ಭಾರತವು ಹಲವು ಧರ್ಮ, ಜಾತಿ, ಭಾಷೆ ಹಾಗೂ ಸೀಮೆಗಳ ಆಗರ ಇಷ್ಟಾದರೂ ಸಹ ನಮ್ಮ ಈ ಭೂಮಿಯು ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡುಕೊಂಡು ತನ್ನದೇ ಆದ ವಿಶಿಷ್ಟ ಸಂಸ್ಕೃತಿಯ ಕಂಪನ್ನು ಪ್ರಪಂಚಕ್ಕೆ ನೀಡಿದೆ ಎಂದೆನ್ನಬಹುದು. ಪ್ರಾಚೀನ ಕಾಲದಿಂದಲೂ ನೂರಾರು ಸಂಸ್ಥಾನಗಳು ಈ ಭೂಮಿಯ ಮೇಲೆ ಆಳ್ವಿಕೆ ನಡೆಸಿ ತಮ್ಮದೇ ಆದ ಸಂಸ್ಕೃತಿಯನ್ನು ಕೊಡುಗೆಯಾಗಿ ನೀಡಿರುವುದರಿಂದಲೋ ಏನೋ ಧಾರ್ಮಿಕ ಅಥವಾ ಜಾತಿಯ ಗಲಭೆಗಳಿಗೆ ಪ್ರಚೋಧನೆ ನೀಡದೆ ಸರ್ವಧರ್ಮವನ್ನು ಸಮನಾಗಿ ನೋಡಿಕೊಂಡು ಅವುಗಳನ್ನು ಪೋಷಿಸಿಕೊಂಡು ಬಂದಿರುವುದಕ್ಕೆ ಸಾಕಷ್ಟು ಆಧಾರಗಳು ದೊರಕುತ್ತವೆ. ಇಕ್ಕೇರಿ ಅರಸರು ಮೂಲತಃ ವೀರಶೈವ ಧರ್ಮದವರು. ಇವರಿಗಿಂತ ಹಿಂದೆ ವಿಜಯನಗರದ ಧರ್ಮವು ತನ್ನ ಪರಂಪರೆಯನ್ನು ಈ ಪ್ರದೇಶಗಳಲ್ಲಿ ಹೆಚ್ಚಾಗಿ ಬೀರಿತ್ತು. ಪುರಂದರದಾಸರು, ಕನಕದಾಸರು, ವ್ಯಾಸರಾಯರುಗಳು ವೈಷ್ಣವ ಧರ್ಮಪಂಥೀಯರ ಹಾಗೂ ಇನ್ನಿತರ ಧರ್ಮಪ್ರಚಾರಕರು ತಮ್ಮ ತಮ್ಮ ಧರ್ಮದ ಪ್ರಚಾರವನ್ನು ಕೈಗೊಂಡಿದ್ದರು.

ಬಿದನೂರಿನ ಅರಸರು ವೀರಶೈವ ಧರ್ಮದವರಾಗಿದ್ದರೂ ಸಹ ಅಂದು ಪ್ರಚಲಿತವಾಗಿದ್ದ ಶೈವ, ವೈಷ್ಣವ, ಶ್ರೀವೈಷ್ಣವ, ಜೈನ, ಇಸ್ಲಾಂ, ಕ್ರೈಸ್ತ ಧರ್ಮಗಳಿಗೂ ಸಹ ಯಾವುದೇ ತೊಂದರೆ ನೀಡದೆ ಅವುಗಳು ತಮ್ಮದೇ ಪಥದಲ್ಲಿ ಬೆಳವಣಿಗೆ ಹೊಂದಲು ಅವಕಾಶ ನೀಡಿದ್ದರು, ಇದಕ್ಕೆ ನಿದರ್ಶನವೆಂಬಂತೆ ಲಿಂಗಣ್ಣ ಕವಿಯು ಕೆಳದಿ ನೃಪವಿಜಯದಲ್ಲಿ ಹಿರಿಯ ವೆಂಕಟಪ್ಪನಾಯಕನನ್ನು ಕುರಿತು “ಶೃಂಗೇರಿಯ ಧಂ, ಬಾಳೇ ಹಳ್ಳೀ ಸಿಂಹಾಸನದ ಧರ್ಮ, ಸವರಾಷ್ಟ್ರಗಳೊಳ್ ನಾಲ್ಗಡೆಗಳೊಳ್ಳುಳ್ಳ ಸನ್ಯಾಸಿಗಳ ಮಠ, ಮಹತ್ತಿನ ಮಠಾಗ್ರಹಾರ ಕೂಡಗಿಮಾನ್ಯ ಉಂಬಳಿ ಉತ್ತಾರ ಪಳ್ಳಿದಾಸರ ಧರ್ಮ, ಮುಂತಾದ ನಾನಾ ಧರ್ಮಗಳಂ ಸಮಗ್ರವಾಗಿ ನಡೆಸಿ ಪರಿಪಾಲಿಸಿದನು” ಎಂದು ಹೇಳೀರುವುದನ್ನು ಡಾ. ವೆಂಕಟೇಶ್ ಜೋಯಿಸ್ ರವರು ಕೆಳದಿ ಶಾಸನಗಳ ಅಧ್ಯಯನ ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಮುಂದುವರೆದು ಅವರು ಈ ನಾಯಕನ ರಾಜಧಾನಿಯಲ್ಲಿ ವಿದ್ವತ್ ಸಭೆಗಳನ್ನು ಏರ್ಪಡಿಸಿ “ವಿಶಿಷ್ಟ ವೈದಿಕಾ ದ್ವೈತ ಸಿದ್ದಾಂತ ಸ್ಥಾಪನಾಚಾರ್ಯ” ಎಂಬ ಬಿರುದನ್ನು ನೀಡಿ ಗೌರವಿಸಿರುವುದನ್ನು ಉಲ್ಲೇಖಿಸಿದ್ದಾರೆ. ಶಿವಪ್ಪನಾಯಕ ಹಾಗೂ ಚೆನ್ನಮ್ಮಾಜಿಯವರೂ ಸಹ ಶಿವಭಕ್ತ, ಗುರಿಕಾರ ಶೈವ ವೈಷ್ಣವರು, ಬ್ರಾಹ್ಮಣ ಗುರಿಕಾರರು ಹಾಗೂ ಮಠಮಾನ್ಯರುಗಳನ್ನು ದೇವಸಾನಾ ಗ್ರಹಾರಾದಿಗಳನ್ನು ವಿವಿಧರೂಪದ ಧರ್ಮಗಳ ಅನುಯಾಯಿಗಳನ್ನು ಪ್ರೀತಿಯಿಂದ ಕಾಣುತ್ತಿದ್ದರು. ಇಕ್ಕೇರಿ ನಾಯಕರು ಶೃಂಗೇರಿ ಶಾರದಾ ಪೀಠಕ್ಕೆ ಅಪಾರ ಕಾಣಿಕೆ ನೀಡಿದ್ದಾರೆ. ಇವರ ಆಳ್ವಿಕೆಯ ಕಾಲದಲ್ಲಿ ಶೃಂಗೇರಿ ಮಢವು ವೈಭವದ ತಾಣವಾಗಿದ್ದಿತ್ತು. ಶೈವ ಧರ್ಮದ ಅದ್ವೈತ ಮಠಗಳಿಗೆ ಅಪಾರ ಸೇವೆಸಲ್ಲಿಸಿರುವುದರ ಜೊತೆಗೆ ಬೇರೆಯವರಿಂದ ತೊಂದರೆಯಾಗದಂತೆ ಜವಾಬ್ದಾರಿಯಿಂದ ನೋಡಿಕೊಂಡು ಬಂದರು. ವೈಷ್ಣವ ಧರ್ಮಕ್ಕೆ ಉಡುಪಿ ಕೇಂದ್ರವಾಗಿತ್ತು.

