ಕೆಳದಿ ಅರಸ ಮನೆತನಗಳ ಸಮಗ್ರ ಇತಿಹಾಸವನ್ನು ತಿಳಿಯಲು ಹೆಚ್ಚಿನ ಪ್ರಮಾಣದಲ್ಲಿಯೇ ಸಾಹಿತ್ಯಾಧಾರಗಳು ಲಭ್ಯವಿದ್ದು, ಅವೆಲ್ಲವೂ ಇತಿಹಾಸದ ಮರೆಯಲ್ಲಿ ಹರಡಿಕೊಂಡಿವೆ ಎನ್ನಬಹುದು. ಇವುಗಳಲ್ಲಿ ಕಡತಗಳು, ಓಲೆಗರಿಗಳು, ಚಾರಿತ್ರಿಕ ದೇಶಿಯ ಸಾಹಿತ್ಯಗಳು, ವಿದೇಶಿಯ ಪ್ರವಾಸಿಗರ ಹಾಗೂ ಮತ್ತಿತರ ಪ್ರಮುಖ ಉಲ್ಲೇಖಗಳು ಕೆಳದಿ ಅರಸರ ಬಗ್ಗೆ ಹೆಚ್ಚಿನ ಬೆಳಕನ್ನು ಚೆಲ್ಲುತ್ತವೆ. ಸುಮಾರು ೨೫೦ ವರ್ಷಗಳ ಕಾಲ ಕೆಳದಿ ಅರಸರ ರಾಜಧಾನಿಯಾಗಿ ಮೆರೆಉ ಕರ್ನಾಟಕ ಸಂಸ್ಕೃತಿ ಚರಿತ್ರೆಯಲ್ಲಿ ತನ್ನದೇ ಆಯಾದ ವಿಶಿಷ್ಟ ಛಾಪನ್ನು ಮೂಡಿಸಿರುವ ಮಲೆನಾಡಿನ ಕೆಳದಿ ಎಂಬ ಪುಟ್ಟ ಗ್ರಾಮ ಒಂದು ಸಂಸ್ಥಾನದ ರಾಜಧಾನಿಯಾಗಿ ಮೆರೆದು ಈ ನಾಡಿಗೆ ಅಮೂಲ್ಯ ಸಂಸ್ಕೃತಿಯನ್ನು ಕಾಣಿಕೆ ನೀಡಿದೆ. ಇಲಿ ಆಳ್ವಿಕೆ ನಡೆಸಿದ್ದ ೨೦ ಮಂದಿ ರಾಜರು ಕೆಲವು ರಾಣಿಯರು ಕ್ರಿ.ಶ. ೧೫೦೦ ರಿಂದ ೧೭೬೩ ರವರೆಗೆ ಆಳ್ವಿಕೆ ನಡೆಸಿದರು. ಈ ಅವಧಿಯಲ್ಲಿ ಕೆಳದಿ ಇತಿಹಾಸದ ಬಗ್ಗೆ ಹಲವು ಕೃತಿಗಳ ರಚಿಸಲ್ಪಟ್ಟವು ಇವುಗಳಿಂದ ಅಂದಿನ ಸಂಸ್ಕೃತಿಯನ್ನು ಗಮನಿಸಬಹುದಾಗಿದೆ.

ಲಿಂಗಣ್ಣ ಕವಿ ವಿರಚಿತ: ಕೆಳದಿ ನೃಪವಿಜಯ

ಈ ಕೃತಿಯು ಕೆಳದಿಯ ಇತಿಹಾಸ ತಿಳಿಯಲು ಹೆಚ್ಚಿನ ಸಹಕಾರಿಯಾಗಿದೆ. ಈ ಗ್ರಂಥದಿಂದ ಕೆಳದಿಯ ರಾಜರ ವಮಶ, ರಾಜ್ಯಸ್ಥಾಪನೆಯ ವರ್ಷ, ರಾಜ್ಯವನ್ನು ಸ್ಥಾಪಿಸಿದ ರೀತಿಯು ಸಂಕ್ಷಿಪ್ತವಾಗಿ ತಿಳಿಯುತ್ತದೆ. ಬಸಪ್ಪ ಮತ್ತು ಬಸವಾಂಬೆಯರ ಪುತ್ರರು ಚೌಡಪ್ಪ ಮತ್ತು ಭದ್ರಪ್ಪರೆಂದು ಈ ಗ್ರಂಥವು ತಿಳಿಸುತ್ತದೆ. ರಾಜರ ವ್ಯಕ್ತಿತ್ವದ ಬಗ್ಗೆ ವರ್ಣಿಸುತ್ತಾ ಈ ಸ್ಥಿತಿಯು ಕೆಳದಿಯ ವೀರರಾಣಿ ಚೆನ್ನಮ್ಮಾಜಿಯು ಶಿವಾಜಿಯ ಮಗ ರಾಜರಮನಿಗೆ ಆಶ್ರಯ ನೀಡಿ ಔರಂಗಜೇಬನ ದೈನಿಕರೊಂದಿಗೆ ಹೋರಾಡಿ ಜಯ ಸಂಪಾದಿಸಿದನ್ನು ಸಂಕ್ಷಿಪ್ತವಾಗಿ ತಿಳಿಸಿ ಅಂದಿನ ರಾಜಕೀಯ ಬೆಳವಣಿಗೆಯ ಸಂಸ್ಕೃತಿಗೆ ಕನ್ನಡಿ ಹಿಡಿದಂತೆ ರಚನೆಯಾಗಿದೆ. ಹಿರಿಯ ಬಸವಪ್ಪನಾಯಕನು ಕೇರಳದ ಮಲೆಯಾಳಿಗಳನ್ನು, ಮೈಸೂರು ಅರಸರನ್ನು ಸೋಲಿಸಿದನು. ಪ್ರಸಿದ್ದ ಮೇಣುಪುರಿ ನದಿಗೆ ಸೇತುವೆ ಕಟ್ಟಿಸಿದನು. ಶೃಂಗೇರಿ ಮಠಕ್ಕೆ ದಾನ ನೀಡಿ ಧಾರ್ಮಿಕ ಸಂಸ್ಕೃತಿಯ ಪ್ರಗತಿಗೆ ಪ್ರೋತ್ಸಾಹಿಸಿದ್ದನ್ನು ಈ ಗ್ರಂಥ ತಿಳಿಸುತ್ತದೆ. ಈ ಗ್ರಂಥವು ಪ್ರಸಿದ್ದ ದೊರೆ ದೊಡ್ಡ ಸಂಕಣ್ಣನಾಯಕನ ವ್ಯಕ್ತಿತ್ವವನ್ನು ವರ್ಣಸುತ್ತಾ ಈ ರೀತಿ ಹೇಳಿದೆ “ಬಗೆಬಗೆಯ ದಾನ ಧರ್ಮಾದಿಗಳು ಶಾಸ್ತ್ರೋಕ್ತ ಮಾರ್ಗದಿಂ ವಿರಚಿತ ಮೂಜಿಗ ಮೈದೆ ಪೊಗಳೆ ತನ್ನ ನೃಪನಗಣಿತ ಸಧರ್ಮದಿಂದ ಮಳೆಯಂ ಪೊರದಂ” ಹಾಗೆಯೇ ಶಿಸ್ತಿನ ಸಿಪಾಯಿ ಎಂದೇ ಹೆಸರುವಾಸಿಯಾಗಿರುವ ಶಿವಪ್ಪನಾಯಕನ ಬಗ್ಗೆ ಈ ಗ್ರಥವು ವಣಿಸಿರುವುದೇನೆಂದರೆ “ಹಲವು ವ್ಯಕ್ತಿಗಳಿಂದೇರಿವು ಕಾಲ ಭೈರವ ಶಿವ ನೃಪಾಲ ಗೆಣೆಯಹ ನೃಪರೀ ಕಲಿಯುಗದೊಳಿಲ್ಲಮವನಿಪಕುಲಕಂತಾ ತಿಲಕನೆನಿಸಿ ರಾರಾಜಿಸಿದಂ” ಎಂದೂ ವೈಭವ ಪೂರ್ವವಾಗಿ ತಿಳಿಸಿದೆ. ಹಾಗೆಯೇ ಕಿರಿಯ ಬಸಪ್ಪನಾಯಕನು ಚಿತ್ರದುರ್ಗದ ಮದಕರಿ ನಾಯಕನ ನಾಶಕ್ಕೆ ಕಾರಣವಾದ ಕಟು ಸತ್ಯಸಂಗತಿಯನ್ನು ಎಳೆ ಎಳೆಯಾಗಿ ಹೊರಚೆಲ್ಲುತ್ತದೆ. ಒಟ್ಟಿನಲ್ಲಿ ಈ ಕೃತಿಯಲ್ಲಿರುವ ಕಾವ್ಯಾಂಶದಲ್ಲಿ ಚಾರಿತ್ರಿಕ ಅಂಶ ಹಾಗೂ ಸಂಸ್ಕೃತಿಯ ವಿಷಯಗಳೇ ಮನೆಮಾಡಿಕೊಂಡಿವೆ.

