1.  ಸವಾಲ ಪದ

1

ಏರ

ತಿರಗಿ ತಿರಗಿ ಹಾಡಿದರ ಪರಿಗಿ ಕಬ್ಬಿಣದಂಗ
ಉರಿಗೆ ಉತ್ತಿಯ ಕೊಟ್ಟಂಗ ॥

ಚಾಲ

ಭಾಳ ದಿವಸ ಮಾಡಿದ ಸಾಸಾ ಕಲತ ಈ ವರ್ಷ ಬಂದಿ
ಹಾಡೋದಕ
ಅಂಜಬ್ಯಾಡೋ ಬಾರೋ ಮುಂದಕ
ಕೇಳ ಕಲಿಸಿದವನ ಹಂತೇಕ
ಅಂಜಿ ಗಾಬರ್ಯಾಗಿ ಎದಿ ಹಾರತೈತೊ ನಿಂದ ಟುಕ ಟುಕ್
ನಿಂದು ಟುಕಟುಕ್
ನಿನ್ನ ಮ್ಯಾಲ ಒಂದು ಸವಾಲು ಹಾಕುವಿನೋ ಬಲ್ಲ ಶಾಣ್ಯಾಗ
ಇದರ ಶಿಲ್ಕ
ತಗದ ಹೇಳೋ ತಡಾ ಇನ್ಯಾಕ
ಹತ್ತ ಕಾಲ ಹನ್ನೊಂದು ಕೈಯ್ಯ ನಡಬರಕೈತಿ ಒಂದು ಮಕಾ
ಒಂದ ಮಕಾ

ಬಾಯಿ ಎರಡ ಒಂದ ತಲೀ ಇರುವದು ಅಂತ್ರಲೀ
ಕೇಳೋ ಸೂಕ್ಷ್ಮ ಸೂಕ್ಷ್ಮ
ಆ ಪಕ್ಷದಿಂದ ಅಭಿಮಾನ ತುಂಬಬೇಡಿ ತ್ರಿಭುವನ ಹರಹರಿ
ಬ್ರಹ್ಮ ಕೇಳೋ ಬ್ರಹ್ಮ ॥
ಹಿಂತಾ ಹಾಡ ಕೇಳಿ ನನ್ನ ಹೊಟ್ಟಿ ಕಡಿಯತೈತಿ ಬಿಟ್ಟಹ್ಯಾದಿ
ಜಗಾಸರದ

ನಿಮ್ಮವರನ್ನ ಕೇಳತೀ ಕದ್ದ ಕದ್ದ ಹೆಂಗ ಹಾಡಂತಿ ಅವರ ಮುಂದ
ಅಳಬ್ಯಾಡ ಸುಮ್ಮನ ಮನಿಗಿ ಹೋಗೋ ಜಲ್ದ ಕೇಳೋ ಜಲ್ದ

2

ಏರ

              ಅಂಗಿ ಮ್ಯಾಲ ಅಂಗಿ ಶ್ರೀಂಗಾರಕ ಕಚತೊಟ್ಟ
ರಂಗಾಗಿಬಂದ್ಯೋ ಹಾಡೋದಕ

ಚಾಲ

ಹಾಡ ಹಿಂತ ಹಾಡ ಮುತ್ತ ಸುರದಾಂಗ
ಜನಾ ಪಾಡ ಅನ್ನ ಬೇಕೋ ಮತ್ತು ತಾಳದೊಳಗ
ಈಡು ಮಾಡಿ ಕಲತೀಯೋ ಬಲ್ಲಾಂಗ ನೀ ದೀಡ ದಮಡಿ
ಹಾಡತಾರೋ ರಾಜದಾಗಾ
ಇಟ ಇಟ ಹಾಡ ಹಾಡಿ ಹಲ್ಲ ಪಲ್ಲ ನೀ ಬುಟುಬುಟು
ಓಡತೀಯೋ ಹತ್ತಿ ಜೂಲ್ಲ

