ಅಂತರ್ಜಾಲದ ಆಗಮನದೊಡನೆ ಮಾಹಿತಿ ಮಹಾಪೂರವೇ ಹರಿಯತೊಡಗಿದೆ. ಕೇವಲ ಒಂದು ದಿಕ್ಕಿನ ಮಾಹಿತಿ ಹರಿಯುವಿಕೆ ಸಾಕಾಗುತ್ತಿಲ್ಲ ಎನ್ನುವ ಹಾಗೆ ಸಂಭಾಷಣೆ, ಚರ್ಚೆಗಳೂ ಸಹಿತ ಪ್ರಾರಂಭವಾಗಿವೆ. ಅದಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ತಮ್ಮದೇ ಆದ ಆನ್‌ಲೈನ್ ಐಡೆಂಟಿಟಿ ಮತ್ತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿಕೊಳ್ಳುವ ಅವಕಾಶಗಳು ದೊರೆಯತೊಡಗಿವೆ.

ಇತ್ತೀಚೆಗೆ ಸೋಷಿಯಲ್ ಮೀಡಿಯಾ ಅಂತರ್ಜಾಲ ಬಳಕೆದಾರರ ಅವಶ್ಯಕತೆಯಾರುವುದಷ್ಟೇ ಅಲ್ಲ ಅವು ಒಂದಿಡೀ ಸಮಾಜದ ಅಭಿಪ್ರಾಯ ರೂಪಿಸುವ, ಆಳುವ ಸರ್ಕಾರದ ಅಳಿವು ಉಳಿವಿನ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನೂ ಹೊಂದಿವೆ. ಇದು ಇತ್ತೀಚೆಗೆ ನಡೆದ ಈಜಿಪ್ಟ್ ಕ್ರಾಂತಿಯ ವೇಳೆ ಸಾಬೀತಾಗಿದೆ. ಹಾಗಿದ್ದರೆ ಈ ಸಾಮಾಜಿಕ ಮಾಧ್ಯಮಗಳು ಅಂದರೇನು, ಅವು ಯಾವುವು ಎಂಬುದರ ಕುರಿತು ನೋಡೋಣ.

ಸಾಮಾಜಿಕ ಮಾಧ್ಯಮಗಳೆಂದರೆ ಏನು ಎಂಬುದನ್ನು ವ್ಯಾಖ್ಯಾನಿಸುವುದು ಸುಲಭವಲ್ಲ. ಇವು ‌ಜನರು ಭಾಗಿಗಳಾಗಿ ಚರ್ಚಿಸುವ ಮತ್ತು ಮಾಹಿತಿ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅಂತರ್ಜಾಲ ಜಾಲತಾಣಗಳಾಗಿವೆ ಎಂಬುದಾಗಿ ಸುಲಭದಲ್ಲಿ ಹೇಳಬಹುದು. ಆದರೆ ಒಂದೊಂದು ಸಾಮಾಜಿಕ ಮಾಧ್ಯಮ ಜಾಲತಾಣವೂ ಒಂದೊಂದು ರೀತಿಯ ವಿಭಿನ್ನ ಸೇವೆಗಳನ್ನು ನೀಡುವುದರಿಂದಾಗಿ ಅವುಗಳೆಲ್ಲವನ್ನೂ ಒಂದೇ ಕಡೆ ಇಟ್ಟು ವ್ಯಾಖ್ಯಾನಿಸುವುದು ಕಷ್ಟಕರ. ಉದಾಹರಣೆಗೆ ನೋಡಿ, ಫೇಸ್‌ಬುಕ್, ಬ್ಲಾಗರ್, ವಿಕಿಪೀಡಿಯಾ ಇವೆಲ್ಲವೂ ಸಾಮಾಜಿಕ ಮಾಧ್ಯಮ ಜಾಲತಾಣಗಳೇ ಹೌದು. ಆದರೆ ಫೇಸ್‌ಬುಕ್‌ನಲ್ಲಿ ಒಬ್ಬ ವ್ಯಕ್ತಿ ತನ್ನದೇ ಫ್ರೊಫೈಲ್ ರಚಿಸಿ ಸ್ನೇಹಿತರನ್ನು ಸೇರಿಸಿಕೊಳ್ಳಬಹುದು, ಹೊಸ ಗೆಳೆಯರನ್ನು ಹುಡುಕಬಹುದು ಅವರೊಡನೆ ವಿಷಯಗಳನ್ನು ಹಂಚಿಕೊಳ್ಳಬಹುದು, ವೀಡಿಯೋಗಳನ್ನು ಅಪ್‌ಲೋಡ್ ಮಾಡಬಹುದು. ಬ್ಲಾಗರ್‌ನಲ್ಲಿ ಕಥೆ, ಕವಿತೆ, ಲೇಖನಗಳನ್ನು ಬರೆದು ಪ್ರಕಟಿಸುವುದು, ಫೋಟೊ, ವೀಡಿಯೋಗಳನ್ನು ಪ್ರಕಟಿಸುವುದು ಮತ್ತು ಚರ್ಚೆ ಮಾಡುವುದು ಸಾಧ್ಯವಿದೆ. ಆದರೆ ವಿಕಿಪೀಡಿಯಾದಲ್ಲಿ ಸ್ನೇಹ-ಸಂಪರ್ಕ ಎಲ್ಲ ಗೌಣ. ಇಲ್ಲಿ ಕೇವಲ ಜಾಗತೀಕವಾಗಿ ಓದುಗರಿಗೆ ಅಗತ್ಯವಾದ ಮಾಹಿತಿಯನ್ನು ಮಾತ್ರ ಹಾಕಬಹುದು ಮತ್ತು ಬೇರೆಯವರು ಹಾಕಿದ ಮಾಹಿತಿಯನ್ನು ಬೆಳೆಸಬಹುದು.

