೂ ಆಗಿದ್ದರು. ಮುಂದೆ ಬರಬರುತ್ತ ಸಿರಿವಂತಿಕೆ ಮಾಯವಾಗತೊಡಗಿತು. ಮನೆತನದ ಮರ್ಯಾದೆ ಉಳಿಸುವುದಕ್ಕೋಸ್ಕರ ಇವರ ಪೂರ್ವಜರು ತಮ್ಮ ಆಸ್ತಿಯನ್ನೆಲ್ಲ ಮಾರಬೇಕಾಯಿತು. ಅನಂತರ ಕೊಂಕಣ ಪಟ್ಟಿಯಲ್ಲಿಯ ರತ್ನಾಗಿರಿ ಜಿಲ್ಲೆಯ ಪಾಲಗಡಕ್ಕೆ ಬಂದರು. ಅಲ್ಲಿಯೂ ಸ್ವಲ್ಪ ಭೂಮಿಯನ್ನು ಇವರ ತಂದೆ  ಸದಾಶಿವರಾವ್ ಸಾಗುವಳಿ ಮಾಡಿ ಹಾಗೂ ಹೀಗೂ ಸಂಸಾರವನ್ನು ತೂಗಿಸಿಕೊಂಡು ಹೋದರು. ಸದಾಶಿವ ರಾಯರ ಹೆಂಡತಿ ಯಶೋದಾಬಾಯಿ ಆದರ್ಶ ಹಿಂದೂ ಮಹಿಳೆಯಾಗಿದ್ದಳು. ಈ ದಂಪತಿಗಳ ಹೊಟ್ಟೆಯಲ್ಲಿ ೧೮೯೯ ರಲ್ಲಿ ಸಾನೆ ಗುರೂಜಿ ಹುಟ್ಟಿದರು. ತಂದೆ ತಾಯಿಗಳು ಪ್ರೀತಿಯಿಂದ ಶ್ಯಾಮ ಎಂದೂ ಕರೆಯತೊಡಗಿದರು.

ಶ್ಯಾಮನ ತಾಯಿ

ಸಾನೆ ಗುರೂಜಿ ಹುಟ್ಟಿದಾಗ, ತಂದೆ ಸಾಲಗಾರರೇ ಆಗಿದ್ದರು. ಆದರೂ ತಾಯಿ ಯಶೋದಾಬಾಯಿ ಬಡತನದ ಎಲ್ಲ ದುಃಖಗಳನ್ನು ತಾನೇ ನುಂಗಿ, ಮನೆಯನ್ನು ನಂದನವನವನ್ನಾಗಿ ಮಾಡಿದ್ದಳು.

ಶ್ಯಾಮ ಬೆಳೆಯುತ್ತ ಬಂದ. ಇವನಿಗೆ ಬಹುಬೇಗ ಕೋಪ ಬರುತ್ತಿತ್ತು. ಈ ಹಟವಾದಿ ಹುಡುಗನನ್ನು ತಿದ್ದುವ, ಆತನ ಚೈತನ್ಯವನ್ನು ಸರಿಯಾದ ಮಾರ್ಗದಲ್ಲಿ ಹರಿಯಿಸುವಂತೆ ಮಾಡುವ ಮಹಾಕಾರ್ಯವನ್ನು ಅವರ ತಾಯಿಯೇ ಮಾಡಿದಳು.

ಈ ಪುಟ್ಟ ಹಟವಾದಿ ಶ್ಯಾಮನಿಗೆ ತಾಯಿ ಯಶೋದಾಬಾಯಿಯೇ ಮೊದಲನೇ ಗುರುವಾದಳು. ಒಂದು ಸಲ ಶ್ಯಾಮ ಅಂಗಳದಲ್ಲಿಯ ಹೂವಿನ ಗಿಡದಿಂದ ಮೊಗ್ಗುಗಳನ್ನು ಕಿತ್ತ. ತಾಯಿ ಕೋಪಿಸಿಕೊಳ್ಳದೆ, “ಮಗೂ ಮೊಗ್ಗುಗಳನ್ನು ಎಂದೂ ಕೀಳಬೇಡ. ಬಲಾತ್ಕಾರ ಮಾಡಿದರೆ ಮೊಗ್ಗುಗಳು ಅರಳುವುದಿಲ್ಲ. ಮೊಗ್ಗು ತಾನಾಗಿ ಅರಳಬೇಕು” ಎಂದು ಹೇಳಿದಳು. ಇಂತಹ ಮಾತು ಶ್ಯಾಮನ ಹೃದಯವನ್ನು ನೇರವಾಗಿ ಮುಟ್ಟುತ್ತಿತ್ತು. ಮನಸ್ಸನ್ನು ತಟ್ಟುತ್ತಿತ್ತು. ಸ್ನಾನ ಮಾಡಿದ ನಂತರ, ಶ್ಯಾಮ ಕೂಗಿಕೊಂಡು ಶ್ಲೋಕಗಳನ್ನು ಹೇಳುತ್ತಿರುವುದನ್ನು ಗಮನಿಸಿದ ತಾಯಿ, “ಧರ್ಮದ ಆಡಂಬರಕ್ಕಿಂತ ಮೂಖ ಪ್ರಾರ್ಥನೆಯೇ ಲೇಸು” ಎಂದು ಹೇಳುತ್ತಿದ್ದಳು.

ಒಂದು ಸಲ ಶಾಲೆಯ ಪುಸ್ತಕ ಕೊಳ್ಳಲು ದುಡ್ಡಿಲ್ಲ. ಪುಸ್ತಕವಂತೂ ಶ್ಯಾಮನಿಗೆ ಬೇಕೇ ಬೇಕು. ಅವನ ಚಿಕ್ಕಪ್ಪ ತನ್ನ ಅಂಗಿಯನ್ನು ತೆಗೆದಿರಿಸಿ ಒಳಗಡೆ ಹೋಗಿದ್ದ. ಚಿಕ್ಕಪ್ಪನ ಜೇಬಿನಲ್ಲಿ ರೂಪಾಯಿಗಳಿದ್ದುದನ್ನು ಶ್ಯಾಮನು ನೋಡಿದ್ದನು. ಪುಸ್ತಕಕ್ಕೆ ಬೇಕಾಗಿರುವುದು ಒಂದೇ ಒಂದು ರೂಪಾಯಿ. ಅಷ್ಟನ್ನೇ ಜೇಬಿನಿಂದ ತೆಗೆದರೆ? ಶ್ಯಾಮ ಚಿಕ್ಕಪ್ಪನ ಜೇಬಿನಿಂದ ಒಂದು ರೂಪಾಯಿ ಕದ್ದು ಮುಚ್ಚಿಟ್ಟನು. ಸ್ವಲ್ಪ ಸಮಯದ ನಂತರ, ಚಿಕ್ಕಪ್ಪ ಬಂದು ಜೇಬಿಗೆ ಕೈಹಾಕಿ ಹಣವನನ್ನು ಎಣಿಸಿದನು. ಒಂದು ರೂಪಾಯಿ ಕಡಿಮೆ ಇದೆ! ಆ ಕೊಠಡಿಯಲ್ಲಿ ಶ್ಯಾಮನ ಹೊರತು ಮತ್ತಾರೂ ಇಲ್ಲ. ಕದ್ದಿದ್ದರೆ ಶ್ಯಾಮನೇ ಕದ್ದಿರಬೇಕು ಎಂದು ಶ್ಯಾಮನನ್ನು ಹಿಡಿದು ಥಳಿಸತೊಡಗಿದ. ಶ್ಯಾಮ ಚೀರಿ ಚೀರಿ ಅಳುತ್ತ, “ನಾನು ರೂಪಾಯಿ ತೆಗೆದುಕೊಂಡಿಲ್ಲ” ಎಂದು ಕೂಗಿಕೊಳ್ಳತೊಡಗಿದನು.

ಶ್ಯಾಮನ ಅಳುವಿನ ಧ್ವನಿಯನ್ನು ಕೇಳಿದ ತಾಯಿ ಯಶೋದಾಬಾಯಿ ಅಡಿಗೆಮನೆಯಿಂದ ಧಾವಿಸಿ ಪಡಸಾಲೆಗೆ ಬಂದಳು. ತನ್ನ ಮೈದುನ ಶ್ಯಾಮನನ್ನು ಹೊಡೆಯುತ್ತಿರುವುದನ್ನು ಕಂಡು ಕೆರಳಿ, “ಬಿಡಿ ನನ್ನ ಶ್ಯಾಮನನ್ನು. ನೀವು ಶ್ಯಾಮನನ್ನು ಹೊಡೆಯಕೂಡದು. ನನ್ನ ಶ್ಯಾಮ ಕಳ್ಳನಲ್ಲ. ಒಂದು ವೇಳೆ ನಿಮ್ಮ ಜೇಬಿನಿಂದ ಆತ ರೂಪಾಯಿ ತೆಗೆದುಕೊಂಡಿದ್ದರೆ, ಆತ ಹಾಗೆ ಹೇಳಿ ಬಿಡುವನು” ಎಂದು ಕೂಗಿಕೊಂಡಳು.

ತಾಯಿಯ ಕೊನೆಯ ಮಾತನ್ನು- ಒಂದು ವೇಳೆ ನಿಮ್ಮ ಜೇಬಿನಿಂದ ಆತ ರೂಪಾಯಿ ತೆಗೆದುಕೊಂಡಿದ್ದರೆ, ಆತ ಹಾಗೆ ಹೇಳಿ ಬಿಡುವನು” ಎನ್ನುವ ಮಾತನ್ನು- ಶ್ಯಾಮ ಕೇಳಿದ. ಅವನ ಮನಸ್ಸಿನಲ್ಲಿ ಕೋಲಾಹಲವೆದ್ದಿತು. ಹಾಗೆಯೇ ತಾಯಿಯನ್ನು ಅಪ್ಪಿಕೊಂಡು, “ಅಮ್ಮಾ, ನಾನು ರೂಪಾಯಿ ತೆಗೆದುಕೊಂಡೆ, ಪುಸ್ತಕಕ್ಕಾಗಿ, ಕೇವಲ ಪುಸ್ತಕಕ್ಕಾಗಿ ಅಮ್ಮಾ” ಎಂದು ಅಳತೊಡಗಿದನು.

ಆ ಮಾತನ್ನು ಕೇಳಿ ತಾಯಿಗೆ ತಡೆಯಲಾರದ ಕೋಪ ಬಂದಿತು. ಚಿಕ್ಕಪ್ಪ ಬಾರಿಸಿದುದಕ್ಕಿಂತಲೂ ಹೆಚ್ಚಿಗೆ ಶ್ಯಾಮನನ್ನು ಹೊಡೆದಳು. “ಬಡತನವನ್ನು ಹೋಗಿಸುವುದಕ್ಕೆ ಕಳ್ಳತನ ಒಳ್ಳೇ ಮಾರ್ಗವಲ್ಲ” ಎಂದು ಹೇಳಿ ಇಡೀ ದಿನ ಶ್ಯಾಮನನ್ನು ಉಪವಾಸವೇ ಇಟ್ಟಳು.

ಈ ಘಟನೆ ಶ್ಯಾಮನ ಎಳೆಯ ಮನಸ್ಸಿನ ಮೇಲೆ ಆಗಾಧ ಪರಿಣಾಮವನ್ನುಂಟುಮಾಡಿತು.

ಇನ್ನೊಂದು ಸಲ ಶ್ಯಾಮ ಹಿತ್ತಲಲ್ಲಿ ಸ್ನಾನ ಮಾಡಿದ. ಮನೆಯ ಒಳಗಡೆ ಬರದೇ ಹೊರಗೇ ನಿಂತ. ತಾಯಿ, “ಏಕೆ ಒಳಗೆ ಬರುವುದಿಲ್ಲ”? ಎಂದು ಹೇಳಿದಳು. ಶ್ಯಾಮ ಹೇಳಿದ: “ನೆಲದ ಮೇಲೆ ನಡೆದು ಬರುವಾಗ ನನ್ನ ಸ್ವಚ್ಛವಾದ ಅಂಗಾಲುಗಳಿಗೆ ನೆಲದ ಮಣ್ಣು ಹತ್ತಿ ಕೊಳೆಯಾಗಿ ಬಿಡುತ್ತದೆ. ಆದುದರಿಂದ ನಾನು ಹೇಗೆ ಬರಲಿ?” ತಾಯಿ ಹೇಳಿದಳು: “ಮಗು, ನಿನ್ನ ಹೊರಗಿನ ಮೈಗೆ ಮಣ್ಣು ತಾಗಿ ಕೊಳೆಆಗುವುದಲ್ಲ ಎನ್ನುವ ನಿನ್ನ ವ್ಯಥೆ ನನಗೆ ಅರ್ಥವಾಗುತ್ತದೆ. ಅದರಂತೆ ನಿನ್ನ ಒಳಗಿನ ಆತ್ಮಕ್ಕೆ ಕೊಳೆ ಹತ್ತದಂತೆ ನಿನ್ನ ಜೀವನದಲ್ಲಿ ಹೆಚ್ಚಿನ ಎಚ್ಚರವನ್ನು ವಹಿಸಿಕೊಂಡು ನಡೆ”.

