೧ನೆಯ ಚೌಕ

ಅಷ್ಟೂರ ಮಾತಿದು ನಿಷ್ಠೂರ ಹೇಳತೀನಿ
ಬಿಟ್ಟಿಲ್ಲ ತುಂಬಿsತು ಜಗವೆಲ್ಲ

ಹೊಟ್ಟಿಯಂಥ ವೈರಿ ಯಾವುದಿಲ್ಲ
ರೊಟ್ಟಿಯಂಥ ಮೈತರು ಇಲ್ಲ ||

ವಿಶ್ವಾಸ ಗೆಳೆತನ ಗೆಳೆತನ ವಿಶ್ವಾಸ
ಅಳೆದು ಬಳಸತಿರಿ ನೀವೆಲ್ಲ |

ಹಿರಿಯರ ಕಿರಿಯರ ಮರಿಯಾದೆ ಉಳಿದಿಲ್ಲ
ಕಾಯ್ದೆ ಬುಕ್ಕ ಓದಿದ ಮ್ಯಾಲ ||

ಸಾಲಿಗ್ಹಾಕಿ ಮಗನ ಶಾಣೇರ ಮಾಡತೀರಿ
ಹೆಂಡಿ ತಿನ್ನೂದು ಇವರು ಬಿಟ್ಟಿಲ್ಲ |

ಸಾಲಿ ಕಲ್ತವರೆಲ್ಲ ಶಾಣ್ಯಾರ‍್ಯಾಕ ಆಗಿಲ್ಲ
ತಿನಲಾಕ ಮನಿಯಾಗ ಕೂಳಿಲ್ಲ ||

ಸೆರೆಗಾರ ಅಂಗಡಿ ಶಿವನಗದ್ದುಗೀ
ನ್ಯಾಯ ನಡಿಯುದು ರಾತರಿಹಗಲ |

ಸಿಂದಿಖ್ಯಾನ್ಯಾಗ ಮಂದೆಷ್ಟು ಇರತಾರ
ಕುಡಿವುದು ಬಿಟ್ರು ಎಮ್ಮಿಯ ಹಾಲ ||

ಕಮಾನ ಝುಟ್ಟು ಬಿಟ್ಟು ಕಾಲಾಗ ಬೂಟ ಮೆಟ್ಟು
ಕೋಟ ತೊಟ್ಟು ಮಾಡತಾರ ಒಣಡೌಲ |

ಹೆಂಡ್ರು ಹಾದರ ಮಾಡಿದರ ಗಂಡ ರೊಕ್ಕ ಇಸಗೋತಾನ
ಬರದೈತಿ ಅವರಿಗೇನು ಬಿಟ್ಟಿಲ್ಲ ||

ಆನಿ ಹೋಗಿ ಉಳಿಯಿತಪ್ಪ ಬಾಲ | ನನ್ನ ಕಡಿ ನಿನ್ನ ಮೊದಲ ||
ಉತ್ತಮರದು ಅಡಗಿತಪ್ಪ ಸಲ್ಲ | ಕೆಟ್ಟ ಮಂದಿದು ಎಷ್ಟು ಬೋಲ್ಬಲ ||
ಈಗೈತಪ್ಪ ಇಂಗ್ರೆಜಿ ಅಮಲಾ | ಗಂಡಸೊತ್ತುದು ಹೆಂಗಸರ ಕಾಲ ||

