14.  ಬಾಳೇವಂತ ಬೋಳಿಮಗಾ ಖಾಸ ಶರಣ

ಬಾಳೇವಂತ ಬೋಳೀಮಗಾ ಖಾಸ  ಭಕ್ತ ಕಬೀರದಾಸ
ಕಮಾಲವನ ಕೂಸ  ಕೇಳ್ರಿ ಕತೀಸಾರಾ
ಭಕ್ತಿಯಲ್ಲಿ ಬಲ್ಲಿದನಿಸಿಕೊಂಡ್ರೊ ಅವರಾ                                                                                             ॥

ಪಣಲೇಖ ಪತಿದಾತು ಮರಣ ಸತಿ ಅತಿ ತರುಣ
ರೂಪವತಿ ಪೂರ್ಣ ಜಾತಿಲಿಂದ ಬ್ರಾಹ್ಮಣ
ಭಾರಿಗುಣದ ನಾರಿ, ಮಾಡಿದಾಳ ಜಾರಿ ಫಟಿಂಗ ತನಾ                                        ॥

ಹೇಸಿ ಕಾಮವಿಲಾಸ ಹೆಣ್ಣಿಗೆ ಬಲು ತ್ರಾಸ
ಮನಸಿಗಿಲ್ಲ ಹರುಷ ಜನರಾಡೂರ ಹಾಸ್ಯ ನೋಡಿ ಕೇಳಿನ್ನ
ತುಂಬಿ ನವಮಾಸ ಗಂಭೀರಕೂಡ ಗಂಡ ಹಡದಾಳ ರತನಾ                              ॥

ಪತಿ ಇದ್ದಾಗ ಪೂರ್ಣ ನಾ ಬಂಜಿ ಅಬರೂಕ ಅಂಜಿ
ಮೂರು ಸಂಜಿ ಮಂದಿ ಮಲಗಾಣಾ ಫಳಿಯಮ್ಯಾಲ
ಕೂಸೀನ ಕಟ್ಟಿ ಬಿಟ್ಟಾಳ ಹೊಳಿಯ ಒಳಗ                                                                        ॥

ಕೂಸ ಹೋತ ತೇಲೂತ ಕಾದ ಭಗವಂತ
ಸ್ವತಾ ತಾ ನಿಂತ ಸೃಷ್ಟಿಪಾಲಕನೂ
ಮೋಮೀನ ತೊಳೂತಿದ್ದ ನೂಲ ತೆಳಗ ಮುಸಲ್ಮಾನ                                         ॥

ಇತ್ತ ಚೈತ್ರಮಾಸ ಹೊತ್ತೇರಿ ತಾಸ
ಬತ್ತ ತೇಲುತ ಕೂಸ ನಿತ್ತ ನೋಡಿದ ಪುರುಷ
ಎತ್ತಿಕೊಂಡ ಕಂದ ಮನಿಗಿ ತಂದ ಮಾಡೂರುಜೋಪಾನ                                     ॥

ಮುಸಲ್ಮಾನ ಪದ್ಧತಿ ಪ್ರಕಾರ ಹೆಸರಿಟ್ರು ಕಬೀರ
ಸುಲ್ತಿ ಮಾಡಿದಾರ ಕಲ್ತ ಖಾಜಿಗಳಾ
ಹಣಿಮ್ಯಾಲ ನಾಮ ಬಾಯಲ್ಲಿ ರಾಮ ನಿತ್ಯ ಮಾಡುತಿದ್ದ ಭಜನಾ                       ॥

ರಾಮ ನಾಮದಲಿ ಮಗ್ನ ಮನಿಯಾಗ ಹತ್ತಿ ವಿಘ್ನ
ಮಾಡಿ ಅವನ ಲಗ್ನ ಊರ ಬಿಡಿಸ್ಯಾರವನ
ಬೇರೂರಾಗ ಭಾರಿ ಸಾವಕಾರನಲ್ಲಿ ಸೀರಿ ನೇಯತಾನ                                        ॥

ಸಾವುಕಾರ ಇದ್ದ ಬಲು ಖೊಟ್ಟಿ ಪಗಾರ ಇಲ್ಲಿ ತುಟ್ಟಿ
ಅದರ ಮ್ಯಾಲ ಹೊಟ್ಟಿ ನಡಸಿದನ, ಹಸ್ತದಲಿ ನೂಲ ಶಿಸ್ತ
ಮಗ್ಗದ ಮ್ಯಾಲ ಮಲಗಿ ಮಾಡತಾನ ಭಜನಾ                                                        ॥