ಹೀಗಿರುವಾಗ ಸಾಮಾಜಿಕ ಮಾಧ್ಯಮ ಅಂದರೆ ಸಾಮಾಜಿಕ ಸಂಪರ್ಕಗಳನ್ನು ಬೆಳೆಸಿಕೊಳ್ಳುವುದೇ, ಬರವಣಿಗೆಗಳನ್ನು ಪ್ರಕಟಿಸಿ ಓದುಗರೊಂದಿಗೆ ಹಂಚಿಕೊಂಡು ಚರ್ಚಿಸುವುದೇ ಅಥವಾ ಮಾಹಿತಿಗಳನ್ನು ಬೆಳೆಸುವುದೇ? ಇವೆಲ್ಲವೂ ಸಾಮಾಜಿಕ ಸಂವಹನಗಳಾದ್ದರಿಂದಾಗಿ ಸಾಮಾಜಿಕ ಮಾಧ್ಯಮವನ್ನು ಸಾಮಾಜಿಕ ಸಂವಹನದ ಸಾಧನ ಎಂದು ಕರೆಯಬಹುದಾಗಿದೆ. ಸುದ್ದಿ ಮಾಧ್ಯಮಕ್ಕೂ ಸಾಮಾಜಿಕ ಮಾಧ್ಯಮಕ್ಕೂ ವ್ಯತ್ಯಾಸವಿದೆ. ಈವರೆಗಿನ ಪ್ರಸಿದ್ಧ ಸುದ್ದಿ ಮಾಧ್ಯಮಗಳಾದ ಪತ್ರಿಕೆಗಳು, ರೇಡಿಯೋ ಮತ್ತು ಟಿವಿಗಳು ಏಕಮುಖಿ ಮಾಹಿತಿ ಪ್ರಸಾರ ಸಾಧನಗಳಾಗಿವೆ. ಆದರೆ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು ಮತ್ತು ತಮ್ಮ ಅಭಿಪ್ರಾಯಗಳನ್ನು ನಿರ್ಭಿಡೆಯಿಂದ ವ್ಯಕ್ತಪಡಿಸಬಹುದು.

ಜಾಗತೀಕವಾಗಿ ಅತ್ಯಂತ ಪ್ರಸಿದ್ಧವಾದ ಫೇಸ್‌ಬುಕ್, ಟ್ವಿಟ್ಟರ್‌ ಮತ್ತು ಇತ್ತೇಚೆಗೆ ಬಂದು ಗಮನ ಸೆಳೆಯುತ್ತಿರುವ ಗೂಗಲ್‌ ಪ್ಲಸ್‌ನಂತಹ ಸಾಮಾಜಿಕ ತಾಣಗಳ ಹೊರತಾಗಿ ಇನ್ನೂ ಅನೇಕ ರೀತಿಯ ಸೇವೆಗಳನ್ನು ನೀಡುತ್ತಿರುವ ತಾಣಗಳಿವೆ. ಉದಾಹರಣೆಗೆ, ಫ್ಲಿಕ್‌ಸ್ಟರ್ ಎಂಬ ತಾಣವು ಇತರ ಬಳಕೆದಾರರು ನೀಡಿದ ರೇಟಿಂಗ್‌ಗಳ ಆಧಾರದ ಮೇಲೆ ನೀವು ನೋಡಬಹುದಾದ ಸಿನೆಮಾಗಳನ್ನು ರೆಕಮೆಂಡ್ ಮಾಡುತ್ತದೆ.

