ಒಳಗೊಳ್ಳುವಿಕೆಯ ಪ್ರಯತ್ನಗಳು

ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳ ಅಭಿವೃದ್ಧಿಯ ಸಾಮಾಜಿಕ ಒಳಗೊಳ್ಳುವಿಕೆ(Social Inclusion) ಯ ಪ್ರಕ್ರಿಯೆಗೆ ಹಿಂದಿನ ದಿನಗಳಲ್ಲಿ ಯಾವುದೇ ರೀತಿಯ ಪ್ರಯತ್ನಗಳು ನಡೆದಿಲ್ಲ ಎನ್ನುವುದು ತುಂಬಾ ದುಃಖದ ಸಂಗತಿ. ಆದೆ ಇತ್ತೀಚೆಗೆ ಅಂದರೆ ಕಳೆದ ನಾಲ್ಕೈದು ವರ್ಷಗಳಿಂದೀಚೆಗೆ ಸರ್ಕಾರದ ಪ್ರಯತ್ನಗಳು ನಡೆಯುತ್ತಿವೆ. ಮೊದಲನೆಯದಾಗಿ ಕೇಂದ್ರ ಸರ್ಕಾರವು ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳ ವೈಜ್ಞಾನಿಕ ಅಧ್ಯಯನ ಮತ್ತು ಅವರ ಸಾಮಾಜಿಕ ಒಳಗೊಳ್ಳುವಿಕೆಗೆ ರಾಷ್ಟ್ರೀಯ ಆಯೋಗವನ್ನು ರಚಿಸಿದ್ದುದು ಗಮನಾರ್ಹ ಸಂಗತಿ. ಈ ಆಯೋಗವು ಅಲೆಮಾರಿ ಮತ್ತು ಅರೆ-ಅಲೆಮಾರಿ ರಾಷ್ಟ್ರೀಯ ಆಯೋಗವೆಂದೇ ಕರೆಯಲ್ಪಟ್ಟಿದೆ. ಈ ಆಯೋಗದ ಮೊದಲನೇ ಅಧ್ಯಕ್ಷರಾಗಿ ಶ್ರೀಯುತ. ಬಾಲಕೃಷ್ಣ ರೇಣುಕೆಯವರು ನೇಮಕವಾಗಿದ್ದರು. ಸದರಿ ಆಯೋಗವು ದೇಶದೆಲ್ಲಡೆ ಸಂಚರಿಸಿ, ಅಲೆಮಾರಿಗಳಿರುವ ರಾಜ್ಯಗಳಲ್ಲಿ ಅಲೆಮಾರಿಗಳನ್ನು ಗುರುತಿಸುವಿಕೆಗೆ ಚಾಲನೆ ನೀಡಿದರು. ಅಲ್ಲದೆ ಅಲೆಮಾರಿ ಸಮುದಾಯಗಳು ಸಂಘಟಿತವಾಗುವುದಕ್ಕೆ ಆಯೋಗವು ಒತ್ತುಕೊಟ್ಟಿತ್ತು. ದೇಶದಲ್ಲೆಡೆ ಮೊಟ್ಟ ಮೊದಲ ಬಾರಿಗೆ ಅಲೆಮಾರಿ ಸಮುದಾಯಗಳು ಒಕ್ಕೂಟ ರಚಿಸಿಕೊಂಡವು.

ಅಲೆಮಾರಿ ಮತ್ತು ಅರೆ-ಅಲೆಮಾರಿ ರಾಷ್ಟ್ರೀಯ ಆಯೋಗವು ವಿಸ್ತೃತ ಅಧ್ಯಯನ ನಡೆಸಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರವು ವರದಿಯ ಅನುಷ್ಠಾನಕ್ಕೋಸ್ಕರ ಸಂಸತ್‌ ಸದಸ್ಯರ ಒಂದು ಉಪಸಮಿತಿಯನ್ನು ರಚಿಸಿದ್ದು, ಆ ಸಮಿತಿಯು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಸದರಿ ವರದಿಯನುಸಾರವಾಗಿ ಕೇಂದ್ರ ಸರ್ಕಾರವು ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಕೊಡಲು ಮತ್ತು ಅವರನ್ನು ಸಾಮಾಜಿಕ ಒಳಗೊಳ್ಳುವಿಕೆಗೆ ಸೇರಿಸಲು ಸಂವಿಧಾನಕ್ಕೆ ತಿದ್ದುಪಡಿ ತಂದು ಮೂರನೇ ಪರಿಚ್ಛೇದವನ್ನು ಸೃಷ್ಟಿಸಿ, ಅಲೆಮಾರಿ ಮತ್ತು ಅರೆ-ಅಲೆಮಾರಿಗಳ ಹೊಸ ಪಟ್ಟಿಯನ್ನು ಮಾಡಲು ತಯಾರಿ ನಡೆಸಿದೆ. ಈ ಮೂಲಕ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ದೊರೆತಂತಾಗಿ ಇವರು ಸಾಮಾಜಿಕ ಒಳಗೊಳ್ಳುವಿಕೆಯ ಪ್ರಕ್ರಿಯೆಗೆ ಒಳಗಾಗಬಹುದು.

ಕರ್ನಾಟಕದಲ್ಲಿ ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳ ಸಾಮಾಜಿಕ ಒಳಗೊಳ್ಳುವಿಕೆಯ ಪ್ರಕ್ರಿಯೆಯನ್ನು ನೋಡಬಹುದು. ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ನಾಲ್ಕು ವರ್ಷಗಳ ಹಿಂದೆ ಎಲ್ಲಾ ಅಲೆಮಾರಿ ಸಮುದಾಯಗಳು ತಮ್ಮದೇ ಆದ ಒಕ್ಕೂಟವನ್ನು ರಚಿಸಿಕೊಂಡವು. ಆ ಮೂಲಕ ಸಂಘಟಿತರಾಗಿ ಒಂದೆಡೆ ಸೇರಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸತೊಡಗಿದವು. ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಪ್ರತ್ಯೇಕ ಉಪಚಾರ ಮತ್ತು ಮೀಸಲಾತಿಗೆ ಒತ್ತಾಯಿಸಿದವು. ಪರಿಣಾಮವಾಗಿ ರಾಜ್ಯ ಸರ್ಕಾರ ವಿಶೇಷ ಅನುದಾನವನ್ನು ಅಲೆಮಾರಿ ಸಮುದಾಯಗಳಿಗೋಸ್ಕರ ಮೀಸಲಿಟ್ಟಿತ್ತು. ಈ ವಿಶೇಷ ಅನುದಾನದಲ್ಲಿ ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳಿಗೆ ಪ್ರಥಮವಾಗಿ, ಮನೆ, ಜಾಗ, ಹೊಂದಲು ಅವಕಾಶ ಮಾಡಿಕೊಡಲಾಯಿತು. ಏಕೆಂದರೆ ಅಲೆಮಾರಿ ಸಮುದಾಯಗಳಲ್ಲಿ ನೂರಕ್ಕೆ ನೂರರಷ್ಟು ತಮ್ಮದೇ ಆದ ಜಾಗ, ಮತ್ತು ಮನೆಯಿಲ್ಲದವರು. ಇದಲ್ಲದೆ ಅಲೆಮಾರಿ ಸಮುದಾಯಗಳು ಹೆಚ್ಚಿರುವ ಪ್ರದೇಶಗಳಲ್ಲಿ ಗ್ರಂಥಾಲಯ ಸ್ಥಾಪನೆ, ಭೂಮಿ ಇಲ್ಲದವರಿಗೆ ೨ ಎಕರೆ ಭೂಮಿ ಮತ್ತು ಅದಕ್ಕೆ ತೋಟಗಾರಿಕೆ ಮಾಡಲು ಹಣಕಾಸಿನ ನೆರವನ್ನು ಒದಗಿಸಲಾಯಿತು. ಇವುಗಳನ್ನು ಅನುಷ್ಠಾನ ಮಾಡಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮಿತಿಯನ್ನು ರಚಿಸಿ, ಸದರಿ ಸದರಿ ಸಮಿತಿಗೆ ಕ್ರಮವಾಗಿ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರು ಅಧ್ಯಕ್ಷರಾಗಿರುತ್ತಾರೆ. ಜೊತೆಗೆ ಪ್ರತಿಯೊಂದು ಸಮಿತಿಯಲ್ಲಿ ಅಲೆಮಾರಿ ಸಮುದಾಯದ ಜನರು ಸದಸ್ಯರಾಗಿರುತ್ತಾರೆ. ಇದರ ಅತ್ಯಂತ ಪ್ರಮುಖ ಉದ್ದೇಶ ವಸತಿಹೀನರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿಕೊಡುವುದಾಗಿರುತ್ತದೆ. ಇದಲ್ಲದೆ ಇನ್ನೂ ಹಲವಾರು ಯೋಜನೆಗಳನ್ನು ಸದರಿ ವಿಶೇಷ ಅನುದಾನದಲ್ಲಿ ಸೇರಿಸಲಾಗಿದೆ. ಆದಾಗ್ಯೂ ಇವೆಲ್ಲ ಯೋಜನೆಗಳು ನಿಜವಾದ ಅಲೆಮಾರಿ ಸಮುದಾಯಗಳಿಗೆ ತಲುಪಲು ನಿಜವಾದ ಬದ್ಧತೆ ಬೇಕಾಗುತ್ತದೆ. ಇದು ಒಂದು ಪ್ರಕ್ರಿಯೆಯಾಗಿರುವುದರಿಂದ, ಅಲೆಮಾರಿ ಸಮುದಾಯಗಳು ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಒಳಗೊಳ್ಳುವಂತಾಗಲು ತುಂಬಾ ಸಮಯ ಬೇಕಾಗುತ್ತದೆ ಎಂದು ಹೇಳಬಹುದು.

