ಇಕ್ಕೇರಿ ಅರಸರ ಸಂಸ್ಥಾನದ ಆಳ್ವಿಕೆಯು ವಿಶಿಷ್ಟವಾದುದ್ದಾಗಿತ್ತು. ಇವರ ಆಳ್ವಿಕೆಯ ಕಾಲವನ್ನು ಶಿಸ್ತಿನ ಸಿಪಾಯಿ ಕಾಲವೆಂದೇ ಇತಿಹಾಸದಲ್ಲಿ ಕರೆಯಲಾಗಿದೆ. ಇವರು ಆಡಳಿತಕ್ಕೆ ಅನುಕೂಲಕರವಾದ ದೃಷ್ಟಿಯಿಂದ ಮುಖ್ಯವಾಗಿ ಎರಡು ಭಾಗಗಳಾಗಿ ವಿಭಾಗಿಸಿಕೊಂಡಿದ್ದನ್ನು ಗಮನಿಸಬಹುದಾಗಿದೆ.

(೧) ರಾಜ್ಯದ ಆಡಳಿತ (ಕೇಂದ್ರ ಆಡಳಿತ)
(೨) ಪ್ರಾಂತ್ಯಾಡಳಿತದ ಅಥವಾ ಗ್ರಾಮೀಣ ಆಡಳಿತ

ವಿಜಯನಗರಸರ ಆಳ್ವಿಕೆಯಲ್ಲಿದ್ದಂತೆಯೇ ಗ್ರಾಮಗಳನ್ನು ವಿಶೇಷ ಸಂದರ್ಭಗಳಲ್ಲಿ ಪ್ರತ್ಯೇಕ ಘಟಕಗಳಾಗಿ ಪರಿಗಣಿಸಲಾಗುತ್ತಿತ್ತು. ಕೆಳದಿ ಅರಸರ ಆಳ್ವಿಕೆಯಲ್ಲಿ ಹಳ್ಳಿಯು ವಿಶಿಷ್ಟವಾಗಿ ಮಹತ್ವದ ಅಧಿಕಾರ ಹೊಂದಿದ್ದಿತ್ತೆನ್ನಬಹುದು.

ರಾಜ್ಯರಕ್ಷಣೆ ಹಾಗೂ ಪ್ರಜಾಪಾಲನೆಯೇ ರಾಜನ ಪ್ರಮುಖ ಕರ್ತವ್ಯವಾಗಿದ್ದಿತ್ತು. ಅಷ್ಟೇ ಅಲ್ಲದೆ ಜನರೂ ರಾಜನನ್ನು “ರಾಜಾ ಪ್ರತ್ಯಕ್ಷ ದೇವತಾ” ಎಂದು ತಿಳಿದಿದ್ದವರಾಗಿದ್ದರು. ರಾಜರ ಹೆಸರಿನಲ್ಲಿಯೇ ದೇವಾಲಯಗಳು, ಮಠಗಳು ನಿರ್ಮಾಣವಾಗುತ್ತಿದ್ದವು. ಉದಾಹರಣೆಗೆ ಕ್ರಿ.ಶ. ೧೬೭೧ರಲ್ಲಿ ಲೋಕಯ್ಯ ಎಂಬುವನು ಚೆನ್ನಮ್ಮಾಜಿಯವರಿಗೆ ಶ್ರೇಯೋಭಿವೃದ್ಧಿಯುಂಟಾಗುವುದಕ್ಕಾಗಿ ಸಿರ್ಸಿಯ ಹಳ್ಳಿಯ ಭೂಮಿಯನ್ನು ಬಸವಲಿಂಗ ದೇವರಿಗೆ ನೀಡಿದ್ದಾನೆ. ಕ್ರಿ.ಶ. ೧೬೭೦ರ ಶಾಸನದಲ್ಲಿ ಸೋಮಶೇಖರ ನಾಯಕನ ಹೆಸರಿನಲ್ಲಿ ಕಟ್ಟಿಸಿದ ಮಹತ್ತಿನ ಮಠಕ್ಕೆ ಬಿಟ್ಟ ದಾನವನ್ನು ಶಾಸನವೊಂದು ತಿಳಿಸುತ್ತದೆ. ಶಿವರಾಜಪುರದಲ್ಲಿ ಶಿವಪ್ಪನಾಯಕನ ಹೆಸರಿನಲ್ಲಿ ಕಟ್ಟಿಸಿದ ಮಠವನ್ನು ಗಮನಿಸಬಹುದು. ರಾಜರುಗಳು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಗಮನ ಕೊಡುತ್ತಿದ್ದರು. ಇದಕ್ಕೆ ನಿದರ್ಶನವೆಂಬಂತೆ ಕೆಲವು ಅರಸರು ಸ್ವತಃ ರಚಿಸಿರುವ ಕೃತಿಗಳು ಸಾಕ್ಷಿಯಾಗಿವೆ. ಕೆಳದಿ ಅರಸರ ಕಾಲದಲ್ಲಿ ದತ್ತು ತೆಗೆದುಕೊಳ್ಳುವ ಪದ್ಧತಿಯು ಜಾರಿಯಲ್ಲಿತ್ತು. ಕೆಳದಿ ಚೆನ್ನಮ್ಮಾಜಿಯು ತನಗೆ ಮಕ್ಕಳಿಲ್ಲದ ಕಾರಣ ಮರಿಯಪ್ಪಶೆಟ್ಟಿಯ ಮಗ ಬಸಪ್ಪನನ್ನು ದತ್ತು ತೆಗೆದುಕೊಂಡು ಅವನು ಇನ್ನೂ ಚಿಕ್ಕವನಾಗಿದ್ದ ಕಾರಣ, ಅವನನ್ನು ಮುಂದಿಟ್ಟುಕೊಂಡು ತಾನೇ ರಾಜ್ಯಭಾರ ನಡೆಸಿದುದ್ದಕ್ಕೆ ಆಧಾರಗಳಿವೆ. ರಾಜರ ಪಟ್ಟಾಭಿಷೇಕದ ಉತ್ಸವವು ಸಾಮಾನ್ಯವಾಗಿ ವಿಜೃಂಭಣೆಯಿಂದ ನಡೆಯುತ್ತಿತ್ತು. ರಾಜರಿಗೆ ಪಟ್ಟಾಭಿಷೇಕವಾಗುವ ಸಂದರ್ಭದಲ್ಲಿ ಸಂಸ್ಥಾನದ ಇತರೆಡೆಗಳ ದೇವಾಲಯಗಳಲ್ಲಿ ಉತ್ಸವ ಹಾಗೂ ವಿಶೇಷ ಪೂಜಾದಿ ಕಾರ‍್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯುತ್ತಿದ್ದವು. ಇಂತಹ ಸಂದರ್ಭದಲ್ಲಿ ರಾಜಕುಮಾರರ ಒಳತಿಗಾಗಿ ದಾನದತ್ತಿ ಕೊಡುವ ಪದ್ಧತಿಯು ಬೆಳೆದು ಬಂದಿತ್ತು. ಪಟ್ಟಾಭಿಷೇಕ ಕಾರ್ಯಕ್ರಮಗಳು ಹೆಚ್ಚಾಗಿ ಕೆಳದಿ, ಇಕ್ಕೇರಿ, ನಗರ ಅಂದರೆ ರಾಜಧಾನಿಗಳಲ್ಲಿಯೂ ನಡೆಯುತ್ತಿತ್ತು. ವಿದೇಶಿ ಪ್ರವಾಸಿಗರು ತಮ್ಮ ಪ್ರವಾಸಿ ಕಥನಗಳಲ್ಲಿ ರಾಜನ ದರ್ಬಾರ್‌ನ ಬಗ್ಗೆ ವರ್ಣಿಸುವುದು ಕಂಡುಬರುತ್ತದೆ. ಅವರ ಪ್ರಕಾರ ರಾಜನು ಎತ್ತರವಾದ ವೇದಿಕೆಯ ಮೇಲೆ ಕುಳಿತಿರುವುದನ್ನು ಕಂಡಿರುವುದಾಗಿ ಬರೆದಿದ್ದಾರೆ. ರಾಜನ ಹಿಂದೆ ಆಸ್ಥಾನಿಕರು ಹೆಚ್ಚಾಗಿ ಇರುತ್ತಿದ್ದರೆಂದು ಹೇಳಿದ್ದಾರೆ. ಇದನ್ನೆಲ್ಲಾ ಕ್ರಿ.ಶ. ೧೬೨೩ರಲ್ಲಿ ಇಕ್ಕೇರಿಗೆ ಭೇಟಿ ನೀಡಿದ ಪಿಯಾತ್ರೋದೆಲ್ಲಾವಲ್ಲೆ ಸಂಕ್ಷಿಪ್ತವಾಗಿ ಬರೆದಿದ್ದಾನೆ. ಡಾ. ಹೆಚ್.ಎಲ್. ನಾಗೇಗೌಡರ ಪ್ರವಾಸಿ ಕಂಡ ಇಂಡಿಯಾ ಸಂಪುಟದ ನಾಲ್ಕನೇ ಸಂಪುಟದಲ್ಲಿ ಇದು ಉಲ್ಲೇಖನೀಯವಾಗಿದೆ. ಆಸ್ಥಾನದಲ್ಲಿ ನರ್ತಕಿಯರಿಗೂ, ವಾದ್ಯ ಬಾರಿಸುವವರಿಗೂ ಹೆಚ್ಚಿನ ಜಾಗವಿರುತ್ತಿತ್ತು. ಇದರಿಂದ ಅಲ್ಲಿ ಸಂಗೀತ ಹಾಗೂ ನೃತ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇತ್ತೆಂದು ತಿಳಿಯಬಹುದಾಗಿದೆ. ದಾನದರ್ಮಗಳನ್ನು ಮಾಡುವುದು, ಜನರ ಯೋಗಕ್ಷೇಮಗಳನ್ನು ಆಗಾಗ್ಗೆ ಪ್ರತ್ಯಕ್ಷವಾಗಿ ರಾಜ್ಯದಲ್ಲಿ ಸಂಚರಿಸಿ ವಿಚಾರಿಸುವುದು ರಾಜರ ಪ್ರಮುಖ ಕರ್ತವ್ಯವೆಂದು ನಂಬಿದ್ದರು. ಇದರ ಜೊತೆಗೆ ದುಷ್ಟ ಶಿಷ್ಟರನ್ನೂ, ರಕ್ಷಕನೂ ತನ್ನನ್ನೂ ರಕ್ಷಿಸಿಕೊಳ್ಳುವುದು ರಾಜನಿಗೆ ಪ್ರಮುಖ ಕರ್ತವ್ಯವಾಗಿದ್ದಿತು. ಆಡಳಿತಾಂಗದಿಂದ ಪ್ರತ್ಯಕ್ಷವಾಗಿ ಅಥವಾ ಪರೀಕ್ಷವಾಗಿ ಮಠ, ದೇವಾಲಯ, ಚರ್ಚು, ಮಸೀದಿ ಮೊದಲಾದವುಗಳಿಂದ ತಮಗಾಗುತ್ತಿದ್ದ ತೊಂದರೆಗಳನ್ನು ಪ್ರಜೆಗಳು ಧೈರ್ಯವಾಗಿ ರಾಜರಲ್ಲಿ ಹೇಳಿಕೊಂಡು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ಅವಕಾಶವಿದ್ದಿತ್ತು.

