ಅತ್ತಿಗೆ ಮೈದುನ ಕೂತು ಪಗಡಿ ಆಡ್ವಾಗ
ಪುರುಷ ಪಲಗುಣರು ಬರುವಾರು
ಪುರುಷ ಪಲಗುಣರು ಬಂದು ನಿಂತು ನುಡಿದಾರು
ಪಗಡಿ ಆಡುವ ಬಗೆ ಹೇಂಗೆ
ಪುರುಷ ಪಲಗುಣರು ಬಂದು ನಿಂತ ಸಮ್ಯದಲ್ಲೆ        
ಬಾಯರಿಗ್ಹಾಲ ಕೊಡುಕ್ಹೋದೇ
ನೀ ಕೊಟ್ಟ ಹಾಲ ಮುಟ್ಟುವ ಮನಗಲ್ಲ
ಮುಟ್ಟಿದ ಬಾ ಹುಂತದ ಸರುಪನ
ಸರುಪನೆಂದರೆ ಸ್ವಾಮೀ ಕಂಡರೆ ಹೆದರೂವೆ
ನಾ ಹ್ಯಾಂಗ್ ಮುಟ್ಟಿ ಬರುವುದು
ನೀ ಮಾಡಿದ ಸತ್ಯ ನಿನ್ಹತ್ರ ಇದ್ರೆ
ಮುಟ್ಟಿ ಬಾ ಹುಂತದ ಸರುಪನ
ಇಷ್ಟೊಂದ ಮಾತ ಕೇಳದ್ದಳುತ್ತರದೇವಿ
ಹ್ವಾದಳು ಮಾವಯ್ನ ಅರಮನಿಗೆ
ಎಂದೂ ಬಾರದ ಸೌಬದ್ರಿ ಇಂದೇನು ಬಂದೀಯ
ಬಂದ ಕಾರಣನೆ ಒದಗ್ಹೇಳು
ಎಂದೂ ಬಂದೆ ಒಂದು ಹೊಸ ಸುದ್ದಿ ಮಾವಯ್ಯ
ನಿಮ್ಮಗ ಹೇಳುವ ನುಡಿ ಕೇಳು
ಅತ್ತಿಗೆ ಮೈದುನಕೂತು ಪಗಡಿ ಆಡ್ವಾಗ
ಪುರುಷ ಪಲಗುಣರು ಬಂದ ನಿಂತ್ ನುಡಿದರೆ
ಪಗಡಿ ಆಟದ ಬಗಿ ಹೆಂಗೆ
ನೀ ಕೊಟ್ಟ ಹಾಲ ನಾ ಕುಡಿಯಕಿದ್ರೆ
ಮುಟ್ಟಿ ಬಾ ಹುಂತದ ಸರುಪನ
ನೀ ನುಡಿದ ಸತ್ಯ ನಿನ್ಹತ್ರ ಇದ್ಹೆಣ್ಗೆ
ಮಟ್ಟಿ ಬಾ ಹುಂತ ಸರ್ಪನ
ಇಷ್ಟೊಂದ ಮಾತ ಕೇಂಡಳೆ ಉತ್ತರದೇವಿ
ನಡೆದಾಳ ಅಣ್ಣಯ್ಯ ಅರಮನಿಗೆ
ಹಿಂದೆ ಸತ್ತುಗಿ ಇಲ್ಲ ಮುಂದೆ ದೀವ್ಗಿಗೆ ಇಲ್ಲ
ಉತ್ರದೇವಿ ಬಿಸಲಲ್ಲೆ ಬರುವಾಳೆ
ತೊತ್ತೈರೆ ಗೌಂಡರೆ ಎತ್ತೆಲ್ಲ ಹೋದಿರಿ
ಪಾದಕು ತೋಳೆಸೀರಿ ಪಾವ್ಡದಲ್ಲೊರಸೀನಿ
ತೂಗುಮಂಚದಲಿ ಕುಳಿ ಹೇಳಿ
ಪಾದ ತೊಳೆಸುದು ಬ್ಯಾಡ ಅಣ್ಣಯ್ಯ
ನಾ ಕೂಪೆ ಮಣ್ಣ ಜಗಲೀಲಿ ಅಣ್ಣಯ್ಯ
ನಿನ ಬಾವ ಹೇಳಿದ ನುಡಿಕೇಳು
ಅತ್ತಿಗೆ ಮೈದುನ ಕೂತು ಪಗಡಿ ಆಡ್ವಾಗ
