ಕುಂತ ಸಭಾದಾಗ | ನಿಂತು ಹಾಡುವೆ ಮತಿ | ವಂತ
ಹಿಂದು ಬಂಧೂ ಬಳಗಕ್ಕ | ನೀತಿವಂತರಾಗಲೆಂದು
ಪಾದಕ್ಕ | ಕೈ ಮುಗಿದು ಬೇಡುವೆ ಎಲ್ಲ ದೈವಕ್ಕ ||
ಮಧ್ಯಪಾನ ಮಾಡಬಾರದಂತನಾ | ಸಾರೀ ಹೇಳುವೆ
ಹುಟ್ಟಿ ಬಾಳೂದಕ | ಪಾಪ ಕೀಳೂದಕ||೧||

ಕುಡಿದು ಕುಡಿದು ಎದೆಯೊಡೆದು ಸಾಯುತೀರಿ | ಮಡದೀ
ಮಕ್ಕಳ ಗೋಳಾಟಕ್ಕ | ನೀವು ಎಡೆಯಾಗುತೀರಿ
ಯಮಲೋಕಕ್ಕ | ಮುಂದ ನಡದು ಹೋಗತೀರಿ ನರಕಕ್ಕ ||
ಮಾಡಬಾರದಂತ ಪಾಪಮಾಡಿ ಕಷ್ಟಪಡೆಯತೀರಿ |
ನಡತಿ ಬಿಟ್ಟಿದ್ದಕ | ಕುಡದು ಕೆಟ್ಟದ್ದಕ||೨||

ಮಧ್ಯ ಕುಡದು ಮಾನಾ ಕಳಕೊಳ್ಳತೀರಿ
ಮನಬಂದ ಹಾಂಗ ನೀವು ಮಾತಾಡಿ |
ಎದ್ದು ಜೋಲೀ ಹೊಡೆಯುತೀರಿ ಹೊಯ್ದಾಡಿ |
ಬುದ್ಧಿಗೆಟ್ಟು ಬೊಗಳತೀರಿ ಬೈದಾಡಿ |
ಸುದ್ಧ ಮಂಗನಾಂಗ ಮಾಡತೀರಿ ನಿಮಗ | ನಾಚಿಕಿಲ್ಲ
ಹೆಂಡ ಕುಡದ್ದಕ | ಭಂಡರಾದದ್ದಕ||೩||

ಕರಳ ಕೊರದು ತೂತು ಕೆಡುಹುವಂತ ಭಟ್ಟಿ | ಶರೇ
ಕುಡಿಯುತೀರಿ ಮಿತಿಮೀರಿ | ಹೊಟ್ಟಿ ಮುರಿದು
ಹೊಯ್ಯಕೊಂತೀರಿ ಕೈಮೀರಿ | ನಿಮ್ಮನ್ನ ಕರಿಯಾಕ
ಬರತಾಳು ಮಹಾಮಾರಿ ||
ಎವ್ವಾ ಸಾಯಲಾರೆ ಎಪ್ಪಾ ಸಾಯಲಾರೆ ಎಂದು
ಹೊಯ್ಯಕೊಂತೀರಿ ಹೌಹಾರಿ | ಸುಡಗಾಡದಾರಿ||೪||

ಬಟ್ಟಿಯೊಳಗ ಬೆಂಕಿ | ಕಟ್ಟಿದಾಂಗ ನೀವು |
ಭಟ್ಟೀಶೆರೆ ಕುಡದರಾಗೂದು |
ಎದಿಸುಟ್ಟ ಸುಂಣದಾಂಗ ಬೇವೂದು ||
ಅನ್ನ ತಿಂದು ವಾಂತಿ ಮಾಡಿಕೊಳ್ಳುದು ||
ಘಟ್ಟಿ ಮಾತು ಎದಿತಟ್ಟಿ ಹೇಳುವ ಲಂಕಿ |
ಸುಟ್ಟಾಂಗ ಮೈ ಸುಟ್ಟ ಹೋಗುವುದು | ಹಾಳಾಗುವುದು||೫||

ಕೆಟ್ಟ ಶರೇ ಕುಡದ ಜನ | ಕೆಟ್ಟ ಹೋಗಬಾರದಂತ
ಗುಟ್ಟ ಒಡದ ಹೇಳತೇನಿ ಲೋಕಕ್ಕ |
ಬ್ರಹ್ಮ ಹುಟ್ಟಿಸಿಲ್ಲ ಮಧ್ಯಪಾನ ಮಾಡುದಕ |
ಅದು ನಟ್ಟ ನಡುವೆ ಬಂದೈತಿ ಒಯ್ಯಾಕ ||
ಕೆಟ್ಟ ಶೆರೇ ನಮ್ಮ ಹೊಟ್ಟೆಯೊಳಗ ಹೊಕ್ಕು |
ಮಡದೀ ಮಕ್ಕಳನ್ನ ಕೊಲ್ಲುದಕ | ಹೊರ ಚೆಲ್ಲುದಕ||೬||

ಸಾವಿರಾರು ಮಂದಿ ಶೆರೇ ಕುಡದು |
ಸಾಯತಾರು ಇಪ್ಪತ್ತು ಮೂವತ್ತು ವರ್ಷಕ್ಕ |
ಸಾವಿಗೆ ತುತ್ತಾಗತಾರ ಸುಡಗಾಡಕ |
ಶೆರೇ ಹುಟ್ಟೇತಿ ಲೋಕ ಸಂಹಾರಕ್ಕ ||
ಕಂಣ ಮುಟ್ಟ ನೋಡಿ ನೋಡಿ |
ಬೆನ್ನ ಹತ್ತಬ್ಯಾಡ್ರಿ ನಿಮ್ಮನ್ ಕೊಲ್ಲಾಕ ಬಂದ |
ಮಧ್ಯಪಾನಕ್ಕ | ಪ್ರಾಣ ದಾನಕ್ಕ||೭||

ಕಡೆಯ ಮಾತ ಹೇಳತೇನಿ | ಕುಡಿಬ್ಯಾಡ್ರೆಂತ ನಾನು
ಸಿಡಿಲ ಬಡದ ಮರದಾಂಗ ದೇಹಕ್ಕ |
ಕುಡದವರ ನಾಶ ಮಾಡುವಂತ ಮಧ್ಯ ಮೋಹಕ್ಕ |
ಯಾರು ಬೀಳಬ್ಯಾಡ್ರಿ ಸರ್ವ ನಾಶಕ್ಕ ||
ಭರತ ಖಂಡದಾಗ ನೀವು | ಮರಳಿ ಹುಟ್ಟಾಕ
ಹುಲ್ಲಲ್ಲಿ ಹುಟ್ಟಿ ಬರೂದಕ | ಜನ್ಮ ತರೂದಕ

ರಚನೆ : ನಲವಡಿ ಶ್ರೀಕಂಠಶಾಸ್ತ್ರಿ
ಕೃತಿ : ಧರ್ಮದ್ರೋಹ