ಪ್ರತಿನಿತ್ಯ ಅಂತರಜಾಲ ಬಳಸುವ ನಾವು ಅನೇಕ ಹೊಸ ಜಾಲತಾಣಗಳನ್ನು ಹೊಕ್ಕು ಹೊರಬರುತ್ತಿರುತ್ತೇವೆ. ಅದರಲ್ಲಿ ಎಷ್ಟೋ ತಾಣಗಳು ನಮಗೆ ಮತ್ತೆ ಮತ್ತೆ ಬೇಕಾಗುವ ಅನೇಕ ಮಾಹಿತಿಗಳನ್ನು ಹೊಂದಿರುತ್ತವೆ. ಅಂತಹ ತಾಣಗಳನ್ನು ನಾವು ನಮ್ಮ ಬ್ರೌಸರ್‌ ಬುಕ್‌ಮಾರ್ಕ್ ಬಾರ್‌ನಲ್ಲಿ ಉಳಿಸಿಕೊಳ್ಳುತ್ತೇವೆ. ಗೂಗಲ್ ಕ್ರೋಮ್‌ನಂತಹ ಬ್ರೌಸರ್‌ಗಳು ಒಂದು ಕ್ಲಿಕ್ ಮಾಡುವ ಮೂಲಕ ಜಾಲ ಪುಟಗಳನ್ನು ಉಳಿಸಿಕೊಳ್ಳುವುದನ್ನು ಸಾಧ್ಯವಾಗಿಸುತ್ತವೆ. ವಿಜ್ಞಾನ, ಸುದ್ದಿಗಳು, ಸಿನೆಮಾ ಹೀಗೆ ಬೇರೆ ಬೇರೆ ಫೋಲ್ಡರ್‌ಗಳನ್ನು ಮಾಡಿಕೊಂಡು ಆ ಪುಟಗಳನ್ನು ಬುಕ್‌ಮಾರ್ಕ್ ಸಹ ಮಾಡಿಕೊಂಡಿರುತ್ತೇವೆ.

ಒಂದು ಹಂತದವರೆಗೆ ಈ ಬುಕ್‌ಮಾರ್ಕ್‌ಗಳನ್ನು ಮಾಡಿಕೊಳ್ಳುವುದು, ಬಳಸುವುದು ಸುಲಭ. ಆದರೆ ಪುಟಗಳು ಹೆಚ್ಚಾದಂತೆ, ಅವುಗಳನ್ನು ವ್ಯವಸ್ಥೆಗೊಳಿಸಿ ಇಟ್ಟುಕೊಳ್ಳುವುದು ಬಹಳ ಕಠಿಣ. ಒಂದು ಬ್ರೌಸರ್ ಬುಕ್‌ಮಾರ್ಕ್ ಬಾರ್‌‌ನಲ್ಲಿ ನೂರಾರು ಬುಕ್‍ಮಾರ್ಕ್ ಪುಟಗಳನ್ನು ಸಂಯೋಜಿಸುವುದು ಅಷ್ಟು ಸುಲಭವಲ್ಲ. ಒಂದುವೇಳೆ ಅನೇಕ ಫೋಲ್ಡರ್‌ಗಳನ್ನು ರಚಿಸಿ ಇಟ್ಟುಕೊಂಡೆವೆಂದರೂ, ಆ ಫೋಲ್ಡರ್‌ಗಳಿಂದ ನಮಗೆ ಬೇಕಾದ ಪುಟವನ್ನು ಹುಡುಕಿ ತೆಗೆಯುವುದಕ್ಕಿಂತ ಮತ್ತೆ ಗೂಗಲ್‌ನಲ್ಲಿ ಹುಡುಕುವುದು ಸುಲಭದ ಕೆಲಸವಾಗಿಬಿಡುತ್ತದೆ. ಹಾಗಾದಾಗ ಬುಕ್‌ಮಾರ್ಕ್ ಮಾಡುವ ಇಡೀ ಉದ್ದೇಶವೇ ಸೋಲುತ್ತದೆ. ಹಾಗಿದ್ದರೆ ಇದಕ್ಕೆ ಪರಿಹಾರವೇನು?

