“ಯಾಥಾ ರಾಜಾ ತಥಾ ಪ್ರಜಾ” ಎಂಬ ಹಿರಿಯ ನಾಣ್ಣುಡಿ ಎಷ್ಟೇ ಹಳೆಯದಾದರೂ ಅದು ಎಲ್ಲ ಕಾಲಕ್ಕೂ ಅನ್ವಯಿಸುವ ಮಾತೆ. ಸುಮಾರು ಮೂರು ಶತಮಾನಗಳ ಕಾಲ ಭವ್ಯವಾಗಿ ಬಾಳಿ ಬೆಳಗಿದ, ಕರ್ನಾಟಕದ ಇತಿಹಾಸದಲ್ಲಿ ಒಂದು ಚಿರಂತನ ಸ್ಥಾನವನ್ನು ಗಳಿಸಿರುವ ವಿಜಯನಗರ ಸಾಮ್ರಾಜ್ಯದಲ್ಲಿ ಅದರ ಶ್ರೇಯೋಭಿವೃದ್ಧಿಗಾಗಿ, ಸಾಮ್ರಾಜ್ಯದ ಅಭಿವೃದ್ಧಿಗಾಗಿ ಮೆರೆದ ಪಾಜರ ಪಾತ್ರ ಹಿರಿದಾದುದು. ವಿಜಯನಗರ ಸಾಮ್ರಾಜ್ಯದ ಸಮಗ್ರ ಚರಿತ್ರೆಯನ್ನು ಅದರ ಜವಾಬ್ದಾರಿಯನ್ನು ಹೊತ್ತಿದ್ದ ರಾಜ ಮಹಾರಾಜರು ಶ್ರದ್ಧೆಯಿಂದ ಕಾರ್ಯರೂಪಕ್ಕೆ ತಂದಿದ್ದುದರಿಂದ ಹಾಗೂ ತಮ್ಮ ಘನವಾದ ಧ್ಯೆಯೋದ್ದೇಶಗಳ ಸಾಧನೆಯನ್ನು ಸಾಧ್ಯವಾದಷ್ಟು ಉತ್ತಮ ರೀತಿಯಿಂದ ನೆರವೇರಿಸಿದ್ದರಿಂದ ಭಾರತದ ಚರಿತ್ರೆಯಲ್ಲಿಯೇ ಪ್ರಮುಖ ಸ್ಥಾನಗಳಿಸಿತ್ತೆನ್ನಬಹುದು. ಪ್ರಜಾಪಾಲನೆಯಲ್ಲಿ ವಿಜಯನಗರದ ಅರಸರ ದೃಷ್ಟಿಕೋನ ಹೇಗಿತ್ತು ಎಂಬುದಕ್ಕೆ ಟಿ.ವಿ. ಮಹಾಲಿಂಗರವರು ಅರಸರೂ ಅದೇ ನೀತಿಯನ್ನು ಅನುಸರಿಸಿಕೊಂಡು ಬಂದರೆಂದು ಹೇಳಿದ್ದಾರೆ.

ರಾಜಪ್ರಭುತ್ವದ ವಿಚಾರದಲ್ಲಿ ಅರಸರು ನಡೆದುಕೊಂಡ ರೀತಿ, ಹಿಂದೂ ಧರ್ಮಶಾಸ್ತ್ರಕಾರರು ಹೇಳಿರುವ (ಬ್ರಾಹ್ಮಣರು) ಸಂಪ್ರದಾಯಗಳನ್ನು ಅವರು ಎಷ್ಟರ ಮಟ್ಟಿಗೆ ಪಾಲಿಸುತ್ತಿದ್ದರು. ರಾಜ, ಮಂತ್ರಿ ಆಡಳಿತ ವರ್ಗ ಮುಂತಾದವರ ಬಗ್ಗೆ ಸಾಮಾನ್ಯ ಜನರ ಅಭಿಪ್ರಾಯ ಯಾವುದಾಗಿತ್ತು ಎಂಬ ವಿಷಯ ಕುರಿತು ಸಮಕಾಲಿನ ಕವಿಗಳು, ವಿದೇಶಿ ಪ್ರವಾಸಿಗರು ಅಲ್ಲಲ್ಲಿ ಸಂಕ್ಷಿಪ್ತವಾಗಿ ಹೇಳಿದ್ದಾರೆ. ಈ ಸಂಬಂಧ ಸಮಕಾಲೀನ ಕವಿಯು ವಿಜಯನಗರದರಸರಲ್ಲೆ ಪ್ರಖ್ಯಾತನಾದ ಕೃಷ್ಣದೇವರಾಯನು ಬರೆದಿರುವನೆಂದು ಹೇಳಲಾಗುವ ‘ಆಮುಕ್ತ ಮೌಲ್ಯದ’ ಹೆಚ್ಚು ಉಪಯುಕ್ತವಾಗಿದೆ. ವಾಸ್ತುಶಾಸ್ತ್ರವಾಗಿರುವ ಶುಕ್ರನೀತಿಯೂ ರಾಜನ ಜವಾಬ್ದಾರಿಯು ಎಷ್ಟು ದೊಡ್ಡದು, ರಾಜತ್ವದಲ್ಲಿ ಎಂತಹ ಗಹನವಾದ ತತ್ವಗಳು ಅಡಗಿದೆ, ರಾಜನು ಹೇಗೆ ಒಂದು ಯುಗದ ನಿರ್ಮಾಪಕನಾಗಿ ರಾಜ್ಯದ ಎಲ್ಲ ಆಗು – ಹೋಗುಗಳಿಗೂ ಸೂತ್ರಧಾರನಂತಿದ್ದಾನೆ ಎಂಬ ಮಹತ್ವದ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಒಬ್ಬ ರಾಜ ಎಂದೆಂದಿಗೂ ಆದರ್ಶವ್ಯಕ್ತಿಯಾಗಿರಬೇಕು. ಅವನು ತನ್ನ ನಡೆನುಡಿಗಳೆರಡರಲ್ಲಿಯೂ ಶುದ್ಧನಾಗಿ ಇತರರಿಗೆ ಆದರ್ಶಪ್ರಾಯನಾಗಿರಬೇಕು. ಅಂತಹ ಸಂದರ್ಭದಲ್ಲಿ ಮಾತ್ರ ಸಾಮ್ರಾಜ್ಯದ ಜನತೆಯು ಅವನ ಮಾತಿಗೆ ಬೆಲೆ ಕೊಡುವರು, ಹಾಗಿಲ್ಲದಿದ್ದರೆ ಜನರೇ ಅವನನ್ನು ಅನೀತಿವಂತನೆಂದು ಜರಿಯುತ್ತಾರೆ. ಈ ವಿಚಾರ ಕುರಿತು ಸೋಮನಾಥ ಕವಿಯು ತನ್ನ ಅಕೃತ ಚರಿತ್ರೆ’ ಎಂಬ ಷಟ್ಪದಿಯಲ್ಲಿ ಬರೆದಿರುವ ಕಾವ್ಯದಲ್ಲಿ ಸಂಕ್ಷಿಪ್ತವಾಗಿ ತಿಳಿಸಿದ್ದಾನೆ. ಪ್ರಜಾಪಾಲನೆಯೇ ರಾಜರ ಮುಖ್ಯ ಗುರಿಯಾಗಿರಬೇಕೆಂದು (ಪ್ರಜೆಯಂ ಪಾಳಿಸ ಬಲ್ಲೊಡಾ ತನರಸಂ) ಕೃಷ್ಣದೇವರಾಯನು ‘ಆಮುಕ್ತಮೌಲ್ಯದ’ ತಿಳಿಸುತ್ತಾನೆ.

ವಿಜಯನಗರ ಸಾಮ್ರಾಜ್ಯವು ಕನ್ನಡ ನಾಡಿನಲ್ಲಿ ಸತ್ಯದ ಬಲ ಮತ್ತು ಬೆಲೆಯನ್ನು ಮೊದಲಿನಿಂದಲೂ ಮೈಗೂಡಿಸಿಕೊಂಡಿತ್ತೆಂದು ಹೇಳಬಹುದು. ಮಹಾಕವಿಯಾದ ರಾಘವಾಂಕನು ತನ್ನ ಕೃತಿಯಾದ ಹರಿಶ್ಚಂದ್ರ ಕಾವ್ಯದಲ್ಲಿ ‘ಹರನೆಂಬುದೇ ಸತ್ಯ; ಸತ್ಯವೆಂಬುದೇ ಹರನು’ (God is truth; Truth is god) ಎಂದು ಸುಮಾರು ಎಂಟು ನೂರು ವರ್ಷಗಳ ಹಿಂದೆಯೇ ಹೇಳಿರುವುದು; ಭಕ್ತಿಭಂಡಾರಿ ಬಸವಣ್ಣನವರು “ಸತ್ಯ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ” ಎಂದು ಹೇಳಿ ಸತ್ಯ ಮಿಥ್ಯೆಗಳ ವ್ಯತ್ಯಾಸವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಹಾಗೆಯೇ ನಮ್ಮ ಕನ್ನಡ ನಾಡಿನಲ್ಲಿ ಎಲ್ಲರಿಗೂ ಪ್ರಿಯವಾದ ಹಾಗೆಯೇ ಮುಂದೆಯೂ ಆದರ್ಶಪ್ರಿಯವಾಗುವ ಗೋವಿನ ಕಥೆಯಲ್ಲಿ ಸತ್ಯದ ಹಿರಿಮೆಯು ಕಂಡುಬರುತ್ತದೆ. ಉದಾಹರಣೆಗೆ, ಹುಲಿಯ ಬಾಯಿಗೆ ತುತ್ತಾಗಲು ಸಿದ್ಧವಾಗಿದ್ದ ಗೋವು ಅದರಲ್ಲಿಯೂ ಇಲ್ಲಿ ಕನ್ನಡನಾಡಿನ ಗೋವು ಎಂದು ಹೇಳಿದರೆ ಅತಿಶಯವಾಗಲಾರದೇನೋ, ಇಲ್ಲಿ ಗೋವು ತನ್ನ ಕರುವಿಗೆ ಈ ರೀತಿ ಹೇಳುತ್ತದೆ.

