ವಿಜಯನಗರದ ಅರಸರ ಕಾಲದಲ್ಲಿಯೂ ಜಾತಿ ಜಾತಿಗಳ ಅರಿವು ಮೂಡಿಸಲು, ಜಾತಿ ನಿರ್ಮೂಲನ ಮಾಡಲು ದಾಸರುಗಳು ತಮ್ಮ ಕೀರ್ತನೆಗಳ ಮೂಲಕ, ಸರ್ವಜ್ಞನು ತನ್ನ ವಚನದ ಮೂಲಕ ಪ್ರಯತ್ನಿಸಿರುವುದು ಕಂಡುಬರುತ್ತದೆ. ಆದರೆ ಅವರ ಪ್ರಯತ್ನಗಳೂ ಸಹ ಬಲವಾಗಿ ಭೂಮಿಗೆ ನಾಟಿರುವ ಜಾತಿಯ ಬೇರನ್ನು ಸಡಿಲಗೊಳಿಸುವಲ್ಲಿ ಫಲಕಾರಿಯಾಗಲಿಲ್ಲ ಎನ್ನಬಹುದು. ಏಕೆಂದರೆ ಅವರ ಜಾತಿ ನಿರ್ಮೂಲನದ ಕರೆಗಳು ಕೇವಲ ಸಾಮ್ರಾಜ್ಯದ ರಾಜಧಾನಿ ಹಾಗೂ ಪ್ರಮುಖ ಪಟ್ಟಣಗಳಿಗೆ ಮಾತ್ರ ಸೀಮಿತವಾಗಿತ್ತೆನ್ನಬಹುದು. ಅಂದು ಜಾತಿಯತೆಯ ತಪ್ಪು ಕಲ್ಪನೆಯನ್ನು ಜನರಲ್ಲಿ ತಿಳಿಸಲು ಕನಕದಾಸರ ಕೀರ್ತನೆಗಳು ಹೆಚ್ಚು ಸಹಕಾರಿಯಾಗಿದೆ ಅವರ ‘ರಾಮಧಾನ್ಯ ಚರಿತ್ರೆ’ಯು ಈ ದೃಷ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಅಂದು ಸಾಧು, ಸನ್ಯಾಸಿ, ದಾಸ, ಜಂಗಮ ಮುಂತಾದ ವೇಷಗಳ ಮೂಲಕ ಸಾಮ್ರಾಜ್ಯದಲ್ಲಿ ನಡೆಯುತ್ತಿರುವ ಕಪಟವಂಚನೆ ಅವ್ಯವಹಾರಗಳಿಗೆ ಲೆಕ್ಕವೇ ಇಲ್ಲವೆಂದು ತಾವೇ ಕಣ್ಣಾರೆ ಕಂಡು ಖಂಡಿಸಿದ್ದಾರೆ. ಇದಕ್ಕೆ ಅವರು “ಜಪವ ಮಾಡಿದರೇನು, ತಪವ ಮಾಡಿದರೇನು, ಕಪಟಗುಣ ವಿಪರೀತ ಕಲುಷವಿದ್ದವರು” ಎಂದು ನೇರವಾಗಿಯೇ ಪ್ರಶ್ನಿಸುತ್ತಾರೆ. ಇನ್ನೂ ಮುಂದುವರೆದು ‘ನೇಮವಿಲ್ಲದ ಹೋಮವೇತಕಯ್ಯ’ ಎಂದು ಕೇಳುತ್ತಾರೆ. ಇಡೀ ಮನುಕುಲವನ್ನು ಸಮದೃಷ್ಟಿಯಿಂದ ಕಾಣುವ ಕನಕದಾಸರಿಗೆ ಮಹಮ್ಮದೀಯರಾಗಲಿ, ಲಿಂಗವಂತರಾಗಲೀ, ಬ್ರಾಹ್ಮಣರಾಗಲಿ ಬೇರೆಯಾಗಿ ಕಾಣುವುದಿಲ್ಲ ಅದಕ್ಕೆ ಅವರು ಹೇಳಿರುವ ಕೀರ್ತನೆ ಎಂದರೆ,

ಅಲ್ಲಾ ಖುದಾ ಎಂಬ ಅರ್ಥವನು ಅರಿಯದೆ |
ಮುಲ್ಲಾ ಶಾಸ್ತ್ರ ನೆಲೆಯ ಮುನ್ನರಿಯದೆ
ಕಳ್ಳ ಕೂಗನೆ ಕೂಗಿ ಬೊಗಳಿ ಬಾಯ್ದೆರೆವಂತ |
ಕಳ್ಳರಿಗೆ ತಾ ವೀರಸ್ವರ್ಗ ದೊರಕುವುದೆ

ಲಿಂಗಾಂಗದೊಳಗಿರುವ ಅನುಭವ ತಿಳಿಯದೆ |
ಲಿಂಗಲಿಂಗದ ನೆಲೆಯ ಗುರುತರಿಯದೆ
ಜಂಗಮ ಸಥಾವರದ ಹೊಲಬನರಿಯದೆ
ಇಂಥ ಭಂಗಿ ಮುಕ್ಕುಗಳೆಲ್ಲ ಲಿಂಗವಂತರಹುದೆ

