.೨. ಶಿಲ್ಪದಲ್ಲಿ ಸೌಂದರ್ಯದ ವರ್ಣನೆ

ನಮ್ಮ ಕಲೆಯೂ ಸಂಸ್ಕೃತಿಯೂ ತತ್ವ ಪ್ರಧಾನವಾದವುಗಳು ಎಂದು ಹೇಳುತ್ತಾರೆ. ಆದರೆ ಇದನ್ನು ಒಪ್ಪಲು ಸಾಧ್ಯವಾಗದು. ಏಕೆಂದರೆ ಒಂದು ದೃಷ್ಟಿಯಲ್ಲಿ ಈ ಬೃಹತ್ ದೇವಾಲಯಗಳಲ್ಲಿ ಕೆಲವೇ ಕೆಲವು ವರ್ಗದವರಿಗೆ ಮಾತ್ರ ಪ್ರವೇಶ ಹಾಗೂ ಕಾರ್ಯಕ್ರಮಗಳನ್ನು ನೆರವೇರಿಸಲು ಅವಕಾಶವಿದ್ದಿತ್ತು. ಶೂದ್ರರು ಹಾಗೂ ಪಂಚಮರು (ದಲಿತರು) ದೇವಾಲಯಗಳ ಬಳಿಯೂ ಸುಳಿದಾಡುವ ಹಾಗಿರಲಿಲ್ಲ. ಈ ದೇವಾಲಯಗಳನ್ನು ನಿರ್ಮಿಸಲು ಮೇಲಿನವರ ಪೂರ್ಣಪ್ರಮಾಣದ ಶ್ರಮವು ಅತ್ಯಾವಶ್ಯಕವಾಗಿ ಬಳಕೆಯಾಗುತ್ತಿದ್ದಿತ್ತು. ಆದರೆ ಅವರ ಆರ್ಥಿಕ ಹಾಗೂ ಸಾಮಾಜಿಕ ಜೀವನ ಹೇಳತೀರದಾಗಿದ್ದಿತ್ತು. ಹಂಪಿಯಲ್ಲಿರುವ ಸುಂದರವಾದ ಬೃಹತ್ ದೇವಾಲಯಗಳನ್ನು ಸಾವಿರಾರು ಶಿಲ್ಪಿಗಳು ಶ್ರಮಿಕರ ಸಹಾಯದಿಂದ ನಿರ್ಮಿಸಿದರೇನೂ ಅಷ್ಟೇ ಅನಂತರ ಅವರೂ ಸಹ ದೇವಾಲಯದ ಒಳಗಡೆ ಪ್ರವೇಶವನ್ನು ನಿಷೇಧಿಸಲ್ಪಡುತ್ತಿದ್ದರು. ಇಂಥಹ ಬೃಹತ್ ಸುಂದರ ದೇವಾಲಯಗಳನ್ನು ನಿರ್ಮಿಸಿದ್ದ ಶಿಲ್ಪಿಗಳು ಪ್ರೀತಿ, ವಿಶ್ವಾಸದಿಂದ ಸುಂದರ ಶಿಲ್ಪಗಳನ್ನು ನಿರ್ಮಾನ ಮಾಡದೆ. ರಾಜ ಹಾಗೂ ಬ್ರಾಹ್ಮಣರ ಭಯ ಭೀತಿಯಿಂದ ಕೆಲಸ ಮಾಡುವ ಪರಿಸ್ಥಿತಿ ಉದ್ಭವವಾಗಿತ್ತೆಂದು ಹೇಳಬಹುದು. ಏಕೆಂದರೆ ಈ ಬೃಹತ್ ದೇವಾಲಯಗಳನ್ನು ನಿರ್ಮಿಸಿದ್ದರೂ ಸಹ (ಒಂದೆರಡು ದೇವಾಲಯವನ್ನು ಹೊರತುಪಡಿಸಿ) ಶಿಲ್ಪಿಗಳ ಹೆಸರುಗಳು ಎಲ್ಲೂ ಕಂಡುಬರುವುದಿಲ್ಲ ಕೇವಲ ದೇವಾಲಯ ಕಟ್ಟಿಸಿದ ರಾಜ, ರಾಣಿ, ಪುರೋಹಿತ ಹೆಸರುಗಳು ಮಾತ್ರ ರಾರಾಜಿಸುತ್ತವೆ. ನಮ್ಮ ಜೀವನದ ಹಂಗನ್ನೆ ತೊರೆದು ಹಗಲಿರುಳೆನ್ನದೆ ದುಡಿದು ತಮ್ಮ ಬೆವರಿನ ಪ್ರತಿಯೊಂದು ಕಣದಲ್ಲಿಯೂ ಒಂದೊಂದು ಸುಂದರ ಶಿಲ್ಪಗಳನ್ನು ನಿರ್ಮಿಸಿದ ಅಂದಿನ ಶಿಲ್ಪಿ ಮಹೋನ್ನರಿಗೆ ಇಂದಿಗೂ ಎಂದೆಂದಿಗೂ ನಾವೆಲ್ಲರೂ ಕೃತಜ್ಞರಾಗಿರಲೇಬೇಕು. ವಿಜಯನಗರದ ಚರಿತ್ರೆಯನ್ನು ಸಂಸ್ಕೃತಿಯನ್ನು ಅಧ್ಯಯನ ಮಾಡಿದಾಗ ತಕ್ಷಣ ಮೂಡುವ ಪ್ರಶ್ನೆ ಅಥವಾ ಸಂದೇಹವೆಂದರೆ “ವಿಜಯನಗರ ಸಾಮ್ರಾಜ್ಯವು ಸಾಮ್ರಾಜ್ಯದ ವಿಸ್ತರಣೆಯಲ್ಲಿ ದೇವಾಲಯಗಳ ನಿರ್ಮಾಣದಲ್ಲಿ ಬೃಹತ್ ಸಾಮ್ರಾಜ್ಯವೆಂದು ಗುರುತಿಸಿಕೊಂಡಿತ್ತು. ಆದರೆ ಸಾಮಾಜಿಕವಾಗಿ ಇದೊಂದು ಪುಟ್ಟ ಸಂಸ್ಥಾನದಂತ್ತಿತ್ತೆಂದು ಹೇಳುವ ಸಂದೇಹಗಳು ಸಹಜವಾಗಿಯೇ ಮೂಡುತ್ತವೆ.