ಕಟಪಟ ಮಾಡಿನೀ ಕಲಿತಿಲ್ಲಾ
ಜೀವ ಚುಟು ಚುಟು ಅಂತತೇನೋ ಹಗಲೆಲ್ಲಾ
ಕೇಳ ಮಗಾ ನೀ ಕೆಂಗೆಟ್ಟ ಶೃಂಗಾರದ ನಿಶ್ಯಾನಿ ಕಳಕೊಂಡಿ
ಸುಳ್ಳ ಕುಣದಾಡಿ ಮಣದಾಡಿ ಹೆಣಗ್ಯಾಡಿ ಹಾಡಬ್ಯಾಡ
ಕಾಣಬರೋ ಮಾತ ನೀ ಲಗುಲಗೂ

ಪಾಡ ಹಾಡತಾನಂತ ನೋಡಿನಿ, ನೀ
ಪಾಡದಂಗ ಮಾಡತೀಯೋ ಒಡದ ಧನಿ

ಒಡೆಯ ಬಂಕೇಶನ ಅಡಿಗೆ ಶರಣ ಅನ್ನಿ ನಾ
ಕಡೆಗೆ ಹಾಡೋದು ಹುಡಿ ಹೊಡದಂಗ ನಿನ್ನ

ಏರ  

ರಂಗಾಗಿ ಬಂದೋ ಹಾಡೋದಕ ನಾ ನಿನ್ನ
ಬಿಂಗ ಬಿಡಿಸೇನೋ ಬಿಡೋ ಇನ್ನಾ                  ॥

3

ಏರ  

ಹಿರ್ದ ಹಾಡವನಂಗ ಜರ್ದ ರುಮಾಲ ಸುತ್ತಿ
ತ್ವರದಿಂದ ಬಂದ್ಯೋ ಮಜಲಾಗ

ಚಾಲ                                                                            

              ಹಾಡ ನಮ್ಮ ಹಾಡಿನಂಗ ಹೇಡಿ ಹಿಂದಕ ಸರಿಬ್ಯಾಡ
ತೋಡಿ ಕೊಡೋ ಹೋಗಬ್ಯಾಡ ನಿಲ್ಲ ನಿಲ್ಲ ॥
ನಮ್ಮ ಪದಾ ರತ್ನದ ಖಣಿ ಊಚ ವಜ್ರ ಕಲ್ಲ ಕಲ್ಲ
ಬಾಯಾರಿ ಕೈ ಸೋತ ನಿಂತಿ ನ್ಯಾಯಕ ನೀನು ತಾಳಾಂವಲ್ಲಾ
ಧೈರ್ಯಾ ಅಂಜಿ ಎದ್ಯಾಗ ಹುಟ್ಟಿತ ಜಲ್ಲ ಜಲ್ಲ
ಕಬರ ಇಲ್ಲೊ ನಿನಗ ಬಾಯಿ ಕಿಸದಿ ಸೋರತೈತಿ ಜೊಲ್ಲಜೊಲ್ಲ
ಕಲಸಿದವನ ಕಡೆ ಮೋತಿ ಮಾಡಿ ನಿಲಸಿ ನಿಲಸಿ ಕೇಳತೀಯೊ
ಹೊಲಸಿ ಕಲಸಿದಷ್ಟ ಅಂವೇನ ಬಲ್ಲ ಬಲ್ಲ ॥
ನಿನಕಿಂತ ಮುಂಚೆ ಅವನ ಉಚ್ಚಿ ಹೋಗತಾವೋ ಬಲ್ಲ ಬಲ್ಲ ॥

