ನಾಡದೇವಿ ನಿನಗ ಶರಣು ಮಾಡುವೆನು | ಕೂಡಿದಂತ ಸಭಾದೊಳಗ ಹಾಡುವೆನು |
ನಾಡ ತರುಣರೊಳು ಐಕ್ಯ ಬೇಡುವೆನು | ನಾಡಕಷ್ಟದೂಡಿರಂತ ಹೇಳುವೆನು||ಪ||

ವಂದನ ವಂದನ ನಾಡಬಾಂಧವರೆ | ವಂದನ ವಂದನ ಅಂಣ ತಮ್ಮಂದಿರೇ |
ವಂದ ವಂದನ ಅಕ್ಕ-ತಂಗಿಯರೇ | ವಂದನ ವಂದನ ಹಿಂದು-ರಾಷ್ಟ್ರೀಯತೇ||೧||

ರೈತ ಸಭೆಯೊಳಿಂದು ಒಂದು ಹಾಡುವೆನು | ರೈತ ರಾಜ್ಯದೊಡೆಯನೆಂಬ ತತ್ವವನು |
ರೈತನಿಂದ ಲೋಕವೆಲ್ಲ ನಡೆವುದನು | ರೈತಗೈಯ್ವ ಭೂಮಿ ಕರ್ಮ ಭೋಗವನು||೨||

ಭಾರತ ರಾಜ್ಯವೀಗ ಸ್ವಾತಂತ್ರವಾಯ್ತು | ಪಾರತಂತ್ರ ಕಡಿದು ಸ್ವರಾಜ್ಯ ಬಂತು |
ಘೋರ ಯುದ್ಧಸಾಗಿ ಹೊಟ್ಟೆಗಿಲ್ಲದಾಯ್ತು | ಮಾರಿಯಾಗಿ ಕೊಲ್ಲುದಕ್ಕ ಕಂಟ್ರೋಲಬಂತು||೩||

ಕಾಲಚಕ್ರ ತಿರುಗಿ ಹಿಂದುಸ್ತಾನದಾಗ | ನಲವತ್ತು ಕೋಟಿ ಜನಸಂಖ್ಯಾ ಈಗ |
ಸಾಲುದಿಲ್ಲ ಭೂಮಿ ಬೆಳೆದ ಧಾನ್ಯನಮಗ | ಏಳಬೇಕು ರೈತ ಕೈಯ್ಯ ಮುಗಿವೆ ನಿನಗ||೪||

ಒಕ್ಕಲುತನವ ಬೆಳಿಸೋಬೇಗ ನೇಗಿಲಯೋಗಿ | ಟ್ರ್ಯಾಕ್ಟರ ಹೊಡೆದು ಭೂಮೀ ಹಸನಮಾಡಲಾಗಿ |
ತಕ್ಕ ಕಾಂಪೋಸ್ಟ ಗೊಬ್ಬರ ಹಾಕಲಾಗಿ | ಲೆಕ್ಕ ತಪ್ಪಿ ಬಂದ ಬೆಳೆಯ ನೋಡೋ ತೂಗಿ|೫||

ಮಂಣ ಬಂಗಾರ ಮಾಡುವಂತ ಗೊಬ್ಬರವು | ಮಂಣಗೂಡಿ ಬೆಳೆದ ಬೆಳೆಯ ಅಬ್ಬರವು |
ಮಂಣು ಬೆಳೆದರಿಲ್ಲ ಲೋಕದಲ್ಲಿ ಬರವು | ಮಂಣಿನಲ್ಲಿರುವ ಹೊನ್ನು ಹೆಂಣಿನಿರವು||೬||

ಗೊಬ್ಬರ ಗೊಬ್ಬರವೆ ಕಲ್ಪತರವು | ಗೊಬ್ಬರ ಗೊಬ್ಬರ ಬೇಡಿದಂತ ವರವು |
ಗೊಬ್ಬರ ಗೊಬ್ಬರ ಬೆಳ್ಳಿ ಬಂಗಾರವು||೭||

ಆರಿಸಿ ತೆಗೆದ ಬೀಜವನ್ನು ಬಿತ್ತಬೇಕೋ | ಹೋರಿ ಬೀಜಕ ಬಿಟ್ಟು ಆಕಳು ಕಟ್ಟಬೇಕೋ |
ನೂರಾ ಎಂಟು ಎಂಟರ ಗೋಧಿ ಬಿತ್ತಬೇಕೋ | ಪೂರಾ ಪೂರಾ ಬೆಳೇಯ ಕಂಡು    ಹಿಗ್ಗಬೇಕು ||೮||

ಭಾವಿಗಾಗಿ ಸಬ್‌ಸೀಡಿಯ ಪಡೆಯಬೇಕೋ | ತ್ಯಾಂವದಾಗ ಕೋಯಿಮತ್ತೂರ
ಕಬ್ಬು ಹಚ್ಚಬೇಕೋ
ಹೂವು-ಕಾಯಿ ಬಿಟ್ಟ ಬಳ್ಳಿ ನೋಡಬೇಕೋ | ಸೇವ ಲಿಂಬಿ ಬಟಾಟಿ ಗೆಣಸು
ಬೆಳೆಯಬೇಕೋ ||೯||