ತಾಯಿಯ ಈ ಉಪದೇಶ ಶ್ಯಾಮನ ಮನಸ್ಸಿನ ಮೇಲೆ ಅಪಾರ ಪರಿಣಾಮವನ್ನು ಬೀರಿತು. ಈ ಉಪದೇಶವನ್ನು ಆತ ತನ್ನ ಜೀವನದುದ್ದಕ್ಕೂ ಚಾಚೂ ತಪ್ಪದೆ ಪಾಲಿಸಿದ.

ಸಾನೆ ಗುರೂಜಿಯ ಬಾಲ್ಯದಲ್ಲಿ ನಡೆದ ಇನ್ನೊಂದು ಸಣ್ಣ ಘಟನೆ ಅವರ ಜೀವನಕ್ಕೊಂದು ಸದ್ಗುಣವನ್ನು ಒದಗಿಸಿತು. ನಿತ್ಯ ಸಾಯಂಕಾಲ “ರಾಮರಕ್ಷಾ ಸ್ತೋತ್ರ”ವನ್ನು ಹೇಳುವುದು ಇವರ ತಾಯಿಯ ರೂಢಿ. ಆ ಸ್ತೋತ್ರವನ್ನು ಹೇಳದೆ ಆಕೆ ಎಂದೂ ಮಲಗುತ್ತಿರಲಿಲ್ಲ.ಒಂದು ದಿನ ಆಕೆಗೆ ಜ್ವರ, ಅಂದು ರಾಮರಕ್ಷೆಯನ್ನು ಹೇಳುವುದು ಸಾಧ್ಯವಾಗುವಂತಿರಲಿಲ್ಲ. ಆದರೆ ನಿತ್ಯ ನಿಯಮದ ಪ್ರಕಾರ ರಾಮರಕ್ಷೆ ಹೇಳಲೇಬೇಕು. ಆಗ ತಾಯಿ ಶ್ಯಾಮನನ್ನು ಹತ್ತಿರ ಕರೆದು, “ಮಗು, ನನಗಿಂದು ಜ್ವರ. ರಾಮರಕ್ಷೆ ಹೇಳುವುದು ಸಾಧ್ಯವಾಗುತ್ತಿಲ್ಲ. ನನ್ನ ಬದಲಿಗೆ ನೀನೇ ರಾಮರಕ್ಷೆಯನ್ನು ಹೇಳು” ಎಂದಳು. ಅದಕ್ಕೆ ತುಂಟ ಶ್ಯಾಮ ಮೊಲಮೊದಲು ಒಪ್ಪಲಿಲ್ಲ. “ನೀನು ಹೇಳುವುದನ್ನು ನಾನೇಕೆ ಹೇಳಬೇಕು? ನನ್ನ ಪಾಲಿನ ಎಲ್ಲ ಕೆಲಸಗಳನ್ನು ಮುಗಿಸಿದ್ದೇನೆ. ಬೇರೆಯವರ ಕೆಲಸ ನಾನೇಕೆ ಮಾಡಲಿ?” ಎಂದನು.

ಅದಕ್ಕೆ ತಾಯಿ, “ಮಗು, ತಂತಮ್ಮ ಕೆಲಸವನ್ನು ಎಲ್ಲರೂ ಮಾಡುತ್ತಾರೆ, ಆದರೆ ಇನ್ನೊಬ್ಬರ ಕೆಲಸವನ್ನು ಮಾಡುವುದರಿಂದ ಎಂತಹ ಆನಂದ, ಸುಖ ಸಿಗುತ್ತದೆ ಎಂಬುದನ್ನು ಅಂತಹ ಕೆಲಸವನ್ನು ಮಾಡಿಯೇ ತಿಳಿದುಕೊಳ್ಳಬೇಕು. ನಾನು ಇನ್ನೊಬ್ಬರಿಗೆ ಸ್ವಲ್ಪವಾದರೂ ಸಹಾಯಕನಾದೆನಲ್ಲ ಎನ್ನುವ ಆನಂದದ ಬೆಲೆ ಕಟ್ಟಲು ಸಾಧ್ಯವಿಲ್ಲ” ಎಂದು ಹೇಳಿದಳು.

ತಾಯಿಯ ಈ ಮೃದು ಮಾತುಗಳು ಶ್ಯಾಮನ ಮೇಲೆ ಅಪಾರ ಪರಿಣಾಮವನ್ನು ಬೀಡಿದುವು.

ಸಾನೆ ಗುರೂಜಿ ತಮ್ಮ ಜೀವಮಾನದಲ್ಲಿ ಇನ್ನೊಬ್ಬರ ಕೆಲಸವನ್ನು ಅತ್ಯಾನಂದದಿಂದ ಮಾಡತೊಡಗಿದರು.

ಸಾನೆ ಗುರೂಜಿಗೆ ತಾಯಿಯ ಬಗ್ಗೆ ತುಂಬಾ ಆದರ ಬೆಳೆಯಿತು. “ವಿಶ್ವವಿದ್ಯಾನಿಲಯಗಳ ಪದವಿಗಳನ್ನು ಮೀರಿಸುವ ಜ್ಞಾನವನ್ನು ತಾಯಿಯಿಂದ ಪಡೆದೆ” ಎಂದು ಅವರು ಹೇಳುತ್ತಿದ್ದರು.

ಭವತಿ ಭಿಕ್ಞಾಂ ದೇಹಿ

ಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ ನಾಲ್ಕನೇ ತರಗತಿಯವರೆಗೆ ಶಿಕ್ಷಣದ ಸೌಲಭ್ಯವಿದ್ದಿತು. ಮುಂದಿನ ಶಿಕ್ಷಣಕ್ಕಾಗಿ ಬೇರೆ ಕಡೆಗೆ ಹೋಗಲೇಬೇಕಿತ್ತು. ಹುಡುಗ ತನ್ನ ಊರಿನಿಂದ ೧೨ ಮೈಲಿ ದೂರದಲ್ಲಿದ್ದ ದಾಪೋಲಿ ಎಂಬಲ್ಲಿಯ ಪ್ರೌಢಶಾಲೆಯನ್ನು ಸೇರಿದ. ಮನೆಯಲ್ಲಿ ಬಡತನದ ತೀವ್ರತೆ ಇದ್ದರೂ, ತಾಯಿ ತನ್ನ ಮಗು ಶ್ಯಾಮ ಉಚ್ಚ ಶಿಕ್ಷಣ ಪಡೆಯಲೇಬೇಕೆಂದು ದೃಢನರ್ಧಾರ ಮಾಡಿದ್ದಳು. ಪ್ರತಿ ಶನಿವಾರ ಶ್ಯಾಮ ಹನ್ನೆರಡು ಮೈಲು ನಡೆದು ಪಾಲಗಡಕ್ಕೆ ಬರುತ್ತಿದ್ದ. ಪುನಃ ಸೋಮವಾರ ಬೆಳಿಗ್ಗೆ ದಾಪೋಲಿಗೆ ನಡೆದುಕೊಂಡು ಹೋಗುತ್ತಿದ್ದ.

ದಾಪೋಲಿ ಪ್ರೌಢಶಾಲೆಯಲ್ಲಿದ್ದ ಪ್ರಸಿದ್ಧ ಕವಿ ರಾಧಾ ರಮಣರು ಹುಡುಗನಿಗೆ ಸಂಸ್ಕೃತವನ್ನು ಕಲಿಸಿದರು. ಶ್ಯಾಮನ ಸ್ಮರಣ ಶಕ್ತಿಯೂ ವಿಲಕ್ಷಣವಾಗಿದ್ದಿತು. ಒಂದೇ ಒಂದು ಸಲ ಓದಿದರೂ ಸಾಕು, ಓದಿದ್ದೆಲ್ಲ ಕಂಠಪಾಠವಾಗಿ ಬಿಡುತ್ತಿತ್ತು. ಆದರೆ ಬಡತನದ ದುರ್ದೈವದಿಂದ ದಾಪೋಲಿ ಪ್ರೌಢಶಾಲೆಯಲ್ಲಿ ಶಿಕ್ಷಣವನ್ನು ಮುಂದುವರಿಸುವುದು ಸಾಧ್ಯವಾಗಲಿಲ್ಲ. ಶಾಲೆಯ “ಫೀ” ಹಣವನ್ನು ಕೊಡುವುದು ಅವರ ತಂದೆಗೆ ಸಾಧ್ಯವಾಗಲಿಲ್ಲ. ಕೊಡಲು ಸಾಧ್ಯವಿಲ್ಲ, ಬಿಟ್ಟು ಕೊಡಿ ಎಂದು ಶಾಲೆಯಲ್ಲಿ ಹೇಳಲು ನಾಚಿಕೆ. ಇಂತಹ ಪರಿಸ್ಥಿತಿಯಲ್ಲಿ ದಾಪೋಲಿಯನ್ನು ಬಿಟ್ಟು ಶ್ಯಾಮ ಔಂಧ್‌ಗೆ ಹೋದ. ಅಲ್ಲಿ ಅವನ ಗೆಳೆಯರಿದ್ದರು. ಅಲ್ಲದೆ ಅದು ಸಂಸ್ಥಾನದ ಶಾಲೆ, ಅಲ್ಲಿಯ ಪ್ರೌಢಶಾಲೆಯ ಶಿಕ್ಷಣ ಉಚಿತವಾಗಿದ್ದಿತು. ಶಾಲೆಯಲ್ಲಿ “ಫೀ” ಇಲ್ಲವಾದರೂ ಹೊಟ್ಟೆಯ ಪ್ರಶ್ನೆ ಕಾಡುತ್ತಿತ್ತು. ದಾಪೋಲಿಯಲ್ಲಿ ಸೋದರತ್ತೆಯ ಮನೆ ಇದ್ದುದರಿಂದ ಅಲ್ಲಿ ಹೊಟ್ಟೆಯ ಪ್ರಶ್ನೆ ಇರಲಿಲ್ಲ. ಔಂಧ್‌ನಲ್ಲಿ ಬಳಗದವರಾರೂ ಇಲ್ಲ. ಆದರೂ ಹುಡುಗ ಶ್ಯಾಮ ಎದೆಗುಂದಲಿಲ್ಲ. ಬಂದ ಪರಿಸ್ಥಿತಿಯನ್ನು ಎದುರಿಸಲೇ ಬೇಕೆಂಬ ದೃಢ ನಿರ್ಧಾರ ಮಾಡಿದ.

ಹೊಟ್ಟೆಯ ಪಾಡಿಗೆ ಹೇಗೆ?

ಶ್ಯಾಮ ಬಗಲಿಗೆ ಜೋಳಿಗೆಯನ್ನು ಹಾಕಿಕೊಂಡ, ಮನೆ ಮನೆ ತಿರುಗಿ “ಭವತಿ ಭಿಕ್ಞಾಂ ದೇಹಿ” ಎಂದು ಬೇಡಿದ. ಸಿಕ್ಕಷ್ಟನ್ನೇ ತಿಂದು ದಿನ ಕಳೆದ. “ಶ್ಯಾಮನ ತಾಯಿ” ಕಾದಂಬರಿಯಲ್ಲಿ ಸಾನೆ ಗುರೂಜಿ ಈ ಸಂಗತಿಯನ್ನು ಬಹು ಹೃದಯಂಗಮವಾಗಿ ಚಿತ್ರಿಸಿದ್ದಾರೆ: “ಶ್ಯಾಮ ದಾಪೋಲಿ ಬಿಟ್ಟು ಔಂಧಕ್ಕೆ ಶಿಕಷಣಕ್ಕಾಗಿ ಹೋಗಲು ನಿರ್ಧರಿಸಿದಾಗ ಭಿಕ್ಷೆ ಬೇಡಿಯಾದರೂ ಶಿಕ್ಷಣ ಮುಂದುವರಿಸುವ ತನ್ನ ನಿರ್ಧಾರವನ್ನು ತಾಯಿಗೆ ತಿಳಿಸಿದಾಗ, ಆಕೆ “ಧ್ರುವನಂತೆ ಹೋಗಿ ಬಾ” ಎಂದಳು. ಹೊರಗಿನ ಜೀವನ ಸಮುದ್ರದಲ್ಲಿ ಸಾಯಬಹುದು, ಮುಳುಗಬಹುದು; ಧೈರ್ಯವಿದ್ದರೆ ನೀರಲ್ಲಿ ಮುಳುಗಿ ಮುತ್ತುಗಳನ್ನು ತೆಗೆಯಬಹುದು. ಮೋಸ ಹೋಗಬಹುದು. ಪಾರಾಗಲೂಬಹುದು. ಎಲ್ಲವೂ ಅನಿಶ್ಚಿತ. ಮಗನಿಗೆ ಈಜು ಕಲಿಸಿದ ತಾಯಿ ಮಗನನ್ನು ಅಪಾರವಾದ ಸಮುದ್ರದಲ್ಲಿ ಬಿಟ್ಟುಬಿಟ್ಟಳು. “ಧ್ರುವನಂತೆ ಹೋಗಿ ಬಾ” ಎನ್ನುವ ಅವಳ ಆಶೀರ್ವಾದ ಶ್ಯಾಮನಿಗೆ “ರಾಮರಕ್ಷೆಯಾಯಿತು” ಎಂದು ಬರೆದಿದ್ದಾರೆ.

