ರಾಜ್ಯದ ಬುಡಕಟ್ಟುಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕಂಡುಬರುವ ಬುಡಕಟ್ಟುಗಳೆಂದರೆ ನಾಯಕಡ ಅಥವಾ ನಾಯಕ (೬೯%). ಇವರ ನಂತರ ಕಾಡುಕುರುಬರು ಶೇ.೧೧ರಷ್ಟಿದ್ದರೆ, ಮರಾಠಿ ನಾಯಕರು ಶೇಕಡ ನಾಲ್ಕರಷ್ಟಿದ್ದಾರೆ. ಉಳಿದಂತೆ ಗೊಂಡರು ಶೇಕಡ ಮೂರರಷ್ಟು, ಕೋಲಿಡಾರ್, ಜೇನುಕುರುಬ ಮತ್ತು ಕೋಯ ತಲಾ ಶೇ. ಎರಡರಷ್ಟು ಕಂಡುಬರುತ್ತಾರೆ. ಕಡಿಮೆ ಜನಸಂಖ್ಯೆ ರಾಜ್ಯದ ಬುಡಕಟ್ಟುಗಳೆಂದರೆ, ಯರವ, ಮೇದ, ಸೋಲಿಗ, ಮಲೆಕುಡಿಯ ಮತ್ತು ಹಸಲರು, ಇವರ ಪ್ರಮಾಣ ಶೇಕಡ ಒಂದು. ಕೊರಗರ ಜನಸಂಖ್ಯೆ ಶೇಕಡ ಒಂದಕ್ಕಿಂತಲೂ ಕಡಿಮೆ ಇದೆ.

ಬುಡಕಟ್ಟು ಸಮುದಾಯಗಳು ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ ಗುಂಪುಗಳಾಗಿದ್ದು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಮತ್ತು ರಾಜಕೀಯವಾಗಿ ಹಿಂದುಳಿದ ಅಂಚೀಕೃತ ಸಮುದಾಯಗಳಾಗಿವೆ.

ಬುಡಕಟ್ಟು ಜನರು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದವರಾಗಿರುತ್ತಾರೆ. ಇವರಲ್ಲಿ ಅಕ್ಷರಸ್ಥರ ಸಂಖ್ಯೆ ಶೇಕಡ ಹತ್ತಕ್ಕಿಂತಲೂ ಕಡಿಮೆ ಇದೆ. ಇವರು ಔಪಚಾರಿಕ ಶಿಕ್ಷಣ ಸಂಸ್ಥೆಗಳಾದ ಶಾಲೆ, ಕಾಲೇಜುಗಳಿಗೆ ಹೋಗುವುದೇ ಕಡಿಮೆ. ಸಾಮಾನ್ಯವಾಗಿ ಬುಡಕಟ್ಟು ಜನರು ತಮ್ಮ ಶಿಕ್ಷಣವನ್ನು ದಿನನಿತ್ಯದ ಸಾಮಾಜಿಕ, ಆರ್ಥಿಕ ಚಟುವಟಿಕೆಗಳಿಂದಲೇ ಅನೌಪಚಾರಿಕವಾಗಿ ಪಡೆಯುತ್ತಾರೆ. ಇತ್ತೀಚಿಗೆ ಅಲ್ಲೊಬ್ಬ ಆದಿವಾಸಿ ಮಕ್ಕಳು ಶಾಲೆಗೆ ಕಲಿಯಲು ಹೋಗುತ್ತಿದ್ದಾರೆ.

ಆರ್ಥಿಕ ಹಿಂದುಳಿದಿರುವಿಕೆಯು ಬುಡಕಟ್ಟು ಜನರ ಪ್ರಮುಖ ಲಕ್ಷಣವಾಗಿದೆ. ಬುಡಕಟ್ಟು ಜನರಲ್ಲಿ ಶ್ರೀಮಂತರು ಇಲ್ಲವೇ ಇಲ್ಲ. ಇವರ ಶ್ರೀಮಂತಿಕೆ ನಿರ್ಧಾರವಾಗುವುದು ಇವರ ಸಾಂಸ್ಕೃತಿಕ ಶ್ರೀಮಂತಿಕೆಯಿಂದ. ಬುಡಕಟ್ಟು ಜನರು ಕಾಡುಗಳಲ್ಲಿ ವಾಸಿಸುವುದರಿಂದ ಅನೇಕ ನಾಗರಿಕ ಸವಲತ್ತುಗಳಿಂಧ ವಂಚಿತರಾಗಿದ್ದು, ಇವರಿಗೆ ಯಾವುದೇ ಅಧಿಕ ಆರ್ಥಿಕ ಮೂಲ ಇರುವುದಿಲ್ಲ. ಬುಡಕಟ್ಟು ಜನರು ಭೂರಹಿತ ಜನರಾಗಿದ್ದಾರೆ. ಇವರಿಗೆ ಯಾವುದೇ ಅಧಿಕ ಆರ್ಥಿಕ ಮೂಲ ಇರುವುದಿಲ್ಲ. ಬುಡಕಟ್ಟು ಜನರ ಆರ್ಥಿಕ ಹಿಂದುಳಿದಿರುವಿಕೆ ಇವರ ಶೈಕ್ಷಣಿಕ ಹಿಂದುಳಿದಿರುವಿಕೆಗೆ ಕಾರಣವಾಗಿದೆ. ಭಾರತದಲ್ಲಿ ಶೇಕಡ ಎಂಭತ್ತೈದರಷ್ಟು ಬುಡಕಟ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದರೆ ಆಶ್ಚರ್ಯವಾಗುವುದಾದರೂ ಸತ್ಯ ಸಂಗತಿ.

ಭಾರತದ ಬುಡಕಟ್ಟುಗಳ ಆರ್ಥಿಕತೆ ಸರಳವಾದುದು. ಬಹುತೇಕ ಭಾರತದ ಬುಡಕಟ್ಟುಗಳು ಅರ್ಥಿಕವಾಗಿ ಹಿಂದುಳಿದವುಗಳಾಗಿವೆ. ಬುಡಕಟಟುಗಳ ಪ್ರಾಚೀನ ಆರ್ಥಿಕ ಜೀವನ ಹಣದ ಚಲಾವಣೆಯಿಂದ ಮುಕ್ತವಾಗಿತ್ತು. ಅಲ್ಲಿ ಆರ್ಥಿಕ ಚಟುವಟಿಕೆಗಳು ಸಂಕೀರ್ಣವಾಗಿರದೆ ಸರಳವಾಗಿದ್ದವು. ಅಂತಹ ಸಮಾಜದಲ್ಲಿ ಬುಡಕಟ್ಟು ಜನರು ತಮ್ಮ ಜೀವನ ನಿರ್ವಹಣೆಗೆ ಹಣ್ಣು ಹಂಪಲು, ಗೆಡ್ಡೆ ಗೆಣಸು ಸಂಗ್ರಹಿಸಿ ಮತ್ತು ಮೀನು ಹಿಡಿದು ಬೇಟೆಯಾಡಿ ಜೀವನ ಮಾಡುತ್ತಿದ್ದರು. ದವಸ ಧಾನ್ಯಗಳನ್ನು ಬೆಳೆಯದಿದ್ದಂತಹ ಕಾಲದಲ್ಲಿ ಬೇಟೆಯಾಡುವುದು ಮತ್ತು ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುವುದು ಬುಡಕಟ್ಟುಗಳ ಮುಖ್ಯವಾದ ಕಸುಬುಗಳಾಗಿದ್ದವು. ಕೊಚ್ಚಿನ್ನಿನ ಕಾಡರ್, ಮಲಾಪತ್ರಂ, ಪೆಲಿಯನ್‌, ಪಣಿಯನ್‌, ಇರುಳಾ, ತಮಿಳುನಾಡಿನ ಕುರುಂಬ, ಆಂಧ್ರಪ್ರದೇಶದ ಚೆಂಚು, ಬಿಹಾರದ ಬಿರ್ ಹಾರ್’ ಮತ್ತು ಕಾರಿಯಂ, ಕಾಮಾರ್, ಬೈಗಾ, ಮಧ್ಯಪ್ರದೇಶದ ಅಹುಜ್‌ ಮರಿಯಾ ಬುಡಕಟ್ಟುಗಳ ಮೇಲೆ ಹೇಳಿದ ಕಸುಬುಗಳಿಂದ ಜೀವನ ಸಾಗಿಸುತ್ತಿದ್ದರು.