ಇಕ್ಕೇರಿ ಅರಸರು ತಮ್ಮ ಅಸ್ಥಾನದಲ್ಲಿ ಅಸ್ಥಾನದ ರಾಣಿಯರಿಗೂ ಸಹ ವಿಶೇಷವಾದ ಸ್ಥಾನಮಾನವನ್ನು ಕಲ್ಪಿಸಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಇಕ್ಕೇರಿ ಅರಸರ ಆಳ್ವಿಕೆಯ ಕಾಲಾವಧಿಯಲ್ಲಿ ಇಬ್ಬರು ಪ್ರಬಲವಾದ ರಾಣಿಯರು ಕೆಳದಿಯನ್ನು ಆಳಿರುವುದನ್ನು ನೆನೆಯಬಹುದಾಗಿದೆ. ಇಕ್ಕೇರಿ ಸಂಸ್ಥಾನದ ರಾಣಿಯರೂ ಸಹ ರಾಜ್ಯದ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದರು. ಸೋಮಶೇಖರನಾಯಕನು ತನ್ನ ಹೆಂಡತಿಯಾಗುವಂತವಳು ಬುದ್ಧಿವಂತಳು, ವಿದ್ಯಾವಂತಳೂ ಆಗಿರಬೇಕೆಂದು ಅಪೇಕ್ಷಿಸಿದ್ದನೆಂದು ಕೆಳದಿಯ ಸಂಕ್ಷಿಪ್ತ ಇತಿಹಾಸದಲ್ಲಿ ಗುಂಡಾ ಜೋಯಿಸ್‌ರವರು ಬರೆದಿದ್ದಾರೆ. ವೀರ ಚೆನ್ನಮ್ಮಾಜಿಯು ಕೆಳದಿ ಅರಸರಲ್ಲಿಯೇ ಶ್ರೇಷ್ಠ ಆಡಳಿತಗಾರ್ತಿ ಎಂದು ಹೆಸರು ಪಡೆದವಳಾಗಿದ್ದಾಳೆ. ಕ್ಲಿಷ್ಟಕರ ಸನ್ನಿವೇಶದಲ್ಲಿ ಕೆಳದಿಯ ರಾಜ್ಯಾಧಿಕಾರವನ್ನು ವಹಿಸಿಕೊಂಡು ಚೆನ್ನಮ್ಮಾಜಿಯು ಅದರ ಪ್ರಗತಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಳು. ಇದರಿಂದಾಗಿ ಇವಳು “ಮಹಾರಾಣಿ” ಎಂಬ ಬಿರುದಿಗೆ ಪಾತ್ರಲಾಗಿದ್ದಳು. ಕೆಳದಿ ಸಂಸ್ಥಾನದ ಬಗ್ಗೆ ಹೆಚ್ಚಿನ ಬೆಳಕನ್ನು ಚೆಲ್ಲುವ ಲಿಂಗಣ್ಣ ಕವಿಯು ರಚಿಸಿರುವ ಕೆಳದಿ ನೃಪ ವಿಜಯದಲ್ಲಿ ಚೆನ್ನಮ್ಮಾಜಿಯನ್ನು ಕುರಿತು

            ಉನ್ನತ ಶುಭಗುಣಸಂ |
ಪನ್ನತೆಯಿಂದ ಕ್ಷಾತ್ರದಾನಧರ್ಮಾದಿಗಳಾ ||
ಚೆನ್ನಮ್ಮಾಜಿಗೆ ಸರಿಯಹ |
ಮನ್ನೆಯರಿಲೆನಿಸಿ ರಾಜ್ಯವಂ ರಕ್ಷಿಸಿದಳ್ ||