ಹೊಸದಾಗಿ ಭೂಮಿ ಬದುಕು ಮಾಡಿದಾಂಗ | ಹೊಸದಾಗಿ ಮಡದಿ ಮುಖ ನೋಡಿದಾಂಗ |
ಹೊಸ ಮಾದರಿಯ ಪೈರು ಬೆಳಸಿದಾಂಗ | ಹೊಸ ಲಾಭ ನಮಗ ದೊರಕಿದಾಂಗ||೧೦||

ಬೆಂಡಿ ಹೀರಿ ಚವಳಿಕಾಯಿ ಪಲ್ಲೇಗಳ | ದುಂಡಲಿಂಬಿ ಪೇರಲ ಬಾಳಿ ತೋಟಗಳ |
ಕಂಡಾಂಗ ಬಲಿಸಿ ನಮ್ಮ ನಾಡಬಾಳ | ಉಂಡುಟ್ಟು ಮೆರೆಯಲಿ ರೈತ ಮೇಲ||೧೧||

ಬಾಳ ಬುದ್ಧಿವಂತ ಲಾರ್ಡ ಬಾಯಿಡ್ ಭಲಾ | ಹೇಳಿದನು ಭೂಮಿಯಲ್ಲಿ ಕೃಷಿವಲಾ |
ನಾಳಿಗಿರಲಿ ರಾಜಕಾರಣ ಊಳೋ ನೆಲಾ | ಮ್ಯಾಲೆ ಯಾವುದಿಲ್ಲ ಇದಕೂ ಶ್ರೇಷ್ಠ ಫಲ||೧೨||

ಗಾಂಧಿ ಒಂದು ಮಾತಿನಿಂದ ಗರ್ಜಿಸಿದ | ಹಿಂದುಸ್ತಾನಕೆಂದು ರೈತ ಮಂತ್ರಿಯಾದ |
ಎಂದು ಅವನ ಕಾರ್ಯದರ್ಶಿ ನೇಹರೂ ಆದ | ಅಂದು ನಮ್ಮ ಸ್ವಾತಂತ್ರ ಸಿದ್ಧಿಯೆಂದ||೧೩||

ತಂದೆ-ತಾಯಿ ಆಪ್ತ ಬಂಧು ಬಳಗ ರೈತ | ಇಂದ್ರ-ಚಂದ್ರರಂತೆ ಲೋಕ ಬೆಳಗುವಂಥ |
ಹಿಂದೂ-ಮುಸ್ಲಿಮರೊಂದುಗೂಡುವಂತ | ಮುಂದೆ ಬರಲಿ ಭಾಗ್ಯ ಕವಿತೆ ಹಾಡುವಂತ||೧೪||

ಅಳಿದ ಕಂಟ್ರೋಲಿನ ಕಾಲ ಮತ್ತೆಬಂತು | ಹಳೆಯ ಕಳ್ಳ ಪ್ಯಾಟಗೀಗ ದೊಡ್ಡ ಕುತ್ತು |
ತಿಳಿದನಡದರ ಹೋಳಿಗಿ – ತುಪ್ಪದಾಗ ಬಿತ್ತು | ಕಳವಿಗೆ ಮೂರು ವರ್ಷ
ಶಿಕ್ಷೆಮಂಣ ಹೊತ್ತು  ||೧೫||

ಕಾಳ ಕಡಿ ಆಹಾರ-ಧಾನ್ಯ ಬೆಳೆಯಿರೀಗ | ಹಾಲು-ತುಪ್ಪ ಕೈಯ್ಯ ತೊಳೆಯಿರೀಗ |
ತಾಳಗೆಟ್ಟು ತಿನ್ನಬ್ಯಾಡ್ರಿ ವ್ಯಾಪಾರದಾಗ | ಕೀಳತನಕ ಬೀಳಬ್ಯಾಡ್ರಿ ಲೋಕದಾಗ||೧೬||

ಒಕ್ಕಲುತನದ ಮಂತ್ರಿ ಎಮ್.ಪಿ.ಪಾಟೀಲರು | ಚೊಕ್ಕ ಮಾತಹೇಳಿ ದಾರಿ ಹಿಡಿಸುವರು |
ಹಕ್ಕಿನಿಂದ ಭೂಮಿ ಬಲಗೊಳಿಸುವರು | ರೊಕ್ಕ ಬೇಕಂದ್ರ ನಿಮಗ ಕೊಡಿಸುವರು||೧೭||

ನಾಡ ನುಡಿಯ ಹಾಡಕೇಳಿ ಸರ್ವಜನಾ | ಮಾಡಬೇಕು ಒಕ್ಕಲುತನ ಸುಧಾರಣ |
ನಾಡಕವಿ ಶ್ರೀಕಂಠನ ಕವನ | ನಾಡಿಗಾಗಲೀ ದಿವ್ಯ ದರ್ಶನ||೧೮||

ರಚನೆ :  ನಲವಡಿ ಶ್ರೀಕಂಠಶಾಸ್ತ್ರಿ
ಕೃತಿ : ರಾಷ್ಟ್ರಗೀತಾವಳಿ