ಶಿವತತ್ವ ರತ್ನಾಕರ

ಈ ಅಮೂಲ್ಯ ಸಂಶೋಧನಾ ಗ್ರಂಥವು ಕೆಳದಿಯ ೧೫ನೇ ಅರಸನಾದ ಬಸಪ್ಪ ನಾಯಕನಿಂದ ರಚಿಸಲ್ಪಟ್ಟಿದೆ. ಇದು ಸಂಸ್ಕೃತ ಭಾಷೆಯಲ್ಲಿದ್ದು ಅಂದಿನ ಕಾಲದ ನೈಜ ಇತಿಹಾಸಕ್ಕೆ ಕನ್ನಡಿಯಂತಿವೆ. ಇದು ಬಸಪ್ಪನಿಗೆ ೪ ಜನ ಮಕ್ಕಳಿದ್ದರೆಂದು ಹಾಗೂ ಪ್ರಾರಂಭದಲ್ಲಿ ಚೌಡಪ್ಪನಿಗೆ ರಾಜ್ಯಕಟ್ಟಲು ನಿಧಿ ದೊರೆತ ಸ್ಥಳದ ಬಗ್ಗೆ ಮಾಹಿತಿ ನೀಡುತ್ತದೆ. ಬಸವಪ್ಪ ನಾಯಕನ ಮಕ್ಕಳಾದ ಸದಾಶಿವ ಭದ್ರಪ್ಪರು ೧೪೩೬ನೆಯ ಶ್ರೀಮುಖ ಸಂವತ್ಸರ ಶ್ರಾವಣ ಶುದ್ಧ ಮೂರರಲ್ಲಿ ಇಕ್ಕೇರಿ ಅರಮನೆಯಲ್ಲಿ ಪಟ್ಟಕಟ್ಟಿಸಿಕೊಳ್ಳುತ್ತಾರೆಂದು, ಸದಾಶಿವನಾಯಕನು ಯಡವ ಮುರಾರಿ ಎಂಬ ಜಾಲ ಹಳ್ಳಿಯ ಪಾಳೆಗಾರರನ್ನು ಸೋಲಿಸಿದ್ದನು. ಇದರಿಂದ ಈತನಿಗೆ “ಯಡವ ಮುರಾರಿ ಕೋಟೆ ಕೋಲಾಹಲು” ಎಂಬ ಬಿರುದು ಬಂತೆಂದು ಈ ಕೃತಿಯು ತಿಳಿಸುತ್ತದೆ. ಈತ ವಿಜಯನಗರದ ಅರಸರಿಗೆ ಉಪದ್ರವಕಾರಿಯಾದ ಸಾವಳ ತಿಮ್ಮನಾಯಕ, ಕೇರಳ ಮತ್ತು ತುಳುವರನ್ನು ಸೋಲಿಸಿದ್ದು ಈ ಗ್ರಂಥ ಸಂಕ್ಷಿಪ್ತವಾಗಿ ವರ್ಣಿಸಿದೆ. “ಮೆರೆಯ ಕಾಸರಗೋಡೋಳ್ ತೊಲಗದ ಕಾಂಬವನ ನೃಪತಿ ತಿಲಕಂ, ಮೆರೆದನತಿ ಸಹಾಸಮಂ” ಎಂದು ಹೇಳುವುದು ಕಂಡುಬರುತ್ತದೆ. ಕೆಳದಿ ಮತ್ತು ಚಂದ್ರಗಿರಿಯಲ್ಲಿ (ಚೆನ್ನಗಿರಿ) ಕೋಟೆ ಕಟ್ಟಿಸಿದ್ದನ್ನೂ, ಈಗಿನ ಸಾಗರ ತಾಲೂಕನ್ನು ನಿರ್ಮಿಸಿದ್ದನ್ನು ತನ್ನ ತಮ್ಮ ಭದ್ರಪ್ಪನನ್ನು ಸಿಂಹಾಸನದಲ್ಲಿ ಕೂರಿಸಿ ತಾನು ನಿವೃತ್ತಿಯಾದುದನ್ನು ಈ ಗ್ರಂಥವು ವಿವರವಾಗಿ ತಿಳಿಸುತ್ತದೆ.

ದೊಡ್ಡ ಸಂಕಣ್ಣನಾಯಕನ ಯಾವುದೇ ಶಾಸನಗಳೂ ಲಭ್ಯವಾಗಿಲ್ಲದ ಕಾರಣ ಆತನ ಸಂಪೂರ್ಣ ಇತಿಹಾಸ ತಿಳಿಯಲು ಈ ಕೃತಿಯು ಮುಖ್ಯ ಆಧಾರವಾಗಿದೆ. ಹಿರಿಯ ವೆಂಕಪ್ಪನಾಯಕನು ಈಗಿನ ಕೌಲೆದುರ್ಗವನ್ನು ಬಲಪಡಿಸಿ ಅದಕ್ಕೆ ಭೂವನಗಿರಿ ದುರ್ಗ ಎಂದು ಕರೆದಿರುವುದು ಕಂಡುಬರುತ್ತದೆ. ವೆಂಕಟಪ್ಪನಾಯಕನು ೧೬೩೦ರಲ್ಲಿ ಲಿಂಗೈಕ್ಯನಾದನೆಂದು ಈ ಗ್ರಂಥವು ಸ್ಪಷ್ಟಪಡಿಸುತ್ತದೆ. ವೀರಭದ್ರನಾಯಕನು ರಾಜಧಾನಿಯನ್ನು ಇಕ್ಕೇರಿಯಿಂದ ಬಿದನೂರಿಗೆ ವರ್ಗಾಹಿಸಿದದ್ದು, ಹಿರಿಯ ಸೋಮಶೇಖರ ನಾಯಕನು ಚೆನ್ನಮ್ಮಾಜಿಯನ್ನು ಮದುವೆಯಾದದ್ದು ಹಾಗೂ ಶಿವಪ್ಪನಾಯಕ ವೆಂಕಟಪ್ಪನಾಯಕನಿಗೆ ರಾಜ್ಯ ವಹಿಸಿದ್ದು ಈ ಕೃತಿಯಿಂದಲೆ ತಿಳಿದುಬರುವುದು. ಈ ಕೃತಿಯು ಅಂದಿನ ಕಾಲದ ಸಾಮಾಜಿಕ, ಧಾರ್ಮಿಕ ಹಾಗೂ ಪ್ರಮುಖವಾಗಿ ವಿಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ

