ಸಾಮಾನ್ಯವಾಗಿ ಯಾವುದೇ ಹೊಸ ಸಾಮ್ರಾಜ್ಯವಾಗಲಿ ಅಥವಾ ಸಂಸ್ಥಾನವಾಗಲಿ ಸ್ಥಾಪನೆಯಾದ ಮೇಲೆ ಮೊದಲು ಕೈಗೊಳ್ಳುತ್ತಿದ್ದ ಕಾರ್ಯವೆಂದರೆ ದೇವಾಲಯಗಳ ನಿರ್ಮಾಣ, ಇಲ್ಲವೇ ಆಗಲೇ ಆಸ್ಥಿತ್ವದಲ್ಲಿದ್ದ ದೇವಾಲಯಗಳಿಗೆ ದತ್ತಿಗಳನ್ನು ಕೊಡುವುದು. ಜೀರ್ಣೋದ್ದಾರ ಮಾಡಿಸುವ ಕಾರ್ಯದಲ್ಲಿ ತೊಡಗುತ್ತಿದ್ದರು. ಏಕೆಂದರೆ ಹೊಸ ಅರಸರಿಗೆ ಇದರಿಂದ ಸಾಮಾನ್ಯ ಜನತೆಯು ಉತ್ತಮ ಬೆಂಬಲ ನೀಡಲೆಂದು ಕೈಗೊಳ್ಳುತ್ತಿದ್ದ ತಂತ್ರವಿರಬಹುದು. ಇದರ ಜೊತೆಗೆ ತಮ್ಮ ರಾಜಕೀಯ ಚಟುವಟಿಕೆಗಳಿಗೆ ಜನ ಸಾಮಾನ್ಯರ ಬೆಂಬಲ ಪಡೆಯಲು ಮಾಡುತ್ತಿದ್ದ ಯುಕ್ತಿಯಾಗಿರಬಹುದು. ಈ ಮೇಲಿನ ತಂತ್ರಕ್ಕೆ ವಿಜಯನಗರದರಸರು ಹೊರತಾಗಿರಲಿಲ್ಲ. ಸಾಮ್ರಾಜ್ಯದ ಪ್ರಾರಂಭದ ವಶದವರಾದ ಸಂಗಮರು ಈ ಮೇಲಿನ ತಂತ್ರ ಹಾಗೂ ಉಪಯೋಗವನ್ನು ಹೆಚ್ಚಿನ ಪ್ರಮಾಣದಲ್ಲಿಯೇ ಪಡೆದರೆನ್ನಬಹುದು. ಮೊದಲಿಗೆ ಇವರು ಈಗಾಗಲೇ ರಾಜ್ಯಾದ್ಯಂತ ವಿಶಾಲವಾಗಿ ತನ್ನದೆಯಾದ ಶೈಲಿಯಲ್ಲಿ ಅವರದೇ ಆದ ಸಂಸ್ಕೃತಿಯ ಧಾರೆ ಹರಿಸಿದ್ದರು. ಇದರಿಂದಾಗಿ ಇವರೆಲ್ಲರಿಗಿಂತಲೂ ಭಿನ್ನವಾದ, ವಿಶೇಷವಾದ ಶೈಲಿಯ ಹುಡುಕಾಟದಲ್ಲಿ ವಿಜಯನಗರದರಸರು ತೊಡಗಿದರು. ಹೊಯ್ಸಳರು ತಮ್ಮ ದೇವಾಲಯಗಳನ್ನು ಒಳಪದ ಕಲ್ಲಿನಿಂದ ನಿರ್ಮಿಸಿದ್ದರು. ಈ ಕಲ್ಲು ಸ್ವಲ್ಪ ಮೃದುವಾದುದರಿಂದ ಸೂಕ್ಷ್ಮ ಕೆತ್ತನೆಗೆ ಹೆಚ್ಚಿನ ಅನುಕೂಲಕರವಾಗಿದ್ದಿತ್ತು. ಅಂದರೆ ಈ ಒಳಪದ ಕಲ್ಲು ದಕ್ಷಿಣ ಕರ್ಣಾಟಕದಲ್ಲಿ ಮಾತ್ರ ಹೇರಳವಾಗಿ ದೊರಕುತ್ತಿತ್ತು. ವಿಜಯನಗರ ರಾಜಧಾನಿಯ ಸುತ್ತಲೂ ಸುಲಭವಾಗಿ ದೊರಕುತ್ತಿದ್ದದ್ದು ಒರಟು ಕಲ್ಲುಗಳು ಅಥವಾ ಬೆಣಚುಕಲ್ಲು ಇದರಿಂದಾಗಿ ಇವರಿಗೆ ಸುಮಾರು ವರ್ಷಗಳು ಯಾವ ತರಹದ ಕಲ್ಲಿನಿಂದ ದೇವಾಲಯಗಳನ್ನು ಕಟ್ಟಿಸಬೇಕೆನ್ನುವ ಪ್ರಶ್ನೆಯನ್ನು ಎದುರಿಸಬೇಕಾಯಿತು. ಕೊನೆಗೆ ದಕ್ಷಿಣ ಕರ್ನಾಟಕದಿಂದ ಬಳಪದ ಕಲ್ಲನ್ನು ಹಂಪಿಯವರೆಗೆ ಸಾಗಿಸುವುದು ಕಷ್ಟಕರವಾದ ಕೆಲವಾದುದರಿಂದ ನೈಸರ್ಗಿಕವಾಗಿಯೇ ತನ್ನ ಸುತ್ತಮುತ್ತಲೇ ಹೇರಳವಾಗಿ ದೊರಕುತ್ತಿದ್ದ ಬೆಣಚು ಕಲ್ಲುಗಳನ್ನೇ ದೇವಾಲಯದ ನಿರ್ಮಾಣದ ಕಾರ್ಯಕ್ಕೆ ಉಪಯೋಗಿಸಲು ನಿರ್ಧರಿಸಲಾಯಿತು. ಈ ನಿರ್ಧಾರದಿಂದಾಗಿಯೇ ಇಂದಿಗೂ ನಾವು ನೋಡುತ್ತಿರುವ ನೋಡಲೇಬೇಕಾದ ಬೃಹತ್ ದೇವಾಲಯಗಳು ಹಂಪಿಯಲ್ಲಿ ನಿರ್ಮಾಣವಾದದ್ದು ಅಂದು ಕಂಗೊಳಿಸಿ ಇಂದಿಗೂ ಅವರ ಕಂಪನ್ನು ಇತಿಹಾಸವನ್ನು ಜ್ಞಾಪಿಸುತ್ತಿರುವುದು.