ಇಕ್ಕೇರಿ ಅರಸರ ಕಾಲದಲಿ ಧರ್ಮ ಪ್ರಚಾರಕರಾದ ಪುರಂದರದಾಸರು, ಕನಕದಾಸರು, ರಾಘವೇಂದ್ರಯತಿ ಸಾರ್ವಭೌಮರು (ಕ್ರಿ.ಶ. ೧೬೨೩ ರಿಂದ ೧೬೭೧) ಕೆಳದಿ ಸಂಸ್ಥಾನಕ್ಕೆ ಭೇಟಿನೀಡಿ ದಕ್ಷಿಣ ಕನ್ನಡ, ಸುಬ್ರಮಣ್ಯ ಮತ್ತು ಉಡುಪಿಗಳನ್ನು ಸಂದರ್ಶಿಸಿ ತಮ್ಮ ಧರ್ಮ ಪ್ರಚಾರ ಕೈಗೊಂಡಿದ್ದರೆಂದು ಕರ್ನಾಟಕ ಹರಿದಾಸ ಸಾಹಿತ್ಯವು ಸಾರುತ್ತದೆ. ಕೆಳದಿ ಸಂಸ್ಥಾನದ ಪಶ್ಚಿಮ ಘಟ್ಟಪ್ರದೇಶಗಳು ಹಾಗೂ ಮಲೆನಾಡಿನ ಬಹುಭಾಗಗಳಲ್ಲಿ ವೀರಶೈವ ಧಮ್ವು ಹೆಚ್ಚು ಪ್ರಭಾವಶಾಲಿಯಾಗಿತ್ತು. ದಕ್ಷಿಣ ಕನ್ನಡದಲ್ಲಿರುವ ಬಾಂಕೂರು, ಬಸರೂರು, ಕೋಟೇಶ್ವರ, ಕಲ್ಯಾಣಪುರ, ಸೋಮೇಶ್ವರಗಳಲ್ಲಿ ವೀರಶೈವ ಧರ್ಮದ ಪ್ರಭಾವವನ್ನು ಸೂಸಿಸುವ ಶಾಸನಗಳು ಹೆಚ್ಚಾಗಿ ಕಂಡುಬರುತ್ತದೆ. ಮೆಕೆಂಜಿಯವರು ಕಣ್ಮಣಿಯಾಗಿರುವ ಸರ್ವಜ್ಞ ಮಹಾಶಯನೂ ಕೆಳದಿ ರಾಜ್ಯದಲ್ಲಿ ಸಂಚರಿಸಿ ಧರ್ಮದ ಬಗ್ಗೆ ಜಾಗೃತಿ ಹಾಗೂ ಮೂಡನಂಬಿಕೆ, ಅಜ್ಞಾನದ ಬಗ್ಗೆ ಅರಿವು ಮೂಡಿಸಿರುವುದು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿದೆ.

ಧರ್ಮಸ್ಥಳ, ಹುಂಚ, ಮೂಡಬಿದರೆಗಳ ಜೈನ ಧರ್ಮದ ಕೇಂದ್ರ ಪ್ರದೇಶಗಳು ಕೆಳದಿ ರಾಜ್ಯಗಳಲ್ಲಿಯೇ ಪ್ರಮುಖಸ್ಥಾನವನ್ನು ಪಡೆದುಕೊಂಡಿದ್ದವು ಸ್ವತಃ ಕೆಳದಿಯಲ್ಲಿಯೇ ಪ್ರಸಿದ್ಧ ತೀರ್ಥಂಕರಾದ ಪಾರ್ಶ್ವನಾಥ ಬಸದಿಯನ್ನು ಇಂದಿಗೂ ಕಾಣಬಹುದಾಗಿದೆ. ಈ ಧರ್ಮಕ್ಕೆ ಸಂಬಂಧಿಸಿದ ಅನೇಕ ಶಾಸನಗಳು ಈ ಕಾಲದಲ್ಲಿಯೇ ದೊರಕಿರುವುದನ್ನು ಗಮನಿಸಬಹುದಾಗಿದೆ ಇಷ್ಟೆಲ್ಲ ಇದ್ದರೂ ಸಹ ಕೆಲವು ಚರಿತ್ರೆಗಾರರು ಕೆಳದಿ ಅರಸರು ಜೈನಧಂದ ವಿನಾಶಕ್ಕೆ ಕಾರಣರಾದರೆಂಬ ವಾದ ಮಂಡಿಸುತ್ತಾರೆ. ಇವರಲ್ಲಿ ಹೆಚ್ಚಿನ ಸತ್ಯಾಂಶ ಕಾಣಿಸಿಗದೆನ್ನಬಹುದು. ಇಸ್ಲಾಂ ಧರ್ಮಕ್ಕೆ ಇಕ್ಕೇರಿ ಅರಸರು ಅಮೂಲ್ಯವಾದ ಸಹಕಾರ ನೀಡಿರುವುದು ಕಂಡುಬರುತ್ತದೆ. ಹಿರಿಯ ವೆಂಕಟಪ್ಪ ನಾಯಕನು ಭುವನಗಿರಿ ಮಾರ್ಗದಲ್ಲಿ ಇಸ್ಲಾಂ ಧರ್ಮದ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಮಸೀದಿಯೊಂದನ್ನು ನಿರ್ಮಿಸಿದನೆಂದು ಶಾಸನ ಆಧಾರಗಳಿಂದ ತಿಳಿಯಬಹುದಾಗಿದೆ. ಹಾಗೆಯೇ ಮಸೀದಿಗಳ ನಿರ್ವಹಣೆಗಾಗಿ ಭೂಮಿಗಳನ್ನು ನೀಡಿರುವುದು ಕಂಡುಬರುತ್ತದೆ. ಇಂದಿಗೂ ವಿವಾದ ಗ್ರಸ್ಥವಾಗಿರುವ ಶತಮಾನಗಳಿಂದಲೂ ಹಿಂದೂ ಮುಸ್ಲಿಂ ಐಕ್ಯದ ಸಂಕೇತ ಕ್ಷೇತ್ರವಾಗಿದೆ ಎಂದು ಹೇಳಿಕೊಳ್ಳುತ್ತಿರುವ ಬಾಬಾಬುಡನ್ ಗಿರಿಯ ಮಸೀದಿಯನ್ನು ವೀರ ಚೆನ್ನಮ್ಮಾಜಿಯು ಜೀರ್ಣೋದ್ಧಾರ ಮಾಡಿಸಿ ಅದರ ಪ್ರಗತಿಗೆ ಅಪಾರ ದಾನದತ್ತಿ ನೀಡಿರುವುದು ಉಲ್ಲೇಖನೀಯವಾಗಿದೆ. ಕ್ರಿ.ಶ. ೧೬೦೦ರಲ್ಲಿಯೇ ಬ್ರಿಟೀಷರು ಈಸ್ಟ್ ಇಂಡಿಯಾ ಕಂಪನಿಯೊಂದನ್ನು ಭಾರತದಲ್ಲಿ ಸ್ಥಾಪಿಸಿಕೊಂಡು ಭಾರತದಲ್ಲಿ ಸ್ಥಿರವಾಗಿ ನೆಲೆಯೂರಲು ಪ್ರಾರಂಭಿಸಿದ ಮೇಲೆ ದೇಶದ ಪ್ರತಿಯೊಂದು ಆಯಕಟ್ಟಿನ ಸ್ಥಳಗಳನ್ನು ಅವರು ನೆಲೆಸುವ ತಾಣಗಳನ್ನಾಗಿ ಪರಿವರ್ತಿಸಿಕೊಳ್ಳಲಾರಂಭಿಸಿದರು. ಇಕ್ಕೇರಿ ನಾಯಕರು ತಮ್ಮ ರಾಜ್ಯವನ್ನು ಭಾರತದಲ್ಲಿಯೇ ಅತ್ಯಂತ ಹೆಚ್ಚಿನ ಶ್ರೀಮಂತ ಪ್ರದೇಶವಾಗಿರುವ ಮಲೆನಾಡಿನ ಮಡಿಲಲ್ಲಿ ಸ್ಥಾಪಿಸಿದ್ದರಿಂದ ಈ ಪ್ರದೇಶಕ್ಕೆ ಬ್ರಿಟಿಷರು ಅಂದರೆ ಕ್ರೈಸ್ಥರು ಬಂದು ನೆಲೆಸುವುದು ಸಾಮಾನ್ಯವೇ ಆಗಿದ್ದಿತ್ತು. ಕೆಳದಿ ಅರಸರು ಕ್ರೈಸ್ತ ಮತಕ್ಕೂ ಆಶ್ರಯ ನೀಡಿದರು. ಕ್ರೈಸ್ತಧರ್ಮ ಪ್ರಚಾರಕರು ಮೊದಲು ಸಂಸ್ಥಾನದಲಿದ್ದ ದೀನದಲಿತರುಗಳಿಗೆ ಆಹಾರ, ಬಟ್ಟೆಗಳನ್ನು ನೀಡಿ ಅವರ ಮನಪರಿವರ್ತನೆ ಮಾಡಿಸಿ ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳುವಲ್ಲಿ ಸಫಲರಾಗುತ್ತಿದ್ದರು. ಇದಕ್ಕೆ ಅಂದಿನ ಸಾಮಾಜಿಕ ಪರಿಸ್ಥಿತಿಯೂ ಸಹ ಮೂಲ ಕಾರಣವಾಗಿದ್ದಿತ್ತೆನ್ನಬಹುದಾಗಿದೆ. ಶಿವಪ್ಪನಾಯಕನು ಫಾದರ್ ಜೋಸೆಫ್ ಎಂಬುವವನನ್ನು ಆಸ್ಥಾನಕ್ಕೆ ಬರಮಾಡಿಕೊಂಡು ಮತಾಂತರವಾಗದಂತೆ ಕಟ್ಟುಪಾಡು ಮಾಡಿಕೊಂಡು ಆಯಾ ಧರ್ಮದಲ್ಲಿಯೇ ಅವರು ಜೀವಿಸಲು ಅನುವು ಮಾಡಬೇಕೆಂದು ಅದಕ್ಕಾಗಿ ಅವರುಗಳಿಗೆ ರಕ್ಷಣೆ ಒದಗಿಸಿದನೆಂದು ಬಿ.ಎಸ್. ಶಾಸ್ತ್ರೀಯವರು “ದಿ ಪೋರ್ಚುಗೀಸ್ ಇನ್ ಕೆನರಾ”ಎಂಬ ಅಪ್ರಕಟಿತ ಮಹಾ ಪ್ರಬಂದದಲ್ಲಿ ಉಲ್ಲೇಖಿಸುತ್ತಾರೆ. ವೀರ ಚೆನ್ನಮ್ಮಾಜಿಯು ರೋಮನ್ ಕೆಥೋಲಿಕರಿಗೆ ಮಂಗಳೂರಿನ ಹಂಪನಕಟ್ಟೆಯಲ್ಲಿ ಮಿಲಾಗ್ರಿಸ್ ಇಗರ್ಜಿಯನ್ನು ಕಟ್ಟುವುದಕ್ಕೆ ನಿವೇಶನವನ್ನು ದಾನವಾಗಿ ನೀಡಿ ತನ್ನ ಔದಾರ್ಯವನ್ನು ಮೆರೆದಿದ್ದಾಳೆ.