ಮೇಲೆ ತಿಳಿಸಿದ ಹಾಗೆ ಶಿಲ್ಪಿಗಳು ತಮ್ಮ ಎಷ್ಟೋ ಕಷ್ಟವನ್ನು ಬದಿಗೊತ್ತಿ ಸುಂದರ ಶಿಲ್ಪಗಳನ್ನು ಅವುಗಳಲ್ಲಿ ಸೌಂದರ್ಯದ ಭಾವನೆಗಳನ್ನು ತುಂಬಿ ನಿರ್ಮಿಸಿದ್ದಾರೆ. ಅಂದಿನ ಶಿಲ್ಪಿಗಳಿಗೆ ಶಿಲ್ಪದಲ್ಲಿ ಸೌಂದರ್ಯದ ಅಂಗವನ್ನು ಚೆನ್ನಾಗಿ ಅಳವಡಿಸಲು ಪ್ರಾಚೀನ ಕಾಲದಲ್ಲಿಯೇ ಬೆಳಕಿಗೆ ಬಂದಿದ್ದ ‘ಚಿತ್ರಲಕ್ಷಣ’ ಎಂಬ ಬೌದ್ಧ ಗ್ರಂಥವು ಆಧಾರವಾಗಿತ್ತೆನ್ನಬಹುದು. ಏಕೆಂದರೆ ಈ ಗ್ರಂಥವು ಶಿಲ್ಪದ ಸೌಂದರ್ಯದ ಬಗ್ಗೆ ಮಾರ್ಗದರ್ಶನ ನೀಡುವ ಗ್ರಂಥವಾಗಿ ರೂಪಗೊಂಡಿದೆ. ಈ ಗ್ರಂಥವು ದೇವತೆಗಳಿಗೂ, ರಾಜರಿಗೂ, ಸಾಧಾರಣ ಜನಿರಗೂ, ಪ್ರಾಣಿಗಳನ್ನು ಶಿಲೆಯಲ್ಲಿ ಶಿಲ್ಪಿಯು ನಿರ್ಮಿಸುವಾಗ ಯಾವ ರೀತಿ ನಿಯಮಗಳನ್ನು ಅನುಸರಿಸಬೇಕೆಂದು ಸ್ಪಷ್ಟಪಡಿಸುತ್ತದೆ. ಅಷ್ಟೇ ಅಲ್ಲದೆ ದೇಹದ ಆಕಾರವನ್ನು ವಿಭಜಿಸಿ, ಚಿಕ್ಕಪುಟ್ಟ ಪ್ರಮಾಣಗಳ್ನು ಕೂಡ ವಿವರಿಸುತ್ತದೆ. ಚಿತ್ರ ಲಕ್ಷಣವು ಹೇಳುವಂತೆ ಸುಂದರವಾದ ಮುಖವು ಎಲ್ಲಾ ದೃಷ್ಟಿಯಿಂದಲೂ ಅಕರ್ಷಕವಾಗಿರಬೇಕು. ಮುಖವು ತ್ರೀಕೋಣಾಕಾರವಾಗಿಯೂ, ಸೊಟ್ಟಾಗಿಯೂ, ಅಂಡಾಕಾರವಾಗಿಯೂ, ವರ್ತುಳಾಕಾರವನ್ನು ಹೋಲುವ ಮುಖಗಳೆ ಇರಬೇಕು. ಆದರೆ ಮನುಷ್ಯರನ್ನು ರಚಿಸುವಾಗ ಆಕಾರದಲ್ಲಿ ಸ್ವಲ್ಪ ಸ್ವಾತಂತ್ರ್ಯವನ್ನು ಸಂದರ್ಭಕ್ಕೆ ತಕ್ಕಂತೆ ಪರಿವರ್ತಿಸಬಹುದೆಂದು ಹೇಳುತ್ತದೆ. ದೇವತೆಗಳೂ, ರಾಜರಿಗೂ ಸೊಗಸಾದ ನೀಲವರ್ಣದ ಗುಂಗುರು ಕೂದಲು ಅವಶ್ಯಕವಾಗಿರುತ್ತದೆ. ಸ್ತ್ರೀರೂಪವೂ ಮನೋಹರವಾದ ಅಂಗಗಳ ಸಂಯೋಗದಿಂದ ಕೂಡಿರುವುದಾಗಿರುತ್ತದೆ. ಹಾಗೆಯೇ ಅವುಗಳು ಕೋಮಲವಾಗಿಯೂ ಯೌವನದಿಂದ ಕೂಡಿರುವ ಲಕ್ಷಣಗಳು ಸೂಚಿಸುವಂತಿವೆ. ಇವುಗಳೆಲ್ಲದರಲ್ಲಿಯೂ ಸಹ ಶಿಲ್ಪಿಗಳು ತಮ್ಮ ಮನದಲ್ಲಿ “ಭಾವನಾ ಸಂಪತ್ತಿನ ರೂಪವು ಸೌಂದರ್ಯ ರಹಿತವಾದುದೆಂದು” ಮನವರಿಕೆ ಮಾಡಿಕೊಂಡಿದ್ದರು.

ಶಿಲ್ಪದ ಸೌಂದರ್ಯದ ಬಗ್ಗೆ ವಾತ್ಸ್ಯಾಯನ ಕಾಮಸೂತ್ರವೂ ಸಹ ಹೆಚ್ಚಿನ ಮಾಹಿತಿ ನೀಡುತ್ತದೆ. ಈ ಗ್ರಂಥವು ಹೆಚ್ಚಾಗಿ ಚಿತ್ರಕಲೆಗೆ ಹೆಚ್ಚಿನ ಮಾಹಿತಿಯನ್ನು ದೊರಕಿಸುತ್ತದೆ. ಉದಾ. ಚಿತ್ರದಲ್ಲಿ ಬಣ್ಣ ಹಚ್ಚುವಾಗ ದೇಹದ ವಿವಿಧ ಅಂಗಗಳಿಗೆ ಕೊಡಬೇಕಾದ ಬಣ್ಣಗಳು ಯಾವುದೆಂಬುದನ್ನು ಅರಿವುಂಟಾಗುವಂತೆ ತಿಳಿಸುತ್ತದೆ. ಅದ್ದರಿಂದ ಇದು ಚಿತ್ರ ರಚೆನೆಗೆ ಮಾತ್ರ ಅನ್ವಯಿಸುತ್ತದೆಯೇ ವಿನಹಃ ಶಿಲ್ಪಕ್ಕಲ್ಲ ಎನ್ನಬಹುದು. ವಿಜಯನಗರದ ನರ್ತನಾ ಶಾಲೆಯ ವರ್ಣನೆಯಿಂದ ಆ ಅಂಶವು ಸ್ವಷ್ಟಗೊಳ್ಳುತ್ತದೆ.

ಶಿಲ್ಪಿಯು ತನ್ನ ಅರಿವಿನಲ್ಲಿ ಗ್ರಹಿಸಿರುವ ಹಾಗೆ (ಪುರಾಣಗಳು ಹೇಳುವ ಹಾಗೆ) ಶಿಲ್ಪವನ್ನು ನಿಮಿಸುತ್ತಿದ್ದನು. ಅವರು ನಿರ್ಮಿಸಿರುವ ಮೂರ್ತಿಗಳನ್ನು ಮೂರು ಭಾಗಗಳಾಗಿ ಗುರ್ತಿಸಬಹುದು. ಅವುಗಳೆಂದರೆ ನಾರಾಯಣ, ರಾಮ, ವಾಲಿ, ಇಂದ್ರ ಭಾಗವತ, ಅರ್ಜುನ ಮುಂತಾದವರುಗಳು ನರ ಮೂರ್ತಿಗಳಾದರೆ, ಹಿರಣ್ಯಕಶಿವು, ವೃತ, ಹಿರಣ್ಯಾಕ್ಷ, ರಾವಣ, ಕುಂಭಕರ್ಣ, ಮಹಿಷಾಸುರ, ಶರಭ, ನಿಶುಂಭ, ಜರಾಸಂದ ಮುಂತಾದವರುಗಳು ಅಸುರ ಮೂರ್ತಿಗಳಾಗಿಯೂ, ಭೈರವ, ವೀರಭದ್ರ, ಚಂಡಿ, ನರಸಿಂಹ, ವರಾಹ, ತ್ರಿವಿಕ್ರಮ ಮುಂತಾದವು ದೌದ್ರ ಮೂರ್ತಿಗಳೂ, ಹಾಗೆಯೇ ಗೋಪಾಲ, ಬಾಲಕೃಷ್ಣ, ಬಾಲಗಣಪತಿ, ಕುಮಾರಸ್ವಾಮಿ ಮುಂತಾದವುಗಳು ಬಾಲಮೂರ್ತಿಗಳಾದರೆ, ವಾಮನ, ಕೃಷ್ಣ ಮುಂತಾದವು ಕುಮಾರ ಮೂರ್ತಿಗಳಾಗಿರುತ್ತವೆ. ಮೇಲಿನ ಶಿಲ್ಪಗಳ ವೈವಿದ್ಯತೆಯನ್ನು ನೀವು ಹಂಪಿಯ ದೇವಾಲಯಗಳಲ್ಲಿ ಸ್ಪಷ್ಟವಾಗಿ ಗಮನಿಸಬಹುದು.