ಎಂದು ಮಹತ್ವ ಪೂರ್ಣವಾದ ಸಾಲುಗಳನ್ನು ಮೀಸಲಿಟ್ಟಿರುವುದು ಕಂಡುಬರುತ್ತದೆ. ಮತ್ತೊಬ್ಬ ದಕ್ಷತೆಯ ರಾಣಿ ಎಂದರೆ ಬಸವಪ್ಪನಾಯಕನ ಹಿರಿಯ ಹೆಂಡತಿ ವೀರಮ್ಮಾಜಿ. ಇವಳ ಆಳ್ವಿಕೆಯು ಸಹ ಸಂಸ್ಥಾನದಲ್ಲಿ ಶಾಂತಿ ಹಾಗೂ ಸುಭದ್ರತೆಯನ್ನು ಕಾಪಾಡುತ್ತಿತ್ತೆನ್ನಬಹುದು. ಕೆಳದಿ ಅರಸರು ವೀರಶೈವ ಧರ್ಮಕ್ಕೆ ಸೇರಿದವರಾಗಿದ್ದುದರಿಂದ ಇವ ಆಳ್ವಿಕೆಯು ಕಾಲದಲ್ಲಿ ಅನೇಕ ವೀರಶೈವ ಮಠಗಳು ಅಸ್ತಿತ್ವಕ್ಕೆ ಬಂದು ಅಭಿವೃದ್ಧಿ ಹೊಂದಿದವು. ವೀರಭದ್ರನಾಯಕನ ಪತ್ನಿ ಮಲ್ಲಮ್ಮಾಜಿಯು ಗದಗದ ತೋಂಟದಾರ್ಯ ಮಠಕ್ಕೆ ಚಿನ್ನದ ಪಾದುಕೆಗಳನ್ನು ಮಾಡಿಸಿಕೊಟ್ಟಿದ್ದಳು. ವೆಂಕಟಪ್ಪನಾಯಕನ ಪತ್ನಿ ವೀರಮ್ಮಳು ಇಕ್ಕೇರಿಯ ಭತ್ತದ ಪೇಟೆಯಲ್ಲಿಯ ಮಠಕ್ಕೆ ದಾನ ನೀಡಿರುವುದಕ್ಕೆ ಶಾಸನಾಧಾರಗಳಿವೆ. ಕ್ರಿ.ಶ. ೧೬೬೪ರಲ್ಲಿ ನಾಗಮ್ಮಾಜಿಯು ತನ್ನ ಮೊಮ್ಮಗ ಶಿವಪ್ಪನಾಯಕನ ಹೆಸರಿನಲ್ಲಿ ಕೊಡುವಳಿಯಲ್ಲಿ ಮಠವೊಂದನ್ನು ಕಟ್ಟಿಸಿದಳು. ಹೆಚ್ಚಾಗಿ ಅಂದಿನ ರಾಣಿಯರು ಧಾರ್ಮಿಕ ಕೆಲಸಗಳಿಗೆ ಹೆಚ್ಚಿನ ಹೊತ್ತು ನೀಡಿರುವುದು ಕಂಡುಬರುತ್ತದೆ.

ಇಕ್ಕೇರಿ ರಾಜರು ತಮ್ಮ ಸಂಸ್ಥಾನದ ಆಳ್ವಿಕೆಗೆ ಅನುಕೂಲವಾಗುವ ಉದ್ದೇಶದಿಂದ ತಮ್ಮ ನಂತರ ಯುವರಾಜರನ್ನು ನೇಮಿಸಿಕೊಳ್ಳುತ್ತಿದುದು ಕಂಡು ಬರುತ್ತದೆ. ಯುವ ರಾಜರಿಗೂ ಸಹ ಆಸ್ಥಾನದಲ್ಲಿ ಪ್ರಮುಖ ಸ್ಥಾನಮಾನ ನೀಡಲಾಗಿತ್ತು. ಸಾಮಾನ್ಯವಾಗಿ ಅರಸರು ತಮ್ಮ ಹರಿಯ ಮಗನನ್ನು ಯುವರಾಜನನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಮಹಾರಾಜರಿಗೆ ಮಕ್ಕಳಿಲ್ಲದ ಸಂದರ್ಭದಲ್ಲಿ ಅಣ್ಣತಮ್ಮಂದಿರ ಅಥವಾ ಸಂಬಂಧಿಕರ ಮಕ್ಕಳನ್ನು ಯುವರಾಜನನ್ನಾಗಿ ನೇಮಿಸಿಕೊಳ್ಳುವ ಪರಿಪಾಠ ಜಾರಿಯಲ್ಲಿತ್ತೆನ್ನಬಹುದು. ಯುವರಾಜರಿಗೆ ಉತ್ತಮ ಶಿಕ್ಷಣ ಕೊಡಿಸುವ ಪದ್ಧತಿ ಜಾರಿಯಲ್ಲಿದ್ದಿತ್ತು. ಕುದುರೆ ಸವಾರಿ, ಆನೆ ಸವಾರಿ, ಕತ್ತಿ ವರಸೆ, ಶಾಸ್ತ್ರ ಪುರಾಣ, ಮೊದಲಾದ ಶಿಕ್ಷಣವನ್ನು ಕೊಡಿಸಲಾಗುತ್ತಿತ್ತು. ಯುವರಾಜರ ವಿವಾಹೋತ್ಸವ ಸಂದರ್ಭದಲ್ಲಿ ದೇವಾಲಯ, ಮಠಗಳಿಗೆ ದಾನ ದತ್ತಿಯನ್ನು ಅಪಾರ ಪ್ರಮಾಣದಲ್ಲಿ ಕೊಡಲಾಗುತ್ತಿತ್ತು. ಚೆನ್ನಮ್ಮಾಜಿಯು ತನ್ನ ಮಗ ಬಸಪ್ಪನಾಯಕನ ಮದುವೆಯ ಸಂದರ್ಭದಲ್ಲಿ ಶೃಂಗೇರಿ ಮಠಕ್ಕೆ ಎರಡು ಸಾಲು ಉಡುಗೊರೆ ಕಳಿಸಿದ್ದಳೆಂದು ಎಸ್.ಕೆ. ಅಯ್ಯಂಗಾರ್, ಅಪ್ ಸಿದ್ ತಿಳಿಸುತ್ತದೆ.

ಹಿಂದೂ ರಾಷ್ಟ್ರದ ಸಂಪ್ರದಾಯದಂತೆ ಮಹಾರಾಜರಿಗೆ ಮಕ್ಕಳಿಲ್ಲದ ಸಂದರ್ಭದಲ್ಲಿ ದತ್ತು ಪುತ್ರರನ್ನು ಸ್ವೀಕರಿಸುವ ಪದ್ಧತಿಯು ಕೆಳದಿ ಅರಸರಲ್ಲಿಯೂ ಹೆಚ್ಚಾಗಿ ಕಂಡು ಬರುತ್ತಿತ್ತು. ಮಹಾರಾಜರಿಗೆ ಗಂಡು ಸಂತಾನವಿಲ್ಲದಿದ್ದ ಸಂದರ್ಭದಲ್ಲಿ ಅಥವಾ ಮಗು ಇನ್ನೂ ಚಿಕ್ಕವನಿದ್ದಾಗ ದತ್ತು ತೆಗೆದುಕೊಳ್ಳುತ್ತಿದ್ದುದು ಕಂಡುಬರುತ್ತದೆ. ಉದಾಹರಣೆಗೆ ಮರಿಯಪ್ಪ ಶೆಟ್ಟಿಯ ಮಗ ಬಸಪ್ಪನೆಂಬುವನನ್ನು ದತ್ತು ತೆಗೆದುಕೊಳ್ಳಲಾಯಿತು. ಆದರೆ ಅವನಿನ್ನೂ ಚಿಕ್ಕವನಾದ ಕಾರಣ, ಅವನನ್ನು ಎದುರಲ್ಲಿಟ್ಟುಕೊಂಡು ಚೆನ್ನಮ್ಮಾಜಿಯು ಆಡಳಿತವನ್ನು ಕೆಲಕಾಲ ನಡೆಸಿದಳೆಂದು ಕೆಳದಿ ನರಪವಿಜಯದಲ್ಲಿ ಉಲ್ಲೇಖಿತವಾಗಿರುವುದು ಕಂಡುಬರುತ್ತದೆ. ಇದೇ ರೀತಿಯಲ್ಲಿ ಕ್ರಿ.ಶ. ೧೭೫೪ರಲ್ಲಿ ಬೂದಿ ಬಸಪ್ಪ ನಾಯಕನು ಸಹ ತನಗೆ ಗಂಡು ಮಕ್ಕಳಿಲ್ಲದ ಕಾರಣ ಸಂಸ್ಥಾನದ ಮುಂದಿನ ಜವಬ್ದಾರಿಯನ್ನು ತಿಳಿದು ಚೆನ್ನಪ್ಪನೆಂಬಾತನನ್ನು ದತ್ತು ಸ್ವೀಕರಿಸಿಕೊಂಡು ಮುಂದೆ ಅವನನ್ನು ಚೆನ್ನಬಸಪ್ಪ ನಾಯಕ ಎಂದು ಹೆಸರಿಸಿದನೆಂದು ತಿಳಿಯಬಹುದು. ಆದರೆ ಕೆಲವು ಶಾಸನಗಳ ಆಧಾರದ ಪ್ರಕಾರ ವೀರಮ್ಮಾಜಿಯು ಆ ಮಗನನ್ನು ಕೊಲ್ಲಿಸಿದ್ದುದಾಗಿ ಹೇಳಲಾಗಿದೆ. ಒಟ್ಟಿನಲ್ಲಿ ಕೆಳದಿ ಅರಸರ ಆಳ್ವಿಕೆಯ ಕಾಲದಲ್ಲಿ ದತ್ತು ಪದ್ಧತಿಯು ಹೆಚ್ಚಾಗಿಯೇ ಬಳಕೆಯಲ್ಲಿತ್ತು.