ಹಿಂದೂ ವೀರಶೈವ, ಜೈನ, ಮುಸ್ಲಿಂ, ಕ್ರೈಸ್ತ ಹೀಗೆ ಅನೇಕ ಅನೇಕ ಪ್ರಮುಖ ಧರ್ಮಗಳು ತಮ್ಮದೇ ಆದ ಪ್ರಭಾವಗಳಿಂದಾಗಿ ಅಭಿವೃದ್ಧಿ ಹೊಂದುತ್ತಿದ್ದರೆ ಮೇಲಿನ ಯಾವ ಧರ್ಮಕ್ಕೂ ಸೇರದೆ ಧರ್ಮರಹಿತರಾಗಿದ್ದ ಶೂದ್ರರು (ಪಂಚಮರು) ಸಮಾಜದಲ್ಲಿ ನಾಯಿಗಿಂತಲೂ ಕೆಳಮಟ್ಟದ ಜೀವನ ನಡೆಸುತ್ತಿದ್ದರು. ಅಸ್ಪೃಶ್ಯತೆಯು ಸಮಾಜದಲ್ಲಿ ತಾಂಡವಾಡುತ್ತಿದ್ದಿತು. ಮೇಲು, ಕೀಳು ಎಂಬುವುದು ಸರ್ವೇಸಾಮಾನ್ಯವಾಗಿದ್ದಿತ್ತು. ಜೀತಪದ್ಧತಿ ಸಾಮಾಜಿಕ ಕಟ್ಟುಪಾಡುಗಳು, ಈ ಜನಾಂಗದವರನ್ನು ಜೀವನಪೂರ್ತಿಯಾಗಿ ಇಡಿಯಾಗಿ ಹಿಂಡುವ ಕೆಲಸಮಾಡಿ ಅವರನ್ನು ಒಂದು ರೀತಿಯ ಮಾನಸಿಕ ಷಂಡರನ್ನಾಗಿಸುವ ಪರಿಸ್ಥಿಯೂ ಇತ್ತೆಂದರೆ ತಪ್ಪಾಗಲಾರದು. ಮಧ್ಯೆ ಮಧ್ಯೆ ಇವರ ಅಭಿವೃದ್ಧಿಗೆ ಕೆಲವು ಅಭಿವೃದ್ಧಿ ಕೆಲಸಗಳು ಕೈಗೊಂಡಿರುವುದು ಕಂಡು ಬಂದರೂ ಅವು ಫಲಕಾರಿಯಾದಂತೆ ಕಂಡುಬರುವುದಿಲ್ಲ. ವರ್ಣಾಶ್ರಮ ಪದ್ಧತಿಯು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಲ್ಲಿದ್ದಿತ್ತು. ಬ್ರಾಹ್ಮಣರು ರಾಜಪರಿವಾರದವರಿಗಿಂತಲೂ ಉತ್ತಮ ವರ್ಗದವರಾಗಿದ್ದರು. ಮುಂದೆ ಸಾಮಾಜಿಕ ಪದ್ಧತಿಯಲ್ಲಿ ಇವರ ವರ್ಣನೆಯನ್ನು ಸಂಕ್ಷಿಪ್ತವಾಗಿ ಆಧಾರಗಳ ಸಮೇತ ನೋಡಬಹುದಾಗಿದೆ.

ದೇವಾಲಯಗಳು : ಹಿಂದೆ ನಾವು ಚರ್ಚಿಸಿರುವಂತೆ ಕೆಳದಿ ಮನೆತನದ ಉಗಮಕ್ಕೆ ಮೂಲ ಕಾರಣವೆಂದರೆ ಶ್ರೀರಾಮೇಶ್ವರ ಲಿಂಗ, ಈ ಶ್ರೀರಾಮೇಶ್ವರನೇ ಕೆಳದಿ ಅರಸರ ಆರಾಧ್ಯ ಮನೆದೇವರು, ಆದರೆ ದೊಡ್ಡ ಸಂಕಣ್ಣನಾಯಕನ ನಂತರದಲ್ಲಿ ಇಕ್ಕೇರಿಯ ಅಘೋರೇಶ್ವರನು ಈ ವಂಶದವರ ಕುಲದೇವರಲ್ಲಿ ಒಬ್ಬನಾದನು. ಸಹಜವಾಗಿಯೇ ಈ ದೇವಾನು ದೇವರುಗಳಿಗೆ ಅರಸರು ಉದಾರವಾಗಿ ದಾನನೀಡಿರುವುದು ಕಂಡುಬರುತ್ತದೆ.

ಶ್ರೀರಾಮೇಶ್ವರ ದೇವಾಲಯ ಕುರಿತು ಕೆಳದಿ ಗುಂಡಾಜೋಯಿಸ್ ರವರು ತಮ್ಮ ಕೆಳದಿಯ ಸಂಕ್ಷಿಪ್ತ ಇತಿಹಾಸ ಎಂಬ ಪುಸ್ತಕದಲ್ಲಿ ಲಿಂಗಣ್ಣ ಕವಿಯು ತನ್ನ ನೃಪ ವಿಜಯದಲ್ಲಿ ಪ್ರಸ್ಥಾಪಿಸಿರುವ ದೇವಾಲಯ ಕುರಿತ ವಿಷಯವನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ. ಅದನ್ನು ಇಲ್ಲಿ ಉಲ್ಲೇಖಿಸುವುದು ಉತ್ತಮವೆಂದು ಹೇಳಬಹುದು.

            ಶ್ರೀಮತ್ಕೆಳದಿಯ ಪೊಳಲೊಳ್
ಹೈಮವತೀರಮಣನೆಸೆದ ಲಿಂಗಾಕೃತಿಯಿಂ
ರಾಮೇಶ್ವರಾಖ್ಯೆಯಿಂ ತಳೆ
ದಾ ಮಹಿಯೊಳ್ ಪುತ್ತದಲ್ಲಿ ನೆಲೆಸಿರುತಿರ್ದಂ

