ವಿಜಯನಗರ ಸಾಮ್ರಾಜ್ಯವು ಮುಖ್ಯವಾಗಿ ವ್ಯವಸಾಯಿಕ ಸಾಮ್ರಾಜ್ಯವಾಗಿತ್ತು. ಹಳ್ಳಿಗಳೇ ಇಲ್ಲಿಯ ಐಶ್ವರ್ಯದ ಪ್ರಮುಖ ಆಧಾರಗಳಾಗಿದ್ದವು, ರೈತನೇ ಹಳ್ಳಿಗಳ ಹಾಗೂ ಸಾಮ್ರಾಜ್ಯದ ತಳಹದಿಯಾಗಿದ್ದನೆಂದು ಹೇಳಬಹುದು. ಅವನ ಸಂಪತ್ತೇ ದೇಶದ ಸಂಪತ್ತು, ಅವನ ಭಾಗ್ಯವೇ ದೇಶದ ಭಾಗ್ಯ ರೈತರ ಉದ್ಧಾರವೇ ದೇಶೋದ್ಧಾರ ಎಂದು ನಂಬಿ ರೈತನಲ್ಲಿ ಸುಖ, ಸಂಪತ್ತು, ಸಮೃದ್ಧಿಯಾಗಿದ್ದರೆ ದೇಶದಲ್ಲಿ ನೆಲವೂ, ಬಲವೂ, ಸಂಪತ್ತೂ ನದಿಯಂತೆ ಲೀಲಾಜಾಲವಾಗಿ ಹರಿಯುತ್ತದೆ ಎಂದು ನಂಬಿದವರಾಗಿದ್ದರು. ಇದನ್ನು ಗಮನಿಸಿದರೆ ಅಂದು ರೈತರು ಅಂದರೆ ಕೃಷಿಯನ್ನೇ ಅವಲಂಬಿಸಿಕೊಂಡಿದ್ದವರಿಗೆ, ಸಾಮ್ರಾಜ್ಯದಲ್ಲಿ ಉತ್ತಮ ಸ್ಥಾನಮಾನವಿದ್ದಿತ್ತೆಂದು ಕಂಡುಬರುತ್ತದೆ.

ಅಂದಿನ ಕೃಷಿಯು ಮಳೆಯೊಂದಿಗೆ ಜೂಜಾಟವಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಿತ್ತು. ಅಂದಿನ ರೈತರು ಸಾಮ್ರಾಜ್ಯದ ಅಡಿಗಲ್ಲುಗಳಾಗಿದ್ದರೂ ಸಹ ಅವರು ಅನುಸರಿಸುತ್ತಿದ್ದ ವ್ಯವಸಾಯದ ರೀತಿಗಳು ಉತ್ತಮವಾಗಿಲ್ಲದ ಕಾರಣ ಹೆಚ್ಚು ಹೆಚ್ಚು ಫಸಲನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಅವರಲ್ಲಿ ಅಸಕ್ತಿ, ಅಜ್ಞಾನ, ಕೆಳಮಟ್ಟದ ಶ್ರದ್ಧೆ ಹೆಚ್ಚುತ್ತಿದ್ದಿ, ಏಕಾಗ್ರತೆ, ಜಾಗರೂಕತೆ, ಪ್ರಾಮಾಣಿಕತೆಗಳು ಮಾಯವಾಗಿದ್ದವೆಂದು ಹೇಳಬಹುದು. ಇದಕ್ಕೆಲ್ಲ ಪ್ರಮುಖ ಕಾರಣವೆಂದರೆ ಬಡತನ ಹಾಗೂ ಅಜ್ಞಾನಗಳನ್ನು ಉದಾಹರಣೆಯಾಗಿ ನೀಡಬಹುದು. ಇಂದಿಗೂ ನಮ್ಮ ಹಳ್ಳಗಳಲ್ಲಿ ಪ್ರಚಲಿತವಾಗಿರುವ ಗಾದೆ “ಅಪ್ಪ ಹಾಕಿದ ಆಲದ ಮರಕ್ಕೆ ನೇತಾಕಿಕೊಂಡು ಸಾಯುವುದು” ಎಂಬ ಪದವು ವಿಶಾಲವಾದ ಅರ್ಥವನ್ನು ಕೊಡುತ್ತದೆ. ಇದೊಂದು ಕೃಷಿಗೆ ಸಂಬಂಧಿಸಿದ ಗಾದೆಯಾಗಿದ್ದು ಕೃಷಿ ಭೂಮಿಯಲ್ಲಿ ಬೇರೆ ಬೇರೆ ಬೆಳೆಯನ್ನು ಬೆಳೆಯದೆ ಒಂದೇ ರೀತಿಯ ಫಸಲನ್ನು ಬೆಳೆಯುತ್ತಿದ್ದರೆ ಮೇಲಿನ ಗಾದೆಯು ತಟ್ಟನೆ ಬಂದುಬಿಡುತ್ತದೆ. ಅಂದರೆ ವಿಜಯನಗರದ ರೈತರು ಸಾಮಾನ್ಯವಾಗಿ ಒಂದೇ ರೀತಿಯ ಬೆಳೆಯನ್ನು ಪ್ರತಿವರ್ಷವೂ ಬೆಲೆಯುತ್ತಿದ್ದರೆಂದು ಕೆಲವು ಆಧಾರಗಳಿಂದಲೂ ತಿಳಿಯಬಹುದು.

ವಿದೇಶಿಯರಾದ ಬಾರ್ಬೋಸಾ, ಪಾಯಸ್, ನ್ಯೂನಿಜ್ ರವರು ವಿಜಯನಗರ ಸಾಮ್ರಾಜ್ಯದ ಬೇರೆ ಬೇರೆ ಭಾಗಗಳಲೆಲ್ಲಾ ಸಂಚರಿಸಿ ಕೃಷಿ ಭೂಮಿ, ಭೂಮಿಯ ಫಲವತ್ತತೆ, ಬೆಳೆಗಳು ಹಾಗೂ ಸಾಕುಪ್ರಾಣಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತಾರೆ. ಇವರುಗಳ ಪ್ರಕಾರ ಸಾಮ್ರಾಜ್ಯವು ತನ್ನ ಪಶ್ಚಿಮದ ಕಡೆಯಿದ್ದ ಕರಾವಳಿ ಪ್ರದೇಶವನ್ನು ಅತ್ಯಂತ ಫಲವತ್ತಾದ ಭೂಮಿ ಎಂತಲೂ ಪರಿಗಣಿಸಿ ಅಲ್ಲಿ ಉತ್ತಮವಾದ ಭತ್ತವನ್ನು ಬೆಳೆದು, ಅಕ್ಕಿಯನ್ನು ಮಲಭಾರ್ ಮತ್ತು ಅರ‍್ಮಜ್‌ಗಳಿಗೆ ರಪ್ತು ಮಾಡುತ್ತಿದ್ದರೆಂದು ಹೇಳಿದ್ದಾರೆ. ಪಾಯಸನು ಭಟ್ಕಳದಿಂದ ವಿಜಯನಗರದವರೆಗಿನ ಮಾರ್ಗವನ್ನು ಹಾಗೂ ಮಧ್ಯ ಕರ್ನಾಟಕದ ಕೃಷಿ ಭೂಮಿಯನ್ನು ವರ್ಣಿಸಿ ಉದ್ದಕ್ಕೂ ಫಲವತ್ತಾದ ಕೃಷಿಭೂಮಿಯನ್ನು ಹೊಂದಿತ್ತೆಂದು ಹೇಳುತ್ತಾನೆ, ಹತ್ತಿ, ಗೋಧಿ, ಭತ್ತಗಳನ್ನು ಹೆಚ್ಚಾಗಿ ಈ ಪ್ರದೇಶದಲ್ಲಿ ಬೆಳೆಯುತ್ತಿದ್ದರೆಂದು ತಿಳಿಸುತ್ತಾನೆ. ಈಗಿನ ಧಾರವಾಡ ಜಿಲ್ಲೆಯಲ್ಲಿರುವ ಬಂಕಾಪುರ ಮತ್ತು ಸುತ್ತಮುತ್ತಲಿನ ಪ್ರದೇಶವು ವಿಜಯನಗರದ ಕಾಲದಲ್ಲಿ ಕೃಷಿಯ ಬೀಜೋತ್ಪಾದನಾ ಹಾಗೂ ಪಶುಸಂಗೋಪನ ಕ್ಷೇತ್ರಗಳಿಂದ ಸಮೃದ್ದಿಯಾಗಿತ್ತೆಂದು ನ್ಯೂನಿಜ್ ಹೇಳುತ್ತಾನೆ. ಅಂದಿನ ಕಾಲದಲ್ಲಿಯೂ ಕೃಷಿಯೇ ಪ್ರಜೆಗಳ ಪ್ರಮುಖ ವೃತ್ತಿಯಾಗಿತ್ತೆಂಬವುದಕ್ಕೆ ಸಾಕ್ಷಿಯಾಗಿ ಈ ಜನಪದ ಗೀತೆಯು ನಿದರ್ಶನವಾಗಿದೆ.

ಏಳುತಾಲೆ ಎದ್ದು ಯಾರಾರ ನೆನಯಾಲಿ
ಎಳ್ಳು ಜೀರಿಗೆ ಬೆಳೆಯೋಳಾ
? ಭೂಮಿತಾಯಿ
ಎದ್ದೊಂದು ಗಳಿಗೆ ನೆನೆದೇನು……

ಎನ್ನುವ ಪದವಾಗಲಿ ಅಥವಾ ದೇವರಿಗೆ ಹರಕೆ ಮಾಡಿಕೊಲ್ಳುವ ಸನ್ನಿವೇಶವನ್ನು ಅರ್ಥಯಿಸುವ,

ಮೂಡಲ ಮುತ್ತಯ್ಯ ನೋಡಯ್ಯ ಬಡತಾನ
ಮೂಡಲಲ್ಲಿ ರಾಗಿ ಮೆಳೆಯುದ್ದ ಬೆಳೆದರೆ
ಮಾಡೂವೆ ನಿನಗೆ ಹರಿಸೇವ
………..