ಕೆಲವು ಭಾರತದ ಬುಡಕಟ್ಟುಗಳು ಸ್ಥಳಾಂತರ ಬೇಸಾಯ ಕ್ರಮವನ್ನು ಅನುಸರಿಸುತ್ತಾರೆ. ಉತ್ತರ ಈಶಾನ್ಯ ವಲಯದ ಲೋತಾ, ಆಗಮನಾಗ, ಖಾಸೀ ಮತ್ತು ಕುಕಿ ಬುಡಕಟ್ಟುಗಳು, ಮಧ್ಯಪ್ರದೇಶದ ಬೈಗಾ ಮತ್ತು ಗೊಂಡಾ ಬುಡಕಟ್ಟುಗಳು ಸ್ಥಳಾಂತರ ಬೇಸಾಯ ಕ್ರಮವನ್ನು ಅನುಸರಿಸುತ್ತಿವೆ. ಈ ರೀತಿಯ ಬೇಸಾಯ ಪದ್ಧತಿಯು ಉತ್ತರ ಈಶಾನ್ಯ ಪ್ರದೇಶ, ಒರಿಸ್ಸಾ, ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಕಂಡುಬರುತ್ತದೆ. ಕೃಷಿಯು ಒಂದು ಮುಖ್ಯವಾದ ಆರ್ಥಿಕ ನಿರ್ವಹಣೆಯ ಕಸುಬಾಗಿದ್ದು, ಬಹುತೇಕ ಭಾರತದ ಬುಡಕಟ್ಟು ಜನರು ವ್ಯವಸಾಯದಲ್ಲಿ ತೊಡಗಿದ್ದಾರೆ. ಬುಡಕಟ್ಟು ಜನರು ಸಣ್ಣ ಭೂಹಿಡುವಳಿಗಳನ್ನು ಹೊಂದಿದ್ದು, ತಮ್ಮ ಜೀವನ ನಿರ್ವಹಣೆಗೆ ವ್ಯವಸಾಯವನ್ನು ಅವಲಂಬಿಸಿದ್ದಾರೆ. ಮಿಜೋರಾಂನ ಮಿಜೋಗಳು ಮತ್ತು ಅರುಣಾಚಲ ಪ್ರದೇಶ ಅಪಟಾನಿಗಳು ಸ್ಥಳಾಂತರಿ ಕೃಷಿ ಪದ್ಧತಿಯನ್ನು ಬಿಟ್ಟು ಸಾಮಾನ್ಯ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಉಳಿದಂತೆ ಸಂತಾಲರು, ಒರಾನ್‌, ಹೋ, ಕೊರವ, ಗೊಂಡಾ, ಭಿಲ್‌, ಬಿಲಾರ್, ಬಡಗಾ ಮತ್ತು ದಕ್ಷಿಣ ಭಾರತದ ಬಹುತೇಕ ಬುಡಕಟ್ಟುಗಳು ಉತ್ತಮ ಕೃಷಿಕರಾಗಿ ಹೊರಹೊಮ್ಮಿದ್ದಾರೆ.

ಪಶುಪಾಲನೆಯು ಬುಡಕಟ್ಟುಗಳ ಸಾಂಪ್ರದಾಯಿಕ ಕಸುಬು. ಇದು ಬುಡಕಟ್ಟುಗಳ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಹಾಸುಹೊಕ್ಕಾಗಿದೆ. ನೀಲಗಿರಿಯ ತೋಡರು ಎಮ್ಮೆಗಳನ್ನು ಸಾಕುತ್ತಾರೆ ಮತ್ತು ಪೂಜಿಸುತ್ತಾರೆ. ಹಾಲು ಮತ್ತು ಅದರ ಉತ್ಪನ್ನಗಳನ್ನು ಮಾರಿ ಇವರು ಜೀವನ ನಡೆಸುತ್ತಾರೆ. ಹಾಲು ಮತ್ತು ಅದರ ಉತ್ಪನ್ನಗಳನ್ನು ಮಾರಿ ಇವರು ಜೀವನ ನಡೆಸುತ್ತಾರೆ. ಕರ್ನಾಟಕದ ಕಾಡುಗೊಲ್ಲರು ಪಶುಪಾಲನೆ ಮತ್ತು ಕುರಿ ಸಾಕಣೆಯನ್ನು ತಮ್ಮ ಮುಖ್ಯ ಕುಲಕಸುಬಾಗಿಸಿಕೊಂಡಿದ್ದಾರೆ. ಇತ್ತೀಚೆಗೆ ಇತರೆ ಸಮುದಾಯಗಳ ಜನರ ಸಂಪರ್ಕದಿಂದಾಗಿ ಕುರಿಸಾಕಣೆ ಮತ್ತು ಪಶುಪಾಲನೆ ಕ್ರಮೇಣ ಕಡಿಮೆಯಾಗುತ್ತಿದೆ. ಇದೇ ರೀತಿ ಹಿಮಾಚಲ ಪ್ರದೇಶದ ಗುಜ್ಜಾರರು ದನ, ಎಮ್ಮೆ, ಮತ್ತು ಕುರಿಸಾಕಣೆಯಲ್ಲಿ ಪರಿಣಿತರಾಗಿದ್ದಾರೆ. ಕೆಲವು ಬುಡಕಟ್ಟುಗಳು ಕರಕುಶಲ ಕಲೆಯಲ್ಲಿ ನಿಪುಣರಾಗಿದ್ದು, ತಮ್ಮ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಅಲ್ಲದೇ ತಮ್ಮ ಆರ್ಥಿಕ ಜೀವನಕ್ಕೆ ಇದನ್ನು ಉಪಯೋಗಿಸುತ್ತಾರೆ. ಮರಿಯ ಗೊಂಡಾ, ಸೌರಾಸ್‌, ಇರುಳಾ ಬುಡಕಟ್ಟು ಜನರು ಬಿದಿರಿನಿಂದ ಬುಟ್ಟಿ ಹೆಣೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಸಂತಾಲರು, ಗೊಂಡರು ಇನ್ನೂ ಕೆಲವು ಬುಡಕಟ್ಟುಗಳು ಕೈಗಾರಿಕಾ ಕಾರ್ಮಿಕರಾಗಿ ವಿವಿಧ ಪ್ಲಾಂಟೇಷನ್‌ಗಳಲ್ಲಿ ದುಡಿಯುತ್ತಿದ್ದಾರೆ. ಇತ್ತೀಚೆಗೆ ಬುಡಕಟ್ಟುಗಳು, ಆಧುನೀಕರಣದ ಪ್ರಭಾವದಿಂದಾಗಿ ತಮ್ಮ ಬುಡಕಟ್ಟು ಕುಲಕಸುಬುಗಳನ್ನು ಬಿಟ್ಟು ವ್ಯವಸಾಯ ಮತ್ತು ಇತರೆ ಅಸಾಂಪ್ರದಾಯಿಕ ಉದ್ಯೋಗಗಳತ್ತ ವಾಲುತ್ತಿರುವುದನ್ನು ಕಾಣಬಹುದು. ಆದಾಗ್ಯೂ ಬಹುತೇಕ ಭಾರತದ ಬುಡಕಟ್ಟುಗಳು ಇನ್ನೂ ತಮ್ಮ ಸಾಂಪ್ರದಾಯಿಕ ಕಸುಬನ್ನು ಮುಂದುವರೆಸಿಕೊಂಡು ಬರುತ್ತಿರುವುದನ್ನು ಕಾಣಬಹುದು.

