ಪೀಠಿಕೆ : ಭವ್ಯ ಪರಂಪರೆಯೊಂದಿಗೆ ಉಜ್ಜಲ ಭವಿಷ್ಯವನ್ನು ಹೊಂದಿದ್ದ ಮೈಸೂರು ಸಂಸ್ಥಾನವು ಶೃಂಗಾರ ಪ್ರಿಯರಿಗೂ, ಸೌಂದರ್ಯಪ್ರಿಯರಿಗೂ, ಸಂಸ್ಕೃತಿ ಪ್ರಿಯರಿಗೂ, ಇತಿಹಾಸ, ವಾಸ್ತು ಶಿಲ್ಪ, ನಾಣ್ಯ, ಶಾಸನ, ಚಿತ್ರಕಲೆಗಳಲ್ಲಿ ಆಸಕ್ತಿ ಉಳ್ಳವರಿಗೂ, ಕೇವಲ ವಿನೋದ ವಿಹಾರಗಳನ್ನೇ ಬಯಸುವ ಜನರಿಗೂ, ಶಾಂತಿ ಪ್ರಿಯರಿಗೂ ಗ್ರಾಮಗಳ ಏಳಿಗೆಗಾಗಿ, ಗ್ರಾಮೀಣ ಬದುಕಿಗೆ ಸಮನಾದ ಸೌಲಭ್ಯಗಳನ್ನು ನೀಡಿ, ಏಕ ಪ್ರಕಾರವಾದ ಆಕರ್ಷಣೆಯನ್ನೂ ನೀಡಿದಂತಹ ವೈಶಿಷ್ಟ್ಯ ಪೂರ್ಣವಾದ ಮಾದರಿ ಸಂಸ್ಥಾನ ಮೈಸೂರು. ಈ ನಾಡು ಜೀವನದಿಗಳಿಂದ, ಕೆರೆಕಟ್ಟೆಗಳಿಂದ, ಗಿರಿಧಾಮಗಳಿಂದ, ಕಾಡು ಮೇಡುಗಳಿಂದ, ನೋಡುಗರ ಬೀಡುಗಳಿಂದ ಸಂಪದ್ಭರಿತವಾಗಿ ವಿವಿಧ ಮಾನವ ಸಂಸ್ಕೃತಿಗಳ ಬೀಡಾಗಿ ಕಂಗೊಳಿಸಿದೆ. ಈ ಪ್ರದೇಶವು ಅನೇಕ ಪ್ರಾಚೀನ ಸಾಮ್ರಾಜ್ಯಗಳು ಮೆರೆದು ಅಮೂಲ್ಯ ಸಂಸ್ಕೃತಿಯ ಬೀಜವನ್ನು ಬಿತ್ತಿರುವ ಪುರಾಣ ಪ್ರಸಿದ್ಧ ಸ್ಥಳವಾಗಿದೆ.

ಮೈಸುನಾಡು, ಮಯಿಸೂರು, ಮಯೂರು, ಮಹಿಷಊರು ಎಂದು ಅನೇಕ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದ ಮೈಸೂರು, ಮಹಾಭಾರತದ “ಮಹಿಷ್ಮತಿ”ಯಾಗಿತ್ತೆಂದೂ ಹೇಳುತ್ತಾರೆ. ಕ್ರಿ.ಶ. ೩ನೇ ಶತಮಾನದಲ್ಲಿ ಟಾಲೆಮಿಯಾ, ಗ್ರೀಕ್ ಭೂಗೋಳಶಾಸ್ತ್ರಜ್ಞನೂ ಈ ಪ್ರದೇಶವನ್ನು ಉಲ್ಲೇಖಿಸಿರುವುದು ತಿಳಿದುಬರುತ್ತದೆ. ಕ್ರಿ.ಶ. ೩ನೇ ಶತಮಾನದ ತಂಜಾವೂರಿನ ಪಟಗಳಲ್ಲಿ ಮುಯ್ಸೂರು ನಾಡಿನ ಹೆಸರಿದೆ. ಅನಂತರದ ಶಾಸನ, ಸಾಹಿತ್ಯಗಳಲ್ಲಿ ಇಂದಿನ ಮೈಸೂರು ಉಲ್ಲೇಖಿತವಾಗಿದೆ. ಹೀಗೆ ‘ಮಾಹಿಷೇಕ’ ಮಹಿಷ’ ವಿಷಯದಿಂದಲೇ ಮೈಸೂರು ಉಗಮವಾಗಿರಬಹುದು. ತಮಿಳಿನಲ್ಲಿ ಇದನ್ನೇ ಎರೆವೆಯೂರ್ ಎರುವೆಯೂರಾನ್ (ಎರಮ್ಮ – ಮಹಿಷ) ಎನ್ನುತ್ತಾರೆ. ಇಂಥಹ ಪ್ರಸಿದ್ಧ ಹಾಗೂ ಪ್ರಾಚೀನ ಇತಿಹಾಸ ಹೊಂದಿರುವ ಸ್ಥಳದಲ್ಲಿ ಒಡೆಯರ್ ವಂಶಸ್ಥರು ತನ್ನದೆ ಆದ ಸಂಸ್ಥಾನವನ್ನ ಸ್ಥಾಪಿಸಿ ವಿಶಿಷ್ಟ ಸಂಸ್ಕೃತಿಯ ಉಗಮಕ್ಕೆ ಕಾರಣಕರ್ತರಾಗಿದ್ದರು.

ಮೈಸೂರು ಒಡೆಯರು ವಿಜಯನಗರದ ಅರಸರ ಸಮಕಾಲೀನರಾಗಿ ಸಾಮಂತರಾಗಿ ಅವರ ನೆರಳಲ್ಲಿಯೇ ಬೆಳೆದವರು. ವಿಜಯನಗರದ ಅವನತಿಯ ನಂತರ ಅಂದಿನ ಎಲ್ಲಾ ರೀತಿಯ ಸಂಸ್ಕೃತಿಯನ್ನು ಚಾಚೂ ತಪ್ಪದೆ ಪಾಲಿಸಿಕೊಂಡ ಸಂಸ್ಥಾನವೇ ಮೈಸೂರು, ಆಡಳಿತ ಪದ್ಧತಿ, ಆರ್ಥಿಕ ಪದ್ಧತಿ, ವಾಣಿಜ್ಯ, ಹಬ್ಬ ಹರಿದಿನಗಳ ಆಚರಣೆ, ದಸರಾ ಹಬ್ಬದ ವೈಭವದ ದಿನಗಳನ್ನು ಮೈಸೂರು ಅರಸರು ವಿಜಯನಗರದ ಅರಸರಿಂದ ಪ್ರಭಾವಿತರಾಗಿ ಬೆಳೆಸಿ ಉಳಿಸಿಕೊಂಡು ಬಂದರು. ಈ ದೃಷ್ಟಿಯಿಂದಾಗಿ ಇಡೀ ಭರತ ಖಂಡದಲ್ಲಿಯೇ ಅಲ್ಲದೆ ವಿಶ್ವದಲ್ಲಿಯೇ ಮೈಸೂರು ಒಂದು ಸಾಂಸ್ಕೃತಿಕ ಸ್ಥಳವಾಗಿ ಕಂಗೊಳಿಸುತ್ತಿದೆ. ಇಂದಿಗೂ ನಡೆಯುತ್ತಿರುವ ವಿಶ್ವವಿಖ್ಯಾತ ದಸರಾ ಉತ್ಸವ ಈ ಹಂತದಲ್ಲಿ ಪ್ರಮುಖವಾಗಿದೆ. ಕರ್ನಾಟಕದ ಚರಿತ್ರೆಯಲ್ಲಿ ಮೈಸೂರು ಸಂಸ್ಥಾನದ ಸಾಂಸ್ಕೃತಿಕ ಜೀವನದ ಇತಿಹಾಸವು ಮಹತ್ವಪೂರ್ಣವಾಗಿ ಕಂಡುಬರುತ್ತದೆ.