ಅಂದರೆ ಕೆಳದಿಯಲ್ಲಿ ಇರುವ ಶ್ರೀರಾಮೇಶ್ವರ ಲಿಂಗವು ಕೆಳಗೆ ನೀಡುವ ಆಧಾರಗಳಿಂದ ಇದೊಂದು ಉದ್ಭವಲಿಂಗವೆಂದು ಮೇಲು ನೋಟಕ್ಕೆ ಕಂಡುಬರುತ್ತದೆ. ಅದನ್ನು ಲಿಂಗಣ್ಣ ಕವಿಯು ವಿವರಿಸುತ್ತಾ. “ಭದ್ರಪಾಗ್ರಜನಪ್ಪ ಚೌಡಪನ ಸ್ವಪ್ನದೊಳ್ ಶ್ರೀಮತ್ಸರಮೇಶ್ವರಂ ಮನಂಗೊಳಿಪ್ಪ ವೃದ್ಧ ಜಂಗಮ ಸ್ವರೂಪದಿಂ ಪ್ರಸನ್ನನಾಗಿ ಕೆಳದಿ ಪುರದೆಡೆಯೊಳ್ ಸೀಗೆವಳ್ಳಿಯೆಂಬ ತಾಣದೊಳ್ ತುರುಗುಲ್ಮಲತಾ ಪ್ರತಾನಾವೃತಮಾದ ಸೀಗೆವೆಳೆಯ ಮಧ್ಯದೊಳ್ ರಾಮೇಶ್ವರನೆಂಬ ಮಹಾದಿವ್ಯಲಿಗಂ ನೆಲೆಸಿರ್ಪುದಾಲಿಂಗಂ ಬಹುಕಾಲಮಾರಭ್ಯ ವಲ್ಮೀಕಾಚ್ಛಾದಿತಮಾಗಿರ್ಪುದಲ್ಲ ತಲ್ಲಿಂಗಮಿಪುದರ್ಕೆ ಕುರುಹೇನೆಂ ದೊಡೆ ನಿನ್ನ ಮನೆಯೊಳೆಸೆದ ಕಪಿಲೆವಣ್ಣನ ಪಶು ಕರುವೆರಸಾತಾಣ ಮನೈದಿನಾಂದಾಪುತ್ತದ ಮೇಗಡೆಯೊಳ್ ಪ್ರತಿದಿನಂ ಪಾಲ್ಗರೆದು ಬರುತಿರ್ಪುದೆ ಕುರುಹಾಲಿಂಗಮಂ ಸದ್ಭಕಿತಿಂದರ್ಚಿಸಲ್ ನಿನಗಖಂಡ ಪೃಥ್ವೀಪತಿತ್ವಂ ಕೈ ಸಾರ್ವುದೆಂದು ಸಿರ್ದಾ ಜಂಗಮ ಮೂರ್ತಿಯಂ ತಧಾನಮನೈದಲೆಳ್ಚತುಗ ಪರಮ ಹರ್ಷಿತನಾಗಿ ನಿಜ ಮಾತೃವಪ್ಪ ಬಸವಾಂಬಿಕೆಯೊಳಿಂತು ಕಂಡ ಸ್ವಪ್ನವನು ಸಿರಲದಂ ಕೇಳ್ದಂತು ಸ್ವಪ್ನದೊಳ್ ನಿರೂಪಿಸಿಪೋದ ಜಂಗಮಮೂರ್ತಿ ಸಾಕ್ಷಾತ್ಪರಮೇಶ್ವರನೆಂಬುದೆ ನಿಶ್ಚಯವಾರಾಮೇಶ್ವರ ಲಿಂಗಕ್ಕೆ ಭಕ್ತಿಯ್ನೊಡೆಕೊಂಡೊಡೆ ಮುಂದೆ ನಿನಗೆ ಮಹಾಭಿವೃದ್ಧಿಯುಂಟಾದರ್ಕೆ ಸಂದೆಗಮಿಲ್ಲೆಂದು ಸಿರಲಂತಾ ಮಾತಂ ಕೇಳ್ದು ಮರುದಿವಸಂ ಬೇಹಚರರಂ ಕಾಯ್ದಿರ್ಕಿ ನಿಜ ಮಂದಿರದೊಳಿರ್ಪ ಕಪಿಲೆವಣ್ಣದ ಪಸುವಾ ಪುತ್ರದೆಡೆಗೈದಿ ಸುಭಿಯಂ ಕರೆದು ಬರ್ಪುದಂ ಗೋರಕ್ಷಕರ ಮುಖದಿಂದರಿದಲ್ಲಿ ಗೈದಿಯಾಪುತ್ತಾವನಗುಳಿಸಿ ನೋಡಲದರೊಳ್ ಕಂಗೊಳಿಸುತಿರ್ಪ ಮಂಗಲಮೂರ್ತಿಯಪ್ಪ ಶ್ರೀ ರಾಮೇಶ್ವರ ಲಿಂಗಮಿರಲ್ಕಂಡು ವಿಸ್ಮಿತನಾಗಿ ಕರಸರೀಜಮಂ ಮುಗಿದು ಭಯಭರಿತ ಭಕ್ತಿಯಿಂ ಪೊಡಮಟ್ಟಾನುತಿಸಿ….

ಮೊದಲು ಚೌಡಪ್ಪನು ತಮ್ಮ ವಂಶದ ಸ್ಥಾಪನೆಗೆ ಮೂಲ ಕಾರಣವಾದ ಶ್ರೀರಾಮೇಶ್ವರ ದೇವಾಲಯವನ್ನು ಮರದಿಂದ ಕಟ್ಟಿಸಿದನು. ನಂತರ ಅಳ್ವಿಕೆಗೆ ಬಂದ ಸದಾಶಿವನಾಯಕನು ಇಂದು ಕಾಣುವ ಸುಂದರ ಶಿಲೆಯಿಂದ ದೇವಾಲಯವನ್ನು ನಿರ್ಮಿಸಿದನು. ಹಿರಿಯ ವೆಂಕಟಪ್ಪನಾಯಕನ ಕಾಲದಲ್ಲಿ ರಾಮೇಶ್ವರ ದೇವರ ರಂಗಮಂಟಪ ನಿರ್ಮಾಣವಾಯಿತೆಂದು ದಾಖಲೆಗಳಿಂದ ತಿಳಿದುಬರುತ್ತದೆ. ಶ್ರೀ ರಾಮೇಶ್ವರನನ್ನು ಕುರಿತು, ವೆಂಕಣ್ಣ ಕವಿಯಿಂದ “ಸಾಕ್ಷಾತ್ ಕೆಳದೀಶ್ವರ ರಾಮೇಶ” “ವರದಾತಿರವಾಸ ಕೆಳದಿಯ ಪುರವರಾಧೀಶ ರಾಮೇಶ” ಎಂಬ ಅಂಕಿತವಿರುವ ಕೀರ್ತನೆಗಳು ರಚನೆಗೊಂಡು ಅಂದಿನ ಧಾರ್ಮಿಕ ಸಂಸ್ಕೃತಿಯನ್ನು ಎಳೆಎಳೆಯಾಗಿ ತಿಳಿಸುತ್ತವೆ.

ಕೆಳದಿ ಶ್ರೀ ರಾಮೇಶ್ವರನಂತೆ ಇಕ್ಕೇರಿಯ ಅಘೋರೇಶ್ವರನಿಗೂ ಅರಸರು ಸಂಸ್ಥಾನದಲ್ಲಿ ಸಾಕಷ್ಟು ಭಕ್ತಿಭಾವದಿಂದ ನೆಡೆದುಕೊಂಡಿದ್ದರೆನ್ನಬಹುದು ಇದಕ್ಕೆ ಸಾಕ್ಷಿಯೆಂಬಂತೆ ಈ ದೇವಾಲಯ ಕುರಿತು ಶಿವತತ್ವ ರತ್ನಾಕರದಲ್ಲಿ ಹೀಗೆ ವರ್ಣಿಸಲಾಗಿದೆ.

. ಗದಾಂ ತ್ರಿಶೂಲಕಂ ಜೈನದಧಾನಾಃ ಕ್ರಯಶೋಸಿತಾಃ
ದ್ವಾತ್ರಿಂಶದ್ದಸ್ತ ಮೂರ್ತೇಸ್ತು ಶಕ್ತಯಶ್ವ ಪ್ರಕೀರ್ತತಾಃ

. ಏಕವಕ್ಕ್ರಂ ಸದಾನಂದಂ ದಾಕ್ರಿಂಶದ್ಭುಜಸಂಯುತಮ್
ಜಟಾಮುಕುಟ ಸಂಯುಕ್ತಂ ತ್ರಿಣೇತ್ರಂ ಚಂದ್ರಶೇಖರಮ್

. ಅಭಯಂ ಖಡ್ಗ ಶೊಲೋಚ ಚಕ್ರಂ ಡಮರುಕಂ ತಥಾ
ದಧಾನ ಮಸ್ಥಿಭಾಣಾಚ ಗಧಾಂ ಪದ್ಮಂ ಕಪಾಲಕಂ

. ಜ್ಞಾನ ಮುದ್ರಾಂ ಕುಂತ ಹಸ್ತಂ ಅಂಕುಶಂ ಚಾಕ್ಷಮಾಲಿಕಾಂ
ಖಟ್ಟಾಂಗಂ ಪರಶುಂ ಚೈವದಧಾನಂ ದಕ್ಷಿಣೆಭರ್ಲಾಜೈಃ