ಸಾಮಾಜಿಕ ಹೊರತಳ್ಳುವಿಕೆ ಮತ್ತು ಮಹಿಳೆಯರು

ಮಹಿಳೆಯರು ಭಾರತೀಯ ಸಮಾಜದ ಒಂದು ಮುಖ್ಯವಾದ ಸಾಮಾಜಿಕ ಗುಂಪಾಗಿದ್ದು, ಇವರು ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ ಗುಂಪಾಗಿದ್ದಾರೆ. ಇವರ ಜನಸಂಖ್ಯೆಯು ಹೆಚ್ಚು ಕಡಿಮೆ ಪುರುಷರಷ್ಟಿದ್ದು, ಅಂದರೆ, ಶೇಕಡ ೫೦ರಷ್ಟಿದ್ದಾರೆ. ೨೦೦೧ರ ಜನಗಣತಿಯ ಪ್ರಕಾರ ಇಂಡಿಯಾದಲ್ಲಿ ೧೦೦೦ ಪುರುಷರಿಗೆ ೯೩೩ ರಷ್ಟು ಮಹಿಳೆಯರಿದ್ದಾರೆ. ಅಂದರೆ, ಇವರ ಲಿಂಗಾನುಪಾತ ೧೦೦೦ ಪುರುಷರಿಗೆ ೯೩೩ಷ್ಟು ಮಹಿಳೆಯರು.

ಮಹಿಳೆಯರು ಭಾರತೀಯ ಸಮಾಜದಲ್ಲಿ ಅವಕಾಶ ವಂಚಿತವಾದ ಗುಂಪಾದ್ದರಿಂದ ಮತ್ತು ಲಿಂಗ ತಾರತಮ್ಯಕ್ಕೆ ಒಳಗಾದ್ದರಿಂದ ಇವರು ಸಹ ಒಂದು ಹಿಂದುಳಿದ ಗುಂಪಾಗಿದ್ದಾರೆ. ಈ ರೀತಿಯ ಹಿಂದುಳಿದ ಗುಂಪಾಗಿರುವುದರಿಂದಲೇ ಇವರೂ ಸಹ ಅಂಚೀಕೃತ ಗುಂಪಾಗಿ ಮಾರ್ಪಾಟಾಗಿದ್ದಾರೆ. ಭಾರತೀಯ ಮಹಿಳೆಯರು ಸಾಮಾಜಿಕ ಹೊರತಳ್ಳುವಿಕೆಯ ಪ್ರಕ್ರಿಯೆಗೆ ಒಳಗಾಗಿ ಸಮಾಜದ ಅಂಚಿಗೆ ತಳ್ಳಲ್ಪಟ್ಟಿದ್ದಾರೆ. ಇದಕ್ಕೆ ಪುರುಷ ಸಮಾಜ ಕಾರಣವಾಗಿದ್ದರೂ, ಒಟ್ಟಾರೆ ಸಮಾಜದ ಸ್ವರೂಪ ಮತ್ತು ಸಂಸ್ಕೃತಿ ಕಾರಣೀಭೂತ ಅಂಶಗಳಾಗಿವೆ. ಭಾರತೀಯ ಮಹಿಳೆಯರು ತನ್ನದೇ ಆದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಹೊಂದಿದ್ದಾರೆ. ಪುರುಷ ಮತ್ತು ಮಹಿಳೆ ಎಂಬ ಲಿಂಗ ಭೇದದಿಂದ ಸಹಜವಾಗಿ ಇವರು ಬೇರೆಯಾಗಿದ್ದರೂ, ಸಾಮಾಜೀಕರಣದಿಂದಾಗಿ ಈ ಎರಡೂ ಗುಂಪುಗಳು ಸಮನಾಗಿ ಬೆಳೆಯದೆ ಅಸಮಾನ ಗುಂಪುಗಳಾಗಿ ಬೆಳೆದವು.

ಪ್ರಾಚೀನ ಕಾಲದಿಂದಲೂ ಲಿಂಗ ತಾರತಮ್ಯ ಪ್ರಪಂಚದಾದ್ಯಂತ ಕಂಡುಬಂದರೂ, ಭಾರತೀಯ ಸಮಾಜದಲ್ಲಿ ಅತ್ಯಂತ ತೀರ್ವ ಸ್ವರೂಪ ಪಡೆದುಕೊಂಡಿರುವುದನ್ನು ಕಾಣಬಹುದಾಗಿದೆ. ಸಮಾಜದ ಆರಂಭದಿಂದಲೂ ಅಂದರೆ ಬೇಟೆಯಾಡುವ ಹಂತದಿಂದಲೂ, ಕೃಷಿ ಪ್ರಧಾನ ಸಮಾಜದಲ್ಲಿಯೂ ಶ್ರಮವಿಭಜನೆಯ ಲಿಂಗತ್ವದ ಮೇಲೆಯೇ ಆಗಿರುವುದನ್ನು ಇತಿಹಾಸ ಹೇಳುತ್ತದೆ. ಅಂದರೆ ಮಹಿಳೆಯು ಶಕ್ತಿವಂತಳಲ್ಲ ಎಂಬ ಕಲ್ಪನೆಯು ಆ ಸಮಾಜಗಳಲ್ಲಿ ಬಲವಾಗಿ ಬೇರೂರಿದ್ದನ್ನು ನೋಡಬಹುದು. ಪರಿಣಾಮವಾಗಿ ಮಹಿಳೆಯ ಕೆಲಸವನ್ನು ಉತ್ಪಾದಕ ಕೆಲಸವಲ್ಲ ಎಂದು ಪರಿಗಣಿಸಿ ಕೇವಲ ಅವಳ ಪಾತ್ರವನ್ನು ಅಡುಗೆ ಮನೆಗೆ ಸೀಮಿತಗೊಳಿಸಲಾಯಿತು. ಅಲ್ಲಿಂದ ಪ್ರಾರಂಭವಾದ ಅಸಮಾನತೆ, ತಾರತಮ್ಯ, ಶೋಷಣೆ ವಂಚಿತತೆ ಮತ್ತು ಹಿಂದುಳಿದಿರುವಿಕೆಗಳೂ ಇಂದೂ ಮುಂದುವರಿದಿವೆ (ಗುರುಲಿಂಗಯ್ಯ. ಎಂ.).