ಏರ  

              ತ್ವರದಿಂದ ಬಂದೊ ಮಜಲಾಗ ದುಡ್ಡ ಕೊಟ್ಟ
ಕರತಂದವರ ಅಬರು ಕಳದೆಲ್ಲೊ                      ॥

4

 ಏರ 

              ಹಸನ ಹಾಡವನಂಗ ಇಸಕೊಂಡಿ ನಿಶ್ಯಾನಿ
ಇಸಮತನಾಗಿ ನೀನಿಂತ್ಯೋ ॥

ಚಾಲ                                                                              

              ನಿಶ್ಯಾನಿ ಹಿಡಕೊಂಡ ಲೇಸಾಗ ಬೇಕಂತ ಆಸೇಕ ಬಂದ್ಯೊ
ಮಜಲಿಗೆ ಜನಾ ಹಾಸ್ಯ ಮಾಡತೈತಿ ಅಲ್ಲತಗಿ
ನೀ ಮೀಸಿ ಇಡಬಾರದ ಸುಮಾರಾಗಿ
ಮಂದ್ಯಾಗ ಹಾಡೋದ ಬಿಗಿ
ಇಂದೇನ ಬಗಿ ಬಂದಿ ಸಂದಿಯೊಳಗ ನಿನ್ನ ನಗಿ
ಬಂತೋ ನಿನಗ ಡಾಣಿ
ಕಮ್ಮಾನ ಪದಗೋಳ ಒಮ್ಮೆರ ಹಾಡೋ ಸುಮ್ಮಕ ಜನರ ತಲೆದೂಗಿ
ನಿನಗೊಮ್ಮೇರ ಅನಬೇಕೋ ಹರುಷಾಗಿ
ಬಿಡೋ ಕೆಮ್ಮೂದು ಅಂಜಿದಿ ದನಿ ಹೋಗಿ
ವಜ್ರದಂಥಾ ಪದ ಗಜ್ಜರಿ ಮಳಿ ಹೊಡದಂಗ
ಬೆಜ್ಜರ ಬಿಡತಿತೊ ಎದಿಗೆ ಯಾಕಾದ್ಯೊ ಪ್ಯೆಂಗಿ
ನೋಡ ಬಡದಂಗ ಅಡ್ಡಡ್ಡ ಮಳಿ
ನೀನು ಓಡೋಡಿ ತಗದಿ ದಿವಾಳಿ
ನೀನು ಹತ್ತೆಂಟು ಹಾಡಿದರ ಕೇಳಿ
ನಮ್ಮ ಹಾಡಿನ ಮ್ಯಾಲ ನಿವಾಳಿ
ಗೊಂಚಲ ಮುತ್ತಿನ ಬಾಗೋಡಿಯವರು, ಕೆಂಚನಾಯ್ಕನ ಕವಿ ಮಾಡಿ
ನಿನ್ನ ಅಂಜ್ಕಿ ಹರದೀತೋ ಮುನ್ನೋಡಿ
ಸಣ್ಣ ಪಂಚೇತಿ ಮಾಡಬ್ಯಾಡೋ ತಲೆದೂಗಿ
ಹಾಡೋದ ಬಿಟ್ಟ ಬಿಟ್ಟ ಮೂಡಲ ನೋಡತಿ
ಈಡಲ್ಲ ನೀನ ಪದ ಎಲ್ಲಾ ಆಗಿ ಕೇಳತಿ ಕಲಸವನ ಹೋಗಿ ॥