ಸಾಮಾಜಿಕ ಮಾಧ್ಯಮಗಳ ಪ್ರಕಾರಗಳ ಕೆಲವು ಉದಾಹರಣೆಗಳನ್ನು ನೋಡೋಣ:

  • ಬ್ಲಾಗಿಂಗ್: ಸಾಮಾಜಿಕ ಮಾಧ್ಯಮಗಳಲ್ಲಿ ಬ್ಲಾಗಿಂಗ್‌ಗೆ ಮಹತ್ವದ ಸ್ಥಾನ. ಅಂತರ್ಜಾಲದಲ್ಲಿ ವಿಷಯಗಳನ್ನು ಪ್ರಕಟಪಡಿಸುವುದನ್ನು `ವೆಬ್ `ಲಾಗಿಂಗ್’ ಅಥವಾ ಬ್ಲಾಗಿಂಗ್ ಎಂದು ಕರೆಯುತ್ತಾರೆ. ಯಾರು ಬೇಕಾದರೂ ಉಚಿತವಾಗಿ ತಮ್ಮದೇ ಆದ ಬ್ಲಾಗ್‌ (ಅಂತರ್ಜಾಲ ಪತ್ರಿಕೆ, ದಿನಚರಿ ಎಂತಲೂ ಕರೆಯಬಹುದು.) ರಚಿಸಿಕೊಂಡು ತಮ್ಮದೇ ಆದ ವಿಚಾರಗಳನ್ನು, ಸೃಜನಶೀಲ ಬರಹಗಳನ್ನು, ಫೋಟೋ, ವೀಡಿಯೋಗಳನ್ನು ಪ್ರಕಟಿಸಬಹುದು. ಬ್ಲಾಗ್ ಪೋಸ್ಟ್‌ಗಳು ಎಂದು ಕರೆಯಲ್ಪಡುವ ಈ ಪ್ರಕಟಣೆಗಳನ್ನು ಆಸಕ್ತರು ಓದಬಹುದು, ಪ್ರತಿಕ್ರಿಯೆ ನೀಡಬಹುದು ಮತ್ತು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳಬಹುದು. ಈ ಬ್ಲಾಗಿಂಗ್ ಸೇವೆ ನೀಡುತ್ತಿರುವ ಪ್ರಮುಖ ತಾಣಗಳೆಂದರೆ ವರ್ಡ್‌ಪ್ರೆಸ್, ಬ್ಲಾಗರ್, ಕನ್ನಡದ ಸಂಪದ ಇತ್ಯಾದಿಗಳು.
  • ಮೈಕ್ರೋಬ್ಲಾಗಿಂಗ್: ಇವುಗಳಲ್ಲದೇ ಇತ್ತೀಚೆಗೆ ಜಗತ್ಪ್ರಸಿದ್ಧವಾಗಿರುವುದು ಮೈಕ್ರೋಬ್ಲಾಗಿಂಗ್. ಬ್ಲಾಗಿಂಗ್ ತಾಣಗಳಲ್ಲಿ ಎಷ್ಟು ಬೇಕಾದರೂ ಬರೆಯಬಹುದು. ಆದರೆ ಈ ಮೈಕ್ರೋಬ್ಲಾಗಿಂಗ್‌ನಲ್ಲಿ ಕೆಲವೇ ಅಕ್ಷರಗಳಲ್ಲಿ (ಉದಾಹರಣೆಗೆ ಟ್ವಿಟ್ಟರ್‌ನಲ್ಲಿ ಕೇವಲ 140 ಅಕ್ಷರಗಳು.) ಬ್ಲಾಗ್ ಮಾಡಬೇಕಾಗುತ್ತದೆ. ಇದನ್ನು ಹೊಸ ಮಾಹಿತಿಯನ್ನು ತಕ್ಷಣದ ಸುದ್ದಿಯನ್ನಾಗಿ ಜಗತ್ತಿಗೆ ತಿಳಿಸಲು ಬಳಸುತ್ತಾರೆ. ಫೇಸ್‌ಬುಕ್, ಟಂಬ್ಲರ್ ಮತ್ತು ಗೂಗಲ್ ಪ್ಲಸ್‌ನಲ್ಲಿಯೂ ಮೈಕ್ರೋಬ್ಲಾಗಿಂಗ್ ಮಾಡಬಹುದು. ಇಂದು ಟ್ವಿಟ್ಟರ್‌ ಅನ್ನು ಸಿನೆಮಾ, ಕ್ರೀಡಾ ತಾರೆಗಳು, ಸುದ್ದಿ ಮಾಧ್ಯಮಗಳು, ವೃತ್ತಿಪರ ವ್ಯಕ್ತಿಗಳು ಮತ್ತು ವಿದ್ಯಾರ್ಥಿಗಳು ಬಳಸುತ್ತಿದ್ದಾರೆ ಅಷ್ಟೇ ಅಲ್ಲದೇ ಉದ್ದಿಮೆಗಳು, ಸಂಘ-ಸಂಸ್ಥೆಗಳೂ ನಿರಂತರವಾಗಿ ಬಳಸುತ್ತಿವೆ.
