ಇಕ್ಕೇರಿ ಅರಸರ ಆರ್ಥಿಕ ಪದ್ಧತಿಯನ್ನು ತಿಳಿಯಲು ಸಾಹಿತ್ಯಾಧಾರಗಳು ಹಾಗೂ ಶಾಸನಾಧಾರಗಳು ಹೆಚ್ಚಿನ ಪ್ರಮಾಣದಲ್ಲಿ ಸಹಕಾರಿಯಾಗುತ್ತವೆ. ಅಂದಿನ ಕಾಲದ ವ್ಯವಸಾಯ ಪದ್ಧತಿ, ತೆರಿಗೆ ಸಂಗ್ರಹಣೆ ಹಾಗೂ ವಸೂಲಿಯ ರೀತಿ, ನಾಣ್ಯ ವ್ಯವಸ್ಥೆ, ವಿದೇಶಿ ವಿನಿಮಯ, ವಿಜಯನಗರದೊಂದಿಗೆ ಇವರ ಆರ್ಥಿಕ ಒಪ್ಪಂದ ಮೊದಲಾದ ವಿಷಯಗಳು ವಿವರವಾಗಿ ಇವುಗಳಿಂದ ತಿಳಿದುಬರುತ್ತವೆ.

ಕೃಷಿ

ಪ್ರಾಚೀನ ಕಾಲದಿಂದಲೂ ಭಾರತೀಯರ ಪ್ರಮುಖ ಕಸುಬೇ ಕರಸಿ, ಆದರೆ ಈ ಕೃಷಿ ಪದ್ಧತಿಯು ಭಾರತದಲ್ಲಿ ಮಳೆಯೊಡನೆ ಜೂಜಾಟವಾಡುತ್ತಲೆ ಬೆಳೆದು ಬರುತ್ತಿದೆ. ನಂತರದಲ್ಲಿ ನದಿಗಳಿಗೆ ಸೂಕ್ತ ಸ್ಥಳಗಳಲ್ಲಿ ಒಡ್ಡುಗಳನ್ನು ನಿರ್ಮಿಸಿ ನಂತರದಲ್ಲಿ ಕೆರೆ, ಕಟ್ಟೆ, ಬಾವಿಗಳನ್ನು ನಿರ್ಮಿಸಿ ಕರಷಿಗೆ ಯೋಗ್ಯವಾಗುವ ನೀರನ್ನು ಶೇಖರಿಸಿಕೊಂಡು ನೀರಾವರಿ ವ್ಯವಸಾಯವನ್ನು ಕೈಗೊಂಡು ಉತ್ತಮ ಫಸಲನ್ನು ಪಡೆಯುವ ಕಾಯಕವನ್ನು ಮನುಷ್ಯ ರೂಢಿಸಿಕೊಂಡ, ಈ ಕಾಯಕದಲ್ಲಿ ಇಕ್ಕೇರಿ ನಾಯಕರು ಹಿಂದೆ ಇರಲಿಲ್ಲ. ಇಕ್ಕೇರಿ ಸಂಸ್ಥಾನವೇ ಮೂಲತಃ ಮಲೆನಾಡಿನ ಮಡಿಲಿನಲ್ಲಿ ಇದ್ದಂತಹದಾದ್ದರಿಂದ ಇಲ್ಲಿ ವ್ಯವಸಾಯಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಲಾಗುತ್ತಿತ್ತು. ಈ ಪ್ರದೇಶವು ಕೆಲವು ಪ್ರಮುಖ ವಾಣಿಜ್ಯ ಬೆಳೆಗಳ ಬೆಳೆಗೆ ಯೋಗ್ಯವಾದ ಪ್ರದೇಶವಾಗಿದ್ದುದರಿಂದ ಅದಕ್ಕೆ ಹೊಂದಿಕೊಳ್ಳುವ ಅಡಿಕೆ, ತೆಂಗು, ಭತ್ತ, ಮೆಣಸು, ವೀಳ್ಯೆದೆಲೆಯ ವಾಣಿಜ್ಯ ಬೆಳೆ ಹಾಗೂ ಶ್ರೀಗಂಧ, ತೇಗ, ಹೊನ್ನೆ ಮುಂತಾದ ಬೆಲೆಬಾಳುವ ಮರಗಳನ್ನು ಹೆಚ್ಚಿನ ಪ್ರಮಾಣದಲ್ಲಿಯೇ ಬೆಳೆಯಲಾಗುತ್ತಿತ್ತು. ಅಂದಿನ ರಾಜರಿಂದ ಸಾಮಾನ್ಯ ಜನರವರೆಗೂ ಸಹ ಭೂಮಿಯನ್ನು ಮಾತೃ ಭಾವನೆಯಿಂದ ನೋಡುವ ಸಂಪ್ರದಾಯ ಬೆಳೆದು ಬಂದಿತ್ತು. ಇಂದು ವಿವಿಧ ಮಾದರಿಯ ದಾನಗಳು ಅನೇಕ ಪಾವಿತ್ರತೆಯನ್ನು ಪಡೆದಿವೆ. ಆದರೆ ಕೆಳದಿ ಅರಸರ ಕಾಲದಲ್ಲಿಕ ಭೂದಾನವು ಪವಿತ್ರವಾಗಿತ್ತು. ‘ಭೂದಾನ’ ಶ್ರೇಷ್ಠತೆಯಲ್ಲಿ ಶ್ರೇಷ್ಠ ಎಂಬ ಕೀರ್ತಿ ಪಡೆದಿತ್ತು. ಸಂಸ್ಥಾನದಲ್ಲಿ ಭೂದಾನ ಮಾಡಿರುವ ವಿಷಯದ ಮೇಲೆ ಬೆಳಕು ಚೆಲ್ಲುವ ನೂರಾರು ಶಾಸನಗಳು ಕಂಡುಬರುತ್ತವೆ. ವ್ಯವಸಾಯಕ್ಕೆ ಎತ್ತು, ದನ, ಎಮ್ಮೆಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದರು. ಪಶುಸಂಗೋಪನೆಯು ಅಂದು ಪವಿತ್ರವಾದ ಉದ್ಯೋಗವಾಗಿ ಪರಿವರ್ತನೆ ಪಡೆದಿತ್ತು.

