ಇನ್ನು ಕೃಷ್ಣ ಪಾರಿಜಾತ ಮತ್ತು ಭಾಮಾಕಲಾಪದಲ್ಲಿಯ ಸಾಮ್ಯತೆಯನ್ನು ಮತ್ತು ವೈವಿಧ್ಯತೆಗಳನ್ನು ಭಿನ್ನತೆಗಳನ್ನು ಪರಿಶೀಲಿಸೋಣ.

ಕಥೆ :  ಕಥೆಯು ಎರಡಕ್ಕೂ ಸಾಮನ್ಯವಾದುದು. ಒಂದೇ ಮೂಲದಿಂದ ಅಯ್ದದ್ದು. ಹರಿವಂಶದಲ್ಲಿಯ ಕಥೆಯ ಮೂಲವೇ ಎರಡಕ್ಕೂ ಆಧಾರ. ಅಂದರೆ ನಾರದರು ಸ್ವರ್ಗದಿಂದ ತಂದ ಪಾರಿಜಾತ ಪುಷ್ಪವನ್ನು ರುಕ್ಮಿಣಿಯೊಡನಿದ್ದ ಕೃಷ್ಣನಿಗೆ ಕಾಣಿಕೆಯಾಗಿ ಕೊಟ್ಟು ಅದನ್ನು ಅಷ್ಟಪಟ್ಟದರಸಿಯರಲ್ಲಿ ಒಬ್ಬಳಾದ ರುಕ್ಮಿಣಿಗೆ ಕೊಡಲು ಹೇಳುತ್ತಾರೆ. ಕೃಷ್ಣನು ಕೊಡುತ್ತಾನೆ. ಈ ವಿಷಯವು ಅವನ ನಲ್ಲೆಯರಲ್ಲೆಲ್ಲಾ ಸೌಂದರ್ಯವತಿಯಾದ, ಅಸೂಯೆಗೆ ಹೆಸರಾದ ಸತ್ಯಭಾಮೆಗೆ ತಿಳಿದು ಕೋಪಿಸಿಕೊಳ್ಳುತ್ತಾಳೆ. ಕೃಷ್ಣನೇ ಬಂದು ಸಂತೈಯಿಸಿದರೂ, ಆತನಿಗೆ ತನ್ನ ಎಡಗಾಲನ್ನು ತಾಗಿಸುವಷ್ಟು ಅಹಂ ಹೊಂದುತ್ತಾಳೆ. ಕೊನೆಗೆ ವಿರಹಾಗ್ನಿಯಿಂದ ಬೆಂದು, ನೊಂದು, ಕೃಷ್ಣನನ್ನು ಭಕ್ತಿಯಿಂದ ಒಲಿಸಿ ಸ್ವರ್ಗದಿಂದ ಪಾರಿಜಾತ ವೃಕ್ಷವನ್ನೇ ತಂದು ತನ್ನ ತೋಟದಲ್ಲಿ ನೆಡುವುದಾಗಿ ಕೃಷ್ಣನಿಂದ ವಚನಪಡೆಯುತ್ತಾಳೆ. ಹರ್ಷಚಿತ್ತಾಳಾಗುತ್ತಾಳೆ. ಕೃಷ್ಣನು ಸ್ವರ್ಗಕ್ಕೆ ಹೋಗಿ ಇಂದ್ರನೊಡನೆ, ಹೋರಾಡಿ ಯುದ್ಧಮಾಡಿ, ಜಯಿಸಿ ವೃಕ್ಷವನ್ನು ತರುತ್ತಾನೆ. ಎರಡರಲ್ಲೂ ಈ ಅಂಶವು ಗೌಣವಾಗಿದೆ. ಅಂದರೆ ವೃಕ್ಷವನ್ನು ಸ್ಥಾಪಿಸಿದ್ದರ ವಿಷಯ ಸೂಚಿತವಾಗಿಲ್ಲ.