ಈ ಎಲ್ಲ ಕಾರ್ಯಗಳನ್ನು ಸುಲಭವಾಗಿಸಲೆಂದೇ ಸಾಮಾಜಿಕ ಬುಕ್‌ಮಾರ್ಕಿಂಗ್ ತಾಣಗಳು ಇವೆ. ಸಾಮಾಜಿಕ ಬುಕ್‌ಮಾರ್ಕಿಂಗ್ ತಾಣ ಎಂದರೆ ಸಾರ್ವಜನಿಕವಾಗಿ ಬಳಸಲ್ಪಡುವ ಪ್ರಕಾರದ ಅಂತರಜಾಲ ತಾಣವಾಗಿದ್ದು, ಅದರಲ್ಲಿ ಬೇರೆ ಬೇರೆ ಜಾಲ ತಾಣಗಳನ್ನು ಬುಕ್‌ಮಾರ್ಕ್ ಮಾಡಿ ಉಳಿಸಿ ಕೀವರ್ಡ್‌ಗಳಿಂದ ಟ್ಯಾಗ್ ಮಾಡಬಹುದಾಗಿದೆ. (ಟ್ಯಾಗ್ ಮಾಡುವುದೆಂದರೆ ಕೆಲವು ಸಂಬಂಧಿತ ಪದಗಳನ್ನು ನೀಡುವ ಮೂಲಕ ಉಳಿಸಿದ ವೆಬ್ ಪುಟಗಳು, ಫೋಟೋಗಳನ್ನು ವರ್ಗೀಕರಿಸುವುದು) ಹಾಗೆ ಉಳಿಸಲು ಬುಕ್‌ಮಾರ್ಕ್ ಮಾಡಿದ ತಾಣಕ್ಕೆ ನಾವು ಲಾಗಿನ್ ಆಗಬೇಕಾಗುತ್ತದೆ ಮತ್ತು ನಾವು ಉಳಿಸಿದ ವೆಬ್ ಪುಟಗಳನ್ನು ನಾವು ಯಾವಾಗ ಬೇಕಾದರೂ, ಎಲ್ಲಿಂದಲಾದರೂ  ಲಾಗಿನ್ ಆಗಿ ನೋಡಬಹುದು.

ಬುಕ್ಮಾರ್ಕಿಂಗ್ ತಾಣಗಳು

ಸಾಮಾಜಿಕ ಬುಕ್‌ಮಾರ್ಕಿಂಗ್ ತಾಣಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತಿಳಿಯುವ ಮೊದಲು ಅಂತರಜಾಲವನ್ನು ದಿನವೂ ಬಳಸುವ ಒಬ್ಬ ಪ್ರಾಧ್ಯಾಪಕರ ಉದಾಹರಣೆಯನ್ನು ತೆಗೆದುಕೊಳ್ಳೋಣ. ಅವರು ತಮ್ಮ ವಿರಾಮದ ವೇಳೆಯಲ್ಲಿ ಹೆಚ್ಚು ಹೊತ್ತು ಅಂತರಜಾಲದಲ್ಲಿ ತಮ್ಮ ಅಧ್ಯಯನ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅರಸುತ್ತಾ, ಓದುತ್ತಾ ಕಳೆಯುತ್ತಾರೆ. ಅಂತರಜಾಲದಲ್ಲಿ ಅವರಿಗೆ ದೊರೆಯುವ ಪುಟಗಳು, ಅನೇಕ ಜಾಲತಾಣಗಳಿಂದ ಅವರಿಗೆ ಇಮೇಲ್ ಮೂಲಕ ಬರುವ ಸುದ್ದಿಪತ್ರಗಳು, ಫೀಡ್ ಬರ್ನರ್ ಮತ್ತು ಗೂಗಲ್‌ ರೀಡರ್‌ನಂತಹ ತಾಣಗಳಿಂದ ಪಡೆಯುವ ಮಾಹಿತಿ ತಾಣಗಳು ಇವೆಲ್ಲವನ್ನೂ ಅವರಿಗೆ ಮುಂದೆ ಮತ್ತೆ ಬಳಸುವುದಕ್ಕಾಗಿ ಬುಕ್‌ಮಾರ್ಕ್ ಮಾಡಿ ಇಡಬೇಕಾಗುತ್ತದೆ. ಮೊದಲು ಅವರು ಆ ಪುಟಗಳನ್ನು ವೆಬ್ ಬ್ರೌಸರ್‌ನಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ಆದರೆ ಅವುಗಳನ್ನೆಲ್ಲ ಫೋಲ್ಡರ್‌ಗಳಲ್ಲಿ ಸಂಯೋಜಿಸಿ ಇಟ್ಟುಕೊಳ್ಳುವುದು, ಮತ್ತು ಹುಡುಕುವುದು ಅವರಿಗೆ ಬಹಳ ಕಷ್ಟದ ಕೆಲಸವಾಗಿ ಪರಿಣಮಿಸಿತ್ತು. ಅದಲ್ಲದೇ ಅತ್ಯಂತ ಅಗತ್ಯದ ಪುಟಗಳನ್ನು ಮನೆಯಲ್ಲಿದ್ದ ಕಂಪ್ಯೂಟರ್‌ನಲ್ಲಿ ಬುಕ್‌ಮಾರ್ಕ್ ಮಾಡಿ ಇಟ್ಟವರು ತಮ್ಮ ಕಛೇರಿಯಲ್ಲಿ ಆ ಮಾಹಿತಿ ತುರ್ತಾಗಿ ಬೇಕೆನಿಸಿದಾಗ ಅಲ್ಲಿ ಬಳಸುತ್ತಿದ್ದ ಕಂಪ್ಯೂಟರ್‌ನಲ್ಲಿ ಹುಡುಕಿ ಸುಸ್ತಾಗುತ್ತಿದ್ದರು. ಅಲ್ಲದೇ ಅಂತರಜಾಲದಲ್ಲಿ ದೊರೆತ ಉಪಯುಕ್ತ ಮಾಹಿತಿಗಳನ್ನು ತಮ್ಮ ಸಹೋದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಕಳಿಸುವುದು ಸಹಾ ಸುಲಭವಾಗಿರಲಿಲ್ಲ.