. ವರಂ ಚ ಫಲಕಂ ಚೈವ ಟಂಕಂ ಪಶಂಚ ಮುದ್ಗರಂ
ನಾಗಮಗ್ನಿಂ ಮೃಗಂ ಘಂಟಾಂ ಧನುಶ್ಚ ಕಟಹಸ್ತಕಂ

. ರತ್ನಂ ಚ ಕುಮುದಂ ಕುಂಭಂ ಖೇಟಕಂ ಪುಸ್ತಕಂ ತಥಾ
ಅಘೋರಮುರ್ತಿಂ ನೀಲಾಂಭ ರುಂಡಮಾಲಾ ವಿಭೂಕ್ಷಿತಮ್
ಕಾಲ ಮುಂಡಸ್ಯ ಶಿರಸಿ ಸ್ಥಿತಂ ಸರ್ವಾಭಯ ಪ್ರದಮ್

ಎಂದು ವರ್ಣಿಸಿರುವುದನ್ನು ವೆಂಕಟೇಶ್ ಜೋಯಿಸ್ ರವರು ಸಂಪೂರ್ಣವಾಗಿ ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಈ ದೇವರಿಗೆ ಸಂಸ್ಥಾನದಲ್ಲಿ ಶ್ರೀ ರಾಮೇಶ್ವರನಷ್ಟೇ ಸ್ಥಾನಮಾನವನ್ನು ದಾನವಾಗಿ ನೀಡಿ ತೆರಿಗೆಯಿಂದ ಮುಕ್ರರನ್ನಾಗಿಸಲಾಗಿತ್ತು. ಕ್ರಿ.ಶ. ೧೭ನೇ ಶತಮಾನದಲ್ಲಿ ಇಕ್ಕೇರಿಗೆ ಭೇಟಿ ನೀಡಿದ್ದ ಇಟಲಿಯ ಪ್ರವಾಸಿಗ ಪಿಯತ್ರೋದೆಲ್ಲಾವೆಲ್ಲೆಯು ಬೃಹತ್ತಾದ ಈ ಮೂರ್ತಿಯನ್ನು ನೋಡಿ ಭಕ್ತ ಪರಾಧೀನನಾಗಿರುವನೆಂದು ತನ್ನ ಪ್ರವಾಸಿ ಕಥನದಲ್ಲಿ ತಿಳಿಸಿರುವುದು ಕಂಡು ಬರುತ್ತದೆ.

ಕೆಳದಿಯ ಶ್ರೀರಾಮೇಶ್ವರ ದೇವಾಲಯದ ನಿರ್ಮಾಣ ಕುರಿತು ಕೆಳದಿ ಗುಂಡಾ ಜೋಯಿಸ್ ರವರು ತಮ್ಮ ಕೆಳದಿ ಸಂಕ್ಷಿಪ್ತ ಇತಿಹಾಸದಲ್ಲಿ ಪ್ರಾಚೀನಾ ದಾಖಲೆಗಳೊಂದಿಗೆ ಅಂತಿಮವಾಗಿ ತಾಳೆ ನೋಡಿ ಕ್ರಿ.ಶ. ೧೫೮೩ ರಿಂದ ೧೬೩೦ ಅವಧಿಯಲ್ಲಿ ಆಳ್ವಿಕೆ ನಡೆಸುತ್ತಿದ್ದ ಹಿರಿಯ ವೆಂಕಟಪ್ಪನಾಯಕನ ಕಾಲದಲ್ಲಿ ಸಂಪೂರ್ಣವಾಗಿ ಶಿಲೆಯಲ್ಲಿ ನಿರ್ಮಾಣವಾಯಿತ್ತೆಂಬ ತೀರ್ಮಾನಕ್ಕೆ ಬರುತ್ತಾರೆ. ಇದಕ್ಕೆ ಅವರು ನೀಡುವ ಪ್ರಾಚೀನ ಆಧಾರಗಳೆಂದರೆ

. ಕೆಳದಿ ನೃಪವಿಜಯದಲ್ಲಿ’

……….. ತತ್ಪುರೀ ರಾಮೇಶ್ವರ ದೇವರ ಗರ್ಭಗೃಹಮಂ ಶಿಲಾಮಯವನಾಗಿಸಿ ………… ಇದು ಶಾ.ಶಕ.೧೪೨೨ರಲ್ಲಿ, ಎಂದರೆ ಕ್ರಿ.ಶ. ೧೫೦೦ರಲ್ಲಿ ಚೌಡಪ್ಪನಾಯಕನು ಪಟ್ಟಾಭಿಷೇಕವಾದೊಡನೆ (ಪುಟ – ೨೬ – ಏಓಗಿ)

. ಉರುತರ ಕೆಳದಿಯ ರಾಮೇ
ಶ್ವರದೇವರ ನಂದಿಮಂಟಪವನಧಿಕ ಮನೋ
ಹರ ಮಾಗೆ ಶಿಲಾಮಯಮಂ
ವಿರಚಿಸಿದಂ ಶಿಲ್ಪಶಾಸ್ತ್ರ ಕೌಶಲವಿಧಿಯಿಂ

ಇದು ಶಾ.ಶಕ. ೧೪೩೬ ರಿಂದ ೧೪೬೮ ಎಂದು ಅಂದರೆ ಕ್ರಿ.ಶ. ೧೫೧೪ ರಿಂದ ೧೫೪೬ ರವರೆಗೆ ಸದಾಶಿವನಾಯಕನ ಕಾಲವಾಗಿರುತ್ತದೆ (ಪುಟ – ೪೦, ೪೧ – KNV)

೩. ……….ರಾಮೇಶ್ವರ ದೇವರ ರಂಗಮಂಪಟಪಮಂ ಶಿಲಾಮಯವನಾಗಿಸಿ……… ಇದು ಶಾ.ಶಕ. ೧೫೦೫ ರಿಂದ ೧೫೫೨ ರವರೆಗೆ ಎಂದರೆ ಕ್ರಿ.ಶ. ೧೫೮೩ ರಿಂದ ೧೬೩೦ರವರೆಗೆ ಹಿರಿಯ ವೆಂಕಪಟ್ಟ ನಾಯಕನ ಕಾಲವಾಗಿರುತ್ತದೆ.

೪. ಮೈಸೂರು ಸರ್ಕಾರದ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯವರು ತಮ್ಮ ೧೯೩೨ರ ವಾರ್ಷಿಕ ವರದಿಯಲ್ಲಿ,

Traditionally, this temple is said to have been built by Chauwadappa Nayak, a vijayanagar officer who get keladi and the neighbourhood as a hereditory kingdom from the emperor. Chowdappa Nayak ruled between 1499 – 1513 and the temple must have been built in this days, before the capital was transferred to IKKERI. ಎಂದು ಉಲ್ಲೇಖಿತವಾಗಿರುತ್ತದೆ.

೫. ರೈಸ್ ರವರು ಗೆಜೆಟೇರ್ ನಲ್ಲಿ

Chowdagowa after receiving from the vijayanagar king a seal (Sikha Moharu) the town of keladi was then founded, together with the temple of Sree Rameshwara.

ಈ ಮೇಲಿನ ನಾಲ್ಕು ಮತ್ತು ಐದರಲ್ಲಿ ಕಂಡುಬರುವ ಅಂಶವೆಂದರೆ ಈ ದೇವಾಲಯವು ಸಂಸ್ಥಾನದ ಮೊದಲನೆಯ ದೊರೆ ಚೌಡಪ್ಪನಾಯಕನು ರಾಜಧಾನಿಯನ್ನು ಕೆಳದಿಯಿಂದ ಇಕ್ಕೇರಿಗೆ ಬದಲಾಯಿಸುವ ಮುನ್ನ (ಕ್ರಿ.ಶ. ೧೪೯೯ ರಿಂದ ೧೫೧೩ ರ ಅವಧಿಯಲ್ಲಿ) ನಿಮಿಸಲ್ಪಟ್ಟಿರಬೇಕೆಂದು ತಿಳಿದುಬರುತ್ತದೆ. ಇದು ಅನೇಕ ವಿದ್ವಾಂಸರ ಅಭಿಪ್ರಾಯವೂ ಸಹ ಆಗಿರುತ್ತದೆ. ಒಟ್ಟಿನಲ್ಲಿ ಇಕ್ಕೇರಿ ಅರಸರ ಧಾರ್ಮಿಕ ಸಂಸ್ಕೃತಿಯ ಪ್ರತೀಕವಾಗಿ ಇಂದಿಗೂ ಮಲೆನಾಡಿನ ಮಡಿಲಿನಲ್ಲಿ ಕಂಗೊಳಿಸುತ್ತಾ ಇಂದಿನ ಜನರಿಗೆ ತನ್ನ ವೈಭವದ ದಿನಗಳನ್ನು ನೆನೆಯುವಂತೆ ಮಾಡುತ್ತಾ ಬಿಸಿಲಿಗೆ, ಮಳೆಗೆ ಮೈಹೂಡಿ ನಿಂತಿದೆ ಈ ಶ್ರೀ ರಾಮೇಶ್ವರ ದೇವಾಲಯ.

