ಗಿರಿಶಮಾಮದ ಕರುಣಸುಧಾಬ್ಧೆ
            ಹರಶಂಕರಪಾವನೆ ಫಾರಜತಾದ್ರಿ
            ಪರಶುಹಿನಾಂಕು ಶೇಖರವಿಭೋ ಮಹೇಶ್ವರ ||ಪ||

            ಸುರಪಿನೀಧರನ ಗಜಾಪ
ಕಮಲಾಪತಿ ಸಂನುತ ಘನರೂಪ
ಸ್ಪುರದುರಗಾಧಿಪ ಸುಕಲಾಪ
ಸಮುದಾಚಿತ ಮಂಗಲಕರ ರೂಪ      ||೧||

            ಘನಕರ ತ್ರಿಪುರ ದಹನಶೂರ
ವೃಷಾವಾಹನ ದುರ್ಗಾಶರೀರ
ಮುನಿಜನಹೃಂನಳಿನಾಗಾರ
ಮದನಾಂತಕ ದಾರಿಧಗಂಭೀರ           ||೨||

            ಪ್ರವಿಮಲ ಮೃಗಧರ ಸರ್ವೇಶ
ಶಮಿತಾಂಧಕ ಸಾಧಿತ ಬಹುದೋಷಾ
ಶಿತಿಕಂಧರ ಬಂಧುರ ಶುಭಕೋಶ
ಸಾಕ್ಷಾತ್ ಕೆಳದೀಶ್ವರ ರಾಮೇಶ         ||೩||

          ಲಿಂಗಣ್ಣ ಕವಿ ವಿರಚಿತ

ಪೀಠಿಕೆ

ಕೆಳದಿ ಸಂಸ್ಥಾನವು ವಿಜಯನಗರದರಸರ ಅಧೀನದಲ್ಲಿದ್ದ ಒಂದು ಪ್ರಬಲವಾದ ರಾಜ್ಯ ಈ ರಾಜ್ಯವು ಕ್ರಿ.ಶ. ೧೪೯೯ರಲ್ಲಿ ನಿರ್ಮಾಣವಾಯಿತೆಂದು ದೊರಕಿರುವ ಸಾಹಿತ್ಯಾಧಾರಗಳು ಹಾಗೂ ಶಾಸನಗಳಿಂದ ತಿಳಿಯಬಹುದಾಗಿದೆ. ವೈಭವದ ಸುಂದರ ಮಲೆನಾಡಿನ ಮಡಿಲಲ್ಲಿ ತಲೆಯೆತ್ತಿ ನೂರಾರು ವರ್ಷಗಳ ಕಾಲ ಹಿಂದೂ ದರ್ಮ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ದುಡಿದು ಕನ್ನಡನಾಡಿನಲ್ಲಿಯೇ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಹಿಂದಿನ ಇತಿಹಾಸಗಾರರು ಸಣ್ಣಪುಟ್ಟ ಸಂಸ್ಥಾನಗಳ ಇತಿಹಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದರಿಂದ ನಮ್ಮ ಬೃಹತ್ ರಾಷ್ಟ್ರದ ಇತಿಹಾಸಕ್ಕೆ ಹಾಗೂ ಅದರ ಐಕ್ಯತೆಗೆ ಧಕ್ಕೆ ಬರುತ್ತದೆಂದು ಅಭಿಪ್ರಾಯ ಪಟ್ಟಿದ್ದರೆನ್ನಬಹುದು. ಆದರೆ ಇದು ತಪ್ಪು ನಿರ್ಧಾರವೆಂದು ಹೇಳಬಹುದು. ಏಕೆಂದರೆ ಸಾಮಂತ ರಾಜರ ಬೆಂಬಲದಿಂದಲೇ ಅನೇಕ ವೇಳೆ ವಿಶಾಲ ಸಾಮ್ರಾಜ್ಯವೆಂದು ಬಂದಿರುವುದೂ ಹಾಗೂ ಸಣ್ಣ ಪುಟ್ಟ ರಾಜರುಗಳು ಶತ್ರುಗಳಿಂದ ತಮ್ಮ ಸಾಮ್ರಾಜ್ಯಕ್ಕೆ ಧಕ್ಕೆ ತಗಲಿಸಿಕೊಂಡಿರುವುದೂ. ಈ ಎರಡಕ್ಕೂ ನಿದರ್ಶನಗಳಿವೆ. ಇದಕ್ಕೆ ಉತ್ತಮ ನಿದರ್ಶನವೆಂಬಂತೆ ವಿಜಯನಗರ ಸಾಮ್ರಾಜ್ಯವು ರಾಜ್ಯದ ವಿಸ್ತರಣೆಯ ಸಮಯದಲ್ಲಿ ನಿರತವಾಗಿದ್ದಾಗ ಅಥವಾ ರಾಜ್ಯದ ಸಂರಕ್ಷಣೆಗಾಗಿ ಯುದ್ಧದಲ್ಲಿ ತೊಡಗಿದ್ದಾಗ ಅವರ ಅಧೀನದಲ್ಲಿ ರಾಜ್ಯಭಾರ ಮಾಡುತ್ತಿದ್ದ ಸಣ್ಣ ಪುಟ್ಟ ಸಂಸ್ಥಾನಗಳು ಸಾಮ್ರಾಜ್ಯ ಹಾಗೂ ಧರ್ಮದ ಉಳಿವಿಗಾಗಿ ಸರ್ವಪ್ರಯತ್ನ ಮಾಡುತ್ತಿದ್ದ ಈ ದೃಷ್ಟಿಯಿಂದ ಅವಲೋಕಿಸಿ ನೋಡಿದರೆ ಭಾರತದ ಪ್ರಾಚೀನ ಸಂಸ್ಕೃತಿಯ ಅಭಿವೃದ್ಧಿಗೆ ಸಾಮಂತ ರಾಜರುಗಳು ಹಿರಿದಾದ, ಭವ್ಯವಾದ ಸೇವೆಸಲ್ಲಿಸಿದ್ದಾರೆ. ಈ ಹಂತದಲ್ಲಿ ಇಕ್ಕೇರಿಯ ನಾಯಕರು ಅಮರರಾಗಿದ್ದಾರೆ.

