ಧುಮ ಧುಮಣ್ಣ ಧೂಮ್ಮಸಾಲಿಗಣ್ಣ
ಧುಮ ಧುಮ್ಮ ಧೂಮ್ಮಸಾಲಿಗೆ

ಶ್ರೀ ಗುರುವೆ ಮತಿ ಕೊಡು ನೆನಸುವೆ ಮುಂದಾ
ವರಗಳು ಬಂದಿವೆ ಕರವಿಡಿದು ನಿಂತೀನಿ ನಾ ನಿನ್ನ ಕಂದಾ
ಹೋಳಿಯ ಪದಗಳು ಸಾರುವೆ ಮುಂದಾ                                                                ॥

ನಮೋ ನಮೋ ಕರವಿಡಿದು ತಾಯಿ ಸರಸ್ವತಿ
ನಾಲಿಗೆ ಮ್ಯಾಲೆ ಕೊಡುವ ಮಾತೆ
ಆದಿಬ್ರಹ್ಮನ ಸತಿ ಜನ ಆದಿಕಾರ್ತಿ
ನವಲಮ್ಯಾಲೆ ಕುಂತು ಮೆರೆಯುತ ಬರತಿ                                                              ॥

ವಾರಿಗೆ ಹೆಣ್ಣೆಂದು ಕರೆದು ಕೇಳಿದೆನೇ
ಮಾರಿ ಬಣ್ಣಕ್ಕ ನಾನು ಮರುಳಾದೆನೇ
ಓಣಿಯೊಳಗೆ ನಿಂತು ಭಾಳ ಹೇಳಿದೆನೇ
ಮೀರಿ ಹೋಗಲಿ ಬ್ಯಾಡ ಮಿತ್ರನಾಗುವೆನೇ                                                             ॥

ಮಿತ್ರನಾಗಲಿಕೆ ಮೀರಿದವನೇನು ಬತ್ತು
ಮನಸ್ಯಾರೊಳು ಊರೊಳಗೆ ನೀನು ಗೊತ್ತು
ಅರಿಯದ ಮಾತು ಆಡಬಹುದೇನು
ಅತ್ತಿ ಮಾವನ ಮುಂದೆ ಹೇಳುವೇ ನಾನು                                                               ॥

ಇಂಥ ಮಾತಿಗೆ ನಾನು ಅಂಜಬಲ್ಲೆನೇನೇ
ಪಂಥ ಗೆಲಿಸಿಕೊಂಡು ಹೋಗಬಂದೀನೇ
ಅಂತರಂಗದೊಳು ತಿಳಕೋರೆ ನೀನೇ
ಭ್ರಾಂತಿ ತೀರಿಸಿಕೊಂಡು ಹಾರಾ ಹಾಕುವೆನೇ                                                        ॥

ಹಾರ ಒಯ್ದು ನಿನ್ನ ಹರವಿಗೆ ಹಾಕು
ಜಾರತನದ ಬುದ್ಧಿ ಅಳದಿರಬೇಕು
ಪರಸ್ತ್ರೀಯರ ನಿಂದೆ ಆಡುವುದು ಸಾಕು
ಮಾರಾಯನ ಬಾಧೆಗೆ ಮರೆತು ಬಿಡಬೇಕು                                                             ॥

ಕೇಳು ಕೇಳಲೇ ಹೆಣ್ಣೆ ಬಾಳ ಹೊನ್ನು ಕೊಡುವೆ
ಬೇಡಿದ ವಸ್ತುಗಳ ಮಾಡಿಸಿ ಕೊಡುವೆ
ಬೆಳ್ಳಿ ಬಂಗಾರ ನಿನ್ನ ಥರ ಥರಕೆ ಜಡಿವೇ
ವ್ಯಾಳ್ಯಾ ಕಳಿಯಬ್ಯಾಡ ಇನ್ಯಾಕೆ ತಡವೇ                                                               ॥