ಜಾತಿ ವ್ಯವಸ್ಥೆಯ ಪ್ರಭಾವ, ಅರಣ್ಯ ನಾಶ, ನಗರೀಕರಣ, ಅಭಿವೃದ್ಧಿಯ ನೆಪದಲ್ಲಿ ಬರುವ ಕಾರ್ಯಕ್ರಮಗಳು, ಆಧುನೀಕರಣ ಪ್ರಕ್ರಿಯೆ ಇತ್ಯಾದಿಗಳು ಬುಡಕಟ್ಟುಗಳ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಜೀವನದ ಮೇಲೆ ಪ್ರಭಾವ ಬೀರಿವೆ ಎಂದರೆ ತಪ್ಪಾಗಲಾರದು. ಇಂದು ಬುಡಕಟ್ಟು ಜನರ ವಿವಾಹಕ್ರಮ, ಕುಟುಂಬ ಪದ್ಧತಿ, ಆಹಾರ, ವೇಷಭೂಷಣ, ಕಸುಬು, ಧಾರ್ಮಿಕ ಅಂಶಗಳು ಆಧುನಿಕ ಬದಲಾವಣೆಯ ಗಾಳಿಗೆ ಸಿಲುಕಿ ತಮ್ಮ ಅನನ್ಯತೆಯನ್ನು ಕಳೆದುಕೊಳ್ಳುತ್ತಿವೆ. ಇಂದು ಬುಡಕಟ್ಟು ಜನರು ಬುಡಕಟ್ಟು ಜನರಾಗಿ ಉಳಿಯದೆ ಜಾತಿ ವ್ಯವಸ್ಥೆಯ ಸಾಮಾಜಿಕ ಸಾಂಸ್ಕೃತಿಕ ಅಂಶಗಳನ್ನು ಅನುಕರಿಸಲು ಪ್ರಾರಂಭಿಸಿದ್ದಾರೆ. ಈ ಒಂದು ಪ್ರಕ್ರಿಯೆ ಸಂಚಲನೆ ದೃಷ್ಟಿಯಿಂದ ಕನಿಷ್ಟ ಮಟ್ಟಿಗಾದರೂ ಬುಡಕಟಟು ಧರ್ಮ, ಕಲೆ, ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವುದು ಈಗಿನ ಆದ್ಯ ಕರ್ತವ್ಯ. ಇಷ್ಟಾದರೂ, ಇಂದಿಗು ಬುಡಕಟ್ಟು ಜನರು ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ ಗುಂಪುಗಳಾಗಿಯೇ ಉಳಿದಿದ್ದಾರೆ.

ಸಾಮಾಜಿಕ ಹೊರತಳ್ಳುವಿಕೆ, ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯಗಳು

ಭಾರತೀಯ ಸಮುದಾಯಗಳಲ್ಲಿ ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳು ಅತ್ಯಂತ ಹೆಚ್ಚಿನ ರೀತಿಯ ಸಾಮಾಜಿಕ ಹೊರತಳ್ಳುವಿಕೆ (Social Exclusion)ಯ ಪ್ರಕ್ರಿಯೆಗೆ ಒಳಗಾಗಿರುವಂತಹವು. ಈ ಸಮುದಾಯಗಳು ಇತರೆ ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ ಸಮುದಾಯಗಳಿಗಿಂತ ಹೆಚ್ಚಿನ ರೀತಿಯ ಅಂಚೀಕೃತಗೊಂಡ ಸಮುದಾಯಗಳಾಗಿವೆ. ಅರೆ-ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳು ಭಾರತೀಯ ಸಮಾಜದ ಭಾಗವಾಗಿದ್ದರೂ, ನೆಲೆ ಇಲ್ಲದೆ, ಯಾವುದೇ ರೀತಿಯ ಅಸ್ತಿತ್ವವಿಲ್ಲದೆ ಮತ್ತು ಯಾವ ರೀತಿಯಿಂದಲೂ ಗುರುತಿಸಲ್ಪಡದ ಸಮುದಾಯಗಳಾಗಿಯೇ ಉಳಿದು ಸಮಾಜದಿಂದ ಹೊರತಳ್ಳಲ್ಪಟ್ಟ (Socially Excluded) ಗುಂಪುಗಳಾಗಿಯೇ ಉಳಿದಿದೆ. ದೇಶಾದ್ಯಂತ ಸುಮಾರು ೧೨ ಕೋಟಿಗೂ ಹೆಚ್ಚಿರುವ ಈ ಸಮುದಾಯಗಳು ಎಲ್ಲಾ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಾರೆ. ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳು, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಾಗಿದ್ದು, ಸಮಾನಪದದಿಂದಲೂ ನಿರಾಕರಣೆಗೆ ಒಳಗಾದಂತಹ ಗುಂಪುಗಳಾಗಿವೆ.

ಪರಿಕಲ್ಪನೆ

ಮಾನವ ಶಾಸ್ತ್ರಜ್ಞರು ಪ್ರಾರಂಭದಲ್ಲಿ ಪಶುಪಾಲನೆಯ ಹಿನ್ನೆಲೆಯುಳ್ಳವರನ್ನು ಮಾತ್ರ ಅಲೆಮಾರಿ ಸಮುದಾಯದವರೆಂದು ಗುರುತಿಸಿದ್ದರು. ಎನ್‌ಸೈಕ್ಲೋಪೀಡಿಯಾ ಆಫ್‌ ಬ್ರಿಟಾನಿಕಾದ ಪ್ರಕಾಋ ಅಲೆಮಾರಿತನವು ಒಂದು ಜೀವನ ವಿಧಾನ. ಬೇಟೆ ಮತ್ತು ಆಹಾರ ಸಂಗ್ರಹಣೆ, ಪಶುಪಾಲನೆ ಅಥವಾ ವ್ಯಾಪಾರಕ್ಕಾಗಿ ಮಾನವ ಒಂದೆಡೆ ನೆಲೆಯೂರದೇ, ದಿಕ್ಕು ದೆಸೆಯಿಲ್ಲದೆ ಅಥವಾ ಕಾಲಾನುಕ್ರಮಾನುಸಾರದ ಅಲೆಯುವಿಕೆಯನ್ನು ಅಲೆಮಾರಿತನ ಎನ್ನಲಾಗುತ್ತದೆ ಎಂದು ಅರ್ಥೈಸಿದೆ. ಇದು ವಲಸೆ ಪ್ರಕ್ರಿಯೆಗಿಂತ ಅತ್ಯಂತ ಭಿನ್ನವಾದುದಾಗಿದೆ.