ಕೆಳದಿ ಅರಸರ ಮತ್ತೊಂದು ಪ್ರಮುಖ ದೇವಾಲಯವೆಂದರೆ ಶ್ರೀ ಪಾರ್ವತಮ್ಮ ನವರ ದೇವಾಲಯ, ಇದನ್ನಿ ಕುರಿತು ‘ಕೆಳದಿ ನೃಪವಿಜಯ’ದಲ್ಲಿ ಉಲ್ಲೇಖಿತವಾಗಿರುವ ಮಾಹಿತಿಯನ್ನು ಕೆಳದಿ ಗುಂಡಾ ಜೋಯಿಸ್ ರವರು ತಮ್ಮ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ.

ರಾಮೇಶ್ವರ ಲಿಂಗದ ಸ
ದ್ವಾ ಮದೊಳುಜ್ವಲಿಪ ಪಾರ್ವತೀ ಮೂರ್ತಿಯನು
ದ್ದಾ ಮಾಗಮ ವಿಧಿಯಿಂ ತ
ದ್ಬೂಮಿಪ ತಿಲಕಂ ಪ್ರತಿಷ್ಟೆಯಂ ವಿರಚಿಸಿದ
||

ಎಂಬ ಮಹತ್ವದ ಸಾಲುಗಳನ್ನು ಉಲ್ಲೇಖಿಸಿ ಇದು ಶಾ.ಶಕ. ೧೪೩೬ ರಿಂದ ೧೪೬೮ರ ವರೆಗೆ ಎಂದರೆ ಕ್ರಿ.ಶ. ೧೫೧೪ ರಿಂದ ೧೨೫೪೬ರ ವರೆಗೆ ಸದಾಶಿವರಾಯ ನಾಯಕನ ಕಾಲದಲ್ಲಿ ನಿರ್ಮಾಣವಾಗಿರಬೇಕೆಂದು ನಿರ್ಧಾರಕ್ಕೆ ಬರುತ್ತಾರೆ. ಈ ದೇವಾಲಯವು ಅರ್ಧಭಾಗ ಶಿಲೆಯಿಂದಲೂ ಉಳಿದರ್ಧಭಾಗ ಆಧುನಿಕ ಮಾದರಿಯ ಕಟ್ಟಡಗಳಂತೆಯೂ ಇರುವುದು ಕಂಡುಬರುತ್ತದೆ. ಶಿಲಾಭಾಗದಲ್ಲಿ ಭೈರವ, ಷಣ್ಮುಖ, ಗಣೇಶ, ಅಂಧಕಾಸುರನ ಮೇಲೆ ನರ್ತನ ಮಾಡುತ್ತಿರುವ ಶಿವ, ಮೃದಂಗ ಬಾರಿಸುತ್ತಿರುವ ನಂದಿಕೇಶ, ಈಶ್ವರಲಿಂಗವನ್ನು ಪೂಜಿಸುತ್ತಿರುವ ಪುರುಷಾಮೃಗ, ಸನ್ಯಾಸಿ, ಕಣ್ಣಪ್ಪ, ಗಜಲಕ್ಷ್ಮಿ ಮತ್ತು ಯೋಧನೊಬ್ಬನು ಸ್ತ್ರೀಯಳೊಡನೆ ಸಂಭಾಷಿಸುತ್ತಿರುವ ವಿಗ್ರಹಗಳು ಇವೆ. ಆಧುನಿಕ ಕಟ್ಡದಂತಿರುವ ಭಾಗದಲ್ಲಿ ಒಂದಕ್ಕೊಂದು ಹೊಲದಂತಿರುವ ಸುಂದರ ರಂಗೋಲಿಗಳು ಮರದ ಕೆತ್ತನೆಯಲ್ಲಿ ಮನಮೋಹಕವಾಗಿ ಕಂಡುಬರುತ್ತವೆ.

ಇಂದಿಗೂ ಸಹ ದೇವಾಲಯದಲ್ಲಿ ಶ್ರೀ ಪಾರ್ವತಮ್ಮನ ದರ್ಶನ ಮಾಡಿದರೆ ಭಕ್ತರ ಕಷ್ಟಗಳು ದೂರವಾಗುತ್ತವೆ. ಎಂಬ ನಂಬಿಕೆ ಬೇರೂರಿದೆ. ನವರಾತ್ರಿಯಂದು ಇಲ್ಲಿ ದುರ್ಗಪೂಜೆಯು ಬಹು ವಿಜ್ರಂಭಣೆಯಿಂದ ನಡೆಯುತ್ತದೆ. ಆಗ ವಿವಿಧ ರೀತಿಯ ಜನಪದ ನೃತ್ಯ, ಜನಪದ ಸಂಗೀತ, ಗೀತೆಗಳನ್ನು ಸುತ್ತ ಮುತ್ತಲಿನ ಜನ ನಡೆಸಿಕೊಡುತ್ತಾರೆ. ಈ ಸನ್ನಿವೇಶವಂತೂ ಇಕ್ಕೇರಿ ನಾಯಕರ ವೈಭವದ ದಿನಗಳನ್ನು ನೆನಪಿಸುತ್ತದೆ.

ಅರಸರ ಮತ್ತೊಂದು ಬೃಹತ್ ಪ್ರಮಾಣದ ದೇವಿಯ ಮಂದಿರವೆಂದರೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ. ಇದೂ ಸಹ ಇಕ್ಕೇರಿ ನಾಯಕರ ಆರಾಧ್ಯ ದೇವತೆಯಾಗಿ ಕಂಗೊಳಿಸಿತು. ಈ ದೇವಿಯ ದೇವಸ್ಥಾನಕ್ಕೆ ಕೆಳದಿ ಅರಸರು ಸಲ್ಲಿಸಿದ ಸೇವೆ ಅಪಾರವಾದದ್ದು. ವೆಂಕಟಪ್ಪನಾಯಕನು ಇದನ್ನು ಶಿಲೆಯಿಂದ ನಿರ್ಮಿಸಿದರೆ ವೀರರಾಣಿ ಚೆನ್ನಮ್ಮಾಜಿಯು ಸಾಕಷ್ಟು ದಾನದತ್ತಿ ನೀಡಿ ಅಭಿವೃದ್ಧಿಪಡಿಸಿದಳು. ಶಿವರಾತ್ರಿ ಸಮಯದಲ್ಲಿ ಇಲ್ಲಿ ತುಂಬಾ ವಿಜೃಂಭಣೆಯ ಆಚಾರಗಳು ನಡೆಯುತ್ತಿದ್ದವು. ಶಿವಪ್ಪನಾಯಕನು ಈ ದೇವಿಗೆ ಅಪಾರ ಭಕ್ತಿಭಾವದಿಂದ ನೆಡೆದುಕೊಂಡು ಬರುತ್ತಿದ್ದನೆಂದು ಕೈಫಿಯತ್ತುಗಳಿಂದ ತಿಳಿದುಬರುತ್ತದೆ.