ಭಾರತೀಯ ಮಹಿಳೆಯು ಹೆಚ್ಚು ಕಡಿಮೆ ಎಲ್ಲಾ ರಂಗದಲ್ಲಿಯೂ ಹೊರತಳ್ಳಲ್ಪಟ್ಟ ಮಹಿಳೆಯಾಗಿರುವುದನ್ನು ಇತಿಹಾಸ ಹೇಳುತ್ತದೆ..ಇದಕ್ಕೆ ಮುಖ್ಯ ಕಾರಣ ಪುರುಷ ಪ್ರಧಾನ ವ್ಯವಸ್ಥೆ ಎಂದು ಹೇಳಬಹುದು. ಹಿಂದಿನಿಂದಲೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಪುರುಷರು ಪ್ರಾಬಲ್ಯ ಸಾಧಿಸಿ ಎಲ್ಲಾ ಅವಕಾಶಗಳನ್ನು ಪಡೆದುಕೊಂಡುದರಿಂದಲೇ ಇಂದು ಈ ಎರಡು ಗುಂಪುಗಳಲ್ಲಿ ಅಸಮಾನತೆಯ ಜ್ವಾಲೆ ಕಂಡುಬರುತ್ತಿದೆ. ಶಿಕ್ಷಣದ ಅವಕಾಶಗಳಲ್ಲಿ ಮಹಿಳೆಯು ಪುರುಷರಿಗಿಂತ ಕಡಿಮೆ ಅವಕಾಶಗಳನ್ನು ಪಡೆದಿದ್ದಾಳೆ. ಅಲ್ಲದೆ ಸಾಕ್ಷರತೆಯಲ್ಲಿ ಮಹಿಳೆಯರಲ್ಲಿ ಹೆಚ್ಚಿನ ಹಿಂದುಳಿದಿರುವಿಕೆಯಿದೆ. ಕೇರಳ ರಾಜ್ಯ (ಮಹಿಳೆಯರ ಸಾಕ್ಷರತೆ ಶೇಕಡ ೧೦೦ ಮತ್ತು ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಪ್ರಮಾಣ ಶೇಕಡ ೫೨) ಎರಡನೆಯದಾಗಿ ಪಂಜಾಬ್‌ ಈ ಎರಡು ರಾಜ್ಯಗಳಲ್ಲಿ ಮಹಿಳೆಯರ ಸಾಕ್ಷರತೆ ದೇಶದ ಸರಾಸರಿ ಸಾಕ್ಷರತೆಯಷ್ಟಿದೆ. ಆದರೆ, ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಮಹಿಳೆಯರ ಸಾಕ್ಷರತೆಯ ಪ್ರಮಾಣ ಪುರುಷರಿಗಿಂತ ಕಡಿಮೆ ಇದೆ ಎನ್ನಬಹುದು. ಈ ರೀತಿಯ ಶಿಕ್ಷಣದ ಅಸಮಾನತೆ ಕೇವಲ ಸಾಕ್ಷರತೆಗೆ ಸೀಮಿತವಾಗಿರದೇ ವಿವಿಧ ರೀತಿಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇವರ ಪ್ರವೇಶಾವಕಾಶ ಪುರುಷರಿಗಿಂತ ಕಡಿಮೆ ಎಂದೇ ಹೇಳಬೇಕು. ಅದೇ ರೀತಿ ಭಾರತೀಯ ಮಹಿಳೆಯರಲ್ಲಿ ಪುರುಷರಿಗೆ ಅನುತ್ತೀರ್ಣತೆ ಮತ್ತು ಅಪಮೌಲ್ಯ ಹೆಚ್ಚೆಂದೇ ಹೇಳಬೇಕು. ಇದಕ್ಕೆ ಕಾರಣಗಳೆಂದರೆ ಬಡತನ, ತಂದೆ-ತಾಯಿಯರ ವಿದ್ಯಾಭ್ಯಾಸಮಟ್ಟ, ಅವರ ಕಡಿಮೆ ತಿಳುವಳಿಕೆ, ಪೂರ್ವಾಗ್ರಹ ಅರಿವು, ಸಂಪ್ರದಾಯ, ಸಾಮಾಜಿಕ ನಿಯಮಗಳು ಇತ್ಯಾದಿ.

ಶಿಕ್ಷಣದ ಅಸಮಾನತೆಗಳು ಇಂದು ನಿನ್ನೆಯದಲ್ಲ, ಹಿಂದಿನಿಂದಲೂ ಅಂದರೆ ವೇದಗಳ ಕಾಲದಿಂದಲೂ ಮಹಿಳೆಯರು ಶಿಕ್ಷಣ ವಂಚಿತರಾಗಿಯೇ ಬಂದಿದ್ದಾರೆ. ಬೌದ್ಧರ ಕಾಲದಲ್ಲಿ ಮಹಿಳಾ ಶಿಕ್ಷಣಕ್ಕೆ ಸ್ವಲ್ಪ ಮಟ್ಟಿನ ಪ್ರೋತ್ಸಾಹ ಸಿಕ್ಕಿತ್ತಾದರೂ, ಮೊಗಲರ ಕಾಲಕ್ಕೆ ಇದು ಇಲ್ಲದಂತಾಯಿತು. ಇನ್ನೂ ಬ್ರಿಟಿಷರು ಜಾರಿಗೆ ತಂದ ಔಪಚಾರಿಕ ಶಿಕ್ಷಣವೂ ಪ್ರಾರಂಭವಾದರೂ ಅದರ ಪ್ರಯೋಜನ ಮಹಿಳೆಯರಿಗೆ ಸಿಗಲಿಲ್ಲವಾಗಿ ಅಲ್ಲಿಯೂ ಮಹಿಳೆಯು ಶೈಕ್ಷಣಿಕವಾಗಿ ಹೊತಳ್ಳಲ್ಪಟ್ಟ ಸಂದರ್ಭವನ್ನು ಎದುರಿಸಬೇಕಾಗಿ ಬಂತು. ಸ್ವತಂತ್ರ ಭಾರತದಲ್ಲಿ ಜಾತ್ಯಾತೀತ, ಔಪಚಾರಿಕ, ಶಿಕ್ಷಣ ಪದ್ಧತಿ ಜಾರಿಗೆ ಬಂದರೂ ಪ್ರಾರಂಭಿಕ ಹಂತದಿಂದಲೂ ಮಹಿಳಾ ಶಿಕ್ಷಣಕ್ಕೆ ಒತ್ತು ಕೊಡಲಿಲ್ಲ. ಆದರೆ, ಇತ್ತೀಚಿಗಷ್ಟೆ ಶಿಕ್ಷಣದ ಅವಕಾಶಗಳನ್ನು ಸಮಾನಾಂತರಗೊಳಿಸಲು ನಡೆದ ಪ್ರಯತ್ನಗಳಲನ್ನು ನಾವು ನೋಡಬಹುದು. ೧೯೮೬ರ ಶಿಕ್ಷಣ ನೀತಿಯಿಂದ ಇಲ್ಲಿಯ ತನಕ ಎಲ್ಲಾ ಹಂತದ ಶಿಕ್ಷಣಗಳಲ್ಲಿ ಮಹಿಳೆಯರಿಗೆ ವಿಶೇಷ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತ್ಯೇಕ ಮಹಿಳಾ ವಿಶ್ವವಿದ್ಯಾನಿಲಯಗಳು, ಮಹಿಳಾ ಅಧ್ಯಯನ ಕೇಂದ್ರಗಳು, ಮಹಿಳಾ ಕಾಲೇಜುಗಳು, ಶಾಲಾ-ಕಾಲೇಕುಗಳು ಮಹಿಳೆಯರಿಗೆಂದೇ ಪ್ರಾರಂಭವಾದರೂ ಶಿಕ್ಷಣದ ಸಮಾನತೆಯನ್ನು ಸಾಧಿಸಲಿಕ್ಕೆ ಸಾಧ್ಯವಾಗಿಲ್ಲ.

