ಸಾಮಾಜಿಕ ಹೊರತಳ್ಳುವಿಕೆ, ದಲಿತರು ಮತ್ತು ಹಿಂದುಳಿದ ವರ್ಗಗಳು

ಭಾರತೀಯ ಸಮಾಜದಲ್ಲಿ ದಲಿತ ಮತ್ತು ಹಿಂದುಳಿದ ಸಮುದಾಯಗಳು ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ ಅಂಚೀಕೃತ ಸಮುದಾಯಗಳಾಗಿವೆ. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹೊರತಳ್ಳುವಿಕೆಯ ಜೊತೆಗೆ ಶೈಕ್ಷಣಿಕವಾಗಿ ಅಂಚೀಕೃತ ಸಮುದಾಯವಾಗಿವೆ. ದಲಿತ ಸಮುದಾಯಗಳನ್ನು ನಿರ್ದಿಷ್ಟ ವ್ಯಾಖ್ಯಾನದ ಅಡಿಯಲ್ಲಿ ತರಲಾಗದಿದ್ದರೂ ಇವರನ್ನು ಹಿಂದುಳಿದವರು, ವಂಚಿತರು, ಅಲಕ್ಷಿತರು, ಅಸಮಾನತೆಗೊಳಗಾದವರು ಎಂಬುದಾಗಿ ಕರೆಯಲಾಗುತ್ತದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಸಮುದಾಯದವರೇ ದಲಿತ ಸಮುದಾಯದವರು ಎಂಬುದಾಗಿ ಕರೆಯಲಾಗುತ್ತದೆ.

ಹಿಂದುಳಿದ ವರ್ಗಗಳೆಂದರೇನು? ಹಿಂದುಳಿದಿರುವಿಕೆಯನ್ನು ಗುರುತಿಸುವುದು ಹೇಗೆ? ಗಮನಿಸಬೇಕಾದುದೆಂದರೆ, ಈ ಪ್ರಶ್ನೆಗಳಿಗೆ ಸಂವಿಧಾನಾತ್ಮಕ ಉತ್ತರ ದೊರೆಯುವಿದಲ್ಲ. ಡಾ.ಅಂಬೇಡ್ಕರ್ ಹೇಳಿದಂತೆ ಹಿಂದುಳಿದ ವರ್ಗಗಳೆಂದರೆ ಬೇರೆ ಏನೂ ಅಲ್ಲ, ಅವರೊಂದು ಅನೇಕ ಜಾತಿಗಳ ಸಮೂಹ. ಇಷ್ಟಾದರೂ ಸಂವಿಧಾನವು ಹಿಂದುಳಿದ ವರ್ಗಗಳೆಂದು ನಿರ್ಧರಿಸಲು ಯಾವ ವಿಧಾನಗಳನ್ನು ಸೂಚಿಸುವುದಿಲ್ಲ. ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದವರು ಯಾರು ಎಂಬುದನ್ನು ನಿರ್ದಿಷ್ಟಪಡಿಸುವುದಿಲ್ಲ. ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧರಿಸಬೇಕೆಂದು ಅದು ಸೂಚಿಸುತ್ತದೆ (ತೆಲಗಾವಿ ಲಕ್ಷ್ಮಣ, ೧೯೯೯:೨). ಆದ್ದರಿಂದ ಹಿಂದುಳಿದ ವರ್ಗಗಳೆಂದರೆ ಸಾಮಾನ್ಯವಾಗಿ ದಲಿತ ಅಥವಾ ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳೆಂದು ಅರ್ಥವಾಗುತ್ತದೆ. ಕಾನೂನಾತ್ಮಕವಾಗಿ ಸಂವಿಧಾನದ ಪರಿಶಿಷ್ಟ ಪಟ್ಟಿಯಲ್ಲಿ ಸೇರಿರುವ ಅಂದರೆ ಪರಿಶಿಷ್ಟ ಜಾತಿ/ಪಂಗಡದ ಪಟ್ಟಿಯಲ್ಲಿ ಬರುವ ಎಲ್ಲಾ ಸಮುದಾಯಗಳು ಹಿಂದುಳಿದ ಸಮುದಾಯಗಳೇ. ಸಮುದಾಯಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಸ್ಥಿತಿಗತಿಯ ಹಿನ್ನೆಲೆಯಿಂದಾಗಿಯೇ ದಲಿತ ಸಮುದಾಯವನ್ನು ಪರಿಶಿಷ್ಟ ಪಟ್ಟಿಯಲ್ಲಿ ಸೇರಿಸಿರುವುದು ವೇದ್ಯವಾಗುತ್ತದೆ. ಆದರೆ, ಕೆಲವೊಂದು ಹಿಂದುಳಿದ ಸಮುದಾಯಗಳೂ ಕಾನೂನಾತ್ಮಕ ಅಥವಾ ಸಂವಿಧಾನಾತ್ಮಕವಾಗಿ ರಚಿತವಾದ ಪಟ್ಟಿಯಲ್ಲಿ ಸೇರ್ಪಡೆಗೊಂಡಿಲ್ಲ. ಕಾರಣ ಸ್ವಲ್ಪ ಮಟ್ಟಿನ ಆರ್ಥಿಕ ಮತ್ತು ಸಾಮೂಹಿಕ ಸ್ಥಿತಿಗತಿಗಳು ಉತ್ತಮ ಮಟ್ಟದ್ದಾಗಿರುವುದು. ಜೊತೆಗೆ ಅಸ್ಪೃಶ್ಯತೆಯ ಸಾಮಾಜಿಕ ಕಳಂಕ ಇರುವುದಿಲ್ಲ. ಪರಿಶಿಷ್ಟ ಪಟ್ಟಿಯಲ್ಲಿರುವ ಸಮುದಾಯಗಳಲ್ಲದೇ, ಇತರೆ ಬುಡಕಟ್ಟು, ಮತ್ತು ಅಲಕ್ಷಿತ ಸಮುದಾಯದವರನ್ನು ತಮ್ಮ ಸರ್ವ ವಿಧದ ಹಿಂದುಳಿದಿರುವಿಕೆಯಿಂದಾಗಿ ಹಿಂದುಳಿದ ಅಥವಾ ಬುಡಕಟ್ಟು ಅಥವಾ ಇತರೆ ಹಿಂದುಳಿದ ವರ್ಗಗಳೆಂದು ಕರೆಯುವುದನ್ನು ನಾವು ನೋಡಬಹುದಾಗಿದೆ.

ದಲಿತ ಎಂಬ ಶಬ್ದವು ಕರ್ನಾಟಕದ ದಲಿತ ಸಂಘರ್ಷ ಸಮಿತಿಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಳುವಳಿಗಳಿಂದುಂಟಾದ ಜಾಗೃತಿಯಿಂದ ಉದ್ಭವವಾದ ಶಬ್ದ ಎಂಬುದಾಗಿ ಹೇಳಬಹುದು. ದಲಿತ ಎಂದರೆ ಹಿಂಸೆಗೆ ಒಳಗಾದ, ತುಳಿತಕ್ಕೆ ಒಳಗಾದ, ಶೋಷಣೆಗೆ ಒಳಗಾದ ಎಂಬುದರಿಂದ ಮೊದಗ್ಗೊಂಡು ಅಂದೊಂದು ಜೀವನ ಪದ್ಧತಿಯೆನ್ನುವವರೆಗೆ ಅದರ ಅರ್ಥಗಳನ್ನು ವಿಸ್ತರಿಸಲಾಗಿದೆ ಎಂಬುದಾಗಿ ಪ್ರೊ.ಲಕ್ಷ್ಮಣ ತೆಲಗಾವಿ(೧೯೯೯:೮). ಇದರಿಂದ ತಿಳಿದುಬರುವುದೇನೆಂದರೆ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ಮತ್ತು ಶೋಷಣೆಗೊಳಗಾಗಿರುವ ಸಮುದಾಯವನ್ನು ದಲಿತ ಸಮುದಾಯ ಎನ್ನಬಹುದು (ಗುರುಲಿಂಗಯ್ಯ. ಎಂ., ೨೦೦೮:೩೦).