ಆದರೆ ಅವರ ಸಹೋದ್ಯೋಗಿಯೊಬ್ಬರು ಒಂದು ಬುಕ್‌ಮಾರ್ಕಿಂಗ್ ತಾಣದ ಪರಿಚಯ ಮಾಡಿಕೊಟ್ಟರು. ಅದರಲ್ಲಿ ಅವರಿಗೆ ತಮಗೆ ಅಗತ್ಯವಾದ ವೆಬ್ ಪುಟಗಳನ್ನು ಬುಕ್‌ಮಾರ್ಕ್ ಮಾಡಿ, ಅದಕ್ಕೆ ಸಂಬಂಧಿಸಿದಂತೆ ಕೆಲವು ಕೀವರ್ಡ್‌ಗಳನ್ನು ನೀಡಿ ಉಳಿಸಿಟ್ಟುಕೊಳ್ಳುವುದು ಸುಲಭವಾಯಿತು. ಈಗ ಅವರು ತಾವು ಉಳಿಸಿದ ಪುಟಗಳನ್ನು ಎಲ್ಲಿಂದಲಾದರೂ ಅಂತರಜಾಲದಲ್ಲಿ ನೋಡಬಹುದು. ಅಲ್ಲದೇ ಅವರಿಗೆ ತಮ್ಮ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಸಂಬಂಧಿತ ತಾಣಗಳ ವಿವರಗಳನ್ನು ಹಂಚಿಕೊಳ್ಳಬಹುದು. ಅದಷ್ಟೇ ಅಲ್ಲದೇ ಅವರಿಗೆ ಬುಕ್‍ಮಾರ್ಕಿಂಗ್‌ನಿಂದ ಇರಬಹುದಾದ ಇನ್ನೂ ಅನೇಕ ಲಾಭಗಳ ಪರಿಚಯವಾಯಿತು.