ಕೆಳದಿ ಅರಸರು ಪ್ರಬಲ ವಿಜಯನಗರ ಸಾಮ್ರಾಜ್ಯಕ್ಕೆ ಅಧೀನವಾಗಿದ್ದರಿಂದ ವಿಜಯನಗರದ ರಾಜಧಾನಿಗೂ ಇಕ್ಕೇರಿ ರಾಜಧಾನಿಗೂ ಬಿಡಿಸಲಾಗದ ಸಂಬಂಧವಿತ್ತು. ಇದರಿಂದ ಇಕ್ಕೇರಿ ನಾಯಕರು ವಿಜಯನಗರದರಸರ ಮಾದರಿಯಲ್ಲಿಯೇ ರಾಜ ದರ್ಭಾರನ್ನು ಬಹು ವಿಜೃಂಭಣೆಯಿಂದಲೇ ರೂಪಿಸಿದ್ದರು. ಇಕ್ಕೇರಿಯನ್ನು ವೆಂಕಟಪ್ಪ ನಾಯಕನು ಆಳುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಸಂದರ್ಶಿಸಿದ್ದ ಇಟಲಿಯ ಪಿಯಾತ್ರೋದೆಲ್ಲಾವಲ್ಲಿಯು ತನ್ನ ಪ್ರವಾಸ ಕಥನದಲ್ಲಿ ಅಂದಿನ ರಾಜದರ್ಭಾರನ್ನು ಸೊಗಸಾಗಿಯೇ ವರ್ಣಿಸಿದ್ದಾನೆ. ಅವನ ಪ್ರಕಾರ ಕೆಳದಿಯ ಅರಸರು ನಿರಂಕುಶ ಪ್ರಭುಗಳಾಗಿದ್ದರು. ದರ್ಮವೇ ಅಂದು ರಾಜನ ನೀತಿ ರೀತಿಗಳನ್ನು ನಿರ್ಧರಿಸುತ್ತಿತ್ತು. ಪ್ರಜೆಗಳ ರಕ್ಷಣೆಗಿಂತಲೂ ಸಹ ಧರ್ಮದ ರಕ್ಷಣೆಯೇ ಅವನ ಅದ್ಯ ಕರ್ತವ್ಯವಾಗಿತ್ತೆಂದು ಹೇಳಿರುವುದು ಕಂಡುಬರುತ್ತದೆ. ಇವರ ನಿರಂಕುಶತ್ವ ಆಳ್ವಿಕೆಗೆ ಸಾಕ್ಷಿ ಎಂದರೆ ಇಕ್ಕೇರಿ ಅರಸರು ಮೂರು ಸಾರಿ ಕಂದಾಯದಲ್ಲಿ ತೆರಿಗೆ ಹೆಚ್ಚಿಸುವಲ್ಲಿ ತೋರಿದ ಧೋರಣೆಯನ್ನು ಸಾಹಿತ್ಯಾಧಾರಗಳಲ್ಲಿ ನೋಡಬಹುದಾಗಿದೆ. ಆಡಳಿತಕ್ಕೆ ಅನುಕೂಲವಾಗುವ ದೃಷ್ಟಿಯಿಂದ ರಾಜನಿಂದಲೇ ನೇಮಿಸಲ್ಪಡುತ್ತಿದ್ದ ಬೃಹತ್ ಪ್ರಮಾಣದ ಮಂತ್ರಿಮಂಡಲವಿರುತ್ತಿತ್ತು. ಮಂತ್ರಿಮಂಡಲದಲ್ಲಿ ಬ್ರಾಹ್ಮಣರು, ಶ್ರೀಮಂತರಿಗೆ ಮಾತ್ರ ಪ್ರವೇಶವಿತ್ತು. ಆದರೆ ದಲಿತರು, ಕೆಳವರ್ಗದವರು ಪ್ರವೇಶಿಸುವಂತಿರಲಿಲ್ಲ. ಸಾಮಾನ್ಯವಾಗಿ ಮಂತ್ರಿ ಪದವಿಯು ವಂಶಪಾರಂಪರ‍್ಯವಾಗಿದ್ದಿತ್ತು. ಆದರೆ ಕೆಲವು ಸಮಯದಲ್ಲಿ ಅರ್ಹತೆಯನ್ನು ಆಧರಿಸಿರುತ್ತಿದ್ದದ್ದು ಕಂಡುಬರುತ್ತದೆ. ಕೆಳದಿ ನೃಪವಿಜಯದಲ್ಲಿ ತಿಳಿದುಬರುವಂತೆ ಇಕ್ಕೇರಿ ಸಂಸ್ಥಾನದಲ್ಲಿ ೬ ರಿಂದ ೮ ರವರೆಗೆ ಮಂತ್ರಿಗಳ ಬಲಾಬಲ ಇದ್ದಿರಬಹುದೆಂದು ಊಹಿಸಬಹುದಾಗಿದೆ. ಅಸ್ಥಾನದಲ್ಲಿ ರಾಜಗುರುಗಳಿಗೆ ವಿಶೇಷ ಗೌರವವಿದ್ದಿತ್ತು. ಬುಕಾನೆನ್‌ನು ತನ್ನ ಪ್ರವಾಸ ಕಥನದಲ್ಲಿ ಉಜ್ಜನಿ ಸ್ವಾಮಿಯವರು ಕೆಳದಿ ಆಸ್ಥಾನದ ರಾಜಗುರುಗಳಾಗಿದ್ದರು ಎಂದು ತಿಳಿಸಿರುತ್ತಾನೆ. ಕೆಲವು ಆಧಾರಗಳ ಪ್ರಕಾರ ಮಾಧವ ಜೋಯ್ಸ್ ಎಂಬುವರು ಆಸ್ಥಾನದ ಗುರುಗಳಾಗಿದ್ದರೆಂದೂ ತಿಳಿದುಬರುತ್ತದೆ. ಇಕ್ಕೇರಿ ನಾಯಕರು ಪ್ರಾರಂಭದಲ್ಲಿ ವೆಂಕಟಾದ್ರಿ ಜೋಯ್ಸರನ್ನು ತಮ್ಮ ಗುರುಗಳನ್ನಾಗಿ ಹೊಂದಿದ್ದರೆಂದು, ಹಿಂದೆ ಅವರ ರಾಜ್ಯದ ಉಗಮದ ಸನ್ನಿವೇಶದಲ್ಲಿ ಜೋಯ್ಸರು ವಹಿಸಿದ್ದ ಪಾತ್ರವನ್ನು ಹಿಂದೆ ತಿಳಿಸಲಾಗಿದೆ. ಮಂತ್ರಿಮಂಡಲದ ಮುಖ್ಯಸ್ಥನನ್ನು ಪ್ರಧಾನಿ ಎಂಬುವವನದಾಗಿದ್ದಿತ್ತು. ಇವನು ಯುದ್ಧದ ಸಂದರ್ಭದಲ್ಲಿ ‘ಮಹಾದಂಡ ನಾಯಕ’ನಾಗಿ ಕಾರ್ಯನಿರ್ವಹಿಸುತ್ತಿದ್ದನು. ಈ ಹುದ್ದೆಯೂ ಸಹ ಯೋಗ್ಯತೆಯ ಆಧಾರದ ಮೇಲೆಯೇ ನೇಮಿಸಿಕೊಳ್ಳುವ ಏರ್ಪಾಡಿದ್ದಿತ್ತು. ೧೫೬೫ರಲ್ಲಿ ನಡೆದ ವಿಜಯನಗರದ ನಿರ್ಣಾಯಕ ಯುದ್ಧದ ತರುವಾಯ ಆ ಸಾಮ್ರಾಜ್ಯದ ಮಂತ್ರಿಗಳು ಕೆಳದಿ ಆಸ್ಥಾನದಲ್ಲಿ ಆಶ್ರಯವನ್ನು ಪಡೆದಿದ್ದರೆಂದು ಕಂಡುಬರುತ್ತದೆ. ಇದಕ್ಕೆ ಇಕ್ಕೇರಿ ಅರಸರು ತುಂಬುಹೃದಯದ ಸ್ವಾಗತವಿತ್ತು.