ಮೈಸೂರು ರಾಜ್ಯವನ್ನು ೫೭೦ ವರ್ಷಗಳಷ್ಟು ಕಾಲ ಆಳ್ವಿಕೆ ನಡೆಸಿದ ಒಡೆಯರ್ ಮನೆತನದ ಎಲ್ಲ ೨೫ ಅರಸರೂ ಸಮರ್ಥರೆಂದು ಹೇಳಲಾಗುವುದಿಲ್ಲ. ಇವರುಗಳಲ್ಲಿ ಅಶಕ್ತರೂ, ಅನಾಮಧೇಯರೂ ಆಗಿರುವವರು ಹೆಚ್ಚಾಗಿಯೇ ಇದ್ದಾರೆ. ಒಡೆಯರ್‌ರವರ ಮೂಲ ಪುರುಷರಾದ ಯದುರಾಯರ (೧೩೯೯) ನಂತರ ಮೈಸೂರು ಸಾಮ್ರಾಜ್ಯವು ಮತ್ತೆ ಬೆಳಕಿಗೆ ಬಂದದ್ದು ೧೫೭೮ರಲ್ಲಿ ಅಧಿಕಾರಕ್ಕೆ ಬಂದ ರಾಜ ಒಡೆಯರಿಂದಲೇ ಇವರ ನಂತರ ಬಂದ ಕಂಠೀರವ ನರಸರಾಜ ಒಡೆಯರು. ಚಿಕ್ಕ ದೇವರಾಜ ಒಡೆಯರ್, ಮುಮ್ಮಡಿ ಕೃಷ್ಣರಾಜ ಒಡೆಯರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಆಳ್ವಿಕೆಯ ಕಾಲವು ಮೈಸೂರು ಸಂಸ್ಥಾನವನ್ನು ಭರತಖಂಡದಲ್ಲಿಯೇ “ಮಾದರಿ ಸಂಸ್ಥಾನ” ಎಂದು ಗುರುತಿಸುವಂತೆ ಮಾಡಿತು. ಸಂಸ್ಥಾನದ ಕೀರ್ತಿ ಪ್ರತಿಷ್ಠೆಗಳನ್ನು ಬೆಳೆಸಿ, ಗಡಿ ಪ್ರದೇಶಗಳನ್ನು ವಿಸ್ತರಿಸಿ, ಕರ್ನಾಟಕದ ಸಂಸ್ಕೃತಿ ಸಾಹಿತ್ಯಗಳ ಆಶ್ರಯ ದಾತರಾಗಿ ಮುಖ್ಯವಾಗಿ ಪ್ರಜಾಹಿತವನ್ನೇ ತಮ್ಮ ಮುಖ್ಯ ಧ್ಯೇಯವಾಗಿಸಿದ್ದ ಇವರು ವಿಜಯನಗರ ಸಾಮ್ರಾಜ್ಯದ ನಂತರ ಸಂಸ್ಕೃತಿಯನ್ನು ಪೋಷಿಸಿ ಬೆಳೆಸಿಕೊಂಡು ಬಂದರು.

ಈಗ ಮೈಸೂರು ಎಂದು ಕರೆಯಲಾಗುತ್ತಿರುವ ಪ್ರದೇಶಕ್ಕೆ ಮುಂಚೆ “ಹದಿನಾಡು” ಎಂದು ಹೆಸರಿದ್ದಿತ್ತು. ಕ್ರಿ.ಶ. ೧೩೯೮ – ೯೯ರ ಸಮಯದಲ್ಲಿ ಉತ್ತರ ಭಾರತದ ದ್ವಾರಕಾ ನಗರದಿಂದ ಯದುವಂಶೀಯರೆಂದು ಹೇಳಿಕೊಂಡ ಇಬ್ಬರು ಯುವಕರು ದಕ್ಷಿಣದ ಕಡೆಗೆ ವಲಸೆ ಬಂದು ಮೇಲುಕೋಟೆಯ ಚಲುವ ನಾರಾಯಣನ ದರ್ಶನ ಪಡೆದು ಅಲ್ಲಿಯೇ ಬದುಕಲಾರಂಭಿಸಿದರು. ಇದು ಅನೇಕ ಅಧಾರಗಳಿಂದ ಲಭ್ಯವಾಗುವ ವಿಷಯ. ಹದಿನಾಡು ಪ್ರದೇಶವನ್ನು ಅಳ್ವಿಕೆ ನಡೆಸುತ್ತಿದ್ದ ಪಾಳ್ಯಗಾರನು ಮಾನಸಿಕ ದೌಬಲ್ಯಗಳಿಂದಾಗಿ ರಾಜ್ಯ ಹಾಗೂ ಕುಟುಂಬವನ್ನು ಸಂಪೂರ್ಣವಾಗಿ ತೊರೆದು ತೀರ್ಥಯಾತ್ರೆಗೆ ಹೋಗಿದ್ದನು. ಹದಿನಾಡು ಪ್ರಾಂತ್ಯದ ನೆರೆಯ ಪಾಳ್ಯಗಾರನಾಗಿದ್ದ ಕಾರುಗಳ್ಳಿಯ ನಾಯಕನು ಇದೇ ಅವಕಾಶವನ್ನು ಉಪಯೋಗಿಸಿಕೊಂಡು. ಹದಿನಾಡು ನಾಯಕನ ಮಗಳನ್ನು ಮದುವೆ ಮಾಡಿಕೊಂಡು ಆ ಪ್ರಾಂತ್ಯವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿ ಅವಳ ತಾಯಿಯನ್ನು ಒತ್ತಾಯ ಪಡಿಸುತ್ತಿದ್ದನು. ಕೆಳಜಾತಿಯ ನಾಯಕನಿಗೆ ಮಗಳನ್ನು ಕೊಡಲಿಚ್ಛಿಸದ ಹಾಗೂ ಅವನ ಹಿಂಸೆಯನ್ನು ತಾಳಲಾರದೆ ಅನೇಕ ತೊಂದರೆಗಳಲ್ಲಿ ತೊಳಲುತ್ತಿದ್ದಾಗ ಮೇಲೆ ತಿಳಿಸಿದ್ದ ದ್ವಾರಕೀಯದ ಯುವಕರು ಆಕೆಗೆ ನೆರವಾದರು. ಇವರು ಸ್ಥಳೀಯರ ಸಹಾಯದಿಂದ ಕಾರುಗಳ್ಳಿಯ ನಾಯಕನನ್ನು ಕೊಂದು ಅವಳ ಪಾಳ್ಯಪಟ್ಟವನ್ನು ಸಂಪೂರ್ಣವಾಗಿ ಹದಿನಾಡಿನ ಪ್ರದೇಶಕ್ಕೆ ಸೇರಿಸಿಕೊಟ್ಟರು. ಈ ಉಪಕಾರಕ್ಕಾಗಿ ಹದಿನಾಡು ನಾಯಕನ ಪತ್ನಿಯು ತನ್ನ ಮಗಳನ್ನು ಯಾದವ ಸಹೋದರರಲ್ಲಿ ಒಬ್ಬನಾದ ವಿಜಯನಿಗೆ ಮದುವೆ ಮಾಡಿದಳು. (ಮತ್ತೊಬ್ಬನ ಹೆಸರು ಕೃಷ್ಣ). ಈ ವಿಜಯ ಎಂಬುವನೇ ಮುಂದೆ “ಒಡೆಯ” ಎಂಬ ಬಿರುದು ಧರಿಸಿ ಹದಿನಾಡು – ಕಾರುಗಳ್ಳ ಪ್ರಾಂತ್ಯದ ಆಡಳಿತವನ್ನು ವಹಿಸಿಕೊಂಡು ಆಳಲಾರಂಭಿಸಿದನು. ಈ ವಿಜಯ ಎಂಬುವನು ಯದು ವಂಶದವನಾಗಿದ್ದರಿಂದ ಮೂಲತಃ “ಯದುರಾಯ’ ಎಂಬ ಹೆಸರಿನಿಂದ ಆಳ್ವಿಕೆಯನ್ನು ಪ್ರಾರಂಭಿಸಿ ಒಡೆಯರ ಮನೆತನದ ಮೂಲಪುರುಷ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.

ಅಂದಿನಿಂದ ಇಂದಿನವರೆಗೂ ನಮ್ಮ ನಾಡಿನ ಸಾಂಸ್ಕೃತಿಕ ರಾಜಧಾನಿಯಾಗಿರುವ ಮೈಸೂರು ಹಾಗೂ ಮೈಸೂರು ಸಂಸ್ಥಾನವನ್ನು ೧೩೯೯ ರಿಂದ ೧೯೪೭ರ ವರೆಗೆ ಅಳಿಕೊಂಡು ಬಂದ ಮಹಾನ್ ಪುರುಷರನ್ನು ಗಣನೆಯಲ್ಲಿಟ್ಟುಕೊಂಡು ಈ ಕೆಳಕಂಡಂತೆ ನಾಲ್ಕು ಭಾಗಗಳಾಗಿ ವಿಂಗಡಿಸಿಕೊಂಡು ಸಾಂಸ್ಕೃತಿಕವಾದ ಅಧ್ಯಾಯ ಮಾಡಬಹುದು.

೧. ೧೩೯೯ರಿಂದ ೧೫೭೮ರವರೆಗೆ ಮೈಸೂರು ಒಡೆಯರು ವಿಜಯನಗರದ ಅರಸರಿಗೆ ಸಾಮಂತ ರಾಜರಾಗಿದ್ದಂತ ಕಾಲ.