ಡಾ. ಎಸ್. ರಾಜಶೇಖರ್ ರವರು ಹೇಳುವ ಹಾಗೆ. ವಿಜಯನಗರದರಸರಿಗಿಂತಲೂ ಹಿಂದೆಯೇ ಹಂಪಿಯ ಹೇಮಕೂಟ ಬೆಟ್ಟದ ಮೇಲೆ ಅನೇಕ ಬೆಣಚು ಕಲ್ಲಿನ ದೇವಾಲಯಗಳು ನಿರ್ಮಾಣವಾಗಿದ್ದವು. ಏಕೆಂದರೆ ವಿಜಯನಗರ ಸ್ಥಾಪನೆಯ ಕೆಲವೇ ಕೆಲವು ವರ್ಷಗಳ ಹಿಂದೆಯಷ್ಟೆ ಹೇಮಕೂಟದಲ್ಲಿಯೇ ವೀರ ಕಂಪಿಲರಾಯನು ತ್ರಿಕೂಟ ದೇವಾಲಯವೊಂದನ್ನು ನಿರ್ಮಿಸಿದ್ದನು ಎಂಬುದಕ್ಕೆ ಶಾಸಾನಾಧಾರಗಳಿವೆ ಎಂದು ವಿವರಿಸುತ್ತಾರೆ. ಇದು ಸತ್ಯವೆನ್ನಬಹುದು. ಅವರೇ ಹೇಳುವ ಹಾಗೆ ಪ್ರಾರಂಭದಲ್ಲಿ ವಿಜಯನಗರ ಅರಸರು ಸಾಮ್ರಾಜ್ಯದ ವಿಸ್ತರಣೆಯಲ್ಲಿ ತೊಡಗಬೇಕಾಯಿತು. ಉತ್ತರದಿಂದ ಮುಸಲ್ಮಾನರು, ಸುತ್ತಮುತ್ತಲಿನ ಸಂಸ್ಥಾನಗಳು, ಪಾಳೇಗಾರರನ್ನು ಸೋಲಿಸುವ ಸಲುವಾಗಿ ಅಪಾರವಾದ ಹಣದ ಅವಶ್ಯಕತೆ ಇದ್ದಿತೆಂದು ಅದ್ದರಿಂದ ಕಡಿಮೆ ಖರ್ಚಿನಲ್ಲಿ ಉತ್ತಮವಾಗಿ ಬಾಳಿಕೆ ಬರುವ ಬೆಣಚುಕಲ್ಲಿನ ದೇವಾಲಯಗಳು, ಹಾಗೂ ಸ್ಮಾರಕಗಳ ನಿರ್ಮಾಣವೇ ಸರಿ ಎಂದು ನಿರ್ಧರಿಸಿ ಸಾಧ್ಯವಾಗಿಸಿದಂತೆ ಕಂಡು ಬರುತ್ತದೆ. ಈ ನಡುವೆ ಕ್ರಿ.ಶ. ೧೩೪೮ರ ತರುವಾಯದಿಂದಲೇ ವಿಜಯನಗರದರಸರು ತಮಿಳು ಪ್ರದೇಶಗಳನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡರೆಂದು ಹೇಳಬಹುದು. ಕ್ರಿ.ಶ. ೧೩೬೩ರಲ್ಲಿ ವೀರ ಕಂಪಣ್ಣನು ಸಂಭೂವರಾಯ ಅರಸ ರಾಜಾನಾರಾಯಣನನ್ನು ಸೋಲಿಸಿ ಮಧುರೈಯನ್ನು ವಶಪಡಿಸಿಕೊಂಡನು (ಇದರ ಬಗ್ಗೆ ಅವನ ಪತ್ನಿಯೇ ರಚಿಸಿರುವ ಸಂಸ್ಕೃತ ಭಾಷೆಯ ವೀರ ಕಂಪಣ್ಣರಾಯಚರಿತಂ ಮಧುರ ವಿಜಯಂ, ಹೆಚ್ಚಿನ ಬೆಳಕನ್ನು ಚೆಲ್ಲುತ್ತದೆ). ಇದರಿಂದಾಗಿ ಸುಮಾರು ಕ್ರಿ.ಶ. ೧೩೭೧ರ ಹೊತ್ತಿಗೆ ದಕ್ಷಿಣ ಭಾರತದ ಅದರಲ್ಲಿಯೂ ತಮಿಳು ಪ್ರದೇಶಗಳು ವಿಜಯನಗರದರಸರ ಆಳ್ವಿಕೆಗೆ ಒಳಪಟ್ಟಿತ್ತು. ಅಲ್ಲಿ ಮೊದಲಿಗೆ ತಮಿಳುನಾಡಿನ ಅನೇಕ ದೇವಾಲಯಗಳನ್ನು ಜೀರ್ಣೋದ್ದಾರ ಮಾಡಿಸುವ ಕಾರ್ಯವನ್ನು ಕೈಗೊಂಡು ಜನರ ಪ್ರೀತಿ ಹಾಗೂ ಸಹಾನೂಭೂತಿಯನ್ನು ಸಂಪಾದಿಸಲು ಪ್ರಾರಂಭಿಸಿದರು. ಹಿಂದೆ ಇದ್ದ ತಮಿಳು ನಾಡಿನ ದೇವಾಲಯಗಳು ಚೋಳರು ಹಾಗೂ ಪಾಂಡ್ಯರಿಂದ ನಿರ್ಮಾಣವಾಗಿದ್ದವು. ಅವು ಸಹ ಬಹುತೇಕ ಬೆಣಚುಕಲ್ಲಿನಿಂದ ನಿರ್ಮೀತವಾಗಿದ್ದವು. ಈ ದೇವಾಲಯಗಳ ಸೌಂದರ್ಯ, ವಿನ್ಯಾಸ ಮತ್ತು ವಿಶಿಷ್ಟ ಶೈಲಿಯಿಂದ ವಿಜಯನಗರದರಸರು, ಸಾಮಂತರು, ದಂಡನಾಯಕರುಗಳು, ಆಕರ್ಷಿತರಾದರು, ಆದರಿಂದಾಗಿಯೇ ವಿಜಯನಗರದ ಅರಸರು ಬೆಣಚುಕಲ್ಲಿನ ದೇವಾಲಯಗಳ ನಿರ್ಮಾಣಕ್ಕೆ ನಿರ್ಧರಿಸಿದಾಗ ಸಹಜವಾಗಿಯೇ ತಮ್ಮ ದೇವಾಲಯಗಳನ್ನು ತಮಿಳು ವಸ್ತುಶೈಲಿ, ಎಂದರೆ ದ್ರಾವಿಡ ಶೈಲಿಯಲ್ಲಿ ಕಟ್ಟಲು ನಿರ್ಧರಿಸಿದರು. ರಾಜಧಾನಿ ಹಂಪಿಯಲ್ಲಿ ಈ ಶೈಲಿಯ ದೇವಾಲಯಗಳನ್ನು ನಿರ್ಮಿಸಲು ತಮಿಳುನಾಡಿನಿಂದಲೇ ಶಿಲ್ಪಿಗಳನ್ನು ಕರೆತಂದಿರಬಹುದೆ ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಮೇಲೆ ತಿಳಿಸಿದಂತೆ ವಿಜಯನಗರದ ಅರಸರ ಕಾಲದಲ್ಲಿಯೇ ಕನ್ನಡನಾಡಿನಲ್ಲಿ ದ್ರಾವಿಡ ಶೈಲಿಯ ದೇವಾಲಯಗಳು ನಿರ್ಮಾಣವಾಗಿರಲಿಲ್ಲ. ಅವರಿಗಿಂತಲೂ ಪೂರ್ವದಲ್ಲಿಯೇ ಅಂದರೆ ಹೊಯ್ಸಳರು, ನೊಳಂಬರು, ಚೋಳರು ಕರ್ನಾಟಕದ ಪ್ರದೇಶಗಳನ್ನು ಆಳುವಾಗ ಮೇಲ್ಕಂಡ ಶೈಲಿಯಲ್ಲಿ ಅನೇಕ ದೇವಾಲಯಗಳನ್ನು ನಿರ್ಮಾಣಗೊಳಿಸಿದ್ದಾರೆ. ಉದಾ. ಕೋಲಾರದ ಕೋಲಾರಮ್ಮ ದೇವಸ್ಥಾನ; ತಲಕಾಡಿನ ಕೀರ್ತಿ ನಾರಾಯಣ ದೇವಾಲಯ (ಕ್ರಿ.ಶ. ೧೧೧೭); ತಲಕಾಡಿನ ಈ ದೇವಾಲಯವೂ ಬೆಣಚುಕಲ್ಲಿನಿಂದಲೇ ನಿರ್ಮಿತವಾಗಿದೆ; ಕಂಬರಹಳ್ಳಿಯ ಪಂಚಕೂಟ ಬಸದಿಗಳು; ಅವನಿಯ ಲಕ್ಷ್ಮಣೇಶ್ವರ, ರಾಮೇಶ್ವರದ ದೇವಾಲಯಗಳು ದ್ರಾವಿಡ ಶೈಲಿಯಲ್ಲಿಯೇ ಇರುವುದು ಕಂಡುಬರುತ್ತದೆ. ಅಷ್ಟೇ ಅಲ್ಲದೆ ಕ್ರಿ.ಶ. ೧೦೩೫ರಲ್ಲಿ ಚೋಳ ಅರಸ ರಾಜೇಂದ್ರ ಚೋಳನ ದಂಡನಾಯಕನೊಬ್ಬನಿಂದ ಜೀರ್ಣೋದ್ದಾರಗೊಂಡ ಕೋಲಾರದ ಕೋಲಾರಮ್ಮ ದೇವಾಲಯ, ಮಾಲೂರು ಪಟ್ಟಣದಲ್ಲಿರುವ ನಾರಾಯಣ ದೇವಾಲಯ; ತಲಕಾಡಿನ ರಾಜರಾಜೇಶ್ವರಿ ದೇವಾಲಯ; ಮಾರೆಹಳ್ಳಿಯ ಲಕ್ಷ್ಮೀನರಿಸಿಂಹ ದೇವಾಲಯ ಮತ್ತು ಪುಂಗನೂರಿನ ಗೋಪಿಕೃಷ್ಣ ದೇವಾಲಯ; ತಿಪಟೂರಿನಲ್ಲಿರುವ ರಾಜಾಧಿರಾಜನ ಕಾಲದಲ್ಲಿ ಕಟ್ಟಿರಬಹುದಾದ ಚೋಳೇಶ್ವರ ದೇವಾಲಯ; ಮೊದಲನೆಯ ಕುಲೋತ್ತುಂಗನ ಕಾಲದಲ್ಲಿ ನಿರ್ಮಿಸಿದ್ದ ಕಣ್ಣಂಬಾಡಿಯ ಕಲ್ಲೇಶ್ವರ ದೇವಾಲಯ; ಯಳಂದೂರಿನ ಸೋಮೇಶ್ವರ ದೇವಾಲಯ; ಎಡತೊರೆಯ ಅಕರೀಶ್ವರ ಮತ್ತು ವಿಘ್ನೇಶ್ವರ ದೇವಾಲಯ; ಉತ್ತನೂರಿನ ವರದರಾಜ ದೇವಾಲಯ; ತಿರುಮಕೂಡಲು ನರಸೀಪುರದ ಅಗಸ್ತ್ಯೇಶ್ವರ ದೇವಾಲಯ; ಸೋಸಲೆಯ ಹೊನ್ನದೇವಿ ದೇವಾಲಯಗಳೆಲ್ಲವೂ ಸಹ ದ್ರಾವಿಡಶೈಲಿಯ ದೇವಾಲಯಗಳೇ.