ಕೆಳದಿ ಸಂಸ್ಥಾನದಲ್ಲಿ ಮಂತ್ರಿಗಳಿಗೆ ಅಧೀನರಾಗಿ ಕಾರ್ಯನಿರ್ವಹಿಸಲು ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತಿದ್ದರು. ಇವರನ್ನು ಅಂದಿನಕಾಲದಲ್ಲಿ ಸರ್ವಾಧಿಕಾರಿಗಳು ಹಾಗೂ ದಳವಾಯಿಗಳು ಎಂಬುದಾಗಿ ಕರೆಯಲಾಗುತ್ತಿತ್ತು. ಸಾಮಾನ್ಯವಾಗಿ ಇವರು ಶಾಸನಗಳನ್ನು ರಾಜರ ಹೆಸರಿನಲ್ಲಿ ಬರೆಯಿಸುವುದು ವಿದೇಶಾಂಗ ವ್ಯವಹಾರಗಳನ್ನು ನೋಡಿಕೊಳ್ಳುವುದು, ಹೊರರಾಷ್ಟ್ರದಿಂದ ನಾಡಿಗೆ ಬಂದವರನ್ನು ಸ್ವಾಗತಿಸುವ ಕೆಲಸವನ್ನು ನಿರ್ವಹಿಸಬೇಕಾಗಿತ್ತು. ಈ ದೃಷ್ಟಿಯಿಂದ ಇವರು ಹಲವು ಭಾಷೆಗಳನ್ನು ಕಲಿಯುವುದು ಕಡ್ಡಾಯವಾಗಿ ಇತ್ತು. ಈ ಮಾದರಿಯಲ್ಲಿ ಮಂತ್ರಿಗಳಿಗೆ ಸಹಾಯಕ ಅಧಿಕಾರ ವರ್ಗ ಹೊಂದಿದ್ದ ಸಂಸ್ಕೃತಿಯು ಕಂಡುಬರುತ್ತದೆ.