೨. ೧೫೭೮ರಿಂದ ಮೈಸೂರು ಒಡೆಯರು ಸ್ವಾತಂತ್ರ್ಯರಾಗಿ ಆಳ್ವಿಕೆ ನಡೆಸಲು ಪ್ರಾರಂಭಿಸಿ, ನಂತರ ೧೬೭೦ರಲ್ಲಿ ಹೈದರಾಲಿಯು ಪ್ರಾಬಲ್ಯಕ್ಕೆ ಬರುವವರೆಗೆ.

೩. ೧೬೭೦ರಿಂದ ೧೭೯೯ರಲ್ಲಿ ಟಿಪ್ಪುಸುಲ್ತಾನ್ ನನ ಪತನದವರೆಗಿನ ಕಾಲ.

೪. ೧೭೯೯ರಿಂದ ೧೯೪೭ರಲ್ಲಿ ಮೈಸೂರು ಸಂಸ್ಥಾನವು ಸ್ವತಂತ್ರ ಭಾರತದ ಗಣರಾಜ್ಯದಲ್ಲಿ ವಿಲೀನದವರೆಗಿನ ಆಧುನಿಕ ಮೈಸೂರಿನ ಮಹತ್ವದ ಕಾಲ.

ಕಾಲಘಟ್ಟಕ್ಕೆ ಸಂಬಂಧಿಸಿ ಇತಿಹಾಸದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಅಧ್ಯಯನ ಮಾಡಿದರೆ ಸಾಂಸ್ಕೃತಿಕ ಚರಿತ್ರೆಯ ಅಧ್ಯಯನಕ್ಕೆ ಅನುಕೂಲವಾಗುತ್ತದೆ. ಅದರಲ್ಲಿಯೂ ಸಂಸ್ಕೃತಿ ಚರಿತ್ರೆಯ ಅಧ್ಯಯನದ ಈ ಸಂದರ್ಭದಲ್ಲಿ ಇದು ಅವಶ್ಯಕವಾಗಿದೆ. ಏಕೆಂದರೆ ಇವುಗಳ ಮಧ್ಯೆ ಹೈದರ್, ಟಿಪ್ಪು, ದಳವಾಯಿಗಳಾದ ನಾಗರಾಜಯ್ಯ, ದೇವರಾಜಯ್ಯ ಅನಂತರ ಬ್ರಿಟಿಷ್‌ರವರ ಆಳ್ವಿಕೆಯ ಅವಧಿಯಲ್ಲಿ ಮೈಸೂರು ತನ್ನದೇ ಆದ ವಿಶಿಷ್ಟ ಸಂಸ್ಕೃತಿಯನ್ನು ಯಾವ ನಿಟ್ಟಿನಲ್ಲಿ ಮೈಗೂಡಿಸಿಕೊಂಡು ಬಂದಿತ್ತೆಂದು ತಿಳಿಯುವುದಕ್ಕೆ ಮೇಲಿನ ವಿಭಜನೆಯು ಅನುಕೂಲವಾಗುತ್ತದೆ.

ಯದುರಾಯರಿಂದ ಏಳನೆಯ ರಾಜರಾದ ಬೋಳ ಚಾಮರಾಜ ಒಡೆಯರ್ ವರೆಗಿನ ಮೈಸೂರು ಚರಿತ್ರೆಯು ನಿಂತಲ್ಲೇ ನಿಲ್ಲುತ್ತದೆ. ಅನಂತರ ಒಡೆಯರು ಸಾಮ್ರಾಜ್ಯದ ವಿಸ್ತರಣೆಯಲ್ಲಿ ಮುಂದಾಗಿದ್ದರೆ ಪ್ರಯುಕ್ತ, ಮೊದಲಿಗೆ ಬೋಳ ಚಾಮರಾಜ ಒಡೆಯರು ವಿಜಯನಗರದ ರಾಮರಾಯನ ಸೇನಾನಿಯನ್ನು ಸೋಲಿಸಿ ಪಲಾಯನ ಮಾಡಿಸಿದನು. ನಂತರ ಬೃಹತ್ ವಿಜಯನಗರ ಸಾಮ್ರಾಜ್ಯಕ್ಕೆ ಪ್ರತಿವರ್ಷವೂ ಕೊಡುತ್ತಿದ್ದ. ಪೊಗದಿ (ಕಪ್ಪಾಕಾಣಿಕೆ) ಯನ್ನು ನಿಲ್ಲಿಸಿದನು. ತನ್ನ ಗಡಿ ಪ್ರಾಂತ್ಯವೆನ್ನೆಲ್ಲ ಭದ್ರಪಡಿಸಿಕೊಂಡು ಕಂದಾಯ ವಸೂಲಿ ಮಾಡಲು ಪ್ರಾರಂಭಿಸಿದನು. ಆದರೂ ಸಹ ಪ್ರಬಲ ವಿಜಯನಗರದ ಪ್ರಭಾವ ಮೈಸೂರಿನ ಮೇಲೆ ಹೆಚ್ಚಾಗಿಯೇ ಇದ್ದಿತು. ಇಲ್ಲದಿದ್ದರೆ ಈ ಸನ್ನಿವೇಶವನ್ನೆ ಮೈಸೂರು ಸ್ವತಂತ್ರ ಸಂಸ್ಥಾನವೆಂದು ಹೇಳಿಸಿಕೊಳ್ಳುವ ದಿನ ಎಂದು ಹೇಳಬಹುದಾಗಿತ್ತೆನೋ. ಇವರ ನಂತರ ಪಟ್ಟಕ್ಕೆ ಬಂದ ಬೆಟ್ಟದ ಚಾಮರಾಜ ಒಡೆಯರು ದಕ್ಷ ಆಡಳಿತಗಾರರಾಗಿರಲಿಲ್ಲವಾದ ಪ್ರಯುಕ್ತ ಇವನ ಆಳ್ವಿಕೆಯನ್ನು ಅಂತ್ಯಗೊಳಿಸಿ ಇವನ ಸಹೋದರನಾದ ರಾಜ ಒಡೆಯರ್ ರವರಿಗೆ ಪಟ್ಟಕಟ್ಟಿದರು. ಇವನು ದಕ್ಷನೂ ಸೂರನೂ ಆಗಿದ್ದರಿಂದ ಮೈಸೂರು ಸಂಸ್ಥಾನವು ಸ್ವತಂತ್ರ್ಯಗೊಂಡು ವಿಜಯನಗರದ ಅರಸರಿಗೆ ಅಧೀನವಾಗಿರದೇ ಸ್ವತಂತ್ರ್ಯ ರಾಜರೆಂದು ಆಳ್ವಿಕೆ ನಡೆಸಲು ಪ್ರಾರಂಭಿಸಿದನು. ಮೈಸೂರು ಸಂಸ್ಥಾನದ ರತ್ನ ಸಿಂಹಾಸನಾಧೀಶ್ವರರೆಂಬ ಬಿರುದಿನೊಂದಿಗೆ ಆಳ್ವಿಕೆ ನೆಡೆಸಲು ಪ್ರಾರಂಭಿಸಿದ ರಾಜ ಒಡೆಯರ್ ವಿಜಯನಗರದ ಅರಸರಂತೆ ಮೈಸೂರು ಸಂಸ್ಥಾನದಲ್ಲಿಯೂ ಇಂದು ವಿಶ್ವವಿಖ್ಯಾತವಾಗಿರುವ ನವರಾತ್ರಿ ಮಹೋತ್ಸವ (ದಸರಾ ಮಹೋತ್ಸವ)ವನ್ನು ಆರಂಭಿಸಿದನೆಂದು ದಾಖಲೆಗಳಿಂದ ತಿಳಿದುಬರುತ್ತದೆ.