ನಿಜಕ್ಕೂ ಹಿಂದುಳಿದವರೆಂದರೆ ಯಾರು? ಎಂಬ ಪ್ರಶ್ನೆ ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿವಾದಗಳನ್ನು, ಚಳುವಳಿಗಳನ್ನು ಸುಟ್ಟುಹಾಕಿರುವುದನ್ನು ನೋಡಬಹುದು. ಅಸ್ಪೃಶ್ಯರನ್ನು ಒಳಗೊಂಡ ದಲಿತ ವರ್ಗವನ್ನು ಹಿಂದುಳಿದ ವರ್ಗಗಳ ವ್ಯಾಪ್ತಿಗೆ ತರುವುದು ಒಂದು ಕಾರಣವಾದರೆ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಇತರ ಎಲ್ಲಾ ಜಾತಿ-ವರ್ಗಗಳನ್ನು ಹಿಂದುಳಿದಿರುವಿಕೆಯ ಆಧಾರದ ಮೇಲೆ ಗುರುತಿಸುವುದು ಇನ್ನೊಂದು ಕಾರಣವೆನಿಸುತ್ತದೆ. ಇಂತಹ ವರ್ಗೀಕರಣದ ಹಿನ್ನೆಲೆಯಲ್ಲಿ ಜಾತಿ-ವರ್ಗಗಳನ್ನು ಸರಿಯಾಗಿ ಗುರುತಿಸದಿರುವುದೇ ಇಂತಹ ಸಮಸ್ಯೆಗಳು ಹುಟ್ಟಿಕೊಳ್ಳಲು ಆಸ್ಪದವಾಗಿದೆ. ಜಾತಿಗಳ ಹಿಂದುಳಿದಿರುವುಕೆಯನ್ನು ಗುರುತಿಸುವ ಪ್ರಶ್ನೆ ಎದುರಾಗಿರುವುದು ಸ್ವಾತಂತ್ರ್ಯಾ ನಂತರದಲ್ಲಿ ಎಂಬುದು ನಿಜ. ಸ್ವಾತಂತ್ರ್ಯ ಪೂರ್ವದಲ್ಲಿ ಶಾಸಕಾಂಗದ ಪರಿಮಿತಿಗಷ್ಟೆ ಒಳಪಟ್ಟಿದ್ದ ನಿಮ್ನ ವರ್ಗ ಮತ್ತು ಹಿಂದುಳಿದ ವರ್ಗಗಳನ್ನು ನಿರ್ಧರಿಸುವ ಹೊಣೆಗಾರಿಕೆ, ಆನಂತರದಲ್ಲಿ ನ್ಯಾಯಾಂಗದ ಪ್ರವೇಶದೊಡನೆ ಅಖಿಲ ಭಾರತ ವ್ಯಾಪ್ತಿಗೆ ವಿಸ್ತಾರಗೊಂಡಿತೆನ್ನಬಹುದು ಎಂಬುದಾಗಿ ಪ್ರೊ. ಲಕ್ಷ್ಮಣ ತೆಲಗಾವಿ (೧೯೯೯:೨- ೩) ಅಭಿಪ್ರಾಯಪಟ್ಟಿದ್ದಾರೆ.

ಹಿಂದುಳಿದ ವರ್ಗಗಳ ಪದದ ಬಳಕೆಯನ್ನು ೧೯ನೇ ಶತಮಾನದ ಪ್ರಾರಂಭದಿಂದಲೂ ವಿವಿಧ ರೀತಿಯಲ್ಲಿ ಬಳಸುತ್ತಿರುವುದನ್ನು ನೋಡಬಹುದಾಗಿದೆ. ಆಗ ಹಿಂದುಳಿದ ವರ್ಗಗಳನ್ನು ಡಿಪ್ರೆಸ್ಸಡ್‌ ವರ್ಗಗಳೆಂದು ಕರೆಯಲಾಯಿತು. ಕೇವಲ ಅಸ್ಪೃಶ್ಯ ವರ್ಗದವರನ್ನು ಗುರುತಿಸಲು ಮಾತ್ರ ಈ ಪದವನ್ನು ಬಳಸಲಾಗುತ್ತಿತ್ತು. ಜೊತೆಗೆ ದೇಶದ ಇತರೆ ಕಡೆಗಳಲ್ಲಿ ಕ್ರಿಮಿನಲ್‌ ಬುಡಕಟ್ಟುಗಳನ್ನು ಮತ್ತು ಮೂಲನಿವಾಸಿಗಳನ್ನು ಈ ಹೆಸರುಗಳಿಂದ ಕರೆಯುತ್ತಿದ್ದರು. ಆದರೆ ಇಂದು ದೇಶದ ಜನಸಂಖ್ಯೆ ೧/೩ರಷ್ಟು ಜನಸಂಖ್ಯೆ ಹಿಂದುಳಿದ ವರ್ಗಗಳ ಜನಸಂಖ್ಯೆಯಾಗಿದೆ. ಹಿಂದುಳಿದ ವರ್ಗಗಳ ವರ್ಗೀಕರಣವು ಮುಖ್ಯವಾಗಿ ಮೂರು ಅಂಶಗಳಿಂದ ಕೂಡಿದ ಸಾಮಾಜಿಕ ವರ್ಗವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳು. ಪರಿಶಿಷ್ಟ ಜಾತಗಿ ಮತ್ತು ಪಂಗಡಗಳನ್ನು ಸಂವಿಧಾನಾತ್ಮಕವಾಗಿ ವ್ಯಾಖ್ಯಾನಿಸಲಾಗಿದೆ. ಇತರೆ ಹಿಂದುಳಿದ ವರ್ಗವು ಉಳಿಕೆ ಗುಂಪಾಗಿದ್ದು, ಅದರ ಸ್ಥಾನಮಾನ ಅಸ್ಪಷ್ಟವಾಗಿದೆ, ವ್ಯಾಖ್ಯಾನ ಮಾಡಲು ಕಷ್ಟ ಸಾಧ್ಯವಾಗುತ್ತದೆ. ಸಂವಿಧಾನದಲ್ಲಿ ಸ್ಪಷ್ಟ ವ್ಯಾಖ್ಯಾನವಿರುವುದಿಲ್ಲ. ಆದರೆ, ಸರ್ಕಾರದ (ಕೇಂದ್ರ ಅಥವಾ ರಾಜ್ಯ ಸರ್ಕಾರ) ದೃಷ್ಟಿಯಿಂದ ಯಾವ ಸಮುದಾಯ ಅಥವಾ ವರ್ಗ ಹಿಂದುಳಿದ ವರ್ಗವಾಗಿದೆಯೋ ಅದೇ ಹಿಂದುಳಿದ ವರ್ಗವೆಂದು ಕರೆಯಲ್ಪಡುತ್ತದೆ. ಇದುವರೆವಿಗೂ ಕೇಂದ್ರ ಸರ್ಕಾರವಾಗಲೀ, ರಾಜ್ಯ ಸರ್ಕಾರಗಳಾಗಲೀ ಸ್ಪಷ್ಟವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಆದರೆ ಆಗಾಗ್ಗೆ ಸರ್ಕಾರಗಳು ಕೆಲವೊಂದು ಮಾಪನಗಳನ್ನು ಉಪಯೋಗಿಸಿ ಹಿಂದುಳಿದ ವರ್ಗಗಳನ್ನು ಗುರುತಿಸಿರುವುದು ಕಂಡುಬಂದರೂ, ನಿಜವಾದ ಹಿಂದುಳಿದ ವರ್ಗಗಳನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂಬ ಕೂಗು ಕೇಳಿಬರುತ್ತಲೇ ಇದೆ. ಜೊತೆಗೆ ಪ್ರಜಾಪ್ರಭುತ್ವದಂತಹ ಭಾರತ ದೇಶದಲ್ಲಿ ಕೆಲವೊಂದು ಸಮುದಾಯಗಳು ರಾಜಕೀಯವಾಗಿ ಪ್ರಬಲವಾಗಿದ್ದು, ಸವಲತ್ತುಗಳಿಗಾಗಿ ಹಿಂದುಳಿದ ವರ್ಗಗಳ ಟ್ಯಾಗ್‌ಗೆ ಅಥವಾ ಐಡೆಂಟಿಟಿಗೆ ಹೋರಾಟ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಅಂದರೆ, ಹಿಂದುಳಿಯಲು ಸ್ಪರ್ಧೆಯೇ ಏರ್ಪಟ್ಟಂತಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅತ್ಯಂತ ನಿಕೃಷ್ಟ ಮತ್ತು ನಿಜವಾದ ಹಿಂದುಳಿದ ವರ್ಗಗಳು ಕಣ್ಣಿಗೆ ಕಾಣಿಸದೇ ಮುಖ್ಯವಾಹಿನಿಗೆ ಬರದೇ ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ ಗುಂಪುಗಳಾಗುತ್ತವೆ.

