ಶ್ರೀಶ ಮೈದುನನಿಗೆ ಪಾಶುಪತವನಿತ್ತ
ಸರ್ವನಮಿತ ಮಹೇಶನೇ
ಗಿರಿಜೇಶನೇ ಮೂರ್ಜಗದೀಶನೇ
ಪರಮೇಶನೇ ಕೈಲಾಸವಾಸನೇ ಸುಪ್ರ
ವೇಶನೇ ಅಂಬರಕೇಶನೇ ಮದನ ವಿನಾಶನೇ ಬೇಗನೇ
ಪಾಲಿಸೆನ್ನ ದಯದಿ                                                                                                      ॥

ಧಾತ್ರಿಯೊಳು ಮುಚಖಂಡಿ ಕ್ಷೇತ್ರದಿ ನೋಡಿದೆ
ಪಾತ್ರದವರನು ಆ ಜಾತಿಯೊಳು ಕಂಡು
ರಾತ್ರಿಯೊಳ್ಕುಳಿತು ಚರಿತ್ರೆ ಮಾಡಿದೆನಿಟ್ಟು
ಮಾತ್ರ ಮಾಡದೆ ವಿಚಿತ್ರ ಕೇಳುವದು                                                                       ॥

ಪ್ಯಾಟಿಗಳೊಳಗೆಲ್ಲಾ ನೀಟಾದ ಬಾಗಲಕೋಟೆಯ ಸಖಿಯರ
ಧಾಟ ಬೇರೆ ದೇಹದಾಟವು ಎದಿ ಮೇಲೆ ಮಾಟ ಬೇರೆ ರತಿ
ಬೇಟವು ಕಣ್ಣಿನ ನೋಟವು ಬೇರೆ ಕಾಮನಾಟದೊಳಗ ಮಹಾ
ಬೂಟಕರ್ವೆ ಇವರಾಟವು ತಿಳಿಯದು ನೋಟಕ್ಕೆ ಜನಕೆ                                         ॥

ಹೆಚ್ಚಿನ ಸಖಿಯರು ಸ್ವಚ್ಛಾದಿ ಫಣಿಯೋಳು
ಹಚ್ಚಿ ಬಟ್ಟಿನ ರೇಖಾ ಚುಚ್ಚಿಹರು ಮೇಲೆ
ಅಚ್ಚ ಕಸ್ತೂರಿ ತಿಲಕಾ ನಿಟ್ಟಿಹರು ಜಾತ್ರಿ
ವೆಚ್ಚಕ್ಕೆ ಪೊನ್ಗಳ ಬಿಚ್ಚಹರು ತಮ್ಮ
ಇಚ್ಚಿಗ ಪುರುಷರ ಮೆಚ್ಚುತ ಕರಕೊಂಡು
ಮುಚ್ಚಖಂಡಿಗೆ ಬಂದಾರುತ್ಸಾಹದಿಂದಾ                                                                  ॥

ಮುಟ್ಟಿದರೀಗಳೆ ಕೆಟ್ಟೀತೆಂಬುವ ಮೈಗೆ
ಪಟ್ಟ ಪೀತಾಂಬರವನುಟ್ಟಿಹರು
ತೊಳ್ಗೆ ನಟ್ಟಿಹ ಕುಪ್ಪಸ ತೊಟ್ಟಿಹರು
ಮನಕೆಷ್ಟು ಬಂದಷ್ಟೊಸ್ತ ನಿಟ್ಟಿಹರು ಮುನ್ನ
ದೃಷ್ಟಿಲಿ ನೋಡಿ ನಾನೆಷ್ಟಂತ ವರ್ಣಿಸ
ಲೊಟ್ಟಿಗೆ ಚಲ್ಪಿಕಿ ಘಟ್ಟಿಗಳೇನು                                                                                   ॥

