ಹೊಸ ಬಾಮಿ ಹೊಸ ಕೆರಿ ತುಂಬಿ ತುಂಬಿ
ಹೊಸ ಬಾಮಿ ಹೊಸ ಕೆರಿ ತುಂಬಿ ತುಂಬಿ
ನೀರೆದ್ದು ಹರಿಲಿಲ್ಲ ತುಂಬಿ ತುಂಬಿ
ನೀರೆದ್ದು ಹರಿಲಿಲ್ಲ ತುಂಬಿ ತುಂಬಿ
ತಾಯಮ್ಮ ನೆಂಬೋಳು ತುಂಬಿ ತುಂಬಿ     
ಹಿರಿಮಗನ ಕರೆದಳೆ ತುಂಬಿ ತುಂಬಿ
ಜೊಯ್ಸರ ಮನೆಗ್ಹೋಯ್ ಬಾರ ತುಂಬಿ ತುಂಬಿ
ಜೋಯ್ಸರ ಮನಿಗೋಗಿದ ತುಂಬಿ ತುಂಬಿ
ಜೋಯ್ಸರ ಮೂರ‍್ ಕರಿ ಕರೆದೀದ ತುಂಬಿ ತುಂಬಿ
ಜೋಯಿಸರೆ ಜೋಯಿಸರೆ ತುಂಬಿ ತುಂಬಿ
ಪಂಚಾಗ ತೆಗದ್ಹೇಳಿ ತುಂಬಿ ತುಂಬಿ
ಹೊಸ ಬಾಮಿ ಹೊಸ ಕೆರಿ ತುಂಬಿ ತುಂಬಿ
ನೀರೆದ್ದು ಹರಿಲಿಲ್ಲ ತುಂಬಿ ತುಂಬಿ
ಕೋಳಿ ಆವುತಿ ಬ್ಯಾಡಾಂದ್ರು ತುಂಬಿ ತುಂಬಿ
ಕುರಿ ಆವುತಿ ಬ್ಯಾಡಾಂದ್ರು ತುಂಬಿ ತುಂಬಿ
ಮಧ್ಯದ ಮಗನ್ಹೆಣತಿ ತುಂಬಿ ತುಂಬಿ
ನರಬಲಿ ಬೇಡತ್ತ ತುಂಬಿ ತುಂಬಿ
ತಾಯಮ್ಮನ ಕರೆದಾನೆತುಂಬಿ ತುಂಬಿ
ತಾಯಮ್ಮ ತಾಯಮ್ಮ ತುಂಬಿ ತುಂಬಿ
ಮಧ್ಯದ ಮಗನ್ಹೆಣತಿ ತುಂಬಿ ತುಂಬಿ
ನರಬಲಿ ಬೇಡತ್ತ ತುಂಬಿ ತುಂಬಿ
ಎನೆಂದೆ ಮಾತಾಡಿದ್ರ ತುಂಬಿ ತುಂಬಿ
ನಾಳಿನ ಬೆಳಗಿಗೆ ತುಂಬಿ ತುಂಬಿ
ಸಿಬ್ಲ ಮರಿಚಿಟಕ ನೆನಸಿಕೆ ತುಂಬಿ ತುಂಬಿ
ಅವ್ಳನ್ನಾರೂ ಕಳೂಸುವ  ತುಂಬಿ ತುಂಬಿ
ಅಕ್ಕ ತಂಗಿ ನಾಕ ಜನ ತುಂಬಿ ತುಂಬಿ
ಗುಡ್ಡಿ ಸೊಪ್ಪಿಗ್ಹೋಯಿರ ತುಂಬಿ ತುಂಬಿ
ಗುಡ್ಡಿ ಸೊಪ್ನ ಕ್ಯೋದೀರ ತುಂಬಿ ತುಂಬಿ
ಸೊಪ್ಪಿನ್ಹೊರೆಯ ಹಾಕೀರ ತುಂಬಿ ತುಂಬಿ
ಅದ್ರಲ್ ಮೂರ‍್ಜನ ಅಂಬರೆ ತುಂಬಿ ತುಂಬಿ
ಇವತ್ ಇಷ್ಟೊತ್ತಿಗೆ ನಾಕ್ಜನ ತುಂಬಿ ತುಂಬಿ
ನಾಳೆ ಇಷ್ಟೊತ್ತಿಗೆ ಮೂರ‍್ಜನ ತುಂಬಿ ತುಂಬಿ
ಅತ್ತೆಮ್ಮ ಅತ್ಯ್ತೆಮ್ಮ ತುಂಬಿ ತುಂಬಿ
ನನ್ನಣ್ಣ ಬೆಮ್ಮಣ್ಣ ತುಂಬಿ ತುಂಬಿ
ಅವ ದಂಡಿನ ಮನಸ್ಯಾನೆ ತುಂಬಿ ತುಂಬಿ
ದಂಡು ತಪ್ಪಿ ಬಿದ್ದನಂಬ್ರ ತುಂಬಿ ತುಂಬಿ