ಪಶುಪಾಲನೆ ಅಥವಾ ಇತರೆ ಕಸುಬುಗಳ ಹಿನ್ನೆಲೆಯ ಸಮುದಾಯಗಳು ಕಾಲಾಂತರದಲ್ಲಿ ಅಲ್ಲಲ್ಲಿ ಸ್ಥಾಯಿಯಾಗಿ ನೆಲೆನಿಂತರೂ ಪಶು ಸಂಗೋಪನೆಗಾಗಿ ಅಥವಾ ಇತರೆ ಕಸುಬುಗಳ ನಿರ್ವಹಣೆಗಾಗಿ ಅಲೆಮಾರಿತನ ಅನಿವಾರ್ಯವಾಗಿ ಮುಂದುವರಿಸುವವರು. ಇಂತಹ ಸಮುದಾಯಗಳನ್ನು ಅರೆ-ಅಲೆಮಾರಿ ಸಮುದಾಯ (Semi-Nomadic) ಗಳೆಂದು ಕರೆಯುತ್ತಾರೆ.

ಅಲೆಮಾರಿ ಎಂಬ ಪದಕ್ಕೆ ತಮಿಳಿನಲ್ಲಿ ಪೊಕ್ಕನ್‌, ತುಳುವಿನಲ್ಲಿ ತೆಂಡುಳಿ, ತೆಲುಗಿನಲ್ಲಿ ತಿರುಗುಬೋತು, ಮಲೆಯಾಳಂನಲ್ಲಿ ತೆಂಟಿ, ಮರಾಠಿಯಲ್ಲಿ ಭಟಕ್ಯಾ, ಹಿಂದಿಯಲ್ಲಿ ಸಂಚಾರಿ, ಘುಮಾಂತು, ಗ್ರೀಕಿನಲ್ಲಿ ಮೆಮಿನ್‌ (Memein), ಲ್ಯಾಟಿನ್ ನಲ್ಲಿ ನೋಮಾಸ್‌ (Nomas), ಇಂಗ್ಲೀಷ್‌ನಲ್ಲಿ ನೋಮ್ಯಾಡ್‌(Nomad) ಜೊತೆಗೆ ಪರದೇಶಿ, ನೆಲೆಯಿಲ್ಲದವರು, ದೇಶಸಂಚಾರಿಗಳು, ಪರಸ್ಥಳದವರು, ಹೊರಗಡೆಯವರು ಎಂಬ ಇತ್ಯಾದಿ ಹೆಸರುಗಳಿಂದಲೂ ಕರೆಯುತ್ತಾರೆ.

ಅಲೆಮಾರಿ ಹಾಗೂ ಅರೆ-ಅಲೆಮಾರಿ ಬುಡಕಟ್ಟುಗಳಿಗೆ ಭಾರತ ಸರ್ಕಾರ ಅಧಿಕೃತವಾಗಿ ಯಾವ ವ್ಯಾಖ್ಯಾನವನ್ನು ನೀಡಿಲ್ಲ. ೧೯೩೧ರ ಭಾರತದ ಜನಗಣತಿಯಲ್ಲಿ ಮಾಡಲಾದ ಅಲೆಮಾರಿ ಬುಡಕಟ್ಟುಗಳ ಪಟ್ಟಿಯನ್ನು ಮಾತ್ರ ವಿಶ್ವಾಸನೀಯ ದಾಖಲೆ ಎಂದು ಹೇಳಬಹುದು. ೧೯೩೧ರ ಜನಗಣತಿಯಲ್ಲಿ ಅಲೆಮಾರಿ ಹಾಗೂ ಅರೆ-ಅಲೆಮಾರಿ ಬುಡಕಟ್ಟು ಹಾಗೂ ಸಮುದಾಯಗಳನ್ನು ಗುರುತಿಸಿ ದಾಖಲಿಸಲಾಗಿದೆ. ಇವುಗಳು ಭಾರತದ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುವುದಾದರೆ ಅವುಗಳನ್ನೇ ಅಲೆಮಾರಿ ಅಥವಾ ಅರೆಅಲೆಮಾರಿ ಸಮುದಾಯಗಳೆಂದು ಗುರುತಿಸಬಹುದು.

ಸಾಮಾನ್ಯವಾಗಿ ಅಲೆಮಾರಿ ಮತ್ತು ಅರೆ-ಅಲೆಮಾರಿಗಳೆಂದರೆ -ಯಾರು, ತಮ್ಮ ದಿನನಿತ್ಯದ ಆಹಾರಕ್ಕಾಗಿ ಹಾಗೂ ತಮ್ಮ ಪಶು-ಪ್ರಾಣಿಗಳಿಗೆ ಆಹಾರಕ್ಕಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಗಳಿಗೆ ಸ್ಥಳಾಂತರಗೊಂಡು ಶಾಶ್ವತ ನೆಲೆಯಿಲ್ಲದೆ ಕಷ್ಟ ಜೀವನವನ್ನು ನಡೆಸುತ್ತಿದ್ದಾರೋ ಅವರನ್ನು ಅಲೆಮಾರಿಗಳೆಂದು ಕರೆಯಬಹುದಾಗಿದೆ. ಮತ್ತೊಂದು ಅರ್ಥದಲ್ಲಿ ಅಲೆಮಾರಿತನವನ್ನು ಈ ರೀತಿ ವ್ಯಾಖ್ಯಾನಿಸಬಹುದು. “ಪಶುಪಾಲನೆ, ಕೃಷಿ, ಅಥವಾ ವ್ಯಾಪಾರ ಮತ್ತು ವಾಣಿಜ್ಯ ಇವುಗಳ ಆಧಾರದ ಮೇಲೆ ಆರ್ಥಿಕತೆಯಿಂದ ಕೂಡಿದ ಭೌತಿಕ ಚಲನೆಗೆ ಅಲೆಮಾರಿತನ ಎನ್ನಬಹುದು. (Physical movement combined with economics based on pastoralism, foraging, agriculture or trade).

ಅಲೆಮಾರಿ ಸಮುದಾಯಗಳನ್ನು ಸಾಮಾನ್ಯವಾಗಿ ಪಶುಪಾಲನಾ ವೃತ್ತಿಯ ಅಲೆಮಾರಿಗಳು, ಬೇಟೆ ಮತ್ತು ಆಹಾರ ಸಂಗ್ರಹಿಸುವ ಅಲೆಮಾರಿಗಳು ಮತ್ತು ಊರೂರು ತಿರುಗುವ ಅಲೆಮಾರಿಗಳು ಎಂಬುದಾಗಿ ವಿಂಗಡಿಸಬಹುದಾಗಿದೆ.

