ಆಕರ್ಶಕ ಬಣ್ಣಗಳ ಸೇವಂತಿಗೆಯನ್ನು ನೋಡದವರ್ಯಾರು? ವರ್ಷವಿಡೀ ದೊರೆಯುವ ‘ಹಳದಿ’ ಸೇವಂತಿಗೆ ಒಂದೆಡೆಯಾದರೆ, ಹಲವಾರು ಬಣ್ಣಗಳ, ಆಕಾರಗಳ ಸೇವಂತಿಗೆ ಇನ್ನೊಂದೆಡೆ. ಅಲಂಕಾರಕ್ಕೆ, ಪೂಜೆಗೆ, ಹೂದಾನಿಗಳ ಸಿಂಗಾರಕ್ಕೆ ಬಳಸುವ ಸೇವಂತಿಗೆಗೆ ಅದರದ್ದೇ ಆದ ಪ್ರಮುಖ ಸ್ಥಾನ.
ಪ್ರದರ್ಶನಗಳಲ್ಲಿ ಜನರ ಮನಸೆಳೆಯುವ ಈ ಸೇವಂತಿಗೆ ಮನೆಯೊಡತಿಯರ ಹೆಮ್ಮೆಗೂ ಕಾರಣವಾಗಿದೆ. ಸಿರಸಿಯ ಸಮೀಪದ ‘ಬೆಂಗಳಿ, ಓಣಿಕೇರಿ, ಹುಲೇಮಳಗಿ’ ಹಳ್ಳಿಗಳಲ್ಲಿ, ಕಾರ್ತೀಕ ಮಾಸದಲ್ಲಿ ‘ಸೇವಂತಿಗೆಯ’ ಪ್ರದರ್ಶನ ಮನೆ ಮನೆಗಳಲ್ಲಿ. ಪ್ರತಿ ಮನೆಯಲ್ಲಿ ಕಡಿಮೆ ಎಂದರೂ ೪೦-೫೦ ಕುಂಡಗಳಲ್ಲಿ ಸೇವಂತಿಗೆ ಗಿಡಗಳು. ದಾರಿಹೋಕರು ಕ್ಷಣಹೊತ್ತು ಮೂಕ ವಿಸ್ಮಿತರಾಗಿ ನಿಲ್ಲದೆ ಹೋಗಲಾರರು.
ಸೇವಂತಿಗೆ ಬೆಳೆಯುವುದು ಇಲ್ಲಿನ ಹೆಂಗೆಳೆಯರ ಹವ್ಯಾಸವಾದರೂ, ಇದು ಅವರ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿದೆ. ಕಾರ್ತೀಕ ಮಾಸ ಬರುವ ಆರೆಂಟು ತಿಂಗಳ ಮೊದಲೇ ಕೆಲಸ ಶುರುವಾಗುತ್ತದೆ. ಕಾಡು ಮಣ್ಣು ತರುವುದು, ಗೊಬ್ಬರ ಶೇಖರಿಸುವುದು, ಮನೆಯ ಹಿಂಭಾಗದಲ್ಲಿ ಸುಪ್ತಾವಸ್ಥೆಯಲ್ಲಿದ್ದ ಗಿಡಗಳನ್ನು ಹೊಸ ಕುಂಡಕ್ಕೆ ವರ್ಗಾಯಿಸುವುದು, ಈ ಕೆಲಸಗಳು ಏಪ್ರಿಲ್ ಕೊನೆಯ ವಾರದಲ್ಲೇ ಪ್ರಾರಂಭ.
ಒಂದು ಕುಂಡಕ್ಕೆ ಒಂದೇ ಗಿಡ. ನೆಡುವಾಗ ಕುಂಡದಲ್ಲಿ ಅರ್ಧ ಮಿಶ್ರಣವಿದ್ದರೆ ಸಾಕೆನ್ನುತ್ತಾರೆ ಇಲ್ಲಿನ ಗೃಹಿಣಿಯರು. ಗಿಡ ಬೆಳೆದಂತೆ ಮಿಶ್ರಣ ತುಂಬುತ್ತ ಹೋಗ ಬಹುದು. ಗಿಡ ೪-೬” ಎತ್ತರವಾದಾಗ, ಮೇಲಿನ ನಾಲ್ಕು ಎಲೆಗಳನ್ನು ತೆಗೆಯಬೇಕು. ಆಗ ಹೊಸ ಕವಲುಗಳು ಬರುತ್ತವೆ. ಈ ಕವಲುಗಳು ೬” ಎತ್ತರವಾದಾಗ, ಅದರ ಮೇಲಿನ ಎಲೆಗಳನ್ನು ತೆಗೆದರೆ ಗಿಡ ಗುಂಪಾಗಿ ಬೆಳೆದು ಹೆಚ್ಚು ಹೂಗಳನ್ನು ಕೊಡುತ್ತದೆ ಎನ್ನುವುದು ಇವರ ಅನುಭವದ ಮಾತು.