ಕಾಲೊಂದು ಮೋಟಂಬ್ರು ತುಂಬಿ ತುಂಬಿ
ಕಾಣೋಂದು ಕುರುಡಂಬ್ರು ತುಂಬಿ ತುಂಬಿ
ಕಂಡೋಡಿ ನಾ ಬತ್ತೆ ತುಂಬಿ ತುಂಬಿ
ಕೇಂಡೋಡಿ ನಾ ಬತ್ತೆ ತುಂಬಿ ತುಂಬಿ
ಹೋಪದಾದ್ರೆ ಹೋಗ್ಹೆಣ್ಣೆ ತುಂಬಿ ತುಂಬಿ
ಇಲ್ಲಿಟ್ಟ ಹುಂಡನ್ನ ತುಂಬಿ ತುಂಬಿ
ಇಲ್ಲಿ ಬಂದು ಅಳಿಬೇಕೆ ತುಂಬಿ ತುಂಬಿ
ಇಲ್ಲಿ ಕೆಟ್ದ ಮಂಡೆ ತುಂಬಿ ತುಂಬಿ
ಇಲ್ಲಿ ಬಂದೆ ಅಳಿಬೇಕ ತುಂಬಿ ತುಂಬಿ
ಇಲ್ಲಿ ಉಟ್ಟ ಸೀರಿ ತುಂಬಿ ತುಂಬಿ
ಇಲ್ಲಿ ಬಂದ ಅಳಿಬೇಕ ತುಂಬಿ ತುಂಬಿ
ಇದು ಏನು ತಂಗ್ಯಮ್ಮ ತುಂಬಿ ತುಂಬಿ
ನಿನ್ನ ಮೊಕವೆಲ್ಲ ಬಾಡಿದು ತುಂಬಿ ತುಂಬಿ
ಕುದುರಿ ಸಾಲಿಗೆ ನಡೆದಾಳು ತುಂಬಿ ತುಂಬಿ
ಕುದುರಿನೆಲ್ಲ ಕಿಟ್ಟೀಳ ತುಂಬಿ ತುಂಬಿ
ಇದು ಏನು ತಂಗ್ಯಮ್ಮ ತುಂಬಿ ತುಂಬಿ
ನಿನಗ ಕೊಟ್ಟದ್ದು ಸಾಲದೆ ತುಂಬಿ ತುಂಬಿ
ಮತ್ತೊಂದು ಹೊಡಕೊಡ್ತೆ ತುಂಬಿ ತುಂಬಿ
ನೀ ಕೊಟ್ಟಿದ್ದು ಯಾರಿಗ್ಬೇಕು ತುಂಬಿ ತುಂಬಿ
ಸೆಡಿಕಣ್ಣಲ್ಲಿ ನೀರ ದಾಳೆ ತುಂಬಿ ತುಂಬಿ
ದೆನಿನ ಕೊಟ್ಗಿಗೆ ನಡೆದಳೆತುಂಬಿ ತುಂಬಿ
ದೆನಿನೆಲ್ಲ ಕಿಟ್ಟೀಳ ತುಂಬಿ ತುಂಬಿ
ಇದು ಏನ ತಂಗ್ಯಮ್ಮತುಂಬಿ ತುಂಬಿ
ನಿನಗೆ ಕೊಟ್ಟದ್ದು ಸಾಲದೇ ತುಂಬಿ ತುಂಬಿ
ಮತ್ತೊಂದು ಹೊಡಕಡ್ತೆ ತುಂಬಿ ತುಂಬಿ
ನೀ ಕೊಟ್ಟಿದ್ದು ಯಾರಿಗ್ಬೇಕ ತುಂಬಿ ತುಂಬಿ
ಕಣ್ಣಲ್ಲಿ ನೀರ ಸೆಡಿದಾಳೆ ತುಂಬಿ ತುಂಬಿ
ವಸ್ತ್ರದ ಕ್ವಾಣಿಗ್ ಹೋದಾಳೆ ತುಂಬಿ ತುಂಬಿ
ಇದು ಏನು ತಂಗ್ಯಮ್ಮ ತುಂಬಿ ತುಂಬಿ
ನಿನ್ಗ ಕೊಟ್ಟಿದ್ದು ಸಾಲದ ತುಂಬಿ ತುಂಬಿ
ಮತ್ತೊಂದ ಸೀರಿ ವಸ್ತ್ರ ಕೊಡ್ತೆ ತುಂಬಿ ತುಂಬಿ
ನಿನ್ನ ಸೀರಿ ವಸ್ತ್ರ ಯಾರಿಗ್ಬೇಕ ತುಂಬಿ ತುಂಬಿ
ಕಣ್ಣಲ್ ನೀರ ಸೆಡಿದಾಳ ತುಂಬಿ ತುಂಬಿ
ಚಿನ್ನದ ಕ್ವಾಣೀಗ್ ನಡದಾಳ ತುಂಬಿ ತುಂಬಿ