ಇದಕ್ಕೆ ಸಾಕ್ಷಿ ಎಂಬಂತೆ ಇಂದಿಗೂ ಸಹ ರೈತನು ಮುಂಜಾನೆ ಎದ್ದೊಡನೆ ಭೂಮಿಯನ್ನು, ತನ್ನ ಹಿರಿಯ ತಾಯಿ ಎಂದು ನಂಬಿರುವ ನೆಲವನ್ನು ನೆನೆಯುತ್ತಾನೆ. ಅಂದು ಸಾಮಾನ್ಯ ಜನರಿಗೆ ಇದಕ್ಕಿಂತ ಘನವಾದ ಕೆಲಸ ಬೇರೆ ಇರಲಿಲ್ಲವೆಂದೇ ಹೇಳಬಹುದು.

.೧. ಕೃಷಿ

ವಿಜಯನಗರದ ಕಾಲದ ರೈತರಿಗೆ ಕಾಲಕಾಲಕ್ಕೆ ಬದಲಾಗುವ ಋತು ಆಧಾರಿತ ವ್ಯವಸಾಯದ ವಿಭಜನೆಯನ್ನು ಉತ್ತಮ ರೀತಿಯಲ್ಲಿಯೇ ಅನುಸರಿಸಿಕೊಂಡಿದ್ದರು. ಆ ಕಾಲದ ಶಾಸನಗಳು ಕಾರ್ತಿಕ ಮತ್ತು ವೈಶಾಖದ ಬೆಳೆಗಳನ್ನು ಉಲ್ಲೇಖಿಸುತ್ತವೆ. ಕಾರ್ತಿಕ ಬೆಳೆಯು ಸಾಮಾನ್ಯವಾಗಿ ನವೆಂಬರ್ ನಿಂದ ಜನವರಿ ಅವಧಿಯದಾಗಿರುತ್ತಿತ್ತು. ವೈಶಾಖದ ಬೆಳೆಯು ಏಪ್ರಿಲ್ ಮೇ ತಿಂಗಳಿನಲ್ಲಿ ಕೊಯಲಿಗೆ ಬರುತ್ತಿತ್ತು. ಗ್ರಾಮೀಣ ಪ್ರದೇಶದ ಜನರು ಇವುಗಳು ಕಾರ್ ಪಸಲು ಹಾಗೂ ಹೈನ್ ಫಸಲು ಎಂಬ ಪದಗಳಿಂದ ಕರೆಯುತ್ತಿದ್ದದ್ದು ಕಂಡುಬರುತ್ತದೆ. ಮೇಲಿನ ರೀತಿಯಲ್ಲಿ ಅಂದಿನ ಕೃಷಿಯು ೧. ಜೂನ್ ನಿಂದ ಅಕ್ಟೋಬರ್ ವರೆಗೆ ನೈಋತ್ಯ ಮುಂಗಾರು ಮಳೆಗೆ ಹೊಂದಿಕೊಳ್ಳುವ ಅವಧಿ ೨. ಜನವರಿ ಫೆಬ್ರವರಿ ತಿಂಗಳ ಚಳಿ ಹವೆಯ ಫಸಲು ಎಂದು ವಿಭಾಗಿಸಿಕೊಂಡು ವ್ಯವಸಾಯ ಮಾಡಿಕೊಂಡು ಬರುತ್ತಿದ್ದರು.

ಕಣಿವೆಯ ಕೆಳಭಾಗದಲ್ಲಿದ್ದ ನದಿಗಳು ಹಾಗೂ ಕಾಲುವೆಗಳ ಮೂಲಕ ನೀರನ್ನು ಪಡೆಯುತ್ತಿದ್ದ ಜಮೀನುಗಳೀಗೆ ಬೈಲುಭೂಮಿ ಅಥವಾ ಗದ್ದೆ ಸೀಮೆ ಎಂದೂ ಸಂಪೂರ್ಣ ಮಳೆಯನ್ನು ಅವಲಂಭಿಸಿರುವ ಭೂಮಿಯನ್ನು ಹೊಲಗಾಡು ಅಥವಾ ಮಳೆಗಾಡು ಎಂದು ಕರೆಯುತ್ತಿದ್ದರು. ಅಂದಿನ ರಾಜರುಗಳು ನೀರಾವರಿಗೆ ಹೆಚ್ಚಿನ ಅದ್ಯತೆ ನೀಡಿದ್ದರು. ಕೃಷಿಯ ಅಭಿವೃದ್ಧಿಗೆ ನೀರಾವರಿ ಸೌಕರ್ಯವು ಅತಿ ಮುಖ್ಯವಾದದು, ಇದರಿಂದ ಭೂಮಿಯ ಉತ್ಪತ್ತಿಯನ್ನು ಹೆಚ್ಚಿಸುವುದಕ್ಕೆ ಹೆಚ್ಚಿನ ಅವಕಾಶವಾಗುವುದಲ್ಲದೆ ವ್ಯವಸಾಯಕ್ಕೆ ಅರ್ಹವಾದ ಬಂಜರು ಭೂಮಿಯನ್ನು ಕೃಷಿಮಾಡಿ ಉತ್ತಮ ಬೆಳೆಯನ್ನು ಬೆಳೆಯಬಹುದೆಂದು ವಿಜಯನಗರದ ಅರಸರು ನೀರಾವರಿಗೆ ಹಾಗೂ ಅದರ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿ ನಾಡಿನಾದ್ಯಂತ ಕೆರೆ, ಕಟ್ಟೆ, ಬಾವಿಗಳನ್ನು ನಿರ್ಮಿಸಿ ಜನರು ಸ್ವಾಲಂಬಿಗಳಾಗಲು ಶ್ರಮಿಸಿದರು.

ನೀರಾವರಿ ಪದ್ಧತಿಯಲ್ಲಿ ವ್ಯವಸಾಯ ಮಾಡುತ್ತಿದ್ದ ಭೂಮಿಯಲ್ಲಿ ಭತ್ತ, ಕಬ್ಬು, ಗೋಧಿ, ಜೋಳ, ಹೋಗೆಸೊಪ್ಪು, ಹತ್ತಿ ದ್ವದಳ ಕಾಳೂಗಳು, ಮುಂತಾದವು ಬೆಳೆಯಲಾಗುತ್ತಿದ್ದರೆ ಮಳೆಯೊಡನೆ ಜೂಜಾಟವಾಡುತ್ತಿದ್ದ ಹೊಲದಲ್ಲಿ ಹುಣಸೇಹಣ್ಣು, ಬೇಳೆಕಾಳು (ತೊಗರಿ), ತೆಂಗು, ಖರ್ಜೂರ, ಜೀರಿಗೆ, ಈರುಳ್ಳಿ, ಬೆಳ್ಳುಳ್ಳಿ, ಅರಿಶಿನ ಅಡಿಕೆ ಮತ್ತು ಮೆಣಸು, ಹಣ್ಣಿನ ಗಿಡಗಳು, ಮುಸುಕಿನ ಜೋಳ ಮುಂತಾದವನ್ನು ಬೆಳೆಯಲಾಗುತ್ತಿದ್ದಿತು. ನೀರಾವರಿಗೆ ಹೆಚ್ಚಾಗಿ ಕೆರೆಗಳೇ ಆಶ್ರಯವಾಗಿದ್ದವು. ತೊಟಗಾರಿಕೆ ಬೆಳೆಯೂ ಸಹ ಹೆಚ್ಚಿನ ರೀತಿಯಲ್ಲಿ ಕಂಡು ಬರುತ್ತದೆ. ತೆಂಗು, ಅಡಿಕೆ, ಗೋಡಂಬಿ, ಮೆಣಸು, ಬಾಳೆ ಹಾಗೂ ಎಲ್ಲಾ ರೀತಿಯ ಹಣ್ಣುಗಳೂ ಸಹ ತೋಟಗಾರಿಕೆಯಲ್ಲಿ ಬೆಳೆಯಲಾಗುತ್ತಿತ್ತು. ಮಳೆ ಆಶ್ರಿತ ಪ್ರದೇಶದಲ್ಲಿಯೇ ಮಳೆಯ ಕಾಲದಲ್ಲಿ ಬಿತ್ತನೆ ಮಾಡಿ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಿದ್ದರು. ಹೆಸರುಕಾಳು, ಅಲಸಂದೆ, ಹುರುಳಿಕಾಳು, ಕಡ್ಲೆಕಾಳು, ಅವರೇಕಾಳು ಮುಂತಾದ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಿದ್ದರು. ಕೆರೆಗಳು ಮತ್ತು ಕಾಲುವೆಗಳ ಕೆಳಗಡೆ ತೋಟದ ಬೆಳೆಗಳನ್ನು ಬೆಳೆಯುತ್ತಿದ್ದರು. ಏಕೆಂದರೆ ನೀರು ಸುಲಭವಾಗಿ ಸಿಗುವುದರಿಂದ ಇಲ್ಲಿ ೩.೦೦೦ದಿಂದ ೪೦೦೦ರಷ್ಟು ಉತ್ತಮ ಜಾತಿಯ ಮರ, ಗಿಡ, ಫಸಲನ್ನು ಬೆಳೆಯುತ್ತಿದ್ದರೆಂದು ಶಾಸನವು ತಿಳಿಸುತ್ತದೆ.

ವಿಜಯನಗರದ ಕಾಲದ ಬೆಳೆಗಳನ್ನು ಒಂದು ಶಾಸನವು (ಎ.ಕೆ. ೧೨. ಎಂ.ಎಲ್, ೨೦, ಅದೇ ಟಿ, ಎಂ, ೪೮, ಎಂ.ಎ.ಆರ್, ೧೯೨೩ – ಪು ೧೨೨) ಈ ಕೆಳಗಿನ ರೀತಿಯಲ್ಲಿ ವಿವರಿಸುತ್ತದೆ.