ಶಿಕ್ಷಣ ಮುಂದುವರಿಯುತ್ತಿದ್ದಾಗ ಮತ್ತೊಂದು ಅನಿಷ್ಟ ಪ್ರಸಂಗ ಎದುರಾಯಿತು. ದೇಶದಲ್ಲೆಲ್ಲ ಪ್ಲೇಗಿನ ಹಾವಳಿ ಪ್ರಾರಂಭವಾಯಿತು. ಔಂಧಕ್ಕೂ ಪ್ಲೇಗು ವ್ಯಾಪಿಸಿತು. ಸಾನೆ ಗುರೂಜಿಯ ತಮ್ಮ ಸದಾನಂದನು ಪ್ಲೇಗು ಬೇನೆಗೆ ತುತ್ತಾಗಿ ಮರಣ ಹೊಂದಿದನು. ಔಂಧ್‌ನಲ್ಲಿ ಶಾಲೆಯನ್ನು ಮುಚ್ಚಲಾಯಿತು. ಪ್ಲೇಗು ಬೇನೆ ಇದ್ದುದರಿಂದ ಶಾಲೆಯ ಮಕ್ಕಳೆಲ್ಲ ತಂತಮ್ಮ ಊರಿಗೆ ಹೋಗಬೇಕೆಂದು ಅಲ್ಲಿಯ ರಾಜ ಆಜ್ಞೆ ಮಾಡಿದನು. ಶ್ಯಾಮ ನಿರಾಶನಾಗಿ ಪಾಲಗಡಕ್ಕೆ ಮರಳಿದ. ಮಗನನ್ನು ಕಂಡು ತಾಯಿಗೆ ಸಂತೋಷವಾಯಿತು. ಒಂದು ತಿಂಗಳ ನಂತರ ಮುಂಬಯಿಗೆ ಬಂದ. ಅಲ್ಲಿಯೂ ಯಾವುದೇ ವ್ಯವಸ್ಥೆ ಆಗದ್ದರಿಂದ ಪುನಃ ಪೂನಾಕ್ಕೆ ಬಂದು ನೂತನ ವಿದ್ಯಾಲಯವನ್ನು ಸೇರಿಕೊಂಡ.

"ಧ್ರುವನಂತೆ ಹೋಗಿ ಬಾ"

ಈ ಮಧ್ಯೆ ಹುಡುಗನಲ್ಲಿ ರಾಷ್ಟ್ರೀಯ ಭಾವನೆ ಬೆಳೆಯತೊಡಗಿತು. ಪುಣೆಯಲ್ಲಿ ಮಹರ್ಷಿ ಅಣ್ಣಾಸಾಹೇಬ ಪಟವರ್ಧನರು ಸತ್ತಾಗ ಅವರ ಅಂತ್ಯ ದರ್ಶನಕ್ಕೆ ಹೋದ. ಲೋಕಮಾನ್ಯ ಬಾಲಗಂಗಾಧರ ತಿಲಕರನ್ನು ಕಾಣುವ ಸುಯೋಗ ಒದಗಿ ಬಂದಿತು. ಲೋಕಮಾನ್ಯರ ದರ್ಶನ ಸಾನೆ ಗುರೂಜಿಯಲ್ಲಿ ಸಂಜೀವಿನಿ ಸುರಿದಂತಾಯಿತು.

ಶ್ಯಾಮ ಮೆಟ್ರಕೆ ಕ್ಲಾಸಿನಲ್ಲಿ ಓದುತ್ತಿದ್ದಾಗ ಒಂದು ದೊಡ್ಡ ಸಂಕಟ ಬಂದಿತು.

ಸಾಕ್ಷಾತ್ ದೇವಿಯಂತಿದ್ದ ಅವನ ತಾಯಿ ಯಶೋದಾಬಾಯಿ ಕೊಂಕಣದ ಪಾಲಗಡದಲ್ಲಿ ಸ್ವರ್ಗಸ್ಥಳಾದಳು. ಹುಡುಗನಿಗೆ ಈ ಆಘಾತವನ್ನು ತಡೆದುಕೊಳ್ಳಲು ಆಗಲಿಲ್ಲ. ಇಂತಹ ದುಃಖ ಮತ್ತೊಂದು ಸಲ ಮಹಾತ್ಮಾ ಗಾಂಧೀಜಿ ತೀರಿಕೊಂಡಾಗ ಮಾತ್ರ ಅನುಭವಿಸಿದೆ ಎಂದು ಅವರು ಬರೆದಿದ್ದಾರೆ.

ಕಾಲೇಜುಸಾಮಾಜಿಕ ಸೇವೆ

ಕಾಲೇಜಿನಲ್ಲಿದ್ದಾಗ ಗುರೂಜಿಯ ಮನಸ್ಸು ದೇಶದ ಸ್ವಾತಂತ್ಯ್ರ- ಸಮಾಜ ಸೇವೆಗಳತ್ತ ಹೊರಳತೊಡಗಿತು. ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾನೆ ಗುರೂಜಿಯ ಆರಾಧ್ಯ ಮೂರ್ತಿಗಳಾದರು. ಅವರ ಆಚಾರ ವಿಚಾರಗಳು ಗುರೂಜಿಯ ಮೇಲೆ ಅಗಾಧ ಪರಿಣಾಮವನ್ನುಂಟು ಮಾಡಿದವು. ಹಾಗೆಯೇ ಲಾಲಾ ಲಜಪತರಾಯ್, ಬಿಪಿನಚಂದ್ರಪಾಲ್, ದೇಶಬಂಧು, ಚಿತ್ತರಂಜನ ದಾಸ್, ಮೋತಿಲಾಲನೆಹರೂ ಮುಂತಾದವರು ಭಾಷಣಗಳನ್ನು ಕೇಳಿ, ಓದಿ ಗುರೂಜಿ ತಮ್ಮ ಮುಂದಿನ ಜೀವನ ಯಾವ ರೀತಿಯದಿರಬೇಕು ಎಂಬುದನ್ನು ನಿರ್ಧರಿಸಿ ಬಿಟ್ಟರು.

೧೯೧೮ ರಲ್ಲಿ ದೇಶದಲ್ಲೆಲ್ಲ ಇನ್‌ಫ್ಲುಯೆನ್ಜ್‌ ಹಬ್ಬಿತು. ಪೂನಾದಲ್ಲಿ ಈ ಬೇನೆ ಹಬ್ಬಿದಾಗ, ಸಾನೆ ಗುರೂಜಿ ಸ್ವಯಂಸೇವಕರಾಗಿ ಮನೆಮನೆಗೆ ಹೋಗಿ ಔಷಧಿಯನ್ನು ಕೊಟ್ಟು ಜನಸೇವೆಯನ್ನು ಮಾಡಿದರು. ಮುಂದೆ ಪೂಜಾ ನಗರಸಭೆಯ ಅಧ್ಯಕ್ಷರಾದ ಹರಿನಾರಾಯಣ ಆಪ್ಟೆಯವರು ನಗರದ ಸಾಕ್ಷರ-ನಿರಕ್ಷರರ ಗಣತಿಗಾಗಿ ಸ್ವಯಂಸೇವಕರನ್ನು ಬರಮಾಡಿಕೊಂಡತು. ಸಾನೆ ಗುರೂಜಿ ಈ ಕೆಲಸವನ್ನು ನಿಷ್ಠೆಯಿಂದ ಮಾಡಿದರು.

ಸಾನೆ ಗುರೂಜಿ ಸ್ಕಾಲರ್‌ಷಿಪ್‌ ಪಡೆದು ಬಿ.ಎ. ಪದವಿ ಪಡೆದರು. ಅದೇ ಕಾಲೇಜಿನಲ್ಲಿ ಅವರಿಗೆ “ಫೆಲೋಷಿಪ್‌” ಕೂಡ ದೊರಕಿತು. ಎಂ.ಎ. ಪದವಿಯನ್ನೂ ಪಡೆದರು.

ಸಂಸಾರ ಬೇಡ

೧೯೨೦ ರಲ್ಲಿ ತಿಲಕರು ಮರಣ ಹೊಂದಿದರು. ಲೋಕಮಾನ್ಯ ತಿಲಕರ ಯುಗ ಮುಗಿದು ಗಾಂಧೀ ಯುಗ ಪ್ರಾರಂಭವಾಯಿತು. ೧೯೨೧ ರಲ್ಲಿ ಗಾಂಧೀಜಿ ಪ್ರಾರಂಭಿಸಿದ ಅಸಹಕಾರ ಆಂಧೋಲನ ಸಾನೆ ಗುರೂಜಿಯ ಮನಸ್ಸಿನ ಮೇಲೆ ತುಂಬಾ ಪರಿಣಾಮವನ್ನು ಬೀರಿತು. ತಮ್ಮ ಇಡೀ ಜೀವಮಾನವನ್ನು ದೇಶಸೇವೆಗಾಗಿ-ಜನಸೇವೆಗಾಗಿ ಮುಡುಪಾಗಿಡಬೇಕೆಂದು ಗುರೂಜಿ ನಿರ್ಧಾರ ಮಾಡಿದರು. ಅದಕ್ಕಾಗಿ ಸಂಸಾರದ ಬಂಧನ ಬೇಡವೆಂದು ತೀರ್ಮಾನಿಸಿದರು. ಆಜನ್ಮ ಅವಿವಾಹಿತರಾಗಿಯೇ ಉಳಿಯಬೇಕೆಂದು ನಿಶ್ವಯಿಸಿದರು. ತಮ್ಮ ತಂದೆಗೆ “ನಿಮ್ಮ ಒಬ್ಬ ಮಗ ಫಕೀರನಾದನೆಂದು ತಿಳಿಯಿರಿ” ಎಂದು ಪತ್ರ ಬರೆದುಬಿಟ್ಟರು.

ಆದರೆ ತಂದೆಯ ಮನಸ್ಸಿನಲ್ಲಿ ಸಾನೆ ಗುರೂಜಿ ಎಲ್ಲರಂತೆ ಲಗ್ನ ಮಾಡಿಕೊಂಡು ಸಂಸಾರಿಯಾಗಿ ಮನೆತನವನ್ನು ಮುಂದುವರಿಸಬೇಕು, ತನ್ನ ಮುಪ್ಪಿನಲ್ಲಿ ಮಗನು ತನ್ನನ್ನು ಸುಖವಾಗಿ ನೋಡಿಕೊಳ್ಳಬೇಕು ಎನ್ನುವ ಇಚ್ಛೆ.

ಸಾನೆ ಗುರೂಜಿ ಸಂಸಾರದ ಜಂಜಡ ಬೇಡ ಎಂದರು; ಆದರೆ ಅದರಿಂದ ಪೂರ್ತಿಯಾಗಿ ಮುಕ್ತಿಯನ್ನು ಪಡೆಯುವುದು ಅಷ್ಟೊಂದು ಸುಲಭ ಸಾಧ್ಯವಾದ ಮಾತಾಗಿರಲಿಲ್ಲ. ೧೯೨೩ ರಲ್ಲಿ ಸಾನೆ ಗುರೂಜಿಯ ಅಣ್ಣನಿಗೆ ಲಕ್ವಾ ಹೊಡೆಯಿತು. ಸಾನೆ ಗುರೂಜಿಗೆ ದೂರ ನಿಲ್ಲಲು ಸಾಧ್ಯವಾಗಲಿಲ್ಲ. ಊರಿಗೆ ಮರಳಿ ಅಣ್ಣನ ಶೂಶ್ರೂಷೆಯನ್ನು ಮಾಡಿದರು. ಅಣ್ಣನಿಗೆ ಸ್ವಲ್ಪ ವಾಸಿಯಾದ ನಂತರ ತಂದೆಗೆ, “ನಾನು ಲಗ್ನ ಮಾಡಿಕೊಳ್ಳಲಿಲ್ಲವೆಂದು ನೀವು ವ್ಯಥೆ ಪಡಬೇಡಿ. ನಾನು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುವೆನು. ನೀವು ನನ್ನ ಹತ್ತಿರ ಬಂದು ಇದ್ದು ಬಿಡಿ” ಎಂದು ಹೇಳಿ ಅಮುಳನೇರಿಗೆ ಬಂದರು.

