ವಿಜಯನಗರದ ಅರಸರ ಆಳ್ವಿಕೆಯಲ್ಲಿ ದೇಶವು ಸುವ್ಯವಸ್ಥಿತವೂ ಸುಭದ್ರವೂ ಆಗಿದ್ದು ಧರ್ಮ – ಸಂಸ್ಕೃತಿ – ಕಲೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಸಾರ್ವತ್ರಿಕ ಉತ್ತೇಜನ ದೊರೆಯಿತು. ಇದರಿಂದಾಗಿಯೇ ಇಂದಿಗೂ ಸಹ ವಿಜಯನಗರದ ವೈಭವವು ಅದರ ಸಾಂಸ್ಕೃತಿಕ ಪರಂಪರೆಯಲ್ಲಿ ಅಜರಾಮರವಾಗಿ ಉಳಿದಿದೆ. ಆಗಿನ ಕಾಲದ ಸಾಹಿತ್ಯ ಕೃತಿಗಳಲ್ಲಿ ಈ ಭವ್ಯ ಪರಂಪರೆಯ ವಿಕಸನ ಕಾಣಬಹುದಾಗಿದೆ. ಹಿಂದೂ ಸಂಸ್ಕೃತಿಯ ಪುನಶ್ಚೇತನಕ್ಕಾಗಿ ಉದಿಸಿದ ಸಾಮ್ರಾಜ್ಯದ ಇತಿಹಾಸ ಹಾಗೂ ಅದರ ಸಂಸ್ಕೃತಿಯ ಅಧ್ಯಯನಕ್ಕೆ ಸಹಜವಾಗಿಯೇ ಸಂಸ್ಕೃತ, ಕನ್ನಡ, ತೆಲುಗು, ಕೈಫಿಯತ್ತು ಮತ್ತು ಬಖೈರುಗಳು, ತೆಲುಗು ಸಾಹಿತ್ಯಾಧಾರಗಳ ಜೊತೆಗೆ ವಿದೇಶಿಯರ ಬರವಣಿಗೆಗಳು ಇತಿಹಾಸದ ನಿರ್ಮಾಣಕ್ಕೆ ಸಹಕಾರಿಯಾಗಿವೆ.

.೧. ಸಂಸ್ಕೃತ ಸಾಹಿತ್ಯ

ಈ ಸಾಮ್ರಾಜ್ಯದಲ್ಲಿ ಸಂಸ್ಕೃತ ಸಾಹಿತ್ಯ ಗ್ರಂಥರಚನೆಗೆ ಹೆಚ್ಚಾಗಿ ಅದ್ಯತೆ ನೀಡಲಾಗಿತ್ತು. ಐತಿಹಾಸಿಕ ಘಟನೆಗಳಿಗೆ ಸಮಕಾಲೀನವಾದ ಈ ಸೃಜನಾತ್ಮಕ ಕೃತಿಗಳು ಅಂದಿನ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುವುದರಿಂದ ಇತಿಹಾಸಕಾರನಿಗೆ ಮಹತ್ವಪೂರ್ಣವಾದ ದಾಖಲೆಯಾಗಿ ಪರಿಣಿಮಿಸಿದೆ. ಪಿ.ಬಿ. ದೇಸಾಯಿಯವರು ಹೇಳುವಂತೆ “ಸಾಹಿತ್ಯ ಕೃತಿಗಳಲ್ಲಿ ಅಡಗಿರುವ ಚರಿತ್ರೆಯ ತುಣಕುಗಳು ಎಷ್ಟೋ ಬಾರಿ ಕವಿಯ ಕಲ್ಪನೆ ಗರಿಗೆದರ ಉತ್ಪ್ರೇಕ್ಷೆ ತುಂಬಿ ತುಳಕಿದಾಗ ಎಲ್ಲೋ ಅಡಗಿ ಹೋಗುತ್ತವೆ. ಅದನ್ನು ಜಾಣತನದಿಂದ ಪರಿಶೀಲಿಸಿ ಇತಿಹಾಸಕಾರ ಸತ್ಯವನ್ನು ಹೊರತರುವ ಪ್ರಯತ್ನ ಮಾಡಬೇಕಾಗಿದೆ. ಸಾಹಿತ್ಯದ ಅಡಿಗಲ್ಲಂತೂ ಸತ್ಯ ಸಂಗತಿಗಳಾದುದರಿಂದ ಕಲ್ಪನೆಯ ಬಣ್ಣದ ಪದರುಗಳನ್ನು ಸರಿಸಿ ಸತ್ಯದ ಪ್ರಕಾಶಕ್ಕೆ ಇತಿಹಾಸಕಾರ ಶ್ರಮಿಸಬೇಕಾಗಿದೆ. ಈ ರೀತಿಯ ಪ್ರಕಾಶಕ್ಕೆ ಸಂಸ್ಕೃತ ಸಾಹಿತ್ಯಾಧಾರಗಳು ಅಮೂಲ್ಯವಾದ ವಸ್ತುಗಳಾಗಿವೆ” ಎನ್ನಬಹುದು.

ಮಧುರಾವಿಜಯಂ (ವೀರಕಂಪಣರಾಯ ಚರಿತಂ)* : ರಾಣಿ ಗಂಗಾದೇವಿಯ ‘ಮಧುರಾವಿಜಯಂ’ ಐತಿಹಾಸಿಕ ಪ್ರಾಮುಖ್ಯತೆಯುಳ್ಳ ಅತ್ಯಾಮೂಲ್ಯವಾದ ಗ್ರಂಥ ಮುಸಲ್ಮಾನರ ದಾಳಿಯಿಂದ ನಲುಗಿದ ದಕ್ಷಿಣ ಭಾರತದ ಜನತೆ ಕೆಲವೇ ದಶಕಗಳಲ್ಲಿ ಚೇತರಿಸಿಕೊಂಡು ಸಾಂಸ್ಕೃತಿಕ ಪ್ರಗತಿಯೆಡೆ ಮುನ್ನಡೆದ ಕುರುವಾಗಿ ಉಳಿದು ಬಂದಿದೆ ಈ ಕಾವ್ಯ. ಸುಸಂಸ್ಕೃತ ರಾಜ ಕುಟುಂಬಗಳಲ್ಲಾದರೂ ಸ್ತ್ರೀ ವಿದ್ಯಾಭ್ಯಾಸ ಪ್ರಗತಿ ಸಾಧಿಸತ್ತು ಎಂಬುವುದಕ್ಕೆ ಸಾಕ್ಷಿಯಾಗಿ ಗಂಗಾದೇವಿಯವರು ಗೋಚರಿಸುತ್ತಾರೆ. ಏಕಂದರೆ ಮಧುರಾವಿಜಯಂ ಗಂಗಾದೇವಿಯ ವಿದ್ಯಾ ನೈಪುಣ್ಯಕ್ಕೆ ಪ್ರತಿಭೆಯ ಮೆರಗಿನಿಂದ ಸಂಸ್ಕೃತದ ಉತ್ಕೃಷ್ಠ ಕಾವ್ಯವಾಗಿ ಉಳಿದಿದೆ. ಈ ಕಾವ್ಯದ ಹೊರ ಮೈಯಲ್ಲಿ ಇತಿಹಾಸದ ತಿರುಳಿದೆ. ಮೊಟ್ಟ ಮೊದಲ ಬಾರಿಗೆ ಭಾರತದ ಚರಿತ್ರೆಯಲ್ಲಿಯೇ ಒಂದು ಐತಿಹಾಸಿಕ ಘಟನೆ ಕಾವ್ಯದ ವಸ್ತುವಾಗಿ ಪರಿಣಮಿಸಿರುವುದು ಈ ಗ್ರಂಥದ ವೈಶಿಷ್ಟ್ಯವಾಗಿದೆ. ಈ ವಿಶಿಷ್ಟತೆಯೇ ವಿಜಯನಗರ ಕಾಲದ ಚರಿತ್ರೆಯನ್ನು ರಚಿಸುವವರಿಗೆ ಅದರಲ್ಲಿಯೂ ಸಂಸ್ಕೃತಿ ಅಧ್ಯಯನ ಮಾಡುವವರಿಗೆ ಪ್ರಮುಖ ಆಧಾರವಾಗಿರುತ್ತದೆ ಎಂದು ಹೇಳಬಹುದು.

ಈ ಮಹಾಕಾವ್ಯವು ಪ್ರಮುಖವಾಗಿ ವಿಜಯನಗರ ಸಾಮ್ರಾಜ್ಯದ ಉದಯ ಕಾಲದಲ್ಲಿನ ದಕ್ಷಿಣ ದೇಶದ ರಾಜಕೀಯ ಪರಿಸ್ಥಿತಿಯ ಮೇಲೆ ಬೆಳಕು ಬೀರುತ್ತದೆ. ಯುವರಾಜ ವೀರ ಕಂಪಣ್ಣನು ದಕ್ಷಿಣದಲ್ಲಿ ದಂಡಯಾತ್ರೆ ಕೈಗೊಂಡು ದಿಗ್ವಿಜಯ ಸಾಧಿಸಿ ಆ ರಾಜ್ಯವನ್ನು ವಿಜಯನಗರದ ಸಾಂಸ್ಕೃತಿಕವಾದ ಆಡಳಿತಕ್ಕೆ ಒಳಪಡಿಸಿದೆ ಸಾಹಸಮಯ ಕಥೆಯನ್ನು ಇದು ತನ್ನ ಪ್ರಮುಖ ಕಥಾವಸ್ತುವನ್ನಾಗಿಸಿಕೊಂಡಿದೆ.

ಅಮರಾವತಿಯಂತೆ ಶೋಭಾಯಮಾನವಾದ ವಿಜಯನಗರಸ ರಾಜಧಾನಿಯಲ್ಲಿ ಹರಿಹರನ ತಮ್ಮ ಬುಕ್ಕದೊರೆ ಆಳ್ವಿಕೆ ನಡೆಸುತ್ತಿದ್ದನು. ಅವನ ಮಗ ಕುಮಾರ ವೀರ ಕಂಪಣ್ಣನು ತಂದೆಯ ಅಪ್ಪಣೆಯ ಮೇರೆಗೆ ರಾಜಗಂಭೀರ ರಾಜ್ಯದ ಚಂಪರಾಯನ ಮೇಲೆ ದಂಡೆತ್ತಿ ದಂಗೆಯಡಗಿಸಲು ಹೋಗುತ್ತಾನೆ. ಯುದ್ಧದಲ್ಲಿ ಚಂಪನು ಸಾಯಲು ಸುಪ್ರಸಿದ್ಧ ಕಂಚಿಯು ಕುಮಾರ ಕಂಪಣ್ಣನ ವಶವಾಗುತ್ತದೆ. ಅನಂತರ ಮಧುರೆಯ ಸುಲ್ತಾನರ ಕ್ರೂರಕೃತ್ಯಗಳನ್ನು ಕೇಳಿ ಕೋಲಗೊಂಡು ಮಧುರೆಗೆ ಧಾವಿಸಿ ಸುಲ್ತಾನನನ್ನು ಸೋಲಿಸಿ ಸದೆಬಡಿಯುತ್ತಾನೆ (ಸುಲ್ತಾನನು ಯುದ್ಧ ರಂಗದಲ್ಲಿಯೇ ಮೃತ್ಯುವಶನಾಗುತ್ತಾನೆ) ಎಂಬ ವಿಷಯವು ತಿಳಿದುಬರುತ್ತದೆ. ಇದರ ಜೊತೆಗೆ ವಿಜಯ ನಗರದ ಪ್ರಭುತ್ವ ಸ್ಥಾಪನೆ ದಕ್ಷಿಣ ಭಾರತದ ಸಾಂಸ್ಕೃತಿಕವಾದ ಬೆಂಬಲದಿಂದಾಯಿತು. ಮುಸಲ್ಮಾನರ ಕ್ರೌರ‍್ಯದಿಂದ ದಿಕ್ಕೆಟ್ಟಿದ್ದ ರಾಜ್ಯಗಳು ಸುಲ್ತಾನರ ಅವನತಿಗೆ ಬೆಂಬಲ ಸೂಚಿಸಿ ವಿಜಯನಗರದ ಜೋತೆಗೂಡಿದವು ಇದರಿಂದಾಗಿ ದಕ್ಷಿಣ ಭಾರತದಲ್ಲಿಯೇ ಒಂದು ರೀತಿಯ ಸಾಂಸ್ಕೃತಿಕ ಏಕತೆಯುಂಟಾಯಿತು. ‘ಮಧುರಾವಿಜಯಂ’ ಈ ಸಾಂಸ್ಕೃತಿಕ ಏಕತೆಯನ್ನು ರೂಪಿಸುವ ಒಂದು ಐತಿಹಾಸಿಕ ಗ್ರಂಥ

ಪ್ರಪನ್ನಾಮೃತಂ : ಅನಂತಾರ್ಯನೆಂಬ ಕವಿಯು ಬರೆದ “ಪ್ರಪನ್ನಾಮೃತ’ ಎಂಬ ಕೃತಿಯು ಸಹ ಕುಮಾರ ವೀರಕಂಪಣ್ಣ ಮತ್ತು ಮಧುರೆಯ ಸುಲ್ತಾನನ ನಡುವಿನ ಯುದ್ಧವನ್ನು ತಿಳಿಸುತ್ತದೆ. ಇದರ ಕಥಾವಸ್ತು ಅತ್ಯಂತ ಕುತೂಹಲಕಾರಿಯಾಗಿರುವುದು ತಿಳಿದುಬರುತ್ತದೆ. ಅಂದರೆ ಮುಸಲ್ಮಾನರ ಕ್ರೌರ್ಯದಿಂದ ಬೇಸತ್ತು ವೇದಾಂತ ದೇಶಿಕ ಎಂಬ ಪ್ರಮುಖ ಶ್ರೀ ವೈಷ್ಣವ ಸಂತ ಶ್ರೀರಂಗದ ರಂಗನಾಥಸ್ವಾಮಿಯ ವಿಗ್ರಹವನ್ನು ತೆಗೆದುಕೊಂಡು ಕಣ್ಮರೆಯಾಗುತ್ತಾನೆ. ಕುಮಾರ ಕಂಪಣ್ಣ ದಂಡನಾಯಕ ಗೋಪಣ್ಣನಿಗೆ ಈ ವಿಷಯ ತಿಳಿಸಲು ಕೋಪಗೊಂಡ ಗೋಪಣ್ಣನು ಮಧುರೆಯ ಸುಲ್ತಾನನ ವಿರುದ್ಧ ಯುದ್ಧದಲ್ಲಿ ತೊಡಗುತ್ತಾನೆ. ಯುದ್ಧದಲ್ಲಿ ಸುಲ್ತಾನನು ಮರಣಹೊಂದಿ ಶ್ರೀರಂಗನಾಥ ಸ್ವಾಮಿ ವಿಗ್ರಹ ಪುನಃ ಪ್ರತಿಷ್ಠಾನಗೊಳ್ಲೂತ್ತದೆ. ವೇದಾಂತ ದೇಶಿಕವು ಹಿಂದಿರುಗಿ ಶ್ರೀರಂಗಕ್ಕೆ ಬರುತ್ತದೆ. ಈ ಮೇಲಿನ ಸಾರಾಂಶವನ್ನು ಸಂಕ್ಷಿಪ್ತವಾಗಿ ಪ್ರಪನ್ನಾವೃತಂ ತಿಳಿಯಬಯಸುತ್ತದೆ.