ದೇವಾಲಯಗಳ ನಿರ್ಮಾಣದಲ್ಲಿ ನಮ್ಮ ಕರುನಾಡಿನ ಸಂಸ್ಕೃತಿಯು ಹಿಂದಿನ ಕಾಲದಿಂದಲೂ ಅನುಸರಿಸಿಕೊಂಡು ಬಂದಿರುವ ಶೈಲಿಯನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು.

. ನಾಗರ ಶೈಲಿ : ಅಂದರೆ ಬುಡದಿಂದ ತುದಿಯವರೆವಿಗೂ ಚೌಕೋನವಾಗಿರುವುದು (ಕೆಳಗಿನಿಂದ ಮೇಲಿನವರೆವಿಗೂ).

. ದ್ರಾವಿಡ ಶೈಲಿ : ‘ಗ್ರೀವ’ದಿಂದ ಮೇಲಕ್ಕೆ ಆರು ಅಥವಾ ಎಂಟು ಮುಖಗಳಿರುವುದು (ಗರ್ಭಗುಡಿಯ ಮೇಲಿನ ಕಟ್ಟಡದಿಂದ)

. ವೇಸರ ಶೈಲಿ : ದೇವಾಲಯದ ಶೈಲಿಯೇ ವೃತ್ತಾಕಾರವಾಗಿರುವುದು (ಗ್ರೀವ’ದಿಂದ ಮೇಲೆ ವೃತ್ತಾಯತ, ಅರ್ಧವೃತ್ತ, ಗಜಪೃಷ್ಠಿ, ದ್ವಾಶ್ರವೃತ್ತ). ಈ ರೀತಿಯ ಎಲ್ಲಾ ದೇವಾಲಯಗಳನ್ನು ವೇಸರ ಶೈಲಿ ಎಂದು ಕರೆಯುತ್ತಾರೆ.

ಇದರಲ್ಲಿ ವಿಜಯನಗರದ ಅರಸರು ದ್ರಾವಿಡ ಶೈಲಿಯನ್ನು ಅನುಸರಿಸಿಕೊಂಡು ಬೃಹತ್ ದೇವಾಲಯಗಳನ್ನು ನಿಮಿಸಲು ಪ್ರಾರಂಭಿಸಿದರು. ಹಾಗೆಯೇ ಹಿಂದೆ ಇದ್ದ ಹಳೇ ದೇವಾಲಯಗಳ ಜೀರ್ಣೋದ್ದಾರದ ಕಾರ್ಯವೂ ಸಹ ನಡೆಯಲು ಪ್ರಾರಂಭವಾಯಿತು. ವಿಜಯನಗರದ ಅರಸರು ದೇವಾಲಯಗಳನ್ನು ವಿಶಾಲವಾದ ಜಾಗದಲ್ಲಿ ವಿಸ್ತಾರವಾಗಿ ನಿರ್ಮಿಸುತ್ತಿದ್ದರು. ಕಾರಣವೆಂದರೆ ಅಂದು ಪ್ರತಿಯೊಂದು ಧಾರ್ಮಿಕ ಕಾರ್ಯಚರಣೆಗಳು, ರಾಜ, ಯುವರಾಜರ ಪಟ್ಟಾಭಿಷೇಕಗಳು, ರಾಜ ಪರಿವಾರದವರ ಮದುವೆ, ಸಮಾರಂಭಗಳು, ನಾಡಹಬ್ಬಗಳು, ಸಂಗೀತ, ನಾಟ್ಯ ಪ್ರದರ್ಶನಗಳೆಲ್ಲವೂ ಈ ದೇವಾಲಯಗಳಲ್ಲಿಯೇ ನಡೆಸಲಾಗುತ್ತಿದ್ದುದರಿಂದ ಚಿಕ್ಕದೇವಾಲಯಗಳು ಸಾಲದಾಗುತ್ತಿತ್ತು. ಅದ್ದರಿಂದ ವಿಜಯನಗರದ ಅರಸರು ಬೃಹತ್ ದೇವಾಲಯಗಳನ್ನು ವಿಸ್ತಾರವಾಗಿ ನಿರ್ಮಿಸಲು ಎಡೆಮಾಡಿದರು.

.೧ ಸಾಂಸ್ಕೃತಿಕ ಶೈಲಿಯ ವಾಸ್ತುಶಿಲ್ಪ

ಶತಮಾನಗಳಿಂದಲೂ ಕರ್ನಾಟಕದಲ್ಲಿಯೇ ಅಲ್ಲದೆ ಭಾರತ ದೇಶದಲ್ಲಿಯೇ ದೇವಾಲಯವು ಒಂದು ಸಾಮಾಜಿಕ ಸಂಸ್ಥೆಯಾಗಿ ಬೆಳೆದು ಬಂದಿದೆ. ಏಕೆಂದರೆ ದೇವಾಲಯವೇ ಅಂದು ವಿದ್ಯಾಕೇಂದ್ರ, ಧಾರ್ಮಿಕ ಕೇಂದ್ರ ಸಂಗೀತ ಮುಂತಾದ ಲಲಿತಕಲೆಗಳಿಗೆ ಆಶ್ರಯ ನೀಡುವ ತಾಣವಾಗಿದ್ದಿತು. ಇದಕ್ಕಾಗಿಯೇ ಇವುಗಳಿಗೆ ಹೆಚ್ಚಿನ ಮಹತ್ವ ಕೊಡಲಾಗಿತ್ತು. ಜೀವನಕ್ಕೆ ಅವಲಂಭಿಸಿರುವ ಮನೆಗಳಲ್ಲಿ, ರಾಜಧಾನಿಯಲ್ಲಿ ಅರಮನೆಗಳು ಶಾಶ್ವತವಾಗಿ ಉಳಿಯಬಹುದಾದ ಕಲ್ಲಿನ ಕಟ್ಟಡಗಳಾಗಿರಲಿಲ್ಲ. ಆದರೆ ದೇವಾಲಯಗಳನ್ನು ಮಾತ್ರ ಶಾಶ್ವತವಾಗಿ ಉಳಿಯಲು ಕಲ್ಲಿನಿಂದ ಕಟ್ಟಿಸಿದರು. ಇದಕ್ಕೆ ವಿಜಯನಗರದ ಸಾಮ್ರಾಜ್ಯದ ಹಂಪಿಯಲ್ಲಿ ಕಂಡುಬರುವ ದೇವಾಲಯಗಳೇ ಸಾಕ್ಷಿ. ಇದಕ್ಕೆ ನಿದರ್ಶನವೆಂಬಂತೆ ರಾಜರ ಅರಮನೆಗಳೆಲ್ಲವೂ ನೆಲಸಮವಾಗಿರುವುದು ಕಂಡುಬರುತ್ತದೆ.