ಮೈಸೂರು ಒಂದು ರತ್ನ ಸಿಂಹಾಸನದ ಆಸ್ಥಾನವೆಂದಾದ ಮೇಲೆ ರಾಜ ಒಡೆಯರ್‌ರವರು ಕಾರುಗಳ್ಳಿಯ ಜಂಬಗಾರ ವೀರರಾಜಯ್ಯನನ್ನು ಪದಚ್ಯುತಿಗೊಳಿಸಿ, ಅದನ್ನು ವಶಪಡಿಸಿಕೊಂಡನು. ವಿಜಯನಗರದ ಅರಸರ ಸಾಮಂತರಲ್ಲಿ ಒಬ್ಬರಾಗಿದ್ದ ಉಮ್ಮತ್ತೂರಿನ ಪಾಳೆಗಾರರನ್ನು ಸೋಲಿಸಿ ಅವರ ಕೋಪಕ್ಕೆ ಗುರಿಯಾದನು. ಆದರೆ ತಕ್ಷಣವೇ ವಿಜಯನಗರಸ ಅರಸರಿಗೆ ಸಮಸ್ಯೆಯಾಗಿ ಕಾಣುತ್ತಿದ್ದ ಬೇಗೂರು ಗ್ರಾಮ, ಯಳಂದೂರು ಮೊದಲಾದ ಪಾಳೆಗಾರರನ್ನು ಸೋಲಿಸಿ ವಿಜಯನಗರ ಅರಸರಿಗೆ ಪ್ರೀತಿಪಾತ್ರರಾಗಿ ಅವರಿಂದಲೇ ಬನ್ನೂರು ಹಾಗೂ ಸೋಸಲೆ ಗ್ರಾಮಗಳನ್ನು ಉಡುಗೊರೆಯಾಗಿ ಪಡೆದನು. ನಂತರ ಶ್ರೀರಂಗಪಟ್ಟಣ ಹಾಗೂ ಉಮ್ಮತ್ತೂರುಗಳನ್ನು ವಿಜಯನಗರಸ ಅರಸರಿಂದ ಉಡುಗೊರೆಯಾಗಿ ಪಡೆದುಕೊಂಡು ಮೈಸೂರನ್ನು ಬಿಟ್ಟು ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಜ ಒಡೆಯರ್ ‘ರಾಜ’ನಾಗಿ ಆಳ್ವಿಕೆ ನಡೆಸಲು ಪ್ರಾರಂಭಿಸಿದನು. ಇವರ ನಂತರ ಮೊಮ್ಮಗನಾದ ೬ನೇ ಚಾಮರಾಜ ಒಡೆಯರ್ ಅಧಿಕಾರಕ್ಕೆ ಬಂದನು. ಇವರು ಚನ್ನಪಟ್ಟಣವನ್ನು (ಅಂದು ಚೆನ್ನಪಟ್ಟಣವನ್ನು ಜಗದೇವರಾಯನೆಂಬುವನು ಆಳ್ವಿಕೆ ನಡೆಸುತ್ತಿದ್ದನು) ಮತ್ತು ಅದರ ಆಳ್ವಿಕೆಗೆ ಒಳಗಾಗಿದ್ದ ಎಲ್ಲಾ ಪ್ರದೇಶಗಳನ್ನು ವಶಪಡಿಸಿಕೊಂಡು ಆಳ್ವಿಕೆ ನಡೆಸಲಾರಂಭಿಸಿದರು. ಇವನು ಪ್ರಮುಖ ವಿದ್ವಾಂಸನೂ ದೈವಭಕ್ತನೂ ಆಗಿದ್ದನು. “ಚಾಮರಾಜೋಕ್ತಿ ವಿಲಾಸ” ಎಂದು ಇತ್ತೀಚೆಗೆ ಪ್ರಕಟಗೊಂಡ ವಾಲ್ಮೀಕಿ ರಾಮಾಯಣದ ಗದ್ಯಾನುವಾದದ ಕರ್ತೃ ೬ನೇ ಚಾಮರಾಜ ಒಡೆಯರ್ ರವರ. ಇವರ ಕಾಲದಲ್ಲಿ ಮೈಸೂರಿನ ಸಂಸ್ಕೃತಿಯು ತನ್ನ ಕಂಪನ್ನು ಚೆಲ್ಲಲಾರಂಭಿಸಿತು. ನಂತರ ಬಂದ ಕೆಲವು ಅಸಮರ್ಪಕ ರಾಜರ ನಂತರ ಬೆಟ್ಟದ ಚಾಮರಾಜ ಒಡೆಯರ ಮಗ ರಣಧೀರ ಕಂಠೀರವ ನರಸರಾಜ ಒಡೆಯರು ಅಧಿಕಾರವಹಿಸಿಕೊಂಡು ಮೈಸೂರಿನ ಧೀರತನವನ್ನು ಪ್ರಸರಿಸಿದನು. ರಣಧೀರ ಕಂಠೀರವ ನರಸರಾಜ ಒಡೆಯರ್ ರವರು ಪಟ್ಟಕ್ಕೆ ಬರುವ ಮೊದಲೇ ಪಕ್ಕದ ತಿರುಚನಾಪಳ್ಳಿಗೆ ಪ್ರವಾಸಕ್ಕಾಗಿ ತೆರಳಿ, ಅಲ್ಲಿಯ ರಾಜಸ್ಥಾನದಲ್ಲಿ ಜಗಜಟ್ಟಿಯಾಗಿ ಮರೆಯುತ್ತಿದ್ದ ಮಲ್ಲನೊಬ್ಬನನ್ನು ಸೋಲಿಸಿ ‘ರಣಧೀರ’ರಾಗಿದ್ದರು. ಇವನ ಆಳ್ವಿಕೆಯ ಕಾಲದಲ್ಲಿ ಅಂದಿನ ಪ್ರಮುಖ ಕ್ರೀಡೆಗಳಾಗಿದ್ದ ಕುಸ್ತಿ ಕತ್ತಿವರೆಸೆ, ಕುದುರೆ ಸವಾರಿ ಹಾಗೂ ಜನಪದೀಯ ಕ್ರೀಡೆಗಳು ಹೆಚ್ಚು ಹೆಚ್ಚು ಸಾಂಸ್ಕೃತಿಕವಾಗಿ ಬೆಳೆಯಲು ಪ್ರೇರಣೆ ನೀಡಿದನು. ರಣಧೀರನಿಗೆ ಮಕ್ಕಳಿಲ್ಲದ ಪ್ರಯುಕ್ತ ಬೋಳ ಚಾಮರಾಜ ಒಡೆಯರ ಮೊಮ್ಮಗ ದೊಡ್ಡ ದೇವರಾಯರು ಪಟ್ಟಕ್ಕೆ ಬಂದರು. ಇವನು ಪಟ್ಟಕ್ಕೆ ಬಂದ ಪ್ರಾರಂಭದಲ್ಲಿಯೇ ಬಿದನೂರಿನ ಶಿವಪ್ಪನಾಯಕನು ಶ್ರೀರಂಗಪಟ್ಟಣವನ್ನು ಮುತ್ತಿಗೆ ಹಾಕಿದನು. ದೊಡ್ಡ ದೇವರಾಯನು ಅವನನ್ನು ಸೋಲಿಸುವುದರ ಜೊತೆಗೆ ರಣದುಲ್ಲಾಖಾನ್ ನನ್ನು ಸೋಲಿಸಿ ಸಕ್ಕರೆ ಪಟ್ಟಣ, ಹಾಸನಗಳನ್ನು ವಶಪಡಿಸಿಕೊಂಡನು. ಇವನ ಆಳ್ವಿಕೆಯ ಕಾಲದಲ್ಲಿ ಮೈಸೂರು ಒಂದು ಸಂಸ್ಥಾನವಾಗಿ ಪರಿವರ್ತನೆಗೊಂಡಿತು. ಕವಿ ಚಾಮಯ್ಯನು ದೊಡ್ಡದೇವರಾಯ ಸಾಂಗತ್ಯ ಎಂಬ ಕೃತಿಯಲ್ಲಿ ಒಡೆಯರ ಧೈರ್ಯ, ಶೌರ್ಯ, ದೈವಭಕ್ತಿ, ಧರ್ಮನಿಷ್ಠೆಗಳನ್ನು ಹಾಗೂ ಅಂದಿನ ಸಂಸ್ಕೃತಿಯನ್ನು ವರ್ಣಿಸಿದ್ದಾನೆ. ಚಾಮುಂಡಿ ಬೆಟ್ಟಕ್ಕೆ ತಳದಿಂದ ತುದಿಯವರೆವಿಗೂ ಮೆಟ್ಟಿಲುಗಳನ್ನು ಕಟ್ಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ದೊಡ್ಡ ದೇವರಾಯನ ನಂತರ ಅಧಿಕಾರಕ್ಕೆ ಬಂದವರೆಂದರೆ ಬೋಳ ಚಾಮರಾಜ ಒಡೆಯರ್ ರವರ ಮರಿಮಗನಾದ ಚಿಕ್ಕದೇವರಾಜ ಒಡೆಯರ್, ಸುಮಾರು ೩೧ ವರ್ಷಗಳ ಸುದೀರ್ಘ ಅವಧಿ ಆಳ್ವಿಕೆ ನಡೆಸಿದ ಚಿಕ್ಕದೇವರಾಜರು ಮೈಸೂರು ಚರಿತ್ರೆಯಲ್ಲಿ ರಾಜಾ ಜಗದೇವರಾಗಿ ನವಕೋಟಿ ನಾರಾಯಣರಾಗಿ ಮೆರೆದು ಮರೆಯಾಗಿದ್ದಾನೆ. ಸಂಸ್ಥಾನದಲ್ಲಿ ಚಾಣಾಕ್ಷ ರಾಜನೆಂದೇ ಹೆಸರು ಗಳಿಸಿರುವ ಇವನು ಪ್ರಪ್ರಥಮವಾಗಿ ಸಂಸ್ಥಾನದಲ್ಲಿ ಅಂಚೆ ವ್ಯವಸ್ಥೆಯನ್ನು ಜಾರಿಗೆ ತಂದು ಸಂಸ್ಥಾನದ ಮೂಲೆ ಮೂಲೆಗಳಿಗೂ ಶೀಘ್ರವಾಗಿ ವರ್ತಮಾನ ತರಿಸಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೊಳಿಸಿದನು. ಸ್ವತಃ ಪಂಡಿತರಾಗಿದ್ದ ಪ್ರಯುಕ್ತ ಇವನ ಆಸ್ಥಾನದಲ್ಲಿ ಕವಿಗಳೂ, ಸಾಹಿತಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ವಿಜೃಂಭಿಸುತ್ತಿದ್ದರು. ಚಿಕ್ಕದೇವರಾಜ ಒಡೆಯರ್‌ರವರ ಆಸ್ಥಾನ ಅಂದಿನ ಸಮಕಾಲೀನ ರಾಜರೆಲ್ಲರ ದೃಷ್ಟಿಯಿಂದ ವೈಭವೋಪೂರಿತ ಸಭೆಯಾಗಿತ್ತು. ಅಂದಿನ ವೈಭವದ ಸಾಂಸ್ಕೃತಿಕ ಜೀವನಕ್ಕೆ ಅನೇಕ ರೀತಿಯಲ್ಲಿ ಸ್ಪೂರ್ತಿಯ ಸೆಲೆಯಾಗಿ ಪರಿವರ್ತನೆಗೊಂಡಿತ್ತೆನ್ನಬಹುದು. ಆಗತಾನೇ ಬೆಂಕಿಯ ಆರಿ ಹೊಗೆಯಾಡುತ್ತಿದ್ದ ಸಾಮ್ರಾಜ್ಯವು ಗತ ಇತಿಹಾಸದ ಪುಟಗಳಲ್ಲಿ ಅಡಗಿಹೋಗಿದ್ದ ವಿಜಯನಗರ ಸಾಮ್ರಾಜ್ಯದ ಕನ್ನಡ ವೈಭವವು ಪುನರ್ಜನ್ಮ ಪಡೆದಂತೆ ಭಾಸವಾಗುತ್ತಿತ್ತು. ಇದಕ್ಕೆ ಪ್ರಮುಖ ಕಾರಣ ಚಿಕ್ಕದೇವರಾಜ ಒಡೆಯರ್ ರವರ ರಾಜಾಶ್ರಮ ಎಂದು ಹೇಳಬಹುದಾಗಿದೆ. ವಿಜಯನಗರದರಸರ ನಂತರ “ಕರ್ನಾಟಕ ಚಕ್ರವರ್ತಿ” ಎಂಬ ಬಿರುದನ್ನು ಧರಿಸಿದ ವ್ಯಕ್ತಿ ಎಂದರೆ ಇವನೆ.

