ಮಾನವ ಜಾತಿಯು ಸಾವಿರಾರು ವರ್ಷಗಳು ಬಾಳಿಕೊಂಡು ಬರುತ್ತಿರುವುದರ ಒಂದು ಅನುಭವ, ಅಲೋಚನಾ ಫಲ, ನಂಬಿಕೆಗಳು, ನಡವಳಿಕೆಗಳು ಇವುಗಳನ್ನೇ ನಾವು ಸಂಸ್ಕೃತಿಯ ಮೂಲ ಅಂಶವೆಂದು ಪರಿಗಣಿಸಬಹುದಾಗಿದೆ. ಇಲ್ಲಿ “ಸಂಸ್ಕೃತಿ” ಎಂಬ ಪದವು ಕೇವಲ ಮಾತಿಗೆ ನಿಲುಕದೆ, ಜನರು ಅನುಭವಿಸುವ, ಆಚರಿಸುವ ರೀತಿ ನೀತಿಗಳಿಂದ ಹಾಗೂ ಅದರಿಂದ ಪಡೆಯುವ ಅನುಭವಕ್ಕೆ ಕಂಡುಬರುವ ವಿಷಯ ಎಂದು ಹೇಳಬಹುದು. ಈ ಸಂಸ್ಕೃತಿಯು ಒಂದು ದಿನಕ್ಕಾಗಿಯೇ ವ್ಯಕ್ತಿಗಾಗಲಿ ಅಥವಾ ಸಮಾಜಕ್ಕಾಗಲಿ ಬರತಕ್ಕದ್ದಲ್ಲ. ಗದ್ದೆಯಲ್ಲಿ ನೆಟ್ಟ ಕಬ್ಬಿನ ತುಂಡು ರುಚಿಕರವಾದ ಕಬ್ಬಿನ ಜಲ್ಲವನ್ನು ನೀಡಲು ಹಲವಾರು ದಿನಗಳ ಕಾಲಾವಕಾಶ ಬೇಕು. ಅದೇ ರೀತಿಯಲ್ಲಿ ಜನತೆಯ ಸಾವಿರಾರು ವರ್ಷಗಳ ನಡವಳಿಕೆ, ತಿಳಿವಳಿಕೆಗಳ ಫಲವಾಗಿಯೇ ಸಮಾಜಕ್ಕೆ ಕೂಡಿಬರುವ ಸಂಸ್ಕಾರವನ್ನು ನಾವು ‘ಸಂಸ್ಕೃತಿ’ ಎಂದು ಕರೆದಿರುವುದು. ಯಾವುದೇ ಸಮಾಜವಿರಲಿ ಅದಕ್ಕೆ ತನ್ನದೆ ಆದ ಸಂಸ್ಕೃತಿ ಇದ್ದೇ ಇರುತ್ತದೆ. ಸಂಸ್ಕೃತಿ ಎಂಬುವುದು ಒಂದು ರೀತಿಯಲ್ಲಿ ಸಮಾಜಕ್ಕೆ ಸ್ಫೂರ್ತಿಯನ್ನು ಕೊಂಡುವಂತದ್ದು ಎನ್ನಬಹುದು. ಪ್ರಾಚೀನ ಕಾಲದಿಂದಲೂ ನಮ್ಮ ಇತಿಹಾಸವನ್ನು ಗಮನಿಸಿದರೆ ಭಾರತದಲ್ಲಿ ವಾಸಿಸಿಕೊಂಡು ಬಂದಿರುವ ಜನಜೀವನದ ಸ್ವರೂಪಕ್ಕೆ ಧರ್ಮವೇ ಪ್ರಬಲ ಶಕ್ತಿಯಾಗಿ ಅಂತಿಮ ಹಂತದಲ್ಲಿ ರೂಪಗೊಂಡಿತ್ತೆನ್ನಬಹುದು. ಇದರಿಂದಾಗಿ ಇಂದಿಗೂ ಜೀವನದ ಎಲ್ಲಾ ರಂಗಗಳಲ್ಲಿಯೂ ಧರ್ಮವೇ ಹಾಸುಹೊಕ್ಕಾಗಿ ಪರಿಗಣಿಸುವಂತಾಗಿದೆ. ಒಂದರ್ತದಲ್ಲಿ ಇದರಿಂದ ಒಳ್ಳೆಯದಾಯಿತೆನ್ನಬಹುದಾದರೂ ಸಹ ಮತ್ತೊಂದು ರೀತಿಯಲ್ಲಿ ಸಾಮಾಜಿಕ ಜೀವನವೂ ಸಹ ಕಲುಷಿತವಾಗಿತ್ತೆನ್ನಬಹುದು. ಈ ಎರಡರ ಮಧ್ಯೆ ವಿಜಯನಗರದ ಅರಸರ ಕಾಲದಲ್ಲಿ ಅನೇಕ ತತ್ವಜ್ಞಾನಿಗಳು, ದಾಸರುಗಳು ತಮ್ಮ ತತ್ವ ಹಾಗೂ ದಾಸಪದಗಳಿಂದ ವಿಜಯನಗರದ ಸಾಮಾಜಿಕ ಅನಿಷ್ಟಗಳನ್ನು ಪ್ರತಿಭಟಿಸಿ ಧರ್ಮದ ನಿಜಸ್ವರೂಪದ ಬೆಳಕಿನಲ್ಲಿ ಸಾಮಾಜಿಕ ಜೀವನವನ್ನು ಹಸನುಗೊಳಿಸುವ ಪ್ರಯತ್ನಗಳೂ ನಡೆಯುತ್ತಾ ಬಂದುವೆನ್ನಬಹುದು. ಅಂದಿನ ಕಾಲದ ಸಾಮಾಜಿಕ ಜೀವನವನ್ನು ಅನೇಕ ಸ್ತರಗಳಲ್ಲಿ ಅಧ್ಯಯನ ಮಾಡಬಹುದಾಗಿದೆ. ಒಂದರ್ಥದಲ್ಲಿ ವಿಜಯನಗರ ಅರಸರುಗಳು ಸಾಮಾಜಿಕ ಜೀವನವನ್ನು ಸಮಾನತೆಯ ಆಧಾರದ ಮೇಲೆ ಕಟ್ಟಲು, ಕಟ್ಟುವ ಪ್ರಯತ್ನದಲ್ಲಿ ಅಷ್ಟು ಇಷ್ಟು ಪ್ರಭಾವ ಶಾಲಿಯಾಗಿದ್ದ ಪ್ರಯತ್ನಗಳನ್ನು ನಡೆಸಿದರು. ಇದಕ್ಕೆ ಅಂದು ಸೃಷ್ಟಿಯಾಗಿರುವ ದಾಸ ಪದಗಳೇ ಸಾಕ್ಷಿಯಾಗಿವೆ. ಹಾಗೂ ಸ್ವಲ್ಪ ಪ್ರಮಾಣದಲ್ಲಿ ಶಾಸನಗಳು ವೀರಗಲ್ಲುಗಳು ಆಧ್ಯಯನಕ್ಕೆ ಸಹಕಾರಿಯಾಗಿವೆ.