ತಿಳಿಯದೆ ಮಾತುಗಳ ಆಡಿದೆ ಮೂರ್ಖ
ಬಡಿವಾರ ದನದ ಬುದ್ಧಿ ನಿನಗಿಲ್ಲ ತರ್ಕ
ನಡೆಸಲಿ ಹೋಗಬ್ಯಾಡ ನನಗೂಡ ತರ್ಕ
ಹೊಡೆದು ಹೆಣ ಹಾಕುವರು ತಿಳಿಯೋ ಮೂರ್ಖ                                                    ॥

ಮೂರ್ಖನಾದರೆ ಭ್ರಮಿ ಭಾಳ ಉಂಟು ತರ್ಕ
ತಗೀನೀನು ಕಾಡೋದು ಎಷ್ಟು ತರ್ಕ
ಮಾಡಿ ನಾನು ಹಾಕುವೆ ಗಂಟು ಹರಕತ
ತಡ ಇಲ್ಲ ಹೆಣ್ಣ ಜಾತಿ ಇಷ್ಟ                                                                                        ॥

ಜಾತಿ ಮಗನಾದರ ತಿಳಕೋ ಮನದೊಳಗ
ಜ್ಯೋತಿ ಮುತ್ತಿನಂಗ ಹೊಳಿಯೋ ಜನದೊಳಗ
ಜತನ ಮಾಡಿಕೊಳ್ಳು ರತನ ನಿನ್ನೊಳಗ
ಜತೀನ ನಿಂತು ಬೆಲಿ ಏರಿಸ ಎನಗ                                                                           ॥

ಬೆಲಿಯ ಮಾಡಲಿಕ್ಕೆ ಬಂದಿಲ್ಲೆ ನಾನು
ಬೇಲ್ಯಾನ ವ್ಯಾಪಾರ ತೀರೀಸೆ ನೀನು
ಬಲಿ ಒಡ್ಡಿ ಬ್ಯಾಟೆಕಾರ ಕುಂತಿನೇ ನಾನು
ಬಾಲ ಹುಡುಗನ ಪ್ರೀತಿ ದಕ್ಕಸೇ ನೀನು                                                                  ॥

ಪ್ರೀತಿ ದಕ್ಕಸಲಿಕ್ಕೆ ನೀನ್ಯಾರೋ ಮೂರ್ಖಾ
ಪೃಥ್ವಿಯ ಆಳುವ ಗಂಡನು ಚೊಕ್ಕ
ಎನ್ನ ಮೈದುನರಿಗೆ ಬಾಳ ಅದೋ ಸೊಕ್ಕ
ತಿಳಿದು ನೀ ಜಾರಲೋ ತಿಳಿಯಲೋ ಮೂರ್ಖ                                                       ॥

ಇಂಥ ಪಂಥಗಳೆಲ್ಲಾ ನಾನು ಬಲ್ಲೇನೆ
ಖೊಟ್ಟಿ ಗುಣದವಳೆಂದು ಸುದ್ದಿ ಕೇಳೀನೆ
ಗಟ್ಟಿ ಪೀತಾಂಬರ ತಂದು ಉಡಿಸುವೆನೇ
ಸಿಟ್ಟನಾಗಲಿ ಬ್ಯಾಡ ಗುಣವಂತಿ ನೀನೇ                                                                   ॥

ಗುಣವಂತನಾದವನಿಗೆ ಸಿಟ್ಟುತರವಲ್ಲಾ
ಎಣಕಿ ಇಲ್ಲದ ಮಾತು ಎಂದೂ ಭಯವಿಲ್ಲಾ
ಅಣಕದ ಮಾತುಗಳು ಎಂದೂ ನಿನಗ ಸಲ್ಲಾ
ಜಾಣನಾಗಿರು ಹೋಗುವೇ ನಲ್ಲಾ                                                                             ॥

