ಹಿಂದುದೇಶ ಉದ್ಧಾರಮಾಡಿದಂತ| ಗಾಂಧೀ-ಮಹಾತ್ಮನ ಪಾದಕ್ಕ |
ನಾ ವಂದಿಸುವೆ ಹಿಂದು-ಬಂಧು ಬಳಗಕ್ಕ | ಆನಂದದಿಂದ ಕುಂತು ಎಲ್ಲದೈವಕ್ಕ ||
ಹಿಂದೂಸ್ತಾನದಾಗ ಮುಟ್ಟಬಾರದ ಕುಲ | ಹುಟ್ಟೇ ಇಲ್ಲ ತಿಳಿಸೂದಕ | ಹೊಲಿ ಕಳಸೂದಕ ||
ಹರಗೀಗಾ ||೧||

ಮುಟ್ಟೀರಿ ಗಿಟ್ಟೀರಂತ ಮುರಕಾ ಮಾಡತೀರಿ | ಹೊಟ್ಟಿಯೊಳಗಿದ್ದ ಮಲಮೂತ್ರಕ್ಕ |
ನೀವು ಕಟ್ಟುಮಾಡುದಿಲ್ಲ ಹೊರಾಗ ಬರಾಕ | ಕೈಮುಟ್ಟಿ ಮುಟ್ಟಿ ತೊಳಿತೀರಿ ಶೌಚಕ್ಕ ||
ಹುಟ್ಟಿ ಬಂದದ್ದು ಹೊಲಿ | ಗಟ್ಟಿಗೊಂಡಿದ್ದು ಹೊಲಿ | ಮುಟ್ಟಿಯಿಲ್ಲ ನಮ್ಮ ಮಾನವ ಕುಲಕ |
ಹಿಂದು ಧರ್ಮಕ್ಕ  ||೨||

ಸೃಷ್ಟಿ ಮಾಡುವಾಗ ಬ್ರಹ್ಮ ಹುಟ್ಟಿಸಿದ ಹೆಂಣು-ಗಂಡು | ಒಟ್ಟುಗೂಡಿ ಮಾಡಿದ ಸಂಸಾರ |
ಜಗಹುಟ್ಟಿ ಆಯ್ತು ಕುಲ ಗೋತ್ರ ವಿಸ್ತಾರ | ಮನಮುಟ್ಟಿ ಮಾಡಿದಂತ ಈ ಅವಿಚಾರ ||
ಒಟ್ಟಿನಲ್ಲಿ ಹೊಲಿ-ಜಾತಿ ನಟ್ಟನಡುವೆ ಹುಟ್ಟಿಬಂತು | ಮೊಟ್ಟಮೊದಲು ಇದ್ದಿಲ್ಲ ಮುಟ್ಟದವರ |
ಹುಟ್ಟಿಬಂದವರ  ||೩||

ಸಾವಿರಾರು ವರುಷದಿಂದ ಹೊಲಿಯರಂತ ಹೊರಗಟ್ಟಿ | ಎತ್ತಿ ಹಣಸತೀರಿ ನೀವು ಕೆರಿ ನೀರ |
ಅವರು ಅತ್ರುಕೇಳೂದಿಲ್ಲ ನೀವೊಬ್ಬರ | ನಿಮ್ಮ ಎತ್ತು, ಎಮ್ಮಿ ಸತ್ರ ಅವರು ತಯ್ಯಾರ ||
ಹೊತ್ತುಕೊಂಡು ಹೋಗಿ ನಿಮಗ ಜತ್ತಿಗಿ ಮಿಣಿ ಮಾಡಿಕೊಟ್ರ | ಕುತ್ಗಿ-ಕೊಯ್ದ ಬಿಟ್ರ ನೀವು
ಹರಿಜನರ | ಮುಟ್ಟಿದಲೆ ಅವರ   ||೪||

ಬುದ್ಧ ಬಸವ ಮಹಮ್ಮದ ಪೈಗಂಬರ | ಹುಟ್ಟಿದಾಗಿಲ್ಲಂತ ಹೊಲಿಜಾತಿ |
ಅವರು ಗಟ್ಟಿ ಹೇಳಿದ ಧರ್ಮ ನೀತಿ | ನಡತಿ ಬಿಟ್ಟ ಜನ ಕೆಟ್ಟ ಹಾದಿ ಹಿಡಿದೈತಿ |
ಮೊಟ್ಟ ಮೊದಲು ಹರಿಜನರ | ಮುಟ್ಟಿ ದಯತೋರುವಂಥ | ಶ್ರೇಷ್ಠವಾದ ಭಾರತ ನೀತಿ |
ಬಾಂಧವ ಪ್ರೀತಿ    ||೫||