.೧. ಕುಟುಂಬ

ಪ್ರಾಚೀನ ಭಾರತದ ಇತಿಹಾಸದಿಂದಲೂ ಕಂಡುಬರುವ ಹಾಗೆ ವಿಜಯನಗರದ ಅರಸರ ಆಳ್ವಿಕೆಯ ಕಾಲದಲ್ಲಿಯೂ ಕುಟುಂಬವು ಸಮಾಜದ ಮೂಲಭೂತ ಸ್ಥಿತಿಯದ್ದಾಗಿತ್ತು. ಅಂದು ಇದು ಚಿಕ್ಕ ಹಾಗೂ ವಿಶಾಲ ಸಮಾಜದ ಶಕ್ತಿಶಾಲಿ ಘಟಕವಾಗಿ ಬೆಳೆದು ನಿಂತೆತ್ತೆನ್ನಬಹುದು. ಕೆಲವು ಇತಿಹಾಸಗಾರರು ಅಂದಿನ ಕುಟುಂಬವನ್ನು ಮಾನವ ಸಮಾಜದ ಪ್ರಾಥಮಿಕ ಸಂಸ್ಥೆಯಾಗಿತ್ತೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಮತ್ತೆ ಕೆಲವು ಇತಿಹಾಸಗಾರರು ಕುಟುಂಬವನ್ನು ಅಂದಿನ ಸಮಾಜದ ಕೇಂದ್ರ ಬಿಂದುವಾಗಿತ್ತೆಂದು ಹೇಳಿಕೆ ನೀಡಿದ್ದಾರೆ. ಕುಟುಂಬವು ವ್ಯಕ್ತಿಯ ಸಂಪರ್ಕ ಪಡೆಯುವ ಮೊದಲನೆಯ ಸಮೂಹ ಮತ್ತು ಅವನ ಭವಿಷ್ಯದ ಬದುಕಿಗೆ ತಳಪಾಯವನ್ನು ಹಾಕಿಕೊಡುವ ಸಂಸ್ಥೆಯಾಗಿತ್ತೆನ್ನಬಹುದು. ಅದುದರಿಂದಲೇ ವಿಜಯನಗರದ ಅರಸರ ಆಳ್ವಿಕೆಯ ಕಾಲದ ಸಂಸ್ಕೃತಿಯನ್ನು ಚರ್ಚಿಸುತ್ತಿರುವ ಈ ಸಮಯದಲ್ಲಿ ಯಾವುದೇ ಸಮಾಜದ ಸಾಮಾಜಿಕ ಜೀವನದ, ಯಾವುದೇ ವಿಶ್ಲೇಷಣೆಯಲ್ಲಿ ಕುಟುಂಬವನ್ನು ಅಧ್ಯಯನದ ಮೊದಲ ಘಟಕವಾಗಿ ಪರಿಗಣಿಸಬೇಕಾಗಿದೆ. ಸಾಮಾನ್ಯವಾಗಿ ಕುಟುಂಬವು ನಿರಂತರವಾಗಿ ಬದಲಾಗುತ್ತಿರುವ ಒಂದು ರೀತಿಯಲ್ಲಿ ಚಲನಾತ್ಮಕ ಸಂಸ್ಥೆ ಎನ್ನಬಹುದು.

ವಿಜಯನಗರ ಕಾಲದ ಕುಟುಂಬ ವ್ಯವಸ್ಥೆಗಳಲ್ಲಿ ಅನೇಕ ವಿಧಗಳನ್ನು ಕಾಣಬಹುದಾಗಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಏಕಪತಿ ಹಾಗೂ ಏಕಸತಿಯನ್ನು ಒಳಗೊಂಡ ಏಕಸಂಗಾತಿ ಕುಟುಂಬ ವ್ಯವಸ್ಥೆ ಹಾಗೂ ಒಬ್ಬ ಗಂಡಸು ಅನೇಕ ಪತ್ನಿಯರನ್ನು ಹೊಂದಿರುವ ಬಹುಪತ್ನಿತ್ವದ ಕುಟುಂಬ ಅಥವಾ ಒಬ್ಬ ಹೆಂಗಸು ಅನೇಕ ಪತಿಯರನ್ನು ಹೊಂದಿದ್ದ ಬಹುಪತ್ನಿತ್ವ ಕುಟುಂಬ ಹಾಗೂ ಒಂದು ಗುಂಪಿನ ಪುರುಷರು ಒಟ್ಟಿಗೆ ಇನ್ನೊಂದು ಗುಂಪಿನ ಸ್ತ್ರೀಯರನ್ನು ಮದುವೆಯಾಗುವ ಸಮೂಹ ವಿವಾಹದ ಆಧಾರದ ಮೇಲಿನ ಕುಟುಂಬ, ಈ ರೀತಿಯ ವಿವಿಧ ಕುಟುಂಬಗಳು ಅನೇಕ ಆಧಾರಗಳಿಂದ ಕಂಡುಬರುತ್ತವೆ. ಈ ಎಲ್ಲಾ ಮಾದರಿಯ ಕುಟುಂಬ ವ್ಯವಸ್ಥೆಯು ಕೇವಲ ವಿಜಯನಗರದ ಕಾಲದಲ್ಲಿಯೇ ಅಲ್ಲದೆ ಕರ್ನಾಟಕ ಹಾಗೂ ಭಾರತದ ಚರಿತ್ರೆಯ ಉದ್ದಕ್ಕೂ ಒಂದಲ್ಲ ಭಾಗಗಳಲ್ಲಿ ಕಂಡುಬರುತ್ತವೆ. ಅಂದಿನ ಕುಟುಂಬಗಳ ಪ್ರಮುಖ ಕರ್ತವ್ಯ ಮೂಲಭೂತ ಕಾರ್ಯಗಳೆಂದರೆ ಮಕ್ಕಳನ್ನು ಪಡೆಯುವುದು, ಮಕ್ಕಳ ಪಾಲನೆ ಹಾಗೂ ಪೋಷಣೆ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ರಾಜಾಸ್ಥಾನಕ್ಕೆ ಪರಿಚಯಿಸುವುದು, ಕುಟುಂಬ ಸದಸ್ಯರಿಗೆ ಸ್ಥಾನಮಾನವನ್ನು ವರ್ಗಾವಣೆ ಮಾಡುವುದು, ಕುಟುಂಬದ ಸದಸ್ಯರಿಗೆ ಮನರಂಜನೆಯನ್ನು ಒದಗಿಸುವುದು ಹಾಗೂ ಕುಟುಂಬದ ವೃದ್ಧ ಮತ್ತು ಅಶಕ್ತ ರಕ್ತ ಸಂಬಂಧಿಗಳನ್ನು ನೋಡಿಕೊಳ್ಳುವ ಕಾರ್ಯದಲ್ಲಿ ತೊಡಗುತ್ತಿತ್ತೆನ್ನಬಹುದು. ಇದು ಉನ್ನತ ವರ್ಗದವರೆಂದು ಕರೆದುಕೊಳ್ಳುತ್ತಿದ್ದ ಕುಟುಂಬದ ವ್ಯವಸ್ಥೆಯಾಗಿದ್ದರೆ ಶೂದ್ರರ ಕುಟುಂಬ ವ್ಯವಸ್ಥೆಯು ಶೋಚನೀಯವಾಗಿತ್ತು. ಹೆಚ್ಚಿನ ಜನರು ಧಣಿಗಳ ಮನೆಯಲ್ಲಿ ಜೀತಮಾಡಿಯೇ ತಮ್ಮ ಹಾಗೂ ತಮ್ಮ ಮಕ್ಕಳ ಜೀವನವನ್ನು ಮುಗಿಸುತ್ತಿದ್ದರು. ಒಂದರ್ಥದಲ್ಲಿ ಹೇಳುವುದಾದರೆ ಇವರಿಗೆ ತಮ್ಮದೇ ಅದಂತಹ ಸ್ಥಿರವಾದ ಕುಟುಂಬ ಹೆಚ್ಚುಕಾಲ ಇರುತ್ತಿರಲಿಲ್ಲ ಎನ್ನಬಹುದು. ಇದಕ್ಕೆ ಇಂದಿಗೂ ಜೀವಂತವಿರುವ ಅನೇಕ ಸಾಮಾಜಿಕ ಕಟ್ಟುಪಾಡುಗಳೇ ಸಾಕ್ಷಿಯಾಗಿವೆ.

