ನಾಣ್ಯ ವ್ಯವಸ್ಥೆ

ಮಾನವನು ಪ್ರಾಚೀನ ಕಾಲದಲ್ಲಿ ವ್ಯಾಪಾರವನ್ನು ಸಾಟಿ ವಿನಿಮಯ ಪದ್ಧತಿಯನ್ನು ಅನುಸರಿಸಿ ಮಾಡುತ್ತಿದ್ದನು. ಒಂದು ವಸ್ತುವಿಗೆ ಮತ್ತೊಂದು ಸರಿಸಮನಾದ ವಸ್ತುವನ್ನು ನೀಡಿ ವ್ಯವಹಾರ ಮುಂದುವರಿಸುತ್ತಿದ್ದನು. ನಂತರ ಇವನ ಸಂಸ್ಕೃತಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದೆಂದರೆ ನಾಣ್ಯವ್ಯವಸ್ಥೆ. ಇವುಗಳು ಮಾನವನ ಸಂಸ್ಕೃತಿಯ ಅಧ್ಯಯನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರಲ್ಲಿಯೂ ವಿಜಯನಗರದ ನಾಣ್ಯಚರಿತ್ರೆಯು ಕರ್ನಾಟಕದ ಇತಿಹಾಸದಲ್ಲಿಯೇ ಮುಖ್ಯವಾದ ಸ್ಥಾನಹೊಂದಿದೆ.

ವಿಜಯನಗರ ಸಾಮ್ರಾಜ್ಯವ ದಖನ್ನಿನ ಸಮಸ್ತ ಪ್ರಾಚೀನ ಸಾಮ್ರಾಜ್ಯಗಳ ಪರಂಪರೆಯನ್ನು ಪ್ರತಿನಿಧಿಸುವಂತಿತ್ತು. ವಿಜಯನಗರದ ರಾಜ್ಯ ಲಾಂಛನವು ಪರಾಹವಾಗಿದ್ದರೂ ನಾಣ್ಯಗಳ ಮೇಲೆ ಹನುಮಾನ್, ಗರುಡ ಮತ್ತು ಆನೆಗಳ ಲಾಂಛನವನ್ನು ಮುದ್ರಿಸಿ ಚಲಾವಣೆಗೆ ತಂದಿದ್ದದು ಕಂಡುಬರುತ್ತದೆ. ಒಂದನೇ ಹರಿಹರನ ಕಾಲದ ನಾಣ್ಯಗಳ ಮೇಲೆ ಗರುಡ, ಹನುಮಾನ್‌ಗಳ ಚಿತ್ರಗಳಿರುವುದಲ್ಲದೆ ಕನ್ನಡ ಹಾಗೂ ದೇವನಾಗರಿ ಲಿಪಿಯಲ್ಲಿ ಶ್ರೀ ವೀರ ಹರಿಹರ’ ಎಂಬ ಅಂಕಿತವೂ ಕಂಡು ಬರುತ್ತದೆ. ಮೊದಲನೆ ಬುಕ್ಕನ ಕಾಲದ ನಾಣ್ಯಗಳ ಮೇಲೆ ‘ಶ್ರೀ ವೀರ ಬುಕ್ಕರಾಯ’ ಶ್ರೀ ವೀರ ಭೂಪತಿ ರಾಯ’ ಎಂಬ ಲಿಖಿತವಿದೆ. ಎರಡನೇ ಹರಿಹರನ ಕಾಲದ ಚಿನ್ನದ ಅರ್ಥವರಹಗಳು, ೨೬ – ೪ ಗ್ರೆಯ್ನ್ ತೂಕವಾಗಿದೆ, ನಾಣ್ಯದ ಮೇಲ್ಮುಖದಲ್ಲಿ ಶಿವ, ಪಾರ್ವತಿ, ಲಕ್ಷ್ಮೀ, ನಾರಾಯಣ, ಸರಸ್ಪತೀ, ಬ್ರಹ್ಮ ಮತ್ತು ಲಕ್ಷ್ಮೀ – ನರಸಿಂಹ, ಇವರ ಚಿತ್ರಗಳಿರುವುದು ಕಂಡುಬರುತ್ತದೆ. ಇದರ ಇನ್ನೊಂದು ಮುಖದ ಮೇಲೆ ‘ಶ್ರೀ ಪ್ರತಾಪ ಹರಿಹರ’ ಎಂದು ನಾಗರಿ ಲಿಪಿಯಲ್ಲಿ ಕೆತ್ತಲಾಗಿರುವುದು ಕಂಡುಬರುತ್ತದೆ. ತಾಮ್ರದ ನಾಣ್ಯವು ೮/೧ ವರಹವು ತೂಕದಲ್ಲಿ ೬ ಗ್ರೆಯ್ನ್ ಇದ್ದು ಅದರ ಮೇಲೆ ನಂದಿಶೂಲಗಳ ಚಿತ್ರವಿದ್ದು, ಪ್ರತಾಪ ಹರಿಹರ’ ಎಂಬ ಅಂಕಿತವಿದೆ. ಒಂದನೆಯ ದೇವರಾಯನ ಕಾಲದ ಚಿನ್ನದ ವರಹಗಳು ೫೨೩ ಗ್ರೆಯ್ನ್ ತೂಕವಾಗಿದೆ. ಅವುಗಳ ಮೇಲೆ ಹಿಂದೂ ಧರ್ಮದ ದೇವತೆಗಳಾದ ವಿಷ್ಣು – ಲಕ್ಷ್ಮೀ ಚಿತ್ರಗಳು ಮತ್ತು ನಾಗರಿ ಲಿಪಿಯಲ್ಲಿ ಶ್ರೀ ಪ್ರತಾಪ ದೇವರಾಯ ಎಂಬ ಅಂಕಿತ ಇರುವುದು ಕಂಡುಬರುತ್ತದೆ.

ಎರಡನೆ ದೇವರಾಯನ ಕಾಲದಲ್ಲಿ ಸಾಮ್ರಾಜ್ಯಕ್ಕೆ ಭೇಟಿ ನೀಡಿದ್ದ ಅಬ್ದುಲ್ ರಜಾಕ್ ನು ಈ ಸಾಮ್ರಾಜ್ಯದಲ್ಲಿ ಮೂರು ತರಹದ ನಾಣ್ಯಗಳಿವೆ ಎಂದು ವಿವರಿಸಿದ್ದಾನೆ. ಚಿನ್ನ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳು (ಪಗೋಡಾ, ಕಾರ ಮತ್ತು ಜಿತಲ್) ಚಲಾವಣೆಯಲಿದ್ದವೆಂದು ಹೇಳುತ್ತಾನೆ. ರಜಾಕ್ ಇನ್ನೂ ಮುಂದುವರೆದು ನಾಣ್ಯಗಳನ್ನು ತಯಾರಿಸಲು ಚಿನ್ನ, ಬೆಳ್ಳಿ, ತಾಮ್ರವನ್ನು ಒಟ್ಟಿಗೆ ಬೆರೆಸಿ ತಯಾರಿಸುತ್ತಿದ್ದರೆಂದೂ ಹೇಳುತ್ತಾನೆ. ಸಾಹಿತ್ಯ, ಕೃತಿಗಳಲ್ಲಿ ಗದ್ಯಾಣ, ಪಣ, ಹಾಗ, ವೀಸ, ಅಡ್ಡದುಡ್ಡು ಮೊದಲಾದ ನಾಣ್ಯಗಳ ಹೆಸರುಗಳು ಕಂಡುಬರುತ್ತವೆ.

