ಹನ್ನೆರಡು ವರ್ಷದ ಗಿರಿಜಾ ಬಾಲಿ ಜೋಜೋವನ್ನೀರಿ
ನಾ ನನ್ನ ಗಂಡನ ಮನಿಗ್ಹೋಗಬೇಕು ಜೋಜೋವನ್ನೀರಿ
ಮಾರಗು ಕೂಡಿ ಎದ್ದೀಳಲೆ ಜೋಜೋವನ್ನೀರಿ
ಕಟ್ಟಿಗೆ ಹೊರಿಯೇ ಎದುರು ಬಂತು ಜೋಜೋವನ್ನೀರಿ
ಇದ ಏನ ಗಿರಿಜಾಬಾಲಿ ಅಪಶಕುನವಾಯ್ತು ಜೋಜೋವನ್ನೀರಿ
ಅವ ತನ್ನ ಹೊಟ್ಟೆ ಪಾಡಿಗೆ ತಿರುಗುತಿರುವ ಜೋಜೋವನ್ನೀರಿ  
ನಾ ನನ್ನ ಗಂಡ ಮನಿಗ್ಹೋಗಬೇಕೆ ಜೋಜೋವನ್ನೀರಿ
ಅವಳು ಮಾರಗು  ಕೂಡಿ ನಡೆದಳಲೆ ಜೋಜೋವನ್ನೀರಿ
ಕೋಳಿ ಹೈಂಡಿ ಮರಿ ತಕ್ಕ ಎದುರೇ ಬಂತು ಜೋಜೋವನ್ನೀರಿ
ಇದು ಏನ ಗಿರಿಜಾಬಾಲಿ ಅಪಶಕುವಾಯ್ತು ಜೋಜೋವನ್ನೀರಿ
ಅದು ಹೊಟ್ಟೆ ಪಾಡಿಗಿ ತಿರುಗುತಿರುವ ಜೋಜೋವನ್ನೀರಿ
ನಾ ನನ್ನ ಗಂಡನ ಮನಿಗ್ಹೋಗಬೇಕು ಜೋಜೋವನ್ನೀರಿ
ಮಾರಗೂ ಕೂಡಿ ನಡೆದಾಳಲೆ ಜೋಜೋವನ್ನೀರಿ
ಜವಳಿಯ ಹೊರಿಯೇ ಎದುರೇ ಬಂತು ಜೋಜೋವನ್ನೀರಿ
ಇದು ಏನ ಗಿರಿಜಾಬಾಲಿ ಅಪಶಕುನವಾಯ್ತು ಜೋಜೋವನ್ನೀರಿ
ಅವ ಹೊಟ್ಟೆಇ ಪಾಡಿಗೆ ತಿರುಗುತ್ತಾನೆ ಜೋಜೋವನ್ನೀರಿ
ನಾನನ್ನ ಗಮಡನ ಮನಿಗ್ಹೋಗ ಬೇಕು ಜೋಜೋವನ್ನೀರಿ
ಮಾರಗು ಕೂಡಿ ನಡೆದಳಲೇ ಜೋಜೋವನ್ನೀರಿ
ಒಳಗಿದ್ದ ಅತ್ತೆಮ್ನ ಕರೆದಳೆ ಜೋಜೋವನ್ನೀರಿ
ನಾ ತಂದೆ ಬೆಳಿ ಎಲಿ ಮೆಲಿನೇ ಅತ್ತೆ ಜೋಜೋವನ್ನೀರಿ
ನೀ ತಂದ ಬೆಳಿ ಎಲಿ ಮೆಲಿತೇನೆ ಹೆಣ್ಣೆ ಜೋಜೋವನ್ನೀರಿ
ಅತ್ತಿಎದ್ದು ಮನಿ ಹಿಂದೆ ನಡೆದಳೆ ಜೋಜೋವನ್ನೀರಿ
