ಇಕ್ಕೇರಿ ನಾಯಕರು ಕಡಲ ಆಡಳಿತದಲ್ಲಿ ಹಾಗೂ ಧಾರ್ಮಿಕ ಕೆಲಸಗಳಲ್ಲಿ ಮಾತ್ರ ಶಿಸ್ತಿನ ಸಿಪಾಯಿಗಳಾಗಿರದೆ ಸಾಮಾಜಿಕವಾಗಿಯೂ ತಮ್ಮ ಆಳ್ವಿಕೆಯ ಅವಧಿಯಲ್ಲಿ ಉತ್ತಮ ಕೆಲಸ ಮಾಡಿರುವುದು ದಾಖಲೆಗಳಿಂದ ತಿಳಿದುಬರುತ್ತದೆ. ಮೊದಲೆ ತಿಳಿಸಿದಂತೆ ಇವರು ತಮ್ಮ ಆಳ್ವಿಕೆಯ ಅವಧಿಯಲ್ಲಿ ವಿಜಯನಗರದ ಅರಸರಿಗೆ ಅಧೀನರಾಗಿ ಹಾಗೂ ತಮ್ಮ ಸಂಸ್ಥಾನದ ಅಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕಾಗಿ ಒಂದಲ್ಲ ಒಂದು ರೀತಿಯ ಯುದ್ಧದಲ್ಲಿ ನಿರತರಾಗಬೇಕಾಗಿತ್ತು. ಈ ಸನ್ನಿವೇಶಗಳ ನಡುವೆಯೂ ಇವರು ತಮ್ಮ ಸಂಸ್ಥಾನದಲ್ಲಿನ ಸಾಮಾಜಿಕವಾದ ಅಮೂಲ್ಯ ಕೆಲಸ ಕಾರ್ಯಗಳನ್ನು ಕೈಗೊಂಡು ನೆರವೇರಿಸಿದ್ದಾರೆ. ಮಲೆನಾಡಿನ ಮಡಿಲಿನಲ್ಲಿ ಸ್ಥಾಪನೆಯಾಗಿದ್ದ ಈ ಸಾಮ್ರಾಜ್ಯವು ಮೇಲ್ ಜಾತಿ ಎಂದು ಕರೆಸಿಕೊಳ್ಳುತ್ತಿದ್ದ ಜನರನ್ನೊಳಗೊಂಡಂತೆ ಕೆಳವರ್ಗದ ಜನರಿಗೆ ಉದ್ಯೋಗವು ವರ್ಷಪೂರ್ತಿ ದೊರಕುವ ಪರಿಸರವನ್ನು ಸೃಷ್ಟಿಸಿತ್ತು. ಇದರಿಂದಾಗಿ ಮಿಕ್ಕ ನೆರೆಯ ಸಾಮ್ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿನ ಜನರು ಅರ್ಥಿಕವಾಗಿ ಸ್ವಲ್ಪ ಪ್ರಮಾಣದಲ್ಲಿ ಉತ್ತಮವಾಗಿಯೇ ಇದ್ದರೆನ್ನುವುದಾದರೆ, ಸಾಮಾಜಿಕ ತೊಡಕುಗಳು ಅಲ್ಪಸ್ವಲ್ಪ ಬದಲಾವಣೆ ಕಾಣುವುದು ಸಹಜವೆ.

ಡಾ. ವೆಂಕಟೇಶ್ ಜೋಯಿಸ್ ರವರು ಅಂದಿನ ಸಾಮಾಜಿಕ ವ್ಯವಸ್ಥೆಯನ್ನು ಮೂರು ಭಾಗಗಳಲ್ಲಿ ನೋಡಲು ಬಯಸುತ್ತಾರೆ. ಆದರೆ ಕೆಲವು ಆಧಾರಗಳನ್ನು ಗಮನಿಸಿ ಆ ಮೂರರ ಜೊತೆ ಮತ್ತೊಂದನ್ನು ಸೇರಿಸಿ ಅಧ್ಯಯನ ಮಾಡಬಹುದು.

೧. ಕೆಳದಿ ಅರಸರು ಕೈಗೊಂಡ ಸಾರ್ವಜನಿಕ ಚಟುವಟಿಕೆಗಳು.
೨. ಅಂದಿನ ಜಾತಿ ವ್ಯವಸ್ಥೆ
೩. ಸ್ತ್ರೀಯರಿಗೆ ಅಂದು ಇದ್ದ ಸ್ಥಾನಮಾನ.
೪. ಹೊಲೆಮಾದಿಗರ ಅಂದಿನ ಸ್ಥಿತಿಗತಿ.

ಕೆಳದಿ ಅರಸರು ಬಹು ಸೌಂದರ್ಯೋಪಾಲಕರಾಗಿದ್ದರೆನ್ನಬಹುದು. ಇವರು ಪ್ರಾರಂಭದಿಂದಲೇ ವಿಜಯನಗರ ಸಾಮ್ರಾಜ್ಯದೊಂದಿಗೆ ಹೆಚ್ಚಿನ ಅತ್ಮೀಯ ಸಂಬಂಧವನ್ನು ಹೊಂದಿದ್ದರಿಂದ ಅವರ ಮಾದರಿಯಲ್ಲಿಯೇ ತಮ್ಮ ಸಂಸ್ಥಾನದಲ್ಲಿ ಬೃಹತ್ ಉದ್ಯಾನಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದರು. ಅಂದು ರಾಜ ಪರಿವಾರದವರಿಗೆ ಪ್ರತ್ಯೇಕವೆನ್ನಿಸಿದ್ದ ಉದ್ಯಾನವನಗಳಿದ್ದವು. ಈ ಉದ್ಯಾನವನಗಳಿಗೆ ಸಾರ್ವಜನಿಕರು ಹೋಗುವಂತಿರಲಿಲ್ಲ. ಅಂತೆಯೇ ಸಾರ್ವಜನಿಕರಿಗೆ ಇದ್ದ ಉದ್ಯಾನವನಗಳಿಗೆ ಕೀಳುಜಾತಿಯ ಜನರು ಹೋಗುವಂತಿರಲಿಲ್ಲ. ಸಮಾಜದಲ್ಲಿ ಉನ್ನತ ವರ್ಗವೆಂದು ಗುರುತಿಸಿಕೊಂಡಿದ್ದ ಜನರು ಮಾತ್ರ ಆ ಉದ್ಯಾನವನಗಳಿಗೆ ಹೋಗಿ ಬರುತ್ತಿದ್ದರು. ಅರಮನೆ, ಮಠ, ದೇವಾಲಯ, ಚರ್ಚು, ಮಸೀದಿ ಮುಂತಾದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಸಮೀಪದಲ್ಲಿ ಹೆಚ್ಚಾಗಿ ಉದ್ಯಾನವನಗಳು ಇರುತ್ತಿದ್ದವು. ಹಿರಿಯ ವೆಂಕಟಪ್ಪನಾಯಕನು ಆನಂದಪುರದ ಮುರುಘಾ ಮಠದ ಸಮೀಪ “ಚಂಪಕ ಸರಸಿ’ ಎಂಬ ಸರೋವರ ಹಾಗೂ ಬೃಹತ್ ಉದ್ಯಾನವನವನ್ನು ನಿರ್ಮಿಸಿದ್ದನೆಂದು ಕೆಳದಿ ನೃಪವಿಜಯ ತಿಳಿಸುತ್ತದೆ. ಹಾಗೆ ವೆಂಕಟಪ್ಪನಾಯಕನೂ ಸಾಗರದ ಗಣಪತಿ ದೇವಾಲಯದ ಸಮೀಪ ಚಂದನವನ (ಚಂದಮಾವಿನ ತೊಪ್ಪಲು)ವನ್ನು ನಿರ್ಮಿಸಿದ್ದನೆಂಬುದು ತಿಳಿಸುತ್ತದೆ. ಕೆಳದಿ ಅರಮನೆಯ ಸುತ್ತಲೂ ಬೃಹತ್ ಹೂವಿನ ಉದ್ಯಾನವನವಿತ್ತೆಂದು ಅಲ್ಲಿ ಗುಲಾಬಿ, ಸಂಪಿಗೆ, ಸೇವಂತಿಗೆ, ಮಲ್ಲಿಗೆ ಮುಂತಾದ ಸುಗಂಧ ಭರಿತವಾದ ಹೂವುಗಳನ್ನು ಬೆಳೆಸಲಾಗುತ್ತಿತ್ತೆಂದು ಸಹ ತಿಳಿಯಬಹುದಾಗಿದೆ. ಹೀಗೆ ಸಾಮ್ರಾಜ್ಯದ ತುಂಬೆಲ್ಲಾ ಉದ್ಯಾನವನಗಳು ಇದ್ದರೂ ಅದು ಆಳುವ ಹಾಗೂ ಪ್ರಬಲ ಕೋಮಿನ ಜನರಿಗೆ ಮಾತ್ರ ಮೀಸಲಾಗಿತ್ತೆಂದು ಹೇಳಬಹುದಾಗಿದೆ.

ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಪ್ರಾಚೀನ ಕಾಲದಿಂದಲೂ ಪ್ರಮುಖ ಅವಶ್ಯಕಮ ಕೆಲಸಗಳಾಗಿದ್ದ ಕೆರೆ, ಕಟ್ಟೆ, ಬಾವಿಗಳ ನಿರ್ಮಾಣಕ್ಕೆ ರಾಜರುಗಳು, ಶ್ರೀಮಂತರು, ಸಾರ್ವಜನಿಕರು, ಮಹಿಳೆಯರು ದುಡಿದಿರುವುದು ಕಂಡು ಬರುತ್ತದೆ. ಈ ಕೆಲಸವನ್ನು ಮಾಡಿದರೆ ಅವರು ದೇವರ ಕೆಲಸ ಮಾಡಿದಂತ್ತೆಂದು ನಂಬಿದ್ದರು. ಸರ್ಕಾರದಿಂದ ಕಾನೂನು ಕಟ್ಲೆಯನ್ನು ಹೊರಡಿಸಿ ಪ್ರತಿಯೊಂದು ಗ್ರಾಮದಲ್ಲಿಯೂ ಕೆರೆ, ಬಾವಿಗಳನ್ನು ಅಲ್ಲಿಯ ಶ್ರೀಮಂತರು ಹಾಗೂ ಸಾಮಂತ ರಾಜರುಗಳು ನಿರ್ಮಾಣ ಮಾಡಬೇಕೆಂದು ಹೇಳಿದರೆ ಈ ಕೆಲಸ ನೆರವೇರುತ್ತಿರಲಿಲ್ಲ. ಆದರೆ ಅವರಲ್ಲಿ ಧಾರ್ಮಿಕ ಭಾವನೆಯು ತನ್ನದೇ ಆದ ಪ್ರಭಾವ ಬೀರಿದಾಗ ಮಾತ್ರ ತಮ್ಮ ತನು, ಮನ, ಧನಗಳನ್ನೆಲ್ಲ ಅರ್ಪಿಸಿ ಈ ಕೆಲಸ ಪೂರೈಸಿ ತಮ್ಮ ಪ್ರಾಣವನ್ನೇ ಬಲಿ ನೀಡಿರುವುದನ್ನು ಕಾಣಬಹುದು. ಅಂದರೆ ಕಾನೂನಿಗೆ ಅಂಜದ ಜನ ಧಾರ್ಮಿಕ ಕಟ್ಲೆಗಳಿಗೆ ಜೀವ ಭಯಪಡುತ್ತಿದ್ದರು. ಅಂದು ಧಾರ್ಮಿಕ ಪ್ರಭಾವ ಹೆಚ್ಚಿನ ಪ್ರಾಭವಶಾಲಿಯಾಗಿ ಬೆಳೆಯುತ್ತಿದ್ದಿತ್ತು. ಈ ರೀತಿಯ ಭಾವನೆಯಿಂದ ಇಂದಿನ ಜನರೇನೂ ಹೊರತಾಗಿಲ್ಲ ಎನ್ನಬಹುದು.

