ಮದ್ಯಪಾನ ಮಾಡಬಾರದಂತ |
ಮಾಡಿದರ ಬಾಳ ಕೆಡಕಂತ ||
ಸಿಂದೀ ಶೆರೇ ಕುಡಿಯಬಾರದಂತ |
ಕಾಯ್ದೆ ಆಗೇತಂತ | ಮೂರು ವರುಷಂತ ||
ಕುಡದವಗ ಶಿಕ್ಷೆ ಅದಕಂತ||೧||

ಶೆರೇ ಮಾರೀ | ಹೊಲಮನಿ ಮಾರಿ
ಮಾರಿಸತಾಳ ವೈರಿ | ನೆತ್ತರಾ ಕಾರಿ ||
ಕೊಲ್ಲುದಕ ಲೋಕ ಸಂಹಾರೀ||೨||

ಮಿತಿಮೀರಿ ಕುಡದು ಮತಿಗೆಟ್ಟು |
ಕರಳು ಎದೆಸುಟ್ಟು | ಸಾಯುತೀರಿ ಬಿಟ್ಟು ||
ಹೆಂಡರ ಕೈಯಾಗ ಪರಟಿಯ ಕೊಟ್ಟು||೩||
ಶೆರೇ ಕುಡದು ಹಿಡಿದು ಅಡ್ಡದಾರೀ ||
ಗಟಾರದಾಗ ಹಾರಿ | ನೆತ್ತರಾ ಸೋರಿ ||
ಹಣಿಪಟ್ಟಿ ಕಟ್ಟಿಕೊಳ್ಳತೀರಿ||೪||

ಮಾನಗೆಟ್ಟ ಮಾಡತೀರಿ ಹ್ಯಾಂಗ |
ಸುದ್ದ ಮಂಗನಾಂಗ | ಮನಕ ಬಂದಾಂಗ ||
ನೋಡಬೇಕ ಕುಡದಾಗಿನ ರಂಗ||೫||

ಸರಕಾರ ಮಾಡಿದಂತ ಕಟ್ಟ |
ಕೇಳ್ರಿ ಕಿವಿಮುಟ್ಟ | ಇನ್ನು ಪಣತೊಟ್ಟ ||
ಬಿಡದಿದ್ರ ಜೇಲು ಗಟ್ಟಿಮುಟ್ಟ||೬||

ಹೊಸರಾಜ್ಯ ಬಂತು ಸ್ವರಾಜ್ಯ |
ಮದ್ಯಪಾನ ತ್ಯಾಜ್ಯ ಮಾಡಬೇಕಂತ ||
ನಿರ್ಬಂಧಕಾಜ್ಞೆ ಆತಂತ||೭||

ಕುಡದ ಒಬ್ಬ ಡ್ರಾಯವ್ಹರ ಗಾಡೀ ಬಿಟ್ಟ |
ಗಿಡಕ ಓದಿಟ್ಟ | ಎಲ್ಲರ ಕೊಂದಿಟ್ಟ |
ಕಾಜನಟ್ಟು ಎದ್ಯಾಗ ಪ್ರಾಣಬಿಟ್ಟು||೮||

ಬಸರಿದ್ದ ಹೆಂಡತಿ ಮನೆಯಾಗ |
ಕುಡದು ಬಂದನಾಗ | ಬಡಿದ ಬೆನ್ನಮ್ಯಾಗ ||
ಬಸರ ಬಿಚ್ಚಿ ಬಿತ್ತ ಭೂಮಿಮ್ಯಾಗ||೯||

ಕೈಮುಗಿದು ಹೇಳುವೆ ಕುಡಕರಿಗೆ |
ಕುಡಿಯಬ್ಯಾಡ್ರಿ ಮರೀಗೆ | ಕದ್ದು ಕುಡಿವರಿಗೆ||
ಬಿಟ್ಟಿದ್ದಲ್ಲ ಕಬ್ಬಿಣದ ಸರಿಗೆ||೧೦||

ಹಿಂದುಸ್ತಾನ ಸುಧಾರಿಸಲಂತ |
ಕಾಯ್ದೆ ಮಾಡ್ಯಾರಂತ | ಕುಡಿಯಬ್ಯಾಡ್ರೆಂತ ||
ಗ್ರಾಮವಾಣೀ ಲಾವಣಿ ಸರಸಂತ||೧೧||

ರಚನೆ :  ನಲವಡಿ ಶ್ರೀಕಂಠಶಾಸ್ತ್ರಿ
ಕೃತಿ : ಧರ್ಮದ್ರೋಹ