ಎಂದು ಮಹಮ್ಮದೀಯರಿಗೆ ಹಾಗೂ ಲಿಂಗವಂತರಿಗೆ ಪ್ರಶ್ನೆ ಮಾಡಿದ್ದಾರೆ. ಅಂದಿನ ಸಮಾಜದಲ್ಲಿ ಇದ್ದ ಬ್ರಾಹ್ಮಣರು, ಚಿನಿವಾರರು, ಕಂಚುಗಾರರು, ತಾಮ್ರ ಮತ್ತು ಹಿತ್ತಾಳೆ ಕೆಲಸ ಮಾಡುವವರು, ಬಡಗಿಗಳು, ಕಮ್ಮಾರರು, ಕಲ್ಲುಕುಟುಕರು, ಚಿನ್ನ ಬೆಳ್ಳಿ ಕೆಲಸ ಮಾಡುವ ಅಕ್ಕಸಾಲಿಗರು, ಹೊಲೆಯರು, ಮಾದಿಗರು, ಜಾಡಮಾಲಿಗಳು ಕೊಚ್ಚ, ಕೊರಮರು, ಇನ್ನೂ ಮುಂದುವರೆದು ಹೆಣ್ಣು – ಗಂಡು ಸಣ್ಣವ ದೊಡ್ಡವ, ಸಿರಿವಂತ – ಬಡವ, ಉನ್ನತ ಜಾತಿ ಎಂದು ಹೇಳಿಕೊಳ್ಳುವವ – ಕೆಳಜಾತಿಯವನೆಂದು ಕರೆಸಿಕೊಳ್ಳುವವ, ಕವಿಗಳು – ವಿಜ್ಞಾನಿಗಳು, ಸನ್ಯಾಸಿ – ಬಿಕನಾಸಿ, ದೊರೆ – ಪರೆ, ಪುರೋಹಿತ ಪಾದ್ರಿ ಇವರೆಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿರುವುದನ್ನು ಗಮನಿಸಿ “ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ” ಎಂಬ ಒಂದೇ ಒಂದು ಪಲ್ಲವಿಯಲ್ಲಿ ನಿರೂಪಿಸುತ್ತಾರೆ. ಕೆಲಸಕ್ಕೆ ಪ್ರಮುಖ ಆಧ್ಯತೆ ನೀಡಿದ ಬಸವಣ್ಣನವರು “ಕಾಯಕವೇ ಕೈಲಾಸ” ಎಂದು ಕರೆದರೆ ಕನಕದಾಸರು ಕಾಯಕವನ್ನು ಕೈಗೊಳ್ಳದೆ ಸೋಂಬೇರಿಯಾಗಿ ಇರುವ ಗಂಡನ್ನು “ಕರ್ಮವಿಲ್ಲದ ಗಂಡು ಕರಿಯ ಒನಕೆಯ ತುಂಡು” ಎಂದು ತಮ್ಮ ಮಾತಿನಲ್ಲಿ ಅಭಿವ್ಯಕ್ತಿಗೊಳಿಸಿದ್ದಾರೆ. ಹಾಗೆಯೇ ಮನುಜರಿಗೆ ನೀಡಿದ ಪ್ರಮುಖ ಸಂದೇಶವೆಂದರೆ “ತಾನು ತನ್ನನರಿಯದಿರೆ ಜಗತ್ತಿನಲ್ಲಿ ಪ್ರೌಢನಾಗಲಾರ”ನೆಂಬ ಮಾತನ್ನು ಹೇಳಿ ಮಾನವನಿಗೆ ಜ್ಞಾನದ ಜಗತ್ತಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ. ವಿಜಯನಗರದ ಸಾಮ್ರಾಜ್ಯದಲ್ಲಿಯೇ ಇದ್ದು ಅಲ್ಲಿ ನೇರವಾಗಿ ಕಂಡು ಕೇಳಿದ ಜಾತಿ ವ್ಯವಸ್ಥೆ ಹಾಗೂ ಕುಲಗಳ ನಡುವಿನ ಅಂತರವನ್ನು ಗಮನಿಸಿ ಅವರಾಡಿದ ಕೀರ್ತನೆ ಇಂದಿಗೂ ಮುಂದೆಯೂ ಸಹ ಪ್ರಸ್ತುತವೆನ್ನಿಸಿಕೊಳ್ಳುತ್ತದೆ. ಕುಲವನು ಕುರಿತು ಕನಕದಾಸರು ಹಾಡಿದ ಮಾತೆಂದರೆ,

ಕುಲ ಕುಲ ಕುಲವೆಂದು ಹೊಡೆದಾಡವಿರಿ ನಿಮ್ಮ
ಕುಲದ ನೆಲೆಯನೇನಾದರೂ ಬಲ್ಲಿರಾ
||

ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಗುಟ್ಟು ಕಾಣಿಸ ಬಂತು ಹಿರಿದೇನು ಕಿರಿದೇನು
ನೆಟ್ಟನೆ ಸರ್ವಜ್ಞಾನ ನೆನೆಕಂಡ್ಯ ಮನುಜ
||

ಜಲವೆ ಸಕಲ ಕುಲಕ್ಕೆ ತಾಯಲ್ಲವೆ
ಜಲದ ಕುಲವನೇನಾದರೂ ಬಲ್ಲಿರಾ
ಜಲದ ಬೊಬ್ಬುಳಿಯಂತೆ ಸ್ಥಿರದಲ್ಲಿವೀದೇಹ
ನೆಲೆಯನರಿತು ನೀ ನೆನೆಕಂಡ್ಯ ಮನುಜ
||

ಹರಿಯೇ ಸರ್ವೋತ್ತಮ ಹರಿಯೆ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು
ಸಿರಿಕಾಗಿನೆಲೆಯಾಗಿ ಕೇಶವರಾಯನ
ಚರಣ ಕಮಲದ ಕೀರ್ತಿಸುವನೆ ಕುಲಜ
||

ಎಂದು ಮನ ಮುಟ್ಟುವಂತೆ ವ್ಯಕ್ತಪಡಿಸಿದ್ದಾರೆ. ಜಾತಿ ಜಾತಿ, ಕುಲ ಕುಲ ಎಂದು ಹೇಳುತ್ತಾ ಪರಸ್ಪರ ಕಚ್ಚಾಡುವ ಮನುಷ್ಯರನ್ನು ಈ ಪದ್ಯದಲ್ಲಿ ತರಾಟೆಗೆ ತೆಗೆದು ಕೊಂಡಿದ್ದಾರೆ. ಹಾಗೆಯೇ ಅದಕ್ಕೆ ಸಂಬಂಧಿಸಿದಂತೆಯೇ ಅತ್ಯಂತ ಉಪಯುಕ್ತವಾದ, ಸುಲಭವಾದ ಹಾಗೂ ಪರಿಚಯವಿರುವ ಉದಾಹರಣೆಗಳ ಮೂಲಕ ಜಾತಿಯ ಅಸ್ತತ್ವವನ್ನೆ ಅಲ್ಲಗಳೆದು ನೀರಗುಳ್ಳೆಯಂತೆ ಕ್ಷಣಿಕವಾದ ಈ ದೇಹವನ್ನು ನೆಚ್ಚದೆ ಭಗವಂತನನ್ನು ನೆನೆಯಬೇಕು ಎಂಬ ಸಂದೇಶವನ್ನು ಸಾಸಿದ್ದಾರೆ. ಉನ್ನತ ಜಾತಿಯವರೆಂದು ಹೇಳಿಕೊಂಡು ಮಾಡಬಾರದ ಕೆಟ್ಟಕೆಲಸಗಳನ್ನು ಮಾಡಿ ಕೊನೆಗೆ ದೇವರಿಗೆ ಮೋರೆ ಹೋಗಿ ಏನೆಲ್ಲ ಯಜ್ಞ ಯಾಗಾದಿಗಳನ್ನು ಮಾಡುವವರಿಗೆ ಕನಕದಾಸರು ನೀಡಿರುವ ಚಾಟಿಯ ಏಟೆಂದರೆ