ವೀರಶೈವ ಧರ್ಮ ಶಿರೋಮಣಿ

ಕಿರಿಯ ಬಸವಪ್ಪನಾಯಕನ ಆಸ್ಥಾನದಲ್ಲಿದ್ದ ಷಡಕ್ಷರ ಎಂಬ ಮಂತ್ರಿಯು ಈ ಗ್ರಂಥವನ್ನು ರಚಿಸಿದನೆಂದು ತಿಳಿದುಬರುತ್ತದೆ. ಇದೊಂದು ಮೂಲತಃ ಧರ್ಮ ಗ್ರಂಥವಾದರೂ ಐತಿಹಾಸಿಕ ಸಂಗತಿಯಳಿಗೇನೋ ಕೊರತೆಯಾಗಿಲ್ಲ. ಈ ಕೃತಿಯು ಪ್ರಸಿದ್ದ ಅರಸ ಸದಾಶಿವನಾಯಕನಿಗೆ ಇದ್ದ ಹಳೆಯ ಬಿರುದುಗಳಲ್ಲಿದೆ ‘ಏಕಾಂಗ ವೀರ’ ‘ಬಲವಂತ’ ‘ಅರಿದಲೆ ಮೇಘಡಂಬರ’ ‘ದಿವಾಪ್ರದೀಪ’ ಪಡುವಣ ಸಮುದ್ರಾದೀಶ್ವರ’ ಇತ್ಯಾದಿ ಬಿರುದುಗಳಿದ್ದವೆಂದೂ ವಿವರವಾಗಿ ತಿಳಿಸುತ್ತದೆ. ಮತ್ತೊಬ್ಬ ಅರಸ ವೀರಭದ್ರನಾಯಕನು ಕೊಡುಗೈ ದಾನಿಯಾಗಿದ್ದನೆಂದು, ಈತನ ದಾನ ವೈಭವ ಕೇಳಿ ಮಂದಾರ ಪಾರಿಜಾತ ಸಂತಾನ ಕಲ್ಪವೃಕ್ಷ, ಹರಿಚಂದನವೆಂಬ ಪಂಚವೃಕ್ಷವೇ ನಾಚಿದವಂತೆ, ಕಾಮಧೇನು ಹುಲ್ಲು ಮೇಯಿತಂತೆ ಮುಂತಾದ ಐತಿಹಾಸಿಕ ಸಂಗತಿಯನ್ನು ತಿಳಿಸುತ್ತದೆ. ಪ್ರಸಿದ್ಧ ರಾಣಿಯಾದ ಚೆನ್ನಮ್ಮಳ ವ್ಯಕ್ತಿತ್ವವನ್ನು ವರ್ಣಿಸುತ್ತಾ ಈ ಗ್ರಂಥವು “ಸಮಸ್ತ ದಿಗ್ವಿನಿತೆಯಂ ಕುಟ ಪ್ರದೇಶಕ್ಕೆ ತನ್ನ ಕೀರ್ತಿ ಎಂಬ ವಿಮಲ ವಸ್ತ್ರವನ್ನು ಹೊದಿಸಿ ಸುಜನ ರಂಜನಾ ಕಾರ್ಯವನ್ನು ಎಸಗುತ್ತಾ ಸರ್ವಶ್ಲಾಘ್ಯವಾದ ಸಮಸ್ತ ಮಂಗಳ ಗುಣಶ್ರೀ ಯಾಗಿ ಜಗತ್ತನ್ನು ಆಳಿದ್ದಾಳೆ” ಎಂದು ವಿವರವಾಗಿ ತಿಳಿಸುತ್ತದೆ. ಹಿರಯ ಬಸವಪ್ಪನಾಯಕನ ವ್ಯಕ್ತಿತ್ವದ ಬಗ್ಗೆ ಹೇಳುತ್ತಾ “ಆಕಾಶದ ನಕ್ಷತ್ರ ಎಣಿಸುವ ಪ್ರೌಢಿಮೆಯು, ಸಮುದ್ರತೀರದ ಮರಳನ್ನು ಎಣಿಸುವ ಹಾಗೆಯೇ, ಕುದುರೆಯ ಮೈಗೂದಲನ್ನು ಎಣಿಸುವ ಕೌಶಲ್ಯವು ಲೋಕದಲ್ಲಿ ಯಾರಿಗಾದರೂ ಇದ್ದರೆ ಅಂತವನು ಮಾತ್ರ ಈ ಬಸಪ್ಪನಾಯಕನ ಗುಣವನ್ನು ಎಣಿಸಬಲ್ಲವೆಂದು” ವರ್ಣಿಸಲಾಗಿದೆ, ಹಿರಿಯ ವೆಂಕಟಪ್ಪ ನಾಯಕನ ಆಸ್ಥಾನದಲ್ಲಿದ್ದ ತಿರುಮಲ್ಲಭಟ್ಟನೆಂಬ ಕವಿರಚಿತ “ಕರ್ನಾಟಕ ಶಿವಗೀತೆ” ಎಂಬ ಗ್ರಂಥದಿಂದ ಕೆಳದಿ ನಗರದ ವೈಭವನ್ನು ಗುರುತಿಸಬಹುದು. ಇಲ್ಲಿ ಕೆಳದಿ ನಗರದ ವರ್ಣನೆಯನ್ನು “ಕರ್ಣ ಸಮಾಧಾನ ಶೂರ ಸಕಲ ಮುನಿಜನ ಕರ್ಣನೀಯ ಚರಿತ್ರೆ ಕೆಳದಿಯ ನೃಪರ್ಗೆ ಗೋಕರ್ಣದಿಂದಾರು ಯೋಜನದೊಳಿಹುದಾಜ್ಞೆಯ ದಿಗಾಭಗದಲ್ಲಿ ಮರೆವ ಕರ್ನಾಟಕದ ನೀಕಾಮಿನಿಯ ವದನರೆದು ಕರ್ಣ ಪಾಟಂಕವೆನೋ ಶೋಭಿಸುತ್ತೀಗಳಿದ ಕರ್ಣವಾಮೃತ ಮಹಿಯೊಳಗೆ ಇಲ್ಲವೆನಿಸಿಕೊಂಡಿಕ್ಕೇರಿ ಎಂಬ ನಗರ” ಎಂದು ನಗರದ ವರ್ಣನೆಯು ವೈಭವಪೂರಿತವಾಗಿ ಕಂಡುಬರುತ್ತದೆ.

ಮೇಲಿನ ಗ್ರಂಥಗಳಲ್ಲದೆ ಹಿರಿಯ ಬಸವಪ್ಪನಾಯಕನ ಸೂಕ್ತಿ ಸುಧಾಕರ, ಗಂಗಾದೇವಿಯ ಕೆಳದಿ ರಾಜಾಭ್ಯುದಯಂ, ಕಿರಿಯ ಬಸಪ್ಪನಾಯಕನ ಆಸ್ಥಾನದ ವೆಂಕ ಕವಿಯ ನರಹರಿ ವಿಜಯ, ಹಿರಿಯ ವೆಂಕಟಪ್ಪನಾಯಕನ ಆಸ್ಥಾನದ ರಂಗನಾಥ ದೀಕ್ಷಿತರ ತಂತ್ರ ಸರವ್ಯಾಕ್ಯ, ಅಶ್ವಪಂಡಿತನ ಮಾದಪ್ರಿಯಾ, ಕಿರಿಯ ಬಸಪ್ಪ ನಾಯಕನ ಆಸ್ಥಾನದಲ್ಲಿದ್ದ ಮರಿತೋಂಟದಾರ್ಯನ ವೀರಶೈವನಂದಾ ಚಂದ್ರಿಕ ಮುಂತಾದ ಹಲವು ಅಮೋಘ ಸಾಹಿತ್ಯಾಧಾರಗಳು ಕೆಳದಿ ಸಂಸ್ಥಾನದ ಸಾಂಸ್ಕೃತಿಕ ಚರಿತ್ರೆಯನ್ನು ರಚಿಸಲು ಸಹಕಾರಿಯಾಗಿದೆ.