ಎರಡರಲ್ಲೂ ಕಂಡು ಬರುವ ಸಾಮ್ಯತೆಯ ಅತ್ಯಂತ ಮಹತ್ವದ ಅಂಶವೆಂದರೆ ಅಲ್ಲಿಯವರೆಗೆ, ಅಂದರೆ ಈ ಎರಡು ಆಟಗಳು ರಂಗದ ಮೇಲೆ ಕಾಣಿಸಿಕೊಳ್ಳುವವರೆಗೆ ಇದ್ದ ಆಟಗಳಲ್ಲಿಯ ಸಾಹಿತ್ಯ, ಭಾಷೆ, ಪಾತ್ರಗಳಲ್ಲಿ ಅತ್ಯಂತ ಬದಲಾವಣೆಯು ಕಂಡು ಬರುತ್ತದೆ. ಅಲ್ಲಿಯವರೆಗೆ ಪ್ರೌಢ ಪ್ರಬಂಧ ಶೈಲಿಯಂದು ಹೆಸರು ಪಡೆದ ಸಾಹಿತ್ಯ ವಿಧಾನದಲ್ಲಿಯೇ ನಾಟಕಗಳ, ಆಟಗಳ ರಚನೆ ನಡೆಯುತ್ತಿತ್ತು. ಭಾಷೆ ಗಡಚು ಮತ್ತು ಅತ್ಯಂತ ಕಾವ್ಯಾಮಯವಾಗುತ್ತಿತ್ತು. ಪಾತ್ರಗಳೋ, ಪ್ರತಿಯೂಂದು ಜನಸಾಮಾನ್ಯರ ಮಟ್ಟದಿಂದ ಭಿನ್ನರಾದವರು. ಕೃಷ್ಣ ಪಾರಿಜಾತ ಮತ್ತು ಭಾಮಾ ಕಲಾಪದಲ್ಲಿ ಈ ನೋಟದಿಂದ ಸಾಕಷ್ಟು ಬದಲಾವಣೆ ಹೊಂದಿದ ಭಾಷೆ; ಪಾತ್ರ ನಿರೂಪಣೆ, ಜನಸಾಮಾನ್ಯರ ಜೀವನದ ಆಗುಹೋಗುಗಳ ಚಿತ್ರಣವು, ರಂಗಭೂಮಿಯಲ್ಲಿ ಕಂಡು ಬರುವಂತಾಯಿತು.