ಕೆಳದಿ ಅರಸರು ಈ ಕಾರ್ಯದಲ್ಲಿ ಕ್ರಿ.ಶ. ೧೬೨೧ರಲ್ಲಿ ಹಿರಿಯ ವೆಂಕಟಪ್ಪ ನಾಯಕನ ಕಾಲದ ಶಾಸನವೊಂದು ಸೇನೆ ಭೋವ ಹತ್ತಿ ಮತ್ತೊರ ಕಾಮದೇವಭಟ್ಟರ ಮೊಮ್ಮಗ ಕೋನಪ್ಪನು ಗೋವರ್ಧನಗಿರಿಯ ಕೆಳಗೇರಿ ಸೊಪ್ಪೆಗೆ ಹೋಗುವ ಮಾರ್ಗದಲ್ಲಿ ಒಂದು ಚೌಕಾಕಾರದ ಕೊಳವನ್ನು ನಿರ್ಮಿಸಿದ್ದನ್ನು ಉಲ್ಲೇಖಿಸಬಹುದಾಗಿದೆ. ಇದು ಕೆಳದಿ ಅರಸರ ಶಾಸನ ಸಂಪುಟದಲ್ಲಿ ಉಲ್ಲೇಖಿತವಾಗಿರುವುದು ಕಾಣಬಹುದು. ಸೋಮಶೇಖರನಾಯಕನ ಕಾಲದಲ್ಲಿ ಬಸವಯ್ಯನ ಭಕ್ತ ಹರಕೇರಿ ಎಂಬುವನು ಗುರುಲಿಂಗ ಸಮಾಧಿಯ ಮೇಲೆ ವಿರಕ್ತ ಮಠ ಮತ್ತು ಹಯಿನೂರು ಎಂಬಲ್ಲಿ ‘ಬಸವನ ಒಡ್ಡು’ ಎಂಬ ಸೇತುವೆಯನ್ನು ನದಿಗೆ ನಿರ್ಮಿಸಿ ಸಾರ್ವಜನಿಕ ಕೆಲಸಗಳಿಗೆ ಉತ್ತೇಜನ ನೀಡಿದನೆಂದು ಕೆಳದಿ ನೃಪವಿಜಯ ತಿಳಿಸುತ್ತದೆ. ಡಾ. ವೆಂಕಟೇಶ್ ಜೋಯಿಸ್ ರವರು ಇವುಗಳ ಉಪಯೋಗವನ್ನು ತಮ್ಮ ಕೃತಿಯಲ್ಲಿ ಮಹತ್ವದ ಪ್ರಮಾಣದಲ್ಲಿ ಬಳಸಿ ಕೊಂಡಿರುವುದು ಕಾಣಬಹುದು, ಕೆಳದಿ ಮಠಕ್ಕೆ ನೀರಿನ ಸೌರ್ಕೈಕ್ಕಾಗಿ ಭಕ್ತ ಬೊಕ್ಕಸದ ಸಿದ್ದಬಸವನು ಕೆಳದಿ ಮಠದ ಸಮೀಪದಲ್ಲಿ ‘ಕಲ್ಲಿನ ಬಾವಿ’ಯನ್ನು ನಿರ್ಮಿಸಿ ಮಠಕ್ಕೆ ಸಮರ್ಪಿಸಿರುವುದು ಕಂಡುಬರುತ್ತದೆ. ಫೀಟರ್ ಮಂಡಿ ಎಂಬ ಇಟಲಿ ಪ್ರವಾಸಿಗನು ತಾನು ಇಕ್ಕೇರಿ ಸಂಸ್ಥಾನಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಹಲವಾರು ಕೆರೆಕಟ್ಟೆ, ಬಾವಿಗಳ ಕೆಲಸಕಾರ್ಯಗಳು ನಡೆಯುತ್ತಿದ್ದವೆಂದು ತನ್ನ ಪ್ರವಾಸಿ ಕಥನದಲ್ಲಿ ಬರೆದಿರುವುದು ಕಂಡುಬರುತ್ತದೆ. ವೆಂಕಪಟ್ಟನಾಯಕನಿಂದ ಕೆಳದಿಯಲ್ಲಿ ನಿರ್ಮಾಣವಾದ ಕೆರೆಗೆ ‘ಸಂಪೆ ಕಟ್ಟಿಕೆರೆ’ ಎಂದು ಹೆಸರಿತ್ತೆಂದು ಕೆಳದಿ ನೃಪವಿಜಯವು ತಿಳಿಸುತ್ತದೆ. ಕೆಳದಿಯಲ್ಲಿ ಕೆಳದಿ ಎಂಬ ಮಹಿಳೆಯು ಒಂದು ದೊಡ್ಡ ಕೆರೆಯನ್ನು ನಿರ್ಮಿಸಿ ಸಾರ್ವಜನಿಕರ ಪಾಲಿಗೆ ಬಿಟ್ಟಿದುದು ಶಾಸನಗಳಿಂದ ತಿಳಿದುಬರುತ್ತದೆ. ಈ ವಿಷಯದಲ್ಲಿ ಗುಂಡಾ ಜೋಯಿಸ್ ರವರು ಉಲ್ಲೇಖಿಸಿರುವ ಹಾಗೆ ಪ್ರಚಲಿತವಾದ ದಂತಕಥೆಯು ಹೊರಮೂಡುತ್ತದೆ. ಇಕ್ಕೇರಿಯ ನಾಯಕನು ಈ ಕೆರೆಯನ್ನು ತೋಡಿಸುತ್ತಿರುವಾಗ ನೀರು ಬರಲಿಲ್ಲವಂತೆ, ನಾಯಕನ ಕನಸಿನಲ್ಲಿ ವಿಪ್ರ ಶ್ರೀಷ್ಠನೊಬ್ಬನು ಒಂದು ನರಬಲಿಯನ್ನು ನೀಡಿದರೆ ನೀರು ಬರುವುದೆಂದು ನಿರೂಪಿಸಿದನಂತೆ. ಈ ವಿಷಯವು ಇದೇ ಊರಿನಲ್ಲಿ ವೇಶ್ಯೆಯಾಗಿದ್ದ “ಕೆಳದಿ” ಎಂಬುವಳಿಗೆ ಗೊತ್ತಾಗಿ, ಜನೋಪಕಾರಕ್ಕಾಗಿ ತಾನು ತನ್ನ ಪ್ರಾಣವನ್ನು ಅರ್ಪಿಸುವುದಾಗಿ ಹೇಳಿ ಹೆಸರು ಶಾಶ್ವತವಾಗಿ ಉಳಿಯಲು ಆ ಕೆರೆಗೆ ಹಾಗೂ ಆ ಊರಿಗೆ ಆಕೆಯ ಹೆಸರನ್ನೇ ಇಟ್ಟರೆಂದು ಮೌಖೀಕಾದಾರಗಳು ಹಾಗೂ ಶಾಸನಾಧಾರಗಳು ತಿಳಿಸುತ್ತವೆ. ಈ ಕೆರೆಗೆ ದೊಡ್ಡಕೆರೆ, ಹಿರೇಕರೆ, ಕೆಳದಿಕೆರೆ ಎಂದೂ ಹೆಸರುಗಳಿರುವುದು ಕಂಡುಬರುತ್ತದೆ. ಸಂಸ್ಥಾನದಲ್ಲಿ ಹೈನುಗಾರಿಕೆಯು ಪ್ರಮುಖ ವೃತ್ತಿಯಾಗಿತ್ತೆನ್ನಬಹುದು. ಜಾನುವಾರುಗಳಿಗೆ ಮೇವನ್ನು ಸಾರ್ವಜನಿಕರುಗಳೇ ಒದಗಿಸಿದ ಬಗ್ಗೆ ಶಾಸನಾಧಾರಗಳಿವೆ.

ಜನರು ಸಂಚರಿಸುವಾಗ ದಾರಿಯಲ್ಲಿ ಬಾಯಾರಿಕೆ ಉಂಟಾದರೆ ನೀರಿನ ದಾಹ ತೀರಿಸಿ ಕೊಳ್ಳಲು ದಾರಿಯ ಪಕ್ಕದಲ್ಲಿ ಅರವಟ್ಟಿಗೆ ನಿರ್ಮಿಸಿರುವುದು ಗಮನಿಸಿದರೆ ಇವರು ಸಾರ್ವಜನಿಕರಿಗೆ ತೋರುತ್ತಿದ್ದ ಸಹಕಾರ ವ್ಯಕ್ತವಾಗುತ್ತದೆ. ಏಕೆಂದರೆ ಈ ಪದ್ಧತಿಯು ವಿಜಯನಗರದರಸರ ಪೂರ್ವದಲ್ಲಿ. ಕೇವಲ ದೇವಾಲಯ, ಮಠ, ಛತ್ರಗಳಿಗೆ ಮಾತ್ರ ಮೀಸಲಾಗಿದ್ದಿತ್ತು. ಪ್ರಮಾಣಿಕರು ಸಂಚರಿಸುವಾಗ (ಯಾತ್ರಾಸ್ಥಳ, ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಲು) ಮಧ್ಯೆ ಮಧ್ಯೆ ಅವರು ಉಳಿದುಕೊಳ್ಳಲು ಛತ್ರ ಕಟ್ಟಿಸಿ ತಕ್ಕಮಟ್ಟಿಗೆ ಆಹಾರದ ವ್ಯವಸ್ಥೆಯನ್ನು ಏರ್ಪಡಿಸಿದ್ದರು. ಛತ್ರಗಳು ಇಲ್ಲದ ಕಡೆಗಳಲ್ಲಿ ಊರಿನ ಹಿರಿಯ ಗೌಡರು, ದಾನಿಗಳು ತಮ್ಮ ಊರಿನ ಪ್ರಮುಖ ಸ್ಥಳಗಳಲ್ಲಿ ನೀರು, ಪಾನಕ, ಮಜ್ಜಿಗೆ, ಬ್ಯಾಲದ ಹಣ್ಣಿನ ಪಾನಕ ಮುಂತಾದ ಪಾನೀಯಗಳನ್ನು ನೀಡಿ ಸತ್ಕರಿಸಿ ಮುನ್ನೆಡೆಸುತ್ತಿದ್ದರು. ಇದು ಹೆಚ್ಚಾಗಿ ಹಬ್ಬದ ದಿನಗಳಲ್ಲಿ ಹಾಗೂ ವಿಶಿಷ್ಟ ದಿನಗಳಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುತ್ತಿತ್ತು. ಈ ಪದ್ಧತಿಯು ಇಂದಿಗೂ ಹಲವು ಜೀವಂತವಾಗಿ ಬೆಳೆದುಬರುತ್ತಿದೆ. ಅಂದು ಅನ್ನದಾನಕ್ಕೆ ವಿಶೇಷ ಆಧ್ಯತೆ ಇದ್ದಿತ್ತು. ಈ ಕೆಲಸದಲ್ಲಿ ವೀರಶೈವ ಮಠಗಳು ಮೇಲುಗೈ ಸಾಧಿಸಿದ್ದವು. ಈ ಛತ್ರಗಳಿಗೆ ಹಾಗೂ ಅವುಗಳ ಖರ್ಚಿಗಾಗಿ ಭೂಮಿಯನ್ನು ದತ್ತಿ ನೀಡುವುದು ಸಾಮಾನ್ಯವಾಗಿದ್ದಿತ್ತು.

