ಒಬ್ಬಳು ತಾಯಿಗೆ ರಾಮ ರಾಮಜ್ಜಿ
ಒಬ್ಬನೆ ಮಗ ಹುಟ್ಟಿ ರಾಮ ರಾಮಜ್ಜಿ
ಲಗ್ನವೇ ಆಯ್ತಂಬ್ರ ರಾಮ ರಾಮಜ್ಜಿ
ಲಗ್ನದ ಮರುದಿವ್ಸ ರಾಮ ರಾಮಜ್ಜಿ
ದಂಡಿನೋಲಿ ಬಮತಂಬ್ರ ರಾಮ ರಾಮಜ್ಜಿ   
ತಾಯಮ್ಮ ಕರೆದಾನೆ
ದಂಡಿನೋಲಿ ಬಂದಿತು ತಾಯೆ ರಾಮ ರಾಮಜ್ಜಿ
ನಾ ದಂಡಿಗೆ ಹೋಗತ್ತೇನೆ ರಾಮ ರಾಮಜ್ಜಿ
ನಿನ ಸೊಸಿ ಹೊನ್ನಮ್ಮ ರಾಮ ರಾಮಜ್ಜಿ
ಬಾಮಿ ನೀರಿಗೂ ಕಳಿಸಬೇಡ ರಾಮ ರಾಮಜ್ಜಿ
ಮೆತ್ತಿನ ಕೆಳಗೆ ಇಳಿಸಬೇಡ ರಾಮ ರಾಮಜ್ಜಿ
ದಂಡಿಗಾರು ಹೋದನಲೆ ರಾಮ ರಾಮಜ್ಜಿ
ಪಟ್ಟಣ ಶೆಟ್ರು ಬಂದಿರು ರಾಮ ರಾಮಜ್ಜಿ
ಆವನ ತಾಯಿ ಎಂಬುವಳು ರಾಮ ರಾಮಜ್ಜಿ
ಕೂಪಕೆ ಮಣಿ ಮಾಡಿ ಕೊಟ್ಲು ರಾಮ ರಾಮಜ್ಜಿ
ಮುಂಡೆ ಕೊಟ್ಟ ಮಣಿ ಮ್ಯಾಲೆ ರಾಮ ರಾಮಜ್ಜಿ
ನಾ ಕೂಕಂಬ ಶೆಟ್ಯಲ್ಲ ರಾಮ ರಾಮಜ್ಜಿ
ಅವಳೇ ಎಲಿ ಕೊಡಬೇಕು ರಾಮ ರಾಮಜ್ಜಿ
ಹೊನ್ನಮ್ಮ ಅಷ್ಟೆಲ್ಲ ಕೇಂಡಳು ರಾಮ ರಾಮಜ್ಜಿ
ಮೆತ್ತಿನ ಕೆಳಗೆ ಇಳಿದಾಳು ರಾಮ ರಾಮಜ್ಜಿ
ಕೂಪಾಕೆಮಣಿ ಕೊಟ್ಲು ರಾಮ ರಾಮಜ್ಜಿ
ವೀಳ್ಯದ ಹರಿವಾಣ ಕೊಟ್ಲು
ಮಣಿಮ್ಯಾಲೆ ಕೂಕಂಡ್ರು ರಾಮ ರಾಮಜ್ಜಿ
ಧಡಕನೆ ಎದ್ರು ಶೆಟ್ರು ರಾಮ ರಾಮಜ್ಜಿ
ಹಸಗಾರೆಂಕಿ ಮನಿಗ್ಹೋದ್ರು ರಾಮ ರಾಮಜ್ಜಿ
ಹಸಗಾರೆಂಕಿ ಕರೆದರು ರಾಮ ರಾಮಜ್ಜಿ
ವೆಂಕಪ್ಪ ಗೌಡನ ಮನಿಯಲ್ಲು ರಾಮ ರಾಮಜ್ಜಿ
ಮೊನ್ನೆ ಹೆಣ್ಣಿನ ತಂದೀರು ರಾಮ ರಾಮಜ್ಜಿ