ಇಡೀ ವಿಶ್ವದಾದ್ಯಂತ ಅಲೆಮಾರಿ ಸಮುದಾಯಗಳು ಹಂಚಿಹೋಗಿದ್ದಾರೆ. ವಿಶ್ವಸಂಸ್ಥೆಯ ಇತ್ತೀಚಿನ ಒಂದು ಅಂದಾಜಿನ ಪ್ರಕಾರ ವಿಶ್ವದಲ್ಲಿ ಶೇಕಡ ೨೦ರಷ್ಟು ಜನ ಅಲೆಮಾರಿ ಗುಂಪುಗಳಿಗೆ ಸೇರಿದ್ದವರಾಗಿದ್ದಾಋಎ ಎಂಬುದಾಗಿ ತಿಳಿದುಬಂದಿದೆ. ರಾಷ್ಟ್ರೀಯ ಅಲೆಮಾರಿ ಮತ್ತು ಅರೆ-ಅಲೆಮಾರಿ ಆಯೋಗದ ಪ್ರಕಾರ ಭಾರತದ ೨೩ ರಾಜ್ಯಗಳಲ್ಲಿ ಮತ್ತು ೫ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು ೭೪೯ ವಿಮುಕ್ತ ಮತ್ತು ಅಲೆಮಾರಿ ಸಮುದಾಯಗಳಿವೆ. ಪ್ರಸ್ತುತ ಭಾರತದಲ್ಲಿ ಇವುಗಳ ಒಟ್ಟು ಜನಸಂಖ್ಯೆ ಸುಮರು ೧೨ ಕೋಟಿಯನ್ನು ಮೀರಿದೆ. ಅಂದರೆ, ಭಾರತದ ಒಟ್ಟು ಜನಸಂಖ್ಯೆಯ ಶೇಕಡ ೧೨ರಷ್ಟು ಜನ ಅಲೆಮಾರಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಅತ್ಯಧಿಕ ಅಂದರೆ ೭೩ ಅಲೆಮಾರಿ ಸಮುದಾಯಗಳು ಗುರುತಿಸಲ್ಪಟ್ಟರೆ, ಎರಡನೇ ರಾಜ್ಯ ಕರ್ನಾಟಕದಲ್ಲಿ ೫೬ ಸಮುದಾಯಗಳು ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳೆಂದು ಕರೆಯಲ್ಪಟ್ಟಿವೆ.

ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಸಮುದಾಯಗಳಾಗಿ ಗುರುತಿಸಿಕೊಳ್ಳುತ್ತಾರೆ. ಈ ಸಮುದಾಯಗಳು ಬೇರೆ ಬೇರೆ ವೃತ್ತಿಯಲ್ಲಿ ತೊಡಗಿಸಿಕೊಂಡಿವೆ. ಕೆಲವು ಸಮುದಾಯಗಳು ಪಶುಪಾಲನೆಯ ವೃತ್ತಿಯನ್ನು ಮುಂದುವರಿಸಿಕೊಂಡು ಬಂದರೆ, ಕೆಲವು ಸಮುದಾಯಗಳು ಭಿಕ್ಷಾಟನೆಯನ್ನು ತಮ್ಮ ಮೂಲ ವೃತ್ತಿಯನ್ನಾಗಿಸಿ ಕೊಂಡಿದ್ದಾರೆ. ಗುಜ್ಜಾರರು, ಕಾಶ್ಮೀರದ ಕುರುಬರು, ಕರ್ನಾಟಕದ ಅಲೆಮಾರಿ ಕುರುಬರು, ಕಾಡುಗೊಲ್ಲರು, ಹಿಮಾಚಲ ಪ್ರದೇಶದ ಗಡ್ಡಿ ಜನರು, ಬಕ್ಕವಾಲ ಮತ್ತು ಚಂಗ್‌ವಾ ಜನರು ಪಶುಪಾಲನೆಯ ಅಲೆಮಾರಿಗಳಾಗಿದ್ದಾರೆ. ಬಿಹಾರದ ರಬಾರಿ ಸಮುದಾಯದವರು ಸಹ ಪಶುಪಾಲನೆಯ ಅಲೆಮಾರಿ ಸಮುದಾಯದವರಾಗಿದ್ದಾರೆ. ಕೆಲವು ಸಮುದಾಯಗಳು ಬೇಟೆಯಾಧಾರಿತ ಅಲೆಮಾರಿ ಸಮುದಾಯಗಳಾಗಿದ್ದಾರೆ. ಕೆಲವು ಅಲೆಮಾರಿ ಸಮುದಾಯಗಳು, ಕೂಲಿಕಾರ್ಮಿಕರಾಗಿ, ಕೃಷಿಕಾರ್ಮಿಕರಾಗಿ ಮತ್ತು ಇತರೆ ಸಣ್ಣಪುಟ್ಟ ಕೆಲಸಗಳಲ್ಲಿ ನಿರತರಾಗಿದ್ದಾರೆ.

ಅಲೆಮಾರಿ ಸಮುದಾಯಗಳು ಮತ್ತು ಸಾಮಾಜಿಕ ಹೊರತಳ್ಳುವಿಕೆ

. ಸಾಮಾಜಿಕ ಸ್ಥಿತಿಗತಿ

ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳು, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹೊರತಳ್ಳಲ್ಪಟ್ಟ ಗುಂಪುಗಳಾಗಿವೆ. ಇವರಲ್ಲಿ ಶಿಕ್ಷಣವಂತರು ಇಲ್ಲವೇ ಇಲ್ಲ. ಇವರ ಸಾಕ್ಷರತೆ ಪ್ರಮಾಣ ಶೇಕಡ ಒಂದಕ್ಕಿಂತ ಕಡಿಮೆ. ಇವರು ಶಾಲೆಯ ಮೆಟ್ಟಿಲನ್ನೇ ತುಳಿದಿಲ್ಲ. ಕಾರಣವೇನೆಂದರೆ ಇವರು ಹೆಸರೇ ಸೂಚಿಸುವಂತೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಲೆಮಾರಿಗಳಾಗಿ ಸ್ಥಳಾಂತರ ಮಾಡುವುದರಿಂದ ಇವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗುವುದಿಲ್ಲ. ಉನ್ನತ ಶಿಕ್ಷಣವಂತೂ ಕನಸಿನ ಮಾತೇ. ಇವರಲ್ಲಿ ಒಬ್ಬ ಪದವೀಧರರಿಲ್ಲದಿರುವುದು ಇವರು ಶಿಕ್ಷಣದಲ್ಲಿ ಹಿಂದುಳಿದಿರುವುದಕ್ಕೆ ಕಾರಣವಾಗಿದೆ. ಉನ್ನತ ಶಿಕ್ಷಣ, ವಿಶ್ವವಿದ್ಯಾನಿಲಯಗಳ ಸಂಖ್ಯೆಯಲ್ಲಿ ಹೆಚ್ಚಳ, ವಿದೇಶಿ ವಿಶ್ವವಿದ್ಯಾನಿಲಯಗಳು, ಜಾಗತೀಕರಣದ ಪರಿಣಾಮಗಳೇ ಆಗಿವೆ. ಆದರೂ ಅಲೆಮಾರಿಗಳು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದವರಾಗಿದ್ದಾರೆ.