ಸತ್ಯವೆಂಬುದೆ ತಾಯಿ ತಂದೆ ||
ಸತ್ಯವೆಂಬುದೆ ಬಂಧು ಬಳಗವು ||
ಸತ್ಯವಾಕ್ಯಕೆ ತಪ್ಪಿ ನಡೆದರೆ ||
ಮೆಚ್ಚನಾ ಜಗದೀಶನು ||

ಈ ಗೋವಿನ ಕಥೆಯು ಸತ್ಯ ಕೇವಲ ಮಾನವ ಜಾತಿಗೇ ಮಾತ್ರವಲ್ಲ. ಪ್ರಾಣಿಗಳಿಗೂ ಅಗತ್ಯ ಎಂಬ ಘನವಾದ ತತ್ವವನ್ನು ಬೋಧಿಸುತ್ತದೆ. ಏಕೆ ಈ ವಿಷಯ ಪ್ರಸ್ತಾಪವಾಯಿತೆಂದರೆ ವಿಜಯನಗರದ ರಾಜ, ಮಹಾರಾಜರು ಕೇವಲ ತಮ್ಮ ರಾಜ ಪರಿವಾರದವರಿಗೆ ಹಾಗು ಉನ್ನತ ವರ್ಗದವರಿಗೆ ಪ್ರತ್ಯೇಕ ಕಾನೂನುಗಳನ್ನು ಬಳಸದೆ ಸರ್ವ ಸದಸ್ಯರಿಗೂ ಏಕರೀತಿಯ ಕಾನೂನು, ಶಿಕ್ಷೆಯನ್ನು ಜಾರಿಗೆ ತಂದಿದ್ದು, ಸರ್ವ ಧರ್ಮವನ್ನು ಸಮನ್ವಯವಾಗಿ ಕಂಡಿದ್ದು ಹಾಗೂ ಸತ್ಯ – ಧರ್ಮದ ಆಧಾರದ ಮೇಲೆ ಆಳ್ವಿಕೆ ನಡೆಸಿರುವುದಕ್ಕೆ ನಿದರ್ಶನವಾಗಿ ನೀಡಲಾಗಿದೆ. ವಿಜಯನಗರ ಸಾಮ್ರಾಜ್ಯದ ಸಂಸ್ಕೃತಿಯಲ್ಲಿ ರಾಜ, ಮಹಾರಾಜರ ಪಾತ್ರವು ಜನತೆಯ ಮೇಲೆ ವಿಶಿಷ್ಟವಾದ ಪಾತ್ರ ಸಾರವಾದ ಸತ್ಯವನ್ನು ಪ್ರಮುಖವಾಗಿ ಆಶ್ರಯಿಸಬೇಕಾದದ್ದು ಅಗತ್ಯವಲ್ಲವೆ? ಸಾಮ್ರಾಜ್ಯದ ಜೊತೆಯಲ್ಲಿಯೇ ಅಹಿಂಸೆ, ಕಾರ‍್ಯಶ್ರದ್ಧೆ, ಸನೇಹಪರತೆ, ಅನುಕಂಪ, ಸಹೃದಯಭಾವ ಪರೋಪಕಾರಿ ಬುದ್ಧಿ ಮೊದಲಾದ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆಳ್ವಿಕೆ ನಡೆಸಿದರೆನ್ನಬಹುದು. ಇಂತಹ ಉದಾತ್ತ ಗುಣಗಳನ್ನು ಸಾಮ್ರಾಜ್ಯಕ್ಕೆ ಬೋಧಿಸುವ ಸಲುವಾಗಿಯೋ ಏನೋ ಎಂಬಂತೆ ರಾಜಧಾನಿಯ ತುಂಬೆಲ್ಲ ಹೊತೆಗೆ ಸಾಮ್ರಾಜ್ಯದಾದ್ಯಂತ ತಮ್ಮದೆ ಶೈಲಿಯಲ್ಲಿ ಬೃಹತ್ ದೇವಾಲಯಗಳನ್ನು ನಿರ್ಮಿಸಿ ಇಂದಿನ ಪೀಳಿಗೆಗೆ ಅದರ್ಶರಾಗಿದ್ದಾರೆ. ಅವರ ಉದ್ದೇಶ, ಉಪದೇಶಗಳನ್ನು ಸ್ಮರಿಸಿಕೊಂಡು ಆಚರಿಸುವುದು ಸಮಾಜ ಜೀವನದ ಪ್ರಗತಿಯ ದೃಷ್ಟಿಯಿಂದ, ಸಂಸ್ಕೃತಿಯ ಉಳಿವಿನ ದೃಷ್ಟಿಯಿಂದ ಅತ್ಯವಶ್ಯಕವಾಗಿದೆ.

ವಿಶಾಲವಾದ ಭರತಖಂಡದಲ್ಲಿ ನಮ್ಮ ರಾಜ್ಯವು ಅತ್ಯಂತ ಪ್ರಾಚೀನವಾದುದೆನಿಸಿದೆ. ಈ ನಾಡಿನಲ್ಲಿ ವೇದಪೂರ್ವ ಕಾಲದಿಂದಲೂ ಒಂದು ಉನ್ನತವಾದ ಸಂಸ್ಕೃತಿಯು ಬೆಳೆದು ಬಂದಿದೆಯೆಂಬುದು ಹಂಪಿ, ಆನೆಗುಂದಿ, ಸನ್ನತಿ, ತಿರುಮಕೂಡಲ ನರಸೀಪುರ, ಹೆಮ್ಮಿಗೆ, ಮೊದಲಾದ ಭೂ ಸಂಶೋಧನೆಗಳಿಂದ ಸ್ಪಷ್ಟಗೊಂಡಿದೆ. ಈ ನಾಡಿನಲ್ಲಿ ಮೊದಲು ದ್ರಾವಿಡರಿದ್ದರೆಂದೂ ಅನಂತರ ಆರ್ಯರು ಬಂದು ತಮ್ಮ ಪ್ರಭಾವ ಬೀರಿದರೆಂದೂ ಕಾಲಕ್ರಮದಂತೆ ಈ ಎರಡು ಬಣದವರೂ ತುಂಗೆ – ಭದ್ರೆಯಂತೆ, ಕಾವೇರಿ – ಕಪಿಲೆಯಂತೆ ಬೆರೆತು ಇಂದಿನ ಕನ್ನಡನಾಡಿನ ಸಂಸ್ಕೃತಿ ಉದಯಿಸಿತೆಂದೂ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಇಂದಿನ ಕರ್ನಾಟಕ ಸಂಸ್ಕೃತಿಯಲ್ಲಿ ಅದರಲ್ಲಿಯೂ ಕರ್ನಾಟಕದ ಹಿಂದೂ ಸಂಸ್ಕೃತಿಯಲ್ಲಿ ಭಕ್ತಿಪಂಥ, ತತ್ವಜ್ಞಾನಿಗಳ ಪ್ರಭಾವ, ಭೌದ್ಧ ಧರ್ಮದ ಪ್ರಭಾವ, ಜೈನರ ಅಹಿಂಸಾಧರ್ಮ, ವಚನಕಾರರ ಪ್ರಭಾವ, ಪವಾಡ ಪುರುಷರ ಪ್ರಭಾವಗಳೆಲ್ಲವೂ ಒಟ್ಟುಗೂಡಿಕೊಂಡಿರುವುದು ಕಂಡು ಬರುತ್ತದೆ. ಬೀದರ್ ನಿಂದ ಚಾಮರಾಜನಗರದವರೆವಿಗೂ ಲಕ್ಷಗಟ್ಟಲೇ ಸನಾತನ ಧರ್ಮದ ಅನುಯಾಯಿಗಳನ್ನು ನಾವಿಂದು ಕಾಣುತ್ತಿರುವುದು ಹಾಗೂ ಏಕ ಪ್ರಕಾರವಾದ ಕರ್ನಾಟಕ ಸಂಸ್ಕೃತಿಯನ್ನು ಬೀದರ್ ಕೋಟೆಯಿಂದ ಹಿಡಿದು ಮೈಸೂರು ಕೋಟೆಯವರೆವಿಗೂ ಇರುವ ಪುಣ್ಯಕ್ಷೇತ್ರಗಳಲ್ಲಿ ಒಂದೇ ವಿಧವಾದ ದೇವರ ಪೂಜಾದಿಗಳನ್ನು ನೋಡಬಹುದಾಗಿದೆ. ಈ ದೃಷ್ಟಿಯಿಂದ ಇಲ್ಲಿ ಸಂಸ್ಕೃತಿಯನ್ನು ಉಪಸಂಸ್ಕೃತಿ ಹಾಗೂ ಬಹುಸಂಸ್ಕೃತಿ ಎಂದು ವಿಭಾಗಿಸಿರುವುದು ಸರಿಯಾದ ಕ್ರಮವಲ್ಲವೆಂದು ಹೇಳಬಹುದು. ಸಂಸ್ಕೃತಿಯು ಸಾವಿರಾರು ವರ್ಷಗಳಿಂದ ಒಂದೇ ಪ್ರಕಾರವಾಗಿ ನಡೆದುಕೊಂಡು, ಆಚರಿಸಿಕೊಂಡು ಬರುತ್ತಿರುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳುವ ಸಂಗತಿಯಾಗಿದೆ ಎಂದೇ ಹೇಳಬಹುದು. ವಿವಾಹ, ನಾಮಕರಣ, ಉಪನಯನ, ಜಾತಿವ್ಯವಸ್ಥೆ ಮೊದಲಾದ ವಿಧಿ – ವಿಧಾನಗಳಲ್ಲಿಯೂ ಇವೇ ಪ್ರಕಾರದ ಆಚರಣೆಗಳನ್ನು ನಾವು ಇಂದಿಗೂ ಹೆಚ್ಚು ಹೆಚ್ಚಾಗಿಯೇ ನೋಡುತ್ತಿದ್ದೇವೆ. ಇವುಗಳೆಲ್ಲವೂ ನಮ್ಮ ಸನಾತನ ಸಂಸ್ಕೃತಿಯ ಪ್ರಭಾವವೆನ್ನಬಹುದೇನೊ?

ಹಿಂದಿನ ಕಾಲದಿಂದಲೂ ತಂದೆ, ತಾಯಿ, ಗುರು ಮತ್ತು ಅತಿಥಿಗಳಿಗೆ ಹೆಚ್ಚಿನ ಮನ್ನಣೆಯನ್ನು ಕೊಡುವ ಸಂಪ್ರದಾಯ ನಮ್ಮ ಸಮಾಜದಲ್ಲಿದೆ. ಇದಕ್ಕೆ ಮೂಲ ಕಾರಣವೆಂದರೆ “ಮಾತೃ ದೇವೋಭವ, ಪಿತೃ ದೇವೋಭವ, ಅತಿಥಿ ದೇವೋಭವ ಎಂಬುವ ವೇದವಾಕ್ಯವೆನ್ನಬಹುದು. ಇದೇ ವೇದಗಳಲ್ಲಿಯೇ ‘ಸತ್ಯಂವದ ಧರ್ಮಂಚರ’ ಎಂಬು ಮಾತುಗಳೂ ಸಹ ಇವೆ. ಸತ್ಯವನ್ನು ಹೇಳು, ಧರ್ಮವನ್ನು ಮಾಡು ಎಂದು ಇದರ ಅರ್ಥ. ಇದೇ ಅರ್ಥವನ್ನು ರಾಮಾಯಣ, ಮಹಾಭಾರತಗಳು ಸಾರುತ್ತದೆ. ಇವೆಲ್ಲವೂ ನಮ್ಮ ಸಂಸ್ಕೃತಿಯ, ಸಮಾಜದ ಜೀವನದ ಪರಿಶುದ್ದತೆಗಾಗಿಯೇ ಉದಯಿಸಿದೆ ಅನ್ನಬಹುದು. ಈ ಆಧಾರದ ಮೇಲೆ ನಮ್ಮ ನಾಡಿನ ಸಾವಿರಾರು ವರ್ಷಗಳ ಚರಿತ್ರೆಯಿಂದ ನಾವು ನಮ್ಮ ಸಂಸ್ಕೃತಿಯ ಪ್ರಭಾವವನ್ನು ಹಲವಾರು ಸನ್ನಿವೇಶಗಳಲ್ಲಿ ಅರಿಯಬಹುದಾಗಿದೆ.