ಕೇಶವನೊಲುಮೆಯು ಆಗುವತನಕ ಹರಿ
ದಾಸರೊಳಿರುತಿರು ಹೇ ಮನುಜ
ಕ್ಲೇಶ ಪಾಶಂಕಗಳ ಹರಿದು ವಿಲಾಸದಿ
ಶ್ರೀಶನ ಸುತಿಗಳ ಪೊಗಲುತ ಮನದೊಳು
||

ಮೋಸದಿ ಜೀವರ ಘಾಸಿ ಮಾಡಿದ ಪಾಪ
ಕಾಸಿಗೆ ಹೋದರೆ ಹೋದೀತೆ
ಶ್ರೀಶನ ಭಕುತರ ದೋಷಿಸಿದಾ ಫಲ
ಕಾಸು ಕೊಟ್ಟರೆ ಬಿಟ್ಟೀತೆ
ಬಾಷೆಯ ಕೊಟ್ಟು ನಿರಾಶೆ ಮಾಡಿದಾ ಫಲ
ಕ್ಲೇಶವಗೊಳಿಸದೆ ಇದ್ದೀತೆ
ಭೂ ಸುಸ್ವರ ಹ್ರಾಸನಾಡಿದ ಫಲ
ಏಸೇಸು ಜನುಮಕು ಬಿಟ್ಟೀತೆ
||

ಜೇನನ ವಶದೊಳು ನಾನಾ ದ್ರವ್ಯವಿದೆ
ದಾನ ಧರ್ಮಕೆ ಮನಸಾದೀತೆ
ಹೀನ ಮನುಜನಿಗೆ ಜ್ಞಾನದ ಬೋಧಿಸೆ
ಹೀನ ವೀಷಯವೆಳಿದ್ದೋದೀತೆ
ಮಾನಿನಿ ಮನಸು ನಿಧಾನವಿರದಿರೆ
ಮಾನಭಿಮಾನಗಳುಳಿದೀತೆ
ಭಾನು ಪ್ರಕಾಶನ ಭಜನೆಯ ಮಾಡದ
ಹೀನಗೆ ಮುಕುತಿಯು ದೊರಕೀತೆ

ಸತ್ಯಧರ್ಮಗಳ ನಿತ್ಯವು ಬೋಧಿಸೆ
ತೊತ್ತಿನ ಮನಸಿಗೆ ಸೊಗದೀತೆ
ತತ್ವದ ಅರ್ಥ ವಿಚಿತ್ರದಿ ಪೇಳಲು
ಕತ್ತೆಯ ಚಿತ್ತಕೆ ಹತ್ತೀತೆ
ಪುತ್ಥಲಿ ಬೊಂಬೆಯ ಚಿತ್ರದಿ ಬರೆದರೆ
ಮುತ್ತನು ಕೊಟ್ಟರೆ ನುಡಿದೀತೆ
ಕತ್ತುರಿ ತಲಕವನೊತ್ತಿ ಪನಿಯೊಳಡೆ
ಅರ್ತಿಯು ತೀರದೆ ಇದ್ದೀತೆ
||

ನ್ಯಾಯವ ಬಿಟ್ಟನ್ಯಾಯವ ಪೇಳುವ
ನಾಯಿಗೆ ನರಕವು ತಪ್ಪೀತೆ
ತಾಯಿ ತಂದೆಗಳ ಬಲು ನೋಯಿಸಿದ
ನ್ಯಾಯಿಗೆ ಮುಕುತಿಯು ದೊರಕೀತೆ
ಬಾಯಿ ಕೊಬ್ಬ ಬ್ಯುವ ಮನುಜಗೆ
ಘಾಯವು ಆಗದೆ ಬಿಟ್ಟೀತೆ
ಮಾಯವಾದಗಳ ಬೋಧಿಪ ಮನುಜಗೆ
ಹೇಯ ನರಕವು ತಪ್ಪೀತೆ
ಸಾಧು ಸಜ್ಜನರು ನೋಯಿಸಿದ ಮಾಯಾ
ವಾದಿಗೆ ನರಕವು ತಪ್ಪೀತೆ
ಬಾಧಿಸಿ ಬಡವರ ಅರ್ಥವನೋಯ್ವಗೆ
ವ್ಯಾಧಿಯು ಕಾಡದೆ ಬಿಟ್ಟೀತೆ
ಭೇದವೆಣಿಸಿ ಬಲು ಕ್ಷುದ್ರವ ಕಲಿತರೆ
ಮೋದವೆ ಎಂದಿಗು ಆದೀತೆ
ಕದ್ದು ಒಡಲ ಪೊರೆಯುವ ಮನೆಯೊಳ
ಗಿದ್ದದ್ದು ಹೋಗದೆ ಉಳಿದೀತೆ

ಎಂಬ ಕೀರ್ತನೆಯಿಂದ ತಮ್ಮ ತಮ್ಮ ಅನಿಷ್ಟಗಳ ಬಗ್ಗೆ ಅವರಿಗೆ ಬೆಳಕನ್ನು ಹರಿಸಲು ಪ್ರಯತ್ನಿಸಿದ್ದಾರೆ. ೨೦ನೇ ಶತಮಾನದಲ್ಲಿ ದಯಾನಂದ ಸರಸ್ಪತಿಯವರು ನೀಡಿದ ಹೇಳಿಕೆ ಎಂದರೆ “ವೇದಗಳಿಗೆ ಹಿಂದಿರುಗಿ” ಎಂದು ಇಲಿ ವೇದವೆಂದರೆ ‘ಜ್ಞಾನ’ ಎಂದರ್ಥ, ಅಂದರೆ ಜ್ಞಾನದ ಕಡೆಗೆ ಹಿಂದಿರುಗಿರಿ ಎಂದು ಸಾರಿದೆ, ಇದೇ ಅರ್ಥವನ್ನು ಕನಕದಾಸರು ಅಂದೇ ಸಾಮಾನು ಜನತೆಗೂ ತಿಳಿಯುವ ಹಾಗೆ ತಿಳಿಸಲು ಪ್ರಯತ್ನಿಸಿರುವುದು ಕಂಡುಬರುತ್ತದೆ. ನಾನು, ನನ್ನ ಜಾತಿ, ತನ್ನ ಮನೆತನದ ಗೌರವದ ಬಗ್ಗೆ ಪ್ರಶ್ನಿಸುತ್ತಿದ್ದಂತವರಿಗೆ