ಇಂದು ನಾವು ದೇವಾಲಯಗಳನ್ನು ಅಧ್ಯಯನ ಮಾಡುವಾಗ ದೇವಾಲಯದ ಮೇಲಿರುವ ಪೂಜ್ಯತೆ ಹಾಗೂ ಭಕ್ತಿಯಿಂದಾಗಿ ಅದನ್ನು ನಮ್ಮ (ಮಾನವನ) ದೇಹದ ಭಾಗಗಳೊಂದಿಗೆ ಗುರ್ತಿಸಿಕೊಳ್ಳುವುದು ವಾಡಿಕೆಯಾಗಿದೆ. ಪಾದ, ಚರಣ, ಆಂಘ್ರಿ, ಜಂಘ, ಕಟಿ, ಕುಕ್ಷಿ, ಗ್ರೀವ, ಕಂಠ, ಶಿಖರ, ಶಿರ, ಮಸ್ತಕ, ಮುಖ, ವಕ್ತ್ರ, ನಾಸಿಕ ಇತ್ಯಾದಿ ಹೆಸರುಗಳನ್ನು ಕೊಟ್ಟಿರುವುದು ಕಂಡುಬರುತ್ತದೆ. ಈ ಮೇಲಿನ ಹೆಸರುಗಳನ್ನು ಗುರ್ತಿಸುವುದಕ್ಕೂ ಮೊದಲು ಅಸ್ತಿತ್ವಕ್ಕೆ ಬಂದುದು ಕೇವಲ ಗರ್ಭಗೃಹ ಮಾತ್ರ ದೇವರನ್ನು ಈ ಸಣ್ಣ ಕೋಣೆಯಲ್ಲಿ ಇಟ್ಟು ಪೂಜಿಸುತ್ತಿದ್ದರು. ಈ ಗರ್ಭಗೃಹದ ಮೇಲೆಯೇ ಒಂದು ಶಿಖರವನ್ನು ಎತ್ತರಿಸಿ ಕಟ್ಟುತ್ತಿದ್ದರು. ಇದಕ್ಕೆ ವಿಮಾನ ಎಂದು ಹೆಸರು ಕಟ್ಟಡದ ತಳಹದಿಯಿಂದ ಪ್ರಾರಂಭವಾಗಿ ಭಿತ್ತಿ (ಗೋಡೆ), ಪೊದ (ಕಂಭ) ಬೋಧಿಗೆ (ಪ್ರಸ್ತರ), ಕಂಠ (ಗ್ರೀವ) ಮತ್ತು ಶಿಖರಗಳನ್ನೊಳಗೊಂಡ ಎಲ್ಲ ಭಾಗಗಳಿಗೂ ವಿಮಾನವೆಂದು ಹೆಸರಿದೆ. ಶಿಖರದ ಮೇಲೆ ಸ್ತೂಪಿ ಇರುತ್ತದೆ. ಇದು ಕವುಚಿದ ಬೋಗುಣಿ ಅಥವಾ ಗಂಟೆಯಾಕಾರಾದಲ್ಲಿದ್ದು ಮೇಲುಗಡೆ ಒಂದು ಕಳಶವಿರುತ್ತದೆ. ಶಿಖರದ ಬುಡದಲ್ಲಿ ಮುಂದಕ್ಕೆ ಚಾಚಿದ ಭಾಗವಿದ್ದು ಅದರ ಮೇಲೆ ತೆರೆದ ಬಾಯಿ ನರಸಿಂಹ ಮುಖದ ಆಕೃತಿ ಇರುತ್ತದೆ.ಇದಕ್ಕೆ ಕೀರ್ತಿಮುಖ ಎಂದು ಕರೆಯಲಾಗಿದ್ದು. ಈ ಕೀರ್ತಿ ಮುಖದ ಮಧ್ಯೆ ಇರುತ್ತದೆ. ಇದಕ್ಕೆ ಕೀರ್ತಿಮುಖ ಎಂದು ಕರೆಯಲಾಗಿದ್ದು, ಈ ಕೀರ್ತಿ ಮುಖದ ಮಧ್ಯೆ ಒಮ್ಮೊಮ್ಮೆ ಶಿಲ್ಪಗಳನ್ನು ಕೆತ್ತಿರುವುದು ಕಂಡುಬರುತ್ತದೆ. ಗರ್ಭಗೃಹದ ಮುಂದಕ್ಕೆ ಹೊಂದಿಕೊಂಡಂತಿರುವುದು ಅಂತರಾಳ, ಇದು ಸಾಮಾನ್ಯವಾಗಿ ಆಯಾತಾಕಾರವಾಗಿರುತ್ತದೆ. ಇದನ್ನೇ ಸುಕನಾಸಿಯೆಂದೂ, ಅರ್ಧಮಂಟಪವೆಂದೂ ಕರೆಯುವ ರೂಢಿ ಇದೆ. ನವರಂಗ ಎಂಬುದು ಈ ಅಂತರಾಳದ ಮುಂದುಗಡೆಗೆ ಸೇರಿಸಲಾದ ಭಾಗ. ಮೇಲೆ ವರ್ಣಿಸಿರುವ ಎಲ್ಲಾ ರೀತಿಯ ದೇವಾಲಯಗಳೂ ಸಹ ವಿಜಯನಗರದ ಹಿಂದಿನ ಕಾಲದ ವಾಸ್ತುಶಿಲ್ಪದ ಕೆಲವು ಪ್ರಮುಖ ಲಕ್ಷಣಗಳೆಂದು ಹೇಳಬಹುದಾಗಿದೆ.

ವಿಜಯನಗರದರಸರ ಕಾಲದಲ್ಲಿ ಮೇಲಿನವುಗಳಲ್ಲಿ ಕೆಲವು ಬದಲಾವಣೆಗಳಾದುವಲ್ಲದೆ. ಹಲವಾರು ಹೊಸ ಹೊಸ ಅಂಶಗಳೂ ಸೇರಿಕೊಂಡು “ವಿಜಯನಗರ ಶೈಲಿ” ಎಂಬ ಹೊಸ ಶೈಲಿಯನ್ನೇ ಹುಟ್ಟು ಹಾಕಿತ್ತೆನ್ನಬಹುದು. ಇತಿಹಾಸದಿಂದ ನಮಗೆಲ್ಲ ತಿಳಿದಿರುವ ಹಾಗೆ ಹಿಂದೂಧರ್ಮವನ್ನು ರಕ್ಷಿಸಲೆಂದು ಈ ಹೊಸ ಸಾಮ್ರಾಜ್ಯ ಹುಟ್ಟಿಕೊಂಡಿತು ಎಂಬುದನ್ನು ಹಾಗೂ ಧರ್ಮಪ್ರಚಾರಕ್ಕಾಗಿ ದೇವಾಲಯಗಳನ್ನು ಮಾಧ್ಯಮಗಳಾಗಿ ಉಪಯೋಗಿಸಿಕೊಂಡಿರುವುದು ತಿಳಿದಿರುವ ವಿಷಯವೇ. ಇದನ್ನು ಗಮನಿಸಿದರೆ ಹಿಂದೂ ಸಂಸ್ಕೃತಿಯ ಎಲ್ಲ ವೈಶಿಷ್ಟ್ಯಗಳನ್ನೂ ಸಂರಕ್ಷಿಸಿ, ಪುನಃ ಶ್ವೇತನಗೊಳಿಸಿ ವೈಭವೋಪೇತವಾಗಿ ಮಾಡುವುದು ಅಂದಿನ ಅರಸರ ಪ್ರಮುಖ ಕರ್ತವ್ಯವಾಗಿದ್ದಿತ್ತು. ಅದಕ್ಕಾಗಿಯೇ ಸಂಗೀತ, ಲಲಿತಕಲೆ ಮುಂತಾದವುಗಳಿಗೆ ವಿಶೇಷವಾದ ಪ್ರೋತ್ಸಾಹ ನೀಡಲಾಯಿತ್ತೆನ್ನಬಹುದು. ದೇವಾಲಯದಲ್ಲಿ ದುಃಖ ಮತ್ತು ರೌದ್ರಕರವಾದ ಪ್ರಸಂಗಗಳನ್ನು ಚಿತ್ರಿಸಬಾರದೆಂದೂ, ನಮ್ಮ ಹಿರಿಯರ ದೃಷ್ಟಿಯಲ್ಲಿ ದೇವಾಲಯಗಳೂ ಸಕಲ ಕಲಾಪ್ರದರ್ಶನ ಶಾಲೆಗಳಾದುದರಿಂದ ಅಲ್ಲಿ ಕಾಮ (ಮಿಥುನ ಶಿಲ್ಪ) ಕಲಾ ಪ್ರದರ್ಶನಕ್ಕೂ ವಿಜಯನಗರದ ಅರಸರು ಅವಕಾಶ ಕಲ್ಪಿಸಿದ್ದರು. ಹಾಗೆಯೇ ಉತ್ಕ್ರಷ್ಟವಾದ ಕಲೆಯಲ್ಲಿಯೇ ನಿಜವಾದ ದೇವಾಂಶವಿದೆ. ಅದು ಎಂದೆಂದಿಗೂ ಅನಂದದಾಯಕವಾದದ್ದು ಹಾಗೂ ನಿಷ್ಠೆಗೆ ಪ್ರಮುಖ ಸಾಧನವಾದುದು. ಇದಕ್ಕೆ ಸಾಕ್ಷಿಯೆಂಬಂತೆ ಇಂದಿಗೂ ಹಂಪಿಯ ದೇವಾಲಯಗಳಲ್ಲಿ ಶಿಲ್ಪ, ಚಿತ್ರ, ನೃತ್ಯ ನಾಟ್ಯಗಳು ಅವ್ಯಕ್ತ ಸೌದರ್ಯವನ್ನು ವ್ಯಕ್ತಗೊಳಿಸುತ್ತಾ ನಿಂತಿರುವುದೆ ಆಗಿದೆ.

