ಸಾಮಾಜಿಕ ಹೊರತಳ್ಳುವಿಕೆ ಎನ್ನುವ ಪದದ ಬಳಕೆ ಇತ್ತೀಚಿನದು. ಈ ಪದವನ್ನು ಮೊದಲು ಫ್ರಾನ್ಸಿನಲ್ಲಿ ಬಳಸಲಾಯಿತು. ಇದು ಒಂದು ಪ್ರಕ್ರಿಯೆಯಾಗಿದ್ದು, ಭಾಗವಹಿಸುವಿಕೆ, ದೊರಕುವಿಕೆ ಮತ್ತು ಐಕ್ಯತೆ ಕಡಿಮೆಯಾಗುತ್ತಾ ಹೋಗುತ್ತದೆ. ಸಮಾಜದ ಮಟ್ಟಿಗೆ ಹೇಳುವುದಾದರೆ, ಸಮಾಜದ ಸಮಗ್ರತೆಯ ಮೇಲೆ ನೇತ್ಯಾತ್ಮಕವಾಗಿ ಪರಿಣಾಮ ಬೀರುತ್ತದೆ. ವ್ಯಕ್ತಿಗಳ ಮಟ್ಟದಲ್ಲೂ ಇದು ಸಾಮಾಜಿಕ ಸಂಬಂಧಗಳನ್ನು ಕಟ್ಟುವಲ್ಲಿ ಮತ್ತು ನಿರೀಕ್ಷಿತ ಸಾಮಾಜಿಕ ಚಟುವಟಿಕೆಗಳಲ್ಲಿ ಸ್ವಾಭಾವಿಕವಾಗಿ ಭಾಗವಹಿಸಲು ಅಸಮರ್ಥತೆಯನ್ನು ನಿರ್ಮಾಣ ಮಾಡುತ್ತದೆ.

ಉತ್ತರ ಐರ್ಲೆಂಡ್‌ನಲ್ಲಿ ಈ ಕೆಳಗಿನ ರೀತಿಯಲ್ಲಿ ಸಾಮಾಜಿಕ ಹೊರತಳ್ಳುವಿಕೆಯನ್ನು ವ್ಯಾಖ್ಯಾನಿಸಲಾಗಿದೆ. “Social exculsion is a set of process, including within the labour market and the welfare system, by which individuals, house-holds, communicates or even whole social groups are pushed towards or kept to the margins of society. it incompressess not only matarial replexation but also more broadly the denia of opportunities to partticipate fully in social and civil life”.

ಇದರ ಅರ್ಥವೇನೆಂದರೆ ಸಾಮಾಜಿಕ ಹೊರತಳ್ಳುವಿಕೆ ಎನ್ನುವುದು ಒಂದು ಪ್ರಕ್ರಿಯೆಯಾಗಿದ್ದು, ಕಾರ್ಮಿಕರ ಮಾರುಕಟ್ಟೆ ಮತ್ತು ಕಲ್ಯಾಣ ವ್ಯವಸ್ಥೆಯನ್ನು ಒಳಗೊಂಡಂತೆ ವ್ಯಕ್ತಿಗಳು, ಕುಟುಂಬಗಳು, ಭೌತಿಕ ವಂಚಿತರನ್ನು ಒಳಗೊಳ್ಳದೆ ಬಹು ಮುಖ್ಯವಾಗಿ ಸಮಾಜ ನಾಗರೀಕ ಜೀವನದ ಎಲ್ಲಾ ಅವಕಾಶಗಳನ್ನು ನಿರಾಕರಿಸುವುದೇ ಸಾಮಾಜಿಕ ಹೊರತಳ್ಳುವಿಕೆ ಎನ್ನಬಹುದು.

ಫ್ರಾನ್ಸಿನ ರೇನ್‌ ಲೀನಿಯರ್ ರವರು ಯಾವ ಯಾವ ಗುಂಪುಗಳು ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ ಗುಂಪುಗಳಾಗಿವೆ. ಎಂಬುದನ್ನು ಹೇಳಿದ್ದಾರೆ. ಅವರುಗಳೆಂದರೆ, ಮಾನಸಿಕವಾಗಿ ಮತ್ತು ದೈಹಿಕವಾಗಿ ವಿಕಲಚೇತನರು, ಆತ್ಮಹತ್ಯೆಯ ಗುಂಪು, ವಯೋವೃದ್ಧರು, ಮನೆಬಿಟ್ಟ ಮಕ್ಕಳು, ಮದ್ಯವ್ಯಸನಿಗಳು, ಬಾಲಾಪರಾಧಿಗಳು, ಏಕಪೋಷಕರು, ಬಹುಸಮಸ್ಯೆಗಳ ಕುಟುಂಬಗಳು, ಅಂಚಿನಗುಂಪುಗಳು, ಸಾಮಾಜಿಕ ಗುಂಪುಗಳು. ಹೀಗೆ ಸಾಮಾಜಿಕ ಹೊರತಳ್ಳುವಿಕೆಯು ವಿವಿಧ ನಮೂನೆಯಲ್ಲಿ ವಿವಿಧ ಆಯಾಮದಲ್ಲಿ ಅರ್ಥೈಸಲಾಗಿದೆ.

ಸಾಮಾಜಿಕ ಹೊರತಳ್ಳುವಿಕೆಯ ಸಂದರ್ಭವು ಹಲವು ರೀತಿಯಲ್ಲಿ ನಡೆಯುವುದನ್ನು ನಾವು ನೋಡಬಹುದಾಗಿದೆ. ಸಮಾಜವು ಪರಿವರ್ತನಾಶೀಲವಾದದ್ದು. ಸಾಮಾಜಿಕ ಸಂಬಂಧಗಳಲ್ಲಿ ಜನರ ಅಂತಸ್ತು-ಪಾತ್ರಗಳಲ್ಲಿ ಸಾಮಾಜಿಕ ನಿಯಂತ್ರಣದ ಸಾಧನಗಳಲ್ಲಿ ಬದಲಾವಣೆಗಳು ನಿರಂತರವಾಗಿ ಸಂಭವಿಸುತ್ತಲೇ ಇರುತ್ತವೆ. ಎಲ್ಲಿಯವರೆಗೆ ಇಂತಹ ಪರಿವರ್ತನೆಗಳೊಂದಿಗೆ ಜನರು ಗೊಂದಲಕ್ಕೆ ಒಳಗಾಗದೇ ಹೊಂದಿಕೊಂಡು ತಮ್ಮ ದೈನಂದಿನ ಜೀವನವನ್ನು ನಡೆಸಿಕೊಂಡು ಹೋಗುವರೋ, ಅಲ್ಲಿಯವರೆಗೆ ಅವು ಸಾಮಾಜಿಕ ಹೊರತಳ್ಳುವಿಕೆಗೆ ಒಳಗಾಗುವುದಿಲ್ಲ. ಆದರೆ, ಈ ತೆರನಾದ ಪರಿವರ್ತನೆಗಳಿಂದ ಜನರು ಸಾಮಾಜಿಕ ಜೀವನವನ್ನು ನಡೆಸಲು ಅಸಮರ್ಥರಾದರೆ ಆಗ ಸಮಾಜದ ಹೊರತಳ್ಳುವಿಕೆಗೆ ಒಳಗಾಗಬಹುದು.

ವ್ಯಕ್ತಿ ವ್ಯಕ್ತಿಗತ ಜೀವನಕ್ಕೆ ಆದರ್ಶವಿರುವಂತೆ ಆತನ ಸಾಮಾಜಿಕ ಜೀವನಕ್ಕೂ ಆದರ್ಶಗಳಿವೆ. ವ್ಯಕ್ತಿಗತ ಸುಖಸಮೃದ್ಧಿ ಮಾತ್ರವಲ್ಲದೇ ತನ್ನ ಸಾಮಾಜಿಕ ಬದ್ಧತೆಗಳ ಹಾಗೂ ಹೊಣೆಗಾರಿಕೆಗಳ ಬಗ್ಗೆಯೂ ಪೂರ್ಣ ಅರಿವಿರಬೇಕೆಂಬ ಪ್ರಜ್ಞೆ ಅಥವಾ ತಿಳುವಳಿಕೆ ವ್ಯಕ್ತಿಗಳಲ್ಲಿ ಸದಾ ಜಾಗೃತವಿದ್ದಾಗ ಸಾಮಾಜಿಕ ಜೀವನ ಸದೃಢವಾಗಿರುತ್ತದೆ. ಆದರೆ, ಇಂತಹ ಆದರ್ಶದ ಬಗ್ಗೆ ವಿಮುಖವಾಗಿ ವ್ಯಕ್ತಿ ಸಾಮಾಜಿಕ ಹೊಣೆಗಾರಿಕೆಗಳನ್ನು ನಿಭಾಯಿಸಲು ಅಸಮರ್ಥನಾದಾಗ ಅಂತಹ ವ್ಯಕ್ತಿ ಸಾಮಾಜಿಕ ವ್ಯವಸ್ಥೆಯಿಂದ ದೂರ ಸರಿದು ಸಮೂಹದ/ಸಮಾಜದ ನಿರಾಕರಣೆಗೆ ಒಳಗಾಗುತ್ತಾನೆ.