೧. ದ್ವಿದಳ ಧಾನ್ಯಗಳು : ಅವರೆ, ಉದ್ದು, ಗೋಧಿ, ಹೆಸರು, ಹುರುಳಿ, ಕಡ್ಲೆಕಾಳು, ಅಲಸಂದೆ.

೨. ಸಾಂಬಾರ ವಸ್ತುಗಳು : ಮೆಣಸು, ಅಡಕೆ, ಸಾಸುವೆ, ಮೆಂತ್ಯ, ಜೀರೆಗೆ, ಸಬ್ಬಸಿಗೆ, ಧನಿಯ ಮತ್ತು ಅರಿಸಿನ.

೩. ತೋಟದ ಬೆಳೆ : ತೆಂಗು, ಹಣ್ಣು ಹಂಪಲುಗಳು, ತರಕಾರಿಗಳು

೪. ನೀರಾವರಿ ಬೆಳೆ : ಭತ್ತ, ರಾಗಿ, ಜೋಳ, ಗೋಧಿ, ನವಣೆ, ಮುಸುಕಿನ ಜೋಳ, ಹತ್ತಿ, ಸೆಣಬು, ದನಕರುಗಳಿಗೆ ಹುಲ್ಲು ಎಂದು ಸಂಕ್ಷಿಪ್ತವಾಗಿ ವಿವರಿಸಿರುವುದು ಕಂಡು ಬರುತ್ತದೆ. ಕಬ್ಬಿನ ಉತ್ಪನ್ನಗಳಾದ ಸಕ್ಕರೆ ಮತ್ತು ಬೆಲ್ಲ ಹೇರಳವಾಗಿ ಉತ್ಪಾದನೆಯಾಗುತ್ತಿದ್ದು. ಸಾಮ್ರಾಜ್ಯವು ಈ ವಸ್ತುಗಳ ಉತ್ಪಾದನೆಯಲ್ಲಿ ಸ್ವಯಂಪೂರ್ಣವಾಗಿತ್ತೆಂದು ಫಾಹಿಮಾನ್ ಹೇಳುತ್ತಾನೆ. ಬಾರ್ಬೋಸನ ಪ್ರಕಾರ ಸಾಮ್ರಾಜ್ಯದಲ್ಲಿ ತಯಾರಾಗುತ್ತಿದ್ದ ಸಕ್ಕರೆಯು ಹುಡಿಯಾಗಿರುತ್ತಿತ್ತೆಂದು ಹೇಳಿದ್ದಾನೆ. ಮತ್ತೊಬ್ಬ ಪ್ರವಾಸಿಯಾದ ವರ್ತಮೊ ಭಟ್ಕಳದಲ್ಲಿ ಸಕ್ಕರೆಯು ಹೇರಳವಾಗಿದ್ದುದ್ದನ್ನು ನೋಡಿದನು ಮತ್ತು ನಮ್ಮಲ್ಲಿ ಅದನ್ನು ಗಟ್ಟಿಗೊಳಿಸಲಾಗಿತ್ತು ಎಂದು ಹೇಳಿದ್ದಾನೆ. ಕಬ್ಬನ್ನು ಗದ್ದೆಯಲ್ಲಿಯೂ ಅಥವಾ ಹೆಚ್ಚಾಗಿ ನೀರು ಲಭ್ಯವಿರುವ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಗಾಣಗಳಿಂದ ಕಬ್ಬಿನ ರಸ ತೆಗೆಯಲಾಗುತ್ತಿತ್ತು. ತೆಂಗಿನ ಕಾಯಿ ಹಾಗೂ ಅದರ ಉತ್ಪನ್ನಗಳಾದ ಎಣ್ಣೆ, ಎಳೆನೀರು, ನಾರುಗಳ ವರ್ಣನೆಯು ಶಾಸನಗಳಿಂದ ತಿಳಿದುಬರುತ್ತದೆ. ತೆಂಗಿನ ಎಣ್ಣೆಯನ್ನು ಸಹ ಗಾಣಗಳಿಂದ ತೆಗೆಯಲಾಗುತ್ತಿತ್ತು. ಗಾಣಗಳನ್ನು ಮರದಿಂದ ಅಥವಾ ಕಲ್ಲಿನಿಂದ ಮಾಡಿ ಜೋಡಿ ಎತ್ತುಗಳ ಸಹಾಯದಿಂದ ಅದನ್ನು ತಿರುಗಿಸಿ ಅರೆದು ಉತ್ಪಾದಿಸುತ್ತಿದ್ದರು.

ಅಂದಿನ ಕಾಲದ ಸಾಹಿತ್ಯಾಧಾರಗಳು ಮೇಲೆ ಸೂಚಿಸುರುವ ಬೆಳೆಗಳ ವರ್ಣನೆಯನ್ನು ಕೊಡುತ್ತದೆ. ಇವುಗಳಲ್ಲಿ ಪ್ರಮುಖವಾದವುಗಳೆಂದರೆ ‘ರಾಮಧಾನ್ಯ ಚರಿತ್ರೆ’ ಇಲ್ಲಿ ಎಲ್ಲಾ ಧಾನ್ಯಗಳ ವರ್ಣನೆಯು ಇದ್ದರೂ ಸಹ ರಾಗಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಸಾಮ್ರಾಜ್ಯದಲ್ಲಿ ಕೆರೆ, ನೆಲೆಗಳು ಹಾಗೂ ಬಾವಿಗಳನ್ನು ನಿರ್ಮಿಸುವುದರ ಹೆಚ್ಚಿನ ಜವಾಬ್ದಾರಿಯನ್ನು ದೇವಾಲಯಗಳಿಗೆ, ಗ್ರಾಮಸಭೆಗಳು ಹಾಗೂ ಖಾಸಗಿ ವ್ಯಕ್ತಿಗಳಿಗೂ ವಹಿಸಿಕೊಡಲಾಗುತ್ತಿತ್ತು. ಅದಕ್ಕೆ ಅವರು ಈ ಕೆಲಸವನ್ನು ಧರ್ಮಕಾರ್ಯವೆಂದು ಪರಿಗಣಿಸಬೇಕಾಗಿದ್ದಿತ್ತು. ನೀರಾವರಿ ಕೃಷಿಯಿಂದ ಸರ್ಕಾರಕ್ಕೆ ಆಧಾಯ ಅಧಿಕವಾಗಿ ಬರುತ್ತಲಿತ್ತೆಂದು ಹೇಳಬಹುದು. ಕೆರೆ, ನಾಲೆ ಹಾಗೂ ಬಾವಿಗಳನ್ನು ನಿರ್ಮಿಸುವ ಜವಾಬ್ದಾರಿಯನ್ನು ದೇವಾಲಯ ಹಾಗೂ ಶ್ರೀಮಂತರುಗಳಿಗೆ ವಹಿಸುತ್ತಿದ್ದುದರಿಂದ ಜವರುಗಳು ಸಾಮಾನ್ಯ ಜನತೆಯ ಹೆಚ್ಚಿನ ಶ್ರಮವನ್ನು ಇದಕ್ಕೆ ಬಳಸಿಕೊಳ್ಳುತ್ತಿದ್ದರು. ಇಂತಹ ಸಮಯದಲ್ಲಿ ಸಾಮಾನ್ಯರ ಜೀವನ ಚಿಂತಾಜನಕವಾಗಿರುತ್ತೆತ್ತೆಂದು ಹೇಳಬಹುದು. ಕೆರೆ ನಿರ್ಮಿಸುವ ಅಥವಾ ಕೆರೆಯನ್ನು ನೋಡಿಕೊಳ್ಳುತ್ತಿದ್ದವರಿಗೆ ತೆರಿಗೆ ಹಾಗೂ ಇನ್ನಿತರ ಸನ್ನಿವೇಶದಲ್ಲಿ ಸಂಪೂರ್ಣ ವಿನಾಯಿತಿ ಇದ್ದಿತ್ತು. ಆದರೆ ಶ್ರಮಿಕರನ್ನು ಬಲಾತ್ಕರದಿಂದ ದುಡಿಸಿಕೊಂಡು ಇದನ್ನು ಅವರು ದೇವರಿಗೆ ಸಲ್ಲಿಸಿದ ಸೇವೆ ಅಥವಾ ದಾನವೆಂದು ಪರಿಗಣಿಸಿ ಅವರ ಬೆವರಿನ ಹನಿಗಳ ಮೇಲೆ ಮಹಲುಗಳನ್ನು ನಿರ್ಮಿಸುತ್ತಿದ್ದರು. ಇದಕ್ಕೆ ಸಂಬಂಧಿಸಿದ ಅನೇಕ ಶಾಸನಗಳು ಸಿಗುತ್ತದೆ. ಇವುಗಳನ್ನು ‘ಕಡ್ಡಾಯ ಮತ್ತು ಬಿಟ್ಟಿ” ಎಂದು ಶಾಸನಗಳಲ್ಲಿ ಕರೆಯಲಾಗಿದೆ.