ಸಾಳುವರ ಕಾಲದ ನಾಣ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರಕುವುದಿಲ್ಲ ಕೃಷ್ಣದೇವರಾಯನ ಕಾಲದ ಚಿನ್ನದ ವರಹಗಳು ೫೨ ಗ್ರಯ್ನ್ ತೂಕವಿದ್ದು ನಂದಿ ದುರ್ಗಾ, ವರಾಹ, ಶಂಖ ಮತ್ತು ಚಕ್ರಗಳ ಚಿತ್ರಗಳನ್ನು ಮುದ್ರಿಸಲಾಗುತ್ತಿತ್ತೆಂದು ಕಂಡು ಬರುತ್ತದೆ. ನಾಗರಿ ಲಿಪಿಯಲ್ಲಿ “ಶ್ರೀ ಪ್ರತಾಪಕೃಷ್ಣರಾಯ” ಎಂಬ ಲಿಖಿತವನ್ನು ಹೊಂದಿರುವುದಲ್ಲದೆ, ಅರ್ಧ ಮತ್ತು ಕಾಲುವರಹಗಳ ಮೇಲೆ ಬಾಲಕೃಷ್ಣನ ಚಿತ್ರವಿದೆ. ಚಿನ್ನದ ನಾಣ್ಯಗಳ ಕುರಿತು ಸಾಹಿತ್ಯ ಕೃತಿಗಳಲ್ಲೂ ಪ್ರಸ್ತಾಪ ಮಾಡಿರುವುದು ಕಂಡುಬರುತ್ತದೆ. ರಾಜಧಾನಿಯ ಮಾರುಕಟ್ಟೆಗಳಲ್ಲಿ ನಡೆಯುತ್ತಿದ್ದ ವ್ಯಾಪಾರದ ವಿಧಿ ವಿಧಾನಗಳನ್ನು ವರ್ಣಿಸುವ ಸಂದರ್ಭದಲ್ಲಿ ಕನಕದಾಸರು “ಚಪ್ಪನ್ನ ದೇಶದ ನಾಣೆಯಂಗಳ ನೋಟ ತಪ್ಪದ ಚಪಲ ಸೆಟ್ಟಿಗಳು ಬಪ್ಪವಡೆದು ಕುಳಿತಿರ್ದರು ಹಣ ಹೊನ್ನಕುಪ್ಪೆಯ ಮುಂದಿಟ್ಟುಕೊಂಡು” ಎಂಬ ಮಾತಿನ ಅರ್ಥವನ್ನು ಇಲ್ಲಿ ಸ್ಮರಿಸುವುದಾದರೆ ವಿದೇಶಿ ಪ್ರವಾಸಿಗರುಗಳು ಹಾಗೂ ದೇಶಿಯ ಆಧಾರಗಳು ತಿಳಿಸುವ ಹಾಗೆ ಹಣದ ಹೊನ್ನರಾಶಿಯನ್ನು ಸುರಿದುಕೊಂಡು ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು ಕುಳಿತ್ತಿದ್ದರೆಂದು ಅಂದಿನ ಚಿನ್ನದ ನಾಣ್ಯಗಳ ಚಲಾವಣೆಯು ಯಾವ ಪ್ರಮಾಣದಲ್ಲಿತ್ತೆಂಬುದನ್ನು ಊಹಿಸಬಹುದಾಗಿದೆ.

.೪. ಸಾಂಪ್ರದಾಯಿಕ ಕೈಗಾರಿಕೆಗಳು ಮತ್ತು ಬೃಹತ್ ಕೈಗಾರಿಕೆಗಳು

ವಿಜಯನಗರದ ಕಾಲದಲ್ಲಿನ ಕೈಗಾರಿಕೆಗಳ ಬೆಳವಣಿಗೆಯ ಪರ್ವ ಕಾಲವೆಂದರೆ ತಪ್ಪಾಗಲಾರದು, ಕನ್ನಡಿಗರ ಹೃದಯದಂತ್ತಿದ್ದ ಈ ಸಾಮ್ರಾಜ್ಯವು ಸಾಮಾಜಿಕ, ಸಾಂಪ್ರದಾಯಿಕ ಬದುಕಿನಿಂದ ಎಲ್ಲಾ ರಂಗಗಳಲ್ಲೂ ಉತ್ತಮ ರೀತಿಯಲ್ಲಿಯೇ ಸಾಗಿ ಹೊಸ ಹೊಸ ವಸ್ತುಗಳನ್ನು ಉತ್ಪಾದಿಸುವ ಪ್ರಯತ್ನದ ಕಾಲವಾಗಿತ್ತು. ಪೊರ್ಚುಗೀಸರ ನಿಕಟ ಸಂಪರ್ಕವೂ ಈ ಕಾಲದಲ್ಲಿ ಉಂಟಾಯಿತು. ವಿಜಯನಗರದ ಕೈಗಾರಿಕೆಗಳು ಮಾನವ ಸಂಸ್ಕೃತಿಯ ಹಾಗೂ ವಾಣಿಜ್ಯ ವ್ಯಾಪಾರಗಳ ಅನೇಕ ಬದಲಾವಣೆಗಳಿಗೆ ಅಂದಿನಿಂದಲೇ ಎಡೆಮಾಡಿಕೊಟ್ಟಿತ್ತೆಂದು ಹೇಳಬಹುದಾಗಿದೆ.

ಭೂಕಂದಾಯದ ನಂತರ ಸಾಮ್ರಾಜ್ಯದಲ್ಲಿ ಬೊಕ್ಕಸಕ್ಕೆ ಎರಡು ಆಕರಗಳಿಂದ ಹೆಚ್ಚಿನ ಆದಾಯ ಬರುತ್ತಿತ್ತು. ಅ. ಗೃಹ ಕೈಗಾರಿಕೆ ಮತ್ತು ಕೈಕಸಬುಗಳ ಮೇಲೆ ಹಾಕುತ್ತಿದ್ದ ತೆರಿಗೆ, ಆ. ವ್ಯಾಪಾರ ನಾಣ್ಯಗಳ ಮೇಲೆ ಹಾಕುತ್ತಿದ್ದ ತೆರಿಗೆ ಹಾಗೂ ಆಮದು ರಪ್ತು ಸುಂಕ. ಮೇಲಿನದನ್ನು ಗಮನಿಸಿದರೆ ವಿಜಯನಗರ ಸಾಮ್ರಾಜ್ಯವು ಕೃಷಿಯ ಜೊತೆಗೆ ಕೈಗಾರಿಕೆ ಹಾಗೂ ವ್ಯಾಪಾರವನ್ನು ಎಷ್ಟರ ಮಟ್ಟಿಗೆ ಅವಲಂಬಿತವಾಗಿತ್ತೆಂಬುದನ್ನು ತಿಳಿಸುತ್ತದೆ. ಈ ವಿಷಯ ಕುರಿತು ಅಧ್ಯಯನ ಮಾಡಲು ಎಂದಿನಂತೆಯೇ ದೇಶೀ ಹಾಗು ವಿದೇಶಿಯರ ಸಾಹಿತ್ಯ ಹಾಗೂ ಅಪಾರವಾಗಿರುವ ಶಾಸನಗಳು, ಸ್ಮಾರಕಗಳು ವಿಪುಲವಾಗಿ ದೊರಕುತ್ತವೆ.