ಆ ಹೆಣ್ಣಿನ ತಂದ್ರು ಕೊಟ್ರೆ ರಾಮ ರಾಮಜ್ಜಿ
ನಿನಗರ್ಧ ಆಸ್ತಿ ಕೊಡ್ತೆ  ರಾಮ ರಾಮಜ್ಜಿ
ಕೈತುಂ ಹೊನ್ನು ಕೊಡ್ತೆ ರಾಮ ರಾಮಜ್ಜಿ
ಅಕ್ಕೆಂದೇ ಹೇಳೀಳು ರಾಮ ರಾಮಜ್ಜಿ
ಮಂಡಿ ಬಾಚಿ ಕಟ್ಟೀಳು ರಾಮ ರಾಮಜ್ಜಿ
ಒಪ್ಪಿದ ಸೀರಿ ಉಟ್ಟೀಳು ರಾಮ ರಾಮಜ್ಜಿ
ವೆಂಕಪ್ಪ ಗೌಡನ ಮನಿಗ್ಹೋದ್ಲು ರಾಮ ರಾಮಜ್ಜಿ
ಅವಳ ಅತ್ತಿ ಎಂಬುವಳು ರಾಮ ರಾಮಜ್ಜಿ
ಎಂದೂ ಬಾರದ ವೆಂಕ್ಯಕ್ಕ ರಾಮ ರಾಮಜ್ಜಿ
ಇಂದೇನು ಬಂದೀಯ ರಾಮ ರಾಮಜ್ಜಿ
ನಿನ್ನ ಸೊಸಿ ಹೊನ್ನಮ್ಮ ರಾಮ ರಾಮಜ್ಜಿ
ಒಂದ್ ಗಳಿಗಿ ಕಳ್ಸಿಕೊಡು ರಾಮ ರಾಮಜ್ಜಿ
ಅಶವಂತನ ಕಟ್ಟೀಲೆ ರಾಮ ರಾಮಜ್ಜಿ
ದಶವಂತರಾಟವೇ ರಾಮ ರಾಮಜ್ಜಿ
ಒಂದ್ ಗಳಿಗಿ ಕಂಡ್ಕಂಬತ್ತೊ ರಾಮ ರಾಮಜ್ಜಿ
ಅವಳನ್ ನಾನು ಕಳ್ಸೂದಿಲ್ಲೆ ರಾಮ ರಾಮಜ್ಜಿ
ಅವಳ ಗಂಡ ಬಪ್ಪುಕೂ ರಾಮ ರಾಮಜ್ಜಿ
ಮನಿ ಹೊದ್ದಿನ ಮಲಗದ್ದೇಲಿ ರಾಮ ರಾಮಜ್ಜಿ
ಅವಳನ್ ನಾನು ಕಳ್ಸುದಿಲ್ಲ ರಾಮ ರಾಮಜ್ಜಿ
ಅವಳು ಮಾತ ಕೇಳಲಿಲ್ಲ ರಾಮ ರಾಮಜ್ಜಿ
ಮೆತ್ತಿನ ಮೇಲೆ ನಡೆದಳೇ ರಾಮ ರಾಮಜ್ಜಿ
ಹೊನ್ನಮ್ಮ ಹೊನ್ನಮ್ಮ ರಾಮ ರಾಮಜ್ಜಿ
ಅಶುವಂತನ ಕಟ್ಟೇಲಿ ರಾಮ ರಾಮಜ್ಜಿ
ದಶವಂತರಾಟವೇ ರಾಮ ರಾಮಜ್ಜಿ
ಒಂದ್ಗಲಿಗಿ ಕಂಡ್ಕಬಪ್ಪೊ ರಾಮ ರಾಮಜ್ಜಿ
ಅವಳಕ್ಕೆಂದೇ ಎದ್ದೀಳು ರಾಮ ರಾಮಜ್ಜಿ
ಮಂಡಿ ಬಾಚಿ ಕಟ್ಟೀಳು ರಾಮ ರಾಮಜ್ಜಿ