ಪ್ರಯೋಜನಗಳು

ಬುಕ್‌ಮಾರ್ಕಿಂಗ್ ತಾಣದ ಬಳಕೆ ಮಾಡಲು ಮೊದಲು ಅದರಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಒಂದು ಬುಕ್‌ಮಾರ್ಕಿಂಗ್ ತಾಣದಲ್ಲಿ ನೋಂದಣಿ ಮಾಡಿಕೊಳ್ಳುವ ಮೊದಲು ಅತಿಥಿಯಾಗಿ ಬೇರೆ ಬೇರೆ ತಾಣಗಳನ್ನು, ಅವುಗಳಲ್ಲಿ ಲಭ್ಯವಿರುವ ವೈಶಿಷ್ಟ್ಯಗಳನ್ನು ಪರೀಕ್ಷೆ ಮಾಡಲು ಅವಕಾಶವಿದೆ. ಇಷ್ಟವಾದ ತಾಣದಲ್ಲಿ ನೋಂದಣಿ ಮಾಡಿಕೊಂಡ ನಂತರ ಅದನ್ನು ಬ್ರೌಸರ್ ಬಟನ್ ಆಗಿ ಸ್ಥಾಪಿಸಿಕೊಂಡರೆ ಬಳಕೆ ಸುಲಭ. ಒಂದು ಕ್ಲಿಕ್ ಮೂಲಕ ಪುಟವನ್ನು ಬುಕ್‌ಮಾರ್ಕ್‌ ಮಾಡಬಹುದು. ಡೆಲಿಶಿಯಸ್‌ನಂತಹ ಬುಕ್‍ಮಾರ್ಕಿಂಗ್ ಸೈಟ್‌ಗಳಲ್ಲಿ ನಾವು ಯಾವುದೇ ತಾಣವನ್ನು ಬುಕ್‍ಮಾರ್ಕ್ ಮಾಡಿದಾಗ ಅದೇ ತಾಣವನ್ನು ಇನ್ನೂ ಯಾರ್ಯಾರು ಬುಕ್‌ಮಾರ್ಕ್ ಮಾಡಿದ್ದಾರೆ ಎಂಬುದನ್ನು ನೋಡಬಹುದು.

ಸಾರ್ವಜನಿಕರಿಗೆ ಲಭ್ಯವಿರುವಂತೆ ಹೊಂದಿಸಿದಾಗ ಯಾರು ಬೇಕಾದರೂ ನೋಡಿಕೊಳ್ಳಬಹುದು ಮತ್ತು ಪುಟಗಳನ್ನು ವೈಯಕ್ತಿಕ ಬಳಕೆಗೆ ಸೀಮಿತಗೊಳಿಸಬಯಸುವವರು `ಖಾಸಗಿ’ ಎಂದೂ ಹೊಂದಿಸಿಕೊಳ್ಳಬಹುದು. ಅಲ್ಲದೇ ಇತರ ಬಳಕೆದಾರರಿಂದ ಒಂದೇ ಕೀವರ್ಡ್‌ನಿಂದ ಗುರುತಿಸಲ್ಪಟ್ಟಿರುವ ಅನೇಕ ತಾಣಗಳನ್ನೂ ಸಹ ನೋಡಬಹುದು. ಹೀಗೆ ಸಮಾನ ಮನಸ್ಕ ಬಳಕೆದಾರರು ತಮ್ಮ ಗುಂಪುಗಳನ್ನು ಸ್ಥಾಪಿಸಿಕೊಳ್ಳಲು ಮತ್ತು ಪುಟಗಳಿಗೆ ತಮ್ಮದೇ ಆದ ಟ್ಯಾಗ್‌ಗಳನ್ನು ನೀಡುವ ಮೂಲಕ ಫೋಕ್ಸೋನಮಿ ಬೆಳೆಸಬಹುದಾಗಿದೆ.