ಕೆಳದಿ ಅರಸರು ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯನ್ನು ನೀರಾವರಿ ಭೂಮಿ ಹಾಗೂ ಖುಷ್ಕಿ ಭೂಮಿ ಎಂದು ಎರಡು ಭಾಗಗಳಾಗಿ ವಿಭಾಗಿಸಿಕೊಂಡು ವ್ಯವಸಾಯ ಮಾಡಿ ಇವುಗಳ ಆಧಾರದ ಮೇಲೆಯೇ ತೆರಿಗೆಯನ್ನು ವಸೂಲು ಮಾಡುತ್ತಿದ್ದರು. ಮೊದಲೆ ತಿಳಿಸಿದಂತೆ ನೀರಾವರಿ ಕೃಷಿಗೆ ಕೆರೆ, ನದಿ, ಬಾವಿ ನೀರನ್ನು ಅವಲಂಭಿಸಿದರೆ, ಖುಷ್ಕಿಗೆ ಮಳೆಯೊಡನೆ ಕಣ್ಣಾಮುಚ್ಚಾಲೆ ಆಟ ಹಾಡಬೇಕಾಗಿತ್ತು. ಖುಷ್ಕಿ ಭೂಮಿಯಲ್ಲಿ ಮಳೆಗಾಲವನ್ನು ಅನುಸರಿಸಿಕೊಂಡು ಬಿತ್ತನೆ ಮಾಡಿ ಭತ್ತ, ರಾಗಿ, ಕಬ್ಬು, ಎಳ್ಳು ಶೇಂಗ, ದ್ವದಳ ಧಾನ್ಯಗಳನ್ನು ಬೆಳೆಯುತ್ತಿದ್ದರು. ನೀರಾವರಿಗೆ ಒಳಪಟ್ಟಿರುವ ಭೂಮಿಯಲ್ಲಿ ತೆಂಗು, ಭತ್ತ, ಅಡಿಕೆ, ಮಾವು, ಬಾಲೆ, ವೀಳ್ಯೆದೆಲೆ, ಮೆಣಸು ಮುಂತಾದ ಪ್ರಮುಖ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದರು. ದೇವಾಲಯ, ಮಠ ಹಾಗೂ ಅಗ್ರಹಾರಗಳಿಗೆ ಅಡಿಕೆ ತೋಟಗಳನ್ನು ದಾನವಾಗಿ ಕೊಟ್ಟಿರುವುದು ಶಾಸನಗಳಿಂದ ತಿಳಿದುಬರುತ್ತದೆ. ವ್ಯವಸಾಯಕ್ಕೆ ಜಾನುವಾರುಗಳ ಸಗಣಿಯ ಗೊಬ್ಬರವೇ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದರೆನ್ನಬಹುದು. ಬ್ರಾಹ್ಮಣರ ಭುಮಿಯನ್ನು ಊರಿನ ರಥರು ಸಾಗುವಳಿ ಮಾಡಿ ಅವರಿಂದ ‘ಗೇಣಿ’ ರೂಪದಲ್ಲಿ ಸಂಭಾವನೆಯನ್ನು ಪ್ರತಿವರ್ಷ ಪಡೆಯುತ್ತಿದ್ದರು. ಈ ಗೇಣಿ ಪದ್ಧತಿಯು ಅವರು ವ್ಯವಸಾಯ ಮಾಡುವ ಭುಮಿಯ ವಿಸ್ತರಣೆಯ ಪ್ರಕಾರ ನಿಗದಿಪಡಿಸಲಾಗುತ್ತಿದ್ದಿತು. ಸಾರ್ವಜನಿಕವಾಗಿ ಸೇವೆ ಸಲ್ಲಿಸುವರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಅಂಥವರಿಗೆ ‘ಉಂಬಳಿ’ ಎಂಬ ಭೂಮಿಯನ್ನು ಕೊಡಲ್ಪಡುವ ಪದ್ಧತಿಯು ಜಾರಿಯಲ್ಲಿದ್ದಿತ್ತು. ಜಾನುವಾರುಗಳ ಮೇವಿನ ಸ್ಥಳಕ್ಕಾಗಿ, ಧಾರ್ಮಿಕ ಕೆಲಸ ಕಾರ್ಯಗಳಿಗಾಗಿ, ಚಾತುರ್ಮಾಸದ ವಿಶಿಷ್ಟ ಪೂಜೆಗಳಲ್ಲಿ ಜನರು ಬಂದು ಒಂದು ಕಡೆ ಸೇರಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವ ಅನುಕೂಲಕ್ಕಾಗಿ ಭೂಮಿಯ ಒಡೆಯರು ಭೂಮಿಯನ್ನು ‘ದಾನ’ ಬಿಡುತ್ತಿದ್ದರು. ಇಂತಹ ಪದ್ಧತಿಯನ್ನು ‘ಉತ್ತಾರ’ ಬಿಟ್ಟ ಭೂಮಿ ಎಂದು ಕರೆಯುವ ವಾಡಿಕೆಯು ಇದ್ದಿತ್ತು. ಇದು ಅಂದಿನ ಪ್ರಮುಖ ಸಂಸ್ಕೃತಿಯಾಗಿತ್ತೆಂದು ತಿಳಿದುಬರುತ್ತದೆ.

ಸಂಸ್ಥಾನದಲ್ಲಿ ವ್ಯವಸಾಯದ ನಂತರದ ಪ್ರಮುಖ ವೃತ್ತಿಯು ಗುಡಿ ಕೈಗಾರಿಕೆಯಾಗಿದ್ದಿತ್ತು. ನೇಕಾರರು ಬಟ್ಟೆಗಳನ್ನು ನೇಯ್ದು ಆಸ್ಥಾನದ ರಾಜರಾಣಿಯರನ್ನು ಸುಂದರವಾಗಿಸುತ್ತಿದ್ದರು. ಕುಂಬಾರರು ಮಡಿಕೆ ಮಾಡುವ ಗೃಹ ಕೈಗಾರಿಕೆಯನ್ನು ಅವಲಂಬಿಸಿದ್ದರು. ಅಂದು ಕಬ್ಬು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದರಿಂದ ಬೆಲ್ಲವನ್ನು ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಲಾಗುತ್ತಿತ್ತು. ಅಕ್ಕಸಾಲಿಗರು, ಚಿನಿವಾರರು, ಬಡಗಿಗಳು, ಮೋಚಿಗಳು ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿರುತ್ತಿದ್ದರು. ಗಾಣದಿಂದ ಎಣ್ಣೆ ತೆಗೆಯುವ ಕೆಲಸವನ್ನು ಹೊಂದಿದ್ದ ಗಾಣಿಗರು ಅಂದು ಹೆಚ್ಚಿನ ಪ್ರಮಾಣದಲ್ಲಿದ್ದರು. ಇವರುಗಳು ಸಹ ನಿಗದಿತ ಪ್ರಮಾನದಲ್ಲಿ ಸರ್ಕಾರಕ್ಕೆ ತೆರಿಗೆ ಸಲ್ಲಿಸಬೇಕಾಗಿದ್ದಿತ್ತು.