ನಾನು ನೀನು ಎನ್ನದಿರೊ ಹೀನ ಮಾನವ
‘ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡಲೊ
ಹೊನ್ನು ಹೆಣ್ಣು ಮಣ್ಣು ಮೂರು ನಿನ್ನದೇನಲೊ
ಅನ್ನದಿಂದ ಬಂದ ಕಾಮ ನಿನ್ನದೇನೆಲೊ
ಕರ್ಣದಿಂದ ಬಂದ ಘೋಷ ನಿನ್ನದೇನೆಲೊ
ನಿನ್ನ ಒಟ್ಟು ಪೋಪದೇಹ ನಿನ್ನದೇನೆಲೊ

ಹಲವು ಜನ್ಮದಿಂದ ಬಂದಿರುವೆ ನೀನೆಲೂ
ಮಗದ ಗರ್ಭದಿಂದ ಬಂದಿರುವೆ ನೀನೆಲೂ
ಜಲದ ದಾರಿಯಲ್ಲಿ ಬಂದಿರುವೆ ನೀನೆಲೂ
ಕುಲವು ಜಾತಿ ಗೋತ್ರವುಳ್ಳವನು ನೀನೆಲೂ
|

ಎಂದು ಮೋಹ, ಮಮಕಾರಗಳಿಂದ ಮೆರೆಯುತ್ತಿದ್ದ ಉನ್ನತ ಜಾತಿಯವರಿಗೆ ಸೂಕ್ಷ್ಮವಾಗಿ ಹೇಳಿದ್ದಾರೆ. ಅವರು ಇಂಥವರಿಗೆ “ನಾನು ನೀನು ಎನ್ನದಿರೋ ಹೀನ ಮಾನವ, ಜ್ಞಾನದಿಂದ ನಿನ್ನ ನೀನೇ ತಿಳಿದು ನೋಡಲೊ ಪ್ರಾಣಿ” ಎಂದು ಹೇಳಿರುವುದು ಅವರ ಅನುಭವದ ಮಾತೆ ವಿನಃ ಕೇವಲ ತಾರ್ಕಿಕವಾದ ಸಿದ್ಧಾಂತಗಳಲ್ಲವೆನ್ನಬಹುದು. ಮನುಷ್ಯ ತನ್ನ ಜೀವನದ ಸುಳ ದುಃಖ ಸಿರಿವಂತಿಕೆ, ಬಡತನಗಳಿಗೆ, ಮೇಲು, ಕೀಳುಗಳೆಂಬ ಭೇದಭಾವಗಳಿಗೆ ತಾನೇ ಹೊಣೆ, ತಾನು ಮಾಡಿದ ಪುಣ್ಯ ಪಾಪಗಳ ಫಲಕ್ಕೆ ಇತರರನ್ನು ಹೊಣೆ ಮಾಡುವುದು ತಪ್ಪು. ಅದನ್ನು ನಿವಾರಿಸಿಕೊಳ್ಳಲು ಕಂಡ ಕಂಡ ದೈವಗಳಿಗೆ ವಿಶೇಷ ಪೂಜೆಮಾಡಿ ಮೊರೆ ಹೋಗುವುದು ತಪ್ಪು. ತಮ್ಮ ಕಾರ್ಯಗಳೇ ಅವರವರ ಹಣೆಬರಹವನ್ನು ಬರೆಯುತ್ತವೆ. ಅದ್ದರಿಂದ ದೇವರನ್ನು ನಂಬಿ ಸತ್ಯ, ನ್ಯಾಯ, ಧರ್ಮದ (ಒಟ್ಟಾರೆ ಸಾಕ್ಷಾತ್ಕಾರ) ಹಾದಿಯಲ್ಲಿ ನಡೆಯಬೇಕೆಂದು “ತನ್ನ ಪ್ರಾಪ್ತಿಯ ಫಲದ ತಾನರಿಯದೆ ಅನ್ಯರಿಗೆ ಆಡುವುದು ಅವಗುಣವು ಮರುಳೆ” ಎಂಬ ಕೀರ್ತನೆಯಲ್ಲಿ ವಿವರಿಸಿದ್ದಾರೆ.

ವ್ಯಕ್ತಿಯು ತನ್ನ ಸುತ್ತಲಿನ ಪರಿಸರದಿಂದ ಬೇರೆಯಾಗಿ ಬದುಕಲು ಸಾಧ್ಯವಿಲ್ಲ. ಅದರಲ್ಲಿಯೂ ಸೂಕ್ಷ್ಮವಾದ ಸಂವೇದನೆಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವವನಂತೂ ಸಮಾಜದ ಎಲ್ಲ ವ್ಯವಹಾರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ತನ್ನ ತೀಕ್ಷ್ಣ ಅವಲೋಕನ ಮತ್ತು ಧೀಮಂತತೆಯಿಂದ ಅದರ ಆಗುಹೋಗುಗಳನ್ನು ಗಮನಿಸಿ, ತನ್ನ ಬದುಕಿನ ಅರ್ಥವನ್ನು ಸಮಾಜದ ಅರ್ಥವನ್ನು ಹೆಚ್ಚಿಸಿ ಸ್ಥಿರ ಸ್ಮರಣೀಯವಾಗಿ ಉಳಿಯುತ್ತಾನೆ. ಅಂತವರ ಗುಂಪಿಗೆ ಅಂದಿನ ಕಾಲದವರಾದ ಕನಕ, ಪುರಂದರ ವ್ಯಾಸರಾಯರನ್ನು ಸೇರಿಸಬಹುದಾಗಿದೆ. ಅಂದಿನ ಸಮಾಜದಲ್ಲಿದ್ದ ಬೂಟಾಟಿಕೆಯನ್ನು ಅಲ್ಲಗೆಳೆಯಲು ಹರಿದಾಸರು ಹೇಳಿರುವ ಮಾತೆಂದರೆ

ಮಡಿ ಮಡಿ ಮಡಿಯೆಂದು ಅಡಿಗಡಿಗೆ ಹಾರುವೆ |
ಮಡಿ ಮಾಡುವ ಬಗೆ ಬೇರುಂಟು
ಹಸಿವಾಯಿತು ದೇವರ ತೊಳೆ ಎಂಬರು
ಹಸನಾಗಿ ಮನಮುಟ್ಟಿ ಪೂಜೆಯ ಮಾಡರು

ಈ ಮೇಲಿನ ಸಾಲಿನಲ್ಲಿ ಅಂದಿನ ಸಮಾಜದಲ್ಲೂ ಇದ್ದ ಅಡಂಬರದ ಭಕ್ತಿಯನ್ನು ಸೂಚಿಸಿದ್ದಾರೆ. ಈ ಮೇಲಿನ ಸಾಲುಗಳು ಅಂದಿಗಿಂತ ಇಂದಿಗೂ ಹೆಚ್ಚಿನ ಅನ್ವಯಿಸುತ್ತದೆ ಎಂದರೆ ತಪ್ಪಾಗಲಾರದು.