ನಾವು ಯಾವುದಾದರೂ ಉತ್ಪನ್ನಗಳನ್ನು ಕೊಳ್ಳಬೇಕೆಂದಾದಲ್ಲಿ, ಉದಾಹರಣೆಗೆ ಹೊಸ ಪುಸ್ತಕ, ಕಂಪ್ಯೂಟರ್, ಕಾರು, ಮೊಬೈಲ್ ಫೋನ್ ಮುಂತಾದವುಗಳ ಕುರಿತು ಅತ್ಯಂತ ಉಪಯುಕ್ತವಾದ ಮಾಹಿತಿಗಳನ್ನು ನಾವು ಈ ತಾಣಗಳಲ್ಲಿ ಪಡೆದುಕೊಳ್ಳಬಹುದಾಗಿದೆ.  ಈ ಬುಕ್‌ಮಾರ್ಕಿಂಗ್ ತಾಣಗಳಲ್ಲಿ ಹುಡುಕಾಟ ಸುಲಭವಾಗುವಂತೆ ತಂತ್ರಜ್ಞಾನ, ರಾಜಕೀಯ, ಸುದ್ದಿಗಳು, ಮನರಂಜನೆ, ಕ್ರೀಡೆ, ವ್ಯಾಪಾರ, ಬ್ಲಾಗಿಂಗ್ ಮುಂತಾದ ವಿಭಾಗಗಳಿರುತ್ತವೆ. ಅಲ್ಲದೇ ಬುಕ್‌ಮಾರ್ಕ್ ತಾಣಗಳು ನೀವು ಈಗಾಗಲೇ ಬುಕ್‌ಮಾರ್ಕ್ ಮಾಡಿಟ್ಟಿರುವ ಒಂದು ವೆಬ್ ಪುಟ ಕೆಲಸ ಮಾಡುತ್ತಿದೆಯೇ ಅಥವಾ ನಿಂತು ಹೋಗಿದೆಯೇ ಎಂಬುದರ ಕುರಿತೂ ನಿಮಗೆ ಮಾಹಿತಿ ನೀಡುತ್ತಿರುತ್ತವೆ. ಇದೆಲ್ಲ ಓದಿದಾಗ ಇದೊಂದು ನಾವು ಮನೆಯಲ್ಲಿ ಮಾಡಿಕೊಳ್ಳುವ ಸಣ್ಣ ಗ್ರಂಥಾಲಯದಂತೆ ಅನ್ನಿಸಿತಲ್ಲವೇ? ಹೌದು, ಇದೊಂದು ರೀತಿಯಲ್ಲಿ ಅಂತರಜಾಲ ಗ್ರಂಥಾಲಯದಂತೆ. ಇವುಗಳಿಂದಾಗಿ ಹುಡುಕಾಟ ತಾಣಗಳಲ್ಲಿ ಆಗುವಂತೆ ಇನ್ನು ಹುಲ್ಲಿನ ಮೆದೆಯಲ್ಲಿ ಸೂಜಿ ಹುಡುಕುವಂತಹ ಅನುಭವ ಆಗುವುದಿಲ್ಲ. ಇದು ಸುಲಭ.

ಈ ಸಾಮಾಜಿಕ ಬುಕ್‌ಮಾರ್ಕಿಂಗ್‌ನಲ್ಲಿ ಕೆಲವು ಸಮಸ್ಯೆಗಳೂ ಇವೆ. ಹೆಸರೇ ಹೇಳುವಂತೆ ಇದು ಆಸಕ್ತ ಸಾಮಾನ್ಯ ಜನರಿಂದ ಮಾಡಲ್ಪಡುತ್ತದೆ. ಮಾಹಿತಿಗಳನ್ನು ಜನರು ಹೇಗೆ ಟ್ಯಾಗ್ ಮಾಡುತ್ತಿದ್ದಾರೆ ಮತ್ತು ಸಂಯೋಜಿಸುತ್ತಿದ್ದಾರೆ ಎಂಬುದನ್ನು ಯಾರೂ ಪರಿಶೀಲನೆ ಮಾಡುವುದಿಲ್ಲ. ಅತ್ಯುತ್ತಮ ಮಾಹಿತಿಯಿರುವ ಪುಟವೂ ಸರಿಯಾದ ಟ್ಯಾಗಿಂಗ್ ಇಲ್ಲದೇ ಹೋದಾಗ ಹುಡುಕುವ ಆಸಕ್ತರಿಗೆ ಸಿಗದೇ ಹೋಗಬಹುದು. ಹೀಗಿರುವಾಗಲೂ ಅದರ ಪ್ರಯೋಜನಗಳು ಅನೇಕ. ಮತ್ತು, ವರ್ಷಗಳು ಕಳೆದಂತೆ ಈ ತಾಣಗಳು ಹೆಚ್ಚು ಹೆಚ್ಚು ವ್ಯವಸ್ಥಿತವಾಗಲಿವೆ. ಆಗ ಗೂಗಲ್‌ನಂತಹ ಹುಡುಕಾಟ ಇಂಜಿನ್‌ಗಳಿಗಿಂತ ಈ ಬುಕ್‌ಮಾರ್ಕಿಂಗ್ ತಾಣಗಳಲ್ಲಿ ಮಾಹಿತಿಗಳನ್ನು ಹುಡುಕುವುದು ಹೆಚ್ಚು ವ್ಯವಸ್ಥಿತ ಹಾಗೂ ಸಮಯವನ್ನು ಉಳಿಸುವ ಕಾರ್ಯವಾಗಬಹುದು. ಇದಲ್ಲದೇ ಗೂಗಲ್ ಅಥವಾ ಯಾಹೂವಿನಂತಹ ಹುಡುಕಾಟ ತಾಣಗಳಲ್ಲಿ ಕಂಪ್ಯೂಟರ್‌ಗಳು ಮಾಹಿತಿಗಳನ್ನು ಹುಡುಕಿ ಒದಗಿಸುತ್ತವೆ. ಆದರೆ ಬುಕ್‌ಮಾರ್ಕಿಂಗ್ ತಾಣಗಳಲ್ಲಿರುವ ಮಾಹಿತಿಗಳನ್ನು ಬಳಕೆದಾರ ವ್ಯಕ್ತಿಗಳು ಆಯ್ಕೆ ಮಾಡಿ ಸೇರಿಸಿರುತ್ತಾರೆ. ಹಾಗಾಗಿ ಅವು ಹೆಚ್ಚು ಪ್ರಯೋಜನಕಾರಿ.