೧೫೬೫ರಲ್ಲಿ ವಿಜಯನಗರ ಸಾಮ್ರಾಜ್ಯವು ಯುದ್ಧದಲ್ಲಿ ಸಂಪೂರ್ಣ ಸೋತು ಅವನತಿಯ ಹಾದಿಯನ್ನು ಹಿಡಿದಾಗ ಆ ಸಾಮ್ರಾಜ್ಯದ ಜಾಡಿನಲ್ಲಿಯೇ ಹಿಂದೂ ಧರ್ಮದ ಪುನರುದ್ಧಾರಕ್ಕಾಗಿ ಕರ್ನಾಟಕದಲ್ಲಿ ಉಜ್ವಲವಾಗಿ ಮೆರೆದ ರಾಜ್ಯಗಳೆಂದರೆ ಕೆಳದಿ ಹಾಗೂ ಮೈಸೂರು ಸಂಸ್ಥಾನಗಳೆಂದು ಹೇಳಬಹುದು. ಈ ನಿಟ್ಟಿನಲ್ಲಿ ಕೆಳದಿ ಸಂಸ್ಥಾನದ ಬಗೆಗೆ ಪ್ರಸ್ಥಾಪಿಸುವುದಾದರೆ, ಡಾ. ಜಿ.ಎಸ್. ದೀಕ್ಷಿತ್ ಹೇಳುವ ಹಾಗೆ, “ವಿಜಯನಗರವು ತಾಯಿಯಾದರೆ, ಕೆಳದಿ ಅಥವಾ ಇಕ್ಕೇರಿಯು ಇದರ ಮಗು. ಈ ಮಗು ಕೇವಲ ಮಗುವಾಗಿರದೇ ಮಮತೆಯ ಮಗುವಾಗಿತ್ತು; ಇದಕ್ಕೆ ಯಾವಾಗಲೂ ತಾಯಿಯ ಹಿತಚಿಂತನೆಯೇ ಪರಮ ಧ್ಯೇಯವಾಗಿತ್ತು; ಎಂದರೆ ಸನಾತನ ಧರ್ಮದ ರಕ್ಷಣೆಯೇ ಇದರ ಧ್ಯೇಯ ಇತ್ಯಾದಿ” ಎಂಬುದಾಗಿ ಹೇಳಿರುವುದೇ ನಿದರ್ಶನವಾಗಿದೆ. ಇಕ್ಕೇರಿ ಅರಸರು ಅಂದು ಕಟ್ಟಿಸಿದ ಸುಂದರ ದೇವಾಲಯಗಳು, ಮಂಟಪಗಳು, ಮಠಗಳನ್ನು ಈಗಲೂ ನೋಡಬಹುದಾಗಿದೆ. ಸಂಗೀತ, ನಾಟ್ಯ, ಶಿಲ್ಪ ಮತ್ತು ವಾಸ್ತ್ರು ಕಲೆಗಳಿಗೂ, ವಿದ್ಯಾಭ್ಯಾಸಕ್ಕೂ ಅವರು ನೀಡಿದ ಪ್ರೋತ್ಸಾಹದಿಂದಲೇ ಅವರು ಇತಿಹಾಸದಲ್ಲಿ ಅಮರವಾಗಿ ಉಳಿದಿದ್ದಾರೆ. ವಿಜಯನಗರದ ಪತನದ ನಂತರ ಇಕ್ಕೇರಿ ಮಧುರೆ, ತಮಜಾವೂರು, ಗೇರುಸೊಪ್ಪ, ಸೋದೆ ಮೊದಲಾದ ಸಣ್ಣಪುಟ್ಟ ಸಂಸ್ಥಾನಗಳು ಸಂಸ್ಕೃತ ವಿದ್ಯಾಭ್ಯಾಸದ ಬೆಳವಣಿಗೆಗ ಹಾಗೂ ಕಲೆಗಳ ಅಭಿವೃದ್ಧಿಗೆ ಶ್ರಮಿಸಿದ್ದರ ಪ್ರಯುಕ್ತ ಹಿಂದೂ ಧರ್ಮದ ಬೆಳವಣಿಗೆ ಹಾಗೂ ಅದರ ಉಳಿವಿಗೆ ಕಾರಣವಾಯಿತ್ತೆನ್ನಬಹುದು. ಏಕೆಂದರೆ ಈ ಸಮಯದಲ್ಲಿ ಬ್ರಿಟಿಷರ ಪ್ರಾಬಲ್ಯದಿಂದಾಗಿ ಕ್ರೈಸ್ತಧರ್ಮದ ಪ್ರವೇಶ ಸಾಗರೋತ್ತರವಾಗಿ ಬರುತ್ತಿದ್ದರೆ. ಮುಸ್ಲಿಂ ಧರ್ಮವು ಭದ್ರವಾಗಿ ನೆಲೆಯೂರಿಕೊಂಡು ತನ್ನ ಮಂದಹಾಸವನ್ನು ಚೆಲ್ಲುತ್ತಲ್ಲಿತೆನ್ನಬಹುದು ಇಂಥಹ ಸಂದರ್ಭದಲ್ಲಿ ಇದರ ಪಾತ್ರ ಅಜರಾಮರವಾದದ್ದಾಗಿದೆ. ಇಕ್ಕೇರಿ ಅರಸರು ಈ ಹಂತದಲ್ಲಿ ಎಲ್ಲಾ ಮತಗಳನ್ನು ಸಮಾನ ದೃಷ್ಟಿಯಿಂದ ನೋಡಿ ಅಂದು ಮಠಗಳಿಗೂ, ಮುಸಲ್ಮಾನರ ಮಸೀದಿ, ಕ್ರಿಶ್ಚಿಯನ್ ಚರ್ಚುಗಳಿಗೂ ದಾನದತ್ತಿಗಳನ್ನು ಕೊಟ್ಟಿರುವುದು ಹಾಗೂಸರ್ವ ಧರ್ಮಗಳನ್ನು ಸಮನ್ವಯವಾಗಿ ಕಂಡು ಸಹಬಾಳ್ವೆಯಿಂದ ರಾಜ್ಯಬಾರ ಮಾಡಿರುವುದಕ್ಕೆ ಆಧಾರಗಳಿವೆ. ಇಂಥಹ ಇತಿಹಾಸವನ್ನು ಉತ್ಪ್ರೇಕ್ಷೆ ಇಲ್ಲದೆ ಬರೆದ ಪಕ್ಷದಲ್ಲಿ ಮಾತ್ರ ಕರ್ನಾಟಕದ ಸಂಸ್ಕೃತಿ ಚರಿತ್ರೆಯು ಶ್ರೀಮಂತವಾಗುತ್ತದೆನ್ನಬಹುದು.