ಸ್ವಲ್ಪ ದಿನಗಳಲ್ಲಿಯೇ ಇನ್ನೊಂದು ಹೊಸ ಪೆಟ್ಟನ್ನು ಸಾನೆ ಗುರೂಜಿ ಸಹಿಸಿಕೊಳ್ಳಬೇಕಾಯಿತು.

ನ್ಯಾಯಾಲಯದ ಒಂದು ಕೆಲಸಕ್ಕಾಗಿ ಇವರ ತಂದೆ ದಾಪೋಲಿಗೆ ಹೋದಾಗ ಅಲ್ಲಿಯೇ ಅವರು ಆಕಸ್ಮಿಕವಾಗಿ ಹೃದಯಾಘಾತದಿಂದ ಸತ್ತುಹೋದರು. ಈ ಕೆಟ್ಟ ಸುದ್ದಿಯನ್ನು ತಂದ ತಂತಿ ಅಮಳನೇರಿಯಲ್ಲಿ ಸಾನೆಯವರ ಗೆಳೆಯ ಬಾಕರೇ ಶಾಸ್ತ್ರೀಗಳ ಕೈ ಸೇರಿತು. ಅದನ್ನು ನೇರವಾಗಿ ಸಾನೆ ಗುರೂಜಿಗೆ ಹೇಗೆ ತಿಳಿಸಲಿ ಎಂದು ಯೋಚಿಸುತ್ತ ಬಾಕರೇ ಶಾಸ್ತ್ರೀಗಳು, “ಸಾನೆಯವರೇ, ನಿಮ್ಮ ಹಿರಿಯರು ಆಕಸ್ಮಿಕವಾಗಿ ತೀರಿಕೊಂಡರೆ ನಿಮಗೇನು ಎನಿಸುವುದು?” ಎಂದು ಕೇಳಿದರು.

ಸುದ್ದಿ ತಿಳಿದಾಗ ಸಾನೆ ಗುರೂಜಿ ಮೌನಿಗಳಾಗಿ ಅಂತರ್ಮುಖಿಗಳಾದರು. “ನಾನು ಲಗ್ನ ಮಾಡಿಕೊಳ್ಳದಿದ್ದರೂ ನಿಮ್ಮನ್ನು ಸುಖದಲ್ಲಿಡುವೆನು. ನೀವು ನನ್ನ ಹತ್ತಿರ ಬಂದು ಇದ್ದು ಇಡಿ” ಎಂದು ತಂದೆಗೆ ಹೇಳಿದ ಮಾತು ಜ್ಞಾಪಕವಾಯಿತು.

ತಂದೆಯ ಸಾವಿನ ಸುದ್ಧಿ ಸಾನೆ ಗುರೂಜಿಯನ್ನು ಘಾಸಿ ಮಾಡಿತು. ತನ್ನ ಜೀವನದಲ್ಲಿಯ ಇನ್ನೊಂದು ಘಟ್ಟ ಮುಗಿಯಿತು ಎಂದು ನಿಟ್ಟುಸಿರನ್ನು ಬಿಟ್ಟರು.

ಸಾವು ತಾಯಿಯ ಮಡಿಲು

“ಸಾವು ಎಂದರೇನು?” ಎನ್ನುವುದನ್ನು ಈ ವಯಸ್ಸಿನಲ್ಲಿಯೇ ಅವರು ದೀರ್ಘ ವಿಚಾರ ಮಾಡಿರಬೇಕು. ಸಾವಿನ ಬಗೆಗೇ ಅವರು ಒಂದು ನಿರ್ಧಾರಕ್ಕೆ ಬಂದಿರಬೇಕು. ಸಾವಿನ ಬಗೆಗಿನ ತಮ್ಮ ಅಭಿಪ್ರಾಯಗಳನ್ನು ಸಾನೆ ಗುರೂಜಿ ತಮ್ಮ ಒಂದು ಪ್ರಬಂಧದಲ್ಲಿ ಹೃದಯಂಗಮವಾಗಿ ರೂಪಿಸಿದ್ದಾರೆ. ಅದರ ಸಾರ ಹೀಗಿದೆ:

“ಮರಣವೆಂದರೆ ತಾಯಿಯ ಪಕ್ಕದಲ್ಲಿ ಸೇರಿಕೊಂಡು ನಿದ್ರಿಸುವುದು. ದಿನವೆಲ್ಲ ಮಗು ಆಡುತ್ತಾನೆ, ಬೀಳುತ್ತಾನೆ, ಏಳುತ್ತಾನೆ, ದಣಿಯುತ್ತಾನೆ. ರಾತ್ರಿಯಾದೊಡನೇ ತಾಯಿ ಮಗುವನ್ನು ಮೆಲ್ಲನೆ ಎತ್ತಿಕೊಂಡು ಬಂದು, ಹಾಗೆಯೇ ತನ್ನ ಮಗ್ಗುಲಲ್ಲಿ ಮಲಗಿಸಿಕೊಳ್ಳುತ್ತಾಳೆ. ರಾತ್ರಿಯಿಡೀ ತಾಯಿಯ ಮಗ್ಗಲಲ್ಲಿ ಮಲಗಿದ ಮಗು ಮರುದಿನ ಬೆಳಿಗ್ಗೆ ಎದ್ದು ಹೆಚ್ಚಿನ ಉತ್ಸಾಹದಿಂದ ಹೊಸದಾಗಿ ಆಟವಾಡುತ್ತಾನೆ. ಮನುಷ್ಯ ನಿಸರ್ಗ ತಾಯಿಯ ಮಗು. ಜೀವನವೆಂದರೆ ಹಗಲು; ಸಾವು ಸಂಧ್ಯಾಕಾಲದಲ್ಲಿ ಮನುಷ್ಯ ನಿಸರ್ಗ ತಾಯಿಯ ಮಡಿಲನ್ನು ಸೇರಲೇಬೇಕು”.

“ಮರುದಿನ ಆಟ-ಅದೇ ಪುನರ್ಜನ್ಮ”.

“ಮರಣವಿಲ್ಲದಿದ್ದರೆ ಈ ಜಗತ್ತಿನ ಸ್ಥಿತಿ ಆರುಣಮಯವಾಗಿ ಬಿಡುತ್ತಿತ್ತು. ಮರಣವಿದೆಯೆಂದೇ ಜಗತ್ತಿನಲ್ಲಿ ಪ್ರೇಮವಿದೆ. ಯಾರಿಗೂ ಸಾವೇ ಇಲ್ಲದಿದ್ದರೆ ಎಂತಹ ಎಂತಹ ಅನಾಹುತವಾಗುತ್ತಿತ್ತು! ಎಲ್ಲರೂ ಒಂದಿಲ್ಲೊಂದು ದಿನ ಸಾಯಲೇಬೇಕೆನ್ನುವ ಅರಿವಿನಿಂದ ಮನುಷ್ಯ ಪ್ರೇಮದಿಂದ ನಡೆದುಕೊಳ್ಳುತ್ತಾನೆ. ಜೀವಂತವಿರುವಾಗ ಸಾಯಲು ಕಲಿತವನೇ ಚಿರಂಜೀವಿ.

ಹರಿಜನರ ದೇವಾಲಯ ಪ್ರವೇಶಕ್ಕಾಗಿ ಸಾನೆ ಗುರೂಜಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು

“ಜರ್ಮನ್ ದೇಶದ ದಂತ ಕಥೆಗಳಲ್ಲಿ ಒಂದು ದಾರುಣವಾದ ಕಥೆ ಇದೆ. ಒಬ್ಬ ರಾಕ್ಷಸನನ್ನು ಒಬ್ಬ ದೇವತೆಯು “ನೀನೆಂದೂ ಸಾಯದಿರು” ಎಂದು ಶಪಿಸುತ್ತಾಳೆ. ನಮ್ಮ ದೇಶದಲ್ಲಿಯ ರಕ್ಕಸರು ಇಂತಹ ಶಾಪವನ್ನು ಸ್ವಾಗತಿಸುತ್ತಿದ್ದರು. ಎಂದೆಂದಿಗೂ ಸಾವೇ ಮುಟ್ಟದ ನಮ್ಮಷ್ಟು ಭಾಗ್ಯಶಾಲಿಗಳಾರು ಎಂದು ಹೆಮ್ಮೆ ಪಡುತ್ತಿದ್ದರೇನೋ!

“ಆದರೆ ಆ ಶಾಪ ಕೇಳಿದ ಜರ್ಮನ್ ರಾಕ್ಷಸನಿಗೆ ತುಂಬ ದುಃಖವಾಯಿತು. ತನ್ನ ಜೀವನದಲ್ಲಿ ಮಾಡಿದ ಅನೇಕ ಅಕೃತ್ಯಗಳನ್ನು ನೆನೆಸಿಕೊಂಡ. ಆತ ತನ್ನ ಜೀವನಕ್ಕೆ ಬೇಸತ್ತ. ಸಾಯಬೇಕೆಂದು ಉನ್ನತವಾದ ಪರ್ವತದಿಂದ ಕೆಳಕ್ಕೆ ಧುಮುಕಿದ. ಆದರೆ ಚೆಂಡಿನಂತೆ ಪುಟಿದು ಮೇಲಕ್ಕೆ ಬಂದ. ಬೆಂಕಿಯಲ್ಲಿ ಬಿದ್ದರೂ ಸಾಯಲಿಲ್ಲ, ನೀರಿನಲ್ಲಿ ಬಿದ್ದರೂ ಮುಳುಗಲಿಲ್ಲ. ವಿಷವೂ ಆತನ ಪಾಲಿಗೆ ಅಮೃತವಾಗಿಬಿಟ್ಟಿತು. ಹೀಗಾಗಿ ಆತ ತನ್ನ ದೇಹದ ಮೇಲೆ ರೊಚ್ಚಿಗೆದ್ದ. ಆದರೇನು? ಸಾವಿನ ಸೌಭಾಗ್ಯ ಆತನಿಗೆ ದೊರೆಯಲಿಲ್ಲ. ಅವನ ಜೀವನ ಹೆಚ್ಚು ಹೆಚ್ಚು ದುಃಖಮಯವೇ ಆಗುತ್ತ ಹೋಯಿತು.

“ಆದುದರಿಂದ ಸಾವನ್ನು ಹುಟ್ಟಿಸಿದ ಪರಮಾತ್ಮನ ಉಪಕಾರವನ್ನು ಎಷ್ಟು ಸ್ಮರಿಸಿದರೂ ಕಡಿಮೆಯೇ. ಸಾವು ಅಂದರೆ ಪುನರ್ಜನ್ಮ”.

“ಭಾರತೀಯ ಸಂಸ್ಕೃತಿಯಲ್ಲಿ ಮರಣವು ಒಂದು ಅಮರವಾದ ಆಶಾವಾದವಾಗಿ ನಿಂತಿದೆ. ನಮ್ಮ ಸಂಸ್ಕೃತಿಯಷ್ಟು ಆಶಾವಾದಿ ಸಂಸ್ಕೃತಿಯು ಬೇರೊಂದಿಲ್ಲ. ಈ ಜೀವನದ ಕೊಳೆಯನ್ನು ಕಳೆಯಲು ಮರಣವೆಂಬ ಅಮೃತವನ್ನು ಕುಡಿಯಲೇಬೇಕು”.

ಸಾವಿನ ಬಗೆಗೆ ಸಾನೆ ಗುರೂಜಿಯವರ ಅಭಿಪ್ರಾಯ ಎಷ್ಟೊಂದು ವಿಚಾರಪೂರ್ಣವಾಗಿದೆ!

ಮುಂದೆ ಸಾನೆ ಗುರೂಜಿಯವರ ಮನಸ್ಸು ಪೂರ್ತಿಯಾಗಿ ತತ್ವಜ್ಞಾದ ಕಡೆಗೆ ಒಲಿಯಿತು.

ಗುರೂಜಿ ತುಂಬಾ ಭಾವನಾತ್ಮಕ ಜೀವಿಗಳಾದರು. ಅವರ ಜೀವನವೇ ವ್ರತವಾಯಿತು. ಉಡಿಗೆ-ತೊಡಿಗೆ ಬದಲಾದವು. ಖಾದಿ ಅವರ ಮೈಯನ್ನಲಂಕರಿಸಿತು.