ಇಕ್ಕೇರಿ ನಾಯಕರು ಪ್ರಮುಖವಾಗಿ ಸಸ್ಯಹಾರಿಗಳಾಗಿದ್ದರು. ಆದರೆ ಸಂಸ್ಥಾನದಲ್ಲಿ ಮಾಂಸಾಹಾರವು ಹೆಚ್ಚಾಗಿ ಬಳಕೆಯಾಗುತ್ತಿತ್ತು. ಊಟದಲ್ಲಿ ಅನ್ನವನ್ನು ಹೆಚ್ಚಾಗಿ ಬಳಸುತ್ತಿದ್ದರು. ಉಪ್ಪಿನಕಾಯಿ, ಸಾರು, ಮೊಸರು, ಹಾಲನ್ನು ಬಳಸುತ್ತಿದ್ದರು. ಮಾಂಸಾಹಾರಿಗಳು ಕುರಿ, ಕೋಳಿ, ಮೇಕೆ, ಎತ್ತು, ಎಮ್ಮೆಗಳನ್ನು ಆಹಾರವನ್ನಾಗಿ ಬಳಸುತ್ತಿದ್ದರು. ಶ್ರೀಮಂತರು ಊಟದ ನಂತರ ಹಣ್ಣು, ಹಂಪಲಗಳನ್ನು ಬಳಸುತ್ತಿದ್ದರೆಂದು ಪೀಟರ್ ಮಂಡಿಯು ತಿಳಿಸುತ್ತಾನೆ. ಮದ್ಯ ಸೇವನೆಯೂ ಸಹ ಬಳಕೆಯಲ್ಲಿತ್ತು. ಮಲೆನಾಡಿನ ಮಡಿಲಲ್ಲಿ ತನ್ನ ನೆಲೆಯನ್ನು ಸೃಷ್ಟಿಸಿದ್ದ ಈಚಲು ಮರದ ಸೇಂದಿಯು ಹೆಚ್ಚಾಗಿ ಬಳಕೆಯಾಗುತ್ತಿತ್ತೆಂದು ವಿದೇಶಿ ಪ್ರವಾಸಿಗರು ತಿಳಿಸಿದ್ದಾರೆ. ಊಟದ ನಂತರ ಎಲೆ ಅಡಿಕೆಯನ್ನು ತಾಂಬೂಲ ಮಾಡಿ ಸೇವಿಸುತ್ತಿದ್ದದ್ದು ಸರ್ವೇಸಾಮಾನ್ಯವಾಗಿತ್ತು. ಜನಸಾಮಾನ್ಯರ ಆಹಾರ ಪದ್ಧತಿಯು ಅತ್ಯಂತ ಕೆಳಮಟ್ಟದಾಗಿತ್ತು. ಒಂದು ದಿನಕ್ಕೆ ಒಂದೊತ್ತು ಊಟವೂ ಸಿಗದಷ್ಟು ಬಡತನವಿದ್ದಿತ್ತು. ಇವರು ಗೋಧಿ ಗಂಜಿ, ಅಕ್ಕಿ ಗಂಜಿ, ರಾಗಿಯನ್ನು ಊಟಕ್ಕೆ ಉಪಯೋಗಿಸುತ್ತಿದ್ದರೆಂದು ಹೇಳಬಹುದು. ಕಾಡಿನಲ್ಲಿ ಸಿಗುತ್ತಿದ್ದ ಸೊಪ್ಪು, ದ್ವಿದಳ ಧಾನ್ಯಗಳು ಹೆಚ್ಚಾಗಿ ಸಾಂಬರ್ ಪದಾರ್ಥಗಳಾಗಿದ್ದವು.

ಅರಸರ ಕಾಲದಲ್ಲಿ ಸಾರಿಗೆ ವ್ಯವಸ್ಥೆಯು ತಕ್ಕಮಟ್ಟಿಗೆ ಉತ್ತಮವಾಗಿತ್ತು. ಸಂಸ್ಥಾನವು ಹೆಚ್ಚಾಗಿ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಇದ್ದುದರಿಂದ ರಸ್ತೆ ಸಾರಿಗೆಯು ಕಷ್ಟಕರವಾದ ಕೆಲಸವೇ ಆಗಿತ್ತು. ಆದರೂ ಪ್ರಮುಖ ನಗರಗಳಿಗೆ, ಗ್ರಾಮೀಣ ಪ್ರದೇಶಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸಾರಿಗೆ ಸೌಲಭ್ಯವನ್ನು ಕಲ್ಪಿಸಿಕೊಡಲು ರಾಜರು ಪ್ರಯತ್ನಿಸಿದ್ದರು ಪ್ರಮುಖವಾಗಿ ಅಂದು ಜಾರಿಯಲ್ಲಿದ್ದ ಸಾರಿಗೆ ಪದ್ಧತಿಯನ್ನು

೧. ಭೂಮಾರ್ಗ
೨. ಜಲಮಾರ್ಗ

ಎಂದು ಕರೆಯಬಹುದಾಗಿದೆ. ಭೂ ಮಾರ್ಗದಲ್ಲಿ ರಾಜಧಾನಿಗೆ ಸೇರುವ ರಸ್ತೆಗಳನ್ನೆ ಹೆದ್ದಾರಿಗಳೆಂದು, ಪ್ರಾಂತ್ಯಗಳಿಗೆ ಸೇರುವ ರಸ್ತೆಗಳನ್ನು ಒಳಹೆದ್ದಾರಿಗಳೆಂದು ಕರೆಯಲಾಗುತ್ತಿತ್ತು. ಜಲಮಾರ್ಗವು ನದಿ, ಸಮುದ್ರಗಳಲ್ಲಿ ನಡೆಯುತ್ತಿದ್ದವು ಪಿಯತ್ರೋದೆಲ್ಲಾವೆಲ್ಲಿಯು ತನ್ನ ಪ್ರವಾಸಿ ಕಥನದಲ್ಲಿ ಅಂದಿನ ಸಾರಿಗೆ ವ್ಯವಸ್ಥೆಯನ್ನು ವಿವರಿಸಿರುವುದು ಕಂಡುಬರುತ್ತದೆ. ಇಕ್ಕೇರಿಗೆ ಹೋಗುವ ಮಾರ್ಗವು ವಿಶಾಲವಾಗಿದ್ದು ಇಕ್ಕೆಲಗಳಲ್ಲಿಯೂ ಸಾಲುಮರಗಳಿದ್ದವೆಂದು ತಿಳಿಸಿರುವುದು ಕಾಣಬಹುದು. ಮತ್ತೊಬ್ಬ ಪ್ರವಾಸಿಗನಾದ ಜಾಕೋಬಸನು ಬಸಪ್ಪನಾಯಕನ ಕಾಲದಲ್ಲಿ ರಸ್ತೆಗಳು ಸೊಗಸಾಗಿದ್ದವಲ್ಲದೆ ರಸ್ತೆ ಪಕ್ಕದ ಮರಗಳು ಪ್ರವಾಸಿಗರಿಗೆ ನೆರಳನ್ನೀಯುತ್ತಿದ್ದವೆಂಬುದಾಗಿ ವರ್ಣಿಸಿದ್ದಾನೆ. ಭೂಮಾರ್ಗದಲ್ಲಿ ಸಾಮಾನ್ಯವಾಗಿ ಪಲ್ಲಕ್ಕಿ, ಕುದುರೆ, ಆನೆ, ಎತ್ತಿನಗಾಡಿ ಮೊದಲಾದವುಗಳನ್ನು ಬಳಸಲಾಗುತ್ತಿತ್ತು. ಜಲಮಾರ್ಗವು ಹಾಯಿದೋಣಿ, ದೋಣಿ, ಹರಿಗೋಲು ಮೊದಲಾದ ವಿಧಾನದ ಸಾಧನಗಳನ್ನು ಬಳಸಲಾಗುತ್ತಿತ್ತು. ಈ ನಾವಿಕರುಗಳಿಗೆ ನಾಯಕರು ದಾನ ನೀಡಿ ಸಹಕರಿಸಿರುವುದು ಕಂಡುಬರುತ್ತದೆ.