ಕೆಳದಿ ಅರಸರು ಸಂಸ್ಥಾನದಲ್ಲಿ ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸುತ್ತಿದ್ದರೆಂದು ಸಾಹಿತ್ಯಾಧಾರಗಳಿಂದ ತಿಳಿದುಬರುತ್ತದೆ. ಈ ದೃಷ್ಟಿಯಿಂದಲೇ ಸಾಮ್ರಾಜ್ಯದಲ್ಲಿ ಹೇಳಿಕೊಳ್ಳುವ ದೊಡ್ಡ ಪ್ರಮಾಣದ ದರೋಡೆ, ಕಳ್ಳತನಗಳು ನಡೆಯುತ್ತಿರಲಿಲ್ಲ. ಅಲೆಕ್ಸಾಂಡರ್ ಹ್ಯಾಮಿಲ್ಟ್‌ನ್ನ್‌ನು “ಕೆಳದಿ ರಾಜ್ಯದಲ್ಲಿ ಯಾರೂ ಸುರಕ್ಷಿತವಾಗಿ ಒಬ್ಬರೇ ರಾತ್ರಿಯ ಹೊತ್ತಿನಲ್ಲಿಯೂ ಸಂಚರಿಸಬಹುದಿತ್ತು. ಅವರಿಗೆ ಯಾವುದರಿಂದಲೂ, ಎಷ್ಟು ಹೊತ್ತಿನಲ್ಲಿಯೂ ಭಯವಿರಲಿಲ್ಲ” ಎಂದು ತನ್ನ ಕಥನದಲ್ಲಿ ಹೇಳಿರುವುದು ನಿದರ್ಶನವಾಗಿದೆ. ಗೋವಿಗೆ ಆಸ್ಥಾನದಲ್ಲಿ ಪವಿತ್ರವಾದ ಸ್ಥಾನವನ್ನು ನೀಡಿ ಸಂಸ್ಥಾನದಲ್ಲಿ ಗೋಹತ್ಯೆ ಹಾಗೂ ಪ್ರಾಣಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಗೋಹತ್ಯೆ ಮಾಡಿದವರು ಕಠಿಣ ಶಿಕ್ಷೆಗೆ ಗುರಿಯಾಗುತ್ತಿದ್ದರು. ಕ್ರಿ.ಶ. ೧೬೪೬ರಲ್ಲಿ ವೀರಭದ್ರನಾಯಕನ ಮಾಲ್ವೆ ಮಠದಲ್ಲಿ ನಡೆದ ಒಳಜಗಳದಲ್ಲಿ ತೊಂದರೆಯನ್ನು ಬಗೆಹರಿಸಿ ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ಆಗುವಂತೆ ಮಾಡಿರುವುದಕ್ಕೆ ಶಾಸನಾಧಾರಗಳಿವೆ. ಕೆಳದಿ ಅರಸರ ಕಾಲದಲ್ಲಿ ತಪ್ಪು ಮಾಡಿದವರನ್ನು ಗಟ್ಟಿಯಾಗಿ ವಿಚಾರ ಮಾಡಿ, ತಪ್ಪು ಮಾಡಿದವರಿಗೆ ಬುದ್ಧಿ ಹೇಳಿಸಿ, ಧರ್ಮದಿಂದ ಬಿಡಬಹುದಾದ್ದನ್ನು ಬಿಟ್ಟು, ಸುಸಂಸ್ಕೃತ ಮನುಷ್ಯರ ಬದುಕಿಗೆ ತೊಂದರೆ ಯಾಗದಂತೆ, ಮಠಧರ್ಮಕ್ಕೆ ತೊಂದರೆಯಾಗದಂತೆ ತಿಳುವಳಿಕೆ ನೀಡಿ ಸುರಕ್ಷಿತವಾಗಿ ಬಗೆಹರಿಸಿದ್ದನೆಂದು ಹೇಳಿರುವುದು ಗಮನಾರ್ಹವಾಗಿದೆ. ಇಕ್ಕೇರಿ ಅರಸರು ಧರ್ಮಕ್ಕೆ ಹೆಚ್ಚಿನ ನಿಷ್ಠೆ ತೋರಿಸುತ್ತಿದ್ದರು ಎಂಬುದಕ್ಕೆ ಅವರು ಧರ್ಮ ಹಾಗೂ ಸಮಾಜಕ್ಕೆ ಅನ್ಯಾಯ, ಅನಾಚಾರಗಳು ನಡೆದಾಗ ತೆಗೆದುಕೊಳ್ಳುತ್ತಿದ್ದ ಕ್ರಮದಿಂದ ವ್ಯಕ್ತವಾಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಶೃಂಗೇರಿ ಮತ್ತು ಕೊಡಲಿ ಶೃಂಗೇರಿ ಮಠಗಳಿಗೆ ಆದ ಒಳಜಗಳಗಳನ್ನು ಸಮರ್ಪಕವಾಗಿ ಬಗೆಹರಿಸಿದ್ದುದ್ದಕ್ಕೆ ಅನೇಕ ಆಧಾರಗಳು ಲಭ್ಯವಿದೆ. ಕೆಳದಿ ಅರಸರು ಸರ್ವ ಧರ್ಮಸಮನ್ವಯಿಗಳಾಗಿದ್ದರು. ಅವರ ಅಸ್ಥಾನದಲ್ಲಿಯೇ ಎಲ್ಲ ಧರ್ಮದವರೂ ಪ್ರಮುಖ ಉದ್ದೇಶಗಳಲ್ಲಿ ಸ್ಥಾನಗಳಿಸಿದ್ದರು. ಸಂಸ್ಥಾನದುದ್ದಕ್ಕೂ ಪ್ರತಿಯೊಂದು ಧರ್ಮಕ್ಕೆ ಸಂಬಂಧಿಸಿದ ದೇವಾಲಯ, ಮಠ, ಬಸದಿ, ಚರ್ಚು ಹಾಗೂ ಮಸೀದಿಗಳು ಇದ್ದವು. ಹಾಗೆ ಇವೆಲ್ಲವುಗಳಿಗೂ ಅರಸರು ದಾನದತ್ತಿಗಳನ್ನು ನೀಡಿರುವುದು ಕಂಡುಬರುತ್ತದೆ. ಹಿರಿಯ ವೆಂಕಟಪ್ಪನಾಯಕನ ಕಾಲದಲ್ಲಿ ರಾಮಾನುಜಾಚಾರ್ಯ ಮತ್ತು ಕಾಶಿಯಿಂದ ಇಕ್ಕೇರಿಗೆ ಆಗಮಿಸಿದ್ದ ಭಟೋಜಿ ದೀಕ್ಷಿತನಿಗೆ ಅದ್ವೈತ, ವಿಶಿಷ್ಟಾದ್ವೈತದಲ್ಲಿ ಚರ್ಚೆ ನಡೆದು ಭಟೋಜಿ ದೀಕ್ಷಿತನು ಜಯಗಳಿಸಿ ಬಿರುದು ಬಾವಲಿಗಳನ್ನು ಪಡೆದನು. ಇದರಿಂದ ಕೆಳದಿ ಅರಸರಿಗೆ “ವಿಶುದ್ಧ ವೈದಿಕಾದ್ವೈತ ಸಿದ್ಧಾಂತ ಪ್ರತಿಷ್ಟಾಪಕ ಶಿವಗುರು ಭಕ್ತಿ ಪರಾಯಣರಾದ” ಎಂಬ ಬಿರುದು ಬಂದಿತ್ತೆಂದು ಕೆಳದಿ ಅರಸರ ಶಾಸನ ಸಂಪುಟ ಹಾಗೂ ಕೆಳದಿ ನೃಪ ವಿಜಯಗಳಲ್ಲಿ ಕಂಡುಬರುತ್ತದೆ. ಪ್ರಸಿದ್ಧ ದೊರೆ ಶಿವಪ್ಪನಾಯಕನು ಜಂಗಮರಿಗಾಗಿ ಮಠಗಳನ್ನು ದೇವಾಲಯಗಳನ್ನೂ ಹಾಗೂ ಬ್ರಾಹ್ಮಣರಿಗಾಗಿ ಆಗ್ರಹಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಾಣ ಮಾಡಿಸಿದನು. ಸುಬ್ರಹ್ಮಣ್ಯ ದೇವಸ್ಥಾನ, ಆನಂದಪುರದ ಮಹತ್ತಿನ ಮಠ, ಅಕ್ಕಿಪೇಟೆ ಮಹತ್ತಿನ ಮಠ, ಕಾಶೀಮಠ ಹಾಗೂ ಇಕ್ಕೇರಿಯ ಮೈಲಾರ ದೇವರುಗಳಿಗೂ ಸಾಕಷ್ಟು ದಾನ ನೀಡಿ ಅವುಗಳ ಅಭಿವೃದ್ಧಿಗೆ ಶ್ರಮಿಸಿದ್ದರು. ಶೃಂಗೇರಿ ಮಠವಂತೂ ಶಿವಪ್ಪನಾಯಕನ ಕಾಲದಲ್ಲಿ ವೈಭವದ ತಾಣವಾಗಿತ್ತೆನ್ನಬಹುದು. ಮಠಗಳಿಗೆ ಜನರು ತಾವು ಬೆಳೆದ ದವಸದಾನ್ಯಗಳನ್ನು ಅರ್ಪಿಸಿದರೆ ಅವರಿಗೆ ಸುಂಕದಲ್ಲಿ ರಿಯಾಯಿತಿ ದೊರೆಯುತ್ತಿತ್ತು. ಕೆಳದಿ ಅರಸರು ವೀರಶೈವ ಧರ್ಮದವರಾದರೂ ಸಹ ಸರ್ವಧರ್ಮವನ್ನು ಪ್ರೀತಿಸುತ್ತಿದ್ದರು. ಇದಕ್ಕೆ ಅವರ ನಿಲುವೆಂದರೆ “ಧರ್ಮವನ್ನು ನಾವು ರಕ್ಷಿಸಿದರೆ, ನಮ್ಮನ್ನು ಧರ್ಮವು ರಕ್ಷಿಸುತ್ತದೆ” ಎಂಬುವುದಾಗಿತ್ತು.

ಕೆಳದಿ ಅರಸರು ಚಲಾವಣೆಗೆ ತಂದಿದ್ದ ನಾಣ್ಯಗಳು ಅಪಾರವಾಗಿ ಇಂದು ಗೊರಕಿದ್ದು ಅವುಗಳ ಮೇಲೆ ಶೈವ ಧರ್ಮದ ಸಂಕೇತಗಳಾದ ಶಿವ ಪಾರ್ವತಿ ಹಾಗೂ ನಂದಿ ಚಿತ್ರಗಳನ್ನು ಬಳಸಿರುವುದು ಕಂಡುಬರುತ್ತದೆ. ಅರಸರು ಗಂಡು ಭೇರುಂಡವನ್ನು ತಮ್ಮ ರಾಜ ಚಿಹ್ನೆಯನ್ನಾಗಿ ಹೊಂದಿದ್ದರೆಂದು ಹೇಳಬಹುದು. ಏಕೆಂದರೆ ಕೆಳದಿ ದೇವಾಲಯದಲ್ಲಿ ಕಂಡುಬರುವ ಗಂಡುಭೇರುಂಡದಿಂದ ಇದನ್ನು ಊಹಿಸಬಹುದಾಗಿದೆ. ಇಷ್ಟೆ ಅಲ್ಲದೆ ಕೆಳದಿ ಅರಸರು ನಾಣ್ಯಗಳ ಮೇಲೆ ಚಂದ್ರಮೌಳೇಶ್ವರ ಮತ್ತು ಶ್ರೀ ಸದಾಶಿವ ಎಂಬುದಾಗಿಯೂ ಅಚ್ಚಿಸಿರುವುದು ಕಂಡುಬರುತ್ತದೆ. ಇವುಗಳ ಆಧಾರದ ಮೇಲೆಯೇ ಅವರು ರಾಜ ಚಿಹ್ನೆಯನ್ನಾಗಿ ಇವುಗಳನ್ನು ಬಳಸಿರಬಹುದೆಂದು ಕೆಲವು ವಿದ್ವಾಂಸರ ಅಭಿಪ್ರಾಯ ಎಂದು ಡಾ. ಕೆ.ಜಿ. ವೆಂಕಟೇಶ ಜೋಯಿಸ್ ರವರು ತಮ್ಮ ಕೆಳದಿ ಶಾಸನಗಳ ಸಾಂಸ್ಕೃತಿಕ ಅಧ್ಯಯನದಲ್ಲಿ ವ್ಯಕ್ತಪಡಿಸುತ್ತಾರೆ.