ಕೆರೆಗಳನ್ನು ಕಾಲಕಾಲಕ್ಕೆ ದುರಸ್ತಿಮಾಡಿಸಲಾಗುತ್ತಿತ್ತು. ದುರಸ್ತಿ ಎಂದರೆ ಸಾಮಾನ್ಯವಾಗಿ ಹೂಳು ತೆಗೆಯುವುದು, ಏರಿಗಳಲ್ಲಿ ಬಿರುಕು ಉಂಟಾದರೆ ಸರಿಪಡಿಸುವುದು, ಕೆರೆಯ ಕೊಳವೆಯಲ್ಲಿ ದೋಷವಿದ್ದರೆ ಸರಿಪಡಿಸುವುದು. ಇವು ಕೆರೆಗೆ ತೊಂದರೆ ನೀಡುತ್ತವೆ. ಅದ್ದರಿಂದ ಕಾಲಕಾಲಕ್ಕೆ ಇವನ್ನು ಸರಿಪಡಿಸಲು ವಿಶೇಷ ಹಣವನ್ನು ಮೀಸಲಿಡಲಾಗುತ್ತಿತ್ತು. ಪ್ರತಿವರ್ಷವೂ ಕೆರೆಯಿಂದ ಹೊಲಸನ್ನು ತೆಗೆದು ಸ್ವಚ್ಚಗೊಳಿಸುವ ವ್ಯಕ್ತಿಗಳಿಗೆ ಭೂಮಿಯನ್ನು ಕೊಡುಗೆಯಾಗಿ ನೀಡಲಾಗುತ್ತಿತ್ತು. ನೀರಾವರಿಯ ಹಕ್ಕುಗಳ ಕುರಿತು ಹಳ್ಳಿಹಳ್ಳಿಗಳ ನಡುವೆ ವಿರಸವುಂಟಾದರೆ ಪಂಚಾಯಿತಿಯ ಮೂಲಕ ಅದನ್ನು ಪರಿಹರಿಸಲಾಗುತ್ತಿತ್ತು. ಹಂಪಿ ಹಾಗು ಅದರ ಸುತ್ತಗಲಕ್ಕೂ ಸಾವಿರಾರು ಕೆರೆಗಳು ವಿಜಯನಗರದ ಅರಸರ ಕಾಲದವೆಂದು ಶಾಸನಗಳಿಂಧ ಕಂಡು ಬರುವುದರಿಂದ ರಾಜರು ನೀರಾವರಿಗೆ ಯಾವ ರೀತಿಯ ಪ್ರೋತ್ಸಾಹ ನೀಡುತ್ತಿದ್ದರೆಂಬುವುದು ಕಂಡುಬರುತ್ತದೆ. ಕೆರೆಯ ಉಪಯೋಗ ಕೇವಲ ವ್ಯವಸಾಯಕ್ಕಾಗಿಯೇ ಮೀಸಲಾಗಿರಲಿಲ್ಲ. ಮನುಷ್ಯನ ಬದುಕಿಗೆ ಪ್ರಮುಖವಾದ ಒಂದು ಅಂಗವಾಗಿದ್ದತ್ತೆನ್ನಬಹುದು. ವಿಜಯನಗರದ ಅರಸರ ರಾಣಿಯರೂ ಅವರ ಹೆಸರಿನಲ್ಲಿ ಕೆರೆಗಳನ್ನು ನಿರ್ಮೀಸಿರುವುದು ಕಂಡುಬರುತ್ತದೆ. ಕೇಷ್ಣದೇವರಾಯನನ್ನು ತನ್ನ ಆಮುಕ್ತಮೌಲ್ಯದಲ್ಲಿ “ರಾಜನು ಕೆರೆಗಳನ್ನು ನಿರ್ಮಿಸಿ, ನಾಲೆಗಳನ್ನು ತೋಡಿಸಿ, ನೀರಾವರಿ ಸೌಲಭ್ಯವನ್ನು ಸಾಮಾನ್ಯ ಜನತೆಗೂ ಒದಗಿಸಬೇಕು” ಎಂದು ಹೇಳುತ್ತಾನೆ. ಕರ್ನಾಟಕದಲ್ಲಿ ಬೇರೆ ಬೇರೆ ಭಾಗಗಳಲ್ಲಿ ಕಂಡುಬರುವ ಅನೇಕ ನೀರಾವರಿ ಕಾರ್ಯಗಳನ್ನು ಅವನ ಕಾಲದಲ್ಲಿ ಮಾಡಿಸಿದನೆಂಬುದಕ್ಕೆ ಆಧಾರಗಳಿವೆ.

ಮೇಲಿನ ರೀತಿಯಲ್ಲಿ ನೀರಾವರಿ ವ್ಯವಸ್ಥೆಯು ಇದ್ದರೂ ಮೂಲ ಮಳೆಯೇ ಆಗಿರುತ್ತಿತ್ತು. ಮಳೆಯು ಸಕಾಲಕ್ಕೆ ಬಾರದಿದ್ದರೆ ಸಾಮ್ರಾಜ್ಯದಲ್ಲಿ ಕ್ಷಾಮ, ಬರಗಾಲ, ನೆರೆ, ಬೆಳೆಯ ವಿಫಲತೆ, ಪ್ಲೇಗು ಮೊದಲಾದ ಪರಿಸ್ಥಿತಿ ಹಾಗೂ ರೋಗಗಳು ಬಂದು ಬರಡಿಸಿಲಿ ಬಡಿಯುವ ಹಾಗೆ ಬಡಿಯುತ್ತಿದ್ದವು, ಕೆರೆಯು ಎರಡೊ ಮೂರೋ ಸಾರಿ ಒಡೆದು ಹೋದರೆ ಬ್ರಾಹ್ಮಣರು ದೇವರ ಪೂಜೆ ಮಾಡಿ ಕೆರೆಗೆ ಮನುಷ್ಯ ಅಥವಾ ಪ್ರಾಣಿ ಬಲಿ ಕೊಡಲು ಹೇಳುತ್ತಿದ್ದರು. (ಮನುಷ್ಯರಾದರೆ ಮುತ್ತೈದೆಯಾಗಿರುವ ಹೆಂಗಸೇ ಆಗಬೇಕಿತ್ತು) ಅದರಂತೆ ನಡೆಸಲಾಗುತ್ತಿತ್ತೆಂದು ಪೇಸ್ ಹೇಳಿರುತ್ತಾನೆ. ನರಬಲಿಗೆ ಅಸ್ಪೃಶ್ಯರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಶ್ರೀಮಂತ ಸಾಮ್ರಾಜ್ಯವೆಂದು ಹೇಳಿಕೊಳ್ಳುತ್ತಿದ್ದ ವಿಜಯನಗರ ಸಾಮ್ರಾಜ್ಯದಲ್ಲಿ ಅಸ್ಪೃಶ್ಯರ ಸ್ಥಿತಿ ಚಿಂತಾಜನಕವಾಗಿತ್ತು.

ಕೃಷಿಯು ಅಂದು ಭೂಮಾಲಿಕರ ಸ್ವತ್ತಾಗಿದ್ದಿತ್ತು. ಭೂಮಿಯಲ್ಲಿ ಕೆಲಸಮಾಡಲು ಕೂಲಿಕೆಲಸಗಾರರನ್ನು, ಜೀತದಾಳುಗಳನ್ನು ನೇಮಿಸಿಕೊಳ್ಳಲಾಗುತ್ತಿದ್ದಿತು. ಕೂಲಿ ಕೆಲಸಗಾರರು ಸಾಮಾನ್ಯವಾಗಿ ಶೂದ್ರ ಜಾತಿಗಳಿಗೆ ಸೇರಿದವರಾಗಿದ್ದರು. ಶಾಸನಗಳಲ್ಲಿ ಇವರನ್ನು ಸ್ಪಷ್ಟವಾಗಿ ಹೊಲೆಯಲು ಮತ್ತು ಮುಲದ್ದು ಎಂದು ಕರೆದಿರುವುದು ಕಂಡು ಬರುತ್ತದೆ. ಇವರೆಲ್ಲರೂ ಸಹ ಅಸ್ಪೃಶ್ಯ ಜಾತಿಗೆ ಸೇರಿದವರಾಗಿರುತ್ತಿದ್ದರು. ಅಂದು ಇವರನ್ನು ಚಂಡಾಲರು, ಸಂಭೋಳಿಗಳು ಹಾಗೂ ಪಂಚಮರೆಂದು ಹೆಚ್ಚಾಗಿ ಕರೆಯಲಾಗುತ್ತಿತ್ತು.

ಕೃಷಿಯಲ್ಲಿನ ಜಾತಿಗಳು

ಶಾಸನಗಳಲ್ಲಿ ಕಂಡುಬರುವಂತೆ ಶೂದ್ರರು, ಗೌಡರು ಅಥವಾ ಒಕ್ಕಲಿಗರು ಕೊಲೆಯರು, ಮಾದಿಗರು, ಮೇಲು ಮತ್ತು ಕೆಳಜಾತಿಗಳೆಂಬ ಉಪವಿಧಾನಗಳು ಹಲವಿದ್ದವು. ಇವರೆಲ್ಲರ ಪ್ರಧಾನ ವೃತ್ತಿಯೇ ಕೃಷಿಯಾಗಿದ್ದಿತ್ತು. ಒಕ್ಕಲಿಗರು ಅಥವಾ ಗೌಡರು ನೆಲವನ್ನು ಉಳುಮೆ ಮಾಡಿಸುವವರಾಗಿದ್ದರು. ಅಂದಿನ ಕೃಷಿಯು ಇವರ ಆರ್ಥಿಕ ವ್ಯವಸ್ಥೆಯ ಮೇಲೆ ನಿಂತಿತ್ತೆಂದು ಹೇಳಬಹುದು. ಹೊಲೆಯರು ಕೃಷಿ ಕಾರ್ಮಿಕರಲ್ಲಿ ಪ್ರಮುಖರಾದವರಾಗಿದ್ದರು. ಇವರು ಹುಟ್ಟು ಸಾವುಗಳೆರಡೂ ಮಣ್ಣಿನೊಂದಿಗೆ ನಿಕಟ ಸಂಪರ್ಕ ಹೊಂದಿತ್ತು.

ಭೂಕಂದಾಯ

ವಿಜಯನಗರ ಸಾಮ್ರಾಜ್ಯದ ಭೂಕಂದಾಯ ವ್ಯವಸ್ಥೆಯಲ್ಲೂ ಎರಡು ರೀತಿಯ ಪದ್ಧತಿಗಳಿದ್ದವು. ಅ. ಕಂದಾಯ ನಿಗದಿ, ಆ. ಕಂದಾಯ ವಸೂಲಿ. ಭೂಕಂದಾಯ ನಿಗದಿಯ ಯಾವುದೇ ಪದ್ಧತಿಯಲ್ಲಿ ಮೊದಲನೆಯ ತತ್ವವನ್ನು ಕೃಷಿಕನು ಕೊಡಬೇಕಾಗಿದ್ದ ತೆರಿಗೆಯನ್ನು ಮುಖ್ಯವಾಗಿ ಮಣ್ಣಿನ ವರ್ಗ ಮತ್ತು ಬೇಸಾಯದ ಪರಿಸ್ಥಿತಿಗಳನ್ನು ಆಧಾರವಾಗಿಟ್ಟುಕೊಂಡು ನಿರ್ಧರಿಸಲಾಗುತ್ತಿತ್ತು. ಇದಕ್ಕಾಗಿಯೇ ಬೇಸಾಯದ ಭೂಮಿಯನ್ನು ಈ ಕೆಳಕಂಡಂತೆ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿತ್ತು.