ನಿದ್ದಿ ಜೋರ ಮಲಗಿದ ಕಬೀರಾ
ಖೊಟ್ಟಿ ಸಾವುಕಾರ ಕೊಡೂದಿಲ್ಲ ಪಗಾರಾ
ತಿಳದ ಶ್ರೀರಾಮ ತಾ ಇಳದ ಬಂದ ಸೀರಿ ನೇದಾನ                                             ॥

ಎಚ್ಚರಾಗಿ ಎದ್ದ ಭಕ್ತ ಭಾರಿ ನೇಯ್ದನಂದ
ಶ್ರೀಹರಿ ಸೀರಿ, ಕೊಯ್ದ ಅದರ ಕರಿ ಒಯ್ದ ಸಾವಕಾರ ಮನೀಗಿ
ಹೇಸಿ ಸಾವಕಾರ ಹೇಳಿದ ಬೇಸಿಲ್ಲ ಮಾರಂದ ನೀನಾ                                          ॥

ಸಂತಿಗಿ ಹೋದ ಕಬೀರ ಕುಂತ ಮಾರ್ಲಾಕ ಸೀರಿ ವ್ಯಾಪಾರ
ಸಂತರ ಬಂದ್ರ ಐದಾರ ಶಾಂತ ನಡೀತ್ರಿ ಹರಿಭಜನಿ
ಸೀರೀ ನೋಡಿ ಜನಾ ಭಾರಿ ಕೂಡಿತು, ಮಾಲಕ ಮಾಡ್ತಾನ ಭಜನಿ                     ॥

ಹರೀದು ಹತ್ತಿತ ಹಸ್ತ ಸೀರಿ ಇತ್ತ ಬಲಮಸ್ತ
ಮಾಡಲಿಲ್ಲ ಕಿಮ್ಮತ್ತ ನೋಡಿ ಜನ ಸುಮ್ಮಾಕ ಕೇಳ್ರಿ
ಬಿಟ್ಟ ಭಜನಿಮ್ಯಾಳ ಕಟ್ಟಿಕೊಂಡ ತಾಳ ಹೊಂಟ ಹೋದರಿನ್ನ                              ॥

ತುಂಟ ಸೂರ್ಯ ಹೋದ ಸಾರಿ ಎಂಟ ಭಕ್ತರು ಗಂಟ ಕಟ್ಟಿ ಸೀರಿ
ಹೊಂಟ ಹೋದರೊ ಊರಾನ ಧರ್ಮಸಾಲಿಗಾಗ
ಭಕ್ತಿ ಪರೀಕ್ಷಾಕ ಶಕ್ತಿ ಬಂದಾಳೋ ಆಗಿ ಮುಪ್ಪಾನ ಮುದಕಿ                                  ॥

ಮುದಕಿ ಬಂದ ತೆರದಾಳ ಬಾಯಿ ಬಾಳಾ ನಾ ಬಾಳ ಬಡವಿ
ಉಡಲಾಕಿಲ್ಲ ಅರಿಬಿ ನನಗ ಕೊಡರಿ ಪುಣ್ಯಾಕ ಸೀರಿ ಒಂದ
ಹಿಂದಮುಂದ ನೋಡಲಾರ್ದ ಕುಶಿಲಿನಿಂದ ಕಬೀರ ಕೊಟ್ಟಬಿಟ್ಟ ಸೀರೀನಾ       ॥

ಖಾಲಿ ಹೊಂಟ ಕಬೀರ ಸುಮ್ಮ ಬಾಯಲ್ಲಿ ರಾಮನಾಮ
ಬಡವರ ಮ್ಯಾಲ ಪ್ರೇಮ ಬಾಳ ಅಂವಗ ಕೇಳ್ರಿನ್ನ
ಹೋಗೂದರಾಗ ಸುದ್ದಿ ಹತ್ತಿ ಸಾವಕಾರ ಸಿಟ್ಟಾಗಿ ಕೂತಿದ್ದಾ                                 ॥

ಹೋಗಿ ಕಬೀರ ಕಾಲ ಹಿಡದಾನ ಗಚ್ಚಿ
ಸಾವಕಾರ ಮುಂದ ಹೇಳತಾನ ಸ್ವಚ್ಚಿ ಇಡಲಿಲ್ಲ ಮುಚ್ಚಿ
ಸಾವಕಾರ ಮಚ್ಚಿಲೆ ಹೊಡದ ಹೊರಗ ಹಾಕಿದಾನ                                                ॥

