ಶ್ರೀಗುರು ನಿತ್ಯ ನಿರ್ಗುಣನೆ ನಿರ್ಮಲ ನಿಗ
ಮಾಗಮ ನರನುತ ರಂಜಿತ ದಯಾಗನನೇ ದಿವ್ಯ
ಭೋಗಿ ಕಂಕಣ ನಗ ಗೇಹನನೇ ಶಿವ
ಯೋಗಿ ಜನರ ಭವನೀಗಿಹನೇ ಕೃತಿ
ಸಾಗಿಸೆನ್ನವಗುಣ ನೀಗಿ ಸದ್ಗುಣವಿತ್ತು
ಬೇಗದಿ ಸಲಹೆನ್ನ ಶ್ರೀ ಗುರುನಾಥಾ                                                                         ॥

ಧರೆಯೊಳಗಧಿಕವಾಗಿ ಮೆರೆವಂಥ ಹುಬ್ಬಳ್ಳಿ
ಪುರವ ಮೋಹಿಸುವೆ ವಿಸ್ತಾರದಿಂದ ಕಣ್ಣಿ
ವರ ರಮ್ಯವಾದ ಸೌಧಾಗ್ರದಿಂದ ಪುಷ್ಪ
ಸರಗಳಿಂದಿಡಿದ ಬಜಾರದಿಂದಿ ಇದು
ವರ ತೀರದಿರಲಿನ್ನು ಸೂಳಿಗೇರಿಯೊಳಿರ್ಪ
ನೆರೆ ವಾರನಾರಿಯರ್ಗಡಣವ ಪೇಳ್ವೆ                                                                       ॥

ಕನ್ಯೆಯರ್ಸುಗುಣ ಸಂಪನ್ನೆಯೆರ್ಕುಡಿ ನೋಟ
ಸೊನ್ನೆಯಿಂ ವಿಟರನ್ನು ಕರೆಯುತಲಿ
ರನ್ನಗನ್ನಡಿಯೊಳು ಮುಖದೋರುತಲಿ ಚಲ್ವ
ಪನ್ನಗವೇಣಿಯನುತಲಿ ಸುಖ
ಸಮ್ಮೋಹದಿಂದಲಿ ವಿಟರನ್ನ ಮರುಳ್ಮಾಡಿ
ಮನ್ಮಥನಾಟಕ್ಕೆ ಮರುಳದಿಂದಿಹರು                                                                        ॥

ಸುಗುಣೇರು ಸುರತದ ಹಗಣೇರು ಪೊನ್ಗಳ
ಸೊಗಸಿಂದ ಕೊಡುವರ್ಗೆ ಬಗೆಗೊಂಬರು ಮಿಥ್ಯೆ
ಹಗರಣ ಸುರಿಸಲು ನಾಳ್ಗೆಂಬರು ಅವ
ರ್ಬಗೆ ಬಗೆ ಬದುಕನ್ನು ಸೂರ್ಗೊಂಬರು ಮತ್ತೆ
ಸೊಗಸುಳ್ಳ ಸಖಿಯರ್ಗೆ ನೂರ್ಪೊನ್ನು ಕೊಡುಯೆಂದು
ಹಗರಣವನು ತೋರಿ ಜಗಳದಿಂದಿಹರು                                                                   ॥

ಸರ್ರನೆ ಮನೆಯಿಂದ ಬರ್ರನೆ ಹೊರಡೂತ
ಘುರ್ರ ಘುರ್ರನೆ ಕಂಣು ತಿರವೂವರು ರಂಗ
ವರ್ಣದ ಮಣಿಗಳಿಂದ ತೋರುವರು ವಿಟ
ಸರ್ವಮಂದಿಯ ನೋಡಿ ಕರೆಯುವರು ಮಹಾ
ಮರ್ಮವ ತಿಳಿದು ವರ್ತನೆ ತರ್ಗಿಸುವರು
ಸರ್ವಶಾಸ್ತ್ರದ ಕಳ ಕೀರ ವಾಣಿಯರು                                                                      ॥

ತರುಳೇರು ಮನ್ಮಥ ಸರಳೇರು ಉರುಗನ
ಹೆರಳೇರು ಮುರಿದುಂಬಿಗುರುಳೇನು ಕರಿ
ಕರದೊಳ್ಮೆರೆವ ವಜ್ರದರ್ಹಳೇಯರು ಇಟ್ಟ
ಬೆರಳಿನುಂಗುರ ಶಂಖಗೊರಳೆಯರು ಬಂದು
ಭರದಿಂದ ವಿಟರೆದೆಗ್ಹರಳ ನೊಗೆದು ನಕ್ಕು
ಪುರುಷರ ಮರುಳ್ಮಾಡಿ ಸರಸದಿಂದಿಹರು                                                                ॥