ಸಂವಿಧಾನ ಸರ್ವರಿಗೂ ಸಮಾನತೆಯನ್ನು ನೀಡಿ, ಲಿಂಗಭೇದವನ್ನು ನಿಷೇಧಿಸಿತಾದರೂ ವಾಸ್ತವ್ಯದಲ್ಲಿ ಮಹಿಳೆಯ ಶಿಕ್ಷಣ ನಾವೆಣಿಸಿದಷ್ಟು ಪ್ರಗತಿಯನ್ನು ಸಾಧಿಸಲಿಲ್ಲ. ೧೯೫೧ರಲ್ಲಿ ಶೇಕಡ ೮.೮೬ರಷ್ಟಿದ್ದ ಸಾಕ್ಷರತೆಯ ಪ್ರಮಾಣ, ೨೦೦೧ರಲ್ಲಿ ಶೇಕಡ ೫೭ರಷ್ಟಿದ್ದುದು ಈ ಸಮಾಜದಲ್ಲಿ ಶಿಕ್ಷಣ ಅವಕಾಶಗಳ ಬಳಕೆಯಲ್ಲಿ ಲಿಂಗ ತಾರತಮ್ಯ ಎಷ್ಟರಮಟ್ಟಿಗೆ ಕಾರ್ಯಪ್ರವೃತ್ತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂಬುದಾಗಿ ಪ್ರೊ. ಆರ್. ಇಂದಿರಾ ಅಭಿಪ್ರಾಯಪಡುತ್ತಾರೆ. (ಇಂದಿರಾ. ಆರ್., ೨೦೦೨:೮೫).

ಇನ್ನು ಶೈಕ್ಷಣಿಕ ಕ್ಷೇತ್ರದಂತೆ ಆರ್ಥಿಕ ಕ್ಷೇತ್ರದಲ್ಲಿಯೂ ಮಹಿಳೆಯು ಪುರುಷರಿಗಿಂತ ಹಿಂದಿದ್ದು, ಸಾಮಾಜಿಕವಾಗಿ ಹೊರತಳ್ಳಲ್ಪಡುವಿಕೆಯ ಸಮಸ್ಯೆಗೆ ಗುರಿಯಾಗಿದ್ದಾಳೆ..ಇದಕ್ಕೆ ಹಿಂದಿನಿಂದಲೂ ಬಲವಾಗಿ ರೂಢಿಗತವಾಗಿ ಬಂದಿರುವ ಪುರುಷ ಯಜಮಾನಿಕೆ ಮತ್ತು ಮಹಿಳೆಯು ಅಬಲಳು ಎಂಬ ಕುರುಡು ನಂಬಿಕೆ. ಜೊತೆಗೆ ಸಮಾಜಶಾಸ್ತ್ರೀಯ ದೃಷ್ಟಿಯಿಂದ ನೋಡುವುದಾದರೆ ಭಾರತೀಯ ಸಮಾಜವು ಮೂಲತಃ ಪಿತೃಪ್ರಧಾನ ಸಮಾಜವಾಗಿರುವುದರಿಂದ ಇಲ್ಲಿ ಆಸ್ತಿಯು ಗಂಡು ಮಕ್ಕಳ ಮೂಲಕ ವರ್ಗಾವಣೆಯಾಗುತ್ತಿರುವುದರಿಂಧ ಪಿತ್ರಾರ್ಜಿತ ಆಸ್ತಿಗೆ ಗಂಡು ಮಕ್ಕಳೇ ಒಡೆಯರಾಗುತ್ತಾರೆ. ಹೆಣ್ಣು ಮಕ್ಕಳಿಗೆ ಇದುವರೆಗೆ ಆಸ್ತಿಯ ಹಕ್ಕು ಇರಲಿಲ್ಲ. ಆದರೆ ಇತ್ತೀಚಿಗೆ ಹೆಣ್ಣು ಮಕ್ಕಳಿಗೂ ಆಸ್ತಿಯ ಹಕ್ಕು ಇರುವುದರಿಂದ ಸ್ತ್ರೀಯು ಪುರುಷರಷ್ಟೇ ಆಸ್ತಿಗೆ ಹಕ್ಕು ಬದ್ಧಳಾಗಿದ್ದರೂ, ಸಂಪ್ರದಾಯಸ್ತ ಭಾರತೀಯ ಸಮಾಜದಲ್ಲಿ ಒಡೆತನ ಇನ್ನೂ ಲಭ್ಯವಾಗಿಲ್ಲದಿರುವುದು ಅಸಮಾನತೆಯನ್ನು ಎತ್ತಿ ತೋರಿಸುತ್ತದೆ (ಗುರುಲಿಂಗಯ್ಯ. ಎಂ.,).

ಸಹಜವಾಗಿಯೇ ಆಸ್ತಿಯ ಒಡೆತನವೆಲ್ಲಾ ಪುರುಷರ ಕೈಯಲ್ಲಿರುತ್ತದೆ. ದೊಡ್ಡಗಾತ್ರ ಭೂಮಿಯ ದಾಖಲಾತಿಯೂ ಸೇರಿದಂತೆ ನಗರದಲ್ಲಿನ ಆಸ್ತಿಯ ದಾಖಲಾತಿಯ ಪತ್ರಗಳೂ ಸಹ ಪುರುಷರ ಹೆಸರಿನಲ್ಲಿರುತ್ತದೆ. ಅಂದರೆ ಮಹಿಳೆಯು ಆರ್ಥಿಕವಾಗಿ ಸ್ವಾವಲಂಬಿಯಲ್ಲ ಎಂಬುದನ್ನು ಇದು ತೋರಿಸುತ್ತದೆ. ಪುರುಷರ ಸ್ಥಿರಾಸ್ಥಿಯ ಮೇಲೆ ತಮ್ಮ ನಿಯಂತ್ರಣ ಸಾಧಿಸುವುದರಿಂದ ಅದನ್ನು ಅವರು ಪರಭಾರೆ ಮಾಡಲು ಅಥವಾ ಬೇರೆಯವರಿಗೆ ವರ್ಗಾಯಿಸಲು ಸ್ವತಂತ್ರರು. ಆದರೆ ಭಾರತದ ಮಧ್ಯಮ ವರ್ಗದ ಮಹಿಳೆಯರು ತಮ್ಮ ಹೆಸರಿನಲ್ಲಿ ಸ್ಥಿರಾಸ್ಥಿಯನ್ನು ಹೊಂದಿಲ್ಲದಿರುವುದು ಆಸ್ತಿಯ ಅಸಮಾನ ಹಂಚಿಕೆ ಮತ್ತು ಪುರುಷ ಪ್ರಾಬಲ್ಯತೆಯನ್ನು ತೋರಿಸುತ್ತದೆ.