ಕೆಳದಿ ಅರಸರ ಸಾಮ್ರಾಜ್ಯದಲ್ಲಿ ಕೊಲ್ಲೂರು, ಶೃಂಗೇರಿ, ಉಡುಪಿ, ಮೂಡಬಿದರೆ, ಸುಬ್ರಮಣ್ಯ, ಶಂಕರನಾರಾಯಣ, ಗೋಕರ್ಣ, ಕಳಸ, ಉಡುಗಣೆ ಮೊದಲಾದ ಧಾರ್ಮಿಕ ಕ್ಷೇತ್ರಗಳು ಕಂಗೊಳಿಸಿದ್ದವು ಹಾಗೂ ಹಿಂದೆ ನಿರ್ಮಾಣವಾಗಿದ್ದ ಪುರಾತನ ದೇವಾಲಯಗಳ ನಿರ್ವಹಣೆ, ಜೀರ್ಣೋದ್ದಾರದ ಕೆಲಸವನ್ನು ಸಹ ಇವರು ನಿರ್ವಹಿಸಿಕೊಂಡು ಬಂದಿರುವುದು ಕಂಡುಬರುತ್ತದೆ. ರಾಜರು ಯುದ್ಧಕ್ಕೆ ಹೊರಡುವುದಕ್ಕೆ ಮುಂಚೆ ಸೈನ್ಯಸಮೇತವಾಗಿ ದೇವಾಲಯಕ್ಕೆ ಬಂದು ದೇವ, ದೇವಿಯರ ದರ್ಶನ ಪಡೆದು ಮುನ್ನಡೆಯುತ್ತಿದ್ದರು, ಶೃಂಗೇರಿಯ ಶಾರದಾಂಬ ದೇವಾಲಯವು ಈ ಅರಸರ ಕಾಲದಲ್ಲಿ ಅಪಾರವಾದ ಭಕ್ತಿ ಹಾಗೂ ಆರ್ಥಿಕ ಸೇವೆ ಪಡೆದಿದೆ. ಈ ದೇವಾಲಯ ನಿರ್ವಹಣೆಗಾಗಿ ಸುತ್ತಲಿನ ಗ್ರಾಮಗಳನ್ನು ದಾನವಾಗಿ ಕೊಡಲಾಗಿತ್ತು. ಆ ಗ್ರಾಮದ ಜನರು ತಾವು ಬೆಳೆದ ದವಸ ದಾನ್ಯಗಳನ್ನು ನಿಗದಿತ ಪ್ರಮಾಣದಲ್ಲಿ ತಪ್ಪದೆ ದೇವಾಲಯಕ್ಕೆ ಸಲ್ಲಿಸಬೇಕಾಗಿತ್ತು. ತಪ್ಪಿದವರಿಗೆ ಶಿಕ್ಷೆಯ ಮೂಲಕ ವಸೂಲು ಮಾಡುವ ವ್ಯವಸ್ಥೆಯೂ ಜಾರಿಯಲ್ಲಿದ್ದಿತ್ತು. ಬಸಪ್ಪ ನಾಯಕನು ಶೃಂಗೇರಿ ಮಠಕ್ಕೆ ಬರಬೇಕಾದ ಕಾನಿಕೆಯ ವಸೂಲಿಗಳಲ್ಲಿ ಅಲ್ಲಿಯ ಸ್ಥಳೀಯ ಅಧಿಕಾರಿಗಳು ಸಹಕರಿಸುವಂತೆ ಕೇಳಿಕೊಂಡದ್ದಲ್ಲದೆ. ಉದಾಸೀನ ಮಾಡಿದವರಿಗೆ ಸರಿಯಾದ ಶಿಕ್ಷೆ ನೀಡಿ ಅವರನ್ನು ಒಪ್ಪಿಸುವಂತೆ ನಿರೂಪವೊಂದನ್ನು ಹೊರಡಿಸಿದನೆಂದ ಮೇಲೆ ಅಂದಿನ ಕಾಲದ ಕೆಳವರ್ಗದ ಜನರ ರೈತರ ಸ್ಥಿತಿಗತಿಯ ಚಿತ್ರಣವನ್ನೇ ಊಹಿಸಬಹುದು. ಕೆಳದಿ ಅರಸರು ಶೃಂಗೇರಿ ಜಗದ್ಗುರುಗಳಲ್ಲಿ ಹಾಗೂ ಶೃಂಗೇರಿ ಮಠದಲ್ಲಿ ನಿಕಟ ಸಂಪರ್ಕ ಹೊಂದಿದ್ದರು. ವಿಜಯನಗರದ ಪತನದ ನಂತರ ಶೃಂಗೇರಿ ಮಠವು ನಶಿಸಿ ಹೋಗುತ್ತಿದ್ದ ಸಂದರ್ಭದಲ್ಲಿ ಇಕ್ಕೇರಿ ನಾಯಕರು ಅದನ್ನು ಪೋಷಿಸಿದ್ದರು. ಅವರ ಅಂದಿನ ಅಕ್ಕರೆಯ ಪೋಷಣೆಯಿಂದಲೇ ಇಂದಿಗೂ ಸಹ ಅದು ಸಮೃದ್ಧವಾಗಿ ಬೆಳೆದುಬರುತ್ತಿದೆ.

ಇಕ್ಕೇರಿ ಅರಸರ ಕಾಲದಲ್ಲಿ ದೇವಾಲಯಗಳಲ್ಲಿ ಶ್ರೀ ರಾಮೇಶ್ವರ ದೇವಾಲಯ ವೀರಭದ್ರ ದೇವಾಲಯ, ಇಕ್ಕೇರಿಯ ಅಘೋರೇಶ್ವರ ದೇವಾಲಯ ಶೈವ ದೇವಾಲಯಗಳು ನಿರ್ಮಾಣವಾಗಿ ಕಂಗೊಳಿಸಿದರೆ. ಕಾಶಿಯಲ್ಲಿನ ಕರ್ದಮೇಶ್ವರ, ನರ್ಮದೇಶ್ವರ, ಭೀಮಚಂಡಿಕೆ, ವೃಷಭಧ್ವಜೇಶ್ವರ ದೇವಾಲಯಗಳು ಹಾಗೂ ಧರ್ಮಸ್ಥಳ, ಗೋಕರ್ಣ ದೇವಾಲಯಗಳು ಉತ್ತಮ ರೀತಿಯಲ್ಲಿ ಜೀರ್ಣೋದ್ದಾರಗೊಂಡವು.

ಉಡುಪಿಯು ವೈಷ್ಣವರ ಪ್ರಮುಖ ಕೇಂದ್ರಬಿಂದುವಾಗಿದ್ದಿತು. ಉತ್ತರ ಕನ್ನಡ ಜಿಲ್ಲೆಯ ಸೋದೆಯ ವಾದಿರಾಜತೀರ್ಥರ ಮಠ ಹಾಗೂ ತೀರ್ಥಹಳ್ಳಿಯ ಅಕ್ಷೋಭತೀರ್ಥ ಮಠಗಳು ಸಹ ಕೆಳದಿ ಅರಸರಿಂದ ಅಪಾರ ಪ್ರಮಾಣದಲ್ಲಿ ಸೌಲಭ್ಯಗಳನ್ನು ಪಡೆದು ಮುನ್ನಡೆಯುತ್ತಾ ಬಂದವು. ಉಡುಪಿಯ ಕೃಷ್ಣ ದೇವಾಲಯದ ನಿರ್ವಹಣೆಗಾಗಿ ಬಾರಕೂರು ಪ್ರದೇಶಕ್ಕೆ ಸೇರಿದ್ದ ಹೂವಿನಕೆರೆ ಎಂಬ ಗ್ರಾಮವನ್ನು ದಾನವನ್ನಾಗಿ ಅರಸರು ದಯಪಾಲಿಸಿದ್ದರು. ಒಟ್ಟಿನಲ್ಲಿ ಇಕ್ಕೇರಿ ನಾಯಕರು ಧಾರ್ಮಿಕವಾಗಿ ಅಪಾರ ನಂಬಿಕೆ ಹೊಂದಿದವರಾಗಿದ್ದರು. ದೇವತಾ ಕಾರ್ಯಗಳನ್ನು ಸಂತೋಷದಿಂದ, ಭಕ್ತಿಯಿಂದ ವಿಜೃಂಭಣೆಯಿಂದ ಆಚರಿಸುತ್ತಿದ್ದರು.