ಯಾರಕರ್ರಗ | ಯಾರ ಬೆಳ್ಳಗ | ಎಲ್ಲ ಮಂಣಿನ ಮಡಕಿ | ಜಾತಿಯಿಲ್ಲಂತ ಗುರುನಾನಕ |
ಸತ್ಯ ಸಾರಿ ಹೇಳಿದ ಸರ್ವ ಲೋಕಕ್ಕ | ಕಿತ್ತು ಹಾಕಿಬಿಟ್ಟ ಜಾತಿಯತತ್ವಕ್ಕ |
ಕತ್ತಿಹಾಂಗ ಬೆನ್ನಹತ್ತಿ | ಕಪ್ಪಹಚ್ಚ ಬ್ಯಾಡ್ರಿ ನಮ್ಮ | ಉತ್ತಮ ಹಿಂದೂ ಧರ್ಮಕ್ಕ |
ಕುಲ ಕರ್ಮಕ್ಕ ||೬||

ಮುತ್ತು ಚಿಪ್ಪಿನಲ್ಲಿ ಹುಟ್ಟಿ ಮೂಗುತಿಯಾಯಿತು | ರತ್ನಕಲ್ಲು ಮಂಗಲ ಪದಕ |
ಹುಟ್ಟು ಕಾರಣವಲ್ಲ ಹೊಲಿಯರ ಕುಲಕ್ಕ | ಮುಟ್ಟು ಇಲ್ಲ ನಮ್ಮ ಹರಿಜನಕ್ಕ |
ಮುಟ್ಟಿನಲ್ಲಿ ಹುಟ್ಟಿ ಬಂದ ಪಿಂಡಾಂಡ ಬ್ರಹ್ಮಾಂಡ | ಸೃಷ್ಟಿಸಿದ ಬ್ರಹ್ಮ ಮುಟ್ಟೂದಕ |
ಹೊಲಿ ಅಟ್ಟೂದಕ  ||೭||

ರಕ್ತ-ಮಾಂಸ ಮಜ್ಜಾಸ್ಥಿ ರೋಮ ತೊಗಲು ಮೂಳೆ | ತಾಯಿ ಗರ್ಭದಲ್ಲಿ ಬೆಳೆದ ಪಿಂಡಾಂಡ |
ಹೊರಗಬಿದ್ದ ಮ್ಯಾಲೆ ಆಯ್ತು ಈ ಬ್ರಹ್ಮಾಂಡ | ಕುಲಹದಿನೆಂಟು ಭಾರತ ಭೂಖಂಡ ||
ಮೈಲಿಗಿ ಅನ್ನುವವರು ಎಲ್ಲಿ ಹುಟ್ಟಿಬಂದ್ರು ಕೇಳ್ರಿ | ಹುಟ್ಟಿಲ್ಲೇನೋ ತಾಯಿ ತಂದಿ ರಕ್ತಕ್ಕ ಮುಟ್ಟ    ಅನ್ನೂದಕ  ||೮||
ವ್ಯಾಸ ಬೋಯತಿಮಗ | ದುರ್ವಾಸ ಮಚ್ಚಿಗ ಕೌಶೀಕ ಕೌಂಡಿನ್ಯ ನಾರದ |
ಋಷಿ ಕಶ್ಯಪ ಕಮ್ಮಾರ ತಾನಾದ ಮುನಿ ಶಾಂಡಿಲ್ಯ ಕುಲದಿಂದ ನಾಯಿದ |
ಕೊಲ್ಲುವವ ಮಾದಿಗ | ಹೊಲಸು ತಿನ್ನುವವ ಹೊಲೆಯ | ಮುಟ್ಟಿದ ಬಸವೇಶ್ವರ
ಅಸ್ಪೃಶ್ಯರ   ||೯||

ಮಚಿಗಾರ ಹರಳಯ್ಯ ಮಾದಾರ ಚೆನ್ನಯ್ಯ | ಶಿವಶರಣ ಕಕ್ಕಯ್ಯಡೋಹರ |
ಬಿಟ್ಟ ಎಡೆಯನುಂಡ ಬಸವೇಶ್ವರ | ಮುಟ್ಟು ಮೈಲಿಗಿ ಕಳೆದ ಶಿವಭಕ್ತರ |
ಮಧುವಯ್ಯ ಹರಳಯ್ಯ ಹಾರೂರ ಮಚಿಗಾರ | ಮದಿವಿ ಮಾಡಿಸಿಬಿಟ್ಟ ಅಸ್ಪೃಶ್ಯರ|
ಮುಟ್ಟಿ ಅನ್ನುವವರ  ||೧೦||

ಜಾತೀ ಭೂತವನ್ನು ಹೊಡೆದು ಅಟ್ಟಿದರು | ಖ್ಯಾತಿವಂತ ಗಾಂಧಿ ಮಹಾತ್ಮರು |
ಹಿಂದೂ-ಮುಸ್ಲಿಮರೊಂದಾಗಿರೆಂದರು | ಅದಕಾಗಿಯೇ ಅವರನ್ನು ಕೊಂದರು |
ಸಿಂದೀ-ಶೆರೇ ಕುಡದು ಕುಲಕುಲ ಅಂತೀರಿ | ತಿಳಿದು ನಡೆಯಬೇಕ್ರಿ ಮುಂದಾದರು
ಹಿಂದು ಬಾಂಧವರು  ||೧೧||

ರಚನೆ : ನಲವಡಿ ಶ್ರೀಕಂಠಶಾಸ್ತ್ರಿಗಳು
ಕೃತಿ : ರಾಷ್ಟ್ರಗೀತಾವಳಿ