ಮೊದಲು ಇಂಥಹ ದೇವಾಲಯಗಳನ್ನು ನಿರ್ಮಿಸಲು, ದೇವಾನುದೇವತೆಯರನ್ನು ಕಲ್ಲಿನಲ್ಲಿ ಕಡೆದು ಸುಂದರ ರೂಪನೀಡಲು, ದೇವಾಲಯದ ಪ್ರತಿಯೊಂದು ಹಂತವನ್ನು ಸುಂದರವಾದ ಕೆತ್ತನೆಯಿಂದ ನಿರ್ಮಿಸಬೇಕಾದರೆ ಶಿಲ್ಪಿಯು ವಿವಿಧ ಶಾಸ್ತ್ರಗಳ ಪ್ರವೀಣನಾಗಿರಲೇಬೇಕಾಗುತ್ತದೆ. ಉದಾಹರಣೆಗೆ :

೧. ಶಿಲ್ಪಿಯು ಒಬ್ಬ ಯೋಗಿಯಾಗಿ : ಭಾರತೀಯ ಶಿಲ್ಪಿಯು ಒಬ್ಬ ಯೋಗಿ, ಶಾಂತಿಯನ್ನು ನೀಡುವ, ಅನಂದಕರವಾದ ದೃಶ್ಯವು ಆ ಶಿಲೆಯಲ್ಲಿ ಕೆತ್ತಿ ಮೂಡಿಸುವ ಹಾಗೆ ಪರಿವರ್ತಿಸುವಲ್ಲಿ ಶಿಲ್ಪಯು ಸಹ ಒಬ್ಬ ಯೋಗಿಯಾಗಿರುತ್ತಾನೆ. ಅವನು ಎಲ್ಲೊ ತನ್ನ ಬಾಹ್ಯ ಸೌಂದರ‍್ಯವನ್ನು ಪ್ರಕಟಿಸಲು ಪ್ರಯತ್ನಿಸಬಾರದು. ಉದಾ : ಬುದ್ಧನ, ಶಿವನ ಧ್ಯಾನಮಗ್ನ ಶಿಲ್ಪಗಳನ್ನು ನಿರ್ಮಿಸುವಾಗ ಈ ಭಾವನೆಗಳು ಮೂಡುವುದು ಸಹಜವಾಗಿ ವ್ಯಕ್ತವಾಗುತ್ತದೆ.

೨. ಶಿಲ್ಪಯು ಒಬ್ಬ ಭೂಗರ್ಭಶಾಸ್ತ್ರಜ್ಞನಾಗಿರುತ್ತಾನೆ : ತಾನು ನಿರ್ಮಿಸುತ್ತಿರುವ ಶಿಲ್ಪಕ್ಕೆ (ಅದು ದೇವತಾಮೂರ್ತಿಯಾಗಿರಲಿ ಅಥವಾ ದೇವಾಲಯದ ಕಂಬಗಳಾಗಿರಲಿ) ಈ ಶಿಲೆಯು ಯೋಗ್ಯವಾದುದೆಂದು ಗುರ್ತಿಸುವಲ್ಲಿನ ಸನ್ನಿವೇಶದಲ್ಲಿ ಅವನು ಭೂಗರ್ಭಶಾಸ್ತ್ರದಲ್ಲಿ ಪ್ರವೀಣನಾಗಿರಲೇಬೇಕು. ಉದಾ : ವಿಠಲಸ್ವಾಮಿ ದೇವಾಲಯದ ಕಂಬಗಳು ಸಪ್ತಸ್ವರಗಳ ನಾದವನ್ನು ಮೀಟುವ ಹಾಗೆ ಮಾಡುವಲ್ಲಿ ಇವನು ಜಾಣ್ಮೇ ಮೂಡಿಸಿದ್ದಾನೆ.

೩. ಶಿಲ್ಪಿಯು ಒಬ್ಬ ಕವಿಯಾಗಿಯೂ ಈ ಸನ್ನಿವೇಶದಲ್ಲಿ ಕೆಲಸ ಮಾಡುತ್ತಾನೆ. ಹಾಗೂ ಸೌಂದರ್ಯವನ್ನು ಪ್ರೀತಿಸುವವನಾಗಿರುತ್ತಾನೆ.

೪. ಈ ಸನ್ನಿವೇಶದಲ್ಲಿ ಶಿಲ್ಪಿಯು ಒಬ್ಬ ದಾರ್ಶನಿಕವಾಗಿ, ವಾಗ್ಮಿಯಾಗಿ, ಚಿಂತಕನಾಗಿಯೂ ಕಂಡುಬರುತ್ತಾನೆ ಉದಾ : ಹಜಾರರಾಮ ದೇವಾಲಯದ ಗೋಡೆಯ ಮೇಲೆ ರಾಮಾಯಣ, ಮಹಾಭಾರತ, ಭಗವದ್ಗೀತೆಗಳ ಸುಂದರ ಚಿತ್ರಣವನ್ನು ಶಿಲ್ಪಿಯು ನಿರ್ಮಿಸುವಾಗ ಮೇಲಿನವೆಲ್ಲವೂ ಆಗಿರಲೇಬೇಕಲ್ಲವೆ.

೫. ಶಿಲ್ಪಿಯು ವಾಸ್ತುಶಾಸ್ತ್ರಜ್ಞನಾಗಿರುವುದೂ ಮುಖ್ಯವಾಗಿರುತ್ತದೆ. ದೇವಾಲಯದ ನಿರ್ಮಾಣ ಹಾಗೂ ವಿವಿಧ ರೂಪಗಳು ಎಲ್ಲೆಲ್ಲಿ ಕಂಡುಬರಬೇಕೆಂದು ನಿರ್ಧರಿಸುವ ಸನ್ನಿವೇಶದಲ್ಲಿ ಅವನು ವಾಸ್ತುಶಾಸ್ತ್ರಜ್ಷನಾಗಿರುತ್ತಾನೆ ಎಂಬುದು ಸತ್ಯ.