ವಿಜಯನಗರದ ಶಿಲ್ಪಗಳಲ್ಲಿನ ಭಂಗಿಗಳ ಬಗ್ಗೆ ಚರ್ಚಿಸುವುದಾದರೆ ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೆಳಕಂಡ ಭಂಗಿಗಳಲ್ಲಿ ಅವು ಇರುವುದು ಕಂಡುಬರುತ್ತದೆ. ಅವನ್ನು ಏಕಭಂಗಿ, ದ್ವಬಂಗಿ, ತ್ರಿಭಂಗಿ, ಅತಿಭಂಗಿಗಳೆಂದು ಹಾಗೂ ವಿವಿಧ ಭಂಗಿಗಳೆಂದು ಗುರುತಿಸಬಹುದಾಗಿದೆ. ಸಾಮಾನ್ಯವಾಗಿ ವಿಷ್ಣು ಪ್ರತಿಮೆಗಳು ಸಮಭಂಗಿಯಲ್ಲಿರುತ್ತವೆ. ಶಿವನ ಪ್ರತಿಮೆಗಳು ತ್ರಿಭಂಗಿಯಲ್ಲಿಯೂ ಅತಿಭಂಗಿಯಲ್ಲಿಯೂ ಇರುವುದು ಕಂಡುಬರುತ್ತದೆ. ಸ್ಥಾನಿಕ ದೇವಿಯರ ಪ್ರತಿಮೆಗಳು ಏಕ ಅಥವಾ ದ್ವಿತೀಯ ಭಂಗಿಯಲ್ಲಿ ಇರುವವು. ಇನ್ನೂ ಮುಂದುವರೆದು ಅಸನದ ಬಗ್ಗೆ ಗಮನಿಸಿದರೆ ತಿಳಿದುಬರುವ ಅಂಶವೆಂದರೆ ದೇವತೆಗಳು ಹಾಗೂ ಚಕ್ರವರ್ತಿಗಳು ಹೆಚ್ಚಾಗಿ ಪದ್ಮಾಸನದಲ್ಲಿರುವುದು ಕಂಡುಬರುತ್ತದೆ. ಹಾಗೆಯೇ ಹಿಂದೂ ದೇವತೆಗಳು ಧರಿಸುವ ಮುಕುಟ ಎಷ್ಟೋ ಬಗೆಯಲ್ಲಿರುವುದು ಸಂಸ್ಕೃತಿಯ ಒಂದು ಭಾಗವೇ ಆಗಿದೆ. ಉದಾಹರಣೆಗೆ ಹೇಳುವುದಾದರೆ ವಿಷ್ಣು, ಅದಿರಾಜ, ಸಾರ್ವಭೌಮಿರಿಗೆ ಕಿರೀಟವೇ ಮುಕುಟವಾದರೆ, ಬ್ರಹ್ಮನಿಗೆ ಜಟಾ ಮುಕುಟವಾಗಿರುತ್ತದೆ. ಪಾರ್ವತಿಗೆ ಮನೋನ್ಮನಿ ಮುಕುಟವಾದರೆ, ಸರಸ್ವತಿ, ಮಹಾರಾಣಿಯರು, ಸಾರ್ವಭೌಮಿಯರಿಗೆ ಕೇಶಬಂಧವೇ ಮುಕುಟವಾಗಿರುವುದು ಕಂಡುಬರುತ್ತದೆ. ಇವುಗಳ ಆಧಾರದ ಮೇಲೆಯೇ ನಾವು ಸಂಬಂಧಪಟ್ಟ ಶಿಲ್ಪಗಳನ್ನು ಗುರುತಿಸಬಹುದಾಗಿದೆ. ಹೆಚ್ಚಾಗಿ ಕಿರೀಟ ಮುಕುಟವೇ ಉಪಯೋಗದಲ್ಲಿರುವುದು ಕಂಡುಬರುತ್ತದೆ. ಇನ್ನೂ ಶಿಲ್ಪಗಳು ಗಂಡು, ಹೆಣ್ಣು, ದೇವಾನುದೇವತೆಗಳ ಶಿಲ್ಪಗಳನ್ನು ನಿರ್ಮಿಸುವಾಗ ಮುಖ, ಕಣ್ಣು, ತುಟಿ, ಕಿವಿ, ಹುಬ್ಬು, ಕೈ ಕಾಳು, ಎದೆ, ಹೊಟ್ಟೆಗಳ ನಿರ್ಮಾಣದಲ್ಲಿ ಅನುಸರಿಸುವ ರೀತಿಗಳಂತೂ ಅದ್ಬುತವಾಗಿವೆ. ಇದರಿಂದಾಗಿಯೇ ಇವು ಅತ್ಯಂತ ಹೆಚ್ಚಿನ ಸೌಂದರ್ಯವನ್ನು ತಮ್ಮ ಮಡಿಲಿನಲ್ಲಿ ಅಡಗಿಸಿಕೊಂಡು ಮೆರೆಯುತ್ತಿವೆ ಎಂದು ಹೇಳಬಹುದು.

.೩. ವಿಜಯನಗರದ ದೇವಾಲಯಗಳು

ಹಂಪಿ ಅಥವಾ ವಿಜಯನಗರದಲ್ಲಿ ಎಲ್ಲಿ ನೋಡಿದರಲ್ಲಿ ದೇವಾಲಯಗಳು ಕಂಡು ಬರುತ್ತವೆ. ಅದಕ್ಕೆ ಇದನ್ನು ದೇವಾಲಯಗಳ ಉದ್ಯಾನವನ ಎಂದು ಕರೆದಿರುವುದು ಚಿಕ್ಕ ಹಾಗೂ ಬೃಹತ್ ಆಕಾರದ ದೇವಾಲಯಗಳು ತಮ್ಮದೆ ಆದಂತಹ ಸಂಸ್ಕೃತಿಯನ್ನು ತಮ್ಮ ತಮ್ಮ ಮಡಿಲಿನಲ್ಲಿ ಅಡಗಿಸಿಕೊಂಡು ಬೆಚ್ಚಗೆ ಕುಳಿತಿವೆ ಎನ್ನಬಹುದು. ಹಂಪಿಯಲ್ಲಿ ಕಂಡುಬರುವ ದೇವಾಲಯಗಳನ್ನೂ, ಕೆಲವು ಪಟ್ಟಿ ಮಾಡುವುದಾದರೆ ವಿರೂಪಾಕ್ಷ, ಹಜಾರರಾಮ, ವಿಜಯವಿಠ್ಠಲ ಸ್ವಾಮಿ ದೇವಾಲಯಗಳು, ಕೋದಂಡರಾಮ, ಯಂತ್ರೋದ್ದಾರಕ ಅಂಜನೇಯ ದೇವಸ್ಥಾನ, ಅಚ್ಯುತರಾಮ ದೇವಸ್ಥಾನ, ಸಾಸಿವೆಕಾಳು ಮತ್ತು ಕಡಲೆಕಾಳು ಗಣೇಶ ವಿಗ್ರಹಗಳು, ಕೃಷ್ಣದೇವಸ್ಥಾನ, ವಿಷ್ಣಪಾದ ದೇವಸ್ಥಾನ, ಲಕ್ಷ್ಮೀನರಸಿಂಹ, ಬಡವಲಿಂಗ, ಸರಸ್ವತಿ ಗುಡಿ, ಉದ್ದಾನ ವೀರಭದ್ರ ದೇವಾಲಯ, ಚಂಡಿಕೇಶ್ವರ ದೇವಾಲಯ, ಗಾಣಗಿತ್ತಿ ಜೈನ ದೇವಾಲಯ ಕಮಲಾಪುರದ ಪಟ್ಟಾಭಿರಾಮ ದೇವಾಲಯ, ಅನಂತಶಯನ ಗುಡಿ, ಮಲ್ಲಪ್ಪನಗುಡಿ (ಮಲಪನಗುಡಿ) ಹಾಗೂ ಹೇಮಕೂಟದಲ್ಲಿರುವ ದೇವಾಲಯಗಳ ಸಮೂಹ, ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಹಾಗೂ ಪ್ರಮುಖವಾಗಿರುವ ದೇವಾಲಯಗಳ ವರ್ಣನೆಯನ್ನು ಹೇಳುವುದಾದರೆ