ಸಾಮಾಜಿಕ ನಿರಾಕರಣೆಯೆಂಬುದು ಸಮಾಜದಲ್ಲಿ ವ್ಯಕ್ತಿಯು ಹೊಂದಿರುವ ಆದಾಯ ಮತ್ತು ಸಮಾಜದಲ್ಲಿ ನಿರ್ವಹಿಸುವ ಕಾರ್ಯದ ಮೇಲೆ ನಿರ್ಧರಿತವಾಗುತ್ತದೆ. ಸಮಾಜದಲ್ಲಿ ಬಹುತೇಕವಾಗಿ ಕಡಿಮೆ ತಲಾದಾಯ ಅಥವಾ ಬಡತನ ರೇಖೆಗಿಂತ ಕೆಳಗಿನ ಸಮೂಹದ ವ್ಯಕ್ತಿಗಳು ಸಾಮಾಜಿಕ ನಿರಾಕರಣೆಗೆ ಒಳಗಾಗುತ್ತಾರೆ. ಇಂದಿನ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ವ್ಯಕ್ತಿಗಳು ತಮ್ಮ ಸಾಮಾಜಿಕ ಜೀವನವನ್ನು ಹೇಗೆ ನಿರ್ವಹಿಸುತ್ತಾರೆ ಹಾಗೂ ಸಾಮಾಜಿಕ ಕಾರ್ಯಗಳನ್ನು (ಅಂದರೆ ರಾಜಕೀಯ, ಸಾಮಾಜಿ, ಆರ್ಥಿಕ) ಹೇಗೆ ನಿರ್ವಹಿಸುತ್ತಾರೆ ಎಂಬುದರ ಮೇಲೆ ಸಾಮಾಜಿಕ ನಿರಾಕರಣೆಯು ನಿರ್ಧರಿತವಾಗುತ್ತದೆ.

ಸಮಾಜವು ಕಾರ್ಯಾತ್ಮಕವಾದದ್ದು ಮತ್ತು ಸಮೂಹಗಳಿಂದ ಕೂಡಿದ್ದು. ಇಂತಹ ಸಮೂಹವು ಕೆಲವೊಂದು ನಿರೀಕ್ಷೆಗಳನ್ನು/ಧ್ಯೇಯಗಳನ್ನು ಹೊಂದಿರುತ್ತದೆ. ಮತ್ತು ಕೆಲವೊಂದು ನೀತಿ ನಿಯಮಗಳನ್ನು ಪಾಲಿಸಬೇಕೆಂತಲೂ ಸಮೂಹವು ನಿರೀಕ್ಷಿಸುತ್ತದೆ. ಆದರೆ, ವ್ಯಕ್ತಿಯ ಸಮೂಹ ಸಮಾಜದ ಧ್ಯೇಯೋದ್ದೇಶಗಳಿಗೆ ವ್ಯವಸ್ಥಿತ ರೀತಿಯಲ್ಲಿ ವರ್ತಿಸದಿದ್ದಾಗ ಅವನು ಸಮಾಜದ/ಸಮೂಹದ ನಿರಾಕರಣೆಗೆ ಒಳಗಾಗುತ್ತಾನೆ.

ಸಮಾಜಗಳು, ಸಮುದಾಯಗಳು ಮತ್ತು ವ್ಯಕ್ತಿಗಳಿಂದ ರಚಿತವಾಗಿರುತ್ತವೆ. ಸಮಾಜವು ಪರಿವರ್ತನಾಶೀಲವಾದದ್ದು. ಸಮಾಜ ಬದಲಾದಂತೆ ವ್ಯಕ್ತಿಗಳು ನೂತನ ಪಾತ್ರಗಳನ್ನು ನಿರ್ವಹಿಸಬೇಕಾಗುವುದು. ಕಾರ್ಯಾತ್ಮಕದ ಮುಖಾಂತರ ಸಮಾಜದ ಧ್ಯೇಯೋದ್ದೇಶಗಳಿಗನುಗುಣವಾಗಿ ವ್ಯಕ್ತಿ ತನ್ನ ಗುರಿಯನ್ನು ತಲುಪಲು ವಿಫಲವಾದಾಗ ಆ ವ್ಯಕ್ತಿ ಸಾಮಾಜಿಕ ನಿರಾಕರಣೆಗೆ ಒಳಗಾಗುತ್ತಾನೆ.

ಸಾಮಾಜಿಕ ನಿರಾಕರಣೆಯೆಂಬುದು ಬಡತನ, ಆದಾಯ, ಅಸಮಾನತೆ ಬಹಿಷ್ಕಾರ. ಉದ್ಯೋಗದ ಅಭಾವ ಹೀಗೆ ಮುಂತಾದ ಅಂಶಗಳ ಮೇಲೆ ನಿರ್ಧರಿತವಾಗುತ್ತದೆ ಹಾಗೂ ಸಾಮಾಜಿಕ ನಿರಾಕರಣೆಗೆ ಒಳಗಾದ ವ್ಯಕ್ತಿಯ ಸಮೂಹದಿಂದ ಬಹಿಷ್ಕರಿಸಿ ಕುಟುಂಬ ಹಾಗೂ ಸಾಮಾಜಿಕ ಸಂಬಂಧಗಳನ್ನು ಕಳೆದುಕೊಳ್ಳುತ್ತಾನೆ. ಅಲ್ಲದೇ ಸಾಮಾಜಿಕ ಜೀವನದಿಂದ ದೂರ ಸರಿದು ನೈತಿಕ ಅವನತಿ ಹೊಂದುತ್ತಾನೆ.

ಬದಲಾಗುತ್ತಿರುವ ಸಮಾಜದಲ್ಲಿ ವ್ಯಕ್ತಿಯ ಸಮಾಜದ ಹಿತಾಸಕ್ತಿ ಮತ್ತು ನಿಯಮಗಳಿಗನುಸಾರವಾಗಿ ಸಾಮಾಜಿಕ ಜೀವನವನ್ನು ನಿರ್ವಹಿಸದರೆ ಅಂತಹ ವ್ಯಕ್ತಿಯು ಸಾಮಾಜಿಕ ವ್ಯಕ್ತಿಯಾಗಿ ರೂಪಗೊಳ್ಳುತ್ತಾನೆ. ಆದರೆ, ಇಂತಹ ಅಂಶಗಳಲ್ಲಿ ವ್ಯತ್ಯಾಸ ಉಂಟಾದರೆ ಸಮಾಜವು ವ್ಯಾಪ್ತಿಯಿಂದ ಹೊರದೂಡಲ್ಪಟ್ಟು, ಸಾಮಾಜಿಕ ನಿರಾಕರಣೆಗೆ ಒಳಗಾಗುತ್ತಾನೆ.