ಪಾರಿಜಾತದ ದೂತಿಯು ಜನಸಾಮಾನ್ಯರ ಪ್ರತಿನಿಧಿ, ಹಾಲು ಮಾರಿಸುವ ಕಲ್ಲಾಳಿ, ಆತನ ಭಾಷೆ, ದಿನ ಬಳಕೆಯ ಸಾಮಾನ್ಯ ಮಾತುಗಳು, ಆತನು ಪ್ರತಿನಿಧಿಸುವ ಹಾಸ್ಯ ಜನಜೀವನದಿಂದ ಪಡೆದುದು-ಗಿತ್ತಿಪದಕ್ಕೆ ಸಂಬಂಧಿಸಿದ ಪದಗಳನ್ನು ಹೇಳುವಲ್ಲಿ ಗೌಳಗಿತ್ತಿ, ಕಳಸಗಿತ್ತಿ, ಸೂಲಗಿತ್ತಿ, ಹಾದರಗಿತ್ತಿ ಎಂಬ ಪದಗಳನ್ನು ಹೇಳುವಲ್ಲಿ ಗಣೇಶನ ಪೂಜೆಗೆ ಕರಿಕೆಬೇಕು ಎನ್ನಲು ಎಷ್ಟೋ ಹೊರಿ ಕರಿಕೆಬೇಕು, ಸಜ್ಜಿಕಣಿಕೆ ಹೊಟ್ಟು ತಂದು ತಲಿಮ್ಯಾಲ ಸುರು ಅಂದ್ರ ಸುರಿತೀನಿ.. ಸೆರಗ ಗೋಪಾಲ ಬಿಡದಿದ್ದರೆ ಅದನ್ನು ಕತ್ತರಿಸು ಎನ್ನಲು ಗೊಲ್ಲತಿ,“ ಮುಚ್ಚಳಾ ತುಂಬಾ ಹೊನ್ನು ಕೊಟ್ಟರೂ ಮುತ್ತೈದಿತನ ಸಿಗೋದಿಲ್ಲ ’ ಎನ್ನಲು ಭಾಗವತನು, ಬಂಡಿ ತುಂಬಾಹೊನ್ನು ಕೊಟ್ಟರೂ ರಂಡಿತನ ಸಿಗೂದಿಲ್ಲವಂತ ಹಿಂದ ನಿಂತ ದೂತಿ-ಬಡಕೋತೈತಿ-ರುಕ್ಮಿಣಿ ತನ್ನ ಪತಿಯೊಂದಿಗೆ ವೈಕುಂಠದಾಗ ವಾಸ ಎನ್ನುವಲ್ಲಿ ಆ ಕುಂಟಾಗ ಯಾಕ ಕೊಟ್ಟ ತಾಯಿ ಇಂಥ ಕೂಡಿದ ಸಭಾದಾಗ ಅವರ ಹೆಸರು ಹೇಳಲು ನನಗೆ ನಾಚಿಕೆಬರತದ ಎಂದು ಸತ್ಯಭಾಮೆಯು ಹೇಳಲು, ಯವ್ವ, ನಿಮ್ಮಂತವರಿಗೆ, ಕಲಿತವರಿಗೆ ಯಾಕ್ರಿ ನಾಚಿಕೆ ಎನ್ನುತ್ತಾನೆ ಭಾಗವತ, ಕೃಷ್ಣ ಪಾರಿಜಾತದಲ್ಲಿ.