ಇವನ ನಂತರ ಅಧಿಕಾರಕ್ಕೆ ಬಂದ ಎರಡನೇ ಕಂಠೀರವ ನರಸರಾಜನು ಅಸಮರ್ಥನಾಗಿದ್ದನು. ಇವನು ಕಿವುಡ ಹಾಗೂ ಮೂಕನೂ ಆಗಿದ್ದ ಪ್ರಯುಕ್ತ ಸಂಸ್ಥಾನದ ಅವನತಿಗೆ ಒಂದಲ್ಲ ಇಂದು ರೀತಿಯಲ್ಲಿ ಕಾರಣವಾದನು. ಇವನು ದೌರ್ಬಲ್ಯಗಳಿಂದಾಗಿ ಸಂಸ್ಥಾನದಲ್ಲಿ ದಳವಾಯಿಗಳಾಗಿದ್ದ ನಂಜರಾಜಯ್ಯ ಹಾಗೂ ದೇವರಾಜಯ್ಯನವರ ವಶಕ್ಕೆ ಸಂಸ್ಥಾನದ ಆಳ್ವಿಕೆ ಒಳಪಟ್ಟಿತು. ನಂತರ ಈ ದಳವಾಯಿಗಳನ್ನು ಏಳನೆಯ ಚಾಮರಾಜ ಒಡೆಯರ ಕುಂಠಿತಗೊಳಿಸಿದನು ಎಂದು ದಾಖಲೆಗಳ ಮೂಲಕ ಹೇಳಬಹುದು. ಚಾಮರಾಜ ಒಡೆಯರ ಅನಂತರ ಅವರ ಸಹೋದರ ವೆಂಕಟೇ ಅರಸು ಪಟ್ಟಕ್ಕೆ ಬರಬೇಕಾಯಿತು. ನಂತರ ಚಿಕ್ಕ ಕೃಷ್ಣರಾಜ ಒಡೆಯರ್ ಒಂಬುದರು ಪಟ್ಟಕ್ಕೆ ಬಂದನು. ಈ ಅರಸರನು ೩೨ ವರ್ಷಗಳು ರಾಜ್ಯಭಾರ ನಡೆಸಿದನು. ದಳವಾಯಿಗಳ ಆಡಳಿತ ಮುಗಿದು ಹೇದರಾಲಿ ಪ್ರಾಬಲ್ಯಕ್ಕೆ ಬಂದುದೂ, ಬ್ರಿಟಿಷರ ಆಡಳಿತ ಭಾರತದಲ್ಲಿ ತಳವೂರತೊಡಗಿದುದ್ದೂ ಈ ಅರಸರನ ಕಾಲದಲ್ಲಿಯೇ. ೧೭೭೬ರಲ್ಲಿ ಚಿಕ್ಕ ಕೃಷ್ಣರಾಜನು ನಿಧನಹೊಂದುವ ಹೊತ್ತಿಗೆ ಹೈದರಾಲಿಯು ಮೈಸೂರು ಸಂಸ್ಥಾನದ ಸರ್ವಾಧಿಕಾರಿಯಾಗಿ ಅಳ್ವಿಕೆ ನಡೆಸಲಾರಂಭಿಸಿದನು. ಇವನ ನಂತರ (ಈ ಮಧ್ಯೆ ನಾಮಕಾವಸ್ಥೆಯಾಗಿ ಮೈಸೂರು ಒಡೆಯರ್ ವಂಶಸ್ಥರೇ ರಾಜರಾಗಿ ಕೆಲವರು ಮುಂದುವರೆದಿರುತ್ತಾರೆ). ಮಗ ಟಿಪ್ಪುಸುಲ್ತಾನನು ಪಟ್ಟಕ್ಕೆ ಬಂದು ತನ್ನ ಧೈರ್ಯ, ಸಾಹಸಗಳಿಂದ ಬ್ರಿಟಿಷರನ್ನು ಹಿಮ್ಮೆಟ್ಟಿಸಿ “ಮೈಸೂರು ಹುಲಿ” ಎಂಬ ಬಿರುದನ್ನು ಪಡೆದು, ಬ್ರಿಟಿಷರ ಜೊತೆ ಹೋರಾಡುತ್ತಲೆ ೧೭೯೯ರಲ್ಲಿ ಶ್ರೀರಂಗಪಟ್ಟಣದ ಕೋಟೆಯಲ್ಲಿ ಮರಣ ಹೊಂದಿದ್ದನು. ಇದರಿಂದಾಗಿ ಸುಮಾರು ೩೯ ವರ್ಷಗಳು ಮೈಸೂರು ಸಂಸ್ಥಾನ ಕಂಡ ಮುಸ್ಲಿಂ ಸರ್ವಾಧಿಕಾರಿಗಳ ಆಡಳಿತ ಕೊನೆಗೊಂಡಂತಾಯಿತು. ವಿಜಯಿಗಳಾದ ಬ್ರಿಟಿಷರು ಮೈಸೂರು ಸಂಸ್ಥಾನವನ್ನು ೪ ಭಾಗಗಳಾಗಿ ವಿಂಗಡಿಸಿ ಅದರಲ್ಲಿ ಒಂದನ್ನು ಮತ್ತೆ ಮೈಸೂರು ವಂಶೀಯರಿಗೆ ಕೊಡಲು ನಿರ್ಧರಿಸಿದರಿಂದಾಗಿ ಒಡೆಯರ ಆಳ್ವಿಕೆಯು ಮತ್ತೆ ಅಸ್ತಿತ್ವಕ್ಕೆ ಬಂದಿತು. ತದನಂತರ ಆರು ವರ್ಷದ ಬಾಲಕನಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರು ಸಿಂಹಾಸನವೇರಿದನು. ಕೃಷ್ಣರಾಜನು ಇನ್ನೂ ಬಾಲ್ಯಾವ್ಯವಸ್ಥೆಯಲ್ಲಿದ್ದುದರಿಂದ ದಿವಾನ್ ಪೂರ್ಣಯ್ಯನವರೇ ರಾಜ ಪ್ರತಿನಿಧಿಯಾಗಿ ಆಡಳಿತ ನಿರ್ವಹಿಸುತ್ತಿದ್ದರು. ನಂತರದ ಆಳ್ವಿಕೆಯ ಕಾಲವನ್ನು ಈ ಕೆಳಗಿನ ನಾಲ್ಕು ಭಾಗಗಳಲ್ಲಿ ಗಮನಿಸಬಹುದು.