ಸಾಮಾಜಿಕ ನಿರಾಕರಣೆಯ ಮನೋಸಾಮಾಜಿಕ ಪರಿಣಾಮಗಳು

ಸಾಮಾಜಿಕ ಹೊರತಳ್ಳುವಿಕೆ ಎಂಬ ಅಂಶವು ಚಿಕ್ಕದಾದರೂ, ಇದರಿಂದ ಸಮಾಜ ಹಾಗೂ ಸಮುದಾಯದಲ್ಲಿ ವಾಸಿಸುವ ವ್ಯಕ್ತಿಗಳ ಮನಸ್ಸಿನ ಮೇಲಾಗುವಂತಹ ಪರಿಣಾಮಗಳು ಅಗಾಧವಾದದ್ದು. ಹೊರತಳ್ಳುವಿಕೆಯು ಸಾಮಾಜಿಕ ಅಸಮತೋಲನವನ್ನು ಸಂಕೇತಿಸುವುದರಿಂದ ಇದು ಸಾಮಾಜಿಕ ವ್ಯವಸ್ಥೆಯ ಮೇಲೆ ಬೀರುವ ದುಷ್ಪರಿಣಾಮ ಅಪಾರವಾದದ್ದು. ಸಮಾಜದ ವಿಶಾಲ ವ್ಯಾಪ್ತಿಯಲ್ಲಿ ಜೀವಿಸುವ ಜನರು/ವ್ಯಕ್ತಿಗಳು ತಾವು ವಾಸಿಸುವ ಪರಿಸರದಲ್ಲಿ ಹೊರತಳ್ಳುವಿಕೆಗೆ ಒಳಗಾಗುತ್ತಾರೆ. ಅಂತಹ ವ್ಯಕ್ತಿಗಳು ವೈಯಕ್ತಿಕವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಜೊತೆಗೆ ಇದರ ಪರಿಣಾಮ ಅವರ ವಾಸಿಸುವ ಸಮಾಜ ಹಾಗೂ ಸಮುದಾಯದ ಮೇಲೂ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಹೊರತಳ್ಳುವಿಕೆಯ ಕೇವಲ ಯಾವುದೇ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ವಿಷಯವಲ್ಲ. ಬದಲಾಗಿ ಇಡೀ ಮಾನವ ಸಮಾಜಕ್ಕೆ ಸಂಬಂಧಿಸಿದ್ದಾಗಿದ್ದು, ಕ್ರಮೇಣ ಇದಕ್ಕೆ ಒಳಗಾದವರ ಸಂಖ್ಯೆ ಹೆಚ್ಚಿದಂತೆಲ್ಲಾ ಹೊರತಳ್ಳುವಿಕೆಯು ಒಂದು ಸಾಮಾಜಿಕ ಸಮಸ್ಯೆಯಾಗಿ ರೂಪಗೊಳ್ಳುತ್ತದೆ. ಹೊರತಳುವಿಕೆಯು ವ್ಯಕ್ತಿಗಳ ಮನೋ, ಬೌದ್ಧಿಕತೆಯ ಮೇಲೆ ಹಾಗೂ ಸಾಮಾಜಿಕವಾಗಿ ಹಲವಾರು ದುಷ್ಪರಿಣಾಮಗಳನ್ನು ಬೀರುವಂತದ್ದಾಗಿದ್ದು, ಅವು ಕೆಳಕಂಡಂತಿವೆ.

ಮಾನಸಿಕ ತೊಂದರೆಗಳು (Psychological Problems), ಸಾಮಾಜಿಕ ಸಂಬಂಧಗಳ ಮೇಲೆ ಪರಿಣಾಮ (Relational Problems), ವ್ಯಕ್ತಿತ್ವದ ಅವನತಿ/ನಾಶ (Loss of Identity), ಸಾಂಸ್ಕೃತಿ ಮೌಲ್ಯಗಳ ಅವನತಿ/ನಾಶ (Loss of Cultural Affiliations), ವೃತ್ತಿ ಸಂಬಂಧಗಳ ಸಡಿಲಿಕೆ (de-integration from work relations), ವೃತ್ತಿ ಸಂಬಂಧಗಳ ಸಡಿಲಿಕೆ (de-intergration from work relations).ಬೌದ್ಧಿಕ ಖಿನ್ನತೆಯ ಸಮಸ್ಯೆಗಳು (Problems of Mental depression), ವೈಯಕ್ತಿಕ ವಿಘಟನೆ (internal de-structuring of the person), ಕಾರ್ಯ/ಉದ್ದೇಶದ ವಿಫಲತೆ (Loss of Purpose), ಕೌಟುಂಬಿಕ ಸಂಬಂಧಗಳಲ್ಲಿ ಸಡಿಲಿಕೆ (de-integration from family ties), ವಿಷಯ ಕುರಿತಾದ ತೊಡರಿಸುವ ಪ್ರಕ್ರಿಯೆ (Process of subjective implication), ಬಡತನದ ತೀವ್ರತೆ (The innerdimension of poverty), ಸಾಮಾಜಿಕ, ಕೌಟುಂಬಿಕ ಸಂಬಂಧಗಳಲ್ಲಿ ಸಡಿಲಿಕೆ (de-integration from social relations).

ಸಮಾಜದಲ್ಲಿ ಹೊರತಳ್ಳುವಿಕೆಗೆ ಒಳಗಾದಂತಹ ವ್ಯಕ್ತಿಗಳು ಬಹುಮುಖ್ಯವಾಗಿ ಎದುರಿಸುವಂತಹ ಸಮಸ್ಯೆಗಳೆಂದರೆ,

ಸಂಬಂಧಗಳ ಸಮಸ್ಯೆ (Relationa Problems), ವ್ಯಕ್ತಿತ್ವದ ಅವನತಿ (Loss of Identity), ಬೌದ್ಧಿಕ/ಮಾನಸಿಕ ಖಿನ್ನತೆ (Mental Depression).

ಮೇಲಿನ ಅಂಶಗಳನ್ನು ಕೂಲಂಕುಶವಾಗಿ ಗಮನಿಸಿದಾಗ ಹೊರತಳ್ಳುವಿಕೆಯು ಒಂದು ಮನೋ-ಸಾಮಾಜಿಕ ಸಮಸ್ಯೆಯಾಗಿದ್ದು, ಇದು ವ್ಯಕ್ತಿ ಹಾಗೂ ಸಮಾಜದ ಮೇಲೆ ಹಲವಾರು ದುಷ್ಪರಿಣಾಮಗಳನ್ನು ಬೀರುವಂತಹ ವಿದ್ಯುನ್ಮಾನವಾಗಿದೆ. ಈ ಹಿನ್ನೆಲೆಯಲ್ಲಿ ಜನರನ್ನು ಇಂತಹ ಸಮಸ್ಯೆಗಳೆಂದರೆ ತಪ್ಪಿಸಿ, ವೈಯುಕ್ತಿಕ ಅವನತಿಯಿಂದ ರಕ್ಷಿಸಿ ಸಮಾಜದಲ್ಲಿ ಆರೋಗ್ಯಪೂರ್ಣವಾದ ವಾತಾವರಣವನ್ನು ನಿರ್ಮಿಸಬೇಕಾದರೆ ಹೊರತಳ್ಳುವಿಕೆಯಿಂದಾಗುವ ಸಮಸ್ಯೆ/ದುಷ್ಪರಿಣಾಮಗಳಿಗೆ ಸಲಹೆ ಮತ್ತು ಪರಿಹಾಋವನ್ನು ಸೂಚಿಸುವ ಅನಿವಾರ್ಯತೆ ನಮ್ಮೆದುರಿಗಿದೆ.

ಹೊರತಳ್ಳುವಿಕೆಯ ರಚನೆ/ಉಗಮಕ್ಕೆ ಕಾರಣಗಳು

ಸಮಾಜ ವಿಜ್ಞಾನಿಗಳು ಈಗಾಗಲೇ ನಡೆಸಿರುವಂತಹ ಹಲವಾರು ಅಧ್ಯಯನ ಹಾಗೂ ಸಂಶೋಧನೆಗಳಲ್ಲಿ, ಸಾಮಾಜಿಕ ಜೀವಿಯಾದ ವ್ಯಕ್ತಿ ಹೊರತಳ್ಳುವಿಕೆಗೆ ಒಳಗಾಗಲು ಕಾರಣಗಳೇನು ಎಂಬುದನ್ನು ತಿಳಿಯುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ, ಇದರ ಉಗಮಕ್ಕೆ ನಿಖರವಾದ ಕಾರಣವನ್ನು ತಿಳಿಯಲು ಇಂದಿಗೂ ಸಾಧ್ಯವಾಗಿಲ್ಲ. ಏಕೆಂದರೆ ಹೊರತಳ್ಳುವಿಕೆ ಎಂಬ ಪರಿಕಲ್ಪನೆಯು ಬಹು ವಿಸ್ತೃತವಾದದ್ದು. ವ್ಯಕ್ತಿಗಳು ಇಂತಹ ಅಂಶಗಳಿಂದಲೇ ಹೊರತಳ್ಳುವಿಕೆಗೆ ಒಳಗಾಗುತ್ತಾರೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಯಾವುದೇ ಸಾಮಾಜಿಕ ವಿದ್ಯಮಾನವಾದರೂ ಸಹ ಹಲವಾರು ಅಂಶಗಳ ಪ್ರಭಾವದಿಂದ/ಕಾರಣಗಳಿಂದಲೇ ಉಂಟಾಗುತ್ತದೆ.

