ಕಡ್ಲಿ ಹೊರ್ದು ಕಂದಯ್ನಿಗೆ ಕೊಟ್ಟು ರಾಮ ರಾಮಜ್ಜಿ
ಕಡ್ಲಿ ಬಿಳುಕು ಮನಿಗೆ ಬಂದ ರಾಮ ರಾಮಜ್ಜಿ
ಇನ್ನೊಂದು ಆಟ ಆಡಿಕೆ ಬಾರ ರಾಮ ರಾಮಜ್ಜಿ
ನೆರಮನಿ ನರಸ್ಯ್ಯನಂಬ್ರ ರಾಮ ರಾಮಜ್ಜಿ
ಒಳಗ್ಹಾಕಂಡ ಇದ್ದೀಳಲೆ ರಾಮ ರಾಮಜ್ಜಿ     
ಕಂದಯ್ನ ತಲಿ ಮೈಯ ಮೀಸಿಳಲೆ ರಾಮ ರಾಮಜ್ಜಿ
ಎಣ್ಣಿ ಬಾಟ್ಲಿ ತೆಗೆದೀಳೆ ರಾಮ ರಾಮಜ್ಜಿ
ಮೆಟ್ಟು ಕತ್ತಿ ಬಚ್ಚೀಳಲೆ ರಾಮ ರಾಮಜ್ಜಿ
ಮೂರು ತುಂಡ ಮಾಡೀಳಲೆ ರಾಮ ರಾಮಜ್ಜಿ
ಮೆತ್ತಿನ ಮ್ಯಾನೆ ಮನಸೀಳಲೆ ರಾಮ ರಾಮಜ್ಜಿ
ದಂಡಿಗೆ ಹೋದ ಅಪ್ಪನಿಗೆ ರಾಮ ರಾಮಜ್ಜಿ
ಕೆಟ್ಟ ಕೆಟ್ಟ ಸಪ್ಪನ ಬಿತ್ತು  ರಾಮ ರಾಮಜ್ಜಿ
ಮನಿಗೆ ಆರೂ ಓಡಿ ಬಂದ ರಾಮ ರಾಮಜ್ಜಿ
ಕಂದುಯ್ನಾರು ಎಲ್ಲಿಗೆ ಹೋದ ರಾಮ ರಾಮಜ್ಜಿ
ಸಾಲಿ ಮಕ್ಕಳ ಸಂಗಡ್ಹೋದ ರಾಮ ರಾಮಜ್ಜಿ
ಸಾಲಿಗಾರೂ ಓಡೀನಲೆ ರಾಮ ರಾಮಜ್ಜಿ
ಕಂದಯ್ಯನಾರು ಕಂಡೀರ ಮಕ್ಳೆ ರಾಮ ರಾಮಜ್ಜಿ
ನಿನ್ನೆ ಇಷ್ಟೊತ್ತಿಗೆ ಬಂದಿದ್ದ  ರಾಮ ರಾಮಜ್ಜಿ
ಇಂದೇ ನಾವು ಕಾಣಲಿಲ್ಲ ರಾಮ ರಾಮಜ್ಜಿ
ಮನಿಗೆ ಅವನು ಓಡಿ ಬಂದ ರಾಮ ರಾಮಜ್ಜಿ
ಕಂದಯ್ಯ ನಾರೂ ಎಲ್ಲಿ ಹೋದ ರಾಮ ರಾಮಜ್ಜಿ
ಅವ ಆಟದ ಮಕ್ಕಳ ಸಂಗಡ್ಹೋದ ರಾಮ ರಾಮಜ್ಜಿ
ಅವ ಆಟದ ಮಕ್ಕಳ ಬುಡಕೆ ಹೋದ ರಾಮ ರಾಮಜ್ಜಿ
ಆಟದ ಮಕ್ಳೆ ಆಟದ ಮಕ್ಳೆ ರಾಮ ರಾಮಜ್ಜಿ
ನಮ್ಮ ಕಂದಯ್ಯನಾರು ಕಂಡಿರೆ ಮಕ್ಳೆ ರಾಮ ರಾಮಜ್ಜಿ
ಅವ ನಿನ್ನೆ ಆರೂ ಬಂದನೆಂದ್ರು ರಾಮ ರಾಮಜ್ಜಿ
ಇಂದು ನಾವು ನೋಡಲಿಲ್ಲ ರಾಮ ರಾಮಜ್ಜಿ
ಮನೆಗೆ ಅವನು ಓಡಿ ಬಂದ ರಾಮ ರಾಮಜ್ಜಿ
ಮೆತ್ತಿನ ಮ್ಯಾನೆ ನಡೆದನಲೆ ರಾಮ ರಾಮಜ್ಜಿ
ಮೂರು ತುಂಡಾಯಿ ಮನಸಿದ್ಲಲೆ ರಾಮ ರಾಮಜ್ಜಿ
ಅಳ್ಳು ಬಳ್ಳು ಕೂಗಿನಲೆ ರಾಮ ರಾಮಜ್ಜಿ
ಮೂರುತುಂಡ ಕೂಡ್ಸಿದನಲೆ ರಾಮ ರಾಮಜ್ಜಿ
ನಾಗಬೆತ್ತ ಎಳದಿನಲೆ ರಾಮ ರಾಮಜ್ಜಿ
ಕಂದಯ್ಯ ಎದ್ದೇ ಕೂತಿನಂಬ್ರ ರಾಮ ರಾಮಜ್ಜಿ
ಏನಾಯ್ತು ಮಗನ ಕೇಂಡಿನಲೆ ರಾಮ ರಾಮಜ್ಜಿ
ಕಡ್ಲಿ ಹೊರ್ದ ನನಗೆ ಕೊಟ್ಲ ರಾಮ ರಾಮಜ್ಜಿ
ಕಡ್ಲಿ ಬಿಳುಕೂ ಮನಿಗೆ ಬಂದೆ ರಾಮ ರಾಮಜ್ಜಿ
ಇನ್ನೊಂದು ಆಟ ಆಡಿಕೆ ಬಾರ ರಾಮ ರಾಮಜ್ಜಿ
ನೆರಮನೆ ನರಸಯ್ಯನಲೆ ರಾಮ ರಾಮಜ್ಜಿ
ಒಳಗೆ ಹಾಕ್ಕಂಡ ಇದ್ದಳ ರಾಮ ರಾಮಜ್ಜಿ
ಅಪ್ಪಯ್ಯ ಬಪ್ಕೊ ಹೇಳಿ ಕೊಡ್ತೆ ರಾಮ ರಾಮಜ್ಜಿ
ತಲಿ ಮೈಯ ಮೀಸೀಳಲೆ ರಾಮ ರಾಮಜ್ಜಿ
ಎಣ್ಣೀಎಲ್ಲ ಉದ್ದೀಳಲೆ ರಾಮ ರಾಮಜ್ಜಿ
ಮೆಟ್ಟು ಕತ್ತಿ ಬಚ್ಚೀಳಲೆ ರಾಮ ರಾಮಜ್ಜಿ
ಮೂರು ತುಂಡ ಮಾಡೀಳಲೆ ರಾಮ ರಾಮಜ್ಜಿ
ಮೆತ್ತಿನ ಮೇಲೆ ಮನಸೀಳಲೆ ರಾಮ ರಾಮಜ್ಜಿ
ಮಡದಿನಾರೂ ಕರೆದೀನಂಬ್ರ ರಾಮ ರಾಮಜ್ಜಿ
ಮೂರು ರುಂಡ ಹೊಡೆದೀನಂಬ್ರ ರಾಮ ರಾಮಜ್ಜಿ