ನೊಸಲಿಗ್ಹುಂಡ ಇಟ್ಟೀಳು ರಾಮ ರಾಮಜ್ಜಿ
ಒಪ್ಪುವ ಸೀರಿ ಉಟಗೊಂಡ್ಲು ರಾಮ ರಾಮಜ್ಜಿ
ವೆಂಕಿಯ ಸಂಗಡ ನಡೆದಳು ರಾಮ ರಾಮಜ್ಜಿ
ಒಂದ್ ಗುಡ್ಡಿ ಹತ್ತೀರು ರಾಮ ರಾಮಜ್ಜಿ
ಒಂದ್ ಗುಡ್ಡಿ ಇಳಿದೀರು ರಾಮ ರಾಮಜ್ಜಿ
ಹಸು ಬಾಯ್ರು ಜೋರಾದೋ ರಾಮ ರಾಮಜ್ಜಿ
ಇದ ಏನ ವೆಂಕ್ಯಕ್ಕ ರಾಮ ರಾಮಜ್ಜಿ
ಹಸು ಬಾಯ್ರು ಜೊರಾಯ್ತು ರಾಮ ರಾಮಜ್ಜಿ
ಎಲ್ಲೆಲ್ಲಿ ನೋಡೀರೂ ರಾಮ ರಾಮಜ್ಜಿ
ಆಟದ ಗರ ಇಲ್ಲೆ ರಾಮ ರಾಮಜ್ಜಿ
ಪಟ್ಟಣ ಶೆಟ್ರು ಮನಿಗ್ಹೋಪೊ ರಾಮ ರಾಮಜ್ಜಿ
ಅವ್ರ ಹಸುವಿಗ್ಹಣ್ಣು ಕೊಡತಾರೆ ರಾಮ ರಾಮಜ್ಜಿ
ಬಾಯ್ರಿಗೆ ಹಾಲು ಕೊಡುತ್ತಾರೆ ರಾಮ ರಾಮಜ್ಜಿ
ಕೋಣಿ ಒಳಗೆ ಬಿಟ್ಟೀಳು ರಾಮ ರಾಮಜ್ಜಿ
ಅರ್ಧ ಅಸ್ತಿ ಬರಕೊಟ್ರು ರಾಮ ರಾಮಜ್ಜಿ
ಕೈತುಂಬ ಹೊನ್ನ ಕೊಟ್ರು ರಾಮ ರಾಮಜ್ಜಿ
ದಂಡಿಗ್ಹೋದ ಗಂಡನಿಗೆ ರಾಮ ರಾಮಜ್ಜಿ
ಕೆಟ್ಟ ಕೆಟ್ಟ ಸಪ್ನ ಬಿದ್ದು ರಾಮ ರಾಮಜ್ಜಿ
ಮನಿಗಾರು ಓಡಿ ಬಂದು ರಾಮ ರಾಮಜ್ಜಿ
ತಾಯಮ್ಮ ಅಂಬುವಳು ರಾಮ ರಾಮಜ್ಜಿ
ಪಾದಕೆ ನೀರು ಕೊಟ್ಟಾಳೆ ರಾಮ ರಾಮಜ್ಜಿ
ನಿನ ಸೊಸಿ ಎಲ್ಲೆಗ್ಹೋಳೆ ರಾಮ ರಾಮಜ್ಜಿ
ಎಲ್ಲ ಹೇಳ್ತೇನೆ ಕೇಳ್ ಮಗನೆ ರಾಮ ರಾಮಜ್ಜಿ
ಬಾಯ್ರಿಗಾರೂ ಕುಡಿ ಮಗನೆ ರಾಮ ರಾಮಜ್ಜಿ
ಹಸುವಿಗ್ಹಣ್ಣು ತಿನ್ನು ಮಗನೆ ರಾಮ ರಾಮಜ್ಜಿ ಅವ್ನ