ಹೊರತಳ್ಳುವಿಕೆಯನ್ನು ಒಂದು ಸಮಾಜದ ಭಾಗವಾಗಿ ಸಮಾಜಶಾಸ್ತ್ರೀಯ ದೃಷ್ಟಿಕೋನದಲ್ಲಿ ವಿಶ್ಲೇಷಿಸುವುದಾದರೆ ಅದರ ಹಿನ್ನೆಲೆಯಲ್ಲಿ ಹಲವಾರು ಅಂಶಗಳ ಪ್ರಭಾವವಿರುವುದು ನಮ್ಮ ಗಮನಕ್ಕೆ ಬರುತ್ತದೆ. ಸಾಮಾಜಿಕ ಹೊರತಳ್ಳುವಿಕೆ ಎಂಬುದು ಸಾಮಾಜಿಕ ಒಳಗ್ಗೊಳ್ಳುವಿಕೆಯ ವಿರುದ್ಧವಾದ ಸ್ಥಿತಿ. ಈ ಪ್ರಕ್ರಿಯೆಗೆ ಒಳಗಾದ ವ್ಯಕ್ತಿಗಳು ಹಲವಾರು ಗಂಭೀರವಾದ ಸಮಸ್ಯೆಗಳ ಸುಳಿಗೆ ಸಿಲುಕಿ ನೈತಿಕ ಅವನತಿ ಹೊಂದುತ್ತಾರೆ ಎನ್ನಬಹುದು. ಸಾಮಾಜಿಕ ಹೊರತಳ್ಳುವಿಕೆಗೆ ವ್ಯಕ್ತಿಯ ಕೇವಲ ತಿರಸ್ಕೃತ ಅಂಶಗಳೇ ಕಾರಣವಲ್ಲ ಬದಲಾಗಿ ಪ್ರೇರಿತ ಅಂಶಗಳು ಸಹ ಕಾರಣವಾಗುತ್ತವೆ.

ಸಮಾಜದಲ್ಲಿ ವ್ಯಕ್ತಿಗಳು ಹೊರತಳ್ಳುವಿಕೆಗೆ ಒಳಗಾಗಲು ಉದ್ಯೋಗ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಇವೆರಡೂ ಒಂದಕ್ಕೊಂದು ಪೂರಕವಾದ ಸಂಬಂಧವನ್ನು ಹೊಂದಿವೆ. ಅವುಗಳೆಂದರೆ,

ಬಾಲ ಕಾರ್ಮಿಕರು(Child Labourers), ನಿರುದ್ಯೋಗಿ ಯುವಜನತೆ (Unqualified Youngest), ಕಡಿಮೆ ವೇತನ ಪಡೆಯುವವರು (The low Paid), ರಕ್ಷಣೆ ರಹಿತ ಕೆಲಸಗಾರರು (Unprotected Workers), ವೃದ್ಧ ಕೆಲಸಗಾರರು (Older Workers), ಸಮಾಜದ ತಿರಸ್ಕಾರಕ್ಕೆ ಒಳಗಾದ ಸರಿಪಡಿಸಲಾಗದಸ ಯುವಜನತೆ, ತರಬೇತಿ ರಹಿತ ಕೆಲಸಗಾರರು (Unskilled workers).

ಈ ಮೇಲೆ ತಿಳಿಸಿದ ಉದ್ಯೋಗದಿಂದಾಗುವ ಹೊರತಳ್ಳುವಿಕೆಯ ಕಾರಣಗಳ ಜೊತೆಗೆ ಇನ್ನು ಹಲವು ಅಂಶಗಳು ಸಾಮಾಜಿಕ ಹೊರತಳ್ಳುವಿಕೆಯ ರಚನೆಗೆ ಕಾರಣವಾಗಿವೆ. ಅವು ಈ ಮುಂದಿನಂತಿವೆ:

ಕೆಟ್ಟ ಪರಿಸರ (Environmental Deprivation), ಹದಗೆಟ್ಟ ವಸತಿಯ ಸ್ಥಿತಿಗತಿಗಳು ({Bad Housing Conditions), ವಲಸೆ/ತೊರೆದ ಪ್ರದೇಶ (Derelict Land), ದೊಡ್ಡ ಅಪರಾಧ (High levels of Crime), ಅಸಮರ್ಪಕ ಸಂಪನ್ಮೂಲ (Insufficient Resources), ಕೆಲಸದ ಅಭಾವ (Lack of Work), ಮೂಲಭೂತ ಸೌಕರ್ಯಗಳ ಅಭಾವ (Lack of Basic Resources), ಕಾನೂನು ಸುವ್ಯವಸ್ಥೆಯ ಕೊರರೆ (Lack of Adequate Services), ಸರ್ಕಾರದ ನೀತಿ, ನಿಯಮ/ಯೋಜನೆಗಳಿಂದಾಗುವ ಪರಿಣಾಮ (Effects of Government Policies)

ಹೀಗೆ ಅನೇಕ ಅಂಶಗಳು ಸಾಮಾಜಿಕ ಹೊರತಳ್ಳುವಿಕೆಗೆ ಕಾರಣವಾಗುತ್ತವೆ. ಇಂತಹ ಹೊರತಳ್ಳುವಿಕೆಗೆ ಒಳಗಾದಂತಹ ವ್ಯಕ್ತಿಗಳಿಗೆ ಸಾಮಾಜಿಕ ಜೀವನ ಬೇಡವೆನ್ನಿಸಿ, ಕೌಟುಂಬಿಕ ಸಂಬಂಧಗಳಿಂದ ದೂರವಾಗಿ, ವ್ಯಕ್ತಿಗಳು ಗೊಂದಲಕ್ಕೆ ಸಿಲುಕಿ ತಮ್ಮ ನೆರೆಹೊರೆ, ಬಂಧು-ಬಾಂಧವರಿಂದ, ಸಾಮಾಜಿಕ ಸಂಬಂಧಗಳಿಂದ ಪರಿತ್ಯಜಿಸಲ್ಪಡುತ್ತಾರೆ. ಜೊತೆಗೆ ಒಂದು ರೀತಿಯ ಅರಾಜಕ ಸ್ತಿತಿ ಉಂಟಾಗಿ ವ್ಯಕ್ತಿಯ ನೈತಿಕತೆಯು ಕುಸಿದು ಬೀಳುತ್ತದೆ.

ಹೊರತಳ್ಳುವಿಕೆಯ ಪ್ರಕಾರಗಳು

ಸಾಮಾಜಿಕ ಹೊರತಳ್ಳುವಿಕೆಯು ಹಲವು ಬಗೆಯದು, ಹೊರತಳ್ಳುವಿಕೆಗೆ ಒಳಗಾದಂತಹ ವ್ಯಕ್ತಿಗಳಲ್ಲಿ ಹಲವು ಬಗೆ/ಪ್ರಕಾರಗಳನ್ನು ಗುರುತಿಸಬಹುದು. ಹೊರತಳ್ಳುವಿಕೆಯು ಕೇವಲ ಸಮಾಜದಿಂದ ಉಂಟಾಗುವಂತದ್ದಲ್ಲ. ಬದಲಾಗಿ ಇದು ಹಲವಾರು ಕಾರಣಗಳಿಂದ ಉಂಟಾಗುವಂಥದ್ದು. ಇಂತಹ ಅಂಶದಿಂದಲೇ ವ್ಯಕ್ತಿಗಳು ಹೊರತಳ್ಳುವಿಕೆಗೆ ಒಳಗಾಗುತ್ತಾರೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಯುರೋಪಿನ ಸಾಮಾಜಿಕ ನೀತಿಯ ಪುಸ್ತಕದಲ್ಲಿ ೧೫ ಬಗೆಯ ಹೊರತಳ್ಳುವಿಕೆಗಳನ್ನು ತಿಳಿಸಲಾಗಿದೆ. ಅವುಗಳೆಂದರೆ,