ಇಕ್ಕೇರಿ ಸಂಸ್ಥಾನದಲ್ಲಿ ಮಹಿಳೆಯರಿಗೆ ಯಾವ ಸ್ಥಾನಮಾನವಿದ್ದಿತ್ತೆಂದು ಹಿಂದಿನ ಅಧ್ಯಾಯದಲ್ಲಿಯೇ ಗಮನಿಸಿದ್ದೇವೆ. ಇವರ ಆಳ್ವಿಕೆಯ ಅವಧಿಯಲ್ಲಿ ಪ್ರಮುಖ ರಾಣಿಯರಾದ ವೀರಮ್ಮಾಜಿ ಹಾಗೂ ವೀರಚೆನ್ನಾಮ್ಮಾಜಿಯವರ ಸ್ಥಾನಮಾನವನ್ನು ಗಮನಿಸುವುದಾದರೆ, ಅಂದು ಮಹಿಳೆಯರು ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರೆಂದು ಹೇಳಬಹುದು. ರಾಣಿಯರಿಗೆ ಹಾಗೂ ಶ್ರೀಮಂತ ಮಹಿಳೆಯರಿಗೆ ಮಾತ್ರ ಶಿಕ್ಷಣ ಪಡೆಯುವ ಅವಕಾಶವಿದ್ದಿತ್ತು. ರಾಜಧಾನಿಯ ಮಹಿಳೆಯರ ಬಗ್ಗೆ ಲಿಯತ್ರೋದೆಲ್ಲಾವೆಲ್ಲಿಯು ಸುಂದರವಾಗಿ ವರ್ಣಿಸುತ್ತಾನೆ. ಸಾಮಾನ್ಯ ಹಾಗೂ ಕೆಳಜಾತಿಯ ಹೆಂಗಸರ ಸ್ಥಿತಿ ಶೋಚನೀಯವಾಗಿದ್ದಿತ್ತು. ಅವರು ಊಟ ಇರಲಿ ಬಟ್ಟೆಯೂ ಇರದಿರುವ ಪರಿಸ್ಥಿತಿಯಲ್ಲಿ ಬದುಕುತ್ತಿದ್ದರು. ಅರಸರು ಬಹು ಪತ್ನಿಯರನ್ನು ಹೊಂದಿರುತ್ತಿದ್ದರು. ಕೆಳದಿ ನೃಪವಿಜಯ ಕೃತಿಯು ರಾಜರು ಮೂರರಿಂದ ನಾಲ್ಕು ಮಡದಿಯರನ್ನು ಹೊಂದಿದ್ದ ಬಗ್ಗೆ ವಿವರಿಸುತ್ತದೆ. ಈ ಪದ್ಧತಿಯು ಹೆಚ್ಚಾಗಿ ಶ್ರೀಮಂತರು, ರಾಜರು, ರಾಜಪರಿವಾರದವರು, ಬ್ರಾಹ್ಮಣರಲ್ಲಿ ಮಾತ್ರ ಹೆಚ್ಚಾಗಿದ್ದಿತ್ತೆನ್ನಬಹುದು. ಕೆಲವು ಸಾಮಾನ್ಯರೂ ಸಹ ಇಬ್ಬರು ಪತ್ನಿಯರನ್ನು ಹೊಂದಿದ್ದರ ಬಗ್ಗೆ ಮಾಹಿತಿ ತಿಳಿದುಬರುತ್ತದೆ.

ಇಕ್ಕೇರಿ ಸಂಸ್ಥಾನದಲ್ಲಿ ಬಾಲ್ಯವಿವಾಹವು ಹೆಚ್ಚಿನ ಪ್ರಮಾಣದಲ್ಲಿ ಆಚರಣೆಯಲ್ಲಿತ್ತೆನ್ನಬಹುದು. ಶ್ರೀಮಂತರು, ರಾಜಪರಿವಾರ, ರಾಜರ ಮದುವೆಗಳು ವಿಜೃಂಭಣೆಯಿಂದ ನಡೆಯುತ್ತಿದ್ದವು. ಮದುವೆಯ ಸಮಯದಲ್ಲಿ ದೇವಾಲಯ, ಮಠ ಹಾಗೂ ಇನ್ನಿತರ ಧಾರ್ಮಿಕ ಕ್ಷೇತ್ರಗಳಿಗೆ ಉಡುಗೊರೆಗಳನ್ನು ಕೊಡುವುದು ಸಾಮಾನ್ಯವಾಗಿದ್ದಿತ್ತು. ವಿಧವೆಯರು ತಮ್ಮ ಜೀವನವನ್ನು ಶೋಚನೀಯ ರೀತಿಯಲ್ಲಿ ಕಳೆಯಬೇಕಾಗಿತ್ತು. ಅವರು ಹೆಚ್ಚಾಗಿ ತಮ್ಮ ಜೀವನವನ್ನು ಧಾರ್ಮಿಕ ಕ್ರಿಯೆಗಳಲ್ಲಿಯೇ ತೊಡಗಿಸಿಕೊಂಡು ಕಾಲಕಳೆಯುತ್ತಿದ್ದರು. ಸ್ತ್ರೀಯರಿಗೆ ಮಠಕ್ಕೆ ಸೇರುವ ಅವಕಾಶವಿರಲಿಲ್ಲ. ಕೆಳದಿ ಸಂಸ್ಥಾನದಲ್ಲಿ ಸತಿ ಪದ್ಧತಿಯು ಬಳಕೆಯಲ್ಲಿದ್ದಿತ್ತು. ಈ ಅನಿಷ್ಟ ಪದ್ಧತಿಗೆ ಹೆಚ್ಚಾಗಿ ರಾಣಿಯರು, ಶ್ರೀಮಂತ ಮಹಿಳೆಯರು ಹಾಗೂ ಕೆಳವರ್ಗದವರು ಬಲಿಯಾಗುತ್ತಿದ್ದರು. ಬ್ರಾಹ್ಮಣರಲ್ಲಿ ಈ ಪದ್ದತಿ ಹೆಚ್ಚಾಗಿ ಕಂಡು ಬರುತ್ತಿರಲಿಲ್ಲ. ವಿದೇಶಿ ಪ್ರವಾಸಿಗನಾದ ಪಿಯತ್ರೋದೆಲ್ಲವಲ್ಲೆಯು ಸತಿಗೆ ಸಿದ್ದವಾಗಿ ಹೋಗುತ್ತಿದ್ದ ಒಬ್ಬ ಮಹಿಳೆಯನ್ನು ಕಂಡು, ಅವಳ ಅಂದಿನ ವೇಷಭೂಷಣ ಹಾಗೂ ಅವಳ ಜೊತೆಯಲ್ಲಿ ಇದ್ದ ಸನ್ನಿವೇಶವನ್ನು ಸುಂದರವಾಗಿ ವರ್ಣಿಸಿದ್ದಾನೆ. ಆದರೆ ನಾನು ಸತಿ ನಡೆಯುವ ಸ್ಥಳಕ್ಕೆ ಹೋಗಲು ಸಾಧ್ಯವಾಗಲಿಲ್ಲವೆಂಬ ಕೊರಗನ್ನು ವ್ಯಕ್ತಪಡಿಸಿಕೊಂಡಿರುವುದು ಕಂಡುಬರುತ್ತದೆ.