ತಲಿಮೇಲೆ ಹಲ್ಲಿ ಬಿತ್ತು ಎಂದು ಕೃಷ್ಣ ಭಾಮಾಕಲಪದಲ್ಲಿ ಹೇಳಲು ಹಾಸ್ಯಂ (ಕೃಷ್ಣ ಪಾರಿಜಾತದ ಭಾಗವತನು) ಹಲ್ಲಿ ಬಿತ್ತೋ ಅಥವಾ ಯಾರದಾದರೂ ಮನೆಗೆ ಕದಿಯಲು ಹೋದಾಗ್ಗೆ   ಕಲ್ಲು ಬಿತ್ತೋ ಮೊದಲೇ ತಿಳಿದಿದ್ದರೆ ಕಲ್ಲು ಬೀಳುವ ಸ್ಥಳದಲ್ಲಿ ಕೈ ಒಡ್ಡ ಬಹುದಾಗಿತ್ತು.  ಭಾಮೆಯು ಪರಮಾತ್ಮನನ್ನು ಕಾಣಲು ತವಕಗೊಂಡಿದ್ದನ್ನು ಹಾಡಿನಲ್ಲಿ ನೃತ್ಯದೊಂದಿಗೆ ತೋರಿಸಲು ಈತನು ಅದೇ ಹಾಡಿನ ಜಾಡಿನಲ್ಲಿ ರಾವೇ ಅನ್ನ, ತೊಗರಿ ಬೇಳೆ, ಪಾಯಸ ಬನ್ನಿ ಎಲ್ಲಿರುವೆ ನಿಮ್ಮನ್ನು ಕಾಣಲು ತವಕಗೊಂಡಿದ್ದೇನೆ ಬೇಗ ಪ್ರತ್ಯಕ್ಷರಾಗಿರಿ ಪ್ರಾಣಪ್ರಿಯ ತಿಂಡಿಗಳಿರಾ ಎಂದು ಅಭಿನಯಿಸುತ್ತಾನೆ. ಕೃಷ್ಣನು ಚಕ್ರಧಾರಿ ಎನ್ನಲು, ಚಕ್ರ ಅಂದ್ರೆ ತಿಗರಿ, ತಿಗರಿ ತಿರುವುತ್ತ ಮಡಿಕೆಮಾಡುವವನೇ, ಶಂಖಧಾರಿಗಳು ಎನ್ನಲು, ಶಂಖವನ್ನು ಊದುತ್ತ ಊರುರು ತಿರುಗುವ, ಹಲಾಧರನ ತಮ್ಮ ಎನ್ನಲು, ಹೆಗಲಮೇಲೆ ನೆಗಿಲನ್ನು ಹೊತ್ತು ತಿರುಗುವ ರೈತನ ತಮ್ಮನೇನಮ್ಮಾ ಇತ್ಯಾದಿಯಾಗಿ ಪ್ರತಿಯೂಬ್ಬರನ್ನೂ ನಿಜ ಜೀವನದಿಂದ ಪಡೆದ ವ್ಯಕ್ತಿಗಳ ಪ್ರತಿನಿಧಿಗಳ ಬಳಕೆ ಧಾರಾಳವಾಗಿ ಸಾಗಿದೆ. ನಮ್ಮ ಮನೇಲಿ ಏಳು ಪೆಟ್ಟಿಗೆಗಳು ತುಂಬಿವೆ. ಒಂದರಲ್ಲಿ ಮೆಂತೆ, ಇನ್ನೂಂದರಲ್ಲು ಜೀರಿಗೆ, ಮಗದೊಂದರಲ್ಲಿ ಸಾಸವಿ, ಉಪ್ಪು, ಪಪ್ಪು ಬೇಳೆ, ಪಕ್ಕದಾಗ ಬೆಂಕಿಪೆಟ್ಟಿಗೆ ಏಳು ಬಾದಗಳೆನ್ನಾಲು, ಮುಸ್ತಾಬಾದ, ಹುಮ್ನಾಬಾದ, ಹೈದ್ರಾಬದ, ಸಿಕಿಂದ್ರಾಬಾದ, ಕಿರೀಂದ್ರಿಬಾದ, ನಿಜಾಂಬಾದ, ಅಹಮ್ಮದಾಬಾದ ಎನ್ನುತ್ತಾನೆ.

ಆಟವು ನಡುಯುವ ವಿಧಾನ ಒಂದೇ ರೀತಿಯದು. ಅಂದರೆ ಮೊದಲು ಒಂದು ಪದ್ಯ, ಶ್ಲೋಕ ಅದರ ವಿಸ್ತರಣೆಯೇ ಗದ್ಯದಲ್ಲಿ ನಡೆದು, ಸಾಗುತ್ತದೆ, ಪದ್ಯ ಭಾಗವು ನಿಶ್ಚಿತ, ಗದ್ಯದಲ್ಲಿ ಆ ಪದ್ಯದ ಅರ್ಥದ ನಂತರ ಒಂದಿಷ್ಟು ವ್ಯತ್ಯಾಸವುಂಟು. ಆದರೆ ಜಾಡು ಒಂದೇ, ಹೆಪ್ಪು ಮುರಿಯದ ಮೊಸರ

ಜಪ್ಪಿಸಿ ತಂದೀನೆವ್ವ
ತಪ್ಪು ಹೇಳುವವಳಲ್ಲ
ಒಪ್ಪಿಟ್ಟು ಕೊಳ್ಳಿರವ್ವಾ, ಹಾಲು ಮೂಸರ

ದೂತೆ, ನಾನು ಹೆಪ್ಪು ಮುರಿಯದ ಮೊಸರನ್ನು ತಂದಿದ್ದೇನೆ, ನಾನೇನು ತಪ್ಪು ಸುಳ್ಳು ಹೇಳವಂಥಾಕಿಯಲ್ಲ, ಹಾಲು ಮೂಸರು ಕೊಳ್ಳಿರಮ್ಮ