ಬಾಯ್ರಿಗ್ಹಾಲು ಕುಡಿಲಿಲ್ಲ ರಾಮ ರಾಮಜ್ಜಿ
ಹಸುವಿಗ್ನಣ್ಜು ತಿನಲಿಲ್ಲ ರಾಮ ರಾಮಜ್ಜಿ
ಹೊನ್ನಮ್ಮ ಎಲ್ಲಿ ಹೇಳೀಗ ರಾಮ ರಾಮಜ್ಜಿ
ಹೊನ್ನಮ್ನ ಗಂಡ ಅಂಬೋನು ರಾಮ ರಾಮಜ್ಜಿ
ಜೋಗ್ಯಾರ ವೇಷ ತೊಟ್ಟಿದ್ ರಾಮ ರಾಮಜ್ಜಿ
ಬಳಿ ಮಲ್ಲರ ಕೇರಿಗೆ ಹೋದಾನೆ ರಾಮ ರಾಮಜ್ಜಿ
ಬಳಿ ಎಲ್ಲ ತಕ್ಕಂಡ್ ರಾಮ ರಾಮಜ್ಜಿ
ಹೆಗಲ ಮೇಲೆ ಹೇರ‍್ಕಂಡ ರಾಮ ರಾಮಜ್ಜಿ
ಹಸಗಾರ ವೆಂಕಿ ಮನಿಗ್ಹೋದ ರಾಮ ರಾಮಜ್ಜಿ
ಯಾರಮ್ಮ ಮನೆಯಲ್ಲಿ ರಾಮ ರಾಮಜ್ಜಿ
ಯಾರಮ್ಮ ಮಠದಲ್ಲಿ ರಾಮ ರಾಮಜ್ಜಿ
ಬಳಿಯಾರು ಇಡತೀಯ ರಾಮ ರಾಮಜ್ಜಿ
ನಾ ಬಳಿ ಇಡುದಿಲ್ಲ ರಾಮ ರಾಮಜ್ಜಿ
ಪಟ್ಟಣ ಶೆಟ್ಟಿ ಮನೆಯಲ್ಲಿ ರಾಮ ರಾಮಜ್ಜಿ
ಮೊನ್ನೊಂದ್ಹೇಣ್ಣಿನ ತಂದೀರು  ರಾಮ ರಾಮಜ್ಜಿ
ಅವ್ರ ಮನಿಗೆ ಹೋಗಂದ್ಲು ರಾಮ ರಾಮಜ್ಜಿ
ಅವ್ರ ಮನಿಗೆ ನಡೆದಾನೆ ರಾಮ ರಾಮಜ್ಜಿ
ಯಾರಮ್ಮ ಮನೆಯಲ್ಲಿ ರಾಮ ರಾಮಜ್ಜಿ
ಯಾರಮ್ಮ ಮಠದಲ್ಲಿ ರಾಮ ರಾಮಜ್ಜಿ
ಬಳಿಯಾರು ಇಡ್ತೀಯ ರಾಮ ರಾಮಜ್ಜಿ
ಬಳಿಯಾರು ಇಡತಿದ್ದೆ ರಾಮ ರಾಮಜ್ಜಿ
ಪಟ್ಟಣ ಶೆಟ್ರು ಮನೆಯಲಿಲ್ಲ ರಾಮ ರಾಮಜ್ಜಿ
ದುಡ್ಡಾರು ಕೊಡು ಅಂದ ರಾಮ ರಾಮಜ್ಜಿ
ಬಳಿಯನ್ನೆ ಇಡ್ತೇನೆಂದ ರಾಮ ರಾಮಜ್ಜಿ
ಬಳಿ ಇಡೂಕೆ ಬಂದು ಕೂತ್ಲ ರಾಮ ರಾಮಜ್ಜಿ
ಒಂದ ಬಳಿಯ ಇಡುವಾನೆ ರಾಮ ರಾಮಜ್ಜಿ
ಹಲೆಲ್ಲ ಜೈಕಂತ ರಾಮ ರಾಮಜ್ಜಿ
ಹಲ್ಲೆಲ್ಲ ರಾಣ ಬಾಣೋ ರಾಮ ರಾಮಜ್ಜಿ