ಏರ

              ಇಸಮಿತವಾಗಿ ನಿಲನಿಂತೋ ನಮ್ಮ ಹಾಡ
ಕಸಮೂಲ ಪಲ್ಲೆ ಕಲಕೊಳ್ಳೋ ॥

5

ಏರ  

              ಒಂದ ಅಕ್ಷರ ಕಡಿಗೆ ಹೊಂದಿಸಿ ತಗದಾರೋ
ಸುಂದ್ಯಾಕ ಆದಿ ಸವಿಗೇಡಿ ॥

ಚಾಲ                                                                              

              ಹೊಸತರದ ದಾಟಿ ಕಸರಿಲ್ಲ
ಸಂಸಾರ ಮಾಡಿ ಮಿಗಿಲ ಹಾಡಬೇಕೋ ಹಿಂಗ
ಬ್ಯಾಸರಾಗೇತೋ ನಿನ್ನ ಮನದಾಗ ಉಸರ ಹಾಕಬೇಡೋ ಮಜಲಾಗ
ಕತ್ತಿ ಹಾಂಗ ನಿಂತ ಬೇಗಳ ಹಾಡ ಹಾಡಿದರೇನೋ ಮೂರ್ಖಾ
ಹಾಡಿದರೇನೋ ಮೂರ್ಖಾ ॥
ನನ್ನ ಸರಿ ಯಾರೂ ಇಲ್ಲ ಅಂದಿ
ಪರೀಕ್ಷೆ ಮಾಡಿ ಮಂದಿ
ಮಾಡತಾರೋ ತಾವ, ಕೇಳೋ ತಾಂವಾ
ನಿನ್ನ ಒಳಗೆಲ್ಲೋ ಹಾಡಿನ ಜೀವಾ, ಕೇಳೋ ಜೀವಾ
ಈ ಪರಿ ನಮ್ಮು ಹಾಡ ನೀನು ಬರಬ್ಯಾಡೋ ಈ ಮಜಲಾಗಾ
ನಿಮ್ಮ ಗುರುವನ್ನು ಕೇಳೋ ಕದ್ದ ಕದ್ದ
ಹೆಂಗ ಹಾಡಲಂತಿ ಅವರ ಮುಂದ
ಅಳಬ್ಯಾಡ ಧೈರ್ಯ ಮಾಡಿ ಸುಮ್ಮನ ಮನಿಗೆ ಹೋಗೋ ಜಲ್ದಾ ಹೋಗೋಜಲ್ದಾ ॥

ಏರ  

              ಸುಂದ್ಯಾಕ ಆದಿ ಸವಿಗೇಡಿ ತುಟಿಗೆ ತುಟಿಯು
ಹೊಂದದಾಂಗ ಹಾಡೋ ಹಿಂತಾವು ॥

6

 ಏರ 

ಹಾಡಿನ ನೆವದಿಂದ ಬಾಡೀಗಿ ಕಡೆ ತೋಡೆ ನೀ ಇಟ್ಟಿ
ಡವಲ ನನ ಮುಂದೆ ॥

ಚಾಲ                                                                            

ದುಗ್ಗಾಣಿ ಕೊಟ್ಟ ನೀವೊಂದ ಅಗ್ಗದ ಸದಾ ಅಕಲ ತಂದ
ಹಿಗ್ಗಿ ಹಿಗ್ಗಿ ಮಜಲಾಗ ಹಾಡಬ್ಯಾಡ
ಸಿಗ್ಗ ಇಲ್ಲೋ ಹಡಸಿತಮ್ಮಾ ಮಗ್ಗಲಮುರಿ ಬಡಸಿಕೊಂಡಿ
ಕಗ್ಗಲ್ಲಿನಂಗ ಬಂದ ನಿಲ್ಲಬೇಡಾ
ಜಗ್ಗಿ ಕೇಳತೇನಿ ತಗಿ ಹಿಂತಾ ಹಾಡಾ
ಕಂಗ್ರಾ ಮಾಡಿದರೇನೋ ಹಾಡಿನ ಸಂಗ್ರಾಮ ಇಲ್ಲೊ ನಿನ್ನ ಬದಿ
ಬಂಗಾರದಂಥ ಪದ ನಮ್ಮವು ಭಾಳ ನಿವಳಾ ॥
ಅಂತಿ ತೊಟ್ಟ ಶೃಂಗಾರಾಗಿ ಅಂಗಳದಾಗ ಬಂದ ನಿಂತಿ
ತಿಂಗಳ ದಿನಾ ಆತಿ ಗಂಟ ಬಿದ್ದಿ ನೋಡಾ
ನುಣ್ಣಗ ತೀರಿ ಹೋದುವಪ್ಪಾ ನಿನ್ನ ಹಾಡಾ ॥
ಆನಗೇಡಿ ಸ್ವರಾ ತಗದ ದನಿ ಬಿದ್ದ ನಿಂತೀಯೋ
ಮನಿಗೆ ಹೋಗೋ ಮುಂದೇನು ಬರುದಿಲ್ಲ ॥
ಕುನ್ನಿ ಹಾಂಗ ಕುಂಯ್ಯ ಕುಂಯ್ಯಡಿಸಿ ಬಣ್ಣ ಗುಂದಿ
ಸಣ್ಣ ಆದಿ
ತಣ್ಣಗ ಹೋಗೋ ಇನ್ನ ಆಗುದಿಲ್ಲ ಪಾಡಾ
ನುಣ್ಣಗ ತೀರಿ ಹೋದೂವಪ್ಪಾ ನಿನ್ನ ಹಾಡಾ ॥