ಕಾಲ ಸರ್ಪಳಿ ರುಳಿ ಕಾಲಂದಿಗೆಯ ಗೆಜ್ಜಿ
ಕಾಲುಂಗರ ಮೀನಪಿಲ್ಲೆಗಳು ವಜ್ರ
ನೀಲದುಂಗರ ಮುತ್ತಿನೋಲೆಗಳು ಕಂಠ
ಮಾಲಿಯು ಪದಕ ಜೋಮಾಲಿಗಳು ಇಂಥಾ
ಮೇಲಾಭರಣನಿಟ್ಟು ಲೋಲ್ಯಾಡುತಲಿ
ಚಲ್ಪ ಬಾಲೇರು ಬರುವ ವಿಶಾಲವನೇನೆಂಬೆ                                                          ॥

ಹೆರಳು ಹಾಕುತ ಚೌರಿಗಳಿಗಳೆಡಕ ಬಲಕಾ
ಹಣೆತುಂಬ್ಹಚ್ಚಿದ ಚಲ್ವ ಚೌಕಳಿಯು
ಮೂಗಿನೋಳ್ ನತ್ತು ಮುತ್ತಿನ ಜುಳಜುಳಿಯು
ಕರಗಳಿಗಿಟ್ಟ ಕಡಗ ಕಂಕಣ ಬಳಿಯು ಕೊರ
ಳೊಳು ಪಟ್ಟಿ ಮುತ್ತೇಕಾವಳಿ ಮೊದಲಾದೊಸ್ತಗಳನಿಟ್ಟು
ನೀಳ ಕುಂತಳೆಯರು ಬರಲು                                                                                    ॥

ಹರಳು ಕೆಚ್ಚಿದ ಪಟ್ಟಿ ಸರಗಿ ಪುತ್ಥಳಿ ನೆಲ್ಲಿ
ಸರ ಚಿಂತಾಕವು ಮುತ್ತಿನ್ಹಾರಗಳು
ದೋರೆ ಹರಡಿ ಕೈಕಟ್ಟು ಕೈಹಾರಗಳು ವಂಕಿ
ಮುರಡಿ ಸರ್ಪಳಿ ತೋಳ್ಬಾಪುರಿಗಳೂ ಮೀನ
ಹಿರಿಪಿಲ್ಲಿ ಕಿರಿಪಿಲ್ಲಿ ಸುರಳಿ ಸಹಿತವಾಗಿ
ಪರಿ ಪರಿ ವಸ್ತುವ ಧರಿಸಿ ಕೊಂಡಿಹರು                                                                      ॥

ಜಾಣೇರು ಸುಗುಣ ವಿಶ್ರೇಣೇರು ಕಾಳಾಹಿ
ವೇಣೇರು ಪಲ್ಲವ ಪಾಣಿಯರು ಮೃದು
ವಾಣೇರು ವಚನ ಪ್ರಮಾಣಿಯರು ಕರ
ತ್ರಾಣೇರು ಘನ ಧುರೀಣಿಯರು ಸುಪ್ತ
ವೇಣೆರು ಮನ್ಮಥನಾಣೇರು ಇನ್ನು ಈ
ಕ್ಷೋಣಿಯೊಳೆಲ್ಲಿ ನಾ ಕಾಣೆನಿಂಥವರಾ                                                                    ॥

ಕಂಬು ಕಂಧರ ಮರಿದುಂಬಿ ಕರಿಗುರಳಿಯರು
ಬಿಂಬಾಧರದ ಸೊನ್ನಿ ತುಂಬಿಯರು ಬಣ್ಣ
ಲಿಂಬೀ ಹಣ್ಣಿನಂತಾದ ಬೊಂಬಿಯರು ಸ್ವರ್ಣ
ಕುಂಭ ಕುಚದ ಮಹಾರಂಭಿಯರು ಸರ್ವ
ಸಂಭ್ರಮದಿಂದಲ್ಲಿ ಕುಂಭಿನಿಯೊಳು ಪೊಸ
ತೆಂಬಂತೆ ತೋರಿದರಂಬುಜಾಕ್ಷಿಯರು                                                                    ॥