. ವಿರೂಪಾಕ್ಷ ದೇವಸ್ಥಾನ : ಈ ದೇವಾಲಯವು ವಿಜಯನಗರಕ್ಕಿಂತಲೂ ಹಿಂದಿನದೆಂದು ಕಂಡುಬರುತ್ತದೆ. ಏಕೆಂದರೆ ಈ ದೇವಾಲಯದ ಅವರಣದಲ್ಲಿರುವ ವಿವಿಧ ಭಾಗಗಳನ್ನು ಬೇರೆ ಬೇರೆ ಕಾಲದಲ್ಲಿ ರಚಿತವಾಗಿರುವುದು, ಮತ್ತೆ ಕೆಲವು ಭಾಗಗಳು ಜಿರ್ಣೋದ್ದಾರಗೊಂಡಿರುವುದು ಕಂಡುಬರುತ್ತದೆ. ಆದರೆ ಕಲ್ಯಾಣ ಮಂಟಪ ಹಾಗೂ ಗೋಪುರಗಳನ್ನು ನಿರ್ಮಿಸಿ ದೇವಾಲಯದ ಅವರಣದೊಳಗೇ ಇತರ ಗುಡಿಗಳನ್ನು ಕಟ್ಟಿಸಿದ ಖ್ಯಾತಿಯು ವಿಜಯನಗರದರಸರಿಗೆ ಸಲ್ಲುತ್ತದೆ. ಏಕೆಂದರೆ ಪಂಪಾಕ್ಷೇತ್ರದ ಉಲ್ಲೇಖವು ಬಾದಾಮಿ ಚಾಲುಕ್ಯರ ಅರಸನಾದ ವಿನಯಾದಿತ್ಯನ ತಾಮ್ರ ಶಾಸನದಲ್ಲಿ ಸಿಗುತ್ತದೆ. ಅದೇ ರೀತಿಯಲ್ಲಿ ಚಾಲುಕ್ಯ ಮನೆತನದ ಐದನೆಯ ವಿಕ್ರಮಾದಿತ್ಯ ಕ್ರಿ. ಶ. ೧೦೧೩ನೇಯ ಶಾಸನವೊಂದರಲ್ಲಿ ಪಂಪಾವತಿ ಎನಿಸಿದ ಮಹಾಕಾಲನಿಗೆ ಪಲ್ಲವ ವಂಶದ ವೃದ್ಧಮಬ್ಬರಸಿ ಎಂಬಾಕೆ ಭೂದಾನ ಮಾಡಿದಳೆಂದಿದೆ. ಅಂದು ಪಂಪಾವರಿಗೆ ಮಹಾಕಾಲನೆಂಬ ಹೆಸರಿದ್ದದು ತಿಳಿದುಬರುತ್ತದೆ. ಕ್ರ. ಶ.೧೧೯೯ರಲ್ಲಿ ಹುಟ್ಟಿದ ನಾಗವಂಶದ ಅರಸನಾದ ಕಲಿದೇವನ ಕಾಲದ ಶಾಸನದಲ್ಲಿ ಈ ದೇವರನ್ನು ವಿರೂಪಾಕ್ಷನೆಂದೂ, ದೇವಿಯನ್ನು ಪಂಪಾದೇವಿಯೆಂದೂ ಕರೆಯಲಾಗಿದೆ. ಇವುಗಳ ಆಧಾರದ ಮೇಲೆ ಇದೊಂದು ವಿಜಯನಗರದ ಪೂರ್ವದ ದೇವಾಲಯವೆಂದು ಹೇಳಬಹುದು.

ವಿಜಯನಗರ ಸಾಮ್ರಾಜ್ಯವು ೧೩೩೬ರಲ್ಲಿ ಸ್ಥಾಪನೆಯಾದಾಗ ಅಂದಿನ ರಾಜ, ಪ್ರಭು, ದೈವ, ಎಲ್ಲವೂ ಸಹ ವಿರೂಪಾಕ್ಷನೇ ಆಗಿದ್ದನು ಅಂದರೆ ಸಂಸ್ಥಾಪಕ ರಾಜರು ವಿರೂಪಾಕ್ಷನಿಗೆ ಮೇಲಿನ ಸ್ಥಾನ ನೀಡಿದ್ದರು ಎಂದರ್ಥ. ಪ್ರವೇಶ ದ್ವಾರದ ಮೇಲೆ ಸುಮಾರು ೧೬೫ ಅಡಿ ಎತ್ತರದ (೫೨.೬ ಮೀಟರ್) ಒಂಬತ್ತು ಅಂತಸ್ತಿನ ಬೃಹತ್ ಗೋಪುರವಿದೆ. ಇದನ್ನು ಎರಡನೆಯ ದೇವರಾಯನ ಕಾಲದಲ್ಲಿ ನಿರ್ಮಿತವಾಗಿದ್ದುದೆಂದು ಹೇಳಲಾಗಿದೆ. ಇದಕ್ಕೆ ಇಂದು ಬಿಷ್ಪಪ್ಪಯ್ಯ ಎಂಬ ಭಕ್ತನು ಕಟ್ಟಿಸಿದನೆಂದೂ ಅದಕ್ಕೆ ಇಂದು ಬಿಷ್ಪಪ್ಪಯ್ಯ ಗೋಪುರ ಎಂದು ಸಹ ಕರೆದುಕೊಂಡು ಬರುವ ರೂಢಿಯಿದೆ. ಒಳಗಡೆ ಕೃಷ್ಣದೇವರಾಯನು ಕಟ್ಟಿಸಿದ ಗೋಪುರವು ಅಷ್ಟೇನು ಎತ್ತರವಿಲ್ಲ. ಇದು ಮೂರಂತಸ್ತಿನ ಗೋಪುರ, ಕೃಷ್ಣದೇವರಾಯನು ಪಟ್ಟಾಭೀಷೇಕವಾದ ನೆನಪಿಗೆ ಕಟ್ಟಿಸಿದನೆಂದು ತಿಳಿದುಬರುವ ಈ ಗೋಪುರವು ರಾಯಗೋಪುರ ಎಂದೂ ಕರೆಸಿಕೊಳ್ಳುತ್ತಿದೆ.

ಒಳ ಭಾಗದಲ್ಲಿ ರಂಗಮಂಟಪ (ಕಲ್ಯಾಣಮಂಡಪ)ವಿದ್ದು ಇದು ವಿಜಯನಗರ ಶೈಲಿಯ ಕಲೆಗೆ ಕೈಗನ್ನಡಿಯಂತಿದೆ. ಅಂದಿನ ಕಾಲದ ಚಿತ್ರಕಲೆಯಿಂದಲೂ ಶೋಭಿಸುತ್ತಾ ನಿಂತಿದೆ.

. ಅಚ್ಯುತರಾಮ ದೇವರಾಯ : ಸೂಳೆ ಬಜಾರು ಎಂಬ ಪೇಟೆಯ ದಕ್ಷಿಣ ತುದಿಯಲ್ಲಿ ದೊಡ್ಡದಾದ ಅಚ್ಯುತರಾಯ ದೇವಾಲಯವಿದೆ. ಇದು ೧೫೩೯ರಲ್ಲಿ ವಿಜಯನಗರದ ದೊರೆ ಅಚ್ಯುತದೇವರಾಯ ಕಟ್ಟಿಸಿದನೆನ್ನಲಾಗಿದೆ. ಉತ್ತರಾಭಿಮುಖವಾಗಿರುವ ಈ ದೇವಾಲಯದಲ್ಲಿ ಅನೇಕ ಭಾಗಗಳಿದ್ದು. ಗರ್ಭಗುಡಿಯಲ್ಲಿದ್ದ ದೇವರು ತಿರುವೇಂಗಡನಾಥನೆನ್ನಲಾಗಿದ್ದು ಈ ದೇವಸ್ಥಾನಕ್ಕೆ ತಿರುವೇಂಗಡನಾಥ ದೇವಾಲಯವೆಂದೂ ಕರೆಯಲಾಗಿದೆ. ಇಲ್ಲಿಯೂ ಸಹ ವಿಜಯನಗರ ಶೈಲಿಯ ವಾಸ್ತುಗಳಾದ ಪೂರ್ವ ಪಶ್ಚಿಮ ಮತ್ತು ಉತ್ತರ ದಿಕ್ಕುಗಳಲ್ಲಿ ಗೋಪುರಗಳಿವೆ, (ಈಗ ಸ್ವಲ್ಪ ನಶಿಸಿವೆ) ಹೊರ ಒಳ ಅಂಗಗಳಲ್ಲಿ ಎರಡು ಬದಿಗಳಲ್ಲಿಯೂ ಕಂಬಗಳ ಮಂಟಪಗಳಿವೆ, ಮುಟ್ಟಿದ ಪ್ರದಕ್ಷಿಣಪಥ, ಅಂತರಾಳ, ಅರ್ಧಮಂಟಪ ಹಾಗೂ ಅಲಂಕೃತ ಮಹಾಮಂಟಪಗಳು ಒಂದಕ್ಕೊಂದು ಹೊಂದಿಕೊಂಡಿರುವುದು ಕಂಡುಬರುತ್ತದೆ.

