ಅರಮನೆಯಲಿ ಕೂತಿದ ಕಂಪಲು ರಾಯ
ಮಾ ಬೇಸರಾದವು ಕಂಪಲು ರಾಯ
ಹಕ್ಕಿ ಬ್ಯಾಟಿಗೆ ಹೊರಟಿದ ಕಂಪಲು ರಾಯ
ಚಕ್ತಾರಿ ಹರಳ ತೆಗೆದಿದ ಕಂಪಲು ರಾಯ
ಅಂಬು ಬಿಲ್ಲು ತೆಗೆದಿದ ಕಂಪಲು ರಾಯ               
ಹಕ್ಕಿ ಬ್ಯಾಟಿಗ್ಹೋರಟಿದ ಕಂಪಲು ರಾಯ
ಎಲ್ಲೆಲ್ಲಿ ತಿರುಗೀರು ಕಂಪಲು ರಾಯ
ಹಕ್ಕಿ ಪಕ್ಷಿ ಹೊಳಿಲಿಲ್ಲ ಕಂಪಲು ರಾಯ
ಹಸು ಬಾಯ್ರು ಜೊರಾದೋ ಕಂಪಲು ರಾಯ
ಮಾ ದೊಡ್ಡ ಮದಗವೆ ಕಂಪಲು ರಾಯ
ನೀರಿನ ನೆರಳಲ್ಲಿ ಕಂಪಲು ರಾಯ
ಎರಡು ಕಾಂಬ್ಳಿ ಹಕ್ಕಿ ಕುಂತಿದ್ದೊ ಕಂಪಲು ರಾಯ
ಅಂಬು ಬಿಲ್ಲು ತೆಗೆದನೆ ಕಂಪಲು ರಾಯ
ಚಕ್ತಾರಿ ಹರಳ ತೆಗೆದನೆ ಕಂಪಲು ರಾಯ
ಹಕ್ಕಿಗೊಮ್ಮೆ ಹೊಡೆದನೆ ಕಂಪಲು ರಾಯ
ತಡೆ ತಡೆ ನನ್ನ ಹೊಡಿ ಬೇಡ ಕಂಪಲು ರಾಯ
ತೆಂಖಿನಸಾಗರ ಸೌಭದ್ರಿ ಕಂಪಲು ರಾಯ
ಅವಳನ್ನಾರೂ ತಂದೀರೆ ಕಂಪಲು ರಾಯ
ನಿನಗೆ ತಲಿಬಾಂಗೀ ಕೊಡ್ತೇನೆ ಕಂಪಲು ರಾಯ
ಹಕ್ಕಿ ಭಾಷಿ ಕೊಟ್ಟಿದೆ ಕಂಪಲು ರಾಯ
ಅಕ್ಕನರ ಮನೆಗೆ ನಡೆದನೆ ಕಂಪಲು ರಾಯ
ಎಂದು ಬಾರದಿದ್ದ ತಮ್ಮಯ್ಯ ಕಂಪಲು ರಾಯ
ಇಂದೇನ ಬಂದೀಯ ಕಂಪಲು ರಾಯ
ನಿನ ಸರುಚಿನ್ನು ಕೊಡಕ್ಕ ಕಂಪಲು ರಾಯ
ನಿನ್ನ ಸರುಪಟ್ಟಿ ಕೊಡಕ್ಕ ಕಂಪಲು ರಾಯ
ತೆಂಕಿನ ಸಾಗರಕ್ಕೆ ಹೋದರೆ ತಮ್ಮ ಕಂಪಲು ರಾಯ
ಕರಿನ ಕೊಚ್ಲಾಯಿ ಬಿದ್ದಿರಂಬ್ರ ಕಂಪಲು ರಾಯ
ನೀನಾರು ಹೋಪುದು ಬ್ಯಾಡ ಕಂಪಲು ರಾಯ
ಅಷ್ಟು ಮಾತ ಕೇಳಲಿಲ್ಲ ಕಂಪಲು ರಾಯ
ನಿನ್ನ ಸರುಪಟ್ಟಿ ಕೊಡಕ್ಕ ಕಂಪಲು ರಾಯ
ಅವ್ಳನ್ನಾರು ಕರ‍್ಕ ಬತ್ತೆ ಕಂಪಲು ರಾಯ
ಸರ್ವ ಪಟ್ಟಿ ಕೊಟ್ಟಾಳೆ ಕಂಪಲು ರಾಯ
ಅದನ್ನೆಲ್ಲ ತೆಕ್ಕಂಡ ಕಂಪಲು ರಾಯ
ಕುದುರೆ ಮ್ಯಾನೆ ನಡೆದನೆ ಕಂಪಲು ರಾಯ
ತಂಕಿನ ಸಾಗರ ಗಡಿಗ್ ಹೋದ ಕಂಪಲು ರಾಯ
ಸರುಚಿನ್ನು ಹಾಕಿದ ಕಂಪಲು ರಾಯ