ಬೆದರಿದೆರಳಿ ನೋಟ ಕದಪು ಕನ್ನಡಿ ನಡಿ
ಮದಗಜ ಬಟುತರ ವದನಿಯರು ಕೆಂಪ
ಧರದ ಮಲ್ಲಿಗಿ ಮಗ್ಗಿನ ದನಿಯರು ಚೆಲ್ವ
ಮದನನ ಕದನಕ್ಕೆ ಸದನಿಯರು ಮಾಡುವ
ಹದರೀಗೆ ನೋಡುವ ನದರೀಗೆ ಇನ್ನೊಬ್ಬ
ರಿವರಿಲ್ಲವೆಂಬೂವ ಚದುರಿಯರಿರಲು                                                                        ॥

ಪುಂಡತನದಿ ಸೊಕ್ಕಿ ಕೂಡಿರ್ದ ಹರೆಯದ
ಮಿಂಡಿಯರ್ಕುಚದೊಪ್ಪು ಚಂಡುಗಳು
ಒಳ್ಳೆ ದುಂಡು ಕಟಿದ ಗೋಲಿ ಗುಂಡುಗಳು
ಮುತ್ತಿನುಂಡಿಯು ಕನಕದ ಗಿಂಡಿಗಳು ಇಂಥಾ
ಮಿಂಡೇರ ಮೊಲೆಗಳ ಕಂಡು ವಿಟರ್ಮರು
ಳ್ಗೊಂಡು ಬೆನ್ಹತ್ತುವ ಭಂಡರನೇನೆಂಬೆ                                                                     ॥

ನೀಟ್ಕುಚಗಳಿಗೊಳ್ಳೆ ಥಾಟ್ಕಾಂಬು ತುಂಬುಜರ
ಪಾಟ್ಕುಪ್ಪಸವ ತೊಟ್ಟು ಥಾಟ್ಕಾಂಬೋರು ರತಿ
ಬ್ಯಾಟ್ಕಂಥ ಇವರೊಳ್ಳೆ ಫಾಟ್ಕಾಂಬೋರು ಕಾಮ
ನಾಟ್ಕಂತು ನೋಡಲು ಝೂಟ್ಕಾಂಬೋರು ತಮ್ಮ
ಕೂಟ್ಕ ಸೋತವರ್ವೆಸೆ ತಾಟ್ಕಯ್ಯ ನಡಿಸುವ
ರಾಟ್ಕೌಟನುಳ್ಳಂಥ ನಾಟ್ಕ ನಟಿಯರು                                                                     ॥

ಹಾಡ್ವರೆಲ್ಲರು ತಲಿಗೂಡ್ವರು ಸರಸಗ
ಳಾಡ್ವರು ಶಿರವನಲ್ಲಾಡ್ವರಯ್ಯ ಮಂದಿ
ನೋಡ್ಪರು ಹಾಸ್ಯ ಮಾಡ್ವರಯ್ಯ ಬಡಿದಾಡ್ವರು
ಕೈ ಹೊಡಿ ದೋಡ್ಪರಯ್ಯ ಸುಳಿ
ದಾಡ್ಪರು ಸವಿಮಾತನಾಡ್ವರು ಖರ್ಚಿಗೆ
ಬೇಡ್ವರು ವಿಟಗಾರ್ನ ಕಾಡ್ವರು ಬಿಡದೆ                                                                     ॥

ಚೊಕ್ಕಟವಾದಂಥ ಬೆಂಡು ಬೆನಕ ಬರ್ಫೆ
ತುಕ್ಕಡಿ ಕಲ್ಯಾಣಿ ಶಾವಿಗಳು ಮನ
ಕಕ್ಕರ ತೋರುವ ಬುಂದೆಗಳು ಕರಿ
ದಿಕ್ಕುವ ಜಿಲ್ಬಿಲಿ ಲಡ್ಡುಗಳು ಚಿನ್ನಿ
ಸಕ್ಕರಿ ಬೆನಕನ್ನೆ ಸೊಕ್ಕು ಜವ್ವನಿಯರು
ರೊಕ್ಕಗಳನು ಕೊಟ್ಟು ತಕ್ಕೊಂಬುತಿಹರು                                                                ॥