ವಿಷ ಮುಂಗ್ರಿ ಎಲಿಯ ಕ್ಯೋದು ತಂದು ಜೋಜೋವನ್ನೀರಿ
ದಡ್ಡರ ಮನೆಯ ಹೆಣ್ಣಲ್ದೆ ಮಗಳೆ ಜೋಜೋವನ್ನೀರಿ
ಊಟಕೂ ಆರು ಬಾ ಎಂದಳೆ ಜೋಜೋವನ್ನೀರಿ
ಕಾಲು ಶ್ರೀ ಮುಖವ ತೊಳೆದಾಳಲೇ ಜೋಜೋವನ್ನೀರಿ
ಊಟಕ್ಕಾರು ನಡೆದಳಲೆ ಜೋಜೋವನ್ನೀರಿ
ಅನ್ನದಲಿ ವಿಷ ಇಕ್ಕಿದಳೆ ಜೋಜೋವನ್ನೀರಿ
ಊಟಕ್ಕೆ ಕೂತಲ್ಲಿ ಕಾಕಿ ಬಂದು ಜೋಜೋವನ್ನೀರಿ
ಕಾಕಿಗೆ ಒಂದ್ ತುತ್ತು ಇಕ್ಕಿದಳೆ ಜೋಜೋವನ್ನೀರಿ
ಕಾಕಿ ರೆಕ್ಕೆ ಬಡ್ದು ಸತ್ತೇ ಹೋಯ್ತು ಜೋಜೋವನ್ನೀರಿ
ಕೋಳಿಗೊಂದ್ ತುತ್ತ ಇಕ್ಕಿದಳೆ ಜೋಜೋವನ್ನೀರಿ
ತಾನೂ ಒಂದ್ ತುತ್ತು ಉಂಡಳೆ ಜೋಜೋವನ್ನೀರಿ
ಕಣ್ಣೀಗೆ ಕತ್ಲೆ ಜೀವ ಸಂಕ್ಟ ಬಂತೇ ಜೋಜೋವನ್ನೀರಿ
ಅತ್ಯಮ್ನನ್ನವಳು ಕರಿದಾಳಲೆ ಜೋಜೋವನ್ನೀರಿ
ಕಣ್ಣಿಗೆ ಕತ್ಲೆ ಜೀವ ಸಂಕ್ಟ ಅತೇ ಜೋಜೋವನ್ನೀರಿ
ಕಣ್ಣಿಗೆ ಕತ್ಲೆ ಜೀವ ಸಂಕ್ಟ ಅತ್ತೇ ಜೋಜೋವನ್ನೀರಿ
ದೊಡ್ಡೋರ ಮನಿಯ ಹೆಣ್ಣಲ್ಲ ಮಗಳ ಜೋಜೋವನ್ನೀರಿ
ನಡೆದು ಬಂದ ದಣಿವು ಮಗಳೆ ಜೋಜೋವನ್ನೀರಿ
ಮೆತ್ತಿನ ಮೇಲೆ ಒರಗೀದಳೆ ಜೋಜೋವನ್ನೀರಿ
ಅವಳ ಗಂಡ ಮರಿದೇವ್ರೆಂಬವರೆ ಜೋಜೋವನ್ನೀರಿ
ಬಯಲು ಸುತ್ತಿ ಬಂದೀರಲೆ ಜೋಜೋವನ್ನೀರಿ
ತಾಯಮ್ಮ ಬಂದು ಪಾದುಕೆ ನೀರ‍್ ಕೊಟ್ಲು ಜೋಜೋವನ್ನೀರಿ
ದೊಡ್ಡೋರ ಮನಿಯ ಹೆಣ್ಣಲ್ದ ಮಗನೆ ಜೋಜೋವನ್ನೀರಿ
ನಡೆದ ಬಂದ ದಣಿವಿಗೆ ಒರಗೀಳಲೆ ಜೋಜೋವನ್ನೀರಿ