ಹರದಿಕಂಕಣಗಯ್ಯ ತಿರವೂತ ವಿಟರನ್ನ
ಮರುಳ್ಮಾಡಿ ಮನೆಯೊಳ್ಕರದೊಯ್ಯುತಲಿ ಪಂಚ
ಶರಣ ಬಾಣಗಳನ್ನ ಸುರಿಸುತಲಿ
ಸುರ ಕರಿ ತೋಳ ಪಾಶದಿ ಕಟ್ಟುತಲಿ ಚೆಲ್ವ
ಸ್ಮರರಾಜನಾಜ್ಞೆಯಿಂ ಪಿಡಿದ ತಮ್ಮಯ ಕುಚ
ಗಿರಿಯನ್ನು ಉರದಲ್ಲಿ ಪೇರುತ್ತಲಿಹರು                                                                      ॥

ಬೇಡ್ಪರು ಹಣಗಳ ಮಾಡ್ಪರು ಮುನಿಸನು
ನೋಡ್ಪರು ನಲ್ಲರ್ವಾರೆನೋಟದಲಿ ಮತ್ತೆ
ಕೂಡ್ಪರು ಸೊಗಸು ಮಾತಾಡ್ಪರಲ್ಲಿ ಸುಸ್ತಿ
ಮಾಡ್ಪರು ಮನಸಿಜನಾಟದಲಿ ಮನ
ನೋಡ್ಪರು ತೋಡ್ಪರು ಪಾಡ್ಪರು ಜನ ಮರು
ಳ್ಮಾಡ್ಪರು ಕಾಡ್ಪರು ನಾಡ್ವನಿತೆಯರು                                                                      ॥

ಚೆಂದುದರ ಪಾದ ಮಂಡೆಯರು ಮಳ
ಲ್ದುಂಡೆಂಬ ಘನತರಕುಂಡೆಯರು ಕುಚ
ಚೆಂಡೆಂಬ ಹೊಡೆಚಂಡ ಕೊಟ್ಟು ನಲ್ಲರತಿಯ
ದಂಡಿಸಿ ಕೊಳುತಿಹ ಪುಂಡ ಗರತಿಯರು                                                                 ॥

ಅಚ್ಚ ಮುತ್ತಿನ ಬೊಟ್ಟ ಹಚ್ಚುತ ಫಣಿಯಲಿ
ಬಿಚ್ಚಿ ಕಂಚುಕ ಗಂಧ ಹಚ್ಚುತಲಿ
ನಿಚ್ಚ ನಿಚ್ಚ ಕಾಡಿಗಿ ಕಣ್ಗೆ ತೊಡೆಯುತಲಿ ನಮ್ಮ ದೃಷ್ಟಿ
ಹಚ್ಚಿ ಮದನಬಾಣ ಚುಚ್ಚುತಲಿ ವೆಚ್ಚಕ್ಕೆ
ಬಿಚ್ಚಿ ಕೊಡು ಪಚ್ಚದುಂಗುರವೆಂದು
ಮೆಚ್ಚಿದವರ್ತೆಲಿಗ್ಹಚ್ಚಿ ಎಣ್ಣಿಯನು                                                                                ॥

ಮೇಲ್ಮನಿಯೊಳ್ತಮ್ಮ ಮೇಲ್ಮಂಚದೋಳ್ಕುಳಿತು
ಸಾಲ್ಗನ್ನಡಿಗಳನ್ನು ನೋಡುವರು
ಒಲ್ಮೆಯೊಳ್ಮನ ಭರದಿಂದ ವೋಡ್ಸುವರುಬಹು
ಜಾಲ್ಮಂದಿಗಳ ಪೊನ್ನ ಬಿಡಿಸುವರು ಚಿರ
ಕಾಲ್ಗಳಿಸಿದ ಪೊನ್ನ ಹಾಳ್ಮಾಡಿ ಸುರಿಸುವ
ಸಾಲ್ಸಾಲ ಚೀಲ್ಗಳ ತುಂಬಿಡುತಿಹರು                                                                        ॥

ರೊಕ್ಕವು ಘನವಾಗಿ ಠಕ್ಕಿಸಿ ವಿಟರನ್ನ
ಸೊಕ್ಕಾನೆಯಂದದಿ ತಿರಗುವರು ಇವ
ರ್ಬೊಕ್ಕಸದೊಳು ರೊಕ್ಕ ಸುರಿವರು ತಮ್ಮ
ತಕ್ಕಂಥ ವಿಟರನ್ನು ಜೈಸುವರು ಅವ
ರ್ತಕ್ಕಂಥ ವಿಟರ್ಬರಲು ಕುಚದೊಳ್ಕೈ ಇಕ್ಕಿ
ಕಕ್ಕಿಸುವರು ಸರ್ವರೊಕ್ಕಗಳಾ                                                                                  ॥