ಅವಿಭಕ್ತ ಕುಟುಂಬ

ಹಾಗೆ ನೋಡಿದರೆ ಅವಿಭಕ್ತ ಕುಟುಂಬವು ಭಾರತದ ಒಂದು ಅತ್ಯಂತ ಪ್ರಾಚೀನವಾದ ಮತ್ತು ಸಾರ್ವತ್ರಿಕವಾದ ಸಂಸ್ಥೆ. ಒಂದು ರೀತಿಯಲ್ಲಿ ಭಾರತದಲ್ಲಿ ಜಾತಿಪದ್ಧತಿಯಷ್ಟೇ ಪುರಾತನವಾದದ್ದೆನ್ನಬಹುದು. ಇದು ಮಧ್ಯಕಾಲೀನ ಭಾರತದ ಇತಿಹಾಸದಲ್ಲಿ ಹಾಸುಹೊಕ್ಕಾಗಿ ತನ್ನ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡು ಬಂದಿದೆ. ಈ ರೀತಯ ಕುಟುಂಬವನ್ನು ರಕ್ತ ಸಂಬಂಧದ ಜನರ ಗುಂಪನ್ನು ಹೊಂದಿರುವ ಒಂದು ಜನಸಮೂಹ ಎಂದು ಕರೆಯಬಹುದು. ಏಕೆಂದರೆ ಈ ಕುಟುಂಬಲ್ಲಿ ತಂದೆ ತಾಯಿ ಸೋದರರು ಮತ್ತು ಅವರ ಹೆಂಡತಿ ಮಕ್ಕಳನ್ನು ಒಳಗೊಂಡಿರುವ ಒಂದು ದೊಡ್ಡ ಕುಟುಂಬ ವ್ಯವಸ್ಥೆ ರೂಪಿತವಾಗಿರುತ್ತದೆ. ಸಾಮಾನ್ಯವಾಗಿ ಇಂತಹ ಕುಟುಂಬದ ಒಡೆತನವು ಹಿರಿಯ ಪುರುಷ ಸದಸ್ಯನ ಅಧೀನದಲ್ಲಿರುತ್ತಿತ್ತೆಂದು ಆಧಾರಗಳಿಂದ ತಿಳಿದುಬರುತ್ತದೆ. ಕುಟುಂಬದ ಸದಸ್ಯರೆಲ್ಲರಿಗೂ ಒಂದೇ ಅಡುಗೆ ಮನೆಯನ್ನೊಂದಿದ್ದು ಹಣಕಾಸಿನ ವಿಷಯದಲ್ಲಿ ಒಂದೇ ತೀರ್ಮಾನವನ್ನು ಹೊಂದಿರುತ್ತಿದ್ದರೆಂದು ತಿಳಿದುಬರುತ್ತದೆ. ಈ ಕುಟುಂಬದ ಗಾತ್ರಕ್ಕೆ ಮಿತಿಯಿರುತ್ತಿರಲಿಲ್ಲ. ವಿಜಯನಗರ ಸಾಮ್ರಾಜ್ಯದಲ್ಲಿ ಇಂತಹ ಕುಟುಂಬಗಳು ಅರರಿಂದ ನಾಲ್ಕು ತಲೆಮಾರಿನವರನ್ನು ಒಳಗೊಂಡಿದ್ದಕ್ಕೆ ನಿದರ್ಶನಗಳು ಸಿಗುತ್ತವೆ.

ಮೇಲೆ ತಿಳಿಸಿರುವ ಅವಿಭಕ್ತ ಕುಟುಂಬದ ಚಿತ್ರಣವು ಸಾಂಪ್ರದಾಯಿಕ ಹಿಂದೂ ಧರ್ಮದಿಂದ ಪ್ರತಿಪಾದಿಸಲ್ಪಟ್ಟಿತ್ತು. ಆದರೆ ಅದರ ನಿಯಮ ಮತ್ತು ಆಚರಣೆಗಳು ಅನೇಕ ರೀತಿಯಲ್ಲಿ ವ್ಯತ್ಯಾಸ ಹೊಂದಿದ್ದವೆಂದು ಕಂಡುಬರುತ್ತದೆ. ವಿಜಯನಗರ ಅರಸರ ಕಾಲದ ಗ್ರಾಮೀಣ ಪ್ರದೇಶಗಳಲ್ಲಿ ಉನ್ನತ ಜಾತಿಗಳು ಈ ಆದರ್ಶಗಳಲ್ಲಿ ನಂಬಿಕೆ ಇಡುವುದರ ಜೊತೆಗೆ ಗತ್ತು ಗಾಂಭೀರ್ಯದಿಂದ ಕಟ್ಟುನಿಟ್ಟಾಗಿ ಅನುಸರಿಸಲು ಮುಂದಾಗುತ್ತಿದ್ದವು. ಮಧ್ಯಮ ವರ್ಗದ ಜನರು ಈ ತತ್ವಗಳಿಗೆ ಹೆಚ್ಚಾಗಿ ಅಂಟಿಕೊಳ್ಳಲಿಲ್ಲವೆಂದೇ ಹೇಳಬಹುದು. ಆದರೆ ಜಾತಿ, ವರ್ಣ ಶ್ರೇಣಿಯ ಮಧ್ಯ ಪ್ರವೇಶವು ಹೆಚ್ಚಾಗಿ ಈ ಆದರ್ಶಗಳನ್ನು ತಳ್ಳಿಹಾಕಿದವು ಹಾಗೂ ಕೆಳವರ್ಗದಲ್ಲಿ ಅವುಗಳ ಸುಳಿವೇ ಮರೆಯಾದವು. ಸಾಮಾನ್ಯವಾಗಿ ಅಂದು ಕೆಲವು ಪ್ರದೇಶಗಳನ್ನು ಹೊರತುಪಡಿಸಿದರೆ ಎಲ್ಲಾ ಭಾಗಗಳಲ್ಲಿಯೂ ಪಿತೃವಂಶೀಯ ಮತ್ತು ಪಿತೃಸ್ಥಳೀಯ ವಿಭಕ್ತ ಅಥವಾ ಅವಿಭಕ್ತ ಕುಟುಂಬ ಪದ್ಧತಿಯೂ ಕಂಡುಬರುತ್ತಿತ್ತು. ದೊಡ್ಡ ಅವಿಭಕ್ತ ಕುಟುಂಬವು ಆದರ್ಶವಾದುದೆಂದು ನಿರ್ಧರಿಸಿದ್ದಾಗ್ಯೂ ಅನೇಕ ತಲೆಮಾರಿನವರು ಒಂದೇ ಸೂರಿನಲ್ಲಿ ವಾಸಿಸುವ, ಒಂದೇ ಅಡುಗೆ ಮನೆಯಲ್ಲಿ ಊಟ ತಯಾರಿ ಮಾಡುವ ಕುಟುಂಬಗಳನ್ನು ಗೊತ್ತು ಮಾಡುವುದೂ ಸಹ ಕಷ್ಟದಾಯಕವಾದುದಾಗಿದೆ. ವಾಸ್ತವವಾಗಿ ಹಳ್ಳಿಗಳಲ್ಲಿ ಅವಿಭಕ್ತ ಕುಟುಂಬಗಳು ಅಲ್ಲಲ್ಲಿ ಕಂಡುಬಂದರೂ ಅವು ಚಿಕ್ಕ ಘಟಕಗಳಾಗಿ ತಂದೆ ತಾಯಿ ಅವರ ಮದುವೆಯಾದ ಗಂಡು ಮಕ್ಕಳು ಮತ್ತು ಅವರ ಮಕ್ಕಳು, ಸೋದರರು ಹಾಗೂ ಅವರ ಪತಿಯರನ್ನು ಒಳಗೊಂಡಿರುತ್ತಿತ್ತು. ಏಕೆಂದರೆ ಸಾಮಾನ್ಯವಾಗಿ ಗಂಡು ಮಕ್ಕಳು ಮದುವೆಯಾದ ಕೆಲವೇ ಕೆಲವು ವರ್ಷಗಳಲ್ಲಿ ತಂದೆ ತಾಯಿಯವರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದುದಕ್ಕೆ ಅಂದಿನ ಜನಪದಿಯ ಆಕರಗಳು ಹೆಚ್ಚಾಗಿ ಬೆಳಕು ಚೆಲ್ಲುತ್ತವೆ.

