13.  ಮೋಸ ಮಾಡಿದ ಹೆಣ್ಣು

ಮಂದೀದ ಮಾಡಬೇಕಂದ್ರ ಮೋಸ
ತಂದಾಗೂದು ಮದಲ ನಾಶ
ಇಂದು ಹೇಳುವೆ ಬಂದ ನಾ ಕೂಸ
ತಂದಿ-ತಾಯಿಗಿ ಮಾಡಿ ಶರಣ         ॥

ಬಿದ್ದೋಡಿ ಇದ್ಲ ಬೆರಕಿ ಹೆಂಗ್ಸ
ಸಾಧೂನ ಮ್ಯಾಲ ಮಾಡಿ ಮನ್ಸ
ಕೊಂದ್ಲಕೇಳ ಆರ ಕೂಸ ॥ಕೆಟ್ಟ ಕಾಮನಾ

ಭಾರಿ ಗುಣದಾಳ ಊರ ಪುಂಡಿ
ನಾರಿ ಇದ್ಲ ಭಾಳ ಹಂಡಿ
ಉರಿ ಬಂದ ಸತ್ತ ಗಂಡ ಸತ್ಯವಂತನಾ
ಮಕ್ಕಳಿದ್ದು ಆರ ಗಂಡ
ತಿಂದ ಆಗ್ಯಾಳ ತೊಲಿ ತುಂಡ
ಹರೇದ ಹುಡಗರ ಕಂಡ  ಹಾಕೂಳ ಗೋಣ

ಊರ ಬಿಟ್ಟ ದೂರ ಮೈಲ
ಬಾವಾ ಇದ್ದ ಭಾಳ ಸೇಲ
ಭಿಕ್ಷಾ ಬೇಡಾಂವ ನಿತ್ಯಕಾಲ  ಊರ ಒಳಗನಾ
ಆತ ಮನಸ ಅಂವನ ಮ್ಯಾಲ
ಸಿಸ್ತ ಕಾಸಿ ಸೇರ ಹಾಲ
ಬಿದ್ದ ಕರದ್ಲ ಅವನ ಕಾಲ  ಕುಡೀ ಬರ್ರೆಂತ

ಭಾರಿ ಭಕ್ತಿಲಿಂದ ರಂಭಿ
ಬಾವಾ ಬಂದ ಕೇಳಿ ನಂಬಿ
ಕುಡಿಬೇಕ ಅಂದ ಖುಬಿ  ಕಾಸಿದ ಹಾಲನಾ
ಹಾಲ ಕೊಟ್ಲು ಸಕ್ರಿ ಹಾಕಿ
ಹಾದರಗಿತ್ತಿ ಹಾದ್ಲು ತೆಕ್ಕಿ
ಬಾವಾ ಭಾಳ ಅಂಜಬುರಕಿ  ಹೊರಗ ಜಿಗದಾನಾ

ಹೆಂಗ್ಸಮದಲ ಭಾಳ ಕೊಂಗಿ
ಸಾಧೂನ ಮೈಯಾಗ ಇಲ್ಲ ಅಂಗಿ
ಕೈಗಿ ಸಿಕ್ತು ಕಳೀತು ಲುಂಗಿ  ಬಲೇ ಓಡ್ಯಾನ
ಸಾಧು ಮಾಡಲಿಲ್ಲ ಸಂಘ

ಆದ್ಲ ಕೇಳ ಮಾನಭಂಗ
ಅಂವನ ಮ್ಯಾಲ ಇಟ್ಲಖಂಗ  ಖೊಟ್ಟಿ ಹೆಂಗಸಾ

ಸಾಧೂನ ಕೊಲಬೇಕಂತ ಖೋಡಿ
ಆರ ಕರ್ಚಿಕಾಯಿ ಮಾಡಿ
ವಿಷಾ ತುಂಬ್ಯಾಳ ತೀಡಿ ತೀಡಿ  ಊರ ತಿಳಗೇಡಿ
ಬರತಾನಂತ ಭಾಳ ಮಾಡಿ
ಹಾದಿನೋಡತಾಳ ಲೌಡಿ
ಇರಬಾರ್ದ ಇಂಥಾ ಗುಣಗೇಡಿ  ಹೆಣ್ಣಮಗಳ

ಮರುದಿವಸ ಭಾವಾ ಬಂದ
ಅಡ್ಡ ಬಿದ್ಲ ಹೋಗಿ ಮುಂದ
ಉಳ್ಳಾಕ ಏಳ್ರಿ ಅಂದ್ಲ  ಒಳ್ಳೇಕ್ಕಿನಾ
ಸಾಧು ಹೇಳ್ದಕಿ ಮುಂದ
ಶನಿವಾರ ಉಪವಾಸನಂದ
ಒಲ್ಲೇಳ ತಾಯೀ ಅಂದ  ಕೈ ಮುಗದ

ಊಟಾದ್ರ ನಿಮ್ಮದೀಗ
ಒಯ್ಯರಂದ್ರ ಜೋಳಗ್ಯಾಗ
ತಂದ ಹಾಕೀದಾಳ ಬೇಗ  ಕರ್ಚಿಕಾಯೀನಾ
ಸಾಧೂಗಿದೇನ ಗೊತ್ತ
ನಾರಿ ನಗತಾಳ ನಿತ್ತ
ರಾತ್ರಿ ಹೋಗತಾನ ಸತ್ತ  ಚಿಂತಿ ಹೋಯ್ತ