. ವಿಜಯ ವಿಠಲ ದೇವಾಲಯ : ಹಂಪಿಗೆ ಕಲಶಪ್ರಾಯವಾಗಿರುವ ದೇವಸ್ಥಾನ ವಿರೂಪಾಕ್ಷ ದೇವಾಲಯವಾದರೆ, ತಿಲಕ ಪ್ರಾಯವಾಗಿರುವ ದೇವಾಲಯ ವಿಜಯ ವಿಠಲ ದೇವಾಲಯ ಎನ್ನಬಹುದು.

ಜಗತ್ತಿನಲ್ಲಿಯೇ ಖ್ಯಾತಿವೆತ್ತ ಈ ವಿಠಲಸ್ವಾಮಿ ದೇವಾಲಯವು ಕಲಾಕುಶಲತೆಯ ದೃಷ್ಟಿಯಿಂದ ಅತ್ಯಂತ ಸುಂದರವಾದದ್ದಾಗಿದೆ. ಅಲ್ಲಲ್ಲಿ ಹಾಳಾಗಿದ್ದರೂ ಸಹ ಶಿಲ್ಪ ವೈಭವಕ್ಕೆ ಕುಂದು ಬಂದಂತಿಲ್ಲ (ASI ನಿಂದ ಈಗ ದೇವಾಲಯದ ಜೀರ್ಣೋದ್ದಾರದ ಕೆಲಸ ನಡೆಯುತ್ತಿದೆ) ಕೃಷ್ಣದೇವರಾಯನು ೧೫೧೩ರಲ್ಲಿ ಈ ದೇವಾಲಯವನ್ನು ಕಟ್ಟಿಸಲು ತೊಡಗಿದನೆಂದು ಹೇಳಿರುವುದು ಕಂಡುಬಂದರೂ ಸಹ ಹದಿನಾಲ್ಕನೆಯ ಶತಮಾನದ ಆದಿ ಭಾಗದಲ್ಲಿ ಈ ದೇವಾಲಯ ಅಸ್ತಿತ್ವದಲ್ಲಿತ್ತೆಂಬುದು ಹರಿಭಟ್ಟನಿಂದ ರಚಿತವಾದ “ಉತ್ತರ ನರಸಿಂಹ ಪುರಾಣ”ದಿಂದ ತಿಳಿದುಬರುತ್ತದೆ. ಆದರೆ ಅಂದು ಒಂದು ಚಿಕ್ಕ ದೇವಾಲಯವಾಗಿದ್ದನ್ನು ಕೃಷ್ಣದೇವರಾಯನು ಬೃಹತ್ ದೇವಾಲಯವನ್ನಾಗಿ ನಿರ್ಮಿಸಲು ಪಣತೊಟ್ಟು ಸುಮಾರು ಐವತ್ತು ವರ್ಷಗಳು ಸತತವಾಗಿ ಸಾವಿರಾರು ಶಿಲ್ಪಿಗಳು ಹಗಲಿರುಳು ದುಡಿಯಬೇಕಾಯಿತು. ಇದರ ಫಲವಾಗಿಯೇ ವಿಜಯನಗರದ ವಾಸ್ತುಶಿಲ್ಪವು ಇಲ್ಲಿ ಕಲ್ಲರಳಿ ಹೂವಾಗಿ ಕಂಗೊಳಿಸುತ್ತಿದೆ. ಕೃಷ್ಣದೇವರಾಯನು ಕಳಿಂಗದ ದಿಗ್ವಿಜಯದ ನಂತರ ಈ ದೇವಾಲಯವನ್ನು ಕಟ್ಟಿಸಿದನೆಂದು ಶಾಸನವು ತಿಳಿಸುತ್ತದೆ. ಈ ದೇವಾಲಯದಲ್ಲಿ ಗರ್ಭಗೃಹವಿದ್ದರೂ ಸಹ ಯಾವ ವಿಗ್ರಹವನ್ನು ಪ್ರತಿಷ್ಠಾಪಿಸಿರಲಿಲ್ಲವೆಂದೂ ಕಂಡುಬರುತ್ತದೆ. ಆದರೆ ಕೆಲವು ಆಧಾರಗಳ ಪ್ರಕಾರ ತಾಳಿಕೋಟೆ ಯುದ್ಧದ ವರೆವಿಗೂ ಇಲ್ಲಿ ಪೂಜೆಗಳು ನಡೆಯುತ್ತಿದ್ದವೆಂದು ತಿಳಿಸುತ್ತವೆ.

ಅಂಗಳದ ಸುತ್ತ ಮಂಟಪದ ಸಾಲುಗಳಿವೆ, ಕಲ್ಯಾಣ ಮಂಟಪ, ಉತ್ಸವ ಮಂಟಪ, ನೂರು ಕಂಬಗಳ ಮಂಟಪ ಮತ್ತು ಮುಂಭಾಗದಲ್ಲಿ ಕಲ್ಲಿನ ರಥ ಇವೆ. ಇಲ್ಲಿನ ಕಲ್ಲಿನ ರಥವನ್ನು ಒಂದೇ ಶಿಲೆಯಿಂದ ಕೆತ್ತಲಾಗಿದೆ. ಇದೊಂದು ಸುಂದರವಾದ ರಚನೆ, ಸಾಮಾನ್ಯವಾಗಿ ವಿಷ್ಣು ದೇವಾಲಯಗಳ ಮುಂದೆ ಗರುಡನಿಗೆಂದು ಒಂದು ಸಣ್ಣ ಗುಡಿಯನ್ನು ಕಟ್ಟುವುದು ವಾಡಿಕೆ. ಇಲ್ಲಿ ಕಲ್ಲಿನ ರಥವೇ ಗರುಡನ ಗುಡಿಯಾಗಿದೆ. ಎಂದು ಇತಿಹಾಸಗಾರರ ಅಭಿಪ್ರಾಯ, ರಥದ ಗರ್ಭಗೃಹದಲ್ಲಿ ಗರುಡನ ವಿಗ್ರಹವಿದೆ. ರಥದ ಮೇಲೆ ಇಟ್ಟಿಗೆಯ ಒಂದು ವಿಮಾನವಿತ್ತೆಂದೂ ಹೇಳಬಹುದು. ಆದರೆ ಇಂದು ಸಂಪೂರ್ಣ ಕಾಣೆಯಾಗಿದೆ. ಕಲ್ಲಿನ ರಥದಲ್ಲಿ ಸೂಕ್ಷ್ಮ ಕೆತ್ತನೆಯ ಕೆಲಸವನ್ನು ನೋಡಿ, ನಮ್ಮ ಸಂಸ್ಕೃತಿಯ ಎಳೆಎಳೆಯಾಗಿ ಹೊರಹೊಮ್ಮುವಂತೆ ಮಾಡುತ್ತದೆ. ಮಹಾ ಮಂಟಪದಲ್ಲಿ ನಲವತ್ತು ಕಂಬಗಳಿದ್ದು ಅವುಗಳೆಲ್ಲವೂ ಸಹ ಸಮಾನಾಂತರದಲ್ಲಿವೆ. ಒಂದೊಂದು ಕಂಬವೂ ದೊಟ್ಟ ಗಾತ್ರಕ್ಕಿದ್ದು, ಶಿಲ್ಪಕಲೆ ಅಪೂರ್ವವೆನಿಸುತ್ತದೆ. ಸಣ್ಣ ಕಂಬಗಳ ಮೇಲೆ ಮೆಲ್ಲಗೆ ತಟ್ಟಿದಾಗ ಸಂಗೀತದ ಸಪ್ತಸ್ವರಗಳು ಹೊರಹೊಮ್ಮುತ್ತವೆ. ಈ ನಾದ ಮಾಧರ್ಯದಿಂದ ಶಿಲೆಗಳು ಸಂಗೀತ ಹಾಡುತ್ತಿವೆಯೋ ಎನ್ನುವಂತೆ ಮಾಡುತ್ತದೆ.