ಸಂವಿಧಾನದ ಆಶಯದ ಪ್ರಕಾರ ಕೆಲವೊಂದು ರಾಜ್ಯಗಳು ನಿಜವಾದ ಹಿಂದುಳಿದ ವರ್ಗಗಳನ್ನು ಗುರುತಿಸಲು ಶಾಶ್ವತ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿರುವುದನ್ನು ಕಾಣಬಹುದಾಗಿದೆ. ಈ ಆಯೋಗಗಳ ಮುಖ್ಯ ಕರ್ತವ್ಯವೆಂದರೆ ವಿವಿಧ ಮಾನದಂಡಗಳನ್ನು ಉಪಯೋಗಿಸಿ ನಿಜವಾದ ಹಿಂದುಳಿದ ವರ್ಗಗಳನ್ನು ಗುರುತಿಸುವುದು ಆದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ನಿಜವಾದ ಹಿಂದುಳಿವ ವರ್ಗಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ಸಾಮಾನ್ಯವಾಗಿ, ಸಾಮಾಜಿಕವಾಘಿ ಮತ್ತು ಶೈಕ್ಷಣಿಕ ಹಿಂದುಳಿದ ಸಮುದಾಯಗಳನ್ನು ಹಿಂದುಳಿದ ವರ್ಗಗಳೆಂದು ಕರೆಯಬಹುದಾಗಿದೆ. ಇಲ್ಲಿ ಆರ್ಥಿಕ ಸ್ಥಾನಮಾನಕ್ಕಿಂತ, ಸಾಮಾಜಿಕ ಮತ್ತು ಶೈಕ್ಷಣ ಇಕ ಹಿಂದುಳಿದಿರುವಿಕೆ ಇಂಡಿಯಾದ ಸಂದರ್ಭದಲ್ಲಿ ಮುಖ್ಯವಾಗುತ್ತದೆ. ಕೆನೆಪದರ ನೀತಿಯನ್ನು ಅನುಸರಿಸಿದರೂ ಅಥವಾ ಆರ್ಥೀಕ ಮಾನದಂಡವನ್ನು ಆಧಾರವನ್ನಾಗಿಸಿದರೂ ಸಾಮಾಜಿಕ ಹಿಂದುಳಿದಿರುವಿಕೆ ಮುಖ್ಯವಾದ ಮಾಪಕವಾಗಬೇಕಾಗುತ್ತದೆ. ಏಕೆಂದರೆ, ಭಾರತದಲ್ಲಿ ಜಾತಿ ವ್ಯವಸ್ಥೆಯಿರುವುದರಿಂದ ಜಾತಿ ವ್ಯವಸ್ಥೆಯೇ ಎಲ್ಲಾ ಅಸಮಾನತೆಗಳಲಿಗೆ ಕಾರಣವಾಗುವುರಿಂದ, ಜಾತಿ ವ್ಯವಸ್ಥೆಯು ಹೋಗುವವರಿಗೆ ಸಾಮಾಜಿಕ ಮಾನದಂಡವೇ ಮುಖ್ಯವಾಗುತ್ತದೆ. ಅಂದರೆ ಜಾತಿಯನ್ನು ಮುಖ್ಯ ಮಾನದಂಡವನ್ನಾಗಿಟ್ಟುಕೊಂಡು ಒಂದು ಸಮುದಾಯದ ಹಿಂದುಳಿದಿರುವಿಕೆಯನ್ನು ನಿರ್ಧರಿಸಬೇಕಾಗುತ್ತದೆ. ಜೊತೆಗೆ ಶೈಕ್ಷಣಿ ಪ್ರಗತಿ ಅಥವಾ ಶಿಕ್ಷಣವನ್ನು ಸಹ ಒಂದು ಮಾನದಂಡವನ್ನಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ (ಗುರುಲಿಂಗಯ್ಯ. ಎಂ., ೨೦೦೮:೩೨).

ಹಿಂದುಳಿದ ವರ್ಗಗಳ ಬಗ್ಗೆ ಕಲ್ಪನೆಯು ಮೊದಲ ಬಾರಿಗೆ ಮೈಸೂರು ಸಂಸ್ಥಾನದಲ್ಲಿ ತಾಂತ್ರಿಕವಾಗಿ ಅರ್ಥೈಸಲಾಯಿತು. ೧೯೧೮ರಲ್ಲಿ ಮೈಸೂರು ಸರ್ಕಾರ, ಹಿಂದುಳಿದ ಸಮುದಾಯಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮತ್ತು ಸಾಮಾಜಿಕ ಸೇವೆಯಲ್ಲಿರುವವರನ್ನು ಗುರುತಿಸುವ ಸಲುವಗಿ ಒಂದು ಹಿಂದುಳಿದ ವರ್ಗಗಳ ಸಮಿತಿಯನ್ನು ನೇಮಿಸಲಾಯಿತು. ಇದರ ಒಂದು ಪರಿಣಾಮವಾಗಿ ಬ್ರಾಹ್ಮಣರನ್ನು ಹೊರತುಪಡಿಸಿ ಇತರೆ ಎಲ್ಲಾ ಸಮುದಾಯಗಳನ್ನು ಹಿಂದುಳಿದ ವರ್ಗಗಳ ಸಮುದಾಯಗಳೆಂದು ಗುರುತಿಸಲಾಯಿತು. ಅದೇ ರೀತಿ ಹಾರ್ಟಾಗ್‌ ಸಮಿತಿಯು ಹಿಂದುಳಿದ ವರ್ಗಗಳ ಅಥವಾ ಜಾತಿಗಳನ್ನು ಶೈಕ್ಷಿಣಿಕವಾಗಿ ಹಿಂದುಳಿದ ಸಮುದಾಯಗಳೆಂದೇ ವ್ಯಾಖ್ಯಾನಿಸಿತು. ೧೯೩೦ ಸ್ಪಾರ್ಟೆ ಸಮಿತಿಯು ಹಿಂದುಳಿದ ವರ್ಗಗಳ ಕಲ್ಪನೆಯ ಪ್ರಶ್ನೆಯನ್ನು ಪರಿಶೀಲಿಸಿ ಡಿಪ್ರಸ್ಸ್ ಡ್‌ ಕ್ಲಾಸಸ್‌ ಎಂದರೆ ಕೇವಲ ಅಸ್ಪೃಶ್ಯ ವರ್ಗದವರು ಮತ್ತು ಇತರೆ ದೊಡ್ಡ ಗುಂಪಾದ ಹಿಂದುಳಿದ ವರ್ಗಗಳನ್ನು ಹಿಂದುಳಿದ ವರ್ಗಗಳೆಂದು ಕರೆಯಲಾಯಿತು.

ಸಾಮಾನ್ಯವಾಗಿ, ಹಿಂದುಳಿದ ವರ್ಗಗಳೆಂದರೆ, ಇದು ಒಂದು ಸಾಮಾಜಿಕ ಗುಂಪಾಗಿದ್ದು, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದ ಜಾತಿ ಮತ್ತು ಬುಡಕಟ್ಟುಗಳೇ ಆಗಿರುವುದು.

ದಲಿತ ಮತ್ತು ಹಿಂದುಳಿದ ವರ್ಗಗಳು ಅಂಚೀಕೃತ ಗುಂಪುಗಳಾಗಿದ್ದು, ಸಾಮಾಜಿಕವಾಗಿ ಹೊರತಳ್ಳಲ್ಪಟ್ಟಿವೆ. ಈ ರೀತಿ ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ ಗುಂಪುಗಳನ್ನು ಸಮಾಜದ ಅಂಚಿಗೆ ತಳ್ಳಿ ಸಮಾಜದ ಮುಖ್ಯವಾಹಿನಿಯಲ್ಲಿ ಮಿಳಿತವಾಗದಂತಹ ಸಮಸ್ಯೆಯನ್ನು ತಂದಿದೆ. ಇದನ್ನು ಭಾರತದ ಸಂದರ್ಭದಲ್ಲಿ ಹೆಚ್ಚಾಗಿ ಕಾಣಬಹುದು. ದಲಿತ ಮತ್ತು ಹಿಂದುಳಿದ ವರ್ಗಗಳು ಭಾರತೀಯ ಜಾತಿ ವ್ಯವಸ್ಥೆಯ ಕೆಳಸ್ಥರದಲ್ಲಿ ಕಂಡುಬರುವುದರಿಂದ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ. ಈ ಹಿಂದುಳಿದಿರುವಿಕೆಯನ್ನು ಕಡಿಮೆಗೊಳಿಸಿ ಸಾಮಾಜಿಕ ಸಂಚಲನೆಯನ್ನು ಹೊಂದಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಹೊರತಳ್ಳುವಿಕೆಯ ಸುಳಿಗೆ ಸಿಕ್ಕಿ ಅತ್ತ ತಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿಕೊಳ್ಳದೇ ಇತ್ತ ಮುಖ್ಯ ಸಮಾಜದಲ್ಲಿ ಸಂಪೂರ್ಣ ಸಮ್ಮಿಳಿತವಾಗದೇ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತವೆ.. ಹಿಂದುಳಿದ ವರ್ಗಗಳಿಗಿಂತ ದಲಿತ ಸಮುದಾಯವು ಹೆಚ್ಚು ಹೆಚ್ಚು ಸಾಮಾಜಿಕವಾಗಿ ಹೊರತಳ್ಳಲ್ಪಟ್ಟಂತಾಗಿದೆ. ಹಿಂದುಳಿದ ವರ್ಗಗಳಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳು ಇಂತಹ ಪರಿಸ್ಥಿತಿಗೆ ಒಳಗಾಗುತ್ತವೆ.