ಕೃಷ್ಣನ ಪ್ರವೇಶದ ಶ್ಲೋಕ, ಕೃಷ್ಣನೂ ಹಾಡುತ್ತಾನೆ,
ಬ್ರಹ್ಮಾದಿ ಕುಲಗಳಿಗೆಲ್ಲ ಪರಬ್ರಹ್ಮನೆನಿಸಿದೆ ನಾ |
ಹಮ್ಮಿನ ಸುರರನ್ನು ಕೊಂದು ಹತ್ತು ಅವರಾರವ ತಾಳಿ ||
ತಂದೆ ವಸುದೇವ ತಾಯಿ ದೇವಕಿಯವರ ಉದರದಲಿ |
ಜನಿಸಿದೆನೆ ನಾರೀ ಶಿರೋಮಣಿ ಕೇಳ್ ||

ಎಲೇ ದೂತೆ-ನಾನಾರೆಂದರೆ ಬ್ರಹ್ಮಾದಿದೇವತೆಗಳಿಗೆ ಪರಬ್ರಹ್ಮನೆನಿಸಿ, ಸೊಕ್ಕಿದ ಅಸುರರನ್ನು ಅಂದರೆ ರಾಕ್ಷಸರನ್ನು ಕೊಂದು, ಹತ್ತು ಅವತಾರವನ್ನು ತಾಳಿ, ಈಗ ವಸುದೇವ, ದೇವಕಿಯರ ಉದರದಲ್ಲಿ ಜನಿಸಿದ ಕೃಷ್ಣ ನಾನು ಎಂದು ಹೇಳುತ್ತಾನೆ. ಭಾಮಾಕಲಾಪದಲ್ಲಿಯೂ ಸಹ ಇದೇ ರೀತಿಯಲ್ಲಿ ಆಟವು ನಡೆಯುವುದನ್ನು ಕಾಣಬಹುದು:  ನಾರದನು ಪುಷ್ಫವನ್ನು ಮೂದಲು ಪದ್ಯದಲ್ಲಿ ಶತಯೋಜನ ವಿಸ್ತಾರಮು ಸತತಮು ಪರಿಮಳಮುನಿಚ್ಚು ಎಂದು ಹೇಳಿ ಅದನ್ನೇ ಗದ್ಯದಲ್ಲಿ ನೂರು ಯೋಜನದಷ್ಟು ವಿಸ್ತಾರದಲ್ಲಿ ಇದರ ಪರಿಮಳವು ಸದಾ ಬೀರಿತ್ತಿರುತ್ತದೆ ಎನ್ನುತ್ತಾನೆ; ಸತ್ಯಭಾಮೆಯು ಕೃಷ್ಣನು ತನ್ನ ಮಂದಿರಕ್ಕೆ ಬಾರದಿರುವ ಕಾರಣವನ್ನು ಮೊದಲು ಪದ್ಯದಲ್ಲಿ, ನಂತರ ಗದ್ಯದಲ್ಲಿ ಹೇಗೆ ಹೇಳುತ್ತಾಳೆ. ಒಂದು ದಿನ ಕೇಳಿಕಾ ಗೃಹದ ಹಂಸತೂಲಿಕ ತಲ್ಪದಲ್ಲಿ ಇಬ್ಬರೂ ಇರಲು, ಎಮರಿನ ದೊಡ್ಡ ನಿಲುಗನ್ನಡಿಯಲ್ಲಿ ಪ್ರತಿಬಿಂಬ ನೋಡಿ ಅವರು….ಇತ್ಯಾದಿ.