ಸುಮ್ಮನೆ ಇದ್ದರ ಸುರು ಅಂಬುವರು ಹಾಂಗೆ
ಸಮಯ ಹೋದೀತೆಂದು ತಡವಿದೆ ನಿನಗೆ
ಹಮ್ಮು ಮಾಡಿದೆನಲ್ಲಾ ನಾ ನಿನ್ನ ಮ್ಯಾಲೆ
ಉಮ್ಮೇದ ರತಿಕಾಲ ತೀರಿಸರೆ ಬಾರೆ                                                                       ॥

ರತಿ ತೀರಿಸಲಿಕ್ಕೆ ಸತಿ ಪುರುಷನೆ ನೀನು
ಹಿತವಾಗಿ ಇರಹೋಗು ಮತಿಗೇಡಿ ನೀನು
ನಿನ್ನಂಗ ನನಗ ನಾಚಿಕೀ ಇಲ್ಲೇನು
ಹತ ಮಾಡಿಕೋ ಬ್ಯಾಡ ನಿನ್ನ ಜೀವವನು                                                                ॥

ಜೀವದ ಹಂಗುನಾ ಇಟ್ಟಿಲ್ಲೆ ಹೆಣ್ಣೆ
ಭಾವಕ್ಕ ನೋಡಿ ಇಟ್ಟೀನೆ ಕಣ್ಣು
ಯಾವ ಹಾನ ಬಲವಂತ ನಿಮ್ಮಣ್ಣ
ಅವನಿಗೆ ತರುವೆನು ಕುತನಿಯ ಚೊಣ್ಣ                                                                     ॥

ಚೊಣ್ಣೆಯ ತರಲಿಕ್ಕೆ ಕಾಣದವನೇನು
ಕಣ್ಣಲ್ಲಿ ಕಂಡರೆ ಕಡಿದು ಹಾಕುವನು
ಅಣ್ಣ ಹಾವ ಬಾಳ ಬಲವಂತನು ನಿನ್ನ
ಚಣ್ಣ ಕಳೆದು ಬಯಲೀಗೆ ಇಳಿಸುವನು                                                                      ॥

ಬೈಲಿಗಿಳಿಸುವಂಥ ಜೋರು ಅಂವಗಿಲ್ಲ
ಕೊಲ್ಲಲು ಮನುಜಾಗ ಧೈರ್ಯವು ಇಲ್ಲ
ಗಂಡ ನನ ಮದನೋಡಿ ಎದೆ ಒಡೆದನಲ್ಲ
ಇಲ್ಲಿ ತನ ಬಂದರೆ ಮುರಸೂವೆ ಹಲ್ಲ                                                                        ॥

ಹಲ್ಲ ಮುರಿಸಲಿಕ್ಕೆ ದೊರಿಯೇನೋ ನೀನು
ಕಲ್ಲಗಾಣಕ್ಕೆ ಹಾಕಿ ಎಳಸುವೆ ನಾನು
ಗಲ್ಲಿಗೇ ಹಾಕಿ ನಿನ್ನ ಇಲ್ಲ ಅನಿಸುವೆನು
ಬಲವಿದ್ದ ಭಾವಗ ಹೇಳಿ ವದಿಸುವೆನು                                                                       ॥

ಎಲ್ಲಿ ಕಡದ ಹೆಸರ ಆಗ್ಯಾನ ಅವನು
ಚಿಕ್ಕಂದಹಿಡಿದ ಗುಣ ನೋಡಿನೋ ನಾನು
ಯಾತಕ್ಕ ಹೇಳುತ್ತಿ ಬಡಿವಾರ ನೀನು
ಇಲ್ಲಿ ತನ ಬಂದರೆ ಹಿಚುಕಿಸುವೆ ಗೋಣು                                                                 ॥