ಅ. ಕಡಾರಂಬ (ಒಣಬೇಸಾಯ)
ಆ. ನೀರಾರಂಬ (ಗದ್ದೆ ಬೇಸಾಯ)
ಇ. ತೋಟಾರಂಬ (ತೋಟದ ಬೇಸಾಯ)
ಈ. ಕುಮರಿ (ಸ್ಥಳವನ್ನು ವರ್ಗಾಯಿಸುವ ಬೇಸಾಯ)

ಶಾಸನಗಳಲ್ಲಿ ಇವುಗಳನ್ನು ಬೇರೆ ಬೇರೆಯಾಗಿ ಉಲ್ಲೇಖಿಸಿರುವುದರಿಂದ ಅವಕ್ಕೆ ಬೇರೆ ಬೇರೆ ದರಗಳಲ್ಲಿ ಕಂದಾಯ ನಿಗದಿ ಮಾಡಲಾಗುತ್ತಿತ್ತೆಂದು ಕಂಡುಬರುತ್ತದೆ. ರೈತರು ಉತ್ಪಾದಿಸಿದ ೧/೬ ಭಾಗವನ್ನು ತೆರಿಗೆಯಾಗಿ ಕೊಡಬೇಕಾಗಿತ್ತು. ವಿದೇಶಿಯರು ತಮ್ಮ ಬರವಣಿಗೆಯಲ್ಲಿ ಹೇಳೀರುವ ವರ್ಣನೆಯು ವಿಜಯನಗರದಲ್ಲಿ ಇದ್ದದ್ದೆ ಆಗಿದ್ದರೆ ಮೇಲಿನ ತೆರಿಗೆಯ ಪ್ರಮಾಣವು ಸುಳ್ಳೆಂದು ಹೇಳಬಹುದು. ತೆರಿಗೆಯನ್ನು ದರ, ಸುಂಕಣೆ ಎಂದೂ ಕರೆಯಲಾಗುತ್ತಿತ್ತು. ಗ್ರಾಮದ ರೈತರು ಮತ್ತು ಇತರ ನಿವಾಸಿಗಳು ತಮ್ಮ ಮನೆಗಳ ಮೇಲೆ ತೆರಿಗೆ ಕೊಡಬೇಕಾಗಿತ್ತು. ಅದನ್ನು ಹೊದಕೆ ಅಥವಾ ಹೊದಿಸಿದ ಮಾಡು, ಬಿದರ ಮತ್ತು ಮಹೆವನ ಎಂದು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಿದ್ದರು. ಅಂದಿನ ಕಾಲದಲ್ಲಿ ರೈತರ ಜೀವನಾಡಿಯೇ ಆಗಿದ್ದ ನೇಗಿಲು, ಎತ್ತುಗಳು, ಬಂಡಿಗಳು, ಬಿತ್ತನೆ ಬೀಜಗಳೆಲ್ಲವೂ ತೆರಿಗೆಯಿಂದ ಮುಕ್ತವಾಗಿರುತ್ತಿರಲಿಲ್ಲ. ದನಗಳನ್ನು ಮೇಯಿಸುವ ಹುಲ್ಲುಗಾವಲು ಪ್ರದೇಶಕ್ಕೂ ತೆರಿಗೆ ಕೊಡಬೇಕಾಗಿದ್ದಿತ್ತೆಂದು ಆಧಾರಗಳಿಂದ ತಿಳಿದುಬರುತ್ತದೆ.

.೨. ವಿಜಯನಗರ ಕಾಲದಲ್ಲಿ ತೂಕ ಮತ್ತು ಆಳತೆ

ತೂಕ ಮತ್ತು ಆಳತೆಗಳೆರಡೂ ಸಹ ಒಂದೇ ಅರ್ಥವನ್ನು ಸೂಚಿಸುವಂತಿದೆ. ಬೆಳೆಗಳನ್ನು ರೈತರು ಬೆಳೆದಾದ ಮೇಲೆ ಫಸಲನ್ನು ಅಳತೆ ಮಾಡುವುದು ಒಂದು ಪ್ರಮುಖವಾದ ಕೆಲಸವೆ. ಈ ಇಳುವರಿಯ ಆಧಾರದ ಮೇಲೆಯೇ ಭೂಮಿಯ ಫಲವತ್ತತೆಯನ್ನು ಗುರುತಿಸಲಾಗುತ್ತಿತ್ತು ಹಾಗೂ ಗದ್ದೆಗಳ ವಿಸ್ತಾರವನ್ನು ಸೂಚಿಸಲೂ ಸಹ ಸಾಧನಗಳಾಗಿದ್ದವು. ವಿಜಯನಗರದ ಕಾಲದಲ್ಲಿ ಪ್ರಮುಖವಾಗಿ ಬಳಕೆಯಲ್ಲಿದ್ದ ಅಳತೆ ಮತ್ತು ತೂಕದ ವ್ಯವಸ್ಥೆಯನ್ನು ಸಾಮಾನ್ಯ ಜನತೆಯಿಂದ ಪ್ರಾರಂಭವಾಗಿ ರಾಜಾಸ್ಥಾನದ ವರೆಗೆ ಏಕರೀತಿಯಲ್ಲಿತ್ತು. ಅಂದು ಕಂಡುಬರುತ್ತಿದ್ದ ಅಳತೆಯ ವಿಧಾನಗಳನ್ನು ಈ ಕೆಳಕಂಡಂತೆ ನೋಡಬಹುದಾಗಿದೆ.