ಇಂದಿಗೂ ಸಹ ಅವಿಭಕ್ತ ಕುಟುಂಬದಲ್ಲಿನ ಬದಲಾವಣೆಗಳ ಬಗ್ಗೆ ವಿವಿಧ ಭಿನ್ನಾಭಿಪ್ರಾಯಗಳಿವೆ. ಕೆಲವು ಇತಿಹಾಸಕಾರರು ಅವಿಭಕ್ತ ಕುಟುಂಬದಲ್ಲಿ ಕೆಲವು ಅನಿವಾರ್ಯ ಬದಲಾವಣೆಗಳನ್ನು ಗುರುತಿಸಿದ್ದಾರೆ. ಜಾತಿ ಪದ್ಧತಿಯಂತೆ ಅವಿಭಕ್ತ ಕುಟುಂಬವು ಸಹ ಹಿಂದೂ ಸಮಾಜದ ವಿಶಿಷ್ಟ ಲಕ್ಷಣವಾಗಿದೆ ಎಂದು ಅಭಿಪ್ರಾಯ ಪಡುವವರೂ ಇದ್ದಾರೆ. ಆದುದರಿಂದಲೇ ಇದು ಯಾವುದೇ ಪರಿಸ್ಥಿತಿಯಲ್ಲಿಯೂ ದಕ್ಕೆಯನ್ನು ಅನುಭವಿಸದೇ ತಕ್ಕಮಟ್ಟಿಗೆ ಸುರಕ್ಷಿತವಾಗಿಯೇ ಉಳಿದುಕೊಂಡು ಬರುತ್ತಿದೆ. ಒಂದು ವೇಳ ಅವಿಭಕ್ತ ಕುಟುಂಬವು ಸಂಪೂರ್ಣವಾಗಿ ನಶಿಸಿಹೋದದ್ದೇ ಆದರೆ ಹಿಂದೂ ಭಾರತೀಯ ಸಂಸ್ಕೃತಿಗೆ ಮತ್ತು ಸಮಾಜಕ್ಕೆ ಗಂಡಾಂತರ ಉಂಟಾದಂತೆ ಎಂಬ ಹೆದರಿಕೆಯನ್ನು ಅನೇಕ ಸಮಾಜಶಾಸ್ತ್ರಜ್ಞರು ವ್ಯಕ್ತಪಡಿಸುತ್ತಾರೆ.

ಬಂಧುತ್ವ

ಕುಟುಂಬ ವ್ಯವಸ್ಥೆಯ ಮಾದರಿಯಲ್ಲಿಯೇ ಬಂಧುತ್ವವು ಸಹ ಸಾಮಾಜಿಕ ರಚನೆಯ ಮೂಲಭೂತ ಮತ್ತು ಪ್ರಾಚೀನ ತಳಹದಿಗಳಲ್ಲೊಂದಾಗಿ ಬೆಳೆದು ಬಂದಿತ್ತು. ೧೫ನೇ ಶತಮಾನದಲ್ಲಿ ಕುಟುಂಬವು ಸಾಮಾಜಿಕ ಸಂಘಟನೆಯ ಮೂಲಭೂತ ಘಟಕವಾಗಿದ್ದರೆ ಬಂಧುತ್ವವು ಅಸಂಘಟನೆಯ ಸೂತ್ರವಾಗಿತ್ತೆನ್ನಬಹುದು. ಮೇಲಿನ ಹೇಳಿಕೆಯಿಂದ ಕಂಡುಬರುವುದೇನೆಂದರೆ ವ್ಯಕ್ತಿ ಮತ್ತು ಕುಟುಂಬಗಳು ಒಟ್ಟಿಗೆ ಬಾಳುವೆ ನಡೆಸಲು ಅನುಕೂಲವಾಗುವ ಒಂದು ವ್ಯವಸ್ಥೆಯನ್ನು ಬಂಧುತ್ವವು ಕಲ್ಪಿಸುತ್ತದೆ ಎಂಬುವುದು. ಬಂಧುತ್ವವು ಗಾತ್ರ ಮತ್ತು ಕಾರ್ಯಕ್ಷೇತ್ರದಲ್ಲಿ ಕುಟುಂಬಕ್ಕಿಂತಲೂ ಮಿಗಿಲಾದದ್ದು. ಕುಟುಂಬವು ಕೇವಲ ಒಂದು ಘಟಕವಾಗಿ ರೂಪಗೊಂಡಿದ್ದರೆ, ಬಂಧುತ್ವವು ಸುಲಭವಾಗಿ ಬಿಡಿಸಿಕೊಳ್ಳಲಾಗದ ಸಂಬಂಧಗಳ ಸಾಕಷ್ಟು ವಿಸ್ತಾರವಾದ ಬಲೆಯಾಗಿರುತ್ತದೆ. ಇತರೆ ಸಾಮಾಜಿಕ ಸಂಬಂಧಗಳಂತೆಯೇ ಬಂಧುತ್ವವೂ ಕೂಡ ಸಮುದಾಯದಲ್ಲಿಯೇ ಏರ್ಪಡುತ್ತಿತ್ತೆನ್ನಬಹುದು. ಈ ರೀತಿಯಲ್ಲಿ ಬಂಧುತ್ವದ ಸಂಬಂಧಗಳು ಮತ್ತು ಸಾಮಾನ್ಯ ಚಟುವಟಿಕೆಗಳು ಪರಸ್ಪರ ಸಂಬಂಧ ಹೊಂದಿದ್ದವು.

ಬಂಧುತ್ವದಲ್ಲಿ ವಿವಿಧ ರೀತಿಯ ಸಮೂಹಗಳಿದ್ದುದ್ದನ್ನು ಗುರುತಿಸಬಹುದು. ವಿಜಯನಗರ ಸಾಮ್ರಾಜ್ಯದಲ್ಲಿ ಪ್ರಮುಖವಾಗಿ ಏಕಪಕ್ಷಿಯ ಬಂಧುತ್ವ, ಉಭಯ, ಏಕಬಂಧುತ್ವ, ಸಮಾನ ಬಂಧುತ್ವ ಇನ್ನೂ ಮೊದಲಾದ ಬಂಧುತ್ವದ ರೂಪಗಳಿದ್ದವು ತಂದೆ ಅಥವಾ ತಾಯಿ ಮುಖಾಂತರ ವಂಶವನ್ನು ನಿರ್ಧರಿಸಿದರೆ ಆ ಬಂಧುತ್ವವು ಏಕಪಕ್ಷಿಯ ಆಗಿರುತ್ತಿತ್ತು. ಒಂದು ವೇಳೆ ವಂಶವನ್ನು ತಂದೆ ಮತ್ತು ತಾಯಿಯರಿಬ್ಬರೂ ನಿರ್ಧರಿಸಿದರೆ ಅಂತವನ್ನು ಉಭಯಪಕ್ಷಿಯ ಎಂದು ಕರೆಯಲಾಗುತ್ತಿತ್ತು.