ತತ್ವಜ್ಞಾನ ಮಂದಿರದಲ್ಲಿ ಊಟಕ್ಕೆ ಕುಳಿತುಕೊಳ್ಳುವಾಗ ಕಸ ಹೊಡೆಯುವವನ ಮಗ ರೂಪಾಲ್ಯಾ ಎಂಬುವವನನ್ನು ತಮ್ಮ ಜೊತೆ ಪಂಕ್ತಿಯಲ್ಲಿ ಕೂಡಿಸಿಕೊಳ್ಳತೊಡಗಿದರು. ಅನೇಕರು ಇದನ್ನು ವಿರೋಧಿಸಿದರು. ಆದರೆ ಅವರು ಲೆಕ್ಕಿಸಲಿಲ್ಲ. ಜಗತ್ತಿನ ಹಲವಾರು ವೈಷಮ್ಯಗಳನ್ನು ಕಂಡು, ಅವುಗಳನ್ನು ನೀಗಿಸಲು ತಮಗೆ ಸಾಧ್ಯವಾಗದು ಎಂದನಿಸಿದಾ, ಇಂತಹ ಬದುಕಿಗಿಂತಲೂ ಸಾವೇ ಮೇಲು ಎಂದು ಹಲವಾರು ಸಲ ಆತ್ಮಹತ್ಯೆಗಾಗಿಯೂ ಪ್ರಯತ್ನಿಸಿದ್ದರು. ಆದರೂ ಹೊಣೆಯನ್ನು ತಪ್ಪಿಸಿಕೊಂಡು ಓಡಬಾರದು ಎಂದು ಪುನಃ ತನ್ನ ಸಾವಿನ ನಿರ್ಧಾರವನ್ನು ಬದಲಿಸುತ್ತಿದ್ದರು.

ಶ್ಯಾಮ ಸಾನೆ ಗುರೂಜಿ ಆದ

ಅಮಳನೇರದಲ್ಲಿ ಗೋಖಳೆ, ಕುವಲಯಾನಂದ ಗುಣೆ, ಸರದೇಸಾಯಿ, ಜಾಂಭೇಕರ ಮುಂತಾದ ಮಹಾತ್ಯಾಗಿಗಳು “ಪ್ರತಾಪ ಹೈಸ್ಕೂಲ್” ಎಂಬ ಶಾಲೆಯನ್ನು ಸ್ಥಾಪಿಸಿದ್ದರು. ಪಾಂಡುರಂಗ ಸದಾಶಿವ ಸಾನೆ ಈ ಶಾಲೆಯಲ್ಲಿ ಶಿಕ್ಷಕರಾಗಿ ನೇಮಕಗೊಂಡರು. ಅಲ್ಲಿಯ ವಿದ್ಯಾರ್ಥಿನಿಲಯದ ಕೆಲವೂ ಇವರ ಮೇಲೆಯೇ ಬಿದ್ದಿತು. ಇಲ್ಲಿಂದಲೇ ಪಾಂಡುರಂಗ ಸದಾಶಿವ ಸಾನೆಯವರು “ಸಾನೆ ಗುರೂಜಿ” ಆದರು.

ಸಾನೆ ಗುರೂಜಿ ಶಿಷ್ಯವೃಂದದಲ್ಲಿ ಬಹಳ ಪ್ರೀತಿ ಗೌರವಗಳನ್ನು ಪಡೆದರು. ವಿದ್ಯಾರ್ಥಿ ನಿಲಯದಲ್ಲಿ ಯಾವುದೇ ಹುಡುಗ ಜ್ವರ ಪೀಡಿತನಾದರೆ ಆತನ ಶುಶ್ರೂಚೆಯನ್ನು ಸ್ವಯಂ ಸಾನೆ ಗುರೂಜಿಯೇ ಮಾಡತೊಡಗಿದರು. ಒಮ್ಮೆ ನಿಲಯದ ಆಳು ಜ್ವರಪೀಡಿತನಾದನು. ಸಾನೆ ಗುರಜಿ ಅವನನ್ನು ತಮ್ಮ ಮಂಚದ ಮೇಲೆ ಮಲಗಿಸಿ ಅವನ ಶುಶ್ರೂಷೆಯನ್ನು ಮಾಡಿದರು. ಅವನು ಸತ್ತಾಗ, ತಾವೇ ಸ್ಮಶಾನದಲ್ಲಿ ಅಂತ್ಯಕ್ರಿಯೆಗಳನ್ನು ಮಾಡಿದರು. ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಲಯದ ಬಾಗಿಲ ಬಳಿಯೇ ಮಲವಿಸರ್ಜನೆ ಮಾಡಿಬಿಡುತ್ತಿದ್ದ. ಸಾನೆ ಗುರೂಜಿ ತಾವೇ ಸ್ವಯಂ ಅದನ್ನು ಬಳಿದು ಹೊರಚೆಲ್ಲತೊಡಗಿದರು. ಹೀಗೆ ಎರಡು ಮೂರು ದಿನ ನಡೆಯಿತು. ಮುಂದೆ ಆ ವಿದ್ಯಾರ್ಥಿ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿಕೊಂಡನು.

ಶಿಷ್ಯನಿಗೆ ತಾವೇ ಶುಶ್ರೂಷೆ ಮಾಡಿದರು

ವಿದ್ಯಾರ್ಥಿ ನಿಲಯದಿಂದ ಸಾನೆ ಗುರೂಜಿ “ವಿದ್ಯಾರ್ಥಿ” ಎನ್ನುವ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ಮಾಸಪತ್ರಿಕೆಯ ಮುಖಾಂತರ ಅವರ ಸಾಹಿತ್ಯ ಗಂಗಾಜಲದಂತೆ ಹರಿಯತೊಡಗಿತು. ಸಾನೆ ಗುರೂಜಿಯವರ ಸುಂದರ ಕಥೆಗಳು ಮಹಾರಾಷ್ಟ್ರದ ಜನರ ಮನಸ್ಸನ್ನು ಸೆರೆ ಹಿಡಿದರು. “ವಿದ್ಯಾರ್ಥಿ” ಮಾಸಪತ್ರಿಕೆ ತುಂಬಾ ಜನಪ್ರಿಯವಾಗತೊಡಗಿತು.

ಸೆರೆಮನೆಯೇ ಸಾಹಿತ್ಯ ಸರಸ್ವತಿಯ ಮಂದಿರ

೧೯೩೦ ರಲ್ಲಿ ಮಹಾತ್ಮ ಗಾಂಧೀಜಿ ದಂಡಿಯಾತ್ರೆಗೆ ಹೊರಟರು. ಅವರ ಈ ಯಾತ್ರಯಿಂದ ಇಡೀ ದೇಶವೇ ಕಾಯತೊಡಗಿತು. ಇಂತಹ ಸಮಯದಲ್ಲಿ ತಾವು ಸುಮ್ಮನೆ ಕುಳಿತು ಪ್ರಯೋಜನವಿಲ್ಲವೆಂದು ಸಾನೇ ಗುರೂಜಿ ಸ್ವಾತಂತ್ಯ್ರದ ಚಳವಳಿಯಲ್ಲಿ ಧುಮುಕಲು ನಿರ್ಧರಿಸಿದರು. ತಮ್ಮ “ವಿದ್ಯಾರ್ಥಿ” ಮಾಸಪತ್ರಿಕೆಯ ಕೊನೆಯ ಸಂಚಿಕೆಯ ಕೊನೆಯ ಪುಟವನ್ನು ಕೆಂಪು ಅಕ್ಷರಗಳಲ್ಲಿ ಮುದ್ರಿಸಿ ತಮ್ಮ ಮನೋದಯವನ್ನು ಪ್ರಕಟಿಸಿದರು.

“ನಾವು ಸ್ವಾತಂತ್ಯ್ರದ ಸೈನಿಕರು, ನಾವು ನಿರ್ಭಯರು, ನಿರಂಕುಶರು. ಈ ರಾಕ್ಷಸೀ ಸರ್ಕಾರವನ್ನು ಎಂದೂ ಜೀವಂತವಿಡುವುದಿಲ್ಲ” ಎನ್ನುವ ಮಂತ್ರದೊಂದಿಗೆ ದಶದಿಕ್ಕುಗಳನ್ನು ತಿರುಗಿ ಕ್ರಾಂತಿ ವಾತಾವರಣವನ್ನು ನಿರ್ಮಿಸತೊಡಗಿದರು. ಬ್ರಿಟಿಷ್ ಸರ್ಕಾರದ ಪೊಲೀಸರು ಇವರ ಬೆನ್ನು ಹತ್ತಿದರು. ಕೊನೆಗೆ ಒಂದು ಭಾಷಣ ಮಾಡುತ್ತಿದ್ದಾಗ ಗುರೂಜಿಯವರನ್ನು ಬಂಧಿಸಿದರು. ಜನ ಸ್ತೋಮವೆಲ್ಲ ಪೊಲೀಸರ ಹಿಂದೆ ನುಗ್ಗಿದರು. ಪೊಲೀಸ್ ಇನ್ಸ್‌ಪೆಕ್ಟರರು ಬಹು ಬುದ್ಧಿವಂತಿಕೆಯಿಂದ ಸಾನೆ ಗುರೂಜಿಯವರನ್ನು ಬೇರೆ ಕಡೆಯಿಂದ ಸಾಗಿಸಿದರು. ಮುಂದು ಅವರ ವಿಚಾರಣೆ ನಡೆದು ಹದಿನೈದು ತಿಂಗಳು ಕಠಿಣ ಶಿಕ್ಷೆ, ೨೦೦ ರೂ. ದಂಡಮ ದಂಡ ಕೊಡದಿದ್ದರೆ ಮತ್ತೆ ಮೂರು ತಿಂಗಳು ಶಿಕ್ಷೆ ವಿಧಿಸಲಾಯಿತು. ಆಗ ರಾಜಕೀಯ ಬಂಧಿತರನ್ನು “ಎ”, “ಬಿ, “ಸಿ” ವರ್ಗಗಳವರು ಎಂದು ಸರ್ಕಾರ ವಿಂಗಡಿಸುತ್ತಿತ್ತು. “ಎ” ವರ್ಗದವರಿಗೆ “ಬಿ” ವರ್ಗದವರಿಗಿಂತ ಹೆಚ್ಚು ಸೌಲಭ್ಯಗಳು. “ಬಿ” ವರ್ಗದವರಿಗೆ “ಸಿ” ವರ್ಗದವರಿಗಿಂತ ಹೆಚ್ಚು ಸೌಲಭ್ಯಗಳು .

ನ್ಯಾಯಾಲಯ ಸಾನೆ ಗುರೂಜಿಯನ್ನು “ಬಿ” ವರ್ಗದ ಖೈದಿ ಎಂದಿತು. “ಒಲ್ಲೆ ನಾನೂ ಸಾಮಾನ್ಯ ಹೋರಾಟಗಾರನಂತೆ “ಸಿ” ವರ್ಗದಲ್ಲಿರುತ್ತೇನೆ” ಎಂದರು ಗುರೂಜಿ.

ಸಾನೆ ಗುರೂಜಿ ಧುಳೆ ಸೆರೆಮನೆಯನ್ನು ಪ್ರವೇಶಿಸಿದರು. ಮುಂದೆ ಕೆಲವೇ ದಿನಗಳಲ್ಲಿ ಸಾನೆ ಗುರೂಜಿಯನ್ನು ತಿರುಚಿನಾಪಳ್ಳಿ ಸೆರೆಮನೆಗೆ ವರ್ಗಾಯಿಸಿದರು. ಈ ಸೆರೆಮನೆಯಲ್ಲಿಯೇ ಸಾನೆ ಗುರೂಜಿಗೆ ಸಾಹಿತ್ಯ ನಿರ್ಮಾದ ಕಮ್ಮಟ ಶಾಲೆಯಾಗಿ ಪರಿಣಮಿಸಿತು. ಇಲ್ಲಿಯೇ ಗುರೂಜಿ “ಅಂತರ ಭಾರತಿ” ಯೋಜನೆಯನ್ನು ರೂಪಿಸಿದರು. ಈ ಸೆರೆಮನೆಯಲ್ಲಿಯೇ ಅವರು ತಮಿಳು ಭಾಷೆಯನ್ನು ಕಲಿತು “ಕುರುಳ್” ಎನ್ನುವ ತಮಿಳು ಗ್ರಂಥವನ್ನು ಮರಾಠಿಗೆ ಅನುವಾದ ಮಾಡಿದರು. ಆಚಾರ್ಯ ಭಾಗವತರೂ ಇದೇ ಜೈಲಿನಲ್ಲಿದ್ದರು. ಗುರೂಜಿಯವರಿಗೆ ಅವರ ಆತ್ಮೀಯ ಪರಿಚಯವಾಯಿತು. ಗುರೂಜಿಯವರು ಈ ಜೈಲಿನಲ್ಲಿಯೇ “ರಾಮಾಚಾ ಶೇಲಾ”, ತೇ ಆಪಲೇ ಘರ್, “ಖರೀ ಸಂಸ್ಕೃತಿ” ಮುಂತಾದ ಪ್ರಸಿದ್ಧ ಗ್ರಂಥಗಳನ್ನು ಬರೆದರು. ಗುರೂಜಿಯ ಸಾಹಿತ್ಯ ಸೆರೆಮನೆಯಲ್ಲಿ ತಡೆಯಲ್ಲದೆ ಹೊರ ಬರತೊಡಗಿತು. ೧೯೩೧ ರ ಮಾರ್ಚ್‌ ತಿಂಗಳಲ್ಲಿ ಗುರೂಜಿಯ ಬಿಡುಗಡೆಯಾಯಿತು.