ಸ್ತ್ರೀಜನ್ಮದ ಬಗ್ಗೆ ಭಾಮೆಯು ಎರಡರಲ್ಲೂ ಹೇಳುವ ಮಾತುಗಳು ಒಂದೇ ಆಗಿವೆ. ಸ್ತ್ರೀಜನ್ಮ ಪಾಪದ ಜನ್ಮ, ಸ್ತ್ರೀಯಾಗಿ ಹುಟ್ಟುವಕ್ಕಿಂತ ಮರವಾಗಿ ಹುಟ್ಟಿದರೆ ಚನ್ನಾಗಿತ್ತು, ಪಾಪಿ ಜನ್ಮ ಹೆಣ್ಣಿನದು ಇತ್ಯಾದಿ. ವಿರಹ ನಿರೂಪಣೆ ಎರಡರಲ್ಲೂ ಒಂದೇ ರೀತಿಯಲ್ಲಿ ಇದ್ದರೂ ಕೃಷ್ಣ ಪಾರಿಜಾತದಲ್ಲಿ ಅದರ ಭಾವನೆ ಪದ್ಯದಲ್ಲಿದ್ದರೆ, ಭಾಮಾ ಕಾಲಾಪದಲ್ಲಿ ಅಮೋಘವಾದ ನೃತ್ಯದಿಂದ ವ್ಯಕ್ತವಾಗುತ್ತದೆ. ಹಣೆ ಬರಹ, ವಿಧಿಲಿಖಿತ, ಸಮಾಜದ ಕೆಲವು ನಂಬಿಕೆಗಳನ್ನು ಪಾತ್ರಗಳು ಸೂಚಿಸುತ್ತವೆ, ಅಂದು ತೋರಿಸುತ್ತವೆ. ಭಾಮೆಯು ಅಹಂ, ಎರಡರಲ್ಲೂ ವ್ಯಕ್ತವಾಗಿದೆ.

ಪಾರಿಜಾತ ಪುಷ್ಫವು ಎರಡರಲ್ಲೂ ರುಕ್ಮಿಣಿಗೆ ನಾರದರ ಸಲಹೆಯ ಮೇರೆಗೇನೇ ಕೊಡಲ್ಪಟ್ಟಿದೆ.

ಪಾತ್ರಗಳ ಪರಿಚಯವನ್ನು ಪ್ರೇಕ್ಷಕರಿಗೆ ಪರಿಚಯ ಮಾಡುವ, ಪಾತ್ರಗಳು ಬಂದ ಕಾರಣವನ್ನು ಕೇಳಿ, ಬಿಡಿಸಿ ಜನತೆಗೆ ಹೇಳುವ ವಿಧಾನ ಒಂದೇ ಆಗಿದೆ.

ಪೂರ್ವ ರಂಗದ ವಿಧಾನ ಎರಡರಲ್ಲೂ ಒಂದೇ. ಮೊದಲು ಇಷ್ಟದೇವತಾ ಪೂಜೆ, ರಂಗಪೂಜೆ, ಕವಿ ಪದ್ಯ ವಿಘ್ನೇಶ್ವರನ ಪೂಜೆ ಇತ್ಯಾದಿ.

ಕೃಷ್ಣ ಪಾರಿಜಾತದ ವಿಘ್ನೇಶ್ವರನ ಶ್ಲೋಕ :
ಶ್ರೀ ಗಜಾನನಂ ಭೂತಗಣಾದಿಸೇವಿತಂ
ಕಪಿತ್ಥಜಂಬೂ ಫಲಸಾರ ಭಕ್ಷಿತಂ
ಉಮಾಸುತಂ ಶೋಕವಿನಾಶ ಕಾರಣಂ
ನಮಾಮಿ ವಿಘ್ನೇಶ್ವರ ಪಾದಪಂಕಜಂ ||

ಭಾಮಾಕಲಾಪಕದಲ್ಲಿ ವಿಘ್ನೇಶ್ವರನ ಶ್ಲೋಕ :
ಅಗಜಾನನ ಪಕ್ಮಾರ್ಕಂ-ಗಜಾನನ ಸಮಿರ್ನಿಶಮ
ಅನೇಕದಂ-ತಂ-ಭಕ್ಷಾನಾಂ ಏಕದಂತಮುಪಾಸ್ಮ ಹೇ,