ಕೆಳದಿ ನಾಯಕರೂ ಸಹ ವಿಜಯನಗರದ ಸಂಸ್ಕೃತಿಯನ್ನು ತಮ್ಮ ಆಳ್ವಿಕೆಯಲ್ಲಿ ಅಳವಡಿಸಿಕೊಂಡಿದ್ದು ಹೆಚ್ಚಿನ ಪ್ರಮಾಣದಲ್ಲಿ ಕಾಣಬಹುದು. ವಿಜಯನಗರದ ಕಾಲದಲ್ಲಿದ್ದ ‘ಗ್ರಾಮ ಮತ್ತು ಹಳ್ಳಿ ಎಂಬ ಪದಗಳು ಗ್ರಾಮೀಣ ಪ್ರದೇಶದ ಸೂಚಕವಾಗಿದ್ದರೆ ‘ಪುರ’ ಎಂಬ ಪದವನ್ನು ಪಟ್ಟಣಕ್ಕೆ ಅನ್ವಯವಾಗುವಂತೆ ಬಳಸುತ್ತಿದ್ದರು. ವ್ಯಾಪಾರ ಮಹಿವಾಟು, ಸಂತೆಗಳು ನಡೆಯುತ್ತಿದ್ದ ಸ್ಥಳಗಳನ್ನು ‘ಪೇಟೆ’ ಎಂದು ಕರೆಯುತ್ತಿದ್ದರು. ಇವುಗಳನ್ನೇ ಇಕ್ಕೇರಿ ನಾಯಕರೂ ಸಹ ತಮ್ಮ ಸಂಸ್ಥಾನದಲ್ಲಿ ಅಳವಡಿಸಿಕೊಂಡಿದ್ದರೆನ್ನಬಹುದು. ಸಂಸ್ಥಾನದ ಪ್ರಮುಖ ಹೋಬಳಿ, ಪಟ್ಟಣ, ಪುರಗಳಲ್ಲಿ ಪ್ರತಿವಾರ ನಿಗದಿತ ದಿನದಂದು ಸಂತೆ ನಡೆಯುತ್ತಿತ್ತು. ಈ ಸಂತೆಗಳೂ ಸಹ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಪ್ರಮಾಣದಲ್ಲಿ ಸಹಕಾರಿಯಾಗುತ್ತಿದ್ದವೆನ್ನಬಹುದು. ಇಕ್ಕೇರಿಯಲ್ಲಿ ಪ್ರತಿ ಶುಕ್ರವಾರ ಸಂತೆ ನಡೆಯುತ್ತಿತ್ತು. ವಿದೇಶಿ ಯಾತ್ರಿಕನಾದ ಪಿಯತ್ರೋದೆಲ್ಲಾವೆಲ್ಲೆಯು ಇಕ್ಕೇರಿಯಲ್ಲಿ ತಾನು ಕಂಡ ಸಂತೆಯ ವೈಶಿಷ್ಟ, ಸಂತೆಯಲ್ಲಿ ದೊರಕುತ್ತಿದ್ದ ವಸ್ತುಗಳು, ಸಂತೆಯ ರೀತಿನೀತಿಗಳನ್ನು ಸಂಕ್ಷಿಪ್ತವಾಗಿ ತನ್ನ ಕಥನದಲ್ಲಿ ಬರೆದಿಟ್ಟಿದ್ದಾನೆ. ಶಾಸನಗಳಲ್ಲಿ ಅಕ್ಕಿಪೇಟೆ, ಭತ್ತದ ಪೇಟೆ, ಹೊಸಪೇಟೆ, ರತ್ನಾಪುರದ ಪೇಟೆ, ಬಿದರೂರು ಸೋಮವಾರ ಪೇಟೆಗಳೆಂದು ಮೊದಲಾದ ಪೇಟೆಗಳ ಹೆಸರುಗಳು ಹೆಸರಿಸಿರುವುದು ಕಂಡುಬರುತ್ತವೆ. ಸಂತೆಯು ಸ್ಥಳೀಯ ‘ಗೌಡ’ನಿಂದ ನಿಯಂತ್ರಿಸಲ್ಪಡುತ್ತಿತ್ತು. ಸಂತೆಯು ಪ್ರಾರಂಭವಾಗಲು ಗೌಡನ ಅಥವಾ ದಿವಾನನ ಅನುಮತಿ ಪಡೆಯಬೇಕಾಗಿತ್ತು ಎಂದು ಊಹಿಸಬಹುದಾಗಿದೆ.

ಪ್ರತಿಯೊಂದು ಪ್ರಮುಖ ಪಟ್ಟಣದಲ್ಲಿಯೂ ಸಹ ‘ನಗರಸಭೆ’ ಹಾಗೂ ‘ಪೌರಸಭೆ’ಗಳು ಇಂದಿನ ಮಾದರಿಯಲ್ಲಿಯೇ ಇರುತ್ತಿದ್ದು ಇವುಗಳು ಕೆಲವು ವಿಶಿಷ್ಟವಾದ ಹಕ್ಕನ್ನು ಹೊಂದಿದ್ದವೆನ್ನಬಹುದು. ಉದಾಹರಣೆಗೆ ಕೇಂದ್ರ ಸರ್ಕಾರವೇ ನಗರಕ್ಕೆ ಸೇರಿದ ಸರಹದ್ದಿನಲ್ಲಿ ಏನೇ ದಾನದತ್ತಿ ನೀಡುವಾಗಲೂ ಸಹ ನಗರಸಭೆಯ ಅನುಮತಿ ಪಡೆಯಬೇಕಿತ್ತು. ಹಾಗೂ ಜನಸಾಮಾನ್ಯರ ಸಾಮಾಜಿಕ, ಸಾಂಸ್ಕೃತಿಕ ಬದುಕಿನಲ್ಲಿ ಸ್ಪಂದಿಸುವ ಸಲುವಾಗಿ ‘ನಗರಮಧ್ಯಸ್ಥ’ ಎಂಬುವನು ಇದ್ದು ಇವನು ನಗರ ಸಭೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದನು. ಇವನು ಗ್ರಾಮೀಣ ಪ್ರದೇಶದ ನ್ಯಾಯಾಧೀಶನಾಗಿಯೂ ಕಾರ್ಯನಿರ್ವಹಿಸುತ್ತಿದ್ದನು. ಗ್ರಾಮ ಹಾಗೂ ಪಟ್ಟಣಗಳಲ್ಲಿ ಎಲ್ಲಾ ಜಾತಿ, ಮತಗಳವರೂ ವಾಸಿಸುತ್ತಿದ್ದರು. ಆದರೆ ಪಂಚಮರು (ಹೊಲೆಯ, ಮಾದಿಗರು) ಊರಿನಿಂದ ಹೊರಗೆ ವಾಸಿಸುತ್ತಿದ್ದರು. ಇವರ ಸ್ಥಿತಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕುಸಿದ್ದಿತ್ತೆನ್ನಬಹುದು. ಆರ್ಥಿಕವಾಗಿ ತುಂಬ ಕೆಳಮಟ್ಟದಲ್ಲಿದ್ದರೆ ಸಾಮಾಜಿಕವಾಗಿ ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿದ್ದರು. ನಗರದಲ್ಲಿ ಪಡುವಕೇರಿ, ಉಪ್ಪಾರಗೇರಿ, ಕುಂಬಾರಗೇರಿ, ಹೊಲಗೇರಿ ಮುಂತಾದ ಪ್ರಮುಖ ಕೇರಿಗಳ ಉಲ್ಲೇಖವನ್ನು ಶಾಸನಗಳಲ್ಲಿ ನೋಡಬಹುದಾಗಿದೆ. ಡಾ. ಕೆ.ಜಿ. ವೆಂಕಟೇಶ್ ಜೋಯಿಸ್ ರವರು ಉಲ್ಲೇಖಿಸಿರುವಂತೆ ಕೆಲವು ಶಾಸನಗಳಲ್ಲಿ ‘ಶೂದ್ರವಾಡ’ ಬ್ರಾಹ್ಮಣವಾಡ’ ಎಂಬ ಪದಗಳೂ ಸಹ ಬಳಕೆಯಾಗಿವೆ. ಇದು ಶೂದ್ರರ ವಾಸಸ್ಥಳ, ಬ್ರಾಹ್ಮಣರ ವಾಸಸ್ಥಳ ಎಂಬ ಅರ್ಥನ್ನು ನೀಡುವಲ್ಲಿ ಬಳಕೆಯಾಗಿರಬಹುದೆಂದು ಅವರ ಅಭಿಪ್ರಾಯವಾಗಿದೆ.