ಸತ್ಯವಂತ ಸುಗುಣ ಶ್ರೇಷ್ಠ ಸಾವಕಾರರ ಮನಿ ಬಿಟ್ಟ
ಸತಿ ಸಂಗಾಟ ಸುತ ಕಮಾಲನಾ
ಸ್ವಂತಮನಿ ಮಾಡಿ ನಿಂತ ಸತಿಪತಿ-ಬಾಳ ಬಡತನ                                             ॥

ಸತಿಪತಿ ನಿವಳ ಸಂಸಾರ ವೊಳೆ ಸರಳ
ಸಂಜಿಕಿಲ್ಲ ಜ್ವಾಳ, ಸಂತ್ರ ಬಂದ್ರ ಏಳ
ಸಾಲ ಇತ್ತ ಭಾಳ, ಕಾಲ ಹಿಡದ್ರು ಸಿಗುದಿಲ್ಲ ಕಾಳ
ಸಂತರಿಗಿಲ್ಲ ಕೂಳ ಭಾಳ ಕಠಿಣಾ                                                                             ॥

ಸಾಲ ತರಲಾಕ ಹೊಂಟ ಬಾಲ ಸ್ವತಾ ಕಮಾಲ ಶೆಟ್ಟಿ ಇದ್ದ ಶೇಲ
ಗಟ್ಟಿ ಹಿಡದ ಕಾಲ ಕೆಟ್ಟ ವ್ಯಾಳೇನಾ
ಕಂದ ತೆರದ ಬಾಯಿ ಕೊಡರೊಂದ ರೂಪಾಯಿ
ಮುಂದೆ ಕೊಡುವೆನಾ                                                                                                  ॥

ಖೊಟ್ಟಿ ಸಾವಕಾರ ಕಮಾಲಗಂದ, ನಿಮ್ಮ ತಾಯೀನ
ತಂದಕೊಡ ರಾತ್ರಿ ಇಂದ ಬೇಕಾದಟ್ಟ ಹಣಾ ಒಯ್ಯ ಅಂದ
ಮುಂದ ಬೇಕಾದಂಗ ತಂದ ತೀರಿಸೋ ನನ್ನ ರುಣಾ                                            ॥

ಹೇಸಿ ಸಾವಕರ್ನ ಮಾತು ಕೂಸ ಕೇಳಿ ನಿಂತ
ತ್ರಾಸ ಒಳೆ ಬಂತು ಸ್ಮರಿಸಿದ ಅನಂತನಾ
ಒಲ್ಲೆಂದ್ರ ಸಿಗೂದಿಲ್ಲ ಸಾಲ ತಂತ್ರ ಮಲಗೂರ ಉಪವಾಸ                                   ॥

ಸಂತರ ಸಲುವಾಗಿ ಕಂದ ಸ್ವಂತ ತಾಯೀನ ತಂದ
ಕೊಡತೀನೊ ಅಂದ ಕೊಟ್ಟ ಕೇಳೋ ವಚನ
ಕಾಮದಾಸೆ ಕೆಟ್ಟ ಪ್ರೇಮದಿಂದ ಕೊಟ್ಟೊ ಸಾಮಾನ                                              ॥

ಸಾಮಾನ ತಂದ ಬಾಲ ಶ್ರೇಷ್ಠ ಸಂತ್ರದಾತ ಊಟ
ಮಾಡುತ ಹುಡುಗಾಟ ಮಲಗಿಕೊಂಡಾರಿನ್ನ
ಕಮಾಲ ಕೂಸ ಕರದ ತಾಯೀನ ಕಾಸ ಹೇಳುತಾ                                                ॥

ಕಣ್ಣೀರ ತಂದ ಬಾಲ ತಾಯಿದ ಹಿಡದ ಕಾಲ
ತಂದೀನವ್ವ ಸಾಲ ಇಂದ ನಿನ ಮ್ಯಾಲ ನಾ
ಸುತನ ಮಾತ ಕೇಳಿ ಕರದಾಳ ಕಬೀರನಾ                                                                      ॥

ಪತಿ ಶ್ರೇಷ್ಠ ಹಿಡದ್ಲ ಪಾದ ಕೊಟ್ಟ ಆಶೀರ್ವಾದ
ಸುತನ ಸಂಗಾಟ ಎದ್ದ ಶೆಟ್ಟಿ ಮನಿಗಿನ್ನ
ಹೋಗುದರಾಗ ಶೆಟ್ಟಿ ಹೆಣಾ ಸುಡಗಾಡಕ ಒಯ್ದಿದರಾ                                           ॥