  • ಸಾಮಾಜಿಕ ಸಂಪರ್ಕ ತಾಣಗಳು: ಸಾಮಾಜಿಕ ಸಂಪರ್ಕ ತಾಣಗಳು ಈಗ ಯುವ ಜನತೆಯಲ್ಲಿ, ಉದ್ಯೋಗಿಗಳಲ್ಲಿ ಮತ್ತು ಉದ್ದಿಮೆಗಳಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಮತ್ತು ಹೆಚ್ಚು ಬಳಸಲ್ಪಡುತ್ತಿರುವ ತಾಣಗಳಾಗಿವೆ. ಇವುಗಳಲ್ಲಿ ನಮ್ಮ ಪ್ರೊಫೈಲ್ ರಚಿಸಿಕೊಳ್ಳಬಹುದು, ಸ್ನೇಹಿತರನ್ನು ಹೊಂದಬಹುದು, ಹೊಸ ಗುಂಪುಗಳನ್ನು ರಚಿಸಬಹುದು ಮತ್ತು ಸೇರಬಹುದು. ಇಷ್ಟೇ ಅಲ್ಲದೇ ಸುದ್ದಿಗಳನ್ನು, ಮನರಂಜನೆಯ ಮಾಹಿತಿಗಳನ್ನು ಹಂಚಿಕೊಳ್ಳಬಹುದು ಮತ್ತು ಅವುಗಳಿಗೆ ಪ್ರತಿಕ್ರಿಯೆ ನೀಡಬಹುದು. ಇದಕ್ಕೆ ಉದಾಹರಣೆ ಫೇಸ್‌ಬುಕ್, ಆರ್ಕುಟ್, ಗೂಗಲ್ ಪ್ಲಸ್, Hi5 ಮುಂತಾದವುಗಳು. ಇದಷ್ಟೇ ಅಲ್ಲದೇ ಪ್ರತಿಯೊಬ್ಬರೂ ತಮ್ಮ ದೇಶ, ಭಾಷೆ, ಊರು, ಆಸಕ್ತಿ ಮುಂತಾದ ಸಂಗತಿಗಳ ಕುರಿತು ತಮ್ಮದೇ ಆದ ಸಾಮಾಜಿಕ ಸಂಪರ್ಕ ತಾಣಗಳನ್ನು, ಗುಂಪುಗಳನ್ನು ರಚಿಸಿಕೊಳ್ಳಬಹುದು.
  • ಸೋಶಿಯಲ್ ಬುಕ್ಮಾರ್ಕಿಂಗ್ ತಾಣಗಳು: ಈ ತಾಣದಲ್ಲಿ ನಾವು ಹೆಚ್ಚಾಗಿ ಬಳಸುವ ಅಥವಾ ಇಷ್ಟವಾದ ಇತರೆ ತಾಣಗಳನ್ನು ಬುಕ್‌ಮಾರ್ಕ್ ಮಾಡಬಹುದು ಮತ್ತು ನಮ್ಮ ಆಸಕ್ತಿಗೆ ತಕ್ಕಂತೆ ಬುಕ್‌ಮಾರ್ಕ್ ಮಾಡಿದ ತಾಣಗಳನ್ನು ನೋಡಬಹುದು. ಇದಕ್ಕೆ ಉದಾಹರಣೆಯಾಗಿ Del.icio.usBlinklistSimpy ಇವುಗಳನ್ನು ಕೊಡಬಹುದು.
  • ಸಾಮಾಜಿಕ ಸುದ್ದಿ ತಾಣಗಳು: ಇವುಗಳಲ್ಲಿ ಸುದ್ದಿಗಳು ಮತ್ತು ಲೇಖನಗಳನ್ನು ಓದಬಹುದು ಮತ್ತು ಅವುಗಳಿಗೆ ಮತ ನೀಡುವ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ಚರ್ಚೆ ಮಾಡಬಹುದು. ಇವುಗಳಿಗೆ ಉದಾಹರಣೆಗಳು: DiggPropellerReddit.