ಒಬ್ಬ ಶಿಲ್ಪಿಯು ಮೇಲಿನವೆಲ್ಲವನ್ನು ಮೈಗೂಡಿಸಿಕೊಂಡಿದ್ದರೆ ಮಾತ್ರ ಉತ್ತಮ ದೇವಾಲಯಗಳನ್ನು ನಿರ್ಮಿಸಬಲ್ಲವನೆಂದು ಹೇಳುವುದಾದರೆ. ವಿಜಯನಗರದ ಕಾಲದ ದೇವಾಲಯಗಳನ್ನು ಗಮನಿಸಿದರೆ ಅಂದಿನ ಶಿಲ್ಪಗಳು ಮೇಲಿನವೆಲ್ಲವನ್ನೂ ಮೈಗೂಡಿಸಿಕೊಂಡಿದ್ದರೆಂದು ಹೇಳಬಹುದು. ಶಿಲ್ಪಿಯು ಕಲ್ಪನೆಗೆ ಸಹಾಯಕವಾಗುವ ಧ್ಯಾನ ಶ್ಲೋಕಗಳು ನಮ್ಮ ಶಾಸ್ತ್ರಗಳಲ್ಲಿ ಬೇಕಾದಷ್ಟಿವೆ. ಉದಾ : ಶ್ರೀದೇವಿಯ ಧ್ಯಾನ ಶ್ಲೋಕವನ್ನು ಇಲ್ಲಿ ಉಲ್ಲೇಖಿಸಬಯಸಬಹುದಾದರೆ,

            ಅರುಣ ಕಮಲ ಸಂಸ್ಥಾ ತದ್ರಜಃ ಪುಂಜವರ್ಣಾ
ಕರಕಮಲಧೈ ತೇಷ್ಟ್ಯಾಭೀತಿಯುಗ್ಮಾಂಬುಜಾಚ
ಮಣಿ ಮಕುಟ ವಿಚಿತ್ರಾ ಲಂಕ್ಯಾತಾ ಕಲ್ಪಜಾಲೈ
ಭವತು ಭುವನಮಾತಾ ಸಂತಕಂಶ್ರೀಃ ಶ್ರೀಯೈವಃ

ಎಂದು ಸುಂದರವಾಗಿ ನಿರೂಪಿಸುವ ಈ ಶ್ಲೋಕವು ಸಂಕೇತ ವಿದ್ಯೆಗೆ ಹೆಚ್ಚಿನ ಒತ್ತು ನೀಡುತ್ತದೆ. ಈ ಸಂಕೇತ ವಿದ್ಯೆಯು ಮೂರ್ತಿಗೆ ತಕ್ಕ ರೂಪವನ್ನು ವಾತಾವರಣವನ್ನು ಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸಂಕೇತ ವಿದ್ಯೆಯಿಂದ ಕಲಾವಿದರಿಗೆ ಎರಡು ರೀತಿಯಲ್ಲಿ ಸಹಾಯಕವಾಗುತ್ತದೆನ್ನಬಹುದು. ಒಂದನೆಯದಾಗಿ ಶಿಲ್ಪಿಯು ಸ್ಪಷ್ಟವಾಗಿ ಭಾವಿಸಿಕೊಳ್ಳುವುದಕ್ಕೂ ಹಾಗೂ ಎರಡನೆಯದಾಗಿ ಹಾಗೆ ಬಾವಿಸಿಕೊಂಡ ವಿಧಾನವನ್ನು ಸ್ಪಷ್ಟವಾಗಿ ಶಿಲ್ಪದಲ್ಲಿ ರೂಪಿಸುವುದಕ್ಕೂ ಸಹಾಯವಾಗುವಂತೆ ಮಾಡುತ್ತದೆ. ಸಂಕೇತಗಳು ಕಲಾವಿದರಿಗೆ ಯಾವ ವಿಧದಲ್ಲೂ ಬಂಧನವಾಗುವುದಿಲ್ಲ, ಇದಕ್ಕೆ ಬದಲಾಗಿ ಅವನಿಗೆ ಸಹಕಾರಿಯೂ ಮತ್ತು ಅವಶ್ಯಕವೂ ಆಗಿರುತ್ತವೆ. ವಿಜಯನಗರದ ಕಾಲದ ಶಿಲ್ಪಗಳು ಸಹ ಯಾವುದೇ ರೀತಿಯಲ್ಲಿ ಬಂಧನಕ್ಕೆ ಒಳಗಾಗದೆ ಇದ್ದುದರಿಂದಲೇ ಶಿಲ್ಪದಲ್ಲಿ ಆಧ್ಯಾತ್ಮಿಕವಾದ ಮತ್ತು ಕಲಾತ್ಮಕವಾದ ಭಾವನೆಗಳನ್ನು ಸರಿಯಾಗಿ ರೂಪಿಸುವುದಕ್ಕೆ ಕಾರಣವಾಯಿತ್ತೆನ್ನಬಹುದು. ಉದಾ : ವೇಣುಗೋಪಾಲನ ವೇಣುವಾದನದ ಬೆರಳಿನ ಮುದ್ರೆಯನ್ನು ರೂಪಿಸಬೇಕಾದರೆ ಸಂಕೇತ ವಿದ್ಯೆಯು ತಿಳಿಸುವುದೇನೆಂದರೆ “ಬೆರಳಾಟದಲ್ಲಿ ಅಭಿನಯದ ಸೌಜನ್ಯದೊಡನೆ ಮನೋಭಾವದ ದಿವ್ಯತೆಯೂ ಮಿಲನವಾಗಬೇಕು” ಎಂಬುದನ್ನು ಇದಕ್ಕೆ ನಮ್ಮ ಹೊಯ್ಸಳ ಕಾಲದ ನಂತರ ವಿಜಯನಗರ ಕಾಲದ ಶಿಲ್ಪಗಳು ಉತ್ತಮ ನಿದರ್ಶಕರಾಗುತ್ತಾರೆ.

ಹಾಗೆ ನೋಡಿದರೆ ಪ್ರಪಂಚದ ಎಲ್ಲಾ ವಸ್ತುಗಳೂ ಅದರಲ್ಲಿಯೂ ಹಿಂದೂ ಸಂಸ್ಕೃತಿಯಲ್ಲಂತೂ ಪ್ರತಿಯೊಂದು ವಸ್ತುಗಳೂ ಪರಮಾತ್ಮನ ಯಾವುದೋ ಒಂದು ಭಾವಕ್ಕೆ ಸಂಕೇತಗಳಾಗಿರುತ್ತವೆ. ಆದುದರಿಂದ ಶಿಲ್ಪಗೆ ಅವರವರ ಭಾವವನ್ನು ತಿಳಿಯುವುದಕ್ಕೆ ಆಯಾ ವಸ್ತುವಿನ ಚರಿತ್ರೆಯೇ ಸಂಕೇತವಾಗುತ್ತದೆ ಎಂದು ಹೇಳಬಹುದು. ಹಿಂದೂ ದೇವತೆಗಳನ್ನು ನಿರ್ಮಿಸುವಾಗಲಂತೂ ಆ ದೇವತೆಗಳ ಸಂಕೇತವನ್ನು ಮೊದಲು ಶಿಲ್ಪಯು ಕರಗತ ಮಾಡಿಕೊಂಡಿರಬೇಕಾಗುತ್ತದೆ. ಏಕೆಂದರೆ ಆ ದೇವತೆಯನ್ನು (ಬ್ರಹ್ಮ, ವಿಷ್ಣು, ಮಹೇಶ್ವರ, ರಾಮ, ರಾವಣ, ಸೀತೆ, ಕೃಷ್ಣ, ವಿವಿಧ ರೀತಿಯ ಪುರಾಣ ಕಥೆಗಳು) ಗುರುತಿಸಬೇಕಾದರೆ ಅವರು ಧರಿಸುತ್ತಿದ್ದ ಉಡುಪು, ವಸ್ತುಗಳು ಹಾಗೂ ಅವರ ಆಯುಧಗಳು ಸಂಕೇತವಾಗುತ್ತವೆ.