.೨ ಸಂಸಾರ

ಸಂಸಾರ ಎಂಬ ಪದವೆ ಒಂದು ರೀತಿಯಲ್ಲಿ ಪ್ರತಿಯೊಬ್ಬರಿಗೂ ಜೀವನದಲ್ಲಿ ಸ್ಪರ್ಧೆಯನೊಡ್ಡುವ ರೀತಿಯದ್ದಾಗಿರುತ್ತದೆ. “ಈಸಬೇಕು ಇದ್ದು ಜೈಸಬೇಕು” ಎಂಬ ಮಾತನ್ನು ಪುರಂದರದಾಸರು ಸಂಸಾರದ ಅರ್ಥದಲ್ಲಿಯೇ ಹೇಳಿರುವುದು ಸಮಾಜದಲ್ಲಿ ಬಾಳಬೇಕಾದ ವ್ಯಕ್ತಿಯು ಹೆಜ್ಜೆಹೆಜ್ಜೆಗೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೇ ರೀತಿಯಲ್ಲಿ ತನ್ನ ಜೀವನದ ಬದುಕಿಗಾಗಿ ಅನೇಕ ಸನ್ನಿವೇಶಗಳನ್ನು, ವ್ಯಕ್ತಿಗಳನ್ನೂ ಮತ್ತಿತರ ವಸ್ತುಗಳನ್ನೂ ಅವಲಂಬಿಸಿ ಬದುಕಬೇಕಾಗುತ್ತದೆ. ಕ್ರಿಯೆಯು ಹುಟ್ಟಿನಿಂದ ಸಾಯುವವರೆವಿಗೂ ನಿರಂತರವಾಗಿ ನಡೆಯುತ್ತಿರುತ್ತದೆ. ಮನುಷ್ಯನ ಜೀವನ ಒಂದು ರೀತಿಯಲ್ಲಿ ‘ಚಕ್ರ’ವಾಗಿರುತ್ತದೆ. ಮಗುವಾಗಿರುವಾಗ ತಂದೆ ತಾಯಿಗಳು, ಬೆಳೆಯುತ್ತಾ ಅಣ್ಣತಮ್ಮಂದಿರುಗಳು, ಬಂಧು ಬಳಗಗಳು, ಗೆಳೆಯ ಗೆಳತಿಯರು, ಅನಂತರ ಸತಿಪತಿಗಳು ಮುಂದೆ ಮಕ್ಕಳು. ಈ ಸಂಬಂಧಗಳನ್ನು ಅದಕ್ಕನುಗುಣವಾಗಿ ಪರಿಸರವನ್ನು ವ್ಯಕ್ತಿ ಅಳವಡಿಸಿಕೊಂಡು ಬದುಕಬೇಕಾಗುತ್ತದೆ. ಈ ದೃಷ್ಟಿಯಿಂದಲೇ ಜೀವನ ಒಂದು ಚಕ್ರವಾಗಿರುತ್ತದೆ ಎಂದು ಹೇಳಿರುವುದು. ಈ ರೀತಿಯ ಜೀವನ ಪದ್ಧತಿಯು ವಿಜಯನಗರದ ಆಳ್ವಿಕೆಯ ಕಾಲದಲ್ಲಿ ಉತ್ತಮ ಹಾಗೂ ಮಧ್ಯಮ ಕುಟುಂಬಗಳಲ್ಲಿ ಹೆಚ್ಚಾಗಿತ್ತೆಂದು ಲಿಖಿತ ಹಾಗೂ ಮೌಖಿಕಾಧಾರಗಳಿಂದ ತಿಳಿದುಬರುತ್ತದೆ. ಕೆಳವರ್ಗದಲ್ಲಿ ಈ ವ್ಯವಸ್ಥೆ ಹೆಚ್ಚಾಗಿದ್ದಂತೆ ಕಂಡುಬರುವುದಿಲ್ಲ. ಅಂದಿನ ಸಂಸಾರದಲ್ಲಿ ಅನೇಕ ರೀತಿಯ ಸಮಸ್ಯೆಗಳು ಮನೆಮಾಡಿದ್ದವು. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯೆಂಬಂತೆ ಪುರಂದರದಾಸರು ಹೇಳಿರುವ “ಈಸಬೇಕು ಇದ್ದು ಜೈಸಬೇಕು ಈ ಹೇಸಿಗೆ ಸಂಸಾರದಲ್ಲಿ” ಎಂಬ ವಾಣಿಯೇ ನಿದರ್ಶನ. ಹಾಗಂತ ಪುರಂದರರು ಸಂಸಾರವನ್ನು ಕೆಟ್ಟದೆಂದೂ ಸಹ ಹೇಳುವುದಿಲ್ಲ, ಬದುಕಬೇಕು, ಸುಖ ಶಾಂತಿಯಿಂದ ಭಗವಂತನನ್ನು ಮರೆಯದೆ ಸಂಸಾರ ಮಾಡಬೇಕು, ಅಹಂಕಾರ ಮಮಕಾರಗಳನ್ನು ಬಿಟ್ಟು ಅನಾಸಕ್ತಿಯಿಂದ ಬದುಕಬೇಕು ಎಂಬುವುದೇ ಅವರು ನೀಡಿರುವ ಹಿತವಚನ, ಅದಕ್ಕಾಗಿಯೇ ಅವರು,

ಆರು ಹಿತರರು ನಿನಗೆ ಈ ಮೂವರೊಳಗೆ
ನಾರಿಯೋ ಧಾರಿಣಿಯೋ ಬಲುಧನದ ಸಿರಿಯೋ
ಅನ್ಯರಲ್ಲಿ ಜನಿಸಿದ್ದ ಅಂಗನೆಯ ಕರೆತಂದು
ತನ್ನ ಮನೆಗವಳ ಯಜಮಾನಿ ಎನಿಸಿ
ಭಿನ್ನವಿಲ್ಲದೆಯರ್ಥ ದೇಹವೆನಿಸುವ ಸತಿಯು
ಕಣ್ಣಿನಲ್ಲಿ ನೋಡಲಮ್ಮಳು ಕಾಲವಶದಿ
…..

ಎಂದು ಹೇಳಿದ್ದಾರೆ, ಸಂಸಾರಕ್ಕೆ ಬೇಕಾಗುವ ಪ್ರಮುಖ ನೀತಿ ಉಪದೇಶಗಳು ಮೇಲಿನವುಗಳಾಗಿವೆ. ಇದಕ್ಕಾಗಿಯೇ ಪುರಂದರದಾಸರು ಸಂಸಾರದಲ್ಲಿ ಕಂಡು ಬರುವ ತೊಂದರೆಗಳಿಂದ ಬಳಲುತ್ತಿದ್ದ ಜನರಿಗೆ, ಅವರ ಹುಟ್ಟಿನ ಬಗ್ಗೆ ಮನವರಿಕೆ ಮಾಡಿ ಕೊಡುವ ದೃಷ್ಟಿಯಿಂದ,

ಮಾನವ ಜನ್ಮ ದೊಡ್ಡದು ಇದ
ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ
…….

ಎಂದು ಹಿತನುಡಿ ಹೇಳಿರುವುದು, ಮಾನವ ಜೀವಿಯು ವಿವಿಧ ಆಸೆ ಅಮಿಷಗಳಿಗೆ ಒಳಗಾಗುವುದು ಸಹಜವಾದುದ್ದೇ, ಏಕೆಂದರೆ ಈತನಲ್ಲಿ ಕ್ರೂರತನ ಹಾಗೂ ಮಾನವೀಯತೆಗಳೆರಡೂ ಜೊತೆ ಜೊತೆಗೆ ಅಡಕವಾಗಿರುತ್ತದೆ. ಅದ್ದರಿಂದ ಕೆಲವು ಸಮಯದಲ್ಲಿ ಸಂಸಾರದ ಜೀವನದಲ್ಲಿ ಏರುಪೇರಾಗುತ್ತದೆ ಪುರಂದರದಾಸರು ಪಂಥ, ಪಂಗಡಗಳು, ಧಾರ್ಮಿಕ ಅಂಧಶ್ರದ್ಧೆಗಳ ಆಚರಣೆಗಳು ಮತ್ತು ಮೂಢ ನಂಬಿಕೆಗಳನ್ನು ಮೀರಿ ನಿಂತವರಾಗಿದ್ದರು. ಅದಕ್ಕಾಗಿಯೇ ಅವರು ಮಾನವ ಜನ್ಮ ದೊಡ್ಡದು ಅದನ್ನು ಭಗವಂತನ ಧ್ಯಾನದ ಮೂಲಕ ಮುಕ್ತಿಯನ್ನು ಪಡೆಯಲು ಬಳಸಿಕೊಳ್ಳದೆ, ಹಾಳು ಮಾಡಿಕೊಳ್ಳಬೇಡಿರಿ ಹುಚ್ಚಪ್ಪಗಳಿರಾ ಎಂದು ತಮ್ಮ ಕೀರ್ತನೆಯಲ್ಲಿ ಜನತೆಯನ್ನು ಎಚ್ಚರಿಸಿರುವುದು. ಅವರಿಗೆ ಶ್ರೀಮಂತದ ಬಗ್ಗೆ ತಿರಸ್ಕಾರ ಹೆಣ್ಣಿನ ಬಗ್ಗೆ ಅನುಕಂಪಗಳಿವೆ. ಸಂಸಾರ ಒಂದು ಮಾಯೆಯೆಂದು ಹೇಳಿದ್ದಾರಾದರೂ ಅದು ತ್ಯಾಜ್ಯವೆಂದು ಹೇಳುವುದಿಲ್ಲ. ಅವರ ಪ್ರಕಾರ ಸಂಸಾರವೆಂದರೆ ಕಮಲದೆಲೆಯ ಮೇಲಿನ ನೀರ ಹನಿಯಂತೆ ಅಂಟಿಯೂ ಅಂಟದಂತಿರಬೇಕು ಎಂಬ ಧೃಡ ನಿಲುವನ್ನು ವ್ಯಕ್ತಪಡಿಸುತ್ತಾರೆ. ಅವರ ಒಲವು ನಿಲುವುಗಳನ್ನು ಪರಾಮರ್ಶಿಸಿದಾಗ ದಾಸರು ಅಂದಿನ ಸಾಮಾಜಿಕ ಪರಿಸ್ಥಿಗೆ ಹೇಗೆ ಸ್ಪಂದಿಸುತ್ತಿದ್ದರೆಂಬುದನ್ನು ಮನಗಾಣಬಹುದಾಗಿದೆ. ಮುಖ್ಯವಾಗಿ ಮಧ್ಯಕಾಲೀನ ಸಮಾಜ ಅವರನ್ನು ಹೇಗೆ ರೂಪಿಸಿತು ಎಂಬುವುದನ್ನು ನಾವು ಮನಗಾಣಬೇಕಾಗುತ್ತದೆ.