ಬಹುತೇಕ ಅಲೆಮಾರಿ ಸಮುದಾಯಗಳನ್ನು ಇಂದು ಕಳಂಕಿತ ಮತ್ತು ಅನುಮಾನದಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ. ವಿಮುಕ್ತ ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳನ್ನು ಅಪರಾಧಿ ಸಮುದಾಯಗಳೆಂದು ಜನರು ಮತ್ತು ಪೊಲೀಸಿನವರು ಅನುಮಾನ ಪಡುವ ಸ್ಥಿತಿಯನ್ನು ನೋಡಬಹುದಾಗಿದೆ.

. ಅರ್ಥಿಕ ಸ್ಥಿತಿಗತಿಗಳು

ಅಲೆಮಾರಿ ಸಮುದಾಯಗಳು ಆರ್ಥಿಕವಾಗಿ ಬಹಳ ಹಿಂದುಳಿದಿದ್ದಾರೆ. ಕಿತ್ತು ತಿನ್ನುವ ಬಡತನ, ಒಂದೊತ್ತಿಗೂ ಊಟವಿಲ್ಲದ ಸ್ಥಿತಿ ಈ ಅಲೆಮಾರಿ ಸಮುದಾಯಗಳದ್ದಾಗಿದೆ. ಇವರು ವಲಸೆ ಹೋದೆಡೆಯಲ್ಲೆಲ್ಲಾ ಸಿಗುವ ಅಲ್ಪಸ್ವಲ್ಪ ಊಟ ಮತ್ತು ಆಹಾರ ಪದಾರ್ಥದಿಂದ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಕೆಲವರು ಪಶುಪಾಲಕ ವೃತ್ತಿಯವರೂ, ಕೆಲವರೂ ಯಾವುದೇ ಆರ್ಥಿಕ ಆದಾಯವಿಲ್ಲದೇ ತುಂಬಾ ಬಡತನದಿಂದ ನರಳುತ್ತಿದ್ದಾರೆ. ಇವರಲ್ಲಿ ಭೂಮಿ ಇರುವವರು ಇಲ್ಲ. ಇಂದು ಭೂಮಿಯ ಒಂದು ಸ್ವತ್ತು ಆಗಿರುವ ಸಂದರ್ಭದಲ್ಲಿ ಅಲೆಮಾರಿ ಸಮುದಾಯಗಳಿಗೆ ಭೂಮಿಯನ್ನು ಹೊಂದುವ ಭಾಗ್ಯವೇ ಇಲ್ಲದಂತಾಗಿದೆ.

ಜಾಗತೀಕರಣದಿಂದ ಬದಲಾದ ಆರ್ಥಿಕ ವ್ಯವಸ್ಥೆಯಲ್ಲಲಿ ತಮ್ಮ ಜೀವನಕ್ಕೆ ಮೂಲನೆಲೆಯಾದ ಸಾಂಪ್ರದಾಯಿಕ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ. ಕಾಡಿನಲ್ಲಿ ಸಣ್ಣಪುಟ್ಟ ಆಹಾರ ಸಂಗ್ರಹಣೆ ಮಾಡುತ್ತಿದ್ದ, ಜೊತೆಗೆ ಕಾಡಿನಲ್ಲಿ ತಮ್ಮ ಪ್ರಾಣಿಗಳನ್ನು ಮೇಯಿಸಲು ಹೋಗುತ್ತಿದ್ದ ಈ ಸಮುದಾಯಗಳು ಇಂದು ಅವುಗಳನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ, ವನ್ಯ ಮೃಗಗಳ ಸಂರಕ್ಷಣಾ ಕಾನೂನು, ಪರಿಸರ ಮತ್ತು ಪ್ರಾಣಿಗಳಿಗೆ ತೊಂದರೆ ಕೊಡುವುದನ್ನು ತಡೆಗಟ್ಟುವಿಕೆಯ ಕಾನೂನು (Wild Lifre Protection Acts, Prevention of Cruelty to Animals and Environment Protection Act) ಇವುಗಳ ಅನುಷ್ಠಾನದಿಂದಾಗಿ ಲಕ್ಷಗಟಟಲೆ ಹಾವು ಹಿಡಿಯುವವರು, ಕೋತಿ ಆಡಿಸುವವರು, ಹಕ್ಕಿ ಹಿಡಿಯುವವರು (ಹಕ್ಕಿಪಿಕ್ಕಿ) ಜಾನಪದ ವೈದ್ಯ ವೃತ್ತಿಯಲ್ಲಿ ತೊಡಗಿರುವವರು, ಕುರಿಗಾರರು, ಪಶುಪಾಲಕರು ತಮ್ಮ ಸಾಂಪ್ರದಾಯಿಕ ವೃತ್ತಿಯನ್ನು ಕಳೆದುಕೊಳ್ಳುವುದರ ಜೊತೆಗೆ, ಸರ್ಕಾರೇತರ ಸಂಸ್ಥೆಗಳಿಂದ ಮತ್ತು ಪೋಲೀಸರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಜೊತೆಗೆ ಸರ್ಕಾರಗಳು ಉಪಯುಕ್ತ ಪ್ರಾಣಿಗಳು ಮತ್ತು ಅನುಪಯುಕ್ತ ಪ್ರಾಣಿಗಳು ಎಂಬ ಪಟ್ಟಿಮಾಡಿದೆ. ಅವುಗಳಲ್ಲಿ ಕುರಿಗಳು, ಮೇಕೆಗಳು ಮತ್ತು ಒಂಟೆಗಳನ್ನು ಉಪಯುಕ್ತ ಪ್ರಾಣಿಗಳ ಪಟ್ಟಿಯಿಂದ ಕೈಬಿಟ್ಟಿರುವುದರಿಂಧ ಹೆಚ್ಚಿನದಾಗಿ ಕುರಿ, ಮೇಕೆ ಮತ್ತು ಒಂಟೆಗಳನ್ನು ಸಾಕುವ ಮತ್ತು ಅದೇ ವೃತ್ತಿಯನ್ನು ಮುಂದುವರಿಸುವವರಿಗೆ ತೊಂದರೆಯಾಗುತ್ತಿದೆ.