ಹೆಚ್ಚಿನ ಪೊನ್ಗಳ ಬಚ್ಚಿಟ್ಟು ಸರಗಿಯು
ಅಚ್ಚ ಭಂಗಾರ ಬಳಿ ತೊಡುವರು ಈ ನವ
ಪಚ್ಚೆಯ ನೀಲ್ಮಣಿ ಹಾಕುವರು ಮತ್ತೆ
ನಿಚ್ಚಳದೋಲೆಯ ಬೇಡುವರು ಹೀಗೆ
ಹೆಚ್ಚಿನಾಭರಣಗಳ್ಮೆಚ್ಚಿನ ರಾಗುಟಿ
ರಚ್ಚಿನ ಚೌರಿಯ ಹುಡುಕಾಡುತಿಹರು                                                                       ॥

ರೊಕ್ಕವ ಕಳಕೊಂಡು ಮುಕ್ಕುತ ಮಣ್ಣನು
ಸಿಕ್ಕ ಸಿಕ್ಕವರನ್ನು ನೋಡುವರು ಜನ
ಪಕ್ಕ ಪಕ್ಕನೆ ಕಂಡು ನಗುವುವರು ನಮ್ಮ
ತಕ್ಕ ಶಿಕ್ಷವು ಸಿಕ್ಕಿತೆಂಬುವರು ಮುಂದೆ
ಮುಕ್ಕಣ್ಣ ಪರಶಿವನ್ಹೊಕ್ಕಳದಿಂದಲಿ
ಭಕ್ಕರೆ ನಮಗೆಂಟು ಸಿಕ್ಕಿತೆಂಬುವರು                                                                       ॥

ಮುಪ್ಪಾಗಿ ಗಲ್ಲವು ಸೊಪ್ಪಾಗಿ ಕುಚಗಳು
ಹಿಪ್ಪಾಗಿ ದಂತಗಳು ಬೀಳುತಲಿ ಕೇಶ
ವಪ್ಪದ ಬೈತಲೆ ಕದಡುತಲಿ ಮಸ್ತಕ
ಪೋಗಿ ಶುಭ್ರವು ತೋರುತಲಿ ಹಡ್ಲಿ
ತಪ್ಪದೆ ತಲೆಯೊಳು ಪೊತ್ತು ಭಿಕ್ಷವ ಬೇಡಿ
ತುಪ್ಪ ಹೋಳಿಗೆಯನ್ನು ಬಯಸುತ್ತಲಿಹರು                                                               ॥

ಪುರುಷನ ಸರಿಯೆಂದು ಹರುಷದಿ ವಿಟನೊಳು
ಸರಸದಿ ರಮಿಸುವರ್ನೈಷ್ಟೆಯಲಿ
ಪರಪುರುಸರ ಜರಿವರ್ತತ್ಕಾಲದಲಿ ತಮ್ಮ
ಶರೀರವನೊಪ್ಪಿಸಿ ಹರುಷದಲಿ ಇಂಥಾ
ಹರದೆಯರ್ಭಕ್ತಿಗೆ ಪುರಹರ ಮೆಚ್ಚುತ
ಭರದಿ ಕೈಲಾಸಕ್ಕೆ ಕರೆದೊಯ್ಯುತಿಹರು                                                                   ॥

ಅತಿಶಯದ ವಿದ್ಯೆದ ಮತಿಯೆನಗಿಲ್ಲದೆ ಮಂದ
ಮತಿಯಿಂದ ರಚಿಸಿದೆ ಸ್ಥಿತಿ ಮಾತವ ಕುಶಲ
ಮತಿವಂತ ಜನರಿದರಿತಿಹಾಸದ ಸದ
ಗತಿಯಂತೆ ಹಾರುವ ಅಡಿಪ್ರಾಸವಾ ನಿಮ್ಮ
ರತಿಯುಳ್ಳ ಶಿಶುವಿನ ಸಮವೆಂದು ತಿದ್ದಿಸು
ಮತಿಯಿಂದಲೋದಿರಿ ಖತಿಯನ್ನು ಬಿಟ್ಟು                                                                 ॥

ಧಾರಿಣಿಯೊಳ್ತಿ ಮೀರಾರಿಯ ಪ್ರಭೆಯಂತೆ
ತೋರುವ ಧಾರ್ವಾಡ ಪುರವಾಸನು ತತ್ರ
ಪುರತರ್ಬಿಯತ ಸಾಲಿಮಠವಂತನು ಮದ
ನಾರಿವಾಹನನಾಲಿಂಗಾಭ್ಯವನು ಇವ
ರ್ಚಾರು ಪುತ್ರ ಚನ್ನಬಸವಯ್ಯ ಸಾರಿದ
ನೀರಜಾಕ್ಷಿಯರ ವೈಯ್ಯರವ ಕಂಡು                                                                         ॥

* * *