.೩. ವಿವಾಹ ಹಾಗೂ ನಂತರದ ಜೀವನ ಪದ್ಧತಿ

(ಜನಪದೀಯ ಆಕರಗಳಲ್ಲಿ ವಿಶ್ಲೇಷಿಸಿರುವ ಹಾಗೆ)

ಅಂದಿನಿಂದ ಇಂದಿನವರೆವಿಗೂ ನಮ್ಮ ಸಾಮಾಜಿಕ ಜೀವನದ ಮುಖ್ಯವಾದ ಘಟ್ಟವೆಂದರೆ ಮದುವೆ. ಒಂದು ದೃಷ್ಟಿಯಲ್ಲಿ ವಿವಾಹವು ಮಾನವನಲ್ಲಿ ಮೃದುತ್ವವನ್ನು ಸಂಸ್ಕಾರಗೊಳಿಸಿ ಸಂಯಮದಿಂದ ಉದಾತ್ತವಾದುದರ ಕಡೆಗೆ ಬದಲಾಯಿಸುವ ಒಂದು ಪವಿತ್ರ ಸಾಧನವೆಂದು ಭಾವಿಸಲಾಗಿದೆ. ಒಂದರ್ಥದಲ್ಲಿ ಇದು ಸತ್ಯವೂ ಕೂಡ ಆಗಿದೆ. ಎಲ್ಲಿಯೂ ಹುಟ್ಟಿ ಬೆಳೆದ ಹೆಣ್ಣು, ಎಂದೂ ಕಂಡರಿಯದ ಪುರುಷನೊಬ್ಬನ ಕೈಹಿಡಿದು ವಿವಾಹವಾಗಿ ಸಂಸಾರವೆಂಬ ಸಾಗರದಲ್ಲಿ ಈಜಲು ಬದ್ಧಳಾಗುತ್ತಾಳೆ. ಅಂದಿನಿಂದ ಅವಳ ಗಂಡನೇ ಅವಳ ಜೀವನದ ಸರ್ವಸ್ವನಾಗುತ್ತಾನೆ. ಅವಳು ಅವನ ಮನ, ಮನೆಯ ಒಡತಿಯಾಗುತ್ತಾಳೆ, ಗೃಹಿಣಿಯಾಗುತ್ತಾಳೆ, ಗಂಡು ಹೆಣ್ಣುಗಳ ಜೀವನದಲ್ಲಿ ಅದೊಂದು ಪರಿವರ್ತನೆಯ ಪವಿತ್ರ ಘಟ್ಟ

ವಿಜಯನಗರದ ಅರಸರ ಕಾಲದಲ್ಲಿ ನಡೆಯುತ್ತಿದ್ದ ವಿವಾಹದ ವರ್ಣನೆಯು ಅಷ್ಟಾದಶ ವರ್ಣನೆಯಲ್ಲಿ ಒಂದು ಭಾಗವಾಗಿ ವರ್ಣಿತವಾಗಿರುವುದು ಕಂಡುಬರುತ್ತದೆ. ಕಾವ್ಯಗಳಲ್ಲಿ ಹಾಗೂ ದಾಸ ಪದಗಳಲಿಯೂ ಇವುಗಳ ವರ್ಣನೆಯೂ ಕಂಡುಬರುತ್ತದೆ. ಅಂದಿನ ವಿವಾಹ ಪದ್ಧತಿಯ ಹಾಗೂ ವಾಹನದ ವೈಭವದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಚೇರಮಾಂಕ ಮತ್ತು ಬೊಮ್ಮರಸ ಎಂಬ ಕವಿಗಳ ಸಾಹಿತ್ಯ ಇಲ್ಲಿ ಹೆಚ್ಚು ಉಪಕಾರಿಯಾಗುತ್ತವೆ. ಆದರೆ ಈ ಕವಿಗಳು ತಮ್ಮ ಬರವಣಿಗೆಯಲ್ಲಿ ಕೇವಲ ರಾಜಪರಿವಾರದವರ, ಬ್ರಾಹ್ಮಣರ ಹಾಗೂ ಶ್ರೀಮಂತರ ವಿವಾಹ ಸಂದರ್ಭದ ವರ್ಣನೆಯನ್ನು ನೀಡಿರುವುದು ಕಂಡು ಬರುತ್ತದೆ. ಇದಕ್ಕ ನಾವು ಸುಲಭವಾದ ಕಾರಣ ನೀಡುವುದಾದರೆ ನಮ್ಮ ಅಂದಿನ ಕವಿಗಳು, ದಾರ್ಶನಿಕರು, ವಿದೇಶಿ ಪ್ರವಾಸಿಗರು, ತತ್ವಜ್ಞಾನಿಗಳು, ತಾವು ಆರಿಸಿಕೊಂಡು ಸ್ಥಳಗಳು ಹಾಗೂ ವ್ಯಕ್ತಿ ಸಮೂಹಗಳು ರಾಜನ ಆಸ್ಥಾನ, ಪ್ರಮುಖವಾಗಿ ರಾಜರಾಣಿಯರೇ ಆಗಿರುವುದು ಎಂದು ಇತಿಹಾಸದಿಂದ ತಿಳಿದುಬರುತ್ತದೆ.