ತಾಯಿ ಮಗಾ ಮನದಾಗ ಮರಗಿ ತಿರಿಗಿ ಬಂದ್ರ ಮನಿಗಿ
ಹೇಳತಾರ ಕಬೀರನ ಮುಂದ ಶೆಟ್ಟಿ ರುಣಾ ಮುಟ್ಟಲಿಲ್ಲ
ಕಟ್ಟಿಕೊಂಡ ಹೋದ ಯಮನು                                                                                  ॥

ಸತಿ ಪತಿಗಿ ಶಾಂತಿಯಿಲ್ಲ ಮನದಾಗ ಕುಂತ್ರ ಮನಿಯಾಗ
ಸಂತ್ರ ಬಂದ್ರ ಹೊರಗ ನಿಂತು ಹೊಡೆದಾರ ತಾಳನಾ
ಕಾಲಬಿದ್ದ ಕಮಾಲ ಕುಡಿಲಾಕ ಕೊಟ್ಟ ನೀರನಾ                                                      ॥

ಹತ್ತಮಂದಿ ಸಂತ್ರ ಬಂದ ಕುಂತ್ರ ಮನಿಯಾಗ ಚೆಂದ
ಸತಿಪತಿ ಆಗಂದ ಸುತ ಕಮಾಲನಾ
ಜ್ವಾಳಾ-ಕಾಳಾ ಇಲ್ಲ ಮನಿಯಾಗ ಗೋಳ ಮಾಡೂದೇನ                                    ॥

ಕಾಲ ಹಿಡದ್ರ ಸಿಗುದಿಲ್ಲ ಕಾಳ ಸಾಲ ಇತ್ತ ಬಾಳ
ಸಂತರಿಗಿಲ್ಲ ಕೂಳ, ಹೊಂಟೊ ಕಳವಿಗಿನ್ನಾ
ಸಾವಕಾರ ಮನಿ ಬೋಕಮಾಡಿ ಹೊಕ್ಕ ಕಮಲ                                                     ॥

ಕಬೀರನ ಕೈಯಾಗ ತಂದ ಕೊಟ್ಟ ಮಾಲ, ಬೊಕಿನಲ್ಲಿ ಬಾಲ
ಸಾವಕಾರ ಹಿಡದ ಕಾಲ ಎಚ್ಚರಾಗ್ಯಾನ
ಕಬೀರ ಜಗ್ಗತಾನ ಕಮಾಲನ ಹೊರಗ                                                                              ॥

ಕಬೀರಗ ಬಂತು ಕೆಟ್ಟ ಪ್ರಸಂಗ ಕಮಾಲ ಮಾಡೂನ ಹೆಂಗ
ಸಾವಕಾರ ಬಾಳ ಮಂಗ ಬಿಡುದಿಲ್ಲ ನಮ್ಮನಾ
ಚೌಡಿಗೋದ ಗೌಡ ಕುಲಕರ್ಣಿ ಮಾಡತಾರ ಶಿಕ್ಷೇನಾ                                           ॥

ಸಿಟ್ಟಿಗೇರಿ ಕಮಾಲ ಕಬೀರಗ ಅಂದ ಖೊಟ್ಟಿ ಭಕ್ತಿನಿಂದ
ಬಿಟ್ಟ ಬಿಡೋ ಇಂದ ಹೊಂಡಿ ಎನ್ನ ರುಂಡನ್ನ
ಸಾಮಾನ ಒಯ್ಯ ಸಂತ್ರ ಮಲಗೂರ ಉಪವಾಸ                                                  ॥

ತಂದಿಬಿಟ್ಟ ಮಗನ ಮ್ಯಾಲಿನ ಪ್ರೇಮ ಬಾಯಲ್ಲಿ ಅಂದೊ ರಾಮ
ಹೊಡದ ರುಂಡ ಹುಮ್ಮ ಹೊತ್ತ ಸಾಮಾನಾ
ಹೋಗುದ್ರೊಳಗ ಸಂತ್ರ ಮಾಡಿತಿದ್ರ ಭಜನಾ                                                                 ॥

ಹೆಣತಿ ಮಂದ ಹೇಳಲಿಲ್ಲಗಂಡ ಮುಚ್ಚಿಟ್ಟ ರುಂಡ
ಅಡಿಗಿಮಾಡಿ ಉಂಡ ಮಲಗಿಕೊಂಡರಿನ್ನಾ
ಕುಂತು ಕಬೀರ ಹೊಟ್ಟಿಕಳ್ಳ ಕೆಟ್ಟ ಬಾಳನಾ                                                                      ॥