ಈ ರೀತಿಯ ಹೊರತಳ್ಳುವಿಕೆಗೆ ದಲಿತ ಮತ್ತು ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ಅಥವಾ ಸ್ಥಿತಿಗತಿಗಳೇ ಮುಖ್ಯ ಕಾರಣ. ಸಾಮಾಜಿಕವಾಗಿ ದಲಿತ ಸಮುದಾಯವು ಹಿಂದುಳಿದಿದ್ದು, ಸಾಕ್ಷರತೆಯೂ ಸಹ ಇವರಲ್ಲಿ ಕಡಿಮೆ ಇದೆ. ದೇಶದ ಸರಾಸರಿ ಸಾಕ್ಷರತೆ ೬೭ ಪ್ರತಿಶತ (೨೦೦೧ರ ಜನಗಣತಿಯ ಪ್ರಕಾರ) ಇರುವಾಗ ಪರಿಶಿಷ್ಟ ಜಾತಿಯ ಸಾಕ್ಷರತೆ ಶೇಕಡ ೩೭.೪೧ಷ್ಟು ಇರುವುದು ಇವರ ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ತೋರಿಸುತ್ತದೆ. ಹಾಗೆಯೇ ಪರಿಶಿಷ್ಟ ಪಂಗಡದ ಸಾಕ್ಷರತೆ ಶೇಕೆಡ ೨೯.೬೦ರಷ್ಟಿದೆ. ಇನ್ನು ಹಿಂದುಳಿದ ವರ್ಗದವರ ಸಾಕ್ಷರತೆ ಸುಮಾರು ಶೇಕಡ ೫೦ರಷ್ಟಿರುವುದು. ಈ ಸಮುದಾಯಗಳ ಸಾಮಾಜಿಕ ಹೊರತಳ್ಳುವಿಕೆಯನ್ನು ತೋರಿಸುತ್ತದೆ. ಈ ರೀತಿಯ ಶೈಕ್ಷಣಿಕ ಹೊರತಳ್ಳುವಿಕೆಯು ಕೇವಲ ಸಾಕ್ಷರತೆಗೆ ಮಾತ್ರ ಸೀಮಿತವಾಗಿರದೇ ಔಪಚಾರಿಕ ಶಿಕ್ಷಣದಲ್ಲೂ ಈ ಸಮುದಾಯಗಳ ಪ್ರವೇಶ ಕಡಿಮೆ ಮಟ್ಟದಲ್ಲಿದೆ. ಹಾಗೆಯೇ ದಲಿತ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಲ್ಲಿ ಅನುತ್ತೀರ್ಣತೆ ಮತ್ತು ಅಪಮೌಲ್ಯ ಇತರೆ ಸಮುದಾಯಗಳ ವಿದ್ಯಾರ್ಥಿಗಳಿಗಿಂತ ಹೆಚ್ಚು ಎಂದೇ ಹೇಳಬೇಕು.

ಇನ್ನೂ ಆರ್ಥಿಕ ಸ್ಥಿತಿಗಳಲ್ಲಿ ಆಧುನಿಕ ಉದ್ಯೋಗಗಳು ಮುಖ್ಯ ಪಾತ್ರ ವಹಿಸುತ್ತವೆ. ಆಧುನಿಕ ಉದ್ಯೋಗಗಳು ಹೊರತಳ್ಳುವಿಕೆಯನ್ನು ಕಡಿಮೆ ಮಾಡುತ್ತವೆಯಾದರೂ, ಅಂಚೀಕೃತ ಗುಂಪುಗಳಾದ ದಲಿತ ಮತ್ತು ಹಿಂದುಳಿದ ವರ್ಗಗಳ ಪಾಲಿಗೆ ಕೈಗೆ ಸಿಗದಂತಹ ಉದ್ಯೋಗಗಳಾಗಿವೆ. ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಹುದ್ದೆಗಳಲ್ಲಿ ಈ ಸಮುದಾಯದವರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎನ್ನುವುದು ಅವರ ಸಂಖ್ಯೆಯನ್ನು ನೋಡಿದರೆ ತಿಳಿಯುತ್ತದೆ. ಒಂದು ವರದಿಯ ಪ್ರಕಾರ ಕೇಂದ್ರ ಸರ್ಕಾರ ಹುದ್ದೆಗಳಲ್ಲಿ ದಲಿತ ಸಮುದಾಯದವರ ಪ್ರಾತಿನಿಧ್ಯ ಶೇಕಡ ೧೭ರಷ್ಟಿರುವುದು ಕಂಡುಬರುತ್ತದೆ. ಆದರೆ, ಇದು ಎಲ್ಲಾ ರೀತಿಯ ಹುದ್ದೆಗಳನ್ನು ಒಳಗೊಂಡಿರುತ್ತದೆ. ಇವುಗಳಲ್ಲಿ ‘ಡಿ’ ಗುಂಪಿನ ಹುದ್ದೆಗಳೇ ಹೆಚ್ಚಿರುವುದರಿಂದ ಕೇವಲ ೨ ಅಥವಾ ೩ ಪ್ರತಿಶತದಷ್ಟು ‘ಎ’ ಮತ್ತು ‘ಬಿ’ ದರ್ಜೆಯ ಹುದ್ದೆಗಳಲ್ಲಿ ಈ ಸಮುದಾಯದವರು ಇರುವುದು ಕಂಡುಬರುತ್ತದೆ. ಇದೇ ರೀತಿಯ ಪರಿಸ್ಥಿತಿಯು ಹಿಂದುಳಿದ ವರ್ಗಗಳಿಗೂ ಅನ್ವಯಿಸುತ್ತದೆ. ಆದರೆ ಇತ್ತೀಚೆಗೆ ಉದ್ಯೋಗದಲ್ಲಿನ ಮೀಸಲಾತಿಯಿಂದಾಗಿ ಸ್ವಲ್ಪಮಟ್ಟಿನ ಉದ್ಯೋಗದಲ್ಲಿ ಸಾಮಾಜಿಕ ಚಲನೆ ಕಂಡುಬರುತ್ತದೆ.