. ಹಜಾರರಾಮ ದೇವಾಲಯ : ಕೃಷ್ಣದೇವರಾಯನು ಹಂಪಿಯಲ್ಲಿ ಕಟ್ಟಿಸಿದ ದೇವಾಲಯಗಳಲ್ಲಿ ಹಜಾರರಾಮ ದೇವಾಲಯವೂ ಒಂದು, ಇದನ್ನು ಅವನ ದಿಗ್ವಿಜಯದ ಸಂಕೇತವಾಗಿ ಕಟ್ಟಿಸಿದ್ದು ಎಂಬ ಅಭಿಪ್ರಾಯವಿದೆ. ಈ ದೇವಾಲಯವು ರಾಮಾಯಣಕ್ಕೆ ಸಂಬಂಧಿಸಿದ ಅನೇಕ ಚಿತ್ರಗಳನ್ನು ಹೊಂದಿರುವುದರಿಂದಲೇ ಇದಕ್ಕೆ ಹಜಾರರಾಮ ಎಂದು ಹೆಸರು ಬರಲು ಕಾರಣವೆಂದು ಇತಿಹಾಸಗಾರರು ನಂಬಿದ್ದಾರೆ, ಹಜಾರವೆಂದರೆ ತೆಲುಗಿನಲ್ಲಿ ಸಭಾಮಂಟಪ ಎಂಬ ಅರ್ಥವಿದೆ ಹಾಗೆಯೇ ಅರಮನೆಯ ದ್ವಾರಮಂಟಪ ಎಂಬ ಇನ್ನೊಂದು ಅರ್ಥವೂ ಇದೆ. ಈ ದೇವಾಲಯವು ರಾಜರ ಅರಮನೆಯ ಹೆಬ್ಬಾಗಿಲಿನಲ್ಲಿಯೇ ಇರುವುದರಿಂದ ಈ ಹೆಸರೂ ಬಂದಿರಬಹುದೆಂದು ಕೆಲವರ ಅಭಿಪ್ರಾಯ.

ದೇವಾಲಯದ ಹೊರಗೋಡೆಯು ಸುಂದರವಾದ ಕಲೆಯಿಂದ ಮೈತುಂಬಿಕೊಂಡು ಅಂದಿನ ಇತಿಹಾಸವನ್ನು ಸೂಚಿಸುತ್ತಿದೆ. ದೇವಾಲಯದ ಒಳಗಡೆ ರಾಮಾಯಣ, ಭಗವದ್ಗೀತೆಗೆ ಸಂಬಂಧಿಸಿದ ಚಿತ್ರಗಳು, ಕಂಗೊಳಿಸುತ್ತವೆ. ಅವುಗಳಲ್ಲಿ ದಶರಥನಿಗಾಗಿ ಋಷ್ಯಶೃಂಗ ಮುನಿ ಪುತ್ರಕಾಮೇಷ್ಠಿ ಯಾಗ ಮಾಡುತ್ತಿರುವುದು, ಸೀತಾ ಸ್ವಯಂವರ ಸಂದರ್ಭದಲ್ಲಿ ಜನಕಮಹಾರಾಜನ ಪರಿವಾರದವರು ಮಹಾಭಾರತದ ಶಿವದನಸ್ಸು ಹೊತ್ತು ತರುತ್ತಿರುವುದು ಕಿಷ್ಕಿಂದೆಯಲ್ಲಿ ರಾಮನು ಏಳು ತಾಳೆ ವೃಕ್ಷಗಳನ್ನು ಒಂದೇ ಬಿಲ್ಲಿನಿಂದ ತುಂಡು ಮಾಡುತ್ತಿರುವುದು. ಹನುಮಂತನಿಂದ ರಾಮನಿಗೆ ಚೂಡಾಮಣಿ ಪ್ರಧಾನ, ನರಸಿಂಹ ಹಾಗೂ ಅವನ ತೊಡೆಯ ಮೇಲೆ ಲಕ್ಷ್ಮೀ, ಕೃಷ್ಣನ ಲೀಲಾ ದೃಶ್ಯಗಳು, ವಾಲಿಸುಗ್ರೀವರ ಕಾಳಗ ಮೊದಲಾದವುಗಳು ಕಣ್ಣಿಗೆ ಆನಂದ ತರುತ್ತವೆ. ಹೇಳುವುದಾದರೆ ಹೊರಗೋಡೆಯ ಮೇಲೆ ಎಲ್ಲ ಹಿಂದೂ ದೇವಾನುದೇವತೆಗಳ ಚಿತ್ರವಿರುವುದು ಕಂಡುಬರುತ್ತದೆ. ಬುದ್ಧನಿಗೂ ಇಲ್ಲಿ ಸ್ಥಾನ ದೊರೆತಿರುವುದು ವಿಶೇಷವಾಗಿದೆ.

ದೇವಾಲಯದ ಹೊರಗೋಡೆಗಳಲ್ಲಿಯೂ ಸಹ ಕೆತ್ತನೆಗಳಿರುವುದು ಇಡೀ ದೇವಾಲಯದ ಆನಂದವನ್ನು ಶ್ರೀಮಂತಗೊಳಿಸಿದೆ ಎನ್ನಬಹುದು. ನಮ್ಮ ಸಂಸ್ಕೃತಿಯ ಪ್ರತೀಕಗಳಾಗಿ ಇವು ಇಂದಿಗೂ ಕಂಗೊಳಿಸುತ್ತಿವೆ. ಹೊರ ಗೋಡೆಗಳಲ್ಲಿ ಐದು ಹಂತದಲ್ಲಿ ಚಿತ್ರಗಳಿದ್ದು ಆನೆಗಳು ಹಾಗೂ ಅದರ ಮೇಲೆ ಸವಾರರು, ಕುದುರೆಗಳು ಹಾಗೂ ಅವನ್ನು ಎಳೆಯೊಯ್ಯುತ್ತಿರುವ ಪುರುಷರು ಇಲ್ಲವೆ ಸವಾರರು, ರಥ ಕಾಲಾಳುಗಳು ಹಾಗೂ ಈಟಿ, ಭರ್ಚಿ ಹಿಡಿದು ಸಾಗುತ್ತಿರುವ ದೈನಿಕರು, ನೃತ್ಯಗಾರ್ತಿಯರನ್ನು ಇಲ್ಲಿನ ಉಬ್ಬು ಶಿಲ್ಪಗಳಲ್ಲಿ ಕಡೆಯಲಾಗಿದೆ. ಹಜಾರರಾಮ ದೇವಾಲಯವು ಹಿಂದೂ ಧರ್ಮದ ಸಂಸ್ಕೃತಿಯನ್ನು ಹೊರಚೆಲ್ಲುತ್ತಿರುವ ಒಂದು ಕಲೆ ಎನ್ನಬಹುದಾಗಿದೆ. ದೇವಾಲಯವು ಒಳ ಹಾಗೂ ಹೊರ ಕೆತ್ತನೆಯಿಂದಾಗಿ ಸೌಂದರ್ಯಮಯವಾಗಿದೆ.