ಯಾವುದೇ ಕೈಗಾರಿಕೆಯ ಬೆಳವಣಿಗೆಯಾಗಬೇಕಾದರೆ ಪ್ರಮುಖವಾಗಿ ಕಚ್ಚಾ ವಸ್ತುಗಳು ಅತ್ಯಗತ್ಯ. ಈ ದೃಷ್ಟಿಯಲ್ಲಿ ಸಾಮ್ರಾಜ್ಯದ ಕೈಗಾರಿಕೆಗಳು ಬೆಳೆಯಲು ಸಹಾಯಕವಾಗುವ ಹೆಚ್ಚು ಕಡಿಮೆ ಎಲ್ಲಾ ಉತ್ಪನ್ನಗಳು ದೊರೆಯುತ್ತಿದ್ದವು ಎಂದು ಕಂಡುಬರುತ್ತದೆ. ಪ್ರತಿವರ್ಷವೂ ಸಾಮ್ರಾಜ್ಯದಲ್ಲಿ ಸಾಕಷ್ಟು ಮೌಲ್ಯದ ಕೃಷಿ ಮೂಲದ ಕಚ್ಛಾ ವಸ್ತುಗಳು ಉತ್ಪನ್ನವಾಗುತ್ತಿದ್ದವು. ಇವುಗಳಲ್ಲಿ ಮುಖ್ಯವಾದವುಗಳೆಂದರೆ ಹತ್ತಿ, ಎಣ್ಣೆ ಬೀಜಗಳು, ಹಿಪ್ಪುನೇರಳೆ, ಕಬ್ಬುಗಳಾಗಿದ್ದವೆಂದು ಕಂಡುಬರುತ್ತದೆ. ಇವುಗಳಲ್ಲಿ ಹತ್ತಿ, ಉಣ್ಣೆ ರೇಷ್ಮೆ ಮತ್ತು ಇತರ ದಾರಗಳು ಬಟ್ಟೆ ತಯಾರಿಸುವ ಕೈಗಾರಿಕೆಗಳಿಗೆ ಕಚ್ಛಾವಸ್ತುಗಳಾಗಿದ್ದವು. ಹೆಚ್ಚು ಮೌಲ್ಯವುಳ್ಳ ಅರಣ್ಯದ ಉತ್ಪನ್ನಗಳೂ ಸಹ ದೊರೆಯುತ್ತಿದ್ದವು. ಮೈಸೂರು ಪ್ರಾಂತ್ಯದ ಶ್ರೀಗಂಧ ವಿಶ್ವವಿಖ್ಯಾತವಾಗಿದ್ದವು. ಚರ್ಮವನ್ನು ಹದಮಾಡುವ ತೊಗಟೆಯನ್ನು ಕಾಡಿನಿಂದಲೇ ತರುತ್ತಿದ್ದರು. ಅಂಟು, ಸೀಗೆ, ಬೊಂಬುಗಳು ಕಾಡಿನ ಉತ್ಪನ್ನಗಳಾಗಿದ್ದ, ಕೈಗಾರಿಕೆ ಹಾಗೂ ವ್ಯಾಪಾರಗಳಲ್ಲಿ ಪ್ರಮುಖವಾದ ಸ್ಥಾನವನ್ನು ಹೊಂದಿದ್ದವೆಂದು ಹೇಳಬಹುದು, ಸಾಮ್ರಾಜ್ಯದಾದ್ಯಂತ ಅದರಲ್ಲಿಯೂ ರಾಜಧಾನಿಯ ಸುತ್ತಮುತ್ತಲು ಹೆಚ್ಚಿನ ಕಬ್ಬಿಣದ ಅದಿರು ದೊರೆಯುವ ನಿಕ್ಷೇಪವನ್ನು ಪತ್ತೆ ಹಚ್ಚಿ ಇವುಗಳ ತಯಾರಿಕೆಯ ಕೈಗಾರಿಕೆಗಳೂ ಅಭಿವೃದ್ಧಿ ಹೊಂದಿದ್ದವೆಂದು ಆಧಾರಗಳು ತಿಳಿಸುತ್ತವೆ.

ಸಾಮ್ರಾಜ್ಯದ ಪ್ರಮುಖ ಕೈಗಾರಿಕೆ ಎಂದರೆ ಕೈಮಗ್ಗದಿಂದ ಬಟ್ಟೆ ತಯಾರಿಸುವುದೇ ಆಗಿತ್ತು. ಇದನ್ನು ಬಿಟ್ಟರೆ ರೇಷ್ಮೇ ದಾರದ ಉತ್ಪನ್ನ, ಲೋಹದ ವಸ್ತುಗಳ ತಯಾರಿಕೆ ಮಡಿಕೆ ಕುಡಿಕೆ ತಯಾರಿಕೆ, ಬಡಗಿ ಕೆಲಸ, ಚರ್ಮ, ಹದ ಮಾಡುವ ಕೈಗಾರಿಕೆ, ಬೆಲ್ಲದ ತಯಾರಿಕೆ, ಎಣ್ಣೆ ತಯಾರಿಕೆ, ಉಪ್ಪನ್ನು ತಯಾರಿಸುವುದು ಮೊದಲಾದವುಗಳು ಸಾಮ್ರಾಜ್ಯದ ಎಲ್ಲಾ ಕಡೆ ಸಾಮಾನ್ಯವಾಗಿ ಹರಡಿಕೊಂಡಿದ್ದ ಕರಕುಶಲ ಕಸುಬುಗಳಾಗಿದ್ದವು. ಇವುಗಳಲ್ಲಿ ಅನೇಕ ಸಣ್ಣ ಪುಟ್ಟ ಕೈಗಾರಿಕೆಗಳೂ ಸಹ ಜೀವನದ ಪ್ರಮುಖ ದ್ರವ್ಯಗಳ ತಯಾರಿಕೆ, ಕರಕುಶಲ ಕಲೆಗಳು ಪ್ರಸಿದ್ಧವಾಗಿದ್ದವು.

ಅಂದು ಕೃಷಿಯನ್ನು ಬಿಟ್ಟರೆ ಕೈಮಗ್ಗದಿಂದ ಬಟ್ಟೆಯನ್ನು ತಯಾರಿಸುವುದು ಪ್ರಮುಖ ಕೈಗಾರಿಕೆಯಾಗಿದ್ದು, ಇದೊಂದು ಪ್ರಾಚೀನ ಕಾಲದ ಉದ್ಯೋಗವೆನ್ನಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಸ್ತ್ರೀಯರು ಈ ಕೈಗಾರಿಕೆಯಲ್ಲಿ ತೊಡಗಿರುತ್ತಿದ್ದರು. ಚರಕಕ್ಕೆ ದಾರ ಸಿದ್ಧವಾಗುವುದಕ್ಕಿಂತ ಮುಂಚೆ ಹತ್ತಿಯನ್ನು ಶುದ್ಧಗೊಳಿಸುವ ಮತ್ತು ಬೀಜ ತೆಗೆಯುವ ಕೆಲಸ ನಡೆಯಬೇಕಿತ್ತು. ಇದಕ್ಕೋಸ್ಕರ ‘ಧುನ್’ (ಬಿಲ್ಲಿನಾಕಾರದ ಸಾಧನ) ಎನ್ನುವ ಒಂದು ಸಾಧನವನ್ನು ಬಳಸುತ್ತಿದ್ದರು. ಅರಳೆಯನ್ನು ಶುದ್ಧಗೊಳಿಸಿದ ನಂತರ ಅವುಗಳನ್ನು ಕೈಗಾತ್ರದ ಉಂಡೆಗಳನ್ನಾಗಿ ಮಾಡಿಕೊಂಡು ನಂತರ ಚರಕಕ್ಕೆ ಸಿದ್ಧವಾಗುತ್ತಿದ್ದರು. ಕೈಮಗ್ಗಗಳಿಂದ ತಯಾರಾದ ಬಟ್ಟೆಗಳನ್ನು ಸೀರೆ, ಕಿರಿಗೆ, ಕಣ ಎಂದು ಕರೆಯುತ್ತಿದ್ದರು, ಇವುಗಳು ಸ್ತ್ರೀಯರು ಧರಿಸುವ ಬಟ್ಟೆಗಳಾಗಿದ್ದವು.