ಆಗ್ರಹಾರವು ಕೆಳದಿ ಅರಸರ ಆಳ್ವಿಕೆಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದಿತ್ತು. ಇದು ವಿಜಯನಗರದರಸರ ಕಾಲದಲ್ಲಿದ್ದಂತೆಯೇ ಮುಂದುವರೆದುಕೊಂಡು ಬಂದಿದ್ದನ್ನು ಗಮನಿಸಬಹುದು. ಅಗ್ರಹಾರದ ನಿವಾಸಿಗಳಾದ ಬ್ರಾಹ್ಮಣರುಗಳನ್ನು ‘ಬುದ್ಧಿವಂತ’ ‘ಗ್ರಾಮಹೆಬ್ಬಾರುವ’ ‘ಹೆಗ್ಗಡೆ’ ‘ಒಡೆಯರು’ ‘ಮಹಾಪ್ರಭು’ಗಳ ಮಹತ್ವದ ಹೆಸರುಗಳಿಂದ ಸಂಭೋಧಿಸಿಕೊಳ್ಳುತ್ತಿದ್ದರು. ಡಾ. ಎ.ವಿ.ವೆಂಕಟರತ್ನಂರವರು ತಮ್ಮ ಮಹತ್ವದ ಕೃತಿಯಾದ ‘ವಿಜಯನಗರ ಸಾಮ್ರಾಜ್ಯದಲ್ಲಿ ಸ್ಥಳೀಯ ಸರ್ಕಾರ’ ಎಂಬ ಕೃತಿಯಲ್ಲಿ ಬುದ್ಧಿವಂತರು ಎಂಬುವುದಕ್ಕೆ ಉದಾಹರಣೆ ನೀಡಲು ಪ್ರಯತ್ನಿಸಿದ್ದಾರೆ. ಅವರ ಪ್ರಕಾರ ಈಗಿನ ಕೊಪ್ಪ ಮೂಡಿಗೆರೆ, ತೀರ್ಥಹಳ್ಳಿ ಮತ್ತು ನಗರ ತಾಲ್ಲೂಕುಗಳ ಶಾಸನಗಳಲ್ಲಿ ‘ಬುದ್ಧಿವಂತರು’ ಎಂಬ ಪದವನು ಸಾಮಾನ್ಯವಾಗಿ ಬಳಸಲಾಗಿದೆ. ಉದಾಹರಣೆಗೆ ಕ್ರಿ.ಶ. ೧೪೩೯ರಲ್ಲಿ ಭೈರಪ್ಪ ಹೆಗ್ಗಡೆ ಬತ್ತ ಬೆಳೆಯುವ ಒಂದು ಜಮೀನನ್ನು ಕೊಂಡುಕೊಂಡು ದೇವರಿಗೆ ದಾನ ಮಾಡಿದನು. ಈ ದಾನವನ್ನು ಪ್ರಭುಗಳು ಮತ್ತು ‘ಬುದ್ಧಿವಂತರು’ ಕಾರ್ಯಗತ ಮಾಡಿದರು. ಕ್ರಿ.ಶ. ೧೫೮೫ರ ಬ್ರಾಹ್ಮಣ ಸ್ಮಾರ್ತಪಂಥಕ್ಕೆ ಸೇರಿದ ಹರಿಹರಪುರ ಮಠದ ಒಂದು ಶಾಸನ ‘ಬುದ್ಧಿವಂತರು’ ಎಂಬ ಪದವನ್ನು ಉಪಯೋಗಿಸುತ್ತದೆ. ಈ ಶಾಸನವು ವಿವಿಧ ಸ್ಥಳಗಳಲ್ಲಿದ್ದ ನಾಲ್ವರು ಸಮಕಾಲೀನರನ್ನು ಹೆಸರಿಸುತ್ತದೆ. ಎಂದು ಮುಂದುವರೆದು ಕೊನೆಗೆ ಕಾರ್ಕಾಳದ ದೊರೆಯ ಸೇವೆಯಲ್ಲಿದ್ದ ‘ಬುದ್ಧಿವಂತರು’ ಹಲ್ತೊರೆಯ ತಿಮ್ಮಯ್ಯಸೇನಬೋದ ಮತ್ತು ನಾಡಿನ ನಿವಾಸಿಗಳು ಈ ವ್ಯವಹಾರಕ್ಕೆ ಸಾಕ್ಷಿಯಾಗಿದ್ದರು ಎಂದು ವಿವರಣೆ ನೀಡುತ್ತಾರೆ. ಹಾಗೆಯೇ ಗ್ರಾಮಹೆಬ್ಬಾರುವ ಹೆಗ್ಗಡೆ, ಹಬ್ಬಾರು ವಕ್ಕಲು, ಹೆಬ್ಬಾರು, ಪ್ರಭು ಎಂದು ಕರೆಸಿಕೊಳ್ಳುತ್ತಿದ್ದ ಬ್ರಾಹ್ಮಣರ ಬಗೆಯೂ ಹಾಗೂ ಅವರ ಅನಿಷ್ಟ ಆಚರಣೆಯ ಸಂಸ್ಕೃತಿಯನ್ನು ತಿಳಿಸುತ್ತಾರೆ. ಸರ್ಕಾರಿ ಅಧಿಕಾರಿಗಳಿದ್ದರೂ ಅಗ್ರಹಾರಗಳಿಗೆ ಅದರದೇ ಆದ ಸ್ವಾಯತ್ತತೆ ಇರುತ್ತಿತ್ತು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಬ್ರಾಹ್ಮಣರಿಗೆ ಮರ‍್ಯಾದೆ ದೊರಕುವಂತೆ ಇಕ್ಕೇರಿ ನಾಯಕರು ದಯಪಾಲಿಸಿದರೆನ್ನಬಹುದು.

ಅಗ್ರಹಾರ ಹಾಗೂ ಹಳ್ಳಿಯ ಗಡಿಗಳನ್ನು ಮರ, ಹಳ್ಳ, ಕೆರೆ, ಕಾಲುವೆ ಅಥವಾ ನೆಟ್ಟ ಲಿಂಗಮುದ್ರೆಗಳ ಮೂಲಕವೂ ನಿಶ್ಚಯಿಸುತ್ತಿದ್ದರು. ಅಂದಿನ ಹಳ್ಳಿಗಳಲ್ಲಿ ಹೊಲಗಳಲ್ಲಿ ಲಿಂಗ ಮುದ್ರೆಯುಳ್ಳ ಕಲ್ಲನ್ನು ನೆಟ್ಟಿರುತ್ತಿದ್ದರು ಎಂದು ಶಾಸನ ತಿಳಿಸುತ್ತದೆ.

***