ಏರ  

              ನೀ ಇಟ್ಟ ಡೌಲ ನನ ಮುಂದ ನೀ ಬಂದ
ಸೆಟದ್ಯಾಡ ಬ್ಯಾಡೋ ನನ ಮುಂದ ॥

7

ಏರ  

              ಕೆರಿಯು ಸಮುದ್ರದ ಕೂಡ ಪರದಾಡಿದ ಪರಿಯಂತೆ
ಕರಿಯಬ್ಯಾಡ ನನ್ನ ಹಾಡೋದಕ

ಚಾಲ                                                                              

              ತೆರದ ತೋರಸಿ ಬಿಟ್ಟೇನ ನಿನ್ನ
ತೆರವಾಯತನ ಬಿಡವಲ್ಲಿ
ಸರವಿನಂತಾವ ಹೊಳಿಯಂಗ ಬೆಳಸಿ ನೀ ಹೇಳತೀಯೋ
ಬುರಡಿ ಕೊರವಿಯಂತೆ ಧರವೇಸಿ
ಅಪ್ಪಂದ ತುಳು ಎರಡೂ ಹಾಡಾ
ಒಪ್ಪಿಟ್ಟಾರೋ ಜನರೆಲ್ಲಾ ತಿಪ್ಪಿಮ್ಯಾಲ ಬಿದ್ದ ಹಾಡ ಒರಸಿ

ನೀ ಕಲ ಕೊಂಡೀಯೋ ತುಪ್ಪದಂತಾವಂತ ಪುರಮಾಸಿ
ಅವಲ್ ಅವಲ್ ಪದಗೋಳ ತಗಿಯೋ
ಸವಾಲ ಜವಾಬ ಕೇವಲ ಅಲ್ಲಾ
ಕಾವಲ ಇಟ್ಟ ಕದ್ದ ಕುಂತಿ ನೀನು ಸುಳ್ಳೆ ವಣಾ
ಡವಲ ಮಾಡಿದರ ಏನೋ ಹೈವಾನಾ
ಡಾಮಾ ಡೋಲಾ ಆಗಬೇಡಾ
ನಮ್ಮದು ನಿಮ್ಮದು ತೀರಲಿ ಇಂದಾ
ಕಾಮಕಾಮ ಬಂದ ಒಂದಿನ ಇಷ್ಟ ಹಾಡಂತ ನೇಮಿಲ್ಲ
ನಮಗ ಕಡಿಮೇನ ॥