ವಿದೇಶಿ ಸಾಹಿತಿಗಳು ಅಂದಿನ ಬಟ್ಟೆ ಕೈಗಾರಿಕೆಯ ಬಗ್ಗೆ ಹೇಳುವ ಮಾತೆಂದರೆ ಸಾಮ್ರಾಜ್ಯದಲ್ಲಿ ನೇಕಾರರು ತಯಾರಿಸಿ ಅವುಗಳನ್ನು ಸಂತೆ ಹಾಗು ಜಾತ್ರೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಉತ್ತಮ ಮಟ್ಟದ ನಯವಾದ ಬಟ್ಟೆಗಳನ್ನು ವ್ಯಾಪಾರಿಗಳು ಸಂತೆಗಳಲ್ಲೆ ಕೊಂಡುಕೊಂಡು ರಪ್ತು ಮಾಡುತ್ತಿದ್ದರು. ಬಟ್ಟೆಯನ್ನು ತಯಾರಿಸಲು ಬೇಕಾದ ದಾರವನ್ನು ಖರೀದಿಸಲು ವರ್ತಕರು ನೇಕಾರರಿಗೆ ಮಂಗಡ ಹಣವನ್ನು ಕೊಡುತ್ತಿದ್ದರು” ಎಂದು ಸುದೀರ್ಘವಾಗಿ ವಿವರಿಸಿರುವುದು ಅಂದಿನ ಕೈಮಗ್ಗದ ಅಭಿವೃದ್ಧಿಯನ್ನು ಸೂಚಿಸುತ್ತದೆ. ಅಂದು ಹತ್ತಿಯನ್ನು ಹೆಚ್ಚಾಗಿ ರಾಯಚೂರು ಮತ್ತು ಬಳ್ಳಾರಿಯನ್ನು ಬೆಳೆಯಲಾಗುತ್ತಿತ್ತು.

ಉಣ್ಣೆ ಬಟ್ಟೆ ತಯಾರಿಕೆ : ವಿಜಯನಗರದ ಅರಸರ ಕಾಲದಲ್ಲಿ ಉಣ್ಣೆ ತಯಾರಿಕೆಯು ಒಂದು ಪ್ರಧಾನ ಉದ್ದಿಮೆಯಾಗಿತ್ತು, ಸಾಮ್ರಾಜ್ಯದ ಎಲ್ಲಾ ಕೇಂದ್ರಗಳಲ್ಲಿಯೂ ಈ ಉದ್ದಿಮೆಗಳು ಇದ್ದು ಕಂಡುಬರುತ್ತದೆ. ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ಕೋಲಾರ ವಿಭಾಗಗಳು ಹೆಚ್ಚಾಗಿ ಉಣ್ಣೆ ತಯಾರಿಸುವ ಕೇಂದ್ರಗಳಾಗಿದ್ದವು. ವರ್ಷಕ್ಕೆ ಎರಡು ಬಾರಿ ಕುರಿಯಿಂದ ಉಣ್ಣೆಯನ್ನು ಕತ್ತರಿಸುತ್ತಿದ್ದರು. ಚಳಿಗಾಲಕ್ಕೆ ಕೀಳುವ ಉಣ್ಣೆಗೆ “ಮಗೆಕೊಣ್ಣೆ” ಎಂದು ಮಳೆಗಾಲಕ್ಕೆ ಮುಂಚೆ ಕೀಳುವ ಉಣ್ಣೆಗೆ “ಕೆರೆಕೊಣ್ಣೆ” ಎಂತಲೂ ಕರೆಯಲಾಗುತ್ತಿದ್ದಿತು. ಉಣ್ಣೆ ಕೀಳುವುದಕ್ಕಿಂತ ಮುಂಚೆ ಕುರಿಯನ್ನು ಚೆನ್ನಾಗಿ ಉಜ್ಜಿ, ತೊಳೆಯುತ್ತಿದ್ದರು. ಕತ್ತರಿಸಿದ ಉಣ್ಣೆಯನ್ನು ಕೈ ಬೆರಳುಗಳಿಂದ ಬಿಡಿಸಿ ಅನಂತರ ಬಡಿದು ಬಿಸಿಲಿನಲ್ಲಿ ಹರಡುತ್ತಿದ್ದರು. ನಂತರ ಹೆಣೆಯಲು ಅನುಕೂಲವಾಗುವಂತೆ ಸಣ್ಣ ಸಣ್ಣ ಕೈ ಉಂಡೆಗಳನ್ನಾಗಿ ಮಾಡುತ್ತಿದ್ದರು. ಈ ಕೆಲಸಗಳನ್ನೆಲ್ಲಾ ಸಾಮಾನ್ಯವಾಗಿ ಸ್ತ್ರೀಯರು ಹೆಚ್ಚಾಗಿ ಮಾಡುತ್ತಿದ್ದರೆನ್ನಬಹುದು. ಉಣ್ಣೆಯಿಂದ ತಯಾರಿಸಿದ್ದ ವಸ್ತುಗಳಲ್ಲಿ ಕಂಬಳಿಗಳು ಮುಖ್ಯವಾಗಿದ್ದವು. ಮೈಸೂರು, ಮಂಡ್ಯ, ಹುಣಸೂರು, ಕೊಪ್ಪಳ, ಬಳ್ಳಾರಿ, ಸಿಂಧನೂರು, ಸಿರಗುಪ್ಪ ರಾಯಚೂರು ಕಂಬಳಿಗಳನ್ನು ತಯಾರಿಸುವ ಕೇಂದ್ರಗಳಾಗಿದ್ದವು. ಅಂದಿನ ಕಾಲದಲ್ಲಿ ಜನಸಾಮಾನ್ಯರ ಪ್ರಮುಖವಾದ ವಸ್ತ್ರ ಇದಾಗಿತ್ತೆನ್ನಬಹುದು.