ಅವುಗಳೆಂದರೆ ಅರ್ಕಾಲು (ಒಂದು ಪಾವಿನ ಅರ್ಧಭಾಗ), ಅಗ್ರ (ದಾನ ಕೊಡುವಾಗ ನೀಡುವ ಆಹಾರದ ಒಂದು ಅಳತೆ), ಅಗ್ರ (ಒಂದು ಪಲ್ಲದ ತೂಕ), ಅಚ್ಚ (ಎಂಬತ್ತು ಗುಲಗಂಜಿಯ ತೂಕ), ಅಟವಿ (ಅರ್ಧ ಸೇರಿನ ಅಳತೆ), ಅಡ್ಡಿ (ಧಾನ್ಯಗಳಲ್ಲಿ ಅಳೇಯುವ ಮಾಪನ) ಅಡ್ಡಿ ಅಡ್ಡಿಡಿ ಹದಿಣಾರು ಸೇರುಗಳ ಮಾಪನ), ಇಕ್ಕಳ (ಕಾಳು ತುಂಬಿದ ಎರಡು ಚೀಲಗಳ ಮಾಪನ), ಅಳ್ಮೊಟ್ಟೆ (ಒಬ್ಬ ವ್ಯಕ್ತಿಯು ಹೊರಬಹುದಾದಷ್ಟು ಅಳತೆಯ ಚೀಲ), ಐಗಳ (ಕಾಳು ತುಂಬಿದ ಐದು ಕೊಳಗಗಳ ಮಾಪನ), ಕಂಡಗ (ಇಪ್ಪತ್ತು ಕೊಳಗ ಧಾನ್ಯದ ಮಾಪನ), ಕಂಡಿ (ಹತ್ತು ಮಣದ ಅಳತೆ) ಕಮ್ಮಿ (ಭೂಮಿಯನ್ನು ಅಳತೆ ಮಾಡುವ ಒಂದು ಪ್ರಮಾಣ), ಕವಳಿಗೆ (ವೀಳೆದೆಲೆ ಲೆಕ್ಕ ಹಾಕಲು ಬಳಸುತ್ತಿದ್ದ ಮಾಪನ), ಕಳರುಗಣಿಗ (ಭೂಮಿಯನ್ನು ಅಳೆಯಲು ಬಳಸುತ್ತಿದ್ದ ಒಂದು ಅಳತೆಯ ಕೋಲು) ಕಾಡಿ (ಭತ್ತದ ಅಳತೆಯ ಪ್ರಮಾಣ), ಕುಂಟೆ (ಒಂದು ಎಕರೆ ಜಮೀನಿನ ನಲವತ್ತನೇ ಒಂದು ಭಾಗ), ಕುಳ (ನಾಲ್ಕು ಬಳ್ಳಗಳ ಒಂದು ಅಳತೆ), ತೊಂಬ (ಸುಮಾರು ಇಪ್ಪತ್ತು ಚೀಲ ಕಾಳು ಹಿಡಿಯುವ ಬಿದಿರಿನಿಂದ ತಯಾರಿಸಿದ ಅಳತೆಯ ಪ್ರಮಾಣ), ಕೈ (ನೂರು ವೀಳೆದೆಲೆಗಳ ಕಟ್ಟು), ಕೊಟ್ಣ (ಇಪ್ಪತೊಂದು ಕೊಳಗ), ಕೊರೆ (ಅರ್ಧ ತುಂಬಿದ ದವಸದ ಚೀಲ ಅಥವಾ ಬಿದಿರಿನ ವಸ್ತುಗಳು), ಕೊಳಗ (ಧಾನ್ಯವನ್ನು ಅಳಯುವ ಒಂದು ಪ್ರಮಾಣದ ಸಾಧನ), ಗಜ (ಭೂಮಿಯನ್ನು ಅಳೆಯುವಾಗ ಬಳಸುವ ಅಳತೆ ಪದ್ಧತಿ), ಗಳಿಗೆ (ಧಾನ್ಯ ಸಂಗ್ರಹಿಸಲು ಈಚಲು ಬರಲಿನಿಂದ ತಯಾರಿಸಿದ್ದ ಒಂದು ಸಾಧನ), ಗಾತ್ರ (ಒಂದು ಸಾವಿರ ವೀಳೆದೆಲೆಯ ಕಟ್ಟು), ಗುಲಿಕಲ್ಲು (ಜಮೀನುಗಳನ್ನು ಅಳತೆ ಮಾಡಿ ಎಲ್ಲೆಯನ್ನು ಸೂಚಿಸಲು ನೆಡುತ್ತಿದ್ದ ಕಲ್ಲು) ಗುಮ್ಮಿ (ಏಳರಿಂದ ಎಂಟು ಚೀಲ ಧಾನ್ಯ ಸಂಗ್ರಹಿಸಿತ್ತಿದ್ದ ಮರದ ಪಾತ್ರ),ಬಿಟ್ಟಿ (ಒಂದು ನೂರು ವೀಳೆದೆಲೆಯ ಕಟ್ಟು), ಚಾರಿ (ಅಳತೆಯ ಗಡಿಗೆ) ಚಿಂಚಾಳು (ವಸ್ತುಗಳನ್ನು ತೂಕ ಮಾಡಲು ಬಳಸುತ್ತಿದ್ದ ತಕ್ಕಡಿ), ಚೀರಿ (ನೀರಾವರಿ ಭೂಮಿಯನ್ನು ಅಳೆಯಲು ಬಳಸುತ್ತಿದ್ದ ಅಳತೆಯ ಮಾಪನ), ತೂಗೇಕೋಲು (ದವಸ ಧಾನ್ಯಗಳನ್ನು ತೂಕ ಮಾಡಲು ಬಳಸುತ್ತಿದ್ದ ತಕ್ಕಡಿ), ನಗ (ಹತ್ತಿಯ ಗಾತ್ರವನ್ನು ಅಳೆಯುವ ಒಂದು ಮಾನದಂಡ), ಪಡ್ಲ (ರಾಶಿಯ ಗಾತ್ರವನ್ನು ಹೇಳಲು ಬಳಸುವ ಮಾಪನ), ಪತ್ತಾರಿ (ತೆರಿಗೆ ಹಣವನ್ನು ಪಡೆಯುವವನು ಹಾಗೂ ಸಾರ್ವಜನಿಕ ದವಸಗಳನ್ನು ಅಳತೆ ಮಾಡುವವನು), ಪಲ್ಲ (ನೂರು ಸೇರು ಅಳತೆಯ ಪ್ರಮಾಣ), ಪಾವು (ಅಲತೆಯ ಸೇರಿನ ನಾಲ್ಕನೆಯ ಒಂದು ಭಾಗ) ಅರೆ ಪಾವು (ಸೇರಿನ ಎಂಟನೆಯ ಒಂದು ಭಾಗ), ಬಕ್ಕ (ನಲವತ್ತೆಂಟು ಸೇರಿನ ಅಳತೆಯ ಪ್ರಮಾಣ), ಬಳ್ಳ (ಎರಡು ಸೇರು ಅಳತೆ), ಮಣ (ತೂಕದ ಒಂದು ಪ್ರಮಾಣ ಸಾಮಾನ್ಯವಾಗಿ ಕಟ್ಟಿಗೆ ತೂಗಲು ಈ ಪದ ಬಳಸುತ್ತಿದ್ದರು), ಮಕ್ಕರಿ (ಹತ್ತು ಹನ್ನೆರಡು ಸೇರು ಹಿಡಿಸುವಷ್ಟು ದೊಡ್ಡದಾದ ಬಿದಿರಿನ ಪುಟ್ಟಿ), ಮಾನ (ಎಣ್ಣೆಯನ್ನು ಅಳೆಯುತ್ತಿದ್ದ ಅಳತೆಯ ಮಾಪನ), ಮಾರು (ಮನುಷ್ಯ ತನ್ನ ಎರಡು ಕೈಗಳನ್ನು ಚಾಚಿದಾಗ ಅವನ ಎರಡು ಕೈ ಬೆರಳುಗಳವರೆಗಿನ ಅಂತರ, ಇದನ್ನು ಹೂವಿನ ವ್ಯಾಪಾರಿಗಳು ಹೆಚ್ಚಾಗಿ ಬಳಸುತ್ತಿದ್ದರು), ಮೊಳ (ಮೊಣಕೈ ಗಂಟಿನಿಂದ ನಡುಬೆರಳಿನ ತುದಿಯವರೆಗಿನ ಅಳತೆ), ಲಿಂಗಮುದ್ರೆ ಕಲ್ಲು (ಹೊಲದ ಸೀಮೆಯನ್ನು ಗುರುತಿಸಲು ನೆಡುತ್ತಿದ್ದ ಕಲ್ಲು), ಸೇರು (ಕೊಳಗದ ನಾಲ್ಕನೇ ಒಂದು ಭಾಗ), ಸೊಲ್ಗೆ (ಅರ್ಧಸೇರಿನ ಅಳತೆ), ಹೆಡಿಗೆ (ಬಿದಿರಿನಿಂದ ಹೆಣೆದ ಅಳತೆಯ ಸಾಧನ).

ವ್ಯಾಪಾರ ವ್ಯವಹಾರಗಳನ್ನು ಕುರಿತು ವಿಚಾರ ಮಾಡುವಾಗಲಂತೂ ಸಾಧನ ಸಲಕರಣೆಗಳಾದ ತೂಕ ಅಳತೆ ಹಾಗೂ ಮಾನಗಳ ಅರ್ಥ ತಿಳಿಯುವುದು ಅತ್ಯಂತ ಅವಶ್ಯಕವೆನ್ನಿಸುತ್ತದೆ. ವಿಜಯನಗರದ ಕಾಲದಲ್ಲಿ ಸಾಮಾನ್ಯವಾಗಿ ನಾಣ್ಯಗಳನ್ನು ತೂಕಕ್ಕಾಗಿ ಉಪಯೋಗಿಸುತ್ತಿದದ್ದುದು ಉಂಟು. ಮೇಲಿನ ರೀತಿಯಲ್ಲಿ ನಮ್ಮ ಸಂಸ್ಕೃತಿಯಲ್ಲಿ ಬಹುಪ್ರಾಚೀನ ಕಾಲದಿಂದಲೂ ತೂಕ ಅಳತೆಯ ಸಾಧನಗಳ ಬಳಕೆಯಲ್ಲಿ ಇದ್ದವೆನ್ನುವುದರ ಜೊತೆಗೆ ಇಂದಿಗೂ ಉಳಿದುಕೊಂಡಿವೆ. ವಿಜಯನಗರದ ಕಾಲದ ಈ ತೂಕ ಅಳತೆಯನ್ನು ತಿಳಿಯಲು “ಪ್ರೌಢರಾಯನ ಕಾವ್ಯ” ತುಂಬ ಉಪಯುಕ್ತವಾಗಿದೆ. ಮೇಲೆ ಸೂಚಿಸಿರುವ ಅಳತೆಯ ಮಾಪನವು ನಮ್ಮಲ್ಲಿ ಮೆಟ್ರಿಕ್ ಪದ್ಧತಿಯು ಬಳಕೆಯಲ್ಲಿ ಬರುವವರೆಗೂ ರೂಢಿಯಲ್ಲಿದ್ದವು. ಈಗ ಅವುಗಳ ಬಳಕೆ ಕಡಿಮೆಯಾಗಿದೆ ಎನ್ನಬಹುದು. ಅಂದಿನ ಕಾಲದ ಅಳತೆಯ ಸಾಧನಗಳ ವಿವರವನ್ನು ಮೇಲೆ ವಿವರಿಸಿರುವ ಅಳತೆಯ ಸಾಧನಗಳ ಕುರಿತು ಡಾ. ಸಾಲೆತೊರೆಯವರು ಪಾರಿಭಾಷಿಕ ಸೂಚಿಯಲ್ಲಿ ಅಳತೆಯ ಮಾಪನಗಳನ್ನು ವಿವರಿಸಿದರೆ ರಾಜ್ಯಾದಿತ್ಯನು ಬೇರೆ ಬೇರೆ ಅಳತೆ ಮತ್ತು ತೂಕಗಳ ಪಟ್ಟಿಯನ್ನು ತನ್ನ “ವ್ಯವಹಾರಗಣಿತ”ದಲ್ಲಿ ಸಂಕ್ಷಿಪ್ತವಾಗಿ ವಿವರಿಸಿತ್ತಾನೆ.

ಇತ್ತೀಚಿನ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಭಿವೃದ್ಧಿ ವಿಭಾಗವು ’ಕೃಷಿ ಪದ ಕೋಶ’ ಎಂಬುವ ಮಹತ್ವದ ಯೋಜನೆಯನ್ನು ಕೈಗೊಂಡು ಡಾ. ಕೆ.ವಿ ನಾರಾಯಣರವರ ಸಂಪಾದಕತ್ವದಲ್ಲಿ ಹೊರತಂದಿರುವ ಕೃತಿಯಲ್ಲಿ ಮೇಲಿನ ಅಳತೆಯ ವಿಧಾನಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಈ ಪದಕೋಶವು ಪ್ರಮುಖ ಇತಿಹಾಸ ಗ್ರಂಥವಾಗುವುದರಲ್ಲಿ ಎರಡು ಮಾತಿಲ್ಲ.