ಹೇಮಕೂಟ : ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗುವುದಕ್ಕೂ ಹಿಂದೆಯೇ ಆಧಾರಗಳ ಪ್ರಕಾರ ಕಂಪಿಲರಾಯರ ಕಾಲದಲ್ಲಿ ಹಂಪಿಯಲ್ಲಿ ಕೆಲವು ಕದಂಬ ನಾಗರ ಶೈಲಿಯ (ಸಮಕಟ್ಟಾದ ಅಂತಸ್ತುಗಳ) ದೇವಾಲಯಗಳು ರಚನೆಗೊಂಡವು. ಅವು ಇಂದಿಗೂ ಸುರಕ್ಷಿತವಾಗಿ ಉಳಿದುಕೊಂಡು ಪವಿತ್ರಕ್ಷೇತ್ರವೆನ್ನಿಸಿಕೊಂಡು ಬೆಳೆದುಬರುತ್ತಿವೆ. ಡಾ. ಸಿಂದಗಿ ರಾಜಶೇಖರರವರು ಇವುಗಳ ಕಾಲವನ್ನು ಕ್ರಿ.ಶ. ೧೩೫೦ರ ಮೊದಲು ನಿರ್ಮಾಣವಾಗಿರಬೇಕೆಂದು ಸೂಚಿಸುತ್ತಾರೆ. ಇದು ಸತ್ಯವೆಂದೂ ಹೇಳಬಹುದಾಗಿದೆ. ಇಲ್ಲಿರುವ ದೇವಾಲಯಗಳು ತಮ್ಮದೇಯಾದ ವಿಶಿಷ್ಟ ಲಕ್ಷಣಗಳನ್ನು ಹೊಂದಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ,

೧. ಗರ್ಭಗೃಹ ಅರ್ಧ ಮಂಟಪ ಮತ್ತು ಮಹಾಮಂಟಪಗಳುಳ್ಳ ಈ ಆಲಯದ ಗರ್ಭಗರಹವನ್ನು ನೀಳವಾದ, ಆಯಾತಾಕಾರದ, ನುಣುಪುಗೊಳಿಸಿದ ಕಲ್ಲುಗಳಿಂದ ಕಟ್ಟಲಾಗಿದೆ.

೨. ಅರ್ಥ ಮಂಟಪ ಮತ್ತು ಮಹಾಮಂಟಪಗಳಲ್ಲಿ ಘನಾಕೃತಿಯ ಭಾರವಾದ ಸರಳವಾದ ಕಂಬಗಳಿವೆ.

೩. ಗರ್ಭಗೃಹದ ಮೇಲೆ ಮೆಟ್ಟಲು ಮೆಟ್ಟಿಲುಗಳಾಗಿ ವಿಸ್ತಾರ ಕಡಿಮೆಯಾಗುತ್ತಾ ಹೋಗುವ ಗೋಪುರಗಳಿರುವುದು.

೪. ಬೆಣಚು ಕಲ್ಲಿನಲ್ಲಿ ನಿರ್ಮಿಸಿದ ಈ ದೇವಾಲಯಗಳ ಅಧಿಷ್ಠಾನ ಸರಳ ಮತ್ತು ನಿರಲಂಕಾರವಾಗಿದೆ.

೫. ಹೊರಗೋಡೆಗಳ ವೈವಿದ್ಯವಿಲ್ಲದ, ನಿದ್ವಿಶೇಷ ಸಾದಾ ಗೋಡೆಗಳಾಗಿವೆ.

೬. ಪ್ರವೇಶ ಮಂಟಪವು ಅರ್ಧತೆರೆದಿದ್ದು ಇದರಲ್ಲಿ ಕೂಡಲು ಸುತ್ತಲೂ ಕಲ್ಲಿನ ಕಟ್ಟೆಯಿದೆ. ಇದರ ಮೇಲೆ ಚಿಕ್ಕ ಪ್ರಮಾಣದ ಕಂಬಗಳನ್ನು ಸೇರಿಸಲಾಗಿದೆ.

ಹೇಮಕೂಟದ ಮೇಲಿನ ಈ ದೇವಾಲಯಗಳ ಸಮೂಹ ಶೈವ ಮೂಲದವಾಗಿದ್ದು ಕ್ರಿ.ಶ. ಒಂಬತ್ತರಿಂದ ಹದಿನಾಲ್ಕನೆ ಶತಮಾನದ ಆರಂಭ ಕಾಲದವರೆಗಿನ ಅವಧಿಯಲ್ಲಿ ಕಟ್ಟಿಸಿರಬಹುದೆಂದು ತಿಳಿಯಬಹುದಾಗಿದೆ. ಇವು ಹಂಪಿಯ ಪರಿಸರದಲ್ಲಿ ಕಂಡು ಬರುವ ಬಹು ಹಿಂದಿನ ರಚನೆಗಳು ಎನ್ನಬಹುದು. ಈ ರಚನೆಯಲ್ಲಿ ಹೋಲುವ ದೇವಾಲಯಗಳು ಕಮಲಾಪುರದ ಪ್ರವಾಸಿ ಬಂಗಲೆಯ ಸಮೀಪದಲ್ಲಿ ಕಂಡುಬರುತ್ತದೆ. ಇದನ್ನು ಇಂದು ಗಾಣಗಿತ್ತು ಗುಡಿ ಎಂದು ಕರೆಯಲಾಗುತ್ತಿದೆ.

.೪. ವಿಜಯನಗರದ ಚಿತ್ರಕಲೆ

ಪ್ರಾಚೀನ ಕಾಲದಿಂದಲೂ ಚಿತ್ರಕಲಾ ಸಂಸ್ಕೃತಿಯು ಮಾನವರಲ್ಲಿ ಮನೆಮಾಡಿಕೊಂಡಿತ್ತೆನ್ನಬಹುದು. ಒಂದು ದೃಷ್ಟಿಯಲ್ಲಿ ಈ ಸಂಸ್ಕೃತಿಯು ಕಣ್ಣಿಗೆ ಕಾಣದ ಕೇವಲ ಆಚರಣೆಗಳಲ್ಲಿ ಮಾತ್ರ ಮನಸ್ಸಿಗೆ ಗೋಚರವಾಗುವ ಕಲ್ಪನೆಯಾಗಿತ್ತೆನ್ನಲೂಬಹುದು. ಈ ಚಿತ್ರಕಲಾ ಸಂಸ್ಕೃತಿಯು ಸಾಮಾನ್ಯವಾಗಿ ಮಾನವ ಜನಾಂಗಗಳು ಎಲ್ಲೆಲ್ಲಿ ಒಟ್ಟೊಟ್ಟಿಗೆ ವಾಸ ಮಾಡಲು ಆರಂಬಿಸಿದವೋ ಅಲ್ಲೆಲ್ಲ ಬೇರೆ ಬೇರೆಯಾಗಿ ಪ್ರಾದೇಶಿಕವಾಗಿ ಭಿನ್ನ ಭಿನ್ನ ರೀತಿಯಲ್ಲಿ ಬೆಳೆಯಲಾರಂಬಿಸಿತು. ಕಾಲ ಕಳೆದಂತೆ ಸಂಸ್ಕೃತಿಯು ನಾಗರಿಕತೆಯಾಗಿ ವಿಕಾಸಗೊಳ್ಳುತ್ತಿರುವುದು ನಮಗೆಲ್ಲ ತಿಳಿದಿರುವ ವಿಷಯವೇ, ವಿಜಯನಗರದರಸರ ಪೂರ್ವದಲ್ಲಿಯೂ ಚಿತ್ರಕಲೆ ಕಂಡುಬಂದರೂ ಸಹ ಮೇಲೆ ತಿಳಿಸಿದ್ದಂತೆ ಸಂಸ್ಕೃತಿಯಲ್ಲಿ ಬದಲಾವಣೆಗೊಂಡ ವಿಜಯನಗರದ ಅರಸರು ನಾಗರಿಕತೆಯಲ್ಲಿ ಬದಲಾವಣೆ ಕಾಣಲಾರಂಭಿಸಿದ್ದರಿಂದ ಕಲೆಗಳೂ ಸಹ ವೈವಿಧ್ಯಮಯವಾಗಿ ಬೆಲೆಯಿತ್ತೆನ್ನಬಹುದಾಗಿದೆ. ಅಂದಿನ ಕಲೆಗಾರರು ಕಲೆಯನ್ನು ಕಲೆಗಾಗಿ ಕಲೆ, ಆನಂದಕ್ಕಾಗಿ ಕಲೆ, ಪ್ರವೃತ್ತಿಗಾಗಿ ಕಲೆ ಎಂದು ನಂಬಿದವರಾಗಿದ್ದರು ಎಂದರೆ ತಪ್ಪಾಗದು.