ಕಡಿಮೆ ಎಂದರೂ. ೨೦-೩೦ ಬಣ್ಣದ ಹೂವಿನ ಗಿಡಗಳು ಪ್ರತಿ ಮನೆಯ ಮುಂದೆ. ನವರಾತ್ರೆಯಲ್ಲಿ ಬೊಂಬೆ ನೋಡಲು ಹೋಗುವವರಂತೆ, ಕಾರ್ತೀಕ ಮಾಸದ ದೀಪಾವಳಿಯ ಒಂದು ತಿಂಗಳೂ ಸೇವಂತಿಗೆ ನೋಡಲು ಹೆಂಗೆಳೆಯರ ಭೇಟಿ. ತಿಂಗಳಿಡೀ ಉತ್ಸವದ ಸಂಭ್ರಮ. ಅನುಭವಗಳ , ತಮ್ಮಲ್ಲಿಲ್ಲದ ಬಣ್ಣದ ಗಿಡಗಳ ವಿನಿಮಯ. ಗಿಡಗಳನ್ನು ಕೊಂಡು ತರುವಾಗಲೂ ಅಷ್ಟೇ, ಹೊಸ ಬಣ್ಣ ಕಂಡಾಗ ನಾಲ್ಕಾರು ಗಿಡಗಳನ್ನು ತಂದು ಪರಸ್ಪರ ಹಂಚಿಕೊಳ್ಳುವ ಮನೋಭಾವ. ಸಿ.ಡಿ. ಮಾಡಿಟ್ಟುಕೊಂಡು, ತೋರಿಸಿ ಸಂಭ್ರಮಿಸುವ ಮುಗ್ಧತೆ.
ಏಷ್ಯಾ ಮೂಲದ ಸೇವಂತಿಗೆ, ಜಪಾನೀಯರ ರಾಜಮುದ್ರೆಯ ಚಿನ್ಹೆ ಕೂಡ. ಈ ಹೂವಿನ ಹೆಸರಿನಲ್ಲಿ ‘ಸಂತಸದ ಹಬ್ಬ’ ಆಚರಿಸುತ್ತಾರೆ. ಚೀನ ದೇಶದ ಒಂದು ಊರಿಗೆ ‘ಸೇವಂತಿಗೆ ಸಿಟಿ’ ಎಂದೇ ಹೆಸರಿದೆ. ಹಲವಾರು ನಾಟಿ ಔಷಧಗಳಲ್ಲಿ ಈ ಗಿಡದ ಎಲೆಗಳು ಉಪಯುಕ್ತ. ಇದರ ಹೂವುಗಳನ್ನು ಕೀಟನಾಶಕವಾಗಿಯೂ ಉಪಯೋಗಿಸುತ್ತಾರೆ. ಕೀಟಗಳ ನರ ನಾಡಿಗಳ ಮೇಲೆ ಸೀದಾ ಪ್ರತಿಕ್ರಿಯಿಸುವುದರಿಂದ ಕೀಟ ವಿಕರ್ಶಕವಾಗಿ ಉಪಯುಕ್ತ. ಒಳಾಂಗಣದಲ್ಲಿ ಗಿಡಗಳನ್ನು ಇಟ್ಟಾಗ ವಾಯು ಪ್ರದೂಷಣೆ ಕಮ್ಮಿಯಾಗುವುದು ಕಂಡು ಬಂದಿದೆ.
ಫಲ ಪುಷ್ಪ ಪ್ರದರ್ಶನಗಳಲ್ಲಿ ಕಾಣುವ ಹೂಗಳೇ ಬೇರೆ ರೀತಿಯದು. ರೆಕ್ಕೆಯಂತೆ ಹರಡಿರುವ, ಅತಿ ದೊಡ್ಡ ಆಕಾರದ ಈ ಹೂವಿನ ಗಿಡಗಳಿಗೆ ಆಧಾರ ಕೋಲು ಕೊಡದಿದ್ದರೆ ಗಿಡ ಬಗ್ಗಿ ಹೂವಿನ ಅಂದ ಹಾಳಾಗುತ್ತದೆ. ಸಾಧಾರಣವಾಗಿ ಕಾಂಡದ ತುಂಡುಗಳಿಂದ ಬೆಳೆಸಿದ ಗಿಡಗಳಲ್ಲಿ ಪುಟ್ಟ ಸಸಿಗಳು ಬರುವುದಿಲ್ಲ. ಆದರೆ ದೊಡ್ಡ ಗಾತ್ರದ ಹೂಗಳು ಮಾತ್ರ ಬಿಡುತ್ತವೆ.
ಮನೆಗಳಲ್ಲಿ ಬೆಳೆಯುವ ನಾಟಿ ಹೂಗಳು ವರ್ಷಕ್ಕೊಮ್ಮೆ ಬಿಡುವಂತಹವು. ನಾಲ್ಕಾರು ತಿಂಗಳು ಸುಪ್ತಾವಸ್ಥೆಯಲ್ಲಿದ್ದಾಗ, ಹೆಚ್ಚು ನೀರು ಗೊಬ್ಬರದ ಆವಶ್ಯಕತೆ ಇರುವುದಿಲ್ಲ. ತೇವಾಂಶ ಕಾಪಾಡಿಕೊಂಡರೆ ಸಾಕು. ಕುಂಡ ವರ್ಗಾವಣೆ ಸಮಯದಲ್ಲಿ ಹೆಚ್ಚು ಸಾವಯವ ಗೊಬ್ಬರ ಸೇರಿಸಿ, ನೀರು ಬಸಿದು ಹೋಗುವ ಮಿಶ್ರಣ ತುಂಬಿಸಿ ಚೆನ್ನಾಗಿ ಬಿಸಿಲಿರುವ ಜಾಗದಲ್ಲಿ ಗಿಡ ಇಡುವುದು ಒಳ್ಳೆಯದು. ಎರೆಡು ಕುಂಡಗಳ ನಡುವೆ ಜಾಗ ಬಿಡುವುದು ಅವಶ್ಯ. ಗಾಳಿಯಾಡುವ ಜಾಗದಲ್ಲಿ ಗಿಡ ವಿದ್ದರೆ ಗಿಡಗಳ ಆರೋಗ್ಯ ಚೆನ್ನಾಗಿರುತ್ತದೆ.
Leave A Comment