ಮೇಲಿನವೆಲ್ಲವೂ ಪ್ರಾಚೀನ ರಾಜಕೀಯದಲ್ಲಿ ಕಂಡುಬರುವ ನಿರಂತರ ಕ್ರಿಯೆಗಳೆ. ಆದರೆ ರಾಜಕೀಯದ ಅಸ್ಥಿರತೆ, ಕಚ್ಚಾಟಗಳು ಮತ್ತು ಕಾಲಕಾಲಕ್ಕೆ ಬದಲಾವಣೆಗೊಳ್ಳುವುದಕ್ಕೆ ಅನುಗುಣವಾಗಿ ಜನಜೀವನವೂ ಬದಲಾಗುತ್ತಿರುತ್ತದೆ. ಯಾವ ರಾಜನೇ ಅಧಿಕಾರಕ್ಕೆ ಬರಲಿ, ಯಾವ ವಂಶವೇ ಪದಚ್ಯುತವಾಗಲಿ (ಇಂದಿನ ಮಟ್ಟಿಗೆ ಯಾವ ಪಕ್ಷದ ನೇತೃತ್ವದ ಸರ್ಕಾರವೇ ಆಳ್ವಿಕೆಗೆ ಬರಲಿ, ಅಥವಾ ಸರ್ವಾಧಿಕಾರಿ ಪದ್ಧತಿಯೇ ಜಾರಿಗೆ ಬರಲಿ) ಜನ ಜೀವನ ನಿರಂತರ ಪ್ರವಾಹದೋಪಾದಿಯಲ್ಲಿ ಒಂದೇ ರೀತಿ ವಿಕಾಸಗೊಳ್ಳಬೇಕಾದುದು ಅವಶ್ಯಕವಾಗಿದೆ. ಅದಕ್ಕೆ ತಕ್ಕ ಮಾರ್ಗವನ್ನು ವಿಜಯನಗರದ ಅರಸರು ಪ್ರಾರಂಭದಿಂದಲೇ ಕಂಡುಕೊಂಡಿದ್ದರೆಂದು ಹೇಳಬಹುದು. ಡಾ. ಎಚ್. ತಿಪ್ಪೇರುದ್ರ ಸ್ವಾಮಿಯವರು ಹೇಳುವ ಹಾಗೆ “ಪ್ರಬಲನಾದ, ಧರ್ಮಿಷ್ಟನಾದ, ಸುಸಂಸ್ಕೃತನಾದ ರಾಜ ಬಂದಾಗ ಅದರ ಫಲವಾಗಿ ಪ್ರಜೆಗಳ ಜೀವನ ಹೆಚ್ಚು ನೆಮ್ಮದಿಯಿಂದ ಕೂಡಿ ಕಲಾತ್ಮಕವಾದ ಅನುಭವವನ್ನು ಸವಿಯಲು ಸಾಧ್ಯವಾಗುವುದು ನಿಜ. ದುರ್ಬಲ ರಾಜ್ಯಗಳು ಶತ್ರುಗಳು ದಾಳಿಗೆ ಈಡುವಾಗ, ಪ್ರಜೆಗಳು ದುಃಖಿತರಾಗುತ್ತಿದ್ದದನ್ನೂ ಇಲ್ಲವೆನ್ನುವಂತಿಲ್ಲ. ಆದರೆ ಜನಜೀವನದ ಸಾಮಾನ್ಯ ರೂಪ, ಅವರ ಬಾಳಿನ ಶ್ರದ್ಧೆ ನಂಬಿಕೆ, ಬೆಳವಣಿಗೆ ಶಕ್ತಿಗಳು ರಾಜನನ್ನೂ ರಾಜವಂಶವನ್ನು ಪ್ರಧಾನವಾಗಿ ಅವಲಂಬಿಸಿರಲಿಲ್ಲ. ಅದರ ಬದಲು ಆಗ ತಾತ್ವಿಕವಾದ ಸಂಸ್ಕೃತಿಯ ತಳಹದಿಯ ಮೇಲೆ ಅವು ರೂಪಿತವಾಗಿದ್ದುವು. ಅದ್ದರಿಂದಲೇ ರಾಜರ ಏಳು – ಬೀಳುಗಳ ನಿರಂತರ ಹೋರಾಟವು ಮಧ್ಯ ಯುಗದಲ್ಲಿನ ಜನಜೀವನ, ಸಧೃಡವಾದ ತಳಹದಿಯ ಮೇಲೆ ಬೆಳೆದು ಬಂದಿತು” ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಒದು ಸರಿಯೂ ಕೂಡ.

.೧. ಕೇಂದ್ರ ಹಾಗೂ ಸ್ಥಳೀಯ ಆಡಳಿತ

ಸಾಮ್ರಾಜ್ಯದಲ್ಲಿ ಏನೆಲ್ಲ ಪದ್ಧತಿಗಳಿದ್ದರೂ ಸಹ ಅತ್ಯುತ್ತಮವಾದ ಅಂಶಗಳನ್ನೆಲ್ಲಾ ಅಳವಡಿಸಿಕೊಂಡು ಒಳ್ಳೆಯ ವಿಜಯನಗರದರಸರು ಪ್ರಯತ್ನಿಸಿರುವುದು ಕಂಡುಬರುತ್ತದೆ. ಪ್ರಾಚೀನ ಗ್ರಂಥಗಳಲ್ಲಿ ಅದರಲ್ಲಿಯೂ ವೇದಗಳಲ್ಲಿ ಸಾರಿರುವ ಹಾಗೆ ದೇಶಕ್ಕೆ ಅಥವಾ ಸಾಮ್ರಾಜ್ಯಕ್ಕೆ ಸುವ್ಯವಸ್ಥಿತವಾದ ಆಡಳಿತ ನೀಡಲು ಬೇಕಾಗಿರುವ ಮುಖ್ಯ ಅಂಶಗಳು ಏಳು, ಅವುಗಳೆಂದರೆ ರಾಜ, ಅಮಾತೃ, ಜನಪದ ದುರ್ಗ, ಕೋಶ, ದಂಡ (ಸೈನ್ಯ) ಮತ್ತು ಮಿತ್ರ. ಈ ಏಳು ಅಂಶಗಳಲ್ಲಿಯೂ ವಿಜಯನಗರವು ಅಗ್ರಸ್ಥಾನದಲ್ಲಿದ್ದಿತ್ತೆನ್ನಬಹುದು. ಹರಿಹರ, ಬುಕ್ಕ, ೨ನೇ ದೇವರಾಯ, ಕೃಷ್ಣದೇವರಾಯ ಇವರೇ ಮೊದಲಾದ ರಾಜಮಹಾರಾಜರುಗಳ ಕಾಲದಲ್ಲಿ ಸಾಮ್ರಾಜ್ಯದ ಅಡಳಿತ ವ್ಯವಸ್ಥೆಯು ಅತ್ಯುನ್ನತ ಮಟ್ಟವನ್ನೇರಿತು, ಆಡಳಿತ ನಿರ್ವಹಣೆಯಲ್ಲಿ ರಾಜನಿಗೆ ಸಹಾಯಕವಾಗಲು ಅನೇಕ ಸಂಸ್ಥೆಗಳು ಹುಟ್ಟಿಕೊಂಡಿದ್ದವು, ಇವುಗಳಿಗೆ ನಾಡು, ಮಹಾಜನ, ವ್ಯಾಪಾರೀ ಸಂಸ್ಥೆಗಳು, ಕೈಗಾರಿಕಾ ಸಂಘಗಳು, ಮುಂತಾದವುಗಳನ್ನು ಉದಾಹರಣೆಯಾಗಿ ನೀಡಬಹುದಾಗಿದೆ. ಇವುಗಳೆಲ್ಲವುಗಳಿಗಿಂತಲೂ ಮುಖ್ಯವಾಗಿ ಮಂತ್ರಿ ಮಂಡಲಿಯನ್ನೊಳಗೊಂಡ ರಾಜಸಭೆ, ಕೇವಲ ಮಂತ್ರಿ ಮಂಡಲದಿಂದ ಕೂಡಿದ ಸಭೆ ಒಂದು ಹಾಗೂ ಮಂತ್ರಿಗಳನ್ನು ಒಳಗೊಂಡ ಇತರ ಪ್ರಾಂತ್ಯದ ಅಧಿಕಾರಿಗಳನ್ನು ಮತ್ತು ಪ್ರಮುಖರನ್ನು ಒಳಗೊಂಡ ದೊಡ್ಡ ಪರಿಷತ್ತು ಇನ್ನೊಂದಿತ್ತೆಂದು ಕಂಡುಬರುತ್ತದೆ. ಇದರಲ್ಲಿ ಧರ್ಮಗುರುಗಳು ಮುಖ್ಯ ಪಂಡಿತರು, ಕವಿಗಳು, ಕಲಾವಿದರುಗಳೂ ಸಹ ರಾಜಸಭೆಯಲ್ಲಿ (ದೊಡ್ಡ ಸಭೆ)ರುತ್ತಿದ್ದರು. ಪ್ರಮುಖ ನಿರ್ಣಯಗಳ ನಿರ್ಧಾರವು ಚಿಕ್ಕ ಸಭೆಯಾಗಿದ್ದ ‘ಮಂತ್ರಿ ಮಂಡಲ’ದಲ್ಲಿ ನಡೆಯುತ್ತಿದ್ದವು. ವಿಜಯನಗರದರಸರ ಕಾಲದಲ್ಲಿ ಮಹಾರಾಜರ ಹತ್ತಿರದ ಸಂಬಂಧಿಗಳೂ ಅಸ್ಥಾನದಲ್ಲಿ ಮಂತ್ರಿಗಳಾಗಿರುತ್ತಿದ್ದು ಕಂಡುಬರುತ್ತದೆ. ವಿಜಯನಗರದ ಕಾಲದಲ್ಲಿ ರಾಷ್ಟ್ರಕೂಟರ ಕಾಲದಲ್ಲಿದ್ದಂತೆಯೇ ಪುರೋಹಿತನ ಪಾತ್ರವು ಮಂತ್ರಿ ಮಂಡಲಗಳಲ್ಲಿ ಪ್ರಧಾನವಾಗಿದ್ದಂತೆ ಕಂಡುಬರುವುದಿಲ್ಲ. ಅವರ ವ್ಯಾಪ್ತಿಯು ಕೇವಲ ಧಾರ್ಮಿಕ ವಿಧಿವಿಧಾನಗಳಿಗೆ ಮಾತ್ರ ಮೀಸಲಿರುವುದು ಕಂಡುಬರುತ್ತದೆ.