ಲೋಹ ವಸ್ತುಗಳ ಕುಶಲ ಕೈಗಾರಿಕೆ : ಸಾಮ್ರಾಜ್ಯದ ಮತ್ತೊಂದು ಪ್ರಸಿದ್ಧವಾದ ಲೋಹ, ಮರ ಮತ್ತು ಶಿಲ್ಪ ವಸ್ತುಗಳ ತಯಾರಿಕೆಯ ವಿಚಾರವನ್ನು ಪರಿಶೀಲಿಸುವುದಾದರೆ, ಅಂದು ಬಟ್ಟೆ ತಯಾರಿಸುವ ಕೈಗಾರಿಕೆಗಳನ್ನು ಬಿಟ್ಟರೆ ಇದು ಎರಡನೆಯ ಪ್ರಧಾನ ಸ್ಥಾನವನ್ನು ಹೊಂದಿತ್ತೆಂದು ಹೇಳಬಹುದು. ಸಾಮ್ರಾಜ್ಯದ ಪ್ರತಿಯೊಂದು ದೊಡ್ಡ ಗ್ರಾಮ ಹಾಗೂ ಪಟ್ಟಣಗಳಲ್ಲಿಯೂ ಸ್ಥಳೀಯರೇ ಆಗಿದ್ದ ಚಿನಿವಾರರು ಮತ್ತು ಕಮ್ಮಾರರು ಇರುತ್ತಿದ್ದರು. ಎಷ್ಟು ಜನ ಈ ಕೈಗಾರಿಕೆಗಳಲ್ಲಿ ನಿರತರಾಗಿದ್ದರು ಮತ್ತು ಇವರು ತಯಾರಿಸುತ್ತಿದ್ದ ವಸ್ತುಗಳ ಒಟ್ಟು ಮೌಲ್ಯವೆಷ್ಟು ಎಂಬ ಬಗೆಗೆ ಖಚಿತವಾಗಿ ಹೇಳಲು ಸಾಧ್ಯವಾಗದು. ಹೆಚ್ಚಾಗಿ ಕುಶಲ ಕರ್ಮಿಗಳು ಚಿನ್ನ ಮತ್ತು ಬೆಳ್ಳಿಯನ್ನು ಅಭರಣಗಳ ತಯಾರಿಕೆಯಲ್ಲಿ ಬಳಸುತ್ತಿದ್ದರು. ಅಂದು ಸಮಾಜದ ಎಲ್ಲ ವರ್ಗಗಳಿಂದಲೂ ಚಿನ್ನ, ಬೆಳ್ಳಿ ಆಭರಣಗಳಿಗೆ ಅಪಾರವಾದ ಬೇಡಿಕೆ ಇದ್ದದ್ದು ತಿಳಿದಿರುವ ವಿಷಯವೆ. ಇಂದು ಇದು ಕಡಿಮೆಯಾಗಿಲ್ಲವೆಂದೇ ಹೇಳಬಹುದು. ಪೇಟೆಗಳಲ್ಲಿಯೂ ಚಿನ್ನ ಮತ್ತು ಬೆಳ್ಳಿ ಗಟ್ಟಿಗಳ ಕ್ರಮಬದ್ಧ ವ್ಯಾಪಾರವಿದ್ದಿತು. ಗ್ರಾಮೀಣ ಪ್ರದೇಶದಲ್ಲಿ ಚಿನಿವಾರರ ಬಗೆಗೆ ಗ್ರಾಹಕರಿಗೆ ಸಂಶಯ ಪ್ರವೃತ್ತಿ ಬೆಳೆದಿತ್ತು. ಇಂತಹ ಸಂಶಯವು ಅಂದು ಸೃಷ್ಟಿಸುವ ಗಾದೆ “ಅಕ್ಕನ ಚಿನ್ನವನ್ನೂ ಅಕ್ಕಸಾಲಿಗ ಬಿಡನು” ಎನ್ನುವ ರೂಪ ಪಡೆದು ತನ್ನ ಸಂಶಯವನ್ನು ವ್ಯಕ್ತಪಡಿಸುತ್ತದೆ.

ಚಿನಿವಾರರು ಸಾಮಾನ್ಯವಾಗಿ ಬಡವರಾಗಿರುತ್ತಿದ್ದರು. ಬಹುಶಃ ಅವರ ದಾರದ್ರ್ಯದ ಸ್ಥಿತಿಯಿಂದಾಗಿ ಗಿರಾಕಿಗಳಿಗೆ ಅವರ ಬಗ್ಗೆ ಸಂಶಯ ಪ್ರವೃತ್ತಿ ಮೂಡಲು ಕಾರಣವಾಗಿರಬಹುದೇನೋ, ಚಿನ್ನವನ್ನು ಕರಗಿಸಲು ಸುತ್ತಿಗೆ, ಊದು ಕೊಳವೆ, ಚಿಮುಟ ಮತ್ತು ಮುದ್ರೆಗಳು, ಚಿನ್ನ ಕರಿಗಿಸಲು ಮೂಸೆ, ಕತ್ತರಿ, ತಕ್ಕಡಿ, ಬ್ರಷ್ ಮೊದಲಾದ ಉಪಕರಣಗಳನ್ನು ಉಪಯೋಗಿಸುತ್ತಿದ್ದರು. ಅಂದು ತಯಾರಾಗುತ್ತಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳ ಹೆಸರುಗಳೆಂದರೆ,

ಅ. ರಾಗಟೆ – ಉರುಟಾದ ಆಭರಣ – ಸ್ತ್ರೀಯರು ತಲೆಯಲ್ಲಿ ಧರಿಸುತ್ತಿದ್ದರು

ಆ. ಕ್ಯಾದಿಗೆ – ಆರ್ಧಚಂದ್ರಾಕಾರದ್ದು – ತಲೆಯ ಹಿಂದೆ ಧರಿಸುತ್ತಿದ್ದರು

ಇ. ಜೆಡಿಬಿಲ್ಲೆ – ಚಿಕ್ಕ ಪ್ರಮಾಣದ ಜಡೆಯಲ್ಲಿ ಧರಿಸುತ್ತಿದ್ದರು

ಈ. ಚೌರಿಕುಪ್ಪ – ಅಲಂಕೃತವಾದ ತಲೆ ಪಿನ್ನುಗಳು.

ಉ. ಓಲೆ – ಕಿವಿ ಆಭರಣ.

ಊ. ಬಾವಲಿ – ಕಿವಿ ಆಭರಣ.

ಋ. ಅಡ್ಡಿಕೆ – ಕತ್ತಿನಸರ.

ೠ. ಕಂಕಣ – ಬಳೆಗಳು

ಎ. ಪದಕ – ಹಣೆಯ ಮೇಲೆ ಧರಿಸುವ ಆಭರಣ

ಏ. ವಂಕಿ – ತೋಳು ತಾಯಿತಿ, ಬಂದು, ಮೊಣಕೈ ಮೇಲೆ ಧರಿಸುತ್ತಿದ್ದ ಆಭರಣ.

ಐ. ಬಾಭು ಬಂದಿ – ತೋಳಿನ ಆಭರಣ.

ಒ. ಡಾಬು – ಸೊಂಟಕ್ಕೆ ಧರಿಸುತ್ತಿದ್ದ ಆಭರಣ.

ಓ. ಕಾಲುಗೆಜ್ಜೆ – ಕಾಲಿಗೆ ಹಾಕಿಕೊಳ್ಳುತ್ತಿದ್ದ ಆಭರಣ.

ಔ. ಪಿಲ್ಲಿ – ಬೆಳ್ಳಿಯ ಕಾಲುಂಗರ
ಅಂ. ಉಡಿದಾರ – ಪುರುಷರು ಸೊಂಟಕ್ಕೆ ಹಾಕಿಕೊಳ್ಳುವ ಬೆಳ್ಳಿ ಹಾಗೂ ಚಿನ್ನದ ಆಭರಣ

ಆಃ. ತಾಯಿತ – ಬೆಳ್ಳಿಯ ಸಣ್ಣ ಪೆಟ್ಟಿಗೆ ಕತ್ತು ಅಥವಾ ಸೊಂಟಕ್ಕೆ ಹಾಕಿಕೊಳ್ಳುತ್ತಿದ್ದ ಆಭರಣಗಳೆಂದು ತಿಳಿಯಬಹುದು. ಅಂದಿನ ಕಾಲದ ಸಾಹಿತ್ಯದಲ್ಲಿ ಹಾಗೂ ಶಾಸನಗಳಲ್ಲಿ ಹಂಪಿಯ ದೇವಾಲಯಗಳಲ್ಲಿರುವ ಶಿಲ್ಪಿಗಳಲ್ಲಿ ಇವುಗಳನ್ನೆಲ್ಲ ನೋಡಬಹುದಾಗಿದೆ. ಮೇಲಿನ ಎಲ್ಲ ಆಭರಣಗಳನ್ನು ಒಬ್ಬ ಸ್ತ್ರೀಯರು ಹೊಂದಿರುವ ಶಿಲ್ಪಗಳು ಹಂಪಿಯ ಹಜಾರರಾಮ ದೇವಾಲಯದ ಗೋಡೆಯ ಮೇಲಿನ ಉಬ್ಬು ಚಿತ್ರಗಳಲ್ಲಿ ಕಾಣಬಹುದಾಗಿದೆ.

ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ : ವಿಜಯನಗರದ ರಾಜಧಾನಿಯ ಸುತ್ತಮುತ್ತ ಕಬ್ಬಿಣದ ಅದಿರು ಸಿಗುತ್ತಿತ್ತು. ಅಂದಿನ ಎಲ್ಲಾ ಬೇಡಿಕೆಗಳನ್ನು ಪೂರೈಸಲು ಇದು ಸಾಕಾಗುವಷ್ಟಿತ್ತೆನ್ನಬಹುದು. ಹಿಂದಿನಿಂದಲೂ ಕಬ್ಬಿಣದ ಅದಿರನ್ನು ಕರಗಿಸಿ ಕಬ್ಬಿಣ ತಯಾರಿಸುವ ಕೈಗಾರಿಕೆಗಳು ಸ್ಥಾಪನೆಯಾಗಿದ್ದವು. ಇದಕ್ಕಾಗಿಯೇ ಸ್ಥಳೀಯರಲ್ಲಿ ಸ್ಥಳೀಯವಾದ ಪದ್ಧತಿಯು ರೂಪುಗೊಂಡಿತ್ತು. ಈ ವೃತ್ತಿಯಲ್ಲಿ ತೊಡಗಿಸಿಕೊಂಡವರನ್ನು ಕಮ್ಮಾರರೆನ್ನುತ್ತಿದ್ದರು.

ಪ್ರತಿಯೊಂದು ಹಳ್ಳಿಯಲ್ಲಿಯೂ ಒಬ್ಬ ಕಮ್ಮಾರನಿರುತ್ತಿದ್ದ. ಇವನು ಸಾಮಾನ್ಯವಾಗಿ ತನ್ನ ಮನೆಯಲ್ಲಿ ಅಥವಾ ಮನೆಯ ಹತ್ತಿರವೇ ಕಬ್ಬಿಣದ ಕೆಲಸವನ್ನು ನಿರ್ವಹಿಸುತ್ತಿದ್ದ. ಹೆಚ್ಚಾಗಿ ಕಮ್ಮಾರರು ಕೃಷಿಯ ಉತ್ಪನ್ನಗಳಾಗಿದ್ದ ನೇಗಿಲು, ಕುಡುಗೋಲು, ಕೊಡಲಿ ಮತ್ತು ಗಾಡಿಯ ಉಪಕರಣಗಳನ್ನು ಸಿದ್ಧಪಡಿಸುತ್ತಿದ್ದರು. ಅದೇ ರೀತಿ ಗೃಹೋಪಯೋಗಿ ವಸ್ತುಗಳಾದ ಬಾಣಲೆ, ಸೌಟುಗಳು, ಕೊಡಗಳು, ಪಾತ್ರೆಗಳನ್ನು ತಯಾರಿಸುತ್ತಿದ್ದರು. ಸಾಮಾನ್ಯವಾಗಿ ಹಿತ್ತಾಳೆ ಮತ್ತು ತಾಮ್ರವನ್ನು ಅಡಿಗೆ ಪಾತ್ರೆಗಳನ್ನು ಮತ್ತು ಕುಡಿಯುವ ನೀರಿನ ಪಾತ್ರೆಗಳನ್ನು ತಯಾರಿಸಲು ಉಪಯೋಗಿಸುತ್ತಿದ್ದರು. ಈ ಲೋಹಗಳನ್ನು ಬಳಸಿ ವಸ್ತುಗಳನ್ನು ತಯಾರಿಸುವ ಕುಶಲ ಕರ್ಮಿಗಳನ್ನು ಹಾಗೂ ಮನೆಯಲ್ಲಿ ಉಪಯೋಗಿಸುವ ಜನರುಗಳನ್ನು ಶ್ರೀಮಂತರೆಂದು ಕರೆಯುತ್ತಿದ್ದರು. ಸಾಮಾನ್ಯ ಜನರು ಪ್ರತಿಯೊಂದಕ್ಕೂ ಮಣ್ಣಿನ ಕುಡಿಕೆ ಇನ್ನಿತರ ವಸ್ತುಗಳನ್ನೇ ಬಳಸುತ್ತಿದ್ದದ್ದು ಕಂಡುಬರುತ್ತದೆ.

ಮರಗೆಲಸ : ಮರಗೆಲಸ ಮಾಡುವವರನ್ನು ಬಡಿಗಿಗಳೆಂದು ಕರೆಯಲಾಗುತ್ತಿದ್ದಿತು. ಇವರು ಕೃಷಿಗೆ ಅವಶ್ಯಕವಾದ ರೈತರ ಜೀವನಕ್ಕೆ ಆಧಾರವಾದ ವಸ್ತುಗಳನ್ನೆ ತಯಾರಿಸುತ್ತಿದ್ದರು. ಇದರ ಜೊತೆಗೆ ಕಟ್ಟಡಗಳ ರಚನೆಗೆ ಬೇಕಾಗುವ ಸಾಮಗ್ರಿಗಳು, ಅರಮನೆ, ಗುರುಮನೆಗೆ ಸುಂದರವಾದ ಕೆತ್ತನೆಯ ಮರಗೆಲಸವನ್ನು ಒದಗಿಸುತ್ತಿದ್ದರು. ಎತ್ತಿನಗಾಡಿಗಳ ತಯಾರಿಕೆಯಲ್ಲಿ ಹೆಚ್ಚಾಗಿ ತೊಡಗಿಸುತ್ತಿದ್ದರು. ನೇಗಿಲು, ಗುದ್ಲಿಗಳ ತೈಯಾರಿಕೆಯಲ್ಲಿ ಇವರ ಪ್ರಮುಖ ಕೆಲಸಗಳಾಗಿದ್ದವು.

ಮರಗೆಲಸದ ಕುಸುರಿ ಕೆಲಸಕ್ಕೆ ಹೆಚ್ಚಿನ ಮಹತ್ವ ನೀಡಲಾಗಿತ್ತು. ಮೈಸೂರು ಪ್ರಾಂತ್ಯದಲ್ಲಿ ಹೇರಳವಾಗಿ ಸಿಗುತ್ತಿದ್ದ ಶ್ರೀಗಂಧದ ಮರದಲ್ಲಿ ಸುಂದರವಾದ ದೇವಾನುದೇವತೆಯರ ಕೆತ್ತನೆ ನಡೆಯುತ್ತಿತ್ತು. ಮರದಲ್ಲಿಯೇ ಅನೇಕ ಪ್ರಾಣಿ, ಪಕ್ಷಿಗಳ ಚಿತ್ರವನ್ನು ಕೆತ್ತಿರುವುದು ಕಂಡುಬರುತ್ತದೆ. ಒಟ್ಟಾಗಿ ನೋಡಿದರೆ ಇಂತಹ ವಸ್ತುಗಳಲ್ಲಿ ಒಂದು ರೀತಿಯ ಸಮನ್ವಯ ಸಮಂಜಸತೆ ಮತ್ತು ಉಲ್ಲಾಸಕರ ಸೌಂದರ್ಯಪ್ರಜ್ಞೆ ಎದ್ದು ಕಾಣುತ್ತದೆ.