ಸಂಕೇತಗಳನ್ನು ಶಿಲ್ಪಿಯು ಪ್ರಯೋಗಿಸಬೇಕಾದರೂ ಅವನಲ್ಲಿ ಔಚಿತ್ಯವಿರಬೇಕಾಗುತ್ತದೆ ಏಕೆಂದರೆ ಅವುಗಳನ್ನು ಅನ್ಯೋನ್ಯವಾಗಿ ಪ್ರಯೋಗಿಸಬೇಕಾಗುತ್ತದೆ. ಇಲ್ಲದಿದ್ದರೆ ಶಿಲ್ಪದಲ್ಲಿ ಸೌಂದರ್ಯ, ಸತ್ಯವಾಗಲಿ ಸಂಪೂರ್ಣವಾಗಿ ಲಭಿಸುವುದಿಲ್ಲ, ಪ್ರತಿಯಾಗಿ ಪ್ರತಿಮೆಗೆ ದೋಷಗಳು ಸಂಭವಿಸಬಹುದು. ಸಂಕೇತಗಳನ್ನು ಅಳವಡಿಸುತ್ತೇನೆಂದು ಅತಿಯಾಗಿ ಪ್ರಯೋಗಿಸಿದರೆ ಪ್ರತಿಮೆಯ ನಿಜಸ್ವರೂಪವೂ ಮಾಯವಾಗಬಹುದು. ಅದ್ದರಿಂದ ಕಲವಿದರು ಸಮತೂಕವಾದ ಪ್ರಯೋಗದಿಂದ ಮಾತ್ರ ಪ್ರತಿಮೆಗೆ ಉತ್ತಮ ಸ್ವರೂಪವನ್ನು ಕೊಡಲು ಸಾಧ್ಯವಾಗುತ್ತದೆ ಇವುಗಳೆಲ್ಲ ವಿಜಯನಗರದ ಶಿಲ್ಪಗಳು ಪ್ರತಿಯೊಬ್ಬರ ಮನಗೆದ್ದಿದ್ದರೆನ್ನಬಹುದು.

ಹಿಂದೂ ದೇವತೆಗಳಿಗೆ ಕೆಲವು ಸಂಕೇತಗಳು ಆಯುಧಗಳಿಗೆ ರೂಪದಲ್ಲಿರುವುದು ಕಂಡುಬರುತ್ತದೆ. ಖಡ್ಗ, ಬಾಣ, ಅಂಕುಶ, ಶೂಲ, ಖಟ್ಟಾಂಗ, ತ್ರಿಶೂಲ, ಶಕ್ತಿ, ಪಾಶ, ಗುಣಗಳಿಗೆ ಅನುಸಾರವಾದ ಆಯುಧಗಳಲ್ಲಿ ಬೇರೆ ಬೇರೆ ದೇವತೆಗಳಿಗೆ ಅವರವರ ಗುಣಗಳಿಗೆ ಅನುಸಾರವಾಗಿ ಆಯುಧಗಳನ್ನು ಕೊಡಲಾಗಿದೆ. ಹಾಗೆಯೇ ವಾದ್ಯಗಳಲ್ಲಿ ಹಾಗೆಯೇ ಕಮಂಡಲ, ಕನ್ನಡಿಗಳೂ ಬೇರೆ ಬೇರೆ ದೇವತೆಗಳ ಗುಣನಿರೂಪಣೆಗೆ ಅವಶ್ಯಕವಾಗಿವೆ, ಪಶುವರ್ಗದಲ್ಲಿ ಸಿಂಹ, ಎತ್ತು, ಇಲಿ, ಆನೆ, ಕುದುರೆ, ಕೋಳಿ, ಎಮ್ಮೆ, ಆಡು, ಅಮೆ, ಮುಳ್ಳಂದಿ, ಮಕರ, ಕರಡಿ, ಜಿಂಕೆ, ಹಾವು, ಹುಲಿ ಮುಂತಾದವುಗಳು ಬೇರೆ ಭೇರೆ ದೇವತೆಗಳ ನಿರೂಪಣೆಯಲ್ಲಿ ಅತ್ಯಂತ ಹೆಚ್ಚಿನ ಅವಶ್ಯಕವಾಗಿರುವುದಾಗಿದೆ. ಹಾಗೆಯೇ ಮುಖ್ಯವಾಗಿ ದೇವತಾ ಪ್ರತಿಮೆಗಳನ್ನು ಬೇರೆ ಬೇರೆ ಆಸನಗಳಲ್ಲಿ ಕುಳ್ಳಿರಿಸುವುದಕ್ಕೂ ಶಿಲ್ಪಶಾಸ್ತ್ರದ ಪ್ರಮುಖ ಆಧಾರಗಳೇ ಕಾರಣ, ಆ ಆಸನಗಳು ಆಯಾ ದೇವತೆಗಳ ಗುಣಗಳನ್ನು ಅವಲಂಭಿಸಿರುತ್ತದೆ ಎನ್ನಬಹುದು. ಪ್ರಮುಖವಾಗಿ ಕಂಡುಬರುವ ದೇವತೆಗಳ ಗುಣಗಳನ್ನು ದೇವತೆಗಳ ಆಸನಗಳೆಂದರೆ ಕೂರ್ಮಾಸನ, ಮಕರಾಸನ, ಪದ್ಮಾಸನ, ವೀರಾಸನ, ಭದ್ರಾಸನ, ಸಿಂಹಾಸನಗಳೆಂದು ಆರು ಮುಖ್ಯ ಆಸನಗಳಿರುವುದು ಕಂಡುಬರುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಉಡುಗೆಗಳೂ ಸಹ ಪ್ರಮುಖವಾದ ಸಂಕೇತಗಳಾಗಿವೆ. ಕೆಲವು ಉಡುಗೆಗಳೂ ಸಹ ಪ್ರಮುಖವಾದ ಸಂಕೇತಗಳಾಗಿವೆ. ಕೆಲವು ಉಡುಗೆಗಳು ಇಂದಿನ ಸಮಾಜದ ಕೆಲವು ವರ್ಗದವರೆಂದು ಗುರುತಿಸಲು ಹಾಗೆ ದೇವತೆಗಳ ಮೇಲೆ ಇರುವ ಉಡುಗೆಯಿಂದಲೂ ಸಹ ಯಾವ ದೇವತೆಯೆಂದು ಗುರ್ತಿಸಲು ಸಹಕಾರಿಯಾಗಿವೆ.

ಮೇಲೆ ಚರ್ಚಿಸಿರುವ ಸಂಕೇತ ಕಲೆಯನ್ನು ಸಂಪೂರ್ಣವಾಗಿ ಬಳಸಿಕೊಂಡು ವಿಜಯನಗರದ ವಾಸ್ತ್ರುಶಿಲ್ಪವನ್ನು ಪ್ರಮುಖವಾಗಿ ಎರಡು ಭಾಗಗಳಾಗಿ ವಿಂಗಡಿಸಬಹುದು. ಅವುಗಳೆಂದರೆ, ೧. ಲೌಕಿಕ ವಾಸ್ತುಶಿಲ್ಪ, ೨. ಧಾರ್ಮಿಕ ವಾಸ್ತುಶಿಲ್ಪ.

ಲೌಕಿಕ ಕಟ್ಟಡಗಳು ನಮಗೆ ಕಾಣುವುದು ಹಂಪಿಯಲ್ಲಿಯೇ. ಇದು ಸಾಮ್ರಾಜ್ಯದ ರಾಜಧಾನಿ. ಇಲ್ಲಿ ಅರಸರ ಅರಮನೆ, ಅದಕ್ಕೆ ಸಂಬಂಧಿಸಿದ ಇತರ ಮಂಟಪಗಳು ಅರಸಿಯರ ಈಜುಕೋಳ, ಕಮಲ ಮಹಲ್, ಆನೆಯ ಲಯಗಳು, ಕಾವಲುಗೋಪುರ ಹಾಗೂ ದೇವಾಲಯದ ಸಮೀಪದಲ್ಲಿರುವ ಮಾರುಕಟ್ಟೆಯ ಸ್ಥಳಗಳನ್ನು ಉದಾಹರಣೆ ನೀಡಬಹುದಾಗಿದೆ. ಏಕೆಂದರೆ ಈ ಕಟ್ಟಡಗಳ ತಳಪಾಯ ಮಾತ್ರ ಕಲ್ಲಿನಲ್ಲಿ ಕಟ್ಟಲಾಗಿದ್ದು, ಮೇಲಿನ ಸ್ತರಗಳನ್ನೆಲ್ಲ ಮರಗಳಿಂದಲೂ ಅಥವಾ ಗಾರೆಗಳಿಂದ ಕಟ್ಟಲಾಗಿದೆ. ಕಂಬಗಳಿಗೂ ಕಲ್ಲು ಅಥವಾ ಮರವನ್ನು ಉಪಯೋಗಿಸಿರುವುದು ಕಂಡುಬರುತ್ತದೆ, ಕೆಲವು ಕಂಬಗಳ ಒಳಬಾಗಗಳು ಕಲ್ಲಿನದಾಗಿದ್ದು ಅದರ ಸುತ್ತಲೂ ಇಟ್ಟಿಗೆ, ಗಾರೆಗಳನ್ನು ಬಳಸಿ ಕಂಬದ ಗಾತ್ರವನ್ನು ಹೆಚ್ಚಿಸುವ ತಂತ್ರವನ್ನು ಬಳಸಿರುವುದು ಕಂಡುಬರುತ್ತದೆ. ಕಮಾಣುಗಳ ಉಪಯೋಗ ಒಂದು ವಿಶೇಷವಾಗಿದೆ.