ಏರ  

              ಕರಿಯ ಬ್ಯಾಡೋ ನನ್ನ ಹಾಡೋದಕ ನಿನ್ನಂತ
ತೆರವಾಯಿ ನನ್ನ ಸರಿಯೇನೋ ॥

8

ಏರ  

              ಧರಿಮ್ಯಾಲ ನಿನ್ನಂತೆ ಸುರದೈತಿ ಹಾಡುವ ಜನಾ
ಬರೇ ಮಾತ ಆಡಿ ಬರಗೆಟ್ಟೋ ॥

ಚಾಲ                                                                              

              ಜರ್ಕಾಟಿ ರುಮಾಲ ಸುತ್ತಿ ಮುರಕಾ ಮಾಡಿ ಹಾಡಾಕ ಬಂದಿ
ತರಕಿನ ಪದಾ ಆಗೂದಿಲ್ಲಾ ವೈನಾ
ಬಿಡಾ ನಿನ್ನಾ ಹಾಳಿ ಹರಕೈತಿ ಒದರುವೆ ಒಂದ ಸವನಾ
ತ್ಪಾಡೆ ಹಾಡವರೆಲ್ಲಾ ಬಂದ ನೋಡತಾರೋ ಅಜಮಾಸಾ
ಬಿಡತಾರೋ ಆಗೂದಿಲ್ಲ ಗಟ್ಟಿ ಮುಟ್ಟಾ
ನಿನ್ನಂಥವರು ಹನ್ನೆರಡು ಮಂದಿ ನಮ್ಮ ಕೂಡ ಹಾಡಾಕ
ಬರದ ಒಲ್ಲೇವಂತ ಕಬಲಾತಿ ಬರಕೊಟ್ರು
ನೀ ಏನ ಆದೀ ಹೋಗೋ ಕಡಿಗೆ ಹುಚ್ಚಪಾಟ

ಏರ  

              ಬರೇ ಮಾತನಾಡಿ ಬರಗೆಟ್ಟೋ ನಿನ್ನ ಹಾಡ
ಕುರಿಗೆ ಕೊಳಮಲಿ ಇದ್ದಂಗ ॥

9

ಏರ  

              ಯಾಕ ಮಜಲಿಗೆ ಬಂದೊ ತೂಕ ತಿಳಿಯದ ಪ್ರಾಣಿ
ಹಾಕಿತ ಬಾಯಿ ಹಾರಿತು ಹಸವು

ಚಾಲ                                                                              

              ನೀರ ಬೇಡುವೆ ಗಾಬರಿಯಾಗಿ ನಿನ್ಯಾರ
ಕರದಾರೋ ಮಜಲಿಗೆ ॥
ಸುಳ್ಳ ಪಂಚೇತಿ ಮಾಡಬ್ಯಾಡೋ ತಲೆದೂಗಿ
ಗದ್ದಲದೊಳು ಸಿಕ್ಕ
ಹುದಲ ಬಿದ್ದಿತೊ ತೊದಲ ಹಾಯತೈತಿ ನಾಲಿಗೆ
ಹಾಡಕಿ ಬದಲ ಅಕ್ಷರ ಗಾಬರಿಯಾಗಿ
ನೀ ಬೆಳತನಕ ಇನ್ನೇನ ಹಾಡತಿ, ತಳಾ ಬಳದೇತಿ
ತೊಳಿಯಾಕ ಕಲತಿ

ಏರ   ಬೇಕಾಗತೇನೋ ಬೇಖರು ನಿನ್ನಂತ
ಧರವೇಸಿ ನನ್ನಂತ ಸರಿಯೇನು                                                                  ॥

10

 ಏರ 

              ಕಂಡ ಬಂದೇನ ನಾನು ಮಡಿಯಿಲ್ಲದ ಪಕ್ಷಿ
ಹುಂಡರಂತೇಕ ಇರತೈತಿ

ಚಾಲ                                                                            

              ಕಾಲಿಲ್ಲ ಪಕ್ಷಿಗೆ ತಮ್ಮಾ ಬಾಲಿಲ್ಲ ತಿಳಕೊಂಡ ನೋಡೋ
ಮ್ಯಾಲ ಮುಕಳಿ ಎಲ್ಲ ಗಿಡಕೈತಿ
ಬಾಯಿ ಉಂಟ ಸಾಲಹಿಡದ ಲೀಲಾ ಮಾಡತೈತಿ
ಕೂಡಲಿಲ್ಲಾ ಕುರಪಿಯಿಲ್ಲಾ ಕುಶಿ ಬಂದಾಗ ಕೂಡತೈತಿ
ಅದರಿಂದ ಬದುಕುವದು ಪ್ರಾಣಾ
ಸದನದೊಳು ಇರುವುದನ್ನು ಕದನ ಹ್ಯೂಡಬ್ಯಾಡೋ
ಬಿದ್ದಾವಲತ್ತಿ ॥
ಇದರ ಹೇಳದಿದ್ದರ ವದನಾ ನನಗ ಹೆಂಗ ತೋರಸ್ತಿ