ಕೆಳದಿಯಲ್ಲಿ ದೇವದಾಸಿ ಪದ್ಧತಿಯು ಹೆಚ್ಚಾಗಿಯೇ ಇದ್ದಿತು. ದೇವದಾಸಿಯರು ದೇವರ ಕಾರ್ಯಗಳನ್ನು ನಿರ್ವಹಿಸಲು ಬಿಟ್ಟವರೆಂಬ ಕೆಟ್ಟ ಸಂಪ್ರದಾಯವು ಮೂಡುವಂತೆ ಮೇಲ್ಜಾತಿಯವರು ನಂಬಿಸಿದರು. ದೇವದಾಸಿಯರು ಹೆಚ್ಚಾಗಿ ಕೆಳಜಾತಿಗೆ ಸೇರಿದವರಾಗಿದ್ದರು ಎಂಬುವುದು ಈಗಾಗಲೇ ಅಧ್ಯಯನಗಳಿಂದ ದೃಢಪಟ್ಟಿದೆ. ಇವರು ಹೆಚ್ಚಾಗಿ ವೇಶ್ಯಾವೃತ್ತಿಯನ್ನು ಅವಲಂಭಿಸಿಕೊಂಡಿದ್ದರು. ಕೆಳದಿ ಶಾಸನದಲ್ಲಿ ಇವರನ್ನು ಹುಜೂರು ಮೇಳ ಎಂದು ಕರೆದಿರುವುದು ಕಂಡುಬರುತ್ತದೆ. ಇವರ ಜೀವನ ಶೋಚನೀಯವಾಗಿದ್ದಿತ್ತು. ಆದರೆ ಸಮಾಜದಲ್ಲಿ ಕೆಲವು ಧಾರ್ಮಿಕ ನಂಬಿಕೆಗಳಿಂದ ಇವರು ಗೌರವವನ್ನು ಹೊಂದಿದ್ದರು. ಇವರು ನೃತ್ಯದಲ್ಲಿ ಪರಿಣಿತರಾಗಿದ್ದರೆಂದೂ, ಧಾರ್ಮಿಕ ಸಮಾರಂಭಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರೆಂದೂ ವಿದೇಶಿಯರು ವ್ಯಕ್ತಪಡಿಸಿರುವುದು ಕಂಡುಬರುತ್ತದೆ.

ಜಾತಿ ವ್ಯವಸ್ಥೆ : ಈ ಸಮಯಕ್ಕೆ ವರ್ಣಾಶ್ರಮ ಪದ್ಧತಿಯು ತನ್ನ ಕಠಿಣವಾದ ಅನಿಷ್ಟ ಪದ್ಧತಿಗಳಲ್ಲಿ ಸ್ವಲ್ಪ ಪ್ರಮಾಣದ ಸಡಿಲಿಕೆ ಮಾಡಿಕೊಂಡಿತ್ತೆನ್ನಬಹುದು ವಿಜಯನಗರ ಸಾಮ್ರಾಜ್ಯದಲ್ಲಿ ವೃತ್ತಿಯಿಂದ ಸೂಚಿಸುವ ಜಾತಿಗಳು ಇದ್ದಂತೆ ಇಲ್ಲಿಯೂ ಸಹ ಅದೇ ಮಾದರಿಯಲ್ಲಿ ಜಾತಿಗಳು ಸ್ವಷ್ಟವಾಗಿದ್ದವು. ಜಾತಿಗಳಲ್ಲಿ ಬ್ರಾಹ್ಮಣರು ರಾಜಕೀಯ, ಸಾಮಾಜಿಕ, ಧಾರ್ಮಿಕವಾಗಿ ಅಪಾರ ಗೌರವ ಪಡೆದವರಾಗಿದ್ದರು. ಆಸ್ಥಾನದ ಪ್ರಮುಖ ಕವಿಗಳಾದ ಲಿಂಗಣ್ಣ, ವೆಂಕಣ್ಣ, ಮೊದಲಾದವರು ಬ್ರಾಹ್ಮಣರೇ ಆಗಿದ್ದರು. ಅವರ ಮನೆಯಲ್ಲಿ ಇತರೇ ಜಾತಿಯವರು ಊಟ ಮಾಡುವಂತಿರಲಿಲ್ಲ. ಅವರಲ್ಲಿಯೂ ಕೆಲವರು ಈಶ್ವರನನ್ನು ಪೂಜಿಸಿದವರನ್ನು ಸ್ಮಾರ್ತರೆಂದೂ, ವಿಷ್ಣವನ್ನು ಪೂಜಿಸುವವರನ್ನು ವೈಷ್ಣವರೆಂದೂ ಕರೆಸಿಕೊಳ್ಳುತ್ತಿದ್ದರೆಂದು ಮೆಕಂಜಿಯು ಸಂಗ್ರಹಿಸಿರುವ ಕೈಫಿಯತ್ ಗಳಲ್ಲಿ ವಿವರವಾಗಿ ತಿಳಿಯಬಹುದಾಗಿದೆ.

ಸಂಸ್ಥಾನದಲ್ಲಿ ಬ್ರಾಹ್ಮಣರನ್ನು ಬಿಟ್ಟರೆ ಅವರಷ್ಟೇ ಪ್ರಭಾವಶಾಲಿಗಳಾದವರೆಂದರೆ ವೀರಶೈವರು. ಸ್ವತಃ ಇಕ್ಕೇರಿ ನಾಯಕರೇ ವೀರಶೈವದವರಾಗಿದ್ದರಿಂದ ಈ ಧರ್ಮವು ಹೆಚ್ಚು ಪ್ರಭಾವಶಾಲಿಯಾಗಿದ್ದಿತ್ತು. ವೀರಶೈವ ಮಠಗಳು ಇವರ ಕಾಲದಲ್ಲಿ ಹೆಚ್ಚು ಹೆಚ್ಚು ನಿರ್ಮಾಣವಾದವು. ವಿರಕ್ತ ಮಠಗಳು, ಮಹತ್ತಿನ ಮಹಾಮಹತ್ತಿನ ಮಠಗಳು, ವಶೀಕೃತ ಮಠಗಳು, ಕೂಡಲಿ ಕಲ್ಲುಮಠ, ಆನವಟ್ಟಿ ಗ್ರಾಮದ ತುಪನೂರು ಸೀಮೆಯಲ್ಲಿಯ ಕಲ್ಲಿನ ಮಠ, ಚಟ್ನಹಳ್ಳಿಯಲ್ಲಿದ್ದ ಗದ್ದಿಗೆ ಮಠಗಳೂ ನಿರ್ಮಾಣವಾಗಿ ಅಪಾರ ದಾನದತ್ತಿಯನ್ನು ಪಡೆದು ಅಭಿವೃದ್ಧಿಯ ಪಥದಲ್ಲಿ ಮುನ್ನಡೆದವು. ಮೆಕಂಜಿಯು ಅಂದು ವ್ಯಾಪಾರದಲ್ಲಿ ತಲ್ಲೀನರಾಗಿದ್ದ ವೈಶ್ಯರ ಬಗ್ಗೆಯೂ ಸಹ ವಿವರಣೆಯನ್ನು ನೀಡುತ್ತಾರೆ. ಮೆಕೆಂಜಿಯವರು ಸಂಗ್ರಹಿಸಿದ್ದ ವೈಶ್ಯರ ಬಗ್ಗೆಯೂ ಸಹ ವಿವರಣೆಯನ್ನು ನೀಡುತ್ತಾರೆ. ಮೆಕಂಜಿಯವರು ಸಂಗ್ರಹಿಸಿದ್ದ ಕೈಫಿಯತ್ ಗಳನ್ನು ಡಾ. ಎಂ.ಎಂ. ಕಲ್ಬುರ್ಗಿಯವರು ಶೇಖರಿಸಿ ಕನ್ನಡದಲ್ಲಿ ಪ್ರಕಟಿಸಿರುವುದರ ಪ್ರಕಾರ ಕೆಳದಿಯಲ್ಲಿ ಮುಸಲ್ಮಾನರು, ಮರಾಠಿಯವರು, ಕೊರವರು, ಸೊನಗಾರರು, ಕುಂಬಾರರು, ಉಪ್ಪಾರರು, ಬೆಸ್ತರು, ಜೋಗೋರರು, ಬಣಗಾರರು, ಜಾಡರು, ಲಿಂಗದವೀರರು, ದೊಂಬಿಜಾತಿಯವವರು, ಜಾತಾಳ ಜಾತಿಯವರು, ರೆಡ್ಡಿ ಜಾತಿಯವರು, ಜಟಿಗಳ ಜಾತಿಯವರು, ಜೈನರು, ಕಂಚುಗಾರರು, ಬೇಡರು, ಹಜಾಮರು, ಹಳೇಪೈಕದವರು, ಕುರುಬರು, ಮಾಲೇರರು, ಗಾಣಗಾರರು, ಕಟುಕರು, ಬಳೆಗಾರರು, ಗೋಸಾಯಿಗಳು ಮೊದಲಾದವರು ನಗರ ಸೀಮೆಯಲ್ಲಿ ವಾಸಿಸುತ್ತಿದ್ದರೆಂದು ವಿವರಣೆಯನ್ನು ನೀಡುತ್ತಾರೆ.