ಸಾಮಾಜಿಕ ವ್ಯವಸ್ಥೆಯಲ್ಲಿ ಕೆಳಗೆ ತಳ್ಳಲ್ಪಟ್ಟವರು (Social Marginalisation), ಹೊಸ ಬಡತನ (New Poverty), ಕಾನೂನು ಮತ್ತು ರಾಜಕೀಯ ಹೊರತಳ್ಳುವಿಕೆ (Legal/Palitical Exclusion), ಅಸಮರ್ಥತೆಯ ಅನಾನುಕೂಲಗಳು (Non-material Disadvantage), ಅತ್ಯಲ್ಪ ಸ್ವೀಕಾರಾರ್ಹ ಜೀವನ ಮಾರ್ಗ (Minimal Acceptable Way of life), ಸಾಂಸ್ಕೃತಿಕ ಹೊರತಳ್ಳುವಿಕೆ (ಜನಾಂಗ ಮತ್ತು ಲಿಂಗವನ್ನು ಒಳಗೊಂಡು) (Cultural Exclusion (including Race and Gender). ಕುಟುಂಬ ಮತ್ತು ಸಮುದಾಯದ ಹೊರತಳ್ಳುವಿಕೆ (Exclusion from family and the communitey), ಕಲ್ಯಾಣ ರಾಜ್ಯ ಮತ್ತು ಹೊರತಳ್ಳುವಿಕೆ (Exclusion from the welfare state), ದೀರ್ಘಕಾಲದ ಬಡತನ (Long-term Poverty), ಹೊರತಳ್ಳುವಿಕೆಯು ಬಹುಮುಖ್ಯವಾಗಿ ರಾಜಕೀಯ, ಆರ್ಥಿಕ ಜೀವನ ಮತ್ತು ಬಡತನವನ್ನು ಒಳಗೊಂಡಿದೆ (Exclusion from Mainstream Political and economic life and Poverty), ರಾಷ್ಟ್ರದ ನಷ್ಟ/ಅನಭಿವೃದ್ಧಿ (State of Deprivation), ವೃತ್ತಿ ಸಂಬಂಧಗಳ ನಿರ್ಲಪ್ತತೆಯ ಹೊರತಳ್ಳುವಿಕೆ (Deteachment from Work relations), ಆರ್ಥಿಕ ಹೊರತಳ್ಳುವಿಕೆ (Economic Exclusion), ಶ್ರಮಿಕ ವರ್ಗದ ಹೊರತಳ್ಳುವಿಕೆ (Exclusion from the labour market), ಗುಂಪು ಹೊರತಳ್ಳುವಿಕೆ (Group Exclusion).

ಇಂತಹ ಹಲವು ಬಗೆಗಳನ್ನು ಹೊಂದಿರುವ ಹೊರತಳ್ಳುವಿಕೆಯು ಬಹುಮುಖ್ಯವಾಗಿ ಬಡತನದೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದೆ. ಒಟ್ಟಿನಲ್ಲಿ ಹೇಳುವುದಾದರೆ, ಆರ್ಥಿಕ, ಸಾಮಾಜಿಕ ರಾಜಕೀಯ, ನೆರೆಹೊರೆ, ವೈಯಕ್ತಿಕ, ಪ್ರತ್ಯೇಕ ಗುಂಪು ಹೀಗೆ ಮುಂತಾದ ಹಲವು ಅಂಶಗಳು ಕೂಡ ಸಾಮಾಜಿಕ ಹೊರತಳ್ಳುವಿಕೆಯ ಬಹುಮುಖ್ಯ ಆಯಾಮಗಳಾಗಿವೆ.

ಸಾಮಾಜಿಕ ಹೊರತಳ್ಳುವಿಕೆಯು ಒಂದು ಸಾಮಾಜಿಕ ಪ್ರಕ್ರಿಯೆಯಾಗಿದ್ದು, ಇದು ಐತಿಹಾಸಿಕ ಮತ್ತು ಸಾಮಾಜಿಕ ತಪ್ಪುಗಳಿಂದ ಉಂಟಾದ ಒಂದು ವಿದ್ಯಮಾನವಾಗಿದೆ. ಹೊರತಳ್ಳುವಿಕೆಯ ಪ್ರಕ್ರಿಯೆಯನ್ನು ಹೆಚ್ಚಿನದಾಗಿ ಅಸಮಾನತೆಗಳಿಂದ ಕೂಡಿದ ಇಂಡಿಯಾದ ದೇಶವೂ ಸೇರಿದಂತೆ ಇತರೆ ಸಮಾಜಗಳಲ್ಲಿ ನೋಡುತ್ತೇವೆ. ಇಂತಹ ಅಸಮಾನತೆಗಳಿಂದ ಕೂಡಿದ ಸಮಾಜದಲ್ಲಿ ಏಣಿ ಶ್ರೇಣಿ ಪ್ರಕ್ರಿಯೆಯು ಸಾಮಾಜಿಕ ಗುಂಪುಗಳನ್ನು ಕಡಿದಾದ ಅಥವಾ ತುಂಬಾ ಆಳವಾದ ರಚನೆಯಲ್ಲಿ ಜನರನ್ನು ವಿಭಾಗಿಸಿ, ಶಕ್ತರು ಮತ್ತು ಅಶಕ್ತರು ಎಂಬುದಾಗಿ ವಿಭಾಗಿಸುತ್ತದೆ. ಕಡಿಮೆ ಸಂಖ್ಯೆಯಲ್ಲಿರುವ ಶಕ್ತರು ತಮ್ಮ ಸರ್ವ ವಿಧದ ಬಲದಿಂದಾಗಿ ಮುಖ್ಯವಾಹಿನಿಯ ಅಥವಾ ಮುಖ್ಯ ಸಮಾಜದ ರಾಜಕೀಯ ಮತ್ತು ಆರ್ಥಿಕತೆಯನ್ನು ನಿರ್ಧರಿಸುತ್ತಾರೆ. ಇನ್ನೊಂದೆಡೆ ಇದೇ ರಚನೆ ಅಥವಾ ಏಣಿ ಶ್ರೇಣಿಯ ಅತ್ಯಂತ ಕೆಳಸ್ಥರದಲ್ಲಿ ಬರುವ ಬಹು ಸಂಖ್ಯಾತ ಅಧಿಕಾರ ವಂಚಿತರು, ಅಶಕ್ತರಾಗಿಯೇ ಉಳಿದು, ಸಾಮಾಜಿಕ ಮತ್ತು ಆರ್ಥಿಕವಾಗಿ ಕೆಳಸ್ಥರವನ್ನಲಂಕರಿಸಿ ಸಾಮಾಜಿಕ ಕ್ರಮದ ಅಥವಾ ಶ್ರೇಣಿಯ ಅಂಚಿನಲ್ಲಿ ಬದುಕುಳಿಯಲು ಹರಸಾಹಸ ಮಾಡುತ್ತಾರೆ ಮತ್ತು ಸಮಾಜದ ಅಂಚಿಗೆ ತಳ್ಳಲ್ಪಡುತ್ತಾರೆ.