ಅಂದು ನಡೆಯುತ್ತಿದ್ದ ಮದುವೆಯ ಪದ್ಧತಿಯನ್ನು ಡಾ. ಕೆ.ಶ್ರೀಕಂಠಯ್ಯನವರು ತಮ್ಮ ಕೃತಿಯಲ್ಲಿ ಪ್ರತಿಯೊಂದನ್ನು ಚಾಚೂತಪ್ಪದೆ ವಿಶ್ಲೇಷಿಸಿರುವುದು ಕಂಡು ಬರುತ್ತದೆ. ಮದುವೆ ಎಂದರೆ ಸಾಮಾನ್ಯವಾಗಿ ಸಾಂಪ್ರದಾಯಿಕಾವಾಗಿ ನಡೆಯುವ ಕೆಲವು ಪದ್ಧತಿಗಳು, ಇವುಗಳು: ಸಾಮುದಿಕ ಲಕ್ಷಣಗಳಿಂದ ಕೂಡಿದ ಅನುರೂಪ ಕನ್ಯೆಯ ಅನ್ವೇಷಣೆ ಮತ್ತು ಆಯ್ಕೆ: ಕನ್ಯೆಯ ತಮಗೆ ಒಪ್ಪಿಗೆಯಾಯಿತೆಂದು ನಿಶ್ಚಿತಾರ್ಥ: ಜೋಯಿಸರಿಂದ ಶುಭಲಗ್ನವನ್ನು ನಿಶ್ಚಯಿಸಿ ಲಗ್ನ ಕಟ್ಟಿಸುವುದು ಬಂಧು ಮಿತ್ರರಿಗೆ ಆಹ್ವಾನದೋಲೆಗಳು, ವಿವಾಹ ಮಂಟಪದ ಸಿದ್ಧತೆ; ಅಲಂಕಾರ ಇವುಗಳೆಲ್ಲವೂ ಒಂದು ಘಟ್ಟವಾಗಿದ್ದರೆ, ಮದುವೆಯ ದಿನದಂದು ನಡೆಯುವ ಸಂಪ್ರದಾಯಗಳು ತುಂಬ ಮುಖ್ಯವಾದವೆಂದು ವಿವರಿಸುತ್ತಾರೆ. ಅವುಗಳನ್ನು ಅವರು ‘ಮಂಗಳ ವಾದ್ಯಗಳು ಮೊಳಗುತ್ತಿರುವಾಗ ಶೋಭಾನೆಗಳನ್ನು ಹೇಳುತ್ತಾ ಮುತ್ತೈದೆಯರಿಂದ ವಧು ವರರಿಗೆ ಮಂಗಳ ಮಜ್ಜನ; ಸುಮಂಗಲಿಯರು ಮಂಗಳ ದ್ರವ್ಯಗಳನ್ನು ಹಿಡಿದು ಸ್ವಾಗತಿಸುತ್ತಾ ಧಾರೆಯ ಮಂಟಪಕ್ಕೆ ಬರುವುದು; ವಧೂವರರ ಅಲಂಕರಣ, ಕೈಯಲ್ಲಿ ಫಲಪುಷ್ಪಗಳೂ; ವಧುವರುಗಳಿಗೆ ನಾಚಿಕೆ ಬರುವುದು; ಧಾರೆಯ ಮಂಟಪದಲ್ಲಿನ ವಿಧಿವಿಧಾನಗಳು; ಮಂತ್ರ ಪಠಣ; ಮಂಗಳ ವಾದ್ಯಗಳ ಮೊರೆತ; ಜೀರಿಗೆ ಬೆಲ್ಲ ಹಾಕುವುದರಲ್ಲಿ ನಾಮುಂದು ತಾಮುಂದು ಎಂಬ ಪೈಪೋಟಿ; ಒಳ್ಳೆಯ ಮುಹೂರ್ತದಲ್ಲಿ ಧಾರೆ ಎರೆದು ಕೊಡುವುದು; ಹಸೆಯ ಮೇಲೆ ವಧೂವರರ ಸ್ಥಳ ಬದಲಾವಣೆ; ಕಠಿಣ ಕಟ್ಟುವುದು; ಮುತ್ತೈದೆಯರಿಂದ ಆರತಿ; ಹೆಸರುಗಳನ್ನು ಹೇಳಿಸುವ ವಿನೋದ; ವಧು – ವರರ ಮೆರವಣಿಗೆ; ಬೀಳ್ಕೊಡುಗೆ ಇತ್ಯಾದಿ ಘಟನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿರುವುದು ಕಂಡುಬರುತ್ತದೆ. ಈ ಕೃತಿಯು ವಿಜಯನಗರದ ಸಾಂಸ್ಕೃತಿಕ ಬದುಕಿನ ಮೇಲೆ ಅದರಲ್ಲಿಯೂ ಸಮಾಜದ ಕೆಳಸ್ತರದ ಜನರ ಸಾಂಸ್ಕೃತಿಕ ಅಧ್ಯಯನಕ್ಕೆ ಉಪಯುಕ್ತವಾಗಿದೆ.

ಮದುವೆಯೆಂಬುದು ಗಂಡಿನ ದೃಷ್ಟಿಯಿಂದ ಕೇವಲ ಏನನ್ನೋ ಪಡೆಯುವ ಕ್ರಿಯೆ ಆಗಿತ್ತೆನ್ನಬಹುದು. ತನ್ನ ಪತ್ನಿಯನ್ನು ಕರೆತಂದು ತನ್ನ ಮನೆಯನ್ನು ಸಂತೋಷದಿಂದ ತುಂಬಿಕೊಳ್ಳುತ್ತಾನೆ. ಹೆಣ್ಣಿಗೂ ಅದು ಪಡೆಯುವಿಕೆಯಾಗಿರುತ್ತದೆ ಎನ್ನಬಹುದು. ಏಕೆಂದರೆ ತನ್ನ ಬಾಳಿನ ಸಂಗಾತಿಯನ್ನು ಅವಳು ಪಡೆದುಕೊಂಡಿರುತ್ತಾಳೆ, ಆದರೆ ತನ್ನನ್ನು ಹೆತ್ತು ಹೊತ್ತು ಸಾಕಿ ಸಲಹಿದ ತಂದೆ ತಾಯಿಗಳನ್ನು ಒಡನಾಡಿ ಬೆಳೆದ ಅಣ್ಣ ತಮ್ಮಂದಿರನ್ನು ಅಕ್ಕತಂಗಿಯರನ್ನು ಬಿಟ್ಟು ಬರಬೇಕಾಗುತ್ತದೆ. ಈ ಸನ್ನಿವೇಶವು ಅಂದಿನ ಕಾಲದ ಜನಪದರಲ್ಲಿ ಸೃಷ್ಟಿಯಾದ ಅನೇಕ ಮೌಖಿಕ ಸಾಹಿತ್ಯಕ್ಕೆ ಪ್ರಚೋದನೆ ನೀಡಿತ್ತೆನ್ನಬಹುದು, ಇದನ್ನೆ ನಾವು ‘ಜನಪದ ಸಾಹಿತ್ಯ’ ಎಂದು ಕರೆಯುವುದು. ಉದಾಹರಣೆಗೆ ಈ ಸಂದರ್ಭದ ನಮ್ಮ ಜನರ ಸಾಂಸ್ಕೃತಿಕ ಬದುಕಿನ ಚಿತ್ರಣವನ್ನು ಈ ಕೆಳಗಿನ ಅನೇಕ ಸನ್ನಿವೇಶದಲ್ಲಿ, ಸನ್ನಿವೇಶಕ್ಕೆ ತಕ್ಕಂತೆ ಸೃಷ್ಟಿಸಲಾಗಿರುವ ಜನಪದ ಗೀತೆಗಳಲ್ಲಿ ಕಾಣಬಹುದಾಗಿದೆ.

ಮದುವೆಯಾದ ನವ ವಧುವನ್ನು ಗಂಡನ ಮನೆಗೆ ಕಳುಹಿಸುವಾಗ ತಂದೆ ಮಗಳಿಗೆ ಹೇಳಿರುವ ಮಾತು ತುಂಬ ಅರ್ಥಪೂರ್ಣವಾಗಿದೆ.

ಹೆಣ್ಣು ಮಕ್ಕಳ ಕಲುವಿನ ಕಣ್ಣೀಗಿ ನೀರ‍್ತಂದು
ಸಣ್ಣ ಸಲ್ಲೆದಲೆ ಮುಸುಗ್ಹಾಕಿ
| ಹಡೆದಪ್ಪ
ಹೆಣ್ಣು ಸಾಕೆಂದ ಜಲುಮಾಕೆ ||

ತಂದೆಯ ದುಃಖವೇ ಒಂದು ರೀತಿಯ ಸ್ವರೂಪದ್ದಾಗಿದ್ದರೆ ಇನ್ನೂ ತಾಯಿಯ ದುಃಖಕ್ಕೆ ಎಡೆಯೇ ಇರುವುದಿಲ್ಲವೆನ್ನಬಹುದು. ತಾಯಿಯು ಈ ಸಮಯದಲ್ಲಿ

ಒಂಬತ್ತು ತಿಂಗಳು ನಿನ್ನ ತುಂಬಿಕೊಂಡು ತಿರಗೇನ
ಹಂಬಲಿಸಿ ನಿನ್ನ ಹಡೆದೇನು
| ಚಿತ್ತಾರದ
ಗೊಂಬಿ ನಿನನೊಪ್ಪಿಸಿ ಕೊಡಲ್ ಹ್ಯಾಂಗ ||