ಸತ್ಯವಂತ ಕಮಾಲ ಪುಂಡ ಸತ್ತ ಸ್ವರ್ಗ ಕಂಡ
ದಡಾ, ಇಲ್ಲದ ರುಂಡ, ಸಾವಕಾರ ಹೊತಗೊಂಡ ಹೋದಾನಾ
ಗೌಡ ಕುಲಕಣ್ಣಿ ಚಾವಡಿಯೊಳಗ ಇಟ್ಟಾರ ಅದನಾ                                               ॥

ಸತ್ಯವಂತನ ಹೆಣಾ ಹತ್ತಲಿಲ್ಲ ಖೂನಾ ಸುತ್ತಕೂಡಿತು ಜನಾ
ನಿತ್ತಾರ ಸುಮ್ಮನಾ ಗುರ್ತ ಆಗಲೆಂದ
ಚಾವಡಿ ಮೂಲಕ ಹಾಕಿದರದನಾ                                                                              ॥

ಕಡೀಕ ಕಬೀರನ ಸಂತರ ಮ್ಯಾಳ, ಹೊಡೆಯುತ ಬಂದು ತಾಳ
ಚವಡಿ ಮುಂದ ನಿವಳ ನಿಂತಾರಿನ್ನ
ರುಂಡಿಲ್ಲ ದಡಾ ಕಂಡ ಬಡೀತು ಚಪ್ಪಾಳೀನಾ                                                        ॥

ಸಾವಕಾರ ಗೌಡ ನೋಡಿ ಕುಲಕರ್ಣಿ ಹ್ವಾದ ಓಡಿ
ಕಬೀರ ಅವಸರ ಮಾಡಿ ತಂದ ರುಂಡಾನಾ
ಮಂತ್ರ ಅಂದ ಮ್ಯಾಲಿಟ್ಟ ಸಂತ್ರ ಇಳಿಸಿ ಕೊಂಡಾರ                                              ॥

ನಿಂತ್ರ ಜನಾ ಬಡದ ದಂಗ ಸಂತ್ರ ಅಂದ್ರ ಅಭಂಗ ಒಂದ
ಒಡದರ ತೆಂಗ ಹೊಂಟ ಹೋದಾರಿನ್ನ
ಸತಿ-ಪತಿ ಶಾಂತ ಸುತ ಭಕ್ತಿವಂತನಾ                                                                             ॥

ಭಕ್ತ ಕಬೀರ ಶ್ರೇಷ್ಠ ಮುಪ್ಪಾದ ದೇಹ ಬಿಟ್ಟಾ ಹತ್ತಿ ಬಡದಾಟ
ಹಿಂದು ಮುಸಲ್ಮಾನರೆಲ್ಲ ನಂದ ನಂದ ಹೆಣಾ ಅಂದ
ಕುತ್ತಾರ ಎಡಬಲಕ-ಅತ್ತಾರ ಬಡಕೋತ                                                                          ॥

ಹೆಣಾ ಹೋತ ಗಪ್ಪಾಗಿ ಹಿಂದು ಕೂತಕಡೆ ಮಲ್ಲಿಗಿ
ಮುಸಲ್ಮಾನರಿಗಿ ಕಾಮಕಸ್ತೂರಿ
ಅಂದಿನಿಂದ ಇಂದಿನವರಿಗಿ ಬಂದಾವ ಅದೇ ಪದ್ಧತಿ                                              ॥

ಇಂಥಾ ಭಕ್ತರಿದ್ದುದು ಹಿಂದುಸ್ತಾನ ಓದ ಪುರಣಾ
ಧರ್ಮ ಅರ್ಜುನ ಶಿರಿಯಾಳ ಬಾಲಧ್ರುವ
ಭಕ್ತ ಪ್ರಹ್ಲಾದ ಅಂಬರೀಶ ಅತ್ರಿ ರುಷಿಗಳನಾ                                                                   ॥

ಗುಣದಾಳ ಊರವಾಸ ಹಳ್ಳ ಹರೂದು ಸೂಸ
ಬಂದ ಇಳದ ಈಶ ಭಕ್ತಿ ಬಾಳನಾ
ಬಂಗಾರ ಕಳಸ ಗುಡಿ ಒಳೆ ನಿರಸಾ                                                                         ॥

ರಾಮ ಅವನ ದಾಸ ಪ್ರೇಮದ ಕೂಸ
ಸೋಮವಾರ ಉಪವಾಸ ಮಾಡೂವನಾ
ದಿಟ್ಟಕವಿ ಕಾಸ ಗಟ್ಟಿ ಮಾಡಿದ ಪ್ರಾಣ ಇಟ್ಟ ಭಕ್ತಿನಾ                                               ॥

* * *