ವಿದೇಶಿ ಸಾಹಿತ್ಯ

ಕೆಳದಿ ಅರಸರ ಕಾಲದ ಸಂಸ್ಕೃತಿಯು ಕೇವಲ ದೇಶೀಯ ಬರವಣಿಗೆಯಿಂದಲೇ ರೂಪಿತವಾಗದೆ, ಇದಕ್ಕೆ ಪೂರಕವಾಗಿ ವಿದೇಶಿಯರ ಪ್ರವಾಸಿಕಥನಗಳಿಂದಲೂ ಹೆಚ್ಚು ಸಹಕಾರಿಯಾಗಿದೆ. ವಿದೇಶಿಯಾತ್ರಿಕರು ಪ್ರಮುಖವಾಗಿ ಕೆಳದಿಯ ಪ್ರಕೃತಿ ಸೌಂದರ್ಯವನ್ನು ವರ್ಣಿಸುತ್ತಾ, ಅಲ್ಲಿನ ವೈಭವವನ್ನು ಕೊಂಡಾಡಿದ್ದಾರೆ. ಇಟಲಿಯ ಪ್ರೆಟ್ರೋಡೆಲ್ಲಾ ವೆಲ್ಲಾನು, ಪಶ್ಚಿಮ ಘಟ್ಟಗಳ ಬಗ್ಗೆ ಇರುವ ಸೌಂದರ್ಯವು ಇಟಲಿಯ ಅಪನೈನ್ ಪರ್ವತವನ್ನು ಹೋಲುತ್ತಿತ್ತೆಂದು ಹೇಳಿದ್ದಾನೆ. ಫ್ರಾನ್ಸಿಸ್ ರಾಬ್ಬನ್‌ನು ಉತ್ತಂಗ ಪರ್ವತ ಶ್ರೇಣಿ ಮತ್ತು ದಟ್ಟವಾದ ಕಾಡುಗಳಿಂದ ಕೂಡಿದ ಮಲೆನಾಡು ದುರ್ಗಮವಾದ ಮತ್ತು ಅತ್ಯಂತ ಫಲವತ್ತಾದ ಪ್ರಾಂತ್ಯ ಎಂದು ವರ್ಣಿಸಿದ್ದಾನೆ. ಈ ವರ್ಣನೆಗಳಲ್ಲಿಯೇ ಅಲ್ಲಿನ ಸಾಂಸ್ಕೃತಿಕ ಬದುಕನ್ನು ಊಹಿಸಬಹುದಾಗಿದೆ.

ಕೆಳದಿಯ ಅರಸರ ಅತಿಥ್ಯದ ಬಗ್ಗೆ ಇಟಲಿಯ ಪೆಟ್ರೋಡೆಲ್ಲಾ ವೆಲ್ಲಾನು ನನ್ನನ್ನು ನಮ್ಮ ಸಾಮಾನು ಹೊತ್ತುಕೊಂಡು ಒಯ್ಯುವ ಪಲ್ಲಕ್ಕಿಗಾಗಿ ಕಾಯುತ್ತಿದ್ದೆವು ಎಂದಿದ್ದಾನೆ. ಅಲೆಗ್ಸಾಂಡರ್ ಹ್ಯಾಮಿಲ್ಟನು ತನ್ನ ಬರವಣಿಗೆಯಲ್ಲಿ ಬೇರೆ ಬೇರೆ ಕಡೆ ಗುಡಿಸಲುಗಳಿಗೆ ಅಲ್ಲಿ ಹಗಲು ಹೊತ್ತಿನಲ್ಲಿ ವೃದ್ಧರು ಇರುತ್ತಾರೆ. ಆ ಗುಡಿಸಲುಗಳಲ್ಲಿ ಸರ್ಕಾರದ ವೆಚ್ಚದಿಂದ ಪ್ರಯಾಣಿಕರಿಗೆ ಸ್ವಚ್ಛವಾದ ತಣ್ಣೀರು ದೊರೆಯುವ ವ್ಯವಸ್ಥೆ ಇದೆ ಎಂದು ತಿಳಿಸಿದ್ದಾನೆ. ಜಾಕೋಬಸ್, ಕ್ಯಾಂಟರ್, ವಿಶಚರ್ ರವರುಗಳು ಬಿದನೂರಿನಲ್ಲಿ ಯಾವ ಅಪರಿಚಿತ ವ್ಯಕ್ತಿಗೂ ದರೋಟೆ ಹಿಂಸೆಗಳ ಭಯವಿರಲಿಲ್ಲವೆಂದು ವರ್ಣಿಸಿಕೊಂಡಿದ್ದಾರೆ. ಇಕ್ಕೇರಿ ಪಟ್ಟಣದ ಬಗ್ಗೆ ವರ್ಣಿಸುತ್ತಾ ಪೀಟರಮಂಡಿಯು ಇಕ್ಕೇರಿಯು ವಿಶಾಲವಾದ ಬೀದಿಗಳು ಮತ್ತು ಮಾರುಕಟ್ಟೆಯಿಂದ ಕೂಡಿದ ದೊಡ್ಡ ಪಟ್ಟಣವೆಂದಿದ್ದಾನೆ. ಪೆಟ್ರೋಡೆಲ್ಲಾವೆಲ್ಲಾನು ಹೊನ್ನಾವರ ಒಂದು ಉತ್ತಮ ಬಂದರು ಎಂದು, ಅಲ್ಲಿ ನಡೆಯುತ್ತಿದ್ದ ವ್ಯಾಪಾರ ವಹಿವಾಟು, ಅಮದು, ರಪ್ತುಗಳ ವರ್ಣನೆಯನ್ನು ತಿಳಿಸಿರುತ್ತಾನೆ. ಜಾನ್ ಪ್ರೇಯರ್ ಹಿನ್ನಾವರದ ಕೋಟೆ ಸುಭದ್ರವಾದ ಕೋಟೆ ಎಂದಿದ್ದಾನೆ. ಹ್ಯಾಮಿಲ್ಟನ್ ಮಂಗಳೂರು ಕೆನರಾದಲ್ಲಿಯೇ ಅತ್ಯಂತ ದೊಡ್ಡ ಮಾರುಕಟ್ಟೆ ಎಂದಿದ್ದಾನೆ. ಕೆಳದಿಯ ಅರಸರ ಸೈನಿಕ ನೆಲೆಯು ಮಂಗಳೂರಾಗಿತ್ತೆಂದು ಪಿಂಕರ್ಟನ್ ತಿಳಿಸಿದ್ದಾನೆ.