ಹರಿಯಾಗೆದ್ ನನ್ಮಗಳು ಹಾಲುಬಾನುಣ್ಣವಳು
ತೂಗು ಮಂಚದಾಗ ಮಲಗುವಳು
|
ನಗುನಗುತ ಮನೆ ಬೆಳಗುವಳು ||

ಎಂದು ಮಗಳು ತಮ್ಮ ಮನೆಯಲ್ಲಿ ಬೆಳೆದ ರೀತಿ ನೀತಿಗಳನ್ನು ವರ್ಣಿಸಿಕೊಂಡು ತನ್ನ ದುಃಖವನ್ನು ವ್ಯಕ್ತಪಡಿಸುವ ಪರಿ, ಇಂಥ ತಂದೆ – ತಾಯಿಯರ ದುಃಖದ ಸಮಯದಲ್ಲಿ ಮಗಳೇ ಅವರನ್ನು ಸಂತೈಸಿಬೇಕಾಗುವ ಪ್ರಸಂಗವೂ ಬಂದೊದಗಿ ಬಿಡುತ್ತದೆನ್ನಬಹುದು ಉದಾಹರಣೆಗೆ,

ತಾವರಿಯ ಗಿಡಹುಟ್ಟಿ ದೇವರಿಗೆ ನೆರಳಾದೊ |
ನಾಹುಟ್ಟಿ ಮನೆಗೆ ಎರವಾದೆ | ಹಡೆದವ್ವ
ನೀಕೊಟ್ಟ ಮನೆಗೆ ಹೆಸರಾದೆ ||

ಮೇಲಿನ ಈ ಪದಗಳು ನಮ್ಮ ಭವ್ಯ ಸಂಸ್ಕೃತಿಯ ಸಂಕೇತಗಳಾಗಿವೆ ಎನ್ನಬಹುದು. ನೀಕೊಟ್ಟ ಮನೆಗೆ ಹೆಸರಾಗುವಂತೆ ಬಾಳುತ್ತೇನೆ, ನನ್ನನ್ನು ನಗುನಗುತ ಕಳುಹಿಸು ಎಂತಲೂ ಹೇಳುವುದರ ಜೊತೆಗೆ ಅಂದು ನಮ್ಮ ಜನಪದರು ಕಂಡುಕೊಂಡಿದ್ದ ಆದರ್ಶದ ಬದುಕು ಇಂದಿಗೂ ಆದರ್ಶಪ್ರಯವಾಗಿದೆ. ಮಗಳ ಈ ಮಾತಿಗೆ ತಾಯಿ ನೀಡುವ ಉತ್ತರ ಎಂಥ ಗಾಂಭೀರ್ಯವಾಗಿದೆ ಎಂದರೆ,

ಆಲಕ್ಕೆ ಹೂವಿಲ್ಲ, ಸಾಲಕ್ಕೆ ಕೊನೆಯಿಲ್ಲ
ಜಾಲಿಯ ಮರವು ನೆರಳಲ್ಲ | ಮಗಳೆ
ತಾಯಿಯ ಮನೆಯು ಸ್ಥಿರವಲ್ಲ ||

ಎಂದು ಹೇಳಿ ತನ್ನಲ್ಲಿಯೇ ಧೈರ್ಯ ತಂದುಕೊಂಡು ಮಗಳು ಗಂಡನ ಮನೆಯಲ್ಲಿ ಹೇಗೆ ಬಾಳಬೇಕೆಂಬುದನ್ನು ಹಾಗೂ ಗುರುಹಿರಿಯರಿಗೆ, ಅತ್ತೆ ಮಾವಂದಿರಿಗೆ, ಭಾವ ಮೈದುನರೊಂದಿಗೆ ಹೇಗೆ ವರ್ತಿಸಬೇಕೆಂಬುದರ ಮಾಹಿತಿಯನ್ನು ಸರಳವಾದ ಮಾತಿನಲ್ಲಿ ಹೇಳಿರುವುದು ಕಂಡುಬರುತ್ತದೆ.

ಅತ್ತೆ ಮಾವರಿಗಂಜಿ, ಸುತ್ತೇಳು ನರಗಂಜಿ
ಮತ್ತೆ ಆಳುವ ದೊರೆಗಂಜಿ | ನನ ಮಗಳೇ |
ಅತ್ತಿ ಮನೊಯೊಳಗೆ ಬಾಳವ್ವ |
ನೆರೆಮನೆ ಸಿರಿದೇವಿ ನೀನಾಗು ಮಗಳೆ |
ಮನಿಯಾಗ ಭೇದ ಬಗಿಬ್ಯಾಡ | ಕಂದವ್ವ
ತುಂಬಿದ ಮನಿಯನ್ನು ಒಡಿಬ್ಯಾಡ ||
ಬಾಳುವೆ ಮಾಡಿದರೆ ಬಾ ತಂಗಿ ಅಂದಾರು
ಬಾಳುವೆಗೆಟ್ಟು ಮತಿಗೆಟ್ಟು | ಬಾಳಿದರೆ
ಹೆತ್ತವರ ಕುಲಕೆ ಹಗೆಯಾದೆ ||

ಎಂಬುವ ಮಹತ್ವದ ಹಿತವಚವನ್ನು ತಾಯಿ ಮಗಳಿಗೆ ಹೇಳಿರುವುದು ಇಂದಿನ ಆಧುನಿಕ ಕಾಲದ ಕುಟುಂಬಗಳಿಗೆ, ಸಂಸಾರಗಳಿಗೆ ಹೆಚ್ಚಿನ ರೀತಿಯಲ್ಲಿ ಆದರ್ಶದಾಯಕವಾಗಿರುತ್ತದೆ. ಆದರೆ ಇಂದು ಇಂತಹ ಅಮೂಲ್ಯವಾದ ಹಿತನುಡಿಗಳನ್ನು ಗಂಡು ಹೆಣ್ಣುಗಳಿಬ್ಬರೂ ಮರೆಯುತ್ತಿರುವುದು ಕಂಡು ಬರುತ್ತಿವೆ. ತಾಯಿ ಮುಂದುವರೆದು ಮಗಳಿಗೆ ಹೇಳುವ ಮಾತಿದು

ಅತ್ತೆ ಮಾವರ ಪಾದ, ತಂದೆ ತಾಯಿರ ಪಾದ |
ಮತ್ತೆ ಗಂಡನ ಶ್ರೀಪಾದ | ನೆನೆದರೆ
ಬೆನ್ನ ಹಿಂದೈತಿ ಕೈಲಾಸ ||
ಕನ್ನಡಿ ಕೈತಪ್ಪಿ ಹನ್ನೆರಡು ಚೂರಾಗಿ
ಹೆಣ್ಣೀನ ಮನವು ಎರಡಾಗಿ ದಾಳಿಂಬ್ರು
ಹಣ್ಣದರೇನು ಫಲವಿಲ್ಲ
ಮಾತ್ಗಂಟಿ ಮಗಳಲ್ಲ, ತಾಟ್ಗಿತ್ತಿ ಸೊಸೆಯಲ್ಲ |
ತುಪ್ಪರಿಯ ಚೆಕ್ಕೆ ಒಲೆಗಲ್ಲ ತವರೀಗೆ
ಮಾತ ತಂದೋಳು ಮಗಳೆಲ್ಲ ||

ಈ ಮಾತುಗಳೂ ಸಹ ಇಂದಿನ ಮುಂದಿನ ನಮ್ಮ ಸೌಹಾರ್ದತೆ ಪ್ರೀತಿಯ, ಹಿರಿಯ – ಕಿರಿಯ ಎಂಬ ಸಂಕೇತದ ಅಂಶವಾಗಿದೆ. ಈ ಜನಪದದ ಸಾಲುಗಳಲ್ಲಿ ಪ್ರತಿಯೊಂದು ಪದವೂ ಸಹ ಹೆಣ್ಣು ಇಂದು (ಇದನ್ನು ಗಂಡಿಗೂ ಹೋಲಿಸಿಕೊಳ್ಳಬಹುದು) ಹೇಗೆ ಬಾಳಿ ಬದುಕಬೇಕು ಎಂಬ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರತೀಕವಾಗಿ ಮೂಡುಬಂದಿವೆ.