ಧಾರ್ಮಿಕ ಗ್ರಂಥಗಳ ದೃಷ್ಟಿಯಲ್ಲಿ, ಆ ಗ್ರಂಥವು ಸೂಚಿಸುವ ದೇವರ ದೃಷ್ಟಿಯಲ್ಲಿ ಹುಟ್ಟಿದವರೆಲ್ಲರೂ ಈ ಭೂಮಿಯ ಮೇಲೆ ಒಂದೇ, ಆದರೂ ಇತಿಹಾಸದ ಪುಟಗಳು ಮಾತ್ರ ನಮಗೆ ಎಲ್ಲಿಯೂ ವರ್ಗರಹಿತವಾದ ಸಮಾಜ ಒಂದಿತ್ತು ಎಂದು ಹೇಳಿದ ಪ್ರಕರಣವಂತೂ ದೊರೆಯುವುದಿಲ್ಲ. ವಿಜಯನಗರಸ ಚರಿತ್ರೆಯನ್ನು ಗಮನಿಸುವುದಾದರೆ ನಮ್ಮ ಚರಿತ್ರೆಗಾರರು ಬರೆಯಲು, ಸೇರಿಸಲು ಇನ್ನಿಲ್ಲದಷ್ಟು ಹೊಗಳಿ ಬರೆದಿರುವುದು ಕಂಡು ಬರುತ್ತದೆ. ಓಂದು ದೃಷ್ಟಿಯಲ್ಲಿ ಅವರು ಹೊಗಳಿರುವುದು ಸರಿಯೇ ಆದರೆ ಸಾಮಾಜಿಕ ಜೀವನದ ಬಗ್ಗೆ ಸಾಮಾನ್ಯ ಜನರ ಸ್ಥಿತಿಗತಿಯ ಬಗ್ಗೆ ಆ ಜನರು ಅನುಭವಿಸುತ್ತಿದ್ದ ಜೀವನದ ಬಗ್ಗೆ ಗಮನಹರಿಸಿದರೆ ನಿಜಕ್ಕೂ ಆ ಹೊಗಳಿಕೆ ಬೇಕೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ “ನಡೆವುದೊಂದೇ ಭುಮಿ ಕುಡಿವುದೊಂದೇ ನೀರು ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ ನಡುವೆ ಎತ್ತಣದು ಸರ್ವಜ್ಞ” ಎಂಬ ಸುಂದರ ವಚನದ ಜನ್ಮ ಭೂಮಿಯಾದ ಈ ನಾಡಿನಲ್ಲಿ ಇದು ನಡೆಯಿತೇ? ಹಾಗಾದರೆ ದೇವ ಪುರುಷರೆಂದರೆ ಯಾರು? ದೇವರ ವರದಿಂದ ಹುಟ್ಟಿದ ಜಾತಿ ಎಂದರೆ ಯಾವುದು? ಪ್ರಪಂಚದಲ್ಲಿ ಉತ್ತಮರು – ಅಧಮರುಗಳೆಂದರೆ ಯಾರು ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲಿಯೂ ಮೂಡುತ್ತದೆ. ಇದಕ್ಕೆ ಅಂದೇ ಸರ್ವಜ್ಞ ಮಹಾಋಷಿಯ ಉತ್ತಮರು ಎಂಬುವರು ಸತ್ಯದಲಿ ನಡೆದಿಹರು. ಉತ್ತಮ ವರ್ಣಿಗಳೆ ಉತ್ತಮರು ಎನ್ನಬೇಡ, ಮತ್ತೆ ತನ್ನಂತೆ ಬಗೆವರೆಲ್ಲರನ್ನು ಉತ್ತಮರು ಎನ್ನುವ ಎಂದು ಸೂಕ್ತವಾದ ವಿಚಾರವನ್ನು ಹೇಳಿರುವುದು ಕಂಡುಬರುತ್ತದೆ. ಮಧ್ಯಯುಗದ ಜನಜೀವನವನ್ನು ಈ ಜಾತಿಪದ್ಧತಿಯು ಹೇಗೆ ಹದಗೆಡಿಸಿತ್ತು, ಅಸ್ಪೃಶ್ಯತೆಯ ಹೆಸರಿನಲ್ಲಿ ಉನ್ನತ ವರ್ಗದವರು ಹೇಗೆ ಸುಲಿಗೆ ಮಾಡುತ್ತಿದ್ದರು ಎಂಬುದನ್ನು ಅಂದಿನ ಸಮಾಜದ ಪ್ರತ್ಯಕ್ಷದರ್ಶಿಗಳಾದ ಕನಕ, ಪುರಂದರ, ಸರ್ವಜ್ಞರು ನೀಡಿರುವ ಕೀರ್ತನೆ ಹಾಗೂ ವಚನಗಳಿಂದ ಸವಿವರವಾಗಿ ತಿಳಿಯಬಹುದಾಗಿದೆ.