ಇದೇ ಸಮಯದಲ್ಲಿ ಕ್ರಾಂತಿವೀರ ಭಗತ್‌ಸಿಂಗ್‌ನನ್ನು ಸರ್ಕಾರ ಗಲ್ಲಿಗೇರಿಸಿತು. ಆ ಸುದ್ದಿ ಸಾನೆ ಗುರೂಜಿಯ ಕಿವಿಯನ್ನು ತಲುಪಿತು. ಅಮಳನೇರದಲ್ಲಿ ಒಂದು ಸಭೆಯನ್ನು ಕೂಡಿಸಿ ಸಾನೆ ಗುರೂಜಿ ಬ್ರಿಟಿಷರ ಅತ್ಯಾಚಾರವನ್ನು ಸ್ಪಷ್ಟವಾಗಿ ಖಂಡಿಸಿದರು.

ಸಾನೆ ಗುರೂಜಿ ಮತ್ತೆ ವಿಧಾಯಕ ಕಾರ್ಯವನ್ನು ಪ್ರಾರಂಭಿಸಿದರು. ಗಾಂಧೀಜಿ ಕಲಿಸಿದ ರಾಟೆಯ ಮಹತ್ವವನ್ನು ಅರಿತುಕೊಂಡ ಗುರೂಜಿ ಅಮಳನೇರ ತಾಲೂಕಿನಲ್ಲಿ ಹಳ್ಳಿಹಳ್ಳಿಯಲ್ಲಿ ಪಾದಯಾತ್ರೆಯನ್ನು ಕೈಗೊಂಡು ರಾಟೆಯ ಮಂತ್ರವನ್ನು ಘೋಷಿಸತೊಡಗಿದರು. ಅಮಳನೇರ ತಾಳೂಕಿನಲ್ಲಿಯ ಡಾಂಗರೀ ಎಂಬ ಊರಿನಲ್ಲಿ ಆಶ್ರಮವನ್ನು ಸ್ಥಾಪಿಸಿ, ಅಲ್ಲಿ ಋಷಿ ಜೀವನವನ್ನು ಪ್ರಾರಂಭಿಸಿದರು.

ಮಣ್ಣಿನ ಪಾತ್ರೆಯಲ್ಲಿ ಊಟ, ಹಳ್ಳಿಹಳ್ಳಿಯ ತಿರುಗಾಟ. ಹೆಂಡ ಕುಡಿಯುವುದರಿಂದ ಆಗುವ ಕೆಡುಕು, ಬೇಸಾಯದ ರೀತಿಯನ್ನು ಉತ್ತಮಗೊಳಿಸುವುದು ಇಂತಹ ವಿಷಯಗಳ ಮೇಲೆ ಭಾಷಣ. ಹಳ್ಳಿಯವರಿಗೆ ಸ್ವಾರಸ್ಯವಾಗಲಿ, ವಿಷಯ ಮನಸ್ಸಿಗೆ ಹಿಡಿಸಲಿ ಎಂದು ಮಾಯಾದೀಪದ ಚಿತ್ರಗಳನ್ನು ತೋರಿಸುವರು. ಹೀಗೆ ಹಳ್ಳಿಗರಲ್ಲಿ ಜಾಗೃತಿಯನ್ನುಂಟು ಮಾಡಲು ಶ್ರಮಿಸ ತೊಡಗಿದರು.

೧೯೩೨ನೆಯ ಇಸವಿಯ ಪ್ರಾರಂಭದಲ್ಲಿ ಮುಂಬಯಿಯಲ್ಲಿ ಬ್ರಿಟಿಷ್ ಸರ್ಕಾರ ಮಹಾತ್ಮಾ ಗಾಂಧೀಜಿಯನ್ನು ಬಂಧಿಸಿತು. ಸೆರೆಮನೆಗೆ ಕಳಿಸಿತು. ಭಾರತದ ಎಲ್ಲ ಕಡೆಗೆ ಚಳವಳಿ, ಆಂದೋಲನಗಳು ಪ್ರಾರಂಭವಾದವು. ಎಲ್ಲ ಕಡೆಯಲ್ಲಿ ಸಾವಿರಾರು ಜನರನ್ನು ಬ್ರಿಟಿಷ್ ಸರ್ಕಾರ ಬಂಧೀಸತೊಡಗಿತು.

ಅಮಳನೇರದ ಸಾರ್ವಜನಿಕ ಸಭೆಯಲ್ಲಿ ಸಾನೆ ಗುರೂಜಿಯು ಭಾಷಣ ಮಾಡಿ, ಬ್ರಿಟಿಷ್ ಸರ್ಕಾರದ ಹೀನಕೃತ್ಯಗಳನ್ನು ಕಟುವಾಗಿ ಟೀಕಿಸಿದರು.

ಮತ್ತೆ ಗುರೂಜಿಯವರ ಬಂಧನವಾಯಿತು. ಈ ಸಲ ಅವರಿಗೆ ಎರಡು ವರ್ಷಗಳ ಸಶ್ರಮ ಶಿಕ್ಷೆ. ಧುಳೆ ಜೈಲಿನಲ್ಲಿ ಇವರನ್ನು “ಸಿ” ವರ್ಗದಲ್ಲಿರಿಸಲಾಯಿತು. ಇಲ್ಲಿ ಅವರಿಗೆ ಹಿಟ್ಟನ್ನು ಬೀಸುವ ಕೆಲಸವನ್ನು ಕೊಡಲಾಯಿತು. ಬೀಸುವ ಕಲ್ಲಿನ ಮೇಲೆ ಬೀಸುತ್ತ ಕುಳಿತಾಗಲೇ ಕವನಗಳನ್ನು ಕಟ್ಟತೊಡಗಿದರು. ಇನ್ನುಳಿದ ವೇಳೆಯಲ್ಲಿ ಕಥೆಗಳನ್ನು ಬರೆಯುತ್ತಿದ್ದರು.

ವಿನೋಬಾ ಭಾವೆಯವರೂ ಇದೇ ಸೆರೆಮನೆಯಲ್ಲಿದ್ದರು. ಗುರೂಜಿಗೆ ವಿನೋಬಾರ ಬಗೆಗೆ ತುಂಬಾ ಭಕ್ತಿ ಇದ್ದಿತು. ವಿನೋಬಾ ತಮ್ಮ “ಗೀತಾ ಪ್ರವಚನ”ವನ್ನು ಇಲ್ಲಿಯೇ ಬರೆದರು. ವಿನೋಬಾ ಗೀತೆಯ ಮೇಲೆ ಮಾತನಾಡುತ್ತಿದ್ದಂತೆ, ಸಾನೆ ಗುರೂಜಿ ಅದನ್ನು ಬರೆದಿಡುತ್ತಿದ್ದರು. ಅದೇ ಮುಂದೆ “ಗೀತಾ ಪ್ರವಚನ” ಪುಸ್ತಕವಾಗಿ ಪ್ರಕಟವಾಯಿತು.

ಈ ಸೆರೆಮನೆಯ ಅಧಿಕಾರಿಗೂ ಗುರೂಜಿಗೂ ವಿರಸವಾಯಿತು. ಅವರನ್ನು ನಾಸಿಕದ ಸೆರೆಮನೆಗೆ ವರ್ಗಾಯಿಸಿದರು. ಇಲ್ಲಿ ಕೆಲಸದಿನ ಇವರ ಕೈಗೆ ಬೇಡಿಗಳನ್ನು ಹಾಕಿರಿಸಿದರು. ಅನಂತರ ಇವರಿಗೆ ಲೇಖನ ಸಾಮಗ್ರಿಗಳನ್ನು ಒದಗಿಸಲಾಯಿತು. ಮರಾಠಿ ಸಾಹಿತ್ಯದ ಅತ್ಯುತ್ತಮ ಕಾದಂಬರಿ ಎಂದು ಪ್ರಸಿದ್ಧಿಗೊಂಡ “ಶ್ಯಾಮಚಿ ಆಯಿ” ಕಾದಂಬರಿಯನ್ನು ಗುರೂಜಿ ಇಲ್ಲಿಯೇ ಬರೆದರು. ಇದಲ್ಲದೆ ಹಲವು ಪುಸ್ತಕಗಳನ್ನು ಬರೆದರು.

ಜೈಲಿನಿಂದ ಹೊರಬಂದ ನಂತರ ಪುನಃ ೧೯೩೪ ರಲ್ಲಿ ವೈಯಕ್ತಿಕ ಸತ್ಯಾಗ್ರಹ ಮಾಡಿದರು. ಮತ್ತೆ ನಾಲ್ಕು ತಿಂಗಳ ಸೆರೆಮನೆಯ ಶಿಕ್ಷೆ. ಧುಳೆ ಜೈಲಿಗೆ ಬಂದರು. ಈ ಅವಧಿಯಲ್ಲಿ ಅವರು “ಕಲೆ ಎಂದರೆ ಏನು? “ಜಗತ್ತಿನ ಇತಿಹಾಸ” ಗ್ರಂಥಗಳ ಅನುವಾದವನ್ನುಸ ಮಾಡಿದರು.

ರೈತರ ಮುಂದಾಳು

೧೯೩೭ ರಲ್ಲಿ ನಡೆದ ಚುನಾವಣೆಗಳಿಂದಾಗಿ ಕಾಂಗ್ರೆಸ್ ದೇಶವು ಹಲವು ಪ್ರಾಂತಗಳಲ್ಲಿ ಸರ್ಕಾರವನ್ನು ವಹಿಸಿಕೊಂಡಿತು. ಆ ವರೆಗೆ ಗುರೂಜಿ ಬ್ರಿಟಿಷ್ ಸರ್ಕಾರದ ವಿರುದ್ಧ ಸತ್ಯಾಗ್ರಹ ಮಾಡಿದ್ದರು. ಕಾಂಗ್ರೆಸ್ಸ ಸರ್ಕಾರವಿದ್ದಾಗಲೇ ಸಾನೆ ಗುರೂಜಿ ಒಂದು ಸತ್ಯಾಗ್ರಹವನ್ನು ಮಾಡುವ ವಿಚಿತ್ರ ಪ್ರಸಂಗ ಬಂದಿತು.

೧೯೩೮ ರಲ್ಲಿ ಮಹಾರಾಷ್ಟ್ರದ ಖಾನ ದೇಶದಲ್ಲಿ ಅತಿ ವೃಷ್ಟಿಯಿಂದಾಗಿ ಪೈರುಗಳೆಲ್ಲ ನಾಶಹೊಂದಿದವು. ಇಡೀ ಜಿಲ್ಲೆಯಲ್ಲಿ ಗುರೂಜಿ ಸಂಚರಿಸಿ, ಈ ಜಿಲ್ಲೆಯ ರೈತರ ತೆರಿಗೆಯನ್ನು ಆ ವರ್ಷ ಬಿಟ್ಟುಬಿಡಬೇಕೆಂದು ಮುಂಬಯಿ ಸರ್ಕಾರಕ್ಕೆ ಪ್ರಾರ್ಥನೆಯನ್ನು ಸಲ್ಲಿಸಿದರು. ಆದರೆ ಸರ್ಕಾರ ಈ ಪ್ರಾರ್ಥನೆಯನ್ನು ಒಪ್ಪಲಿಲ್ಲ. ಆಗ ಗುರೂಜಿ ಜಳಗಾಂವ್‌ನಲ್ಲಿ ಐವತ್ತು ಸಾವಿರ ರೈತರ ಸಭೆಯನ್ನು ಸೇರಿಸಿದರು. ಅವರ ನೇತೃತ್ವವನ್ನು ವಹಿಸಿ, ಮುಂಬಯಿಗೆ ಮೆರವಣಿಗೆ ಹೊರಟರು. ಗಾಂಧೀಜಿಗೂ ಈ ಸುದ್ಧಿ ತಿಳಿಯಿತು. ಆಗ ಹಲವು ಮುಖಂಡರು ಮಧ್ಯೆ ಬಂದು ಗುರೂಜಿಯ ಈ ಮಹಾಯಾತ್ರೆಯನ್ನು ನಿಲ್ಲಿಸಿದರು.