ಸಾಧೂ ಹ್ವಾದ ಅವಸರ ಮಾಡಿ
ಮಳಿ ಇಳಿದಿತ್ತ ಸುತ್ತೂಕಡಿ
ಜೋಳಗಿ ಇಟ್ಟ ಚಾಟ ನೋಡಿ  ಮಲಗಿಕೊಂಡಾನ
ಹಬ್ಬ ಇತ್ತ ಕೇಳ್ರಿ ಮುಂದ
ಕರಿಲಾಕ ಅಕಿ ಅಣ್ಣ ಬಂದ
ಮಳಿಗಿ ಸಿಕ್ಕ ಒಳಗಬಂದ  ಸಾಧೂನ ಜೋಪಡ್ಯಾಗ

ಸತ್ಕಾರ ಮಾಡಿ ಸಾಧು ಅಂದ
ನೀ ತೋಸಗೊಂಡ ಬಂದಿ
ಗಂಟ ತಗದಕೊಟ್ಟ ಉಣ್ಣಂದ  ಕರ್ಚಿಕಾಯಿನಾ
ಬಡತನಾ ಅಂದ್ರ ಭಾಳ ಕೆಟ್ಟ
ಬರಿಗೈಲೆ ನಾ ಬನ್ನಿ ಹೊಂಟ
ತಂಗಿ ಮಕ್ಕಳಿಗಿರ್ಲಿ ಗಂಟ  ಕಟ್ಟಿ ಮಲಗಿದನಾ

ಹೊತ್ತ ಹೊಂಟ ಅವಸರ ಮಾಡಿ
ತಂಗೀ ಮನೀಗಿ ಬಂದ ಓಡಿ
ಮಾಂವ ಬಂದಾನಂದ ನೋಡಿ  ಹಾದೂ ತೆಕ್ಕೀನಾ
ತಡಾ ಮಾಡಲಿಲ್ಲ ಬಂಟ
ಬಿಚ್ಚಿಕೊಟ್ಟ ಮಕ್ಕಳ್ಗಿ ಗಂಟ
ಆರೂ ಮಕ್ಕಳ ತಗೊಂಡ ಹೊಂಟು  ಕರ್ಚಿ ಕಾಯೀನಾ

ಬೆಳಿಯುವಂಥಾ ಎಳಿ ಕೂಸಾ
ತಿಳೀಲಾರ್ದ ತಿಂದೂ ವಿಷಾ
ತೇಕತಾವ ವಸಾವಸಾ  ಸಂಕಟಾಗೈತಿ
ಬಿದ್ದ ಬಿದ್ದ್ಯಾಡಿ ಸತ್ತೂ ಕೂಸು
ಗಾಬರಿರ್ಯಾಗಿ ನಿಂತ್ಲ ಹೆಂಗ್ಸು
ಬೈಯ್ಯತಾಳ ಮಾಡಿದಿಮೋಸ  ಅಣ್ಣಗನಕೋತಾ

ಹೇಳತಾನ ಗಾಬರ್ಯಾಗಿ
ಊರ ಹೊರಗ ಇದ್ದ ಜೋಗಿ
ನಿಂತೆ ನಾ ವಸ್ತಿ ಹೋಗಿ  ಕೊಟ್ಟ ಕರ್ಚಿಕಾಯಿನಾ
ಬರಿಗೈಲಿ ಬನ್ನಿ ಹೊಂಟ
ತಂಗಿ ಮಕ್ಕಳಿಗಿರಲಂತ ಗಂಟ
ಉಪವಾಸ ಮಲಗಿಕೊಂಡ  ತಂದಿದ್ದಿನಿ ನಾ

ಮಾತ ಖರೆ ಅಂದ್ಲ ಹೆಂಗ್ಸ
ಮಂದೀದ ಮಾಡಬಾರ್ದ ಮೋಸ
ತಂದ ಆಗತೈತಿ ಮದಲನಾಶ  ಈಗ ತಿಳಿದಳಾ
ಅಣ್ಣಾತಂಗೀನ ಅರೆಷ್ಟ ಮಾಡಿ
ಶಿಕ್ಷಾ ಕೊಟ್ರು ಸರಕಾರ ನೋಡ್ರಿ
ತಂಗಿ ಸೆರಗ ಬಡದ ನಡ್ದ ಆತ ಜೇಲಿಗಿ

ಗುಂಪು ಜೋರ ಗಿಡಗಳ
ತಂಪ ಊರ ಗುಣದಾಳ
ಸುತ್ತಮುತ್ತ ತ್ವಾಟಾ ಪಟ್ಟಿ  ಸೃಷ್ಟಿ ಸೌಂದರ್ಯ
ಹಳದಾಗ ಹಾವಸಿ ಚಿಂಗ
ಮರದಾಗ ಆಡೂ ಮಂಗ
ತಂದ ಒಡೀರಿ ಲಿಂಗಕ ಟೆಂಗ  ರಾಮಕವೀನಾ

* * *