ಸಮಾಜದಲ್ಲಿ ಹೊಲೆಯ, ಮಾದಿಗ ಎಂಬ ಜಾತಿಗಳು ಅತ್ಯಂತ ಕೆಳಮಟ್ಟದ ಜಾತಿಗಳಾಗಿದ್ದವು. ಇವರುಗಳು ಪ್ರತಿಯೊಂದು ಊರಿನಲ್ಲಿಯೂ (ಗ್ರಾಮದ ದಕ್ಷಿಣ ದಿಕ್ಕಿನಲ್ಲಿಯೇ ವಾಸಿಸುತ್ತಿದ್ದರು. ಏಕೆಂದರೆ ನಾಲ್ಕು ದಿಕ್ಕುಗಳಲ್ಲಿ ದಕ್ಷಿಣ ದಿಕ್ಕು ಅಮಂಗಳವಾದದ್ದೆಂದು ಶಾಸ್ತ್ರಗಳು ತಿಳಿಸುತ್ತವೆ.) ಊರಿನ ಹೊರಗೆ ಒಟ್ಟಾಗಿ ವಾಸಮಾಡುತ್ತಿದ್ದರು. ಆ ಜಾಗವನ್ನು ಹೊಲಗೇರಿ ಎಂದು ಕರೆಯಲಾಗುತ್ತಿತ್ತೆಂದು ಸಾಹಿತ್ಯಾಧಾರಗಳಿಂದಲೂ, ಶಾಸನಗಳಿಂದಲೂ ತಿಳಿಯಬಹುದಾಗಿದೆ. ಅನೇಕ ಶಾಸನಗಳಲ್ಲಿ ಹೊಲಯ, ಮಾದಿಗ ಎಂಬ ಜಾತಿ ಸೂಚಕಗಳನ್ನು ಸೂಚಿಸುವ ಹೆಸರುಗಳಿರುವುದು ಕಂಡುಬರುತ್ತದೆ (ಉದಾಹರಣೆಗೆ ಹೊಲೆಯರ ಹುಳ್ಳ, ಮಾದಿಗರ ಕಂಪ ಮುಂತಾದವು) . ಹಾಗೆಯೇ ಮಾತಂಗಿಯನ್ನು ಕವಿಗಳು “ಮಾದಿಗಿತ್ತಿ” ಎಂದು ಕರೆದಿದ್ದಾರೆ. ಇಂದಿನ ಸ್ವಾತಂತ್ರ್ಯ ಭಾರತವು ಎಷ್ಟೆಲ್ಲ ಬದಲಾವಣೆಗಳನ್ನು ಕಾಣೂತ್ತಿದ್ದರೂ ಸಹ ಜಾತಿವ್ಯವಸ್ಥೆಯಲ್ಲಿ (ಆಚರಿಸುವಲ್ಲಿ) ಹೆಚ್ಚಿನ ಬದಲಾವಣೆ ಕಾಣುತ್ತಿದೆ ಎನ್ನಬಹುದು. ಏನೆಲ್ಲ ಕಾನೂನುಗಳಾಗಿದ್ದರೂ ಸಹ ಇಂದಿಗೂ ಪ್ರತಿಯೊಂದು ಹಳ್ಳಿಗಳಲ್ಲಿಯೂ ಹೊಲಗೇರಿ ಎಂಬುವುದು ಊರಿನಿಂದ ಆಚೆ ಇರುವುದು ಕಂಡುಬರುತ್ತದೆ. ಇಂದೇ ಈ ಸ್ಥಿತಿ ಇರುವಾಗ ಇನ್ನೂ ಅಂದಿನ ಸ್ಥಿತಿಯನ್ನು ಊಹಿಸಲು ಸಾಧ್ಯವೆನ್ನಬಹುದಲ್ಲವೆ? ವಿಜಯನಗರದ ಕಾಲದಲ್ಲಿ ಹೊಲೇರಿ ಹಟ್ಟಿ, ಮಾದಿಗರ ಹಟ್ಟಿಗಳೆಂದು ಕರೆಯುವ ಕೇರಿಗಳಿದ್ದವೆಂದು ಅನೇಕ ಶಾಸನಗಳು ತಿಳಿಸುತ್ತವೆ. (ಉದಾ. ೧೨೦೫ರ ಶಾಸನ ಹಾಗೂ ೧೨೩೦ರ ಶಾಸನಗಳು ಈ ಹೊಲೆಯ ಹಾಗೂ ಮಾದಿಗರ ಮೇಲೆ ತೆರಿಗೆ ವಿಧಿಸಿದ ಬಗ್ಗೆ ಬೆಳಕು ಚೆಲ್ಲುತ್ತವೆ).

“ಊರು ಅಂದ ಮೇಲೆ ಹೊಲಗೇರಿ ಇರಲೇಬೇಕು”. “ಊರು ಹೊಲಗೇರಿ ಒಂದು ಮಾಡಿಬಿಟ್ಟ” ಎನ್ನುವ ಇಂದಿಗೂ ಪ್ರಚಲಿತವಾಗಿರುವ ನಾಣ್ಣುಡಿಗಳು ಇದಕ್ಕೆ ನಿದರ್ಶನವಾಗಿವೆ. ಅಂದಿನ ಕಾಲದಲ್ಲಿ ಈ ಹೊಲೆಯ ಮತ್ತು ಮಾದಿಗರುಗಳನ್ನು ಪಶುಗಳಿಗಿಂತಲೂ ಹೀನಾಯವಾಗಿ ನೋಡಿಕೊಳ್ಳಲಾಗುತ್ತಿತ್ತು. ಇದಕ್ಕೆ ನಿದರ್ಶನವೆಂದರೆ ಕನಕದಾಸರು ತಮ್ಮ “ರಾಮಧಾನ್ಯ ಚರಿತೆ”ಯಲ್ಲಿ ಇದನ್ನೆ ಪ್ರಸ್ತಾಪಿಸಿರುವುದು. ಈ ಕೀರ್ತನೆಯಲ್ಲಿ ಬರುವ ರಾಗಿ ಮತ್ತು ಭತ್ತದ ಪಾತ್ರವನ್ನು ಅಸ್ಪೃಶ್ಯ ಮತ್ತು ಬ್ರಾಹ್ಮಣರ ಪ್ರಜ್ಞೆಗಳಿಗೆ ಸಂಕೇತವಾಗಿ ತೆಗೆದುಕೊಳ್ಳಬಹುದಾಗಿದೆ. ಅಸ್ಪೃಶ್ಯರಲ್ಲಿಯೂ ಮಾನವೀಯತೆ ಇದೆ. ಬದುಕುತ್ತಿರುವ ಪರಿಸರ ಹಾಗೂ ಅಜ್ಞಾನರಾಗಿರುವುದೇ ಅವರ ಹೀನ ಬದುಕಿಗೆ ಕಾರಣವೇ ಹೊರತು ಅವರಿಗೂ ಮಾನವೀಯತೆ ಇದೆ. ಉತ್ತಮ ಜೀವನ ನಡೆಸಲು ಅವರೂ ಅರ್ಹರು ಎಂಬುದನ್ನು ಸಾಂಕೇತಿಕವಾಗಿ ಈ ಕೃತಿ ತೋರಿಸುತ್ತದೆ. ಕ್ರಿ.ಶ ಹದಿನಾರನೆಯ ಶತಮಾನದಲ್ಲೇ ಇದ್ದ ಈ ಶೂದ್ರ ಬ್ರಾಹ್ಮಣ ಪ್ರಜ್ಞೆಯು ನಮ್ಮಲ್ಲಿ ಇಂದು ಬೇರೆ ಬೇರೆ ರೂಪಗಳನ್ನು ಪಡೆದು ವ್ಯಾಘ್ರವಾಗಿ ಬೆಳೆದಿರುವುದರಿಂದ ರಾಮಧಾನ್ಯ ಚರಿತ್ರೆಯ ದೃಷ್ಟಿ ನಮಗೆ ಪದೇಪದೇ ಬೇಕಾಗುತ್ತಲೇ ಇರುತ್ತದೆ.