ಗುರೂಜಿ “ಕಾಂಗ್ರೆಸ್” ಎಂಬ ಪತ್ರಿಕೆಯನ್ನು ಹೊರಡಿಸುತ್ತಿದ್ದರು. ಆ ಪತ್ರಿಕೆಯ ಮೇಲೆ ಬ್ರಿಟಿಷ್ ಸರ್ಕಾರದ ಕೋಪದ ನೋಟ ಬಿದ್ದುದರಿಂದ ಅದು ನಿಂತು ಹೋಯಿತು.

ಭಾರತ ಬಿಟ್ಟು ತೊಲಗಿಚಳವಳಿ

೧೯೪೨ ರ ಆಗಸ್ಟ್‌ ೯ ರಂದು ಮಹಾತ್ಮ ಗಾಂಧೀಜಿ ಚಳವಳಿಯನ್ನು ಪ್ರಾರಂಭಿಸಿದರು. “ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ”- ಈ ಘೋಷಣೆಯಾದಾಗ, ಸಾನೆ ಗುರೂಜಿ ಸೆರೆಮನೆಯಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದರು. ಅವರ ಶಿಕ್ಷೆಯ ಅವಧಿ ೧೯೪೨ ರ ಆಗಸ್ಟ್‌ ಹತ್ತರಂದು ಮುಗಿಯಿತು. ಸಾನೆ ಗುರೂಜಿಯನ್ನು ಬಿಡುಗಡೆ ಮಾಡಲಾಯಿತು. ಬಿಡುಗಡೆ ಆದದ್ದೇ ತಡ, ಸಾನೆ ಗುರೂಜಿ ಕಣ್ಮರೆಯಾದರು. ಪೊಲೀಸರ ಕಣ್ಣಿಗೆ ಮಣ್ಣನ್ನು ಎರಚಿ, ಅವರ ಕೈಗೆ ಸಿಕ್ಕದೆ ಕ್ರಾಂತಿಕಾರಕ ಬರಹಗಳನ್ನು ಪ್ರಕಟಿಸಿ ಮಹಾರಾಷ್ಟ್ರದಲ್ಲೆಲ್ಲ ಜನಜಾಗೃತಿಯನ್ನು ಮಾಡತೊಡಗಿದರು. ಹೀಗೆ ಆರು ತಿಂಗಳ ಕಾಲ ನಡೆಯಿತು. ಆದರೆ ೧೯೪೩ನೇ ಇಸವಿ ಏಪ್ರಿಲ್ ತಿಂಗಳಲ್ಲಿ ಸಾನೆ ಗುರೂಜಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಸೆರೆಮನೆಯನ್ನು ಸೇರಬೇಕಾಯಿತು. ೧೯೪೩ ರಿಂದ ೧೯೪೫ರ ವರೆಗೆ ಯರವಾಡಾ, ನಾಸಿಕ ಸೆರೆಮನೆಗಳಲ್ಲಿ ಪುನಃ ಸಾಹಿತ್ಯ ಸೇವೆಯನ್ನು ಪ್ರಾರಂಭಿಸಿದರು.

ಹರಿಜನರಿಗಾಗಿ

ದೇಶ ಸ್ವತಂತ್ರವಾದ ನಂತರ, ಅತ್ಯುನ್ನತ ಶಿಕ್ಷಣ ಪದವಿ ಪಡೆದ, ಅಜೀವ ದೇಶದ ಸ್ವಾತಂತ್ಯ್ರಕ್ಕಾಗಿ ಹೋರಾಡಿದ ಸಾನೆ ಗುರೂಜಿ ಮನಸ್ಸನ್ನು ಮಾಡಿದ್ದರೆ ಸುಲಭವಾಗಿ ಮಂತ್ರಿಗಳಾಗಬಹುದಿತ್ತು. ಆದರೆ ಸಾನೆ ಗುರೂಜಿ ಅತ್ತ ಮನಸ್ಸನ್ನು ಹೊರಳಿಸಲಿಲ್ಲ. ಅಧಿಕಾರವಿಲ್ಲದೆ ಜನಸೇವೆಯೇ ತಮ್ಮ ಗುರಿಯನ್ನಾಗಿಸಿಕೊಂಡರು.

ದೇಶ ಸ್ವಾತಂತ್ರವಾದನಂತರ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಬಂದಿತು. ಸಮಾಜದ ವಿಕಾಸದ ತಮ್ಮ ಕನಸು ಇನ್ನು ನನಸಾಗುವುದು ಎಂದು ಸಾನೆ ಗುರೂಜಿ ತಿಳಿದಿದ್ದರು. ಆದರೆ ಅವರಿಗೆ ಅಪೇಕ್ಷಾಭಂಗದ ದುಃಖವಾಯಿತು.

ಮಹಾರಾಷ್ಟ್ರದಲ್ಲಿ ಪುಂಢರಪುರದ ವಿಠ್ಠಲ ದೇವಾಲಯ ಸುಪ್ರಸಿದ್ಧ ಯಾತ್ರಾಸ್ಥಳ. ಆ ಮಂದಿರದಲ್ಲಿ “ಹರಿಜನ”ರಿಗೆ ಪ್ರವೇಶವಿರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಈ ಅಡ್ಡಿ ಹೋಗುವುದೆಂದು ಸಾನೆ ಗುರೂಜಿ ಆಶಿಸಿದ್ದರು. ಆದರೆ ಸರ್ಕಾರ ಆ ವಿಷಯದತ್ತ ಗಮನ ಕೊಡಲಿಲ್ಲ. ಸಾನೆ ಗುರೂಜಿಯವರು ಮಂದಿರದಲ್ಲಿ “ಹರಿಜನ”ರಿಗೆ ಪ್ರವೇಶ ಸಿಗಲೆಂದು ಅಮರಣ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಅನೇಕರು ಅವರನ್ನು ವಿರೋಧಿಸಿದರು. ಆದರೆ ಅವರು ಲೆಕ್ಕಿಸಲಿಲ್ಲ. ಉಪವಾಸ ಸತ್ಯಾಗ್ರಹ ಗಂಭೀರ ಪರಿಸ್ಥಿತಿಯನ್ನು ಮುಟ್ಟಿದಾಗ, ಸರ್ಕಾರ-ಮಂದಿರ ವ್ಯವಸ್ಥಾಪಕ ಮಂಡಳಿ “ಹರಿಜನ”ರೂ ದೇವಾಲಯಕ್ಕೆ ಬರಬಹುದೆಂದು ಒಪ್ಪಿಕೊಂಡರು. ಸಾನೆ ಗುರೂಜಿಯ ಈ ಸತ್ಯಾಗ್ರಹ ಸಂಪೂರ್ಣವಾಗಿ ಯಶಸ್ವಿಯಾಯಿತು.

೧೯೪೮ ರ ಜನವರಿ ೩೦ ರಂದು ಗಾಂಧೀಜಿಯವರ ಕೊಲೆಯಾಯಿತು. ಇದರಿಂದ ಸಾನೆ ಗುರೂಜಿಯ ಮನಸ್ಸು ಹೇಸಿಕೊಂಡಿತು. ಇಂತಹ ಹೊಲಸು ಪ್ರವೃತ್ತಿಗಳು ನಶಿಸಲಿ ಎಂದು ಇಪ್ಪತ್ತೊಂದು ದಿನಗಳ ಉಪವಾಸವನ್ನು ಮಾಡಿದರು.

ಅಂತರ ಭಾರತಿ

೧೯೪೮ರ ಆಗಸ್ಟ್ ೧೫ ರಂದು “ಸಾಧನಾ” ಎನ್ನುವ ಮರಾಠಿ ಪತ್ರಿಕೆಯನ್ನು ಸಾನೆ ಗುರೂಜಿ ಪ್ರಾರಂಭಿಸಿದರು. ತಿರುಚಿನಾಪಳ್ಳಿಯ ಸೆರೆಮನೆಯಲ್ಲಿದ್ದಾಗಲೇ ಗುರೂಜಿಯವರಿಗೆ “ಅಂತರ ಆರತಿ” ಎಂಬ ಸಂಸ್ಥೆಯನ್ನು ಸ್ಥಾಪಿಸಬೇಕು ಎಂಬ ಯೋಚನೆ ಬಂದಿತ್ತು. “ಅಂತರ ಭಾರತಿ” ಎಂದರೇನು? ಅವರ ಮಾತುಗಳಲ್ಲಿಯೇ ಕೇಳಿ:

“ಈ ವಿಶಾಲವಾದ ಭಾರತ ದೇಶದಲ್ಲಿ ಅನೇಕ ಪ್ರಾಂತಗಳಿವೆ. ದೊಡ್ಡ ಮನೆತನದಲ್ಲಿ ಅನೇಕ ಅಣ್ಣ-ತಮ್ಮಂದಿರು ಇರುವಂತೆ ಈ ವಿಶಾಲ ಭಾರತೀಯ ಮನೆತನದಲ್ಲಿ ಅನೇಕ ಅಣ್ಣ-ತಮ್ಮಂದಿರಿದ್ದಾರೆ. ಇವರೆಲ್ಲ ಸಂಯಮದಿಂದ ನಡೆದುಕೊಳ್ಳಬೇಕು. ಒಂದೇ ಮನೆಯಲ್ಲಿರಬೇಕಾದರೆ ಪ್ರತಿಯೊಬ್ಬರೂ ತನ್ನ ಹಟವನ್ನೇ ನಡೆಸಬಾರದು. ಯುರೋಪಿನಲ್ಲಿ ಅನೇಕ ಚಿಕ್ಕ ಚಿಕ್ಕ ದೇಶಗಳಿವೆ. ಅವು ಪರಸ್ಪರ ದ್ವೇಷಿಸಿ ರಕ್ತಪಾತವನ್ನು ಮಾಡಿವೆ. ಭಾರತದಲ್ಲಿ ಹೀಗಾಗಬಾರದೆಂದು ಇಚ್ಛಿಸಿದಲ್ಲಿ ಭಾರತವು ಎಚ್ಚರಿಕೆಯಿಂದಿರಬೇಕು. ಒಂದೇ ಕುಟುಂಬದಲ್ಲಿರುವವರು ಒಬ್ಬರು ಇನ್ನೊಬ್ಬರ ಸುಖ ದುಃಖವನ್ನು ಮೊದಲು ನೋಡಬೇಕು. ಮೊದಲು “ನಾನಲ್ಲ, ನೀನು” ಎನ್ನುವ ವೃತ್ತಿ ಬೆಳಯಬೇಕು. ಮರಾಠಿಗಳು ಗುಜರಾತಿಗೆ ಅನ್ನಬೇಕು- “ಧನ್ಯ ಗುಜರಾತ್, ಮಹಾತ್ಮರಿಗೆ ಜನ್ಮಕೊಟ್ಟ ನೀನು ಧನ್ಯ.” ಕರ್ನಾಟಕಕ್ಕೆ, “ವಿಜನಗರ ಸಾಮ್ರಾಜ್ಯಕ್ಕೆ ಕಾರಣ ಪುರುಷರಾದ ವಿದ್ಯಾರಣ್ಯರಿಗೆ ಜನ್ಮ ನೀಡಿದ ನೀನು ಧನ್ಯ ಕರ್ನಾಟಕ” ಎನ್ನಬೇಕು. ಹಾಗೆಯೇ ಕರ್ನಾಟಕ-ಗುಜರಾತ್‌ಗಳು, “ಶಿವಾಜಿಗೆ ಜನ್ಮ ನೀಡಿದ ಮಹಾರಾಷ್ಟ್ರ, ನೀನು ಧನ್ಯ” ಎಂದು ಹೇಳಬೇಕು. ಹೀಗೆ ಪರಸ್ಪರರನ್ನು ತಿಳಿದುಕೊಂಡು ಪರಸ್ಪರರನ್ನು ಗೌರವಿಸಬೇಕು. ಪರಸ್ಪರರಿಂದ ಸ್ಫೂರ್ತಿ ಪಡೆಯಬೇಕು. ಇದಕ್ಕೆ ದೊಡ್ಡ ಮನಸ್ಸು ಬೇಕು ಸಂಯಮ ಬೇಕು. ಮುಖ್ಯವಾಗಿ, ಅಹಂಕಾರ ದೂರವಾಗಬೇಕು. ಇದನ್ನು ಸಾಧಿಸುವುದೇ “ಅಂತರ ಭಾರತಿ” ಸಂಸ್ಥೆಯ ಉದ್ದೇಶ.”

“ಅಂತರ ಭಾರತಿ”  ಸಂಸ್ಥೆಯನ್ನು ಗುರೂಜಿ ಪ್ರಾರಂಭ ಮಾಡಿದರು.