ಆರ್ಥಿಕ ಸ್ಥಿತಿಗತಿಯನ್ನು ಸೂಚಿಸುವ ಮತ್ತೊಂದು ಸೂಚಕವೆಂದರೆ ಭೂಮಿ. ಹಿಂದಿನಿಂದಲೂ ಭಾರತೀಯ ಸಮಾಜದಲ್ಲಿ ಭೂ ಅಸಮಾನತೆ ಕಂಡುಬರುತ್ತಲಿದೆ. ಅಂದರೆ ಭೂಮಿ ಒಂದು ಮುಖ್ಯವಾದ ಸಂಪತ್ತಿನ ಮೂಲವಾಗಿದ್ದರೂ ಇದು ಸಮರ್ಪಕವಾಗಿ ಹಂಚಿಕೆಯಾಗಿಲ್ಲ. ಕೆಲವೇ ಕೆಲವು ಜಮೀನ್ದಾರಿ ಕುಟುಂಬಗಳು ಭೂ ಒಡೆಯರಾಗಿ ಆರ್ಥಿಕ ಸಂಪತ್ತನ್ನು ಅನುಭವಿಸುತ್ತಾ ಬಂದಿವೆ. ಸರ್ಕಾರ, ಭೂಮಿತಿ, ಭೂಸುಧಾರಣೆಗೆ ಸಂಬಂಧಪಟ್ಟಂತೆ ಹಲವಾರು ಕಾನೂನುಗಳನ್ನು ಜಾರಿಗೆ ತಂದರೂ ಮತ್ತು ಭೂದಾನದಂತಹ ಚಳುವಳಿಗಳೂ ನಮ್ಮಲ್ಲಿ ನಡೆದರೂ ದಲಿತ ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಇವತ್ತಿಗೂ ಭೂಮಿ ಇಲ್ಲದಿರುವುದು ಕಂಡುಬರುತ್ತದೆ. ಒಂದು ವೇಳೆ ಗ್ರಾಮೀಣ ಪ್ರದೇಶದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಭೂಮಿ ಇರುವವರೂ ಕಂಡುಬಂದರೂ, ಅವರು ಸಣ್ಣ ರೈತರು, ಇಲ್ಲವೇ, ಅತಿ ಸಣ್ಣ ರೈತರೇ ಆಗಿರುತ್ತಾರೆ. ಅಂದರೆ ಬಹುತೇಕ ದಲಿತ ಮತ್ತು ಹಿಂದುಳಿದ ಸಮುದಾಯದವರು ಸಣ್ಣ ಮತ್ತು ಅತೀ ಸಣ್ಣ ರೈತರೇ ಹೆಚ್ಚಾಗಿದ್ದಾಎ ಎಂದರೆ ತಪ್ಪಾಗಲಾರದು. ೧೯೯೨ರಲ್ಲಿ ನಡೆದ ರಾಷ್ಟ್ರೀಯ ಮಾದರಿ ಸಮೀಕ್ಷೆಯು ಪರಿಶಿಷ್ಟ ಜಾತಿ ಮತ್ತು ಪಂಗಡದ ಶೇಕಡ ೩೩.೭ರಷ್ಟು ಗ್ರಾಮೀಣ ಕುಟುಂಬಗಳು ಶೇಕಡ ೯೪ರಷ್ಟು ಭೂಮಿ ಇಲ್ಲದ ಕುಟುಂಬಗಳಾಗಿದ್ದವು ಎಂದು ಹೇಳಿದೆ. ಇನ್ನೊಂದು ಅಂದಾಜಿನ ಪ್ರಕಾರ ಕರ್ನಾಟಕದಲ್ಲಿ ೮೩.೨೨ರಷ್ಟು ದಲಿತ ಸಮುದಾಯದ ಕುಟುಂಬಗಳು (ಸ್ವಲ್ಪ ಭೂಮಿ ಇರುವವರು) ಕೇವಲ ಒಣಭೂಮಿಯನ್ನು ಹೊಂದಿರುವುದು ಕಂಡುಬರುತ್ತದೆ. ಅಂದರೆ ಶೇಕಡ ೩೦ ಇಲ್ಲವೇ ೪೦ ಪ್ರತಿಶತ ದಲಿತ ಕುಟುಂಬಗಳು ಸಣ್ಣ ಪ್ರಮಾಣದ ಭೂ ಹಿಡುವಳಿಯನ್ನು ಹೊಂದಿದ್ದಾಗ್ಯೂ ಆ ಭೂಮಿಯು ಬಂಜರು ಇಲ್ಲವೇ ಒಣಭೂಮಿಯಾಗಿರುವುದರಿಂದ ಸಾಗುವಳಿ ಮಾಡಲು ಯೋಗ್ಯವಾಗಿರುವುದಿಲ್ಲ. ಇದರಿಂದ ಇವರಿಗೆ ಕೃಷಿಯಿಂದ ಯಾವುದೇ ಉಪಯೋಗವಾಗದೇ ಭೂರಹಿತ ಕೃಷಿ ಕಾರ್ಮಿಕರಾಗಿಯೇ ಉಳಿದಿದ್ದಾರೆ. ಇವರು ಶೈಕ್ಷಣಿಕ ಹಿಂದುಳಿದಿರುವಿಕೆಯಿಂದಾಗಿ ಆಧುನಿಕ ಹುದ್ದೆಗಳಲ್ಲಿ ಕಡಿಮೆ ಪ್ರಾತಿನಿಧ್ಯ ಹೊಂದಿದ್ದಾರೆ, ಅಂದರೆ ಇನ್ನೂ ಜಾತಿ ಆಧಾರಿತ ಹುದ್ದೆಗಳಲ್ಲಿ ಮುಂದುವರಿಕೆ, ಮತ್ತು ಭೂಮಿ ಇಲ್ಲದಿರುವುದು ಇವರನ್ನು ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ (Socially Excluded) ಗುಂಪುಗಳನ್ನಾಗಿ ಮಾಡಿದೆ. ಇವರ ಆರ್ಥಿಕ ಮತ್ತು ಸಾಮಾಜಿಕ ಹೊರತಳ್ಳುವಿಕೆಯು ಅಂಚೀಕರಣಕ್ಕೆ ಅನುವು ಮಾಡಿಕೊಟ್ಟು ಅಂಚೀಕೃತ ಗುಂಪುಗಳಾಗಿ ಉಳಿಯುವಂತೆ ಮಾಡಿದೆ. ಈ ಹೊರತಳ್ಳುವಿಕೆಯ ಪ್ರಕ್ರಿಯೆಯಿಂದಾಗಿ ಇವರು ಇನ್ನೂ ಮುಖ್ಯ ಸಮಾಜದಲ್ಲಿ ಮಿಳಿತವಾಗಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಒಳಗೊಳ್ಳುವಿಕೆಯ ಪ್ರಯತ್ನಗಳು

ದಲಿತ ಮತ್ತು ಹಿಂದುಳಿದ ವರ್ಗಗಳಾದ ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ ಗುಂಪುಗಳ ಅಭ್ಯುದಯಕ್ಕಾಗಿ ಹಲವು ಪ್ರಯತ್ನಗಳು ಸ್ವತಂತ್ರ ಪೂರ್ವ ಮತ್ತು ನಂತರದ ದಿನಗಳಲ್ಲಿ ನಡೆದಿರುವುದನ್ನು ನೋಡಬಹುದಾಗಿದೆ. ಸ್ವತಂತ್ರ ಪೂರ್ವದಲ್ಲಿ ನಮ್ಮಲ್ಲಿ ಸಂವಿಧಾನದತ್ತವಾದ ಅವಕಾಶಗಳು ಇದ್ದಿಲ್ಲವಾದ್ದರಿಂದ ಕೆಲವು ಮಹಾನ್‌ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ ಗುಂಪುಗಳ ಅಭ್ಯುದಯಕ್ಕೆ ಪ್ರಯತ್ನಪಟ್ಟಿವೆ. ಅಂತಹ ವ್ಯಕ್ತಿಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರು ಮುಖ್ಯವಾಗಿರುತ್ತಾರೆ. ಇವರು ದಲಿತ, ಹಿಂದುಳಿದ ಮತ್ತು ಮಹಿಳೆಯರ ಅಭ್ಯುದಯಕ್ಕಾಗಿ ಅಂದೇ ಆಲೋಚಿಸಿ ಸಂವಿಧಾನವನ್ನು ರಚಿಸಿರುವುದನ್ನು ನಾವು ನೋಡಬಹುದಾಗಿದೆ. ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ ಸಮುದಾಯಗಳ ಉದ್ಧಾರಕ್ಕೆ ಹಲವು ತೆರನಾದ ಹೋರಾಟ, ಚಿಂತನೆ ಮತ್ತು ಪ್ರಯತ್ನಗಳನ್ನು ಮಾಡಿ ಸಮಸ್ಯೆಗಳ ನಿವಾರಣೆಗೆ ಮತ್ತು ಸಾಮಾಜಿಕ ಚಲನೆಗೆ ಅನುವು ಮಾಡಿಕೊಡುವ ದಿಕ್ಕಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದುದ್ದನ್ನು ನೋಡಬಹುದು. ಪೆರಿಯಾರ, ಫುಲೆ, ಲೋಹಿಯಾ, ಬಸವಣ್ಣ ಮುಂತಾದ ಮಹಾನ್‌ ವ್ಯಕ್ತಿಗಳು ಜಾತಿ ವ್ಯವಸ್ಥೆಯಲ್ಲಿರುವ ಅಸಮಾನತೆ ಮತ್ತು ಏಣಿ-ಶ್ರೇಣಿಯನ್ನು ಹೋಗಲಾಡಿಸಿ ಹೊರತಳ್ಳಲ್ಪಟ್ಟ ಸಮುದಾಯಗಳ ಏಳಿಗೆಗೆ ಶ್ರಮಿಸಿರುವುದನ್ನು ನಾವು ನೋಡಬಹುದಾಗಿದೆ. ಅಲ್ಲದೆ ಸ್ವತಂತ್ರ ನಂತರದಲ್ಲಿ ಅಸ್ತಿತ್ವಕ್ಕೆ ಬಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಸಮಿತಿ ಮತ್ತು ಆಯೋಗಗಳನ್ನು ನೇಮಿಸಿ, ಅಂಚೀಕೃತ ಸಮುದಾಯಗಳ ಜನರ ಸಮಸ್ಯೆಗಳ ವೈಜ್ಞಾನಿಕ ಅಧ್ಯಯನ ನಡೆಸಿ, ಈ ಸಮುದಾಯಗಳ ಅಭಿವೃದ್ಧಿಗೆ ಹಲವು ರೀತಿಯ ಶಿಫಾರಸ್ಸುಗಳನ್ನು ಮಾಡುವುದರ ಮೂಲಕ ಅಭಿವೃದ್ಧಿ ಹೊಂದುವಂತೆ ಮಾಡುತ್ತಿರುವ ಪ್ರಕ್ರಿಯೆಯನ್ನು ನೋಡಬಹುದಾಗಿದೆ. ಆದರೂ ಇಂದಿಗೂ ದಲಿತ ಮತ್ತು ಹಿಂದುಳಿದ ವರ್ಗಗಳು ಸಮಾಜದಿಂದ ಹೊರತಳ್ಳಲ್ಪಟ್ಟ ಗುಂಪುಗಳಾಗಿಯೇ ಉಳಿದಿವೆ.