ಒಂದು ಸಾಮ್ರಾಜ್ಯದ ಅಥವಾ ಪ್ರಾಂತ್ಯದಲ್ಲಿನ ದೇವಾಲಯಗಳು, ಶಾಸನಗಳೂ, ಸ್ಮಾರಕಗಳು ಅಲ್ಲಿನ ಸಾಂಸ್ಕೃತಿಕ ಸಂಪತ್ತಿನ ಪ್ರತೀಕಗಳಾಗಿರುತ್ತವೆ. ಇವು ಆ ಪ್ರದೇಶದ ಇತಿಹಾಸದ ವೈಭವವನ್ನು ಜಗತ್ತಿಗೆ ಸಾರುತ್ತಾ ಕಂಗೊಳಿಸುತ್ತಿವೆ. ಹೇಳಬೇಕಾದ ಇತಿಹಾಸವನ್ನು ಸಂಕ್ಷಿಪ್ತವಾಗಿಯೇ ವಿವಿಧ ರೀತಿಯಲ್ಲಿ ತಿಳಿಸುತ್ತವೆ. ಈ ದೃಷ್ಟಿಯಲ್ಲಿ ಕೆಳದಿಯು ಐತಿಹಾಸಿಕವಾಗಿಯೂ ಹಾಗೂ ಕರ್ನಾಟಕದ ರಾಜಕೀಯ, ಸಾಂಸ್ಕೃತಿಕ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನವೊಂದನ್ನು ೧೫ನೇ ಶತಮಾನದ ಉತ್ತರಾರ್ಧದವರೆಗೆ ವೀರಶೈವ ಅರಸು ಮನೆತನವೊಂದು ಕೆಳದಿ ಅರಸು ಮನೆತನವೆಂದೇ ಪ್ರಸಿದ್ಧಿಪಡೆದು ಉಜ್ವಲ ಆಳ್ವಿಕೆ ನಡೆಸಿ ಇತಿಹಾಸದಲ್ಲಿ ಅಮರರಾಗಿದ್ದಾರೆ.