ವರದಾಂಬಿಕಾ ಪರಿಣಯಂ : ತಿರುಮಲಾಂಭ ರಚಿಸಿರುವ ‘ವರದಾಂಬಿಕಾ ಪರಿಣಯಂ’ ಸಂಸ್ಕೃತ ಭಾಷೆಯಲ್ಲಿ ಅದರಲ್ಲೂ ಪ್ರಮುಖವಾಗಿ ಚಂಪೂ ಶೈಲಿಯಲ್ಲಿದೆ. ನಮ್ಮ ಹಿಂದೂ ಸಮಾಜದಲ್ಲಿ ಸವತಿಯನ್ನು ಕಂಡರೆ ಕೈಕೈ ಹಿಸುಕುವ ಹೆಂಡತಿಯರು ಇಲ್ಲಿ ಸವತಿಯ ಮತ್ಸರ್ಯವಿಲ್ಲದೆ ಒಬ್ಬ ರಾಣಿ ತನ್ನ ಪತಿಯ ಮತ್ತೊಂದು ವಿವಾಹದ ವರ್ಣನೆಯನ್ನು ಮಾಡಿರುವುದು ಈ ಕಾವ್ಯದ ಪ್ರಮುಖ ವೈಶಿಷ್ಟ್ಯವಾಗಿದೆ. ಅದರಲ್ಲೂ ಮಹಿಳಾ ಪ್ರತಿಭಾ ಸಾಮರ್ಥ್ಯಕ್ಕೆ ಇದು ಮತ್ತೊಂದು ಉದಾಹರಣೆ ಎನ್ನಬಹುದು.

ಸುಸಂಸ್ಕೃತಿಯ ಇತಿಹಾಸ ರಚಿಸುವವನಿಗೆ ಈ ಗ್ರಂಥವು ಅಮೂಲ್ಯ ಸಂಗತಿಗಳನ್ನು ನೀಡುತ್ತದೆ. ಈ ಗ್ರಂಥ ಆರಂಭದಲ್ಲಿ ಅಚ್ಯುತರಾಯನ ಪೂರ್ವಜರ ವಂಶಾವಳಿಯ ವರ್ಣಿತವಾಗಿದೆ. ಚಂದ್ರವಂಶದಲ್ಲಿ ತಿಮ್ಮ ಭೂಪದೇವಕಿಯರಿಗೆ ಈಶ್ವರನೆಂಬ ಕುಮಾರ ಜನಿಸಿದನು. ಅವನಿಗೆ ನರಸನೆಂಬ ಶಕ್ತಿ ಸಂಭೂತ ಮಗ ಹುಟ್ಟಿದನು. ಈ ನರಸನೇ ಅಚ್ಚುತನ ತಂದೆ, ನರಸನ ಖ್ಯಾತಿಯ ವರ್ಣನೆ ಇದರಲ್ಲಿ ಸಂಪೂರ್ಣವಾಗಿ ದೊರೆಯುತ್ತದೆ. ನರಸನು ಮೊದಲು ಪೂರ್ವದಿಕ್ಕಿನಲ್ಲಿ ದಂಡಯಾತ್ರೆ ಆರಂಭಿಸಿ ಶತ್ರುಗಳನ್ನು ನಿಗ್ರಹಿಸಿ ದಕ್ಷಿಣ ದಿಕ್ಕಿನಲ್ಲಿ ಸಮುದ್ರದ ತೀರಗಳೆಡೆ ನಡೆದನು. ತೊಂಡೈಮಂಡಲವನ್ನು ದಾಟಿ ಚೋಳರ ರಾಜ್ಯವನ್ನು ಮುತ್ತಿದನು. ಚೋಳರಾಜನು ಮಂತ್ರಗಳ ಆದೇಶಮೀರಿ ಸಂಧಾನಕ್ಕೆ ಒಪ್ಪದೆ ಯುದ್ಧಕ್ಕೆ ತೊಡಗಿದನು. ಕಾವೇರಿ ನದಿಯ ದಕ್ಷಿಣದಲ್ಲಿ ನಡೆದ ತೀವ್ರ ಕಾಳಗದಲ್ಲಿ ಚೋಳರಾಜನು ಸೆರೆ ಸಿಕ್ಕಿದನು. ನರಸನು ಮಧುರಾ ನಗರಿಯ ದೊರೆಯಿಂದ ಕಪ್ಪಕಾಣಿಕೆ ಸ್ವೀಕರಿಸಿ ರಾಮೇಶ್ವರಕ್ಕೆ ಹೋದನು. ಅಲ್ಲಿ ದೇವರಿಗೆ ಅನೇಕ ಕಾಣಿಕೆಗಳನ್ನು ಅರ್ಪಿಸಿ ನಂತರ ಶ್ರೀರಂಗಪಟ್ಟಣದಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಿದನು. ಪ್ರವಾಹದಿಂದ ತುಂಬಿ ಹರಿಯುತ್ತಿದ್ದ ಕಾವೇರಿ ನದಿಗೆ ಬಲಮುರಿ ಎಂಬಲ್ಲಿ ಒಂಧು ಸಣ್ಣ ಅಣೆಕಟ್ಟು ಕಟ್ಟಿಸಿದನು.

ನಂತರ ತುಮಕೂರು ಮತ್ತು ತರಸಂಗಿ ಕೋಟೆಗಳನ್ನು ಗೆದ್ದು ಗೋಕರ್ಣದಲ್ಲಿ ತುಳಾ ಪುರುಷಯಜ್ಞ ಮಾಡಿ ಕಾಣಿಕೆಯನ್ನು ನೀಡಿದನು. ನಂತರ ಮಾನವ ದುರ್ಗದ ಸುಲ್ತಾನನ್ನು ಸೋಲಿಸಿ ವಿಜಯನಗರಕ್ಕೆ ಹಿಂದಿರುಗಿದನು. ಸೂರ್ಯವಂಶದ ಓಬಯೊಂಬಳೆಯೊಡನೆ ವಿವಾಹವಾಗಿ ಅಚ್ಚುತನೆಂಬ ಮಗನನ್ನು ಪಡೆದನು. ಕವಯತ್ರಿಯು ಅಚ್ಯುತನ ಬಾಲ್ಯದ ವರ್ಣನೆಯನ್ನು ಸಹ ಮಾಡಿ ನಂತರ ವರದಾಂಬಿಕೆಯೊಡನೆ ವಿವಾಹವಾದದ್ದನ್ನು ಸಹ ಸೊಗಸಾಗಿ ವರ್ಣಿಸಿರುತ್ತಾಳೆ. ಅವರ ಮಗ ಚಿನ್ನವೆಂಕಟಾದ್ರಿಯು ಯುವರಾಜನಾಗಲು ತಿರುಮಲಾಂಬ ಅಚ್ಚುತ, ವರದಾಂಬಿಕೆ ಹಾಗೂ ಯುವರಾಜ ವೆಂಕಟಾದ್ರಿಗೆ ಒಳತಾಗಲಿ ಎಂದು ಪ್ರಾರ್ಥಿಸಿ ತನ್ನ ಗ್ರಂಥವನ್ನು ಮುಗಿಸಿರುವುದು ಕಂಡುಬರುತ್ತದೆ.

ಸಾಳುವಾಭ್ಯುದಯಂ: ರಾಜನಾಥ ಡಿಂಡಿಮನ ಈ ಕಾವ್ಯ ಸಾಳುವ ನರಸಿಂಹನ ಪ್ರತಾಪಗಳನ್ನು ಹೆಗ್ಗಳಿಕೆಯಿಂದ ವರ್ಣಿಸಿದೆ. ಅಂದರೆ ಆತನ ವಂಶಾವಳಿಯನ್ನು ಸಂಕ್ಷೀಪ್ತವಾಗಿ ನೀಡುತ್ತದೆ. ಈ ಗ್ರಂಥದಲ್ಲಿ ನರಸಿಂಹನ ಕಳಿಂಗ ಯುದ್ಧದ ವರ್ಣನೆಯು ಕಂಡುಬರುತ್ತದೆ. ನಂತರ ದಕ್ಷಿಣದ ಕಡೆ ಬರಲು ಚೋಳ ದೊರೆ ತಲೆ ಮರೆಸಿಕೊಳ್ಳುತ್ತಾನೆ. ನರಸಿಂಹ ರಾಮೇಶ್ವರದವರೆಗೆ ಹೋಗಿ ಕಪ್ಪ ಕಾಣಿಕೆಗಳನ್ನು ಸ್ವೀಕರಿಸಿ ಹಿಂದಿರುಗುತ್ತಾನೆ. ಈ ಸಂದರ್ಭದಲ್ಲಿಯೇ ಶ್ರೀಲಂಕಾ ದೊರೆಯು ಇವನೊಡನೆ ಸಂಧಾನ ಮಾಡಲು ಇಚ್ಚೆ ಪಡುತ್ತಾನೆಂದು ಈ ಗ್ರಂಥವು ತಿಳಿಸುತ್ತದೆ. ನಂತರ ಪೆನುಗೊಂಡೆಯಲ್ಲಿ ಮುಸ್ಲೀಂರ ವಿರುದ್ಧ ಜಯಗಳಿಸಿದನೆಂದು ಈ ಕೃತಿಯು ತಿಳಿಸುತ್ತದೆ. ಈ ಕಾವ್ಯದುದ್ದಕ್ಕೂ ರಾಜನ ಪ್ರತಾಪದ ವರ್ಣನೆಯು ಉತ್ಪ್ರೇಕ್ಷೆಯಿಂದ ಕೂಡಿರುವುದಾಗಿದೆ ಎಂದರೆ ತಪ್ಪಾಗಲಾರದು.

ಅಚ್ಯುತರಾಯಾಭ್ಯುದಯಂ : ಈ ಕೃತಿಯು ಅಚ್ಯುತರಾಯನ ವಂಶಾವಳಿಯನ್ನು ನೀಡುತ್ತದೆ. ನರಸಿಂಹ, ಕೃಷ್ಣದೇವರಾಯನ ಪ್ರತಾಪಗಳು ಮೊದಲು ವರ್ಣಿತವಾಗಿ ನಂತರ ಅಚ್ಯುತರಾಯನ ಆಳ್ವಿಕೆಯ ವರ್ಣನೆಯು ಬರುತ್ತದೆ. ಈ ಕಾಲದ ಕುತೂಹಲಕಾರಿ ಸಂಗತಿ ಎಂದರೆ ಅಚ್ಚುತನ ಅಧೀನದಲ್ಲಿದ್ದ ಆಡಳಿತಾಧಿಕಾರಿ ಚಲ್ಲಪ್ಪ ಎಂಬುವನು ದಂಗೆಯೆದ್ದು ಚೇರ ರಾಜನೊಡನೆ ಸೇರಿ ಪಾಂಡ್ಯದೊರೆಯನ್ನು ರಾಜ್ಯಬಿಟ್ಟು ಓಡಿಸುತ್ತಾನೆ. ಇದರಿಂದ ಸಿಟ್ಟಿಗೆದ್ದ ಅಚ್ಯುತರಾಯನು ಪಾಂಡ್ಯದ ಸಹಾಯಕ್ಕೆ ಬಂದು ಚೇರ ರಾಜನನ್ನು ಸೋಲಿಸಿ ಮತ್ತೆ ಪಾಂಡ್ಯ ರಾಜನನ್ನು ಸಿಂಹಾಸನದ ಮೇಲೆ ಕೂರಿಸಿದ ವರ್ಣನೆಯು ಬರುತ್ತದೆ. ಈ ಗ್ರಂಥವು ಅಂದಿನ ಇತಿಹಾಸ ರಚನೆಗೆ ಹೆಚ್ಚಿನ ಸಹಕಾರಿಯಾಗಿದೆ.