ಗೋಣ ಹಿಚಕಲಿಕ್ಕೆ ಅರಸೇನು ನೀನು
ದೂರ ನಿಲ್ಲು ಎನ್ನ ಪುರುಷ ಬರುವನು
ನಿನ್ನನ್ನು ಕಂಡರೆ ಸೀಳಿಹಾಕುವನು
ವಾರಿ ಬಿದ್ದು ಓಡಿ ಹೋಗುವೇ ನೀನು                                                                       ॥

ವಾರಿ ಬಿದ್ದು ಓಡಲಿಕ್ಕೆ ಹೆಂಗಸಲ್ಲೇ ನಾನು
ನಿಲ್ಲಲಾರ ಎನ್ನ ಧೈರ್ಯಕ್ಕೆ ಅವನು
ಬಿಲ್ಲು ಬಾಣ ಹಿಡದ ನಿಂತೇನು
ಕಡದ ಹಾಕಿ ಅವನ ವಂಶ ಕಳದೇನು                                                                      ॥

ಹಮ್ಮು ಮಾಡಿ ಹರಿ ಬ್ರಹ್ಮನು ಕೆಟ್ಟ
ಹೆಂಗಸಿನ ಕಾಲಾಗ ಮನಿಮಾರು ಬಿಟ್ಟ
ಅಡಿ ಅಡಿ ತಿರುಗಿ ಆಗಿದ್ಯೊ ಬಟ್ಟಾ
ಸುಳ್ಳಲ್ಲ ಶಾಶ್ವತ ಹಾಕೋ ನೀ ಗಂಟಾ                                                                    ॥

ಹೌದೆ ಬಾಲೀ ಶಾಸ್ತ್ರ ಹೇಳೀದಿ ಎಷ್ಟ
ಹೊಟ್ಟಿ ಮಗಳೀಗೆ ಸ್ವಯಂ ಬ್ರಹ್ಮ ಕೆಡಿಸಿಟ್ಟ
ಧ್ರುವರಾಜ ಗೆದ್ದಾನ ಹೆಣ್ಣಾದ ಸಿಟ್ಟ
ನಿನಗ ನನಗ ಕೂಡಿ ಬಂದಾವ ಕೂಟ                                                                       ॥

ಕೂಟ ಕಲಿಯಲಿಕ್ಕ ಪತಿ ಏನೋ ದುಷ್ಟ
ಮೂಢ ಮಾತುಗಳು ಆಡತೀ ಎಷ್ಟ
ದ್ರೌಪತಿ ಕಾಲಾಗ ಕೀಚsಕ ಕೆಟ್ಟ
ಪಾಠಶಾಲೆಯಲ್ಲಿ ಪ್ರಾಣವ ಕೊಟ್ಟ                                                                             ॥

ಕೀಚಕ ಸುದ್ಧಿ ನೀ ಹೇಳತಿ ಎಷ್ಟ
ಪಾಂಡವರ ತೆಲಿಮ್ಯಾಲ ಕೃಷ್ಣ ಹಸ್ತ ಇಟ್ಟ
ಕೌರವರ ಸಲ್ಯಾಗ ಸ್ವಯಂ ವೇಷವ ತೊಟ್ಟ
ಬಂದಂಥ ಗ್ರಹಚಾರ ದೂರಮಾಡಿಬಿಟ್ಟ                                                                    ॥

ಕಟಪ ಕೃಷ್ಣನ ಸುದ್ದಿ ನೀ ಹೇಳತಿ ಏನೋ
ಗೌಳಗಿತ್ತಿ ಮನ್ಯಾಗ ಬೆಳದಾನ ಅವನು
ಹಾಲ ಮೊಸರು ಕದ್ದು ಬಿದ್ದ ಓಡ್ಯಾನು
ಸಿಗಬಿದ್ದ ಮಾತಿಗೆ ಹಸ್ತ ಜೋಡಿಸ್ಯಾನು                                                                    ॥