ಮರಿದೇವ್ರು ಉಂಡು ಕೈ ಬಾಯಿ ತೊಳೆದರಲೆ ಜೋಜೋವನ್ನೀರಿ
ಮೆತ್ಹತ್ತಿ ಮ್ಯಾನೆ ನಡೆದರಲೆ ಜೋಜೋವನ್ನೀರಿ
ಗಿರಿಜಾಬಾಲಿ ಮೂರ‍್ ಕರಿಯ ಕರೆದಾರಲ್ಲೆ ಜೋಜೋವನ್ನೀರಿ
ಎಷ್ಟ ಕರೆದ್ರೂ ಮಾತಾಡುದಿಲ್ಲ ಜೋಜೋವನ್ನೀರಿ
ತಾಯಮ್ಮನನ್ನು ಕರೆದಾರಲ್ಲೆ ಜೋಜೋವನ್ನೀರಿ
ನಿನ ಸೊಸಿ ಗಿರಿಜಾಬಲಿಗೇನಾಯ್ತೆ ಜೋಜೋವನ್ನೀರಿ
ಎಷ್ಟು ಕರದ್ರೂ ಮಾತಾಡುದಿಲ್ಲ ಜೋಜೋವನ್ನೀರಿ
ಬಂದವು ಅವಳ ಮ್ಯಾಲೆ ಅವ್ಳ ಮನಿಭೂತ ಜೋಜೋವನ್ನೀರಿ
ಮಡುವಾಳ ಮಾಚಣ್ಣಗೆ ಒಸಗೇ ಹೇಳ ಜೋಜೋವನ್ನೀರಿ
ಏನೆಂದೆ ಒಸಗಿ ಹೇಳಲಿ ಎಂದ ಜೋಜೋವನ್ನೀರಿ
ಹನ್ನೆರಡು ವರ್ಷದ ಗಿರಿಜಾಬಾಲಿ ಜೋಜೋವನ್ನೀರಿ
ಋತುವಾದಳೆಂದೇ ಒಸಗೀ ಹೇಳ ಜೋಜೋವನ್ನೀರಿ
ಮರಿದೇವ್ರು ಅಂಬೊರಿಕೆ ಮಾ ಸಂತೋಷವು ಜೋಜೋವನ್ನೀರಿ
ಮೆತ್ತಿಂದ ಕೆಳಗೆ ಇಳಿದರಲೆ ಜೋಜೋವನ್ನೀರಿ
ಮಡಿವಾಳ ಮಾಚಣ್ಣನ ಕರೆದರಲೆ ಜೋಜೋವನ್ನೀರಿ
ಗಿರಿಜಾಬಾಲಿ ಮನಿಗೆ ಒಸಗಿ ಹೇಳಿಬಾರ ಜೋಜೋವನ್ನೀರಿ
ಏನೆಂದೆ ಒಸಗಿ ಹೇಳಲಿ  ಎಂದ ಜೋಜೋವನ್ನೀರಿ
ಹನ್ನೆರಡು ವರ್ಷದ ಗಿರಿಜಾಬಾಲಿ ಜೋಜೋವನ್ನೀರಿ
ಋತುವಾದಳೆಂದೇ ಒಸಗಿ ಹೇಳ ಜೋಜೋವನ್ನೀರಿ
ಮಾರಗೂ ಕೂಡಿ ನಡೆದನಲೆ ಜೋಜೋವನ್ನೀರಿ
ಗಿರಿಜಾಬಾಲಿ ಮನೆಗೆ ನಡೆದನಲೆ ಜೋಜೋವನ್ನೀರಿ
ಎಂದು ಬಾರದ ಮಾಚಣ್ಣ  ಇಂದೇನು ಬಂದೀಯ ಜೋಜೋವನ್ನೀರಿ
ಹನ್ನೆರಡು ವರ್ಷದ ಗಿರಿಜಾಬಾಲಿ ಜೋಜೋವನ್ನೀರಿ