ಮೇಲೆ ಚರ್ಚಿಸಿರುವ ಕೃತಿಗಳಲ್ಲಿ ಕೆಳದಿ ಅರಸರ ಕಾಲದ ರಾಜಕೀಯ ಚರಿತ್ರೆಯಲ್ಲದೆ ಸಂಗೀತ, ನಾಟ್ಯ, ನೃತ್ಯ, ಧರ್ಮ, ಯೋಗ, ತತ್ವಜ್ಞಾನ, ಯುದ್ಧಗಳು, ಸಾಮಾಜಿಕ ಜನರ ಸ್ಥಿತಿಗತಿಯ ಬಗ್ಗೆಯೂ ಸಹ ಹೆಚ್ಚಿನ ಪ್ರಮಾಣದಲ್ಲಿಯೇ ಚರ್ಚಿಸಿರುವುದು ಕಂಡುಬರುತ್ತದೆ. ಕೆಳದಿ ಇತಿಹಾಸ, ಆಡಳಿತ, ಸಾಹಿತ್ಯಕ್ಕೆ ಸಂಬಂದಿಸಿ ಊಗಾಗಲೇ ಇಂದಿನ ಕೆಲವು ವಿದ್ವಾಂಸರು ಅಧ್ಯಯನ ನಡೆಸಿರುವುದು ಕಂಡುಬರುತ್ತದೆ. ರಾಬರ್ಟ್ ಸಿವೆಲ್ ಮೊದಲ ಬಾರಿಗೆ ಕೆಳದಿ ರಾಜವಂಶಾವಳಿಯನ್ನು ತಮ್ಮ ‘ಸ್ಕೆಚ್ ಅಫ್ ದಿ ಡೈನಾಸ್ಟೀಸ್ ಅಫ್ ಸದರ್ನ್ ಇಂಡಿಯಾ’ದಲ್ಲಿ ಪ್ರಕಟಿಸಿದರು. ಸಿವೆಲ್ಲರು ಸಿದ್ದಪಡಿಸಿದ ಕಾಲಾನುಕ್ರಮಣಿಕೆಯಲ್ಲಿ ಇದ್ದ ಕೆಲವು ತಪ್ಪುಗಳನ್ನು ಎಲ್.ಡಿ. ಬಾರ್ನಟ್ ರವರು ತಿದ್ದುಪಡಿ ಮಾಡಿದ್ದಾರೆ. ಕೆಳದಿ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಡಾ. ಕೆ.ಜಿ. ವೆಂಕಟೇಶ್ ಜೋಯಿಸ್, ಪು೭ ಶಾಮಾಶಾಸ್ತ್ರಗಳ ೧೯೨೧ – ೨೨ರಲ್ಲಿ “ಕ್ವಾರ್ಟರ್ಲಿ ಜರ್ನಲ್ ಅಫ್ ದಿ ಮಿಥಿಕ್ ಸೊಸೈಟಿ”ಯಲ್ಲಿ ಮಲೆನಾಡ ನಾಯಕರ ಕುರಿತು ಹೆಚ್ಚು ವಿವರವಾಗಿ ಬರೆದಿರುವವರು. ಎಸ್.ಎನ್. ನರಸಿಂಹಯ್ಯನವರು ೧೯೩೦ – ೩೧ರಲ್ಲಿ ಕೆಳದಿ ರಾಜವಂಶಾವಳಿ ಕುರಿತು ಉತ್ತಮ ಲೇಖನ ಬರೆದಿದ್ದಾರೆ, ಈ ಎಲ್ಲ ದಾಖಲೆಗಳನ್ನು ಆಧರಿಸಿಕೊಂಡು ೧೯೩೦ರಲ್ಲಿ ಎಂ.ಎಸ್. ಪುಟ್ಟಣ್ಣನವರು “ಇಕ್ಕೇರಿ ಸಂಸ್ಥಾನದ ಚರಿತ್ರೆ” ಎಂಬ ಮಹತ್ವದ ಪುಸ್ತಕವನ್ನು ಬರೆದಿದ್ದಾರೆ. ಹಾಗೆಯೇ ಕೆಳದಿ ನಾಯಕರ ಕಾಲ, ಅವರ ದಂಡಯಾತ್ರೆ ಮೊದಲಾದವುಗಳ ಬಗೆಗೆ ಖಚಿತವಾಗಿ ಮಾಹಿತಿಯನ್ನು ಶಾಸನದಲ್ಲಿ ಪಡೆದುಕೊಂಡು ಎನ್. ಲಕ್ಷ್ಮಿನಾರಾಯಣರಾವ್ ಕೃತಿ ರಚನೆ ಮಾಡಿದ್ದಾರೆ. ಆನಂತರದಲ್ಲಿ ಈ ಸಂಸ್ಥಾನದ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಿ ಕೆಳದಿ ಅರಸರ ಪರಿಪರಿಯನ್ನು ಎಳೆಎಳೆಯಾಗಿ ವಿವರಿಸಿರುವ ಕೆಳದಿ ಗುಂಡಾಜೋಯ್ಸರ ಅನೇಕ ಪುಸ್ತಕ ಲೇಖನಗಳು ಪ್ರಕಟವಾದವು ಪ್ರೊ. ಜಿ.ಎಸ್. ದೀಕ್ಷಿತ್ ರ “ಕೆಳದಿ ನಾಯಕರು” ಮತ್ತು ಅವರ ಸಂಪಾದಕತ್ವದಲ್ಲಿ ಹೊರಬಂದ “ಸ್ಟಡೀಸ್ ಇನ್ ಕೆಳದಿ ಹಿಸ್ಟರಿ” ಎಂಬ ಗ್ರಂಥಗಳನ್ನು ಅಧ್ಯಯನ ಮಾಡಬಹುದಾಗಿದೆ. ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪದ ಬಗ್ಗೆ ತಿಳಿಯಲು ಪ್ರೊ. ಅ. ಸುಂದರರವರ “ಕೆಳದಿ ಅರಸರ ಕಾಲದ ವಾಸ್ತು ಮತ್ತು ಮೂರ್ತಿಶಿಲ್ಪ” ಪುಸ್ತಕ ಉಪಯುಕ್ತವಾಗಿದೆ. ಇವುಗಳೆಲ್ಲದರ ಆಧಾರದಿಂದ ಕೆಳದಿ ಅರಸರ ಕಾಲದ ಸಾಂಸ್ಕೃತಿಕ ಚರಿತ್ರೆ ಶ್ರೀಮಂತವಾಗಿದೆ.

ಕೆಳದಿ ಅರಸರ ಕಾಲದ ಒಟ್ಟು ಸಾಹಿತ್ಯ ಕೃತಿಗಳು

ಕನ್ನಡ ಕೃತಿಗಳು ಕೃತಿಕಾರ ಕೃತಿ
೧. ಹಿರಿಯ ವೆಂಕಟಪ್ಪ ನಾಯಕ ಕ್ರಿ.ಶ. ೧೫೯೨ – ೧೬೨೯ ತಿರುಮಲ ಭಟ್ಟ ಕರ್ನಾಟಕ ಶಿವಗೀತೆ
೨. ವೀರಭದ್ರ ನಾಯಕ ಕ್ರಿ.ಶ. ೧೬೨೯ – ೧೬೪೮ ರಾಮಚಂದ್ರ ಕವಿ ಮಲ್ಲಿಕಾಜುನ ಶತಕ ಪಾರ್ವತಿ ಸೋಭಾನೆ ರಾಜ ವೀರಭದ್ರನ ಬಗ್ಗೆ ಕೆಲವು ಸ್ತುತಿ ಶ್ಲೋಕಗಳು
೩. ಶಿವಪ್ಪ ನಾಯಕ ಕ್ರಿ.ಶ ೧೬೪೫ – ೧೬೬೦ ಚರಮೂರ್ತಿ ಬಸವಲಿಂಗ ದೇವರು ವೀರ ಮಹೇಶ್ವರ ಸುಧಾವರ್ಧಿ ಬಗ್ಗೆ ಕನ್ನಡದಲ್ಲಿ ವ್ಯಾಖ್ಯಾನ
೪. ಹಿರಿಯ ವೆಂಕಟಪ್ಪ ನಾಯಕ ಕ್ರಿ.ಶ. ೧೬೬೦ – ೧೬೬೧ ಚೆನ್ನವೀರ ಮಹೇಶ್ವರ ಕಸಕೃತಸ್ನ ಧಾತುಕಳಿ ಕಥೆ ಪುರುಷಸೂಕ್ತ ವ್ಯಾಖ್ಯಾ(ವೀರಶೈವ ಭಾಷ್ಯೆ) ಸಾರಸ್ವತ ವ್ಯಾಕರಣ ಗಮಕ ಸಮಕ
೫. ಹಿರಿಯ ಬಸಪ್ಪ ನಾಯಕ ಕ್ರಿ.ಶ. ೧೬೬೭ – ೧೭೧೪ ಹಿರಿಯ ಬಸಪ್ಪ ನಾಯಕ ಸರ್ಜಾನಾಗಪ್ಪಯ್ಯ ಅಪ್ಪಯ್ಯ (ಲಕ್ಷ್ಮಣ) ಗಂಗಾದೇವಿ ಸೂಕ್ತಿ ಸುಧಾಕರ ಶುಖಸಪ್ತತಿ ಶ್ಲೋಕಗಳು ಕೆಳದಿ ರಾಜ್ಯಾಭ್ಯುದಯಂ
೬. ಹಿರಿಯ ಸೋಮಶೇಖರ ನಾಯಕ ಕ್ರಿ.ಶ. ೧೭೧೪ – ೧೭೩೯ ನಿರ್ಮಾಣ ಮಂತ್ರಿ ಸಂಗನ ಬಸಪ್ಪ ಶಿವಪೂಜಾ ವಿಧಾನ ವೀರಶೈವ ಸುಧಾನಿಧೀ ಟೀಕು
೭. ಕಿರಿಯ ಬಸಪ್ಪ ನಾಯಕ ಲಿಂಗಣ್ಣ ಕವಿ ಕೆಳದಿ ನೃಪವಿಜಯ
ಶಿವಪೂಜಾ ದರ್ಪಣ
ದಕ್ಷದ್ವಾರ ವಿಜಯ
ಪಾರ್ವತಿ ಪರಿಣಯ
ಶಿವಕಲ್ಯಾಣ
ವೆಂಕಣ್ಣ ಕವಿ ಗಣಸಹಸ್ರ ನಾಮ ,
(ಲಿಂಗಣ್ಣನ ಮಗ) ಸುಬ್ಬ(ವೆಂಕಣ್ಣನ ಮಗ) ಪಾರ್ವತಿ ವಲ್ಲಭ ಶತಕ ರುಕ್ಮಣಿ ಸ್ವಯಂವರ(ಯಕ್ಷಗಾನ) ಪಾರಜಾತ (ಯಕ್ಷಾಗಾನ)