ವಿದೇಶಿಗಳಿಗೆ ಅಮದು ರಪ್ತುಗಳೂ ನಿಗದಿತ ಪ್ರಮಾಣದಲ್ಲಿ ನಡೆಯುತ್ತಿತ್ತು. ಬ್ರಿಟಿಷರು ಹಾಗೂ ಪೋರ್ಚುಗೀಸರೊಡನೆ ನಡೆಸಿರುವ ಪತ್ರ ವ್ಯವಹಾರಗಳನ್ನು ಗಮನಿಸಿದಾಗ ಮೆಣಸು, ಏಲಕ್ಕಿ ಮೊದಲಾದ ಸಂಬಾರ ಪದಾರ್ಥಗಳು ಆ ದೇಶಗಳಿಗೆ ರಫ್ತಾಗಿ ಅಲ್ಲಿಂದ ಕುದುರೆ, ಮುತ್ತುರತ್ನಗಳು ಹಾಗೂ ವಿಶಿಷ್ಟ ಬಟ್ಟೆಗಳು ಅಮದು ಮಾಡಿಕೊಳ್ಳುತ್ತಿದ್ದರೆಂದು ಕಂಡುಬರುತ್ತದೆ. ಈ ಹಂತದಲ್ಲಿ ಅಂತೆಯೇ ವಿದೇಶಿ ಸಂಸ್ಕೃತಿಯು ಭಾರತದಲ್ಲಿ ತನ್ನ ಪ್ರಭಾವವನ್ನು ಬೀರಲಾರಂಭಿಸಿತ್ತೆಂದು ತಿಳಿಯಬಹುದು.

ಬೃಹತ್ ಸಾಮ್ರಾಜ್ಯವಾಗಿದ್ದ ವಿಜಯನಗರದಲ್ಲಿ ಬಳಕೆಯಲ್ಲಿದ್ದ ನಾಣ್ಯ ವ್ಯವಸ್ಥೆಯನ್ನೇ ಕೆಳದಿಯ ಅರಸರು ಚಾಚೂ ತಪ್ಪದೆ ಅನುಸರಿಸಿಕೊಂಡು ಬಂದರೆನ್ನಬಹುದು. ನಾಣ್ಯಗಳು ಬೆಳ್ಳಿ, ಚಿನ್ನ, ತಾಮ್ರ ಮೊದಲಾದ ಲೋಹಗಳಿಂದ ತಯಾರಾಗುತ್ತಿದ್ದವು. ಇಕ್ಕೇರಿ ನಾಯಕರು ತಮ್ಮದೆಯಾದ ಟಂಕಸಾಲೆಯೊಂದನ್ನು ಹೊಂದಿದ್ದರೆಂದು ಶಾಸನಗಳು ತಿಳಿಸುತ್ತವೆ. ಹೊಸನಗರದ ಒಂದು ಶಾಸನವು ‘ಟಂಕಸಾಲೆ’ ಕಲ್ಲಿನ ಬಗೆಗೆ ಮಾಹಿತಿ ಒದಗಿಸಿಕೊಡುತ್ತದೆ. ವಿಶಿಷ್ಟವೆಂದರೆ ನಾಣ್ಯಗಳನ್ನು ಮುದ್ರಿಸಲು ಇಕ್ಕೇರಿ ನಾಯಕರು ಖಾಸಗಿಯವರಿಗೂ ಪರವಾಣಿಗೆ ನೀಡಿದ್ದರು. ಇದಕ್ಕೆ ನಿದರ್ಶನವೆಂಬಂತೆ “ಶ್ರೀ ತೊಂಟಲಿಂಗ ಪ್ರಸನ್ನ ಸ್ವಾಮಿ”ಎಂದು ಮುದ್ರಿತವಾಗಿರುವ ಅಂಶವು ದೃಢಪಡಿಸುತ್ತದೆ. ನಾಣ್ಯಗಳನ್ನು ವಿಶ್ವಾಕರ್ಮದವರು, ಅಕ್ಕಸಾಲಿಗರು ಅಚ್ಚು ಹಾಕುತ್ತಿದ್ದರು. ಇದಕ್ಕಾಗಿ ಅವರನ್ನು ಹೆಚ್ಚಾಗಿ ಸರ್ಕಾರಿ ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತಿತ್ತು.