ಚುರ್ಮುರಿ ಬುಂದೇವು ಪೇರ್ಮೊದಲಾಗಿ ವಿ
ಚಾರ್ಮಾಡಿ ತರಿಸಿ ತಯಾರ್ಮಾಡುತ
ವಿಟರ್ಗೆ ಮಂದಿ ಕೂಡ ಫರಾ ಮಾಡುತ ಬಹು
ಪೇರ್ಮಾಡಿ ತಿನಸು ತಯಾರ್ಮಾಡುತ ಮಹಾ
ಕೂರ್ಮಿಯಿಂ ತುಸ ಉಪಕಾರ್ಮಾಡಿ ಹೊನ್ನಿನ
ಕಾರ್ಮಳಿ ಸುರಿಸುವ ವಾರ್ಮಡದಿಯರು                                                                 ॥

ಜಾತ್ಕಾಳನತ್ಕುಣಸುತ್ಕಂಣಂಗಳತಿರು
ವುತೆ ಕೈಯ್ಯ ಸೊನ್ನಿ ಮಾಡುವ ಬೇತ್ಕಾರರುಬರ
ವೂತ್ಕಲಿತ್ಹಾಡುವ ಸಂಗೀತ್ಗಾರರು ಅತಿ
ಪ್ರೀತ್ಕಾಣಿಸುವ ಸವಿಮಾತ್ಗಾರರು ತಾವೆ
ಸೋತ್ಕಾರದ್ಹಾಂಗ ಮಾಡಿ ಘಾತ್ಯಾದಿ ಸುಲ
ಕೊಂಬುವರ್ಯಾತ್ಗೇನು ಕಡಿಮಿಲ್ಲ ಜಾತ್ಯಾಸಖಿಯರು                                           ॥

ತರಳಣ್ಮಿಯರು ಮಂದಿ ಮುರುಳ್ಮಾಡುವ ನೆವದಿಂದ
ಎರ್ಳಿಮರಿ ನೋಟದಿ ಹೊರ್ಳಿನೋಡಲು ತುದಿ
ಬೆರ್ಳ ಮೊನಿಯಿಂದೆ ಮುಂಗುರ್ಳ ತೀಡಲು ಚೆಲ್ವ
ಕೊರ್ಳ ಮಧ್ಯದ್ಹಾರವ ಸರ್ಳ ಮಾಡಲು ಕಂಡು
ದುರ್ಳ ಮಾರ ಹೊರಡುವಂಥ ಸರ್ಳ ಮೊನಿ ಬೆನ್ನಿಗೆ
ನೆರ್ಳ ಮನದೊಳು ಹಗಲಿರ್ಳ ಮರಿಯಾದೆ                                                            ॥

ರೇಶ್ಮಿಯಿಂದ್ಮಾಡುವ ಹಾಸ್ಮಲಗು ಸಾಮಾನು
ದಾಸ ಮಡದಿಯರಿಂದ ಖಾಸ್ಮಾಡಿಸಿ ತಮ್ಮ
ಹಾಸ್ಮಂಚದೊಳು ಹಾಸ್ಗಿ ಬೇಸ್ಮಾಡಿಸಿ ಒಳ್ಳೆ
ಬಾಸ್ಮಲ್ಲಿಗಿಯ ಮೇಲೆ ಸೂಸ್ಮಾಡಿಸಿ ವಿಟರ್
ಯೇಸ್ಮರದಿ ಬಂದರ ಆ ಸ್ಮರನಾಟ ತ
ಮಾಸ್ಮಾಡಿ ತೋರುತ ವಿಲಾಸ್ಮಯದಿಹರು                                                             ॥

ಎಲ್ಲಾ ಕ್ಷೇತ್ರಗಳೊಳು ಬಲ್ಲಿದ ಮುಚಖಂಡಿ
ಅಲ್ಲೆ ಕಾಮಿನಿಯರ ಥಾಟವನು ತಮ್ಮ
ನಲ್ಲರ ಕರಸುವ ಬ್ಯಾಟವನು ಅವ
ರಲ್ಲಿ ಮಾಡಿದ ಮೋಹದಾಟವನು ಹೇಮ
ಗಲ್ಲೊಳು ಗುರುನಂಜನೊಲ್ಮಿಯಿಂದಿರುವಂಥ
ಅಲ್ಲಮ ಕಂಡಿದನೆಲ್ಲ ಪೇಳುವನು                                                                              ॥

* * *