ವಿರೂಪಾಕ್ಷ ವಸಂತೋತ್ಸವ : ವಿಜಯನಗರ ಸಾಮ್ರಾಜ್ಯದಲ್ಲಿ ವಸಂತೋತ್ಸವಗಳು ಅತ್ಯಂತ ವಿಜೃಂಭಣೆಯಿಂದ ಪ್ರತಿವರ್ಷವೂ ನಡೆಯುತ್ತಿದ್ದವು. ಹಂಪಿಯ ವಿರೂಪಾಕ್ಷನ ರಥೋತ್ಸವದ ವರ್ಣನೆ ಅಹೋಬಲ ಸೂರಿಯ ಈ ಸುಂದರ ಕಾವ್ಯದಲ್ಲಿ ಒಡಮೂಡಿದೆ. ಆ ಕಾಲದ ಸಾಮಾಜಿಕ ಇತಿಹಾಸದ ಪುನರ್ರಚನೆಗೆ ಈ ಗ್ರಂಥವು ಅತ್ಯಂತ ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗಿದೆ. ಅದರಲ್ಲಿಯೂ ವಿಜಯನಗರದ ಸಂಸ್ಕೃತಿಯನ್ನು ಈ ಗ್ರಂಥವು ಅತ್ಯಂತ ಹೆಚ್ಚಿನ ರೀತಿಯಲ್ಲಿ ಹೊರಚೆಲ್ಲುತ್ತದೆ. ಆ ಕಾಲದ ಧಾರ್ಮಿಕ ಕ್ರಿಯೆಗಳ ಹಾಗೂ ಧಾರ್ಮಿಕ ಸಂಪ್ರದಾಯಗಳ ಬಗ್ಗೆ ಈ ಗ್ರಂಥದಲ್ಲಿ ವಿಶೇಷ ಮಾಹಿತಿ ದೊರಕುತ್ತದೆ. ಈ ವಸಂತೋತ್ಸವದಲ್ಲಿ ಪಾಲ್ಗೊಳ್ಳಲು ಸಾಮ್ರಾಜ್ಯದ ನಾನಾ ಮೂಲೆಗಳಿಂದ ಸಾಮಂತರಾಜರು, ದಂಡನಾಯಕರು, ಸೇನಾಪತಿಗಳು, ಕವಿಗಳು, ವಿದ್ವಾಂಸರು ಮುಂತಾದ ಗಣ್ಯವ್ಯಕ್ತಿಗಳು ಬರುತ್ತಿದ್ದರು. ಆ ಸಮಯದಲ್ಲಿಯೇ ರಾಜಸಭೆಗಳು ನಡೆಯುತ್ತಿದ್ದವು ಎಂಬುದನ್ನು ಹಾಗೂ ಅಂದಿನ ಜನಜೀವನ ಹಾಗೂ ರಾಜಕೀಯ ವಿದ್ಯಮಾನಗಳೆರಡೂ ಈ ಗ್ರಂಥದ ಪರಾಮರ್ಶೆಯಿಂದ ತಿಳಿದುಬರುತ್ತದೆ. ಅಷ್ಟೆ ಅಲ್ಲದೆ ವಿಜಯನಗರ, ಪಂಪಾಕ್ಷೇತ್ರ, ತುಂಗಭದ್ರನದಿಯ ಉತ್ಪ್ರೇಕ್ಷಿತ ವರ್ಣನೆಯು ಈ ಗ್ರಂಥದಲ್ಲಿ ಸಂಕ್ಷಿಪ್ತವಾಗಿ ಕಂಡುಬರುತ್ತದೆ.

ಧಾರ್ಮಿಕ ಇತಿಹಾಸದ ಪುನರ್ರಚೆನೆಗೆ ಸಹಾಯಕವಾದ ಗ್ರಂಥ “ವೇದಾಂತ ಪ್ರಕಾಶ” (ಸಯನಾಚಾರ್ಯ ಮತ್ತು ಮಾಧವಾಚಾರ್ಯರವರಿಂದ ರಚಿತವಾಗಿರುವುದು) ‘ರಾಜಕಲಾನಿರ್ಣಯ’ವು ಶೃಂಗೇರಿ ಜಗದ್ಗುರುಗಳ ಬಗ್ಗೆ ತಿಳಿಸುತ್ತದೆ. ಬಸವ ಭೂಪಾಳನ ‘ಶಿವತತ್ವ ರತ್ನಾಕರ’ ಒಂದು ಧಾರ್ಮಿಕ ಗ್ರಂಥವಾದರೂ ಸಾಮಂತರಾದ ಕೆಳದಿ ಅರಸನ ಹಾಗೂ ವಿಜಯನಗರದ ಕೇಂದ್ರ ಸರ್ಕಾರದ ನಡುವಿನ ಸಾಂಸ್ಕೃತಿಕ ಸಂಬಂಧದ ಬಗ್ಗೆ ಬೆಳಕು ಬೀರುತ್ತದೆ. ಕೃಷ್ಣದೇವರಾಯನಿಂದ ರಚಿಸಲ್ಲಟ್ಟಿರುವ “ಜಾಂಬವತೀ ಕಲ್ಯಾಣ’ದಲ್ಲಿ ವಿರೂಪಾಕ್ಷದೇವರ ವಸಂತೋತ್ಸವದ ವರ್ಣನೆಯು ಸಂಪೂರ್ಣವಾಗಿ ಕಂಡುಬರುತ್ತದೆ. ಲಕ್ಷ್ಮಣ ಪಂಡಿತನ ‘ವೈದ್ಯಾರಾಜವಲ್ಲಭಂ” ಎಂಬ ಗ್ರಂಥವು ವೈದ್ಯಕೀಯ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರಮುಖ ಗ್ರಂಥವಾಗಿತ್ತೆಂದು ತಿಳಿದುಬರುತ್ತದೆ.

ಸಂಸ್ಕೃತ ಸಾಹಿತ್ಯಾಧಾರಗಳನ್ನು ಅವಲೋಕಿಸಿದಾಗ ಕಂಡುಬರುವ ಪ್ರಮುಖ ಅಂಶ ಈ ಕೃತಿಗಳು ತಮ್ಮ ಆಶ್ರಯದಾತನಿಗಾಗಿ ನಿರೂಪಿತವಾಗಿವೆ ಇಲ್ಲವೇ ಧಾರ್ಮಿಕ ಗ್ರಂಥಗಳಾಗಿ ಉಳಿದಿದೆ. ಕಾವ್ಯಾತ್ಮಕವಾಗಿ ನಿರೂಪಿತವಾಗಿರುವುದರಿಂದ ಐತಿಹಾಸಿಕ ಸಂಗತಿಗಳನ್ನು ಹೊರತೆಗೆಯುವ ಕೆಲಸ ನಡೆಯಬೇಕಾಗಿದೆ.

.೨. ಕನ್ನಡ ಸಾಹಿತ್ಯ

ವಿಜಯನಗರ ಸಾಮ್ರಾಜ್ಯ ಇತಿಹಾಸ ರಚೆನೆಗೆ ನೆರವಾಗಬಲ್ಲ ಕನ್ನಡದ ಬಹಳ ಮುಖ್ಯವಾದ ಗ್ರಂಥವೆಂದರೆ ‘ಕುಮಾರರಾಮನ ಕಥೆ’ ಇವರ ಕರ್ತೃ ೧೬ನೇ ಶತಮಾನದ ಶೈವ ಕವಿ ನಂಜುಂಡ. ಕ್ರಿ.ಶ. ಸುಮಾರು ೧೫೨೫ರಲ್ಲಿ ಇದರ ರಚನೆಯಾಗಿರಬಹುದೆಂದು ಕವಿ ಚರಿತ್ರೆಕಾರರ ಅಭಿಪ್ರಾಯ. ಈ ಕೃತಿಯ ಕಥಾನಾಯಕ ‘ಕುಮಾರರಾಮ’ ಕನ್ನಡ ನಾಡಿನ ಜನಪ್ರಿಯ ನಾಯಕರಲ್ಲೊಬ್ಬ, ಪೌರುಷ ಮತ್ತು ಶೌರ್ಯಗಳಿಗೆ ಹೆಸರಾದ ಇವನು ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಹಮ್ಮದೀಯರ ದಾಳಿಯನ್ನೆದುರಿಸಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ತಳಹದಿ ಹಾಕಿ ಶಿಥಿಲವಾಗುತ್ತಿದ್ದ ಹಿಂದೂ ಧರ್ಮವನ್ನು ಉದ್ದಾರ ಮಾಡಿದನೆಂದು ವರ್ಣಿಸಲಾಗಿದೆ. ಚಿತ್ತಾಕರ್ಷಕವಾಗಿರುವ ಈ ಕುಮಾರರಾಮನ ಕಥೆಯಲ್ಲಿ ಹಾಸುಹೊಕ್ಕಾಗಿರುವ ಒಂದೆರಡು ಐತಿಹಾಸಿಕ ಎಳೆಗಳನ್ನು ಬಿಡಿಸಲು ಇಂದಿನ ಚರಿತ್ರಾಕಾರು ಪ್ರಯತ್ನಿಸಿದ್ದಾರೆ. ಇಬನ್ ಬಟೂಟ, ನ್ಯೂನಿಜ್, ಬರ್ನಿ, ಪೆರಿಸ್ತಾ ಮತ್ತು ಇಸಾಮಿ ಮೊದಲಾದವರ ಉಲ್ಲೇಖಗಳಲ್ಲಿ ಕಮ್ಮಟದುರ್ಘದ ದುರಂತ ವೃತ್ತಾಂತದ ಕಥೆ ಅಲ್ಪಸಲ್ಪ ತಿಳಿದುಬರುತ್ತದೆ. ಕುಮಾರರಾಮನನ್ನು ಕುರಿತು ಅನೇಕ ಶಾಸನಗಳು ಧಾರವಾಡ ಜಿಲ್ಲೆಯ ಸಂಗೂರು, ಬಳ್ಳಾರಿ ಜಿಲ್ಲೆಯ ರಾಮಘಡ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೊದಲಾದ ಕಡೆ ದೊರಕಿವೆ. ಉತ್ತರದಿಂದ ಮಹಮದ್ ಬಿನ್ ತೋಘಲಕನ ವಿರುದ್ಧ ದಂಗೆಯೆದ್ದ ಬಹಾವುದ್ದೀನ್ ಬಿಸ್ ತೋಘಲಕನ ವಿರುದ್ದ ದಂಗೆಯೆದ್ದ ಬಹಾವುದ್ದೀನ್ ಗರ್ಷಸ್ಟ್ ಎಂಬಾತ ಕಂಪಿಲ ರಾಯನಲ್ಲಿ ಆಶ್ರಯ ಪಡೆದಿದ್ದನೆಂದೂ, ದೆಹಲಿಯಿಂದ ಬಂದ ಕಂಪಿಲನನ್ನು ಸೈನ್ಯ ಹತಮಾಡಿತೆಂದೂ, ದೆಹಲಿಯಿಂದ ಬಂದ ಕಂಪಿಲನನ್ನು ಸೈನ್ಯ ಹತಮಾಡಿ ಕೆಲವರನ್ನು ಸೆರೆಹಿಡಿದು ದೆಹಲಿಗೆ ಒಯ್ಯಲಾಯಿತೆಂದು ಅವರಲ್ಲಿ ಜೀವಸಹಿತ ಉಳಿದ ಒಬ್ಬೊಬ್ಬರೇ ಮುಂದೆ ವಿಜಯನಗರದ ಸ್ಥಾಪನೆಗೆ ಕಾರಣರಾದರೆಂದು ಈ ಕೃತಿಯು ಸಾರುತ್ತದೆ. ಆದರೆ ಈ ಗ್ರಂಥ ಸುಮಾರು ೨೦೦ ವರ್ಷಗಳ ನಂತರ ರಚಿತವಾಗಿರುವುದರಿಂದ ಇದರಲ್ಲಿ ವಿವರಿಸಿರುವ ಎಲ್ಲಾ ಅಂಶಗಳನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಗ್ರಂಥದ ವಿಷಯ ನಿರೂಪಣೆಯಲ್ಲಿ ದೋಷಗಳಿದ್ದರೂ ಸಹ ಇದು ಮುಖ್ಯವಾದ ಐತಿಹಾಸಿಕ ಅಂಶಗಳನ್ನು ಒಳಗೊಂಡಿದೆ ಎಂದು ಹೇಳಬಹುದು.

ಕವಿ ಲಿಂಗಣ್ಣ ತನ್ನ ಕನ್ನಡ ಚಂಪೂ ಕಾವ್ಯವಾಗಿರುವ “ಕೆಳದಿ ನೃಪವಿಜಯಂ” ನಲ್ಲಿ ಹೀಗೆ ವರ್ಣಿಸಿದ್ದಾನೆ. ಆಕಸ್ಮಿಕವಾಗಿ ದೊರೆತ ನಿಕ್ಷೇಪದಿಂದ ಪ್ರಬಲನಾದ ಕೃಷಿಕಾರ ಚೌಡಪ್ಪಗೌಡ ೧೬ನೇ ಶತಮಾನದ ಅದಿಯಲ್ಲಿ ವಿಜಯನಗರ ಸಾಮ್ರಾಟದ ಅಪ್ಪಣೆ ಮೇರೆಗೆ ಕೆಳದಿಯೇ ಮೊದಲಾದ ಎಂಟು ಸಂಸ್ಥಾನಗಳ ನಾಯಕತ್ವವನ್ನು ವಹಿಸಿಕೊಂಡಾಗ ಕೆಳದಿ ಅವರ ರಾಜಧಾನಿಯಾಯಿತು. ಆತ ಚೌಡಪ್ಪ ನಾಯಕನೆನಿಸಿಕೊಂಡು ಕೆಳದಿಯಲ್ಲಿ ರಾಜೋಚಿತವಾದ ಅರಮನೆಯನ್ನು ಭದ್ರತೆಯ ಸಲುವಾಗಿ ಹುಡೆ, ಕಾಯ್ದು, ಕಟ್ಟಳೆಗಳನ್ನು ನಿರ್ಮಿಸಿ ೧೫೦೦ರಲ್ಲಿ ಕೆಳದಿ ಪುರದರಮನೆಯಲ್ಲಿ ಪಟ್ಟಕಟ್ಟಿಕೊಂಡನೆಂದು ಲಿಂಗಣ್ಣ ಕವಿ ಹೇಳಿಕೊಂಡಿದ್ದಾನೆ. ವಿಜಯನಗರ ಸಾಮ್ರಾಜ್ಯದ ಮೂಲಕ್ಕೆ ಸಂಬಂಧಿಸಿದಂತೆ ಈ ಗ್ರಂಥವು “ವಿದ್ಯಾರಣ್ಯ ಕಾಲಜ್ಞಾನ”ದ ರೀತಿಯಲ್ಲಿಯೇ ಹಲವು ಘಟನೆಗಳನ್ನು ವಿವರಿಸುತ್ತದೆ. ಕಳದಿ ನೃಪವಿಜಯಂ ಕೂಡ ವಿಜಯನಗರ ಸ್ಥಾಪನೆಯಾದ ೪೦೦ ವರ್ಷಗಳ ನಂತರ ರಚಿತವಾದ ಗ್ರಂಥ ಅದ್ದರಿಂದ ಇದರಲ್ಲಿರುವುದೆಲ್ಲವನ್ನು ಸತ್ಯವೆಂದು ಹೇಳಲು ಸಾಧ್ಯವಾಗುವುದಿಲ್ಲ