ಏರ  

              ಹುಂಡರಂತೇಕ ಇರತೈತಿ ಇಂಚಲದ
ಪುಂಡ ಕವಿಗಳಿಗೆ ಗೊತ್ತೈತಿ ॥

11

ಏರ  

              ಒಡದ ಹೇಳಿ ಹಾಡೋ ಮುಂದ
ಬಿಡದಿಲ್ಲ ತರಬುವೆನ ಜಡಮತಿಯೇ ನಿನ್ನ ದರ್ಜೇನು

ಚಾಲ                                                                              

              ಭಾಳ ಮಾತನಾಡಬೇಡಾ ಕೇಳ ಒಡದ ಹೇಳತೇನೋ
ಏಳು ಕಾಲಿಂದ ಮೃಗ ಐತಿ
ಮಾಡಿದ ಬದಕ ಹಾಳ ಮಾಡಿ ಗ್ವಾಡಿ ಸೇರತೈತಿ
ಕುಂತ ಇದರ ಕೂನಾ ಕೇಳೋ ಕುಮಕ ಅದರ ಬದಕತೈತಿ
ಕುತ್ತಿಗೆ ಬಂದಾಗ ತೊಡತೈತಿ
ಕುಲಾಬಿ ಮಾಡಿ ಕೂಲಿ ಮಾಡವನ ಬೆನ್ನ ಹತೈತಿ

ಏರ

              ಜಡಮತಿಯೇ ನಿನ್ನ ದರ್ಜೇನು, ಇಂಚಲದ
ಒಡಿಯ ಬಂಕನಾಥನ ದಯದಿಂದ

12

 ಏರ 

              ತರಬಿ ಕೇಳವರ್ಯಾರು ಸರ್ಬಿ ಹಾಕೇವು ನಾವು
ಬರುದಿನ ಕಾಳಿ ಹಿಡಿಸೇವೋ

ಚಾಲ                                                                            

              ಲಕ್ಷ್ಮಕ್ಕ ಒಬ್ಬರು ಲಕ್ಷಿಟ್ಟ ಕೇಳುವರು
ಕುಕ್ಷಿಯೋಳು ತಿಳಿಯುವರು
ಕಾಸ ಇಟ್ಟ ಹೇಳುವರು
ತಗಿಯೋ ಅಕ್ಷರು ನನ್ನಂಗ ಮುಕ್ತಿದಾಯಿಕ
ಶಿವನು ಸಾಕ್ಷಾತ್ ಶಂಭಾ ಒಲಿದಾ
ತಂಪಾ ನಕ್ಷತ್ರಪತಿಯ ಚೆಲುವಾ
ನಟನದೇ ಹಲವರದ ಪಟುತರದ ಸ್ವರ ತಗದ
ಹಾಡೋ ಸಟಿ ಇಲ್ಲ ಈ ಮಾತ ಹಟವು ಹಿಡದರ ನಿನ್ನ
ಕಟಕಟನೇ ಕಡದ ಗೋಣಾ
ವೀರಭಟರು ಮಾಡ್ಯಾರೋ ಗರ್ಜನಾ
ಸತ್ರ ಪಂದ್ರವ ತಗದ
ಅತ್ತರ ಏನೂ ಆಗವದು ನೇತ್ರಕ್ಕ ನೀರ ತಂದ
ಉತ್ತರ ಕೊಡೋ ಒಂದೊಂದ
ಬಂದ ಕತ್ತರಿಯೊಳು ಸಿಲ್ಕಿದೆಯೋ ಯಾತರ
ಭಿಡೆಯೋ ನಿಂದು
ಧಾತ್ರದೊಳಗ ಇಂಚಲ ಗುರುಸ್ತೋತ್ರದ
ಮಾಡ್ಯಾರೋ ಹಗಲೆಲ್ಲ

ಏರ

              ಬಿರ್ದಿನ ಕಾಳಿ ಹಿಡಿಸೇವೋ ಇಂಚಲದ
ವರ ಬಂಕನಾಥ ಮುನಿದಾನೋ ॥