ಅಂದಿನ ಜನರು ತಮ್ಮ ತಮ್ಮ ಕುಲ ವೃತ್ತಿಗಳನ್ನು ಅಪಾರವಾಗಿ ಗೌರವಿಸುತ್ತಿದ್ದರು. ಧರ್ಮದ ಕಟ್ಟುಪಾಡುಗಳಿಗಿಂತಲೂ ಹೆಚ್ಚಾಗಿ ಜಾತಿ ಕಟ್ಟುಪಾಡುಗಳಿಗೆ ಹೆಚ್ಚಿನ ಬೆಲೆಕೊಡುತ್ತಿದ್ದರು. ಒಂದೇ ಮಾತಿನಲ್ಲಿ ಹೇಳುವುದಾದರೆ ಅಂದು ಧರ್ಮವೆಂಬುವುದೇ ಇರಲಿಲ್ಲ. ಧರ್ಮ ಜಾತಿಗಳೆಲ್ಲವೂ ಒಂದೇ ಆಗಿದ್ದಿತ್ತು. ಅದೇ ‘ಜಾತಿ’ ಎಂದು ಹೇಳೀದರೆ ತಪ್ಪಾಗಲಾರದು. ಇದರಿಂದ ಅವರು ಸಮಾಜದಲ್ಲಿ ನಮ್ಮ ಗೌರವ ಹೆಚ್ಚುತ್ತದೆ ಎಂದು ನಂಬಿದವರಾಗಿದ್ದರು.

ಹೊಲೆಯ ಮಾದಿಗರ ಸ್ಥಿತಿ

ಹೊಲೆಯ ಮಾದಿಗರು ಸಾಮಾನ್ಯವಾಗಿ ಪ್ರತಿಯೊಂದು ಗ್ರಾಮದಲ್ಲಿಯೂ ಇದ್ದರೂ ಅವರು ಊರಿನಿಂದ ಹೊರಗಡೆ ವಾಸಿಸುತ್ತಿದ್ದರು. ಇದರಿಂದಲೇ ಅಂತ ಕಾಣುತ್ತದೆ. ಪ್ರಾಚೀನಕಾಲದಿಂದಲೂ ಉಳಿದುಬಂದಿರುವ ಗಾದೆಯ ಮಾತು “ಊರು ಬಂದ ಮೇಲೆ ಹೊಲಗೇರಿ ಇರಲೇಬೇಕು” ಹಾಗೂ “ಊರು ಬೊಲಗೇರಿ ಒಂದು ಮಾಡಿಬಿಟ್ಟ” ಎಂಬ ಗಾದೆಗಳು ಜನ್ಮ ತಾಳಿರುವುದು. ಈ ಗಾದೆಗಳೇ ಬಹು ವಿಶಾಲವಾದ ಅರ್ಥವನ್ನು ತಮ್ಮ ತಮ್ಮ ಮಡಿಲಿನಲ್ಲಿ ಅಡಗಿಸಿಕೊಂಡು, ಅಂದಿನ ಜಾತಿವ್ಯವಸ್ಥೆಯ ಸಂಸ್ಕೃತಿಯನ್ನು ತಿಳಿಹೇಳುತ್ತವೆನ್ನಬಹುದು. ಇವರ ಜೀವನ ಅಂದು ಹೀನಸ್ಥಿತಿಯಲ್ಲಿತ್ತು. ಜೀವನದ ಪ್ರತಿಯೊಂದು ಹಂತದಲ್ಲಿಯೂ ಅದು ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಕ್ಷೇತ್ರದ ವಿಷಯಗಳಲ್ಲಿರಬಹುದು ಈ ಜನ ಅತ್ಯಂತ ಕೆಳಮಟ್ಟದಲ್ಲಿ ಜೀವಿಸುತ್ತಿದ್ದರೆನ್ನಬಹುದು. ವಿಜಯನಗರದರಸರ ಕಾಲದಲ್ಲಿ ಇದ್ದಂತೆ ಇಲ್ಲಿಯು ದಲಿತರನ್ನು ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಒಡೆಯನಿಗೆ ಅಧೀನವಾಗಿ ಸಾಯುವವರೆಗೆ ದುಡಿದು ಜೀವನ ಸಾಗಿಸಬೇಕಾಗಿತ್ತು. ದಲಿತ ಮಹಿಳೆಯರ ಜೀವನ ಶೋಚನೀಯವಾಗಿದ್ದಿತ್ತೆನ್ನಬಹುದು. ಇವರುಗಳಿಗೆ ಸಂಸ್ಥಾನದ ಕಾನೂನುಗಳಲ್ಲಿ ಯಾವುದೇ ರೀತಿಯಲ್ಲಿಯೂ ಭದ್ರತೆ ಇದ್ದಂತೆ ಕಂಡುಬರುತ್ತಿರಲಿಲ್ಲ. ಹೆಚ್ಚಿನ ಸಂಖ್ಯೆಯ ಮಹಿಳೆಯರು ದೇವದಾಸಿಯರೂ ಹಾಗೂ ವೇಶ್ಯೆಯರೂ ಆಗಿ ಜೀವನ ಮಾಡುತ್ತಿದ್ದರು. ಇವರ ಪಾಲಿಗೆ ಶಿಕ್ಷಣ ಎಂಬುವುದು ಕನಸಿನ ಮಾತಾಗಿತ್ತು. ಕೆಲವು ವೀರಶೈವ ಮಠಗಳು ಇವರುಗಳ ಪರಿಸ್ಥಿತಿಯನ್ನು ತಿಳಿದು ಹಬ್ಬ ಹರಿದಿನಗಳಲ್ಲಿ ದಾಸೋಹ ನೀಡುತ್ತಿದ್ದುದ್ದಕ್ಕೆ ಆಧಾರಗಳಿವೆ.