ಈ ಒಂದು ಅಸಮಾನ ಅಧಿಕಾರದ ಹಂಚಿಕೆಯ ಪ್ರಕ್ರಿಯೆಯು ಆರ್ಥಿಕ, ಸಾಮಾನ್ಯ, ಸಾಂಸ್ಥಿಕ ಮತ್ತು ಆದರ್ಶ ತತ್ವಗಳು ಮತ್ತು ಸಾಂಪ್ರದಾಯಿಕ ಮೌಲ್ಯಗಳು, ಜೊತೆಗೆ ಇತರೆ ವೈಚಾರಿಕ, ಸಮಾಜದ ನ್ಯಾಯ ರಚನೆಯಿಂದ ನ್ಯಾಯ ಸಮ್ಮತಿಸಲ್ಪಟ್ಟಿದೆ. ಅಸಮಾನ ಅಧಿಕಾರದ ಹಂಚಿಕೆ ಮತ್ತು ಅಸಮಾನ ಪಾಲು ಪದ್ಧತಿಯು ನ್ಯಾಯ ಸಮ್ಮತಿಯನ್ನು ಪಡೆದುದರ ಜೊತೆಗೆ, ಬಹುಸಂಖ್ಯಾತ ಜನರು ತಮ್ಮ ಇರುವಿಕೆಯನ್ನು ಅಂದರೆ ಅಧೀನತೆಯನ್ನು ಸಹಜ ಎಂದು ಒಪ್ಪಿಕೊಳ್ಳುವಂತೆ ಸಮರ್ಥನೆ ಅಥವಾ ಸಮಜಾಯಿಷಿಯನ್ನು ನೀಡಿದೆ. ಇದಲ್ಲದೆ ಈ ರೀತಿಯ ಸರ್ವ ವಿಧದ ಅಸಮಾನತೆಯನ್ನು ಪುನರ್ ನಿರೂಪಿಸಿ, ವಿಸ್ತರಿಸಿ, ಜೀವಂತವಾಗಿರಿಸಲು ಮತ್ತು ಹೊರತಳ್ಳುವಿಕೆಯ ಸಾಮಾಜಿಕ ನಿರ್ಮಾಣಕ್ಕೆ ಅಸಮಾನತೆಯನ್ನು ಸಮರ್ಥಿಸುವ ನ್ಯಾಯ ಸಮರ್ಥನೆಯು ಮಹತ್ತರ ಕೊಡುಗೆ ನೀಡಿದೆ. ಅಸಮಾನತೆಯ ಪ್ರಸ್ತುತತೆಯ ಮಹತ್ವವನ್ನು ಸಮರ್ಥಿಸಿ ಜೀವಂತವಾಗಿರಿಸಿದುದರಿಂದಾಗಿಯೇ ಸಮಾಜದಲ್ಲಿ ಹೊರತಳ್ಳುವಿಕೆಯು ನಿರ್ಮಾಣವಾಗಲು ಸಾಧ್ಯವಾಗಿದೆ. ಅಸಮಾನತೆಯ ಹರಿಕಾರರಾದ, ಸಾಂಪ್ರದಾಯಿಕ ಮೌಲ್ಯಗಳು ವೈಚಾರಿಕವಾದವುಗಳೆಂದು ಭ್ರಮಿಸುವ ಮನಸ್ಸುಗಳು, ಸಿದ್ಧಾಂತಗಳು ಮತ್ತು ಕೆಲವು ಸಮರ್ಥನೆಗಳು ಸಮಾಜದಲ್ಲಿ ಕಂದಕವನ್ನು ನಿರ್ಮಿಸಿ ಸಾಮಾಜಿಕ ಗುಂಪುಗಳನ್ನು ಎಂದೂ ಒಂದುಗೂಡದ ಹಾಗೆ ಮಾಡಿ, ಈ ಗುಂಪುಗಳ ಅಥವಾ ಸಂಸ್ಕೃತಿಗಳ ಮಧ್ಯೆ ಗೆರೆ ಅಥವಾ ಅಂಚನ್ನು ನಿರ್ಮಾಣ ಮಾಡಿ ಅವುಗಳು ಭದ್ರವಾಗುವಂತೆ ಮಾಡಿವೆ. ಸಮಾಜದ ಹೊರತಳ್ಳುವಿಕೆಯಿಂದ ಒಳತಳ್ಳುವಿಕೆಗೆ ಯತ್ನಿಸಿದಾಗ ವ್ಯಕ್ತಿಗಳೂ ಅಥವಾ ಗುಂಪುಗಳು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಹೊರತಳ್ಳುವಿಕೆ ಒಂದು ಸಹಜ ಪ್ರಕ್ರಿಯೆ ಎಂದು ತನ್ನ ಆದರ್ಶವಾದದ ಮೂಲಕ ಪ್ರಚುರಪಡಿಸುತ್ತದೆ. ಇದರಿಂದಾಗಿ ಸಮಾಜದಲ್ಲಿ ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಸಾಮಾಜಿಕ ಗುಂಪುಗಳು ಸಮಾಜದ ಅಂಚಿನಿಂದ ಹೊರಗೇ ತಳ್ಳಲ್ಪಡುತ್ತವೆ. ಈ ಒಂದು ಪ್ರಕ್ರಿಯೆಯನ್ನು ಅಸಮಾನತೆಯಿಂದ ಕೂಡಿದ ಯಾವುದೇ ಒಂದು ಸಮಾಜದ ಇತಿಹಾಸವನ್ನು ನೋಡಿದರೆ ತಿಳಿಯುತ್ತದೆ. ಭಾರತೀಯ ಸಮಾಜದ ಸಂದರ್ಭದಲ್ಲಿ ಇದು ಪ್ರಸ್ತುತವಾಗುತ್ತದೆ. ಇಲ್ಲಿ ಅಂಚೀಕೃತ ಗುಂಪುಗಳೂ ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ ಗುಂಪುಗಳಾಗಿವೆ.