ಸಾಮಾಜಿಕ ಹೊರತಳ್ಳುವಿಕೆ ಮತ್ತು ಬುಡಕಟ್ಟುಗಳು

ಸಾಮಾನ್ಯವಾಗಿ ಒಂದು ಪ್ರದೇಶದ ಮೂಲ ವಾಸಸ್ಥರನ್ನು ಆದಿವಾಸಿಗಳೆಂದು ಕರೆಯಲಾಗುತ್ತದೆ. ಬುಡಕಟ್ಟು ಎಂಬ ಪದವನ್ನು ಪ್ರಪಂಚದ ಅತ್ಯಂತ ಅನಾಗರಿಕ ಮತ್ತು ಹಿಂದುಳಿದವ ಎಂಬುದನ್ನು ಸೂಚಿಸಲು ಬಳಸುತ್ತಾರೆ. ನಾಗರಿಕ ಸಮಾಜದಿಂದ ದೂರವಿದ್ದು, ದಟ್ಟವಾದ ಕಾಡುಗಳ ಮಧ್ಯದಲ್ಲಿ ವಾಸಿಸುವ ಜನರಿಗೆ ಸಾಮಾನ್ಯ ಅರ್ಥದಲ್ಲಿ ಬುಡಕಟ್ಟುಗಳೆಂದು ಕರೆಯುತ್ತಾರೆ. ಇವರನ್ನು ಅಲೆಮಾರಿ ಜನಾಂಘ, ಅನಾಗರಿಕರು, ಅರಣ್ಯವಾಸಿಗಳು, ಗಿರಿಜನರು, ಸರ್ವ ಚೇತನವಾದಿಗಳು, ಹಿಂದುಳಿದ ಹಿಂದುಗಳೂ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಇವರು ಆಧುನಿಕ ನಾಗರಿಕತೆಯಿಂದ ಹಲವು ಶತಮಾನಗಳಷ್ಟು ಕಾಲ ಹಿಂದುಳಿದವರಾಗಿದ್ದಾರೆ. ಸಾಮಾನ್ಯವಾಗಿ ಒಬ್ಬ ನಾಯಕನ ಅಧೀನದಲ್ಲಿ ಒಟ್ಟಾಗಿ ಬಾಳುವ ನಾಗರಿಕತೆಯ ಪ್ರಭಾವ ಇಲ್ಲದ ಜನರ ಅಥವಾ ಕುಟುಂಬಗಳ ತಂಡವನ್ನು ಬುಡಕಟ್ಟು ಎಂದು ಕರೆಯಬಹುದು. ಮಾನವಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು ಮತ್ತು ಜಾನಪದ ವಿದ್ವಾಂಸರು ಬುಡಕಟ್ಟಿನ ಅರ್ಥ ವಿವರಣೆಯನ್ನು ಕೊಟ್ಟಿದ್ದಾರೆ. ಸಮಾಜಶಾಸ್ತ್ರಜ್ಞ ಪ್ರೊ.ಜಿ.ಎಸ್‌.ಘುರ್ರೆ‍ಯವರು ಆದಿವಾಸಿಗಳನ್ನು, “ಹಿಂದುಳಿದ ಹಿಂದುಗಳು” ಎಂದು ಕರೆದರೆ, ಗಾಂಧೀಜಿಯವರು ಇವರನ್ನು “ಗಿರಿಜನರು” ಎಂದು ಕರೆದಿದ್ದಾರೆ. ಆದಿವಾಸಿ ಎಂಬ ಪದವನ್ನು ಭಾರತದ ಅತ್ಯಂತ ಅನಾಗರಿಕ ಹಾಗೂ ಹಿಂದುಳಿದ ಬಣವನ್ನು ಮತ್ತು ಈ ದೇಶದ ಜನರಲ್ಲಿ ಅತ್ಯಂತ ಪ್ರಾಚೀನ ಹಾಗೂ ಮೊದಲ ನಿವಾಸಿಗಳು ಎಂಬುದನ್ನು ಸೂಚಿಸುವುದಕ್ಕೆ ಬಳಸಲಾಗಿದೆ (ನಂಜಮ್ಮಣ್ಣಿ ೧೯೮೨-೨೯೮). ರಿವರ್ಸರವರ ಪ್ರಕಾರ “ಸರಳ ಸಾಮಾಜಿಕ ಗುಂಪಿನಿಂದ ಕೂಡಿದ ಸಾಮಾನ್ಯ ಭಾಷೆಯನ್ನು ಮಾತನಾಡುವ, ಯುದ್ಧದಲ್ಲಿ ಒಟ್ಟಿಗೆ ಕೆಲಸ ಮಾಡುವ ಮತ್ತು ಸಾಮಾನ್ಯ ಕೆಲಸಗಳಲ್ಲಿ ತೊಡಗುವ ಜನರಿಗೆ ಆದಿವಾಸಿ ಜನ”ರೆಂದು ಕರೆದಿದ್ದಾರೆ (ಗುರುಲಿಂಗಯ್ಯ. ಎಂ., ೨೦೦೪:೨).

ಡಿ.ಎನ್‌. ಮಜುಂದಾರ್ ರವರ ಪ್ರಕಾರ “ಸಾಮಾನ್ಯವಾದ ನಾಮಾಂಕಿತವನ್ನು ಹೊಂದಿರುವ, ಸದಸ್ಯರು ಒಂದೇ ಭೌಗೋಳಿಕ ನೆಲೆಯಲ್ಲಿ ವಾಸಿಸುವ, ಒಂದೇ ಭಾಷೆಯನ್ನು ಮಾತನಾಡುವ ಹಾಗೂ ಉದ್ಯೋಗ ಮತ್ತು ವಿವಾಹಕ್ಕೆ ಸಂಬಂಧಿಸಿದ ಕೆಲವು ನಿಷಿದ್ಧಗಳನ್ನು ಪಾಲಿಸುವ ಕುಟುಂಬಗಳ ಸಮೂಹವೇ ಬುಡಕಟ್ಟು” ಎಂದು ಕರೆದಿದ್ದಾರೆ. ಎಸ್‌.ಎಫ್‌.ನಾಡಲ್‌ರವರು “ಭಾಷೆ, ಸಂಸ್ಕೃತಿ ಮತ್ತು ರಾಜಕೀಯರ ಎಲ್ಲೆಯನ್ನು ಹೊಂದಿರುವ ಸಮಾಜವನ್ನು ಬುಡಕಟ್ಟು” ಎಂದು ಕರೆದಿದ್ದಾರೆ.