ಚಿಕ್ಕದೇವರಾಜ “ವಂಶಾವಳಿ”ಯು ಕೂಡ ವಿಜಯನಗರಕ್ಕೆ ಸಂಬಂದಿಸಿದ ಕೆಲವು ಘಟನೆಗಳನ್ನು ವಿವರಿಸುತ್ತದೆ. ಈ ಗ್ರಂಥದ ರಚನೆಕಾರ ತಿರುಮಲ ಆರ‍್ಯ. ಇದು ಮೈಸೂರು ಅರಸರ ಇತಿಹಾಸಕ್ಕೆ ಸಂಬಂದಿಸಿದ್ದು. ಈ ಗ್ರಂಥದ ಪ್ರಾರಂಭದಲ್ಲಿ ಮೈಸೂರಿನ ಅರಸರಿಗೂ ಮತ್ತು ವಿಜಯನಗರಕ್ಕೂ ಇದ್ದ ಸಂಬಂಧವನ್ನು ವಿವರಿಸುತ್ತದೆ. ಕ್ರಿ.ಶ. ೧೪೨೮ರಲ್ಲಿದ್ದ ಲಕ್ಕಣ್ಣದಂಡೇಶನು “ಶಿವತತ್ವ ಚಿಂತಾಮಣಿ’ ಎಂಬ ೨೦೦ಕ್ಕೂ ಹೆಚ್ಚು ಪದ್ಯಗಳುಳ್ಳ ಬೃಹತ್ ಕಾವ್ಯ ಬರೆದು ತನ್ನ ಪ್ರತಿಭೆಯನ್ನು ವ್ಯಕ್ತಪಡಿಸಿದನು. ರಂ.ಶ್ರೀ.ಮುಗಳಿ ಅವರು ಬರೆದಿರುವಂತೆ… ಶಿವತತ್ವ ಚಿಂತಾಮಣಿಯಲ್ಲಿ ನಿತ್ಯಾನಿತ್ಯ ವಸ್ತು ವಿವರಣೆ, ಸಕಲ ನಿಷ್ಠಲ ವಿಚಾರ, ಶಿವನ ೨೫ ಲೀಲೆಗಳು, ಭವನಕೋಶ ಶಿವಕೋಶ ವರ್ಣನೆ, ಶಿವನಂದೀಶ ಸಂವಾದ, ಬಸವ ಚರಿತ, ಗಣಪ್ರಶಂಸೆ ಮುಂತಾದ ವಿಚಾರಗಳಿವೆ. ಒಟ್ಟಿನಲ್ಲಿ ಅಂದಿನ ಧಾರ್ಮಿಕ ನೀತಿಯ ಮೇಲೆ ಈ ಕರತಿ ಬೆಳಕು ಚೆಲ್ಲುತ್ತದೆ.

ವಿಜಯನಗರ ಸಾಮ್ರಾಟರು ಅಧಿಕ ಸಂಖ್ಯೆಯಲ್ಲಿ ಕನ್ನಡದ ಕವಿಗಳಿಗೆ ಆಶ್ರಯ ನೀಡಿದ್ದರು. ಗದುಗಿನ ನಾರಾಯಣಪ್ಪ, ಮಲ್ಲಿಕಾರ್ಜುನ, ಚಂದ್ರಕವಿ, ಚಾಮರಸ, ಭೀಮಕವಿ, ದೇವರಾಜ, ನರಹರಿ ಮೊದಲಾದವರು ಸಹಸ್ರ ಸಂಖ್ಯೆಯಲ್ಲಿ ಕಥೆ, ಕಾವ್ಯಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ. ಈ ಎಲ್ಲ ಕೃತಿಗಳೂ ಒಮದಲ್ಲಾ ಒಂದು ವಿಷಯದ ಮೇಲೆ ಬೆಳಕು ಚೆಲ್ಲುತ್ತವೆ.

ದಾಸ ಸಾಹಿತ್ಯ : ಕನ್ನಡ ಸಾಹಿತ್ಯಕ್ಕೆ ಹೊಂದಿಕೊಂಡಂತೆ ವಿಜಯನಗರ ದೊರೆಗಳ ಆಳ್ವಿಕೆಯ ಕಾಲವು ದಾಸ ಸಾಹಿತ್ಯದ ವಸಂತಕಾಲವಾಗಿತ್ತು. ಪುರಂದರ ಮತ್ತು ಕನಕದಾಸರ ಕಾಲವಂತೂ ಅಂದಿನ ದಾಸಸಾಹಿತ್ಯದ ಸುವರ್ಣಯುಗ, ಧಾರ್ಮಿಕಕ್ಷೋಭೆ, ಸಾಮಾಜಿಕ ಅಶಾಂತಿ, ಪರಸ್ಪರ ವೈಷಮ್ಯ ಮುಂತಾದವನ್ನೆಲ್ಲ್ಲಾ ಗಮನಿಸಿ ತಮ್ಮ ಅಪೂರ್ವ ಕವಿತಾಶಕ್ತಿಯಿಂದ ಅಂದಿನ ಸಮಾಜದ ಗುಣದೋಷಗಳನ್ನು ಚಿತ್ರಿಸಿದ್ದಾರೆ. ದಾಸರಲ್ಲಿ ಶ್ರೀಪಾದರಾಯರು, ಗೋಪಾಲದಾಸರು, ವಾದಿರಾಜರು, ವಿಜಯದಾಸರು, ವ್ಯಾಸರಾಯರು, ಪುರಂದರದಾಸರು ಮತ್ತು ಕನಕದಾಸರು ಮುಖ್ಯರಾದವರು ಇವರ ನಂತರವೂ ಸಹ ದಾಸಸಾಹಿತ್ಯ ಮುಂದುವರಿದುಕೊಂಡು ಬಂದಿತು.

ಸೋಸಲೆಯ ಶ್ರೀವ್ಯಾಸರಾಯರ ನ್ಯಾಯಾವೃತ, ತರ್ಕ ಪಾಂಡವಗಳೆಂಬ ಶ್ರೇಷ್ಠ ಕೀರ್ತನೆಗಳು ಅಂದಿನ ಸಾಮಾಜಿಕ ಜನಜೀವನದ ಪ್ರಮುಖ ಅಂಶಗಳನ್ನು ತಿಳಿಸಲು ನೆರವಾಗಬಲ್ಲದಾಗಿದೆ. ಪುರಂದರದಾಸರ ಕೀರ್ತನೆಗಳಲ್ಲಿ ಅಂದಿನ ಸಮಾಜದಲ್ಲಿನ ಆಚಾರ ವಿಚಾರಗಳು ಮೂಡನಂಬಿಕೆಗಳನ್ನು ಸಾಮಾನ್ಯವಾಗಿ ಗ್ರಹಿಸಬಹುದು. ಪುರಂದರು ಸಾಮಾಜದ ವಿಮರ್ಶೆಯನ್ನು ಮಾಡುತ್ತಾ ಜನರ ಕಪಟ, ನಾಸ್ತಿಕತೆ, ಅನೀತಿ, ಡಾಂಭಿಕತೆಗಳ ಕಟು ವಿಮರ್ಶೆಯೊಡನೆ ಚಿರಂತನ ಮೌಲ್ಯಗಳ ಮತ್ತು ಭಕ್ತಿಯ ಉಪದೇಶ ಮಾಡಿದ್ದಾರೆ. ಲೋಕದ ಜನತೆಯನ್ನು ತಿದ್ದುವಾಗ ನಗೆಯನ್ನು ಒಂದು ಸಾಧನವನ್ನಾಗಿ ಬಳಸಿಕೊಂಡಿದ್ದಾರೆ. “ನಗೆಯು ಬರುತಿದೆ ನನಗೆ ನಗೆಯು ಬರುತಿದೆ, ಜಗದೊಳಿರುವ ಮನುಜರೆಲ್ಲ ಹಗರಣ ಮಾಡುವುದ ಕಂಡು” ಎಂದು ಹಾಡಿದ್ದಾರೆ. ಸಮಾಜದ ವಿಮರ್ಶೆಯ ಗೀತೆಗಳಲ್ಲಿ “ತನುವ ನೀರೊಳಗಿದ್ದು ಫಲವೇನು” “ಬೇವು ಬೆಲ್ಲದೊಡಲೇನು ಫಲ” “ಮಡಿ ಮಡಿ ಎಂದು ಅಡಿಗಡಿಗೆ ಹಾರುವರು” “ಮಲವತೊಳೆಯಬಲ್ಲರಲ್ಲದೆ ಮನವ ತೊಳೆಯಬಲ್ಲರೆ” ಇವುಗಳನ್ನು ಗಮನಿಸಿದರೆ ಮನುಷ್ಯನ ಸ್ವಭಾವಗಳ ವೈವಿಧ್ಯಮಯವಾದ ಜೀವನದ ಪರಿಚಯ ಮತ್ತು ಸಮಾಜ ಜೀವನದಲ್ಲಿಯ ಸಾಮಾನ್ಯ ಅಧೋಗತಿಯ ನಿಚ್ಚಳ ಅರಿವು ಉಂಟಾಗುತ್ತದೆ.

ದಾಸರು ತಮ್ಮ ಸಾಹಿತ್ಯದಲ್ಲಿ ಕಂಡ ಕೆಲವು ಕೆಟ್ಟ ಭಾವನೆಗಳನ್ನು ಟೀಕಿಸಿ ಮತಧರ್ಮದ ವಿಚಾರದಲ್ಲಿ ಮೇಲು, ಕೀಳೆಂಬ ಭಾವನೆಯನ್ನು ತಿರಸ್ಕರಿಸಿದರು. ಕುಲದ ಮೇಲೆ ಯಾರು ಹೋಗಬಾರದು “ಅವಕುಲವಾದರೇನು, ಅವನಾದರೇನು” ಕುಲವಿಲ್ಲ ಜ್ಞಾನಿಗೆ ಎಂದು ಹೇಳಿದ್ದಲ್ಲದೆ ಕುಲದ ಮೇಲುಕೀಳು ಬರುವುದು ಹುಟ್ಟಿನಿಂದಲ್ಲ ಆಚರಣೆಯಿಂದ ಎಂದು ಹೇಳುತ್ತಾ “ಹೊಲೆಯ ಹೊರಗಿನವನೆ ಊರೊಳಗಿಲ್ಲವೆ” ಎಂದು ಹಾಸ್ಯಮಾಡಿದ್ದಾರೆ. ದಾಸರು ಮೈಲಿಗೆ ಮುಂತಾದ ಆಚಾರಗಳನ್ನು ಅಲ್ಲಗಳೆದದ್ದು ಅನೇಕರಿಗೆ ಕೋಪ ತಂದಿತು. ಅವರ ಟೀಕೆಯನ್ನು ಶಾಂತವಾಗಿಯೇ ಸ್ವೀಕರಿಸುತ್ತಾ “ನಿಂದಕರಿರಬೇಕು. ಹಂದಿಯಿದ್ದರೆ ಕೇರಿ ಹ್ಯಾಗೆಶುದ್ದಿಯೋ ಹಾಗೆ” ಎಂದು ಹಾಡಿದ್ದಾರೆ.

ದಾಸರು ಭಕ್ತಿಯ ಆಚರಣೆಯನ್ನು ವ್ಯಾಪಾರಕ್ಕೆ ಹೊಲಿಸುತ್ತಾ “ನಾಲಿಗೆಯೆಂಬ ಎತ್ತನ್ನು ಗಾಡಿಗೆ ಕಟ್ಟಿ ದೇಹಿ ಎಂಬ ಒಂದು ಗೋಣಿಯಲ್ಲಿ ರಾಮನಾಮವೆಂಬ ಸರಕನ್ನು ತುಂಬಿಕೊಂಡು ವ್ಯಾಪಾರ ಮಾಡಬೇಕು. ಹೀಗೆ ಪಯಣ ಮಾಡುವಾಗ ಇಂದ್ರಿಯಗಳೆಂಬ ಸುಂಕದನು ಅಡ್ಡಬಂದರೆ ಮುಕುಂದ ಮುದ್ರೆಯನ್ನು ತೋರಿಸಿ ಅದನ್ನು ಓಡಿಸಬೇಕು” ಎಂದು ಹೇಳಿದ್ದಾರೆ.

ಹೀಗೆ ಪುರಂದರ ದಾಸರು ತಮ್ಮ ಯಾವುದೇ ಗೀತೆಯಲ್ಲಿಯೂ ಸಹ ಅದು ಅಂದಿನ ಸಾಮಾಜಿಕ ಜೀವನದ ಮೇಲೆ ಬೆಳಕು ಚೆಲ್ಲುವಂತೆ ಮಾಡಿದ್ದಾರೆ. “ಈಸಬೇಕು ಇದ್ದು ಜೈಸಬೇಕು” ಮಾನವ ಜನ್ಮ ದೊಡ್ಡದು ಇದು ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ” ಎಂದ ಆಶಾದಾಯಕ ನುಡಿ ನೀಡಿ ಸಾರ್ಥಕ ಜೀವನಕ್ಕೆ ಮೆರಗು ನೀಡಿದ್ದಾರೆ. ಅವರ ಗೀತೆಗಳು ಕರ್ನಾಟಕ ಸಂಗೀತದಲ್ಲಿ ಶ್ರೇಷ್ಠತೆಯನ್ನು ಗಳಿಸಿವೆ. ಸಂಗೀತವನ್ನು ಜನಸಾಮಾನ್ಯರ ಜೀವನದ ಅಮೂಲ್ಯ ಭಾಗವನ್ನಾಗಿ ಮಾಡಿದವರು ಪುರಂದರರೇ. ಆದುದರಿಂದಲೇ ಅವರನ್ನು “ಕರ್ನಾಟಕ ಸಂಗೀತ ಪಿತಾಮಹ”ನೆಂದು ಪರಿಗಣಿಸಲಾಗಿದೆ.