ಈ ಜನಾಂಗವು ಸಂಸ್ಥಾನದ ಬೀದಿ, ಚರಂಡಿ, ಶ್ರೀಮಂತರ ಮನೆ ಅಂಗಳಗಳನ್ನು ಸ್ವಚ್ಚಗೊಳಿಸುವ ಕಾಯಕ ಮಾಡಿ ಜೀವನ ನಡೆಸಬೇಕಾಗಿತ್ತು ಹಾಗೂ ಶ್ರೀಮಂತರ ಜಮೀನಿನಲ್ಲಿ ಯಾವುದೆ ರೀತಿಯ ಸೌಕರ್ಯಗಳಿಲ್ಲದೆ ನಾಯಿಗಿಂತಲೂ ಕೆಳಮಟ್ಟದಲ್ಲಿ ದುಡಿಯಬೇಕಾಗಿತ್ತು. ತಪ್ಪಿದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಿದ್ದರು. ದೇವತಾ ಕಾರ್ಯಗಳಲ್ಲಿ ನರಬಲಿಕೊಡುವ ಕೆಟ್ಟ ಸಂಪ್ರದಾಯ ಬಳಕೆಯಲ್ಲಿತ್ತು. ಇಂತಹ ಸಮಯದಲ್ಲಿ ನರಬಲಿಗೆ ದಲಿತವರ್ಗದವರನ್ನು ನೀಡಲಾಗುತ್ತಿತ್ತು. ಅವರಲ್ಲಿದ್ದ ಅಜ್ಞಾನದಿಂದ ಅವರು ಅದನ್ನು ದೇವತಾಕಾರ್ಯವೆಂಬಂತೆ ಭಕ್ತಿಭಾವದಿಂದ ಅರ್ಪಿಸಿಕೊಳ್ಳುತ್ತಿದ್ದರು. ಇವರು ಆಚರಿಸುತ್ತಿದ್ದ ಹಬ್ಬಗಳಲ್ಲಿ ಪ್ರಾಣಿಬಲಿ, ನರಬಲಿ, ಅಂಗಾಂಗಗಳ ವಿಚ್ಛೇದನ ಮುಂತಾದ ಬಲಿಗಳನ್ನು ಅರ್ಪಿಸಿ ತಮ್ಮ ತಮ್ಮ ದೇವರುಗಳನ್ನು ತೃಪ್ತಿಪಡಿಸುತ್ತಿದ್ದರು. ಇದು ಅವರ ಅಜ್ಞಾನಕ್ಕೆ ಹಿಡಿದ ಕನ್ನಡಿ ಎನ್ನಬಹುದು.

ಇಕ್ಕೇರಿ ನಾಯಕರು ಇವರುಗಳಿಗೂ ಕೆಲವು ಸನ್ನಿವೇಶದಲ್ಲಿ ಪ್ರಶಂಸಾರ್ಥವಾಗಿ ನಡೆದುಕೊಂಡಿರುವುದನ್ನು ಕೆಲವು ಆಧಾರಗಳಿಂದ ನೋಡಬಹುದು. ಉದಾಹರಣೆಗೆ ಗ್ರಾಮಗಳಿಗೆ ನುಗ್ಗಿ ದರೋಡೆ ಮಾಡುವ ಜನರನ್ನು ಹಿಂಸೆಗೆ ಗುರಿ ಮಾಡುತ್ತಿದ್ದ ಕಳ್ಳರನ್ನು ಹಾಗೂ ದುಷ್ಟ ಪ್ರಾಣಿಗಳನ್ನು ವೀರಾವೇಶದಿಂದ ಪ್ರಾಣದ ಹಂಗನ್ನು ತೊರೆದು ಹೋರಾಡಿ ಕೊಲ್ಲಿದ ವ್ಯಕ್ತಿಗೆ ಪ್ರಶಂಸಿಸಿ ದತ್ತಿ ನೀಡಿರುವುದು ಕಂಡುಬರುತ್ತದೆ. ಇದು ಅನೇಕ ಕೆಳಜಾತಿಯವರ ವಂಶದವರೆಂದು ಕಂಡುಬಂದಿರುವ ವೀರಗಲ್ಲುಗಳಲ್ಲಿ ಗಮನಿಸಬಹುದು. ಮುಖ್ಯವಾಗಿ ಈ ವರ್ಗದವರೇ ಸಂಸ್ಥಾನದ ಸೈನಿಕರಾಗಿದ್ದರು. ಈ ಸೈನಿಕರ ಸ್ಥಿತಿಯೂ ಸಹ ಶೋಚನೀಯವಾಗಿತ್ತೆನ್ನಬಹುದು. ಯುದ್ಧಗಳಲ್ಲಿ ಹೆಚ್ಚು ಪ್ರಾಣಹಾನಿಯಾಗುತ್ತಿದದ್ದು ಈ ಜನಾಂಗದವರೆ ಯುದ್ಧ ಘೋಷಣೆಯಾದಾಗ ಪ್ರತಿಯೊಂದು ಗ್ರಾಮದಿಂದಲೂ ಸಹ ಮನೆಗೊಬ್ಬ ಗಂಡಸು (ಹೊಲೆಮಾದಿಗರ ಕೇರಿಯಿಂದ) ಸ್ವತಃ ತಾನೇ ಯುದ್ಧ ಸಾಮಗ್ರಿಗಳಾದ ಭರ್ಚಿ, ಕತ್ತಿ, ಕೊಡಲಿ, ಬಾಕು, ಬೀಸು ಕೊಡಲಿಗಳನ್ನು ತಯಾರಿಸಿಕೊಂಡು ಸಿದ್ಧನಾಗಿ ಬರಬೇಗಿತ್ತು. ತಪ್ಪಿದಲ್ಲಿ ಶಿಕ್ಷೆಗೆ ಪಳಗಾಗುವುದು ಸಹಜವೆ. ಇದು ರಾಜಾಜ್ಞೆಯಾಗಿದ್ದಿತ್ತು. ಇಂಥಹ ಸನ್ನಿವೇಶದಲ್ಲಿಯೇ ಗ್ರಾಮೀಣ ಪ್ರದೇಶದಲ್ಲಿ ಅದರಲ್ಲಿಯೂ ದಲಿತ ಜನರಲ್ಲಿ “ದಂಡಿಗೆ ಹೋದವನ ಹೆಂಡತಿ ಮುಂಡೆ” ಎಂಬ ಗಾದೆ ಹುಟ್ಟಿರುವುದು. ಈ ಗಾದೆಯ ಅರ್ಥವನ್ನು ಎಳೆಎಳೆಯಾಗಿ ಬಿಡಿಸಿದಾಗ ಯುದ್ಧದ ಸಂಪೂರ್ಣ ಚಿತ್ರಣ ಕಣ್ ಮುಂದೆ ಬಂದು ನಿಲ್ಲುತ್ತದೆ.

ಒಟ್ಟಿನಲ್ಲಿ ಈ ಜನಾಂಗದ ಸ್ಥಿತಿಗತಿಯನ್ನು ಹೊರತುಪಡಿಸಿದರೆ ಮಿಕ್ಕ ಎಲ್ಲ ಜನಾಂಗದ ಸಾಮಾಜಿಕ ಸಂಬಂಧಗಳು, ಸಂಸ್ಥಾನದಲ್ಲಿ ಪ್ರೀತಿ ಹಾಗೂ ಸೌಹಾರ್ದತೆಯಿಂದ ಒಟ್ಟಿಗೆ ಶಾಂತಿಯುತವಾಗಿ ಜೀವನ ನಡೆಸುತ್ತಿದ್ದರೆನ್ನಬಹುದು.

* * *