ವಿಜಯನಗರದ ಆಳ್ವಿಕೆಯ ಕಾಲದಲ್ಲಿ ಶ್ರೀಮಂತರು ಅಥವಾ ಮೇಲು ವರ್ಗದವರರೆಂದು ಹೇಳಿಕೊಳ್ಳುತ್ತಿದ್ದವರನ್ನು ಬಿಟ್ಟರೆ ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಇವರುಗಳು ಹೆಚ್ಚಿನ ಪಾಳು ವ್ಯಪಾರಗಳಾಗಿದ್ದಲ್ಲದೆ ಸಾಮಾನ್ಯ ಜನರಿಗಿಂತ ಸ್ವಲ್ಪ ಉತ್ತಮ ಜೀವನ ನಡೆಸುತ್ತಿದ್ದರೆನ್ನಬಹುದು.

ವಿದೇಶಿ ಪ್ರವಾಸಿಗರಾದ ಬಾರ್ಬೋಸ, ನ್ಯೂನಿಜಾ, ಪಾಯೇಸ್, ಅಬ್ದುಲ್, ರಜಾಕ್, ನಿಕೋಲೂಕಾಂಟಿ, ಮುಂತಾದವರುಗಳು ವಿಜಯನಗರ ಸಾಮ್ರಾಜ್ಯವನ್ನು ಮುಕ್ತಕಂಠದಿಂದ ಹೊಗಳಿರುವುದು ಸತ್ಯಾಂಶ ಕೂಡ, ಆದರೆ ಅವರ ಬರವಣಿಗೆಯಿಂದ ಕಂಡುಬರುವುದು ಕೇವಲ ಶ್ರೀಮಂತ ವರ್ಗದವರ ಬದುಕುವ ಶೈಲಿ ಮಾತರವೇ ಹೊರತು ಸಾಮಾನ್ಯ ಜನರ ಜೀವನ ಕಂಡುಬರುವುದಿಲ್ಲ.

ಭಿಕ್ಷೆ ಬೇಡುವುದು ಸಾಮ್ರಾಜ್ಯದಲ್ಲಿ ಹೆಚ್ಚಾಗಿದ್ದಿತು. ಹಸಿವು ಹೆಚ್ಚಾದಾಗ ಜನರು ಅನೇಕ ಮಾರ್ಗಗಳನ್ನು ಹುಡುಕುತ್ತಿದ್ದರು. ಅದರಲ್ಲಿ ಭಿಕ್ಷೆ ಬೇಡಿ ತಿನ್ನುವುದೂ ಒಂದು ಹಸಿವಿಗೆ ಭಿಕ್ಷೆವುಂಟು, ತೃಷೆಗೆ ಹಳ್ಳದಲ್ಲಿ ಸುಚಿತ್ತವಾದ ಅಗ್ಫವಣಿಯುಂಟು. ಕಟ್ಟ ಕೊಂಬೊಡೆ ತಿಪ್ಪೆಯ ಮೇಲೆ ಅರಿವೆಯುಂಟು, ಶಯನಕ್ಕೆ ಹಾಳು ದೇಗುಲವುಂಟು, ಎನ್ನುವುದಾಗಲಿ, ಇಂದಿಗೂ ಪ್ರಚಲಿತವಾಗಿರುವ “ಕೇರಿ ಮನೆ ಊಟ ಮಾರಿಗುಡಿ ನಿದ್ರೆ” ಎನ್ನುವ ನಾಡು – ನುಡಿಯಾಗಲಿ ಭಿಕ್ಷಾಟನೆಯನ್ನು ವ್ಯಕ್ತಪಡಿಸುವ ಸ್ವಷ್ಟ ಚಿತ್ರಗಳೆನ್ನಬಹುದು. ಕನಕದಾಸರು ತಮ್ಮ “ನಳಚರಿತ್ರೆ”ಯಲ್ಲಿ ಹಬ್ಬ, ಜಾತ್ರೆ, ಸಂತೆ ಹಾಗೂ ಯಾತ್ರಾಸ್ಥಳಗಳಲ್ಲಿ ಇಂದಿಗೂ ನಾವು ನೋಡುವ ಭಿಕ್ಷಾಟನೆಯ ರೀತಿಯಲ್ಲೆ ಅಂದಿನ ಸ್ಥಿತಿಯನ್ನು ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ. ಬಡತನಕ್ಕೆ ಭಿಕ್ಷೆ ಬೇಡುವುದು ಒಂದು ದಾರಿಯಾದರೆ ನೆಂಟರಿಷ್ಟರ ಮನೆಬಾಗಿಲಿಗೆ ಹೋಗಿ ಸಾಲ ಕೇಳುವುದು ಇನ್ನೊಂದು ಮಾರ್ಗ, ಮನುಷ್ಯರಿಗೆ ಕಷ್ಟ ಬಂದಾಗ ಬಂಧುಗಳ ಬಳಿಗೆ ಹೋದರೆ ಅವರು ಯಾವ ರೀತಿಯಲ್ಲಿ ಬಂದವರ ಜೊತೆ ನಡೆದುಕೊಳ್ಳುತ್ತಾರೆ ಎಂಬುವರ ಬಗೆಗೆ ಅನುಭಾವಿಗಳ ಅನುಭವ ಅಪಾರವಾಗಿದೆ. ಉದಾ: “ನಗುವಾಗ ಎಲ್ಲಾ ನಂಟರು: ಅಳುವಾಗ ಯಾರೂ ಇಲ್ಲ” ಎಂಬುವುದಾಗಲಿ, “ಬಿಡದೆ ಬಾಂಧವರೊಡನೆ ಕಡಿದಾಡುವುದಕ್ಕಿಂತ ಅಡವಿಯೊಳಗಜ್ಞಾತ ವಾಸವೇ ಲೇಸು” ಎಂಬುವುದು “ಹಸಿದು ನೆಂಟರ ಮನೆಗೆ ಉಣಲಿಕ್ಕೆ ಹೋದರೆ ಕಸಿವರಿತು ಬಡಿಸುವವರ ಕಾಣೆ” ಮುಂತಾದ ಪದಗಳ ಸೃಷ್ಟಿಗೆ ಆ ಸನ್ನಿವೇಶ ಕಾರಣವಾಗಿರುತ್ತದೆ. ವಿಜಯನಗರದ ಅರಸರ ಕಾಲದಲ್ಲಿ ನಾವು ಗುಲಾಮಗಿರಿಯ (ದಾಸ್ಯಜೀವನ) ಪದ್ಧತಿಯನ್ನು ಕಾಣಬಹುದಾಗಿತ್ತೆನ್ನಬಹುದು. ಕನಕದಾಸರು ತಮ್ಮ ರಾಮನಾಥ ಚರಿತೆದಲ್ಲಿ ಮನುಷ್ಯರ ಮಾರಾಟದ ವಿಚಾರವನ್ನು ಗುರುತಿಸುತ್ತಾರೆ. ಇಂದಿಗೂ ಸಹ ಪ್ರತಿಷ್ಟಿತ ಮೈಸೂರು ನಗರದಲ್ಲಿಯೇ ಈ ಗುಲಾಮಗಿರಿ ಕಂಡುಬಂದಿರುವುದರಿಂದ (ಮಾನವರನ್ನು ಸರಪಳಿಯ ಬಂಧನದಲ್ಲಿರಿಸಿ ಆಯುಷ್ಯವಿಡೀ ಅವರಿಂದ ದುಡಿಸಿಕೊಳ್ಳುವ ಪದ್ಧತಿಯನ್ನು ಇಂದಿಗೂ ಆಚರಿಸುತ್ತಿದ್ದ ಹಂಗರಹಳ್ಳಿ ಕಲ್ಲುಗಣಿ ಪ್ರದೇಶದ ಜೀತದಾಳುಗಳನ್ನು ನೆನೆಸಿಕೊಂಡು) ಅಂದಿನ ವಿಜಯನಗರದ ಅರಸರ ಕಾಲದಲ್ಲಿ ಇದು ಸರ್ವೆ ಸಾಮಾನ್ಯವಾಗಿತ್ತೆನ್ನಬಹುದು. ತಂದೆ ತಾಯಿಯರು ಹಸಿವಿನ ಬವಣಿಯನ್ನು ತಾಳಲಾರದೆ ತಮ್ಮ ಮಕ್ಕಳನ್ನು ಮಾರಿರುವುದು ರಾಮನಾಥ ಚರಿತೆಯಲ್ಲಿ ಕಂಡುಬರುತ್ತದೆ. (ಇಂದೋನೋ ಇದರಿಂದ ಮುಕ್ತವಾಗಿಲ್ಲ ಗುಲ್ಬರ್ಗಾ ಜಿಲ್ಲೆ ಕೊಂಚಾವರರಿನ ಲಂಬಾನೀ ತಾಂಡಗಳಲ್ಲಿ ನಡೆದ ಹೆಣ್ಣು ಶಿಶುಗಳ ಮಾರಾಟ ಇವಕ್ಕೆ ಜ್ವಲಂತ ನಿದರ್ಶನ).