ಅಪಾರ ಜ್ಞಾನವನ್ನು ಹೊಂದಿದ ಕನಕದಾಸರು ಪುರಂದರದಾಸರಂತೆ ಹಲವಾರು ಕೀರ್ತನೆಗಳನ್ನು ರಚಿಸಿ, ಭಕ್ತಿ ವೈರಾಗ್ಯಗಳ ಪ್ರತಿಪಾದನೆ ಮಾಡಿರುವುದಲ್ಲದೆ ಜನರ ದಿನನಿತ್ಯದ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದರು. ಇವರ “ಮೋಹನ ತರಂಗಣಿ”, “ನಳಚರಿತ್ರೆ” “ರಾಮಧಾನ್ಯಚರಿತ್ರೆ” “ಹರಿಭಕ್ತಸಾರ” ಎಂಬ ಗ್ರಂಥಗಳು ಪ್ರಸಿದ್ಧವಾಗಿವೆ. ಇವರು ರಚಿಸಿದ “ಮಗನಿಂದ ಗತಿ ಉಂಟೇ” “ಸಂಸಾರ ಸಾಗರವನ್ನುತ್ತರಿಸುವಡೆ” “ಕುಲಕುಲವೆನ್ನುತಿಹರು” “ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ” ಇವುಗಳು ವಿಜಯನಗರ ಕಾಲದ ಸಮಾಜದಲ್ಲಿದ್ದ ಮೂಡನಂಬಿಕೆಗಳು, ಆಚಾರ, ವಿಚಾರಗಳನ್ನು ವ್ಯಕ್ತಪಡಿಸುತ್ತವೆ. “ಮೋಹನ ತರಂಗಿಣಿ”ಯು ಹಿಂದೂ ಧಾರ್ಮಿಕ ಗ್ರಂತವಾಗಿರದೆ ವಿಜಯನಗರವನ್ನು ಪರೋಕ್ಷವಾಗಿ ವರ್ಣಿಸಿದ್ದಾರೆ. ಅಲ್ಲಿದ್ದ ಅಗ್ರಹಾರಗಳು, ತೋಟಗಳು, ಕೆರೆಗಳು, ಪೇಟೆಗಳು, ಬೀದಿಗಳು, ವರ್ತಕರ ಅಂಗಡಿಗಳು, ಮೊದಲಾದವು ಇಲ್ಲಿ ವರ್ಣಿಸಲ್ಪಟ್ಟಿವೆ. ಕನ್ನಡ ಸಾಹಿತ್ಯದಲ್ಲಿಯೆ ಅಪೂರ್ವ ಕೃತಿ ಎನಿಸಿರುವ ಕನಕದಾಸರ ರಾಮಧಾನ್ಯ ಚರಿತ್ರೆ” ಅವರ ಸಾಮಾಜಿಕ ಪ್ರಜ್ಞೆ ಮತ್ತು ವಿಮರ್ಶಗಳಿಂದ ಕೂಡಿದೆ. ಅಂದಿನ ಸಮಾಜದ ಬಡವ ಬಲ್ಲಿದ, ಮೇಲುಕೀಳು, ಉಚ್ಛ ನೀಚ ಇದರ ನಡುವಿನ ವ್ಯತ್ಯಾಸವನ್ನು ವಿವರಿಸುತ್ತದೆ. ಮತ್ತುಂದು ಕೃತಿ ‘ನಳ ಚರಿತ್ರೆ’ಯಲ್ಲಿ ಅಂದಿನ ಯುದ್ಧ ಪ್ರಿಯ ಜನರ ವೀರ ಜೀವನ ಚರಿತ್ರೆಯನ್ನು ತೋರಿಸಲಾಗಿದೆ. ಈ ಚರಿತ್ರೆಯಲ್ಲಿ ವಿಜಯನಗರದ ಅರಸರು ತಾಳಿಕೋಟೆ ಕದನದಲ್ಲಿ ಸೋತು ಕೆಲಕಾಲ ತೊಂದರೆಗೊಳಗಾಗಿ ಮತ್ತೆ ಅಧಿಕಾರಕ್ಕೆ ಬಂದುದನ್ನು ಸಂಕ್ಷಿಪ್ತವಾಗಿ ಚಿತ್ರಿಸಲಾಗಿದೆ.

ವಿಜಯನಗರದ ಕಾಲವು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಒಂದು ಪರ್ವಕಾಲ ಇದಕ್ಕೆ ಅನೇಕ ಕವಿಗಳ, ವಿದ್ವಾಂಸರ, ದಾಸಶರಣರ ಪ್ರಯತ್ನಶೀಲತೆ ಮುಖ್ಯ ಕಾರಣವಾಗಿದೆ.

.೩. ತೆಲುಗು ಸಾಹಿತ್ಯ

ವಿಜಯನಗರದ ಅರಸರು ತೆಲುಗು ವಿದ್ವಾಂಸರಿಗೂ, ಕವಿಗಳು ಪ್ರೋತ್ಸಾಹ ನೀಡುವುದರ ಜೊತೆಗೆ ಕೆಲವರು ತಾವೂ ತೆಲುಗು ಭಾಷೆಯನ್ನು ಬಲ್ಲವರಾಗಿದ್ದು. ಇದರಿಂದಾಗಿ ಹಲವಾರು ತೆಲುಗು ಗ್ರಂಥಗಳು ಇವರ ಕಾಲದಲ್ಲಿ ರಾಜಮಹಾರಾಜರಿಂದ ಪ್ರಾರಂಭವಾಗಿ ತೆಲುಗು ಗ್ರಂಥಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವು ವಿಜಯನಗರ ಇತಿಹಾಸದ ರಚನೆಗೆ ಬಹುಮುಖ್ಯವಾದ ಆಧಾರಗ್ರಂಥಗಳಾಗಿವೆ. ತೆಲುಗು ಗ್ರಂಥಗಳಲ್ಲಿ ಪ್ರಮುಖವಾದವುಗಳೆಂದರೆ.

ಅ. ಜೈಮಿನಿ ಭಾರತಮು, ಆ. ಹರಿವಿಲಾಸಮು, ಇ. ಪಾರಿಜಾತಪಹರಣಂ, ಈ. ಅಮುಕ್ತಮೌಲ್ಯದ ಉ. ಮುನುಚರಿತ್ರಮು, ಊ. ಲೀಲಾವರಿ ಋ. ಬಾಲಭಾಗವತಂ ೠ. ಲಕ್ಷ್ಮೀವಿಲಾಸಂ ಎ. ರಾಯವಾಚಕಮು, ಏ. ವಸುಚರಿತ್ರಮು, ಐ. ನರಸಬೂ ಪಾಲ್ಯಮು.

ಪಿನವೀರಭದ್ರನಿಂದ ರಚಿತವಾದ ಜೈಮಿನಿ ಭಾರತಮು ಗ್ರಂಥವು ವಿಜಯನಗರದ ಸಾಳುವ ಸಂತತಿಯ ಮೊದಲನೆಯ ದೊರೆಯಾದ ಸಾಳುವ ನರಸಿಂಹನ ಪೂರ್ವಜನಾದ ಸಾಳುವ ಮಗುವಿನ ಬಗ್ಗೆ ಕೆಲವು ಮಾಹಿತಿಯನ್ನು ಒದಗಿಸುತ್ತದೆ. ಬುಕ್ಕನ ಆಳ್ವಿಕೆಯ ಕಾಲದಲ್ಲಿ ಅವನ ಮಂತ್ರಯಾದ ಗೋಪಣ್ಣ ಆರ್ಯ ಮತ್ತು ಕಂಪಣ್ಣನ ದಂಡೆಯಾತ್ರೆಯ ಬಗ್ಗೆ ತಿಳಿದುಬರುತ್ತದೆ. ಸಾಳುವ ನರಸಿಂಹನು ಹೊಂದಿದ್ದ ಬಿರುದುಗಳನ್ನು ಮತ್ತು ಅವುಗಳ ಅರ್ಥವನ್ನು ತಿಳಿಸುತ್ತದೆ. ವಲ್ಲಭರಾಯ ರಚಿಸಿರುವ “ಕೃದಾಭಿರಾಯಂ” ಎಂಬ ಗ್ರಂಥವು ತ್ರಿಪುರಾಂತಕನ ಮಗನಾದ ವಲ್ಲಭರಾಯನು ಪೆನುಕೊಂಡದ ರಾಜ್ಯಪಾಲನಾಗಿದ್ದ ಮೂರು ಹಳ್ಳಿಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ದಾಸ್ತಾನು ಮಳಿಗೆಯ ಲೆಕ್ಕಪತ್ರಾಧಿಕಾರಿಯಾಗಿದ್ದನೆಂದು ತಿಳಿಸುತ್ತದೆ.

ಕೊಂಡವೀಡುವಿನ ರೆಡ್ಡಿನಾಯಕನ ಆಸ್ಥಾನದಲ್ಲಿ ಶ್ರೀನಾಥನು “ಹರಿವಿಲಾಸಮು” ಎಂಬ ಗ್ರಂಥವನ್ನು ರಚಿಸಿದ್ದಾನೆ. ಈ ಗ್ರಂಥದಲ್ಲಿ ಸಿಂಹ ವಿಕ್ರಮ ಪಟ್ಟಣ (ನೆಲ್ಲೂರು)ದಲ್ಲಿದ್ದ ಒಬ್ಬ ದೊಡ್ಡ ವ್ಯಾಪಾರಿಯ ಬಗ್ಗೆ ತಿಳಿಸುತ್ತಾ ಈ ವ್ಯಾಪಾರಿಯು ಹೊರದೇಶಗಳೊಡನೆ ಹೇಗೆ ವ್ಯಾಪಾರ ನಡೆಸುತ್ತಿದ್ದನೆಂಬುದನ್ನು ವಿವರಿಸುತ್ತದೆ. ಆಗಿನ ಕಾಲದ ಪ್ರಮುಖ ರಾಜರಿಗೆ ಬೇಕಾದ ಸಾಮಗ್ರಿಗಳನ್ನು ಒದಗಿಸುತ್ತಿದ್ದನೆಂದು ತಿಳಿಸುವಾಗ ವಿಜಯನಗರದ ರಾಜರಿಗೆ ಒದಗಿಸುತ್ತಿದ್ದ ಅಮೂಲ್ಯ ವಸ್ತುಗಳ ಪರಿಚಯ ತಿಳಿಸುತ್ತದೆ. ಈ ಗ್ರಂಥವು ವಿಜಯನಗರವು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಜೊತೆಗೆ ರಪ್ತು ಮಾಡುತ್ತಿದ್ದ ಪದಾರ್ಥಗಳನ್ನು ಸಂಕ್ಷಿಪ್ತವಾಗಿ ತಿಳಿಸುತ್ತದೆ.

“ವರಹ ಪುರಾಣಮು” ತೆಲುಗು ಕಾವ್ಯವು ನಂದಿ ಮಲ್ಲಯ್ಯ ಮತ್ತು ಘಂಟಸಿಂಗಯ್ಯ ಎಂಬ ಇಬ್ಬರು ಕವಿಗಳಿಂದ ರಚಿತವಾಗಿದೆ. ಈ ಕಾವ್ಯವು ಸಾಳ್ವ ನರಸಿಂಹನ ದಳಪತಿ ಯಾದ ನರಸ ನಾಯಕನಿಗೆ ಸಮರ್ಪಿಸಲ್ಪಟ್ಟಿದೆ. ಪ್ರಾರಂಭದಲ್ಲಿ ಈ ಕವಿಗಳು ತಮಗೆ ಆಶ್ರಯ ನೀಡಿದ ಸಾಳುವ ನರಸಿಂಹನ ವಂಶಾವಳಿಯನ್ನು ಮತ್ತು ಅವನ ಸಾಧನೆಗಳನ್ನು ತಿಳಿಸುತ್ತಾರೆ.

“ಪರಿಜಾತಪಹರಣಂ” ಗ್ರಂಥವು ಕೃಷ್ಣದೇವರಾಯನ ಆಸ್ಥಾನದ ಕವಿಯಾಗಿದ್ದ ನಂದಿಯ ತಿಮ್ಮಣ್ಣನಿಂದ ರಚಿತವಾಗಿದ್ದು ಎಂದು ನಂಬಲಾಗಿದೆ. ಇವನು ಪ್ರಾರಂಭದಲ್ಲಿ ಕೃಷ್ಣದೇವರಾಯನ ಕುಟುಂಬದ ಬಗ್ಗೆ ವಿವರಿಸುವುದರ ಜೊತೆಗೆ ಅವನ ದಂಡೆಯಾತ್ರೆಗಳ ಬಗ್ಗೆಯೂ ವಿವರಣೆ ನೀಡಿದ್ದಾನೆ. ಇದು ಸಮಕಾಲೀನ ಗ್ರಂಥವಾದ್ದರಿಂದ ವಿಜಯನಗರ ಚರಿತ್ರೆಯಲ್ಲಿ. ಅದರಲ್ಲಿಯೂ ಕೃಷ್ಣದೇವರಾಯನ ಸಾಧನೆಯ ಬಗ್ಗೆ ಹೆಚ್ಚಿನ ಬೆಳಕನ್ನು ನೀಡುತ್ತದೆ. ಈ ಗ್ರಂಥ ಕರ್ತೃವಿನ ಹೆಸರು ನಂದಿಯ ತಿಮ್ಮಣ್ಣನೋ ಅಥವಾ ಮಂಕು ತಿಮ್ಮಣ್ಣನೋ ಎಂಬುದರ ಬಗ್ಗೆ ವಿದ್ವಾಂಸರಲ್ಲಿ ಜಿಜ್ಞಾಸೆ ನಡೆದಿದೆ. ಕೃಷ್ಣದೇವರಾಯನು ವಿದ್ವಾಂಸರಿಗೆ ಆಸ್ಥಾನದಲ್ಲಿ ನೀಡಿದ ಗೌರವ, ಸ್ಥಾನಮಾನವನ್ನು ಈ ಗ್ರಂಥವು ಸಂಕ್ಷಿಪ್ತವಾಗಿ ವಿವರಿಸುತ್ತದೆ.