ಎಣ್ಣೆ ತಯಾರಿಕೆ : ವಿಜಯನಗರ ಸಾಮ್ರಾಜ್ಯದ ಪೂರ್ವದಿಂದಲೂ ಎಣ್ಣೆ ಬೀಜಗಳಿಂದ ಎಣ್ಣೆ ತಯಾರಿಸುವ ಕೈಗಾರಿಕೆಯು ಕಂಡುಬರುತ್ತದೆ. ಆದರೆ ವಿಜಯನಗರದ ಆಳ್ವಿಕೆಯ ಕಾಲದಲ್ಲಿ ಈ ಕಾರ್ಯವು ಪ್ರಮುಖ ಕಸುಬುಗಳಲ್ಲಿ ಒಂದಾಗಿದ್ದಿತು. ಸಾಮಾನ್ಯವಾಗಿ ಸಾಮ್ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳು ಹಾಗೂ ಹೋಬಳೀ ಕೇಂದ್ರಗಳಲ್ಲಿಯೂ ಈ ಎಣ್ಣೆ ಕೈಗಾರಿಕೆಗಳು ಇರುತ್ತಿದ್ದವು. ಈ ಕಾರ್ಯದಲ್ಲಿ ನಿರತರಾಗಿದ್ದವರನ್ನು ಗಾಣಿಗರೆಂದು ಕರೆಯಲಾಗುತ್ತಿತ್ತು. ಅಂದು ಅವರನ್ನು ಅವರು ಉತ್ಪಾದಿಸುವ ಮಾದರಿ ಹಾಗೂ ಬಳಸುವ ಸಾಧನೆಗಳಿಗೆ ಅನುಗುಣವಾಗಿ ಬೇರೆ ಬೇರೆ ಹೆಸರುಗಳಿಂದಲೂ ಕರೆಯಲಾಗುತ್ತಿತ್ತೆಂದು ಸಾಹಿತ್ಯದಲ್ಲಿ ಕಂಡುಬರುತ್ತದೆ. ಉದಾಹರಣೆಗೆ : ಹೆಗ್ಗಾಣಿಗಳು – ಎರಡು ಎತ್ತುಗಳನ್ನು ಕಲಿನ ಗಾಣಕ್ಕೆ ಕಟ್ಟಿ ಎಣ್ಣೆ ತೆಗೆಯುವವರನ್ನು ಹೆಗ್ಗಾಣಿಗರೆಂದು ಕರೆಯುತ್ತಿದ್ದರು. ಆದರೆ ಮರದ ಗಾಣದಲ್ಲಿ ಎಣ್ಣೆ ತೆಗೆಯುವವರನ್ನು ಕಿರುಗಾಣಿಗರೆಂದು ಕರೆಯುಲಾಗುತ್ತಿತ್ತು. ಒಂದು ಎತ್ತನ್ನು ಬಳಸಿ ಎಣ್ಣೆ ತೆಗೆಯುವವರನ್ನು ಒಂಟೆತ್ತು ಗಾಣಿಗರೆಂದು ಕರೆಯುತ್ತಿದ್ದರು. ಒಟ್ಟಾಗಿ ಇವರನ್ನೆಲ್ಲಾ ಜ್ಯೋತಿಪಣ ಅಥವಾ ಜೋತಿ ನಗರ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಅಂದರೆ ಬೆಳಕನ್ನು ನೀಡುವ ಬಂದವರೆಂದು ಅರ್ಥ

ಗಾಣಗಳನ್ನು ೧. ಮರಗಾಣ, ೨. ಕಲ್ಲುಗಾಣಗಳೆಂದು ವರ್ಗೀಕರಿಸಿಕೊಳ್ಳಲಾಗಿತ್ತು. ಇವುಗಳಲ್ಲಿ ಹುಚ್ಚೆಳ್ಳು, ಹುಲ್ಲೆಳ್ಳು, ಅರಳು ಕೊಬ್ಬರಿ ಹಿಪ್ಪೆ ಮತ್ತು ಹೊಂಗೆಯಿಂದ ಎಣ್ಣೆಯನ್ನು ತೆಗೆಯುತ್ತಿದ್ದರು. ಸರ್ಕಾರವು ಇವರ ಮೇಲೆಯೂ ತೆರೆಗಿ ಹಾಕಿ ವಸೂಲು ಮಾಡುತ್ತಿತ್ತು.

ಕಬ್ಬು ಮತ್ತು ಬೆಲ್ಲ ತಯಾರಿಕೆ : ಕಬ್ಬನ್ನು ನೀರಾವರಿಯ ವ್ಯವಸ್ಥೆ ಇದ್ದ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಸಾಮಾನ್ಯವಾಗಿ ಸಾಮ್ರಾಜ್ಯದಾದ್ಯಂತ ಕಂಡುಬರುವ ಕೆರೆಗಳ ಆಶ್ರಯಿತ ನೀರಾವರಿ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಕಬ್ಬಿನಿಂದ ಬೆಲ್ಲ, ಸಕ್ಕರೆಯನ್ನು ತಯಾರಿಸುತ್ತಿದ್ದರು. ಇವುಗಳನ್ನು ತಯಾರಿಸುವ ಸ್ಥಳವನ್ನು “ಆಲೆಮನೆ” ಎಂದು ಕರೆಯಲಾಗುತ್ತಿತ್ತು. ಇದು ತುಂಬ ಕಷ್ಟದ ಕೆಲಸವಾಗಿತ್ತು. ಸಾಮಾನ್ಯವಾಗಿ ಊರಿನ ಗೌಡರು ಹಾಗೂ ಶ್ರೀಮಂತರು ಈ ಕೆಲಸದಲ್ಲಿ ನಿರತರಾಗಿರುತ್ತಿದ್ದರು. ಆಲೆಮನೆಯಲ್ಲಿ ಕೂಲಿ ಮಾಡುವವರೆಲ್ಲರೂ ಅಸ್ಪೃಶ್ಯರಾಗಿರುತ್ತಿದ್ದರು.

ಉಪ್ಪಾರರು : ಉಪ್ಪು ನಮ್ಮ ಆಹಾರ ವ್ಯವಸ್ಥೆಯು ರುಚಿಯಾಗಿರಲು ಬಳಸುವ ಒಂದು ಪ್ರಮುಖವಾದ ವಸ್ತು. ‘ಲವಣವಿಲ್ಲದ ಊಟ ಊಟವೇ ಅಲ್ಲ’, ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ’ ಅಥವಾ ‘ಉಪ್ಪಿನ ಋಣ ತೀರಿಸಬೇಕು’ ಎಂಬ ನಾಣ್ಣುಡಿಯಂತೆ ಉಪ್ಪಿಗೆ ಸಮಾಜದಲ್ಲಿ ಪ್ರಥಮ ಸ್ಥಾನವಿತ್ತು. ವಿಜಯನಗರದಲ್ಲಿಯೂ ಸಮುದ್ರ ಪ್ರದೇಶದಲ್ಲಿ ಹಾಗೂ ಒಳಪ್ರದೇಶದಲ್ಲಿಯೂ ಒಪ್ಪನ್ನು ತಯಾರಿಸಲಾಗುತ್ತಿತ್ತು. ಇವರ ಇತರ ಹೆಸರುಗಳೆಂದರೆ ಮೇಲು ಸಕ್ಕರೆಯವರು, ಸಾಗರ ವಂಶದವರು, ಕೆರೆ ಬಂದಿಯವರು. ಎಂದು ಗುರ್ತಿಸಿಕೊಳ್ಳುತ್ತಿದ್ದರು. ಇವರು ತಮ್ಮ ಹೆಸರುಗಳೊಂದಿಗೆ ಶೆಟ್ಟಿ, ಗೌಡ, ಅಪ್ಪ, ಅಯ್ಯ, ಅಣ್ಣ ಎಂದು ಸೇರಿಸಿಕೊಳ್ಳುತ್ತಿದ್ದರು ಎಂದು ಉಪ್ಪನ್ನು ತಯಾರಿಸುವುದೇ ಇವರ ಪ್ರಮುಖ ಕಸುಬಾಗಿತ್ತು. ವಿಜಯನಗರದ ಕಾಲದಲ್ಲಿ ಉಪ್ಪಿನ ತಯಾರಕರ ಮೇಲೆ ಸ್ಥಳದಿಂದ ಸ್ಥಳಕ್ಕೆ ಬೇರೆ ಬೇರೆ ರೀತಿಯಲ್ಲಿ ತೆರಿಗೆ ವಿಧಿಸಲಾಗುತ್ತಿತ್ತು.