ಚಿನ್ನವೆಲ್ಲ ಕಿಟ್ಟೀಳೆ ತುಂಬಿ ತುಂಬಿ
ಇದು ಏನ ತಂಗ್ಯಮ್ಮ ತುಂಬಿ ತುಂಬಿ
ನಿನಗ ಚಿನ್ನ ಕೊಟ್ಟದ್ ಸಾಲದೇ ತುಂಬಿ ತುಂಬಿ
ಮತ್ತಷ್ಟು ಚಿನ್ನ ಮಾಡ್ಸಿಕೊಡ್ತೆ ತುಂಬಿ ತುಂಬಿ
ನಿನ್ನ ಚಿನ್ನಗಿನ್ನಯಾರಿಗ್ಬೇಕ ತುಂಬಿ ತುಂಬಿ
ಕಣ್ಣಲ್ ನೀರ ಸೆಡಿದಾಳೆ ತುಂಬಿ ತುಂಬಿ
ತೊಳಸಿವನಕೆ ನಡೆದಾಳೆ ತುಂಬಿ ತುಂಬಿ
ತೊಳಸಿ ಗಿಡನ ಮುರಿದಾಳೆ ತುಂಬಿ ತುಂಬಿ
ಕಟ್ಟಿ ಕಟ್ಟಿ ನೆಟ್ಟೀಳು ತುಂಬಿ ತುಂಬಿ
ಅಣ್ಣಯ್ನ ಕರಿದಾಳೆ ತುಂಬಿ ತುಂಬಿ
ನಾಳೀಗಿ ಇಷ್ಟೊತ್ತಿಗೆ ತುಂಬಿ ತುಂಬಿ
ಈ ಗಿಡು ಬಾಡೀರೆ ತುಂಬಿ ತುಂಬಿ
ನಿನ ತಂಗಿ ಇಲ್ಲಂತ ತಿಳ್ಕೊ ತುಂಬಿ ತುಂಬಿ
ಈ ಗಿಡು ಇದ್ದರೆ ತುಂಬಿ ತುಂಬಿ
ತಂಗಿ ಇದ್ಲಂತ್ ತಿಳ್ಕೊಣ್ಣ ತುಂಬಿ ತುಂಬಿ
ಅಷ್ಟು ಮಾತ ಹೇಳೀಳೆ ತುಂಬಿ ತುಂಬಿ
ಮನಿಗೋಡಿ ಬಂದ್ಲೆ ತುಂಬಿ ತುಂಬಿ
ಅವ್ಳಮಾಯಿ ಅಂಬೋಲೆ ತುಂಬಿ ತುಂಬಿ
ಸಿಬ್ಲ ಮರ್ಚಿಕೆ ನೆನೆಸಿದೆ ಹೆಣ್ಣೆ ತುಂಬಿ ತುಂಬಿ
ತೊಳ್ಕಂಡಾರೂ ಬಾ ಹೆಣ್ಣೆ ತುಂಬಿ ತುಂಬಿ
ಒಂದ್ ಮೆಟ್ಲ ಇಳಿದಾಳು ತುಂಬಿ ತುಂಬಿ
ಕಾಲುಗಂಟಿಗೆ ನೀರು ಬಂತು ತುಂಬಿ ತುಂಬಿ
ಇದು ಏನು ಅತ್ಯಮ್ಮ ತುಂಬಿ ತುಂಬಿ
ಎಲ್ಲೆಲ್ಲೂ ನೋಡಿರೋ ತುಂಬಿ ತುಂಬಿ
ಸಬಿಲ ಮರ್ಚಿಕ ಇಲ್ಲ ತುಂಬಿ ತುಂಬಿ
ಈಗಳಿನ ಹೆಣ್ಣು ಮಕ್ಳು ತುಂಬಿ ತುಂಬಿ
ಚದುರ್ಯಾರು ಬೆದರ್ಯಾರು ತುಂಬಿ ತುಂಬಿ
ಇನ್ನೊಂದ ಮೆಟ್ಲ ಇಳಿಯೆ ತುಂಬಿ ತುಂಬಿ
ಎದಿ ಕಣ್ಣೀಗ್ ನೀರು ಬಂದು ತುಂಬಿ ತುಂಬಿ
ಇದು ಏನು ಅತ್ಯಮ್ಮ ತುಂಬಿ ತುಂಬಿ
ಸಿಬ್ಲ ಮರ್ಚಿಕೆ ಸಿಗುದಿಲ್ಲ ತುಂಬಿ ತುಂಬಿ
ಇನ್ನೊಂದ ಮೆಟ್ಲ ಇಳೀಯ ಹೆಣ್ಣೆ ತುಂಬಿ ತುಂಬಿ
ತಲಿವರೆಗೆ ನೀರ್ ಬಂದು ತುಂಬಿ ತುಂಬಿ
ಕಂತ್ಯಾ ಹೋದ್ಲು ತುಂಬಿ ತುಂಬಿ