ವಸತಿ ಸಮಸ್ಯೆ: ಜಾಗತೀಕರಣದ ಪರಿಣಾಮವಾಗಿ ಇಂದು ನಗರೀಕರಣದ ಪ್ರಕ್ರಿಯೆ ಬೃಹತ್‌ ಪ್ರಮಾಣದಲ್ಲಿ ನಡೆಯುತ್ತಿದೆ. ಅದೇ ಸಂದರ್ಭದಲ್ಲಿ ಅಲೆಮಾರಿ ಸಮುದಾಯಗಳು ನಗರಗಳಲ್ಲಿ ಕೊಳಚೆ ಪ್ರದೇಶಗಳಲ್ಲಿ ಬಿಡಾರ ಅಥವಾ ಟೆಂಟ್‌ ಕಟ್ಟಿಕೊಂಡು ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ಅಲೆಮಾರಿ ಸಮುದಾಯಗಳಿಗೆ ಅವರದೇ ಆದಂತಹ ಜಾಗ, ಸೈಟು, ನೆಲೆಯಿಲ್ಲದಿರುವುದು ಕಂಡುಬರುತ್ತದೆ. ಆದ್ದರಿಂದ ಸರ್ಕಾರವು ಕನಿಷ್ಟ ಭೂಮಿಯನ್ನು ಹೊಂದುವ ಕಾನೂನನ್ನು ಜಾರಿಗೆ ತರುವುದು ಅವಶ್ಯಕವಾಗಿದೆ. ಕೇಂದ್ರ ಸರ್ಕಾರ ವಿಶೇಷ ಆರ್ಥಿಕ ವಲಯ (SEZ)ಗಳ ಮಾದರಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ವಿಶೇಷ ಸಾಮಾಜಿಕ ಆರ್ಥಿಕ ನೆಲೆಗಳ ವಲಯಗಳನ್ನು [Special Socio-Ecoomic Settlement Zones(SSESZ)] ಅನುಷ್ಠಾನ ಮಾಡುವ ಯೋಜನೆ ಇದೆ.

ಹೆಚ್ಚಿನ ಅಲೆಮಾರಿ ಸಮುದಾಯಗಳು ದೇಶದಲ್ಲಿ ಕರಕುಶಲ ವಸ್ತುಗಳನ್ನು ತಯಾರಿಸುವ ಕಸುಬನ್ನು ಹೊಂದಿದ್ದವು. ಜೇಡಿ ಮಣ್ಣು, ಮಣ್ಣು, ಗಾಜು, ಕಲ್ಲು, ಇದಿರು, ಮತ್ತು ಇತರೆ ಸುಲಭವಾಗಿ ದೊರೆಯುವ ಕಚ್ಚಾ ವಸ್ತುಗಳಿಂದ ಕರಕುಶಲ ವಸ್ತುಗಳನ್ನು ತಯಾರಿಸಿ ತಮ್ಮದೇ ಆದ ಮಾರುಕಟ್ಟೆಯನ್ನು ಹೊಂದಿದ್ದವು. ಆದರೆ, ಜಾಗತೀಕರಣದ ಪರಿಣಾಮದಿಂದಾಗಿ ತಮ್ಮ ಸಾಂಪ್ರದಾಯಿಕ ವೃತ್ತಿಯನ್ನು ಕಳೆದುಕೊಳ್ಳುತ್ತಿವೆ. ಇವುಗಳ ಬಹುದೊಡ್ಡ ಸಮಸ್ಯೆಯೆಂದರೆ ಕಚ್ಚಾ ವಸ್ತುಗಳು ದೊರೆಯದೇ ಇರುವುದು. ಉದಾ: ಗಣಿಗಾರಿಕೆಯ ನಿಷೇಧಿದಿಂದ ಇಂತಹ ಸಮುದಾಯಗಳಿಗೂ ಕೂಡ ಹೊಡೆತ ಬಿದ್ದಿದೆ.

ಬಹುತೇಕ ಅಲೆಮಾರಿ ಸಮುದಾಯಗಳು ತರಕಾರಿ, ಹಳೆಬಟ್ಟೆಗಳು ಮತ್ತು ಇತರೆ ವಸ್ತುಗಳನ್ನು ಬೀದಿ-ಬೀದಿಯಲ್ಲಿ ಮಾರಾಟಮಾಡಿ ಜೀವನ ನಡೆಸುತ್ತಿದ್ದಾರೆ. ಆದರೆ, ಇಂದು ಜಾಗತೀಕರಣದಿಂದಾಗಿ ಮೆಟ್ರೋ, ಶಾಪಿಂಗ್‌ ಮಹಲ್‌, ಮತ್ತು ಬಿಗ್‌ ಬಜಾರ್ ಗಳು ತಲೆಯೆತ್ತಿ ಅಲೆಮಾರಿ ಸಮುದಾಯಗಳಿಗೆ ಮಾರುಕಟ್ಟೆಯಿಲ್ಲದಂತಾಗಿದೆ. ಜೊತೆಗೆ ಬೀದಿಯಲ್ಲಿ ಮಾರಲು ಸ್ಥಳೀಯ ಸಂಸ್ಥೆಗಳು ಪರವಾನಗಿ ನೀಡುತ್ತಿಲ್ಲ. ಅಲ್ಲದೇ, ಪೊಲೀಸರ ಉಪಟಳದಿಂದಾಗಿ ಅವರ ದಿನನಿತ್ಯದ ಆಹಾರಕ್ಕೆ ತೊಂದರೆಯಾಗಿರುವುದು ಕಂಡುಬರುತ್ತದೆ.

. ರಾಜಕೀಯ ಹೊರತಳ್ಳುವಿಕೆ

ರಾಜಕೀಯವಾಗಿ ಅಲೆಮಾರಿ ಸಮುದಾಯಗಳು ಇತರೆ ಹಿಂದುಳಿದ, ದಲಿತ ಮತ್ತು ಬುಡಕಟ್ಟು ಸಮುದಾಯಗಳಿಗಿಂತ ಅತ್ಯಂತ ಹಿಂದುಳಿದಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ದೇಶದ ಸಂಸತ್ತಿನವರೆಗೂ ಇವರಲ್ಲಿ ಯಾವೊಬ್ಬನೂ ಪ್ರತಿನಿಧಿ ಇಲ್ಲ. ಇವರಲ್ಲಿನ ರಾಜಕೀಯ ಪ್ರಾತಿನಿಧ್ಯ ಸೊನ್ನೆ ಎಂದು ಹೇಳಬಹುದು. ಜೊತೆಗೆ ಇವರಿಗೆ ಮತದಾನದ ಹಕ್ಕೂ ಸಹ ಇರುವುದಿಲ್ಲ. ಮತದಾನದ ಹಕ್ಕು ಸಿಗಬೇಕಾದರೆ ಒಂದು ಸ್ವಂತ ಸ್ಥಳವಿರಬೇಕೆನ್ನುವ ನಿಯಮವಿದೆ. ಆದರೆ ಇವರು ನೆಲೆ ಇಲ್ಲದ, ಊರು ಇಲ್ಲದ ಅಲೆಮಾರಿಗಳಾಗಿರುವುದರಿಂದ ಪ್ರಜಾಪ್ರಭುತ್ವದಂತಹ ಭಾರತೀಯ ಸಮಾಜದಲ್ಲಿ ಇವರಿಗೆ ಮತದಾನದಲ್ಲಿ ಪಾಲ್ಗೊಳ್ಳುವ ಹಕ್ಕಿಲ್ಲ. ಇನ್ನೂ ಇವರು ಚುನಾವಣೆಯಲ್ಲಿ ಸ್ಪರ್ಧಿಸುವ ಮಾತೆಲ್ಲಿ? ಆದ್ದರಿಂದ ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳು ರಾಜಕೀಯದಿಂದಲೂ ಹೊರತಳ್ಳಲ್ಪಟ್ಟ ಅಂಚೀಕೃತ ಸಮುದಾಯದವರಾಗಿದ್ದಾರೆ. ಜೊತೆಗೆ ರಾಜಕೀಯ ಅರಿವು ಇವರಲ್ಲಿ ತುಂಬಾ ಕಡಿಮೆ ಅಥವಾ ಇಲ್ಲವೇ ಇಲ್ಲ ಎಂದು ಹೇಳಬಹುದು.