.೩. ಕೃಷಿಯ ಉಪಕರಣಗಳು

ವಿಜಯನಗರದ ಜನರು ತಾವು ಜೀವನದ ಆಧಾರವನ್ನಾಗಿ ನಂಬಿದ್ದ ಕೃಷಿಯನ್ನು ಕೈಗೊಳ್ಳಲು ವಿಧವಿಧವಾದ ಉಪಕರಣಗಳನ್ನು ಬಳಸುತ್ತಿದ್ದರು. ಈ ಉಪಕರಣಗಳನ್ನು ಮನುಷ್ಯನು ತನ್ನ ಕೈಗಳ ಮುಂದುವರಿಕೆಯಾಗಿ ನಿರ್ಮಿಸಿಕೊಂಡವು ಎಂದು ಕರೆಯಬಹುದು. ಕೃಷಿಯ ತಂತ್ರಜ್ಞಾನದ ಮುಖ್ಯ ನೆಲೆಗಳು ಈ ಉಪಕರಣಗಳ ವಿನ್ಯಾಸದಲ್ಲಿ ಸಿದ್ಧಗೊಳಿಸುವ ವಸ್ತುಗಳ ಬಳಕೆಯಲ್ಲಿ ಮೊದಲು ಕಂಡುಬಂದಿತ್ತೆಂದೂ ನಂತರ ಕುಯ್ಯುವ ಚಿಕ್ಕ ಕುಡುಗೋಲಿನಿಂದ ಹಿಡಿದು ಹಲವಾರು ಸಂಕೀರ್ಣ ಅಂಶಗಳಿರುವ ನೇಗಿಲು, ಗಾಡಿ (ಬಂಡಿ)ಗಳವರೆಗೆ ವ್ಯಾಪಿಸಿಕೊಂಡಿವೆ. ವಿಜಯನಗರದ ಜನರು ದಿನನಿತ್ಯದ ಬಳಕೆಗೆ ಬಳಸುತ್ತಿದ್ದ ಹಾಗೂ ವ್ಯವಸಾಯಕ್ಕೆ ಉಪಯೋಗಿಸುತ್ತಿದ್ದ ಉಪಕರಣಗಳು ಕೆಳಕಂಡವುಗಳೆಂದು ತಿಳಿಯಬಹುದಾಗಿದೆ. ಇವುಗಳನ್ನು ತಿಳಿಯಲು ಶಾಸನಗಳು ಪ್ರಮುಖ ಆಧಾರಗಳಾಗಿವೆ. ನಂತರ ದೇಶೀ ಹಾಗೂ ವಿದೇಶೀ ಸಾಹಿತ್ಯಗಳು ನೆರವಾಗುತ್ತವೆ. ಅಂದು ಬಳಕೆಯಲ್ಲಿದ್ದ ವಸ್ತುಗಳು ಇಂದಿಗೂ ನಮ್ಮ ಹಳ್ಳಿಗಳಲ್ಲಿ ಕಾಣಬಹುದು (ಇಂದು ಆಧುನಿಕ ಕೃಷಿ ಪದ್ಧತಿಯಿಂದಾಗಿ ಇವು ನಷ್ಟವಾಗುತ್ತಿವೆ). ವಿಜಯನಗರಕ್ಕಿಂತಲೂ ಹಿಂದೆಯೇ ಈ ಉಪಕರಣಗಳಿದ್ದವೆಂದು ಕುಮಾರ ವಾಲ್ಮೀಕಿಯಲ್ಲಿ ಕಂಡು ಬರುತ್ತದೆ. ಕನಕದಾಸರು ತಮ್ಮದೊಂದು ಕೀರ್ತನೆಯಲ್ಲಿ “ಹೃದಯ ಹೊಲವನು ಮಾಡಿ, ತನುವ ನೇಗಿಲ ಮಾಡಿ…., ಎರಡೆತ್ತಿ ಹೂಡಿ….., ಮಿಣಿಯ ಕಣ್ಣಿ ಹಗ್ಗವ ಮಾಡಿ, ಧಾನ್ಯವ ನೋಡಿ ಬಿತ್ತರಯ್ಯ…..” ಎಂಬ ಸಾಲುಗಳು ಅಂದಿನ ಉಪಕರಣಗಳ ಬಗ್ಗೆ ಬೆಳಕನ್ನು ಚೆಲ್ಲುತ್ತದೆ.