ಬುಡಕಟ್ಟುಗಳೆಂದರೆ ಯಾರು ಎಂಬುದಕ್ಕೆ “ಭಾರತದ ಇಂಪೀರಿಯರ್ ಗೆಜೆಟಿಯರ್, ಒಂದೇ ಹೆಸರನ್ನು ಹೊಂದಿರುವ, ಒಂದೇ ಭಾಷೆಯನ್ನು ಮಾತನಾಡುವ, ಒಂದೇ ಸ್ಥಳದಲ್ಲಿ ವಾಸ ಮಾಡುವ ಅಥವಾ ವಾಸಿಸಲು ಉದ್ಯುಕ್ತವಾಗಿರುವ, ಪೂರ್ವದಲ್ಲಿ ಒಳಪಂಗಡ, ವಿವಾಹ ಪದ್ಧತಿಗೆ ಬದ್ಧವಾಗಿದ್ದರಿಬಹುದಾದರೂ, ಈಗ ಹಾಗಿಲ್ಲದ ಕುಟುಂಬದ ಸಮೂಹವನ್ನು ಬುಡಕಟ್ಟು ಸಮಾಜ ಅಥವಾ ಆದಿವಾಸಿ ಸಮಾಜ” ಎನ್ನಬಹುದು.

ವಿಶಾಲ ಅರ್ಥದಲ್ಲಿ ಹೇಳುವುದಾದರೆ “ಒಂದು ಸಾಮಾನ್ಯ ಭೌಗೋಳಿಕ ಪ್ರದೇಶದಲ್ಲಿ ವಾಸವಿದ್ದು, ಒಂದೇ ತೆರನಾದ ಭಾಷೆಯನ್ನು ಮಾತನಾಡುವ ಮತ್ತು ಒಂದೇ ತೆರನಾದ ಸಂಸ್ಕೃತಿ ಅಥವಾ ಆಚರಣೆಗಳನ್ನು ಹೊಂದಿರುವ ಜನಾಂಗವನ್ನು ಆದಿವಾಸಿ ಅಥವಾ ಬುಡಕಟ್ಟು ಜನಾಂಗ”ವೆಂದು ಹೇಳಬಹುದು. ಒಟ್ಟಾರೆ ಒಂದು ದೇಶದ ಮೂಲ ನಿವಾಸಿಗಳನ್ನು ಮತ್ತು ದ್ರಾವಿಡ ಜನಾಂಗದ ಪೂರ್ವ ಜನರನ್ನು ಆದಿವಾಸಿ ಜನಾಂಗವೆಂದು ಭಾರತದಲ್ಲಿ ಗುರುತಿಸಲಾಗುತ್ತಿದೆ. “ಭಾರತ ಸಂವಿಧಾನದ ೩೪೨ನೇ ಕಲಮಿನಲ್ಲಿ ಆದಿವಾಸಿಗಳನ್ನು ಪರಶಿಷ್ಟ ಬುಡಕಟ್ಟುಗಳು ಎಂದು ಉಲ್ಲೇಖಿಸಿ ಸಂವಿಧಾನವು ೪೭೨ ಪರಿಶಿಷಟ ಬುಡಕಟ್ಟುಗಳಿಗೆ ಅಧಿಕೃತ ಮಾನ್ಯತೆಯನ್ನು ಕೊಟ್ಟಿದೆ”.

ಬುಡಕಟ್ಟು ಸಮುದಾಯಗಳ ಬಗ್ಗೆ ಮಾನವಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು ಮತ್ತು ಜಾನಪದ ವಿದ್ವಾಂಸರು ಅಧ್ಯಯನ ನಡೆಸಿ ಹಲವಾರು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಎಡ್ಗರ್ ಥರ್ಸ್ಟನ್‌ ಮತ್ತು ರಂಗಾಚಾರಿ.ಕೆ.(೧೯೦೯), ಎ.ಎ.ಡಿ.ಲೂಯಿಸ್‌ (೧೯೬೩), ಮಜುಂದಾರ್(೧೯೫೦), ನಾಡಲ್‌(೧೯೪೭), ನಂಜುಂಡಯ್ಯ ಮತ್ತು ಅನಂತಕೃಷ್ಣ ಅಯ್ಯರ್(೧೯೨೬) ನಿರ್ ಮಲ್‌ ಕುಮಾರ್ ಬೋಸ್‌(೧೯೪೭),ಎಲ್‌ವಿನ್‌ ವೆರಿಯರ್ ಘುರ್ರೆ‍(೧೯೫೯) ಇವರು ಬುಡಕಟ್ಟುಗಳ ಬಗ್ಗೆ ಸಂಶೋಧನೆ ಕೈಗೊಂಡು ಉತ್ತಮ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇತ್ತೀಚೆಗೆ ಯುವ ವಿದ್ವಾಂಸರು ಬುಡಕಟಟು ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದು, ಬುಡಕಟ್ಟು ಜನರ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿವಿಧ ಮಗ್ಗಲುಗಳನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿ ಕೃತಿಗಳನ್ನು ಪ್ರಕಟಿಸುತ್ತಿದ್ದಾರೆ (ಗುರುಲಿಂಗಯ್ಯ. ಎಂ. ೨೦೦೪:೪).

ಬುಡಕಟ್ಟು ಜನರು ತಮ್ಮದೇ ಆದ ಅನನ್ಯತೆಯನ್ನು ಹೊಂದಿದ್ದು, ಇತರೆ ಜಾತಿ ಜನರಿಗಿಂತ ಮತ್ತು ಗ್ರಾಮ ಹಾಗೂ ನಗರ ಸಂಸ್ಕೃತಿಯಿಂದ ಬೇರೆಯಾಗಿದ್ದಾರೆ. ಭಾರತದ ಬುಡಕಟ್ಟುಗಳು ಭಿನ್ನ ಭಿನ್ನ ಗುಣಲಕ್ಷಣಗಳನ್ನು ಹೊಂದಿವೆ. ನಿರ್ದಿಷ್ಟ ಭೂಪ್ರದೇಶ, ನಿರ್ದಿಷ್ಟ ಹೆಸರು, ಸಾಮಾನ್ಯ ಭಾಷೆ, ಒಳಪಂಗಡ ವಿವಾಹ ಪದ್ಧತಿ, ಒಂದೇ ಸಂಸ್ಕೃತಿ, ಒಂದೇ ಧರ್ಮ, ಒಂದೇ ರೀತಿಯ ರಾಜಕೀಯ ವ್ಯವಸ್ಥೆ ಇವುಗಳು ಬುಡಕಟ್ಟುಗಳ ಲಕ್ಷಣಗಳಾಗಿವೆ.

ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಬುಡಕಟ್ಟುಗಳನ್ನು ಹೊಂದಿರುವ ಆಫ್ರಿಕಾ ದೇಶವನ್ನು ಬಿಟ್ಟರೆ ಭಾರತ ದೇಶವು ಅತ್ಯಂತ ಹೆಚ್ಚು ಬುಡಕಟ್ಟುಗಳನ್ನು ಹೊಂದಿರುವ ಎರಡನೇ ದೇಶವಾಗಿದೆ. ೧೯೯೧ರ ಜನಗಣತಿಯ ಪ್ರಕಾರ ಭಾರತದಲ್ಲಿ ಬುಡಕಟ್ಟು ಜನರು ೬೮ ಮಿಲಿಯನ್‌ ಇದ್ದಾರೆ. ಅಂದರೆ, ದೇಶದ ಶೇಕಡ ೮.೦೮ರಷ್ಟು ಜನರು ಬುಡಕಟ್ಟು ಜನರಾಗಿದ್ದಾರೆ. ಭಾರತದಲ್ಲಿ ಸುಮಾರು ೬೩೦ಕ್ಕೂ ಹೆಚ್ಚು ಆದಿವಾಸಿ ಬುಡಕಟ್ಟುಗಳಿವೆ. ಇವರು ವಿವಿಧ ಭೌಗೋಳಿಕ ಪ್ರದೇಶ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾರೆ. ಈ ಬುಡಕಟ್ಟು ಜನರಲ್ಲಿ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ಕಾಣಬಹುದು. ಬೃಹತ್‌ ಬುಡಕಟ್ಟು ಜನಾಂಗವು ದೇಶಾದ್ಯಂತ ಹರಡಿದ್ದಾರೆ.

೧೯೯೧ರ ಜನಗಣತಿಯ ಪ್ರಕಾರ ಅತ್ಯಂತ ಅಧಿಕ ಸಂಖ್ಯೆಯಲ್ಲಿ ಬುಡಕಟ್ಟು ಜನರು ಮಧ್ಯಪ್ರದೇಶದಲ್ಲಿ (೧೫.೪ ಮಿಲಿಯನ್‌) ಕಂಡುಬರುತ್ತಾರೆ. ತದನಂತರ ಮಹಾರಾಷ್ಟ್ರ(೭.೩ ಮಿಲಿಯನ್‌), ಒರಿಸ್ಸಾ (೭ ಮಿಲಿಯನ್‌), ಬಿಹಾರ (೬.೬ ಮಿಲಿಯನ್‌) ಮತ್ತು ಗುಜರಾತ್‌ (೬.೧ ಮಿಲಿಯನ್‌) ರಾಜ್ಯಗಳು ಬರುತ್ತವೆ. ಮಿಜೋರಾಮ್‌, ನಾಗಾಲ್ಯಾಂಡ್‌, ಮೇಘಾಲಯ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಲ್ಲು ಬುಡಕಟ್ಟು ಜನರು ಆಯಾ ರಾಷ್ಟ್ರದ ಒಟ್ಟಾರೆ ಜನಸಂಖ್ಯೆಯ ಪ್ರತಿಶತ ಎಂಬತ್ತಕ್ಕಿಂತಲೂ ಅಧಿಕವಾಗಿದ್ದಾರೆ.