ಇನ್ನು ವ್ಯಾಪಾರಿ ಕ್ಷೇತ್ರದಲ್ಲಿ ಮಹಿಳೆಯ ಪಾಲು ಇಲ್ಲವೆಂದೇ ಹೇಳಬೇಕು. ಸಂಪ್ರದಾಯಸ್ಥ ಭಾರತೀಯ ಸಮಾಜದಲ್ಲಿ ಮಹಿಳೆಯು ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾಳೆ ಎಂದರೆ ಅದು ಕಳಂಕದಿಂದ ನೋಡುವ ದೃಷ್ಟಿಕೋನವಿದೆ. ಅಂದರೆ ವ್ಯಾಪಾರ ಮಾಡುವ ಶಕ್ತಿ ಮತ್ತು ಸ್ವಾತಂತ್ರ್ಯ ಪುರುಷರಿಗೆ ಮಾತ್ರ ಎಂಬ ನಂಬಿಕೆಯಿರುವುದನ್ನು ಕಾಣಬಹುದಾಗಿದೆ. ಇದರಿಂದ ಮಹಿಳೆಯ ಆರ್ಥಿಕ ಸಂಚಲನೆ ಸಾಧ್ಯವಾಗಿಲ್ಲ. ಭಾರತೀಯ ಸಮಾಜದಲ್ಲಿ ಜಾತಿ ಆಧಾರಿತ ಕಸುಬುಗಳ ಪ್ರಾಬಲ್ಯತೆ ಮತ್ತು ಪ್ರಾಮುಖ್ಯತೆಯನ್ನು ನಾವು ಸಾಂಪ್ರದಾಯಿಕ ಸಮಾಜದಲ್ಲಿ ಕಂಡಿದ್ದೇವೆ. ಕಾಲ ಬದಲಾದಂತೆಲ್ಲಾ ಹೊಸ ಹೊಸ ಅಸಾಂಪ್ರದಾಯಿಕ ಮತ್ತು ಆಧುನಿಕ ಹುದ್ದೆಗಳು ಸೃಷ್ಟಿಯಾದವು. ಸಮಾಜದಲ್ಲುಂಟಾದ ಈ ಬದಲಾವಣೆಯಿಂದಾಗಿ ಸಾಂಪ್ರದಾಯಿಕ ಕಸುಬನ್ನು ಅವಲಂಬಿಸಿದ್ದು ಸಮುದಾಯಗಳು ನಿಧಾನವಾಗಿ ತಮ್ಮ ಕುಲ ಕಸುಬುಗಳನ್ನು ಬಿಡುತ್ತಾ ಹೊಸ ಹೊಸ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರಾರಂಭಿಸಿದರು. ಉನ್ನತ ಸ್ಥರದಲ್ಲಿ ಇದು ಹೆಚ್ಚಿನ ಸಾಮಾಜಿಕ ಚಲನೆಯನ್ನುಂಟು ಮಾಡಿದರೆ ಕೆಳಸ್ಥರದಲ್ಲಿನ ಜನರಲ್ಲಿ ಕಡಿಮೆ ಸಂಚಲನೆಯನ್ನುಂಟು ಮಾಡಿತು. ಇಷ್ಟೆಲ್ಲಾ ಬದಲಾವಣೆಗಳು ಸಂಭವಿಸಿದರೂ, ಮಹಿಳೆಯರಿಗೆ ಇದು ವರದಾನವಾಗಲಿಲ್ಲ. ಏಕೆಂದರೆ ಇಲ್ಲಿಯೂ ಈ ಹೊಸ ಹುದ್ದೆಗಳು ಪುರುಷರಿಗೆಂದೇ ಸೀಮಿತವಾದಂತವುಗಳು ಎಂದು ಬಿಂಬಿಸಲಾಯಿತು. ಮಹಿಳೆಯರಿಗೆ ಎಲ್ಲಾ ತೆರನಾದ ಹುದ್ದೆಗಳನ್ನು ಹೊಂದಲು ಪ್ರೋತ್ಸಾಹ ಸಿಗಲಿಲ್ಲ. ಬದಲಿಗೆ ನಿರಾಕರಿಸಲಾಯಿತು. ಪರಿಣಾಮವಾಗಿ ಉದ್ಯೋಗದ ಅವಕಾಶಗಳಲ್ಲಿಯೂ ಸಹ ಮಹಿಳೆಯರು ಅಂಚೀಕೃತ ಗುಂಪಾದರು. ಆದರೆ ಇತ್ತೀಚಿಗೆ ಮೀಸಲಾತಿಯ ಮುಖೇನ ಮಹಿಳೆಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಿಸುದುದನ್ನು ನೋಡಬಹುದಾಗಿದೆ. (ಗುರುಲಿಂಗಯ್ಯ. ಎಂ., ೨೦೦೪:೬೭).

ವಿಶಾಲವಾದ ದೃಷ್ಟಿಯಲ್ಲಿ ಎಲ್ಲಾ ಮಹಿಳೆಯರೂ ಒಂದಲ್ಲಾ ಒಂದು ರೀತಿಯ ಲಿಂಗಾಧಾರಿತವಾದ ಸಮಸ್ಯೆಗಳಿಗೆ ಗುರಿಯಾಗಿರುತ್ತಾರೆ. ಆದರೆ, ಗ್ರಾಮೀಣ ಮತ್ತು ದಲಿತ ಮಹಿಳೆಯರು, ಪಟ್ಟಣಗಳಲ್ಲಿ ಅಸಂಘಟಿತ ಕಾರ್ಮಿಕರಾಗಿ ದುಡಿಯುತ್ತಿರುವ ಮಹಿಳೆಯರು ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮಹಿಳೆಯರ ಸಮಸ್ಯೆಗಳು ಅವರ ಬಡತನದ ಕಾರಣಕ್ಕಾಗಿ ಇನ್ನಷ್ಟು ಆಳವಾಗಿರುತ್ತವೆ; ತೀವ್ರವಾಗಿರುತ್ತವೆ.

ಕರ್ನಾಟಕದ ಮೂರನೇ ಎರಡು ಭಾಗದಷ್ಟು ಮಹಿಳೆಯರು ಗ್ರಾಮೀಣ ಭಾಗಗಳಲ್ಲಿದ್ದಾರೆ. ಒಂದು ಅಧ್ಯಯನದ ಪ್ರಕಾರ ಹಳ್ಳಿಗಳ ಶ್ರಮಶಕ್ತಿಯ ಶೇ.೬೫ಕ್ಕಿಂತ ಹೆಚ್ಚು ಭಾಗವನ್ನು ಮಹಿಳೆಯರೇ ಪೂರೈಸುತ್ತಿದ್ದಾರೆ. ಶೇ.೫೬ಮಂದಿ ಮಹಿಳೆಯರು ತಮ್ಮ ಮನೆಕೆಲಸದ ಜೊತೆಗೆ ಕುಟುಂಬದ ಒಡೆತನದ ಜಮೀನಿನಲ್ಲಿ ವ್ಯವಸಾಯ ಕೆಲಸದಲ್ಲೂ ಸೇರಿರುತ್ತಾರೆ. ಈ ದುಡಿಮೆಯ ಫಲವಾದ ಲಾಭಾಂಶವೆಲ್ಲ ಕುಟುಂಬದ ಗಂಡಸರ ಕೈಯಲ್ಲಿರುವುದರಿಂದ ಮಹಿಳೆಯರಿಗೆ ಯಾವ ಸ್ವಂತ ಆದಾಯವೂ ಇರುವುದಿಲ್ಲ. ಶೇಕಡ ೪೯ ಮಂದಿ ಮಹಿಳೆಯರು ಇದರೊಂದಿಗೆ ಇತರರ ಜಮೀನಿನಲ್ಲಿ ಕೂಲಿಗೂ ಹೋಗುತ್ತಾರೆ (ಈ ಪ್ರಮಾಣ ಗಂಡಸರಲ್ಲಿ ಶೇ.೩೦). ಆದರೆ, ಈ ಶ್ರಮಕ್ಕೆ ಅವರಿಗೆ ದೊರೆಯುವುದು ಗಂಡಸರಿಗೆ ಸಿಗುವುದರಲ್ಲಿ ಅರ್ಧದಷ್ಟು ಕೂಲಿ ಮಾತ್ರ. ಜೊತೆಗೆ ಕೃಷಿ ಸಂಬಂಧಿತ ಹೈನುಗಾರಿಕೆಯಂತಹ ಕೆಲಸಗಳನ್ನು ಬಿಟ್ಟರೆ, ಗ್ರಾಮೀಣ ಯುವಜನತೆಗೆ ಬೇಕಾದ ಉದ್ಯೋಗಾವಕಾಶಗಳನ್ನು ಸ್ಥಳೀಯವಾಗಿ ಒದಗಿಸಲು ಯಾವ ಸರ್ಕಾರಗಳೂ ಆಸಕ್ತಿ ತೋರಿಲ್ಲ. ಆದ್ದರಿಂದ ಹಳ್ಳಿಗಳ ಯುವತಿಯರು ದೂರದ ಊರುಗಳಿಗೆ ಹೋಗಲಾಗದೆ ನಿರುದ್ಯೋಗಿಗಳಾಗಿದ್ದಾರೆ.