ಕೆಳದಿ ಇತಿಹಾಸ, ಆಡಳಿತ, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವು ವಿದ್ವಾಂಸರು ಸೂಕ್ಷ್ಮವಾಗಿ ಅಧ್ಯಯನ ನಡೆಸಿರುವುದು ಕಂಡುಬರುತ್ತದೆ. ರಾಬರ್ಟ್ ಸೇವೆಲ್ ಎಂಬ ವಿದೇಶಿ ಇತಿಹಾಸಗಾರರು ಮೊದಲ ಬಾರಿಗೆ ಕೆಳದಿ ರಾಜವಂಶಾವಳಿಯನ್ನು ತಮ್ಮ “ಸೈಚ್ ಆಫ್ ದಿ ಡೈನಾಸ್ಟೇಸ್ ಅಫ್ ಸದರ್ನ್ ಇಂಡಿಯಾ” ಎಂಬ ಮಹತ್ವದ ಕೃತಿಯಲ್ಲಿ ಪ್ರಕಟಿಸಿದರು. ಇವರು ಸಿದ್ಧಪಡಿಸಿದ ಕಾಲಾನುಕ್ರಮಣಿಕೆಯಲ್ಲಿನ ತಿದ್ದುಪಡಿಯನ್ನು ಮತ್ತೊಬ್ಬ ಪ್ರಖ್ಯಾತ ಇತಿಹಾಸಗಾರರಾಗಿದ್ದ ಎಲ್.ಡಿ. ಬಾರ್ನೆಟ್ ಅನುಮೋದಿಸಿದರು. ಶಾಮಶಾಸ್ತ್ರೀಗಳು ೧೯೨೧ – ೨೨ರಲ್ಲಿ “ಕ್ವಾಟರ್ಲಿ ಜರ್ನಲ್ ಅಫ್ ದಿ ಮಿಥಿಕ್ ಸೋಸೈಟಿ” ಎಂಬ ಕೃತಿಯಲ್ಲಿ ಮಲೆನಾಡಿನ ನಾಯಕರ ಮುರಿತು ಹೆಚ್ಚು ವಿವರಣೆ ನೀಡುವಂತೆ ಬರೆದಿರುತ್ತಾರೆ. ನಂತರದಲ್ಲಿ ಸಾಹಿತ್ಯ ಮತ್ತು ಐತಿಹ್ಯವನ್ನು ಆಧರಿಸಿ ಎಂ.ಎಸ್. ಪುಟ್ಟಣ್ಣನವರು “ಇಕ್ಕೇರಿ ಸಂಸ್ಥಾನದ ಚರಿತ್ರೆ”ಎಂಬ ಮಹತ್ವದ ಪುಸ್ತಕವನ್ನು ೧೯೩೦ರಲ್ಲಿ ರಚಿಸಿದರು. ಕೆಳದಿ ನಾಯಕರ ಕಾಲ, ಅವರ ದಂಡಯಾತ್ರೆ ಮೊದಲಾದವುಗಳ ಬಗೆಗೆ ಖಚಿತವಾದ ಮಾಹಿತಿಯನ್ನು ಆಧರಿಸಿ ಎನ್. ಲಕ್ಷ್ಮೀನಾರಾಯಣರಾವ್ ಪುಸ್ತಕ ಬರೆದರೆ ಕೆಳದಿಯನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಪಂಚಕ್ಕೆ ಪರಿಚಯಿಸಲು ಕೆಳದಿ ಗುಂಡಾಜೋಯ್ಸರ “ಕೆಳದಿಯ ಸಂಕ್ಷಿಪ್ತ ಇತಿಹಾಸ” ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸಹಕಾರಿ ಇವುಗಳೆಲ್ಲವುದಕ್ಕೆ ನಿದರ್ಶನವಾಗುವಂತೆ ಡಾ. ಕೆ.ಜಿ. ವೆಂಕಟೇಶ್ ಜೋಯಿಸ್‌ರವರು ಕೆಳದಿ ಶಾಸನಗಳನ್ನು ಆಧಾರವಾಗಿಟ್ಟುಕೊಂಡು ಸಾಂಸ್ಕೃತಿಕ ಅಧ್ಯಯನಮಾಡಿ ರಚಿಸಿದ್ಧ “ಕೆಳದಿ ಶಾಸನಗಳ ಸಾಂಸ್ಕರತಿಕ ಅಧ್ಯಯನ” ಎಂಬ ಪುಸ್ತಕ ಮಹತ್ವವಾಗಿದೆ.

ಕೆಳದಿ ಅರಸರ ಅಧ್ಯಯನಕ್ಕೆ ಮೂಲ ಅಕರ ಗ್ರಂಥಗಳಾಗಿ ಇಂದಿಗೂ ಕಂಗೊಳಿಸುತ್ತಿರುವ ಸ್ಮಾರಕಗಳು, ನಾಣ್ಯಗಳು, ಶಾಸನಗಳು, ದೇಶಿಯ ಹಾಗೂ ವಿದೇಶಿಯರ ಬರವಣಿಗೆಗಳು, ಜಾನಪದ ಕಥೆಗಳು ಹೇರಳವಾಗಿ ದೊರೆತಿದ್ದು ಕೆಳದಿ ಇತಿಹಾಸವನ್ನು ಶ್ರೀಮಂತಗೊಳಿಸಲು ಮುಂದಾಗಿವೆ.

***