ರಾಜನಿಗೆ ಬೇಕಾಗಿರುವವರೆಗೂ ಮಂತ್ರಿ ಅಧಿಕಾರದಲ್ಲಿರುತ್ತಿದ್ದ. ಏಕೆಂದರೆ ರಾಜನ ವ್ಯಕ್ತಿತ್ವದ ಅಧಿಕಾರವೇ ಕೊನೆಯ ನಿರ್ಣಾಯಕ ಅಂಶ, ಈ ದೃಷ್ಟಿಯಲ್ಲಿ ರಾಜ ಮನಸ್ಸು ಮಾಡಿದರೆ ಮಂತ್ರಿಗಳನ್ನು ಮಂತ್ರಿ ಪದವಿಯ ಜೊತೆಗೆ ಪ್ರಾಂತ್ಯಗಳ ಸಾಮಂತ ರಾಜರನ್ನಾಗಿಯೂ ನೇಮಿಸುತ್ತಿದ್ದುದು ಉಂಟು. ಉದಾಹರಣೆಗೆ ಎರಡನೇ ದೇವರಾಯನ ಮಹಾಮಂತ್ರಿಯಾದ ಲಕ್ಕಣ ದಂಡೇಶನು ಒಂದು ಪ್ರಾಂತ್ಯದ ಮುಖ್ಯ ಅಧಿಕಾರಿಯೂ ಆಗಿದ್ದನು, ಪ್ರಧಾನಿ ಉಪಪ್ರಧಾನಿ, ಮಹಾಪ್ರಧಾನಿ, ಶಿರಪ್ರಧಾನಿ, ಸರ‍್ವಶಿರ ಪ್ರಧಾನಿ ಮೊದಲಾದ ಹೆಸರುಗಳು ಅನೇಕ ಶಾಸನಗಳಲ್ಲಿ ಸಿಕ್ಕುತ್ತವೆ. ಇವು ಮಂತ್ರಿಗಳಲ್ಲಿ ಅನೇಕ ಶ್ರೇಣಿಗಳಿದ್ದವೆಂಬುದನ್ನು ಸೂಚಿಸುತ್ತದೆ. ದಂಡನಾಯಕ ಎಂಬ ಹುದ್ದೆಯು ಸೈನ್ಯದ ನಾಯಕ ಮತ್ತು ಆಡಳಿತದ ಮುಖ್ಯಾಧಿಕಾರಿ ಎಂಬ ಎರಡು ಅರ್ಥವನ್ನು ಸೂಚಿಸುತ್ತದೆ. ಇದು ಅತ್ಯಂತ ಪ್ರಾಚೀನ ಕಾಲದಿಂದಲೂ ಚಾಲ್ತಿಯಲ್ಲಿರುವುದು ಕಂಡು ಬರುತ್ತದೆ ಯುದ್ಧ ನಿರ್ವಹಣೆ ಶಾಂತಿ ಸ್ಥಾಪನೆ, ರಾಜ್ಯಾಡಳಿತ, ಅರಮನೆಯ ವ್ಯವಸ್ಥೆಯಲ್ಲಿ ಇವನ ಪಾತ್ರ ಪ್ರಮುಖವಾಗಿರುತ್ತಿತ್ತೆಂದು ಹೇಳಬಹುದು.

ಆಡಳಿತದ ದೃಷ್ಟಿಯಿಂದ ಸಾಮ್ರಾಜ್ಯದಲ್ಲಿ ಈ ಕೆಳಕಂಡ ವಿಭಾಗಗಳನ್ನು ಮಾಡಿಕೊಂಡಿದ್ದು ಕಂಡುಬರುತ್ತದೆ. ಇದು ಅನಿವಾರ‍್ಯವೂ ಆಗಿತ್ತು. ಅವುಗಳೆಂದರೆ ನಾಡು, ವಿಷಯ, ರಾಷ್ಟ್ರ, ಕಂಪಣ, ಗ್ರಾಮ, ಹಳ್ಳಿ ಮೊದಲಾದ ವಿಭಾಗಗಳು ಪ್ರಾಚೀನ ಕರ್ನಾಟಕದಲ್ಲಿಯೇ (ಗಂಗರು, ಕದಂಬರಿಗಿಂತ ಹಿಂದೆಯೇ) ಅಸ್ತಿತ್ವಕ್ಕೆ ಬಂದಿದ್ದವೆಂದು ತೋರುತ್ತದೆ. ಮುಂದೆ ರಾಷ್ಟ್ರಕೂಟರ ಕಾಲದಲ್ಲಿ ಇವುಗಳ ವಿಭಾಗ ಕ್ರಮವು ವ್ಯತ್ಯಾಸಗೊಂಡಿತು. ರಾಷ್ಟ್ರಕೂಟರ ದಶ ಶಾಸನಗಳು ಸಾಮಾನ್ಯವಾಗಿ ರಾಷ್ಟ್ರಪತಿ, ವಿಷಯಪರೆ, ಗ್ರಾಮಕೂಟಗಳ ಅಧಿಕಾರಿಗಳನ್ನು ಕ್ರಮಬದ್ಧವಾಗಿಯೇ ಸೂಚಿಸುತ್ತವೆ. ಅದ್ದರಿಂದ ಇಲ್ಲಿ ‘ರಾಷ್ಟ್ರ’ ಎಂಬುವುದೇ ಅತಿದೊಡ್ಡ ವಿಭಾಗವಾಗಿದ್ದಿತ್ತೆಂದು ಸ್ಪಷ್ಟಪಡುತ್ತದೆ. ‘ವಿಷಯ’ ಎಂಬುದು ರಾಷ್ಟ್ರ ಎಂಬುದರ ಒಂದು ಒಳವಿಭಾಗ, ವಿಷಯದ ನಂತರ ಬರುತ್ತಿದ್ದ ವಿಭಾಗವೆಂದರೆ ‘ಭುಕ್ತಿ’ ಭುಕ್ತಿಯ ಆಳ್ವಿಕೆ ನೋಡಿಕೊಳ್ಳುತ್ತಿದ್ದ ಅಧಿಕಾರಿಯನ್ನು ಭೋಗಾಪತಿ ಅಥವಾ ಭೋಗಿಕ ಎಂದು ಕರೆಯಲಾಗುತ್ತಿತ್ತು, ಭುಕ್ತಿಯು ೧೦೦ ರಿಂದ ೫೦೦ ಹಳ್ಳಿಗಳನ್ನೊಳಗೊಂಡಿದ್ದ ವಿಭಾಗವಾಗಿದ್ದಿತು. ಭುಕ್ತಿಯಲ್ಲಿರುವ ಹಳ್ಳಿಗಳಲ್ಲಿ ಅನೇಕ ವಿಭಾಗಗಳಿರುತ್ತಿದ್ದುವು ಪ್ರಮುಖವಾದ ಒಂದು ಹಳ್ಳಿ ಅದರ ಸುತ್ತ ಅದಕ್ಕೆ ಸೇರಿದಂತೆ ಕೆಲವು ಹಳ್ಳಿಗಳ ಗುಂಪುಗಳು ವಿಭಾಗಿಸಿಕೊಂಡಿದ್ದವು.

ಸಾಮ್ರಾಜ್ಯದ ವಿಭಾಗಗಳಲ್ಲಿಯೇ ಅತಿ ಚಿಕ್ಕ ಮೂಲ ಘಟಕವೆಂದರೆ ಹಳ್ಳಿ ಅಥವಾ ಗ್ರಾಮ. ಪ್ರತಿಯೊಂದು ಹಳ್ಳಿಯು ಒಬ್ಬೊಬ್ಬ ಗ್ರಾಮದ ಮುಖಂಡನ ಆಡಳಿತಕ್ಕೊಳಪಟ್ಟಿರುತ್ತಿತ್ತು. ಇವನನ್ನು ಗ್ರಾಮಕಕಟ, ಗಾವುಂಡ, ಗೌಡ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿತ್ತು. ಸಾಮಾನ್ಯವಾಗಿ ಈ ಹುದ್ದೆಯು ಅಂಶ ಪಾರಂಪರ‍್ಯವಾಗಿಯೇ ಬರುತ್ತಿತ್ತು. ಈತನು ಒಂದು ಕಡೆ ಸರ್ಕಾರದ ಅದಿಕಾರಿಯಾಗಿ ಗ್ರಾಮೀಣ ಪ್ರದೇಶದಲ್ಲಿ ತೆರಿಗೆ ವಸೂಲಿಮಾಡಿ ಸರ್ಕಾರಕ್ಕೆ ಸಲ್ಲಿಸುತ್ತಿದ್ದ. ಅದೇ ರೀತಿ ಜನರ ಪ್ರತಿನಿಧಿಯಾಗಿ ಗ್ರಾಮದಲ್ಲಿ ಶಾಂತಿ ಸುಭಿಕ್ಷೆಯನ್ನು ಕಾಪಾಡುವ ಕೆಲಸವನ್ನು ನಿರ್ವಹಿಸುತ್ತಿದ್ದ, ಆದರೆ ಇವನ ದರ್ಪ ಆಳ್ವಿಕೆಯು ಸಾಮಾನ್ಯ ಜನರಿಗೆ ನೋವನ್ನುಂಟು ಮಾಡುತ್ತಿದ್ದಿದ್ದಕ್ಕೆ ಅನೇಕ ಆಧಾರಗಳಿವೆ. ಇವನು ಸರ್ಕಾರಕ್ಕೆ ಸಲ್ಲಿಸುವ ಸೇವೆಗೆ ಪ್ರತಿಫಲವಾಗಿ ಸರ್ಕಾರವು ಈತನಿಗೆ ಜಮೀನಿನ ರೂಪದಲ್ಲಿ ಆಥವಾ ಧಾನ್ಯದ ಉತ್ಪತ್ತಿಯ ರೂಪದಲ್ಲಿ ಪ್ರತಿಫಲ ನೀಡುತ್ತಿತ್ತು. ಗೌಡನಿಗೆ ಸಹಾಯಕವಾಗಿ ಲೆಕ್ಕ ಪತ್ರಗಳನ್ನಿಡುವ ಕರಣಿಕನೊಬ್ಬನು ಇರುತ್ತಿದ್ದನು.

