(ಕ್ರಿ. ಶ. ೧೭೫೫-೧೮೪೩) (ಹೋಮಿಯೊಪಥಿ ಚಿಕಿತ್ಸಾ ವಿಧಾನ)

ಹೋಮಿಯೊಪಥಿ ವೈದ್ಯಶಾಸ್ತ್ರದ ವೃದ್ಧಿಗೆ ಕಾರಣೀಭೂತರಾದ, ಅಂತೇ “ಹೋಮಿಯೊಪಥಿಯ ಜನಕ”ರೆಂದು ಖ್ಯಾತರಾದ ವೈದ್ಯ ವಿಜ್ಞಾನಿ ಸಾಮ್ಯುಯೆಲ್ ಹನಮೆನ್ ಜನಿಸಿದ್ದು ಏಪ್ರಿಲ್ ೧೦, ೧೭೫೫ ರಂದು ಜರ್ಮನಿಯ ಮೀಸನ್ ಎಂಬ ಊರಿನಲ್ಲಿ. ಈತನ ತಂದೆ ಬಡವ. ಹಾಗಾಗಿ ಮಗನ ವಿದ್ಯಾಭ್ಯಾಸಕ್ಕೆ ಸಾಕಾಗುವಷ್ಟು ಹಣ ಆತನ ಬಳಿ ಇರಲಿಲ್ಲ. ಆದರೆ ಸಾಮ್ಯುಯೆಲ್ ಹನೆಮನ್ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಅಂತಲೇ ಶಾಲಾ ಮುಖ್ಯಸ್ಥರು ಆತನಿಂದ ಶುಲ್ಕ ಪಡೆಯದೆಯೆ ಆತನ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟರು. ಮುಂದೆ ಲಿಪ್ ಜಿಗ್ ಮತ್ತು ವಿಯೆನ್ನಾಗಳಲ್ಲಿ ವ್ಯಾಸಂಗ ಮಾಡಿದ ಹನೆಮನ್. ೧೭೭೯ರಲ್ಲಿ ಎರ್ಲಾಂಜೆನ್ ವಿಶ್ವ ವಿದ್ಯಾಲಯದಿಂದ ವೈದ್ಯ ಪದವಿಯನ್ನು ಪಡೆದ.

ಶಿಕ್ಷಣ ಮುಗಿಸಿಕೊಂಡು ವೈದ್ಯ ವೃತ್ತಿಯನ್ನು ಆರಂಭಿಸಿದ ಅವರು ಬೇರೆ ಬೇರೆ ಔಷಧಿಗಳ ಬಗ್ಗೆ ಪ್ರಯೋಗಗಳನ್ನೂ, ಸಂಶೋಧನೆಗಳನ್ನೂ ಮಾಡತೊಡಗಿದರು.

ನಿರೋಗಿಯಾದ ವ್ಯಕ್ತಿಗೆ ವನಸ್ಪತಿಯ, ಪ್ರಾಣಿಜನ್ಯ ಅಥವಾ ಖನಿಜ ರೂಪದ ಯಾವುದೇ ವಸ್ತುವನ್ನು ಸಾಕಷ್ಟು ಅವಧಿಗೆ ಕೊಟ್ಟಾಗ ಅದು ಆತನ ದೇಹದಲ್ಲಿ ಪ್ರತಿಕ್ರಿಯೆಯನ್ನು ಉಂಟು ಮಾಡಿ ಕೆಲವೊಂದು ಗುಣಲಕ್ಷಣಗಳನ್ನುಂಟು ಮಾಡುತ್ತದೆ. ಅದೇ ಬಗೆಯ ಗುಣಲಕ್ಷಣಗಳು ರೋಗಿಯಲ್ಲಿ ಗೋಚರಿಸಿದಾಗ ಅದೇ ನಿರ್ದಿಷ್ಟ ಔಷಧವನ್ನು ಬಳಸಿ ಚಿಕಿತ್ಸೆ ನೀಡಿ ರೋಗವನ್ನು ಗುಣಪಡಿಸಬಹುದು ಎಂದು ಸಾಮ್ಯುಯೆಲ್ ಹನಮನ್ ಪ್ರಯೋಗಗಳ ಮೂಲಕ ಕಂಡು ಹಿಡಿದರು. ಔಷಧಗಳನ್ನು ಮಿತಿಮೀರಿ ಸೇವಿಸಿದಾಗ ಉಂಟಾಗುವ ಅಡ್ಡಪರಿಣಾಮಗಳನ್ನೂ ಅವರು ಗಮನಕ್ಕೆ ತಂದುಕೊಟ್ಟರು.

ಹನೆಮನ್ ೧೮೩೫ರಲ್ಲಿ ಪ್ಯಾರಿಸ್ಸಿಗೆ ಹೋಗಿ ಅಲ್ಲಿಯೇ ತಮ್ಮ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸಿದರು, ಅಲ್ಲಿನ ವೈದ್ಯಶಾಸ್ತ್ರಜ್ಞರುಗಳಿಗೆ ಪ್ರೋತ್ಸಾಹ ನೀಡಿದರು.

ಸಾಮ್ಯುಯೆಲ್ ಹನೆಮನ್ ೧೮೪೩ರಲ್ಲಿ ನಿಧನ ಹೊಂದಿದರು.