ಬುಕ್‌ಮಾರ್ಕಿಂಗ್ ತಾಣಗಳಲ್ಲಿ ಸಮಾನ ಆಸಕ್ತಿಯಿರುವ ಇತರ ಬಳಕೆದಾರರನ್ನು ಸ್ನೇಹಿತರನ್ನಾಗಿ ಸೇರಿಸಿಕೊಳ್ಳುವುದು ನಿಮಗೆ ಆಸಕ್ತಿಯಿರುವ ಜಾಲ ತಾಣಗಳನ್ನು ಹುಡುಕುವುದನ್ನು ಸುಲಭವಾಗಿಸುವ ಸಾಧನವಾಗಿದೆ. ಸಾಮಾಜಿಕ ಬುಕ್‌ಮಾರ್ಕಿಂಗ್ ಸ್ನೇಹಿತರು ನಿಮಗೆ ಉಪಯುಕ್ತ ಜಾಲ ತಾಣಗಳನ್ನು ಶಿಫಾರಸು ಮಾಡುತ್ತಾರೆ. ಅಷ್ಟೇ ಅಲ್ಲದೇ ನಿಮಗೆ ಯಾವುದಾದರೂ ಹೊಸ ವಿಷಯದ ಕುರಿತ ತಾಣವನ್ನು ಹುಡುಕಬೇಕಾದಲ್ಲಿ ಈ ಸ್ನೇಹಿತರು ಸಹಾಯ ಮಾಡುತ್ತಾರೆ ಮತ್ತು ಅವರು ನೀಡುವ ತಾಣಗಳ ಶಿಫಾರಸುಗಳು ವಿಶ್ವಾಸಾರ್ಹವಾಗಿರುತ್ತವೆ ಕೂಡಾ.

ಪ್ರಮುಖ ಬುಕ್ಮಾರ್ಕಿಂಗ್ ತಾಣಗಳು

ಬುಕ್‌ಮಾರ್ಕಿಂಗ್ ತಾಣಗಳು ಇತ್ತೀಚಿನ ವರ್ಷಗಳಲ್ಲಿ ಪ್ರಾರಂಭವಾಗಿದ್ದು, ಅವುಗಳಲ್ಲಿ ಮುಖ್ಯವಾದವು ಡೀಗೊ, ರೆಡ್‌ಇಟ್‌, ಡಿಗ್, ಸ್ಟಂಬಲ್‌ಅಪ್‌ಆನ್ ಮತ್ತು ಡೆಲಿಶಿಯಸ್. ಡೆಲಿಶಿಯಸ್‌ ಒಂದು ಮುಕ್ತ ಮೂಲ ಆವೃತ್ತಿಯನ್ನು ಸಹಾ ಹೊಂದಿದ್ದು, ಅದರ ಹೆಸರು ಡೆಲಿರಿಯಸ್. ಸೈಟ್‌ಯುಲೈಕ್ ಎಂಬುದು ಶೈಕ್ಷಣಿಕ ಪುಟಗಳಿಗಾಗಿ ಇದೆ.