ಕೆಳದಿ ನಾಣ್ಯಗಳು ‘ಇಕ್ಕೇರಿ ವರಹ’ಗಳೆಂದೇ ಪ್ರಸಿದ್ಧವಾಗಿವೆ. ಇದನ್ನು ಸದಾಶಿವ ನಾಯಕನು ಮೊದಲು ಜಾರಿಗೆ ತಂದನು. ಸದಾಶಿವನಾಯಕನ ಚಿನ್ನದ ನಾಣ್ಯಗಳು ವಿಜಯನಗರದ ಕಾಲದವೇ ಎಂಬ ಅನುಮಾನ ಮೂಡುವಂತೆ ಮಾಡುತ್ತವೆ. ಅಂದು ಚಿನ್ನದ ನಾಣ್ಯಗಳನ್ನು ‘ವರಹ’ ಎಂತಲೂ, ತಾಮ್ರದ ನಾಣ್ಯಗಳನ್ನು ‘ಪಣಂ’ ಎಂದು ಕರೆಯುತ್ತಿದ್ದರು. ಬೆಳ್ಳಿಯ ನಾಣ್ಯಗಳು ‘ತರೆ’ ಎಂದು ಕರೆಸಿಕೊಳ್ಳುತ್ತಿದ್ದವು. ಅವುಗಳ ಸಂಕ್ಷಿಪ್ತ ಪರಿಚಯವನ್ನು ಡಾ. ವೆಂಕಟೇಶ್ ಜೋಯಿಸ್ ರವರು ಕೆಳಕಂಡಂತೆ ವಿವರಿಸುತ್ತಾರೆ.

೧. ವರಹ : ಮುಂಭಾಗ – ಶಿವ ಮತ್ತು ಪಾರ್ವತಿ ಚಿತ್ರ, ಶಿವನ ತೊಡೆಯಲ್ಲಿ ಪಾರ್ವತಿ ಕುಳಿತಿರುವುದು (ಚಂದ್ರಮೌಳೇಶ್ವರ)

ಹಿಂಭಾಗ : ಮೂರು ಸಾಲುಗಳಲ್ಲಿ ‘ಶ್ರೀ ಸದಾಶಿವ’ ಎಂಬ ದೇವನಾಗರಿ ಲಿಪಿಯ ಬರಹ.

೨. ವರಹ : ಮೇಲಿನ ರೀತಿಯೇ ನಾಗರೀ ಲಿಪಿಯಲ್ಲಿ ‘ಶ್ರೀ’

೩. ಅರ್ಧ ವರಹ ಅಥವಾ ಹೊನ್ನು ವರಹವನ್ನೇ ಹೋಲುತ್ತದೆ. ತುಂಬಾ ಸಣ್ಣ ನಾಣ್ಯ

ಶಿಸ್ತಿನ ಸಿಪಾಯಿ ಎಂದೇ ಹೆಸರಾಗಿರುವ ದೊರೆ ಶಿವಪ್ಪನಾಯಕನ ಕಾಲದಲ್ಲಿ ತಾಮ್ರದ ನಾಣ್ಯಗಳಲ್ಲಿ ಛಾಪಿಸುತ್ತಿದ್ದದು ಕಂಡುಬರುತ್ತದೆ. ಇದು ೦.೫ ಡಯಾಮೀಟರ್ ಹೊಂದಿತ್ತು.