ಋತುವಾದ ಒಸಗಿ ತಕಬಂದೆ ಜೋಜೋವನ್ನೀರಿ
ಗಿರಿಜಾಬಾಲಿ ತಾಯ್ತಂದಿಗೆ ಮಾ ಸಂತೋಷವು ಜೋಜೋವನ್ನೀರಿ
ಏಳೂರಿಗ್ವಾಲಿ ಬರೆದರಲೇ  ಜೋಜೋವನ್ನೀರಿ
ಏಳೂರು ಹೂಗ ತರಸೀರಲೆ ಜೋಜೋವನ್ನೀರಿ
ದಿಬ್ಬಣವನ್ನು ಕೂಡಿದರೆ ಜೋಜೋವನ್ನೀರಿ
ಮಾರಗು ಕೂಡಿ ನಡೆದರಲೆ ಜೋಜೋವನ್ನೀರಿ
ಕುರಿ ಮೇಸು ಮಕ್ಕಳು ಎದುರೇ ಬಂದೋ ಜೋಜೋವನ್ನೀರಿ
ಮರಿದೇವ್ರ ಮನೆಯಲ್ಲಿ ಮಾ ದೊಡ್ಡ ಹೋಮ್ನವು ಜೋಜೋವನ್ನೀರಿ
ಮಕ್ಕಳೂ ಸಕುನವ ನುಡಿದೇ ಬಂದೋ ಜೋಜೋವನ್ನೀರಿ
ಗೋಮೇಸೋ ಮಕ್ಕಳು ಎದುರೇ ಬಂದೊ ಜೋಜೋವನ್ನೀರಿ
ಮರಿದೇವ್ರ ಮನೆಯಲ್ಲಿ ಮಾ ದೊಡ್ಡ ಹೋಮ್ನವು ಜೋಜೋವನ್ನೀರಿ
ಮರಿದೇವ್ರ ಮಡದಿಯ ಸುಡುತಾರೇನು ಜೋಜೋವನ್ನೀರಿ
ಮಕ್ಕಳು ಸಕುನವ ನುಡಿತೇ ಬಂದೋ ಜೋಜೋವನ್ನೀರಿ
ಮುಂದ ಮುಂದಕೂ ನಡೆದರಲೇ ಜೋಜೋವನ್ನೀರಿ
ಆಕಳ ಬೈಲಲ್ಲಿ ಮಾ ದೊಡ್ಡ ಹೋಮ್ನವು ಜೋಜೋವನ್ನೀರಿ
ಮರಿದೇವ್ರೆಂಬುವರು ಮೆಟ್ಲ ಕೆಳಗೆ ಇಳಿದಾರೆ ಜೋಜೋವನ್ನೀರಿ
ನಿಮ್ಮ ತಾಯಿ ನನ ಮಗಳ ಕೊಂದಳಲೆ ಜೋಜೋವನ್ನೀರಿ
ಏಳೂರ ಹೂಗ ಕಟ್ಟಿ ಕಿಚ್ಚೀಗೆ ಹಾಕಿದ ಜೋಜೋವನ್ನೀರಿ
ಏಳೂರ ಚಿನ್ನ ಕಟ್ಟಿ ಕಿಚ್ಚೀಗೆ ಹಾಕಿದ ಜೋಜೋವನ್ನೀರಿ
ತಾಯಮ್ಮನ ಮೂರು ರುಂಡ ಹೊಡೆದನಲೆ ಜೋಜೋವನ್ನೀರಿ
ಅತ್ತಿಗೂ ಸೊಸಿಗೂ ಒಂದೇ ಬೆಂಕಿ ಜೋಜೋವನ್ನೀರಿ
ಅತ್ತಿಗೂ ಸೊಸಿಗೂ ಒಂದೇ ಕೊಳ್ಳಿ ಜೋಜೋವನ್ನೀರಿ