ಅತ್ಯಧಿಕ ಬುಡಕಟ್ಟು ಜನರೆಂದರೆ, ಗೊಂಡರು, ಇವರು ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ೪ ಮಿಲಿಯನ್‌ನಷ್ಟಿದ್ದಾರೆ. ರಾಜಸ್ಥಾನ, ಗುಜರಾತ್‌, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ ಭಿಲ್‌ರು ೪ ಮಿಲಿಯನ್‌ ಮತ್ತು ಬಿಹಾರ, ಒರಿಸ್ಸಾ, ಪಶ್ಚಿಮ ಬಂಗಾಳದಲ್ಲಿ ಸಂತಾಲರು ೩ ಮಿಲಿಯನ್‌ನಷ್ಟು ಕಂಡುಬರುತ್ತಾರೆ. ಭಾರತದ ಬಹುತೇಕ ಬುಡಕಟ್ಟು ಜನರು ತಮ್ಮಷ್ಟಕ್ಕೆ ತಾವೇ ತಾವು ಹಿಂದೂಗಳೆಂದು ಘೋಷಿಸಿಕೊಂಡಿದ್ದಾರೆ. ಧರ್ಮದ ಆಧಾರದ ಮೇಲೆ ಬುಡಕಟ್ಟು ಜನರನ್ನು ವಿಂಗಡಿಸುವುದಾದರೆ, ಪ್ರತಿಶತ ೮೯ರಷ್ಟು ಬುಡಕಟ್ಟುಗಳು ಹಿಂದುಗಳು, ೫.೫% ರಾಜ್ಯಕ್ರಿಶ್ಚಿಯನ್‌ರು, ೦.೩%ರಷ್ಟು ಜನರು ಬೌದ್ಧರು, ೦.೨%ರಷ್ಟು ಜನರು ಮುಸಲ್ಮಾನರು, ೫%ರಷ್ಟು ಜನರು ಇತರೆಯವರು ಆಗಿದ್ದಾರೆ.

ಮಾನವಶಾಸ್ತ್ರಜ್ಞರು, ಸಾಮಾಜಿಕ ಮಾನವಶಾಸ್ತ್ರಜ್ಞರು ಮತ್ತು ಸಮಾಜಶಾಸ್ತ್ರಜ್ಞರು ಬುಡಕಟ್ಟುಗಳನ್ನು ಅವರು ವಾಸಿಸುವ ಭೂಪ್ರದೇಶಗಳ, ಭಾಷೆಗಳ, ಜನಾಂಗಗಳ ಆಧಾರದ ಮೇಲೆ ವರ್ಗೀಕರಿಸಿದ್ದಾರೆ. ಪ್ರಸಿದ್ಧ ಮಾನವಶಾಸ್ತ್ರಜ್ಞರಾದ ಎಲ್‌.ಪಿ. ವಿದ್ಯಾರ್ಥಿಯವರು ಬುಡಕಟ್ಟುಗಳು ವಾಸಿಸುವ ಭೌಗೋಳಿಕ ಪ್ರದೇಶವನ್ನು ನಾಲ್ಕು ವಲಯಗಳನ್ನಾಗಿ ವಿಂಗಡಿಸಿದ್ದಾರೆ. ಅವುಗಳೆಂದರೆ, (೧) ಹಿಮಾಲಯ ಪ್ರದೇಶ, ೨) ಮಧ್ಯ ಭಾತ, (೩) ಪಶ್ಚಿಮ ಭಾರತ ಮತ್ತು (೪) ದಕ್ಷಿಣ ಭಾರತ.

ಭಾರತದ ಈ ವಲಯಗಳ ಬುಡಕಟ್ಟುಗಳ ಪೈಕಿ ದಕ್ಷಿಣ ವಲಯದ ಬುಡಕಟ್ಟುಗಳು ಅತ್ಯಂತ ಹಿಂದುಳಿದ ಮತ್ತು ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ ಬುಡಕಟ್ಟುಗಳಾಗಿವೆ. ಅಲ್ಲದೇ ಇನ್ನೂ ಪ್ರಾಚೀನ ಸ್ಥಿತಿಯಲ್ಲಿದ್ದಾರೆ ಎಂದರೆ ತಪ್ಪಾಗಲಾರದು. ಇಲ್ಲಿಯ ಬಹುತೇಕ ಬುಡಕಟ್ಟುಗಳು ಅಲೆಮಾರಿ ಜೀವನವನ್ನು ನಡೆಸುತ್ತಾರೆ. ದಕ್ಷಿಣವಲಯದ ಬುಡಕಟ್ಟುಗಳಲ್ಲಿ ಮಾತೃ ಪ್ರಧಾನ ಕುಟುಂಬಗಳು ಕಂಡುಬರುತ್ತವೆ. ಈ ವಲಯದಲ್ಲಿ ಕರ್ನಾಟಕದ ಬುಡಕಟ್ಟುಗಳ ವೈವಿಧ್ಯಗಳೊಂದಿಗೆ ಸಾಮ್ಯತೆ ಮತ್ತು ಅನನ್ಯತೆಯ ಲಕ್ಷಣಘಳನ್ನು ಹೊಂದಿವೆ. ಕರ್ನಾಟಕ ರಾಜ್ಯದಲ್ಲಿ ಬುಡಕಟ್ಟು ಜನರು ಬಯಲು ಸೀಮೆ, ಪಶ್ಚಿಮಘಟ್ಟ, ಕರಾವಳಿ ಮತ್ತು ಮಲೆನಾಡಿನ ತಪ್ಪಲು ಪ್ರದೇಶಗಳಲ್ಲಿ ಕಂಡುಬರುತ್ತಾರೆ. ೧೯೯೧ರ ಜನಗಣತಿಯ ಪ್ರಕಾರ ರಾಜ್ಯದ ಬುಡಕಟ್ಟು ಜನಸಂಖ್ಯೆ ೧೯,೧೫,೬೯೧. ಇವರು ರಾಜ್ಯದ ಒಟ್ಟು ಜನಸಂಖ್ಯೆ ಶೇಕಡ ೪.೨೬ರಷ್ಟಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಅಧಿಕೃತವಾಗಿ ೫೦ ಬುಡಕಟ್ಟುಗಳು ರಾಜ್ಯದಲ್ಲಿ ಇವೆ ಎಂದು ಸಮಾಜಶಾಸ್ತ್ರೀಯ ಮತ್ತು ಮಾನವಶಾಸ್ತ್ರೀಯ ಅಧ್ಯಯನಗಳಿಂದ ತಿಳಿದುಬಂದಿದೆ. ರಾಜ್ಯದಲ್ಲಿ ೧೯೬೧ ಮತ್ತು ೧೯೮೧ರ ನಡುವೆ ಬುಡಕಟ್ಟು ಜನಸಂಖ್ಯೆಯು ಬಹಳ ಹೆಚ್ಚಾಗಿದೆ. ಕರ್ನಾಟಕ ರಾಜ್ಯದಲ್ಲಿ ಬಳ್ಳಾರಿ, ಚಿತ್ರದುರ್ಗ, ಕೊಡಗು, ಕೋಲಾರ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಬುಡಕಟ್ಟು ಜನರು ಕಂಡುಬಂದರೆ, ನಂತರದ ಸ್ಥಾನ ಬೆಂಗಳೂರು, ಬೆಳಗಾವಿ, ಬೀದರ್, ಬಿಜಾಪುರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಗುಲಬರ್ಗಾ ಮತ್ತು ಶಿವಮೊಗ್ಗ ಜಿಲ್ಲೆಗಳದ್ದು, ಉತ್ತರ ಕನ್ನಡ ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಬುಡಕಟಟು ಜನರ ಸಂಖ್ಯೆ ಆಯಾ ಜಿಲ್ಲೆಯ ಶೇಕಡ ಒಂದರಷ್ಟಿದೆ.