ಸರುಪಟ್ಟಿ  ಉಟ್ಟಿದ ಕಂಪಲು ರಾಯ
ಹೆಣ್ಣಿನ ರೂಪ ಮಾಡ್ಕಂಡ ಕಂಪಲು ರಾಯ
ಅಜ್ಜಿ ಮನಿಗೆ ನಡಿದನೆ ಕಂಪಲು ರಾಯ
ನಿನಗೆಲ್ಲಾರು ಅಯ್ತುಕೇಂತು ಕಂಪಲು ರಾಯ
ನನಗೆ ಬಡಗಿನ ರಾಜ್ಯ ಆಯ್ತಂದ ಕಂಪಲು ರಾಯ
ಅಜ್ಜಿ ಮನೆಯಲ್ ಉಳ್ಕಂಡ ಕಂಪಲು ರಾಯ
ಅಜ್ಜಿ ಹೂಗೆಲ್ಲ ಕೊಯ್ಕಬಂತ್ ಕಂಪಲು ರಾಯ
ಹೂಗೆಲ್ಲ ಕಟ್ಟತಿತ್ತೆ  ಕಂಪಲು ರಾಯ
ಇದ ಎಲ್ಲಿಗ್ಹೋಪು ಹೂಗಜ್ಜಿ ಕಂಪಲು ರಾಯ
ತೆಂಕ್ಲ ಸಾಗರ ಸೌಭದ್ರಿ  ಕಂಪಲು ರಾಯ
ಆವ್ಳ ಮನೀಗ್ ಹೋಪ್ಹೂಗ ಕಂಪಲು ರಾಯ
ಮಾಚಂದವಾಗಿತ್ತು ಕಂಪಲು ರಾಯ
ಮಂಡಿಕೂದ್ಲ ತೆಗೆದಿದ ಕಂಪಲು ರಾಯ
ಮೂರ್ ಸಿಗ್ಳ ಮಾಡಿದ ಕಂಪಲು ರಾಯ
ಹೂಗನೆಲ್ಲ ಕಟ್ಟಿದ ಕಂಪಲು ರಾಯ
ಮಾ ಚಂದವಾಯ್ತು ಕಂಪಲು ರಾಯ
ಅಜ್ಜಿ ಹೂಗಿನ ಚಂಡಿ ತಕ್ಕಂಡ್ಲ ಕಂಪಲು ರಾಯ
ತೆಂಕಿನ ಸಾಗರಕೆ ನಡೆದೀಳು ಕಂಪಲು ರಾಯ
ತೆಂಕಿನ ಸಾಗರ ಸೌಭದ್ರಿ ಕಂಪಲು ರಾಯ
ಹೂಗಿನ್ ಚಂಡಿ ಸೌಭದ್ರಿ ಕಂಪಲು ರಾಯ
ಇದ ಯಾರ್ ಕಟ್ಟಿದ ಹೂಗಜ್ಜಿ ಕಂಪಲು ರಾಯ
ಮಾ ಚಂದ ಆಗಿತ್ತು ಕಂಪಲು ರಾಯ
ಬಡ್ಗಿನಸಾಗರದ ಮೊಮ್ಮಗಳು ಕಂಪಲು ರಾಯ
ಇಂದವಳು ಬಂದೀಳ ಕಂಪಲು ರಾಯ
ಅವಳ್ ಕಟ್ಟಿದ ಹೂ ಮಗಳೆ ಕಂಪಲು ರಾಯ
ಎರಡ್ಸಿದ್ದಕ್ಕಿ ಕೊಟ್ಟಳೆ ಕಂಪಲು ರಾಯ
ಬಡ್ಗನ ಸಾಗರದ ಮಮ್ಮಗಳೆ ಕಂಪಲು ರಾಯ
ನಾನಾರು ಕಾಣಬೇಕು ಕಂಪಲು ರಾಯ
ಆವ್ಳನ್ನಾರು ಕರ್ಕಂಬಾರೆ ಕಂಪಲು ರಾಯ
ನಾಳಿಗ್ಹೂಗ ತರುವಾಗೆ ಕಂಪಲು ರಾಯ
ಮಮ್ಮಗಳನ್ನು ಕರ್ಕಂಬಾರೆ ಕಂಪಲು ರಾಯ
ಅಕ್ಕೆಂದು ಹೇಳ್ತಜ್ಜಿ ಕಂಪಲು ರಾಯ
ಮನಿಗಾರೂ ಬಂದೀತೆ ಕಂಪಲು ರಾಯ
ಮೊಮ್ಮಗಳ ಕರೆದೀತೆ ಕಂಪಲು ರಾಯ
ತೆಂಕಿನ ಸಾಗರ ಸೌಭದ್ರಿ ಕಂಪಲು ರಾಯ
ನಿನ್ನಾರು ಬಪ್ಕೇಳ್ತ ಕಂಪಲು ರಾಯ
ತೆಂಕಿನ ಸಾಗರ ಸೌಭದ್ರಿ ಕಂಪಲು ರಾಯ