‘ಅಮುಕ್ತಮೌಲ್ಯದ’ವನ್ನು ಕೃಷ್ಣದೇವರಾಯನು ಕಳಿಂಗದ ಮೇಲೆ ದಂಡೆತ್ತಿ ಹೋಗುತ್ತಿರುವಾಗ ವಿಜಯವಾಡದಲ್ಲಿ ಆಂಧ್ರ ಮಧುಸೂದನನನ್ನು ಆರಾಧಿಸಿ ಆ ದಿನ ಏಕಾದಶಿಯಾದ್ದರಿಂದ ಉಪವಾಸವನ್ನು ಕೈಗೊಂಡು ಆ ರಾತ್ರಿ ದೇವರು ಕನಸಿನಲ್ಲಿ ಕಾಣಿಸಿಕೊಂಡು ೧೨ ಮಂದಿ ವೈಷ್ಣವ ಸಂತರಲ್ಲಿ ಒಬ್ಬರಾದ ವಿಷ್ಟುಚಿತ್ತಪರಿಯಾಳ್ವರ ಮಗಳ ಕಥೆಯನ್ನು ರಚಿಸಿ, ವೆಂಕಟೇಶ್ವರನಿಗೆ ಸಮರ್ಪಿಸುವಂತೆ ಅಜ್ಞಾಪಿಸಲಾಯಿತ್ತೆಂದು ಆದ್ದರಿಂದ ಕೃಷ್ಣದೇವರಾಯನು ಈ ಗ್ರಂಥವನ್ನು ರಚಿಸಿದುದಾಗಿಯೂ ಈ ಗ್ರಂಥದಲ್ಲಿಯೇ ತಿಳಿದುಬರುತ್ತದೆ. ಆದರೆ ವಿ. ಪ್ರಭಾಕರ ಶಾಸ್ತ್ರಿಗಾರಲು ಅವರು ಈ ಗ್ರಂಥವನ್ನು ಅಲ್ಲಸಾನಿ ಪೆದ್ದನನು ರಚಿಸಿದನೆಂದು ಅಭಿಪ್ರಾಯಪಟ್ಟಿದ್ದಾರೆ. ತೆನಾಲಿ ರಾಮಕೃಷ್ಣನು ತನ್ನ “ಪಂಡಿತಾರಾಧ್ಯ ಚರಿತಂ”ದಲ್ಲಿ ಅಮುಕ್ತಮೌಲ್ಯವನ್ನು ಪೆದ್ದನನು ರಚಿಸಿದನೆಂದು ತಿಳಿಸಿದ್ದಾನೆ. ಕರ್ತೃ ಯಾರೇ ಆದರೂ ಈ ಗ್ರಂಥವು ಕೃಷ್ಣದೇವರಾಯನ ಕಾಲದ ಐತಿಹಾಸಿಕ ಅಂಶಗಳನ್ನು ಒದಗಿಸುತ್ತದೆ. ಈ ಗ್ರಂಥವು ಕೃಷ್ಣದೇವರಾಯನ ಪ್ರತಿಯೊಂದು ದಂಡೆಯಾತ್ರೆಯನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ.

“ಮನುಚರಿತ್ರೆಮು” ಕೃತಿಯನ್ನು ಅಲ್ಲಾಸಾನಿ ಪೆದ್ದಣ್ಣನು ಕೃಷ್ಣದೇವರಾಯನ ಸಾವಿನಿಂದ ದುಃಖತಪ್ತನಾಗಿ ಈ ಸುಂದರ ಕವಿತೆಯನ್ನು ರಚಿಸಿ ಕೃಷ್ಣದೇವರಾಯನಿಗೆ ಸಮರ್ಪಿಸಿದ್ದಾನೆ. ಇವನು “ಆಂಧ್ರ ಕವಿ ಪಿತಾಮಹ” ಎಂಬ ಬಿರುದಿಗೆ ಪಾತ್ರನಾಗಿದ್ದನು. ನಂತರ ಇವನು ಈ ಗ್ರಂಥದಲ್ಲಿ ಗಡಿ ಪ್ರಾಂತ್ಯದ ಮೇಲೆ ನಡೆದ ಧಾಳಿಯನ್ನು ತಿಳಿಸುತ್ತಾನೆ.

‘ಲೀಲಾವತಿ’ ಭಾಸ್ಕರ ಚಾರ್ಯನು ರಚಿಸಿದ ಸಂಸ್ಕೃತ ಗಣಿತ ಗ್ರಂಥವಾದ ಇದನ್ನು ವಲ್ಲಭಚಾರ್ಯ ಅಥವಾ ಕವಿದೇವೇಂದ್ರನು ತೆಲುಗು ಭಾಷೆಗೆ ಭಾಷಾಂತರಿಸಿದ್ದಾನೆ. ಬೊಮ್ಮಲಾಟ ವಿರೂಪಾಕ್ಷ ಮತ್ತು ಅವನ ಮಗ ಬೊಮ್ಮಲಾಟ ಕಾಲನು ಕೃಷ್ಣದೇವರಾಯನ ಆಸ್ಥಾನದ ನಿಷ್ಠಾವಂತ ಸೇವಕರಾಗಿದ್ದರು ಮತ್ತು ಮುಂದೆ ಅಚ್ಯುತರಾಯನಿಗೂ ಸಹ ಸೇವಕರಾಗಿದ್ದರೆಂದು ಈ ಗ್ರಂಥ ತಿಳಿಸುತ್ತದೆ. ಅಷ್ಟೇ ಅಲ್ಲದೆ ಅಚ್ಯುತರಾಯನ ದಾನಧರ್ಮಗಳನ್ನು ಇದು ತಿಳಿಸುತ್ತದೆ. “ಲಕ್ಷ್ಮೀವಿಲಾಸಂ” ಕೃತಿಯನ್ನು ಶ್ರೀರಂಗರಾಯನ ಆಸ್ಥಾನದಲ್ಲಿ ಅಧಿಕಾರಿಯಾಗಿದ್ದ “ರಾಯಸಂ” ವೆಂಕಟಪತಿಯು ರಚಿಸಿರುವನು. “ರಾಯವಾಸಕಮು” ಕೃತಿಯು ಕೃಷ್ಣದೇವರಾಯನ ದಿಗ್ವಿಜಯಗಳ ವಿವರಣೆಯನ್ನು ಸಂಕ್ಷಿಪ್ತವಾಗಿ ತಿಳಿಸುತ್ತದೆ ಈ ಕೃತಿಯು ಕೃಷ್ಣದೇವರಾಯನ ಇತಿಹಾಸದ ಮೇಲೆ ಹೆಚ್ಚಿನ ಬೆಳಕನ್ನು ಚೆಲ್ಲುತ್ತದೆ.

ವಿಜಯನಗರದ ಸಾಮ್ರಾಜ್ಯದ ಇತಿಹಾಸವನ್ನು ತಿಳಿಯಲು ವಿಪುಲವಾದ ಆಧಾರಗಳು ಸತ್ಯವೆಂದು ನಂಬಲು ಸಾಧ್ಯವಾಗುವುದಿಲ್ಲ ಏಕೆಂದರೆ ಆಸ್ಥಾನ ಕವಿಗಳು ತಮಗೆ ಆಶ್ರಯ ನೀಡಿದ ಅರಸರನ್ನು ಹೊಗಳಿ ಬರೆದಿರಬಹುದು. ಆದ್ದರಿಂದ ಯಾವುದೆ ಗ್ರಂಥದಲ್ಲಿಯೂ ನಮಗೆ ಅಲ್ಲಿನ ದೋಷಗಳ ಬಗ್ಗೆ ತಿಳಿಸುವುದೇ ಇಲ್ಲ. ಆದರೂ ಅವುಗಳ ವರ್ಣನೆಯನ್ನು ಸಂಪೂರ್ಣವಾಗಿ ಉತ್ಪ್ರೇಕ್ಷೆ ಎಂದು ತಳ್ಳಿಹಾಕುವಂತೆಯೂ ಇಲ್ಲ. ಏಕೆಂದರೆ ಅವುಗಳಲ್ಲಿ ಕೆಲವು ಐತಿಹಾಸಿಕ ಮಾಹಿತಿಗಳು ದೊರೆಯುತ್ತಿವೆ.

.೪. ವಿದೇಶಿ ಸಾಹಿತ್ಯ

೧೪ ಮತ್ತು ೧೫ನೇ ಶತಮಾನದಲ್ಲಿ ಭಾರತಕ್ಕೆ ಬಂದ ಅನೇಕ ವಿದೇಶಿ ಪ್ರವಾಸಿಗರು. ವಿಜಯನಗರದ ವೈಭವವನ್ನು ಕಣ್ಣಾರೆ ಕಂಡು ಕೇಳಿ ತಮ್ಮ ಅಭಿಪ್ರಾಯಗಳನ್ನು ಬರವಣಿಗೆಯ ರೂಪದಲ್ಲಿ ಬರೆದಿಟ್ಟು ಹೋಗಿದ್ದಾರೆ. ಈ ಬರವಣಿಗೆಗಳು ವಿಜಯನಗರದ ಇತಿಹಾಸವನ್ನು ರಚಿಸುವುದರಲ್ಲಿ ಸಾಕಷ್ಟು ಸಹಕಾರಿಯಾಗಿದೆ. ಸಮಕಾಲೀನ ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ನೀಡುತ್ತವೆ.

. ನಿಕಾಲೋಕೊಂಟಿ : ೧೫೨೯ರಲ್ಲಿ ಇಟಲಿಯ ಪ್ರವಾಸಿಗನಾದ ನಿಕಾಲೋಕೊಂಟಿಯು ವಿಜಯನಗರಕ್ಕೆ ಭೇಟಿ ನೀಡಿ ಇಲ್ಲಿನ ಸಂಪತ್ತು, ಆಡಳಿತ, ಸಾಮಾಜಿಕ ಆರ್ಥಿಕ ಸ್ಥಿತಿಗಳ ಬಗ್ಗೆ ವಿವರಣೆ ನೀಡಿದ್ದಾನೆ. ಇವನು ಭೇಟಿ ನೀಡಿದ ಕಾಲದಲ್ಲಿ ೨ನೇ ದೇವರಾಯನು ವಿಜಯನಗರದ ಅರಸನಾಗಿದ್ದು, ನಿಕಾಲೋಕೊಂಟಿ ರಾಜಧಾನಿಯು ೬೦ ಮೈಲಿಗಳಷ್ಟು ಸುತ್ತಳತೆಯಿಂದ ಕೂಡಿ ಕೋಟೆಗಳಿಂದ ಆವೃತವಾಗಿತ್ತೆಂದು ತಿಳಿಸಿದ್ದಾನೆ. ಅಲ್ಲಿ ೯೦,೦೦೦ ಶಾಸ್ತ್ರಸ್ತ್ರ ಪ್ರವೀಣರಿದ್ದು ಬಲಾಢ್ಯನಾದ ಇಲ್ಲಿನ ಸಾಮ್ರಾಟನ ಅಂತಃ ಪುರವು ೧೨,೦೦೦ ಮಂದಿ ವನಿತೆಯರಿಂದ ತುಂಬಿತ್ತು ಎಂದು ಜಿತೆಗೆ ರಾಜ್ಯದಲ್ಲಿ ಪ್ರತಿವರ್ಷ ಮೂರು ದೊಡ್ಡ ಹಬ್ಬಗಳನ್ನು ಜನರು ಆಚರಿಸುತ್ತಿದ್ದರೆಂದು ತಿಳಿಸಿದ್ದಾನೆ.

. ಅಬ್ದುಲ್ ರಾಜಾಕ್ : ಕ್ರಿ.ಶ. ೧೪೪೩ರಲ್ಲಿ ಪರ್ಷಿಯಾದ ರಾಜನಾದ ಹಖ್ ಷಾನ ರಾಯಭಾರಿಯಾಗಿ ವಿಜಯನಗರಕ್ಕೆ ಭೇಟಿ ಕೊಟ್ಟನು. ಇವನು ವಿಜಯನಗರದ ವಿಸ್ತೀರ್ಣ, ವ್ಯಾಪಕತೆ, ಸಂಪತ್ತು ಮತ್ತು ಆಡಳಿತದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿದ್ದಾನೆ. ಈತನ ಪ್ರಕಾರ ವಿಜಯನಗರ ಸಾಮ್ರಾಜ್ಯವು ಸಿಂಹಳದಿಂದ ಬಂಗಾಳದ ಗಡಿಯವರೆಗೂ ಹಬ್ಬಿದ್ದು. ಸುಮಾರು ೩೦೦ ಬಂದರುಗಳಿದ್ದು, ೧೧ ಲಕ್ಷ ಸೈನಿಕರಿದ್ದರೆಂದೂ, ವಿಜಯನಗರದ ನಗರವನ್ನು ಕಣ್ಣು ಕಂಡಿಲ್ಲ, ಕಿವಿ ಕೇಳಿಲ್ಲವೆಂದು ತಿಳಿಸಿದ್ದಾನೆ. “ಮಹಾನವಮಿ ಉತ್ಸವ”ವು ಎಷ್ಟು ವಿಜೃಂಭಣೆಯಿಂದ ನಡೆಸಲ್ಪಡುತ್ತಿತ್ತೆಂದು ದೀರ್ಘ ವಿವರಣೆ ನೀಡಿದ್ದಾನೆ. ವ್ಯಾಪಾರ, ವಾಣಿಜ್ಯ, ಆನೆಗಳನ್ನು ಹಿಡಿಯುವ ವಿಧಾನ, ಆಹಾರ, ಉಡುಪುಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಾನೆ.

. ನಿಕಿಟನ್ : ಈತನು ವಿಜಯನಗರವನ್ನು ಸ್ವತಃ ನೋಡದಿದ್ದಾಗ್ಯೂ ಆ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಿದ್ದಾನೆ. ವಿಜಯನಗರ ಮತ್ತು ಬಹಮನಿ ಸುಲ್ತಾನರ ನಡುವೆ ಆಗಾಗ್ಗೆ ನಡೆಯುತ್ತಿದ್ದ ಕದನಗಳನ್ನು ವರ್ಣಿಸಿದ್ದಾನೆ. ಹಾಗೆಯೇ ಆ ಕಾಲದ ವ್ಯವಸಾಯದ ಬಗ್ಗೆ ಹೆಚ್ಚಿನ ಬೆಳಕನ್ನು ಚೆಲ್ಲುತ್ತಾನೆ.

. ದು ಆರ್ತೆಬಾರ್ಬೋಸ : ಈತನು ಕ್ರಿ.ಶ. ೧೫೦೦ – ೧೫೧೬ರವರೆಗೆ ಭಾರತದಲ್ಲಿದ್ದನು. ಪೋರ್ಚುಗಲ್ಲಿನ ಪ್ರವಾಸಿಯಾದ ಈತನು ವಿಜಯನಗರದ ಶ್ರೀಮಂತಿಕೆಯನ್ನು ಅಮದು, ರಪ್ತು ವ್ಯಾಪಾರವನ್ನು ಸಾಮ್ರಾಜ್ಯದ ಬಂದರುಗಳನ್ನು, ಸಾಮಾಜಿಕ ಪದ್ಧತಿಯನ್ನು ಹಾಗೂ ಭೂಮಿಯ ಫಲವತ್ತತೆಯ ಬಗ್ಗೆ ಹೇಳುತ್ತಾನೆ. ಕೈಗಾರಿಕೆಗಳ ಮೇಲೆ ಹೆಚ್ಚಿನ ಬೆಳಕು ಹರಿಸಿದ್ದಾನೆ.