ಸಾಮಾಜಿಕವಾಗಿಯಂತೂ ಅಲೆಮಾರಿ ಸಮುದಾಯಗಳು ಅತ್ಯಂತ ಹೊರತಳ್ಳಲ್ಪಟ್ಟ ಗುಂಪುಗಳಾಗಿವೆ. ಭಾರತೀಯ ಸಮಾಜವು ಜಾತಿ ಆಧಾರಿತ ಸಮಾಜವಾದ್ದರಿಂದ ಪ್ರತಿಯೊಂದು ಸಮುದಾಯಗಳು ತಮ್ಮದೇ ಆದ ಸಾಮಾಜಿಕ ಅಂತಸ್ಥ (Social Status) ನ್ನು ಹೊಂದಿವೆ. ಜೊತೆಗೆ ತಮ್ಮದು ಯಾವ ಸ್ಥರ ಎಂಬ ಕನಿಷ್ಠ ಅರಿವಾದರೂ ಇದೆ ಅಥವಾ ಜಾತಿ ವ್ಯವಸ್ಥೆಯ ಏಣಿಶ್ರೇಣಿಯಲ್ಲಿ (Hierarchy) ನಾವುಗಳು ಎಲ್ಲಿ ಬರುತ್ತೇವೆ ಎಂಬ ಅರಿವಾದರೂ ಇದೆ. ಆದರೆ, ಅಲೆಮಾರಿ ಸಮುದಾಯಗಳಿಗೆ ಇವುಗಳಾವು ತಿಳಿದಿಲ್ಲ. ವಾಸ್ತವಿಕವಾಗಿ ಅಲೆಮಾರಿ ಸಮುದಾಯಗಳು ಅಸ್ಪೃಶ್ಯ ಸಮುದಾಯಗಳಲ್ಲದಿದ್ದರೂ, ಹೆಚ್ಚೇನು ಸಾಮಾಜಿಕ ಕಳಂಕ ಇಲ್ಲದಿದ್ದರೂ, ಸಮಾಜದ ದೃಷ್ಟಿಯಿಂದ ಅತ್ಯಂತ ಅಲಕ್ಷಿತ, ನಿರಾಕರಿಸಿದ, ತಾರತಮ್ಯಕ್ಕೆ ಒಳಗಾದ, ಶೋಷಣೆಗೆ ಈಡಾದ ಎಲ್ಲಾ ರೀತಿಯಿಂದಲೂ ಹೊರತಳಲ್ಲಪಟ್ಟ ಸಮುದಾಯಗಳಾಗಿವೆ.

. ಐಡೆಂಟಿಟಿಯ ಸಮಸ್ಯೆ

ಈಗಿನ ಸರ್ಕಾರದ ಪ್ರವರ್ಗಗಳಲ್ಲಿ ಕೆಲವು ಅಲೆಮಾರಿ ಸಮುದಾಯಗಳು, ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಒಳಗೊಂಡರೆ, ಕೆಲವು ಪರಿಶಿಷ್ಟ ವರ್ಗದಲ್ಲಿ ಸೇರ್ಪಡೆಗೊಂಡಿವೆ. ಕೆಲವು ಅಲೆಮಾರಿ ಸಮುದಾಯಗಳು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿವೆ. ಕೆಲವು ಸಮುದಾಯಗಳಂತೂ ಮೇಲಿನ ಯಾವ ಪಟ್ಟಿಯಲ್ಲಿಯೂ ಕಂಡುಬರುವುದಿಲ್ಲ. ಆದ್ದರಿಂದ ಈ ಸಮುದಾಯಗಳು ಅನನ್ಯತೆಯ ಬಿಕ್ಕಟ್ಟನ್ನು (Identity Crisis) ಎದುರಿಸುತ್ತಿವೆ. ಜೊತೆಗೆ ಪ್ರಾದೇಶಿ ಭಿನ್ನತೆಯಿಂದಾಗಿ ಭಾರತದಲ್ಲಿನ ಅಲೆಮಾರಿ ಸಮುದಾಯಗಳು ಬೇರೆ ಬೇರೆ ಹೆಸರನ್ನು ಹೊಂದಿರುವುದರಿಂದ ಒಂದೇ ನಾಮಾಂಕಿತದಿಂದ ಕರೆಯುವ ಅಥವಾ ಉಪಚಾರ ಪಡೆಯುವ ಅವಕಾಶವನ್ನು ಕಳೆದುಕೊಂಡಿವೆ. ಉದಾಹರಣೆಗೆ; ಕುರಿಗಾರರು ದೇಶದಾದ್ಯಂತ ಕಂಡುಬರುತ್ತಾರೆ. ಕಾಶ್ಮೀರದಲ್ಲಿ ಇವರನ್ನು ಕುರಿಗಾರರು, ಕರ್ನಾಟಕದಲ್ಲಿ ಅಲೆಮಾರಿ ಕುರುಬರು, ಆಂಧ್ರಪ್ರದೇಶದಲ್ಲಿ ಪಶುಪಾಲಕರು, ಹೀಗೆ ವಿವಿಧ ಹೆಸರುಗಳಿಂದ ಕರೆಯುವುದರಿಂದ ಅನನ್ಯತೆಯ ಬಿಕ್ಕಟ್ಟನ್ನು ಎದುರಿಸುತ್ತಿವೆ. ಕಾರಣ ಇವರಲ್ಲಿ ಗುರುತಿಸುವಿಕೆ ಇಲ್ಲದೇ ಇರುವುದು. ಜೊತೆಗೆ ಶಿಕ್ಷಣದ ಹಿಂದುಳಿದಿರುವಿಕೆ, ಎಷ್ಟೋ ಸಂದರ್ಭಗಳಲ್ಲಿ ಇವರು ತಮ್ಮ ಸಮುದಾಯದ ಜಾತಿ ಪ್ರಮಾಣಪತ್ರ (Caste Certificate) ವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭವನ್ನು ಭಾರತದಾದ್ಯಂತ ಕಾಣಬಹುದಾಗಿದೆ. ಕುಲಶಾಸ್ತ್ರೀಯ ಅಧ್ಯಯನಗಳೂ ಸಹ ಈ ಸಮುದಾಯದ ಮೇಲೆ ಹೆಚ್ಚಾಗಿ ನಡೆದಿಲ್ಲವಾದ್ದರಿಂದ, ವೈಜ್ಞಾನಿಕವಾಗಿ ಅಲೆಮಾರಿ ಸಮುದಾಯದವರ ಅಧ್ಯಯನ ಸಾಧ್ಯವಿಲ್ಲದಂತಾಗಿ, ಸಾಮಾಜಿಕವಾಗಿ ಅತ್ಯಂತ ಹೊರತಳ್ಳಲ್ಪಟ್ಟ ಸಮುದಾಯಗಳಾಗಿಯೇ ಉಳಿದಿದ್ದಾರೆ.