ಮುಂಭಾಗ – ಎತ್ತು ನಿಂತಿರುವುದು ಮತ್ತು ‘ಶಿವ’ ಎಂಬ ನಾಗರೀ ಬರಹ

ಹಿಂಭಾಗ – ‘ಶ್ರೀ ಶಿವ’ ಎಂಬ ನಾಗರೀ ಬರಹ.

ವೆಂಕಟಪ್ಪನಾಯಕನ ಕಾಲದಲ್ಲಿ ಛಾಪಿತವಾದ ತಾಮ್ರದ ನಾಣ್ಯ ೦.೪ ಡಯಾಮೀಟರ್ ಇತ್ತು.

ಮುಂಭಾಗ : ಶಿವ ಪಾರ್ವತಿ ಕುಳಿತಿರುವ ಚಿತ್ರ

ಹಿಂಭಾಗ – ನಾಗರಿ ಲಿಪಿಯಲ್ಲಿ ಎರಡು ಸಾಲುಗಳಲ್ಲಿ “ಶ್ರೀ ವೆಂಕಟ”

ಮೇಲ್ಕಂಡ ರೀತಿಯಲ್ಲಿ ವೀರಶೈವ ಧರ್ಮದ ಸಂಕೇತಗಳಿಗೆ ಆಧಾರವಾಗಿ ನಾಣ್ಯಗಳನ್ನು ಮುದ್ರಿಸಿ ಚಲಾವಣೆಗೆ ತಂದು ತಮ್ಮ ಆರ್ಥಿಕ ವ್ಯವಹಾರವನ್ನು ಸುಗಮಗೊಳಿಸಿಕೊಳ್ಳುತ್ತಿದ್ದರು.

ಅಂದಿನ ತೆರಿಗೆ ಪದ್ಧತಿಯು ಹಣ ಅಥವಾ ಧಾನ್ಯಗಳ ರೂಪದಲ್ಲಿ ಸಂಗ್ರಹವಾಗುತ್ತಿತ್ತೇ ಎಂಬ ವಿಷಯದಲ್ಲಿ ನಿಖರವಾದ ಮಾಹಿತಿ ದೊರಕಿರುವುದಿಲ್ಲ. ತೆರಿಗೆ ಸಂಗ್ರಹಕ್ಕೆ ತೆರಿಗೆ ಅಧಿಕಾರಿಗಳು ಇರುತ್ತಿದ್ದರು. ಸುಗ್ಗಿಯ ಕಾಲವು ತೆರಿಗೆಯನ್ನು ವಸೂಲು ಮಾಡುವ ಸನ್ನಿವೇಶವಾಗಿದ್ದಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಶ್ಯಾನುಭೋಗನು ತೆರಿಗೆ ವಸೂಲು ಮಾಡುವ ಅಧಿಕಾರ ಹೊಂದಿದ್ದನು.

ಒಟ್ಟಾರೆ ಕೆಳದಿ ಅರಸರ ಆರ್ಥಿಕ ನೀತಿಯ ಪ್ರತಿಯೊಂದು ಹಂತದಲ್ಲಿಯೂ ವಿಜಯನಗರದರಸರ ಆರ್ಥಿಕ ಪದ್ಧತಿಯನ್ನು ಅನುಸರಿಸಲು ರೀತಿಯಲ್ಲಿ ಮುಂದುವರೆಯುತ್ತಿತ್ತು. ಎಷ್ಟೋ ಬಾರಿ ಒಂದೇ ನಾಣ್ಯಗಳು ಎರಡು ಸಾಮ್ರಾಜ್ಯದಲ್ಲಿ ಬಳಕೆಯಾಗಿರುವುದೂ ಸಹ ಕಂಡುಬರುತ್ತದೆ. ಪ್ರೋ. ದಿಕ್ಷಿತ್ ಹೇಳಿರುವಂತೆ ವಿಜಯನಗರವು ತಾಯಿಯಾದರೆ ಅವರ ನೆಚ್ಚಿನ ಮಗು ಇಕ್ಕೇರಿಯು ಒಂದೇ ನಾಣ್ಯ ಪದ್ಧತಿಯನ್ನು ಕೆಲವು ದಿನಗಳವರೆಗೆ ಹೊಂದಿತ್ತೆಂದರೆ ಅತಿಶಯವೇನಲ್ಲ.

* * *