ಬೃಹತ್ ಸಾಮ್ರಾಜ್ಯವನ್ನು ನೋಡಿಕೊಳ್ಳಲು ಸುಸಜ್ಜಿತವಾದ ಕಾವಲು ಪಡೆ ಎರಡು ರೀತಿಯಲ್ಲಿ ಬೆಳೆದುಬಂದಿತು. ಅದರಲ್ಲಿ ಒಂದನೆಯದು ಸರ್ಕಾರವೇ ವ್ಯವಸ್ಥೆಗೊಳಿಸಿದುದು; ಇನ್ನೊಂದು ಜನರೇ ತಮ್ಮ ರಕ್ಷಣೆಗಾಗಿ ಸ್ವಯಂಪ್ರೇರಿತರಾಗಿ ನಿರ್ಮಿಸಿಕೊಂಡುದುದು. ಇವರು ಸಾಮ್ರಾಜ್ಯವನ್ನು ಶಾಂತಿ ಮತ್ತು ಕಾನೂನು ಪಾಲನೆ, ಅಪರಾಧಿಗಳನ್ನು ಪತ್ತೆ ಹಚ್ಚುವುದು ಮೊದಲಾದ ಕಾರ‍್ಯಗಳಲ್ಲಿ ನೆರವಾಗುತ್ತಿದ್ದರೆಂದು ತಿಳಿದು ಬರುತ್ತದೆ. ರಾಜಧಾನಿ ಹಂಪಿ (ವಿಜಯನಗರ)ಯನ್ನು ಕೆಲವು ವಿಭಾಗಗಳಾಗಿ ವಿಂಗಡಿಸಿ ಒಂದೊಂದು ವಿಭಾಗಕ್ಕೂ ಕಾವಲು ಪಡೆಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಕಾವಲು ಪಡೆಯ ಕಾರ್ಯ ವೈಖರಿ ಹಾಗೂ ಅವರ ವಿಧಿವಿಧಾನಗಳ ಕುರಿತು ವಿದೇಶಿ ಪ್ರವಾಸಿಗರಾದ ನೂಯಿಜ್ (Nuiz) ಸಂಕ್ಷಿಪ್ತವಾಗಿ ಹೇಳುತ್ತಾನೆ. ನ್ಯಾಯ ತೀರ್ಮಾನದಲ್ಲಿ ಕಟ್ಟಕಡೆಯ ಮಾತು ರಾಜನದೇ ಅವನೇ ಸರ್ವೋಚ್ಛ ನ್ಯಾಯಾಧಿಕಾರಿಯಾಗಿದ್ದನು. ರಾಜನು ಆದಷ್ಟು ಮಟ್ಟಿಗೆ ಕಾನೂನಿನ ಚೌಕಟ್ಟಿನಲ್ಲಿಯೇ ಕಾರ‍್ಯಗತಗೊಳಿಸುವವನಾಗಿದ್ದನೇ ಹೊರತು, ತಾನೇ ಕಾನೂನು ಸೃಷ್ಟಿಸುವವನಾಗಿರಲಿಲ್ಲವೆಂದು ಹೇಳಬಹುದು. ಕಾನೂನುಗಳನ್ನು ತುಂಬ ಕಟ್ಟುನಿಟ್ಟಾದ ರೀತಿಯಲ್ಲಿ ಕಾರ‍್ಯ ರೂಪಕ್ಕೆ ತರುತ್ತಿದ್ದರು. ಅವನ್ನು ಮೀರಿದವರಿಗೆ ಕಠಿಣವಾದ ಶಿಕ್ಷೆ ವಿಧಿಸುವುದಕ್ಕೂ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಹಳ್ಳಿಗಳಲ್ಲಿ ಗ್ರಾಮಸಭೆಗಳೇ ನ್ಯಾಯ ನಿರ್ವಹಣೆಯ ಅಧಿಕಾರವನ್ನು ನಿರ್ವಹಿಸುತ್ತಿರಲಿಲ್ಲ. ರಾಜನಿಂದ ನಿಯಮಿತವಾದ ಅಧಿಕಾರಿಯೊಬ್ಬನು ಇವುಗಳ ನ್ಯಾಯ ತೀರ್ಮಾನದ ಕ್ರಮಗಳನ್ನು ಪರಿಶೀಲಿಸುತ್ತಿದ್ದನ್ನೆಂಬುದಕ್ಕೆ ವಿಜಯನಗರದ ಶಾಸನಗಳಲ್ಲಿ ಸಾಕ್ಷಿಗಳು ದೊರಕುತ್ತದೆ. ರಾಜ್ಯಾಧಿಕಾರಿಗಳೂ, ಸಾಮಂತರ ಬಹುಮಟ್ಟಿಗೆ ಸ್ವಾತಂತ್ರವಾಗಿಯೇ ತಮ್ಮ ವಿಭಾಗದಲ್ಲಿ ತಾವೇ ನ್ಯಾಯ ತೀರ್ಮಾನ ಮಾಡುತ್ತಿದ್ದರು.

.೨. ಸೈನ್ಯ ವ್ಯವಸ್ಥೆ ಮತ್ತು ಅವರ ಸ್ಥಿತಿಗತಿ

ವಿಜಯನಗರ ಸಾಮ್ರಾಜ್ಯವು ತನ್ನ ವೈಭವದ ತುತ್ತತುದಿಯನ್ನು ಮುಟ್ಟಬೇಕಾದರೆ ಪ್ರಮುಖವಾಗಿ ಪರಿಗಣಿಸಬೇಕಾದ ಅಂಶವೆಂದರೆ ಸೈನ್ಯದ ವ್ಯವಸ್ಥೆ, ಸುಭದ್ರವಾದ ಸಾಮ್ರಾಜ್ಯದ ಸ್ಥಾಪನೆಗೆ ಸೈನ್ಯವೇ ತಳಹದಿ, ಅದರಲ್ಲಿಯೂ ತನ್ನ ನೆರೆಹೊರೆಯವರು ಪರಸ್ಪರ ಹೋರಾಟವನ್ನೇ ರೂಢಿ ಮಾಡಿಕೊಂಡಿದ್ದರಿಂದ ಹಾಗೂ ಅಂದಿನ ರಾಜಕೀಯ ಸನ್ನಿವೇಶಗಳಂತೂ ಸೈನ್ಯವು ಪ್ರಬಲವಾಗಿ ನಿರ್ಮಿತವಾಗುವುದು ಅನಿವಾರ್ಯವಾಗಿತ್ತೆನ್ನಬಹುದು. ಶಕ್ತಿಯುತವಾಗಿ ಕನ್ನಡ ನಾಡನ್ನಾಳಿದ ವಿಜಯನಗರದಲ್ಲಿ ಸೈನ್ಯ ಸಂಪತ್ತು ಅಗಾಧವಾಗಿಯೇ ಬೆಳೆದಿತ್ತು. ಸದಾ ಹೊಂಚು ಹಾಕುತ್ತಿದ್ದ ಮಹಮ್ಮದೀಯರನ್ನು ಹಿಂದೆ ತಳ್ಳಿ, ಸುಭದ್ರವಾದ ಸಾಮ್ರಾಜ್ಯವನ್ನು ಸ್ಥಾಪಿಸುವಲ್ಲಿ ಇವರ ಪಾತ್ರ ಹಿರಿದಾದದ್ದು. ಬಿಕ್ಕನ ಸೈನ್ಯದಲ್ಲಿ ೩೦,೦೦೦ ಕುದುರೆಗಳು, ೩.೦೦೦ ಆನೆಗಳು, ೧ ಲಕ್ಷ ಕಾಲಾಳುಗಳು ಇದ್ದವೆಂದು ಫೆರಷ್ತಾ ಹೇಳುತ್ತಾನೆ. ಅಬ್ದುಲ್ ರಜಾಕ್ ನು ಬಂದಿದ್ದ ಕಾಲದಲ್ಲಿ ಮೇಲಿನವುಗಳಿಗೆ ಎರಡರಷ್ಟು ಬೆಳೆದಿತ್ತೆಂದು ಅವನು ನೀಡಿರುವ ಅಂಕಿಅಂಶಗಳಿಂದ ಕಂಡುಬರುತ್ತದೆ. ಪಡಯಿಸ್ ಕೂಡ ವಿಜಯನಗರದ ಸೈನ್ಯಶಕ್ತಿಯನ್ನು ಸಂಪೂರ್ಣವಾಗಿ ವರ್ಣಿಸಿದ್ದಾರೆ. ನೂಯಿಜ್ ನು ಕೃಷ್ಣದೇವರಾಯ ಮಹಮ್ಮದೀಯ ಸುಲ್ತಾನನನ್ನು ಎದುರಿಸಲು ಹೋಗಿದ್ದ ಸೈನ್ಯದ ವಿವರಣೆಯನ್ನು ಈ ರೀತಿ ಲೆಕ್ಕ ಹೇಳುತ್ತಾನೆ. ೧೨೦೦ ಆನೆಗಳು, ೬೦,೦೦೦ ಕುದುರೆಗಳು, ಐದು ಲಕ್ಷ ಕಾಲಾಳುಗಳು ಇದ್ದವೆಂದು ವರ್ಣಿಸುತ್ತಾನೆ. ವಿಜಯನಗರದ ಅರಸರು ಸೈನ್ಯವನ್ನು ಅರಿಸಿಕೊಳ್ಳುವಾಗ ಎರಡು ವಿಧಾನಗಳನ್ನು ಅನುಸರಿಸುತ್ತಿದ್ದರು. ಒಂದನೆಯದು: ಸರ್ಕಾರವೇ ನೇರವಾಗಿ ಸೈನಿಕರನ್ನು ಅರಿಸಿಕೊಳ್ಳುವುದು, ಮತ್ತೊಂದು ಆಶ್ರಿತರಾಗಿದ್ದ (ಸಾಮಂತ) ರಾಜರ ಮೂಲಕ ಸೈನಿಕರನ್ನು ಆಯ್ಕೆ ಮಾಡಿ ಬಂದವರನ್ನು ನೇಮಿಸಿಕೊಳ್ಳುವುದು, ಸೈನ್ಯದ ಆಯ್ಕೆಯಲ್ಲಿ ತುಂಬ ಎಚ್ಚರಿಕೆ ವಹಿಸಲಾಗುತ್ತಿತ್ತು. ಇಂದಿನಂತೆಯೇ ಅಂದೂ ಸಹ ಎತ್ತರ, ದೇಹರ್ದಾಢ್ಯತೆ ಮೊದಲಾದುದನ್ನು ಮುಖ್ಯವಾಗಿ ಗಮನಿಸಿಯೇ ಎಲ್ಲದರಲ್ಲಿಯೂ ನಿರಿಕ್ಷಿತ ಮಟ್ಟವನ್ನು ಮುಟ್ಟಿದರೆ ಮಾತ್ರ ಸೈನ್ಯಕ್ಕೆ ಸೇರಿಸಿಕೊಳ್ಳಲಾಗುತ್ತಿತ್ತು. ಅನಂತರ ಸೈನಿಕರಿಗೆ ಯುದ್ಧದ ತರಭೇತಿಯ ಶಿಕ್ಷಣ ನೀಡಿ ಯಾವ ಕ್ಷಣದಲ್ಲಿಯಾದರೂ ಸಂಭವಿಸುತ್ತಿದ್ದ ಯುದ್ಧಕ್ಕೆ ಸೈನ್ಯವು ಸದಾ ಸಿದ್ದವಾಗುರುವಂತೆ ವ್ಯವಸ್ಥೆಗೊಳಿಸಿಕೊಳ್ಳುತ್ತಿತ್ತು.

ಯುದ್ಧದ ಸಮಯದಲ್ಲಿ ಸೈನ್ಯವನ್ನು ಅನೇಕ ವಿಭಾಗಗಳಾಗಿ ವಿಂಗಡಿಸಿಕೊಳ್ಳಲಾಗುತ್ತಿತ್ತು. ಪ್ರತಿಯೊಂದು ವಿಭಾಗದಲ್ಲಿಯೂ ಸೇವಾಧಿಪತಿಗಳೇ ಮುಖ್ಯಸ್ಥರಾಗಿ, ಇತರ ಅಧಿಕಾರಿಗಳೂ ಇರುತ್ತಿದ್ದರು. ರಾಜರೇ ಮುಂದೆ ನಿಂತು ಸೈನ್ಯವನ್ನು ಹುರಿದುಂಬಿಸಿ ಶತ್ರುಗಳನ್ನು ವಶಪಡಿಸಿಕೊಳ್ಳುತ್ತಿದ್ದರು. ಏಕೆಂದರೆ ಅಂದಿನ ಯುದ್ಧ ತಂತ್ರಗಳಲ್ಲಿ ಕೋಟೆಗಳು ಬಹು ಪ್ರಮುಖ ಪಾತ್ರವನ್ನು ವಹಿಸುತ್ತಿದ್ದವು. ಶಾಸನಗಳಲ್ಲಿ ಕನ್ನಡ ಸಾಹಿತ್ಯದ ಗ್ರಂಥಗಳಲ್ಲಿ ಜನಪದ ಗೀತೆಗಳಲ್ಲಿ ಈ ಕೋಟೆ ಕಾಳಗದ ವರ್ಣನೆಗಳು ಹೆಚ್ಚು ಹೆಚ್ಚಾಗಿ ಕಂಡುಬರುತ್ತದೆ. ಸೈನ್ಯವು ಯುದ್ಧಕ್ಕೆ ಹೊರಟಾಗ ಅವರ ಜೊತೆಗೆ ಪ್ರಮುಖ ಅವಶ್ಯಕತೆಗಳನ್ನು ಪೂರೈಸಲು ಒಂದು ದೊಡ್ಡ ವ್ಯವಸ್ಥೆಯೇ ಸಿದ್ದವಾಗಿರುತ್ತಿತ್ತು. ವ್ಯಾಪಾರಿಗಳು, ಆಡುಗೆಯವರು, ಅಗಸರು, ಇತರ ಕೂಲಿಕಾರರು, ಮನೋರಂಜನೆಗಾಗಿ, ಗಾಯಕರು, ವಾದಕರು, ವೈದ್ಯರು, ಖೋಜಾಗಳು, ವೇಶ್ಯೆಯರು, ಎಲ್ಲರೂ ಯುದ್ಧಕ್ಕೆ ಹೋಗುವ ರೀತಿಯಲ್ಲಿಯೇ ಏರ್ಪಾಡಾಗಿರುತ್ತಿದ್ದರು.