ವಕ್ರತುಂಡ ಮಹಾಕಾಯ ಸುರ್ಯಕೋಟಿ ಸಮಪ್ರಭ |
ಅವಿಘ್ನಕುರುವೇ ದೇವ-ಸರ್ವ ಕಾರ್ಯೇಷು ಸರ್ವದಾ ||

ಕೃಷ್ಣಪಾರಿಜಾತದಲ್ಲಿ ಕವಿ ಪದ್ಯ :
ನೋಡಿರೋ ಬಲಭೀಮನ ದಯವಿದು |
ಜಗದಿ ಜಾಗ್ರತಿಯಿಂದ | ಹಗೆಗಳ ಜಯಿಸುವ ||
ಜಗದೀಶನ ದಯಾ ಜಗದೀಶನ ದಯಾ |
ಕಾಲಕಾಲೆಕೆ ಜಗಪಾಲನೆ ಮಾಡುವಾ ||
ಗೋಕುಲದರಸ | ಗೋಕುಲದರಸ |
ಲೋಕದೊಳಗೆ ಬಲು ಜೋಕಿಲೆ ಮೆರೆದಂಥ ||
ಕುಲಗೋಡ ಭೀಮನ ಬಲ ನೋಡಿರೋ
ಬಲಭೀಮನ ನೋಡಿರೋ…||

ಭಾಮಾಕಲಾಪದಲ್ಲಿ ಕವಿ ಪದ್ಯ :
ಸ್ವಾಮಿಕಿ ಭಾಮಾಕಲಾಪ-ಸಾರಸ್ವತ ರಚನೆ ಗ್ರಣಿಕಿ
ನಮಮು ಧೃತ ಪದವಿನ್ಯಾಸ
ಸಾರಸ್ವತ ಸುಜನರು ಈ ಭಾಮಾಕಲಪವನ್ನು
ಸಿದ್ದೇಂದ್ರ ವಿರಚಿತಂ- ಹಂಸಕ್ಷೀರನ್ಯಾಯದಂತೆ ಸ್ವೀಕರಿಸಬೇಕೆಂಬ
ಕೋರಿಕೆಯೊಂದಿಗೆ ಕವಿ ವಚನ ಮುಗಿಯುತ್ತದೆ.

ಎರಡು ಆಟಗಳು ಜನತೆಯ ಅತ್ಯಂತ ಮನರಂಜನೆಯ ಸಾಧನಗಳು.

ಚಿತಾಯಶ್ಚ ಚಿಂತಾಯಶ್ಚ ಬಿಂದು ಮಾತ್ರ ವಿಶೇಷತಃ |
ಚಿತಾ ದಹತಿ ನಿರ್ಜೀವಂ | ಚಿಂತಾ ದಹಿತಿ ಚೇತನಂ ||
ವಿದ್ಯಾನಾಂ ನರಸ್ಯ ರೂಪಮಧಿಕಂ | ಪ್ರಚ್ಚನ್ನಗುಪ್ತಂ ಧನಂ ||
ವಿದ್ಯಾಭೋಗಕರೀ ಯಶಃ ಸುಖಕರೀ ವಿದ್ಯಾಗುರುಣಾಂ ಗುರುಃ |
ವಿದ್ಯಾಬಂಧುಜನೋ ವಿದೇಶಗಮನೇ ವಿದ್ಯಾ ಪರಂ ದೈವತಂ |
ವಿದ್ಯಾ ರಾಜಸು ಪೂಜ್ಯತೇ ನಹಿಧನಂ ವಿದ್ಯಾವಿಹೀನಃ ಪಶುಃ ||

ಮತ್ತು;