ಹೇ ಸುಟ್ಟ ಜೊಗಿಯೇ ರಾಮ ರಾಮಜ್ಜಿ
ನನ ಕೈಯಾರು ಬಿಡು ಜೋಗಿ ರಾಮ ರಾಮಜ್ಜಿ
ಕಣ್ಯಾಕೆ ಬಿಡ್ತೆ ಜೋಗಿ ರಾಮ ರಾಮಜ್ಜಿ
ಬಳಿಯಾನು ಇಟ್ಟಿದ ರಾಮ ರಾಮಜ್ಜಿ
ನಾ ಇಲ್ಲೆ ಉಳಿತೆ ಎಂದ ರಾಮ ರಾಮಜ್ಜಿ
ಮಲ್ಗೂಕೆ ಹಾಸ್ಗಿ ಇಲ್ಲೆ ರಾಮ ರಾಮಜ್ಜಿ
ಗೋಣಿ ಚಂಪಿ ಕೊಡಿ ಎಂದ ರಾಮ ರಾಮಜ್ಜಿ
ಕೊಟ್ಗೀಲಾರೂ ಮಲಗ್ತೆ ಎಂದ ರಾಮ ರಾಮಜ್ಜಿ
ಮಧ್ಯರಾತ್ರಿ ಗಂಟಿ ಬಿಟ್ಹಾಕ್ದ ರಾಮ ರಾಮಜ್ಜಿ
ಪಟ್ಟಣ ಶೆಟ್ರೆ ಪಟ್ಟಣ ಶೆಟ್ರ ರಾಮ ರಾಮಜ್ಜಿ
ಗಂಟಿ ಎಲ್ಲ ಬಿಡಿಸ್ಕಂಡ್ ಹೋದೋ ರಾಮ ರಾಮಜ್ಜಿ
ಶೆಟ್ರ ಗಂಟಿ ಬೆನ್ನಿಗ್ಹೋದ್ರು ರಾಮ ರಾಮಜ್ಜಿ
ಮೆತ್ತಿನ ಮೇಲೆ ಓಡಿ ಬಂದ ರಾಮ ರಾಮಜ್ಜಿ
ಹೊನ್ನಮ್ಮ ಹೊನ್ನಮ್ಮ ರಾಮ ರಾಮಜ್ಜಿ
ಪಟ್ಟಣ ಶೆಟ್ರು ಸಾಕಾ ಕೆಂಡ ರಾಮ ರಾಮಜ್ಜಿ
ದಂಡಿನ ಕತ್ತಿ ಗೆಗೆದೀದ ರಾಮ ರಾಮಜ್ಜಿ
ಮೂರು ರುಂಡ ಹೊಡೆದೀದ ರಾಮ ರಾಮಜ್ಜಿ
ಮೂರು ಬಾಗ್ಲೀಗೆ ನಿಲ್ಸಿದ ರಾಮ ರಾಮಜ್ಜಿ
ಪಟ್ಟಣ ಶೆಟ್ರು ಬಂದರೆ ರಾಮ ರಾಮಜ್ಜಿ
ಶೆಟ್ರನ್ನೂ ಕಡ್ದ ಹಾಕ್ದ ರಾಮ ರಾಮಜ್ಜಿ
ಹಸಗಾರೆಂಕಿ ಮನಿಗೆ ಬಂದ ರಾಮ ರಾಮಜ್ಜಿ
ಹಸಗಾರೆಂಕಿ ಕೇಳುತ್ತಿದ್ದ ರಾಮ ರಾಮಜ್ಜಿ
ನಿನಗರ್ಧ ಆಸ್ತಿ ಸಾಕ ಬೇಕ ರಾಮ ರಾಮಜ್ಜಿ
ಮುಷ್ಟಿ ತುಂಬು ಹೊನ್ನಬೇಕ ರಾಮ ರಾಮಜ್ಜಿ
ಬೆಂಕಿ ಕಡ್ಡಿ ಕೀರಿ ಕೊಟ್ಟ ರಾಮ ರಾಮಜ್ಜಿ