ರಾಜಕಾರಣಿಗಳಿಂದ ಸಾಧ್ಯವಾಗದ ಸಾಮಾಜಿಕ ಬದಲಾವಣೆಯನ್ನು ಸಾನೆ ಗುರೂಜಿ ಸಾಧಿಸಿದರು. ಅವರ ತ್ಯಾಗಪೂರ್ಣವಾದ ಜೀವನ ತಮಗೆ ಏನನ್ನೂ ಬಯಸದ ಜನಸೇವೆ, ಅವರ ಅದ್ಭುತ ಸಾಹಿತ್ಯ ಕೃಷಿ ಇವನ್ನು ಒಂದೆಡೆಯಲ್ಲಿ ಕಾಣುವುದು ಸುಲಭ ಸಾಧ್ಯವಾದ ಮಾತಲ್ಲ. ಆದರೆ ಸಾನೆ ಗುರೂಜಿಯಲ್ಲಿ ಇಂತಹ ತ್ರಿವೇಣಿ ಸಂಗಮ ಸಾಧ್ಯವಾಗಿತ್ತು.

ಸತ್ಯವೇ ಗುರು

“ಅಂತರ ಭಾರತಿ” ಯ ಮುಖಾಂತರ ಅವರು ಸಮಸ್ತ ಭಾರತಕ್ಕೆ ಅದರ ಮಹತ್ವವನ್ನು ತೋರಿಸಿಕೊಡುವ ಪ್ರಯತ್ನವನ್ನು ಮಾಡಿದರು. ಭಾರತದ ಇತಿಹಾಸವನ್ನು ನಿರ್ಮಿಸಿದ ಐತಿಹಾತಿಕ ವ್ಯಕ್ತಿಗಳತ್ತ ನೋಡುವ ಅವರ ದೃಷ್ಟಿ ಹಾಗೂ ಆಯಾಯಾ ವ್ಯಕ್ತಿಗಳ ಪರಿಚಯವನ್ನು ಮಾಡಿಕೊಡುವ ಅವರ ರೀತಿ ಅದ್ಭುತವಾಗಿವೆ. ಅವರು ಧರ್ಮಾಂಧರಾಗಿರಲಿಲ್ಲ. ಆದರೆ ಹೊರಗಿನ ಮೆರಗಿನಿಂದ ಅವರು ಐತಿಹಾಸಿಕ ವ್ಯಕ್ತಿಗಳ ಚಿತ್ರಣವನ್ನು ಚಿತ್ರಿಸಲಿಲ್ಲ. ಸತ್ಯ ಎಷ್ಟೇ ಕಠೋರವಾಗಿದ್ದರೂ, ಕೆಲ ಜಾತಿ-ಜನಾಂಗಗಳನ್ನು ಮೆಚ್ಚಿಸುವುದಕ್ಕಾಗಿ ಆ ಸತ್ಯವನ್ನು ಅವರೆಂದೂ ಮರೆ ಮಾಚುವ ಪ್ರಯತ್ನವನ್ನೇ ಮಾಡಲಿಲ್ಲ.

ಐತಿಹಾಸಿಕ ಸತ್ಯವನ್ನು ಹೇಳುವಾಗ ಸಾನೆ ಗುರೂಜಿ ದಾಕ್ಷಿಣ್ಯಕ್ಕೆ ಸಿಕ್ಕಲಿಲ್ಲ. ಆದರೆ ಅಂತಹ ಸತ್ಯವನ್ನು ಹೇಳುವಾಗಲೂ ತಮ್ಮ ಸಂಯಮವನ್ನು ಕಳೆದುಕೊಳ್ಳಲಿಲ್ಲ. ಯಾವುದೇ ಒಂದು ಕೋಮಿನ ದ್ವೇಷಕ್ಕೆ ಅವರು ತಮ್ಮ ಹೃದಯದಲ್ಲಿ ಸ್ಥಾನವನ್ನು ಕೊಡಲಿಲ್ಲ.

ಪರಧರ್ಮಗಳತ್ತ ನೋಡುವ ಅವರ ದೃಷ್ಟಿಕೋನವು ಎಷ್ಟೊಂದು ಪ್ರೇಮ ಪೂರ್ಣವಾಗಿದೆ ಎಂಬುದನ್ನು ಅವರು ಬರೆದ ಪತ್ರದಿಂದ ಮನಗಾಣಬಹುದಾಗಿದೆ. ಅವರು ಆ ಪತ್ರದಲ್ಲಿ ಹೀಗೆ ಬರೆಯುತ್ತಾರೆ.-

“…..ಕ್ರಿಸ್ತನ ಸಂದೇಶದ ಅವಶ್ಯಕತೆ ಇಂದು ಎಷ್ಟಿದೆ! ಕ್ರಿಸ್ತನು ಹೇಳುತ್ತಾನೆ, “ನಾನು ಶಾಪ ಕೊಡಲು ಬಂದಿಲ್ಲ. ಪ್ರೇಮವನ್ನು ಕೊಡಲು ಬಂದಿದ್ದೇನೆ.” ನಿಮ್ಮ ನೆರೆಹೊರೆಯವರನ್ನು ಪ್ರೀತಿಸಿರಿ ಎಂಬ ಅವನ ಉಪದೇಶ ಎಷ್ಟೊಂದು ಮಹತ್ವಪೂರ್ಣವಾಗಿದೆ! ನಾವೂ ನೆರೆಹೊರೆಯ ಧರ್ಮ ಎಂಬ ಶಬ್ದ ಉಪಯೋಗಿಸುತ್ತೇವೆ. “ನೆರೆಹೊರೆಯವ” ಈ ಶಬ್ದ ಅರ್ಥ ತಿಳಿದುಕೊಂಡಷ್ಟೂ ಹೆಚ್ಚಾಗಿ ಬೆಳೆಯುತ್ತದೆ.

“ನೆರೆಯ ಜನ, ನೆರೆಯ ಪ್ರಾಂತ, ನೆರೆಯ ರಾಷ್ಟ್ರ, ನೆರೆಯ ಖಂಡ- ಎಲ್ಲರೂ ನೆರೆಹೊರೆಯವರೇ”.

“ಅವನ ಸಂದೇಶವನ್ನು ಜನತೆ ಅರ್ಥ ಮಾಡಿಕೊಂಡಿದ್ದರೆ, ಜಗತ್ತಿನಲ್ಲಿ ಮಹಾಯುದ್ದಗಳೇ ಆಗುತ್ತಿರಲಿಲ್ಲ”.

“ಸೂಜಿಯ ತೂತಿನೊಳಗಿಂದ ಒಂಡೆ ಹಾಯ್ದು ಹೋಗಬಹುದು. ಆದರೆ ಸ್ವರ್ಗದ ಬಾಗಿಲೊಳಗಿಂದ ಶ್ರೀಮಂತ ಹಾಯುವುದು ಅಶಕ್ಯ” ಎಂದಿದ್ದಾನೆ ಕ್ರಿಸ್ತ.”

“ಇತರರ ಅವಶ್ಯಕತೆಗಳನ್ನು ಪೂರೈಸದೆ ಸಿರಿವಂತನಾಗುವವನಿಗೆ ಕಳ್ಳನೆಂದು ಗೀತೆಯೂ ಹೇಳಿದೆ. ಇಸ್ಲಾಂ ಮತವೂ ಹೇಳುತ್ತದೆ- “ನೀನು ರೊಟ್ಟಿಯನ್ನು ತಿನ್ನಲು ಕೂತಾಗ ಎರಡನೆಯವನನ್ನು ಕರೆ” ಎಂದು.

“ಎಲ್ಲ ಧರ್ಮಗಳ ವಿಚಾರಗಳೂ ಒಂದೇ. ಆದರೆ ನಾವು ಮಾತ್ರ ದುರಹಂಕಾರದಿಂದ ಧರ್ಮದ ಹೆಸರಿನಲ್ಲಿ ಯುದ್ಧ ಮಾಡುತ್ತೇವೆ”.

ಇಂತಹ ಉದಾತ್ತ ಮನೋಭಾವದ, ವಿಶಾಲ ಹೃದಯದ ಸಾನೆ ಗುರೂಜಿ ತಮ್ಮ  “ಅಂತರ ಭಾರತಿ”ಯ ಮುಖಾಂತರ, ಭವ್ಯ ಭಾರತವನ್ನು ಕಟ್ಟುವ ಕನಸನ್ನು ಕಾಣತೊಡಗಿದರು. ತಮ್ಮ ಕನಸನ್ನು ನನಸಾಗಿ ಮಾಡುವ ಕಾರ್ಯಕ್ಕೂಸ ಇಳಿದರು”.

ಸಾವಿಗೆ ಸ್ವಾಗತ

ಸಾನೆ ಗುರೂಜಿ ತಮಗಾಗಿ ಏನನ್ನೂ ಬಯಸಲಿಲ್ಲ. ಮದುವೆಯಾಗಲಿಲ್ಲ, ನೌಕರಿ ಹುಡುಕಲಿಲ್ಲ, ದೇಶಕ್ಕಾಗಿ ಬರುಕಿದರು, ಸೆರೆಮನೆಗೆ ಹೋದರು, ಉಪವಾಸ ಮಾಡಿದರು. ಊರೂರು ಹಳ್ಳಿ-ಹಳ್ಳಿ ತಿರುಗಿದರು. ಆಡುವ ಮಾತೆಲ್ಲ ದೇಶಕ್ಕಾಗಿ, ಮಾಡುವ ಕೆಲಸವೆಲ್ಲ ಜನರ ಒಳಿತಿಗಾಗಿ. ಸ್ವಾತಂತ್ಯ್ರ ಬಂದೀತೇ ಎಂದು ಹಂಬಲಿಸಿದರು.

ಸ್ವಾತಂತ್ಯ್ರವೂ ಬಂದಿತು

ಸ್ವತಂತ್ರ ಭಾರತದಲ್ಲಿ ಜನಜೀವನ ಸಾಗಿದ ರೀತಿಯಿಂದ ಅವರ ಮನಸ್ಸು ರೋಸಿ ಹೋಗಿರಬೇಕು. ಸ್ವಾತಂತ್ಯ್ರರಿಂದ ಇರೀಕ್ಷಿಸಿದ ಸರ್ವಸಮಾನತೆ, ಬಡವರ ಬಾಳಿನ ರತಿಯ ಸುಧಾರಣೆ ಆಗಲಿಲ್ಲ ಎನ್ನಿಸಿರಬೇಕು. ಸ್ವತಂತ್ರ ಭಾರತದ ಅವರ ಸುಂದರ ಕಲ್ಪನೆಗೂ ನಿಜವಾಗಿ ದೇಶ ನಡೆದ ಹಾದಿಗೂ ಇದ್ದ ಅಂತರ ಅವರನ್ನು ತುಂಬ ನೋವಿಗೆ ಗುರಿ ಮಾಡಿದ್ದಿರಬೇಕು.

ಎಂದೂ ಅವರು ಸಾವಿಗೆ ಹೆದರಿರಲಿಲ್ಲ. ಸಾವು ತಾಯಿಯ ಮಡಿಲು ಎಂದಿದ್ದರು.

ಇನ್ನು ಇಲ್ಲಿರುವುದು ಬೇಡ, ನಿಸರ್ಗ ತಾಯಿಯ ಮಡಿಲಲ್ಲಿ ಮಗುವಾಗಿ ಮಲಗಿಕೊಳ್ಳಬೇಕೆಂದು ನಿರ್ಧರಿಸಿ ೧೯೫೦ ರ ಜೂನ್ ೯ ರಂದು ವಿಷ ಕುಡಿದರು. ಎರಡು ದಿನಗಳ ನಂತರ ತೀರಿಕೊಂಡರು. ಆಗ ಅವರಿಗೆ ಐವತ್ತು ವರ್ಷ.

“ಅಂತ್ಯಕ್ರಿಯೆಗಾಗಿ” ಎಂಬ ಚೀಟಿಯೊಡನೆ ಮೂವತ್ತು ರೂಪಾಯಿ ಇರಿಸಿದ್ದರು ಸಾನೆ ಗುರೂಜಿ ತಮ್ಮ ಜೇಬಿನಲ್ಲಿ.

“ಯಾವ ಫಲವನ್ನೂ ಅಪೇಕ್ಷಿಸದೆ ನಿನ್ನ ಕರ್ತವ್ಯವನ್ನು ನೀನು ಮಾಡು” ಎನ್ನುತ್ತದೆ ಭಗವದ್ಗೀತೆ.

ಈ ಉಪದೇಶವೇ ಮನುಷ್ಯ ರೂಪ ತಾಳಿ ಬಂದಂತೆ ಬಾಳಿದರು ಸಾನೆ ಗುರೂಜಿ.