ಮೋಚಿಗಳು : ಚರ್ಮದ ವಸ್ರುಗಳನ್ನು ತಯಾರಿಸುವವರನ್ನು ಮೋಚಿಗಳೆಂದು ಕರೆಯಲಾಗುತ್ತಿತ್ತು. ವಿಜಯನಗರದ ಅರಸರ ಕಾಲದಲ್ಲಿ ಚರ್ಮದ ಬಳಕೆಯು ಹೆಚ್ಚಾಗಿತ್ತೆಂದು ಹೇಳಬಹುದು. ಮೋಚಿಗಳು ಮುಖ್ಯವಾಗಿ ಚಪ್ಪಲಿ ಹೊಲಿಯುವುದನ್ನು ಕಸುಬಾಗೊ ಮಾಡಿಕೊಂಡಿದ್ದರು. ಇದರ ಜೊತೆಗೆ ಇತರ ಸಣ್ಣ ಪುಟ್ಟ ಕೃಷಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತಿದ್ದರು. ಚಪ್ಪಲಿಯ ಜೊತೆಗೆ ಕುದುರೆಗೆ ಬೇಕಾದ ಜೀನಿಗಳು, ಚಾವಟಿ, ಚರ್ಮದ ಹಗ್ಗ, ಚೀಲಗಳು, ಗೃಹ ಬಳಕೆಯ ವಸ್ತುಗಳು ಹಾಗು ಸಂಗೀತ ಅವಶ್ಯಕ ವಸ್ತುಗಳನ್ನು ತಯಾರಿಸುತ್ತಿದ್ದರು. ಚರ್ಮವನ್ನು ಮೋಚಿಗಳೇ ಹದಮಾಡಿ ಕೊಳ್ಳುತ್ತಿದ್ದರು.

ಮೇದರು : ಇವರುಗಳು ಬಿದಿರಿನಿಂದ ಬುಟ್ಟಿಗಳನ್ನು, ಚಾಪೆಗಳನ್ನು ತಯಾರಿಸುತ್ತಿದ್ದರು. ಇದೊಂದು ಪ್ರಮುಖ ಗುಡಿಕೈಗಾರಿಕೆಯಾಗಿತ್ತು. ಈ ಕೆಲಸದಲ್ಲಿ ತೊಡಗಿದ್ದವರನ್ನು ಮೇದರೆಂದು ಕರೆಯಲಾಗುತ್ತಿತ್ತು. ತಯಾರಿಸಿದ ವಸ್ತುಗಳನ್ನು ಅವರೆ ಮಾರುತ್ತಿದ್ದರು. ಸಂತೆಗಳಲ್ಲಿಯೇ ಅಲ್ಲದೆ ಹಳ್ಳಿಹಳ್ಳಿಗಳಿಗೆ ತಾವೇ ಕೊಂಡೊಯ್ದು ಮಾರಾಟ ಮಾಡುತ್ತಿದ್ದರೆಂದು ಕಂಡುಬರುತ್ತದೆ. ಇವರನ್ನು ಒದೊಂದು ಪ್ರದೇಶದಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತಿತ್ತು. ಉದಾ : ಗವರಿಗರು, ಗೌರಿಮಕ್ಕಳು, ಗಂಗೆ ಮಕ್ಕಳು ಎಂದು ಕರೆಸಿಕೊಳ್ಳುತ್ತಿದ್ದರು. ಬೆತ್ತವನ್ನು ಸೀಳಿ ಚೆಕ್ಕೆಗಳನ್ನಾಗಿ ಮಾಡಿಕೊಂಡು ಬುಟ್ಟಿ, ಚಾಪೆ, ಮೊರ, ಕೊಂಗ, ತೊಂಬ ಮುಂತಾದ ಕೃಷಿಗೆ ಅವಶ್ಯವಾದ ವಸ್ತುಗಳನ್ನು ತಯಾರಿಸುತ್ತಿದ್ದರು.

ಮಡಿಕೆ ತಯಾರಿಕೆ

ವಿಜಯನಗರದ ಕಾಲದಲ್ಲಿ ಕುಂಬಾರರು ಪ್ರಮುಖರಾಗಿದ್ದರು. ಹೆಚ್ಚು ಕಡಿಮೆ ಎಂದರೆ ಪ್ರತಿಯೊಂದು ಗ್ರಾಮದಲ್ಲಿಯೂ ಒಬ್ಬ ಕುಂಬಾರನಿರುತ್ತಿದ್ದನೆಂದು ಹೇಳಬಹುದು. ಈ ಕೈಗಾರಿಕೆಯು ಸ್ಥಳೀಯವಾಗಿ ಹೆಚ್ಚು ಪ್ರವರ್ಧಮಾನಕ್ಕೆ ಬರಲು ಪ್ರಮುಖ ಕಾರಣವೆಂದರೆ, ಮಣ್ಣಿನಿಂದ ತಯಾರಾದ ಮಡಿಕೆ, ಕುಡಿಕೆ, ಅರಿವಿಗಳು ಒಡೆದುಹೋಗುವ ಸಂದರ್ಭ ಹೆಚ್ಚಾಗಿದ್ದು ಹಾಗೂ ದೂರದ ಮಾರುಕಟ್ಟೆಗಳಿಗೆ ಕೊಂಡೊಯ್ಯಲು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿರುವುದಾಗಿದ್ದಿತ್ತು. ಮಣ್ಣಿನಿಂದ ಪದಾರ್ಥಗಳನ್ನು ತಯಾರಿಸಲು ಕುಂಬಾರರು ಚಕ್ರ, ಕಲ್ಲು ಮತ್ತು ಕೋಲನ್ನು ಬಳಸುತ್ತಿದ್ದರು. ಇವರು ಈ ವಸ್ತುಗಳನ್ನು ತಯಾರಿಸಲು ಅಗತ್ಯವಾದ ಮಣ್ಣಿಗಾಗಿ ಕೆರೆಗಳು, ನದಿಗಳು, ಊಟದ ಪಾತ್ರೆ, ಎಲೆ, ಹೂವಿನ ಕುಂಡ, ಬಾನಿ, ಹೊಗೆಬತ್ತಿಸೇದುವ ಪೈಪು ಹಾಗೂ ಗೌರಿ ಗಣೇಶರ ಪ್ರತಿಮೆಗಳನ್ನು ತಯಾರಿಸುತ್ತಿದ್ದರು. ಪ್ರಮುಖವಾಗಿ ಮನೆಯ ಮೇಲೆ ಛಾವಣಿಗೆ ಹೊದಿಸಲು ನಾಡ ಹೆಂಚುಗಳನ್ನು ತಯಾರಿಸುತ್ತಿದ್ದರು. ಗ್ರಾಮೀಣ ಪ್ರದೇಶದಲ್ಲಿ ಧಾನ್ಯವನ್ನು ಶೇಖರಿಸಿಕೊಳ್ಳಲು ದೊಡ್ಡ ದೊಡ್ಡ ಮಣ್ಣಿನ ಪಾತ್ರೆಗಳನ್ನು ತಯಾರಿಸುತ್ತಿದ್ದರು. ಇವುಗಳನ್ನು ಗುಡಾಣಗಳೆಂದು ಕರೆಯಲಾಗುತ್ತಿತ್ತು. ಹೀಗೆ ಸಾಮ್ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿಯು ತನ್ನದೆ ಆದ ಸಂಸ್ಕೃತಿಯನ್ನು ಪೋಷಿಸಿ ಬೆಳೆಸಿಕೊಂಡು ಬಂದುದ್ದನ್ನು ಒಂದರ್ಥದಲ್ಲಿ ಹಿತವೆನ್ನಬಹುದು.

* * *