ಇಂದಿಗೂ ಕರ್ನಾಟಕದ ಹಳ್ಳಿಗಳ ಬಹುಪಾಲು ಹೆಣ್ಣುಮಕ್ಕಳಿಗೆ ಜಮೀನಿನ ಮೇಲೆ ಯಾವ ಅಧಿಕಾರವೂ ಇರುವುದಿಲ್ಲ. ಕಾರಣ, ಮೊದಲನೆಯದಾಗಿ ಸುಮಾರು ಶೇ.೩೦ ಮಹಿಳೆಯರ ಕುಟುಂಬಗಳಿಗೆ ಕೃಷಿ ಭೂಮಿಯೇ ಇಲ್ಲ ಅಥವಾ ಇದ್ದರೂ ಸರಾಸರಿ ೦.೦೯ ಎಕರೆಗಳಿಗಿಂತ ಕಡಿಮೆ (ಹೆಚ್ಚಾಗಿ ದಲಿತ ಕುಟುಂಬಗಳಲ್ಲಿ). ಹೀಗಾಗಿ ಒಡೆತನದ ಪ್ರಶ್ನೆಯೇ ಇಲ್ಲ. ಎರಡನೆಯದಾಗಿ, ಸರ್ಕಾರದ ಕೆಲವು ಯೋಜನೆಗಳಲ್ಲಿ (ಉಳುವವನಿಗೆ ಭೂಮಿ, ಒತ್ತುವರಿ ಸಕ್ರಮ ಇತ್ಯಾದಿ) ಜಮೀನು ವಿತರಣೆಯಾಗಿದ್ದರೆ, ಎಲ್ಲಾ ಕಡೆ ಅದನ್ನು ಕುಟುಂಬದ ಗಂಡಸರ ಹೆಸರಿಗೆ ದಾಖಲು ಮಾಡಿಸಲಾಗಿದೆಯೇ ಹೊರತು ಮಹಿಳೆಯರನ್ನು ಪರಿಗಣಿಸಿಯೇ ಇಲ್ಲ. ಮೂರನೆಯದಾಗಿ, ಕೆಲವೊಮ್ಮೆ ಕಾನೂನು ಪ್ರಕಾರ ಗಂಡನ ಮನೆಯ ಅಥವಾ ತವರು ಮನೆಯ ಆಸ್ತಿಯಲ್ಲಿ ಪಾಲು ಪಡೆಯುವ ಅಧಿಕಾರ ಇದ್ದಾಗಲೂ, ಆ ಕುರಿತಾದ ಸರಿಯಾದ ಮಾಹಿತಿ ಇಲ್ಲದೆ ಅಥವಾ ಸಾಕಷ್ಟು ಬೆಂಬಲವಿಲ್ಲದೆ ಮಹಿಳೆಯರು ಆಸ್ತಿಹಕ್ಕಿನಿಂದ ವಂಚಿತರಾಗುತ್ತಾರೆ. ಹೀಗಾಗಿ ಗ್ರಾಮೀಣ ಹೆಣ್ಣು ಮಕ್ಕಳ ಸ್ಥಿತಿ ಅತಂತ್ರವಾಗಿಯೇ ಇರುತ್ತದೆ. (ಗುರುಲಿಂಗನ್ಯ. ಎಂ., ೨೦೦೪:೬೯).

ರಾಜಕೀಯವಾಗಿಯೂ ಸಹ ಭಾರತದ ಮಹಿಳೆಯರು ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ ಮಹಿಳೆಯರಾಗಿದ್ದಾರೆ. ಪುರುಷ ಪ್ರಧಾನ ರಾಜಕೀಯ ಅವಕಾಶಗಳಿಂದ ಪುರುಷರು ರಾಜಕೀಯದ ಎಲ್ಲಾ ಅವಕಾಶಗಳನ್ನು ತಾವೇ ಉಪಯೋಗಿಸಿಕೊಂಡು ಮಹಿಳೆಯರು ರಾಜಕೀಯ ಪ್ರವೇಶಿಸಿದಂತೆ ವ್ಯವಸ್ಥಿಯ ಕಾರ್ಯತಂತ್ರವನ್ನು ರೂಪಿಸಿಕೊಂಡಿದ್ದಾರೆ. ಈ ಕಾರ್ಯತಂತ್ರದಿಂದಾಗಿ ಹಿಂದಿನಿಂದಲೂ ಮಹಿಳೆಯರು ರಾಜಕೀಯ ಅವಕಾಶ ವಂಚಿತರಾಗಿ ಸಮಾಜದ ಅಂಚಿಗೆ ತಳ್ಳಲ್ಪಟ್ಟಿದ್ದಾರೆ. ರಾಜಕೀಯ ಅವಕಾಶವಿಲ್ಲದೆ ಸಮುದಾಯಗಳ ಆರ್ಥಿಕ ಪ್ರಗತಿ ಸಾಧ್ಯವಿಲ್ಲ ಎನ್ನುವ ಇವತ್ತಿನ ಸಂದರ್ಭದಲ್ಲಿ ಮಹಿಳೆಯು ಒಂದು ನಿರ್ದಿಷ್ಟ ಮಹಿಳಾ ಸಮಾಜವನ್ನು ಪ್ರತಿನಿಧಿಸುವುದರಿಂದ ಅವರಿಗೆ ರಾಜಕೀ ಅವಕಾಶವಿಲ್ಲದೆ ಅವರ ಆರ್ಥಿಕ ಪ್ರಗತಿ ಸಾಧ್ಯವಿಲ್ಲವೆಂದೇ ಹೇಳಬಹುದು. ಆದರೆ, ಇತ್ತೀಚಿಗೆ ರಾಜಕೀಯ ಮೀಸಲಾತಿಯು ಮಹಿಳೆಯನ್ನು ರಾಜಕೀಯವಾಗಿ ಹೊರತಳ್ಳುವ ಅವಕಾಶ ಮಾಡಿಕೊಟ್ಟಿರುವುದನ್ನು ನೋಡಬಹುದಾಗಿದೆ.

ಮಹಿಳಾ ರಾಜಕೀಯ ಸಬಲೀಕರಣಕ್ಕೆ ಪ್ರಯತ್ನಗಳು ನಡೆಯುತ್ತವೆಯಾದರೂ, ಇದುವರೆಗೆ ವಿಧಾನಸಭೆಗಳಲ್ಲಿ ಮತ್ತು ಸಂಸತ್ತಿನಲ್ಲಿ ಶೇಕಡ ೩೩ರಷ್ಟು ಮಹಿಳಾ ಮೀಸಲಾತಿ ನೀಡುವುದು ಸಾಧ್ಯವಾಗಿಲ್ಲ..ರಾಜಕೀಯ ಅವಕಾಶಗಳಲ್ಲಿ ಪುರುಷ ಪ್ರಧಾನ ಸಮಾಜವೇ ಪ್ರಾಬಲ್ಯವನ್ನು ಸಾಧಿಸಿದೆ ಎಂದು ಹೇಳಬಹುದು. ಆದರೆ ತಳಮಟ್ಟದಲ್ಲಿ ಅಂದರೆ ಪಂಚಾಯತ್ ವ್ಯವಸ್ಥೆಯಲ್ಲಿ ಮಹಿಳಾ ರಾಜಕೋಯ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಇದರಿಂದಾಗಿಯೇ ಇಂದು ಗ್ರಾಮೀಣ ಸಮಾಜದಲ್ಲಿ ಮಹಿಳೆಯರು ಮೂರು ಹಂತಗಳ ಪಂಚಾಯತ್‌ ರಾಜ್ಯ ಸಂಸ್ಥೆಗಳಲ್ಲಿ ಸ್ಪರ್ಧಿಸುವುದರಿಂದ ಹಿಡಿದು ಸದಸ್ಯರು, ಅಧ್ಯಕ್ಷರುಗಳು ಮತ್ತು ಉಪಾಧ್ಯಕ್ಷರುಗಳಾಗುವುದರ ಮೂಲಕ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎನ್ನಬಹುದು. ಆದರೆ, ಇತ್ತೀಚಿಗೆ ಶೇಕಡ ೩೩ರಷಟು ರಾಜಕೀಯ ಮೀಸಲಾತಿಯನ್ನು ಮಹಿಳೆಯರಿಗೋಸ್ಕರ ಅನುಷ್ಠಾನಕ್ಕೆ ತರಲು ರಾಜಕೀಯ ಪಕ್ಷಗಳು ಬದ್ಧವಾಗಿರುವಂತೆ ಕಾಣುತ್ತದೆ.

ಸಾಮಾನ್ಯವಾಗಿ ಭಾರತದ ಮಹಿಳೆಯು ಅಂಚೀಕೃತ ಮಹಿಳೆಯಾಗಿದ್ದಾಳೆ. ಆದರೆ ಎಲ್ಲಾ ಮಹಿಳೆಯರು ಅಂಚಿನೀಕರಣ ಪ್ರಕ್ರಿಯೆಗೆ ಒಳಗಾಗುವುದಿಲ್ಲ ಎಂದು ಹೇಳಬಹುದಾದರೂ, ಭಾರತದ ಸಂದರ್ಭದಲ್ಲಿ ಮಹಿಳೆಯರು ಒಂದಲ್ಲ ಒಂದು ರೀತಿ ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ ಗುಂಪಿಗೆ ಸೇರಿದವರಾಗಿದ್ದಾರೆ. ಇವರು ಸಾಮಾಜಿಕ ಗುಂಪುಗಳಂತೆ ಒಂದು ಸಾಮಾಜಿಕ ವರ್ಗವನ್ನು ಪ್ರತಿನಿಧಿಸುವುದರಿಂದ ಇತರೆ ಹಿಂದುಳಿದ ಸಾಮಾಜಿಕ ಗುಂಪುಗಳಂತೆಯೇ ಹಿಂದುಳಿದಿದ್ದು ಅಂಚೀಕರಣದ ಸಮಸ್ಯೆಗೆ ಗುರಿಯಾಗಿದ್ದಾರೆ.