ನರಬಲಿ

ನಮ್ಮ ಮೂಢನಂಬಿಕೆಗಳಿಗೆ ಕೊನೆಯಿಲ್ಲ. ಪ್ರಪಂಚವು ತಾಂತ್ರಿಕವಾಗಿ, ಶೈಕ್ಷಣಿಕವಾಗಿ ಎಷ್ಟೇ ಅಭಿವೃದ್ಧಿ ಹೊಂದುತ್ತಿದ್ದರೂ ಸಹ ಇಂದಿಗೂ ಅಜ್ಞಾನಕ್ಕೆ ಕೊನೆಯಿಲ್ಲ. ನಮ್ಮ ಮೂಡನಂಬಿಕೆಗಳಿಗೆ ಹೆಚ್ಚಿನ ಗಮನ ಕೊಟ್ಟು ನರಬಲಿ ನಡೆಸುತ್ತಿದ್ದೇವೆ, (ಉದಾಹರಣೆಗೆ ಇತ್ತೀಚೆಗೆ ಬೀದರ್ ಜಿಲ್ಲೆಯಲ್ಲಿ ನಡೆದ ಮಗುವಿನ ಕೊಲೆ ಹಾಗೂ ಮಂಡ್ಯ ಜಿಲ್ಲ ಮದ್ದೂರು ತಾಲ್ಲೂಕಿನ ಹಳ್ಳಿಯಲ್ಲಿ ಇಬ್ಬರು ಸ್ವ ಇಚ್ಚೆಯಿಂದ ಸಜೀವವಾಗಿ ಅಗ್ನಿಗಾಹುತಿಯಾದುದನ್ನು ನೆನೆಯಬಹುದು) ಇನ್ನೂ ಮಧ್ಯಕಾಲೀನ ಭಾರತದಲ್ಲಿ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ನರಬಲಿ ನಡೆದಿರುವುದಕ್ಕೆ ಅನೇಕ ವೀರಗಲ್ಲುಗಳು, ಶಾಸನಗಳು, ಸಾಹಿತ್ಯ ಕೃತಿಗಳು ಆಧಾರವಾಗಿವೆ. ಬಡತನದಿಂದಾಗಿ ಹೆತ್ತ ಮಕ್ಕಳನ್ನು ಮಾರುತ್ತಿದ್ದ ಬಡವರಿದ್ದ ಪ್ರಸಂಗ ಒಂದಾದರೆ, ಕೊಳ್ಳುವ ಶ್ರೀಮಂತರ ಉದ್ದೇಶ ಇನ್ನೊಂದು ರೂಪವಾಗಿರುತ್ತಿತ್ತು. “ಸಮ್ಯಕ್ತ್ವ ಕೌಮುದಿ”ಯಲ್ಲಿ ಕಂಡುಬರುವ ಹಾಗೆ ಕೋಟೆಗೆ ಹಾಗೂ ಕೆರೆಗಳಿಗೆ ನರಬಲಿಕೊಡಲು ಮಕ್ಕಳನ್ನು ಕೊಳ್ಳುವ ಸಂದರ್ಭವನ್ನು ವಿವರಿಸುತ್ತದೆ. ಮನುಷ್ಯರನ್ನು ಕೊಂಡುಕೊಂಡಂತೆ ಪ್ರಾಣಿಗಳನ್ನು ಕೊಂಡುಕೊಳ್ಳುತ್ತಿದ್ದರು.

ನರಬಲಿಯನ್ನು ಹಾಗೂ ಪಶುಬಲಿಗಳನ್ನು ಜನರು ನಾನಾ ಕಾರಣಗಳಾಗಿ ಕೊಡುತ್ತಿದ್ದರೆಂದು ಸಾಹಿತ್ಯ ಕೃತಿಗಳು ತಿಳಿಸುತ್ತವೆ. ಗರಡಿ ಪೂಜಾ ಸಂದರ್ಭದಲ್ಲಿ ಪಶುಬಲಿಕೊಟ್ಟು ಚಂಡಿ ಪೂಜೆ ಮಾಡಿದರೆ, ಹೂತಿಟ್ಟ ನಿಧಿಯನ್ನು ತೆಗೆಸುವಾಗಲೂ ಬಲಿಸಮೇತ ಪೂಜೆ ನಡೆಸುತ್ತಿದ್ದುದ್ದು ಕಂಡುಬರುತ್ತದೆ. ಇದೊಂದು ಇಂದಿನ ಸಮಾಜಕ್ಕೂ ಬಂದೊದಗಿರುವ ದುರಂತವೇ ಸರಿ.