ಅತ್ಯಂತ ಪ್ರಸಿದ್ಧವಾದ ಟ್ವಿಟ್ಟರ್ ಮೈಕ್ರೋಬ್ಲಾಗಿಂಗ್ ತಾಣದ ಕುರಿತು ನಮಗೆಲ್ಲ ಗೊತ್ತು. ಅದರದ್ದೇ ಆದ ಇನ್ನೊಂದು ಸೇವೆಯಿದೆ. ಅದೇ ಟ್ವೀಟ್‌ಮೆಮೆ. ಟ್ವಿಟ್ಟರಿನಲ್ಲಿ ಪ್ರತಿನಿತ್ಯ ಲಕ್ಷಾಂತರ ತಾಣಗಳ ಯುಆರ್‌ಎಲ್ ವಿಳಾಸಗಳನ್ನು ಹಂಚಿಕೊಳ್ಳಲಾಗುತ್ತದೆ. ಅವುಗಳಲ್ಲಿ ಅತ್ಯಂತ ಹೆಚ್ಚು ಜನರಿಂದ ಹಂಚಲ್ಪಟ್ಟಿರುವ ಹಾಗೂ ಅತ್ಯಂತ ಉಪಯುಕ್ತವಾದ ತಾಣಗಳ  ವಿಳಾಸಗಳನ್ನು ಮತ್ತು ವಿವರಗಳನ್ನು ಈ ಟ್ವೀಟ್‌ಮೆಮೆ ನೀಡುತ್ತದೆ. ಇದೂ ಒಂದು ರೀತಿಯಲ್ಲಿ ಬುಕ್‌ಮಾರ್ಕಿಂಗ್ ತಾಣ.

ಒಂದು ಅಂದಾಜಿನ ಪ್ರಕಾರ ಸುಮಾರು ಐದು ಕೋಟಿ ವೆಬ್‌ಸೈಟ್‌ಗಳು ಅಂತರಜಾಲದಲ್ಲಿವೆ,  ಮತ್ತು ಅರವತ್ತು ಬಿಲಿಯನ್ ವೆಬ್ ಪುಟಗಳಿವೆ. ಇಂತಹ ಮಾಹಿತಿ ಮಹಾಪೂರದಲ್ಲಿ ನಮಗೆ ಬೇಕಾದ ಸರಿಯಾದ ಮಾಹಿತಿಯನ್ನು ನಮಗಿರುವ ಸಮಯಾವಕಾಶದಲ್ಲಿ ಹುಡುಕುವುದು ಮತ್ತು ಬಳಸುವುದು ಕಠಿಣ ಕೆಲಸ. ಈ ಮಾಹಿತಿ ಸಾಗರದಲ್ಲಿ ನಮಗೆ ಬೇಕಾದ, ಅತ್ಯಂತ ಉಪಯುಕ್ತವಾದ ಮಾಹಿತಿಯನ್ನು ಆರಿಸುವುದು ಬುಕ್‌ಮಾರ್ಕಿಂಗ್ ತಾಣಗಳ ಸಹಾಯದಿಂದ ಸುಲಭವಾಗುತ್ತದೆ. ಈ ತಾಣಗಳಲ್ಲಿ ಬಳಕೆದಾರರಾದ ನಾವೆಲ್ಲರೂ ಅತ್ಯುತ್ತಮ ಮಾಹಿತಿಯನ್ನು ಟ್ಯಾಗ್ ಮಾಡಿ ರಕ್ಷಿಸುವ ಮೂಲಕ ಪರಸ್ಪರರಿಗೆ ಸಹಾಯ ಮಾಡುತ್ತೇವೆ. ಹಾಗೂ ಪರಸ್ಪರರ ಅನುಭವ ಮತ್ತು ಸಲಹೆಗಳ ಮೇಲೆ ಅವಲಂಬಿತರಾಗಿರುತ್ತೇವೆ. ನಮಗೆ ಸುಲಭವಾಗಿ ಅತ್ಯುತ್ತಮವಾದ ಮಾಹಿತಿ ನೀಡುವುದು ಇತರ ಬಳಕೆದಾರರ ಟ್ಯಾಗಿಂಗ್ ಮತ್ತು ಶಿಫಾರಸು ಮಾಡಿದ ಪುಟಗಳೇ. ಹಾಗಾಗಿ ಸಾಮಾಜಿಕ ಹುಡುಕಾಟ ತಾಣಗಳಾದ ಈ ಸಾಮಾಜಿಕ ಬುಕ್‌ಮಾರ್ಕಿಂಗ್ ತಾಣಗಳನ್ನು ಪ್ರಬುದ್ಧ ಹುಡುಕಾಟ ತಾಣಗಳೆಂದು ಕರೆಯಬಹುದು.