ಇವರ ಹೊರತಳ್ಳುವಿಕೆಯ ಸಂದರ್ಭಗಳು ಒಂದಲ್ಲ ಹಲವಾರು ರೀತಿಯದ್ದಾಗಿವೆ. ಈಗಾಗಲೇ ಹೇಳಿದ ಹಾಗೆ ಶಿಕ್ಷಣ, ಉದ್ಯೋಗ, ರಾಜಕೀಯ ಹೀಗೆ ಹಲವು ರಂಗಗಳಲ್ಲಿ ಹೊರತಳ್ಳಲ್ಪಟ್ಟಿದ್ದು, ಸಮಾಜದ ಅಂಚಿಗೆ ತಳ್ಳಲ್ಪಟ್ಟಿದ್ದಾರೆ. ಇಂದಿನ ಆಧುನಿಕ ಸಮಾಜದಲ್ಲಿಯೂ ಬಹುತೇಕ ಮಹಿಳೆಯರು ಹಲವು ರೀತಿಯ ಸಾಮಾಜಿಕ-ಶೈಕ್ಷಣಿಕ ಮತ್ತು ಆರ್ಥಿಕ ಅನರ್ಹತೆಗಳಿಂದ ನರಳುತ್ತಿದ್ದಾರೆ. ಕಾರಣವೇನೆಂದರೆ ಮಹಿಳೆಯರ ಸಬಲೀಕರಣ ಪ್ರಕ್ರಿಯೆಯು ಔಪಚಾರಿಕವಾಗಿ ೨೦೦೧ರಿಂದಲೇ ಜಾರಿಗೆ ಬಂದರೂ ಇದು ಎಲ್ಲಾ ಮಹಿಳೆಯರನ್ನು ತಲುಪಿಲ್ಲ ಅಥವಾ ಈ ಕಾರ್ಯತಂತ್ರವು ಭಾರತದ ಸಂದರ್ಭದಲ್ಲಿ ಏಕರೀತಿಯಾಗಿ ಅನ್ವಯವಾಗುವುದಿಲ್ಲ. ಏಕೆಂದರೆ ಇಲ್ಲಿ ವಿವಿಧ ಸಾಮಾಜಿಕ ಗುಂಪು, ಜಾತಿ, ಜನಾಂಗ, ಸಮುದಾಯ ಧರ್ಮ, ಪ್ರಾದೇಶಿಕ ಭಿನ್ನತೆಗಳು ಮತ್ತು ಬುಡಕಟ್ಟುಗಳ ಬಹುರೂಪಿ ಸಂಸ್ಕೃತಿಯ ಭಿನ್ನತೆಯಿದ್ದು, ಅವಕಾಶಗಳು ಮತ್ತು ಸವಲತ್ತುಗಳು ಸಮಾನವಾಗಿ ಹಂಚಿಕೆಯಾಗಿಲ್ಲ. ಜೊತೆಗ ಗ್ರಾಮೀಣ ಮತ್ತು ನಗರ ಸಮಾಜಗಳೆಂಬ ಪ್ರತ್ಯೇಕ ಸಮಾಜಗಳಿವೆ.

ಮಹಿಳಾ ಚಳುವಳಿಗಾರರು ಮಹಿಳಾ ವೇದಿಕೆಗಳನ್ನು ರಚಿಸಿಕೊಂಡು, ಮಹಿಳಾ ಸಬಲೀಕರಣಕ್ಕೆ ಹೋರಾಟ ನಡೆಸುತ್ತಿದ್ದರೂ, ಬಹುತೇಕ ಸ್ತ್ರೀವಾದಿ ಅಥವಾ ಮಹಿಳಾ ಚಳುವಳಿಗಳು ಮಧ್ಯಮ ವರ್ಗದ ನಗರ ಕೇಂದ್ರಿತವಾಗಿವೆ ಎಂದರೆ ತಪ್ಪಾಗಲಾರದು. ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಸ್ವಾವಲಂಬನೆ ಮತ್ತು ಅರಿವು ಮೂಡಿಸುವ ಕಾರ್ಯತಂತ್ರವನ್ನು ರೂಪಿಸಿದಾಗ್ಯೂ, ಸಾಮಾಜಿಕ ಬಲಹೀನತೆಗಳಿಂದ ನರಳುತ್ತಿರುವ ಅನೇಕ ಮಹಿಳೆಯರು ಸಮಾಜದ ಮುಖ್ಯವಾಹಿನಿಯಿಂದ ಬೇರ್ಪಟ್ಟು, ಸಾಮಾಜಿಕವಾಗಿ ಹೊರತಳ್ಳಲ್ಪಟ್ಟ ಗುಂಪುಗಳಾಗಿರುವುದು ಸತ್ಯದ ಸಂಗತಿ. ಅದರಲ್ಲಿಯೂ, ಗ್ರಾಮೀಣ ಮತ್ತು ಬುಡಕಟ್ಟು ಮಹಿಳೆಯರ ಸ್ಥಿತಿ ಹೇಳತೀರದು. ಇವರು ಸ್ವಲ್ಪಮಟ್ಟಿಗೆ ಆರ್ಥಿಕವಾಗಿ ಸಬಲೀಕರಣಗೊಳ್ಳುತ್ತಿದ್ದರೂ, ಸಾಮಾಜಿಕವಾಗಿ ಹಲವು ಅಮಾನವೀಯ ಆಚರಣೆಗೆ ಗುರಿಯಾಗಿ ಆ ಮೂಲಕ ಸಮಾಜದ ಅಂಚಿಗೆ ದೂಡಲ್ಪಟ್ಟಿದ್ದಾರೆ.