ಸೈನಿಕರು ಯುದ್ಧದಲ್ಲಿ ತಾವು ತೋರಿದ ಪರಾಕ್ರಮ, ವಿರಾವೇಶಗಳಿಗೆ ಮಹಾರಾಜರು ಕೊಡುತ್ತಿದ್ದ ಬಿರುದುಗಳನ್ನು ‘ರಾಮನಾಥ ಚರಿತೆ’ದಲ್ಲಿ ನೋಡಬಹುದು. ನಂಜುಂಡ ಕವಿಯು ಈ ವರ್ಣನೆಯನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾನೆ, ಡಾ. ಕೆ. ಶ್ರೀಕಂಠಯ್ಯನವರು ತಮ್ಮ ಮಹತ್ವದ ಕೃತಿಯಾದ ‘ವಿಜಯನಗರ ಕಾಲದ ಕನ್ನಡ ಸಾಹಿತ್ಯದಲ್ಲಿ ಜನಜೀವನ’ ಚಿತ್ರ ಎಂಬುವುದರಲ್ಲಿ ನಂಜುಂಡ ಕವಿಯು ಈ ಬಿರುದುಗಳ ಹಾಗೂ ಶೌರ್ಯ ಪರಾಕ್ರಮಗಳ ಕುರಿತು ಹೇಳಿರುವ ಮಾತನ್ನು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ, ಅದನ್ನೆ ಇಲ್ಲಿ ತಿಳಿಸುವುದು ಅವಶ್ಯವೆನ್ನಿಸುತ್ತದೆ.

“ಪಾಯದ ಧಾರೆಂದುಗಡಿಸಿಕೊಂಬ ರಾಯದುರ್ಗದ ರಾಮದೇವ (೨೧ – ೭೭); ಕನಕ ದಂಡದ ಸತ್ತಿಗೆಯ ಕೆಳಗೊಪ್ಪುವ ಪಿನಗುಂಡಿಯ ಕೆಂಪರಾಜ (೨೧ – ೭೯); ಕುಪಿತ ಕುಮಾರರ ಗಂಡನೆನಿಸಿಕೊಂಡ ಕೂಪಣದ ತಿಮ್ಮ ರಾಜನ ಮಗ (೨೧ – ೮೦); ಮೇದಿನಿಯೊಳು ಬಿರುದುಳ್ಳ ಗಂಡನೆಂದೋದಿಸಿ ಕೊಂಬ ಅದವಾನಿಯ ನರಹರಿ (೨೧ – ೮೨); ಎತ್ತಿದ ಕಳುಹಿನ ಹಳವಿಗೆಯ ಗುತ್ತಿಯ ಕಾಚಯ್ಯ (೨೧ – ೮೩) ತುಳುಗಿನ ಸಬಳದ ಸಂದಣಿಯೊಳಗುವ ಮೆಳೈವ ತೋಳೈಗಲ್ಲ ಜಾಯಿ ಜಕ್ಕೆಯ ಬೊಮ್ಮ (೨೧ – ೮೪); ಕೂಟದ ರಿಪುಗಳ ಗಂಡನೆಂಬೀ ಕೊಂಡಾಟದ ಭಟಕಾಟಣ್ಣ (೨೧ – ೮೭) ಹಿರಿಯುಬ್ಬಣ್ಣದ ಜಡಿಪುರ ಕುದುರೆಯ ಮೇಲೆ ಹರುಷದಿಂಬಹ ಮಾಯಿದೇವನು ಕಂಪಿಲಭೂವರನ ಮೋಹನ ರಾವುತ (೨೧ – ೯೦) ಖಂಡೆಯವೆಸೆದು ಕಯ್ಯೊಳು ಕುದುರೆಯ ತುಂಡುತುಂಡಾಗಿ ಮಗುಚುತ ಒಪ್ಪ ಸಾಯಿದೇವ (೨೧ – ೯೧); ಬೆಳ್ಳಿ ಮಕ್ಕರೆಯ ತೇಜಿಯವನಿವಡಿಳ್ಳಿಯ ಖಾನರ ಗಂಡನೆಂಬ ಬಿರುದುಳ್ಳ ಕೊಳ್ಳಿಯ ನಾಗವನ್ನು (೨೧ – ೨೯); ಕಂಡು ಧಾಳಿಯ ನೊಡೆಯಗೆ ಸುದ್ಧಿ ವೇಳ್ವರ ಗಂಡನೆನಿಸಿಕೊಂಬ ಗಿಂಡಿಯಲಕ್ಕ (೨೧ – ೯೩)

ಮೇಲೆ ಕಾಣಿಸಿರುವ ವೀರ ಪುರುಷರ ಪಟ್ಟಿಯಲ್ಲಿ ನಂಜುಂಡ ಕವಿಯು ಮತ್ತೆ ಮತ್ತೆ ಅನೇಕ ಸಂದರ್ಭಗಳಲ್ಲಿ ಕೊಳ್ಳಿಯ ನಾಗದೇವ, ಗಿಂಡಿಯಲಕ್ಕ, ಕಾಳಂಡಿಯ ಕಂಪ, ಅಕ್ಕಸಾಲೆಯ ಚಿಕ್ಕ, ದೇವಿಸೆಟ್ಟಿಯಲಿಂಗ, ಬಲ್ಲುಗರವರುಗಳ ಹೆಸರನ್ನು ಹೇಳಿ, ಕಡೆಯ ಸಾಲಿನಲ್ಲಿ ಅವರು ಮರಣ ಹೊಂದಿದ ಸನ್ನಿವೇಶವನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ. ರಾಮನಾಥ ಚರಿತವು ವಿಜಯನಗರದ ಕಾಲಕ್ಕೆ ಸೇರಿದ ಕೆಲವು ಸಾಮಾಜಿಕ ಘಟನೆಗಳನ್ನು ತಿಳಿಯಲು ಅಮೂಲ್ಯ ಗ್ರಂಥವಾಗಿದೆ ಎನ್ನಬಹುದು.

ಸೈನಿಕರು ಬಣ್ಣಬಣ್ಣದಿಂದ ಕೂಡಿದ ಸೊಗಸಾದ ಶ್ರೀಮಂತ ಉಡುಪನ್ನು ಧರಿಸುತ್ತಿದ್ದರೆಂದು ಪಾಯೇಸನು ಹೇಳಿಕೊಂಡಿದ್ದಾನೆ. ಆದರೆ ಇದು ರಾಜಧಾನಿಯಲ್ಲಿ ರಾಜರಿಂದ ಸೇನಾ ವೀಕ್ಷಣೆಯ ಸಂದರ್ಭದ ಸನ್ನಿವೇಶದ ವರ್ಣನೆಯಾಗಿದೆ. ಏಕೆಂದರೆ ಮತ್ತೊಬ್ಬ ವಿದೇಶಿ ಯಾತ್ರಿಕನಾದ ನ್ಯೂನಿಜ್ ನು ಕೃಷ್ಣದೇವರಾಯನು ರಾಯಚೂರಿನ ಮೇಲೆ ದಂಡೆತ್ತಿ ಹೋದಾಗ, ಸಮರ ಸೈನಿಕರ ಉಡುಗೆ ತೊಡುಗೆಯ ಸಂಪೂರ್ಣ ಚಿತ್ರವನ್ನು ತೆರೆದಿಡುತ್ತಾನೆ. ಇಲ್ಲಿ ಅವನು ಕೇವಲ ಸೈನಿಕರು ಯುದ್ಧಕ್ಕೆ ಬಳಸುತ್ತಿದ್ದ ಆಯುಧಗಳ ಕುರಿತು ವರ್ಣಿಸಿರುವುದೇ ಹೊರತು ಅವರು ಉಡುಗೆ – ತೊಡುಗೆಯ ಬಗ್ಗೆ ಚರ್ಚಿಸಿರುವುದು ಕಂಡುಬರುವುದಿಲ್ಲ. ಸಾಮಾನ್ಯ ಸೈನಿಕರು ರಣರಂಗದಲ್ಲಿ ಉಪಯೋಗಿಸುತ್ತಿದ್ದ ಬಟ್ಟೆಗಳು ತುಂಬ ಸಾಧಾರಣವಾಗಿದ್ದವು. ಅನೇಕರಿಗೆ ಏನೂ ಇಲ್ಲದೆ ಇದ್ದ ಸಂದರ್ಭಗಳೂ ಇದ್ದವು. ಈ ದೃಷ್ಟಿಯಿಂದಲೋ ಏನೋ ಈ ಸಂದರ್ಭಕ್ಕೆ ತಕ್ಕಂತೆ ಇರುವ ಅನೇಕ ಆಧಾರಗಳಲ್ಲಿಯೂ ಸಹ ಸೈನಿಕರ ಉಡುಗೆಯ ಬಗ್ಗೆ ಹೆಚ್ಚಿನ ಪ್ರಾಸ್ತಾಪ ಕಂಡುಬರುವುದಿಲ್ಲ. ಕೇವಲ ಅವರು ಯುದ್ಧದಲ್ಲಿ ಬಳಸುತ್ತಿದ್ದ ವಸ್ತುಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದಂತೆ ಕಂಡುಬರುತ್ತದೆ.