೧. ೧೭೯೯ ರಿಂದ ೧೮೧೧ರವರೆಗೆ ಪೂರ್ಣಯ್ಯನವರ ರೀಜೆನ್ಸಿ ಆಡಳಿತ – ಒಟ್ಟು ೧೨ ವರ್ಷಗಳು.

೨. ೧೮೧೧ ರಿಂದ ೧೮೩೧ರ ವರೆಗಿನ ೨೦ ವರ್ಷಗಳು ಮುಮ್ಮಡಿ ಕೃಷ್ಣರಾಜ ಒಡೆಯರ್ ರವರ ಆಡಳಿತ,

೩. ೧೮೩೦ ರಿಂದ ೧೮೬೭ ರವರೆಗಿನ ೩೬ ವರ್ಷಗಳ ಬ್ರಿಟಿಷ್ ಕಮೀಷನರ ಆಳ್ವಿಕೆ

೪. ೧೮೬೭ ರಿಂದ ಒಂದು ವರ್ಷ ರಾಜ್ಯ ಮತ್ತೆ ಲಭ್ಯವಾದರು ಸಹ ಅರಸರ ಆಡಳಿತವಿಲ್ಲದ ಕಾಲ

ಎಂದು ವಿಂಗಡಿಸಿಕೊಂಡು ಅಧ್ಯಯನ ಮಾಡಬಹುದು. ಮುಮ್ಮಡಿ ಕೃಷ್ಣರಾಜರು ಬಾಲಕರಾಗಿದ್ದಾಗಿನಿಂದಲೂ ಧೀರ ಗಂಭೀರದ ವ್ಯಕ್ತಿಯಾಗಿದ್ದರೆಂದು ಸಮಕಾಲೀನ ಬರಹಗಳು ವ್ಯಕ್ತಪಡಿಸುತ್ತವೆ. ಅಂದು ಅಸ್ಥಾನಕ್ಕೆ ಭೇಟಿ ನೀಡಿದ ಡಾ. ಬುಖನನ್ ಹ್ಯಾಮಿಲ್ಟನ್ ರವರು ಈ ಅಭಿಪ್ರಾಯವನ್ನು ತಮ್ಮ ಪ್ರವಾಸಿಕಥನದಲ್ಲಿ ಸಂಕ್ಷಿಪ್ತವಾಗಿ ವ್ಯಕ್ತಪಡಿಸುತ್ತಾರೆ. ಈ ಅವಧಿಯಲ್ಲಿಯೂ ಒಡೆಯರು ತಮ್ಮ ವಾಸದ ಮನೆಯು ಮೈಸೂರಿನಲ್ಲಿ ಇದ್ದರೂ ಶ್ರೀರಂಗಪಟ್ಟಣವೇ ಸಂಸ್ಥಾನದ ರಾಜಧಾನಿಯನ್ನಾಗಿ ಮುಂದುವರಿಸಿಕೊಂಡು ಬಂದಿದ್ದರು. ಈ ಸಮಯದಲ್ಲಿ ಮೈಸೂರು ಅರಮನೆ ಮತ್ತು ಕೋಟೆಯನ್ನು ಪೂರ್ಣಯ್ಯನು ೧೭೯೯ – ೧೮೦೦ರಲ್ಲಿ ಪುನರ್ರಚಿಸಿದರಿಂದಾಗಿ ಹಾಗೂ ಇದೇ ಸಂದರ್ಭದಲ್ಲಿ ಕರ್ನಲ್ ವಿಲ್ಕ್‌ಸ್ ಕ್ರಮವಾಗಿ ಶ್ರೀರಂಗಪಟ್ಟಣವನ್ನು ಬಿಟ್ಟು ಮೈಸೂರನ್ನೇ ರಾಜಧಾನಿಯಾಗಿ ಮಾಡಿಕೊಳ್ಳುವುದು ಸೂಕ್ತವೆಂದು ಗವರ್ನರ್ ಜನಲ್‌ಗೆ ಶಿಫಾರಸು ಮಾಡಿದ ಪರಿಣಾಮದಿಂದಾಗಿ ಮೈಸೂರಿನಲ್ಲಿ ಅರಮನೆ ಮತ್ತು ಆಡಳಿತ (ಮರದ ಅರಮನೆ) ಕಛೇರಿಗಳನ್ನು ರಚಿಸಲಾಯಿತು. ೧೮೧೧ರಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು ನೇರವಾಗಿ ಆಡಳಿತ ನಡೆಸಲು ಪ್ರಾರಂಭಿಸಿದರು. ಪೂರ್ಣಯ್ಯ ಸಂಪೂರ್ಣವಾಗಿ ನಿವೃತ್ತವಾಗಿ ಯಳಂದೂರನ್ನು ಜಾಹಗೀರ್ ಆಗಿ ಒಡೆಯರಿಂದ ಪಡೆದು ಅಲ್ಲಿಯೇ ಅಂತಿಮ ಜೀವನ ಕಳೆದನು.