ಅಂದು ವೀರಶೈವ ಧರ್ಮವು ರಾಜಧರ್ಮವಾಗಿದ್ದಿತು. ಸ್ವತಃ ಅರಸರೇ ವೀರಶೈವ ಧರ್ಮದವರಾಗಿದ್ದರು. ಅಂದು ವೂರಶೈವ ಮಠಗಳು ಸಮಾಜದ ಜೀವಾಳಗಳಂತೆ ರಕ್ತನಾಡಿಗಳಂತೆ ಕೆಲಸ ಮಾಡುತ್ತಿದ್ದವು. ಕರ್ನಾಟಕದ ಉದ್ದಗಲಕ್ಕೂ ಅಂದು ವೀರಶೈವ ಮಠಗಳು ಕಂಡುಬರುತ್ತಿದ್ದರೂ ಇಕ್ಕೇರಿಯಲ್ಲಿ ಅವುಗಳ ಪ್ರಭಾವ ಪೂರ್ಣವೆನಿಸಿದ್ದವು. ಅಂದು ಕರ್ನಾಟಕದಾದ್ಯಂತ ಚಿತ್ರದುರ್ಗ, ಹುಬ್ಬಳ್ಳಿ, ಧಾರವಾಡ, ಗದಗ, ಕುಪ್ಪೂರು ಗದ್ದಿಗೆ, ಗೋಡೇಕೆರೆ, ಡೊಂಬಳ, ಕೊಪ್ಪಳ, ನವಲುಗುಂದ, ನಿಡುಸೋಸಿ, ಸಿದ್ದಗಂಗಾ, ಸುತ್ತೂರು, ಅರಭಾವಿ, ಅಥಣಿ, ಅಂಕಲಗಿ, ಉರದಕೊಂಡ, ಗುರುಪುರ, ಭುವನಗಿರಿಗುರ್ಗ, ಸಿರಿಗೆರೆ, ಕಾನಾಮಡು, ಕೆಳದಿ, ಕ್ಯಾಸನೂರು, ಹೊನ್ನಾಳಿ, ಸೊಲ್ಲಾಪುರ, ಕಲ್ಯಾಣ, ಕಲ್ಬುರ್ಗಿ, ಬೆಟ್ಟದಪುರ, ಆನಂದಪುರ, ಹಾನಗಲ್ಲು, ಸ್ವಾದಿ, ಶಿರಸಿ, ಹಾವೇರಿ, ವೀರರಾಜ ಪೇಟೆ, ಉಡುಪಿ, ಗೂಳೂರು, ಹಾಲಕೆರೆ, ಸಾವಳಗಿ, ದುಧನಿ, ಆದವಾನಿ, ಹಾಸನ ಮೊದಲಾದ ಪ್ರದೇಶಗಳಲ್ಲಿ ನೆಲೆಗೊಂಡಿದ್ದ ಮಠಗಳು ಅತ್ಯಂತ ಪ್ರಭಾವ ಪೂರ್ಣವೆನ್ನಿಸಿದ್ದವು. ವೀರಶೈವ ಸಮಾಜದ (ಧರ್ಮದ) ಅಭ್ಯುದಯಕ್ಕಾಗಿ ಈ ಮಠಗಳು ಕೈಗೊಂಡಿರುವ ಕಾರ್ಯಗಳು ಅಂದಿನಿಂದಲೂ ಪ್ರಸಿದ್ಧಿಯಾಗಿದೆ. ಇವುಗಳು ಪ್ರಮುಖವಾಗಿ ವಿದ್ಯಾಪ್ರಸಾರ, ದಾಸೋಹದ ಪವಿತ್ರ ಕೆಲಸಗಳ ಜೊತೆಗೆ, ಅಹಿಂಸಾತತ್ವ ಪರಿಪಾಲನೆ, ಸನೇಹ, ಸಹಬಾಳ್ವೆಗೆ ಹೆಚ್ಚಿನ ಒತ್ತು ನೀಡಿ ಅಂದಿನಿಂದಲೂ ಮುಂದುವರೆದುಕೊಂಡು ಬರುತ್ತಿವೆ. ಕೆಲವು ಸ್ವಜನ ಪಕ್ಷಪಾತಗಳಿಂದಾಗಿ ಇಂದು ಸ್ವಲ್ಪ ಪ್ರಮಾಣದಲ್ಲಿ ಕೆಡುತ್ತಿರುವುದು ಕಂಡುಬರುತ್ತದೆ.

ಇಕ್ಕೇರಿ ನಾಯಕರು ಪ್ರತಿಯೊಂದು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದಾಗಲೆಲ್ಲಾ ಹಣ ಭೂಮಿಯನ್ನು ದಾನ ಅಥವಾ ಕಾನೀಕೆಯ ರೂಪದಲ್ಲಿ ದೇವಾಲಯ, ಮಠಗಳಿಗೆ ಸಲ್ಲಿಸುತ್ತಿದ್ದರು, ಇದರಿಂದ ಅವರಿಗೆ ಕರ್ಮ ಎಂಬುವುದು ತೊಲಗಿ ಸುಖಶಾಂತಿ ದೊರಕುವುದೆಂದು ನಂಬಿದ್ದರು. ಕೆಲವು ದೇವಾಲಯಗಳಲ್ಲಿ ಆಗಮಶಾಸ್ತ್ರ ಪದ್ಧತಿಯಂತೆ ರಾಜರೇ ಧಾರ್ಮಿಕ ಉತ್ಸವಗಳನ್ನು ನಡೆಸುತ್ತಿದ್ದರು. ಯುಗಾದಿಯಿಂದ ಆರಂಭವಾಗಿ ವರ್ಷದ ಕೊನೆಯವರೆವಿಗೂ ಶ್ರಾವಣ, ನವರಾತ್ರಿ, ದೀಪಾವಳಿ, ಕಾರ್ತಿಕ, ಶಿವರಾತ್ರಿ ಮೊದಲಾದ ಮಾಸಗಳಲ್ಲಿ ವಿಶೇಷ ಸಮಾರಂಭಗಳು, ಜಾತ್ರೆಗಳು, ನಡೆಯುತ್ತಿದ್ದವು. ಇವು ಇಂದಿಗೂ ಸಹ ಅದೇ ಸಮಯದಲ್ಲಿ ಪ್ರಾರಂಭವಾಗಿ ನಿಗದಿತ ದಿನದವರೆಗೆ ನಡೆದುಕೊಂಡುಬರುತ್ತಿದೆ. ಕೆಳದಿ ಅರಸರ ಸಾಮ್ರಾಜ್ಯವು ಮಲೆನಾಡಿನ ಪ್ರದೇಶವಾಗಿದ್ದ ರಿಂದ ತಾವು ಬೆಳೆದ ಹೊಸ ಪಸಲು ಮನೆಗೆ ಬರುವ ಸಮಯದಲ್ಲಿ ಅಂದರೆ ಸುಗ್ಗಿಯ ಸಮಯದಲ್ಲಿ ಹಬ್ಬ ಹಾಗೂ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಸ್ವತಃ ರಾಜನೂ ಕೆಲವೊಮ್ಮೆ ಈ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದನು. ಕೆಳದಿ, ಇಕ್ಕೇರಿ, ಬಿದನೂರು, ಕಳಸ ಮೊದಲಾದ ಕಡೆಗಳಲ್ಲಿ ಬೃಹತ್ತಾದ ರಥಗಳನ್ನು ನಿರ್ಮಿಸಲಾಗಿತ್ತು ಎಂದು ವಿದೇಶಿ ಪ್ರವಾಸಿಗನಾದ ಪಿಯತ್ರೋದೆಲ್ಲಾವಲ್ಲಿಯು ತಿಳಿಸಿ ಅಂದಿನ ರಥೋತ್ಸವದ ವರ್ಣನೆಯನ್ನು ಸಹ ಸಂಪೂರ್ಣವಾಗಿ ವಿವರಿಸುತ್ತಾನೆ.

ಅಂದು ಅಮಾವ್ಯಾಸೆ ಹಾಗೂ ಹುಣ್ಣಿಮೆಯ ದಿನಗಳನ್ನು ವಿಶೇಷ ರೀತಿಯಲ್ಲಿ ಹಬ್ಬದ ಸಡಗರದಿಂದ ಆಚರಿಸಲಾಗುತ್ತಿತ್ತು. ದೀಪಾವಳಿ, ಶಿವರಾತ್ರಿ, ಯುಗಾದಿ, ಸಂಕ್ರಾಂತಿ, ಮಹಾನವಮಿ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಹಬ್ಬದ ದಿನ ಸಿಡಿ ಆಡುವ ಪದ್ಧತಿಯು ಇತ್ತೆಂದು ಪಿಯಾತ್ರೋದೆಲ್ಲಾವೆಲ್ಲಿಯು ತಿಳಿಸಿ ಅದರ ಸಂಪೂರ್ಣ ವರ್ಣನೆಯನ್ನೂ ತಿಳಿಸಿದ್ದಾನೆ.

ಪ್ರಬಲ ವಿಜಯನಗರ ಸಾಮ್ರಾಜ್ಯಕ್ಕೆ ಸಾಮಂತರಾಗಿ, ನಿರಂತರವಾಗಿ ಯುದ್ಧದಲ್ಲಿಯೇ ತೊಡಗಿರುತ್ತಿದ್ದ ವಿಜಯನಗರದ ಅರಸರೊಂದಿಗೆ ಕೈಜೋಡಿಸುವುದರ ಜೊತೆಗೆ ತಮ್ಮ ಸಂಸ್ಥಾನದ ರಕ್ಷಣೆ ಹಾಗೂ ವಿಸ್ತರಣೆಗೆ ಹೆಚ್ಚಿನ ಗಮನ ನೀಡುತ್ತಿದ್ದ ಸಮಯದಲ್ಲಿಯೂ ನಾಯಕರುಗಳು ತಾವು ಹೊಂದಿದ್ದ ಧರ್ಮಾಭಿಮಾನದಿಂದ, ದೈವಭಕ್ತಿಯಿಂದಾಗಿ ಅವರು ಸಂಸ್ಥಾನದಲ್ಲಿ ಕೈಗೊಂಡ ಧಾರ್ಮಿಕ ಕೆಲಸಕಾರ್ಯಗಳು ಶ್ಲಾಘನೀಯವೆಂದೆ ಹೇಳಬೇಕು.

* * *