ಅಧೀನತೆಯ ರಚನೆಯನ್ನು ನ್ಯಾಯ ಸಮ್ಮತಗೊಳಿಸುವ ಪ್ರಯತ್ನಗಳು ಒಂದಡೆಯಾದರೆ, ಇನ್ನೊಂದೆಡೆ ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ ಗುಂಪುಗಳು ತಾವೇ ಆ ರಚನೆಯನ್ನು ನಾಶ ಮಾಡುವಂತೆ ಪ್ರೇರೇಪಿಸುವಂತಹ ಪ್ರಯತ್ನಗಳು. ಈ ಪ್ರಯತ್ನಗಳು ಕೆಲವೊಮ್ಮೆ ಬೃಹತ್‌ ಸಾಮಾಜಿಕ ಚಳುವಳಿಗಳಾಗಿ ಮಾರ್ಪಟ್ಟಿವೆ. ಸಾಮಾಜಿಕ ಚಳುವಳಿಗಳು ದಮನಕಾರಿ ಸಾಂಸ್ಥಿಕ ರಚನೆ ಮತ್ತು ಅಧೀನತೆಯ ರಚನೆಯನ್ನು ಸಮರ್ಥಿಸುವ ನ್ಯಾಯ ಸಮ್ಮತ ಅಸಮರ್ಥತೆಯನ್ನು ಎದುರಿಸುವ ಪ್ರಯತ್ನ ಮಾಡಿವೆ. ಈ ಚಳುವಳಿಗಳು ತಲತಲಾಂತರದಿಂದ ಬಂದ ಸ್ಥಾಪಿತ ಹಿತಾಸಕ್ತಿಗಳೂ ಮತ್ತು ಅಸಮಾನತೆಯನ್ನು ಜೀವಂತವಾಗಿರಿಸಲು ಪ್ರಯತ್ನಿಸುವ ಮತ್ತು ಅಸಮಾನತೆ ಇಲ್ಲದಿದ್ದರೆ ಸಮಾಜವೇ ಬದುಕುಳಿಯುವುದಿಲ್ಲವೆಂಬ ಕುಟಿಲೋಪಾಯದ ತಂತ್ರದಿಂದ ಬದುಕುತ್ತಿವೆ. ಇಂತಹ ಸಾಮಾಜಿಕ ಗುಂಪುಗಳೇ ಇಂದಿಗೂ ಸಮಾಜದಲ್ಲಿ ಬಿರುಕುಗಳನ್ನು ಸೃಷ್ಟಿಸಿ ಸಮಾಜ ಛಿದ್ರ ಛಿದ್ರವಾಗಲು ಕಾರಣವಾಗಿ ಸಮಾಜದಲ್ಲಿ ಅಂಚುಗಳನ್ನು ಸೃಷ್ಟಿಸಿವೆ. ಯಾವಾಗಲೂ ಇಂತಹ ಅಧಿಕಾರಸ್ಥ ಶಕ್ತ ಗುಂಪುಗಳು ಸಮಾನತೆಗೋಸ್ಕರ ಹೋರಾಡುವ ಗುಂಪುಗಳನ್ನು, ತಮ್ಮ ಎಲ್ಲಾ ಅಧಿಕಾರ ಶಕ್ತಿಗಳನ್ನು ಬಳಸಿಕೊಂಡು, ದಮನ ಮಾಡಿ ಅಂತಹ ಗುಂಪುಗಳು ಶಾಶ್ವತವಾಗಿ ಸಮಾಜದ ಅಂಚಿನಲ್ಲಿರುವಂತೆ ಮಾಡಿವೆ. ಸಮಾನತೆಗೋಸ್ಕರ ಅಥವಾ ಸಮಾನತೆಯಿಂದ ಕೂಡಿರುವ ಸಮಾಜ ನಿರ್ಮಾಣ ಮಾಡಲು ಆಸಕ್ತ ಗುಂಪುಗಳು ಸಾಮಾಜಿಕ ಚಳುವಳಿಗಳು ಸಾಮೂಹಿಕ ಸಂಘಟನೆಯ ಮೂಲಕ ಪ್ರಯತ್ನಪಡುತ್ತಿರುತ್ತವೆ. ಇಂತಹ ಪ್ರಯತ್ನಗಳನ್ನು ಕೆಲವು ಸ್ಥಾಪಿತ ಹಿತಾಸಕ್ತಿಗಳು ಮತ್ತು ಯಾವಾಗಲೂ ಅಧೀನತೆಯನ್ನು ಪ್ರತಿಪಾದಿಸುವ ಗುಂಪುಗಳು ನಾಶಪಡಿಸುತ್ತವೆ. ಏಕೆಂದರೆ ಇಂತಹ ಗುಂಪುಗಳಿಗೆ ಅಧೀನ ಗುಂಪುಗಳು ಇಲ್ಲದೆ ಬದುಕು ಸಾಧ್ಯವಿಲ್ಲ ಎಂಬ ಅರಿವು ಬಂದಿದ್ದು ತಮ್ಮ ಉಳಿವಿಕೆಗೋಸ್ಕರ ಕಪಟ ತಂತ್ರದ ಮೂಲಕ ತಮ್ಮ ಹಿತಾಸಕ್ತರನ್ನು ರಕ್ಷಿಸಿಕೊಂಡೇ ಅಧೀನತೆಯ ರಚನೆಯನ್ನು ಮತ್ತು ಏಣಿ ಶ್ರೇಣಿಯ ಅಸ್ತಿತ್ವವನ್ನು ಉಳಿಸಿ, ಸಮಾಜದಲ್ಲಿ ಗೋಡೆಗಳನ್ನು ನಿರ್ಮಿಸುತ್ತವೆ. ಈ ಸಾಮಾಜಿಕ ಗೋಡೆಗಳೇ ಸಮಾಜದ ಅಂಚುಗಳಾಗಿ ಉಳಿಯುತ್ತವೆ. ಇದರಿಂದ ಎರಡು ವಿಭಿನ್ನ ಸಂಸ್ಕೃತಿಗಳು ಮೈದಳೆದು, ಉಚ್ಛ ಸಂಸ್ಕೃತಿ, ನೀಚ ಅಥವಾ ಕೀಳರಿಮೆಯ ಸಂಸ್ಕೃತಿಗಳೆಂದು ಹೆಸರಿಸಲ್ಪಡುತ್ತವೆ. ಇಂತಹ ಒಂದೇ ಸಮಾಜದಲ್ಲಿ ಕಂಡುಬರುವ ವಿಭಿನ್ನ ಸಂಸ್ಕೃತಿಗಳು ಅಭಿವೃದ್ಧಿ ಮತ್ತು ಸಮಗ್ರತೆಯ ದೃಷ್ಟಿಯಿಂದ ತುಂಬಾ ಆತಂಕಕಾರಿಯಾದವುಗಳು. ಇವು ವ್ಯಕ್ತಿಗಳು ಮತ್ತು ಗುಂಪುಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದೆ ತ್ರಿಶಂಕು ಸ್ಥಿತಿಯಲ್ಲಿಡುತ್ತವೆ. ಅಂತಹ ಸಂದರ್ಭದಲ್ಲಿ ಅಂಚೀಕೃತ ಗುಂಪುಗಳು ಸಾಮಾಜಿಕವಾಗಿ ಹೊರತಳ್ಳಪಡುತ್ತವೆ.

ಸಾಮಾಜಿಕ ಹೊರತಳ್ಳುವಿಕೆಯ ಪ್ರಕ್ರಿಯೆಯು ವ್ಯಕ್ತಿ ಮತ್ತು ಗುಂಪುಗಳಿಗೆ ಒಂದು ವರದಾನವಾಗಿ ಪರಿಣಮಿಸದೆ ಒಂದು ಶಾಪವಾಗಿ ಪರಿಣಮಿಸುತ್ತದೆ. ಇದಕ್ಕೆ ಸಿಕ್ಕ ವ್ಯಕ್ತಿಗಳು ಮತ್ತು ಗುಂಪುಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡು, ಹಲವಾರು ಸಾಮಾಜಿಕ ರೋಗ ರುಜಿನಗಳಿಗೆ ತುತ್ತಾಗುತ್ತಾರೆ. ಇವರು ಪಡುವ ಬವಣೆ ಅಂತಿಂಥದ್ದಾಗಿರುವುದಿಲ್ಲ. ಬದಲಾಗಿ ಇದು ವ್ಯಕ್ತಿಗಳು ಗುಂಪುಗಳನ್ನು ನಾಶದಂಚಿಗೆ ತಳ್ಳುತ್ತದೆ. ಕೆಲವೊಮ್ಮೆ ಹೊರತಳ್ಳುವಿಕೆಯಿಂದಾಗಿ ವ್ಯಕ್ತಿಗಳು ಬದುಕಿನಲ್ಲಿ ಸಾಮಾಜಿಕ ಕಂಟಕವಾಗಿ, ಬುದ್ಧಿಮಾಂದ್ಯರಾಗಿ, ದೈಹಿಕವಾಗಿ ಹಾಗೂ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವ್ಯಕ್ತಿಯ ಆಯಸ್ಸು ಕಡಿಮೆಯಾಗಿ ನರಕಯಾತನೆಯನ್ನು ಅನುಭವಿಸಬೇಕಾಗುತ್ತದೆ.

ಭಾರತೀಯ ಜಾತಿ ವ್ಯವಸ್ಥೆ ಮತ್ತು ಸಾಮಾಜಿಕ ಹೊರತಳ್ಳುವಿಕೆ (Indian Caste System and Social Exclusion)