ವಿಜಯನಗರದರಸರ ಕಾಲದಲ್ಲಿ ಸೈನಿಕರು ಯುದ್ಧಗಳಲ್ಲಿ ಬಳಸುತ್ತಿದ್ದ ಆಯುಧಗಳು ವಿವಿಧ ರೀತಿಯವಾಗಿದ್ದವು. ಇವುಗಳ ವರ್ಣನೆಯನ್ನು ಮಧುರಾವಿಜಯಂ’ ಹಾಗೂ ‘ಸಾಳ್ವಭ್ಯುದಯಮ್’ ಎಂಬ ಸಂಸ್ಕೃತ ಗ್ರಂಥಗಳಿಂದ ತಿಳಿಯಬಹುದಾಗಿದೆ. ಈ ಕಾವ್ಯಗಳು ಯುದ್ಧದಲ್ಲಿ ಉಪಯೋಗಿಸುತ್ತಿದ್ದ ಆಯುಧಗಳು ಕುರಿತು ಕಾವ್ಯಗಳು ಶಸ್ತ್ರ (ಬಾಕು – ಕತ್ತಿ), ಶರಾಸನ (ಬಿಲ್ಲು), ಅಸಿ (ಕತ್ತಿ), ಕರ್ಪಣ (ಒಂದು ರೀತಿಯ ಸಣ್ಣ ಕತ್ತಿ), ಭರ್ಚಿ (ಈಟಿ), ಕಠಾರಿ ಕಾಸ್ತ್ರಮ್ (ಒಂದು ರೀತಿಯ ಬಾಣ), ಕಾರ್ಮುಂಕಂ (ಬಿಲ್ಲು) ಪ್ರಾಸ (ಕ್ಷಿಪಣಿ) ಮುಂತಾದ ಆಯುಧಗಳ ಹೆಸರನ್ನು ತಿಳಿಸುತ್ತವೆ. ಶತ್ರುಗಳ ಬಾಣದಿಂದ ರಕ್ಷಿಸಿಕೊಳ್ಳು ಸೈನಿಕರು ರಕ್ಷ ಕವಚಗಳನ್ನು ಉಪಯೋಗಿಸುತ್ತಿದ್ದರು ಎಂದು ವರ್ಣಿಸಿರುವುದು ಕಂಡುಬರುತ್ತದೆ. ವಿಜಯನಗರದ ಕಾಲದ ಯುದ್ಧಗಳಲ್ಲಿ ಬಳಸುತ್ತಿದ್ದ ಆಯುಧಗಳು ಅದರಲ್ಲಿಯೂ ಬಿಲ್ಲು ಬಾಣ, ಕತ್ತಿ, ಭರ್ಚಿಗಳು ಪ್ರಾಚೀನ ಭಾರತದಲ್ಲಿಯೂ ಬಳಕೆಯಲ್ಲಿದ್ದವೆಂದು ಆಧಾರಗಳು ಸೂಚಿಸುತ್ತವೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಅಂದು ನಡೆಯುತ್ತಿದ್ದ ಯುದ್ಧಗಳಲ್ಲಿ ಎರಡು ಭಾಗಗಳಾಗಿ ವಿಂಗಡಿಸಬಹುದು ಒಂದನೆಯದು ಕೋಟೆ ಕಾಳಗ, ಎರಡನೆಯದಾಗಿ ಬಯಲು ಯುದ್ಧ ಈ ಎರಡು ಯುದ್ಧಗಳಲ್ಲಿ ಭಾಗವಹಿಸಲು ಸೈನಿಕರು ಪ್ರತ್ಯೇಕ ಆಯುಧಗಳನ್ನು ಬಳಸಬೇಕಾಗಿದ್ದಿತು. ಬಯಲು ಯುದ್ಧದಲ್ಲಿ ಬಳಸುವ ಆಯುಧಗಳು ಕೋಟೆ ಕಾಳಗಕ್ಕೆ ಉಪಯೋಗವಾಗುತ್ತಿರಲಿಲ್ಲ ಎಂಬುದು ಕಂಡುಬರುತ್ತದೆ. ಕೋಟೆ ಕಾಳಗಕ್ಕೆ ಬಿಲ್ಲು, ಬಾಣ ಹಾಗೂ ಕೈಯಿಂದಲೇ ಈಟಿಗಳನ್ನು ರಭಸದಿಂದ ಎಸೆಯುವ ಶಕ್ತಿಯುತ ಸೈನಿಕರು ಬೇಕಾಗಿರುತ್ತಿದ್ದರು. ನಾಡಿನ ಹಿರಿಯ ಸಾಹಿತಿಯರಾದ ಬೆಟಗೇರಿ ಕೃಷ್ಣಶರ್ಮರು ಕತ್ತಿಗಿರುವ ಬೇರೆ ಬೇರೆ ಹೆಸರುಗಳನ್ನು ಈ ರೀತಿ ತಿಳಿಸುತ್ತಾರೆ ಕೈಗೆತ್ತಿ, ಖಂಡೆಯ, ಸೊರಡಯ ಕತ್ತಿ, ಬಾಳಗತ್ತಿ, ಕರಾಚೂರಿ, ಸುರಗಿ, ಕೈಸುರಗಿ, ಬಾಕು, ಕೊಂಬುಗತ್ತಿ (ಆನೆಯ ಕೋರೆಗಳಿಗೆ ಕಟ್ಟುವ ಕತ್ತಿ) ಎಂದು ಒಂಬತ್ತು ಹೆಸರುಗಳನ್ನು ಸೂಚಿಸುತ್ತಾರೆ. ಇದರಿಂದ ಕತ್ತಿಯ ಅನೇಕ ರೂಪಗಳನ್ನು ಗಮನಿಸಬಹುದಾಗಿದೆ.

ಯುದ್ಧದಲ್ಲಿ ಸೈನಿಕರು ತಮ್ಮನ್ನು ಹಗೂ ತಾವು ಹೊಂದಿರುವ ಆನೆ, ಕುದುರೆಗಳನ್ನು ಆಯುಧಗಳು ಹಾಗೂ ವಿವಿಧ ರೀತಿಯ ಅಪಾಯಗಳಿಂದ ಸಂರಕ್ಷಿಸಿಕೊಳ್ಳಬೇಕಾಗಿತ್ತು. ಅದಕ್ಕಾಗಿಯೇ ದೇಹದ ಬೇರೆ ಬೇರೆ ಭಾಗಗಳಿಗೆ ಅನುಗುಣವಾಗಿ ನಾನಾ ರೀತಿಯ ಸಂರಕ್ಷಕ ಸಾಧನಗಳನ್ನು ಉಪಯೋಗಿಸುತ್ತಿದ್ದದ್ದು ಕಂಡುಬರುತ್ತದೆ. ಅವುಗಳನ್ನು ಬೆಟಗೇರಿಯವರು ಈ ರೀತಿ ವಿವರಿಸುತ್ತಾರೆ. “ಹರಿಗೆ ತಲೆವರಿಗೆ, ಮೈಚೋಡು (ಕವಚ), ಕುಪ್ಪಸ, ಸೀಸಕ, ತೋಳ ಪಾವುಡ” ಎಂದು ವಿವಿಧ ಹೆಸರುಗಳನ್ನು ತಿಳಿಸುತ್ತಾರೆ.

ವಿಜಯನಗರದ ಕಾಲದಲ್ಲಿ ಮತ್ತೊಂದು ಪ್ರಮುಖ ಯುದ್ಧದ ದಳವೆಂದರೆ ಅಶ್ವದಳ, ಅಶ್ವದಳದ ಮುಖಂಡರನ್ನು ‘ಅಶ್ವಪತಿ’ ಎಂದು ಕರೆಯುತ್ತಿದ್ದರು. ವಿಜಯನಗರದ ಅರಸರು ಗೆದ್ದ ಅನೇಕ ಯುದ್ಧಗಳಿಗೆ ಈ ಅಶ್ವಪಡೆಯೇ ಮೂಲ ಕಾರಣವೆನ್ನಬಹುದು, ಕೃಷ್ಣದೇವರಾಯನೇ ಸ್ವತಃ ಅಮುಕ್ತಮಾಲ್ಯದ’ದಲ್ಲಿ ಈ ವಿಷಯ ಪ್ರಸ್ತಾಪಿಸಿರುವುದು ಕಂಡು ಬರುತ್ತದೆ. ಇಂದು ಸ್ವಾತಂತ್ರ್ಯ ಭಾರತದಲ್ಲಿ ದೇಶದ ರಕ್ಷಣೆಗಾಗಿ ಸೈನ್ಯವನ್ನು ಬಲಪಡಿಸುವುದಕ್ಕೆ ನಮ್ಮ ರಾಷ್ಟ್ರದ ಆದಾಯದಲ್ಲಿ ಶೇ. ೫೦ರಷ್ಟು ಹಣವನ್ನು ಮೀಸಲಿಡುತ್ತಿರುವ ಹಾಗೆಯೇ ವಿಜಯನಗರದರಸರ ಕಾಲದಲ್ಲಿಯೂ ಸಹ ಸಾಮ್ರಾಜ್ಯದ ಆಧಾಯದಲ್ಲಿ ಶೇ. ೫೦ರಷ್ಟು ಸೈನಿಕ ವ್ಯವಸ್ಥೆಗೆ ಮೀಸಲಿರಿಸಲಾಗಿತ್ತು. ಅದರಲ್ಲಿಯೂ ಕುದುರೆಗಳ ಮೇಲೆ ಮಾಡುವ ಖರ್ಚು ಹೆಚ್ಚಿನದಾಗಿರುತ್ತಿತ್ತೆಂದು ತಿಳಿದುಬರುತ್ತದೆ. ಕುದುರೆಗಳನ್ನು ಅರೇಬಿಯ, ಪಾರಸೀಕ, ಕಾಂಬೋಜ ಮುಂತಾದ ದೇಶಗಳಿಂದ ಅಮದು ಮಾಡಿಕೊಳ್ಳಲಾಗುತ್ತಿತ್ತು. ಸಮಕಾಲೀನ ಸಾಹಿತ್ಯ ಕೃತಿಗಳಿಂದ ಹಾಗೂ ದೇವಾಲಯಗಳ ಮೇಲೆ ಕೆತ್ತಿಸಿರುವ ಉಬ್ಬು ಶಿಲ್ಪಗಳಿಂದ ಯುದ್ಧಕ್ಕೆ ಹೊರಟ ಕುದುರೆ ಸವಾರರು ಧರಿಸಿದ್ಧ ಉಡಿಗೆ ತೊಡಿಗೆಗಳು, ಅಶ್ವಗಳನ್ನು ಸಮರಕ್ಕೆ ಸಿದ್ದಗೊಳಿಸುತ್ತಿದ್ದ ರೀತಿ, ನೀತಿಗಳು, ರಣರಂಗದಲ್ಲಿ ಅವರುಗಳ ಹೋರಾಟಗಳ ಬಗ್ಗೆ ನೈಜ ಚಿತ್ರಣವನ್ನು ಚಿತ್ರಿಸಿರುವುದು ಕಂಡುಬರುತ್ತದೆ.