ಒಳಗೊಳ್ಳುವಿಕೆಯ ಪ್ರಯತ್ನಗಳು

ಭಾರತದಲ್ಲಿ ಮಹಿಳೆಯರ ಸಬಲೀಕರಣ ಅಥವಾ ಅಭಿವೃದ್ಧಿಗಾಗಿ ಸ್ವತಂತ್ರ ಪೂರ್ವದಲ್ಲಿಯೇ ಪ್ರಯತ್ನಗಳು ನಡೆದಿದ್ದರೂ, ಆ ಪ್ರಯತ್ನಗಳಿಗೆ ಪ್ರಚಾರ ಸಿಗಲಿಲ್ಲ ಎಂದೇ ಹೇಳಬಹುದು. ಮಹಿಳೆಯರ ಉದ್ಧಾರದ ಬಗ್ಗೆ ಯಾರೂ ಚಿಂತಿಸದ ಆ ಸಮಯದಲ್ಲಿ ಪ್ರಥಮ ಬಾರಿಗೆ ಡಾ. ಬಿ.ಆರ್. ಅಂಬೇಡ್ಕರ್ವರು ಭಾರತೀಯ ಮಹಿಳೆಯರ ಉದ್ಧಾರದ ಬಗ್ಗೆ ಚಿಂತಿಸಿರುವುದನ್ನು ನೆನಪಿಸಿಕೊಳ್ಳಲೇಬೇಕು. ಮಹಿಳೆಯರ ಹಲವಾರು ಸಾಮಾಜಿಕ-ಆರ್ಥಿಕ ನ್ಯೂನತೆಗಳನ್ನು ತೊಡೆದು ಹಾಕಲು ರೂಪಿಸಿದ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಸ್ವತಂತ್ರ ನಂತರದ ದಿನಗಳಲ್ಲಿ ಮಹಿಳೆಯರ ಸಬಲೀಕರಣಕ್ಕೆಂದೇ ಹಲವಾರು ಕಾರ್ಯತಂತ್ರಗಳನ್ನು ಸರ್ಕಾರ ರೂಪಿಸಿದೆ. ಜೊತೆಗೆ ಸ್ತ್ರೀವಾದಿ ಸಂಘಟನೆಗಳು ಹೋರಾಟ ಮಾಡುತ್ತಲೇ ಬಂದಿದೆ. ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಹಲವಾರು ಕಾನೂನುಗಳು ಅಸ್ತಿತ್ವಕ್ಕೆ ಬಂದಿವೆ. ಆಸ್ತಿಯ ಹಕ್ಕು, ವರದಕ್ಷಿಣೆ ವಿರೋಧಿ ಕಾನೂನು, ಲೈಂಗಿಕ ಶೋಷಣೆಯ ದೌರ್ಜನ್ಯದ ಹಕ್ಕು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಾನೂನು, ಹಾಗೂ ರಾಜಕೀಯ ಮೀಸಲಾತಿ ಕಾನೂನು (ಸ್ಥಳೀಯ ಸಂಸ್ಥೆಗಳಲ್ಲಿ) ಹೀಗೆ ಹಲವು ಕಾನೂನುಗಳು ಮಹಿಳೆಯರ ಹಕ್ಕುಗಳನ್ನು ಪ್ರತಿಪಾದಿಸಲು ಮತ್ತು ರಕ್ಷಣೆ ಒದಗಿಸಲು ಜಾರಿಗೊಂಡಂತಹ ಕಾನೂನುಗಳು. ಜೊತೆಗೆ ಶಿಕ್ಷಣ ಸಂಸ್ಥೆಗಳು ಸೇರಿದಂತೆ, ಹಲವು ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸಂಘಟನೆಗಳಲ್ಲಿ ಮಹಿಳೆಯರ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ವಿಶೇಷ ಸವಲತ್ತುಗಳನ್ನು ಕೊಡುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ. ವೃತ್ತಿಪರ ಹಾಗೂ ಉನ್ನತ ಶಿಕ್ಷಣಕ್ಕೆ ಪೂರಕವಾಗುವ ಅವಕಾಶವನ್ನು ಕಲ್ಪಿಸುವ ಪ್ರಕ್ರಿಯೆಯನ್ನು ನಾವು ಇತ್ತೀಚಿನ ದಿನಗಳಲ್ಲಿ ನೋಡಬಹುದಾಗಿದೆ. ಉದ್ಯೋಗದ ಅವಕಾಶಗಳಲ್ಲಿ ಗಣನೀಯ ಬದಲಾವಣೆಗಳು ಗೋಚರಿಸುತ್ತಿದ್ದು, ಎಲ್ಲಾ ರೀತಿಯ ಉದ್ಯೋಗ ಅವಕಾಶಗಳು ಇಂದು ಮಹಿಳೆಯರಿಗೆ ದೊರೆಯಲಾರಂಭಿಸಿವೆ. ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಗುಂಪುಗಳ ನೆರವಿನಿಂದ ಗ್ರಾಮೀಣ ಮಹಿಳೆಯರು ಸಂಘಟಿತರಾಗುತ್ತಿದ್ದಾರೆ. ಆರ್ಥಿಕವಾಗಿ ಸಬಲೀಕರಣಗೊಳ್ಳುವುದರ ಜೊತೆಗೆ ಹಲವಾರು ಕೌಟುಂಬಿಕ ಸಮಸ್ಯೆಗಳಲ್ಲಿ ತಾವೇ ಬಗೆಹರಿಸಿಕೊಳ್ಳುತ್ತಿರುವುದನ್ನು ನೋಡಿದರೆ ಸ್ವಲ್ಪಮಟ್ಟಿನ ಅರಿವು ಬಂದಿದೆ ಎಂದು ಹೇಳಬಹುದು.

ಇತ್ತೀಚಿಗೆ ರಾಜಕೀಯ ಮೀಸಲಾತಿ ಕಲ್ಪಿಸಲು (ಸಂಸತ್ತು ಮತ್ತು ವಿಧಾನಸಭೆ) ಸಂವಿಧಾನಕ್ಕೆ ೧೦೮ನೇ ತಿದ್ದುಪಡಿ ತರಲು ಪ್ರ ಯತ್ನಗಳು ನಡೆಯುತ್ತಿವೆ. ಹೀಗೆ ಮಹಿಳೆಯರ ಸಬಲೀಕರಣಕ್ಕಾಗಿ ಹತ್ತು ಹಲವು ಪ್ರಯತ್ನಗಳು ನಡೆದಿದ್ದರೂ ಸಹ ಇಂದಿಗೂ ಭಾರತದ ಮಹಿಳೆಯರು ಅಂಚೀಕೃತ ಮಹಿಳೆಯರಾಗಿಯೇ ಉಳಿದಿದ್ದಾರೆ. ಏಕೆಂದರೆ ಅಭಿವೃದ್ಧಿಯ ಪ್ರಯತ್ನಗಳು ಈಗಷ್ಟೆ ಪ್ರಾರಂಭವಾಗಿರುವುದರಿಂದ ಹಲವು ಶತಮಾನಗಳಿಂದ ಶೋಷಣೆಗೆ ಮತ್ತು ಅಸಮಾನತೆಗೆ ಒಳಗಾದ ಮಹಿಳೆಯರು ಒಮ್ಮೆಲೇ ಉದ್ಧಾರವಾಗುವುದಾದರೂ ಹೇಗೆ? ಇದು ಒಂದು ಪ್ರಕ್ರಿಯೆಯಾಗಿರುವುದರಿಂದ ಇನ್ನೂ ಕೆಲವಾರು ವರ್ಷಗಳು ಬೇಕಾಗುತ್ತವೆ. ಕಾರಣವೆಂದರೆ ಪುರುಷ ಪ್ರಧಾನ ಸಮಾಜದಲ್ಲಿ ಪುರುಷರ ಸಾಮಾಜೀಕರಣ ಪುರುಷ ದೃಷ್ಟಿಕೋನದಿಂದಲೇ ನಡೆದಿರುವುದರಿಂದ ಮಾನಸಿಕವಾಗಿ ಪುರುಷರು ತಯಾರುಗೊಳ್ಳಬೇಕು. ಹಾಗೆಯೇ ಮಹಿಳೆಯರಿಗೂ ಸಮಾನ ರೀತಿಯ ಅಂದರೆ ಗಂಡು ಮಕ್ಕಳಂತೆಯೇ ಸಮಾನ ರೀತಿಯ ಸಾಮಾಜೀಕರಣ ದೊರಕಬೇಕು. ಇದರಿಂದ ಹಂತ ಹಂತವಾಗಿ ಮಾನಸಿಕವಾಗಿ ಪುರುಷರು ಕೂಡ ಮಹಿಳೆಯರ ಉನ್ನತಿಗೆ ಮತ್ತು ಸಮಾನ ಅವಕಾಶಕ್ಕೆ ಸಿದ್ಧವಾಗಬೇಕು. ಆಗ ಮಾತ್ರ ಸ್ವಲ್ಪಮಟ್ಟಿನ ಅಂಚಿನೀಕರಣ ಸಂದರ್ಭವನ್ನು ತಡೆಗಟ್ಟಬಹುದು. ನಮ್ಮಲ್ಲಿ ಇನ್ನೂ ಮಹಿಳೆಯರಿಗೆ ಸಾಮಾಜಿಕ ಕಳಂಕಿತ ಸ್ಥಾನ ಇರುವಾಗ ಅಭಿವೃದ್ಧಿಯ ಮಾತು ಇನ್ನೆಲ್ಲಿ ಬಂತು? ಇದರಿಂದಾಗಿಯೇ ಇಂದು ತಳವರ್ಗದ ಮಹಿಳೆಯರು ಇತರೆ ಮಹಿಳೆಯರಿಗಿಂತ ಹೆಚ್ಚುಸಾಮಾಜಿಕವಾಗಿ ಹಿಂದುಳಿದಿರುವಿಕೆಯನ್ನು ಕಡಿಮೆ ಮಾಡಿದರೆ ಮಾತ್ರ ಸಮಾಜದ ಮುಖ್ಯವಾಹಿನಿಯಲ್ಲಿ ಮಹಿಳೆಯರು ಮಿಳಿತವಾಗಿ, ಸಾಮಾಜಿಕ ಹೊರತಳ್ಳುವಿಕೆಯನ್ನು ಮೆಟ್ಟಿನಿಂತು ಸಾಮಾಜಿಕ ಒಳಗೊಳ್ಳುವಿಕೆಗೆ ಒಳಗಾಗಬಹುದು.