  • ಸಾಮಾಜಿಕ ಫೋಟೋ ಮತ್ತು ವೀಡಿಯೋ ಹಂಚುವಿಕೆ: ಈ ತಾಣಗಳಲ್ಲಿ ಫೋಟೋ ಮತ್ತು ವೀಡಿಯೋಗಳನ್ನು ಅಪ್‌ಲೋಡ್ ಮಾಡಿ ಅವುಗಳನ್ನು ಗೆಳೆಯರೊಂದಿಗೆ ಮತ್ತು ವಿಶ್ವದ ಎಲ್ಲ ಆಸಕ್ತರೊಂದಿಗೆ ಹಂಚಿಕೊಳ್ಳಬಹುದು. ಇದಕ್ಕೆ ಫ್ಲಿಕರ್, ಪಿಕಾಸಾ ವೆಬ್ ಮುಂತಾದವು ಪ್ರಸಿದ್ಧವಾಗಿವೆ.
  • ಉದ್ಯೋಗ ಮತ್ತು ವ್ಯವಹಾರ: ಸಾಮಾಜಿಕ ಮಾಧ್ಯಮಗಳಲ್ಲಿ ಉದ್ಯೋಗಗಳನ್ನು ಮತ್ತು ಉದ್ಯೋಗಾಕಾಂಕ್ಷಿಗಳನ್ನು ಹುಡುಕುವುದು ಸುಲಭವಾಗಿದೆ. ಅರೆಕಾಲಿಕ ಮತ್ತು ಮನೆಯಿಂದಲೇ ಮಾಡುವ ಉದ್ಯೋಗಗಳು ಇಂತಹ ಅವಕಾಶಗಳನ್ನು ಹುಡುಕುವುದು ಈ ಸಾಮಾಜಿಕ ಮಾಧ್ಯಮಗಳ ಸಹಾಯದಿಂದಾಗಿ ಸುಲಭವಾಗಿದೆ. ಉದ್ಯೋಗವನ್ನರಸುವವರು, ವೃತ್ತಿನಿರತರು ಸಂಪರ್ಕಗಳನ್ನು ಬೆಳೆಸಿಕೊಳ್ಳಲು ಮತ್ತು ಚರ್ಚಿಸಲು ಬ್ರಾಂಚ್‌ಔಟ್, ಲಿಂಕ್ಡ್‌ಇನ್‌ ಮುಂತಾದ ತಾಣಗಳು ಸಹಾಯ ಮಾಡುತ್ತವೆ. ಇನ್ನು ಸಣ್ಣ ಉದ್ದಿಮೆಗಳನ್ನು ಪ್ರಾರಂಭಿಸುವವರಿಗೆ ತಮ್ಮ ಉದ್ದಿಮೆಯ ಕುರಿತು, ತಾವು ನೀಡುವ ಸೇವೆಗಳ ಕುರಿತು ಜನರಿಗೆ ತಿಳಿಸಲು, ತಮ್ಮ ಉದ್ದಿಮೆ, ಕಂಪನಿಗಳಿಗೆ ಪ್ರಚಾರ ಪಡೆದುಕೊಳ್ಳಲು ಇದು ಸುಲಭ ಮತ್ತು ಉಚಿತವಾದ ಅವಕಾಶವಾಗಿದೆ.

ಈ ರೀತಿಯಾಗಿ ಯಾವುದೇ ತಾಣದಲ್ಲಿ ಬಳಕೆದಾರರು ಸಂವಹನ ಮಾಡಲು ಸಾಧ್ಯವಿದೆಯೋ ಅವುಗಳನ್ನೆಲ್ಲ ಸಾಮಾಜಿಕ ಮಾಧ್ಯಮ ತಾಣಗಳು ಎಂದು ಕರೆಯಬಹುದು. ಸಾಮಾಜಿಕ ಮಾಧ್ಯಮಗಳ ಪರಿಚಯ ಮತ್ತು ಬಳಕೆ ಇತ್ತೀಚಿನ ಜೀವನದಲ್ಲಿ ಅತ್ಯಂತ ಅಗತ್ಯವಾಗಿದೆ. ಅಷ್ಟೇ ಅದನ್ನು ಹಿತಮಿತವಾಗಿಯೂ ಬಳಸುವುದು ಅನಿವಾರ್ಯವಾಗಿದೆ.