(ಕೃಪೆ : ಡಾ ಕೆ.ಜಿ. ವೆಂಕಟೇಶ್ ಜೋಯಿಸ್, ಕೆಳದಿ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೧೯೯೬)

ಸಂಸ್ಕೃತ ಕೃತಿಗಳು

ರಾಜ ಕವಿ ಕೃತಿ
೧. ಹಿರಿಯ ವೆಂಕಟಪ್ಪ ನಾಯಕ ಕ್ರಿ.ಶ ೧೫೯೨ – ೧೬೨೯ ಹಿರಿಯ ವೆಂಕಟಪ್ಪ ನಾಯಕ ಶಿವಗೀತ ವ್ಯಾಖ್ಯಾ ವೀರಶೈವ ಸುಧಾವಾರಿಧೀ ಶಿವಾಷ್ಟಪದೀ
ತಿರುಮಲ ಭಟ್ಟ ಗೀತ ಗೌರೀವರ
ಭಟ್ಟೋಜಿ ಧೀಕ್ಷಿತ, ತತ್ವ ಕೌಸ್ತುಭಂ
ಸಂಗಮೇಶ್ವರ ಯತಿ ಸಂಗಮೇಶ್ವರ ವಿಲಾಸ ಭಾಷ್ಯಂ ಶಿವಸಹಸ್ರನಾಮ ವ್ಯಾಖ್ಯಾ
ರಂಗನಾಥ ದೀಕ್ಷಿತ ತಂತ್ರಸಾರ ವ್ಯಾಖ್ಯಾ
ಅಶ್ವಪಂಡಿತ, ಮಾನಪ್ರಿಯ
ಮಾನಪ್ಪ ಪಂಡಿತ ವೀರಶೈವಾಚಾರ ಕೌಸ್ತುಭಂ
೨. ವೀರಭದ್ರ ನಾಯಕ ಕ್ರಿ.ಶ. ೧೬೨೯ – ೧೬೪೫ ಕೌಂಡ ಭಟ್ಟ ತರ್ಕ ಪ್ರದೀಪಂ ಶವೋಲ್ಲಾಸ (ಕಾಳಹಸ್ತೆ ಸ್ತೋತ್ರಂ)
೩. ಹಿರಿಯ ವೆಂಕಟಪ್ಪ ನಾಯಕ ಕ್ರಿ.ಶ. ೧೬೬೦ – ೧೬೬೧ ಹಿರಿಯ ವೆಂಕಟಪ್ಪ ನಾಯಕ ಪಾದಪೂಜಾ
೪. ಹಿರಿಯ ಬಸಪ್ಪ ನಾಯಕ ಕ್ರಿ.ಶ. ೧೭೧೪ – ೧೭೩೯ ಹಿರಿಯ ಬಸಪ್ಪ ನಾಯಕ ಶಿವತತ್ವ ರತ್ನಾಕರಂ ಸುಭಾಷಿತ ಸುರದ್ರುಮಂ
೫. ಕಿರಿಯ ಸೋಮಶೇಖರ ನಾಯಕ ಕ್ರಿ.ಶ. ೧೭೧೪ – ೧೭೩೯ ನಿರ್ವಾಣಮಂತ್ರಿ ಕ್ರಿಯಾಸಾರ ವ್ಯಾಖ್ಯಾ ನಿಜಗುಣ ಶಿವಯೋಗಿಯ ವಿವೇಕ ಚಿಂತಾಮಣಿಯ ಕೆಲಭಾಗ ಸಂಸ್ಕೃತ ರೂಪಾಂತರ
೬. ಕಿರಿಯ ಬಸಪ್ಪ ನಾಯಕ ಕ್ರಿ.ಶ. ೧೭೩೯ – ೧೭೫೫ ಕಿರಿಯ ಬಸಪ್ಪ ನಾಯಕ ಶೈವ ಸಂಜೀವಿನೀ (ಪಂಚಶ್ಲೋಕ ವ್ಯಾಖ್ಯಾ)
ಮರಿ ತೊಂಟದಾರ್ಯ ವೀರಶೈವಾನಂದವಾದ ಚಂದ್ರಿಕಾ
ವೀರಶೈವಾನಂದವಾದ
ಖಾಂಡ
ವೀರಶೈವಾನಂದ
ಕ್ರಿಯಾ ಖಾಂಡ
ಜ್ಞಾನ ಖಾಂಡ,
ಕೈವಲ್ಯಸಾರ,
ಷಡ್ ಸ್ಥಳ ಕೌಮುದಿ,
ತರ್ಕ ಚಂದ್ರಿಕಾ
ಸಿದ್ದಾಂತ ಶಿಖಾಮಣಿ
ವ್ಯಾಖ್ಯಾ.
ಷಡಕ್ಷರ ಮಂತ್ರಿ ವೀರಶೈವ ಧರ್ಮ
ಶಿರೋಮಣಿ
ಸಂಗನಬಸಪ್ಪ ಮರಿತೋಂಟದಾರ್ಯರ
ವೀರಶೈವಾನಂದ
ಚಂದ್ರಿಕೆಯ ಬಗ್ಗೆ ವಿವರಣೆ
ಚೊಕ್ಕನಾಥ ಸೇವಂತಿಕಾ ಪರಿಣಯ

(ಕೃಪೆ : ಡಾ. ಕೆ.ಜಿ. ವೆಂಕಟೇಶ್ ಜೋಯಿಸ್, ಕೆಳದಿ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಕ.ಸಾ.ಪ. ಬೆಂಗಳೂರು ೧೯೯೬)

ಚೆನ್ನಮ್ಮಾಜಿಯ ಉಪದೇಶ

ಕೆಳದಿಯ ವೀರ ರಾಣಿ ಚೆನ್ನಾಮ್ಮಾಜಿಯು ತನ್ನ ದತ್ತು ಪುತ್ರನಾದ ಹಿರಿಯ ಬಸಪ್ಪ ನಾಯಕನಿಗೆ ಮಾಡಿದ ಉಪದೇಶ ಬಹು ಮಾರ್ಮಿಕವಾಗಿದೆ. ಅದರ ಮೂಲಪಾಠ ಮತ್ತು ಅರ್ಥವನ್ನು ಜಿ.ಎಸ್. ದೀಕ್ಷಿತ್ ರವರು ತಮ್ಮ ಕೆಳದಿ ನಾಯಕರು ಎಂಬ ಮಹತ್ವದ ಪುಸ್ತಕದ ಪುಟ ಸಂಖ್ಯೆ ೫೩ – ೫೪ರಲ್ಲಿ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ಸಂಸ್ಕೃತಿ ಚರಿತ್ರೆಯನ್ನು ಹೇಳುತ್ತಿರುವ ಸಂದರ್ಭದಲ್ಲಿ ಈ ವಿಷಯವನ್ನು ಇಲ್ಲಿ ಹೇಳುವುದು ಅವಶ್ಯಕವೆನಿಸಿದ್ದರಿಂದ ಅವರ ಮೂಲ ಪಾಠ ಹಾಗೂ ಅರ್ಥವನ್ನು ಅಳವಡಿಸಿಕೊಳ್ಳಲಾಗಿದೆ. ಕೆಳದಿ ಕಾಲದ ಸಂಸ್ಕೃತಿಯ ತಿರುಳಿಗೆ ಇದೊಂದು ಮಾದರಿಯಾಗಿರುತ್ತದೆ ಎಂದು ಹೇಳಬಹುದು.