ಭಾರತದ ಜಾತಿ ಪದ್ಧತಿಯು ಸಾಮಾಜಿಕ ಹೊರತಳ್ಳುವಿಕೆಗೆ ಮುಖ್ಯವಾದ ಕಾರಣವಾಗಿದೆ. ಜಾತಿ ಪದ್ಧತಿಯು ಒಂದು ಏಕ ತೆರನಾದ ಗುಂಪಾಗಿರದೇ ಹಲವಾರು ಸಾಂಸ್ಕೃತಿಕ ವೈವಿಧ್ಯತೆಗಳನ್ನು ಹೊಂದಿದೆ. ಇಂತಹ ಜಾತಿಯ ಸಾಂಸ್ಕೃತಿಕ ವೈರುಧ್ಯಗಳನ್ನು ಪ್ರಪಂಚದ ಯಾವುದೇ ಭಾಗದಲ್ಲಿಯೂ ನೋಡಲು ಸಾಧ್ಯವಿಲ್ಲ. ಜಾತಿಯ ಸಾಂಸ್ಕೃತಿಕ ಭಿನ್ನತೆಗಳಿಂದಾಗಿಯೇ ಇಲ್ಲಿಯ ಸಾಮಾಜಿಕ ಗುಂಪುಗಳು ಒಡೆದು ಹೋಗಿವೆ. ಸಾಂಸ್ಕೃತಿಕ ಭಿನ್ನತೆಯಿಂದಾಗಿಯೇ ಸಾಮಾಜಿಕ ಹೊರತಳ್ಳುವಿಕೆಯ ಪ್ರಕ್ರಿಯೆ ವಿಸ್ತಾರವಾಗುತ್ತಾ ಹೋಗಿ ಕೆಲವು ಸಮುದಾಯಗಳನ್ನು ತನ್ನ ತೆಕ್ಕೆಯೊಳಕ್ಕೆ ಹಾಕಿಕೊಳ್ಳುತ್ತದೆ. ಭಾರತೀಯ ಸಮಾಜದಲ್ಲಿ ಭಿನ್ನ ಭಿನ್ನ ಸಂಸ್ಕೃತಿ, ಸಂಪ್ರದಾಯ, ಕಟ್ಟುಪಾಡು, ನೀತಿ, ಊಟೋಪಚಾರ, ಉದ್ಯೋಗಗಳಿವೆ. ಇಂತಹ ಭಿನ್ನ ಭಿನ್ನ ಸಂಸ್ಕೃತಿಗಳಲ್ಲಿ ಹುಟ್ಟಿ ಬೆಳೆದ ವ್ಯಕ್ತಿಗಳು ಸಹಜವಾಗಿಯೇ ಆಯಾ ಸಂಸ್ಕೃತಿಯ ಅಂಶಗಳನ್ನು ಮೈಗೂಡಿಸಿಕೊಂಡು, ಸಾಮಾಜೀಕೆರಣಗೊಂಡು ಬೆಳೆಯುತ್ತಾರೆ. ಈ ರೀತಿಯ ವಿಭಿನ್ನ ಸಂಸ್ಕೃತಿಗಳಲ್ಲಿ ಕೆಲವು ಕೀಳರಿಮೆಯ ಮತ್ತು ಅಧೀನ ಸಂಸ್ಕೃತಿಗಳೆಂದು ಬಿಂಬಿತವಾಗುತ್ತವೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಗಳು ತಮ್ಮ ಸಂಸ್ಕೃತಿಯು ಕೀಳೆಂಬ ಹಣೆಪಟ್ಟಿಯಿಂದ ಹೊರಬರಲು ಹಲವು ತೆರನಾದ ಪ್ರಯತ್ನಗಳನ್ನು ಮಾಡುತ್ತಾರೆ. ಇದು ಸಾಮಾಜಿಕ ಚಳುವಳಿಯಾಗಿರಬಹುದು ಇಲ್ಲವೇ ಇತರ ಸಾಮಾಜಿಕ ಚಲನೆಯ ವಿಧಾನಗಳಾಗಿರಬಹುದು. ಇವುಗಳ ಮೂಲಕ ಉತ್ತಮ ಸಂಸ್ಕೃತಿಯೆಂದು ಬಿಂಬಿತವಾಗಿರುವ ಮತ್ತು ಹಣೆಪಟ್ಟಿ ಹೊಂದಿರುವ ಸಂಸ್ಕೃತಿಯನ್ನು ಅನುಕರಣೆ ಮಾಡುವ ಸಂದರ್ಭದಲ್ಲಿ ಕೆಳ ಸಂಸ್ಕೃತಿ ಅಥವಾ ಕೆಳವರ್ಗದ ಜನರು ಸಮಾಜದ ಅಂಚಿಗೆ ತಳ್ಳಲ್ಪಡುತ್ತಾರೆ. ಹೊರತಳ್ಳಲ್ಪಟ್ಟ ಸಂದರ್ಭದಲ್ಲಿ ಇವರು ಇತ್ತ ಇವರ ಮೂಲ ಸಂಸ್ಕೃತಿಯನ್ನು ಬಿಡಲಾಗದೆ ಅತ್ತ ಹೊಸ ಅಥವಾ ಎಲ್ಲರಿಂದ ಸರಿ ಎನಿಸಿಕೊಂಡಂತಹ ಅಥವಾ ಒಪ್ಪಿಗೆಯಾದ ಮುಖ್ಯವಾಹಿನಿಯ ಸಂಸ್ಕೃತಿಯನ್ನು ಸಂಪೂರ್ಣವಾಗಿ ಸ್ವೀಕರಿಸಲಾಗದೆ ತೊಳಲಾಟದಲ್ಲಿ ಸಿಲುಕುತ್ತಾರೆ. ಹಂತ ಹಂತವಾಗಿ ನಡೆಯುವ ಈ ಪ್ರಕ್ರಿಯೆಯಲ್ಲಿ ತಮ್ಮ ದೇಶೀಯ ಅಥವಾ ಮೂಲ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಾರೆ. ಮುಖ್ಯ ಸಮಾಜದ ಸಂಸ್ಕೃತಿಯನ್ನು ಸಂಪೂರ್ಣ ಅನುಕರಣೆ ಮಾಡದಂತಹ ಅಸಾಮರ್ಥ್ಯತೆಯಿಂದ ಬಳಲುತ್ತಾರೆ. ಇದರ ಪರಿಣಾಮವಾಗಿ ವ್ಯಕ್ತಿಗಳು ಅಥವಾ ಗುಂಪುಗಳು ಹೊರತಳ್ಳಲ್ಪಟ್ಟ ಗುಂಪುಗಳಾಗಿ ಹೊರಹೊಮ್ಮುತ್ತಾರೆ.

ಹೊರತಳ್ಳಲ್ಪಟ್ಟ ಗುಂಪುಗಳಾಗಿ ಹೊರ ಹೊಮ್ಮಿದ ಗುಂಪುಗಳು ಹಲವಾರು ನ್ಯೂನತೆಗಳಿಂದ ಬಳಲುತ್ತವೆ. ಇವರ ಸಮಸ್ಯೆಗಳು ಕೇವಲ ವ್ಯಕ್ತಿಗಳ ನ್ಯೂನತೆಗಳಾಗಿರದೇ ಸಮಾಜದ ಸಮಸ್ಯೆಗಳಾಗಿರುತ್ತವೆ. ಇದು ಸಮಾಜಕ್ಕೆ ಮತ್ತು ವ್ಯಕ್ತಿಗಳಿಗೆ ಸವಾಲು ಮತ್ತು ಸಮಸ್ಯೋಪಾದಿಯಲ್ಲಿ ಕಾಡುತ್ತಿರುತ್ತಿದೆ. ಉದಾಹರಣೆ: ಸಂಸ್ಕೃತೀಕರಣ ಮತ್ತು ಪಾಶ್ಚಾತ್ಯೀಕರಣದಂತಹ ಪ್ರಕ್ರಿಯೆಗಳನ್ನು ಅನುಕರಣೆ ಮಾಡುವಂತಹ ಸಂದರ್ಭದಲ್ಲಿ ವ್ಯಕ್ತಿಗಳು ಮತ್ತು ಗುಂಪುಗಳು ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ ಗುಂಪುಗಳಾಗುತ್ತಾರೆ. ಅಂದರೆ ಇಂತಹ ಸಾಮಾಜಿಕ ಬದಲಾವಣೆಯ ಪ್ರಕ್ರಿಯೆಗಳು ವ್ಯಕ್ತಿಗಳಿಗೆ ಮತ್ತು ಸಮುದಾಯಗಳಿಗೆ ಹೊರತಳ್ಳುವಿಕೆಯ ಸಂದರ್ಭವನ್ನು ಸೃಷ್ಟಿಸುತ್ತವೆ. ಬದಲಾವಣೆಯನ್ನು ಇಷ್ಟಪಡುವ ಸಾಮಾಜಿಕ ಗುಂಪುಗಳು ಬದಲಾವಣೆಯ ಪ್ರಕ್ರಿಯೆಯಲ್ಲಿ ಅಂಚಿನಲ್ಲಿ ಸಿಲುಕಿ ಒದ್ದಾಡುತ್ತಿರುತ್ತವೆ. ಆಗ ಇಂತಹ ಗುಂಪುಗಳ ಬವಣೆ ಮುಗಿಲು ಮುಟ್ಟುತ್ತದೆ. ಇದರಿಂದ ನಾನಾ ತರಹದ ಸಾಮಾಜಿಕ ಮತ್ತು ಜನಾಂಗೀಯ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಆದ್ದರಿಂದ ಜಾಗತೀಕರಣದ ಇಂತಹ ಸಂದರ್ಭದಲ್ಲಿ ದೇಶೀಯ ಸಂಸ್ಕೃತಿಯನ್ನು ಅಥವಾ ಸಮುದಾಯಗಳು ತಮ್ಮ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಅವುಗಳನ್ನು ಜಾಗತೀಕರಿಸಿ ಉಳಿಸಿ ಬೆಳೆಸಬೇಕಾಗುತ್ತದೆ. ಆಗ ಸ್ವಲ್ಪಮಟ್ಟಿನ ಹೊರತಳ್ಳುವಿಕೆಯ ಸಂದರ್ಭ ಕಡಿಮೆಯಾಗಬಹುದು.