|ಏರು||

ಹೆಣ್ಣ ಸರರ್ಕಾರ ಇದು ಮಣ್ಣಾಗ ಹಾಕಲಿ
ಸವನ ಮಾಡಿ ಇಟ್ಟೈತಿ ಎಲ್ಲಾ ಕುಲ |

ಹೊಟ್ಟಿಯಂಥ ವೈರಿ ಯಾವುದಿಲ್ಲ
ರೊಟ್ಟಿಯಂಥ ಮೈತರು ಇಲ್ಲ ||

೨ನೆಯ ಚೌಕ

ಹರೇಬಾಜ ನಿಶೇಬಾಜ ರಾಂಡಬಾಜ
ಮೂರು ಬಾಜನಾಗ ಭಾಡ ಭಾಗಸ್ತದ ಬಿಡುದಿಲ್ಲ |

ಭಾಗಿನಿಂದ ಮುಂದ ಬೈಲಾಗಿ ನಿಂತಿತು
ಕೂಳ ಅಂಬುದು ಆದೀತು ಬೆಲ್ಲ ||

ಆಣಿ ಮಾಡಿ ಮಾಡಿ ದೇಣೆ ತಂದಾರಪ್ಪ
ಘಾಣ ಬರಕೊಟ್ಟಾರ ಎಲ್ಲಾ |

ಆಣಿ ಕಾಗದ ಮ್ಯಾಲ ದೇಣೆ ಹೆಗಲ ಮ್ಯಾಲ
ಬರಕೊಂಡವರ‍್ಹೊಹಕೊಂಡರೆಲ್ಲ ||

ಕುಂಡಿ ತುಂಬಿದ ಮಂದಿ ಕೂಗಿ ದೇವರ ಹೇಳಿ
ಹಿಡಿಸಿಕೊಂಡಾರಪ್ಪ ತಮ್ಮ ಕಾಲ |

ಮನಸ್ಯಾನ ಮೈಯಾಗ ದೇವರ ಬಂದರ
ಜಗಲಿ ಮ್ಯಾಲ ಒಂದು ಇರಲಾಕಿಲ್ಲ ||

||ಇಳುವು||

ಸತ್ತುಳ್ಳ ದೇವರು ಸಡಿಲಾದ ಕಾಲ | ಜೋಳ ಸುರುವಿ ತರ್ತಾರಪ್ಪ ಬೆಲ್ಲ ||
ಗಂಡ ನಟ್ಟ ಕಡದು ತಂದ ಜೋಳೆಲ್ಲ | ಬೆಲ್ಲ ಆಗೂದು ಪೂಜಾರಿ ಪಾಲ ||

||ಏರು||

ಅಲ್ಲದ ಮಾತೀಗಿ ಬೆಲ್ಲ ಕಳೀಬ್ಯಾಡ್ರೀ
ಸತ್ತ ಮ್ಯಾಲ ತಿಳಿದೀತೆಲ್ಲ |
ಹೊಟ್ಟಿಯಂಥ ವೈರಿ ಯಾವುದಿಲ್ಲ
ರೊಟ್ಟಿಯಂಥ ಮೈತರು ಇಲ್ಲ ||

೩ನೆಯ ಚೌಕ

ಪುಗಸಟ್ಟೆ ಪುರಾಣ ಓದಾಣ ಕಟ್ಟಾಣ
ಪಾನ ಹರದು ಪನ್ನಾಸ ಮ್ಯಾಲ |
ಕೆಟ್ಟ ಕೆಲಸ ಮಾಡಿ ಮುಟ್ಟಿ ಓದಿದವನ
ಕಟ್ಟಿ ಕಲ್ಲ ಒಂದು ಉಳಿಯಾಕಿಲ್ಲ ||
ಹೊಗಳಿ ಹೊಗಳಿ ಮಸ್ತ ಬೊಗಳಿ ಸತ್ತವೋ
ಹುಗುಳೂದು ಹುಟ್ಟೂದು ಬಿಟ್ಟಿಲ್ಲ |
ಹುಟ್ಟಿ ಬಂದ ಬಳಿಕ ಹುಶಾರ ಇರಬೇಕು
ದೇಹ ಆಗಲಿ ಶಿವನ ಪಾಲ ||

ಮೂರು ದಿನದ ಸಂತಿ ಮುನ್ನೋಡಿ ಮಾಡಿಕೋ
ಗರದಿ ನಡುದು ಮಧ್ಯಾನ ಮ್ಯಾಲ |
ಸಂಜಿ ಆದಂಗ ಒಂದು ಗುಂಜಿ ಇರಲಾಕಿಲ್ಲ
ಖಾಲೇ ಮಾರಿ ಆದವೊ ಚೀಲ ||

||ಇಳುವು||

ಜಮಾಖರ್ಚು ಮಾಡತಾರ ಮ್ಯಾಲ | ಕಾಣಿದ್ರ ಕಟ್ಟತಾರ ಕಲ್ಲು
ತೇರದಾಳ ಪ್ರಭು ನಿನ್ನ ಕೀಲ | ನರಕಾಗೂದು ಬಿಡಲಾಕಿಲ್ಲ ||

||ಏರು||

ಗೋಪಾಲ ದುರದುಂಡಿ ಕರೆದು ಹೇಳತಾರ
ಅಂಜಬ್ಯಾಡ್ರಿ ಇರತೇವು ಬೆನ್ನ ಮ್ಯಾಲ |
ಹೊಟ್ಟಿಯಂಥ ವೈರಿ ಯಾವುದಿಲ್ಲ
ರೊಟ್ಟಿಯಂಥ ಮೈತರು ಇಲ್ಲ ||

ರಚನೆ :  ಗೋಪಾಲ ದುರದುಂಡ
ಕೃತಿ :  ಜೀವನ ಸಂಗೀತ