ಹಂಪಿಯ ವಿರೂಪಾಕ್ಷ ದೇವಾಲಯದ ಕಲ್ಯಾಣ ಮಂಟಪದ ಒಳ ಮಾಳಿಗೆಯ ಮೇಲೆ ಕಂಡುಬರುವ ಶಿವಾಪಾರ್ವತಿಯರ ಕಲ್ಯಾಣ ವೈಭವದ ಇನ್ನಾವ ದೇವಾಲಯಗಳಲ್ಲಿಯೂ ಅಥವಾ ಬೇರೆ ಎಲ್ಲೂ ವಿಜಯನಗರದ ಚಿತ್ರಕಲೆಯು ಕಂಡುಬರುವುದಿಲ್ಲ. ಆದರೆ ಹಂಪಿಗೆ ಮೂರು ಮೈಲಿಗಳ ದೂರದಲ್ಲಿರುವ ಆನೆಗುಂದಿಯ ಅರಮನೆಯಲ್ಲಿ ಮಾತ್ರ ಚಿತ್ರಕಲೆ ಇರುವುದು ಕಂಡುಬರುತ್ತದೆ. ಇದಕ್ಕೆ ಅಲ್ಲಿನ ಹುಚ್ಚಪ್ಪಯ್ಯ ಮಠ ನಿದರ್ಶನವಾಗಿದೆ. ವಿರೂಪಾಕ್ಷ ದೇವಾಲಯದ ಕಲ್ಯಾಣ ಮಂಪಟದಲ್ಲಿರುವ ಚಿತ್ರಕಲೆಯು ಪುರಾಣದ ವಿಷಯಗಳನ್ನು ಒಳಗೊಂಡಿದೆ. ಅಲ್ಲಿ ತ್ರಿಪುರ ಸಂಹಾರಿ, ಕಾಮದಹನ ಮೂರ್ತಿ ಮೊದಲಾದ ಶಿವನ ರೂಪಗಳ್ಳುಳ್ಳ ಹಲವು ವರ್ಣ ಚಿತ್ರಗಳು, ಅರ್ಜುನನ ಮತ್ಸ್ಯಭೇದ, ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಹೋಗುತ್ತಿರುವ ಸನ್ಯಾಸಿಯ ಚಿತ್ರ, ದಶಾವತಾರ, ಶಿವಪಾರ್ವತಿಯರ ಕಲ್ಯಾಣದ ವೈಭವಗಳು ಚಿತ್ರಿತವಾಗಿದೆ. ಇಲ್ಲಿನ ಸನ್ಯಾಸಿಯ ಚಿತ್ರ ವಿದ್ಯಾರಣ್ಯರದೆಂದು ಇತಿಹಾಸಕಾರರು ತಿಳಿಸುತ್ತಾರೆ. ಈ ಚಿತ್ರಗಳು ವಿಜಯನಗರದ ಕಾಲದ ಚಿತ್ರಕಲೆಯ ಕುರುಹಾಗಿ ಇಂದಿಗೂ ಉಳಿದಿದೆ ಎನ್ನಬಹುದಾಗಿದೆ.

ವಿಜಯನಗರದ ಚಿತ್ರಕಲೆಯು ಹಂಪಿ ಹಾಗೂ ಆನೆಗುಂದಿಗಳಲ್ಲದೆ ನಾಡಿನ ವಿವಿಧ ಪ್ರದೇಶ ಹಾಗೂ ತಮಿಳುನಾಡಿನ ದೇವಾಲಯಗಳಲ್ಲಿಯೂ ಕಂಡುಬರುತ್ತದೆ. ಇದರಲ್ಲಿ ಪ್ರಮುಖವಾಗಿ ಹಿಂದೂಪುರ ತಾಲೂಕಿನಲ್ಲಿರುವ ಲೇಪಾಕ್ಷಿಯ ಪಾಪನಾಥೇಶ್ವರ ದೇವಾಲಯ, ಇದರ ಕಾಲವನ್ನು ಕ್ರಿ.ಶ. ೧೫೩೫ ಎಂದು ಪರಿಗಣಿಸಲಾಗಿದೆ. ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲ್ಲೂಕಿನ ಸೋಮಪಲ್ಲಿಯ ಚನ್ನಕೇಶವ ದೇವಾಲಯ, ಇದರ ಕಾಲ ಕ್ರಿ.ಶ. ೧೫೫೦; ಕಾಂಚೀಪುರದ ವರದ ರಾಜಸ್ವಾಮಿಯ ದೇವಸ್ಥಾನದಲ್ಲಿ ಇದರ ಕಾಲ ಕ್ರಿ.ಶ. ೧೫೦೯ – ೧೫೩೦; ಕಾಂಚೀಪುರದ ಹತ್ತಿರವಿರುವ ಜಿನಕಂಚಿಯ ವರ್ಧಮಾನ ದೇವಾಲಯದಲ್ಲಿ, ಇದರ ಕಾಲ ಕ್ರಿ.ಶ. ೧೩೭೮ – ೧೪೦೪; ಈ ಪ್ರದೇಶಗಳಲ್ಲಿಯೂ ವಿಜಯನಗರದ ಚಿತ್ರಕಲೆಯು ಉಳಿದುಕೊಂಡು ಅಧ್ಯಯನಕ್ಕೆ ಯೋಗ್ಯವಾಗಿ ಬೆಳೆದು ಬಂದಿದೆ.

ಲೇಪಾಕ್ಷಿಯ ಪಾಪನಾಥೇಶ್ವರ ದೇವಾಲಯದಲ್ಲಿರುವ ಕೆಲವು ಚಿತ್ರಗಳು ಜೈನ ಶೈಲಿಯಲ್ಲಿ ಮತ್ತೆ ಕೆಲವುಗಳು ತಂಜಾವೂರಿನ ಶೈಲಿಯಲ್ಲಿ ರಚಿಸಲ್ಪಟ್ಟಿವೆ ಎನ್ನಬಹುದಾಗಿದೆ. ಏಕೆಂದರೆ ತಂಜಾವೂರಿನ ಶೈಲಿಯಲ್ಲಿ ಬಿಡಿಸಿದ ಚಿತ್ರಗಳು ವಿರೂಪಾಕ್ಷ ದೇವಸ್ಥಾನದ ಚಿತ್ರಗಳನ್ನು ಸಂಪೂರ್ಣವಾಗಿ ಹೋಲುವುವು. ಲೇಪಾಕ್ಷಿಯ ವರ್ಣಚಿತ್ರಗಳನ್ನು ಕರಿ, ಹಸಿರು, ಬೂದುಬಣ್ಣ, ಹಳದಿ ಮಿಶ್ರಿತ ಕಂದುಬಣ್ಣ ಮತ್ತು ಕಿರಿಮಂಚಿ ಬಣ್ಣಗಳನ್ನು ಬಳಸಿ ಚಿತ್ರಿಸಲಾಗಿದೆ. ಇವು ಇಂದಿಗೂ ಸಹ ಮನಮೋಹಕವಾಗಿವೆ.

ಇತಿಹಾಸಗಾರರ ಪ್ರಕಾರ ಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರದ ಚಿತ್ರಕಲೆಯು ಉನ್ನತ ಸ್ಥಿತಿಯನ್ನು ಪಡೆದಿದ್ದಿತ್ತೆಂದೂ ಅವನ ನಂತರ ಕ್ಷೀಣಿಸತೊಡಗಿತ್ತೆಂದೂ ಅಭಿಪ್ರಾಯಪಡುತ್ತಾರೆ. ೧೫೫೬ರಲ್ಲಿ ವಿಜಯನಗರದ ನಿರ್ಣಾಯಕ ಯುದ್ಧದ ತರುವಾಯ ಸಾಮ್ರಾಜ್ಯದಲ್ಲಿ ಅಶಾಂತಿ ತುಂಬಿದ ಪ್ರಯುಕ್ತ ಚಿತ್ರಕಲೆಗೆ ಯಾವುದೇ ರೀತಿಯ ಪೋಷಣೆ ದೊರೆಯಲಿಲ್ಲವೆನ್ನಬಹುದು.

***