ಅಂದಿನ ಪ್ರಮುಖ ಕೃಷಿ ಉಪಕರಣಗಳೆಂದರೆ ಕುಂಟೆ (ಫಸಲಿನ ಮಧ್ಯೆ ಇರುವ ಕಳೆಯನ್ನು ತೆಗೆಯುವ ಉಪಕರಣ. ಇದರಲ್ಲಿ ಐದ್ಗೇಣಿನ ಗುಂಟಿ, ಕಿರಿಗುಂಟೆ, ಕೈಗುಂಟೆ, ತಲೆಗುಂಟೆ, ಬಾರುಗಂಟೆ ಎಂದು ಕರೆಸಿಕೊಳ್ಳುತ್ತಿದ್ದ ವಿವಿಧ ರೀತಿಯ ಕುಂಟಿಗಳಿದ್ದವು) ಕುಡ (ಕುಂಟೆಗೆ ಜೋಡಿಸುವ ಕಬ್ಬಿಣದ ಪಟ್ಟಿ), ಕುಡುಗೋಲು (ಬಾಗಿದ, ಒಳ ಅಂಚಿನಲ್ಲಿ ಹರಿತವುಳ್ಳ ಕತ್ತಿ), ಕುದ್ರಕೆಳಿ (ನೇಗಿಲ ಉದ್ದ ಪಟ್ಟಿ ಮತ್ತು ನೇಗಿಲನ್ನು ಜೋಡಿಸುವ ಕೀಲು), ಕುಪ್ಪೆಚಕ್ಕೆ (ಹುಲ್ಲಿನ ಮೆದೆಯನ್ನು ತಟ್ಟುವುದಕ್ಕೆ ಬಳಸುವ ಮರದ ಸಾಧನ), ಕುಮ್ಮು (ಎತ್ತಿನ ಗಾಡಿಯ ಚಕ್ರದ ಮಧ್ಯಭಾಗದಲ್ಲಿರುವ ಗುಂಭ), ಕುರಡಿ (ಕೊಡಲಿ), ಕುರಪಿ (ಕಸ ಕೀಳಲು ಬಳಸುತ್ತಿದ್ದ ಚಿಕ್ಕ ಕತ್ತಿ), ಕುರ‍್ಗೊಂಬು (ಗೊಬ್ಬರ ತುಂಬಿಡುತ್ತಿದ್ದ ಒಂದು ಸಾಧನ). ಕೈತಲೆ (ತೆಂಗಿನ ಮರ ಹತ್ತುವವನು ಕೈಗಳಿಗೆ ಹಾಕಿಕೊಳ್ಳುತ್ತಿದ್ದ ಒಂದು ಸಾಧನ), ಕೊಂಗ್ಲಿ (ತೆಂಗಿನಕಾಯಿ ಕೀಳಲು ಬಳಸುವ ಉಪಕರಣಕ್ಕೆ ಜೋಡಿಸುವ ಕಬ್ಬಿಣದ ತುದಿ), ಕೊಂಗ್ಲಿಕಟ್ಗೆ (ಕಣದಲ್ಲಿ ತೆನೆ ತಿರುವಿ ಹಾಕಲು ಬಳಸುವ ಸಾಧನ), ಕೊಟ್ಟ (ದನಗಳಿಗೆ ಔಷಧಿ ಕುಡಿಸಲು ಬಳಸುತ್ತಿದ್ದ ಸಾಧನ) ಕೊಡ್ಡ (ನೆಲಸಮ ಮಾಡಲು ಬಳಸುವ ಹಲಗೆ), ಕೊಡ್ಲಿ (ಸೌಧೆ ಸೀಳುವುದಕ್ಕೆ ಬಳಸುವ ಕಬ್ಬಿಣದ ಸಾಧನ ಇದನ್ನು ಕೊಡ್ಲಿ, ಗೊಡ್ಲಿ, ಕ್ವಡ್ಲಿ, ಚಿಕ್ಕದಾದುದಕ್ಕೆ ಪಿಚ್ಗೊಡ್ಲಿ, ಬಾಯಿಕೊಡ್ಲಿ, ಕೈಕೊಡಲಿ ಎಂದು ಅದರ ಆಕಾರಕ್ಕೆ ಅನುಗುಣವಾಗಿ ಕರೆಯುತ್ತಿದ್ದರು), ಅರ್ಗತ್ತಿ (ಬಿದಿರಿನಿಂದ ನಿರ್ಮಿಸಿದ್ದ ತೊಲೆ), ಅಟ್ಣೆ (ಬೆಳೆಯನ್ನು ಕಾಪಾಡಲು ಬೆಳೆಯ ಮಧ್ಯೆ ಹಾಕಿಕೊಳ್ಳುತ್ತಿದ್ದ ಮಂಚ), ಅಡ್ಡೆ (ನೀರು ಹಾಗೂ ಇನ್ನೀತರ ವಸ್ತುಗಳನ್ನು ತರಲು ಬಳಸುತ್ತಿದ್ದ ಉಪಕರಣ), ಅರ (ಕುಡುಗೋಲು ಮತ್ತಿತರ ವಸ್ತುಗಳನ್ನು ಮಸೆಯಲು ಬಳಸುವ ಉಪಕರಣ), ಉತ್ತರಾಣಿ ಕಟ್ಗೆ (ಕಣದಲ್ಲಿ ಧಾನ್ಯವನ್ನು ಸ್ವಚ್ಚ ಮಾಡಲು ಬಳಸುತ್ತಿದ್ದ ಕಡ್ಡಿ), ಉದ್ದಿಗಿ (ಕುಂಟೆ ಎಳೆಯಲು ಸಹಾಯಕವಾಗುವಂತೆ ಕುಂಟೆಗೆ ಜೋಡಿಸಿರುವ ಉದ್ದನೆಯ ಬೊಂಬಿನ ಕಟ್ಟಿಗೆ), ಉಪ್ಪಮಣೆ (ಭತ್ತದ ರಾಶಿ ಮಾಡಲು ಬಳಸುತ್ತಿದ್ದ ಸಾಧನ), ಉರ‍್ಗಪತ್ತಿ (ವೀಳೆಸೆಲೆಗಳನ್ನು ಬಳ್ಳಿಯಿಂದ ಬೇರ್ಪಡಿಸಲು ಉಪಯೋಗಿಸುತ್ತಿದ್ದ ಸಾಧನ), ಉಳಿ (ಕಳೆತೆಗೆಯುವ ಸಾಧನ), ಉಳ್ಳ (ಹಂದಿಯನ್ನು ಹಿಡಿಯಲು ಬಳಸುವ ಸಾಧನ), ಎಣೆ (ಭತ್ತದ ಹುಲ್ಲು ತುಳಿಸಿ ಹುಲ್ಲನ್ನು ಮುರುಯಲು ಹಸುಗಳಿಂದ ಜೋಡಿಸಲ್ಪಟ್ಟ ಒಂದು ಸನ್ನಿವೇಶ), ಏಣಿ (ಎತ್ತರದ ಭಾಗಕ್ಕೆ ಹತ್ತಲು ಬಿದಿರಿನಿಂದ ನಿರ್ಮಿಸಿಕೊಂಡ ಸಾಧನ), ಏತ (ಬಾವಿಯಿಂದ ನೀರನ್ನು ಮೇಲೆತ್ತುವ ಸಾಧನ) ಓನ್ಕೆ (ತೆನೆ ಬಡಿಯಲು ಹಾಗೂ ಭತ್ತ ರಾಗಿಗಳನ್ನು ಕುಟ್ಟಿ ಹಸನು ಮಾಡಲು ಬಳಸುತ್ತಿದ್ದ ಪ್ರಮುಖ ಸಾಧನ), ಕವಣೆ (ಕಲ್ಲನ್ನು ಇಟ್ಟು ತಿರುಗಿಸಿ ಬೀಸಿ ಹೊಡೆಯುವುದಕ್ಕಾಗಿ ಮಾಡಿಕೊಂಡಿದ್ದ ಸಾಧನ), ಕೊಪ್ಪರಿಗೆ (ಮಣ್ಣೇರಿಸಲು ಬಳಸುತ್ತಿದ್ದ ಒಂದು ಉಪಕರಣ), ಕೊಂಬ (ಧಾನ್ಯ ಸಂಗ್ರಹಿಸಲು ಬಳಸುವ ಸಾಧನ), ಕೊಳಗ (ಧಾನ್ಯ ಶೇಖರಿಸಲು ಬಳಸುವ ಕಡಾಯಿ ಪಾತ್ರೆ), ಕೊರೆ (ಹಾರೆ), ಕೊರಂಗೆ (ತಾಳೆ ಮರದ ನೀರು ಹಾಯಿಸುವ ಒಂದು ಸಾಧನ), ಕೊಳ್ವೆ (ಬೆಂಕಿ ಊದಲು ಉಪಯೋಗಿಸುವ ಉದ್ದನೆಯ ಕಬ್ಬಿಣದ ಕೊಳವೆ), ಗಡೆ (ಬಾವಿಯ ರಾಟೆ, ಗಾಲಿ), ಗಡಾರಿ (ಗಟ್ಟಿ ನೆಲವನ್ನು ಅಗೆಯಲು ಬಳಸುವ ಉಪಕರಣವೆಂದು ಹೇಳಬಹುದು), ಗರಗಸ (ಮರ ಕೊಯ್ಯುಲು ಬಳಸುತ್ತಿದ್ದ ಹಲ್ಲುಗಳುಳ್ಳ ಒಂದು ಬಗೆಯ ಆಯುಧ), ಗಾಣ (ಎಣ್ಣೆಯನ್ನು ಅಥವಾ ರಸವನ್ನು ತೆಗೆಯುವ ಸಾಧನ), ಗಾದಿಗೆ (ಈರುಳ್ಳೀ ಸಂಗ್ರಹಣೆಗಾಗಿ ಮಾಡುವ ಗೂಡಾಗಿದ್ದಿತ್ತು), ಗಾಡಿ (ಅಂದಿನ ಕಾಲದ ಸಾರಿಗೆಯ ಪ್ರಮುಖ ಮಾರ್ಗ ಹಾಗೂ ಕೃಷಿಯ ಸಾಧನಗಳಲ್ಲಿ ಪ್ರಮುಖವಾದ ಸಾಧನ, ಇದನ್ನು ಎತ್ತು, ಕೋಣಗಳನ್ನು ಕಟ್ಟಿಕೊಂಡು ಎಳೆಸುತ್ತಿದ್ದರು), ಗುದ್ದಲಿ (ನೆಲ ಅಗೆಯಲು ಬಳಸುವ ಉಪಕರಣ, ಗುದ್ದಲಿ, ಕೋಲ್ಗುದ್ಲಿ, ಕೈಗುದ್ಲಿ, ದೊಡ್ಡಗುದ್ಲಿ, ಬಾಯ್ಗುದ್ಲಿ, ಶಿಗುದ್ಲು ಎಂದು ತನ್ನ ಆಕಾರಕ್ಕೆ ಹಾಗೂ ಉಪಯೋಗಕ್ಕೆ ತಕ್ಕಂತೆ ವಿವಿಧ ಹೆಸರುಗಳಿಂದ ಕರೆಯಲಾಗಿದ್ದ ಒಂದು ಕೃಷಿ ಸಾಧನ), ಗುಮ್ಮಿ (ಗುಡಾಣ ಅಥವಾ ಧಾನ್ಯ ತುಂಬಿಡಲು ಬಳಸುವ ಉಪಕರಣ), ಚನಾ (ಕಲ್ಲು ಒಡೆಯಲು ಬಳಸುವ ಸಾಧನ), ಜಿಗ್ಳೆ (ಮೊಳೆ), ದೋಟಿ (ಎತ್ತರದ ಮರಗಳಿಂದ ಕಾಯಿ, ಹಣ್ಣು, ಸೊಪ್ಪನ್ನು ಕೊಯ್ಯಲು ಉಪಯೋಗಿಸುತ್ತಿದ್ದ ಸಾಧನ), ನೇಗಿಲು (ನೆಲವನ್ನು ಊಳಲು ಬಳಸುತ್ತಿದ್ದ ಪ್ರಮುಖ ಸಾಧನ, ನೇಗ್ಲ, ನೇಗ್ಳ, ನೇಗಿಲ ಕಟ್ಟಿಗೆ, ನೇಗ್ಲ ತೋಟಿ, ನೇಗ್ಲಾಮಣಿ, ನೇಗ್ಲಾಮೊನೆ ಎಂದು ಏನೆಲ್ಲ ಹೆಸರುಗಳಿಂದ ಕರೆದರೂ ಅದರೊಳಗೆ ಅದನ್ನು ಸಿದ್ಧಪಡಿಸಲು ಬೇಕಾಗುವ ಪ್ರತಿಯೊಂದು ವಸ್ತುಗಳಿಗೂ ವಿವಿಧ ಹೆಸರುಗಳಿರುತ್ತವೆ), ಬಲೆ (ಕಾಡು ಪ್ರಾಣಿಗಳನ್ನು ಹಿಡಿಯಲು ಉಪಯೋಗಿಸುತ್ತಿದ್ದ ಬಲೆ), ಬಾಚಿ(ನೇಗಿಲು, ಗಾಡಿ ಮತ್ತಿತರ ಮಂದ ವಸ್ತುಗಳನ್ನು ತಯಾರಿಸಲು ಬಳಸುವ ಸಾಧನ), ಮೆರೆ (ಹುಲ್ಲನ್ನು ಸರಸಲು ಬಳಸುವ ಉಪಕರಣ), ಮಟ್ಟಗೋಲು (ಹೆಂಟೆಯನ್ನು ಬಡಿಯಲು ಬಳಸುವ ಉಪಕರಣ), ಮೇಟಿ (ಕಣದ ಮಧ್ಯೆನೆಡುವ ಕಂಬ), ಮೊರ (ಧಾನ್ಯಗಳನ್ನು ತೂರಲು ಹಾಗೂ ಮನೆಯಲ್ಲಿ ಬಳಸುವ ಬಿದಿರು), ಕೊಂಗ (ಇದು ಧಾನ್ಯವನ್ನು ತೂರಲು ಹೆಚ್ಚಾಗಿ ಬಳಸುತ್ತಿದ್ದ ಒಂದು ಸಾಧನ), ಶಿಂಬೆ (ಬುಟ್ಟಿ ಪಾತ್ರೆ ಮುಂತಾದವುಗಳ ತಳಕ್ಕೆ ಇಡುವ ಬಿದಿರಿನ ಅಥವಾ ಬಟ್ಟೆಯ ಸುರುಳಿ), ಹಗ್ಗ (ನೂಲಿನಿಂದ ಹೊಸೆದು ತಯಾರಿಸಿದ ಹುರಿ).

ಮೇಲಿನ ಎಲ್ಲಾ ಕೃಷಿಗೆ ಅವಶ್ಯಕವಾದ ಉಪಕರಣಗಳು ಅಂದಿನ ಸಂಸ್ಕೃತಿಯಲ್ಲಿ ಸೇರಿಹೋಗಿದ್ದವು. ಅಂದಿನ ಮಣ್ಣಿನ ಮಕ್ಕಳಿಗೆ ಈ ಉಪಕರಣಗಳು ಪ್ರಮುಖ ಆಧಾರವಾಗಿದ್ದವೆಂದು ಹೇಳಬಹುದು. ಈ ಉಪಕರಣಗಳನ್ನು ರಾಷ್ಟ್ರೀಯ ಹಬ್ಬಗಳಾಗಿದ್ದ ಮಹಾನವಮಿ, ದೀಪಾವಳಿ, ಯುಗಾದಿ ಹಬ್ಬಗಳಂದು ತೊಳೆದು ಪೂಜಿಸುವ ಪರಿಪಾಠ ಇದ್ದಿತು. ಇಂದಿಗೂ ಸಹ ಹಳ್ಳಿಯಲ್ಲಿ ಈ ಸಂಸ್ಕೃತಿಯನ್ನು ಗಮನಿಸಬಹುದಾಗಿದೆ.