. ಡೊಮಿಂಗೋ ಪಯಸ್ : ಪೋರ್ಚುಗೀಸ್ ಪ್ರವಾಸಿಯಾದ ಈತನು ಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರಕ್ಕೆ ಬಂದಿದ್ದನು. ವಿಜಯನಗರದ ಜನಸಂಖ್ಯೆಯು ಹೇಳಲು ಸಾಧ್ಯವೆಂದು ಮತ್ತು ತಾನು ನೋಡಿದಷ್ಟೇ ಭಾಗವು ಇಡೀ ರೋಂ ನಗರದಷ್ಟಿತ್ತೆಂದೂ ವಣಿಸಿರುವನು. ಸಾಮ್ರಾಜ್ಯದ ರೋಮ ಪಟ್ಟಣ, ಸಾಮಾಜಿಕ ಸ್ಥಿತಿಯನ್ನು ವಿವರಿಸಿದ್ದಾನೆ. ಕೃಷ್ಣದೇವರಾಯನ ವರ್ಣನೆಯನ್ನು ಸಂಕ್ಷಿಪ್ತವಾಗಿ ಮಾಡಿದ್ದಾನೆ. ಇದನಂತಹ ರಾಜ ಭೂಮಿಯಲ್ಲಿ ಮತ್ತೊಬ್ಬನ್ನಿಲ್ಲ ಎಂದಿದ್ದಾನೆ. ಅಲ್ಲದೆ ಸ್ತ್ರೀಯರ ಸ್ಥಾನಮಾನ, ಬ್ರಾಹ್ಮಣರ ನಡೆನುಡಿ, ಆಹಾರ, ರಕ್ತಬಲಿ, ಗ್ರಾಮಗಳು, ಬಗರಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಾನೆ.

. ಪೆರ‍್ನಾಂವ್ ನ್ಯೂನಿಜ್ : ನ್ಯೂನಿಜ್ ನು ಕ್ರಿ.ಶ. ೧೫೩೬ – ೩೭ರಲ್ಲಿ ಅಚ್ಯುತರಾಯನ ಕಾಲದಲ್ಲಿ ವಿಜಯನಗರಕ್ಕೆ ಭೇಟಿ ನೀಡಿದ ಪ್ರವಾಸಿಗ, ಇವನು ಅಚ್ಯುತರಾಯನ ಕಾಲದ ಪರಿಸ್ಥಿತಿ ಹಾಗೂ ಅವನ ಅಪ್ರಮಾಣಿಕತೆಯನ್ನು ಅವನನ್ನು ಕಂಡರೆ ಯಾರಿಗೂ ಗೌರವವಿರಲಿಲ್ಲವೆಂದೂ ಹಾಗೂ ಅವನ ಅನೀತಿ ಮತ್ತು ದಬ್ಬಾಳಿಕೆಗಳನ್ನು ಖಂಡಿಸಿರುವನು. ಇವನ ಗ್ರಂಥದಲ್ಲಿ ರಾಯಚೂರು ನಗರದ ವಿವರಣೆ ತಿಳಿದುಬರುತ್ತದೆ.

ಐತಿಹಾಸಿಕ ಗ್ರಂಥಗಳ ಅಭಾವದಿಂದಾಗಿ ವಿದೇಶಿಯ ಬರವಣಿಗೆಗಳಲ್ಲಿ ದೊರೆಯುವ ಮಾಹಿತಿಯು ಇತಿಹಾಸ ರಚೆನೆಗೆ ಉಪಯುಕ್ತವಾಗಿದೆ ಎಂದು ಹೇಳಬಹುದು. ಆದರೆ ದೇಶೀಯ ಸಾಹಿತ್ಯ ಆಧಾರದಲ್ಲಿ ಕಂಡುಬರುವಂತೆ ವಿದೇಶಿಯರ ಬರವಣಿಗೆಗಳಲ್ಲಿಯೂ ಸಹ ಅನೇಕ ಪ್ರವಾಸಿಗರು ರಾಜಧಾನಿಗೆ ಸಂಬಂಧಿಸಿದಂತೆ, ರಾಣಿವಾಸಕ್ಕೆ ಸಂಬಂಧಿಸಿದಂತೆ ಬರೆಯುವಾಗ ಬಹು ರಮ್ಯವಾಗಿಯೂ ಉತ್ಪ್ರೇಕ್ಷೆಯಿಂದಲೂ ಚಿತ್ರಿಸಿದ್ದಾರೆ. ಹಳ್ಳಿಗಾಡಿನ ಜನರ ಜೀವನ, ಬಡತನ, ರೋಗರುಜಿನ, ಬರಗಾಲದ ಬಗ್ಗೆ ಮತ್ತು ಅದರ ಕಷ್ಟಗಳನ್ನು ಕುರಿತಾದ ಚಿತ್ರಣವೂ ಸ್ವಲ್ಪವೂ ಲಭ್ಯವಿರುವುದಿಲ್ಲ.

.೫. ಕೈಫಿಯತ್ತು ಮತ್ತು ಬಖೈರುಗಳು

ಯಾವುದೇ ದೇಶದ ಇತಿಹಾಸವನ್ನು ದೋಷರಹಿತವಾಗಿ, ಲೋಪರಹಿತವಾಗಿ ಸಾಕಷ್ಟು ಪರಿಪೂರ್ಣವಾಗಿ ಬರೆಯಬೇಕಾದರೆ ಆಗ್ನಿ ಪರೀಕ್ಷಗೆ ಒಳಪಡಿಸಿದ ಅಥವಾ ಸಮಕಾಲೀನ ಸಾಕ್ಷ್ಯಾಸಾಧನಗಳು ಅವಶ್ಯಕ. ಅದರಂತೆಯೆ ದಾಖಲೆಗಳ ಸಾಲಿನಲ್ಲಿ ಬರುವ ಆಧಾರಗಳಲ್ಲಿ ಈ ಕೈಫಿಯತ್ತು ಮತ್ತು ಬಖೈರುಗಳು ಮುಖ್ಯವಾಗಿವೆ. ಇವುಗಳು ಚರಿತ್ರೆಯನ್ನು ರೂಪಿಸುವ ಬರವಣೆಗೆಯ ಸಂಕಲನ, ಚರಿತ್ರೆಯ ದೃಷ್ಟಿಯಿಂದ ಇಲ್ಲಿನ ವಿಚಾರ ಪ್ರಮಾಣ ಪೂರ್ವಕವಾಗಿ ಇತಿಹಾಸ ಸಂಶೋಧಕರಿಗೆ ಸಹಾಯಕವಾದ ವಿಷಯ ಸಂಗ್ರಹವಾಗುವುದಲ್ಲದೆ ಆಯಾ ಕಾಲದ ಜನಜೀವನವನ್ನು ಸೂಚಿಸುತ್ತದೆ. ಜೊತೆಗೆ ಸಾಮಾನ್ಯ ಜನ ಸರ್ಕಾರದ ನಡವಳಿಕೆಯನ್ನಾಗಲಿ ರಾಜಾಧಿರಾಜರ ವರದಿಯನ್ನಾಗಲಿ ಹೇಗೆ ಬರಹಕ್ಕೆ ಇಳಿಸುತ್ತಿದ್ದರು ಮತ್ತು ಆ ಕನ್ನಡ ಬರಹದ ಶೈಲಿಯ ಸ್ವರೂಪ ಹೇಗಿರುತ್ತಿತ್ತು ಎಂಬುದನ್ನು ಇವು ಪ್ರತಿಬಿಂಬಿಸುತ್ತವೆ.

ಈ ದಾಖಲೆಗಳನ್ನು ಬರೆದವರು ವಿದ್ವಾಂಸರ, ಪಂಡಿತರ ಅಲ್ಲದೆ ಭಾಷಾ ಪ್ರವಿಣರಿಂದ ಪರಿಶೋಧಿಸಲ್ಪಟ್ಟ ಲೇಖನಗಳೂ ಇವಲ್ಲ. ವ್ಯವಹಾರದಲ್ಲಿ ನಿರತವಾದ ರಾಜರನ್ನು ಅವರ ದಿನಚರಿಗಳನ್ನು ಹತ್ತಿರದಿಂದ ಕಂಡ ಸಾಮಾನ್ಯ ಅಧಿಕಾರಿಗಳು ಬರೆದಿರುವಂತಹಗಳಾಗಿವೆ. ಅದ್ದರಿಂದ ಇಲ್ಲಿನ ಭಾಷೆ ಸಾಮಾನ್ಯವಾಗಿ ಆಗಿನ ಕಾಲದಲ್ಲಿ ಆಡುವ ಭಾಷೆಯನ್ನು ಪ್ರತಿಬಿಂಬಿಸುತ್ತದೆ. ಈ ದೃಷ್ಟಿಯಿಂದ ಭಾಷಾಭ್ಯಾಸಿಗಳಿಗೆ ಇದೊಂದು ಅಭ್ಯಾಸದ ವಿಷಯವಾಗಬಹುದು.

ಕೈಫಿಯತ್ತು ಎಂದರೇನು? : ಕೈಫಿಯತ್ತು” ಎಂಬ ಪದ ಮೂಲತಃ ಅರೇಬಿಕ್ ಪರ್ಷಿಯನ್ ಭಾಷೆಗೆ ಸೇರಿದುದಾಗಿದೆ. ಮುಸ್ಲಿಂ ರಾಜರ ಆಳ್ವಿಕೆಯ ಕಾರಣದಿಂದ ಅನೇಕ ಅರೇಬಿಕ್ ಮತ್ತು ಪರ್ಷಿಯನ್ ಭಾಷೆಯ ಪದಗಳು ಹಿಂದೂಸ್ತಾನಿಯ ಮೂಲಕ ಕನ್ನಡಕ್ಕೆ ಪ್ರವೇಶಿಸಿವೆ. ಕೈಫಿಯತ್ತು ಎಂದರೆ ಹೇಳಿಕೆ, ವಿವರಣೆ ಎಂಬ ಅರ್ಥ, ಕೈಫಿಯತ್ತು ಎಂಬುದಕ್ಕೆ ಮುಖ್ಯವಾಗಿ ವಿವರಣೆ, ಹೇಳಿಕೆ ಎಂಬ ಅರ್ಥವಿದ್ದರೂ ಅದರ ವ್ಯಾಪ್ತಿ, ಕೈಪೋತ್, ಕೈಪೇತ್ ಎಂಬ ರೂಪಾಂತರಗಳೊಡನೆ ಕೂಡಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೈಫೇತ್ ಮಾಡಿದನೆಂದರೆ ದಾವೆ, ಇಲ್ಲವೇ ವ್ಯಾಜ್ಯ ಮಾಡಿದ ಎಂಬರ್ಥದಲ್ಲಿ ಪ್ರಯೋಗವಾಗುತ್ತದೆ. ಈ ಎಲ್ಲ ಪದಗಳೂ ಸಾಮಾನ್ಯ ಒಂದೇ ಅರ್ಥದಲ್ಲಿ ಅಂದರೆ ಬರೆದಿಟ್ಟ ದಾಖಲೆಗಳು ಎಂಬಂತೆ ಪ್ರಯೋಗದಲ್ಲಿದ್ದರೂ ಬಖೈರು ಮತ್ತು ನಾಮೆಗಳು ಹೆಚು ಚಾರಿತ್ರಿಕ ಐತಿಹ್ಯಗಳಾಗಿಯೂ, ಕೈಫಿಯತ್ತುಗಳಯ ಚಾರಿತ್ರಿಕಾಂಶ, ಸ್ಥಳಪುರಾಣ, ಜನಜನಿತ ಕಲ್ಪಿತ ವಿಷಯಗಳನ್ನೊಳಗೊಂಡ ಬರಹಗಳಾಗಿಯೂ ಇವೆ. ಇ ಕೈಫಿಯತ್ತುಗಳನ್ನು ಕರ್ನಲ್ ಮೆಕಂಜಿಯವರು ದಕ್ಷಿಣ ಭಾರತದಲ್ಲೆಲ್ಲಾ ಸಂಚಾರ ಮಾಡಿ ೨೦೭೦ ಸ್ಥಳೀಯ ಪತ್ರಾವಳಿ (ಕೈಫಿಯತ್ತು)ಗಳನ್ನು ಸಂಗ್ರಹಿಸಿದ್ದಾರೆ. ಇವುಗಳಲ್ಲಿ ಶೃಂಗೇರಿಮಠದ ಕೈಫಿಯತ್ತು, ಸಂಡೂರಿನ ಕೈಫಿಯತ್ತು, ಬಳ್ಳಾರಿಯ ಕೈಫಿಯತ್ತುಗಳು ಮುಖ್ಯವಾದವು.

ರಾಮರಾಯನ ಬಖೈರು ವಿಜಯನಗರಕ್ಕೆ ಸಂಬಂಧಪಟ್ಟ ಹಾಗೆ ಒಂದು ಉತ್ತಮವಾದ ಸ್ಥಳೀಯ ಪತ್ರಾವಳಿ, ಇದನ್ನು ಬರೆದವರಾರು ಎಮಬುದು ತಿಳಿಯದಿದ್ದರೂ ವಿಜಯನಗರದ ರಾಮರಾಯನ ಸನ್ನಿಧಿಯಲ್ಲೇ ಇದ್ದವನೆಂದು ಹೇಳಬಹುದು. ಈ ಬಖೈರಿನಲ್ಲಿ ಅಂಕಿ – ಅಂಶಗಳ, ಸಾಮಂತರರ, ದಂಡನಾಯಕರ ಹೆಸರುಗಳಿವೆ. ಈ ಬಖೈರಿನ ಮೂಲಕ ಮುಖ್ಯವಾಗಿ ಮೂರು ಸತ್ಯಾಂಶಗಳು ತಿಳಿದುಬರುತ್ತವೆ.