ಹಂಪಿ ಹಾಗೂ ಅದರ ಸಾಮ್ರಾಜ್ಯದಾದ್ಯಂತ ಇರುವ ದೇವಾಲಯಗಳು ಧಾರ್ಮಿಕ ವಾಸ್ತುಶಿಲ್ಪಕ್ಕೆ ಉದಾಹರಣೆಗಳಾಗಿವೆ. ಇವುಗಳಲ್ಲಿ ಕಂಡು ಬಂದ ಹೊಸ ಶಿಲೊ ಕಲೆಯಿಂದಾಗಿ ಅಂದು ಸ್ವತಂತ್ರವಾದ “ವಿಜಯನಗರ ಶೈಲಿ” ಎಂದು ಹೆಸು ಪಡೆಯುವಂತಾಯಿತು. ಹಂಪಿಯು ಅನೇಕ ದೇವಾಲಯಗಳಲ್ಲಿ ಸಾಮಾನ್ಯವಾಗಿ ಗರ್ಭಗೃಹ ಮತ್ತು ಅಂತರಾಳಗಳಿಗೆ ಹೊಂದಿದಂತೆ ಮುಚ್ಚಿದ ಕಂಬಗಳುಳ್ಳ ಪ್ರದಕ್ಷಿಣಾಫಥವಿರುತ್ತದೆ, ಗರ್ಭಗೃಹ ಮತ್ತು ಅಂತರಾಳಗಳಿಗೆ ಸೇರಿದಂತೆ ಒಂದು ಅಧಿಷ್ಠಾನ, ಇದು ಪ್ರಕಾರಕ್ಕಿಂತ ಸ್ವಲ್ಪ ಕೆಳಮಟ್ಟದಲ್ಲಿರುತ್ತದೆ. ಕಂಬಗಳು ಅಲಂಕಾರಿಕವಾಗಿರುತ್ತವೆ. ಹಿಂದೂ ಧರ್ಮವನ್ನು ರಕ್ಷಿಸಲೆಂದು ಈ ಹೊಸ ಸಾಮ್ರಾಜ್ಯವು ಹುಟ್ಟಿಕೊಂಡಿತ್ತೆಂದು ಹೇಳವುದಾದರೆ ಧರ್ಮದ ಪ್ರಚಾರಕ್ಕಾಗಿ ದೇವಾಲಯಗಳನ್ನು ಮಾಧ್ಯಮಗಳಾಗಿ ಉಪಯೋಗಿಸಿಕೊಳ್ಳಲಾರಂಭಿಸಿದರು. ದೇವರ ಪೂಜೆಗೆ ಸಂಬಂಧಿಸಿದಂತೆ ಹೊಸ ಹೊಸ ಉತ್ಸವಗಳನ್ನು ಅಲವಡಿಸಲಾಯಿತು. ಅಂದರೆ ಹಿಂದೂ ಸಂಸ್ಕೃತಿಯ ಎಲ್ಲಾ ವೈಶಿಷ್ಟ್ಯಗಳನ್ನು ಸಂರಕ್ಷಿಸಿ ಪುನಃಶ್ಚೇತನಗೊಳಿಸಿ ವೈಭವೋಪೇತವಾಗಿ ಮಾಡುವುದು ಅಂದಿನ ಅರಸರ ಪ್ರಮುಖ ಕರ್ತವ್ಯವಾಗಿದ್ದಿತ್ತು. ಈ ದಿಕ್ಕಿನಿಂದಾಗಿ ದೇವಾಲಯಗಳು ವಿಶೇಷವಾದ ಆಸಕ್ತಿಯನ್ನು ಪಡೆದವು. ದೇವಾಲಯಗಳ ಗೋಡೆಗಳ ಮೇಲೆ, ಕಂಬಗಳ ಮೇಲೆ ಪೌರಾಣಿಕ ಕಾವ್ಯಾತ್ಮಕ ಕಥೆಗಳ ಪ್ರಾತ್ಯಕ್ಷಿಕೆಗಳನ್ನು ಮೂಡಿಸಲಾಯಿತು. ಇದಕ್ಕಾಗಿ ಸಾವಿರಾರು ಶಿಲ್ಪಿಗಳು, ರೂವಾರಿಗಳು, ಪರಿಣಿತರುಗಳು ಹಗಲಿರುಳೂ ತಮ್ಮ ಜೀವನವನ್ನು ತೊರೆದು ಶ್ರಮಿಸಿದ್ದರು. ಜೊತೆಗೆ ವೀರತ್ವಕ್ಕೆ, ಶೌರ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಡಲೆಂಬಂತೆ ಆ ಗುಣಗಳೇ ಎದ್ದು ಬರುವ ಹಾಗೆ ರಾಮ, ಹನುಮಂತ, ಕೃಷ್ಣ, ಭೀಮ, ಅರ್ಜುನ, ಮುಂತಾದವರ ಕೆತ್ತನೆಗಳನ್ನು ಶಿಲ್ಪಗಳಲ್ಲಿ ಮೂಡಿಸಲಾಯಿತು. ಈ ಮೊದಲು ಶಿಲ್ಪಗಳಿಗೆ ಇಂತಹ ಕಥೆಗಾಳವೂವೂ ಇಷ್ಟ ವಿಪುಲವಾಗಿ ವಸ್ತುಗಾಳಗಿರುವುದು ಕಂಡುಬರುವುದಿಲ್ಲ. ಸೈನ್ಯದ ವಿವಿಧ ಅಂಗಗಳಾದ ಕಾಲುದಳ, ಆನೆಗಳು, ಕುದುರೆಗಳು, ಒಂಟೆಗಳು ಇತ್ಯಾದಿಗಳು ಯುದ್ಧದ ಚಿತ್ರಗಳು, ಆಯುಧಗಳು ಸುಂದರವಾಗಿ ಶಿಲೆಯಲ್ಲಿ ಮೂಡಿ ಬರುತ್ತದೆ. ಇದರಿಂದ ಪ್ರಜೆಗಳಲ್ಲಿ ವೀರ ಪೌರುಷದ ಭಾವನೆಯನ್ನು ಹೆಚ್ಚಿಸಬಹುದೆಂಬುವುದು ವಿಜಯನಗರದರಸರ ಭಾವನೆಯಾಗಿದ್ದಿತ್ತು. ಇವು ಪ್ರಜೆಗಳಿಗೆ ಸ್ಪೂರ್ತಿಯನ್ನು ನೀಡಿ. ಅವರು ದೇಶ್ ರಕ್ಷಣೆಗಾಗಿ, ಧರ್ಮದ ರಕ್ಷಣೆಗಾಗಿ ಜೀವನವನ್ನು ಮುಡುಪಾಗಿಡಲು ಹೂಡಿದ ತಂತ್ರವೆಂದು ಕೆಲವು ಇತಿಹಾಸಗಾರರು ಅಭಿಪ್ರಾಯಪಡುತ್ತಾರೆ. ಅದೇನೆ ಇರಲಿ, ಇಂದಂತು ಅಂದಿನ ಕಾಲದ ಸಂಸ್ಕೃತಿಯನ್ನು ಹೊರ ಚೆಲ್ಲುತ್ತಾ ಭರತಖಂಡದಲ್ಲಿಯೇ ಅಲ್ಲದೆ ಪ್ರಪಂಚಕ್ಕೆ ಕನ್ನಡದ ಕಂಪನ್ನು ಚೆಲ್ಲುತ್ತಾ ನಿಂತಿವೆ.