ನ ಚೋರಹಾರ್ಯಂ ನಜ ರಾಜಹಾರ್ಯಂ ನ ಭ್ರಾತೃಭಾಜ್ಯಂ ನಚ ಭಾರಕಾರಿ
ವ್ಯಾಯೇಕೃತೇ ವರ್ಧತೆ ಏವ ನಿತ್ಯಂ ವಿದ್ಯಾಧನಂ ಸರ್ವಧನ ಪ್ರಧಾನಂ ||

ಇತ್ಯಾದಿಯಾದ ಸಂಸೃತ ಶುಭಾಷಿತಗಳು ವಿದ್ಯೆ, ನೀತಿ,ಮಕ್ಕಳ ರೀತಿನೀತಿ ಇತ್ಯಾದಿ ಲೋಕ ನೀತಿಯ ಶುಭಾಷಿತಗಳು ಕೃಷ್ಣಪಾರಿಜಾತದಲ್ಲಿ ಕಂಡುಬರುತ್ತವೆ.

ವೃಥಾ ನಿಷ್ಪಂಡಿತ ಸಭಾ | ಸಬಯಂದು ಪಂಡಿತಲಂಡಿನಾ
ಆ ನಾಟಿವಿದ್ಯಾ ಪ್ರಸಂತ ಮಲು ರಯ್ಯಾತ ನೊವೆರಗುವುದು ಅಟೇ

ಇಂತಹ ಮತ್ತು ಮೇಲೆ ಹೇಳಿದ ವಿದ್ಯಾನಾಂ ನರಸ್ಯ ರೂಪಮಧಿಕಂ ಪ್ರಚ್ಚನ್ನ ಗುಪ್ತ ಧನಂ ಸುಭಾಷಿತವು ಭಾಮಾಕಲಾಪದಲ್ಲಿ ಇವೆ.

ಎರಡೂ ಆಯಾ ಕ್ಷೇತ್ರಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ. ಎರಡೂ ಆಟಗಳ ಸಂದೇಶ ಒಂದೇ. ಕೃಷ್ಣ ಭಕ್ತಿಯೇ, ಕೃಷ್ಣನ ಅನುರಾಗ, ಆತನ ಹರಕೆ ಪಡೆಯುವುದೇ ಎರಡರ ಕಥಾವಸ್ತು. ಮೇಲುನೋಟಕ್ಕೆ ಶೃಂಗಾರ ಕಾವ್ಯ, ನಾಟಕವೆಂದು ಕಂಡುಬಂದರೂ ಗುರಿ ಭಕ್ತಿಮಾರ್ಗದ ಪ್ರಾಮುಖ್ಯತೆಯನ್ನೇ ಹೇಳುವುದಾಗಿದೆ. ಕೃಷ್ಣನ ಪಟ್ಟದರಸಿಯಾದರೂ ಅವಳಲ್ಲಿ ಅಹಂ, ತುಂಬಿದ್ದಾರಿಂದ ಕೃಷ್ಣನು ಅವಳನ್ನು ತೊರೆದ, ನಿರ್ಮಲ ಭಕ್ತಿಯಿಂದ ಅವಳು ಪುಜೆಗೈದಾಗ ಪುನಃ ಪ್ರತ್ಯಕ್ಷ, ಕೋರಿಕೆಯನ್ನು ಪೂರೈಸುವನು. ದಿನ ನಿತ್ಯದ ಜೊಂಜಾಟದ ಸಂಸಾರದ ತಾಪತ್ರಯ ಮರೆತು, ಮನರಂಜನೆಯೊಂದಿಗೆ ದೈವ, ದೇವರು ಭಕ್ತಿ ಎಂಬ ಸೂಕ್ತಿಗಳನ್ನು, ಭಕ್ತಿಮಾರ್ಗದ ಮಾಹಿತಿಯನ್ನು ಬೀರುವುದರಲ್ಲಿ ಎರಡೂ ಸರಿಸಮವಾಗಿವೆ.