೧೮೧೧ ರಿಂದ ೧೮೨೪ರವರೆಗೆ ಮುಮ್ಮಡಿಯವರು ಆಂಗ್ಲರೊಂದಿಗೆ ಸಹಕರಿಸಲು ಅನೇಕ ಯುದ್ಧಗಳಲ್ಲಿ ತೊಡಗಬೇಕಾಯಿತು. ಅವುಗಳಲ್ಲಿ ಪಿಂಡಾರೆ ಯುದ್ಧ, ಪೇಶ್ವೆ ಬಾಜೀರಾಯನೊಂದಿಗೆ ನಡೆದ ಕದನ, ಕಿತ್ತೂರಿನ ಸಮರಗಳಲ್ಲಿಯೂ ಒಡೆಯರ ಅಶ್ವಸೇನೆ ಹೋರಾಟ ನಡೆಸಬೇಕಾಯಿತು. ಇದಕ್ಕೆ ಬ್ರಿಟಿಷರ ಮೆಚ್ಚಿಗೆಯೂ ಲಭಿಸಿತ್ತು. ತದನಂತರ ೧೮೩೦ರಲ್ಲಿ ಸಂಭವಿಸಿದ ನಗರ ಪ್ರಮುಖವಾದದ್ದು. ಸದರಮಲ್ಲನೆಂಬುವನು ಬೂದಿ ಬಸಪ್ಪನೆಂದು ಹೆಸರನ್ನು ಬದಲಾಯಿಸಿಕೊಂಡು ನಾನು ಇಕ್ಕೇರಿ ಅರಸರ ವಂಶದವನೆಂದು ಸಂಸ್ಥಾನದಲ್ಲಿ ರೈತರನ್ನು ಒಂದು ಮಾಡಿಕೊಂಡು ಬೃಹತ್ ದಂಗೆಯನ್ನು ಎಬ್ಬಿಸಿದನು. ಮುಮ್ಮಡಿಯವರು ಈ ದಂಗೆಯನ್ನು ಪ್ರಬಲವಾಗಿಯೇ ಅಡಗಿಸಿದವರಾದರೂ ಆಂಗ್ಲರು ಮುಮ್ಮಡಿಯವರು ದುರ್ಬಲ ಹಾಗೂ ಅಸಮರ್ಥ ರಾಜರೆಂದು ನಿರ್ಧಾರಕ್ಕೆ ಬಂದು ಅಂದಿನ ಗವರ್ನರ್ ಜನರಲ್‌ರಾಗಿದ್ದ ಲಾಡ್ ವಿಲಿಯಂ ಬೆಂಟಿಂಕನು ಮೈಸೂರು ಆಡಳಿತವನ್ನು ಬ್ರಿಟಿಷರೇ ವಹಿಸಿಕೊಳ್ಳುವುದು ಉತ್ತಮ ಎಂದು ಕೇಂದ್ರಕ್ಕೆ ಶಿಪಾರಸ್ಸು ಮಾಡಿದನು. ಇದರಿಂದಾಗಿ ೧೮೩೧ರಲ್ಲಿ ಮೈಸೂರು ಇಂಗ್ಲೆಂಡಿನ ಅಧಿಕಾರಿಗಳ ವಶವಾಯಿತು. ತಾನು ಕೈಗೊಂಡ ಕ್ರಮ ತಪ್ಪೆಂದು ಬೆಂಟಿಂಗ್ ನು ಮೂರೇ ವರ್ಷಗಳಲ್ಲಿ ಅರಿತುಕೊಂಡು ಮತ್ತೆ ಮೈಸೂರು ಒಡೆಯರ ವಂಶದವರಿಗೆ ಸಂಸ್ಥಾನವನ್ನು ವಹಿಸುವಂತೆ ಶಿಪಾರಸ್ಸು ಪತ್ರ ಬರೆದರೂ ಸಹ ಅದು ೩೬ ವರ್ಷಗಳ ವರೆಗೆ ಮುಂದುವರೆಯಿತು. ಅದರೇನಂತೆ ಈ ೩೬ ವರ್ಷಗಳಲ್ಲಿ ಅಂಗ್ಲ ಕಮೀಷನರುಗಳ ಆಡಳಿತದಿಂದಾಗಿ ಮೈಸೂರು ಆಡಳಿತ ವ್ಯವಸ್ಥೆಗೆ ಒಂದು ಆಧುನಿಕ ಸ್ವರೂಪ ಬಂದಿತು. ಆಂಗ್ಲ ದಿನಾಂಕಗಳನ್ನು ಬಳಸುವ ಪದ್ಧತಿ, ನ್ಯಾಯಾಲಯಗಳು, ಅನೇಕ ಕಾನೂನು ಕಟ್ಟಳೆಗಳು, ಶಿಕ್ಷಣ, ಇಂಗ್ಲಿಷ್ ಶಿಕ್ಷಣ ಮತ್ತು ಲೋಕೋಪಯೋಗಿ ಇಲಾಖೆಗಳು ಅಸ್ತಿತ್ವಕ್ಕೆ ಬಂದವು. ಸರಕಾರಿ ಆಡಳಿತ ಇಲಾಖೆಗಳೆಲ್ಲ ಮೈಸೂರಿನಿಂದ ಬೆಂಗಳೂರಿಗೆ ಬಂದು ಬೆಂಗಳೂರು ಆಡಳಿತದ ರಾಜಧಾನಿಯಾಗಿ ಕಂಗೊಳಿಸಿತು. ದಂಡಿನ ಪ್ರದೇಶ ರಚನೆಯಾಗಿ ಬೆಳೆದದ್ದು ಈ ಸಂದರ್ಭದಲ್ಲಿಯೇ ಆದರೆ ಬ್ರಿಟಿಷರು ಈ ಸಮಯದಲ್ಲಿ ಮೈಸೂರು ಸಂಸ್ಥಾನವನ್ನು ಮದರಾಸು ಪ್ರಾಂತ್ಯದಲ್ಲಿ ವಿಲೀನಗೊಳಿಸಬೇಕೆಂಬ ಪ್ರಯತ್ನವನ್ನು ಪದಚ್ಯುತಿಗೊಂಡಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು ಪ್ರಬಲವಾಗಿ ವಿರೋಧಿಸಿದರು, ಇಂಥ ಬದಲಾವಣೆಯಿಂದ ಮೈಸೂರಿನ ಪ್ರಜೆಗಳ ಹಿತರಕ್ಷಣೆ ಆಗದು. ಇದು ನನ್ನ ಮತ್ತು ನನ್ನ ವರ್ಣೀಯರ ಹಕ್ಕನ್ನು ಶಾಶ್ವತವಾಗಿ ಇಲ್ಲದಂತೆ ಮಾಡುವ ಪ್ರಯತ್ನ ಎಂದು ತೀವ್ರವಾಗಿ ಪ್ರತಿಭಟಿಸಿದರು. ಇದಕ್ಕೆ ಅಂದಿನ ಬ್ರಿಟಿಷ್ ಗವರ್ನರ್ ಆಗಿದ್ದ ಲಾಡ್ ಕ್ಯಾನಿಂಗ್ ಬೆಂಬಲಿಸಿ ವಿಲೀನದ ವಿಷಯವನ್ನು ಕೈಬಿಟ್ಟರು. ನಿಜ ಹೇಳಬೇಕೆಂದರೆ ಮುಮ್ಮಡಿಯವರು ಅಂದು ಈ ದೃಢ ನಿರ್ಧಾರವನ್ನು ತೆಗೆದುಕೊಳ್ಳದೇ ಕೇವಲ ಸ್ವಾರ್ಥದಿಂದ ಭೋಗ ಜೀವನ ಮಾಡುತ್ತಾ ಜೀವನ ಮಾಡುತ್ತಿದ್ದರೆ ಇಂದು ಕರ್ನಾಟಕ ರಾಜ್ಯ ಎಂಬುವುದಾಗಲಿ, ಕನ್ನಡ ಭಾಷೆಯಾಗಲಿ ಇರುತ್ತಿತ್ತೆಂದು ಹೇಳಲು ಸಾಧ್ಯವಾಗದು. ರಾಜ್ಯಡಳಿತವು ಮತ್ತೆ ಮೈಸೂರು ವಂಶದವರಿಗೆ ದೊರಕಿ ಮುಮ್ಮಡಿಯವರು ಮಹಾರಾಜರಾಗಿ ತಮಗೆ ತಮ್ಮ ವಂಶಸ್ಥರಿಗೆ ಕನ್ನಡ ನಾಡು ದೊರಕಿದ ಸವಿನೆನಪಿನ ಒಂದೇ ವರ್ಷದ ಅವಧಿಯಲ್ಲಿ ನಿಧನರಾದರು.

ಇವರ ನಂತರ ಅವರ ದತ್ತು ಪುತ್ರ ೧೦ನೇ ಚಾಮರಾಜ ಒಡೆಯರವರು ಸಂಸ್ಥಾನದ ಮಹಾರಾಜರಾದರು. ಇಂದಿನಿಂದ ಆಧುನಿಕ ಮೈಸೂರಿನ ಇತಿಹಾಸ ಪ್ರಾರಂಭವಾಗುತ್ತದೆ. ಒಡೆಯರ್‌ರವರು ಬಾಲಕರಾಗಿದ್ದ ಪ್ರಯುಕ್ತ ಬ್ರಿಟಿಷ ಸರ್ಕಾರವೇ ಆಡಳಿತದ ನಿರ್ವಹಣೆಯ ಹೊಣೆ ಹೊತ್ತುಕೊಂಡು ಲಾಡ್ ಗಾರ್ಡನ್ ರವರನ್ನು ರಕ್ಷಕನಾಗಿ ನೇಮಿಸಲಾಯಿತು.

೧೮೮೧ ಮಾಚ್ ನಲ್ಲಿ ೧೦ನೇ ಚಾಮರಾಜ ಒಡೆಯರವರು ಪ್ರಾಪ್ತ ವಯಸ್ಕರಾಗಿ ರಾಜ್ಯಾಡಳಿತವನ್ನು ತಾವೇ ವಹಿಸಿಕೊಂಡು ಮುಂದಿನ ೫೫ ವರ್ಷಗಳ ಕಾಲ ಮೈಸೂರು ನಾಡು ಮೂಲವಂಶದವರ ಕೈಗೆ ಸಂಪೂರ್ಣವಾಗಿ ದೊರಕಿ ದೇಶದಲ್ಲಿಯೇ ಅಲ್ಲದೆ ಪ್ರಪಂಚದಲ್ಲಿಯೇ ಅನೇಕ ಅಭಿವೃದ್ದಿ ಕೆಲಸಗಳಿಂದಾಗಿ ಮಾದರಿ ರಾಜ್ಯ ಎಂಬ ಹೆಸರಿಗೆ ಪಾತ್ರವಾಯಿತು. ಇದಕ್ಕೆ ಮೂಲ ಪುರುಷರೆಂದರೆ ೧೦ನೇ ಚಾಮರಾಜ ಒಡಯರ್, ನವ ಮೈಸೂರಿನ ನಿರ್ಮಾಣದ ಶಿಲ್ಪಿ ಎಂದೆನಿಸಿಕೊಂಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯಚಾಮರಾಜ ಒಡೆಯರ್ ಹಾಗೂ ಪ್ರಸಿದ್ದ ದಿವಾನರುಗಳು ಮೂಲ ಕಾರಣಕರ್ತರಾಗಿರುವುದು ಕಂಡುಬರುತ್ತದೆ.