ಪ್ರಾಣಿಗಳಲ್ಲಿಯೇ ಪ್ರತಿಷ್ಠಿತ ಪ್ರಾಣಿಯಾದ ಆನೆಗೆ ಸೈನ್ಯದಲ್ಲಿ ಹಿಂದಿನ ಕಾಲದಿಂದಲೂ ಮುಖ್ಯಸ್ಥಾನ ದೊರೆಕಿದೆ. ಇನ್ನೊಂದರ್ಥದಲ್ಲಿ ಯುದ್ಧಗಳಲ್ಲಿ ಆನೆಗಳನ್ನು ಬಳಸಿದವರಲ್ಲಿ ಭಾರತೀಯರೇ ಮೊದಲಿಗರೆಂದು ವಿದ್ವಾಂಸರುಗಳು ಅಭಿಪ್ರಾಯಪಡುತ್ತಾರೆ. ಇದು ಸತ್ಯವೆಂದೆ ಹೇಳಬಹುದು. ವಿಜಯನಗರದರಸರು ಆನೆಗಳನ್ನು ಅನೇಕ ರೀತಿಯಲ್ಲಿ ಉಪಯೋಗಿಸುತ್ತಿದ್ದರು. ಕೇವಲ ಯುದ್ಧಗಳಿಗೇ ಅಲ್ಲದೆ ಆನೆ ಹಾಗೂ ಕುದುರೆಗಳು ರಾಜ ವೈಭವದ ಸಂಕೇತಗಳಾಗಿಯೂ ಮೆರೆಯುತ್ತಿದ್ದವು. ಹಬ್ಬ (ದಸರ ಹಬ್ಬ) ಜಾತ್ರೆ ರಾಜಪರಿವಾರದವರ ವಿವಾಹ ಸಂದರ್ಭ, ದೇವತಾ ಕಾರ್ಯಗಳ ಸಂದರ್ಭಗಳಲ್ಲಿ ಇವುಗಳ ಪಾತ್ರ ಅಮೂಲ್ಯವಾಗಿತ್ತು. ಇಂಥಹ ಸಂದರ್ಭದಲ್ಲಿ ಆನೆಗಳಿಗೆ ಅಲಂಕರಿಸುತ್ತಿದ್ದ ಚಿತ್ರಗಳನ್ನು ಪಾಯೇಸನು ಸಂಕ್ಷಿಪ್ತವಾಗಿ ವರ್ಣಿಸಿರುವುದು ಕಂಡುಬರುತ್ತದೆ. ಯುದ್ಧದಲ್ಲಿ ಆನೆಗಳ ಪಾತ್ರ ಹಿರಿದಾಗಿತ್ತು. ಕೋಟೆಗಳ ಬೃಹದಾಕಾರದ ದ್ವಾರಗಳನ್ನು ನೂಕಲು, ಬೃಹತ್ ಮರಗಳು ರಸ್ತೆಯಲ್ಲಿ ಅಡ್ಡಬಿದ್ದು ತೊಂದರೆಯಾದರೆ ಮುಕ್ತಗೊಳಿಸಲು ಇವುಗಳ ಫಾತ್ರ ಬಹುಮುಖ್ಯವಾಗಿದ್ದಿತ್ತು. ವಿಜಯನಗರದ ನಿರ್ಣಾಯಕ ಯುದ್ಧವಾದ ರಕ್ಕಸತಂಗಡಿ ಯುದ್ಧದಲ್ಲಿ ೮೦ ವರ್ಷದ ಹರೆಯದ ರಾಮರಾಯನು ಆನೆಯ ಮೇಲೆ ಪಲ್ಲಕ್ಕಿಯನ್ನು ಇರಿಸಿ ತಾನು ಕುಳಿತ ಎರಡು ಕಡೆಯಲ್ಲಿಯೂ ಚಿನ್ನ, ಬೆಳ್ಳಿ, ವಜ್ರಗಳನ್ನು ತುಂಬಿಕೊಂಡು ಯುದ್ಧದಲ್ಲಿ ಶೌರ‍್ಯ, ಪೌರುಷ ಮೆರೆದ ಸೈನಿಕರಿಗೆ ಅಲ್ಲಿಯೇ ಬಹುಮಾನ ಕೊಡಲು ೧೮ ವರ್ಷದ ಪ್ರಾಯದ ಯುವಕನಂತೆ ಕಂಗೊಳಿಸಿಕೊಂಡು ಬರುತ್ತಿದ್ದನೆಂದು ವರ್ಣಿಸಿರುವುದು ಕಂಡುಬರುತ್ತದೆ. ಧಾರ್ಮಿಕ ಕಾರ್ಯಗಳಿಗೆ ಆನೆಯ ಪಾತ್ರ ಬಹು ಮುಖ್ಯವಾಗಿದ್ದಿತ್ತೆನ್ನಬಹುದು. ಪ್ರನನ್ನ ವೆಂಕಟದಾಸರು ಆನೆಯನ್ನು ಕೃಷ್ಣನಿಗೆ ಸಂಕೇತವಾಗಿಟ್ಟುಕೊಂಡು,

ಆನೆ ಬಂತಾನೆ ಬಂತಾನೆ ಬಂತಮ್ಮ
ದಾನವಕದಳಿಯ ಕಾನನ ಮುರಿವ
ಉಂಗುರಗೊರಳ ನೀಲಾಗಚಲ್ವಾನೆ
ಕಂಗಳಿಹೊಳಿವ ವ್ಯಘ್ರಾಂಗುಳಿಯಾನೆ
ಬಂಗಾರದಣುಘಂಟಿ ಶೃಂಗಾರದಾನೆ
ಮಂಗಳತಿಲಕನ ರಂಗನೆಂಬಾನೆ.

ಎಂದು ಸ್ವಾರಸ್ಯಕವಾಗಿ ನಿರೂಪಿಸಿರುವುದಕ್ಕೆ ಮತ್ತೊಬ್ಬ ದಾಸರಾದ ವಾದಿರಾಜರು

ಕುದುರೆ ಬಂದಿದೆ ವಾದಿರಾಜಗೊಲಿದು
ಬಂದು ಸ್ವಾದಿಪುರದಲ್ಲಿ ನಿಂದು
ಮುಂಗಾಲು ಕೆದರಿ ಕುಣಿವ ಕುದುರೆ
ಹಿಂಗಾಲಲಸುರರ ಬಡಿವ ಕುದುರೆ
ರಂಗನೆಂದರೆ ಸಲಹೋ ಕುದುರೆ
ತುಂಗಹಯವದನ ಕುದುರೆ

ಎಂದು ಕುದುರೆಗೆ ಹೋಲಿಸಿಕೊಂಡು ಹೇಳಿರುವುದು ಅರ್ಥಪೂರ್ಣವಾಗಿದೆ. ಅಂದರೆ ಈ ಮೇಲಿನ ಎರಡು ಹಾಡುಗಳಿಂದ ಅಂದಿನ ಕಾಲದಲ್ಲಿ ಆನೆ ಹಾಗೂ ಕುದುರೆಗಳು ಕೇವಲ ಯುದ್ಧಕ್ಕೆ ಮಾತ್ರವಲ್ಲದೆ ಧಾರ್ಮಿಕ ವಿಧಿವಿಧಾನಗಳಲ್ಲಿ ಅವುಗಳ ಪಾತ್ರ ಎಷ್ಟರ ಮಟ್ಟಿಗೆ ಬೆಳೆದಿತ್ತೆಂಬುದನ್ನು ತೋರಿಸುತ್ತದೆ. ಆನೆಗಳನ್ನು ಸಮರಕ್ಕೆ ಸಿದ್ಧಗೊಳಿಸಿದ ರೀತಿಗಳನ್ನು ಗದುಗಿನ ಭಾರತವು “ಕಡಿಯಣವದಾನೆಗಳ ಮೋರೆಗ ತೊಡಿಸಿದರು, ದಂತಿಗಳ ಹೆಗಲಲಿ ನಿಡುನೊಗನ ಕಟ್ಟಿದರು, ಕಿವಿಯಲ್ಲಿ ಕೀಲುಗಳ ಸರಿಸಿ ಜಡಿವಗುಳವನು ಹಾಯ್ಕಿ ಬೀಸಿದರೊಡನೆ ಹಕ್ಕರಿಕೆ ಜೋಡಿಸಲಡಸಿಗಾಲಿಯ ಬಿಗಿದು ಗಜಬಜಿಸಿ” ಎಂದು ವರ್ಣಿಸಿರುವುದು ಕಂಡು ಬರುತ್ತದೆ.

ಒಂಟೆಗಳು ವಿಜಯನಗರದರಸರ ಸೈನ್ಯಬಲದ ಒಂದು ಭಾಗವಾಗಿತ್ತೆಂದೂ ಆಧಾರಗಳಿಂದ ತಿಳಿದುಬರುತ್ತದೆ. ಹಜಾರ ರಾಮದೇವಾಲಯದ ಹೊರಗೋಡೆಯ ಉಬ್ಬು ಚಿತ್ರಗಳು ಹಾಗೂ ಮಹಾನವಮಿ ದಿಬ್ಬದ ಮೇಲಿರುವ ಒಂಟೆಯು ಸಮರಕ್ಕೆ ಹೊರಡುತ್ತಿರುವ ಚಿತ್ರಗಳಿಂದ ಇದನ್ನು ಗಮನಿಸಬಹುದು. ಆದರೆ ಇವುಗಳ ವರ್ಣನೆಯು ಸಾಹಿತ್ಯದಲ್ಲಿ ಹೆಚ್ಚಾಗಿ ಕಂಡುಬರುವುದಿಲ್ಲ. ಅಂದು ಇವುಗಳನ್ನು ಹೆಚ್ಚಾಗಿ ರಾಜಧಾನಿಯ ಬೀದಿಗಳಲ್ಲಿ ಸರಕುಗಳನ್ನು ಸಾಗಿಸಲು ಉಪಯೋಗಿಸುತ್ತಿದ್ದರೆಂದು ಕಂಡುಬರುತ್ತದೆ. ನಂಜುಂಡ ಕವಿಯ ರಾಮನಾಥ ಚರಿತೆಯಲ್ಲಿ ಮಾತ್ರ ಈ ರೀತಿಯ ಒಂಟೆಯ ಚಿತ್ರಣ ಕಂಡುಬರುತ್ತದೆ.

.೩. ಲಾಂಛನ

ವಿಜಯನಗರದರಸರ ರಾಜಲಾಂಛನವು ಅಥವಾ ರಾಜಚಿಹ್ನೆ ವರಾಹ. ಇದು ಪುರಾಣದಲ್ಲಿ ಬರುವ ಮಹಾವಿಷ್ಣುವಿನ ಮೂರನೆಯ ಅವರಾರವೆಂದು ನಂಬಲಾಗಿದೆ. ತನ್ನ ದುಷ್ಕೃತ್ಯಗಳಿಂದ ಭೂಲೋಕದ ಜನರನ್ನು ದುಃಖದ ಸಮುದ್ರದಲ್ಲಿ ಮುಳುಗಿಸಿ ಪ್ರಜಾಪೀಡಿತನಾಗಿದ್ದ ಹಿರಣ್ಯಾಕ್ಷನನ್ನು ಸಂಹರಿಸಲು ವಿಷ್ಣವು ವರಾಹಾವತಾರವೆನ್ನಿತ್ತಿ ಬಂದನು, ರಾಕ್ಷಸನಾದ ಹಿರಣ್ಯಾಕ್ಷನನ್ನು ಕೊಂದು ಲೋಕಕ್ಕೆ ಸುಖ ಶಾಂತಿಯನ್ನು ತಂದು ಕೊಟ್ಟನೆಂದು ಪುರಾಣವು ಹೇಳುತ್ತದೆ. ಅದೇ ರೀತಿಯಲ್ಲಿ ಉತ್ತರದ ಕಡೆಯಿಂದ ದಕ್ಷಿಣ ಭಾರತದ ಕಡೆಗೆ ಸಾಗರೋಪಾದಿಯಾಗಿ ಹರಿದು ಬರುತ್ತದ್ದ ಮುಸ್ಲಿಂರ ದಾಳಿಯನ್ನು ತಡೆದು ನಮ್ಮ ಸಂಸ್ಕೃತಿಯನ್ನು ರಕ್ಷಿಸಲು, ಪೋಷಿಸಿ ಬೆಳಸಲು ನಿರ್ಮಿತವಾದ ವಿಜಯನಗರ ಸಾಮ್ರಾಜ್ಯವು ಅನ್ಯ ಧರ್ಮಿಯರ ಧಾಳಿಯನ್ನು ಸಂಹಾರ ಮಾಡುವ ದೃಷ್ಟಿಯಿಂದ ವರಾಹ ಲಾಂಛನವನ್ನು ಹೊಂದಿರಬಹುದೆಂದು ಹೇಳಬಹುದಾಗಿದೆ.

***