ಮೂಲ ಪಾಠ

ಉಕ್ತಂ ತ್ವಂ ನಾನ್ಯಥಾ ಬ್ರೂಯೂಃ ಕ್ವಾಪಿ ಕಾರ್ಯಂ ನ ಸತ್ಯಜ
ಮಾ ಮಂಚ ಮಧುರಾಲಾಪಂ ನ ಬ್ರೂಯೂ ಹೃದಯಂ ಶಠೇ
ಅ ಮಾರ್ಗೇನ ಪದಂ ಕುರ್ಯಾಃ ಸ್ವೇಷ ಬೇದಂ ಸ ಕಾರಯ
ಪಾಪಂ ವಿಮಂ ಚ ಸುಕೃತಂ ಕುರು ಶಂಭೋಃ ಪದಂ ಭಜ
ಬಜ ಭೂತೇಷ ಕುರುಣಾಂ ಸಂಕ್ರಿತಾನ್ ಪರಿಪಾಲಯ
ನ ನಿಂದಾಂ ರಚ ಯೊನ್ಯೇಷಾಂನ ಸ್ವೈರಮಿಹ ಸಂಚರ
ಜಯಾ ಕಾಮಾದಿಕಾನ್ ದೋಷಾನ್ ಜಗುಪ್ಸಾಂ ಚ ಭದೆ ಕುರು
ವ್ಯಸನ ಭಯಮುನ್ನಂಚ ಚಹೀಂ ಹಿ ವಿಭವೆ ಮದಂ
ಸಂಪ್ರಧಾರಯ ತತ್ವಾದಿ ಭಾವಯೊದ್ವೈತ ಮಾಂತರಂ
ನಾತಿವರ್ತ ಸ್ವ ಸಮಯಂ ವೇದಜ್ಞಂಶ್ಚ ಸಮರ್ಚಯ
ಸ್ವಪ್ನಂ ಭಾವಯ ಸಂಸಾರಂ ಕೋಹಮಿತನುಚಿಂತಯ
ಹಸೇರ ಹಸನೀಯಸ್ತ್ವಂ ಬ್ರೂಹಿ ವಾಕ್ಯಾ ಮನುತ್ತಮಂ
ಜನಸ್ತುತಿ ಪದಂ ಜೀವೇರ ನಾವೃತ್ತಿಗತಿಂ ಭಿಜೆ
ಶಿವಂ ಪ್ರಸಾದ್ಯ ಬಹುಧಾ ಸಂತತಾನಂದ ಭಾಗ್ಭವ

ಅರ್ಥ : ನುಡಿದದ್ದನ್ನು ಬದಲಿಸಿದಿರು, ಎಂದಿಗೂ ಎಲ್ಲಿಯೂ ಕರ್ತವು ಚ್ಯುತನಾಗದಿರು, ಸರ್ವದಾ ಮಧುರವಾಗಿ ಮಾತನಾಡುವಂತೆ ಎಚ್ಚರವಹಿಸು, ದುಷ್ಟರಿಗೆ ನಿನ್ನ ಹೃದ್ಗತವನ್ನು ತೋಡದಿರು, ದುರ್ಮಾರ್ಗ ಹಿಡಿಯದಿರು, ಸ್ವಜನರಲ್ಲಿ ಭೇದವೆಣಿಸದಿರು. ಪಾಪಕಾರ್ಯ ಮೊಡದಿರು, ಸತ್ಕಾರ್ಯಗಳನ್ನು ಮಾಡು. ಸದಾ ಶಂಭುವಿನ ಪಾದಗಳನ್ನು ಧ್ಯಾನಿಸು, ಸಕಲ ಜೀವಿಗಳಲ್ಲಿ ದಯೆ ತೋರು, ಆಶ್ರಯ ಬಯಸಿ ಬಂದವರಿಗೆ ರಕ್ಷಣೆ ನೀಡು, ಪರರನ್ನು ನಿಂದಿಸದಿರು, ಪ್ರಪಂಚದಲ್ಲಿ ಆತ್ಮ ಸಂಯಮವಿಲ್ಲದೆ ನಡೆಯದಿರು. ಕಾಮಾದಿ ದೋಷಗಳನ್ನು ಜಯಿಸು ಮತ್ತು ಹುಟ್ಟು ಸಾವುಗಳಿಂದ ಮುಕ್ತಿಪಡೆ. ವಿಪತ್ಕಾಲದಲಿ ಕೂಡ ಧೃತಿಗೆಡದಿರು. ಸಿರಿತನ ಬಂದಾಗ ಸೊಕ್ಕದಿರು. ತತ್ವವನ್ನು ಕುರಿತು ಚಿಂತಿಸು, ಅದ್ವೈತ ತತ್ವದ ತಿರುಳನ್ನು ತಿಳಿದುಕೊ, ಸುಸಂಧಿಯನ್ನು ಕಳೆದುಕೊಳ್ಳದಿರು, ವೇದಜ್ಞರನ್ನು ಸನ್ಮಾನಿಸು. ಜೀವನವನ್ನು ಕನಸೆಂದು ತಿಳಿ, ನಾನು ಯಾರು? ಎಂಬ ಪ್ರಶ್ನೆಯನ್ನು ವಿವೇಚಿಸು, ನೀನು ನಗೆಗೀಡಾಗದಂತೆ ನಗು. ಉತ್ತಮವಾಗಿ ಮಾತನಾಡು, ಜತಸ್ತುತಿ ಮಾಡುವ ಹಾಗೆ ನಡೆ, ಪುನರ್ಜನ್ಮ ತಾರದ ಮಾರ್ಗವನ್ನು ಅನುಸರಿಸು, ಶಿವನನ್ನು ವಿವಿಧ ರೀತಿಯಲ್ಲಿ ಪೂಜಿಸು ಮತ್ತು ಅನಂತ ಆನಂದವನ್ನು ಅನುಭವಿಸು ಎಂದು ಬಹು ಅರ್ಥಪೂರ್ಣವಾದ ನುಡಿಮುತ್ತುಗಳನ್ನು ಹೇಳಿ ಸತ್ಯ ಧರ್ಮ ಹಾಗೂ ಅಹಿಂಸೆಯ ಮೂಲ ಸ್ವರೂಪವನ್ನು ಮೈಗೂಡಿಸಿಕೊಂಡು ಆಳ್ವಿಕೆ ನಡೆಸಿದ ಚೆನ್ನಮ್ಮಾಜಿಯು ಇಂದಿನ ಮಹಿಳೆಯರಿಗೂ ಮಾದರಿಯಾಗಿ ಕಂಡುಬರುತ್ತಾಳೆಂದರೆ ಅತಿಶಯೋಕ್ತಿಯೇನಲ್ಲ. ಮೇಲಿನ ಆಧಾರಗಳಿಂದಲೇ ನಾವು ಅಂದಿನ ಸಂಸ್ಕೃತಿಯನ್ನು ಹಾಗೂ ಅವರ ಅಳವಡಿಕೆ ಇಕ್ಕೇರಿ ಅರಸರು ನೀಡಿದ ಮಹತ್ವವನ್ನು ಗುರುತಿಸಬಹುದಾಗಿದೆ.

೪. ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿರುವ ಕೆಳದಿ ಅರಸರ ಕಾಲದ ಸಾಹಿತ್ಯ ಕೃತಿಗಳು.