ಅವ್ಳ ಪಗಡಿ ಆಟೋ ಹೆಂಗೆ ಕಂಪಲು ರಾಯ
ಬೆಕ್ಕಿನ ತಲಿಮ್ಯಾಲೆ ದೀಪ ಇಟ್ಟಿಕೆ ಕಂಪಲು ರಾಯ
ಅವ್ಳ ಪಗ್ಡಿ ಆಡ್ತ್ಲ ಮಗಳೆ ಕಂಪಲು ರಾಯ
ಅವಳಾಟದಲ್ಲಿ ಮಗಳೆ ಕಂಪಲು ರಾಯ
ಯಾರ್ಯಾರು ಗೆದ್ದರಿಲ್ಲ ಕಂಪಲು ರಾಯ
ಈ ಆಟ ಆಡುದು ಬ್ಯಾಡ ಕಂಪಲು ರಾಯ
ಮೂರ್ ಎಲಿಯ ಹಿಡಿದೀದ ಕಂಪಲು ರಾಯ
ಕಿಸಿ ಒಳಗಎ ಇಟ್ಟೀದ ಕಂಪಲು ರಾಯ
ಅಜ್ಜಿ ಮಮ್ಮಗಳು ಕೂಡೀಕೆ ಕಂಪಲು ರಾಯ
ತೆಂಕಿನ ಸಾಗರಕೆ ನಡಿದಾರೆ ಕಂಪಲು ರಾಯ
ಸೌಭದ್ರಿ ಅಂಬವಳೆ ಕಂಪಲು ರಾಯ
ನಿನ್ನ ಮಮ್ಮಗಳು ಇವ್ಳೇಯ ಕಂಪಲು ರಾಯ
ಆಟ ಆಡುವಾ ಕೇಳೀಳು ಕಂಪಲು ರಾಯ
ಬೆಕ್ಕಿನಾರು ತಕಬಂದು ಕಂಪಲು ರಾಯ
ಬೆಕ್ಕಿನ ತಲಿಮ್ಯಾಲೆ ದೀಪವೇ ಕಂಪಲು ರಾಯ
ಒಂದಾಟ ಆಡೂಕು ಕಂಪಲು ರಾಯ
ಒಂಡಿಲಿಯ ಬಿಟ್ಟೀದ ಕಂಪಲು ರಾಯ
ಬೆಕ್ಕಿಳಕಂಡ ಓಡಿ ಹೋಯ್ತ ಕಂಪಲು ರಾಯ
ಏ ಸುಟ್ ಬೆಕ್ಕೆ ಕಂಪಲು ರಾಯ
ಹಿಂಗ್ಯಕೆ ಮಾಡ್ತೆ ಕೇಂಡ್ಳ ಕಂಪಲು ರಾಯ
ಮತ್ತೊಂದ ಸರಿ ಎಳ್ಕ ಬಂದ್ಲ ಕಂಪಲು ರಾಯ
ಮತ್ತೂ ದೀಪ ಇಟ್ಟಳೆ ಕಂಪಲು ರಾಯ
ಮತ್ತೊಂದ್ ಎಲಿಯ ಬಿಟ್ಟನೆ ಕಂಪಲು ರಾಯ
ಏ ಸುಟ್ ಬೆಕ್ಕೆ ಕಂಪಲು ರಾಯ
ಹಿಂಗ್ಯಾಕೆ ಮಾಡ್ತೆ ಕೇಂಡ್ಳ ಕಂಪಲು ರಾಯ
ಮತ್ತೂ ದೀಪ ಇಟ್ಟಳೆ ಕಂಪಲು ರಾಯ
ಇನ್ನೋಂದ್ ಎಲಿಯ ಬಿಟ್ಟನೆ ಕಂಪಲು ರಾಯ
ಬೆಕ್ಕಿಳ್ಕಂಡ್ ಓಡಿ ಹೋಯ್ತು ಕಂಪಲು ರಾಯ
ಆಟದಲ್ಲಿ ಗೆದ್ದನೆ ಕಂಪಲು ರಾಯ
ಸೌಭದ್ರಿ ಕರ್ಕಂಡ ಕಂಪಲು ರಾಯ
ಅಜ್ಜಿ ಮನಿಗೆ ಬಂದೀದ ಕಂಪಲು ರಾಯ
ಕುದ್ರಿಮ್ಯಾನೆ ಹತ್ತೀದ ಕಂಪಲು ರಾಯ
ಅಕ್ಕನ ಮನಿಗೆ ಬಂದರೆ ಕಂಪಲು ರಾಯ
ಬಾಳಿ ತಪ್ಲೀಗ್ ನಿರ್ ಹೊಯ್ದೀಳು ಕಂಪಲು ರಾಯ
ಹಕ್ಕಿ ಬುಡಕೆ ನಡೆದನೆ ಕಂಪಲು ರಾಯ
ಹಕ್ಕಿ ಬಾಂಗಿ ತಲಿಕೊಟ್ತು ಕಂಪಲು ರಾಯ
ಹಕ್ಕಿನವನು ಹೊಡ್ಕ ಬಂದ ಕಂಪಲು ರಾಯ