ಪುರುಷ ಪಲಗುಣರು ಬರುತಾರೆ
ಪುರುಷ ಪಲಗುಣರು ಬಂದ ನಿಂತ್ ನುಡಿದಾರೆ
ಪಗಡಿ ಆಟದ ಬಗಿ ಹೆಂಗೆ
ನೀ ಕೊಟ್ಟ ಹಾಲ ನಾ ಕುಡಿಯಕಿದ್ರೆ
ಮುಟ್ಟಿ ಬಾ ಹುಂತದ ಸರುಪನ
ಸರುಪನೆಂದರೆ ತಂಗಿ ಯಾರ್ ಕಂಡ್ರೂ ಹೆದರೂರು
ನೀ ಹೆಂಗೆ ಮುಟ್ಟಿ ಬರತೀಯ ಉತ್ತರದೇವಿ
ಹಾಲ್ಗಂಜಿ ಉಂಡು ಮನೀಗಿರು ಬಾವ್ನವರು
ಸಿಟ್ಟು ಸಂತರಿಸಿ ಬರುವಾರೆ
ಅಷ್ಟೊಂದ ಮಾತ ಕೇಂಡಳೆ ಉತ್ತರದೇವಿ
ನಡೆದಾಳು ಹರಿವ ಜಲಧೀಗೆ ಉತ್ತರದೇವಿ
ಮಿಂದು ಕಿರುಜಡೆಯ ಸೆಳಿದಾಳು ಉತ್ತರದೇವಿ
ಹೋದಾಳು ಹುಂತಿನಬುಡಕಾಗಿ
ಮ್ಯಾದುಲಿ ಸೆರಗ್ಹಾಸಿ ಶರಣೆಂದು
ನಾ ಮಾಡಿದ ಸತ್ಯ ನನ್ನಲ್ಲಿ ಇದ್ದರೆ
ಬಾರಪ್ಪ ನಾಗಪ್ಪ ಸೆರಗೀಗೆ
ಅಷ್ಟೊಂದ ಮಾತ ಕೇಳಿತೆ ಮಣಿನಾಗ
ಬೋರ್ ಗುಟ್ಕ ಹೆರಗೆ ಬಂದೀತ ಮಣಿನಾಗ
ಒಂದು ಸೆರಗಿನಲೆ ಒರಗೀತ ಉತ್ತರದೇವಿ
ಕ್ಯಾದ್ಗಿ ಹೂಡು ಮುಡಿದಂಗೆ ಮುಡಿವಾಳು
ಕ್ಯಾದ್ಗೀ ಹೂ ಹಾಂಗೆ ಮುಡಿದು ಮುಡಿಯಲ್ಲಿಟ್ಟು
ಬಂದಳು ತನ್ನ ಅರಮನಿಗ
ಹಸಿಯೆ ನಾಲಿಯೆಒರೆ ಹುಸಿಯಾಗದೆ ಹೇಳೀರಿ
ನಾ ಹೊತ್ತ ಹೊರೆಯ ಇಳಿಸೀನಿ
ತೊತ್ತೈರೆ ಗೌಂಡರೆ ಎತ್ತೆಲ್ಲ ಹೋದಿರಿ
ಸತಿ ಹೊತ್ತ ಹೊರೆಯ ಇಳಿಸೀನಿ
ತ್ವತ್ತೇರು ಗೌಂಡೇರು ಇಳಿಸುವ ಹೊರೆಯಲ್ಲ
ದೊರೆ ಬಂದು ಹೊರೆಯ ಇಳಿಸೀನಿ
ಅಂತ್ರಗಾರನಗ ಮಗಳು ಮಂತ್ರಗಾರನ ಸೊಸೆ
ಹಾವಾಡಿಗನ ಕಿರಿತಂಗಿ ಉತ್ತರದೇವಿ
ತಂತ್ರದಿಂದ್ಹಾವ ಹಿಡಿದೀಯ ಉತ್ತರದೇವಿ
ಬಿಟ್ಹಾಕಿ ಬಾ ಹುಂತಿನ ಬಳಿಗ್ಹೋಯಿ
ನಾಗಪ್ಪನಾದರೆ ಹೋಗಪ್ಪ ಹುಂತಿಗೆ
ಬಾರಪ್ಪ ಸುಗ್ಗಿ ಬೆಳಿ ಮುಂದೆ ನಿನಗಂದು
ನಾಗ ಮಂಡಲವ ಕೊಡಿಸುವೆ