ಸುಮಾರು ೫೭೦ ವರ್ಷಗಳ ಕಾಲ ದೇಶಿಯ ಹಾಗೂ ವಿದೇಶಿಯರ ದಾಳಿಗಳ ನಡುವೆಯೂ ಅಧಿಕಾರ ವಂಚಿತರಾಗಿಯೂ ವೈಭವದ ಆಡಳಿತ ನಡೆಸಿದ ಮೈಸೂರು ಒಡೆಯರ ಸಮಗ್ರ ವಂಶಾವಳಿಯನ್ನು ಇಂದಿಗೂ ಸುರಕ್ಷಿತವಾಗಿರುವ ದಾಖಲೆಗಳಿಂದ ಸಂಕ್ಷಿಪ್ತವಾಗಿ ತಿಳಿಯಬಹುದಾಗಿದೆ. ಅರಮನೆಯ ಸರಸ್ವತಿ ಪುಸ್ತಕ ಭಂಡಾರದಲ್ಲಿ ಇರುವ ದಾಖಲೆಗಳಲ್ಲಿ ಕಂಡುಬರುವ ಮೈಸೂರನ್ನಾಳಿದ ಒಡೆಯರ ಮನೆತನದ ಅರಸರನ್ನು ಕ್ರಮಬದ್ಧವಾಗಿ ಗುರುತಿಸುವುದಾದರೆ.

ಒಡೆಯರ್ ರವರುಗಳು ಆಳ್ವಿಕೆ ನಡೆಸಿದ ಕಾಲ
೧. ಯದುರಾಯರು ೧೩೯೯ – ೧೪೨೩
೨. ಹಿರೇ ಬೆಟ್ಟದ ಚಾಮರಾಜ ಒಡೆಯರ್ – ೧ ೧೪೨೩ – ೧೪೫೮
೩. ತಿಮ್ಮರಾಜ ಒಡೆಯರ್ – ೧ ೧೪೫೮ – ೧೪೭೮
೪. ಹಿರೇ ಚಾಮರಾಜ ಒಡೆಯರ್ – ೨ ೧೪೭೮ – ೧೫೧೩
೫. ಬೆಟ್ಟದ ಚಾಮರಾಜ ಒಡೆಯರ್ – ೩ ೧೫೧೩ – ೧೫೫೨
೬. ತಿಮ್ಮರಾಜ ಒಡೆಯರ್ – ೨ ೧೫೫೨ – ೧೫೭೧
೭. ಚೋಳ ಚಾಮರಾಜ ಒಡೆಯರ್ – ೪ ೧೪೭೨ – ೧೫೭೬
೮. ಬೆಟ್ಟದ ಚಾಮರಾಜ ಒಡೆಯರ್ – ೫ ೧೫೭೬ – ೧೫೭೮
೯. ರಾಜ ಒಡೆಯರ್ – ೧ ೧೫೭೮ – ೧೬೪೬
೧೦. ಚಾಮರಾಜ ಒಡೆಯರ್ – ೬ ೧೬೧೭ – ೧೬೩೭
೧೧. ಇಮ್ಮಡಿರಾಜ ಒಡೆಯರ್ – ೨ ೧೬೩೭ – ೧೬೩೮
೧೨. ರಣಧೀರ ಕಂಠೀರವ ನರಸರಾಜ ಒಡೆಯರ್ ೧೬೩೭ – ೧೬೫೯
೧೩. ದೊಡ್ಡ ದೇವರಾಜ ಒಡೆಯರ್ ೧೬೫೮ – ೧೬೭೨
೧೪. ಚಿಕ್ಕ ದೇವರಾಜ ಒಡೆಯರ್ ೧೬೭೨ – ೧೭೦೪
೧೫. ಕಂಠೀರವ ಒಡೆಯರ್ ೧೭೦೪ – ೧೭೧೩
೧೬. ದೊಡ್ಡ ಕೃಷ್ಣರಾಜ ಒಡೆಯರ್ – ೧ ೧೭೧೩ – ೧೭೩೧
೧೭. ಚಾಮರಾಜ ಒಡೆಯರ್ – ೭ ೧೭೩೧ – ೧೭೩೪
೧೮. ಕೃಷ್ಣರಾಜ ಒಡೆಯರ್ – ೨ ೧೭೩೪ – ೧೭೬೬
೧೯. ನಂಜರಾಜ ಒಡೆಯರ್ ೧೭೬೬ – ೧೭೭೦
೨೦. ಬೆಟ್ಟದ ಚಾಮರಾಜ ಒಡೆಯರ್ – ೮ ೧೭೭೦ – ೧೭೭೬
೨೧. ಖಾಸಾ ಚಾಮರಾಜ ಒಡೆಯರ್ – ೯ ೧೭೭೬ – ೧೭೯೬
೨೨. ಮುಮ್ಮಡಿ ಕೃಷ್ಣರಾಜ ಒಡೆಯರ್ ೧೭೯೯ – ೧೮೬೮
೨೩. ಚಾಮರಾಜ ಒಡೆಯರ್ – ೧೦ ೧೮೬೮ – ೧೮೯೪
೨೪. ನಾಲ್ವಡಿ ಕೃಷ್ಣರಾಜ ಒಡೆಯರ್ ೧೮೯೪ – ೧೯೪೦
೨೫. ಜಯ ಚಾಮರಾಜ ಒಡೆಯರ್ ೧೯೪೦ – ೧೯೪೭

ಒಡೆಯರ ಚರಿತ್ರೆ ಎಷ್ಟೇ ವಿಶಾಲವಾಗಿದ್ದರೂ ಸಹ ಅವರ ಮೂಲೋತ್ಪತ್ತಿ ಸ್ಪಷ್ಟವಾಗಿಲ್ಲ. ಮೌಖಿಕವಾಗಿ ದೊರೆಕುವ ಆಧಾರಗಳು ಸ್ವಾರಸ್ಯ ಪೂರ್ಣವಾಗಿವೆ. ಹದಿನಾಡಿನ ರಾಜ ಚಾಮರಾಜನು ೧೩೯೯ರವರೆಗೆ ರಾಜ್ಯವಾಳಿ ಮರಣ ಹೊಂದಿದನು. ಅವನ ಮಡದಿ ದೇವರಾಜಮ್ಮಣ್ಣಿ ಮತ್ತು ಮಗಳು ಚಿಕ್ಕದೇವರಸಿಯರಿಗೆ ಪಕ್ಕದ ಕಾರುಗಳ್ಳಿಯ ಪಾಳೆಯಗಾರರಾದ ಮಾರನಾಯಕನು ತೊಂದರೆಯುಂಟು ಮಾಡಿದುದಲ್ಲದೆ ಚಿಕ್ಕದೇವ ರಸಿಯನ್ನು ತನಗೆ ಕೊಟ್ಟ ಮದುವೆ ಮಾಡಬೇಕೆಂದು ಪೀಡಿಸಿದನು.

ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿದ್ದಾಗ ದ್ವಾರಕ ನಗರದಿಂದ ಬಂದಿದ್ದ ಯದುರಾಯ ಮತ್ತು ಕೃಷ್ಣರಾಯರೆಂಬ ಸಹೋದರರರು ದುಷ್ಟ ಮಾರನಾಯಕನನ್ನು ಕೊಂದು ಚಾಮರಾಜನ ಕುಟುಂಬದವರನ್ನು ರಕ್ಷಿಸಿದರು. ಇದರಿಂದ ಸಂತೋಷಗೊಂಡ ದೇವಜಮ್ಮಣಿಯವರು ಮಗಳು ಚಿಕ್ಕದೇವರಸಿಯನ್ನು ಯದುರಾಯರಿಗೆ ವಿವಾಹ ಮಾಡಿಕೊಟ್ಟಿದಲ್ಲದೆ ರಾಜ್ಯವನ್ನು ನೀಡಿ ಈ ಹೊಸ ಸಿಂಹಾಸನಾಧಿಪತಿಗೆ ‘ಒಡೆಯರ್’ ಎಂದು ನಾಮಕರಣ ಮಾಡಿದರು. ಹೀಗೆ ಯದುರಾಯರಿಗೆ ಪ್ರಾಪ್ತವಾದ ಒಡೆಯರ್ ಎಂಬ ಬಿರುದೇ ತರುವಾಯ ಬಂದ ಎಲ್ಲ ಅರಸರಿಗೂ ಅನ್ವಯವಾಯಿತು.

***