ಹಸ್ತವ ಎಂದಿಗೆ ಜೋಡಿಸಿಲ್ಲಾ ಅವನು
ಸಂದಿ ಸಂದಿಯ ಹಿಡದು ಸುಂಕ ಬೇಡ್ಯಾನು
ಬಿಂಕ ಬಿದ್ದ ಬಾಲಿಗೆ ಎಡವಿ ಕೆಡವ್ಯಾನೋ
ದೂರ ನಿಂತು ಅಕಿಯ ಆಟ ನೋಡ್ಯಾನು                                                                ॥

ಎಡವಿ ಕೆಡವಿದ್ದು ಎನಗ ಗೊತ್ತಿಲ್ಲವೇನೋ
ಯಾತಕ್ಕ ಹೇಳುತೀ ಬಡಿವಾರ ನೀನು
ಬಳ್ಳಿಯ ಬಲ್ಲಿ ಓಡ್ಯಾಡಿದವನು
ಸುಟ್ಟ ಹಡಿ ಗಂಡಸರು ನವಿಲು ಮೋಹಿನೋ                                                         ॥

ಬಾಯಿಗೆ ಬಂದಂಗ ಆಡುವುದು ಏನೋ
ಏನ ತಿಳದೀಗನೀ ಮಾತಿನ ಗೌಣ
ಗೋಕುಲ ಗ್ರಾಮಕ ಧನಿ ಆಗಿಯಾನೋ
ಮೋಹಿನಿ ಮಾಡಿದಂಗ ಸರ್ವ ಸ್ತ್ರೀಯರನ್ನು                                                           ॥

ಮೋಹಿನಿ ಮಾಡಲಿಕ್ಕೆ ಗೊಡ್ಡೇನು ಅವನು
ತೊಡ್ಡ ಹೊಡದಂಗ ಹೋಗಿ ಕದ್ದ ಕುಂತಾನೋ
ಬಿದ್ದ ಹೆಣ್ಣಿಗಿ ಹೋಗಿ ಮುದ್ದ ಕೊಟ್ಟಾನೋ
ಕಂಸಗ ಅಂಜಿ ಊರ ಬಿಟ್ಟಾನೋ                                                                             ॥

ಕಂಸನ ಅಂಜಿಕಿ ಯಾತರದೋ ಏನೋ
ಕಾಲೀಯ ಮರ್ಧನ ಮಾಡೀದನವನು
ಸೊಕ್ಕ ಇದ್ದವನಿಗೆ ಸೀಳಿ ಒಗದಾನೋ
ಗೋವರ್ಧನ ಗುಡ್ಡ ಎತ್ತಿ ಒಗದಾನೋ                                                                     ॥

ಗುಡ್ಡವ ಹಿಡಿದದ್ದು ಗೊತ್ತಾದ ಅನ್ನು
ಕಾಲಿಯವನಿಗೆ ನೋಡಿ ಅಂಜಿ ಹೇತಾನು
ಮರಣವು ಬಂದಿತು ಓಡಿ ಹೋಗ್ಯಾನು
ಮುಚಕುಂದ ಬೆನ್ನಿಗಿ ಹೋಗಿ ನಿಂತಾನೋ                                                              ॥

ಓಡಿ ಹೋಗದ ಸುದ್ದಿ ನಿನಗ ಗೊತ್ತೇನು
ಹಿಂದಕ್ಕೆ ವಚನವ ಕೊಟ್ಟು ಬಂದಾನೋ
ಅದಕಾಗಿ ಅವನಿಗೀ ಕೊಟ್ಟ ದರುಶನೋ
ಮುಚಕುಂದ ಜನ್ಮವು ಆಯಿತು ಪಾವನವು                                                             ॥

ಧುಮ್ಮ ಧುಮ್ಮಣ್ಣ ಧುಮ್ಮ ಸಾಲಿಗಣ್ಣ
ಧುಮ್ಮ ಧುಮ್ಮ ಧುಮ್ಮಾ ಸಾಲಿಗೆ

* * *