ಅ. ವಿಜಯನಗರದ ರಾಮರಾಯನಿಗೂ, ಬಹಮನಿ ಸುಲ್ತಾನರಿಗೂ ಯುದ್ಧ ನಡೆದದ್ದು ‘ತಾಳಿಕೋಟೆ’ಯಲ್ಲಿ ರಕ್ಕಸಗಿ – ತಂಗಡಿ ಅಥವಾ ‘ರಾಕ್ಷಸತಂಗಡಿ’ಯಲ್ಲಿ

ಆ. ರಾಮರಾಯನು ರಣರಂಗಕ್ಕೆ ಹೊರಡುವಾಗ ಅವನ ವೃದ್ಧ ಮಾತೆ ಜೀವಿಸಿದ್ದಳು. ರಾಮರಾಯ ಹೋಗಿ ಆಕೆಯ ಕಾಲಿಗೆ ಮಣಿದಾಗ ಆಕೆ ಹರಸಿ, ದೇವರನ್ನು ಪ್ರಾರ್ಥಿಸಿ “ಜಯಿಸಿ ಬಾರಪ್ಪ” ಎಂಬುದಾಗಿ ಹೇಳಿದಳು.

ಇ. ಬಿಜಾಪುರದ ಆದಿಲ್ ಷಹಾನ ಸೇನಾಧಿಪತಿಯಾಗಿದ್ದವನು ರಾಂರಾಯನ ಮಗ ಯುದ್ಧದ ಕಡೆಯ ನಿಮಿಷದಲ್ಲಿ ರಾಮರಾಯ, “ನೀನು ನನ್ನ ಮಗನಾದುದಕ್ಕೆ ನನಗೊಂದು ಉಪಕಾರವನ್ನು ಮಾಡು, ನನ್ನನ್ನು ವೈರಿಯ ಕೈಗೆ ಕೊಟ್ಟು ತಲೆತಗ್ಗಿಸಬೇಡ. ನೀನೆ ನನ್ನನ್ನು ಫಿರಂಗಿಯಿಂದ ಹೊಡೆದು ಕೊಲ್ಲು” ಅಂದ ಮಗ ತಂದೆಯ ಅಪೇಕ್ಷೆಯನ್ನು ಪೂರೈಸಿದ.

ಮೇಲಿನದಿಷ್ಟು ರಾಮರಾಯನ ಬಖೈರ್ ನಲ್ಲಿ ತಿಳಿದು ಬರುತ್ತದೆ. ಇದು ಮುಖ್ಯವಾಗಿ ಯುದ್ಧಕ್ಕೆ ಸಂಬಂಧಿಸಿದ ವಿಷಯಕ್ಕೆ ಮಾತ್ರ ಸೀಮಿತವಾಗಿದೆ. ರಾಕ್ಷಸ – ತಂಗಡಿ ಯುದ್ಧದ ಸಂಪೂರ್ಣ ಮಾಹಿತಿ ಇದರಿಂದ ತಿಳಿಯುತ್ತದೆ. ಕೈಫಿಯತ್ತುಗಳು ಸಾಮಾನ್ಯವಾಗಿ ಸಂಸ್ಥಾನ, ಮಠ, ಸ್ಥಳಗಳ ಬಗ್ಗೆ ಇದ್ದರೆ, ಬಖೈರುಗಳು ಹೆಚ್ಚಾಗಿ ವ್ಯಕ್ತಿಗಳ ಬಗ್ಗೆ ಇರುವುದನ್ನು ನೋಡಬಹುದಾಗಿದೆ.

.೬. ಜನಪದೀಯ ಆಕರಗಳು

ಇತಿಹಾಸ ಪ್ರಸಿದ್ಧವಾಗಿರುವ ವಿಜಯನಗರ ಹಾಗೂ ಮೈಸೂರು ಸಾಮ್ರಾಜ್ಯಗಳು ಬೇರೆ ಬೇರೆ ಕಾರಣಗಳಿಂದಾಗಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಕವಿಗಳಿಗೆ ಇನ್ನೊಂದು ಸುಂದರ ಸೊಬಗಿನ ನಾಡಾಗಿ ಕಂಡರೆ, ಇತಿಹಾಸಕಾರರಿಗೆ ವೈಭವದಿಂದ ಮೆರೆದ ರಾಜಮಹಾರಾಜರ ನಾಡಾಗಿ ಕಂಗೊಳಿಸುತ್ತದೆ. ಹಾಗೆಯೇ. ಪುರುತತ್ವ ಶಾಸ್ತ್ರಜ್ಞರಿಗೆ ಅತಿ ಪ್ರಾಚೀನ ಕಾಲದ ಜನವಸತಿಯ ಕೇಂದ್ರವಾಗಿಯೂ ಆಕರ್ಷಕವಾಗಿದೆ. ಆದರೆ ಇಲ್ಲಿನ ಜನಪದರ ನಾಲಿಗೆಗಳ ಮೇಲೆ ಸೃಷ್ಟಿಯಾಗಿರುವ ಚರಿತ್ರೆಯ ಸೊಬಗನ್ನೂ ತನ್ನೊಳಗೆ ಮೈಗೂಡಿಸಿಕೊಂಡು ಹೊರಹೊಮ್ಮಿದೆ ಎಂದು ಹೇಳಬಹುದಾಗಿದೆ. ಏಕೆಂದರೆ ಸ್ಥಳೀಯ ಚರಿತ್ರೆ ಅಧ್ಯಯನಕ್ಕೆ ಲಿಖಿತ ದಾಖಲೆಗಳಿಗಿಂತಲೂ ಮೌಖಿಕ ದಾಖಲೆಗಳು ಮಹತ್ವವಾದವು ಆಗಿರುತ್ತದೆ. ಅಷ್ಟೇ ಅಲ್ಲದೆ ಸಂಸ್ಕೃತಿಯ ಅಧ್ಯಯನದ ದೃಷ್ಟಿಯಿಂದ ಒಂದು ಪ್ರಮುಖ ಆಕರವಾಗಿದೆ. ಮೌಖಿಕ ಸಾಹಿತ್ಯವು ಮನುಷ್ಯನ ಜೀವನದ ನಾನಾ ಮುಖಗಳ ಪರಿಚಯವಾಗಿರುತ್ತದೆ. ಹೀಗಿದ್ದರೂ ಸಹ ಇಂದಿನ ವಸಾಹತೀಕರಣಕ್ಕೊಳಪಟ್ಟ ವಿದ್ವಾಂಸರು ಜನರ ನಡುವೆ ಇರುವ ಮೌಖಿಕ ರೂಪದ ದಾಖಲೆಗಳನ್ನು ನಿರ್ಲಕ್ಷಿಸಿಕೊಂಡೇ ಬರುತ್ತಿರುವುದು ಕಂಡುಬರುತ್ತದೆ. ಏಕೆಂದರೆ ಜನರು ಏನನ್ನು ನಂಬಿದ್ದಾರೋ ಅದನ್ನು ವಿದ್ವಾಂಸರು ನಂಬುತ್ತಿಲ್ಲ. ಹಾಗಾಗಿಯೇ ವಿದ್ವಾಂಸರು ಏನನ್ನು ಹೇಳುತ್ತಾರೋ ಅದನ್ನು ಜನರು ನಂಬುತ್ತಿಲ್ಲ. ಇಂತಹ ಬಿಕ್ಕಿಟ್ಟಿನಲ್ಲಿ ಸ್ಥಳೀಯ ಚರಿತ್ರೆಯ ಸಂಶೋಧಕನು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಈ ಮೌಖಿಕ ಪರಂಪರೆಯ ಸಾಮಗ್ರಿಯನ್ನು ನಿರ್ಲಕ್ಷಿಸಿಕೊಂಡು ಬಂದರೆ ಅನೇಕ ರೀತಿಯ ತೊಂದರೆಯ ಜೊತೆಗೆ ನಷ್ಟವನ್ನು ಎದುರಿಸಬೇಕಾಗುತ್ತದೆ.

ಯಾವುದೇ ಒಂದು ಸಾಮ್ರಾಜ್ಯದಿಂದ ಪ್ರಾರಂಭವಾಗಿ ಸ್ಥಳೀಯ ಸಣ್ಣ ಸಂಸ್ಥಾನದವರೆಗೂ ಸಹ ಅಂದಿನ ಸಂಸ್ಕೃತಿ ಚರಿತ್ರೆಗೆ ಪ್ರಮುಖವಾಗಿ ಮೌಖಿಕ ಆಕರಗಳನ್ನು ಪ್ರಥಮ ಸ್ಥಾನದಲ್ಲಿ ಗುರುತಿದಬಹುದಾಗಿದೆ. ಹಿಂದೆ ಅಕ್ಷರವು ಕೇವಲ ಬ್ರಾಹ್ಮಣರ ಸೊತ್ತಾಗಿದ್ದಿತ್ತು. ಅಲ್ಪಸಲ್ಪ ಪ್ರಮಾಣದಲ್ಲಿ ಕ್ಷತ್ರಿಯ ಹಾಗೂ ಇತರರು ಅಕ್ಷರಜ್ಞಾನವನ್ನು ಹೊಂದಿದ್ದರೂ ಸಹ ಅವರೆಲ್ಲರೂ ಹೆಚ್ಚು ಹೆಚ್ಚು ಕಲಿತಿದ್ದವರಾಗಿದ್ದ ಬ್ರಾಹ್ಮಣರಿಗೆ ತಲೆಬಾಗುತ್ತಿದ್ದರು. ಈ ದಿಸೆಯಲ್ಲಿ ಅಂದು ಹೇರಳವಾಗಿ ದೊರಕುವ ಸಾಹಿತ್ಯಾಧಾರಗಳೆಲ್ಲವೂ ಕೇವಲ ರಾಜ, ಬ್ರಾಹ್ಮಣ ಹಾಗೂ ಇತರೆ ಉನ್ನತವರ್ಗದವರ ಸಂಸ್ಕೃತಿಕ ಹಾಗೂ ಆಳ್ವಿಕೆಯ ಬಗ್ಗೆ ಬರೆಯಲು ಅಕ್ಷರದ ಆಕಾರಗಳನ್ನೆ ಅವಲಂಬಿಸಿಕೊಂಡರೆ ಅ ಇತಿಹಾಸಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಇಂತಹ ಸಮಯದಲ್ಲಿ ಹೆಚ್ಚಾಗಿ ಮೌಖಿಕ ಸಾಹಿತ್ಯದ ಮಹತ್ವ ಎದ್ದು ಕಾಣುತ್ತದೆ. ಇಲ್ಲಿ ಒಂದು ದೃಷ್ಟಿಯಲ್ಲಿ ಸ್ಥಳೀಯ ಚರಿತ್ರೆಕಾರರಿಗೆ ಲಿಖಿತ ಇತಿಹಾಸಕ್ಕಿಂತ ಭಿನ್ನವಾದ ವಿವರಗಳನ್ನು ಮೌಖಿಕ ಸಾಮಗ್ರಿಗಳು ನೀಡುತ್ತವೆ. ಆಳುವವರನ್ನು ಕುರಿತು ಶಾಸನ ಹೇಳುವ ಇತಿಹಾಸ ಮತ್ತು ಅವರನ್ನು ಕುರಿತು ಮೌಖಿಕ ಪರಂಪರೆಯಲ್ಲಿರುವ ಐತಿಹ್ಯಕ್ಕೂ ಹೆಚ್ಚಿನ ಅಂತರವಿರುತ್ತದೆ. ಇಂತಹ ಸಂದರ್ಭದಲ್ಲಿ ಸಂಶೋಧಕರು ಸಿಲುಕುವ ತೊಂದರೆಯು ಒಂದು ಬಗೆಯದಾಗಿದ್ದರೆ ಈ ತೊಂದರೆಯನ್ನು ಸೂಕ್ತವಾಗಿ ಬಗೆಹರಿಸಿಕೊಳ್ಳುವುದರಲ್ಲಿ ಸತ್ಯವಾದ ಚರಿತ್ರೆ ಅಡಕವಾಗಿರುತ್ತದೆ ಎಂಬುದನ್ನು ಮನಗಾಣಬೇಕಾಗುತ್ತದೆ.

ಸಂಸ್ಕೃತಿಯು ಅಧ್ಯಯನದ ದೃಷ್ಟಿಯಲ್ಲಿ ಮೌಖಿಕ ಸಾಹಿತ್ಯವೂ ಆಯಾ ಪ್ರಾಂತ್ಯದಲ್ಲಿ ಪ್ರಸಿದ್ಧವಾಗಿರುವ ದೇವಾಲಯ, ಗ್ರಾಮದೇವತೆ ಪ್ರಸಿದ್ಧ ಪೌರುಷದ ವ್ಯಕ್ತಿ ಹಳೆಪಟ್ಟಣ, ಪ್ರಮುಖ ಮಠಗಳ ಪವಾಡಪುರುಷರು, ಊರುಗಳೂ, ಪರ್ವತ ನದಿ ಕೆರೆಗಳನ್ನೊಳಗೊಂಡು ಸೃಷ್ಟಿಯಾಗಿರುತ್ತದೆ ಎಂಬುದು ತಿಳಿದಿರುವ ವಿಷಯವೇ ಆಗಿದೆ. ಆದರೆ ಈ ಸಾಹಿತ್ಯವು ಕಾಲದಿಂದ ಕಾಲಕ್ಕೆ ವ್ಯಕ್ತಿಯಿಂದ ವ್ಯಕ್ತಿಗೆ, ಪ್ರದೇಶದಿಂದ ಪ್ರದೇಶಕ್ಕೆ, ಭಾಷೆಯಿಂದ ಭಾಸೆಗೆ ಬದಲಾವಣೆಯಾಗಿ ಇಂದಿನ ಆಧುನಿಕ ಯುಗದ ಜನರ ಮಧ್ಯೆ ನವೀನ ರೀತಿ ರೂಪ ಪಡೆದುಕೊಂಡಿರುತ್ತದೆ. ಇದು ಭಾಷೆಯಿಂದಲಾದರೂ ಸರಿಯೇ ಅಥವಾ ತಮ್ಮ ಜಾತಿಯ, ಧರ್ಮದ, ಪ್ರದೇಶದ, ಸ್ವಾಭಿಮಾನದ ಪರಿಣಾಮದಿಂದಲಾದರೂ ಸರಿಯೇ ತಾಂತ್ರಿಕ ಸಮಸ್ಯೆಗಳನ್ನು ಸ್ಥಳೀಯ ಚರಿತ್ರೆ ಅಧ್ಯಯನಕಾರರು ಗಮನಿಸಬೇಕಾಗುತ್ತದೆ.

* * *