ಕೆಳದಿ ಅರಸರು ಕವಿಗಳು ಕೃತಿಗಳು
೧. ಹಿರಿಯ ವೆಂಕಟಪ್ಪ ನಾಯಕ ೧೫೮೨ – ೧೬೨೯ ಸ್ವಯಂ ಕವಿ ಶಿವಗೀತಾ ವ್ಯಾಖ್ಯಾ (ಸಂಸ್ಕೃತ)
ತಿರುಮಲಭಟ್ಟ ೧೬೦೦ ಕರ್ನಾಟಕ ಶಿವಗೀತೆ (ಕನ್ನಡ)
ಭಟ್ಟೋಜಿ ದೀಕ್ಷಿತ ಸಿದ್ಧಾಂತ ಕೌಮುಧಿ (ಸಂಸ್ಕೃತ)
೨. ಹಿರಿಯ ಬಸಪ್ಪ ನಾಯಕ ೧೬೯೭ – ೧೭೧೪

 

 

ಮೌನಪ್ಪ ಪಂಡಿತ ೧೭೦೦ ವೀರಶೈವಾಚಾರ ಕೌಸ್ತುಭ ಸಂಸ್ಕೃತ
೩. ಕಿರಿಯ ಸೋಮಶೇಖರ ನಾಯಕ ೧೭೧೪ – ೧೭೩೯

 

ನಿರ್ವಾಣ ಮಂತ್ರಿ (೧೭೨೫) ಕ್ರಿಯಾಸಾರ ವ್ಯಾಖ್ಯಾ ಸಂಸ್ಕೃತ
(೧೭೨೫) ಶಿವಪೂಜಾ ವಿಧಾನ ಕನ್ನಡ
(೧೭೨೫) ವಿವೇಕ ಚಿಂತಾಮಣಿ ಸಂಸ್ಕೃತ
೪. ಹಿರಿಯ ಬಸಪ್ಪ ನಾಯಕ (೧೭೩೯ – ೧೭೫೪) ಷಡಕ್ಷರ ಮಂತ್ರಿ ೧೭೪೫ ವೀರಶೈವ ಧರ್ಮ ಶಿರೋಮಣಿ (ಸಂಸ್ಕೃತ)
ಮರಿ ತೋಂಟದಾರ್ಯ (೧೭೫೦) ವೀರಶೈವಾನಂ ಚಂದ್ರಿಕೆ(ಸಂಸ್ಕೃತ)
(೧೭೫೦) ಸಿದ್ಧಾಂತ ಶಿಖಾಮಣಿ ವ್ಯಾಖ್ಯಾ (ಸಂಸ್ಕೃತ)
೫. ದೊಡ್ಡ ಸಂಕಣ್ಣ ನಾಯಕ ಕ್ರಿ.ಶ. ೧೫೪೫ – ೧೫೫೮ ಚೆನ್ನವೀರ ಮಾಹೇಶ್ವರ (೧೫೫೦) ಕಾಶೀ ಖಾಂಡ

(ಕೃಪೆ : ಡಾ. ಕೆ.ಜಿ. ವೆಂಕಟೇಶ್ ಜೋಯಿಸ್, ಕೆಳದಿ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಕ.ಸಾ.ಪ. ಬೆಂಗಳೂರು ೮.)

ಉಪಸಂಹಾರ

ವಿಜಯನಗರದ ಸಾಮ್ರಾಜ್ಯವು ವೈಭವದಿಂದ ಮೆರೆಯುತ್ತಿದ್ದ ಸಮಯದಲ್ಲಿ ಕೆಳದಿ ಸಂಸ್ಥಾನದ ಉದಯವು ಕರ್ನಾಟಕದ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದು ಮಹತ್ವವೆನ್ನಿಸಿಕೊಂಡಿದೆ. ವಿಜಯನಗರದ ಪತನದ ನಂತರ ದಕ್ಷಿಣ ಭಾರತದಾದ್ಯಂತ ನೂರಾರು ಹಿಂದೂ ಸಣ್ಣಪುಟ್ಟ ಸಾಮ್ರಾಜ್ಯಗಳು ಸ್ವತಂತ್ರವಾಗಿ ಆಳ್ವಿಕೆ ನಡೆಸಲು ಪ್ರಾರಂಭಿಸಿದರೂ ಇಕ್ಕೇರಿಯು ಮಾತ್ರ ವಿಜಯನಗರದ ಪರಂಪರೆ, ಧ್ಯೇಯ, ಉದ್ದೇಶಗಳನ್ನು ಚಾಚೂ ತಪ್ಪದೆ ಮುಂದುವರಿಸಿಕೊಂಡು ಬಂದಿತ್ತೆನ್ನಬಹುದು. ಸುಮಾರು ಹದಿನೆಂಟು ಜನ ಅರಸರುಗಳಿಂದ ಆಳಲ್ಪಟ್ಟ ಸಾಮ್ರಾಜ್ಯವು ಇಬ್ಬರು ವೀರ ಮಹಿಳೆಯರಿಂದ ವಿಜೃಂಭಣೆಯಿಂದ ಆಳಿಸಿಕೊಂಡ ಮಹತ್ವವಾದ ಸಂಸ್ಥಾನವಾಗಿದೆ. ಸುಮಾರು ೨೬೫ ವರ್ಷಗಳ ಕಾಲ ಕರ್ನಾಟಕದ ಸಂಸ್ಕೃತಿಯ ಉಳಿವಿಗಾಗಿ ರಕ್ಷಣೆಗಾಗಿ ಹೋರಾಡಿದ ತಾಯಿ ನಾಡಾಯಿತು ಇಕ್ಕೇರಿ, ಸಣ್ಣ ಪಾಳೆಯ ಪಟ್ಟಾಗಿ ತಲೆ ಎತ್ತಿದ ಈ ನಾಡು ಕೇರಳದ ಕಾಸರಗೋಡು, ಬಲಿಯಾಪಟಮ್ ನಿಂದ ಉತ್ತರದಲ್ಲಿ ಕಾರವಾರ ಗೋವಾದ ವರೆವಿಗೂ ಪೂರ್ವದಲ್ಲಿ ಅರಬ್ಬಿ ಸಮುದ್ರ ಪಶ್ಚಿಮದಲ್ಲಿ ಚಿಕ್ಕನಾಯಕನ ಹಳ್ಳಿಯವರೆಗೆ ವಿಸ್ತೀರ್ಣ ಹೊಂದುವ ಸಂಸ್ಥಾನವಾಗಿತ್ತೆಂದರೆ ಅಚ್ಚರಿಯೇ?

ಈ ಪ್ರಬಂಧದ ಸಿದ್ಧತೆಗೆ ಕೆಳದಿ ಸಂಸ್ಥಾನದ ಬಗ್ಗೆ ಇಂಚು ಇಂಚನ್ನು ಅಧ್ಯಯನ ನಡೆಸಿರುವ ಕೆಳದಿ ಗುಂಡಾಜೋಯಿಸ್ ರವರ ಎಲ್ಲ ಪುಸ್ತಕಗಳೂ, ಲೇಖನಗಳು ಹಾಗೂ ಡಾ. ಕೆಳದಿ ವೆಂಕಟೇಶ್ ಜೋಯಿಸ್‌ರವರ ಕೆಳದಿ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಎಂಬ ಕೃತಿಗಳನ್ನು ಹೆಚ್ಚಾಗಿ ಬಳಸಿಕೊಂಡಿರುತ್ತೇನೆ. ಇದಕ್ಕಾಗಿ ಮಾನ್ಯರಿಗೆ ಧನ್ಯವಾದಗಳನ್ನು ತಿಳಿಸಬಯಸುತ್ತೇನೆ. ಪ್ರಬಲ ರಾಜವಂಶದವರ ಸಾಮ್ರಾಜ್ಯದ ಅಧ್ಯಯನಕ್ಕೆ ಇಂದು ಹೆಚ್ಚು ಹೆಚ್ಚು ಗಮನವನ್ನು ನಮ್ಮ ವಿದ್ವಾಂಸರು ನೀಡುತ್ತಿರುವುದರಿಂದ ಇಕ್ಕೇರಿ ಸಂಸ್ಥಾನದ ಸಾಮಂತ ಪ್ರಬಲ ರಾಜ್ಯಗಳ ಚರಿತ್ರೆ ಸಂಪೂರ್ಣ ಗೌಣವಾಗುತ್ತಿದೆ. ಈ ಹಂತದಲ್ಲಿ ಇತಿಹಾಸಗಾರರು, ಸಂಶೋಧಕರು ಹೆಚ್ಚಿನ ಗಮನ ಹರಿಸಿ ಇಕ್ಕೇರಿ ಇತಿಹಾಸವನ್ನು ಅದರಲ್ಲಡಗಿರುವ ಸಾಂಸ್ಕೃತಿಕ ಅಂಶವನ್ನು ಹೊರತೆಗೆದಾಗ ಮಾತ್ರ ಇಕ್ಕೇರಿ ಚರಿತ್ರೆಯ ಜೊತೆಗೆ ರಾಷ್ಟ್ರ ಚರಿತ್ರೆಯೂ ಶ್ರೀಮಂತವಾಗುತ್ತದೆ.

***